ನಿಶ್ಚಿತವಾದ ಕಾರ್ಯಕ್ರಮದ ಪ್ರಕಾರ ಈ ದಿನ ಜಗೋರ್ಸ್ಕ್ ಎಂಬ ಊರಿಗೆ ಹೋಗಬೇಕು; ನಿನ್ನೆಯ ದಿನದ ಹಾಗೆ ಕಾರು ಬರದಿದ್ದರೆ ಇವತ್ತಿನ ಕಾರ್ಯಕ್ರಮ ಕೂಡಾ ತಲೆಕೆಳಗು ಅಂದುಕೊಂಡಿದ್ದೆ. ಹಾಗೇನೂ ಆಗಲಿಲ್ಲ. ಹತ್ತು ಗಂಟೆಗೆ ಕಾರು ಬಂತು. ವೊಲೋಜನೂ ಬಂದ. ‘ಮಾಸ್ಕೋದಲ್ಲಿ ನೀವು ಎರಡು ದಿನ ಹೆಚ್ಚಿಗೆ ಇರಬೇಕಲ್ಲ; ಆ ಬಗ್ಗೆ ನಿಮಗೆ ವೀಸಾ ಕೊಡಿಸಲು ನಾಳೆ ನಾನು ಏರ್ಪಾಡು ಮಾಡುತ್ತೇನೆ’ – ಎಂದ.

ಇಡೀ ದಿನ ಮಳೆ; ಛಳಿ. ಶೀತ ಆರು ಡಿಗ್ರಿ ಸೆಂಟಿಗ್ರೇಡ್‌ಗೆ ಇಳಿದಿತ್ತು. ಮುಚ್ಚಿದ ಕಾರಲ್ಲಿ ಬೆಚ್ಚನೆ ಪ್ರಯಾಣ. ಜಗೋರ್ಸ್ಕ್‌ಗೆ ಹೊರಟೆವು.

ಮಾಸ್ಕೋದಿಂದ ಜಗೋರ್ಸ್ಕ್ ನಲವತ್ತನಾಲ್ಕು ಮೈಲಿ ದೂರದಲ್ಲಿದೆ. ಇಲ್ಲಿ ಮುಖ್ಯವಾಗಿ ಕ್ರೈಸ್ತ ಮಠ ಇದೆ; ಹಲವು ಕೆಥೆಡ್ರಲ್‌ಗಳೂ, ಚರ್ಚುಗಳೂ ಇವೆ. ಮಾಸ್ಕೋದಿಂದ, ಈ ಊರಿಗೆ ಹೋಗುವ ದಾರಿಯುದ್ದಕ್ಕೂ ದಟ್ಟವಾದ ಕಾಡು; ಹಳ್ಳಿಗಳು, ವಿಸ್ತಾರವಾದ ಹೊಲಗಳು. ಜಗೋರ್ಸ್ಕ್‌ನ ದೇವ ಮಂದಿರಗಳ ಎತ್ತರವಾದ ಗೋಪುರಗಳು ದೂರದಿಂದಲೇ ಕಾಣುತ್ತವೆ. ಈ ಮಾನಾಸ್ಟ್ರಿಯ ಸುತ್ತ ನಲವತ್ತು ಅಡಿ ಎತ್ತರದ ಕೋಟೆಯಿದೆ. ಹದಿನೈದನೆಯ ಶತಮಾನದಿಂದ ಹದಿನೇಳನೆ ಶತಮಾನದವರೆಗಿನ ಅವಧಿಯ ರಷ್ಯನ್ ಸಂಸ್ಕೃತಿಯನ್ನು ಈ ಊರು ಪ್ರತಿನಿಧಿಸುತ್ತದೆ.

ಹನ್ನೊಂದೂವರೆಗೆ, ಎತ್ತರವಾದ ಪ್ರಾಕಾರವನ್ನು ದಾಟಿ ಒಳಗೆ ಹೋದೊಡನೆಯೇ, ಈ ಮಠಗಳಿಗೆ ಸಂಬಂಧಪಟ್ಟ ಮುಖ್ಯ ಪಾದ್ರಿಯೊಬ್ಬರು ನಮ್ಮನ್ನು ಸ್ವಾಗತಿಸಿ ಕರೆದುಕೊಂಡು ಹೋದರು. ಕೆಂಪು ಗಡ್ಡದ, ಕಂದು ಬಣ್ಣದ ಕಣ್ಣಿನ, ಕಪ್ಪು ನಿಲುವಂಗಿಯ ಪಾದ್ರಿ ನಮ್ಮನ್ನು ಪ್ರಾರ್ಥನಾಮಂದಿರವೊಂದಕ್ಕೆ ಕರೆದೊಯ್ದರು. ಒಳಗೆ ಭಾನುವಾರದ ಆರಾಧನೆ ನಡೆದಿತ್ತು. ಕೆಥೆಡ್ರಲ್ಲಿನ ತುಂಬ ಸಾವಿರಾರು ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. ವಿಶೇಷ ರೀತಿಯ ನಿಲುವಂಗಿಯನ್ನು ತೊಟ್ಟ, ಮುತ್ತುಗಳಿಂದ ಹೆಣೆದ ಟೊಪ್ಪಿಗೆಯನ್ನು ಹಾಕಿಕೊಂಡ ಪಾದ್ರಿಗಳು ರಷ್ಯನ್ ಭಾಷೆಯಲ್ಲಿ ಏನೇನೋ ಮಂತ್ರಗಳನ್ನು ಹೇಳುತ್ತಿದ್ದರು. ಮೋಂಬತ್ತಿಗಳ ಆರತಿಯಾದ ಮೇಲೆ ಪ್ರಧಾನ ಪಾದ್ರಿ ಪಂಚಪಾತ್ರೆಯಲ್ಲಿ ತೀರ್ಥವನ್ನು ತಂದರು. ಜನರು ಒಬೊಬ್ಬರೆ ಮುಂದೆ ಬಂದು ಬಾಯಿಗೆ ತೀರ್ಥವನ್ನು ಹಾಕಿಸಿಕೊಂಡರು. ಅನಂತರ ಮತ್ತೆ  ಸಾಮೂಹಿಕ ಗೀತೆ ಷುರುವಾಯಿತು. ಕೆಥೆಡ್ರಲ್‌ನ ತುಂಬ  ಅವರ ಹಾಡು ಮೊರೆಯಿತು. ಅತ್ಯಂತ ಎತ್ತರವಾದ ಗೋಡೆಗಳ ತುಂಬ ಕ್ರಿಸ್ತನ ಜೀವನದ ಪಟಗಳನ್ನು ಚಿತ್ರಿಸಲಾಗಿತ್ತು. ಕೆಳಗೆ ವೇದಿಕೆ, ಅದರಾಚೆಯ ಗರ್ಭಗುಡಿಯಂಥ ಸ್ಥಳದಲ್ಲಿ ಪಾತ್ರೆಗಳು, ಪೂಜಾಸಾಮಗ್ರಿಗಳು ಮೋಂಬತ್ತಿಯ ಬೆಳಕಿನಲ್ಲಿ ಥಳಥಳಿಸುತ್ತಿದ್ದವು.

ನನಗೆ ಈ ದೃಶ್ಯವನ್ನು ನೋಡಿ ಆಶ್ಚರ್ಯವಾಯಿತು. ಈ ಕಮ್ಯೂನಿಸ್ಟ್ ರಾಷ್ಟ್ರದಲ್ಲಿ, ಅದೂ ಮಾಸ್ಕೋಗೆ ಕೇವಲ ೪೪ ಮೈಲಿ ದೂರದಲ್ಲಿ ಇಂಥದೊಂದು ಧಾರ್ಮಿಕ ವಾತಾವರಣ ಹೇಗೆ ಉಳಿದುಕೊಂಡಿದೆ ? ಚರ್ಚುಗಳನ್ನೆಲ್ಲಾ ಮಾಸ್ಕೋದಲ್ಲಿ ಪ್ರದರ್ಶನಾಲಯಗಳನ್ನಾಗಿ ಮಾಡಿರುವಾಗ, ಸರ್ಕಾರ ಇದೊಂದು ಸ್ಥಳವನ್ನು ಹೀಗೆ ಉಳಿಸಿರುವುದರಲ್ಲಿ ಅರ್ಥವೇನು? ಬಹುಶಃ ಇದೂ ಸರ್ಕಾರ ಉಳಿಸಿಕೊಂಡಿರುವ ಧಾರ್ಮಿಕ ಪ್ರದರ್ಶನಾಲಯವೊ ! ಪ್ರಾರ್ಥನೆಗೆ ನಿಂತ ಸಾವಿರಾರು ಜನದ ಮುಖ ನೋಡಿದೆ. ಎಲ್ಲಾ ಈ ಹಳ್ಳಿಗಾಡಿನವರು; ಬಹುಮಟ್ಟಿಗೆ ವಯಸ್ಸಾದವರು. ಈ ವಯಸ್ಸಾದ ಜನ ಇಷ್ಟರಲ್ಲೆ ಸತ್ತುಹೋದ ಮೇಲೆ, ಈ ಧರ್ಮಶ್ರದ್ಧೆ ತಾನಾಗೇ ಹೋಗುತ್ತದೆ. ಹೀಗಿರುವಾಗ ನಾವೇಕೆ ಈ ಹಳೆಯ ತಲೆಮಾರಿನ ಜನದ ಶ್ರದ್ಧೆಯನ್ನು ಕದಲಿಸಬೇಕು ಎಂಬ ಧೋರಣೆಯಿಂದ ಸರ್ಕಾರ ಈ ಸಂಸ್ಥೆಯನ್ನು ಉಳಿಸಿದೆಯೆ ?

ಪಾದ್ರಿ ಮಹಾಶಯ ನಮ್ಮನ್ನು ಈ ಪ್ರಾರ್ಥನಾ ಮಂದಿರದಿಂದ ಹೊರಗೆ ಕರೆದುಕೊಂಡು ಹೋಗಿ, ಬೇರೆಬೇರೆಯ ಭವನಗಳನ್ನು ತೋರಿಸಿದ. ಈ ಆವರಣದಲ್ಲಿ ಪಾದ್ರಿ ನಮ್ಮೊಡನೆ ಹೋಗುತ್ತಿದ್ದಾಗ ಸಂದರ್ಶಕರಾಗಿ ಬಂದ ನಾಗರಿಕಜನ, ಈ ಪಾದ್ರಿಯನ್ನು ಅಪರೂಪದ ಪ್ರಾಣಿ ಎಂಬಂತೆ ನಿಂತು ನೋಡುತ್ತಿದ್ದರು; ಕೆಲವರು ತರುಣರು ಅವರ ಫೋಟೋ ತೆಗೆದುಕೊಂಡರು. ಪಾದ್ರಿಯನ್ನು ನಾನು ಕೇಳಿದೆ : ‘ನಿಮ್ಮ ದೇಶದಲ್ಲಿ ಇಂಥ ಚರ್ಚುಗಳು, ಧಾರ್ಮಿಕ ಸಂಸ್ಥೆಗಳು ಎಷ್ಟಿವೆ’ ಎಂದು ಆತ ‘ನನಗೆ ಸರಿಯಾಗಿ ಗೊತ್ತಿಲ್ಲ ; ಆದರೆ, ಈ ದೇಶದ ಧಾರ್ಮಿಕ ಸಂಸ್ಥೆಗಳಿಗೆ ಮುಖ್ಯಸ್ಥರು  ಮಾಸ್ಕೋದಲ್ಲಿದ್ದಾರೆ. ಅವರು ಆಗಾಗ ಇಲ್ಲಿಗೆ ಬರುತ್ತಾರೆ’ ಎಂದ. ಆತ ಬಂದಾಗ ಉಳಿದುಕೊಳ್ಳುವಂತಹ ಮಹಲು, ಅದರಲ್ಲಿ ಅಳವಡಿಸಿರುವ ಪೀಠೋಪಕರಣಗಳು ರಾಜಗುರುವಿಗೆ ಯೋಗ್ಯವಾದವುಗಳಾಗಿವೆ. ಆದರೆ ರಾಜರಿಲ್ಲದ ಈ ಕಾಲದಲ್ಲೂ ಅಂಥ ‘ರಾಜಗುರು’ ಒಬ್ಬ ಇರುವನೆಂಬ ಸಂಗತಿ ವಿಲಕ್ಷಣವಾದದ್ದು.

ಮತ್ತೆ ಆತ ಇನ್ನೊಂದು ಚರ್ಚಿಗೆ ಕರೆದೊಯ್ದ. ಇಲ್ಲಿ ಇಡೀ ದಿನ ಆರಾಧನೆಗೆ ಅವಕಾಶವಿದೆ ಎಂದ. ಅನಂತರ ತನ್ನ ನಿವಾಸಕ್ಕೆ ಕರೆದುಕೊಂಡು ಹೋಗಿ, ಈ ಸಂಸ್ಥೆಯ ಬಗೆಗೆ ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ ಎಂದು ಪುಸ್ತಕ ಒಂದನ್ನಿತ್ತ. ಆಗಲೇ ಚರ್ಚಿನ ದೊಡ್ಡ ಗಂಟೆಗಳ ರವ ಮಧ್ಯಾಹ್ನದ ಆಕಾಶವನ್ನು ತುಂಬುತ್ತಿತ್ತು; ಸಾಮೂಹಿಕ ಪ್ರಾರ್ಥನೆಯ ಸ್ವರ ಅಲೆಯಲೆಯಾಗಿ ತೇಲಿ ಬರುತ್ತಿತ್ತು.

ಈಗ ನಾವು ‘ಅಕ್ಯಾಡೆಮಿ’ಗೆ ಹೋಗೋಣ ಎಂದ. ಈ ಅಕ್ಯಾಡೆಮಿ ಪಾದ್ರಿಗಳನ್ನು ತಯಾರುಮಾಡುವ ಸ್ಥಳ. ಕ್ರೈಸ್ತಧರ್ಮದ ಇತಿಹಾಸವನ್ನೂ, ಕ್ರೈಸ್ತ ಧಾರ್ಮಿಕ ತತ್ವಗಳನ್ನೂ ಬೋಧಿಸುವ ಸಂಸ್ಥೆ ಇದು. ಇಲ್ಲಿ ಇಡೀ ಚರ್ಚುಗಳ ಇತಿಹಾಸಕ್ಕೆ ಸಂಬಂಧಿಸಿದ ಮ್ಯೂಸಿಯಂ ಕೂಡಾ ಇದೆ. ಈ ದೇಶದಲ್ಲಿ ಧರ್ಮದ ಬಗ್ಗೆ ಸಾಕಷ್ಟು ಅಪಪ್ರಚಾರ ನಡೆದಿರುವಾಗ, ಧಾರ್ಮಿಕದೃಷ್ಟಿ ಕ್ರಾಂತಿಗೆ ವಿರೋಧಿಯಾದದ್ದೆಂದು ಮೂಲೋತ್ಪಾಟನ ಮಾಡುತ್ತಿರುವಾಗ, ಈ ಸ್ಥಳದಲ್ಲಿ ಕ್ರೈಸ್ತ ಧಾರ್ಮಿಕ ಇತಿಹಾಸದ ಶಿಕ್ಷಣ ಕೊಟ್ಟು, ಪಾದ್ರಿಗಳನ್ನು ತಯಾರುಮಾಡಿ ಏನು ಮಾಡುತ್ತಾರೆ ಎಂಬ ವಿಸ್ಮಯ ನನ್ನನ್ನು ಕಾಡಿತು. ಒಂದು ಗಂಟೆಯ ಕಾಲ ಇದನ್ನೆಲ್ಲ ತೋರಿಸಿ ಅಕ್ಯಾಡೆಮಿಯ ಡೈರೆಕ್ಟರ ಕೋಣೆಗೆ ನಮ್ಮನ್ನು ತಂದುಬಿಡಲಾಯಿತು.

ಡೈರೆಕ್ಟರ್ ಬಿಳಿಯುಡುಪಿನ ಮತ್ತೊಬ್ಬ ಪಾದ್ರಿ. ಎದೆಯ ಮೇಲೆ ಬೆಳ್ಳಿಯ ಶಿಲುಬೆಯ ಕೊರಳ ಹಾರ. ನಮ್ಮನ್ನು ಬರಮಾಡಿಕೊಂಡು, ನಮ್ಮ ಉಪಹಾರಕ್ಕೆ ವ್ಯವಸ್ಥೆ ಮಾಡಿದ್ದ. ಸೌತೆಕಾಯಿ,  ಬ್ರೆಡ್ಡು,  ಟೊಮ್ಯಾಟೋ  ಹಣ್ಣು ನನ್ನ ಪಾಲಿಗಾಯಿತು. ‘ನೀವು ಬರುತ್ತೀರೆಂದು ನಿನ್ನೆಯೆ ನನಗೆ ಮಾಸ್ಕೋದಿಂದ ಸುದ್ದಿ ಬಂದಿತ್ತು’ ಎಂದ. ಇದು ಪೂರ್ವ ನಿಯೋಜಿತ ಏರ್ಪಾಡು. ಮಂತ್ರಿ ಶಾಖೆಯವರು ಮೊದಲೆ ನಮ್ಮ ಬರವನ್ನು ಇಲ್ಲಿಗೆ ತಿಳಿಸಿದ ಕಾರಣದಿಂದ, ನಮಗೆ ಇಷ್ಟು ಉಪಚಾರ-ಎಂದು ಅರ್ಥವಾಯಿತು. ಎಂದರೆ ವಿದೇಶದಿಂದ ಬಂದವರಿಗೆ, ಸರ್ಕಾರದವರೆ ಆಸಕ್ತಿವಹಿಸಿ ಈ ಒಂದು ಸ್ಥಳವನ್ನು ತೋರಿಸಲು ಏರ್ಪಾಡು ಮಾಡಿರುತ್ತಾರೆಂದು, ಹಿಂದಿನಿಂದ ನನಗೆ ತಿಳಿಯಿತು. ಇದರರ್ಥ, ರಷ್ಯಾದಲ್ಲಿರುವ ಕಮ್ಯುನಿಸಂ ಧರ್ಮಕ್ಕೆ ವಿರೋಧಿ ಯಾದುದೆಂಬ ಭಾವನೆ ಸರಿಯಲ್ಲ; ನೋಡಿ, ನಾವು ಚರ್ಚುಗಳನ್ನು, ಧಾರ್ಮಿಕ ಸಂಸ್ಥೆಗಳನ್ನು ಹೇಗೆ ಉಳಿಸಿಕೊಂಡಿದ್ದೇವೆ ಎಂಬುದನ್ನು ಪ್ರದರ್ಶಿಸುವ ಮಾದರಿಯನ್ನಾಗಿ ಈ ಸ್ಥಳವನ್ನು ಉಳಿಸಿಕೊಂಡಿದ್ದಾರೆಂಬುದು ಖಚಿತವಾಯಿತು.

ಡೈರೆಕ್ಟರ್ ಜೊತೆ ಅದೂ ಇದೂ ಮಾತನಾಡುವಾಗ, – ‘ಈಗ ನಿಮ್ಮ ರಾಷ್ಟ್ರದಲ್ಲಿ ಧಾರ್ಮಿಕ ವಿಚಾರಗಳಲ್ಲಿ ಜನಕ್ಕೆ ಆಸಕ್ತಿ ಕುಂದುತ್ತಿರುವಾಗ ನೀವು ಇಲ್ಲಿ  ಶಿಕ್ಷಣ ಕೊಟ್ಟು ಪಾದ್ರಿಗಳನ್ನು ತಯಾರು ಮಾಡಿ ಏನು ಪ್ರಯೋಜನ ?’ – ಎಂದೆ. ಪ್ರಶ್ನೆ ಅನಿರೀಕ್ಷಿತವಾಗಿತ್ತೇನೋ. ‘ನಿಜ, ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಕುಂದುತ್ತಿದೆ ಎಂಬುದೇನೋ ನಿಜ; ಆದರೆ ಧರ್ಮವನ್ನು ನಾವೇನೂ ಪ್ರಸಾರ ಮಾಡುವ ಉದ್ದೇಶ ನಮಗಿಲ್ಲ. ಅಲ್ಲದೆ ಧಾರ್ಮಿಕ ವಿಚಾರಗಳನ್ನು ಶೈಕ್ಷಣಿಕ ದೃಷ್ಟಿಯಿಂದ ಅಭ್ಯಾಸ ಮಾಡುವುದು ತಪ್ಪೇನಲ್ಲವಲ್ಲ’ ಎಂದರು. ‘ ಈ ನಿಮ್ಮ ಮಾನಾಸ್ಟ್ರಿಗೆ, ಹಿಂದೆ ಬೇಕಾದಷ್ಟು ಆಸ್ತಿ ಇದ್ದಿರಬೇಕು. ಕ್ರಾಂತಿಯಾದ ನಂತರ ಅದೆಲ್ಲ ನಿಮ್ಮ ಸಂಸ್ಥೆಯ  ಕೈ  ಬಿಟ್ಟಿರಬೇಕು. ಅದು ಇದ್ದಿದ್ದರೆ ಚೆನ್ನಾಗಿತ್ತು ಎಂದು ಅನ್ನಿಸುತ್ತದೆಯೆ ?’ – ಎಂದು ಮತ್ತೊಂದು ಪ್ರಶ್ನೆ ಹೊರಟಿತು. ಅದಕ್ಕೆ ಆತ ಕೊಟ್ಟ ಉತ್ತರ, ‘ಹೌದು, ಹಿಂದೆ  ಈ  ಮಠಕ್ಕೆ ಬೇಕಾದಷ್ಟು ಆಸ್ತಿಯೇನೋ ಇತ್ತು. ಕ್ರಾಂತಿಯಾದ ನಂತರ ಅದು ಜನತೆಗೆ ಸೇರಿತು; ಅದನ್ನು ನಮಗಿಂತ ಚೆನ್ನಾಗಿ ಜನತೆ ಉಪಯೋಗಿಸುತ್ತಾರೆ’ – ಎಂದ. ಇದಂತೂ ಕಲಿತು, ಅಭ್ಯಾಸ ಮಾಡಿಕೊಂಡ ಉತ್ತರವೆನ್ನುವುದರಲ್ಲಿ ಸಂದೇಹವೇ ಇಲ್ಲ. ಈತ ಹೀಗೇ ಉತ್ತರ ಕೊಡಬೇಕಾದದ್ದು; ಬೇರೆಯ ಉತ್ತರ ಕೊಡುವಂತಿಲ್ಲ. ಮನಸ್ಸಿನಲ್ಲಿ ಅಂದುಕೊಂಡೆ : ಈ ಮಠ, ಈ ಧಾರ್ಮಿಕ ಸಂಸ್ಥೆ, ಈ ಪಾದ್ರಿಗಳು – ಎಲ್ಲಾ ಸಾಯುವ ಕುದುರೆಗಳು; ಹೆಚ್ಚೆಂದರೆ ಇನ್ನಿಪ್ಪತ್ತು ವರ್ಷ ಇವುಗಳ ಆಯುಸ್ಸು. ಅರಮನೆಗಳು ವಸ್ತುಸಂಗ್ರಹಾಲಯಗಳಾದಂತೆ, ಈ ಊರಿನ ಧಾರ್ಮಿಕ ಸಂಸ್ಥೆಯೂ  ಕಾಲಕ್ರಮದಲ್ಲಿ ಅಂತಹ ಮ್ಯೂಸಿಯಂ ಆಗುತ್ತದೆ. ಮಾಸ್ಕೋದ ಬಹುಪಾಲು ಚರ್ಚುಗಳೂ ಮ್ಯೂಸಿಯಂಗಳಾಗಿವೆ. ಅಥವಾ ಈಗಾಗಲೇ ಇದೂ ಸರ್ಕಾರದವರು ಉಳಿಸಿರುವ ಬೇರೊಂದು ಬಗೆಯ ಮ್ಯೂಸಿಯಂ ಆಗಿದೆಯೋ ಏನೋ; ಸಂಬಳ ಕೊಟ್ಟು ಈ ಪಾದ್ರಿಗಳನ್ನು, ಈ ಚರ್ಚಿನ ಪೂಜಾ ವಿಧಿಗಳನ್ನು ಹಿಂದಿದ್ದಂತೆಯೆ ಉಳಿಸಿ, ನೋಡುವವರಿಗೆ, ಚರ್ಚು ಎಂದರೆ, ಪ್ರಾರ್ಥನೆ ಎಂದರೆ, ಹೇಗಿದ್ದುವು ಎಂಬುದನ್ನು ತೋರಿಸುವ ಪ್ರದರ್ಶನಾಲಯವೋ ಏನೋ !

ಮಾಸ್ಕೋಗೆ ಹಿಂದಿರುಗಿದಾಗ ಆರು ಗಂಟೆ. ಏಳೂವರೆಗೆ ಪ್ರೊ|| ಆಕ್ಸಿನೋವ್ ಅವರ ಮನೆಗೆ ಊಟಕ್ಕೆ ಹೋಗಬೇಕು – ಎಂದು ಅವರಿಗಾಗಿ ಕಾದು ಕುಳಿತೆ.

ಏಳೂವರೆಗೆ ಬಾಗಿಲು ಬಡಿದ ಸದ್ದಾಯಿತು. ಬಾಗಿಲು ತೆರೆದೆ. ಪ್ರೊ.. ಆಕ್ಸಿನೋವ್ ಅವರನ್ನು ನನ್ನ ಕೋಣೆಯ ಮುಂದೆ ಒಳಗೆ ಬಾರದಂತೆ ಹೋಟೆಲಿನ ಒಂಬತ್ತನೆಯ ಮಹಡಿಯ  ಪ್ರವೇಶದ್ವಾರದಲ್ಲಿ ಕೂತುಕೊಳ್ಳುವ ಭದ್ರಮಹಿಳೆ ತಡೆದು ನಿಲ್ಲಿಸಿದ್ದಾಳೆ ! ಆಕ್ಸಿನೋವ್ ಆಕೆಯೊಂದಿಗೆ ಏನನ್ನೊ ಮಾತನಾಡಿ ಸಮಜಾಯಿಷಿ ಕೊಡುವಂತೆ ತೋರಿತು. ಆಗಲೆ ಹೊರಡಲು ಸಿದ್ಧವಾಗಿದ್ದ ನಾನು, ಅವರೊಡನೆ ಹೊರಟೆ. ಲಿಫ್ಟಿನಲ್ಲಿ ಇಳಿಯುವಾಗ ಹೇಳಿದರು: ‘ನೋಡಿ ನಿಮ್ಮನ್ನು ಕರೆದೊಯ್ಯಲು ಬಂದಿದ್ದೇನೆ ಅಂದರೂ, ಆ ಮಹಿಳೆ ಕೇಳಲೇ ಇಲ್ಲ; ನೀವು ಯಾರು, ಎತ್ತ , ನಿಮ್ಮ ಪಾಸ್‌ಪೊರ್ಟ್ ಎಲ್ಲಿ ಎಂದು ನಿಮ್ಮ ಕೊಠಡಿಗೆ ನಾನು ಬರುವ ತನಕ  ನನ್ನನ್ನು ಹಿಂಬಾಲಿಸಿ ತನಿಖೆ ಮಾಡಿದಳು. ಏನು ತಮಾಷೆ ಅಂತೀರಿ. ನಾನು ಪ್ರೊಫೆಸರ್ ಅಂತ ಹೇಳಿದರೂ ಆಕೆ ನಂಬಲಿಲ್ಲ’ ಎಂದು ಆಕ್ಸಿನೋವ್ ನಕ್ಕರು. ‘ಇದು ನಿಮ್ಮ ದೇಶ; ಹೀಗಿರುವುದು ನಿಮ್ಮ ಹಣೆಯ ಬರಹ’ – ಎಂದು ನಾನು ಮನಸ್ಸಿನಲ್ಲೆ ಅಂದುಕೊಂಡೆ.

ಕೆಳನೆಲೆಗೆ ಬಂದು ಅಗಲವಾದ ಗಾಜಿನ ಬಾಗಿಲನ್ನು ದಬ್ಬಿದ್ದೆ ತಡ, ಮಳೆಯ ಒಗ್ಗರಣೆ ಹಾಕಿದ ಕೊರೆವ ಛಳಿ ಮುಖಕ್ಕೆ ಬಡಿಯಿತು. ಆಕ್ಸಿನೋವ್ ಕೊಂಚ ದೂರದಲ್ಲಿ ನಿಂತ ಕಾರೊಂದನ್ನು ಸನ್ನೆ ಮಾಡಿ ಕರೆದರು. ಕಾರು ಬಂತು, ಒಳಗೆ ಕೂತೆ. ‘ಈಕೆ ನನ್ನ ಹೆಂಡತಿ’ ಎಂದು ಪ್ರೊ. ಆಕ್ಸಿನೋವ್ ಪರಿಚಯ ಮಾಡಿಕೊಟ್ಟರು. ಕಾರು ಹೊರಟಿತು. ‘ನೋಡಿ, ಕಾರ್ ಇದ್ದರೂ ನಾನು ಕಾರು ಬಿಡೋದಿಲ್ಲ; ನನಗೆ ಏನೋ ಒಂದು ಥರ ಗಾಬರಿ; ಈಕೆಯೇ ನನ್ನ ಡ್ರೈವರ್’ ಎಂದರು. ಮಳೆ ಸುರಿಯುತ್ತಿತ್ತು. ಬೆಳಕಿಗೆ ಹೊಳೆಯುತ್ತಿದ್ದ ದಾರಿಗುಂಟ ಕಾರು ಚಲಿಸತೊಡಗಿತ್ತು. ‘ನಿಮ್ಮಲ್ಲಿ ಕಾರನ್ನು ಇರಿಸಿಕೊಳ್ಳುವುದು ಕಷ್ಟವೇ?’ ಎಂದೆ. ‘ಹಾಗೇನಿಲ್ಲ, ಐದು ಸಾವಿರ ರೂಬಲ್‌ಗೆ ಕಾರು ದೊರೆಯುತ್ತದೆ. ಪೆಟ್ರೋಲ್ ಅಂತೂ ತುಂಬಾ ಅಗ್ಗ. ಕೇವಲ ಆರು ಕೊಪೆಕ್‌ಗೆ ಒಂದು ಲೀಟರ್. ಹೀಗಾಗಿ ಕಾರನ್ನು ಇರಿಸಿಕೊಳ್ಳುವುದು ಕಷ್ಟವಲ್ಲ. ಆದರೆ ಐದು ಕೊಪೆಕ್‌ಗೆ ಬೆಲೆಗೆ  ಎಲ್ಲಿಂದೆಲ್ಲಿಗೆ ಬೇಕಾದರೂ ಪ್ರಯಾಣ ಮಾಡುವ ಅನುಕೂಲವಿರುವುದರಿಂದ ನಮ್ಮ ಜನಕ್ಕೆ ಕಾರು ಯಾಕೆ ಬೇಕು ? ಒಂದು ವೇಳೆ ಕಾರನ್ನು ಕೊಂಡರೂ – ಅದನ್ನು ನಿಲ್ಲಿಸಲು ಗ್ಯಾರೇಜ್ ಬೇಕು. ಅಂತೂ ಕಾರು ಒಂದು ಹೊರೆಯೇ – ಇಲ್ಲಿ. ನೀವೇ ನೋಡಿದೀರಲ್ಲ; ಬೇರೆ ದೇಶದ ನಗರಗಳ ಕಾರುಗಳ ಸಂಖ್ಯೆಗೆ ಹೋಲಿಸಿದರೆ, ನಮ್ಮಲ್ಲಿ ಕಾರುಗಳ ಸಂಖ್ಯೆ ಕಡಿಮೆ’ – ಎಂದರು. ನಿಜ. ನಿಮಿಷಕ್ಕೆ ಒಂದು ಬಸ್ಸು, ನಿಮಿಷಕ್ಕೆ ಒಂದು ಮೆಟ್ರೋ ದೊರೆಯುವಂಥ ಸೌಲಭ್ಯವಿರುವಾಗ ಈ ಊರಲ್ಲಿ ಕಾರು ಯಾರಿಗೆ ಬೇಕು ? ಅಲ್ಲದೆ ಕಾರು ಇರಿಸಿಕೊಳ್ಳುವುದು ದೊಡ್ಡಸ್ತಿಕೆಯ ಅಥವಾ ಶ್ರೀಮಂತಿಕೆಯ ಲಕ್ಷಣವೆಂಬ ಭಾವನೆಗೆ ಇಲ್ಲಿ ಎಳ್ಳಷ್ಟೂ ಅವಕಾಶವಿಲ್ಲ. ಈ ಕೆಲವು ದಿನ ನಾನು ಗಮನಿಸಿದ್ದೇನೆ. ಎಂತೆಂಥ ದೊಡ್ಡ ಸೈನ್ಯಾಧಿಕಾರಿಗಳೂ ಐದು ಕೊಪೆಕ್ ಕೊಟ್ಟು ಮೆಟ್ರೋಗಳಲ್ಲಿ ಉಳಿದವರೊಂದಿಗೆ ಪ್ರಯಾಣ ಮಾಡುತ್ತಾರೆ. ಅಂಥ ಅಧಿಕಾರಿಗೆ ನಮ್ಮಲ್ಲಾದರೆ ತಾನು ಇತರರಿಂದ ಎಷ್ಟರ ಮಟ್ಟಿಗೆ ಪ್ರತ್ಯೇಕವಾದವನು ಎಂಬುದನ್ನು ಬಜಾಯಿಸುವ ಏರ್ಪಾಡುಗಳೆಷ್ಟು! ಯಾವನೇ ಆಗಲಿ ತಾನು ತನ್ನ ಸ್ಥಾನದಲ್ಲಿ, ಸಂಬಂಧಪಟ್ಟ ಕಛೇರಿಗಳಲ್ಲಿ ದೊಡ್ಡಸ್ತಿಕೆಯನ್ನು ಅನುಭವಿಸಬಹುದೇನೋ. ಆದರೆ, ಹೊರಗೆ ಬಂದಾಗ ಆತನೂ ಒಬ್ಬ – ಸಾವಿರ ಜನದಲ್ಲಿ ಒಬ್ಬ.

ಕೆಲವು ನಿಮಿಷಗಳಲ್ಲಿ ಕಾರು ಆಕ್ಸಿನೋವ್ ಅವರ ಮನೆಯ ಮುಂದೆ ನಿಂತಿತು. ಪ್ರೊಫೆಸರ್ ಅವರು ಇಳಿದು ಕಾರಿನ ಬಾಗಿಲು ತೆರೆದರು. ನಾನು ಇಳಿದೆ. ಮಳೆ  ಸುರಿಯುತ್ತಲೆ ಇತ್ತು. ಎತ್ತರವಾದ ಮನೆಯ ಕೆಳತಳದ ಲಿಫ್ಟನ್ನೇರಿ, ಯಾವುದೋ ಹಂತದ ಅವರ ಮನೆಯೊಳಕ್ಕೆ ಹೋದೆವು. ಶ್ರೀಮತಿ ಆಕ್ಸಿನೋವ್ ಅವರು, ‘ನೀವು ಶುದ್ಧ ಶಾಖಾಹಾರಿಗಳಂತೆ; ನಿಮಗಾಗಿ ಅನ್ನವನ್ನೇನೋ ಮಾಡಿದ್ದೇನೆ; ಒಂದಷ್ಟು ತರಕಾರಿ ಬೇಯಿಸಿದ್ದೇನೆ. ಹ್ಯಾಗೋ ಕಷ್ಟಪಟ್ಟು ಒಂದಷ್ಟು ಪಲ್ಯವನ್ನೂ  ಮಾಡಿದ್ದೇನೆ. ನಿಮಗೆ ಸೇರುತ್ತೋ ಇಲ್ಲವೊ’ – ಎಂದು ಉಪಚಾರದ ಮಾತನ್ನಾಡಿದರು. ನಾನೂ ಆಕ್ಸಿನೋವ್ ಅವರು ಬೇರೊಂದು ಕೋಣೆಗೆ ಹೋಗಿ ಮಾತನಾಡುತ್ತ ಕೂತೆವು. ಆಕ್ಸಿನೋವ್ ಅವರು ವೈನ್ ಬಾಟಲನ್ನು ತೆಗೆದು, ‘ನೋಡಿ ಇದನ್ನು ನಾನೇ ತಯಾರು ಮಾಡಿದ್ದು. ಹಳ್ಳಿಯಲ್ಲಿ ನನಗೊಂದು ತೋಟವಿದೆ. ಒಂದು ಪುಟ್ಟ ಮನೆ ಇದೆ. ನನಗೆ ಬೇಕಾದ ವೈನ್ ಅನ್ನು ನಾನೇ ತಯಾರು ಮಾಡುತ್ತೇನೆ. ಕೊಂಚ ನಿಮಗೂ ಕೊಡಲೆ’ ಎಂದರು, ನಾನು ‘ದಯವಿಟ್ಟು ಕ್ಷಮಿಸಿ, ನನಗೆ ಅಭ್ಯಾಸವಿಲ್ಲ’ ಎಂದೆ. ‘ಸರಿ, ಸರಿ. ಯೋಚನೆ  ಬೇಡ.  ನಿಮಗೆ ಬೇರೆ ಸೇಬಿನ ಹಣ್ಣಿನ ರಸವನ್ನು ಕೊಡುತ್ತೇನೆ’ – ಎಂದು ಬೇರೊಂದು ಗಾಜಿನ ಬಟ್ಟಲನ್ನು ತಂದು ಬಟ್ಟಲಿಗೆ ಬಗ್ಗಿಸಿ ಕೊಟ್ಟರು. ಕುಡಿದೆ, ತುಂಬ ರುಚಿಯಾಗಿತ್ತು.

ಆ ಮಾತು ಈ ಮಾತು ಆಡುತ್ತ ಅವರ ಭಾಷಾ ಸಂಸ್ಥೆಯಲ್ಲಿ ಕನ್ನಡದ ಅಭ್ಯಾಸಕ್ಕೆ ಅವಕಾಶವಿಲ್ಲದ್ದರ ಬಗ್ಗೆ ಪ್ರಸ್ತಾಪಿಸಿದೆ. ‘ತಮಿಳನ್ನು ಕಲಿಸುತ್ತೀರಿ, ನೇಪಾಳಿ, ಪಂಜಾಬಿ, ಗುಜರಾತಿ, ಕಲಿಸುತ್ತಿದ್ದೀರಿ. ಮುಂದೆ ಇಷ್ಟರಲ್ಲೇ ತೆಲುಗು, ಮಲೆಯಾಳಂಗಳನ್ನು ನಿಮ್ಮ ಯೋಜನೆಯಲ್ಲಿ  ಸೇರಿಸಲಾಗಿದೆ ಎನ್ನುತ್ತೀರಿ. ಹೀಗಿರುವಾಗ ಪ್ರಮುಖ ಭಾಷೆಗಳಲ್ಲಿ ಒಂದಾದ ಕನ್ನಡವಿಲ್ಲದೆ ದ್ರಾವಿಡ ಭಾಷೆಗಳ ಕಲಿಕೆ ಅಪೂರ್ಣವಲ್ಲವೆ, ಎಂದೆ. ಕನ್ನಡವೂ ಬಹು ಮುಖ್ಯವಾದ ಒಂದು ದ್ರಾವಿಡ ಭಾಷೆ ಎಂಬ ಸಂಗತಿಯನ್ನು ಪ್ರೊಫೆಸರ್ ಆಕ್ಸಿನೋವ್ ತಲೆಗೆ ತಲುಪಿಸಬೇಕಾದರೆ ನನಗೆ ಸಾಕು  ಸಾಕಾಯಿತು. ‘ನಾನು ಈ ಬಗ್ಗೆ ಯಾವ ನೆರವನ್ನು ಬೇಕಾದರೂ ನೀಡಲು ಸಿದ್ಧ. ನಿಮ್ಮ ಸಂಸ್ಥೆಯಿಂದ ಬೆಂಗಳೂರಿಗೆ ಯಾರನ್ನಾದರೂ ಕಳುಹಿಸಿ, ಅವರಿಗೆ ಕನ್ನಡವನ್ನು ನಾವು ಕಲಿಸಿ ಕಳುಹಿಸುತ್ತೇವೆ. ಅವರನ್ನೇ ನೀವು ಇಲ್ಲಿ ಕನ್ನಡ ಬೋಧನೆಗೆ ನೇಮಿಸಿಕೊಳ್ಳಬಹುದು. ಇದಕ್ಕೆಲ್ಲ ಮೊದಲು ನಿಮ್ಮ ಸಂಸ್ಥೆಯ ಶಿಕ್ಷಣ ಯೋಜನೆಯಲ್ಲಿ ಕನ್ನಡ ಭಾಷೆಯ ಕಲಿಕೆಗೆ ಅವಕಾಶವನ್ನು ಕಲ್ಪಿಸಬೇಕು’ – ಎಂದು ಸಲಹೆ ಮಾಡಿದೆ.

ಊಟಕ್ಕೆ ಕರೆ ಬಂತು. ಮೇಜಿನ ಮೇಲಿರಿಸಿದ ಅನ್ನದ ಗಾತ್ರವನ್ನು ನೋಡಿ ಹೆದರಿಕೆಯಾಯಿತು. ನನಗಾಗಿ ಈ ಜನ, ನನ್ನೊಂದಿಗೆ ಬರೀ ಅನ್ನವನ್ನು ಬಡಿಸಿಕೊಂಡರು. ಕುಡಿಯಲು ಒಂದು ಬಟ್ಟಲಲ್ಲಿ ಸಾರಿತ್ತು. ‘ಇದು ನೋಡಿ ಅಣಬೆಯ (ನಾಯಿಕೊಡೆ) ಸೂಪ್. ತುಂಬ ರುಚಿಯಾಗಿರುತ್ತದೆ’ – ಎಂದರು ಶ್ರೀಮತಿ ಆಕ್ಸಿನೋವ್. ಸಾರೇನೊ ನಾಲಿಗೆಗೆ ತಾಗಿಸಿದಾಗ ರುಚಿಯಾಗಿದೆಯೆಂಬಂತೆ ತೋರಿತು; ಆದರೆ ಅಣಬೆಯ ಸಾರು ಎಂಬ ಮಾತು ಕೇಳಿದ ಮೇಲೆ ನನಗೆ ನಮ್ಮ ಹಳ್ಳಿಯ ತಿಪ್ಪೆಗಳೆಲ್ಲಾ ನೆನಪಿಗೆ ಬಂದು ಕುಡಿಯಲು ಒಂದು ಥರಾ ಆಯಿತು. ‘ಅಯ್ಯೊ, ಇದು ಕೂಡ ನಿಮಗೆ ಸೇರುವುದಿಲ್ಲ ಎಂದಾಯಿತು. ಇಗೊ, ಈ ಪಲ್ಯ ನೋಡಿ. ಇಂಡಿಯಾದಿಂದ ಬಂದ ಖಾರದಪುಡಿ ಉದುರಿಸಿದ್ದೇನೆ’ ಎಂದು ಶ್ರೀಮತಿ ಆಕ್ಸಿನೋವ್ ಹೇಳಿದರು. ತರಕಾರಿ ಪಲ್ಯ ನನಗೇನೋ ರುಚಿಯಾಗಿತ್ತು; ಅನ್ನಕ್ಕೆ ಕಲಸಿಕೊಂಡು ಚೆನ್ನಾಗಿ ಊಟ ಮಾಡಿದೆ. ಆದರೆ ಗಂಡ – ಹೆಂಡಿರಿಬ್ಬರೂ ಅದನ್ನು ಬಡಿಸಿಕೊಂಡು ಹಾಹಾಗುಟ್ಟುತ್ತ ಊಟ ಮಾಡಿದರು. ಈ ಜನಕ್ಕೆ ಖಾರ ತಿಂದು ಅಭ್ಯಾಸವೇ ಇಲ್ಲ. ನನಗಾಗಿ ಇವರು, ಈ ಊಟ ಮಾಡುವಂತಾಯಿತಲ್ಲ ಎನಿಸಿತು. ಸೊಗಸಾದ ಮೊಸರು, ಜಾಂ, ಬ್ರೆಡ್, ಹಲವು ಬಗೆಯ ಹಣ್ಣುಗಳು – ನಿಧಾನವಾಗಿ ಮೇಜಿನ ಮೇಲಿಂದ ಮಾಯವಾಗತೊಡಗಿದವು. ಹತ್ತು ಗಂಟೆಯ ತನಕ ಊಟ ಸಾಗಿತು. ಅನಂತರ ಬಿಸಿ ಬಿಸಿ ಟೀ ಕುಡಿದು ಮುಗಿಸಿದ ಮೇಲೆ ಮತ್ತೆ ಬಟ್ಟಲಿಗೆ ಅವತರಿಸುತ್ತಿತ್ತು, ‘ಅಂತೂ ನನ್ನಿಂದಾಗಿ ನಿಮಗೆ ಉಪವಾಸ’ – ಎಂದೆ. ‘ಏನಿಲ್ಲ, ಅಪರೂಪದ ಅತಿಥಿಯಾಗಿ ನೀವು ಬಂದಿದ್ದೀರಿ. ನಿಮಗೆ ಸೇರುವಂಥದ್ದನ್ನು ಬಡಿಸಲಿಲ್ಲವಲ್ಲ ಎಂದು ನಮಗೆ ವ್ಯಥೆಯಾಗಿದೆ’ ಎಂದು ಇಬ್ಬರೂ ವಿಷಾದಿಸಿದರು. ‘ನಾನು ದೆಹಲಿಯಲ್ಲಿ ಕೆಲವು ವರ್ಷವಿದ್ದೆ. ನನ್ನ ಹೆಂಡತಿ ಇಂಡಿಯಾವನ್ನೆಲ್ಲ ಸುತ್ತಿದ್ದಾಳೆ.  ಅವಳು ಒಮ್ಮೆ ಬೆಂಗಳೂರಿಗೂ ಬಂದಿದ್ದಳು’ ಎಂದರು. ‘ನನಗೆ ನೆನಪಿದೆ, ಬೆಂಗಳೂರು ತುಂಬ ಸುಂದರವಾದ ಊರು’ ಎಂದರು ಶ್ರೀಮತಿ ಆಕ್ಸಿನೋವ್. ‘ಮತ್ತೆ ಬೆಂಗಳೂರಿಗೆ ಬನ್ನಿ, ಸೊಗಸಾದ ಸಾರು ಮಾಡುವುದು ಹೇಗೆ ಎಂಬುದನ್ನು ನಿಮಗೆ ನಮ್ಮ ಮನೆಯವರು ಕಲಿಸುತ್ತಾರೆ’ ಎಂದೆ. ಇಬ್ಬರೂ ನಕ್ಕರು. ನಾನು ಬೆಂಗಳೂರಿನಿಂದ ಒಯ್ದಿದ್ದ ಕೆಲವು ಶ್ರೀಗಂಧದ ವಸ್ತುಗಳನ್ನು ನೆನಪಿಗೆ ಎಂದು ಒಪ್ಪಿಸಿದೆ. ತುಂಬ ಸಂತೋಷಪಟ್ಟರು. ‘ನೀವು ಬರುವ ಸಂಗತಿ ನಮಗೆ ಸಾಕಷ್ಟು ಮೊದಲೇ ನಿಮ್ಮ ಸರ್ಕಾರದಿಂದ ತಿಳಿದಿದ್ದ ಪಕ್ಷದಲ್ಲಿ ಇನ್ನೂ ಕೆಲವು ಉಪನ್ಯಾಸಗಳನ್ನೇರ್ಪಡಿಸಬಹುದಾಗಿತ್ತು. ಆದರೆ ನೋಡಿ, ಏನು ಮಾಡುವುದು, ಯಾವುದಕ್ಕೂ ಮೊದಲು ನಾವು ಹಲವು ಸಂಸ್ಥೆಗಳಿಗೆ ಬರೆದು ಅವರ ಅನುಕೂಲವನ್ನು ತಿಳಿಯಬೇಕಾಗುತ್ತದೆ; ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ. ಆದರೂ ನಿಮಗೆ ಮಾಸ್ಕೋದಲ್ಲಿದ್ದಷ್ಟು ದಿನ ಹಿತವಾಗಿತ್ತು ಎಂದು ತಿಳಿಯುತ್ತೇನೆ’ – ಎಂದರು. ಈ ದಂಪತಿಗಳ ಆತಿಥ್ಯ ನನಗೆ ಪ್ರಿಯವಾಯಿತು. ನನ್ನನ್ನು ಅವರಿಬ್ಬರೂ ಕಾರಲ್ಲಿ ಕರೆತಂದು ಹೋಟೆಲಿನ ಬಳಿ ಬಿಟ್ಟು ‘ದಸ್ವಿದಾನಿಯಾ’ ಹೇಳಿದಾಗ ಹನ್ನೊಂದೂವರೆ. ನಾನು ‘ಸ್ಪಸೀಬಾ’ (ವಂದನೆ) ಎಂದು ಕೈ ಬೀಸಿದೆ. ಸುರಿಯುವ ಮಳೆಯಲ್ಲಿ ಕಾರಿನ ಹಿಂದಿನ ಕೆಂಪು ದೀಪಗಳು ಕರಗಿಹೋದವು.