‘ಧರ್ಮಾಮೃತ’ ಕೃತಿಯ ನಯಸೇನ ಹುಟ್ಟಿಬೆಳದದ್ದು ಧಾರವಾಡ ಜಿಲ್ಲೆಗೆ ಸೇರಿದ ಮುಳಗುಂದ ಎಂಬ ಊರಲ್ಲಿ. ಅವನ ಕಾಲ ೧೧೧೨. ಜೈನಮತಕ್ಕೆ ಸೇರಿದವನು. ‘ಧರ್ಮಾ ಮೃತ’ ಕೃತಿಯಲ್ಲಿ ೧೪ ಕಥೆಗಳಿವೆ. ಚಂಪೂಕಾವ್ಯ ಪ್ರಕಾರದಲ್ಲಿ ರಚಿಸಿದ್ದಾನೆ. ಈ ಸಂಗತಿಗಳು ಸಾಹಿತ್ಯದ ವಿದ್ಯಾರ್ಥಿಗಳಿಗೆ ತಿಳಿದಿವೆ. ನಯಸೇನನ ಕಾಲ ೧೨ನೇ ಶತಮಾನ. ಈ ದಶಕ ಕರ್ನಾಟಕದ ಚರಿತ್ರೆಯಲ್ಲಿಯೇ ಅನನ್ಯವಾದದ್ದು. ರಾಜಕೀಯ, ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ಆರ್ಥಿಕ ಎಲ್ಲ ವಲಯಗಳಲ್ಲಿ ಬದಲಾವಣೆ ಕಂಡು ಹೊಸ ಜೀವನ ವಿಧಾನ ರೂಪಣೆಗೊಂಡು ಕ್ರಿಯಾಶೀಲವಾದ ದಶಕ. ಬದಲಾವಣೆ ಬಂದಲ್ಲಿ ಸಂಘರ್ಷಗಳು ಬಿಕ್ಕಟ್ಟುಗಳು ಇದ್ದೇ ಇರುತ್ತವೆ. ಸಮುದಾಯಗಳು ಬದಲಾವಣೆಗೆ ಹೊಂದಿಕೊಳ್ಳುವಾಗ ಇರುವುದನ್ನು ಉಳಿಸಿಕೊಳ್ಳಲು ಹೊಸದನ್ನು ಸ್ವೀಕರಿಸಲು ಸಂಘರ್ಷಕ್ಕೆ ಗುರಿಯಾಗುತ್ತವೆ. ೧೨ನೇ ಶತಮಾನದಲ್ಲಿ ಧಾರ್ಮಿಕವಾಗಿ ಜೈನಧರ್ಮ ಕುಸಿಯತೊಡಗಿತ್ತು. ಶೈವಧರ್ಮ ಮುನ್ನೆಲೆಗೆ ಬರುತ್ತಿತ್ತು. ಶರಣರು ತಮ್ಮ ಹೊಸ ವಿಚಾರಗಳಿಂದ ಸಮಾಜದಲ್ಲಿ ಭಿನ್ನವಾದ ಚಲನೆಯನ್ನು ತರಲು ಯತ್ನಿಸಿದರು. ಈಗಾಗಲೇ ರಾಜರ ಪೋಷಣೆಯಿಂದ ನೆಲೆಯೂರಿದ್ದ ಜೈನಧರ್ಮವು ಜನಸಾಮಾನ್ಯ ಆಲೋಚನೆಯ, ಬದುಕಿನ ಭಾಗವಾಗಲು ಸಾಧ್ಯವಾಗಿರಲಿಲ್ಲ. ಹಿಂದಿನಿಂದಲೂ ನೆಲೆಯೂರಿಕೊಂಡಿದ್ದು, ಸದಾರಾಜರ ಪೋಷಣೆಯಲ್ಲಿದ್ದ ವೈದಿಕ ಧರ್ಮವು ಕೆಳಜಾತಿಗಳನ್ನು ದೂರವಿರಿಸಿದ್ದವು. ಇಂಥ ಜನಸಾಮಾನ್ಯರನ್ನು ಕೆಳಜಾತಿ – ಕೆಳವರ್ಗಗಳನ್ನು ಮತ್ತು ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡ ಶರಣರು ಆರ್ಥಿಕವಾಗಿ ಬಲಗೊಳಿಸಲು, ಧಾರ್ಮಿಕವಾಗಿ ಸ್ವತಂತ್ರಗೊಳಿಸಲು ಪ್ರಯತ್ನಿಸಿದರು. ಜಾತಿಯನ್ನು, ವರ್ಗವನ್ನು ಅವುಗಳ ಬಿಕ್ಕಟ್ಟುಗಳನ್ನು ಸರಳಗೊಳಿಸಲು ಯತ್ನಿಸಿದರು. ಇದರಿಂದ ಸಮಾಜದಲ್ಲಿ ಮತಾಂತರಗಳು ಆರಂಭವಾದವು. ಬುದ್ಧನ ಕಾಲದಲ್ಲಿ ಈ ಪ್ರಕ್ರಿಯೇ ಆರಂಭವಾಗಿತ್ತು. ಜೈನರ ಪ್ರಾಬಲ್ಯ ಇದ್ದಾಗಲೂ ನಡೆದಿತ್ತು. ೧೨ನೇ ಶತಮಾನದಲ್ಲಿ ಶರಣರ ವಿಚಾರಗಳಿಂದ ಮತಾಂತರಗಳು ಚುರುಕುಗೊಂಡವು. ತೀರಾ ಕೆಳವರ್ಗ ಜಾತಿಗಳಲ್ಲಿ ‘ಲಿಂಗಾಯತ’ ಮತಕ್ಕೆ ಮತಾಂತರ ಗೊಳ್ಳುವುದು ಕಂಡುಬಂತು.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಉತ್ತರದಲ್ಲಿ ಕಲ್ಯಾಣಿ ಚಾಲುಕ್ಯರು ದಕ್ಷಿಣದಲ್ಲಿ ಹೊಯ್ಸಳರು ರಾಜ್ಯಭಾರ ನಡೆಸುತ್ತಿದ್ದರು. ರಾಜಮನೆತನಗಳಲ್ಲಿ ಮತಾಂತರಗಳು ನಡೆದವು. ವಿಷ್ಣುವರ್ಧನ ಶೈವ ಧರ್ಮಕ್ಕೆ ಒಲಿದರೆ, ಹೆಂಡತಿ ಶಾಂತಲ ಜೈನಧರ್ಮಕ್ಕೆ ಒಲಿದಳು. ಇದು ಧರ್ಮಸಮನ್ವಯದ ಸಂಕೇತ ಎನ್ನಲು ಕಷ್ಟ. ರಾಜಕೀಯ ಧರ್ಮ ಎಂದು ಹೇಳುವುದು  ಸುಲಭವಲ್ಲ. ಉತ್ತರ ಕರ್ನಾಟಕದಲ್ಲಿ ಶರಣರಿಗೆ ಜೈನಧರ್ಮದವರ ವಿರುದ್ಧ, ವೈದಿಕ ವಿರುದ್ಧ ಹೋರಾಡುವುದು, ಸಂಘರ್ಷಕ್ಕಿಳಿಯುವುದು ನಡೆದಿತ್ತು. ನೆರೆರಾಜ್ಯಗಳಲ್ಲಿಯೂ ಸ್ಥಿತ್ಯಂತರಗಳು ಕಾಣಿಸಿದ್ದವು. ಚೋಳರು ನಿರಂತರವಾಗಿ ಜೈನರ ಮೇಲೆ ಆಕ್ರಮಣ ಮಾಡುತ್ತಲೇ ಇದ್ದರು. ಉತ್ತರ ಭಾರತದ ಸುಲ್ತಾನರು ರಾಜ್ಯ ವಿಸ್ತರಣೆಗಾಗಿ ದಕ್ಷಿಣ ಭಾರತಕ್ಕೆ ಬರುತ್ತಿದ್ದರು. ಕರ್ನಾಟಕಕ್ಕೆ ಕಾಲಿಟ್ಟಿದ್ದರು. ಇಂಥ ಬಿಕ್ಕಟ್ಟಿನ ಕಾಲದಲ್ಲಿ ನಯಸೇನ ಬದುಕಿದ್ದನು. ಇಂಥ ಬಿಕ್ಕಟ್ಟಿನ ಕಾಲದಲ್ಲಿ ಇರುವ ಕವಿಗಳೇ ಭಾಗ್ಯಶಾಲಿಗಳು ಎಂಬ ಮಾತು ನಿಜ. ನಯಸೇನ ಜೈನಧರ್ಮದವನಾಗಿ ತನ್ನ ಮತವು ಅನ್ಯಮತಗಳಿಂದ ಹಿನ್ನೆಲೆಗೆ ಸರಿಯುವುದನ್ನು ಕಾಣತೊಡಗಿದ್ದನು. ಕವಿಯಾಗಿ ನಯಸೇನ ತನ್ನ ಮುಂದಿದ್ದ ಸಮಾಜದ ಸ್ಥಿತಿಗತಿಗಳನ್ನು ಗ್ರಹಿಸುತ್ತ ಸಾಹಿತ್ಯ ರಚಿಸಬೇಕಾಗಿದೆ. ಸಾಮಾಜಿಕ ವಾಸ್ತವವನ್ನು ನಯಸೇನ ತನ್ನ ಧರ್ಮಾಮೃತದಲ್ಲಿ ಕಟ್ಟಿಕೊಟ್ಟಿದ್ದಾನೆ ಎಂದರೆ ಸರಳವಾದ ತೀರ್ಮಾನವಾಗುತ್ತದೆ. ಜಿನಮತವನ್ನು ಅದರ ತತ್ವಗಳೊಂದಿಗೆ ಕಥೆ ಕಟ್ಟಿದ್ದಾನೆ ಎಂದರೂ ಸರಳೀಕರಣವೇ ಆಗುತ್ತದೆ. ಹೇಳಿಕೇಳಿ ನಯಸೇನ ಕಥನಕಾರ. ಕಥೆ ಕಟ್ಟಬೇಕಾಗಿದೆ. ಕಥೆಯಲ್ಲಿ ಕಥನವೂ ಇರಬೇಕೆಂದು ಹಂಬಲಿಸುವವನೂ ಆಗಿದ್ದಾನೆ. ನಯಸೇನ ಅಪ್ಪಟ ಶಾಸ್ತ್ರಕಾರನೂ ಅಲ್ಲ ಕವಿಯೂ ಅಲ್ಲ. ನಯಸೇನ ಉತ್ತರ ಕರ್ನಾಟಕದ ಹಳ್ಳಿಗ ಜೈನಮತವನಾಗಿದ್ದರಿಂದ ಅಕ್ಷರ ವಿದ್ಯೆ ಕಲಿತಿರುವವನು. ಸಾಹಿತ್ಯ ಪರಂಪರೆಯೂ ಅವನಿಗೆ ಚೆನ್ನಾಗಿದೆ. ಕಾವ್ಯ, ಚಂಪೂಶೈಲಿ, ಶಾಸ್ತ್ರ – ವ್ಯಾಕರಣದ ವಿದ್ವತ್ತನ್ನು ಬಳಸಿಕೊಳ್ಳುವ ಒತ್ತಡವಿದೆ. ಆದರೆ ನಯಸೇನ ಉತ್ತರ ಕರ್ನಾಟಕದ ಹಳ್ಳಿಗನಾಗಿ ಕಥೆ ಕಟ್ಟುವ ದಾರಿಯನ್ನು ಹುಡುಕಿಕೊಂಡಿದ್ದಾನೆ. ಕಾವ್ಯದಲ್ಲಿ ರೂಪಕಗಳನ್ನು ತರುವಷ್ಟು ವಸ್ತುವನ್ನು ಸಂಕೀರ್ಣಗೊಳಿಸುವಷ್ಟು ಸೂಕ್ಷ್ಮಜ್ಞ ನಯಸೇನ ಅಲ್ಲ. ಜೈನಧರ್ಮದ ತಿರುಳನ್ನು ಕಾವ್ಯದಲ್ಲಿ ಹೇಳಲು ಹೋಗದೆ, ಕಥೆಯಲ್ಲಿ ಧರ್ಮದ ಆಚರಣೆಗಳನ್ನು ಆಚರಿಸುವುದು ಹೇಗೆ, ಅದರಿಂದಾಗುವ ಪರಿಣಾಮಗಳು, ಫಲಗಳು ಕಾಣಿಸುತ್ತವೆ. ಇವುಗಳನ್ನು ಕಥೆಯಲ್ಲಿ ತರುವುದು, ಕಲೆಯಾಗಿಸುವುದು ನಯಸೇನನ ಧರ್ಮ.

ಕಥನಕಾರನಿಗೆ ಲೋಕದ ವಾಸ್ತವದ ಅರಿವಿರಬೇಕು. ಆದರೆ ಆ ವಾಸ್ತವವನ್ನೇ ತರುವುದು ಅವನ ಗುರಿಯಾಗಬಾರದು. ಲೋಕದ ವಾಸ್ತವದಲ್ಲಿ ಕಥನಕಾರನಿಗೆ ಬೇಕಾದ ಸಂಗತಿಗಳು ಇರಲಿಕ್ಕಿಲ್ಲ. ಬೇಕಾದದ್ದನ್ನು ನಿರೂಪಿಸಬೇಕಾಗಿದೆ. ಆಗ ಬೇರೊಂದು ಲೋಕವನ್ನೇ ಸೃಷ್ಟಿಸಬೇಕಾಗುತ್ತದೆ. ಈ ಲೋಕವನ್ನು ಸೃಷ್ಟಿಸಿ ನಿರೂಪಿಸುವಾಗ ಅದರ ವಿಧಾನ ಕ್ರಮ ಹೇಗಿರುತ್ತದೆ? ಆ ವಿಧಾನ ಕ್ರಮದ ಮೈಯೊಳಗೆ ಕಥನಕಾರನ ತಾತ್ವಿಕತೆ ರೂಪ ಪಡೆಯಬೇಕು. ಓದುಗ ಕಥನಕಾರನ ತಾತ್ವಿಕತೆಯನ್ನು ಗುರುತಿಸುತ್ತಾನೋ? ತನ್ನ ತಾತ್ವಿಕತೆಯನ್ನು ಗುರುತಿಸಿಕೊಳ್ಳುತ್ತಾನೋ? ಈ ಪ್ರಶ್ನೆ ಈ ಹೊತ್ತಿನ ಅಧ್ಯಯನಗಳಲ್ಲಿ ಪ್ರಧಾನವಾಗಿ ಕಾಡುತ್ತಿದೆ. ಈ ದ್ವಂದ್ವ ಇದೆ. ಸ್ಪಷ್ಟಪಡಿಸಿಕೊಂಡರೆ ದ್ವಂದ್ವ ಮಾಯವಾಗುತ್ತದೆ.

ನಯಸೇನ ತಾನು ರೂಪಿಸಿಕೊಂಡ ಲೋಕದಲ್ಲಿ ರಾಜರಿದ್ದಾರೆ, ವ್ಯಾಪಾರಸ್ಥರಿದ್ದಾರೆ; ಇವರಿರುವುದರಿಂದ ಶ್ರೀಮಂತಿಕೆ ಇರುತ್ತದೆ. ರಾಜರು ವರ್ತಕರು ಇರುವಲ್ಲಿ ಸೇವಕರು ಕಳ್ಳರು, ವೇಶ್ಯೆಯರು ಇರಲೇಬೇಕು. ಭೋಗ ಸರ್ವೆಸಾಮಾನ್ಯ. ಸಾಮಾನ್ಯರು ಇಲ್ಲ, ಇದ್ದರೂ ಕಮ್ಮಿ. ನಯಸೇನನು ರೂಪಿಸಿಕೊಂಡ ಲೋಕದಲ್ಲಿ ರಾಜರು ವರ್ತಕರು ಭೋಗ ಸೇವಕರು, ವೇಶ್ಯಯರು, ಕಳ್ಳರು ತುಂಬಿಹೋಗಿದ್ದಾರೆ. ಧರ್ಮ, ಧರ್ಮದ ಆಚರಣೆಗಳು ಇವರೆಲ್ಲರಿಂದ ಆಪತ್ತಿಗೆ ಒಳಗಾದಾಗ ಅದನ್ನು ಸರಿದಾರಿಗೆ ತರಲು ಜಿನಮುನಿಗಳು ಕಾಣಿಸಿಕೊಂಡು ತಮ್ಮ ಕರ್ತವ್ಯವನ್ನು ಮಾಡುತ್ತಾರೆ. ಕಥೆಗಳಲ್ಲಿ ಸರಳ ವಿಧಾನವಿದೆ. ಧರ್ಮದ ಆಚರಣೆಗಳನ್ನು ಶ್ರದ್ಧೆಯಿಂದ ಮಾಡುವವರು. ಅವರಿಗೆ ಏನೇ ವಿಪತ್ತುಗಳು ಬಂದರೂ ಶ್ರದ್ಧೆಯನ್ನು ಬಿಡದೆ ಛಲದಿಂದ ಇದು ಗೆಲ್ಲುವುದು ಕಂಡುಬರುತ್ತದೆ. ಅಂದರೆ ಜೈನಧರ್ಮ, ಅದರ ತತ್ವಗಳು ಆಚರಣೆಗಳು ಮನುಷ್ಯನನ್ನು ರಕ್ಷಿಸುತ್ತವೆ. ಸುಖಜೀವನಕ್ಕೆ ದಾರಿ ಮಾಡಿಕೊಡುತ್ತವೆ ಎಂಬ ನಂಬಿಕೆಯೊಂದನ್ನು ಪ್ರತಿಪಾದಿಸಲು ಕಥೆಗಾರ ನಯಸೇನ ಹಂಬಲಿಸುತ್ತಾನೆ. ಜಿನಧರ್ಮಕ್ಕೆ ಮತಾಂತರವಾದವರನ್ನು ಜಿನಧರ್ಮದ ಶ್ರೇಷ್ಠತೆಯನ್ನು ಮನಗಾಣಿಸುವ, ಶ್ರದ್ಧೆ ಮೂಡಿಸುವ, ಇಲ್ಲೆ ಎಲ್ಲವನ್ನು ಕಂಡುಕೊಳ್ಳುವಂತೆ ಒತ್ತಾಯಿಸುವ ಗುಣ ಕಥೆಗಳಲ್ಲಿದೆ. ಧರ್ಮ, ಅದರ ಆಚರಣೆಗಳು ಮನುಷ್ಯನ ಬದುಕಿನಲ್ಲಿ ತಾಂತ್ರಿಕವಾಗಿ ಮಾತ್ರ ಇರುತ್ತವೆ. ತಾಂತ್ರಿಕವಾದದ್ದನ್ನು ತೆಗೆದುಹಾಕಿ ಅದರ ಜಾಗದಲ್ಲಿ ಧರ್ಮದ ತತ್ವಗಳು ಕ್ರಿಯಾಶೀಲವಾಗಿರುವುದನ್ನು ನೆಲೆಗೊಳಿಸಲು ಯತ್ನಿಸುವ ಕ್ರಮ ಈ ಕಥೆಗಳಲ್ಲಿ ಕಂಡುಬರುತ್ತದೆ.

ಮೊದಲ ಕಥೆ ‘ವಸುಭೂತಿಯ ಕಥೆ’ಯಲ್ಲಿ ವೈದಿಕ ಮತದ ವಸುಭೂತಿಯನ್ನು ಜಿನಮತದ ದಯಾಮಿತ್ರ ಸೆಟ್ಟಿಯನ್ನು ಒಂದೆಡೆ ಕೂಡಿಸುವ ಕ್ರಮವಿದೆ. ಅವರಿಟ್ಟರು ತಮ್ಮ ತಮ್ಮ ಧರ್ಮದ ಪ್ರತಿನಿಧಿಗಳಾಗಿ ಮುಖಾಮುಖಿಯಾಗುತ್ತಾರೆಯೇ ಹೊರತು ಮನುಷ್ಯರಾಗಿ ಅಲ್ಲ. ಬ್ರಾಹ್ಮಣನ ಎಲ್ಲ ದೌರ್ಬಲ್ಯಗಳನ್ನು ಜಿನನ ಶ್ರೇಷ್ಠತೆಯನ್ನು ತೋರಿಸಲಾಗಿದೆ. ಜಿನಧರ್ಮವನ್ನು ಅದರ ಆಚರಣೆಗಳನ್ನು ಕೆಟ್ಟದಾಗಿ ಕಾಣುವ ಬ್ರಾಹ್ಮಣನನ್ನು, ಜಿನನುಪಾಯ ವಾಗಿ ಜಿನಧರ್ಮ ಅಷ್ಟಕ್ಕೆ ಬಿಡುವುದಿಲ್ಲ. ವಸುಭೂತಿಯನ್ನು ಜಿನಮತದಲ್ಲಿ ಸೇರಿಸಿ ಮುಕ್ತಿಯನ್ನು ಹೊಂದುವಂತೆ ಮಾಡುತ್ತಾನೆ. ಕಥನಕ್ರಮದಲ್ಲಿ ಲೌಕಿಕ, ಆಗಮಿಕ ಸಂಗತಿ ಗಳನ್ನು ಒಂದು ಮಾಡುತ್ತಾನೆ. ಮತಾಂತರಿಯನ್ನು ಎರಡನೇ ದರ್ಜೆಯವನನ್ನಾಗಿ ಮಾಡದೆ ಜಿನಧರ್ಮದಲ್ಲಿ ಉನ್ನತ ಸ್ಥಾನಕ್ಕೆ ಏರಿಸುವುದನ್ನು ಕಾಣುತ್ತೇವೆ. ಕಥೆಯ ಕ್ರಮದಲ್ಲಿ ಹೇರಳ ವಾಗಿ ಹಾಸ್ಯವಿದೆ. ಬ್ರಾಹ್ಮಣನನ್ನು ಅಪಹಾಸ್ಯಕ್ಕೆ ಗುರಿ ಮಾಡಲಾಗಿದೆ. ಅದರಿಂದಾಗಿ ‘ಧರ್ಮಾಮೃತ’ ಕೃತಿಯಲ್ಲಿ ಈ ಕಥೆ ಹೆಚ್ಚು ಜನಪ್ರಿಯವಾಗಿದೆ. ಕಥೆಯ ಗುರಿ ಅನ್ಯಧರ್ಮ ವನ್ನು ಅಪಹಾಸ್ಯಕ್ಕೆ ಗುರಿಮಾಡುವುದಷ್ಟೇ ಅಲ್ಲ. ಅದು ಒಂದು ಹಂತ. ಮುಂದಿನ ಮುಖ್ಯವಾದ ಹಂತ ವಸುಭೂತಿಯನ್ನು ಜಿನನನ್ನಾಗಿ ಮಾಡುವುದು, ಸುಖವಾದ ಮುಕ್ತಿಗೆ ಏರುವಂತೆ ಮಾಡುವುದನ್ನು ಕಾಣಬಹುದು.

ಕಥೆಯಲ್ಲಿ ಹೇರಳವಾಗಿ ಉಪಮೆಗಳನ್ನು ಬಳಸಲಾಗಿದೆ. ವಸುಭೂತಿ ಹಣದ ಆಶೆಗೆ ಜಿನಮತದ ವ್ರತವನ್ನು ಆಚರಿಸಲು ತೊಡಗಿಕೊಂಡಾಗ ಅವನಿಗಾಗುವ ಸಂಕಟವನ್ನು ಹೇಳಲು ಉಪಮೆಗಳನ್ನು ಸಾಲುಸಾಲು ಹೆಣೆಯಲಾಗಿದೆ. ಚಂಪೂಪ್ರಕಾರದಲ್ಲಿ ಬರುವ ಗದ್ಯವನ್ನು ಉಪಮೆಗಳನ್ನು ಹೇಳಲು ಉಪಯೋಗಿಸಲಾಗಿದೆ. ೧೪೪, ೧೬೦, ೧೬೭ ಈ ಗದ್ಯ ಭಾಗದಲ್ಲಿ ೫೦ರಿಂದ ೬೦ ಉಪಮೆಗಳನ್ನು ಬಳಸಿ ವಸುಭೂತಿಯ ಸಂಕಟವನ್ನು, ಪಶ್ಚಾತ್ತಾಪವನ್ನು ಸೋಲನ್ನು ಹೇಳಲಾಗಿದೆ. ಹೀಗೆ ಉಪಮೆಗಳನ್ನು ಸಾಲುಸಾಲು ಬಳಸುವುದರಿಂದ ಕಥೆಯಲ್ಲಿ ಸ್ಪಷ್ಟವಾದ ಉದ್ದೇಶ ಕಾಣುತ್ತದೆ. ದಯಾಮಿತ್ರ ಸೆಟ್ಟಿಯು ಸೋತ ವಸುಭೂತಿಗೆ ಜಿನಧರ್ಮದ ಮಹತ್ವವನ್ನು ಹೇಳಲು ತೊಡಗಿದಾಗ ಪುನಃ ಉಪಮೆಗಳ ಸಾಲುಸಾಲು ಆರಂಭವಾಗುತ್ತವೆ. ಕಥೆಗಾರನ ಗುರಿಯಲ್ಲಿ ಉದ್ದೇಶದಲ್ಲಿ ತೊಡಕಾಗಲಿ, ಸಂದಿಗ್ಧವಾಗಲಿ, ಸಂಕೀರ್ಣವಾಗಲಿ ಕಾಣಬಾರದು ಜಿನಧರ್ಮದ ಶ್ರೇಷ್ಠತೆಯನ್ನು ಹೇಳುವ ಪ್ರಧಾನ ಗುರಿ ನೆರವೇರಬೇಕು ಎಂಬುದಷ್ಟೆ ಮುಖ್ಯ. ರೂಪಕಗಳನ್ನು ಬಳಸಿದರೆ ಸಂಕಿರ್ಣವಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಕಥನಕ್ರಮದಲ್ಲಿ ರೂಪಗಳು ಕಾಣುವುದಿಲ್ಲ. ಬದಲಾಗಿ ಉಪಮೆಗಳು ಇರುವೆಯ ಸಾಲಿನಂತೆ ಕಾಣುತ್ತವೆ.

ಇದರಿಂದ ಕಥೆಯಲ್ಲಿ ಪಾತ್ರಗಳು ಮಾತಾಡುತ್ತವೆಯೇ ಎಂಬ ಸಂಶಯ ಬರುತ್ತದೆ. ಪಾತ್ರಗಳ ಬದಲು ಕಥೆಗಾರನೇ ನಿಂತು ಹೇಳಿದಂತೆ ಭಾಸವಾಗುತ್ತದೆ. ಅನೇಕ ಕಥೆಗಳಲ್ಲಿ ಕಥೆಯ ಸಂದರ್ಭ, ಪ್ರಸಂಗದ ಸಂದರ್ಭ, ಪಾತ್ರಗಳು ಮರೆತು ಹೋಗಿ ಉಪಮೆಗಳನ್ನು ತಾಂತ್ರಿಕವಾಗಿ ಕೇಳುವಂತಾಗುತ್ತದೆ. ಉಪಮೆಗಳು ಸಾಲುಸಾಲು ಬರುವುದರಿಂದ ಬಸ್ಸಿನಲ್ಲಿ ಪ್ರಯಾಣಿಸುವಾಗ ಕಿಡಕಿಬದಿಯ ಹೊರಗೆ ಗಿಡಮರಗಳು ಬಂದು ಹೋಗುವಂತೆ ಯಾವುದೂ ಸ್ಪಷ್ಟವಾಗುವುದಿಲ್ಲ. ನಿಧಾನವಾಗಿ ಉಪಮೆಗಳನ್ನು ಒಂದೊಂದೇ ಗಮನಿಸಿದರೆ ಕಥೆಗಾರನ ಸ್ಥಳೀಯ ಸಾಂಸ್ಕೃತಿಕ ಜ್ಞಾನ ಅರಿವಿಗೆ ಬರುತ್ತದೆ.

ನಯಸೇನ ಮೊದಲ ಕಥೆಯಲ್ಲಿ ಅನ್ಯಧರ್ಮದವರಿಗೆ ಜಿನಧರ್ಮದ ಕಷ್ಟ ಮತ್ತು ಸುಖವನ್ನು ಅರಿವಿಗೆ ತರಲು ಬಳಸಿದ ಕಥನ ಕ್ರಮದಲ್ಲಿ ವೈದಿಕನನ್ನು ಅಪಹಾಸ್ಯಕ್ಕೆ ಗುರಿಮಾಡಿದ ರೀತಿಯಿಂದ ಕಥೆಗಾರನ ಸೃಜನಶೀಲತೆ ಎದ್ದು ಕಾಣುತ್ತದೆ. ಜಿನಧರ್ಮದ ಮಹತ್ವವನ್ನು ಹೇಳಲು ಕಥೆ ಹುಟ್ಟಿಸಿದ್ದು ಸರಿ. ಆದರೆ ಈ ಕಥೆಯಲ್ಲಿ ಕಥೆ ಮಾತ್ರ ಉಳಿದು ಧರ್ಮದ ತಾತ್ವಿಕತೆ ಮರೆಯಾಗಿ ಹೋಗುವುದಕ್ಕೆ ಹೆಚ್ಚು ಅನ್ನಿಸುತ್ತದೆ. ಇದರಿಂದಾಗಿ ಕಥೆಯಲ್ಲಿ ಮುಂದೆ ಈ ವಿಡಂಬನೆಯನ್ನು ಕೈ ಬಿಡಲಾಗಿದೆ. ಲಲಿತಾಂಗನ ಕಥೆಯಲ್ಲಿ ಲಲಿತಾಂಗನ ದಾಲಿಯ ಕಾಲದಲ್ಲಿ ವೇಶ್ಯಾವಾಟಿಕೆಯಲ್ಲಿ ನಡೆಯುವ ದೃಶ್ಯಗಳಲ್ಲಿ ವ್ಯಂಗ್ಯ ವಿದೆ. ಆದರೆ ಆ ವಿಡಂಬನೆಯ ಒಳಗೆ ನೋವಿಲ್ಲ. ಓದುಗನೂ ಯಾವ ಅಂತರವಿಟ್ಟುಕೊಳ್ಳದೆ ನಗಬಹುದು. ಆದರೆ ವಸುಭೂತಿಯನ್ನು ವಿಡಂಬಿಸುವಾಗ ಓದುಗನಿಗೆ ಬರುವ ನಗು ತಾತ್ಕಾಲಿಕವಾದದ್ದು. ವಸುಭೂತಿ ಎಂಬ ವ್ಯಕ್ತಿಯನ್ನು ನೆನೆದಾಗ, ಅವನ ನೋವು ಸಂಕಟ ಓದುಗನಿಗೆ ತಟ್ಟದೇ ಇರಲಾರದು. ಈ ಸಂಗತಿ ಕಥೆಗಾರ ನಯಸೇನನಿಗೆ ತಿಳಿದಿರಬೇಕು. ಮುಂದಿನ ಕಥನ ಕ್ರಮದಲ್ಲಿ ಅನ್ಯಧರ್ಮಗಳ ಮುಖಾಮುಖಿ ಬರುವುದಿಲ್ಲ. ಬದಲಾಗಿ ಅನ್ಯ ಧರ್ಮೀಯರು ಜಿನಧರ್ಮದ ಮಹತ್ವವನ್ನು ಸಂದರ್ಭಾನುಸಾರ ಅರಿತು ಆ ಧರ್ಮಕ್ಕೆ ಸೇರಿಕೊಂಡು ಜಿನಭಕ್ತರಾಗುವ ಕಥೆಗಳು ಕಂಡುಬರುತ್ತವೆ.

ಯಾವುದೇ ಧರ್ಮದಲ್ಲಿ ಆಚರಣೆಗಳೇ ಪ್ರಧಾನವಾಗಿದ್ದು ಆ ಧರ್ಮೀಯರಲ್ಲಿ ಕ್ರಿಯಾಶೀಲವಾಗಿರುತ್ತವೆ. ಪ್ರತಿಯೊಂದು ಧರ್ಮ ಆಚರಣೆಗಳಿಂದಲೇ ಸೃಜನಶೀಲ ವಾಗಿರುತ್ತವೆ. ನಯಸೇನ ಅನೇಕ ಕಥೆಗಳಲ್ಲಿ ಸ್ತ್ರಿಯರನ್ನು ಮತ್ತು ಅವರು ಆಚರಿಸುವ ವ್ರತಗಳನ್ನು ಅದರ ಪರಿಣಾಮಗಳನ್ನು ಹಾಗೂ ಫಲಗಳನ್ನು ವಿಶೇಷವಾಗಿ ಹೇಳುತ್ತಾನೆ. ಜೈನಧರ್ಮದಲ್ಲಿ ಮಹಿಳೆಗೆ ಅದೇ ಜನ್ಮದಲ್ಲಿ ವೇಷವಿಲ್ಲ. ಇದು ಮಹಿಳೆಯರಿಗೆ ಯಾವ ಪರಿಣಾಮವನ್ನುಂಟುಮಾಡಿದೆಯೋ, ಮಾಡುತ್ತದೆಯೋ ಕುತೂಹಲದ ಸಂಗತಿ. ಇದು ಉಚಿತವಾದ ವಿಷಯವಲ್ಲ ಎಂಬ ಚರ್ಚೆ ಜಿಜ್ಞಾಸೆ ನಡೆದಿದೆಯೇ? ‘ಅನಂತಮತಿಯ ಕಥೆ’ ‘ಶೀಲವತಿಯ ಕಥೆ’ ‘ರೇವತಿದೇವಿಯ ಕಥೆ’ ಮುಂತಾದವು ಸ್ತ್ರಿಯರನ್ನೇ ಕೇಂದ್ರವಾಗಿವೆ. ಕಥನಕ್ರಮ ಸರಳವಾಗಿದೆ. ಮೂವರು ಸ್ತ್ರೀಯರು ಹಿಡಿದ ವ್ರತವನ್ನು ಎಷ್ಟೇ ಸಂಕಷ್ಟಗಳು ಬಂದರೂ ಸಹಿಸಿಕೊಂಡು ಹಿಡಿದ ವ್ರತಕ್ಕೆ ಭಂಗವಾಗದಂತೆ ಛಲದಿಂದ ನಡೆದು ಗೆಲ್ಲುತ್ತಾರೆ. ಆದರೆ ಪುರುಷರಂತೆ ಜಿನಭಕ್ತರಾದರೂ ಹುಟ್ಟಿದ ಜನ್ಮದಲ್ಲಿ ಮೋಕ್ಷ ಲಭಿಸುವುದಿಲ್ಲ ಸ್ತ್ರೀಯರಿಗೆ. ಅನಂತಮತಿ ನಿಷ್ಕಾಂಕ್ಷೆಯನ್ನು ಸಾಧಿಸಿಯೂ, ದೇಹಾಂತ್ಯವಾಗಿ ಮುಂದೆ ಸುಕಾಂತನೆಂಬ ದೇವನಾಗಿ ಹುಟ್ಟಬೇಕಾಯಿತು. ಶೀಲವತಿ ಗಂಡನೊಡಗೂಡಿ ಹಿಡಿದ ವ್ರತ (ನಿರ್ವಿಚಿಕಿತ್ಸೆ)ವನ್ನು ಶ್ರದ್ಧೆಯಿಂದ ಮಾಡಿ ಗೆದ್ದರೂ ಅಂತಿಮವಾಗಿ ಶೀಲವತಿಯು ಸುವ್ರತ ಗಂತಿಯವರಲ್ಲಿ ದೀಕ್ಷೆಯನ್ನು ಪಡೆದು ಕಠಿಣ ತಪಸ್ಸುಗೈದು ದೇಹಾಂತ್ಯದಿಂದ ಬ್ರಹ್ಮಕಲ್ಪದಲ್ಲಿ ಮಹರ್ಧಿಕದೇವನಾಗಿ ಹುಟ್ಟಬೇಕಾಯಿತು. ಶೀಲವತಿ ದೇವಿ ಹಿಡಿದ ವ್ರತ(ಅಮೂಢ ದೃಷ್ಟಿತ್ವ)ವನ್ನು ಭಂಗಗೊಳಿಸಲು ಬಂದವರನ್ನು ಗೆದ್ದು ಜಿನಧರ್ಮವೇ ಶ್ರೇಷ್ಠವೆಂದು ಬಾಳಿದವರೂ ಕಡೆಯಲ್ಲಿ ಅಚ್ಚು ಕಲ್ಪದಲ್ಲಿ ಮಹರ್ಧಿಕ ದೇವನಾಗಿ ಹುಟ್ಟಬೇಕಾಯಿತು. ಇಂಥ ಕಥನಕ್ರಮದಲ್ಲಿ ಉಪಮೆಗಳು ಬಹಳ ಬಳಕೆಯಾಗುತ್ತವೆ. ಗದ್ಯಭಾಗವು ಕಥೆಯನ್ನು ಸರಳವಾಗಿ ಮುಂದೋಡಿಸಲೂ ಬಳಕೆಯಾಗಿದೆ. ವ್ರತಕ್ಕೆ ಭಂಗ ಒದಗಿದಾಗ ಹುಟ್ಟುವ ಛಲದಿಂದ ಜಿನಮತದ ಆಚರಣೆಯನ್ನು ಗಟ್ಟಿಗೊಳಿಸುವ ಸಲುವಾಗಿ ಉಪಮೆಗಳನ್ನು ಬಳಸಲಾಗುತ್ತದೆ. ಕಥೆಗಳಲ್ಲಿ ೧೦ ಉಪಮೆಗಳಿಂದ ೨೦ರ ವರೆಗೆ, ೪೦ರಿಂದ ೬೦ರವರೆಗೆ ಒಂದು ಕಡೆ ೯೦ರವರೆಗೆ ಬಳಕೆಯಾಗಿವೆ. ಈ ಸಾಮರ್ಥ್ಯದಿಂದಾಗಿಯೇ ನಯಸೇನನ್ನು ಕನ್ನಡದ ಮೊದಲ ಜಾನಪದ ಕವಿ ಎಂದು ಕರೆಯಲಾಗಿದೆ. ‘ಒದ್ದಾಯನ – ಶೀಲವತಿ’ ಕಥೆಯು ಮಧ್ಯಕಾಲೀನ ಕಾವ್ಯ ‘ಹರಿಶ್ಚಂದ್ರ ಚಾರಿತ್ರ’ ರಾಘವಾಂಕ ಮತ್ತು ‘ಮಂಟೇಸ್ವಾಮಿ ಕಥೆ’(ನೀಲಗಾರರು ಹಾಡುವ ಕಾವ್ಯ)ಯನ್ನು ನೆನಪಿಸುತ್ತದೆ. ಸ್ತ್ರೀಯರಿಗೆ ಜಿನಮತದಲ್ಲಿ ವ್ರತಾಚರಣೆಗಳನ್ನು ಶ್ರದ್ಧೆಯಿಂದ ಮಾಡಿದರೆ ಸಿಗುವ ಸ್ಮಾನವನ್ನು ವಿಶೇಷವಾಗಿ ಈ ಕಥೆಗಳಲ್ಲಿ ಹೇಳಲಾಗಿದೆ.

‘ಅಹಿಂಸೆ; ಧನಕೀರ್ತಿ’ ಕಥೆ ಅಹಿಂಸೆಯ ವ್ರತಾಚರಣೆ ಮಾಡಿದವರಿಗೆ ಸಿಗುವ ಫಲವನ್ನು ಹೇಳುತ್ತದೆ. ಈ ಕಥೆಯಲ್ಲಿ ಉಪಮೆಗಳು ಸಾಲುಸಾಲು ಕಾಣುವುದಿಲ್ಲ. ಅನೇಕ ಕಥೆಗಳಲ್ಲಿ ಉಪದೇಶಕ್ಕಾಗಿ ಆಪತ್ತುಗಳು ಬಂದಾಗ ಜಿನಧರ್ಮದ ತತ್ವಗಳಿಗೆ ಮಹತ್ವವನ್ನು ನೀಡಲು ಉಪಮೆಗಳು ಹೆಚ್ಚಾಗಿ ಕಾಣುತ್ತವೆ. ‘ಅಹಿಂಸೆ’ ಕಥೆಯಲ್ಲಿ, ಕಥೆಗೆ ತಡೆ ಇಲ್ಲ. ಅದು ಮುಂದುವರಿಯುತ್ತಲೇ ಕುತೂಹಲವನ್ನು ಒಳಗಿಟ್ಟು ಬೆಳೆಯುತ್ತದೆ. ಕೊನೆಯಲ್ಲಿ ಉಪಕಥೆ ಬಂದರೂ ಅದು ಒಟ್ಟು ಘಟನೆಗಳನ್ನು ಸಾರ್ಥಕಗೊಳಿಸುತ್ತದೆ. ಆ ಉಪಕಥೆಯೇ ಇಡೀ ಕಥೆಯ ಜೀವಾಳಾಗಿ ನಿಲ್ಲುತ್ತದೆ. ‘ಅನಂತಮತಿ’ ಕಥೆಯ ವಿಧಾನ ಈ ಕಥೆಯದೂ ಒಂದೇ ಅನಂತಮತಿ ಬಾಲ್ಯದಲ್ಲಿ ಆಕಸ್ಮಿಕವಾಗಿ ಬ್ರಹ್ಮಚರ್ಯ ವ್ರತವನ್ನು ಆಟದ ಭಾಗವಾಗಿ ಸ್ವೀಕರಿಸಿದ್ದನ್ನು, ಬದುಕಿನುದ್ದಕ್ಕೂ ಅದನ್ನೇ ಆಚರಿಸಿ, ವಿಪತ್ತುಗಳನ್ನು ಎದುರಿಸಿ ಗೆಲ್ಲುತ್ತಾಳೆ. ಆಕೆಗೆ ಹಿಂದಿನ ಜನ್ಮದ ಬೆಂಬಲವಿರುವುದಿಲ್ಲ. ಆಕೆಯ ಧೃಡ ಮನಸ್ಸೇ ಆಕೆಯನ್ನು ಕಾಯು ತ್ತದೆ. ಆದರೆ ‘ಅಹಿಂಸೆ’ ಕಥೆಯಲ್ಲಿ, ಧನಕೀರ್ತಿ ಸಿದ್ಧಗೊಂಡ ಪಾತ್ರ ಆತನಿಗೆ ವಿಪತ್ತುಗಳು ಒದಗಿದ್ದು ಗೊತ್ತಾಗುವುದಿಲ್ಲ. ಅದರಿಂದ ಪಾರಾದಾಗಲೂ ಭಯಗೊಳ್ಳುವುದಿಲ್ಲ. ತನ್ನಪಾಡಿಗೆ ತಾನು ನಿರುಮ್ಮಳವಾಗಿರುವ ಧನಕೀರ್ತಿ ಓದುಗನ ಮನಸ್ಸಿನಲ್ಲಿ ಉಳಿಯುತ್ತಾನೆ. ಅದಕ್ಕೆ ಕಾರಣವೆಂದರೆ, ಶ್ರೀದತ್ತಸೆಟ್ಟಿ ಧನಕೀರ್ತಿಯನ್ನು ಕೊಲ್ಲಿಸಲು ಎಷ್ಟು ಪ್ರಯತ್ನಿಸಿದರೂ ಅಷ್ಟೇ ಸರಳವಾಗಿ ಧನಕೀರ್ತಿ ಸಾವಿನಿಂದ ಸರಳವಾಗಿ ಪಾರಾಗುತ್ತಾನೆ. ವಿಪತ್ತಿಗೆ ಸಿಲುಕ್ಕಿದ್ದು, ಅದರಿಂದ ಪಾರಾದದ್ದು ಧನಕೀರ್ತಿಯ ಅರಿವಿಗೆ ಬರುವುದಿಲ್ಲ. ಶ್ರೀದತ್ತಸೆಟ್ಟಿ ಮಗು ಧನಕೀರ್ತಿಯನ್ನು ‘ಮಾದಿಗನಿಗೆ’ ಕೊಲ್ಲಲು ಹಣಕೊಟ್ಟರೂ ಆತ ಕೊಲ್ಲುವುದಿಲ್ಲ. ಎರಡನೇ ಸಲ ‘ಹೊಲೆಯನಿಗೆ’ ಒಪ್ಪಿಸಿದರೂ ಆತನೂ ಕೊಲ್ಲುವುದಿಲ್ಲ. ಕುತೂಹಲವೆಂದರೆ ಶ್ರೀದತ್ತಸೆಟ್ಟಿಯ ತಂಗಿಯ ಮಗನಾಗಿ ಧನಕೀರ್ತಿ ಬೆಳೆಯುವಂತಾಗುತ್ತದೆ. ಸ್ವತಃ ತಾನೇ ಧನಕೀರ್ತಿಯನ್ನು ಕೊಲ್ಲಿಸಲು ಮಗನಿಗೆ ಪತ್ರ ಬರೆದು, ಆ ಪತ್ರವನ್ನು ಧನಕೀರ್ತಿಯ ಕೈಯಲ್ಲಿ ಕಳಿಸುತ್ತಾನೆ. ದಾರಿಯಲ್ಲಿ ಮಲಗಿದ್ದ ಧನಕೀರ್ತಿಯನ್ನು ವೇಶ್ಯ ಮೃಗಸೇನೆ ನೋಡಿ, ಅವನ ಮೇಲೆ ಮಮತೆ ಹುಟ್ಟಿ ಪತ್ರವನನ್ನೇ ಬದಲಿಸಿಬಿಡುತ್ತಾನೆ. ಅದರಿಂದ ಶ್ರೀಧತ್ತಸೆಟ್ಟಿಯ ಮಗಳು ಶ್ರೀಮತಿಯನ್ನೇ ಧನಕೀರ್ತಿ ಮದುವೆಯಾಗುವಂತಾಗುತ್ತದೆ. ಮುಂದೆ ಶ್ರೀಧತ್ತಸೆಟ್ಟಿಯ ಮಗ ಸಾಯುತ್ತಾನೆ. ತಾನೂ ತನ್ನ ಹೆಂಡತಿಯೂ ಸಾಯುತ್ತಾರೆ. ಧನಕೀರ್ತಿ ಮಾತ್ರ ಉಳಿಯುತ್ತಾನೆ. ಇದಕ್ಕೆ ಕಾರಣವೆಂದರೆ ಹಿಂದಿನ ಜನ್ಮದಲ್ಲಿ, ಮೃಗಸೇನ ಎಂಬ ಬೆಸ್ತ ಜಿನಮುನಿಗಳಿಂದ ಒಂದು ವ್ರತ ಬೇಡುತ್ತಾನೆ. ಮುನಿ, ಹೆಂಡ ಬಿಡು, ಕೊಲೆ ಬಿಡು, ಸುಳ್ಳು ಬಿಡು, ಕಳ್ಳತನ ಬಿಡು ಎಂದು ಒಂದೆನ್ನು ಹೇಳಿದಂತೆ ಬೆಸ್ತ ಎಲ್ಲವನ್ನು ಜೀವನೋ ಪಾಯಕ್ಕೆ ಅವು ಬೇಕು ಎಂದು ಹೇಳುತ್ತಾನೆ. ಕೊನೆಯಲ್ಲಿ ನಿನ್ನ ಬಲೆಗೆ ಬಿದ್ದ ಮೊದಲ ಮೀನನ್ನು ಕೊಲ್ಲದೇ ಬಿಟ್ಟು ಬಿಡು ಎಂದು ಜಿನಮುನಿ ಹೇಳಿದಾಗ ಅದನ್ನು ಒಪ್ಪುತ್ತಾನೆ. ಆದರೆ ಬೆಸ್ತ ಕೆರೆಯಲ್ಲಿ ಒಂದು ಮೀನು ಹಿಡಿದು, ಅದನ್ನು ಗುರುತುಮಾಡಿ ಬಿಡುತ್ತಾನೆ. ದೂರ ಹೋಗಿ ಬಲೆ ಬೀಸಿದರೆ ಅದೇ ಮೊದಲು ಮೀನು ಬಲೆಗೆ ಬೀಳುತ್ತದೆ. ಅದನ್ನು ತಪ್ಪಿಸಲು ಬೆಸ್ತ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಅವನ ಹೆಂಡತಿ ಘಂಟಿ ಗಂಡನ ಈ ವ್ರತ ಕಂಡು ಸಿಡಿಯುತ್ತಾಳೆ. ಆ ಮೃಗಸೇನನೇ ಧನಕೀರ್ತಿ ಆಗಿ ಹುಟ್ಟುತ್ತಾನೆ.  ಘಂಟಿ ಶ್ರೀಮತಿಯಾಗಿ ಹುಟ್ಟುತ್ತಾಳೆ. ಸಾವಿಗೀಡಾಗದೆ ಪ್ರತಿಸಲ ಬದುಕಿದ ಮೀನು ಮೃಗಸೇನೆ ಎಂಬ ವೇಶ್ಯೆಯಾಗಿ ಹುಟ್ಟಿ ಧನಕೀರ್ತಿಯನ್ನು ಸಾವಿನಿಂದ ಪಾರು ಮಾಡುತ್ತಾಳೆ. ಬೆಸ್ತ ತಾನು ಪಾಲಿಸಿದ ಅಹಿಂಸೆಯಿಂದ ಮುಂದಿನ ಜನ್ಮದಲ್ಲಿ ಧನಕೀರ್ತಿಯಾಗಿ ಹುಟ್ಟಿ ಸಾವಿನಿಂದ ಪಾರಾಗಿ ಉಳಿಯುವ ಈ ಕಥೆ ತನ್ನ ಸರಳ ಕಥನ ಕ್ರಮದಿಂದ ಅತ್ಯುತ್ತಮ ಕಥೆಯಾಗಿದೆ. ಕಥೆಯಲ್ಲಿ ಬರುವ ಘಟನೆಗಳು ಉಪಕಥೆ ಎಲ್ಲವೂ ಸಾವಯವ ಸಂಬಂಧ ಪಡೆಯುತ್ತವೆ. ಅಂಹಿಸೆಯ ಕಥೆಯಲ್ಲಿ, ಓದುಗನಿಗೆ ಎಲ್ಲೂ ಹಿಂಸೆಯಾಗುವುದಿಲ್ಲ.

ನಯಸೇನನ ಕಥಾಲೋಕದಲ್ಲಿ ಈ ಮೊದಲೇ ಹೇಳಿದಂತೆ, ರಾಜರು, ಅವರ ಭೋಗ ಜೀವನಕ್ಕೆ ಕಂಡ ಸ್ತ್ರೀಯರನ್ನು ಬಯಸುವುದು, ಅವರ ಸೇವೆಗೆ ಸೇವಕರಾಗುವುದು, ಒಂದು ಕಡೆ ವರ್ತಕರು, ಅವರ ಸಂಪತ್ತು ಮತ್ತ ಜಿನಧರ್ಮದ ಮೇಲಿನ ಅವರ ಭಕ್ತಿ ಒಂದು ಕಡೆ, ಈ ಎರಡು ವರ್ಗಗಳಿರುವ ಲೋಕದಲ್ಲಿ ಕಳ್ಳರು, ವೇಶ್ಯೆಯರು ಇರುವುದನ್ನು ಕಾಣುತ್ತೇವೆ. ಭೋಗ ಇದ್ದಲ್ಲಿ ಸ್ತ್ರೀಯರಿಗೆ ಆಪತ್ತುಗಳೂ ಇರುತ್ತವೆ. ಅವುಗಳನ್ನು ವಿರೋಧಿಸಿ ಬದುಕಲು ವ್ರತಾಚರಣೆಗಳನ್ನು ಧೃಡ ಮನಸ್ಸಿನಿಂದ ಮಾಡಿ ಗೆಲ್ಲುವುದು ಇಲ್ಲಿದೆ. ರಾಜರು, ವರ್ತಕರು, ಸ್ತ್ರೀಯರು, ಕಳ್ಳರು, ವೇಶ್ಯೆಯರು ಇರುವ ಸಮಾಜದಲ್ಲಿ ಲಯ ತಪ್ಪಿದಾಗ ಅದನ್ನು ಸರಿ ಪಡಿಸಲು ಜಿನಮುನಿಗಳು ಇದ್ದೇ ಇರುತ್ತಾರೆ. ಒಟ್ಟಿನಲ್ಲಿ ಜಿನಮತದ ಆಚರಣೆಗಳನ್ನು ಮತ್ತು ತತ್ವಗಳನ್ನು ಪಾಲಿಸುವ ಲೋಕವೊಂದನ್ನು ನಯಸೇನ ಸೃಷ್ಟಿಸುತ್ತಾನೆ. ಇಂಥ ಲೋಕವನ್ನು ಕಥೆಯ ಮೂಲಕ ಸೃಷ್ಟಿಸುತ್ತಾನೆ. ಅಂತಿಮವಾಗಿ ಕಥೆಯಲ್ಲಿ ಕಲೆ ಇರಬೇಕು. ಅದನ್ನು ನಯಸೇನ ತಂದಿದ್ದಾನೆ. ಇದೇ ಕಥೆಗಾರನ ಕಥನ ಕ್ರಮದ ತಾತ್ವಿಕ ಸ್ವರೂಪವಾಗಿ ಕಾಣಿಸುತ್ತದೆ.