ಅನುಭಾವಿಗಳು V/S ಸೂಫಿಗಳು

ಎರಡು ವಿಭಿನ್ನ ಧಾರ್ಮಿಕ ಸಂಸ್ಕೃತಿಗಳಲ್ಲಿ ಹುಟ್ಟಿ ಬಂದರೂ ಅನುಭಾವಿಗಳು ಮತ್ತು ಸೂಫಿಗಳ ನಡುವೆ ವ್ಯತ್ಯಾಸವಿಲ್ಲ ಎನ್ನಬಹುದು. ಅಷ್ಟೆ ಅಲ್ಲ ಅನುಭಾವಿಗಳು ಮತ್ತು ಸೂಫಿಗಳು ಪರಸ್ಪರ ಪ್ರಭಾವ ಬೀರದಂತೆ ಕಾಣುತ್ತದೆ. ಭಾರತೀಯ ಅನುಭಾವಿಗಳು ಸೂಫಿ ಸಾಧನೆಯನ್ನು ಅರೆಬೀಯದ ಹಾಗೂ ಭಾರತದಲ್ಲೆ ಇರುವ ಸೂಫಿಸಾಧಕರು ಭಾರತೀಯ ಅನುಭಾವಿಕ ಸಾಧನೆಗಳನ್ನು ಮಾಡಿರುವ ನಿದರ್ಶನಗಳು ಸಿಗುತ್ತವೆ. ಬೆಳಕು ಹುಟ್ಟುವ, ಬೆಳಕು ಮುಳುಗುವ ದಿಕ್ಕುಗಳನ್ನು ಆಧರಿಸಿ ಪೂರ್ವಗೋಳಾರ್ಧ, ಪಶ್ಚಿಮ ಗೋಳಾರ್ಧದ ಸಂಸ್ಕೃತಿಗಳು ಅರಳಿದ್ದರೂ ಭೂಮಿ ಗುಂಡಗಿರುವುದು ನಮ್ಮ ಭಾಗ್ಯ. ಅದನ್ನು ಪ್ರದಕ್ಷಿಣೆ ಹಾಕುತ್ತ ಹೋದರೆ ಪೂರ್ವ ಮುಗಿಯುವದೆ ಪಶ್ಚಿಮದಲ್ಲಿ, ಪಶ್ಚಿಮ ಪ್ರಾರಂಭವಾಗುವುದೆ ಪೂರ್ವದಲ್ಲಿ ಎಂಬ ಭೌಗೋಳಿಕ ಸತ್ಯದ ದರ್ಶನವಾಗುತ್ತದೆ. ಮಾನವ ಕುಲಗಳೆಲ್ಲ ಅಷ್ಟೇ ಏಕೆ ಸಕಲ ಚರಾಚರ ವಸ್ತುಗಳ ಸೃಷ್ಠಿಯಲ್ಲಿ ಮೂಲಭೂತವಾಗಿ ಒಂದೇ ದಿವ್ಯ ಶಕ್ತಿಯ ಅನಂತರೂಪಗಳು ಎಂಬ ಅರಿವಿನ ಸೂರ್ಯೋದಯವಾಗುತ್ತದೆ. ಈ ಅರಿವಿನ ಸೂರ್ಯೋದಯವೇ ಅನುಭಾವ, ಅದೇ ಸೂಫಿ ತತ್ವ.

ಮತೀಯ ಧರ್ಮಕ್ಕೆ, ಕರ್ಮಠ ಕಟ್ಟುಪಾಡುಗಳಿಗೆ ಕಟ್ಟುಬೀಳುವ ಮನಸ್ಸುಗಳು ಅವನ್ನೆ ಧರ್ಮ ಎಂದು ಭ್ರಮಿಸುತ್ತವೆ. ಹುಟ್ಟಿನಿಂದಲೆ ಬಾಳು-ಮತ-ಧರ್ಮಗಳಿಗೆ ನೇತು ಹಾಕುವವರು ಅವುಗಳ ಹೆಸರಿನಲ್ಲಿ ಧರ್ಮಯುದ್ಧ, ಮತಾಂತರಗಳನ್ನು ನಡೆಸುವವರೂ ಇದ್ದಾರೆ. ಒಂದೆ ಮತಧರ್ಮದ ಒಳಗೆ ಪ್ರತ್ಯೇಕ ಪಂಗಡಗಳು ಇವೆ. ಆದರೆ ಧರ್ಮದ ಮೂಲ ಉದ್ದೇಶವೆಂದರೆ ಮಾನವ ಕುಲವನ್ನು ಒಗ್ಗುಡಿಸುವುದು. ಅದನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವುದೆ ಆಗಿದೆ ಎಂಬುದು ಸೂಫಿಗಳ ಅನುಭಾವಿಗಳ ನಂಬಿಕೆ. ಜನಸಮುದಾಯಗಳ ಅರಿವನ್ನು ಮತ್ತೆ ಮತ್ತೆ ಸೋಸುತ್ತ ಹೋಗುವುದೆ ಸೂಫಿಗಳ ಅನುಭಾವಿಗಳ ಧರ್ಮವಾಗಿದೆ.

ಸೂಫಿ ಸಾಧಕ ಹಾಗೂ ವಿದ್ವಾಂಸರಾದ ಹಜರತ್‌ ಇನಾಯಕ್‌ಖಾನರ ಮಾತುಗಳಿವು.

ಧರ್ಮ ನಿರಪೇಕ್ಷತಗೆ V/S ಮಹಿಳೆ

ಜಗತ್ತಿನ ಸಕಲ ಸೃಷ್ಟಿಯ ಮೂಲದಲ್ಲಿರುವ ಪರತತ್ವವನ್ನು ಅತ್ಯುಚ್ಚ ಸ್ಥಾನದಲ್ಲಿ ಇರಿಸುತ್ತದೆ. ಧಾರ್ಮಿಕ ಆಧ್ಯಾತ್ಮಿಕ ಸ್ತರಗಳಲ್ಲಿ ಹೆಣ್ಣೂ ಒಬ್ಬ ಸ್ವತಂತ್ರ ವ್ಯಕ್ತಿ ಎಂದಾಗಲಿ ಆತ್ಮವೆಂದಾಗಲಿ ಗುರುತಿಸದೆ ಆಕೆಯನ್ನು ನಿಕೃಷ್ಟ ಪ್ರಾಣಿಯಂತೆ ಕಾಣುವ ಧಾರ್ಮಿಕ ಪರಿಕಲ್ಪನೆಗಳು ಈ ಚರಿತ್ರೆಯ ಇನ್ನೊಂದು ತುದಿಯಾಗಿದೆ.

ಧರ್ಮದ ಜೊತೆ ಹೆಣ್ಣು ಹೊಂದಿರುವ ಸಂಬಂಧವು ಹಲವು ರೀತಿಯಾಗಿ ಹರಡಿಕೊಂಡಿದೆ. ಹೆಣ್ಣನ್ನು ದೈವವಾಗಿಸಿಕೊಂಡ ಪರಿಕಲ್ಪನೆ ಕೂಡ ಗಂಡಿನದೆ ಆಗಿದೆ ಧರ್ಮ, ದೇವರು, ಜಗತ್ತು ಸೃಷ್ಟಿ, ಅದರಲ್ಲಿನ ತನ್ನ ಅಸ್ತಿತ್ವಕ್ಕೆ ಅರ್ಥ-ಮುಂತಾದ ವಿಷಯಗಳಲ್ಲಿ ಕೇವಲ ಹೆಣ್ಣಿನದು ಅಥವಾ ಹೆಣ್ನೇ ಚಿಂತಿಸಿರುವುದು ಆಗಿದೆ. ಇದುವರೆಗಿನ ಧಾರ್ಮಿಕ ಚರಿತ್ರೆ ಬರೆದಿರುವವರಲ್ಲಿ ಪುರುಷರೆ ಹೆಚ್ಚು ಆದ್ದರಿಂದ ಈ ಚರಿತ್ರೆಯ್ಲಿ ಹೆಣ್ಣಿನ ಬಗ್ಗೆ ವ್ಯಕ್ತವಾಗಿರುವ ಭಾವನೆ ಧೋರಣೆ ವಿಚಾರಗಳು ಹೆಣ್ಣಿನ ವಿಷಯದಲ್ಲಿ ಪುರುಷರು ತಳೆದಿದ್ದ ನಿಲುವುಗಳನ್ನು ಸೂಚಿಸುತ್ತವೆ.

ಸಕಲ ಜೀವಿಗಳೂ ಆತ್ಮದ ನೆಲೆಯಿಂದ ಸಮಾನ ಎಂದು ಸಾರಿ ಹೇಳಿದ್ದು ಕೇವಲ ಕೆಲವೇ ಧರ್ಮಗಳು. ಉದಾಹರಣೆಗೆ ಬೌದ್ಧಧರ್ಮ, ವೀರಶೈವ ಧರ್ಮ ಇತ್ಯಾದಿ. ಅವುಗಳಲ್ಲಿ ಸ್ತ್ರೀ ಕೂಡ ಸನ್ಯಾಸವನ್ನು ಆರಿಸಿಕೊಂಡು ಪರುಷನಂತೆ ತನ್ನ ಆಧ್ಯಾತ್ಮಿಕ ಹುಡುಕಾಟದಲ್ಲಿ ತೊಡಗಲು ಅವಕಾಶವಿತ್ತು. ಭಾರತದಲ್ಲಿ ವೇದಗಳ ಕಾಲದಲ್ಲಿ ಅದರಲ್ಲೂ ಋಗ್ವೇದ ಕಾಲದಲ್ಲಿ ಹೆಣ್ಣಿಗೆ ಉನ್ನತ ಸ್ಥಾನವನ್ನು ನೀಡಿತ್ತು. ಹೆಣ್ಣು ಕೂಡ ಯಜ್ಞ ಯಾಗಾದಿಗಳಲ್ಲಿ ಭಾಗವಹಿಸಬಹುದಾಗಿತ್ತು. ಇದಕ್ಕೆ ಉದಾಹರಣೆಯಾಗಿ ಗಾರ್ಗಿ ಮೈತ್ರೇಯಿ ಇವರುಗಳನ್ನು ಕಾಣಬಹುದಾಗಿದೆ. ಅಲ್ಲದೆ, ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ “ಅನುಭವ ಮಂಟಪ”ದಲ್ಲಿ ಅನೇಕ ಸ್ತ್ರೀಯರೂ ಇದ್ದರು ಉದಾಹರಣೆಗೆ ಅಕ್ಕಾಮಹಾದೇವಿಯವರು ತಮ್ಮದೆ ಆದ ವಿಚಾರಗಳನ್ನು ಅನುಭವ ಮಂಟಪದಲ್ಲಿ ಮಂಡಿಸುತ್ತಿದ್ದರು. ಈ ಅನುಭವ ಮಂಟಪದಲ್ಲಿ ಹೆಣ್ಣು ಗಂಡು ಎಂಬ ಭೇದ ಇರಲಿಲ್ಲ. ಇಬ್ಬರಿಗೂ ಸಮಾನ ಅವಕಾಶವಿತ್ತು. ಅವು ಬಹುಮಟ್ಟಿಗೆ ಆ ಯುಗದ ಅಥವಾ ಆಯಾ ಧರ್ಮದ ಸ್ಥಾಪಕರೊ ನಾಯಕರೊ ಪ್ರತಿಪಾದಿಸುತ್ತಿದ್ದಂತ ದಾರ್ಶನಿಕ ನಂಬಿಕೆಗಳೆ ಆಗಿರುತ್ತಿದ್ದವು. ಈ ಬಗೆಯ ಪ್ರಯತ್ನಗಳು ತೀರ ಅಪರೂಪವಾದವು. ಇದನ್ನು ಬಿಟ್ಟರೆ ಉಳಿದಂತೆ ಹೆಣ್ಣಿಗು ಧರ್ಮಕ್ಕೂ ಇರುವ ಸಂಬಂಧವು ಆಯಾ ಧರ್ಮದಲ್ಲಿ ಮದುವೆ, ದಾಮಪತ್ಯ ಜೀವನ. ಕೌಟುಂಬಿಕ ಬದುಕು ಸಾಮಾಜಿಕ ವಲಯ ಮುಂತಾದ ವಿಷಯಗಳಲ್ಲಿ ಸ್ತ್ರೀಯರಿಗಾಗಿ ವಿಧಿಸಲಾದ ನೀತಿನಿಯಮಾವಳಿಗಳಿಂದ ರೂಪುಗೊಂಡಿದೆ. ಈ ನೀತಿ ನಿಯಮಗಳು ಹೆಣ್ಣಿನ ಹುಟ್ಟನ್ನು ಅವಹೇಳನದಿಂದ ಕಾಣುವುದರಿಂದ ಹಿಡಿದು ಆಕೆಯೇ ಮಾನವನ ಹುಟ್ಟಿಗೆ ಆಧಾರ ಎಂದು ಕೊಂಡಾಡುವವರೆಗೂ ಹರಡಿಕೊಂಡಿವೆ.

ಸನ್ಯಾಸ ಪರವಾದ ಧರ್ಮಕ್ಕೂ ಸಾಂಸಾರಿಕ ಜೀವನವನ್ನು ಒಪ್ಪುವ ಧರ್ಮಗಳಿಗೂ ಹೆಣ್ಣಿನ ಬಗ್ಗೆ ಇರುವ ಭಿನ್ನ-ಭಿನ್ನ ದೃಷ್ಟಿಕೋನಗಳು ನಿರ್ದಿಷ್ಟ ಸಮಾಜವೊಂದರಲ್ಲಿ ಪರಸ್ಪರ ವಿರುದ್ಧವಾದ ನಂಬಿಕೆ-ಧೋರಣೆಗಳನ್ನು ಹುಟ್ಟು ಹಾಕಿದ್ದವು ಎಂಬುದನ್ನು ಗಮನಿಸಬೇಕು. ಬೌದ್ಧಧರ್ಮವು ಒಂದು ಶ್ರವಣ ಧರ್ಮ. ಅದು ಹೆಣ್ಣನ್ನು ಧಿಕ್ಕರಿಸುವುದು ಪುರುಷರನ್ನು ಐಹಿಕ ಸುಖಗಳಿಂದ ವಿಮುಖವಾಗಿಸಲೆಂದು. ಆದರೆ ಅದೆ ಧರ್ಮದಲ್ಲಿ ಸ್ತ್ರೀಯರಿಗೂ ಮುಂದೆ ಮೋಕ್ಷದ ದಾರಿ ತೆರೆಯಿತು. ಜಗತ್ತಿನಲ್ಲಿ ವ್ಯಾಪಕವಾಗಿ ಹರಡಿದ ಕ್ರೈಸ್ತಧರ್ಮದಲ್ಲಿ ಸನ್ಯಾಸ ಕೇಂದ್ರಿತ ನೈತಿಕ ದೃಷ್ಟಿಯು ಹೆಣ್ಣನ್ನು ಕಂಡ ಬಗೆಯೆ ಬೇರೆ ವಾಸ್ತವದಲ್ಲಿ. ಆ ಧರ್ಮದ ಅನುಯಾಯಿಗಳಾಗಿ ಅದರ ಪ್ರಸಾರಕ್ಕೆ ದುಡಿದವರಲ್ಲಿ ಸ್ತ್ರೀಯರೆ ಹೆಚ್ಚು. ಈ ಒಳನೋಟವನ್ನು ಗಮನಿಸಿದಾಗ ಧರ್ಮಗಳ ವೈಚಾರಿಕ ಪ್ರಭಾವ ಜನರ ಮೇಲೆ ಹೇಗೆ ಆಗಿರಬಹುದಾದರೂ ಮಾನವನ ಅಂತರಂಗದ ಯಾವುದೋ ಕೊರತೆ ಅವು ನೀಡಿದ ಉಪಶಮನವೆ ಮುಖ್ಯವೆಂದು ಸೃಷ್ಟವಾಗುತ್ತದೆ. ಈ ಉಪಶಮನಕಾರಿ ಅಂಶಗಳಿಗಾಗಿಯೆ ಬಹುಶಃ ಸ್ತ್ರೀಯರು ತಮ್ಮನ್ನು ಅತ್ಯಂತ ನಿಕೃಷ್ಟವಾಗಿ ಕಂಡ ಧರ್ಮಗಳನ್ನು ಕೂಡ ದಿಕ್ಕರಿಸಿದ ನಿದರ್ಶನಗಳಿಲ್ಲ. ಅಲ್ಲದೆ ಧರ್ಮಗಳೆಲ್ಲ ತಮ್ಮ ಒಟ್ಟಾರೆ ಬೆಳವಣಿಗೆಯಲ್ಲಿ ಪಿತೃಪ್ರಧಾನ ವ್ಯವಸ್ಥೆಯ ಉತ್ಪಾದನೆಗಳಾಗಿದ್ದಾಗ, ಸ್ತ್ರೀಯರಿಗೆ ವೈವಾಹಿಕ ಬದುಕಿನ ಆಚೆಗೆ ಬೇರೆ ಯಾವ ವಿಕಾಸದ ಸಾಧ್ಯತೆಗಳೂ ಇರಲಿಲ್ಲ. ಅವರ ಚಿಂತನೆ ಆಧ್ಯಾತ್ಮಿಕ ತುಡಿತಗಳು ಅದೇ ಧರ್ಮದ ಪ್ರಚಲಿತ ಚೌಕಟ್ಟಿನೊಳಗೆ ಮಾತ್ರ ಸಾಧ್ಯವಾದವು ಜಗತ್ತಿನ ಭಕ್ತಿ ಪಂಥ ಅನುಭಾವಿ ಪಂಥಗಳಲ್ಲಿ ಕೂಡ ಇಂಥ ಮಿತಿಯನ್ನು ಕಾಣಬಹುದು.

ಧರ್ಮ ನಿರಪೇಕ್ಷವಾದ ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳ ಬೆಳವಣಿಗೆಯ ಮೂಲಕ ಆಧುನಿಕ ಯುಗದಲ್ಲಿ ಸಮಾನತೆ ಎನ್ನುವುದು. ಅತ್ಯವಶ್ಯಕ ಮಾನವೀಯ ಮೌಲ್ಯ ಎಂಬ ಭಾವನೆಯ ಇಂದಿನ ಚಿಂತನೆಗಳಲ್ಲಿ ಸೇರಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸ್ತ್ರೀ ಮತ್ತು ಪುರುಷರ ಸಾಮಾಜಿಕ ಸ್ಥಾನಮಾನಗಳಿಗೂ ಧರ್ಮಗಳಲ್ಲಿ ಕಾಣುವ ಅವರ ನೆಲೆಗಳಿಗೂ ನಿಕಟ ಸಂಬಂಧವು ಇರುವುದು ಕಂಡುಬರುತ್ತದೆ. ಇದನ್ನು ಆಧುನಿಕ ಚಿಂತಕರು ವಿಶೇಷವಾಗಿ ಮಾನವಶಾಸ್ತ್ರಜ್ಞರು ಮತ್ತು ಮನಃಶಾಸ್ತ್ರಜ್ಞರು ಎತ್ತಿ ತೋರಿಸಿದ್ದಾರೆ ಸಮಾಜದಲ್ಲಿನ ಸ್ತ್ರೀ-ಪುರುಷ ಸ್ಥಾನಮಾನಗಳ ಏರುಪೇರುಗಳಿಗೂ ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ಹೆಣ್ಣು-ಗಂಡು ಸ್ವಭಾವಗಳಲ್ಲಿನ ಏರುಪೇರುಗಳಿಗೂ ಸಂಬಂಧವಿದೆ ಎಂಬುದನ್ನು ಇಂದು ಗುರ್ತಿಸಲು ಸಾಧ್ಯವಾಗುತ್ತದೆ. ಧಾರ್ಮಿಕ ಆಧ್ಯಾತ್ಮಿಕ ನೆಲೆಯಲ್ಲಿ ವ್ಯಕ್ತಿಯ ವೈಯಕ್ತಿಕ ಸಮತೋಲನವು ಆರೋಗ್ಯಕರ ಸಾಮಾಜಿಕ ವ್ಯವಸ್ಥೆಗೆ ಅವಶ್ಯಕವಾಗಿದೆ.

ಇಪ್ಪತ್ತೊಂದನೇ ಶತಮಾನದಲ್ಲಿ ಧರ್ಮ ನಿರಪೇಕ್ಷತೆ

ಹೊಸ ಸಹಸ್ರಮಾನದ ಉದಯವಾಗಿದೆ. ಬಂದಿರುವ ಶತಮಾನದಲ್ಲಿ ಧರ್ಮವು ಎದುರಿಸಲಿರುವ ಹೊಸ ಸವಾಲುಗಳೇನು ಎಂದು ಪರಿಶೀಲಿಸುವುದು ಈವತ್ತಿನ ಒಂದು ಆಸಕ್ತಿದಾಯಕ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ‘ಧರ್ಮ ಮತ್ತು ಶಾಂತಿಯ ಜಾಗತಿಕ ಸಮ್ಮೇಳನ’ (ವರ್ಲ್ಡ್ ಕಾನ್‌ಫರೆನ್ಸ್‌ ಫಾರ್ ರಿಲಿಜಿಯನ್‌ ಅಂಡ್‌ ಪೀಸ್‌ (WCRP) ವೊಂದನ್ನು ನ್ಯೂಯಾರ್ಕಿನ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಸಂಘಟಿಸಿತು. ಇದು ಜೋರ್ಡಾನಿನ ಅಮ್ಮಾನ್‌ನಲ್ಲಿ ೧೯೯೯ನೇ ನವೆಂಬರ್ ೨೫-೨೯ರವರೆಗೆ ನಡೆಯಿತು. ಜಾಗತಿಕ ಶಾಂತಿಯನ್ನು ನೆಲೆಗೊಳಿಸುವಲ್ಲಿ ಧರ್ಮದ ಪಾತ್ರವನ್ನು ನಿರ್ವಚಿಸುವುದು ಈ ಸಮ್ಮೇಳನದ ಉದ್ದೇಶವಾಗಿತ್ತು. ೧೫ ದೇಶಗಳ ಸುಮಾರು ೧೦೦ರಷ್ಟು ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಮೇಲ್ಮಟ್ಟದ ಧಾರ್ಮಿಕ ಮುಂದಾಳುಗಳು ಹಾಗೂ ಧಾರ್ಮಿಕ ಸಮುದಾಯಗಳ ಮುಖ್ಯಸ್ಥರು ಚರ್ಚೆಗಳಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಮುಖಂಡರುಗಳು ಶಾಂತಿ ಸ್ಥಾಪನೆಗಾಗಿ ಅಭಿಲಾಷೆಯನ್ನು ವ್ಯಕ್ತಪಡಿಸಿದರು.

ಬೋಸ್ನಿಯಾ ಹೆರ್ಸ್‌ಗೋವಿನಾದ ಪ್ರಮುಖ ಮುಫ್ತಿಯಾಗಿರುವ ರೈಸುಲ್‌ ಉಲಾಮಾ ಮುಸ್ತಫಾರ್ವಿಕ್‌ ಅವರು ಆಸಕ್ತಿಯುತವಾದ ಕೆಲವು ವಿಚಾರಗಳನ್ನು ಗಮನಕ್ಕೆ ತಂದರು. ರಾಜಕಾರಣ ಮಾಡುವುದನ್ನು ರಾಜಕಾರಣಿಗಳಿಗೆ ಬಿಟ್ಟುಬಿಡುವುದು ಮಹಾ ಅಪಾಯಕಾರಿ. ಹಾಗೆಯೇ ಧಾರ್ಮಿಕ ಸಂಗತಿಗಳನ್ನು ಧಾರ್ಮಿಕ ಸಂಗತಿಗಳನ್ನು ಧಾರ್ಮಿಕ ಪಂಡಿತರ ಕೈಗಳಲ್ಲೇ ಬಿಟ್ಟುಬಿಡವುದು ಕೂಡ ವಿನಾಶಕಾರಿ ಎಂಬುದನ್ನು ಅವರು ಒತ್ತಿ ಹೇಳಿದರು. ವೃತ್ತಿಪರ ರಾಜಕಾರಣಿಗಳು ಹಾಗೂ ವೃತ್ತಿಪರ ಧಾರ್ಮಿಕ ಮುಂದಾಳುಗಳೇ ಸಮಸ್ಯೆಯ ಮೂಲಭೇರುಗಳು ಎಂದು ಹೇಳಿದರು.

ಜಗತ್ತಿನಾದ್ಯಂತ ನಡೆದಿರುವ ಸಂಘರ್ಷಗಳಿಗೆ ಧರ್ಮವೊಂದೇ ಕಾರಣವೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಮುಖ್ಯ. ಬೋಸ್ನಿಯಾ ಕೋಸೋವಾಗಳಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ನಡೆದಿರುವ ಕಲಹಗಳು ಧಾರ್ಮಿಕ ಕಾರಣಗಳಿಗಾಗಿಯೇ ತಲೆದೋರಿವೆಯೇ? ಜೋರ್ಡಾನಿನ ರಾಜಕುಮಾರ ಹಸನ್‌ಬಿನ್‌ ತಲಾಬ್‌ ಅಭಿಪ್ರಾಯಪಡುವಂತೆ ಧರ್ಮವಲ್ಲ, ಬದಲಿಗೆ ರಾಜಕಾರಣವೇ ಇಲ್ಲಿ ಅಪರಾಠಧಿಯಾಗಿದೆ. ಈವತ್ತಿನಲ್ಲಿ ಈ ಜಗತ್ತಿನಲ್ಲಿ ಪರಸ್ಪರ ಸಂಬಂಧಗಳು. ಹಾಗೂ ಪರಸ್ಪರರ ಮೇಲಿನ ಅವಲಂಬನೆ ಹೆಚ್ಚಾಗುತ್ತಾ ಹೋಗುತ್ತದೆ. ಗಡಿರೇಖೆಗಳು ಅರ್ಥಹೀನವಾಗುತ್ತಾ ಹೋಗುತ್ತಿರುವ ಅಥವಾ ಅಸಮಗ್ರಗೊಳ್ಳುತ್ತಾ ಹೋಗುತ್ತಿರುವ ಈವತ್ತಿನ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಜೊತೆಗಾರರಾಗುವುದರತ್ತ ತಮಗೆ ವಿಶ್ವಾಸವಿದೆ ಎಂದು ಹಸನ್‌ ತಲಾಲ್‌ ಹೇಳುತ್ತಾರೆ. ಒಂದೇ ಒಂದು ಅಜೆಂಡಾದೊಂದಿಗೆ ಏಕ ಜಗತ್ತಿನತ್ತ ನಾವು ಸಾಗಿದ್ದೇವೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಅದು ಯಾವುದೆಂದರೆ ಪರಸ್ಪರ ಕಾಳಜಿಗಳನ್ನು, ಹಿತವನ್ನು ಪ್ರತಿಫಲಿಸಲು ನೆರವಾಗಬಲ್ಲಂತಹ ಎಲ್ಲಾ ಜನತೆಗಳ ಎಲ್ಲ ಸಂಸ್ಕೃತಿಗಳನ್ನು ಗಣನೆಗೆ ತೆಗೆದುಕೊಳ್ಳದ, ಒಂದೇ ಒಂದು ಸಂಸ್ಕೃತಿಯ ಮೌಲ್ಯಗಳ ಪ್ರಕಾರ ರೂಪಗೊಳ್ಳುವ ಏಕ ಜಗತ್ತಾಗಿದ್ದು, ಸಂಘರ್ಷಗಳಿಗೆ ಎಡೆಮಾಡಿಕೊಡುತ್ತದೆ. ಇದರ ಪರಿಣಾಮ ಯುದ್ಧಗಳಾಗಿರುತ್ತವೆ. ಆದರೆ ಸಾವಿರಾರು ಸಂಸ್ಕೃತಿಗಳ ಪ್ರಕಾರ ಕಟ್ಟಲ್ಪಟ್ಟಂತಹ ಏಕಜಗತ್ತು – ಈ ಜಗತ್ತಿನಲ್ಲಿ ಸಾಮಾನ್ಯತೆಗಳು ಇದರ ಅಡಿಪಾಯವಾಗಿದ್ದು, ವೈವಿಧ್ಯತೆಗಳು ಮೂಲೆಗಲ್ಲುಗಳಾಗಿರುತ್ತವೆ. ಪರಸ್ಪರ ಸಹಕಾರ ಗುಣಗಳಿಂದ ಕೂಡಿರುತ್ತದೆ. ಇದುವೇ ದೈನಂದಿನ ಸಾಮಾನ್ಯ ಬದುಕಿನ ಆಧಾರವಾಗಿರುತ್ತದೆ. ಪ್ರತಿ ವ್ಯಕ್ತಿ ಹಾಗೂ ಪ್ರತಿ ಸಮುದಾಯ ತಮ್ಮ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಕಂಡುಕೊಳ್ಳಲು ಬಳಸಲು ಸಾಧ್ಯವಾಗುವಂತೆ ಉತ್ತಮ ನಾಳೆಗಳನ್ನು ಕಟ್ಟಲು ಇಂತಹ ಜೊತೆಗೂಡಿದ ಪ್ರಯತ್ನಗಳು ಇಂದು ಅಗತ್ಯವಾಗಿವೆ ಎಂದು ಇಂದಿನ ಪರಿಸ್ಥಿತಿಗೆ ಅತ್ಯಗತ್ಯವಾಗಿರುವಂತಹ ಅಭಿಪ್ರಾಯಗಳನ್ನು ಅವರು ವ್ಯಕ್ತಪಡಿಸಿದರು.

ಹಸನ್‌ ಬನ್‌ ತಲಾಲ್‌ ಅವರ ಅಭಿಪ್ರಾಯಗಳು ಬಹಳ ಮಟ್ಟಿಗೆ ಸತ್ಯವಾಗಿವೆ. ಸಮಸ್ಯೆಗಳು ಎಲ್ಲಿ ಅಡಗಿವೆ ಎಂಬುದನ್ನು ಅವರು ಗುರುತಿಸಿ ಸಂಕ್ಷಿಪ್ತವಾಗಿ ಅದನ್ನು ಹೇಳಿದ್ದಾರೆ. ಪಶ್ಚಿಮದ ರಾಷ್ಟ್ರಗಳಿಗೆ ತಮ್ಮದೇ ಆದ ಅಜೆಂಡಾ ಇದ್ದು, ಅದನ್ನು ಏಷಿಯಾ ಮತ್ತು ಆಫ್ರಿಕಾಗಳ ಜನತೆಗಳ ಮೇಲೆ ಹೇರಲು ಅವು ಹೆಣಗುತ್ತಿವೆ. ಅಯಾಮ ಧಾರ್ಮಿಕ ಸಂಪ್ರಾದಾಯಗಳನ್ನು ಹಾಗೂ ಸಂಸ್ಕೃತಿಗಳನ್ನು ಪರಸ್ಪರ ಗೌರವಿಸುವುದು ಶಾಂತಿಯ ದೃಷ್ಠಿಯಿಂದ ಬಹಳ ಮುಖ್ಯ ಎಂಬುವುದನ್ನು ಸಮ್ಮೇಳನದಲ್ಲಿ ಭಾಗವಹಿಸಿದ್ದವರೆಲ್ಲರೂ ಭಾವಿಸಿದ್ದಾರೆ. ಪಶ್ಚಿಮವು ತನ್ನ ಅಜೆಂಡಾವನ್ನು ಇಡೀ ಜಗತ್ತಿಗೆ ಅನ್ವಯಿಸಲು ನೋಡುವಾಗ ಪಾಶ್ಚಿಮಾತ್ಯ ಪರಮಾಧಿಕಾರವನ್ನು ಎದುರಿಸಲು ಒಸಮಾ ಬಿನ್‌ ಲಾಡೆನ್‌ ನಂತಹವರು ಹುಟ್ಟಿಕೊಳ್ಳುತ್ತಾರೆ. ಲಾಡೆನ್‌ನಂತಹವರು ಕೊಡುವ ಧಾರ್ಮಿಕ ಹೇಳಿಕೆಗಳು ಯುದ್ಧಾಸ್ತ್ರಗಳಷ್ಟೇ ಘೋರವಾದವುಗಳು. ಬೋಸ್ನಿಯಾದ ಮುಸ್ತಫಾ ಸರ್ವಿಕ್‌ ಅವರು ತೀವ್ರವಾದಿಗಳ ಮಾತಿನಲ್ಲಿ ಬಳಕೆಯಲ್ಲಿರುವ “ಪವಿತ್ರ ಯುದ್ಧ”ದಂತಹ ಅಸ್ತ್ರಗಳ ನಿಶ್ಯಸ್ತ್ರೀಕರಣವಾಗಬೇಕು, ‘ಪವಿತ್ರ ಶಾಂತಿ’ಯಂತಹವುಗಳು ಅಲ್ಲಿ ಜಾಗಪಡೆಯಬೇಕು ಎಂದು ಹೇಳುತ್ತಾರೆ.

ಇಸ್ರೇಲಿನ ರಬ್ಬಿ ಡೇವಿಡ್‌ ರೋಸೆನ್‌ರವರ ಪ್ರಕಾರ ನೆರೆ ಹೊರೆಯವರನ್ನು ಪ್ರೀತಿಸಬೇಕೆನ್ನುವುದು ಮುಖ್ಯವೇ ಆಗಿದ್ದರು. ಇದೇ ನೀತಿ ಕೆಲವೆಡೆ ನಕಾರಾತ್ಮಕವಾಗಿ ಬಳಕೆಯಾಗುತ್ತದೆ. ಒಂದು ವೇಳೆ ನನ್ನ ನೆರೆಯವರು ನನ್ನನ್ನು ದ್ವೇಷಿಸಿದರೆ ನಾನು ಅವರನ್ನು ದ್ವೇಷಿಸುತ್ತೇನೆ ಎನ್ನುವಂತಾಗಿದೆ. ಇದು ಮತ್ತೆ ಸಂಘರ್ಷ, ರಕ್ತಪಾತಗಳಿಗೆಡೆಮಾಡಿಕೊಡುತ್ತದೆ. ಮತ್ತೊಬ್ಬರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದಕ್ಕೆ ಬದಲಾಗಿ, ನಮಗಿರುವ ನೋವಿನ ಅನುಭವಗಳಿಗೂ ಮಿಗಿಲಾಗಿ ಪ್ರತೀ ಮಾನವ ಜೀವಿಯೂ ಜನಾಂಗ, ಬಣ್ಣ, ಧಾರ್ಮಿಕ ನಂಬಿಕೆಗಳು, ಲಿಂಗ ಇವೆಲ್ಲವುಗಳನ್ನು ಮೀರಿದ ದೈವಿಕ ಮೌಲ್ಯಗಳಿಂದ ಕೂಡಿದ್ದಾನೆಂಬ ಸತ್ಯವನ್ನು ಮರೆಯಬಾರದು. ಹಾಗೆಯೇ ನಾವು ಪ್ರತಿ ವ್ಯಕ್ತಿಯ ಬದುಕು ಮತ್ತು ಆತ್ಮಗೌರವಗಳಿಗೆ ಆತನ/ಆಕೆಯ ನಡವಳಿಕೆಗಳು ಸರಿಯಾಗಿದೆಯೇ ಇಲ್ಲವೋ ನಮ್ಮ ಕಹಿ ಅನುಭವಗಳಿಗೆ ಹೊರತಾಗಿಯೂ ಗೌರವ ಉಂಟಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು.

ಬಂದಿರುವ ಹೊಸ ಶತಮಾನದಲ್ಲಿ ಧರ್ಮವು ವಹಿಸಿಕೊಳ್ಳಲಿರುವ ಪಾತ್ರ ಎಂಥಹದು? ತಂತ್ರಜ್ಞಾನದ ಬಿರುಸಿನ ಅಭಿವೃದ್ಧಿಯ ಭರದಲ್ಲಿ ಧರ್ಮವು ಬದಿಗೆ ಸರಿಸಲ್ಪಡಲಿದೆಯೇ ಅಥವಾ ಮುಂಬರುವ ವರ್ಷಗಳಲ್ಲಿ ಅದು ಶಾಂತಿ ಸ್ಥಾಪನೆಯ ಮೌಲ್ಯಯುತ ಸಂಪನ್ಮೂಲವಾಗಲಿದೆಯೇ? ಈ ಪ್ರಶ್ನೆಗಳು ಏಳುತ್ತಿವೆ. ಅವುಗಳ ನಡುವೆ ಸಿಕ್ಕಿ ಹಾಕಿಕೊಳ್ಳುತ್ತಿರುವ ನಾವುಗಳು ಅವುಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಧರ್ಮವು ಸಂಘರ್ಷದ ಮೂಲವಲ್ಲ. ಅದು ಶಾಂತಿ ನೆಲೆಸುವಂತೆ ಮಾಡುವ ಮೌಲ್ಯಯುತವಾದ ಸಂಪತ್ತಾಗಿದೆ. ಧಾರ್ಮಿಕ ಅನನ್ಯತೆಗಳ ನಡುವೆ ಕಲಹಗಳು ಏರ್ಪಡುತ್ತಿವೆ. ಧಾರ್ಮಿಕ ನಂಬಿಕೆಗಳಿಗಿಂತಲೂ, ಧಾರ್ಮಿಕ ಅನನ್ಯತೆಗಳೇ ಪ್ರಮುಖವಾಗುತ್ತಿವೆ. ಧಾರ್ಮಿಕ ನಂಬಿಕೆಗಳಿಗಿಂತ ಧಾರ್ಮಿಕ ಅನನ್ಯತೆಗಳು ಸಾಂಸ್ಕೃತಿಕ, ಪ್ರಾದೇಶಿಕ, ಅವಕಾಶಗಳಿಗಾಗಿ ಪೈಪೋಟಿ ನಡೆಸುವಾಗ ಮತ್ತೊಂದರೊಂದಿಗೆ ಘರ್ಷಣೆಯುಂಟಾಗುತ್ತಿದೆ. ಹಾಗೆಯೇ ನಿರ್ದಿಷ್ಟತೆಗೆ ಪ್ರಾಮುಖ್ಯತೆ ನೀಡುತ್ತಿದ್ದ ಧಾರ್ಮಿಕ ಅನನ್ಯತೆಗಳು ಬಹಳಷ್ಟು ಸಾರಿ ಇತರ ಸಾಂಸ್ಕೃತಿಕ ಅನನ್ಯತೆಗಳಿಂದ ಪೈಪೋಟಿ ಎದುರಿಸುತ್ತವೆ. ರಾಜಕೀಯ ಅಥವಾ ಸಾಂಸ್ಕೃತಿಕ ಪರಮಾಧಿಕಾರಕ್ಕಾಗಿ ನಡೆಯುವ ಯುದ್ಧಗಳನ್ನು ಧಾರ್ಮಿಕ ಅನನ್ಯತೆಗಳನ್ನು ಸಮರ್ಥಿಸಿಕೊಳ್ಳುವುದರ ಮೂಲಕ ಹೋರಾಡಲಾಗುತ್ತದೆ. ಜಾಗತೀಕರಣದ ಹಿನ್ನೆಲೆಯಲ್ಲಿ ಈ ಸಾಧ್ಯತೆಗಳು ಅತಿಯಾಗಿವೆ. ಇತರ ಎಲ್ಲಾ ಸಂಸ್ಕೃತಿಗಳನ್ನು ಜಾಗತೀಕರಣವು ಒಂದೇ ಕಟ್ಟಿನಲ್ಲಿ ಕಟ್ಟಿಬೀಸಾಕುತ್ತಿವೆ. ಪಾಶ್ಚಿಮಾತ್ಯ ಜಾತ್ಯತೀತ ಹಾಗೂ ಉಪಭೋಗಿ ಮೌಲ್ಯಗಳನ್ನು ತಮ್ಮ ಸಂಸ್ಕೃತಿ ಪರಂಪರೆಗಳಲ್ಲಿ ಸಮೃದ್ಧರಾಗಿರುವ ಆದರೆ ಪಾಶ್ಚತ್ಯ ಜಗತ್ತಿನ ಮುಂದೆ ತಾವು ಎಲ್ಲವನ್ನು ಕಳೆದುಕೊಮಡು ನಿರ್ಗತಿಕರಾಗಿ ನಿಂತಿರುವವರು ಎಂಬ ಪ್ರಜ್ಞೆ ಹೊಂದಿರುವ ಏಷಿಯಾ ಹಾಗೂ ಆಫ್ರಿಕಾದ ದೇಶಗಳ ಜನರ ಮೇಲೆ ಹೇರುತ್ತಾ, ಅವರನ್ನು ತಮ್ಮ ತಮ್ಮ ಅಸ್ತಿತ್ವದ ಅಂಚಿಗೆ ತಳ್ಳಿದೆ.

ಅಸ್ತಿತ್ವದ ಅಂಚಿಗೆ ದೂಡಲ್ಪಟ್ಟ ಈ ಪ್ರಜ್ಞೆ ಹಾಗೂ ತೀವ್ರವಾದ ಶೋಷಿತ ಪ್ರಜ್ಞೆಗಳೇ ಹಿಂಸಾತ್ಮಕ ಘರ್ಷಣೆಗಳು ಈ ಪ್ರದೇಶಗಳಲ್ಲಿ ಭುಗಿಲೇಳಲು ಕಾರಣವಾಗಿವೆ. ಈ ಅಸಮತೋಲನವನ್ನು ಸರಿಪಡಿಸದಿದ್ದರೆ ಅರ್ಥವತ್ತಾದ ಸಹಬಾಳ್ವೆಯ ಬಗ್ಗೆ ಭರವಸೆಯಿಡುವುದು ಸಾಧ್ಯವಾಗದು. ಈವತ್ತಿನ ಜಗತ್ತು ಮೂಲಭೂತವಾಗಿ ಬಹುಮುಖೀ ನಡವಳಿಕೆಯಿಂದ ಕೂಡಿದೆ ಎಂಬುದನ್ನು ಮರೆಯಬಾರದು. ಬಹುವೇಗದೆ ಸಾರಿಗೆ ವ್ಯವಸ್ಥೆಯು ದೇಶದ ಒಳ ಹೊರಗೆ ಜನಸಮೂಹಗಳ ಅತಿಹೆಚ್ಚಿನ ವಲಸೆಗೆ ಕಾರಣವಾಗಿದೆ. ಹೆಚ್ಚಿನ ಜನಸಮೂಹಗಳು ಉತ್ತಮ ಭವಿಷ್ಯವನ್ನು ಅರಸಿ ಪಾಶ್ಚಾತ್ಯ ದೇಶಗಳಿಗೆ ವಲಸೆ ಹೋಗುತ್ತಿವೆ. ಈ ವಲಸಿಗರು ಉದ್ಯೋಗಗಳಿಗಾಗಿ ಸ್ಥಳೀಯ ಜನರೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಈ ಹೋರಾಟಗಳು ಬಹಳಷ್ಟು ಸಾರಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅನನ್ಯತೆಗಳ ನಡುವೆ ನಡೆಯುತ್ತವೆ. ಹೀಗೆ ಜಾಗತೀಕರಣ ಒಂದೆಡೆಯಾದರೆ ಸಾಮೂಹಿಕ ವಲಸೆ ಮತ್ತೊಂದೆಡೆ ಇದ್ದು, ಏಷಿಯಾ ಮತ್ತು ಆಫ್ರಿಕಾದ ದೇಶಗಳಲ್ಲಿ ಹಾಗೂ ಪಾಶ್ಚಾತ್ಯ ದೇಶಗಳಲ್ಲೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಘರ್ಷಣೆಯ ಬೆಂಕಿಗೆ ತುಪ್ಪ ಸುರಿಯುತ್ತವೆ.

ಮುಂಬರುವ ದಿನಗಳಲ್ಲಿ ನಾವು ೨೧ನೆಯ ಶತಮಾನಕ್ಕೆ ಪ್ರವೇಶಿಸುತ್ತಿರುವಂತೆ ಈ ಪ್ರಕ್ರಿಯೆ ತೀವ್ರಗೊಂಡು ಧಾರ್ಮಿಕ ಸಾಂಸ್ಕೃತಿಕ ಘರ್ಷಣೆಗಳು ಮೇರೆ ಮೀರಲಿವೆ. ಈ ಘರ್ಷಣೆಗಳು ಎಷ್ಟು ಹೆಚ್ಚಾಗುತ್ತವೋ ಅಷ್ಟರಮಟ್ಟಿಗಿನ ಸಹ ಅಸ್ತಿತ್ವದ ಅವಕಾಶವೂ ಉಂಟಾಗುತ್ತದೆ. ನ್ಯಾಯಯುತ ಸಮಾಜವನ್ನು ಕಟ್ಟಲು ಪ್ರಾಮಾಣಿಕ ಪ್ರಯತ್ನಗಳಿಲ್ಲದೆ ಹೋದರೆ ಈ ಸಹಸ್ತಿತ್ವ ಕಷ್ಟಸಾಧ್ಯ. ಈ ಕಾರಣಗಳಿಗಾಗಿಯೇ ಧರ್ಮವು ನ್ಯಾಯ ಮತ್ತು ಶಾಂತಿಯ ಮೂಲ ಸೆಲೆಯಾಗುವುದು ಮುಖ್ಯವಾಗುತ್ತದೆ. ಧಾರ್ಮಿಕ ಸಂಪ್ರದಾಯಗಳಿಗಿಂತ ಹೆಚ್ಚಾಗಿ ಧಾರ್ಮಿಕ ಮೌಲ್ಯಗಳ ಸಮರ್ಥನೆಯಾಗುವ ಹಾಗಾದಲ್ಲಿ ನ್ಯಾಯಯುತವಾದ ಹಾಗೂ ಶಾಂತಿಯುತವಾದ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ಪ್ರತಿಯೊಂದು ಧರ್ಮದ ಕೇಂದ್ರದಲ್ಲಿರುವ ಮೌಲ್ಯವು ಪರಸ್ಪರ ಪೂರಕವಾಗಿವೆಯೇ ಹೊರತು ಪರಸ್ಪರ ವೈರುಧ್ಯಗಳಿಂದ ಕೂಡಿಲ್ಲ. ಹಿಂದೂ ಹಾಗೂ ಜೈನ ಧರ್ಮಗಳು ಅಹಿಂಸೆಯನ್ನು ಎತ್ತಿ ಹಿಡಿದರೆ ಬೌದ್ಧ ಧರ್ಮವು ಅನುಕಂಪಕ್ಕೆ ಒತ್ತು ನೀಡುತ್ತದೆ. ಕ್ರೈಸ್ತ ಧರ್ಮ ಪ್ರೇಮಕ್ಕೆ ಒತ್ತು ನೀಡಿದರೆ, ಇಸ್ಲಾಂ ಧರ್ಮ ನ್ಯಾಯ ಮತ್ತು ಸಮಾನತೆಗೆ ಒತ್ತು ನೀಡುತ್ತದೆ. ಆಯಾ ಧರ್ಮಗಳ ಸಾರವಾಗಿರುವ ಮೌಲ್ಯಗಳು ಬಹು ಅರ್ಥವತ್ತಾದ ಹಾಗೂ ಶಾಂತಿಯುತ ಸಮಾಜದ ಬಹುಮುಖ್ಯ ಮೂಲ ಸೆಲೆಗಳಾಗಿರುತ್ತವೆ.

ಆದರೆ ಇವೆಲ್ಲವುಗಳಿಗಿಂತ ಹೆಚ್ಚಾಗಿ ಮುಂಬರುವ ದಿನಗಳಲ್ಲಿ ಧರ್ಮವು ಬಹುಮುಖ್ಯವಾದ ಕೆಲವು ಸವಾಲುಗಳನ್ನು ಎದುರಿಸಲಿದೆ. ಈ ಸವಾಲುಗಳು ಈಗಾಗಲೇ ನಮ್ಮ ಮುಂದಿವೆ. ಬಹು ದೊಡ್ಡದಾದ ಒಂದು ಸವಾಲೆಂದರೆ ಲಿಂಗ ಸಮಾನತೆ ಮುಂದುವರೆದ ಪಾಶ್ಚಿಮಾತ್ಯ ಸಮಾಜದಲ್ಲಾಗಲಿ, ಸಾಂಪ್ರದಾಯಕವಾದ ಏಷಿಯನ್‌ ಆಫ್ರಿಕನ್‌ ಸಮಾಜಗಳಲ್ಲಾಗಲಿ, ಒಂದೇ ಒಂದು, ಲಿಂಗ ಸಮಾನ ಸಮಾಜವಿಲ್ಲ. ದುರದೃಷ್ಟವಶಾತ್‌ ಈ ಧರ್ಮ ಹಾಗೂ ಶಾಂತಿಯ ಜಾಗತಿಕ ಸಮ್ಮೇಳನ ವರ್ಲ್ಡ್ ಕಾನ್‌ಫರೆನ್ಸ್‌ ಫಾರ್ ರಿಲಿಜಿಯನ್‌ ಅಂಡ್‌ ಪೀಸ್‌ (WCRP) ಕೂಡ ಈ ಪ್ರಶ್ನೆಯನ್ನು ಸಾಕಷ್ಟು ಗಂಭೀರವಾಗಿ ತನ್ನ ಮುಂದಿರಿಸಿಕೊಂಡಿರಲಿಲ್ಲ. ಕೆಲವರು ಈ ವಿಚಾರವನ್ನು ಉಲ್ಲೇಖಿಸಿದರೂ ಕೂಡ ಅದು ಹಾಗೆಯೇ ಹಾದುಹೋಯಿತು ಮಾತ್ರ. ಈ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮಹಿಳೆಯರಿಗಾಗಿ ಹೇಳಿಕೊಳ್ಳುವಂತಹ ಪ್ರಮುಖ ಪಾತ್ರವಹಿಸುವ ಅವಕಾಶ ಕೂಡ ಅಲ್ಲಿ ಇರಲಿಲ್ಲ. ಬಂದಿರುವ ಹೊಸ ಶತಮಾನದಲ್ಲಿ ಲಿಂಗಸಮಾನತೆಯು ಬಹಳ ಮೂಲಭೂತ ಪ್ರಶ್ನೆಯಾಗಿ ಮುಂದಕ್ಕೆ ಬರುತ್ತಿದೆ. ಈ ಪ್ರಶ್ನೆಯನ್ನು ಕೈಗೆತ್ತಿಕೊಳ್ಳದೆ ಒಂದು ಸಮಾನ ಸಮಾಜವನ್ನು ಕಟ್ಟಲು, ಅದರಲ್ಲೂ, ಶಾಂತಿಯುತ ಸಮಾಜವನ್ನು ಕಟ್ಟಲು ಸಾಧ್ಯವೇ ಇಲ್ಲ.