ನಯಸೇನನ ‘ಧರ್ಮಾಮೃತ’ದಲ್ಲಿ ಹದಿನಾಲ್ಕ ಕಥೆಗಳಿವೆ. ಇದು ಜೈನ ಆಗಮಿಕ ಪರಂಪರೆಯ ಕಥನಗಳಂತೆ ಭೋಗದ ಉತ್ಕಟತೆ ಹಾಗೂ ಅದರ ಪ್ರಮುಖತೆಯನ್ನು ಮಾತ್ರ ಹೇಳುವುದಿಲ್ಲ. ಬದಲಾಗಿ, ಅಂದಿನ ಸಮಾಜದ ಲೌಕಿಕ ವ್ಯಾಪಾರಗಳನ್ನು, ವ್ಯಕ್ತಿ ಸ್ವಭಾವ ಗಳನ್ನು ಬಹಳ ಸೂಕ್ಷ್ಮವಾಗಿ ನಿರೂಪಿಸಲಾಗಿದೆ. ಮೇಲ್ನೋಟಕ್ಕೆ ಧರ್ಮಾಮೃತವು ಜೈನ ಧರ್ಮದ ತತ್ವಗಳನ್ನು ಪ್ರತಿಪಾದಿಸುತ್ತಿರುವಂತೆ ಕಂಡು ಬಂದರೂ, ಅದಕ್ಕೂ ಮೀರಿದ ಹಲವಾರು ಸಂಗತಿಗಳು ಅಲ್ಲಿವೆ. ಈ ಗ್ರಂಥ ರಚನೆಗೊಂಡದ್ದೇ ಒಂದು ವಿಸ್ಮಯದ ಕಾಲಘಟ್ಟದಲ್ಲಿ ಎಂಬುದನ್ನು ಮರೆಯುವಂತಿಲ್ಲ.

ಹನ್ನೆರಡನೆಯ ಶತಮಾನದ ವೇಳೆಗಾಗಲೇ ಜೈನಧರ್ಮದ ಪ್ರಖರತೆ ಕುಗ್ಗಿ, ಧಾರ್ಮಿಕ ಜೀವನ ವಿಧಾನಗಳಿಗಿಂತ ಅಂದಿನ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ವಿದ್ಯಮಾನಗಳು ಮುಖ್ಯವೆನಿಸಿದ್ದರು. ಹೀಗಾಗಿ, ಜನ ಸಾಮಾನ್ಯರ ವೃತ್ತಿ ಮತ್ತು ಪ್ರಕೃತಿ ಗಳನ್ನು ಮನಗಂಡಿದ್ದ ನಯಸೇನನಿಗೆ ತೀರ್ಥಂಕರರ ಕಥೆಗಳು ಪ್ರಧಾನವೆನಿಸಲಿಲ್ಲ. ಉದಾತ್ತ ನಾಯಕರ ಕಲ್ಪನೆಗಳನ್ನು ಹಿಂಸೆ ಸರಿಸಿ, ಸಾಮಾನ್ಯತ್ವದ ನೆಲೆಯಿಂದ ಸಾಧನೆಯ ಕಡೆಗೆ ಹೊರಳುವರ ಕಥೆಗಳನ್ನು ಆಯ್ಕೆ ಮಾಡಿಕೊಂಡದ್ದು ವಿಶೇಷ ಸಂಗತಿಯಾಗಿದೆ. ಆದರೂ, ಜೈನಧರ್ಮದ ಸಿದ್ಧಾಂತಗಳ ಪರಿವೇಷವನ್ನು ಇಲ್ಲಿನ ಕಥೆಗಳು ಪಡೆದಿವೆ, ಅವು ಪುರಾತನ ಜೈನಕೃತಿಗಳಿಂದ ಆಯ್ದುಕೊಂಡವು. ಅವುಗಳಲ್ಲಿ ‘ಧರ್ಮ’ ಎನ್ನುವ ಭಿತ್ತಿಯ ಮೇಲೆ ಅಂದಿನ ಸಮಕಾಲೀನ ಜೀವನ ಚಿತ್ರಗಳು ಮೂಡಿ ನಿಂತಿವೆ ಎನ್ನಬಹುದು.

‘ಧರ್ಮ’ಮೃತ ಸ್ಥಿತಿಗೆ ತಲುಪಿದಾಗ ಅದರ ಅಮೃತತ್ವವನ್ನು ಹೇಳುವ ಸಾಧ್ಯತೆಗಳು ಅಪಾರವಾಗಿರುತ್ತವೆ. ಜೈನಧರ್ಮದ ಮೃತತ್ವಕ್ಕೆ ಕಾರಣವಾದದ್ದು ಅದರ ಅತ್ಯಂತ ಕಠಿಣ ವ್ರತಗಳು ತೀರ್ಥಂಕರ ಕಥೆಗಳಲ್ಲಿ ಬರುವುದಿಷ್ಟೆ. ಸ್ತೀಲೋಲುಪತೆ, ಸಾಂಸಾರಿಕ ಅನಿತ್ಯತೆ ಹಾಗೂ ಅಲೌಕಿಕವನ್ನು ಅರಸುವ ಪ್ರಯತ್ನದಲ್ಲಿ ದೊರೆಯುವ ವೈರಾಗ್ಯ. ರಾಜಾಶ್ರಯದಲ್ಲಿ ಇದ್ದುಕೊಂಡು, ಧರ್ಮಶ್ರದ್ಧೆಯಿಂದ ಕಾರ್ಯ ರಚನೆ ಮಾಡುವುದು ನಯಸೇನನ ಕಾಲದಲ್ಲಿ ಅಷ್ಟು ಸುಲಭವೆನಿಸಿರಲಿಲ್ಲ. ಇಂಥ ಸಂದಿಗ್ಧಗಳ ನಡುವೆ, ಜೈನಧರ್ಮದ ಖ್ಯಾತಿ ಕರ್ಣದ ಹಾಗೆ ಅದನ್ನು ಜನಪ್ರಿಯಗೊಳಿಸಿಸುವ ಕೆಲಸವನ್ನು ನಯಸೇನ ಮಾಡಿದಂತಿದೆ. ಆದ್ದರಿಂದ, ಜೈನ ಪುರಾಣಗಳಿಗಿಂತ ಭಿನ್ನವಾದ ತಾತ್ವಿಕ ಚೌಕಟ್ಟು ಧರ್ಮಾಮೃತದ ಕಥೆಗಳಿಗೆ ಪ್ರಾಪ್ತವಾಗಿದೆ. ಅಲ್ಲಿನ ಭೋಗ ಮತ್ತು ವೈರಾಗ್ಯದ ಪರಿಕಲ್ಪನೆಗಳೂ ಬೇರೆ ಬೇರೆಯಾಗಿವೆ. ನಯಸೇನನ ಉದ್ದೇಶ ಜಿನಮತ ಸಾರವನ್ನು ಹೇಳುವುದೇ ಹೊರತು, ಆದರ ಧಾರ್ಮಿಕ ವಿಧಿ – ವಿಧಾನಗಳನ್ನೆಲ್ಲ ಎಂಬುದು ಸ್ಪಷ್ಟವಿದೆ. ಅವನು ಧರ್ಮದ ಅತ್ಯಂತ ಸೂಕ್ಷ್ಮವಿವರಗಳಿಗೆ ಹೋಗದೆ, ಜನಸಾಮಾನ್ಯರಿಗೆ ಎಷ್ಟು ಬೇಕೊ ಅಷ್ಟನ್ನು ಮಾತ್ರ ಆತ ವಿವರಿಸುತ್ತಾನೆ.

‘ಭೋಗ’ ಎಂದರೆ ಸುಖಿಸುವುದು ಎಂದರ್ಥ. ಸಾಮಾನ್ಯವಾಗಿ ಈ ಶಬ್ದವನ್ನು ಕೇಳಿದ ಕೂಡಲೆ ‘ಸ್ತ್ರೀಭೋಗ’ವೆಂದೇ ಭಾವಿಸುವುದು ಸಾಮಾನ್ಯ. ಆದರೆ ಧರ್ಮಾಮೃತದ ಕತೆಗಳನ್ನು ಗಮನಿಸಿದರೆ ಅದು ದ್ರವ್ಯ/ವ್ಯಸನ ಕೇಂದ್ರಿತವಾದುದು ಎನಿಸುತ್ತದೆ. ಯಾವುದೇ ವಸ್ತು ಮೋಹ ಕೂಡ ಭೋಗಾಪೇಕ್ಷೆಯೇ ಆಗುತ್ತದೆ. ರಾಗರಹಿತ/ಮೋಹರಹಿತವಾದುದನ್ನು ‘ವೈರಾಗ್ಯ’ ಎನ್ನಲಾಗಿದೆ. ಅದನ್ನು ಅಧ್ಯಾತ್ಮ/ಆಗಮಿಕ ಪರಿಭಾಷೆ ಎಂದು ಭಾವಿಸಬೇಕಿಲ್ಲ. ‘ಧರ್ಮಾಮೃತ’ದಲ್ಲಿ ಭೋಗ ಮೂಲದ ವೈರಾಗ್ಯಕ್ಕಿಂತ ಪ್ರಾಯಶ್ಚಿತ ಮೂಲದ ವೈರಾಗ್ಯ ಕಾಣಬರುತ್ತದೆ. ಈ ಹಿನ್ನೆಲೆಯಲ್ಲಿ ನಯಸೇನ ಹೇಳಿರುವ ಕತೆಗಳನ್ನು ಧಾರ್ಮಿಕ ಚೌಕಟ್ಟಿ ನಿಂದ ಬೇರ್ಪಡಿಸಿ ನೋಡುವ ಸಾಧ್ಯತೆಗಳೇ ಹೆಚ್ಚು. ಅಲ್ಲಿ ಬರುವ ಕಥಾ ನಾಯಕರಾರೂ ಪಂಪನ ‘ಆದಿಪುರಾಣ’ದ ವಜ್ರಜಂಘ, ಲಲಿತಾಂಗ, ಭರತ, ಬಾಹುಬಲಿಯಂಥವರಲ್ಲ. ಅಲ್ಲಿ ಬರುವ ವ್ಯಕ್ತಿಗಳಲ್ಲಿ ಬಹುಪಾಲು ಧಾರ್ಮಿಕ ನಿರ್ಬಂಧಗಳಿಗೆ ಒಳಪಟ್ಟವರಲ್ಲ; ಲೌಕಿಕ ಸಂಬಂಧಗಳನ್ನು ಹೊಂದಿದವರೇ ಆಗಿದ್ದಾರೆ. ರಾಜ, ಶೆಟ್ಟಿ, ಸಾಹುಕಾರ, ಸಾಲಗಾರ, ಸೂಳೆ, ವಿಟ, ಕಳ್ಳ, ತಳವಾರ, ಒಕ್ಕಲಿಗ, ಗಾವುಂಡ, ಶಾನುಭೋಗ, ಸುಂಕಿಗ, ಪರದ, ಪೊಲೆಯ ಮುಂತಾದ ವಿಭಿನ್ನ ಸ್ತರದ ಜನಸಮುದಾಯವೇ ಅಲ್ಲಿದೆ. ಇವರೆಲ್ಲರ ಸ್ವಭಾವ/ವರ್ತನೆಗಳನ್ನು ನಯಸೇನ ಸಂದರ್ಭ ಸನ್ನಿವೇಶಗಳಿಗೆ ಅನುಗುಣವಾಗಿ ನಿರೂಪಿಸಿದ್ದಾನೆ. ಅಲ್ಲಿ ನಡೆಯುವ ಹಾದರ, ವಂಚನೆ, ಕಳ್ಳತನ, ಕೊಲೆ ಇತ್ಯಾದಿಗಳೆಲ್ಲಾ ಭೋಗಾಪೇಕ್ಷೆ ಯಿಂದಲೇ ಘಟಿಸುವಂಥವು.

‘ಧರ್ಮಾಮೃತ’ದ ಪ್ರತಿಯೊಂದು ಕತೆಯೂ ಸಂಪತ್ತು, ಅಧಿಕಾರ ವಿಷಯ ಲೋಲುಪತೆ ಈ ವಿಚಾರಗಳನ್ನು ಒಳಗೊಂಡಿದ್ದು, ಅಲ್ಲಿ ಇವುಗಳ ಪರಸ್ಪರ ಸಂಬಂಧ ಏರ್ಪಡುತ್ತದೆ. ಯಾವುದೇ ಒಂದು ಪಾತ್ರ ಸ್ಥಿರವಾದ ಮೌಲ್ಯಕ್ಕೆ ಅಂಟಿಕೊಂಡಂತೆ ಕಂಡುಬರುವುದಿಲ್ಲ. ಅವೆಲ್ಲವೂ ಲೌಕಿಕ ದಾಹದಿಂದ ಚಡಪಡಿಸುತ್ತವೆ. ಹೀಗಾಗಿ, ಕಲಹ, ಕಿತ್ತಾಟ, ಸಂಘರ್ಷಗಳು ನಡೆದು, ಕೊನೆಗೆ ಅವು ವೈರಾಗ್ಯದ ದಾರಿಯನ್ನು ಹಿಡಿಯುತ್ತವೆ. ಇವೆಲ್ಲಕ್ಕೂ ಮೂಲಕಾರಣ ಅವರವರ ಲೋಭ. ಮೊದಲನೆಯ ಕತೆಯಲ್ಲಿ ಬರುವ ವಸುಭೂತಿ ಇದಕ್ಕೆ ಉತ್ತಮ ಉದಾಹರಣೆ. ಜೈನಧರ್ಮದ ಸವಣರ ಆಚರಣೆಗಳನ್ನು ಅರ್ಥಹೀನವೆಂದು ಟೀಕಿಸಿದ ವಸುಭೂತಿ, ದಯಾಮಿತ್ರಶೆಟ್ಟಿ ತೋರಿದ ಆಮಿಷಕ್ಕೆ ಒಳಗಾಗುತ್ತಾನೆ. ನೋಂಪಿ ವ್ರತವನ್ನು ಆಚರಿಸಿದರೆ ಅದಕ್ಕೆ ಪ್ರತಿಯಾಗಿ ಬೇಕಾದಷ್ಟು ದಕ್ಷಿಣೆ ದೊರೆಯುವುದೆಂಬ ದುರಾಸೆಯಿಂದ ‘ನೆರಪಲ್ಬಾರದ ವಿತ್ತಂ ದೊರೆಕೊಂಡುದು ನೆಲೆಗೆ ಪೋಗಿ ಮಕ್ಕಳೊಳಂ ಪೆಂಡಿರೊಳ ಮೊಡಗೂಡಿ ಸುಖದಿಂ ಚರಿಯಿಸುವೆಂ ಮೆಚ್ಚಿದಂದದಿಂ ಭೋಗಿಸುವೆಂ’ (೧ – ೩೧) ಎಂದು ಭಾವಿಸುತ್ತಾನೆ. ಅನಂತರ ವ್ರತದ ಕ್ಲಿಷ್ಟತೆಯನ್ನು ಅರಿತು, ಜೈನಧರ್ಮವೇ ಶ್ರೇಷ್ಠವೆಂಬುದನ್ನು ಒಪ್ಪಿ, ಸನ್ಯಾಸ ದೀಕ್ಷೆಯನ್ನು ಪಡೆದು, ಜಿನಧ್ಯಾನದಲ್ಲಿ ನಿರತನಾಗುತ್ತಾನೆ.

ಈ ಕಥೆ ಏಕಕಾಲದಲ್ಲಿ ಎರಡು ಅರ್ಥವನ್ನು ಹೊಮ್ಮಿಸುತ್ತದೆ. ಒಂದು, ಪ್ರಧಾನವಾಗಿ ಮನುಷ್ಯ ಲೋಭಿ ಎರಡು, ವಸುಭೂತಿ ಯಾವ ಧರ್ಮವನ್ನು ಅವಹೇಳನ ಮಾಡಿದ್ದನೋ, ಅದೇ ಧರ್ಮವನ್ನು ಹಣದಾಸೆಯಿಂದ ಅನುಸರಿಸಬೇಕಾಗಿ ಬಂದದ್ದು ವಿಪರ್ಯಾಸ. ‘‘ತಾನು ನಂಬಿದ ಧರ್ಮದಲ್ಲಿ ನಿಷ್ಠೆಯಿಲ್ಲದೆ ಕೇವಲ ಹೊರಗಿನ ಜನರನ್ನು ನಂಬಿಸಲು ಧರ್ಮಶ್ರದ್ಧೆ ತಾಳುವ ಇಂಥ ಜನರ ಆಷಾಢಭೂತಿತನ ನಯಸೇನನ ನಯವಾದ ವ್ಯಂಗ್ಯದಲ್ಲಿ ಮೂಡಿಬಂದಿದೆ’’ (ಡಿ. ವಿಜಯ, ನಯಸೇನ, ೧೯೭೭, ಪು. ೨೧) ಎಂಬ ಹೇಳಿಕೆ ಸರಿಯಿದೆ. ಅಷ್ಟೇ ಅಲ್ಲ, ಅಂದಿನ ಕಾಲದಲ್ಲಿ ಧರ್ಮೋಪದೇಶದ ನೆಪದಲ್ಲಾಗುತ್ತಿದ್ದ ಮತಾಂತರ ಪ್ರಕ್ರಿಯೆ ಸೂಚನೆ ಕೂಡ ಇದಾಗಿದೆ.

‘ಧರ್ಮಾಮೃತ’ದ ಕತೆಗಳಲ್ಲಿ ಕಳ್ಳತನ ಮಾಡುವುದು, ಸುಳ್ಳು ಹೇಳುವುದು, ಸಂಚು ಹೂಡುವುದು, ಕೊಲೆ ಮಾಡುವುದು, ಕೊಲೆ ಮಾಡಿಸುವುದು ಸಾಮಾನ್ಯ ಸಂಗತಿಯಾಗಿದೆ. ಇವು ಲೌಕಿಕ ವ್ಯಸನಗಳಿಗೆ ಒಳಗಾದವರಿಂದ ಘಟಿಸುತ್ತವೆ. ಚಾಪಲ್ಯ ಅಭೀಪ್ಸೆಗಳೂ ಭೋಗಾ ಕಾಂಕ್ಷೆಯ ಫಲಿತಗಳೇ ಆಗಿರುತ್ತವೆ. ಅರಸನ ಮಗನಾಗಿದ್ದ ಲಲಿತಾಂಗ ಅತಿಚಪಲತೆಯಿಂದ ಜನರಿಗೆ ತೊಂದರೆ ಮಾಡುತ್ತಾನೆ. ತಂದೆಯಾದ ಅರಿಮಥನ ಮಗನನ್ನು ಕರೆದು, ಕ್ಷತ್ರಿಯ ಧರ್ಮವನ್ನು ಉಪದೇಶಿಸಿ, ಜೈನಧರ್ಮದ ನೀತಿ ಪಾಲನೆ ಮಾಡುವಂತೆ ತಿಳಿಸಿ ದುರ್ಜನರ ಒಡನಾಟವನ್ನು ಬಿಡುವಂತೆ ಸಲಹೆ ಮಾಡಿದರೂ, ಆತ ನಾಗರಿಕರನ್ನು ಕಾಡದೆ ಬಿಡುವುದಿಲ್ಲ. ಕೋಪಗೊಂಡ ಅರಸ ‘ಇನ್ನೆನ್ನಾಳ್ಳ ದೇಶದೊಳಿರದೆ ಪೊಱಮಟ್ಟು ಪೋಗೆಂದು’ (೨ – ೯೭) ಸೂಚಿಸುತ್ತಾನೆ. ವಿಜಯಪುರವನ್ನು ತ್ಯಜಿಸಿದ ಲಲಿತಾಂಗ ನೇಪಾಲದೇಶವನ್ನು ಸೇರಿ ಪ್ರಸಿದ್ಧ ಕಳ್ಳನಾಗುತ್ತಾನೆ. ಅಂಜನ ವಿದ್ಯೆಯನ್ನು ಸಂಪಾದಿಸಿ ‘ಅಂಜನ ಚೋರ’ ಎನಿಸಿಕೊಂಡು, ಸಪ್ತವ್ಯಸನಿಯಾಗಿ, ಅನಂಗಸುಂದರಿ ಎಂಬ ವೇಶ್ಯೆಯಲ್ಲಿ ಅನುರಕ್ತನಾಗುತ್ತಾನೆ. ಅವಳಿಂದ ಪ್ರೇರಿತನಾಗಿ, ಅದೃಶ್ಯ ರೂಪದಿಂದ ಅರಮನೆಯನ್ನು ಪ್ರವೇಶಿಸಿ ಪಟ್ಟದ ರಾಣಿಯು ಧರಿಸಿದ್ದ ಜ್ಯೋತಿಪ್ರಭೆ ಎಂಬ ಪದಕವನ್ನು ಕದ್ದು ಹೊರಬರುವಾಗ ತಳವಾರ ಆತನನ್ನು ಬೆನ್ನಟ್ಟುತ್ತಾನೆ. ಅನಂತರ ತನ್ನ ಪೂರ್ವಜೀವನವನ್ನು ನೆನೆದು ಪಶ್ಚಾತ್ತಾಪಪಟ್ಟು, ಜಿನಭಕ್ತನಾಗುತ್ತಾನೆ. ಈ ಬಗೆಯ ತಸ್ಕರ ಪ್ರಯತ್ನಗಳು ಹಲವು ಬಗೆಯಲ್ಲಿ ನಡೆಯುತ್ತವೆ. ಜಿನೇಂದ್ರ ಭಕ್ತನ ದೇಹಾರದಲ್ಲಿರುವ ರತ್ನವನ್ನು ತಂದುಕೊಟ್ಟರೆ ಪಾಟಲೀಪುರದ ರಾಜಕುಮಾರನ ಅರ್ಧರಾಜ್ಯ ದೊರೆಯುವುದೆಂಬ ಆಸೆಯಿಂದ ಸೂರ್ಪನೆಂಬ ಕಳ್ಳ ಆ ಕೆಲಸವನ್ನು ನಿರ್ವಹಿಸುತ್ತಾನೆ. ಕೊನೆಗೆ, ಜಿನೇಂದ್ರ ಭಕ್ತನ ಉಪದೇಶದಿಂದ ಕಳ್ಳತನದ ಮಾರ್ಗವನ್ನು ತ್ಯಜಿಸಿ ತಪಸ್ಸಿನಲ್ಲಿ ನಿರತನಾಗುತ್ತಾನೆ. ಹೀಗೆ ಅನೇಕ ಕತೆಗಳಲ್ಲಿ ಬೇರೊಬ್ಬರು ತೋರುವ ಆಮೀಷಕ್ಕೆ ಬಲಿ ಯಾಗುವ ಪ್ರಸಂಗಗಳು ಬರುತ್ತವೆ.

ಧರ್ಮಾಮೃತದಲ್ಲಿ ಕಾಣಬರುವ ಕಳ್ಳತನದ ಪ್ರಕ್ರಿಯೆಗೆ ಕಾರಣವೇನು ಎಂಬುದಕ್ಕೆ ಉತ್ತರ ಸುಲಭ. ಇಲ್ಲಿನ ಕತೆಗಳಲ್ಲಿ ಬರುವ ಅರಸರೆಲ್ಲಾ ಸಾಮಾನ್ಯವಾಗಿ ವ್ಯಾಪಾರಿಗಳಾಗಿ ದ್ದಾರೆ. ಒಂದು ಕಡೆಯಾದ ಮಿತ್ರ ಶೆಟ್ಟಿ ಹೀಗೆ ಹೇಳುತ್ತಾನೆ. ಪುರುಷನು ತನಗೆ ಧನವಿದೆ ಯೆಂದು ಸುಮ್ಮನಿರಬಾರದು. ಧನ ಸಿಕ್ಕಿದರೆ ಇಹಪರಗಳೆರಡನ್ನೂ ಸಾಧಿಸಬಹುದು ಹೀಗೆ ಭಾವಿಸಿಯೇ ಆತ ವ್ಯಾಪಾರಕ್ಕೆ ಹೊರಡುತ್ತಾನೆ. ಅಂದರೆ, ಸಂಪತ್ತು ಎನ್ನುವುದು ಅರಸ/ ವೈಶ್ಯರಲ್ಲಿ ಕೇಂದ್ರೀಕೃತವಾಗಿದೆ. ಜೊತೆಗೆ, ಪ್ರಜೆಗಳನ್ನು ನಿಯಂತ್ರಿಸುವ ಅಧಿಕಾರ ಕೂಡ ಅವರಿಗಿದೆ. ಸಂಪತ್ತು ಮತ್ತು ಅಧಿಕಾರ ಕೂಡಿರುವುದರಿಂದ ಅವರು ಭೋಗದ ಪರಮಾ ವಧಿಯ ಜೀವನವನ್ನು ಅನುಭವಿಸಲು ಸಾಧ್ಯವಾಗಿದೆ. ಇಂಥದ್ದಕ್ಕೆ ಪ್ರತಿರೊಧವನ್ನು ಒಡ್ಡಿ, ತಾನೂ ಸುಖಿಸಬೇಕೆನ್ನುವ ದ್ರವ್ಯವ್ಯಸನ ಅನೇಕರಲ್ಲಿ ಇದ್ದಂತಿದೆ. ಅದಕ್ಕಾಗಿ ಅವರು ಸುಳ್ಳು, ಮಾರುವೇಷ, ಸುಲಿಗೆ, ಕೊಲೆ ಮುಂತಾದ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದರು. ಆದರೂ ಅವರಿಗೆ ಸುಖ, ನೆಮ್ಮದಿ ಇರಲಿಲ್ಲ; ರಾಜನ ಕೈಯಲ್ಲಿ ಸಿಕ್ಕಿ ಬೀಳುವ ಭಯವಿತ್ತು. ಶ್ರೀಮಂತರ ದೌರ್ಜನ್ಯಕ್ಕೆ ಒಳಗಾಗಿ ತಮ್ಮ ಆಸೆ, ಆಕಾಂಕ್ಷೆಗಳು ಈಡೇರದೆ ಹತಾಶರಾದ ಬಡವರ ಚಿತ್ರವನ್ನು ನಯಸೇನ ನೀಡಿದ್ದಾನೆ; ‘ಬಡವನ ಭೋಗಂ ಅತ್ಯಂತ ದುಃಖಮಂಪುಟ್ಟಿಸುಗುಂ (೬ – ೯೭). ಅಂದರೆ, ಸಂಪತ್ತು ಹಂಚಿಕೆಯಾಗದೆ, ಅಸಮಾನತೆಯುಳ್ಳ ಸಮಾಜವೊಂದು ನಿರ್ಮಾಣವಾಗಿತ್ತು ಎಂಬುದರ ಕುರುಹು ‘ಧರ್ಮಾಮೃತ’ದಲ್ಲಿ ಸಾಕಷ್ಟು ದೊರೆಯುತ್ತದೆ. ಚೀಲಗಳಲ್ಲಿ ಹೊನ್ನನ್ನು ಕಟ್ಟಿಡುತ್ತಿದ್ದ ಶ್ರೀಮಂತರು ಒಂದು ಕಡೆಯಾದರೆ, ಅವರಿಂದ ಸಾಲ ಪಡೆದು, ಹಿಂದಿರುಗಿಸಲಾರದೆ ಕಷ್ಟಪಡುತ್ತಿದ್ದವರೂ ಇದ್ದರು. ಹಣವಂತರು ಪುತ್ರ ಸಂತಾನವಿಲ್ಲದಿದ್ದರೆ ಅಸಹಾಯಕತೆಯಿಂದ ನರಳುತ್ತಿದ್ದರು. ತಾವು ಗಳಿಸಿಟ್ಟ ಸಂಪತ್ತು ವಂಶಸ್ಥವಾಗಿಯೇ ಹಸ್ತಾಂತರವಾಗಬೇಕೆಂಬುದು ಅವರ ಬಯಕೆಯಾಗಿತ್ತು. ಆಸೆ, ಅಸಹನೆ, ಬಡತನ ಮುಂತಾದ ಕಾರಣಗಳಿಂದ ಕೆಲವರು ಚೋರತನದಲ್ಲಿ ತೊಡಗಿದರು ಎಂದು ಭಾವಿಸಿದರೂ, ರಾಜಪುತ್ರರು, ಪುರೋಹಿತರ ಮಕ್ಕಳು ಕಳ್ಳತನ ಮಾಡಲು ಕಾರಣವೇನು? ಅಂಜನಚೋರನೆಂದೇ ಖ್ಯಾತನಾದ ಲಲಿತಾಂಗ ಕಾಶ್ಮೀರದ ದೊರೆಯ ಮಗ. ಪಾಟಲೀಪುತ್ರದ ದೊರೆಯ ಮಗನಾದ ವೀರಕುಮಾರ ಕಳ್ಳರ ಗುಂಪೊಂದರ ಮುಖಂಡ; ಸೂರ್ಪನೆಂಬುವನು; ಇದೇ ತಂಡದ ಸದಸ್ಯ ಈ ಬಗೆಯ ಸಂಕೀರ್ಣಪ್ರವೃತ್ತಿಗಳು ‘ಧರ್ಮಾಮೃತ’ದಲ್ಲಿ ಸಾಕಷ್ಟಿವೆ. ಲಲಿತಾಂಗ, ವೀರಕುಮಾರ, ಸೂರ್ಪನಂಥ ಪಾತ್ರಗಳನ್ನು ಗಮನಿಸಿದರೆ, ತಾವಿರುವ ಅರಮನೆ/ ಕುಟುಂಬದಲ್ಲಿರುವ ಸಂಪತ್ತು ಮತ್ತು ಭೋಗವನ್ನು ಅನುಭವಿಸಲಾರದ ಹತಾಶ ಮನಸ್ಸುಗಳು ದಾರಿತಪ್ಪಿರುವಂತೆ ಭಾಸವಾಗುತ್ತದೆ.

ಸ್ತೀ ಸಂಬಂಧವಾದ ಭೋಗ/ಉಪಭೋಗಗಳ ಬಗ್ಗೆ ನಯಸೇನನಿಗೆ ತಿರಸ್ಕಾರವಿರುವಂತೆ ಕಾಣುತ್ತದೆ. ಅಂಥ ಬಯಕೆ ಅಧಿಕವಾದರೆ ಆತ್ಮೋನ್ನತಿ ಸಾಧ್ಯವಿಲ್ಲ ಎಂಬ ನಿಲುವಿಗೆ ಆತ ಬರುತ್ತಾನೆ. ಜನರು ಅವುಗಳಿಂದ ವಿಮುಖರಾಗಬೇಕು ಎಂಬುದು ಅವನ ಉದ್ದೇಶ. ದೇಹ ಅದಿತ್ಯವಾದುದು; ಸಿರಿ ಸಂಪತ್ತು ಶಾಶ್ವತವಲ್ಲ ಎಂದಿದ್ದಾನೆ. ವಾರಿಷೇಣ – ಪುಷ್ಪದಾಡನಿಗೆ ಹೀಗೆ ಹೇಳುತ್ತಾನೆ; ‘ತರುಣಿಯರು ಪೆರ್ಬುಲಿಗಳು’, ‘ಹರಿಣಾಕ್ಷಿಯರು ಕ್ರೂರ ಸೀರ್ಕರಡಿ ಗಳು’ ಕವಿಯ ಮಾತುಗಳಿವು ‘ಮಾಯದ ಟಕ್ಕಿನ ಕಪಟದ ವಾಯದ ಕೃತ್ರಿಮದ ಮರುಕ ದೆರಕದ ಕಪಟೋಪಾಯದ ಕಣಿಗಳ್, ಸಂದ ಸ್ತ್ರಿಯರ್ ಕೇವಲಮೆ? ಸರ್ವಜನ ವಂಚಕಿಯರ್’ (೭ – ೧೫೬) ‘….. ಮೃಗಾಕ್ಷಿಯರ್ ಮೋಕ್ಷಪಥದ ಕಾಪಿನ ನಾಯ್ಗಳ್’ (೭ – ೧೫೮). ‘ಆಗಮಿಕ ಕಾವ್ಯ ಪರಂಪರೆಯ ಕಥನಗಳನ್ನು ಗಮನಿಸಿದರೆ, ವೈರಾಗ್ಯಕ್ಕೆ ವಿಷಯ ಕಾಮಸುಖವೇ ಮುಖ್ಯವಾದ ಕಾರಣವಾಗಿರುತ್ತದೆ. ನಯಸೇನನ ಕಾಲದಲ್ಲಿ ಸೂಳೆಗಾರಿಕೆ ಹಣವನ್ನು ಸುಲಿಗೆ ಮಾಡುವ ಕಸುಬಾಗಿತ್ತು. ಸಮಾಜದ ಅನೀತಿವಂತರಿಂದ, ಶ್ರೀಮಂತರಿಂದ ಅವರು ಸಂಪತ್ತನ್ನು ಲೂಟಿ ಮಾಡುತ್ತಿದ್ದ ಕ್ರಮವೂ ಭೋಗದ ಒಂದು ಭಾಗವೇ ಆಗಿದೆ. ಹಾಗೆಯೇ, ‘ಪಾದರಿಗ’ರೂ ಇದ್ದರು. ಸಾಮಾಜಿಕ ನಿಯಮಗಳನ್ನು ಉಲ್ಲಂಘಿಸಿದ ಘಟನೆಗಳ ಬಗ್ಗೆ ಕವಿಗೆ ಕೋಪವಿದೆ; ‘ಗರ್ಭಿಣಿಯಾದ ರಂಡೆಯಂತೆ ಬಾಯಂಬಿಟ್ಟು’ ‘ಪಾದರಿಗಂಡನಂ ನಂಬಿ ಮನೆಯ ಗಂಡನಂ ಬಿಡುವಂತೆ’ ಎಂಬ ಮಾತುಗಳನ್ನು ಗಮನಿಸಬಹುದು. ವೃತ್ತಿಗನು ಗುಣವಾಗಿ ಪರಿಣಾಮಗಳು ಏನೇ ಇರಲಿ, ನಯಸೇನನ ಕಾಲ ಸಂದರ್ಭ ಅತ್ಯಂತ ಜಟಿಲವಾದ ಸಮಸ್ಯೆಗಳನ್ನು ಒಳಗೊಂಡಿತ್ತು.

‘ಧರ್ಮಾಮೃತ’ ಮುಖ್ಯ ಹಂದರದಲ್ಲಿ ಜೈನ ಧರ್ಮದ ‘ನೀತಿಸಂಹಿತೆ’ಯೇ ಕಾಣುತ್ತದೆ. ಆದರೆ, ಕಥನ ಒಡಲಲ್ಲಿ ಅನ್ಯಧರ್ಮದೊಂದಿಗಿನ ‘ಹಣಾಹಣಿ’ ಇರುವುದನ್ನು ಗಮನಿಸಬೇಕಾ ಗುತ್ತದೆ. ಮೊದಲನೆಯ ಕತೆಯಲ್ಲಿ ವಸುಭೂತಿಯೆಂಬ ಬ್ರಾಹ್ಮಣನನ್ನು ಜಿನಧರ್ಮಕ್ಕೆ ಪರಿವರ್ತಿಸಿದ ಪ್ರಸಂಗವಿದೆ. ‘ಸತ್ಯವ್ರತದ ಕಥೆ’ಗಳಲ್ಲಿ ಬೌದ್ಧ ಮತ್ತು ಜೈನರ ನಡುವೆ ನಡೆದ ಸಂಘರ್ಷವಿದ್ದು; ಕೊನೆಗೆ ಜೈನಧರ್ಮಕ್ಕೆ ಜಯವಾಯಿತೆಂಬ ವಿವರಗಳಿವೆ. ಜೈನಧರ್ಮಕ್ಕೆ ಪರಿವರ್ತನೆಗೊಂಡವರೆಲ್ಲಾ ವೈರಾಗ್ಯಪರರಾಗುತ್ತಾರೆಯೇ ಹೊರತು, ಅವರಿಗೆ ಯಾವುದೇ ರೀತಿಯ ಅಧಿಕಾರ, ಸಂಪತ್ತು ಲಭ್ಯವಾಗುವುದಿಲ್ಲ. ಅಲ್ಲಿ ಬರುವ ರಾಜರು ಎಲ್ಲಾ ಸಂಪತ್ತನ್ನು ತಮ್ಮ ಮಕ್ಕಳಿಗೆ ಹಸ್ತಾಂತರಿಸುತ್ತಾರೆ. ಈ ಬಗೆಯ ಪರಿಶ್ರಮ ಪುರಾತನ ಜೈನಕಾವ್ಯಗಳಲ್ಲೂ ಇದೆ. ನಯಸೇನನ ಕಾಲಕ್ಕಾಗಲೇ ಜೈನಧರ್ಮದ ಪ್ರಾಬಲ್ಯ ಇಳಿಮುಖ ವಾಗಿ, ಪರಮತೀಯರು ಆ ಧರ್ಮವನ್ನು ಕುರಿತು ಟೀಕಿಸುತ್ತಿದ್ದುದುಂಟು. ಹಾಗೆಯೇ, ಜೈನಧರ್ಮದೊಳಗೇ ಹಲವಾರು ದ್ವಂದ್ವಗಳು, ಡಾಂಭಿಕತನಗಳು ಕಾಣಿಸಿಕೊಂಡಿದ್ದವು ಎನಿಸುತ್ತದೆ. ಹೀಗಾಗಿ, ನಯಸೇನನಿಗೆ ಧರ್ಮಪರವಾದ ಖಚಿತ ನಿಲುವುಗಳು ಸಾಧ್ಯವಾಗಿಲ್ಲ. ಒಂದು ಬಗೆಯ ಅತಂತ್ರ ನೆಲೆಯಲ್ಲಿಯೇ ನಿಜವಾಸ್ತವವನ್ನು ಹೇಳಲು ಪ್ರಯತ್ನಿಸಿದ್ದಾನೆ. ಜೈನಧರ್ಮದ ಎರಡು ತುದಿಗಳೆನಿಸಿದ ಭೋಗ ಮತ್ತು ವೈರಾಗ್ಯದ ಸಂಬಂಧಗಳು ‘ಧರ್ಮಾ ಮೃತ’ದಲ್ಲಿ ಧಾರ್ಮಿಕ ಚೌಕಟ್ಟಿನಿಂದ ಆಚೆಗೆ ಸಿಡಿದು ನಿಂತಿರುವುದರಿಂದ ಅವುಗಳಿಗೆ ಲೌಕಿಕ ಸ್ಪರ್ಶ ಪ್ರಾಪ್ತವಾಗಿದೆ ಎನ್ನಬಹುದು.