ಈ ನಾಡಿನಲ್ಲಿ ಕನ್ನಡ ಸಾಹಿತ್ಯವು ಹಲವಾರು ಘಟ್ಟಗಳಲ್ಲಿ ಮೈದಾಳಿದೆ. ಅಂತೆಯೇ ಅನೇಕ ಕವಿಗಳ ಚರಿತ್ರೆಯ ತವರೂರು ಆಗಿದೆ. ಸಾಹಿತ್ಯದುದ್ದಕ್ಕೂ ಅನೇಕ ಕವಿಗಳು ಆಯಾ ಕಾಲ ಘಟ್ಟಗಳಲ್ಲಿ ಬಾಳಿ – ಬದುಕಿ ಕಣ್ಮರೆಯಾಗಿದ್ದಾರೆ. ಅಂತಹ ಕವಿಗಳಲ್ಲಿ ನಯಸೇನನು ಒಬ್ಬ. ಈತನ ಕಾಲದ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ಜನ್ಮಸ್ಥಳ ಈಗಿನ ಗದಗ ಜಿಲ್ಲೆಯ ಮುಳಗುಂದ ಎನ್ನುವ ಚಿಕ್ಕಗ್ರಾಮ. ಈತನಿಂದ ರಚಿತವಾದ ಪ್ರಮುಖ ಕೃತಿ ಧರ್ಮಾಮೃತ. ಇದನ್ನು ಕ್ರಿ.ಶ. ೧೧೧೨ರಲ್ಲಿ ಬರೆದಿರುವುದಾಗಿ ಸ್ವತಃ ಕವಿಯೇ ಹೇಳಿ ಕೊಂಡಿದ್ದಾನೆ. ಈ ಕೃತಿಯು ಒಟ್ಟು ಹದಿನಾಲ್ಕು ಅಧ್ಯಾಯಗಳಿಂದ ಕೂಡಿದೆ. ಇದು ಜೈನಧರ್ಮಕ್ಕೆ ಸಂಬಂಧಿಸಿದ ೧೪ ಕತೆಗಳನ್ನು ಒಳಗೊಂಡಿದೆ. ಈ ಕತೆಗಳನ್ನು ಶ್ರೇಣಿಕನಿಗೆ ಹೇಳುತ್ತಿರುವುದು ಇಲ್ಲಿಯ ಕಥನ ತಂತ್ರವಾಗಿದೆ. ಇದಲ್ಲದೆ ವ್ಯಾಕರಣಕ್ಕೆ ಸಂಬಂಧಿಸಿದ ಮತ್ತೊಂದು ಕೃತಿಯನ್ನು ಈತನು ರಚಿಸಿದ್ದಾನೆಂದು ಕೆಲವು ವಿದ್ವಾಂಸರು ಹೇಳಿದ್ದಾರೆ. ಆದರೆ ವ್ಯಾಕರಣಕ್ಕೆ ಸಂಬಂಧಿಸಿದ ಗ್ರಂಥ ದೊರೆಯದೆ ಇರುವುದರಿಂದ ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ನಯಸೇನ ಬುಧ, ನಯಸೇನ ಮುನೀಂದ್ರ, ನಯಸೇನ ದೇವ ಎಂಬುದಾಗಿ ಕವಿ ತನ್ನನ್ನು ಕರೆದುಕೊಂಡಿರುವ ಉಲ್ಲೆಖಗಳು ಧರ್ಮಾಮೃತದಲ್ಲಿ ಕಾಣಿಸಿಗುತ್ತವೆ. ಈ ಉಲ್ಲೇಖಗಳನ್ನು ಆಧರಿಸಿ ಕೆಲವು ವಿದ್ವಾಂಸರು ನಯಸೇನನು ಈ ಕೃತಿ ರಚನೆಯ ಕಾಲಕ್ಕೆ ಸನ್ಯಾಸಿಯಾಗಿರಬಹುದೆಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಪಂಪನು ಕನ್ನಡದ ಕವಿಗಳಲ್ಲಿ ಮೊದಲನೆಯವನು. ಈತನು ಅನುಸರಿಸಿದ ಚಂಪೂ ಪ್ರಕಾರವನ್ನು ಮುಂದಿನ ಅನೇಕ ಕವಿಗಳು ಅನುಸರಿಸಿದ್ದಾರೆ. ಕವಿ ಚರಿತ್ರೆಕಾರರು ೧೦ನೇ ಶತಮಾನವನ್ನು ಸಾಹಿತ್ಯದ ಸುವರ್ಣ ಯುಗವೆಂದು ಕರೆದಿರುವುದು ಇದಕ್ಕೆ ನಿದರ್ಶನವಾಗಿದೆ. ಆ ಕಾಲಘಟ್ಟದ ಜೈನ ಕವಿಗಳಂತೆ ನಯಸೇನನು ಚಂಪೂ ಪ್ರಕಾರದಲ್ಲಿ ಕೃತಿ ರಚನೆ ಮಾಡಿದರೂ ಉಳಿದ ಚಂಪೂ ಕೃತಿಗಳಿಗಿಂತ ಧರ್ಮಾಮೃತವು ವಿಶಿಷ್ಟವೂ, ಭಿನ್ನವೂ ಆಗಿದೆ ಎಂಬುದಕ್ಕೆ ಹಲವಾರು ನಿದರ್ಶನಗಳು ಕೃತಿಯಲ್ಲಿ ಕಾಣಸಿಗುತ್ತವೆ.

ಸಾಮಾನ್ಯವಾಗಿ ಜೈನಕವಿಗಳು ಕನ್ನಡದಲ್ಲಿ ಕಾವ್ಯಗಳನ್ನು ರಚಿಸಲು ಸಂಸ್ಕೃತ ಅಥವಾ ಪ್ರಾಕೃತ ಭಾಷೆಯಲ್ಲಿ ರಚಿತವಾದ ಗ್ರಂಥಗಳೇ ಆಧಾರ. ಆದರೆ ನಯಸೇನನ ಧರ್ಮಾಮೃತವು ಯಾವುದೇ ಒಂದು ಗ್ರಂಥವನ್ನು ಆಧರಿಸಿ ರಚಿಸಿದಂತೆ ತೋರುವುದಿಲ್ಲ. ಅಲ್ಲದೆ ಹಿಂದಿನ ಕವಿಗಳಂತೆ ಪದ್ಯಕ್ಕೆ ಹೆಚ್ಚು ಗಮನ ಹರಿಸದೆ ಗದ್ಯಕ್ಕೆ ಪ್ರಾಮುಖ್ಯತೆಯನ್ನು ನೀಡುವುದರ ಮೂಲಕ ಸರಳವಾದ, ಜನಭಾಷೆಗೆ ಹತ್ತಿರವಾದ ಕನ್ನಡವನ್ನು ಉಪಯೋಗಿಸಿ ಕಾವ್ಯವನ್ನು ಬರೆದು ಜನಸಾಮಾನ್ಯರು ಓದುವಂತೆ ಮಾಡಿದ ಕೀರ್ತಿಯು ಈತನಗೆ ಸಲ್ಲುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಪಂಪ, ರನ್ನ, ಪೊನ್ನ ಮುಂತಾದ ಜೈನ ಕವಿಗಳಂತೆ ನಯಸೇನನು ಬರೆದ ಕಾವ್ಯ ತೀರ್ಥಂಕರರ ಚರಿತ್ರೆಯಲ್ಲ ಮತ್ತು ಅದೊಂದು ಜೈನಪುರಾಣವೂ ಅಲ್ಲ. ಜೈನ ಮತಾವಲಂಬಿ ಯಾಗಿದ್ದ ನಯಸೇನನು ಜೈನಧರ್ಮಕ್ಕೆ ಸೇವೆಗೈದ ಸನ್ಯಾಸಿಗಳ ಜೀವನ ಚರಿತ್ರೆಗೆ ಹೆಚ್ಚು ಮಹತ್ವ ನೀಡುತ್ತಾನೆ. ಬೇರೊಂದು ದಿಕ್ಕಿನಿಂದ ಧರ್ಮ ನಿರ್ಮಾಣದ ಕೆಲಸವನ್ನೂ ಮಾಡಿದ್ದಾನೆ ಎಂದು ಹೇಳಬಹುದಾಗಿದೆ.

ಅರಮನೆಯ ಅರಸೊತ್ತಿಗೆಯಂತಿದ್ದ ಸಾಹಿತ್ಯವು ಜನಸಾಮಾನ್ಯರಿಂದ ದೂರ ಸರಿದಿತ್ತು. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರು ಬಳಸುವ ಭಾಷೆಯನ್ನು ಬಳಸಿ ಕಾವ್ಯ ರಚಿಸುತ್ತಾನೆ. ಅಲ್ಲದೆ ತನ್ನ ಕೃತಿಯಲ್ಲಿ ದೇಶೀಯ ಗಾದೆಗಳನ್ನು, ನಾಡುನುಡಿಗಳನ್ನು ಮತ್ತು ನಿತ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಜನಸಾಮಾನ್ಯರ ಅಂತರಂಗದ ಕದವನ್ನು ತಟ್ಟುವ ರೀತಿಯಲ್ಲಿ ವ್ಯಕ್ತಪಡಿಸಿದ್ದಾನೆ. ಇದರಿಂದಾಗಿ ಜನಸಾಮಾನ್ಯರಿಗೆ ಸಾಹಿತ್ಯವೆನ್ನುವ ಆವರಣ ದೊಳಗೆ ಪ್ರವೇಶಿಸಲು ಅವಕಾಶವಾಯಿತು ಎಂದು ಹೇಳಿದರೆ ತಪ್ಪಾಗಲಾರದು. ಈ ಕುರಿತು ದೇ.ಜ.ಗೌ. ಅವರು ನಯಸೇನನ ಧರ್ಮಾಮೃತ ಸಂಗ್ರಹದ ಮುನ್ನುಡಿಯಲ್ಲಿ ಈ ಮುಂದನಂತೆ ಅಭಿಪ್ರಾಯ ಪಡುತ್ತಾರೆ. ‘‘ಕನ್ನಡ ಗದ್ಯ ಸಾಹಿತ್ಯದಲ್ಲಿ ನಯಸೇನನಿಗೆ ವಿಶಿಷ್ಟ ಸ್ಥಾನವಿದೆ. ಅಂಬುನುಡಿ, ಬಿಚ್ಚುನುಡಿ ಬಿಡಿನುಡಿಗಳಿಂದ ಕೂಡಿದ ಸಹಜ ಸರಳವಾದ ಲಾಲಿತ್ಯ ಪ್ರಧಾನವಾದ ಏರುತಗ್ಗುಗಳಿಲ್ಲದೆ ಅಡ್ಡಿ ಅಡಚಣೆಗಳಿಲ್ಲದೆ ಸರಾಗವಾಗಿ ಹರಿಯುವುದೇ ನಯಸೇನನ ಗದ್ಯದ ವಿಶಿಷ್ಟ ಲಕ್ಷಣ. ಆ ಗದ್ಯದಲ್ಲಿ ಹರುಕು ಬಿರುಕುಗಳಿಲ್ಲ. ತೇಪೆಸಿವುರು ಗಳಿಲ್ಲ; ವಿಲಾಸವಿದೆ, ವೈವಿಧ್ಯವಿಲ್ಲ; ಜಾಣ್ಮೆ’ ಬೆಡಗುಗಳಿವೆ; ಔನ್ಯತ್ಯವಿಲ್ಲ. ಸರಳತೆಯಿದೆ; ಶೈಥಿಲ್ಯವಿಲ್ಲ. ಆಡುಮಾತಿನ ಲಯವಿದೆ, ಗ್ರಾಮ್ಯವಿಲ್ಲ; ಮೊನಚಿದೆ; ತೀಕ್ಷ್ಣತೆಯಿಲ್ಲ. ಸಂಪ್ರದಾಯ ಬದ್ಧವಾದ ಚಂಪೂಶೈಲಿಯ ಧೃತರಾಷ್ಟ್ರ ಮುಷ್ಟಿಯಿಂದ ಬಿಡಿಸಿಕೊಂಡು ಜಾನಪದ ಭಾಷೆಯ ಸಂಪರ್ಕ ಸಂಸ್ಪರ್ಶಗಳಿಂದ ಜನ್ಮಾಂತರ ಹೊಂದಿ – ದೇಶೀಯ ಸೊಗಡನ್ನು ದೆಸೆದೆಸೆಗೆ ಚೆಲ್ಲುತ್ತ ಬಹುಶಃ ವಚನ ಸಾಹಿತ್ಯೋದಯದ ಮುಂಬೆಳಗೆಂಬಂತೆ ನಯಸೇನನ ಗದ್ಯ ವಿಕಾಸಗೊಂಡಿದೆ’’.

ವೈದಿಕ ಧರ್ಮವು ಹುಟ್ಟು ಹಾಕಿದ ಕಂದ ಸಂಪ್ರದಾಯಗಳ ವಿರುದ್ಧ ಸಿಡಿದೆದ್ದ ನಯಸೇನನು ತನ್ನ ಕೃತಿಯಲ್ಲಿ ಜೈನಧರ್ಮದ ಮಾನವೀಯ ಮೌಲ್ಯಗಳ ಶ್ರೇಷ್ಠತೆಯನ್ನು ಹೇಳುವುದರ ಮೂಲಕ ಆ ಧರ್ಮದ ಸಿದ್ಧಾಂತಗಳನ್ನು ಕುರಿತು ಕಥೆಗಳನ್ನು ರೂಪಿಸಿದ್ದಾನೆ. ಭಕ್ತಿಯಿಂದ ಪ್ರಾರಂಭವಾದ ಕತೆಗಳು ಧರ್ಮದ ಮಾರ್ಗದಲ್ಲಿ ಮುಕ್ತಿಯನ್ನು ಪಡೆಯ ಬೇಕೆಂಬ ಅಂಶಗಳನ್ನು ಪ್ರತಿಪಾದಿಸುತ್ತವೆ. ಮೇಲಿನ ಈ ಅಂಶಗಳನ್ನು ಗಮನಿಸಿದಾಗ ನಯಸೇನನ ಕಾವ್ಯದ ಉದ್ದೇಶವು ಜೈನಧರ್ಮದ ಶ್ರೇಷ್ಠತೆಯನ್ನು ಹೇಳುವುದಾಗಿದೆ ಎನಿಸ ಬಹುದು. ಆದರೆ ತನ್ನ ಧರ್ಮದ ಶ್ರೇಷ್ಠತೆಯನ್ನು ಹೇಳುವ ಕವಿಯು ತನ್ನ ಕಾಲದ ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಉಲ್ಲೇಖಿಸಿರುತ್ತಾನೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ನಯಸೇನನು ಹೊರತಲ್ಲ. ಧರ್ಮಾಮೃತ ಕಾವ್ಯವು ಆ ಕಾಲದ ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಒಳಗೊಂಡಿದೆ. ಇವೆಲ್ಲವೂ ಅಧ್ಯಯನ ಮಾಡಲು ಅರ್ಹವಾದ ವಿಷಯಗಳೇ. ಆದರೆ ಇತರ ಜೈನ ಕವಿ ಕಾವ್ಯಗಳನ್ನು ಕುರಿತು ನಡೆದಿರುವಷ್ಟು ಅಧ್ಯಯನಗಳು ಧರ್ಮಾಮೃತ ಕಾವ್ಯ ಕುರಿತು ನಡೆದಿಲ್ಲ. ಕೇವಲ ಸಂಗ್ರಹ, ಆಯ್ಕೆ ಸಂಗ್ರಹ ಮತ್ತು ವಿಮರ್ಶಾ ಲೇಖನಗಳು ಬಂದಿವೆ. ಈ ಕುರಿತು ಗಂಭೀರವಾದ ಅಧ್ಯಯನಗಳು ನಡೆದಿಲ್ಲ. ಕವಿ – ಕಾವ್ಯಗಳ ಕಾಲ – ದೇಶ – ಮತವನ್ನು ಕುರಿತ ವಿಚಾರಗಳು ಸಾಹಿತ್ಯ ಚರಿತ್ರೆ ರಚನೆಯ ತಾತ್ವಿಕ ಒತ್ತಡದ ಫಲವಾಗಿ ಮೂಡಿಬಂದಿವೆ. ಹಳೆಗನ್ನಡದ ಕೆಲವು ಕವಿಗಳಿಗೆ ಅನ್ವಯಿಸುವ ಹಾಗೆ ಈ ಚರ್ಚೆ ನಯಸೇನನ ಬಗ್ಗೆಯೂ ನಡೆದಿದೆ.

ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ ಈ ಕೃತಿಯನ್ನು ಕುರಿತು ಅಧ್ಯಯನ ಮಾಡುವವರಿಗೆ ಅನುಕೂಲವಾಗುವಂತೆ ಧರ್ಮಾಮೃತ ಕಾವ್ಯ ಕುರಿತು ಇದುವರೆಗೆ ನಡೆದ ಅಧ್ಯಯನ ಸೂಚಿಯನ್ನು ನೀಡಲಾಗಿದೆ. ಇದರಿಂದ ಅಧ್ಯಯನಕಾರರಿಗೆ ಸ್ವಲ್ಪ ಮಟ್ಟಿಗಾದರೂ ಉಪಯುಕ್ತವಾಗಬಹುದೆಂದು ಭಾವಿಸಲಾಗಿದೆ.

ಧರ್ಮಾಮೃತ : ಗ್ರಂಥ ಸೂಚಿ
ಧರ್ಮಾಮೃತ ಸಂಪಾದನೆಗಳು

ಕೃತಿ : ಧರ್ಮಾಮೃತಂ; ಪೂರ್ವ ಭಾಗ (೧ ೯ನೆಯ ಅಧ್ಯಾಯಗಳು)
ಸಂ      : ಆರ್. ಶಾಮಶಾಸ್ತ್ರಿ
ಪ್ರ       : ಮೈಸೂರು ವಿಶ್ವವಿದ್ಯಾನಿಲಯ, ಪ್ರ. ಮು. ೧೯೨೪

ಕೃತಿ     : ಧರ್ಮಾಮೃತಂ; ಉತ್ತರ ಭಾಗ (೧೦ – ೧೪ನೆಯ ಅಧ್ಯಾಯಗಳು)
ಸಂ      : ಆರ್. ಶಾಮಶಾಸ್ತ್ರಿ
ಪ್ರ       : ಮೈಸೂರು ವಿಶ್ವವಿದ್ಯಾನಿಲಯ, ಓರಿಯಂಟಲ್ ಲೈಬ್ರರಿ, ಕನ್ನಡ ಸೀರಿಸ್ ನಂ ೧೬, ಪ್ರ.ಮು. ೧೯೨೬

ಕೃತಿ     : ನಯಸೇನ ವಿರಚಿತ ಧರ್ಮಾಮೃತ ಸಂಗ್ರಹ
ಸಂ      : ದೇ. ಜವರೇಗೌಡ
ಪ್ರ       : ಬೆಂಗಳೂರು, ಜಿ.ಕೆ. ಅಂಡ್ ಬ್ರದರ್ಸ್, ಪ್ರ. ಮು. ೧೯೫೭

ಕೃತಿ     : ನಯಸೇನ ವಿರಚಿತಂ ಧರ್ಮಾಮೃತಂ
ಸಂ      : ಬಿ.ಬಿ. ಮಹೀಶವಾಡಿ
ಕನ್ನಡ ಅಧ್ಯಯನ ಸಂಸ್ಥೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಪ್ರ. ಮು.೧೯೮೪

ನಯಸೇನನ ಧರ್ಮಾಮೃತ ದರ್ಶನ
ಗದ್ಯಾನುವಾದ
ಅನು : ಕೆ. ಎನ್. ಭಟ್
ಮಂಗಳೂರು, ಕೆ.ವಿ. ಶೈಣೈ
ಒಂದಾಣೆ ಮಾಲೆ – ೨೧೪
ಧರ್ಮಾಮೃತದ ಮೂರು ಆಶ್ವಾಸಗಳ ಕಥಾ ಪರಿಚಯ, ಪ್ರ. ಮು. ೧೯೫೮

ನಯಸೇನ ವಿರಚಿತ ಧರ್ಮಾಮೃತಂ
ಗದ್ಯಾನುವಾದ
ಅನು : ಕೆ. ವೆಂಕಟರಾಮಪ್ಪ
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಪ್ರ. ಮು. ೧೯೭೮

ನಯಸೇನನ ಧರ್ಮಾಮೃತದ ಕಥೆಗಳು
ಅನು : ಎಸ್. ವಿ. ಪಾಟೀಲ್
ವೈಶಾಲಿ ಪ್ರಕಾಶನ, ಧಾರವಾಡ, ಪ್ರ. ಮು. ೧೯೮೦

ನಯಸೇನ ಧರ್ಮಾಮೃತ
ಗದ್ಯ ಕಥನ
ಡಾ. ಪಿ.ವಿ. ನಾರಾಯಣ
ವಸಂತ ಪ್ರಕಾಶನ, ತುಳಸೀವನ, ಬೆಂಗಳೂರು, ಪ್ರ. ಮುದ್ರಣ ೨೦೦೪

ಕನ್ನಡ ಸಾಹಿತ್ಯ ಚರಿತ್ರೆ
ಬೆಂಗಳೂರು ವಿಶ್ವವಿದ್ಯಾಲಯ, ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ, ಸಂಪುಟ ೨
ಕ್ರಿ.ಶ. ೮೫೦ರಿಂದ ೧೧೫೦ರವರೆಗೆ
ಲೇಖನ : ನಯಸೇನನ ಧರ್ಮಾಮೃತ
ಲೇಖಕ : ಬಿ.ಬಿ. ಮಹೀಶವಾಡಿ,
ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಪ್ರ. ಮು. ೧೯೭೫

ತ.ಸು. ಶಾಮರಾಯ
ಕನ್ನಡ ಸಾಹಿತ್ಯ ಚರಿತ್ರೆ
ನಯಸೇನನ ಪರಿಚಯ (ಪುಟ ೨೪)
ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
ಗೋಕುಲಂ, ಮೂರನೆಯ ಹಂತ, ಮೈಸೂರು ಪ್ರ. ಮು. ೨೦೦೫

ರಂ.ಶ್ರೀ. ಮುಗಳಿ
ಕನ್ನಡ ಸಾಹಿತ್ಯ ಚರಿತ್ರೆ
ನಯಸೇನನನ ಧರ್ಮಾಮೃತ ಪರಿಚಯ (ಪುಟ ೧೨೬)
ಗೀತಾ ಬುಕ್ ಹೌಸ್, ಮೈಸೂರು, ಪ್ರ. ಮು. ೧೯೫೩

ಕೆ. ವೆಂಕಟರಾಮಪ್ಪ
ಕನ್ನಡ ಸಾಹಿತ್ಯ ಚರಿತ್ರೆ
ನಯಸೇನನ ಧರ್ಮಾಮೃತ ಪರಿಚಯ (ಪುಟ ೭೫)
ಶಾರದಾ ಮಂದಿರ, ರಾಮಯ್ಯರ್ ರಸ್ತೆ. ಮೈಸೂರು ೪, ಪ್ರ. ಮು. ೧೯೭೪

ಕನ್ನಡ ಸಾಹಿತ್ಯ ಚರಿತ್ರೆಯ ಘಟ್ಟಗಳು
ಡಾ. ಎಸ್.ಎಂ. ಹಿರೇಮಠ
ನಯಸೇನ ಮತ್ತು ಆತನ ಕೃತಿಗಳ ಪರಿಚಯ, (ಪುಟ ೧೧೭)
ವಿದ್ಯಾನಿಧಿ ಪ್ರಕಾಶನ, ಗದಗ, ಪ್ರ. ಮು. ೧೯೭೩
ಅಧ್ಯಯನಗಳು
ನಯಸೇನ ಮತ್ತು ಅವನ ಕೃತಿಗಳು
ಲೇಖಕ : ಬಿ.ವಿ. ಮಲ್ಲಾಪುರ
ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಪ್ರ. ಮು. ೧೯೭೮

ನಯಸೇನ
ಲೇಖಕಿ : ಡಿ. ವಿಜಯಾ
ಗೃಹ ಸರಸ್ವತಿ ಗ್ರಂಥಮಾಲೆ
ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಪ್ರ.ಮು. ೧೯೭೭

ನಯಸೇನ
ಲೇಖಕ : ಜಿ. ವೆಂಕಟಸುಬ್ಬಯ
ಪ್ರಚಾರ ಪುಸ್ತಕ ಮಾಲೆ, ೪೨
ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಪ್ರ. ಮು. ೧೯೪೨

ನಗೆಗಾರ ನಯಸೇನ
ಉಪನ್ಯಾಸ ಗ್ರಂಥಮಾಲೆ, ೮೩
ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ನಯಸೇನ
ಲೇಖಕ : ಕಾ. ತ. ಚಿಕ್ಕಣ್ಣ
ಕರ್ನಾಟಕ ಸಾಹಿತ್ಯ ಅಕಾಡೆಮಿ
ನೃಪತುಂಗ ರಸ್ತೆ, ಬೆಂಗಳೂರು ೦೨

ವಿಮರ್ಶೆ
ಲೇಖನಗಳು
ಕೀರ್ತಿನಾಥ ಕುರ್ತಕೋಟಿ
ನಯಸೇನನ ಧರ್ಮಾಮೃತ (ಪುಟ ೭೬)
ಕನ್ನಡ ಸಾಹಿತ್ಯ ಸಂಗಾತಿ
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪ್ರ. ಮು. ೧೯೯೫

ಸಂಗಮೇಶ ಸವದತ್ತಿಮಠ
ಧರ್ಮಾಮೃತ ಭಾಷಾವಿಜ್ಞಾನದ ದೃಷ್ಟಿಯಲ್ಲಿ
ಸಂ. ಎನ್.ಎಸ್. ತಾರಾನಾಥ
ಶತಮಾನದ ವಿಮರ್ಶೆ
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೨೦೦೧

ಕಾ ವೆಂ. ಶ್ರೀನಿವಾಸಮೂರ್ತಿ
ನಯಸೇನ ದೇಸಿಯ ನೆಲೆಗಳ ಹುಡುಕಾಟ
ಕನ್ನಡಪರ ಚಿಂತನೆ ಮತ್ತು ಪರಂಪರೆ
ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು

ಬಿ.ಬಿ. ಮಹೀಶವಾಡಿ
ನಯಸೇನರು ಇಬ್ಬರಿದ್ದಾರೆಯೇ
ಜೈನ ವಾಙ್ಮಯ ಪರಿಶೋಧನೆ
ಜ್ಞಾನ ವಿಕಾಸ ಪ್ರಕಾಶನ, ಧಾರವಾಡ, ೧೯೭೭

ಬಿ.ವಿ. ಮಲ್ಲಾಪುರ
ಧರ್ಮಾಮೃತದಲ್ಲಿ ಜನಪದೀಯತೆ
ಸುಧಾರ್ಣವ ಭಾಗ ೧
ವೀರಶೈವ ಅಧ್ಯಯನ ಅಕಾಡೆಮಿ
ಶ್ರೀ ನಾಗನೂರು ರುದ್ರಾಕ್ಷಿಮಠ, ಬೆಳಗಾವಿ, ೧೯೯೮

ಎಂ. ಚಿದಾನಂದಮೂರ್ತಿ
ನಯಸೇನ ಕನ್ನಡದ ಒಬ್ಬ ಜನಪದ ಕವಿ
ಸಂಶೋಧನ ತರಂಗ ಸಂ. ೨
ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ೧೯೭೦