ಧಾರ್ಮಿಕ ದೃಷ್ಟಿ ಕೋನವುಳ್ಳವರು ಧರ್ಮ ನಿರಪೇಕ್ಷತೆಯನ್ನು ಧರ್ಮ ವಿರುದ್ಧವೆಂದು ತಿರಸ್ಕರಿಸುತ್ತಾರೆ. ಯಾವುದೇ ಪರಿಕಲ್ಪನೆ ಸಾಮಾಜಿಕ ಸಂದರ್ಭದಲ್ಲಿ ಅರ್ಥಪೂರ್ಣವಾದರೆ ಮಾತ್ರ ಅದಕ್ಕೆ ಬೆಲೆ ಎಂಬುದನ್ನು ನಾವು ಮುಖ್ಯವಾಗಿ ಗಮನದಲ್ಲಿ ಇಟ್ಟುಕೊಳ್ಳಬೇಕು. ಅಮೂರ್ತವಾದ ಸೂತ್ರ ಅದೆಷ್ಟೇ ವಿವರವಾಗಿರಲಿ ಸುಸ್ಪಷ್ಟವಾಗಿರಲಿ, ಒಂದಲ್ಲ ಒಂದು ಸಾಮಾಜಿಕ ಸಂದರ್ಭಕ್ಕೆ ಸಂಗತವಾದರೆ ಮಾತ್ರ ಅರ್ಥಪೂರ್ಣವಾಗುತ್ತದೆ. ಧರ್ಮ ನಿರಪೇಕ್ಷತೆಯನ್ನು ಸಹ ಸಾಮಾಜಿಕ, ಆರ್ಥಿಕ ಸಂದರ್ಭದಲ್ಲಿ ಮಾತ್ರ ನಿರ್ವಹಿಸಲು ಸಾಧ್ಯ. ಪಾಶ್ಚಿಮಾತ್ಯ ಸಮಾಜದಲ್ಲಿ ನಿಜವಾದದ್ದು ಭಾರತೀಯ ಸಮಾಜದಲ್ಲಿ ನಿಜವಾಗಬೇಕೆಂದೇನೂ ಇಲ್ಲ. ಹಾಗೆಯೇ ಇಲ್ಲಿನದು ಅಲ್ಲಿಯೂ ನಿಜವಾಗಬೇಕೆಂದಿಲ್ಲ. ಅಂದರೆ ಧರ್ಮ ನಿರಪೇಕ್ಷತೆಯನ್ನು ನಿರ್ವಹಿಸಲು ನಿರ್ದಿಷ್ಟ ಸಂದರ್ಭಗಳ ಹಿನ್ನೆಲೆ ಅಗತ್ಯ.

ಆಕ್ಸಫರ್ಡ್ ನಿಘಂಟಿನಲ್ಲಿ ಧರ್ಮ ನಿರಪೇಕ್ಷತೆಯನ್ನು ರೀತಿ ವಿವರಿಸಲಾಗಿದೆ. ಇದರ ಪ್ರಕಾರಸೆಕ್ಯುಲರಿಸಂಎಂದರೆ:

ದೇವರು ಅಥವಾ ಸ್ವರ್ಗ-ನರಕಗಳ ಭವಿಷ್ಯದ ಅವಸ್ಥೆಯಲ್ಲಿ ನಂಬಿಕೆಯಿಟ್ಟು, ಅದರಿಂದ ಪಡೆವ ಎಲ್ಲಾ ತೀರ್ಮಾನಗಳಿಂದ ಹೊರತಾದ, ಇಹಲೋಕದಲ್ಲಿ ಮಾನವ ಕೋಟೆಯ ಒಳಿತನ್ನು ಮಾತ್ರ ನೈತಿಕತೆ ಆಧರಿಸಿರಬೇಕೆಂಬ ತತ್ವ.

ಚೇಂಬರ್ಸ್ ನಿಂಘಟಿನ ಪ್ರಕಾರ

ರಾಷ್ಟ್ರೀಯ ಶಿಕ್ಷಣ ಶುದ್ಧಾಂಗವಾಗಿ ಲೌಕಿಕವಾಗಿರಬೇಕೆಂಬ ದೃಷ್ಟಿ. ‘ಸೆಕ್ಯುಲರಿಸಂ’ ಎಂದರೆ ಸರ್ಕಾರ, ನೈತಿಕತೆ, ಶಿಕ್ಷಣ ಇತ್ಯಾದಿಯೆಲ್ಲಾ ಧರ್ಮದಿಂದ ಮುಕ್ತವಾಗಿರಬೇಕೆಂಬ ನಂಬಿಕೆ. ಆದರೆ ಇಂದು ಸರ್ಕಾರ ನೈತಿಕತೆ, ಶಿಕ್ಷಣ ಇತ್ಯಾದಿಯೆಲ್ಲೆಡೆ ಧರ್ಮದ ಹೊರತಾಗಿ ಏನೂ ಇಲ್ಲವೆನಿಸುತ್ತಿದೆ.

ಯುರೋಪಿನ ರಾಷ್ಟ್ರಗಳಲ್ಲಿ ಸರ್ಕಾರದ ಎಲ್ಲಾ ಕೆಲಸಗಳೂ ಚರ್ಚಿನ ಆಜ್ಞೆಯಂತೆ ನಡೆಯಬೇಕಾಗಿತ್ತು. ಇದನ್ನು ವಿರೋಧಿಸಿದರೆ ಅವರನ್ನು ಕೋಮುವಾದಿಗಳು ಎಂಬ ಹಣೆಪಟ್ಟಿ ಕಟ್ಟಿ ಅವರನ್ನು ದಂಡಿಸಲಾಗುತ್ತಿತ್ತು. ಮಾರ್ಟಿನ್‌ ಲೂಥರ್ ಯೂರೋಪಿನ ಮಧ್ಯಮ ವರ್ಗದ ಅತ್ಯುತ್ಕೃಷ್ಟ ವಕ್ತಾರ. ಲೂಥರ್ ಚರ್ಚಿನ ಅಧಿಪತ್ಯದ ವಿರುದ್ಧ ಹೋರಾಡಿದರೆ, ಮಧ್ಯಮ ವರ್ಗ ಮಾನವೀಯ ತತ್ವಗಳ ಮೇಲೆ ಆಧಾರಿತವಾದ ಗ್ರೀಕ್‌ ಸಂಸ್ಕೃತಿ ಮತ್ತು ತಾತ್ವಿಕತೆಯನ್ನು ಪುನರುಜ್ಜೀವಿಸಲು ಯತ್ನಿಸಿತು. ಆದರೆ ಚರ್ಚಿನ ವಿರುದ್ಧ ಎದ್ದ ದಂಗೆಯು ಧರ್ಮ ವಿರುದ್ಧದ ದಂಗೆಯಲ್ಲ. ಅದು ಭ್ರಷ್ಟಾಚಾರ, ಲೋಭ ಮತ್ತು ದಬ್ಬಾಳಿಕೆಯ ವಿರುದ್ಧದ ಎದುರು ಎದ್ದ ದಂಗೆ.

ಯುರೋಪಿನ ಸಮಾಜ ಏಕಧರ್ಮ ಸಮಾಜವಾಗಿದ್ದುದು ಚರ್ಚು ಇಬ್ಭಾಗವಾಗುವವರೆಗೆ. ಅಲ್ಲಿಯವರೆಗೆ ಒಂದೇ ಮಾದರಿಯ ಧರ್ಮ ಕ್ರೈಸ್ತ ಧರ್ಮ. ಅದೇ ಕ್ಯೋಥೋಲಿಕ್‌ ಕ್ರೈಸ್ತಧರ್ಮ. ಧರ್ಮ ಸುಧಾರಣೆಯ ನಂತರವೇ ಪ್ರಾಟೆಸ್ಟೆಂಟ್‌ ಕ್ರೈಸ್ತರು ಕಾಣಿಸಿಕೊಂಡಿದ್ದು. ಆದರೆ ಭಾರತೀಯ ಸಮಾಜದಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು.

ಭಾರತ ಬಹುಸಂಸ್ಕೃತಿಗಳು, ಬಹುಧರ್ಮಗಳ ನಾಡು, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳು ಹುಟ್ಟಿದೊಡನೆಯೇ ಭಾರತಕ್ಕೆ ಕಾಲಿಟ್ಟ ಭಾರತದ ಬಹುಧರ್ಮೀಯತೆಯನ್ನು ಇನ್ನಷ್ಟು ಹೆಚ್ಚಿಸಿದವು. ಹಿಂದೂ ಧರ್ಮದಲ್ಲಿ ಪುರೋಹಿತ ಪರಿಕಲ್ಪನೆಯಿದೆ. ಆದರೂ ಯಾವ ಪ್ರತಿಷ್ಟಿತ ಧಾರ್ಮಿಕ ಅಧಿಕಾರದ ವಿರುದ್ಧ ಯಾವ ಹೋರಾಟವೂ ಇರಲಿಲ್ಲವಾದ್ದರಿಂದ, ಧರ್ಮವನ್ನು ವಿರೋಧಿಸುವ ಪ್ರಶ್ನೆ ಇಲ್ಲಿ ಏಳಲೇ ಇಲ್ಲ. ಭಾರತೀಯ ಪರಂಪರೆಯನ್ನು ಧರ್ಮ ನಿರಪೇಕ್ಷತೆ ಧರ್ಮದ ವಿರುದ್ಧ ಅಲ್ಲ, ಕೋಮುವಾದದ ವಿರುದ್ಧ. ಆದರೆ ಏಕ ಧರ್ಮದ ಯೂರೋಪಿನಲ್ಲಿ ಧರ್ಮ ನಿರಪೇಕ್ಷತೆ ಕೋಮುವಾದದ ವಿರುದ್ಧ ಅಲ್ಲ. ಏಕೆಂದರೆ ವಿವಿಧ ಧಾರ್ಮಿಕ ಕೋಮುಗಳ ಮಧ್ಯೆ ಮೇಲುಗೈಗಾಗಿ ಅಲ್ಲಿ ಯಾವ ಹೋರಾಟವೂ ಇರಲಿಲ್ಲ. ಪಾಶ್ಚಿಮಾತ್ಯ ಮತ್ತು ಭಾರತೀಯ ಮಾದರಿಯ ಧರ್ಮ ನಿರಪೇಕ್ಷತೆಗಳ ಪರಿಕಲ್ಪನೆಗಳಲ್ಲಿಯೇ ಇರುವ ಮುಖ್ಯ ವ್ಯತ್ಯಾಸ ಇದು.

ಯೂರೋಪಿನಲ್ಲಿ ಚರ್ಚಿಗೂ ಕ್ರೈಸ್ತರಿಗೂ ಮತ್ತೊಂದು ಧಾರ್ಮಿಕ ಕೋಮಿಗೂ ಮಧ್ಯೆ ಹೋರಾಟ ಇತ್ತು. ಆದರೆ ಎರಡು ಬಣದ ಕೋಮಿನ ಧುರೀಣರು ನ್ಯಾಯಯುತವಾದ ಅಧಿಕಾರ ಹಂಚಿಕೆಗೆ ಪ್ರಾಧಾನ್ಯತೆ ಕೊಟ್ಟರು. ಆದರೂ, ಅಲ್ಪಸಂಖ್ಯಾತ ಕೋಮುಗಳ ಧುರೀಣರಿಗೆ ಬಹುಸಂಖ್ಯಾತ ಕೋಮುಗಳು ತಮ್ಮ ಮೇಲೆ ದಬ್ಬಾಳಿಕೆ ನಡೆಸಬಹುದೆಂಬ, ತಮ್ಮ ಧಾರ್ಮಿಕ ವಿಷಯಗಳಲ್ಲಿ ತಲೆ ಹಾಕಬಹುದೆಂಬ ಭಯವಿತ್ತು. ಬಹು ಸಂಖ್ಯಾತ ಕೋಮಿನ ಧುರೀಣರು ಅಲ್ಪಸಂಖ್ಯಾತ ಕೋಮುಗಳಿಗೆ ತಮ್ಮ ತಮ್ಮ ಧರ್ಮಗಳನ್ನು ಆಚರಿಸುವ ಸ್ವಾತಂತ್ರ್ಯವಿದೆಯೆಂದು ಭರವಸೆ ನೀಡುವ ಮೂಲಕ ಅವರ ಭಾವನೆಗಳು ಕೆರಳದಂತೆ ನೋಡಿಕೊಂಡರು.

೧೯ನೇ ಶತಮಾನದಲ್ಲಿ ಜನರು ತಮ್ಮ ತಮ್ಮ ಧರ್ಮದೊಂದಿಗೆ ಗುರುತಿಸಿಕೊಳ್ಳುವುದರ ಬಗ್ಗೆ ಮತ್ತು ತಮ್ಮ ಧಾರ್ಮಿಕ ಕ್ರಿಯಾಚರಣೆಗಳನ್ನು ಕಾಪಾಡಿಕೊಳ್ಳುವುದರಲ್ಲಿ ಅತೀವ ಅಸ್ಥೆ ತೋರಿಸಿದರು. ಹಿಂದೂ ಮತ್ತು ಮುಸ್ಲಿಂ ಸಮಾಜಗಳಲ್ಲಿ ನಡೆದ ಆಧುನಿಕ ಸುಧಾರಣಾ ಚಳುವಳಿಗಳೂ ಸಹ ಆಯಾ ಧರ್ಮಗಳ ಚೌಕಟ್ಟುಗಳೊಳಗೆ ನಡೆದವು. ರಾಜಾರಾಮ್‌ ಮೋಹನರಾಯ್‌ ಮತ್ತು ಅಲಿಘಡದ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಕರಾದ ಸರ್ ಸಯದ್‌ ಅಹಮದ್‌ಖಾನ್‌ ಇಬ್ಬರೂ ತಮ್ಮ ತಮ್ಮ ಧರ್ಮಗ್ರಂಥಗಳ ನೆಲೆಗಳಿಂದಲೇ ಸಾಮಾಜಿಕ ಸುಧಾರಣೆಗಳನ್ನು ಪ್ರತಿಪಾದಿಸಿದರು. ಉಳಿದ ಸಮಾಜ ಸುಧಾರಕರೂ ಇದೇ ತಂತ್ರವನ್ನು ಅನುಸರಿಸಿದರು. ಸ್ವಾತಂತ್ರ್ಯ ಚಳುವಳಿಗಳನ್ನು ಸಂಘಟಿಸಲು ಧರ್ಮದ ಪರಿಭಾಷೆಯನ್ನು ಬಳಸಿದರು. ಆದರೆ ಧರ್ಮ ನಿರಪೇಕ್ಷತೆಯಲ್ಲಿ ನಂಬಿಕೆಯಿಟ್ಟು ನೆಹರೂ ಮತ್ತು ಜಿನ್ನಾ ಇದಕ್ಕೆ ಹೊರತಾದರು. ತಿಲಕರು ಗಣೇಶ ಚತುರ್ಥಿ ಮತ್ತು ಶಿವಾಜಿ ಜಯಂತಿಯಂಥ ಧಾರ್ಮಿಕ ಉತ್ಸವಗಳನ್ನು ಜನ ಸಂಘಟಿಸಲು ಬಳಸಿದರು. ಗಾಂಧೀಜಿ, ಒಂದೆಡೆ ಹಿಂದೂ ಸಮುದಾಯವನ್ನು ತಮ್ಮತ್ತ ಸೆಳೆಯಲು ರಾಮರಾಜ್ಯದ ಪರಿಕಲ್ಪನೆಯನ್ನೂ ಮತ್ತೊಂದು ಕಡೆ ಮುಸ್ಲಿಮರನ್ನು ಆಕರ್ಷಿಸಲು ಖಿಲಾಫತ್‌ ಆಂದೋಲವನ್ನೂ ಬಳಸಿದರು. ಗಾಂಧೀಜಿ ನಡೆಸಿದ ಸತ್ಯಾಗ್ರಹದ ಪರಿಕಲ್ಪನೆ, ಭಾರತೀಯರಲ್ಲಿ ವಿದ್ಯುತ್‌ ಸಂಚಲನವನ್ನೇ ಮೂಡಿಸಿತು. ಅಹಿಂಸೆಗೆ ಅವರು ಕೊಟ್ಟ ಮಹತ್ವ ಧರ್ಮದ ಮೂಲದ್ದೇ ಅಹಿಂಸೆಯ ಪರಿಕಲ್ಪನೆ ಭಾರತೀಯ ಧರ್ಮ ಪರಂಪರೆಯಿಂದ ಬಂದದ್ದೆಂದು ಬೇರೆ ಹೇಳಬೇಕಾಗಿಲ್ಲ.

ಗಾಂಧೀಜಿ ತಾನೊಬ್ಬ ‘ಸನಾತನ ಹಿಂದೂ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಉಸಿರಾಡಲು ಮೂಗು ಎಷ್ಟು ಅಗತ್ಯವೋ. ರಾಜಕೀಯಕ್ಕೆ ಧರ್ಮ ಅಷ್ಟೇ ಅಗತ್ಯ ಎಂದು ಹೇಳುತ್ತಿದ್ದರು. ಕೋಮುವಾದಿ ರಾಜಕೀಯವನ್ನು ಅವರೆಂದೂ ಒಪ್ಪಲಿಲ್ಲ. ಮುಸ್ಲಿಮರಿಗಾಗಿ ತಮ್ಮ ಜೀವನವನ್ನೇ ತೆತ್ತರು. ಎಲ್ಲ ಧರ್ಮಗಳ ಸಾರವೂ ಒಂದೇ ಎಂದು ಪ್ರಾಮಾಣಿಕವಾಗಿ ನಂಬಿದ್ದರು. ಅವರ ಸಭೆ ಸಮಾರಂಭಗಳು ಪ್ರಾರ್ಥನೆ ಇಲ್ಲದೆ ಮುಕ್ತಾಯಗೊಳ್ಳದೇ ಇರುತ್ತಿರಲಿಲ್ಲ. ತಮ್ಮ ‘ಹರಿಜನ’ ಪತ್ರಿಕೆಯಲ್ಲಿ (೧೯೪೭, ಜುಲೈ ೬ರ ಸಂಚಿಕೆ) ಹೀಗೆ ಹೇಳುತ್ತಾರೆ: ಮುಸ್ಲಿಂರೊಂದಿಗೆ ಸ್ನೇಹ ಗಳಿಸುವ ಪ್ರಯತ್ನದ ಮೂಲಕ ನಾನೊಬ್ಬ ಸಾಚಾ ಹಿಂದೂ ಎಂದು ಸಾಬೀತು ಪಡಿಸಿದ್ದೇನೆ. ಹಿಂದೂಗಳು ಹಾಗೂ ಹಿಂದೂ ಧರ್ಮ ಎರಡಕ್ಕೂ ನ್ಯಾಯ ಸಲ್ಲಿಸಿದ್ದೇನೆ. ಎಲ್ಲರಿಗೂ ಸೇವೆ ಸಲ್ಲಿಸಬೇಕು. ಎಲ್ಲರೊಂದಿಗೆ ಸ್ನೇಹದಿಂದಿರಬೇಕು ಎಂಬುದೇ ಎಲ್ಲಾ ಧಾರ್ಮಿಕ ಬೋಧನೆಗಳ ಸಾರ. ಗಾಂಧೀಜಿ ಎಲ್ಲ ವಿಷಯಗಳಲ್ಲೂ ಧಾರ್ಮಿಕವಾಗಿದ್ದರೂ ಅವರನ್ನು ‘ಕೋಮುವಾದಿ’ ಎಂದು ದೂಷಿಸುವಂತಿಲ್ಲ. ಅದೇ ‘ಹರಿಜನ’ ಪತ್ರಿಕೆಯಲ್ಲಿ ಹೀಗೆ ಬರೆಯುತ್ತಾರೆ: ಹಿಂದೂಗಳಲ್ಲಿ ಕೆಲವರು ತಾವು ಬಲಿಷ್ಟರಾಗಿದ್ದೇವೆಂದು ಈಗೀಗ ಅಂದುಕೊಳ್ಳಲು ಪ್ರಾರಂಭಿಸಿದ್ದಾರೆ. ಮುಸ್ಲಿಂರಲ್ಲಿ ಕೆಲವರಿಗೆ, ಭಾರತ ಒಕ್ಕೂಟದಲ್ಲಿ ತಾವು ಅಡಿಯಾಳುಗಳಾಗೇ ಇರಬೇಕಾದೀತೆಂಬ ಭಯವಿದೆ. ಇದು ನಿಜಕ್ಕೂ ನಾಚಿಕೆಗೇಡು. ಭಾರತದಲ್ಲಿ ಒಂದು ಅಲ್ಪಸಂಖ್ಯಾತ ಕೋಮು, ಧಾರ್ಮಿಕ ವೃತ್ತಿಗಳ ಆಧಾರದ ಮೇಲೆ ಅಲ್ಪಸಂಖ್ಯಾತ ಎಂದು ಪರಿಗಣಿಸಿದ್ದು. ಆದರೆ ಆ ಕಾರಣದಿಂದ ಅಲ್ಪ ಸಂಖ್ಯಾತ ಅಲ್ಲ ಎಂದು ಅದಕ್ಕೆನ್ನಿಸುವಂತಾದರೆ, ಆಗ ನಾನು ಹೇಳುವುದಿಷ್ಟೇ – ಭಾರತ ನನ್ನ ಕನಸಿನ ಭಾರತ ಅಲ್ಲ. ಯಾವ ಭಾರತವನ್ನು ರೂಪಿಸಲು ನಾನು ನನ್ನ ಜೀವಮಾನವಿಡೀ ದುಡಿದಿದ್ದೇನೋ, ಅಲ್ಲಿ ಪ್ರತಿಯೊಬ್ಬನಿಗೂ ಅವನ ಧರ್ಮ ಯಾವುದೇ ಇರಲಿ, ಸಮಾನ ಅಂತಸ್ತು ಇರುತ್ತದೆ. ರಾಜ್ಯಶಕ್ತಿ ಸಂಪೂರ್ಣವಾಗಿ ಧರ್ಮ ನಿರಪೇಕ್ಷವಾಗಿರುವುದು ಅನಿವಾರ್ಯ. ಯಾವುದೇ ಜಾತೀಯ ಶಿಕ್ಷಣ ಸಂಸ್ಥೆಗೂ ಸರ್ಕಾರದ ಕೃಪಾಶ್ರಮ ಸಿಗಬಾರದು ಎಂದು ಹೇಳಲು ಸಹ ನಾನು ಹಿಂಜರಿಯುವುದಿಲ್ಲ.

ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಆದರೆ ಪ್ರತಿಯೊಬ್ಬರಿಗೂ ತನ್ನದೇ ಆದ ಧರ್ಮವನ್ನು ಯಾರ ಅನುಮತಿ ತಕರಾರು ಇಲ್ಲದೆ, ಸಾಮಾನ್ಯ ಕಾನೂನನ್ನು ಅತಿಕ್ರಮಿಸಿದಂತೆ ಅನುಸರಿಸುವ ಸ್ವಾತಂತ್ರ್ಯವಿದೆ. ಅಲ್ಪಸಂಖ್ಯಾತರ ರಕ್ಷಣೆಯ ಪ್ರಶ್ನೆ ನನಗೆ ಸರಿಯೆಂದು ತೋರುವುದಿಲ್ಲ. ಅದು ಆಯಾ ರಾಜ್ಯದ ನಾಗರಿಕರ ಮಧ್ಯೆ, ಧಾರ್ಮಿಕ ಗುಂಪುಗಳನ್ನು ಮಾನ್ಯ ಮಾಡುವುದರ ಮೇಲೆ ನಿಂತಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಧರ್ಮವನ್ನು ಅನುಭವಿಸಿ ಬದುಕುವ ಸ್ವಾತಂತ್ರ್ಯ ಭರವಸೆಯನ್ನು ಭಾರತ ಕೊಡಬೇಕೆಂದು ನನ್ನ ಇಷ್ಟ. ಆಗ ಮಾತ್ರ ಭಾರತ ಮಹಾನ್‌ ಆಗಿರಲು ಸಾಧ್ಯ. ಏಕೆಂದರೆ ಇಡೀ ಪ್ರಾಚೀನ ವಿಶ್ವದಲ್ಲೇ, ಸಾಂಸ್ಕೃತಿಕ ಪ್ರಜಾತಂತ್ರವನ್ನು ಮಾನ್ಯ ಮಾಡಿದ ದೇಶ ಇದೊಂದೇ. ‘ಗುರಿ ಮಾತ್ರ ಒಂದೇ, ದೇವರನ್ನು ಕಾಣಲು ಇರುವ ಮಾರ್ಗಗಳು ಬೇರೆ ಬೇರೆ ಎಂದು ಹೇಳಿದ ದೇಶ ಬಹುಶಃ ಇದೊಂದೇ.’ ವಾಸ್ತವವಾಗಿ ಪ್ರಪಂಚದಲ್ಲಿ ಎಷ್ಟು ಜನರಿದ್ದಾರೆಯೋ ಅಷ್ಟು ಮಾರ್ಗಗಳಿವೆ ಎಂದಿದ್ದಾರೆ. ೧೯೪೭ ಅಕ್ಟೋಬರ್ ೧೫ರಂದು ದೇಶ ವಿಭಜನೆಯಾದ ತಕ್ಷಣ ಗಾಂಧೀಜಿ ಮಾಡಿದ ಭಾಷಣದಲ್ಲಿ ಹೀಗೆ ಹೇಳುತ್ತಾರೆ: ಗೌರವಯುತ ಬಾಳ್ವೆ ಅಸಾಧ್ಯವಾಗುವಂತೆ ಮಾಡಿ, ಮುಸ್ಲಿಮರು ಹೋಗುವುದು ನಮಗೆ ಬೇಕಿಲ್ಲ ಎಂದು ಹೇಳುವಂತಹ ರಾಷ್ಟ್ರ ನಿರ್ಮಾಣವಾಗುವುದು ಬೇಡ. ನಿಜವಾಗಿಯೂ ಸಮಾನವಾಗಿ ನಡೆಸಿಕೊಂಡರೂ ಒಂದು ವೇಳೆ ಅವರು ಪಾಕಿಸ್ತಾನಕ್ಕೆ ಹೋಗುತ್ತೇವೆಂದರೆ ಅದು ಅವರ ಪಾಡು. ನಮ್ಮ ನಡವಳಿಕೆಯಲ್ಲಿ ಅವರನ್ನು ಬೆದರಿಸುವಂಥದೇನೂ ಇರಬಾರದು. ನಮ್ಮ ನಡೆ ಸರಿಯಾಗಿರಬೇಕು. ಆಗ ನಾನು ಭಾರತಕ್ಕೆ ಸೇವೆ ಸಲ್ಲಿಸಬಹುದು. ಹಿಂದೂ ಧರ್ಮವನ್ನು ಉಳಿಸಬಹುದು. ಅದು ಬಿಟ್ಟು, ಮುಸ್ಲಿಮರನ್ನು ಕೊಲ್ಲುವುದರಿಂದಾಗಲೀ, ಹೆದರಿಸಿ ಓಡಿಸುವುದರಿಂದಾಗಲೀ ಅಥವಾ ಯಾವುದೇ ರೀತಿಯಲ್ಲಿ ಹತ್ತಿಕ್ಕುವುದರಿಂದಾಗಲೀ ಅದು ಸಾಧ್ಯವಾಗುವುದಿಲ್ಲ.

ಅವರ ಭಾಷಣದಿಂದ ವೇದ್ಯವಾಗುವುದೇನೆಂದರೆ, ಹಿಂದೂಗಳಿಗೆ, ಹಿಂದೂಗಳಲ್ಲದವರಿಗೆ ಎಲ್ಲರಿಗೂ ಸಮಾನ ಸ್ಥಾನ ಕೊಡುವುದರಲ್ಲಿ ಹಿಂದೂ ಧರ್ಮದ ನಿಜವಾದ ಬೆಲೆ ಇದೆ. ಹೀಗಾದಾಗ ಮಾತ್ರ ಹಿಂದೂ ಧರ್ಮದ ನಿಜವಾದ ಉದ್ದೇಶವನ್ನು ಸಾಧಿಸಿದಂತಾಗುತ್ತದೆ. ತನ್ನ ಧರ್ಮದ ನಿಜವಾದ ಬೆಲೆ ಇನ್ನೊಬ್ಬನ ಧರ್ಮದ ಬಗೆಗಿನ ಗೌರವ ಮತ್ತು ಸಹಿಷ್ಣುತೆಯೇ ಆಗಿದೆ. ತಾನು ಒಬ್ಬ ಹಿಂದುವಾಗಿ ಮುಸ್ಲಿಂರ ಭಾವನೆಗಳನ್ನು ಗೌರವಿಸುತ್ತೇನೆ. ಒಬ್ಬ ನಿಜವಾದ ದೇಶಪ್ರೇಮಿಯಾಗಿ, ಉಳಿದವರ ಧಾರ್ಮಿಕ ಕಾಳಜಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಹಾಗೂ ಅನ್ಯ ಧರ್ಮೀಯ ದೇಶವಾಸಿಗಳ ಭಾವನಾತ್ಮಕ ನೋವುಗಳಿಗೆ ಸ್ಪಂದಿಸಬೇಕು ಎಂಬ ನಂಬಿಕೆ ಮುಸ್ಲಿಮರಿಗೆ ಬರಲೆಂದೇ ಗಾಂಧೀಜಿ ಖಿಲಾಫತ್‌ ಚಳವಳಿಯನ್ನು ಆರಂಭಿಸಿದರು. ಇದನ್ನು ಅತ್ಯುನ್ನತವಾದ, ಅತ್ಯಂತ ಉದಾತ್ತವಾದ ಧಾರ್ಮಿಕತೆಯೆಂದು ಕರೆಯಬಹುದು. ಈ ಅತ್ಯುನ್ನತ ಸ್ತರದಲ್ಲಿ ಧಾರ್ಮಿಕತೆ ಮತ್ತು ಧರ್ಮ ನಿರಪೇಕ್ಷತೆಗಳು ಕರಗಿ ಒಂದಾಗುತ್ತವೆ. ಪರಮತ ಸಹಿಷ್ಣುತೆ ಮತ್ತು ಗೌರವ ನೈಜ ಧಾರ್ಮಿಕತೆಯ ಸಾರ. ಭಾರತೀಯ ಸಂದರ್ಭದಲ್ಲಿ ಧರ್ಮ ನಿರಪೇಕ್ಷತೆ ಅನ್ಯಧರ್ಮ ಸಹಿಷ್ಣುತೆಯನ್ನು ಸೂಚಿಸುತ್ತದೆಯೇ ಹೊರತು ಧರ್ಮ ವಿಮುಖತೆಯನ್ನಲ್ಲ.

ಗಾಂಧೀಜಿಯವರು ಧರ್ಮಕ್ಕಿಂತ ಹೆಚ್ಚಾಗಿ ಮಾನವನ ಶ್ರೇಯಸ್ಸಿಗೆ ತುಂಬಾ ಪ್ರಾಮುಖ್ಯತೆಯನ್ನು ಕೊಟ್ಟವರು. ದೀನ ದಲಿತರ ಉದ್ಧಾರವೇ ಅವರ ಪ್ರಮುಖವಾದಂತಹ ಗುರಿಯಾಗಿತ್ತು.

ಗಾಂಧೀಜಿಯವರು ವೈಯಕ್ತಿಕ ಮತ್ತು ಸಾಂಸ್ಥಿಕ ನೆಲೆಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಧರ್ಮ ನಿರಪೇಕ್ಷದ ರಾಜ್ಯ ಶಕ್ತಿಯನ್ನಾಗಿ ಮಾನ್ಯ ಮಾಡುವುದಾದರೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಅದು ರಕ್ಷಣೆಯನ್ನೊದಗಿಸುತ್ತದೆ. ಆದ್ದರಿಂದ ಅಂಥ ರಾಜ್ಯ ಶಕ್ತಿಯ ಪರಿಕಲ್ಪನೆಯನ್ನು ಸಮರ್ಥಿಸುವುದರಲ್ಲಿ ಅವರಿಗೆ ಯಾವ ತಪ್ಪು ಕಾಣಿಸಲಿಲ್ಲ. ತಮ್ಮ ಧಾರ್ಮಿಕ ಶ್ರದ್ಧೆಯನ್ನು ಅನುಷ್ಟಾನಗೊಳಿಸಲು ಧಾರ್ಮಿಕವಾದ ರಾಜ್ಯ ಶಕ್ತಿಯ ಸ್ಥಾಪನೆಯನ್ನು ಎಂದೂ ಒಪ್ಪಲಿಲ್ಲ.

ಗಾಂಧೀಜಿಯವರಂತೆ ಮೌಲಾನಾ ಆಜಾದ್‌ ಕೂಡ ಧರ್ಮದ ಆಧಾರದ ಮೇಲೆ ದೇಶ ಇಬ್ಭಾಗವಾಗುವುದನ್ನು ಒಪ್ಪಲಿಲ್ಲ. ಅವರು ರಾಜಕೀಯ ನಿಷ್ಠೆಯ ವಿಚಾರದಲ್ಲಿ ಧರ್ಮ ನಿರಪೇಕ್ಷತೆಯನ್ನು ನಿಷ್ಠುರವಾಗಿ ಅನುಸರಿಸಿದರು. ಕೋಮುವಾದಿ ರಾಜಕೀಯವನ್ನು ವಿರೋಧಿಸುತ್ತಿದ್ದರು.

ಜವಾಹರಲಾಲ್‌ ನೆಹರೂರವರಿಗೆ ಧಾರ್ಮಿಕ ನಂಬಿಕೆಗಳಿರಲಿಲ್ಲ. ನಿಜ ಆದರೆ ಪಾಶ್ಚಾತ್ಯ ರೀತಿಯ ಧರ್ಮ ನಿರಪೇಕ್ಷತೆಯಲ್ಲಿ ಅವರಿಗೆ ಹೆಚ್ಚು ಪ್ರೀತಿ. ಆಧುನಿಕ ವಿಜ್ಞಾನ ತಂತ್ರಜ್ಞಾನದ ಕಡೆಗೆ ಅವರಿಗೆ ಹೆಚ್ಚು ಒಲವು ಇತ್ತು. ಆದ್ದರಿಂದಲೇ ‘ಡಿಸ್ಕವರಿ ಆಫ್‌ ಇಂಡಿಯಾ’ದಲ್ಲಿ ಹೀಗೆ ಬರೆಯುತ್ತಾರೆ: ಕುತೂಹಲ ಮತ್ತು ವಿಚಾರವನ್ನು ಅವು (ಧರ್ಮಗಳು) ಪ್ರಚೋದಿಸುವ ಬದಲು, ಪ್ರಕೃತಿಗೆ, ಪ್ರತಿಷ್ಠಿತ ಧರ್ಮ ಪೀಠಗಳಿಗೆ ಈಗಾಗಲೇ ಇರುವ ಸಮಾಜ ವ್ಯವಸ್ಥೆಗೆ ಮತ್ತು ಈಗಾಗಲೇ ಏನೆಲ್ಲವೂ ಇವೆಯೋ ಅವಕ್ಕೆ ಶರಣಾಗಬೇಕೆನ್ನುವ ದಾಸ ತತ್ವವನ್ನು ಅವು ಬೋಧಿಸುತ್ತವೆ. ಮುಂದುವರೆದು ಧರ್ಮದ ಬಗ್ಗೆ ಹೀಗೆ ಹೇಳುತ್ತಾರೆ : ಸರ್ವ ನಿಯಾಮಕ, ಅತಿಮಾನುಷ ಶಕ್ತಿಯಲ್ಲಿನ ನಂಬಿಕೆ ಸಾಮಾಜಿಕ ಸ್ತರದಲ್ಲಿ ಒಂದು ಬಗೆಯ ಬೇಜವಾಬ್ದಾರಿತನಕ್ಕೆ ದಾರಿ ಮಾಡಿಕೊಟ್ಟಿದೆ. ವೈಚಾರಿಕತೆ ಮತ್ತು ತಾರ್ಕಿಕ ವಿಚಾರಗಳ ಸ್ಥಾನವನ್ನು, ಭಾವನೆ ಮತ್ತು ಭಾವುಕತೆಗಳು ಆಕ್ರಮಿಸಿಕೊಂಡಿವೆ. ಧರ್ಮ ಅಸಂಖ್ಯಾತ ಜನರಿಗೆ ಸಮಾಧಾನ ತಂದುಕೊಟ್ಟಿರುವುದು ನಿಸ್ಸಂಶಯ ಆದರೂ, ಸಮಾಜವನ್ನು ಮೌಲ್ಯಗಳ ನೆಲೆಗಟ್ಟಿನ ಮೇಲೆ ನಿಲ್ಲಿಸಿರುವುದು ನಿಜ ಆದರೆ, ಮಾನವ ಸಮಾಜದಲ್ಲಿ ಅಂತರ್ಗತವಾಗಿರುವ ಬದಲಾವಣೆ ಮತ್ತು ಪ್ರಗತಿಗೆ ಅದು ತಡೆಯೊಡ್ಡಿದೆ. ಅಷ್ಟೇ ಅಲ್ಲದೆ, ಧರ್ಮ ಸಂಕುಚಿತವಾದದ್ದು. ಅನ್ಯ ಯೋಜನೆಗಳನ್ನು ಅಭಿಪ್ರಾಯಗಳನ್ನು ಅದು ಸಹಿಸುವುದಿಲ್ಲ. ಅದು ಸ್ವಾರ್ಥ ಕೇಂದ್ರಿತ ಮತ್ತು ಅಹಮಿಕೆಯಿಂದ ಕೂಡಿದ್ದು. ಸ್ವಾರ್ಥಪರರು ಮತ್ತು ಅವಕಾಶವಾದಿಗಳು ಧರ್ಮವನ್ನು ತಮ್ಮ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದು ಭಾವಿಸುತ್ತಾರೆ.

ಧರ್ಮವೆನ್ನುವುದು ಸಾಮಾಜಿಕ ಮತ್ತು ವೈಜ್ಞಾನಿಕ ಬದಲಾವಣೆಯ ವಿರೋಧಿಯೆಂದೂ, ಧರ್ಮ ನಿರಪೇಕ್ಷತೆ ಬದಲಾವಣೆ ಪರ ಎಂದೂ ಹೇಳಲಾಗುತ್ತದೆ. ಬದಲಾವಣೆಯನ್ನು ಪ್ರತಿ ವಿರೋಧಿಸುವುದು ಧರ್ಮವಲ್ಲ. ಬದಲಾವಣೆಯನ್ನು ಪ್ರತಿರೋಧಿಸಲು ಧಾರ್ಮಿಕ ಕುರುಡು ಸಿದ್ಧಾಂತಗಳ ಸಮರ್ಥನೆಯನ್ನು ಬಳಸಿಕೊಳ್ಳುವ ಮನುಷ್ಯನ ಮನೋವೈಜ್ಞಾನಿಕ ಪ್ರತಿರೋಧವು ನೈಜ ಧಾರ್ಮಿಕ ನಂಬಿಕೆಯುಳ್ಳವರುವಿರೋಧಿಸಬೇಕಾದ್ದ ಉದ್ದೇಶ ರಹಿತ ಅಥವಾ ಮೌಲ್ಯ ರಹಿತ ಬದಲಾವಣೆಯಾಗಿದೆ. ಬದಲಾವಣೆ ತನ್ನಷ್ಟಕ್ಕೆ ಸ್ವೀಕಾರ ಯೋಗ್ಯವಲ್ಲ. ಯಾವುದೇ ಬದಲಾವಣೆ ಮೂಲಭೂತ ಮೌಲ್ಯಗ ಳಿಗನುಗುಣವಾಗಿರಬೇಕು. ಧರ್ಮ ನಿರಪೇಕ್ಷ ಬದಲಾವಣೆ ಮೌಲ್ಯ ರಹಿತವಾಗಿರಬಹುದು ಅಥವಾ ಮೌಲ್ಯದ ವಿಷಯದ್ಲಿ ತಟಸ್ಥವಾಗಿರುವುದು ಸಾಧ್ಯ. ಆದರೆ ಅದು ಮಾನವಾಭ್ಯುದಯವನ್ನು ಸಾಧಿಸಬಹುದು. ಸಾಧಿಸದೆಯೂ ಇರಬಹುದು.

ನೈಜ ಧಾರ್ಮಿಕ ಮನುಷ್ಯ ಬದಲಾವಣೆಯನ್ನು ವಿರೋಧಿಸುವುದಿಲ್ಲ. ಆದರೆ ಇಡೀ ಮಾನವ ಕುಲದ ಅಭ್ಯುದಯದ ಬದಲಾವಣೆಗಾಗಿ ಅದನ್ನು ವಿಮರ್ಶಿಸುತ್ತಾನೆ. ಯಾವುದೇ ಬದಲಾವಣೆಗಾಗಿ ಅದನ್ನು ವಿಮರ್ಶಿಸುತ್ತಾನೆ. ಯಾವುದೇ ಬದಲಾವಣೆಯನ್ನು ಚಿಕಿತ್ಸಕ ಬುದ್ಧಿಯಿಂದ ಶೋಧಿಸಿ ಒಪ್ಪಬಹುದು, ಇಲ್ಲವೇ ತಿರಸ್ಕರಿಸಬಹುದು. ಉದಾಹರಣೆಗೆ, ಭೂಮಿಯನ್ನು ಅಗೆದು ಖನಿಜಗಳನ್ನು ಹೊರತೆಗೆಯುವುದು, ಆಣೆಕಟ್ಟುಗಳನ್ನು ನಿರ್ಮಿಸುವುದು. ಯಾಕೆಂದರೆ ದೊಡ್ಡ ದೊಡ್ಡ ಆಣೆಕಟ್ಟೆಗಳ ನಿರ್ಮಾಣದಿಂದ ಅಪಾರ ಪ್ರಮಾಣ ಅರಣ್ಯ ನಾಶವಾಗುತ್ತದೆ, ಮತ್ತು ಫಲವತ್ತಾದ ಮಣ್ಣು ನಾಶವಾಗುತ್ತದೆ. ಇದರಿಂದ ಪರಿಸರದ ಸಮತೋಲನದಲ್ಲಿ ಏರುಪೇರಾಗುತ್ತದೆ. ಹಾಗೂ ಇಡೀ ವಿಶ್ವ ದೇವರ ಸೃಷ್ಟಿ, ಆ ದೇವರ ಸೃಷ್ಟಿಗೆ ಹಾನಿ ಮಾಡಬಾರದು ಎಂದು ನಿಜವಾದ ಧಾರ್ಮಿಕ ಮನುಷ್ಯ ಅದನ್ನು ವಿರೋಧಿಸುತ್ತಾನೆ. ಇಲ್ಲಿ ಅವನು ಬದಲಾವಣೆಯ ವಿರೋಧಿಯಲ್ಲ. ತಾನು ನಂಬಿದ ಧಾರ್ಮಿಕ ನಂಬಿಕೆಗಳು ಪತನವಾಗುವುದನ್ನು ಸಹಿಸಲಾರ.

ಹಾನಿಕಾರಕ ಅಷ್ಟೇ ಪರಿಣಾಮಗಳ ಔಷಧಿಗಳಿಂದ ಇಡೀ ಮಾನವ ಕುಲಕ್ಕೆ ಕುತ್ತು. ಆದರೂ ಸ್ವಹಿತಾಸಕ್ತಿಯ ಬಹುರಾಷ್ಟ್ರೀಯ ಕಂಪನಿಗಳು ಅವನ್ನು ಮಾರುತ್ತಿವೆ. ಹೊಸ ಸಂಶೋಧನೆಗಳಲ್ಲಿ ತಾಂತ್ರಿಕತೆಗಳನ್ನು ಕಣ್ಣಿಗೆ ರಾಚುವಷ್ಟು ಹಾನಿಕಾರಕವಾದ ಅಷ್ಟೇ ಪರಿಣಾಮಗಳನ್ನು ಅವು ಹೊಂದಿದ್ದರೂ ಅವುಗಳು ತರುವ ಲಾಭದಿಂದಾಗಿ, ಅದರ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಸಂಶೋಧನೆಗಳು, ತಾಂತ್ರಿಕ ಬದಲಾವಣೆಗಳು, ಅವು ಬೀರುವ ದುಷ್ಟರಿಣಾಮಗಳಿಂದಾಗಿಯೇ ಧರ್ಮ ನಿರಪೇಕ್ಷತೆಯನ್ನು ಎತ್ತಿ ಹಿಡಿಯುವವರ ದೃಷ್ಟಿಯಲ್ಲೂ ವಿವಾದಾಸ್ಪದವಾಗುತ್ತಿವೆ.

ಬೆಂಕಿ, ಭೂಮಿ, ನೀರು, ಗಾಳಿ ಆಕಾಶವೆನ್ನುವುದು ಪಂಚಭೂತಗಳು. ಇವುಗಳು ದೇವರ ಸೃಷ್ಟಿ. ಮನುಷ್ಯ ಸನಾತನ ಕಾಲದಿಂದಲೂ ಪೂಜಿಸುತ್ತಾ ಬಂದಿದ್ದಾನೆ. ಇವುಗಳಿಗೆ ಹಾನಿಯಾಗುವುದನ್ನು, ಅವುಗಳ ಕ್ರಿಯೆಯಲ್ಲಿ ಎದುರಾಗುವುದನ್ನು ವಿರೋಧಿಸುತ್ತಲೇ ಬಂದಿದ್ದಾನೆ. ಧರ್ಮದ ಕಾರಣದಿಂದಾಗಿಯೇ ಎಷ್ಟೋ ಭೂಮಿ, ಅರಣ್ಯಗಳು ಅಂದರೆ ಪರಿಸರ ನಾಶವಾಗುವುದು ತಪ್ಪಿದೆ ಎನ್ನಬಹುದು. ಉದಾಹರಣೆಗೆ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿ.ಆರ್.ಟಿ. ಹುಲಿರಕ್ಷಿತ ಅರಣ್ಯದಲ್ಲಿ ಸೋಲಿಗ ಎಮಬ ಬುಡಕಟ್ಟು ಜನಾಂಗವಿದೆ. ಈ ಸೋಲಿಗರಿಗೆ ಕಾಡು ಅವರ ಬದುಕಿನ ಅವಿಭಾಜ್ಯ ಅಂಗ. ಅವರ ದೈನಂದಿನ ಬದುಕು, ನಂಬಿಕೆ, ಧಾರ್ಮಿಕ ಆಚರಣೆಗಳು, ಪೂಜೆ, ಪುನಸ್ಕಾರಗಳೆಲ್ಲ ನಿಸರ್ಗದೊಂದಿಗೆ ಬೆಸೆದುಕೊಂಡಿವೆ. ಇಂದಿಗೂ ಅರಣ್ಯ, ಹೊಳೆ-ಹಳ್ಳ, ಕಲ್ಲುಬಂಡೆ, ಹುಲಿ ಇವುಗಳೇ ಅವರ ಆರಾಧ್ಯ ಧೈವಗಳು. ನಿಸರ್ಗವೇ ದೇವತೆ. ಸೋಲಿಗರ ಧರ್ಮದ ಪ್ರಕಾರ ಮರ ಕಡಿಯುವುದು ಮಹಾಪಾಪ. ಹೀಗಾಗಿ ಮರಗಳ ಬುಡಕ್ಕೆ ಅವರು ಕೊಡಲಿ ಹಾಕುವುದು ಅಪರೂಪ. ಮರ ಕಡಿಯುವುದು ಅನಿವಾರ್ಯವಾಗಿದ್ದರೆ ಆ ಮರಕ್ಕೆ ಮೊದಲು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುತ್ತಾರೆ. ನಂತರ ಅದಕ್ಕೆ ನಮಸ್ಕರಿಸುತ್ತಾರೆ. ಕಡಿದ ಮರದ ಬುಡದಲ್ಲಿ ಸಣ್ಣದೊಂದು ಕಲ್ಲು ಇಡುವುದು ವಾಡಿಕೆ. ಆ ಸ್ಥಳದಲ್ಲಿ ಅಮೂಲ್ಯ ಜೀವವೊಂದು ಇತ್ತು ಎಂಬುದರ ಗುರುತಿಗೆ ಕಲ್ಲು ಇಡುತ್ತಾರೆ. ಸೋಲಿಗ ಬುಡಕಟ್ಟಿನಲ್ಲಿ ಕೆಲವು ಮರಗಳು ಪೂಜನೀಯವೇ ಆಗಿವೆ. ಹುಲಿ ಕೂಡ ಗಿರಿ ಜನರ ಆರಾಧ್ಯ ಧೈವ. ಅದನ್ನು ಬೀರಪ್ಪನೆಂಬ ಹೆಸರಿನಿಂದ ಪೂಜಿಸುತ್ತಾರೆ.

ಇಂಥ ಧಾರ್ಮಿಕ ನಂಬಿಕೆಗಳನ್ನು ನಾವು ಎಲ್ಲಾ ಭಾಗದಲ್ಲೂ ಕಾಣಬಹುದು. ಇಂಥ ಧಾರ್ಮಿಕ ನಂಬಿಕೆಗಳಿಂದಾಗಿಯೇ ಎಷ್ಟೇ ಅರಣ್ಯ ಸಂಪತ್ತು ಸಂರಕ್ಷಣೆಯಾಗಿವೆ. ಡ್ಯಾಂಗಳು ಆಧುನಿಕ ದೇವಾಲಯಗಳು ಎಂದರೂ ಆ ಅಭಿವೃದ್ಧಿ ಯೋಜನೆಯು ಮೂಲಭೂತವಾಗಿ ಬೃಹತ್‌ ಬಂಡವಾಳ ಮತ್ತು ತಂತ್ರಜ್ಞಾನ ಕೇಂದ್ರವಾಗಿತ್ತೆ ವಿನಃ ‘ಕಟ್ಟ ಕಡೆಯ ಮನುಷ್ಯ’ನನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಡ್ಯಾಂಗಳ ನಿರ್ಮಾಣದಿಂದ ಅಪಾರ ಪ್ರಮಾಣದ ಅರಣ್ಯ ನಾಶವಾಗುತ್ತದೆ. ಅರಣ್ಯದಲ್ಲಿಯೇ ವಾಸಿಸುತ್ತಿರುವ ಲಕ್ಷಾಂತರ ಆದಿವಾಸಿಗಳು ನಿರ್ವಸತಿಗರಾಗುತ್ತಾರೆ. ನೀರಿನಿಂದ ಮೀನನ್ನು ಹೊರಕ್ಕೆ ಹಾಕಿದರೆ ಹೇಗೋ ಹಾಗೆ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವುದು ಕೂಡ ಆಗಿರುತ್ತದೆ. ಆದರೆ ಈ ಬದಲಾವಣೆ ಎಲ್ಲೋ ಕೆಲವರಿಗೆ ಒಂದು ವರ್ಗದ ಜನತೆಗೆ ಅನುಕೂಲವಾಗಬಹುದು. ಆದರೆ ಅದು ಇಡೀ ಮಾನವ ಕುಲದ ಅಭ್ಯುದಯವಲ್ಲ. ಇದರಿಂದಾಗಿಯೂ ಕೂಡ ಅದರ ವಿರುದ್ಧ ಪ್ರತಿರೋಧವಿದೆ. ಎಲ್ಲಕ್ಕಿಂತ ಮಿಗಿಲಾಗಿ ಧರ್ಮ ಅವರಿಗೆ ಆಳವಾದ ನೈತಿಕ ಶ್ರದ್ಧೆಯ ಪ್ರತೀಕ.

ಧರ್ಮ ನಿರಪೇಕ್ಷವಾದಿಗಳು ಒಪ್ಪಲಾಗದ ‘ತದ್ರೂಪಿ’ಯ ಸೃಷ್ಟಿ ಇದಕ್ಕೆ ಇತ್ತೀಚಿನ ಉದಾಹರಣೆ. ಮನುಷ್ಯರಲ್ಲಿಯ ತದ್ರೂಪಿಯ ಸೃಷ್ಟಿಯನ್ನು ಎಲ್ಲಾ ಧರ್ಮಗಳೂ ಒಕ್ಕೊರಲಿನಿಂದ ವಿರೋಧಿಸಿದವು. ಮಾನವ ಸೃಷ್ಟಿ ದೇವರಿಗೆ ಮಾತ್ರ ಮೀಸಲು. ಅದನ್ನು ಮನುಷ್ಯರು ತಮ್ಮ ಅಂಕೆಯಲ್ಲಿಟ್ಟುಕೊಳ್ಳಬಾರದು ಎಂದು ಅತ್ಯುಗ್ರವಾಗಿ ವಿರೋಧಿಸಿದವು. ಅಷ್ಟೇಯೇಕೆ ಎಷ್ಟೋ ವೈದ್ಯರೂ ವಿರೋಧಿಸಿದರು. ಧಾರ್ಮಿಕ ವ್ಯಕ್ತಿಗಳು ನೈತಿಕ ಕಾರಣಗಳಿಗಾಗಿ ವಿರೋಧಿಸಬಹುದು. ಪ್ರತಿ ಬದಲಾವಣೆಯೂ ಮನುಷ್ಯರ ಮೇಲಾಗುವ ಅದರ ವಾಸ್ತವ ಪರಿಣಾಮ, ಇಲ್ಲವೇ ಸಂಭವನೀಯ ಪರಿಣಾಮಗಳಿಗಾಗಿ ವಿಮರ್ಶಿಸಬೇಕು.

ಧರ್ಮ ನಿರಪೇಕ್ಷೆಯ ಅನ್ವಯ ದೇಶದಿಂದ ದೇಶಕ್ಕೆ ಬದಲಾಗುತ್ತಿದೆ. ಬ್ರಿಟನ್ನಿನಲ್ಲಿ ಆಂಗ್ಲೀಯ ಕ್ರೈಸ್ತ ಧರ್ಮವೇ ರಾಜಧರ್ಮ. ದೊರೆಯೇ ಚರ್ಚ್ ಮತ್ತು ಸರಕಾರದ ನಾಯಕ. ಹೀಗಿದ್ದರೂ ಬ್ರಿಟಿಷ್‌ ಸಮಾಜ ಧರ್ಮ ನಿರಪೇಕ್ಷ ಸಮಾಜ. ಬ್ರಿಟೀಷ್‌ ಸರ್ಕಾರ ಕ್ರೈಸ್ತ ಧರ್ಮೀಯ ಮೌಲ್ಯಗಳನ್ನು ಅಂಟಿಸಿಕೊಂಡಿದ್ದರೂ, ಕಾನೂನುಗಳನ್ನು ಮಾತ್ರ ಧರ್ಮ ನಿರಪೇಕ್ಷ ಪರಿಗಣನೆಯಿಂದ ರೂಪಿಸುತ್ತದೆಯೇ ಹೊರತು ಆಂಗ್ಲೀಯ ಕ್ರೈಸ್ತ ಕುರುಡು ಸಿದ್ಧಾಂತಗಳಿಂದ ಸ್ಫೂರ್ತಿ ಪಡೆದು ಅಲ್ಲ. ಅದು ಧರ್ಮ ನಿರಪೇಕ್ಷ ಸರ್ಕಾರ. ಅದಕ್ಕೆ ಯಾವುದೇ ಧಾರ್ಮಿಕ ಮೌಲ್ಯದ ಸೋಂಕಿಲ್ಲ. ಆದರೆ ಭಾರತೀಯ ಸಮಾಜ ಮತ್ತು ಸರ್ಕಾರ ಅತ್ಯಂತ ಧಾರ್ಮಿಕವಾದ ಮೌಲ್ಯಗಳನ್ನು ಹೊಂದಿರುತ್ತದೆ. ಸರ್ಕಾರ ತಾನು ಧರ್ಮ ನಿರಪೇಕ್ಷವೆಂದೂ, ಯಾವುದೇ ಧರ್ಮದ ಪರ ಅಲ್ಲವೆಂದು ಘೋಷಿಸಿಕೊಂಡಿದ್ದರೂ ಅದು ಮಾಡುವ ಕೆಲಸಗಳ ಮೇಲೆ ಒಂದಲ್ಲ ಒಂದು ಧರ್ಮದ ಪ್ರಭಾವ ಇದ್ದೇ ಇರುತ್ತದೆ. ಭಾರತ ಸರ್ಕಾರದ ಕೆಲವು ಕಾಯ್ದೆ ಕಟ್ಟಳೆಗಳು ಧಾರ್ಮಿಕ ಪರಿಗಣನೆಯ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಇನ್ನೂ ಮುಂದುವರೆದ ಒಂದು ಆಕ್ಷೇಪವು ಹೇಳುವುದೇನೆಂದರೆ, ಭಾರತವು ಎಂದಿಗೂ ಧರ್ಮ ನಿರಪೇಕ್ಷವಾಗಿರಲಿಲ್ಲ ಮತ್ತು ಆಗುವುದೂ ಇಲ್ಲ. ಏಕೆಂದರೆ ಅದರ ಮೂಲಭೂತ ನಿರ್ದಿಷ್ಟ ಸ್ವಂತಿಕೆಯಿದ್ದದ್ದು ಮತ್ತು ಈಗಲೂ ಇರುವುದು ಪ್ರತಿಯೊಂದೂ ಸಮಾನವಾದ ಮತ್ತು ಏಕಮುಖಿಯಾದ ಧಾರ್ಮಿಕ ಸಮುದಾಯಗಳಿದ್ದು. ಆಧುನೀಕರಣ ಪ್ರಕ್ರಿಯೆಯಲ್ಲಿ ಸಮುದಾಯಗಳ ಪ್ರಾತಿನಿಧೀಕರಣಕ್ಕೆ ಈಗ ಕರೆಕೊಡಲಾಗಿದೆ ಎಂದು ವಾದಿಸಲಾಗುತ್ತದೆ. ಧರ್ಮ ನಿರಪೇಕ್ಷತ್ವವು ಆಧುನಿಕಪೂರ್ವ ಸಮಾಜಗಳಿಗೆ ಸಂಬಂಧಿಸಿದ್ದಲ್ಲ. ಆದ್ದರಿಂದ ಈ ನೋಟವು ಐತಿಹಾಸಿಕವಾಗಿ ನಿಖರವಾದುದೂ ಅಲ್ಲ. ಅಷ್ಟೇ ಅಲ್ಲದೆ ಅದು ಬಹುಸಂಖ್ಯಾತ ಮತ್ತು ಅಲ್ಪ ಸಂಖ್ಯಾತ ಸಮುದಾಯಗಳು ಭಾರತೀಯ ಸಮಾಜದ ಅಂಗಗಳೆಂಬ ಭಾವನೆಯನ್ನು ಬಲಪಡಿಸುತ್ತದೆ. ಸಮುದಾಯಗಳ ಸ್ವರೂಪವು ಶಾಶ್ವತವಾದದ್ದಲ್ಲ ಎಂಬ ನಿಜಸಂಗತಿಯನ್ನು ಅದು ನಿರಾಕರಿಸುತ್ತದೆ. ಐತಿಹಾಸಿಕ ಬದಲಾವಣೆಯೊಂದಿಗೆ ಅವು ಮಾರ್ಪಡುತ್ತವೆ. ಆದ್ದರಿಂದ ಏಕಮುಖಿಯಾದ ಧಾರ್ಮಿಕ ಸಮುದಾಯಗಳು ಶತಮಾನಗಳಿಂದ ಭಾರತೀಯ ಸಮಾಜದ ಅಂಗಗಳಾಗಿಲ್ಲ. ಈ ರೀತಿಯಾದ ಸಮುದಾಯೀಕರಣವೂ-ಅದರಲ್ಲೂ ನಮ್ಮಂತಹ ಸಮಾಜಗಳಲ್ಲಿ ತನ್ನದೇ ಆದ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ಇದರೊಂದಿಗೆ ಧರ್ಮದಿಂದ ನಿರ್ಧಾರಿತವಾದ ಸಮುದಾಯಕ್ಕೆ ಪ್ರಭುತ್ವವು ದಾರಿಬಿಟ್ಟುಕೊಡಬೇಕು. ಇಲ್ಲಿ ಇತಿಹಾಸವು ನಿರ್ಲಕ್ಷಿಸಲ್ಪಡುತ್ತದೆ.. ರಾಷ್ಟ್ರವೂ ನಿರಾಕರಿಸಲ್ಪಡುತ್ತದೆ. ಯಾವುದೇ ರೀತಿಯ ಆರ್ಥಿಕ ವಿಕಾಸದ ಬಗ್ಗೆ ಅವಕ್ಕೆ ಕಾಳಜಿ ಇರುವುದಿಲ್ಲ.

ಕೆಲವು ಸಮಸ್ಯೆಗಳು ಇತ್ಯರ್ಥವಾಗಿ, ಆರ್ಥಿಕ ಬೆಳವಣಿಗೆ ಹೊಂದಬೇಕಾದರೆ ಸರ್ಕಾರ ಮಧ್ಯ ಪ್ರವೇಶಿಸಬೇಕಾಗುತ್ತದೆ.

ಒಂದು ಜನಪ್ರಿಯ ಮಟ್ಟದಲ್ಲಿ ಧರ್ಮ ನಿರಪೇಕ್ಷತ್ವದ ಬಗ್ಗೆ ಪ್ರಚಲಿತವಾಗಿರುವ ನೋಟಗಳು ಎರಡು ಬಗೆಯವು. ಒಂದು-ಧರ್ಮ ನಿರಪೇಕ್ಷವು ಧರ್ಮಕ್ಕೆ ವಿರೋಧವಾಗಿದೆ. ಎರಡು – ಹೆಚ್ಚು ಪ್ರಭಾವವುಳ್ಳ ನೋಟದ ಪ್ರಕಾರ ಧರ್ಮ ನಿರಪೇಕ್ಷತ್ವವೆಂದರೆ ಬೇರೆ ಬೇರೆ ಧರ್ಮಗಳು ಸಹಬಾಳ್ವೆಯಿಂದಿರುವುದು. ಸರ್ವಧರ್ಮ ಸಮಭಾವ ಎಂಬ ಉಕ್ತಿಯಲ್ಲಿ ಇದನ್ನೂ ಅಡಗಿಸಲಾಗಿದೆ. ಇನ್ನೂ ಹೇಳಬೇಕೆಂದರೆ ನಾಗರಿಕ ಸಮಾಜದ ಕಾಳಜಿಗಳು ಧಾರ್ಮಿಕ ಸ್ವಂತಿಕೆಯ ಸುಪರ್ದಿಯಲ್ಲಿ ಇವೆ. ಯಾವ ದೃಷ್ಟಿಕೋನವನ್ನು ಪೋಷಿಸಿದರೂ ಆ ದೃಷ್ಟಿಯಿಂದ ಕೆಲವು ಸಮಾಜಗಳನ್ನು ಧರ್ಮ ನಿರಪೇಕ್ಷಕರಿಸಲು ಸುಲಭವಾಗುತ್ತದೆ. ಇದು ಭಾರತೀಯ ಸಮಾಜಕ್ಕೆ ಒಪ್ಪಬಹುದು.

ಧರ್ಮ ನಿರಪೇಕ್ಷತೆ ಮತ್ತು ಇತಿಹಾಸ ಒಂದಕ್ಕೊಂದು ಪೂರಕವಾಗಿಯೇ ಇವೆ. ಗತಕಾಲದ ಭಾರತೀಯ ಸಂಸ್ಕೃತಿ ಬಹು ಧಾರ್ಮಿಕ ಸಂಸ್ಕೃತಿ ಗುಂಪುಗಳ ನಡುವೆ ಕೆಲವೊಮ್ಮೆ ಸಮಾಗಮ ಮತ್ತು ಘರ್ಷಣೆಗಳು ಏರ್ಪಟ್ಟಿವೆ.

ಈ ಹಿನ್ನಲೆಯಲ್ಲಿ ಧಾರ್ಮಿಕ ಸಮುದಾಯ ಎಂಬ ಪರಿಕಲ್ಪನೆಯ ಸೂಕ್ತತೆಗೆ ಅನ್ವಯಿಸಬಹುದೇನೋ. ಇತಿಹಾಸದಲ್ಲಿ ಹಿಂದೂ ಮುಸ್ಲಿಂ ಹೇಗಿದ್ದರು? ಪರಸ್ಪರರ ಧರ್ಮದ ಬಗ್ಗೆ ಇದ್ದ ಗ್ರಹಿಕೆ ಹೇಗೆ ಇತ್ತು? ಹಿಂದೂಗಲೂ ಇಸ್ಲಾಂಗೆ ಮತಾಂತರವಾದ ಮೇಲೆ ಅವರ ಗ್ರಹಿಗೆ ಬದಲಾಯಿತೇ? ಎಂಬುದರ ಬಗ್ಗೆಯೂ ವಿಶ್ಲೇಷಿಸಬೇಕಾಗುತ್ತದೆ ಇಂಥ ಧಾರ್ಮಿಕ ಗುಂಪುಗಳಿಗೆ ಇದ್ದ ಸರ್ಕಾರದ ಆಸ್ರಯ ಹೇಗೆ ಇತ್ತು? ಆ ವಾತಾವರಣ ಪೂರಕವಾಗಿತ್ತೇ? ಈ ಪರಿಶೀಲನೆ ಧರ್ಮ ಹನಿರಪೇಕ್ಷತ್ವ ಎಂಬ ಪರಿಕಲ್ಪನೆಗೆ ಬಹಳ ಮುಖ್ಯವಾದದ್ದು.

ಜಾತಿ, ಕುಲ, ಸಮುದಾಯ ಪ್ರಾಂತ್ಯ, ಭಾಷೆ ಮತ್ತು ಧಾರ್ಮಿಕ ಅಭಿವ್ಯಕ್ತಗಳ ನಡುವಿನ ಸಂಬಂಧಗಳು ಹೇಗಿದ್ದವು ಎನ್ನುವುದನ್ನು ನೋಡಬೇಕಾಗುತ್ತದೆ. ಧರ್ಮ ಮತ್ತು ಸಮುದಾಯ ಎಂಬ ಕಲ್ಪನೆಗಳು ತೀರ ಬಾಲಿಶವಾಗಿ ಯೋಚಿಸುತ್ತವೆ. ಸಮುದಾಯ ಎಂಬ ಪದವನ್ನು ಯಾವುದೇ ವಿವೇಚನೆಯಿಲ್ಲದೆ ಧರ್ಮದೊಂದಿಗೆ ತಳಕು ಹಾಕುತ್ತವೆ. ಅದೇ ರೀತಿಯಲ್ಲಿ ಧರ್ಮವನ್ನು ಎಲ್ಲ ಚಟುವಟಿಕೆಗಳಲ್ಲೂ ಪ್ರಬಲವಾದ ಪವಿತ್ರ ಶಕ್ತಿಯಾಗಿ ನೋಡಲಾಗುತ್ತದೆ.

ಹಿಂದಿನ ಕಾಲದಲ್ಲಿ ಸಮುದಾಯಗಳನ್ನು ಹಲವಾರು ಅಂಶಗಳಿಂದ ಗುರುತಿಸಲ್ಪಡುತ್ತವೆ. ಅವು ಒಂದರೊಳಗೊಂದು ಚಾಚಿಕೊಂಡು ಬಾಳ್ವೆ ನಡೆಸುತ್ತಿದ್ದವು. ಸಮುದಾಯದ ಅಭೇದ್ಯವಾದ ಇಂದಿನ ಎಲ್ಲೆಗಳು ಗತಕಾಲಕ್ಕೆ ಪರಕೀಯವಾಗಿದ್ದವು. ಇಂದಿಗಿಂತಲೂ ಹೆಚ್ಚಾಗಿ ಧರ್ಮವು ಸಾಮಾಜಿಕ ಆಯಾಮದೊಂದಿಗೆ ಅಂತಹ ಸಂಬಂಧವನ್ನು ಹೊಂದಿತ್ತು.

ಧಾರ್ಮಿಕ ಅಭಿವ್ಯಕ್ತಿಯಿಂದ ಒಂದು ಸಮಾನ, ಏಕರೂಪಿ ಧಾರ್ಮಿಕ ಸಮುದಾಯವನ್ನು ಕಾಣುವುದು ಸಾಧ್ಯವಿಲ್ಲ. ಪ್ರತಿಯೊಂದು ಸಮುದಾಯವೂ ಒಂದು ಜಾತಿ ಅಥವಾ ಕೆಲವು ಜಾತಿಗಳ ಒಂದು ಗುಂಪಿನೊಂದಿಗೆ ತನ್ನ ಸಂಬಂಧದಿಂದಾಗಿ ಪ್ರಭಾವಶಾಲಿಯಾಗಿರುತ್ತದೆ. ಒಂದು ಪಂಗಡವು ಹಲವಾರು ಜಾತಿಗಳ ಅಂಶಗಳನ್ನು ಹೊಂದಿದ್ದರೆ ಅದು ಕೊನೆಗೆ ಒಂದು ಸ್ವತಂತ್ರವಾದ ಮತ್ತು ಪ್ರತ್ಯೇಕವಾದ ಜಾತಿಯಾಗುತ್ತಿತ್ತು. ಅವುಗಳ ಮುಖಂಡರ ಮೇಲೆ ಅದರ ಅಂತಸ್ತು ನಿರ್ಧರಿತವಾಗುತ್ತಿತ್ತು.

ಹಿಂದುಗಳಲ್ಲಿ ಉಚ್ಚ ಜಾತಿಯವರಲ್ಲಿ ಮತ್ತು ಸಾಮಾಜಿಕ ಶ್ರೇಣಿಯಲ್ಲಿ ಬಹಳ ಕೆಳಗೆ ಇರುವ ಆದಿವಾಸಿ ಜನರ ಮತ್ತು ಜಾತಿಯಿಂದ ಹೊರಿಗಿರುವವರ ನಂಬಿಕೆಯ ಪದ್ಧತಿಗಳು ಮತ್ತು ಆಚರಣೆಗಳು ಇದ್ದವು. ಅವರದು ತಮ್ಮದೇ ದೇವತೆಗಳು ಮತ್ತು ಆಚಾರಗಳನ್ನೊಳಗೊಂಡ ಸರ್ವ ಸಜೀವತ್ವ ಧರ್ಮಗಳಾಗಿದ್ದವು. ಕೆಲವು ಬ್ರಾಹ್ಮಣರ ಆಚರಣೆ, ವಿರುದ್ಧವಾಗಿದ್ದವು. ಆದರೆ ಮುಂಚಿನ ವೈದಿಕ ಯಾಗ ಕ್ರಿಯೆಯು ಪ್ರಾಣಿ ಬಲಿಯನ್ನೊಳಗೊಂಡಿದ್ದರೂ, ನಂತರದ ಕಾಲಗಳಲ್ಲಿ ಬ್ರಾಹ್ಮಣರಲ್ಲಿ ಪ್ರಾಣಿ ಬಲಿ ನಿಷಿದ್ಧವಾಯಿತು.

ಧರ್ಮಕ್ಕೆ ಎಷ್ಟರಮಟ್ಟಿಗೆ ಬದ್ಧರಾಗಿರುವರೆಂಬುದರಿಂದ ಮೇಲ್ಜಾತಿಗಳನ್ನು ಕೆಳಜಾತಿಗಳಿಂದ ಬೇರ್ಪಡಿಸಲಾಗುತ್ತಿತ್ತು. ಏಕೆಂದರೆ ಮೇಲ್ಜಾತಿಯವರು ಧರ್ಮವನ್ನು ಹೆಚ್ಚು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಮೇಲ್ಜಾತಿಯವರು ಧರ್ಮವನ್ನು ಹೆಚ್ಚು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಮೇಲ್ಜಾತಿಯವರ ಧರ್ಮಕ್ಕೂ ಸಮಾಜದ ಶ್ರೇಣಿಯಲ್ಲಿ ಕೆಳಗಿದ್ದವರ ಧರ್ಮಕ್ಕೂ ವ್ಯತ್ಯಾಸವಿತ್ತೆಂದು ಇದರಿಂದ ಗೊತ್ತಾಗುತ್ತದೆ. ಬಹುಸಂಖ್ಯಾತರಾದ ಜನರ ಧರ್ಮವನ್ನು ಹಿಂದಿನ ಐತಿಹಾಸಿಕ ಆಕರಗಳಲ್ಲಿ ಅಪರೂಪವಾಗಿ ದಾಖಲಿಸಲಾಗಿದೆ. ಸಾಮಾನ್ಯವಾಗಿ ಪರೋಕ್ಷ ಪ್ರಮಾಣಗಳಿಂದ ಈ ಅಂಶಗಳನ್ನು ತೀರ್ಮಾನಿಸಬೇಕು. ಏಕೆಂದರೆ ಈಗ ಉಳಿದಿರುವುದೆಲ್ಲ ಬಹುಪಾಲು ಮೇಲ್ಜಾತಿಗಳ ಸಾಹಿತ್ಯ ಮತ್ತು ದೃಶ್ಯ ಪ್ರಮಾಣಗಳೇ ಆಗಿವೆ ಎನ್ನಬಹುದು. ಈ ಪ್ರಮಾಣಗಳನ್ನು ಎಲ್ಲ ಸಾಮಾಜಿಕ ನೆಲೆಗಳಿಗೂ ವಿಸ್ತರಿಸಲು ನಾವು ತೊಡಗುತ್ತೇವೆ. ಆದರೆ ಬಹುಸಂಖ್ಯಾತ ಧರ್ಮದ ನಿಷ್ಠಾವಂತ ಪುನರ್ನಿಮಾಣವು ಕೆಲವು ಆಶ್ಚರ್ಯಗಳ ಕಡೆಗೆ ನಮ್ಮನ್ನು ಒಯ್ಯುತ್ತದೆ. ಸಾಮಾಜಿಕ ಶ್ರೇಣಿಯ ಕೆಳತುದಿಯಲ್ಲಿರುವವರ ನಂಬಿಕೆಗಳು ಮತ್ತು ಆಚರಣೆಗಳು ಒಂದು ರೀತಿಯ ಪ್ರತಿ-ಸಂಸ್ಕೃತಿಯ ಭಾಗವಾಗಿವೆ. ಧಾರ್ಮಿಕ ಎಲ್ಲೆಗಳು ಮಸುಕಾಗಿವೆ. ಧಾರ್ಮಿಕ ಅಭ್ಯಾಸಗಳು ಒಂದರೊಳಗೊಂದು ಬೆಸೆದುಕೊಂಡಿವೆ. ಪುರಾಣಗಳು ಒಂದಕ್ಕೊಂದು ಹೆಣೆಯಲ್ಪಟ್ಟಿವೆ. ಹೀಗೆ ಆಗಲು ಕಾರಣ ಭಾರತದ ದೇಶೀಯ ಧರ್ಮಗಳು ಅಗತ್ಯವಾಗಿ ಸಹಿಷ್ಣುವಾಗಿದ್ದವೆಂದಲ್ಲ, ಬದಲಿಗೆ ಬಹುಸಂಖ್ಯಾತರ ಧಾರ್ಮಿಕ ಅಭಿವ್ಯಕ್ತಿಯ ವ್ಯತ್ಯಾಸಗಳನ್ನು ನಿರ್ವಹಿಸುವುದರಿಂದ ಉಂಟಾಯಿತು. ಇಂತಹ ಮುಖಾಮುಖಿಗಳು ಧರ್ಮ ನಿರಪೇಕ್ಷ ಪ್ರಕ್ರಿಯಿಗೆ ಬಹಳ ಮುಖ್ಯವಾಗಬಹುದು.