ಹಿಂದೂಗಳಲ್ಲಿ ಧಾರ್ಮಿಕ ಆಚರಣೆಗಳು ಜಾತಿಗೆ ತಕ್ಕಂತೆ ಇರುತ್ತಿದ್ದವು. ಯಾವ ಜಾತಿಯವರು ಯಾವ ದೇವಸ್ಥಾನವನ್ನು ಪ್ರವೇಶಿಸಬೇಕು ಎಂಬುದು ಅಲಿಖಿತ ನಿಯಮವಾಗಿತ್ತು. ಅದನ್ನು ಅವರು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದರು. ಈ ವ್ಯವಸ್ಥೆ ಗತಕಾಲದಿಂದ ಇಂದಿನವರೆಗೂ ಹಾಗೆಯೇ ಉಳಿದುಕೊಂಡು ಬಂದಿದೆ. ಆದ್ದರಿಂದ ಭಾರತೀಯ ಸಮಾಜದ ಧರ್ಮ ನಿರಪೇಕ್ಷಕರಣವು ಇತರ ಅನೇಕ ಸಮಾಜಗಳ ಧರ್ಮ ನಿರಪೇಕ್ಷಕರಣಕ್ಕಿಂತ ಸುಲಭವಾಗಿರುತ್ತದೆ. ಗತಕಾಲದಿಂದ ಇಂದಿನವರೆಗೆ ಜಾತಿಯೊಂದರ ಲಕ್ಷಣವನ್ನು ಅದರ ನೀತಿ ನಿಯಮಗಳಿಂದ ಹುಟ್ಟು, ಸಾವು, ವಿವಾಹಗಳ ಆಚರಣೆಗಳಿಂದ ಕಸಬು, ಪೂಜೆಯ ಸ್ಥಳಗಳಿಂದ ಮತ್ತು ಅದರ ರೀತಿಗಳಿಮದ ಗುರುತಿಸಲಾಗಿದೆ. ಆದ್ದರಿಂದ ಇಂದು ಯಾವುದು ನಾಗರಿಕ ಸಮಾಜಕ್ಕೆ ಅಗತ್ಯವೆಂದುಕೊಂಡು ಬಂದಿದೆಯೋ ಅದು ಹಿಂದಿನಿಂದಲೂ ಉಳಿದು ಬಂದಿದೆ. ಆಧುನಿಕಪೂರ್ವ ಸಮಾಜಗಳನ್ನು ಧರ್ಮ ನಿರಪೇಕ್ಷ ಅಥವಾ ಧರ್ಮ ನಿರಪೇಕ್ಷವಲ್ಲ ಎಂದು ತೀರ್ಮಾನಿಸುವುದು ಅಷ್ಟು ಸುಲಭವಲ್ಲ. ಧರ್ಮ ನಿರಪೇಕ್ಷಕರಣವು ಪ್ರಭುತ್ವ ಮತ್ತು ಧರ್ಮಗಳ ನಡುವೆ ದ್ವಿಮುಖ ವಿರೋದವನ್ನು ಭಾವಿಸುವುದಿಲ್ಲ. ಅದು ಹೆಚ್ಚಾಗಿ ಸಮಾಜವನ್ನು ಬದಲಿಸುವ ದಿಕ್ಕಿನಲ್ಲಿ ಒಂದು ಪ್ರಜ್ಞಾಪೂರ್ವಕ ಚಲನೆಯಾಗಿದೆ.

ಸಮಾಜದ ಧರ್ಮ ನಿರಪೇಕ್ಷಕರಣವು ನಾಗರಿಕ ಸಮಾಜವನ್ನು ಪುಷ್ಟಿಗೊಳಿಸುತ್ತದೆ, ಗಟ್ಟಿಗೊಳಿಸುತ್ತದೆ. ಅದು ಪ್ರಭುತ್ವವನ್ನು ಸಮರ್ಥವಾಗಿ ನಿಯಂತ್ರಿಸಲು ಅವಕಾಶ ಕೊಡುತ್ತದೆ. ಅಷ್ಟೇ ಅಲ್ಲ ಪ್ರಭುತ್ವವು ಧಾರ್ಮಿಕ ಸಮುದಾಯಗಳೊಂದಿಗೆ ಅಗತ್ಯವಾದ ನಿಷ್ಪಕ್ಷಪಾತತೆಯನ್ನು ಕಾಪಾಡುವಂತೆ ನೋಡಿಕೊಳ್ಳುತ್ತದೆ. ಮೂಲಭೂತವಾಗಿ ಈ ಪ್ರಕ್ರಿಯೆಗಳು ಪ್ರಜಾಪ್ರಭುತ್ವದೊಂದಿಗೆ ಬೆಸೆದು ಹೋಗಿವೆ. ಧರ್ಮ ನಿರಪೇಕ್ಷತ್ವದ ಅಳಿವು ಉಂಟಾದರೆ ಅಷ್ಟರ ಮಟ್ಟಕ್ಕೆ ಪ್ರಜಾಪ್ರಭುತ್ವವೂ ಅಳಿದು ಹೋಗಬಹುದು.

ಆದರೆ ಪಾಶ್ಚಿಮಾತ್ಯರಲ್ಲಿ ಒಂದು ಸಿದ್ಧಾಂತವಾಗಿ ಧರ್ಮ ನಿರಪೇಕ್ಷತೆ ಇದೆ. ಬ್ರಿಟನ್ನಿನಲ್ಲಿ ಧರ್ಮ ನಿರಪೇಕ್ಷತೆಯು ಅದ್ವಿತೀಯವಾದದು. ಅದು ಇಡೀ ಕಾನೂನುಗಳು ಧಾರ್ಮಿಕ ಮೌಲ್ಯಗಳಿಗೆ ಅಂಟಿಕೊಂಡಿದ್ದರೂ, ಅದು ಧರ್ಮ ನಿರಪೇಕ್ಷವಾಗಿಲ್ಲ. ಇನ್ನೊಂದು ಉದಾಹರಣೆ ಎಂದರೆ ಮೆಕ್ಸಿಕೋದಲ್ಲಿ ಅಲ್ಲಿನ ಸರ್ಕಾರ ಚರ್ಚಿನ ಜೊತೆಗೆ ಎಷ್ಟು ನಿಷ್ಠುರವಾಗಿದೆ ಎಂದರೆ, ಚರ್ಚಿಗೆ ಸಂಬಂಧಿಸಿದವರು ಯಾರೂ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ ಮತ್ತು ಯಾವ ಪಾದ್ರಿಯೂ ರಾಜಕೀಯದಲ್ಲಿ ಪಾಲ್ಗೊಳ್ಳುವಂತಿಲ್ಲ ಅಥವಾ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವಂತಿಲ್ಲ. ಮೆಕ್ಸಿಕೋ ಸರ್ಕಾರ ಧರ್ಮ ನಿರಪೇಕ್ಷತೆಯನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬರುತ್ತಿದೆ. ಅಮೇರಿಕಾದ ಸೆನೆಟ್‌ ಕೂಡ ದೇವರ ಹೆಸರನ್ನು ಹೇಳುತ್ತದೆ. ಅಮೇರಿಕಾದ ಡಾಲರ್ ಮೇಲೆ ದೇವರ ಹೆಸರಿದೆ. ಆದರೆ ರಾಜಶಕ್ತಿ ಚರ್ಚಿನ ಸಂಬಂಧ ಅಲ್ಲಿಗೆ ಮುಗಿಯಿತು.

ಜರ್ಮನಿನಲ್ಲಿ ಬೇರೆ ಬೇರೆ ಹೆಸರಿನ ಚರ್ಚುಗಳ ಪರವಾಗಿ ಸರ್ಕಾರವೇ ಕರ ವಸೂಲು ಮಾಡಿ, ಆಯಾ ಚರ್ಚುಗಳಿಗೆ ಸಲ್ಲಿಸುತ್ತದೆ. ಅಲ್ಲಿನ ಶಾಲೆಗಳಲ್ಲಿ ಮಕ್ಕಳಿಗೆ೪ ಕಡ್ಡಾಯವಾಗಿ ಧಾರ್ಮಿಕ ಶಿಕ್ಷಣವನ್ನು ಬೋಧಿಸಲಾಗುತ್ತದೆ. ಫ್ರಾನ್ಸ್‌ ಕೂಡ ತಾನು ಧರ್ಮ ನಿರಪೇಕ್ಷವೆಮದು ತೋರಿಸುವುದಕ್ಕಾಗಿ ಮುಸ್ಲಿಂ ಹೆಣ್ಣುಮಕ್ಕಳಿಗೆ ತಲೆಯ ಮೇಲೆ ಸೆರಗು ಹಾಕಲು ಅನುಮತಿ ಕೊಡುವುದಿಲ್ಲ. ಆದರೆ ಕ್ಯಾಥೋಲಿಕ್‌ ಶಾಲೆಗಳಲ್ಲಿ ಸನ್ಯಾಸಿಯವರು ಧಾರ್ಮಿಕ ಉಡುಗೆಗಳನ್ನು ಧರಿಸಲು ಅವಕಾಶವಿದೆ. ನಾರ್ವೆ ಮತ್ತಿತರ ದೇಶಗಳಲ್ಲಿ ಸರ್ಕಾರವೇ ಧಾರ್ಮಿಕ ಚಟುವಟಿಕೆಗಳಿಗೆ ಹಣವನ್ನು ಖರ್ಚು ಮಾಡುತ್ತದೆ. ಜರ್ಮನಿಯಲ್ಲೂ ಸಹ ಧಾರ್ಮಿಕ ಕ್ಷೇತ್ರಗಳಿಗೆ ಸರ್ಕಾರದ ಖಜಾನೆಯಿಂದ ಹಣ ಹರಿದು ಬರುತ್ತದೆ.

ಭಾರತದಲ್ಲಿಯೂ ಅಷ್ಟೇ ಧಾರ್ಮಿಕ ಕ್ಷೇತ್ರಗಳಿಗೆ ಸರ್ಕಾರದಿಂದ ಅಪಾರ ಪ್ರಮಾಣದ ಹಣ ಹರಿದು ಹೋಗುತ್ತದೆ. ಸರ್ಕಾರದಲ್ಲಿ ಮುಜರಾಯಿ ಇಲಾಖೆ ಎಂಬ ಒಂದು ಇಲಾಖೆ ಇದ್ದು, ಅದಕ್ಕೆ ಒಬ್ಬ ಸಚಿವರು ಕೂಡ ಇದೆ. ಅದರ ಮುಖಾಂತರ ಧಾರ್ಮಿಕ ಕೆಲಸಗಳಿಗೆ, ಹಣವನ್ನು ಖರ್ಚು ಮಾಡಲಾಗುತ್ತದೆ. ಮಠಮಾನ್ಯಗಳಿಗೆ ಕೂಡ ಅಪಾರ ಪ್ರಮಾಣದ ಹಣ ಹರಿದು ಹೋಗುತ್ತಿದೆ. ಹಿಂದುಯೇತರ ಧಾರ್ಮಿಕ ಕೆಲಸಗಳಿಗೆ ಪ್ರಭುತ್ವವೇ ಹಣದ ಸಹಾಯ ಮಾಡುತ್ತದೆ ಎನ್ನುವುದು ವಿಶೇಷ. ಯಾಕೆಂದರೆ, ಇಲ್ಲಿ ಸರ್ವ ಧರ್ಮದ ಸಮನ್ವಯವಿದೆ. ಆದ್ದರಿಂದ ಧರ್ಮ ನಿರಪೇಕ್ಷತೆಯು ದೇಶದಿಂದ ದೇಶಕ್ಕೆ ಬದಲಾಗುತ್ತದೆ.

ಭಾರತೀಯ ಧರ್ಮ ನಿರಪೇಕ್ಷತೆಯ ಅಂತಃಸ್ಫೂರ್ತಿ ಯಾವುದೇ ಧರ್ಮದ ಅಥವಾ ಯಾವುದೇ ಧಾರ್ಮಿಕ ಆಚರಣೆಯ ನಿರಾಕರಣೆಯಲ್ಲ. ಬದಲು ಧಾರ್ಮಿಕ-ಸಾಂಸ್ಕೃತಿಕ ಅನೇಕತೆ ಎಂಬುದು ಗೋಚರವಾಗುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ಧರ್ಮವನ್ನು ನಂಬುವ, ನಂಬದಿರುವ ಹಕ್ಕಿನ ಅವಕಾಶವಿರುತ್ತದೆ. ಇದು ಪ್ರಜಾತಂತ್ರವಾದೀ ಧರ್ಮ ನಿರಪೇಕ್ಷತೆ, ಭಾರತೀಯ ಧರ್ಮ ನಿರಪೇಕ್ಷತೆ ಮಾಡುವ ಹಾಗೆ.

ಗತಕಾಲದಿಂದಲೂ,ಚರಿತ್ರೆಯುದ್ಧಕ್ಕೂ ಪಾಶ್ಚಿಮಾತ್ಯ ಸಮಾಜ ಏಕಧರ್ಮೀಯ ಏಕ ಸಂಸ್ಕೃತಿಯ ಸಮಾಜವಾಗಿ ಉಳಿದು ಬಂದಿದೆ.

ಭಾರತೀಯ ಸಮಾಜ ಹಿಂದಿನಿಂದಲೂ ಬಹುಧರ್ಮೀಯ, ಬಹು ಸಂಸ್ಕೃತಿಯ ಸಮಾಜವಾಗಿ ಉಳಿದು ಬಂದಿದೆ. ಭಾರತದಲ್ಲಿ ಶತ ಶತಮಾನಗಳಿಂದಲೂ, ವಿವಿಧ ಧರ್ಮಗಳು ಜೊತೆ ಜೊತೆಯಾಗಿಯೇ ಉಳಿದು ಬಂದಿದೆ. ಭಾರತೀಯ ಪಾರಂಪರಿಕ ಸಮಾಜ ಎಲ್ಲ ಧಾರ್ಮಿಕ ಪರಂಪರೆಗಳನ್ನು ಸಮಾನ ಗೌರವದಿಂದ ಕಂಡಿದೆ. ಕಾಣುತ್ತಲೂ ಇದೆ, ಇರುತ್ತದೆ. ಆದ್ದರಿಂದಲೇ ಭಾರತೀಯ ಧರ್ಮ ನಿರಪೇಕ್ಷತೆ ಇಂಥ ಶ್ರೀಮಂತ ಪರಂಪರೆಯಿಂದ ಮೂಡಿ ಬಂದಿದೆ.

ಸ್ವಾಮಿ ವಿವೇಕಾನಂದರು ೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಹೀಗೆ ಹೇಳುತ್ತಾರೆ : “ಪ್ರಪಂಚಕ್ಕೆ ಸಹನೆ ಮತ್ತು ಸರ್ವ ಮಾನ್ಯತೆ ಎರಡನ್ನು ಬೋಧಿಸಿದ ದೇಶಕ್ಕೆ ಸೇರಿದವನೆಂದು ಹೇಳಿಕೊಳ್ಳಲು ಹೆಮ್ಮ ಪಡುತ್ತೇನೆ.” ಸಹಿಷ್ಣತೆ ಮತ್ತು ಸರ್ವ ಮಾನ್ಯತೆಯಲ್ಲಿ ನಮಗೆ ನಂಬಿಕೆಯಿರುವುದು ಮಾತ್ರವಲ್ಲ, ಎಲ್ಲ ಧರ್ಮಗಳನ್ನು ನಾವು ಸತ್ಯವೆಂದು ಸ್ವೀಕರಿಸುತ್ತೇವೆ. ಈ ಭೂಮಿಯ ಮೇಲಿನ ಎಲ್ಲ ದೇಶಗಳಿಂದ, ಎಲ್ಲ ಧರ್ಮಗಳಿಂದ ಹಿಂಸೆಗೊಳಗಾದ, ಪರಿತ್ಯಕ್ತಗೊಂಡ ಜನರಿಗೆ ಆಶ್ರಯವಿತ್ತ ದೇಶಕ್ಕೆ ಸೇರಿದವರನು ನಾನೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ನಾವು ಹಿಂದೂಗಳು ಪರಧರ್ಮ ಸಹಿಷ್ಣುಗಳು. ಅಷ್ಟೇ ಅಲ್ಲ, ಮೆಹಮದೀಯರು ಮಸೀದಿಯಲ್ಲಿ ನಮಾಜ್‌ ಮಾಡುವುದು, ಪಾರಸಿಕರು ಅಗ್ನಿಯನ್ನು ಪೂಜಿಸುವುದು, ಕ್ರೈಸ್ತರು ಶಿಲುಬೆಯ ಮುಂದೆ ಮಂಡಿಯೂರಿ ಪ್ರಾರ್ಥಿಸುವುದು ಎಲ್ಲವನ್ನೂ ಎಲ್ಲ ಧರ್ಮಗಳನ್ನು ಒಪ್ಪುತ್ತೇವೆ. ಅತ್ಯಂತ ಕೆಳಗಿನ ಮೂರ್ತಿ ಪೂಜೆಯಿಂದ ಹಿಡಿದು ಅತ್ಯಂತ ಉನ್ನತವಾದ ಪೂರ್ಣತ್ವದ ಪರಿಭಾವನೆಯವರೆಗೆ, ಎಲ್ಲ ಧರ್ಮಗಳು ತಮ್ಮ ತಮ್ಮ ಉಗಮದ ಸ್ಥಿತಿಗತಿಗಳು, ಹಾಗೂ ಸಂಸರ್ಗದಿಂದ ನಿರ್ಧರಿತವಾಗಿ, ಉನ್ನತಿಯ ವಿವಿಧ ಮಜಲುಗಳಾಗಿ, ಅನಂತತೆಯನ್ನು ಅರ್ಥೈಸಿಕೊಂಡು ಸಾಕ್ಷಾತ್ಕರಿಸಿಕೊಳ್ಳುವ ಮಾನವ ಪ್ರಯತ್ನದ ವಿವಿಧ ಮುಖಗಳಾಗಿವೆ. ಅಂತೆಯೇ ಬೃಹದಾರಣ್ಯಕ ಉಪನಿಷತ್‌ ಉದ್ಘೋಷಿಸುವ “ಅಸತೋಮಾ ಸದ್ಗಕಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ” ಎಂಬ ಮಾತುಗಳಲ್ಲಿ ವಿಶ್ವ ಧರ್ಮದ ಸಾರವೇ ಇದೆ.

ವೈಚಾರಿಕ ನೀತಿ ಶೋಧನೆ

ಅಂತರ ಮಾನವೀ ಸಂಬಂಧ ಸೃಷ್ಟಿಯ ಉತ್ತಮ ಬಗೆ ಎಂದರೆ ಸೇವೆ. ವ್ಯಕ್ತಿಯಲ್ಲಿ ಅದು ಒಂದು ಬದಲಾವಣೆಯನ್ನು ಬೆಳವಣಿಗೆಯನ್ನು ತರುತ್ತದೆ. ಆ ಬದಲಾವಣೆ ಯಾವುದು? ಬೆಳವಣಿಗೆ ಯಾವುದು? ಶತಮಾನಗಳಿಂದಲೂ ಈ ಮಹತ್ವದ ವಿಷಯವನ್ನು ಅರ್ಥಯಿಸಿಕೊಳ್ಳಲಾಗದೆ, ಚರ್ಚಿಸಲಾಗದೆ ಸೋತಿದ್ದೇವೆ. ಏಕೆಂದರೆ ನಮ್ಮ ಅಂತರ ಮಾನವ ಸಂಬಂಧದ ಬಗೆಗಳು ಸಿದ್ಧ ಬಗೆಗಳಾಗಿದ್ದು ಎರಕ ಹೊಯ್ದಂತಿದೆ. ಅಲ್ಲಿ ಮಾನವನ ಸ್ವಂತ ವ್ಯಕ್ತಿತ್ವದ ಬೆಳವಣಿಗೆಗೆ ಮಹತ್ವವಿರಲಿಲ್ಲ. ಅವೆಲ್ಲ ಜಾತಿ ಮತ್ತು ಸಂಪ್ರದಾಯದ ಕಟ್ಟುಪಾಡುಗಳ ಹಿನ್ನೆಲೆಯಲ್ಲಿ ರೂಪಗೊಂಡ ನಿರ್ಧಾರಗಳಾಗಿದ್ದುವೇ ಹೊರತು ವೈಚಾರಿಕ ನಿರ್ಧಾರಗಳಾಗಿರಲಿಲ್ಲ. ಇದರ ಪರಿಣಾಮವಾಗಿ ಶೀಲ ನಡತೆಗಳ ಎರಕಗಳು ಸಿದ್ಧಗೊಂಡವು, ಸನ್ನಡತೆ, ದುರ್ನಡತೆಗಳನ್ನು ಗ್ರಂಥಗಳ ಆಧಾರದಿಂದ ಅಥವಾ ಜಾತಿಯ ಶಾಸನದಿಂದ ರೂಪಿಸಲಾಗುತ್ತಿತ್ತು. ಮಾನವನ ಸ್ವಭಾವವನ್ನೇ ಕೇಂದ್ರವಾಗಿಟ್ಟುಕೊಂಡು ಆಚಾರ, ಶೀಲಗಳನ್ನು ರೂಪಿಸುವ ಒಂದು ವೈಚಾರಿಕ ನೀತಿ ಸಂಹಿತೆಯನ್ನು ಬೆಳೆಸಲು ನಮ್ಮಿಂದ ಆಗಲಿಲ್ಲ. ಇಂದು ನಮ್ಮ ರಾಷ್ಟ್ರಕ್ಕೆ ಅಗತ್ಯವಾಗಿರುವುದು ಮಾನವನ್ನು ಮಾನವನ್ನಾಗಿ ಮಾತ್ರ ಕಾಣಬಲ್ಲ ಒಂದು ವ್ಯಾಪಕ ದೃಷ್ಟಿಯೇ ಹೊರತು ಜಾತಿ, ಕುಲ ಮೊದಲಾದ ವರ್ಗೀಕರಣ ದೃಷ್ಟಿಯಲ್ಲ. ವೈಚಾರಿಕ ನೀತಿ ದೃಷ್ಟಿಯಿಂದ ಮತ್ತು ಆಧ್ಯಾತ್ಮದ ದೃಷ್ಟಿಯಿಂದ. ನಾವು ಒಂದು ಅಂಗಿಕಾರಾರ್ಹ ಸೂತ್ರವನ್ನು ನಿರೂಪಿಸಬೇಕಾಗಿದೆ.

ಸಮಾಜದ ಪ್ರತಿಯೊಬ್ಬ ಜೀವಿಯೂ ತನ್ನಂತೆ ಇತರ ವ್ಯಕ್ತಿಗಳೂ ಇದ್ದಾರೆಂಬ ಸವಾಲವನ್ನು ಮೊದಲು ಎದುರಿಸಬೇಕು. ವ್ಯಕ್ತಿ ತನ್ನ ಗುಣ ಶೀಲಗಳಿಗೆ ತಕ್ಕ ಹಾಗೆ ಇತರ ಸಮಾಜ ಜೀವಿಗಳನ್ನು ವಿಶ್ವಾಸದಿಂದ ಅಥವಾ ಬಿಗುಮಾನದಿಂದ ಕಾಣಬಹುದು. ತಾನು ಮಾತ್ರ ಉಳಿಯಬೇಕೆಂಬ ತನ್ನ ಇಂದಿಯ ತೃಪ್ತಿಯಾದರೆ ಸಾಕೆಂಬ ಸ್ವಾರ್ಥ ಭಾವನೆಯುಳ್ಳವನು ಇತರರನ್ನು ಬಿಗುಮಾನದಿಂದ ಕಾಣುತ್ತಾನೆ. ಇದೇ ಪ್ರಧಾನ ಭಾವವಾದರೆ ಆತನ ವರ್ತನೆಯನ್ನು ಪ್ರಾಣಿಗಳ ವರ್ತನೆಗೆ ಸಮ ಎಂದು ಭಾವಿಸಬಹುದು. ಆದರೆ ಯಾವ ಮನುಷ್ಯನೂ ಸಹ ಎಲ್ಲಾ ಸಂದರ್ಭಗಳಲ್ಲೂ ಹೀಗೆ ವರ್ತಿಸಲಾರ. ತುಂಬ ಕೆಳಮಟ್ಟದ ಮನುಷ್ಯ ಕೂಡ ಒಮ್ಮೆಮ್ಮೆ ಇತರರ ಬಗೆಗೆ ನಿಜವಾಗಿ ಕಾಳಜಿ ಹೊಂದಿರುತ್ತಾನೆ. ಇಂಥ ನಿಮಿಷಗಳಲ್ಲಿ ಆತ ತನ್ನ ಎಂದಿನ ಮಟ್ಟಕ್ಕಿಂತ ಮೇಲೇರುತ್ತಾನೆ. ಇದರಿಂದ ಮಾನವನಲ್ಲಿರುವ ನೈತಿಕ ಸಂವೇದನೆಯ ಅರಿವಾಗುತ್ತದೆ. ಅದರ ಸಂಸ್ಕೃತಿ, ಬೆಳವಣಿಗೆಗಳೇ ಇಂದಿನ ಜೀವ ವಿಜ್ಞಾನದ ಪ್ರಕಾರ ಮಾನವ ಹಂತದ ವಿಕಾಸವನ್ನು ತಿಳಿಯಪಡಿಸುತ್ತದೆ.

ಸಮಾಜದಲ್ಲಿ ಕುಟುಂಬವು ಎಂದಿನಿಂದಲೂ ಸಮಾಜದ ಸಂಸ್ಕೃತಿ ಮತ್ತು ನೀತಿಗಳನ್ನು ಕಾಪಾಡಿಕೊಂಡು ಬಂದಿದೆ. ಈ ಯಾಂತ್ರಿಕ ಯುಗದಲ್ಲಿ ಲೆನಿನ್‌ ಮತ್ತು ಮಾರ್ಕ್ಸ್‌ರವರ ಆಲೋಚನೆಗಳು ಕುಟುಂಬದ ಈ ಕಲ್ಪನೆಗೆ ಸಮಾಜದಲ್ಲಿ ಅದರ ಮೂಲಭೂತ ಆಕಾಂಕ್ಷೆಗಳಿಗೆ ಸವಾಲು ಹಾಕಿದೆ. ಇತ್ತೀಚಿಗೆ ಆ ಸವಾಲುಗಳು ಕಾಲಕಳೆದಂತೆ ಕಡಿಮೆಯಾಗುತ್ತಾ ಬಂದಿವೆ. ಕುಟುಂಬ ಒಂದು ಚಿಕ್ಕ, ಆತ್ಮೀಯ ಜೀವಿಗಳ ಗುಂಪು. ದೈಹಿಕ ಮತ್ತು ಧಾರ್ಮಿಕ ಬಂಧಗಳು ಅದನ್ನು ಸಮ್ಮಿಲಗೊಳಿಸಿವೆ. ಈ ಚಿಕ್ಕ ಗುಂಪು ಮುಂದೆ ವರ್ಗ, ಬುಡಕಟ್ಟು, ರಾಷ್ಟ್ರಗಳ ರೂಪದಲ್ಲಿ ಸಮಾಜವಾಗಿ ಬೆಳೆದಾಗ ದೈಹಿಕ ಬಂಧಗಳ ನಿರ್ಧಾರ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಧಾರ್ಮಿಕ ಬಂಧ ತುಂಬಾ ಶಕ್ತಿಯುತವಾಗಿ ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಈ ಧಾರ್ಮಿಕ ಬಂಧವೇ ಮುಂದೆ ನೈತಿಕ ಪ್ರಜ್ಞೆಯಾಗಿ, ಸಾಮಾಜಿಕ ಭಾವನೆಯಾಗಿ ರೂಪ ತಾಳುತ್ತದೆ. ಮಾನವನು ನಾಗರಿಕತೆ, ಸಂಸ್ಕೃತಿ ಮತ್ತು ಉನ್ನತ ಜೀವನಗಳನ್ನು ಸಾಧಿಸುವಂತೆ ಮಾಡಲು ಈ ಧಾರ್ಮಿಕ ಪ್ರಜ್ಞೆಯೇ ಪ್ರೇರಕವಾಗುತ್ತದೆ.

ಮಾನವ ಸಂಸ್ಕೃತಿ ಮತ್ತು ನಾಗರಿಕತೆಯ ಇತಿಹಾಸದಲ್ಲಿ ಧರ್ಮ ಮತ್ತು ನೈತಿಕತೆಗಳು ಹಾಸುಹೊಕ್ಕಾಗಿವೆ. ಭೂಮಿಯ ಮೇಲೆ ಇರುವಂತಹ ಯಾವುದೇ ಧರ್ಮವನ್ನು ನಾವು ನೋಡುವುದಾದರೆ ತನ್ನದೇ ಆದಂತಹ ನೀತಿ ಸಂಹಿತೆಯನ್ನು ಮತ್ತು ತನ್ನದೇ ಆದ ನೈತಿಕತೆಯನ್ನು ಹೊಂದಿದೆ ಎಂದು ಹೇಳಬಹುದಾಗಿದೆ.

ನೈತಿಕ ಬೋಧನೆಗಳ ವಿನಾ ಧರ್ಮಗಳು ಅಪರಿಪೂರ್ಣ ಎನಿಸದಿರಲಾರವು. ಆದುದರಿಂದ ಧರ್ಮಗಳೆಲ್ಲ ತಮ್ಮ ಅನುಯಾಯಿಗಳು ನೀತಿ ಮಾರ್ಗದಲ್ಲಿ ನಡೆಯಲು ಅನೇಕ ಮಾರ್ಗಗಳಾಗಿ ಅವರಿಗೆ ದಾರಿದೀಪವಾಗಿವೆ. ಧರ್ಮ ಮತ್ತಗ ಧರ್ಮ ನಿರಪೇಕ್ಷತೆಗಳ ಕ್ರಿಯಾತ್ಮಕ ಬೆಸುಗೆಯನ್ನು ಗಾಂಧೀಜಿ ಹಿಂದೂ ಪರಂಪರೆಯ ನೆಲೆಯಿಂದ ಸಾಧಿಸುತ್ತಿದ್ದರೆ, ಅದನ್ನೇ ಮೌಲಾನಾ ಆಜಾದ್‌ ಮತ್ತು ಮೌಲಾನಾ ಹುಸೇನ್‌ ಆಹ್ಮದ್‌ ಮದನಿಯವರು ಇಸ್ಲಾಂ ಪರಂಪರೆಯ ನೆಲೆಯಿಂದ ಸಾಧಿಸಿದರು. ಇವರಿಬ್ಬರೂ ಗಾಂಧೀಜಿಯವರಂತೆ ಆಳವಾದ ಧಾರ್ಮಿಕ ಶ್ರದ್ಧೆಯ ವ್ಯಕ್ತಿಗಳು.

ಸಮಾಜದಲ್ಲಿರುವ ಜಾತಿಯತೆ, ವರ್ಣಭೇಧಗಳನ್ನು ಮತ್ತು ಸಂಪ್ರದಾಯದ ಮೂಢನಂಬಿಕೆಗಳನ್ನು ಹೋಗಲಾಡಿಸಲು, ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಮುಂತಾದ ಧರ್ಮಗಳಲ್ಲಿ ಹುಟ್ಟಿದಂತಹ ಮಹಾನ್‌ ಪುರುಷರು ತಮ್ಮ ಧರ್ಮದ ಚೌಕಟ್ಟನ್ನು ಮೀರಿ ತಮ್ಮದೇ ಆದಂತಹ ಹಾಗೂ ಎಲ್ಲರಿಗೂ ಅನ್ವಯವಾಗುವಂತಹ ನೀತಿ ಬೋಧನೆಗಳನ್ನು ಮಾಡಿದ್ದಾರೆ.

ಹಾಗೆಯೇ ಮಾನವನಿಗೂ ಪಾಪ ಪುಣ್ಯಗಳ ಕಲ್ಪನೆಗಳು ರೂಪುಗೊಂಡಾಗಿನಿಂದಲೂ ಸಮಾಜದಲ್ಲಿ ಇಂದ್ರಿಯಗಳನ್ನು ತೃಪ್ತಿಪಡಿಸಲು ದೈಹಿಕವಾಗಿ ಅನೇಕ ತಪ್ಪುಗಳನ್ನು ಮಾಡುತ್ತಾನೆ. ಹಾಗೆಯೇ ಮಾನಸಿಕ ನೆಮ್ಮದಿಗೆ ಅವನು ಆರಿಸಿಕೊಂಡ ಮಾರ್ಗವೆಂದರೆ ಧಾರ್ಮಿಕ ಕಲ್ಪನೆ. ಹೀಗೆ ನೈತಿಕ ಮತ್ತು ಧಾರ್ಮಿಕ ಭಾವನೆಗಳು ರೂಪುಗೊಳ್ಳಲು ಪ್ರಚೋದನೆ ದೊರೆಯುವ ಇಂಥ ಸಾಮಾಜಿಕ ಆವರಣದಲ್ಲಿ ಮಾತ್ರ ವ್ಯಕ್ತಿ ತನ್ನ ದೈಹಿಕ ವ್ಯಕ್ತಿತ್ವಕ್ಕಿಂತಲೂ ಹೆಚ್ಚಿನದನ್ನು ಸಾಧಿಸುತ್ತಾನೆ. ಅಂದರೆ ಭೌತಿಕ ವ್ಯಕ್ತಿಯ ಹಿಂದೆ ಆಧ್ಯಾತ್ಮಿಕ ವ್ಯಕ್ತಿ ಇರುವುದನ್ನು, ಇಂದ್ರಿಯ ಬದ್ಧ ಕೆಳಜೀವಿಯ ಹಿಂದೆ ಉನ್ನತ ಜೀವಿ ಇರುವುದನ್ನು ಇದು ಪ್ರಕಟಗೊಳಿಸುತ್ತದೆ. ಕೆಳ ಜೀವಿತವು ಸ್ಪರ್ಧೆ ಮತ್ತು ಸೆಣಸಾಟಗಳ ಮೂಲಕ ವ್ಯಕ್ತಿಯನ್ನು ತುಂಬ ಸ್ವಾರ್ಥಿಯನ್ನಾಗಿ ಮಾಡಿ, ಉಳಿವನ್ನು ಇಂದ್ರಿಯ ತೃಪ್ತಿಯನ್ನು ಕಾಪಾಡಿಕೊಳ್ಳಲು ಹೆಣಗುವಂತೆ ಪ್ರಚೋದಿಸುತ್ತದೆ. ಎರಡನೆಯ ಶಕ್ತಿ ಅವನನ್ನು ಬೇರೆ ಬೇರೆ ಕೇಂದ್ರಗಳಿಗೆ ಹಚ್ಚಿ ನೈತಿಕ ಮತ್ತು ಇತರ ಉನ್ನತ ಮೌಲ್ಯಗಳ ಕಡೆ ಚಿಂತನೆ ಹರಿಸುವಂತೆ ಪ್ರಚೋದಿಸುತ್ತದೆ. ಇದು ಮಾವನ ವ್ಯಕ್ತಿತ್ವದಲ್ಲಿ ಸುಪ್ತವಾಗಿರುವ ಆಧ್ಯಾತ್ಮಿಕ ಸತ್ವ ಪ್ರಕಟಗೊಳ್ಳುತ್ತಿರುವ ಮೊದಲ ಹೆಜ್ಜೆಯನ್ನು ಸೂಚಿಸುತ್ತದೆ. ಸಾಮಾಜಿಕ ಸನ್ನಿವೇಶದಲ್ಲಿ ಮಾತ್ರ ವ್ಯಕ್ತಿ ಇದನ್ನು ಸಾಧಿಸಬೇಕಾಗಿದೆ. ಸಮಾಜವು ಸಾಂಸ್ಕೃತಿಕ ಪರಂಪರೆಯಿಂದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟು ವ್ಯಕ್ತಿಯ ಜ್ಞಾನ ವೃದ್ಧಿಗೂ ಎಚ್ಚರಕ್ಕೂ ಸಹಾಯಕವಾಗಿದೆ. ಆದ್ದರಿಂದ ವ್ಯಕ್ತಿ ಪ್ರಮುಖವಾಗಿ ಸಮಾಜಕ್ಕೆ ಬಾಧ್ಯನಾಗಿರಬೇಕು. ಸಮಾಜವನ್ನು ಬಿಟ್ಟು ವ್ಯಕ್ತಿ ತನ್ನ ನೈಜ ಮಾನವನ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವುದು ಸಾಧ್ಯವಿಲ್ಲ. ಈ ಸಾಮಾಜಿಕ ಬಾಧ್ಯತೆಯ ಎಚ್ಚರ, ಅದನ್ನು ರೂಢಿಸುವ ಕ್ರಮ ರೀತಿಗಳ ಅರಿವು, ಸಮಾಜ, ಸನ್ನಿವೇಶದಲ್ಲಿ ವ್ಯಕ್ತಿಯ ಹಕ್ಕುಗಳ ಅರಿವು, ಮತ್ತು ಈ ಹಕ್ಕು ಬಾಧ್ಯತೆಗಳ ಸಾಪೇಕ್ಷ ಕೋರಿಕೆ – ಇವು ಯಾವುದೇ ಮಾನವ ವರ್ಗದ ಸಾಮಾಜಿಕ ತತ್ವಜ್ಞಾನವನ್ನು ರೂಪಿಸುತ್ತದೆ.

ಈ ವ್ಯವಸ್ಥಿತ ವಿಶ್ವ ರಚನೆಯ ಉಲ್ಲೇಖವು ಮತ ಧರ್ಮಗಳಲ್ಲಿ ಬಂದಿರುವುದರ ಪರಿಣಾಮವಾಗಿ ಒಂದು ಮುಖ್ಯ ಸಾಮಾಜಿಕ ಪ್ರತಿಫಲ ಸಿಕ್ಕಿದೆ. ಅದೆಂದರೆ ಹಕ್ಕುಗಳಿಗಿಂತಲೂ ಬಾಧ್ಯತೆಗಳಿಗೆ ಮತ್ತು ವಿಶಿಷ್ಟ ಹಕ್ಕುಗಳಿಗಿಂತಲೂ ಋಣಗಳಿಗೆ ಸಾಮಾನ್ಯವಾಗಿ ಎಲ್ಲೆಡೆಗಳಲ್ಲೂ ಹೆಚ್ಚು ಒತ್ತು ಬಿದ್ದಿರುವುದು. ಆದ್ದರಿಂದ ಧರ್ಮದ ಪ್ರಭಾವದಿಂದ ಸ್ಫೂರ್ತಿ ಪಡೆದು ಮಾಡಿದ ಸಮಾಜಕಾರ್ಯವನ್ನೊಳಗೊಂಡ ಎಲ್ಲ ಬಗೆಯ ಕಾರ್ಯಗಳಿಗೆ ಬೇರೆ ಕಡೆಗಳಲ್ಲಿ ಕಂಡುಬಾರದ ತೀವ್ರತೆ ಮತ್ತು ಗಾಂಭೀರ್ಯ ದೊರಕಿದೆ. ಸಮಾಜಕಾರ್ಯದ ದರ್ಶನಕ್ಕೆ ಈ ಪ್ರಚೋದನೆ ನಿಜವಾಗಿ ಮಹತ್ವದ್ದು. ಅದನ್ನು ಮುಂದೆ ನಾನು ಖಚಿತ ಪಡಿಸುತ್ತೇನೆ.

ಪಾಪ ಪುಣ್ಯಗಳ ಕಲ್ಪನೆ

ಅನಾದಿಕಾಲದಿಂದಲೂ ಮಾನವನಲ್ಲಿ ಒಳಿತು ಮತ್ತು ಕೆಡಕುಗಳಿಗೆ ಸಂಬಂಧಿಸಿದಂತೆ ವಿಚಾರಗಳು ಮತಧರ್ಮಗಳಲ್ಲಿ ವೈಭವೀಕರಿಸಿದ್ದಾರೆ. ಪಾಪ ಪುಣ್ಯ ಎಂಬುದು ಯಾವಾಗ ಮತ್ತು ಏಕೆ ಹುಟ್ಟಿತು ಎಂಬುದಕ್ಕೆ ನಿಖರವಾದ ಐತಿಹಾಸಿಕ ಉತ್ತರ ಇನ್ನೂ ಸಿಕ್ಕಿಲ್ಲ. ಕಾರಿನ ಅಡಿಗೆ ಬಿದ್ದು ಒಬ್ಬ ಚಾಲಕ ಸತ್ತ ಎಂದಿಟ್ಟುಕೊಳ್ಳಿ. ಅಯ್ಯೋ ಪಾಪ… ಹೀಗಾಗಬಾರದಿತ್ತು ಎನ್ನುತ್ತೇವೆ. ಮನೆಯಲ್ಲಿದ್ದ ಒಂಟಿ ಮಹಿಳೆಯರನ್ನು ಬೆದರಿಸಿ ಒಡವೆಗಳನ್ನು ಕಳ್ಳರು ಅಪಹರಿಸಿಕೊಂಡು ಹೋದಾಗ ಪಾಪದ ಹೆಂಗಸು… ಆ ಕಳ್ಳ ಎಂಥಾ ಪಾಪಿಷ್ಠ ಎನ್ನುತ್ತಾರೆ.

ಗೋವುಗಳಿಗೆ ಹುಲ್ಲು, ನುಚ್ಚು, ಹಿಂಡಿ, ಮುಸುರೆ, ನೀರು ಕೊಡದೆ ಉಪವಾಸ ಹಾಕುತ್ತಾರೆ. ಅವರಿಗೆ ಪಾಪ ತಟ್ಟದೆ ಹೋಗುತ್ತಾ? ಎಂತಲೋ ಮನೆಯಲ್ಲಿರುವ ಹಲ್ಲಿಯನ್ನು ಕೊಂದರೆ ಬ್ರಹ್ಮದೋಷ ಬರುತ್ತದೆ ಎನ್ನುತ್ತಾರೆ. ಹಾಗೆ ಹಳ್ಳಿಗಳಲ್ಲಿ ಈಗಲೂ ಗುಬ್ಬಿ ಮರಿಯನ್ನು ಮುಟ್ಟಿದರೆ ಪಾಪ ಬರುತ್ತದೆ ಎಂಬುದು ಜನರ ನಂಬಿಕೆಯಾಗಿದೆ. ತಿನ್ನುವ ಅಕ್ಕಿ ಧಾನ್ಯದಲ್ಲಿ ಕಸ, ಕಲ್ಲು, ಮಣ್ಣು, ಬೆರೆಸಿ ಮಾರಾಟ ಮಾಡುವವರಿಗೆ ಪಾಪ ತಟ್ಟುತ್ತೆ. ಅವರಿಗೆ ನರಕ ಪ್ರಾಪ್ತವಾಗುತ್ತದೆಂದು ಜನರು ಮಾತನಾಡಿಕೊಳ್ಳುತ್ತಾರೆ. ಮನೆಯಲ್ಲಿ ಇರುವ ಸಾಕು ಪ್ರಾಣಿಗಳನ್ನು ಸಾಯಿಸಿದರೆ ಏಳು ಜನ್ಮ ಎತ್ತಿದರೂ ಪಾಪ ಪರಿಹಾರವಾಗುವುದಿಲ್ಲ ಎನ್ನುತ್ತಾರೆ. ದುಡಿದ ಹಣ ಅನಾಥಾಶ್ರಮಕ್ಕೆ ದಾನ ಮಾಡಿದರೆ ಎಂತಹ ಪುಣ್ಯಾತ್ಮ ಎಂದು ಹೊಗಳುತ್ತಾರೆ. ಈ ಎಲ್ಲಾ ಪ್ರಕರಣಗಳಲ್ಲಿ ನಮ್ಮ ಕಲ್ಪನೆಗಳಿಗೆ ಪಾಪ ಪುಣ್ಯಗಳ ಪ್ರಜ್ಞೆಯ ವಿವಿಧ ಮುಖ ಲಕ್ಷಣ ಲಭಿಸುತ್ತದೆ.

ಮನುಷ್ಯನ ಒಂದು ಬಗೆಯ ಚಿತ್ತ ಸ್ಥಿತಿಯನ್ನೇ ಹೀಗೆ ಪಾಪ ಪುಣ್ಯ ಅಂತಾ ತೀರ್ಪಿಸಿ ಆಡಿಸುತ್ತದೆ. ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಎಲ್ಲರೂ ಒಂದೇ ಮನಃಸ್ಥಿತಿಯಲ್ಲಿರುವುದಿಲ್ಲ. ಕೆಟ್ಟ ಕೆಲಸ ಒಳ್ಳೆಯ ಕೆಲಸವೆಂಬ ರೂಪದ ಆಧಾರದಲ್ಲಿ ಪಾಪ ಪುಣ್ಯಗಳು ತಮ್ಮ ತೂಕ ತೋರಿಸಿಕೊಳ್ಳುತ್ತವೆ. ಮೂಲಭೂತವಾಗಿ ಸ್ವಸ್ಥ ಸಮಾಜದ ರಚನೆಯ ಉದ್ದೇಶದಲ್ಲಿ ಪ್ರಜೆಗಳ, ಅಧಿಕಾರಿಗಳ, ಶಿಕ್ಷಕರ, ಸಾಧು-ಸಂತರ, ಕೂಲಿ-ಕಾರ್ಮಿಕರ, ರೈತರ ಹೀಗೆ ಎಲ್ಲರದ್ದೂ ಸಮಪಾಲಿನ ಕರ್ತವ್ಯವೇ ಅಡಗಿದೆ ಎಂದು ಪರಿಭಾವಿಸುತ್ತೇವೆ. ಪರಿಪೂರ್ಣ ಮಟ್ಟದಲ್ಲಿ ಅಂದು-ಇಂದು ಎಂದಿಗೂ ವಿಶುಭ್ರಾವಸ್ಥೆ ಪಡೆದಿಲ್ಲ ಪಡೆಯುವುದೂ ಇಲ್ಲ. ಇದು ಚೋದ್ಯದ ಸಂಗತಿ. ಉತ್ತರವೂ ಸರಳ. ಮನುಷ್ಯ ಸ್ವಭಾವತಃ ಸ್ವಾರ್ಥಿ. ಆಸೆಬುರುಕುತನ ಮೋಹಾಕತನ ಅವನ ಬದುಕಲ್ಲೇ ದೇಹದಲ್ಲಿನ ರಕ್ತ-ಮಾಂಸದಷ್ಟೇ ನವಿರಾಗಿ ಮೇಳೈಸಿದೆ. ಅಹಂಕಾರ, ಸ್ವಾರ್ಥಿಯನ್ನಾಗಿ ಮಾಡುತ್ತ ‘ಸುಖ-ಸಂತೋಷ’ವೆಂಬ ಮರೀಚಿಕೆಯ ಬೆನ್ನುಹತ್ತಿ ಧಾವಿಸುವಂತೆ ಮಾಡಿದ್ದೇ ಕಾರಣಶಕ್ತಿಯಾಗಿದೆ.

ಯಾವತ್ತು ವ್ಯಕ್ತಿ ದಿನನಿತ್ಯ ಬದುಕಿನಲ್ಲಿ ಜಾತಿ ವರ್ಗ, ಭಾಷೆ-ಉದ್ಯೋಗ, ಧರ್ಮ-ದೇವರು ಸಂಸ್ಕೃತಿ-ಕುಟುಂಬ ಹೀಗೆ ಸಾಮೂಹಿಕ ಬಾಳ್ವೆಯಿಂದ ಒಡೆದೊಡೆದು ತನ್ನ ಕೌಟುಂಬಿಕ ಗಾತ್ರ ಕುಗ್ಗಿಸಿಕೊಳ್ಳುತ್ತ ಬದುಕಲು ಅಪೇಕ್ಷಿಸಿದನೋ; ಆ ಕ್ಷಣದಿಂದ ಬಡವ-ಶ್ರೀಮಂತ ಸಾಮಾನ್ಯ ಅಶಿಕ್ಷಿತ-ಸುರಕ್ಷಿತ ಹೀಗೆ ವರ್ಣಭೇಧ ಹುಟ್ಟಿದವು. ಮಾತಿಗೂ-ವರ್ತನೆಗೂ ವ್ಯತ್ಯಾಸ ಹುಟ್ಟಿ ಅದು ವ್ಯಕ್ತಿಯ ಏಳಿಗೆಗೆ ತಾರಕಕ್ಕಿಂತಾ ಮಾರಕವೇ ಹೆಚ್ಚಾದಾಗ; ಪ್ರಬಲ-ದುರ್ಬಲ ಹುಟ್ಟಿತು. ವಿಶೇಷತ; ಜಾತಿ-ಮತ ಧರ್ಮ-ಭಾಷೆ ಆಚಾರ-ವಿಚಾರಗಳಲ್ಲಿ ಐಕ್ಯಮತ್ಯ ನಶಿಸಲಾರಂಭಿಸಿ ಬಲಾತ್ಕಾರ-ಹಿಂಸೆ-ಶೋಷಣೆ ದರ್ಪ-ದೌರ್ಜನ್ಯ ಅಕ್ರಮಣ-ಯುದ್ಧ ಇವೇ ವ್ಯಕ್ತಿಯ ಬದುಕಲ್ಲಿ ನೀತಿಧರ್ಮದ ಕರುಣೆ-ಪ್ರೀತಿಯ ಬಗೆಗೆ ಪಾಪ-ಪುಣ್ಯಗಳ ಕಲ್ಪನೆಯ ಬೀಜ ಬಿತ್ತುತ್ತ ನಡೆದವು. ಸ್ವರ್ಗ-ನರಕಗಳ ಕಲ್ಪನೆಗೆ ಕೊಂಡಿಹಾಕಿ ಮರೆದಾಡುವ ಮತ್ತೊಂದು ವರ್ಗ ಬೆಳೆದುಬಂತು. ತತ್‌ಪರಿಣಾಮ ವ್ಯಕ್ತಿಯ ನಡತೆ-ಮಾತಲ್ಲಿ ಈ ಪಾಪ ಪುಣ್ಯಗಳ ಕಲ್ಪನೆಯನ್ನೇ ನೀತಿಗಿಂತಾ ಭೀತಿಯನ್ನೋ ಹುಟ್ಟಿಹಾಕಿ ಹರಡುತ್ತ ತಮ್ಮ ಸುಖ ಸ್ವಾರ್ಥಕ್ಕಾಗಿ ಸಾಮಾಜಿಕ ವ್ಯವಸ್ಥೆಗಳನ್ನು ಬಳಸಿಕೊಂಡದ್ದು ಈಗದು ಹಳೆಯ ಇತಿಹಾಸ. ಸ್ವರ್ಗ ಇದು ಸುಖಕರದ್ದು, ಸಂತೋಷದಾಯಕದ್ದು ಅಮರತ್ವ ಪಡೆದದ್ದು. ದೇವರ ಸಾನ್ನಿಧ್ಯ, ಪಾದವೊ, ಅದರ ಅಡಿಯಲ್ಲೋ ಶಾಶ್ವತವಾಗಿ ಸ್ಥಿರಗೊಳ್ಳುತ್ತದೆ. ತದ್ದಿರುದ್ದವಾಗಿ ನರಕ ದುಃಖದಾಯಕ. ನೋವು, ಶಿಕ್ಷೆ, ಹಿಂಸೆ ಅನುಭವಿಸುತ್ತ ಆತ/ಆಕೆ ಮತ್ತೆಂದೂ ಸ್ವರ್ಗಸ್ಥಾನ ಪಡೆಯುವುದು ಶಕ್ಯವಿಲ್ಲ ಎಂಬ ಭೀತ ಪ್ರಜ್ಞೆ ಹುಟ್ಟಿ ಹರಡಿದ್ದು ಸುಳ್ಳಲ್ಲ.

ಕೆಳಸ್ತರ-ಮೇಲುಸ್ತರ ಎನ್ನದೆ ಮೇಲು ವರ್ಗದವರ ಕೈ ಬಾಯಿಯಲ್ಲಿ ಹುಟ್ಟಿದ್ದೀ ಪಾಪ-ಪುಣ್ಯ ಸ್ವರ್ಗ ನರಕಗಳ ಕಲ್ಪನೆ ಎಲ್ಲರಲ್ಲೂ ಬಾಯಲ್ಲಿ ನೀರೂರಿಸಿತೇ ವಿನಃ ಯಾರ ಬಾಯರಿಕೆ ಅಡಗಿಸಲಿಲ್ಲ. ಆದರೂ ಈ ಪುಣ್ಯ ಪ್ರಾಪ್ತಿಯ ಬಯಕೆಯಲ್ಲೂ ಮನುಷ್ಯ ಧರ್ಮ ಯಜ್ಞ ಯಾಗ ತೀರ್ಥಯಾತ್ರೆ, ವ್ರತಾಚರಣೆ, ದಾನ ಉಪವಾಸ ಇತ್ಯಾದಿ ಪರಿಕ್ರಮಗಳನ್ನು ರಚಿಸಿಕೊಂಡಿದ್ದಾನೆ. ಇಲ್ಲಿ ಆತನು ತೃಪ್ತಬಾವ ಪಡೆಯುತ್ತಾನೆ ಎಂಬ ನಂಬಿಕೆಯೂ ಇದೆ. ಪಾಪ-ಎನ್ನುವುದಕ್ಕೆ ಆಯಾ ಸನ್ನಿವೇಶಕ್ಕೇ ತಕ್ಕಂತೆ ಕೆಟ್ಟ ಕೆಲಸ, ದುರ್ದೈವ ಹಸುಗೂಸು, ಅನುಕಂಪ, ಹೀಗೆ ವಿವಿಧಾರ್ಥಗಳನ್ನು ನೀಡುತ್ತದೆ. ಅಂತೂ ಪಾಪ ಎಂಬುದು ಮಾನಸಿಕವಾಗಿ ಕೆಟ್ಟಸ್ಥಿತಿಯದೇ ದ್ಯೋತ್ತಕವಾಗಿದೆ. ಇನ್ನೊಬ್ಬರಿಗೆ ಮಾನಸಿಕವಾಗಿ ಶಾರೀರಿಕವಾಗಿ ನೋವುಂಟು ಮಾಡುವ ಯಾವುದೇ ಹಿಂಸಾಮಾರ್ಗ ಅಥವಾ ಶೋಷಣೆ ಇದೆ ಪಾಪ ಕ್ರಿಯೆಯಾಗುತ್ತದೆ. ಇದು ಬುದ್ಧಿಯಿಂದ ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೂ ಆತ ದೇವರು ಪುಣ್ಯ ಧರ್ಮಗಳಿಗೆ ನಿಜವಾದ ಆಂತರಿಕ ಭೀತಿ ಹುಟ್ಟಿಸಿದ್ದಾನೆ. ಆ ಪಾಪ ಕ್ರಿಯೆ ಮಾಡಬಾರದೆಂಬ ಸುಪ್ತಪ್ರಜ್ಞೆ ಆಂತರಾತ್ಮದಲ್ಲಿ ನಿಜಕ್ಕೂ ಧ್ವನಿಸಿದ್ದಾನೆ.

ಪ್ರಪಂಚದಲ್ಲಿ ಹೆಣ್ಣು-ಮಣ್ಣು, ಹೊನ್ನು-ಅಧಿಕಾರಗಳ ಮೋಹದಲ್ಲಿ ಉದ್ಭವಗೊಂಡಿದ್ದ ಮಾನವ ಈ ಭೂಮಿಯಲ್ಲಿ ನಿಷ್ಪಾಪಿ ಜನರ ಮೇಲೆ ಈಗಲೂ (ಧರ್ಮ-ರಾಜಕಾಣವೂ ಸೇರಿಸಿಕೊಂಡು) ಎಷ್ಟೊಂದು ರಕ್ತಪಾತ, ಕೊಲೆ, ಅಗ್ನಿದಹನ, ಯುದ್ಧ ಸಾಮೂಹಿಕ ಹತ್ಯೆ, ದರೋಡೆ, ಆಕ್ರಮಣ ಹಿಂಸೆ ನಡೆಸುತ್ತಿರಲಿಲ್ಲ.

ಆಚಾರ-ವಿಚಾರಗಳ ತಾರತಮ್ಯ ಹಾಗೂ ಔಚಿತ್ಯ ಪ್ರಜ್ಞೆ ಇಲ್ಲದೆ ತನ್ನ ಕ್ರಿಯಾಶಕ್ತಿಯ ಔನ್ನತ್ಯವನ್ನು ಕಡೆಗಣಿಸಿ ಪಾಪ-ಪುಣ್ಯಗಳಲ್ಲೇ ಕರ್ಮಠನನ್ನಾಗಿ ಬಾಳನ್ನೆಲ್ಲ ಮೇಣದ ಬತ್ತಿಯಂತೆ ಕರಗಿಸಿಕೊಳ್ಳುತ್ತ ಹೋಗುವುದುಂಟು. ಮನುಷ್ಯನ ನಿತ್ಯ ವ್ಯವಹಾರದಲ್ಲಿ ಒಳ್ಳೆಯ-ಕೆಟ್ಟದರ ಪ್ರಭೇದ ರೂಪ ಸೃಷ್ಟಿಸಿ ಅದಕ್ಕೆ ಪಾಪ-ಪುಣ್ಯ, ಸ್ವರ್ಗ-ನರಕಗಳ ಚಿತ್ರಣ ಕೊಟ್ಟು ಸಮಾಜದಲ್ಲಿ ನೀತಿವಂತಿಕೆಗೆ ಚಿನ್ನದ ಲೇಪಕೊಟ್ಟು ತಮ್ಮ ತಮ್ಮ ಧರ್ಮ-ದೇವರ ಕುರಿತಾದ ಶ್ರದ್ಧಾಭಾವಗಳಿಗೆ ಒಂದು ಕಾಲ್ಪನಿಕ (ಅನುಕೂಲ ಸಿಂಧು) ಚೌಕಟ್ಟು ನಿರ್ಮಿಸಿ ಆತನ-ಆಕೆಯ ನಶ್ವರ ಬಾಳ್ವೆಗೆ ದೇವತಾರಾಧನೆ ಸಹಿತ ಒಂದು ಪುಣ್ಯದಲ್ಲೇ ಉತ್ತಮ ನೀತಿಸಂಹಿತೆ’ ಆಗಿರಬೇಕೆಂದು ಕಲ್ಪಿಸಿಕೊಟ್ಟರು.

ಸಾಮಾನ್ಯ ಜನತೆ ಮಾತ್ರ ಈ ಪಾಪಪ್ರಜ್ಞೆಯ ಭೀತಿಯನ್ನು, ಪುಣ್ಯ ಫಲದ ಆಕಾಂಕ್ಷೆಯನ್ನು ಸುರಳೀತವಾಗಿ ನಿರ್ಮಿಸಿಕೊಂಡಿದ್ದು, ಇಂದಿಗೂ ಆ ಭೀತಭಾವದ ಕಲ್ಪನೆ ‘ಪಾಪದ ಅವತಾರ ಎತ್ತಿ ನಿಂತಿದ್ದು ಪಾರ್ಶ್ವನೋಟವೇ ಅಂತಿಮವಾಗಿ ಮಾನವನ ನಿತ್ಯ ಜೀವನದ ಕ್ಷಣಮಾರ್ಗಗಳಲ್ಲೇ ಹುದುಗಿರುವ ಈ ಪಾಪ ಪುಣ್ಯಗಳ ಪ್ರಚಾವೀ ಪರಿಕಲ್ಪನೆಯು ನಮ್ಮದಾದ, ವಿಶೇಷತಃ ವಿಶ್ವವ್ಯಾಪಾರದ ಉತ್ಕರ್ಷಾದೃಷ್ಟಿಯಿಂದ ನೈತಿಕ ಸಿದ್ಧಾಂತಗಳಿಗೆ ನಿಷ್ಠಾಪೂರ್ಣ ನೆಲಗಟ್ಟಾಗಿ ರೂಪಿಸಿಕೊಂಡಾಗ ಮಾತ್ರ ನಮ್ಮ ತಾತ್ವಿಕ ಚಿತ್ತಸ್ಥಿತಿ ಚೆನ್ನಾಗಿರುತ್ತದೆ.

ವಾಸ್ತವದಲ್ಲಿ ಆಗ ಹಲವು ಹತ್ತೆಂಟು ಅನುಭಾವ ಕ್ಷೇತ್ರಗಳಲ್ಲಿ ಆರ್ಥಾತ್‌ ನಾವು ಜಂಜಡಭರಿತ ಸಂಸಾರದಲ್ಲಿ ತೊಡಗಿಕೊಂಡಿದ್ದರೂ ತಾವರೆ ಎಲೆ ಮೇಲಣ ಜಲಬಿಂದುವಿನಂತೆ ವರ್ತಿಸುತ್ತಿರಬೇಕು. ಆಗ ಹುಟ್ಟಬಹುದಾದ, ತಾನಾಗಿ ಅರಳಿ ಶೋಭಿಸುವ ಪುಷ್ಪದಂತೆ ಪ್ರೀತಿ, ಮಮತೆ, ದಯೆ, ಸಂತೋಷಕ್ಕಿಂತಾ ಮಿಗಿಲಾದ ಪುಣ್ಯಕ್ಕೆ ಅರ್ಥ-ಮೌಲ್ಯ ಎರಡೂ ಇಲ್ಲ ಎನಿಸುತ್ತದೆ.

ಧರ್ಮನಿರಪೇಕ್ಷತೆಯಲ್ಲಿ ಅನುಭಾವಿಗಳು

ಧಾರ್ಮಿಕತೆಯಲ್ಲಿ ಪರಿಭ್ರಮಣದಲ್ಲಿ ಆಸ್ತಿಕ ಮತ್ತು ನಾಸ್ತಿಕವೆಂಬ ಎರಡು ವಿಧವಾದ ಜನರಿದ್ದಾರೆ. ಧರ್ಮದಲ್ಲಿರುವ ದೈವಿಕ ಕಲ್ಪನೆಯನ್ನು ಒಪ್ಪದೆ ಕೇವಲ ಕಣ್ಣಿಗೆ ಕಾಣುವುದನ್ನು ಮಾತ್ರ ಸತ್ಯ. ಇಂದ್ರಿಯಕ್ಕೆ ಗೋಚರವಾಗದೆ ಇರುವುದನ್ನು ಮಿತ್ಯ ಎಂದು ಹೇಳುವವರೆ ನಾಸ್ತಿಕರು. ಹಾಗೆಯೆ ದೇವರ ಮೇಲೆ ನಂಬಿಕೆಯನ್ನು ಹೊಂದಿರುವವರೇ ಆಸ್ತಿಕರು. ಹಾಗೆಯೆ ಧರ್ಮದಲ್ಲಿ ಇದ್ದುಕೊಂಡು ಅದರಲ್ಲಿರುವ ಮೂಢನಂಬಿಕೆಗಳನ್ನು ವಿರೋಧಿಸಿ ಮನುಜ ಮತಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾರೆ. ಅವರನ್ನು ಅನುಭಾವಿಗಳೆಂದು ಕರೆಯುತ್ತಾರೆ.

ಅನುಭಾವವು ಸಾಧಕರ ಸ್ಪರ್ಶಮಣಿ. ಸಿದ್ಧಿಕರದಲ್ಲಿ ಅರಿವಿಗೆ ಆಗುವ ಅದ್ಭುತ ಆಘಾತ. ಸಾಂಸ್ಥಿಕತೆಯ ಅರಮನೆ ಮಠಗಳ ಹಂಗಿನಲ್ಲಿ ಅನುಭಾವ ಅರಳುವುದಿಲ್ಲ. ಹೀಗಾಗಿ ಬಹಳಷ್ಟು ಅನುಭಾವಿಗಳು ವ್ಯಕ್ತಿವಾದಿಗಳಲ್ಲ. ವೈಯಕ್ತಿಕ ಮುಕ್ತಿಯಲ್ವಲಿ ತೃಪ್ತರಾಗುವುದಿಲ್ಲ. ನಿಮಿತ್ತ ಮಾತ್ರದ “ಕಾರಣಗುರು”ವಿನಿಂದಾಗಿ ಲೌಕಿಕತೆಯಿಂದ ಎಚ್ಚರಗೊಳ್ಳುತ್ತಾರೆ. ತಮ್ಮ “ಆತ್ಮಗುರು” ವನ್ನು ಹೊಂದಿ ಅಂಡಲೆಯುತ್ತಾರೆ. ಇವರಿಗೆ ‘ವಿಶ್ವವೇ’ ‘ತಾನು’ ಎಮಬ ಅನುಭೂತಿ ಉಂಟಾಗುತ್ತದೆ. ಹೀಗಾಗಿ ಅನುಭಾವಿಗಳೆಲ್ಲ ಲೋಕಕಾರುಣ್ಯದಿಂದ ತುಂಬಿ ತುಳುಕುತ್ತಾರೆ.

ಅನುಭಾವಿಗಳ ಪೂರ್ನ ತತ್ವ, ನಿರ್ಮಾಲ್ಯ, ಪ್ರೇಮ. ಉದಾರತೆ ಸಹಿಷ್ಣುತೆಗಳು ಧರ್ಮವಾದಿಗಳಿಗೆ ಅರ್ಥವಾಗುವುದಿಲ್ಲ. ಅವರು ಅನುಭಾವಿಗಳನ್ನು ಧರ್ಮ ದ್ರೋಹಿಗಳೆಂದು ಕರೆದು ಅನಾಹುತ ಉಂಟುಮಾಡಿದ ಉದಾಹರಣೆಗಳಿವೆ. ಅನುಭಾವಿಗಳಿಗೆ ಆತ್ಯಂತಿಕ ನಿಜದ ಅನುಭವ ಅಥವಾ ಅನುಭೂತಿ ಉಂಟಾಗುತ್ತದೆ. ಆದ್ದರಿಂದ ಅವರು ಯಾವುದೆ ಒಂದು ಸಾಂಸ್ಥಿಕ ಧರ್ಮದ ಚೌಕಟ್ಟಿನಲ್ಲಿ ಇರುವಂಥವರಲ್ಲ. ಶೈವ ಅನುಭಾವಿ, ವೈಷ್ಣವ ಅನುಭಾವಿ, ವೀರಶೈವ ಅನುಭಾವಿ ಎಂದು ಭಾಗಿಸಲು ಬರುವುದಿಲ್ಲ. ಅನುಭಾವಿಗಳೆಂದರೆ ಅವರು ಎಲ್ಲ ಧರ್ಮಗಳ ಚೌಕಟ್ಟುಗಳನ್ನು ಮೀರಿ ನಿಂತಿದ್ದಾರೆ ಎಂದೇ ಅರ್ಥ. ಅವರು ಒಂದು ದೈವವನ್ನು ಹಿಡಿದು ಇನ್ನೊಂದು ದೈವವನ್ನು ಬಿಡುವ ಗೋಜಿಗೆ ಹೋಗುವುದಿಲ್ಲ. ತಮ್ಮ ಇಷ್ಟದೈವದ ಮೂಲಕವೆ ಸಕಲ ದೈವಗಳ ಸತ್ಯವನ್ನು ಅರಿಯುತ್ತಾರೆ.

ಅನುಭಾವಕ್ಕೆ ಯಾವುದೆ ಒಂದು ಧರ್ಮದ ಹಂಗಿಲ್ಲ ಅದು ತಾರ್ಕಿಕವಲ್ಲ. ಅದು ಒಮ್ಮೆ ಮೌನ, ಒಮ್ಮೆ ಭಕ್ತಿ, ಒಮ್ಮೆ ವಿರಕ್ತಿ, ಒಮ್ಮೆ ಹಠ, ಒಮ್ಮೆ ಧೈನ್ಯ, ಒಮ್ಮೆ ಮೌನ, ಒಮ್ಮೆ ಮಾತ್ರ ಒಮ್ಮೆ ಮಹಾಶಾಂತಿ, ಒಮ್ಮೆ ವೀರ ಕ್ರೋದದಲ್ಲಿ ಮರೆಯುತ್ತ ಯಾವ ಹಿಡಿತಕ್ಕೂ ಹೊಡೆತಕ್ಕೂ ಸಿಕ್ಕದೆ ಸಾಗುವ ನಿಗೂಢ ನಡೆ-ನುಡಿ. ಅನುಭಾವಿಗಳು ದೈವಿಕ ಅರಿವಿನ ಮಹಸಾಗರದಲ್ಲಿ ಹುಚ್ಚೆದ್ದು ಕುಣಿಯುವ ಮುಗ್ಧ ಮಕ್ಕಳಾಗುತ್ತಾರೆ.