‘ನಂಬಿಕೆ’ ಎನ್ನುವುದು ಮಾನವ ಇತಿಹಾಸದೊಂದಿಗೆ ತಳಕು ಹಾಕಿಕೊಂಡು ಬಂದಿರುವ ಒಂದು ಅಂಶ. ಇದು ಮಾನವನಿಗೆ ಸುಲಭವಾಗಿ ದೊರಕಿದ್ದರಿಂದ; ಅವನಲ್ಲಿನ ಕ್ರಿಯಾಶೀಲನೆ ಕಡಿಮೆಯಾಗಲು ಕಾರಣವಾದದ್ದೂ ಒಂದು ವಿಪರ್ಯಾಸ. ಅಪಕ್ವ ಅನುಭವವು ಭಯಕ್ಕೆ ಕಾರಣ ಎನ್ನುವುದನ್ನು ಮನಗಾಣದ ಮಾನವ, ಭಯದ ಇನ್ನೊಂದು ಮುಖವಾದ ಭಕ್ತಿಯನ್ನು ನಂಬಿಕೆಯ ಮೂಲಕ ತುಂಬಿಕೊಳ್ಳಲು ಪ್ರಯತ್ನಿಸಿದ್ದರಿಂದ; ಸಮಾಜದ ಒಳಗೇ ಉಸಿರು ಕಟ್ಟಿದ ವಾತಾವರಣ ಉಂಟಾಗಿ, ಆಶಾಂತಿಗೆ ಕಾರಣವಾದಾಗಲೆಲ್ಲಾ, ಬಿಡುಗಡೆಗಾಗಿ ಹೊಸ ಹೊಸ ಚಿಂತನೆಗಳು ಹುಟ್ಟಿರುವುದೂ ಮತ್ತು ಕಾಲಕ್ರಮದಲ್ಲಿ ಅದೇ ಸಮಾಜಕ್ಕೆ ಹೊರೆಯಾಗಿ ಉರುಲಾಗಿರುವುದನ್ನು ಮಾನವ ಇತಿಹಾಸದಲ್ಲಿ ಕಾಣಬಹುದು. ಹೀಗಿದ್ದರೂ ಒಂದು ವರ್ಗದ ಜನ ಹಿಂದಿನದಕ್ಕೇ ಅಂಟುಬೀಳುವುದೂ;  ಆ ಮೂಲಕ ಸಮಾಜದ ನೆಮ್ಮದಿಗೆ ಕಂಠಕರಾಗುವುದೂ ಜೊತೆ ಜೊತೆಯಲ್ಲೇ ಸಾಗಿಬಂದಿದೆ. ಇದಕ್ಕೆ ಪ್ರಮುಖ ಕಾರಣ, ಅವರಲ್ಲಿನ ಮುಕ್ತವಿಚಾರದ ಕೊರತೆ ಎಂದು ಪರಿಗಣಿಸಬೇಕು.

‘ಮುಕ್ತವಿಚಾರ’ ಎನ್ನುವುದು ಮಾನವನಿಗೆ ರಕ್ತಗತವಾಗಿ ಬಂದಿರುವ ಒಂದು ಶಕ್ತಿ. ಮುಕ್ತವಿಚಾರದ ಇನ್ನೊಂದು ರೂಪವೇ ಬಂಡಾಯ. ಯಾವುದಕ್ಕೂ ಬಿಗಿಯಾಗಿ ಗಂಟುಬೀಳದೆ, ಸದಾ ಚಲನಶೀಲತೆಯನ್ನು ಬಯಸುವಂಥಾದ್ದು. ‘ಧರ್ಮ’ ಹುಟ್ಟುಹಾಕುವ ‘ನಂಬಿಕೆ’ಯ ಸ್ಥಾನಕ್ಕೆ ‘ಪ್ರಜ್ಞೆ’ಯನ್ನು ‘ಭಕ್ತಿ’ಯ ಸ್ಥಾನಕ್ಕೆ ‘ಕರುಣೆ’ಯನ್ನು, ‘ಭಯ’ದ ಸ್ಥಾನಕ್ಕೆ ‘ಕ್ರಿಯಾಶೀಲತೆ’ಯನ್ನು ‘ಮುಕ್ತವಿಚಾರ; ಅಥವಾ ‘ಬಂಡಾಯ’ ತರುತ್ತದೆ. ಇದು ಉತ್ತಮ ಸಮಾಜ ರೂಪುಗೊಳ್ಳಲು ಕಾರಣವಾಗುತ್ತದೆ. ನನ್ನ ‘ಧರ್ಮ ಮತ್ತು ಮುಕ್ತವಿಚಾರ’ ಎನ್ನುವ ಕೃತಿ ಆ ನಿಟ್ಟಿನಲ್ಲಿ ಓದುಗರನ್ನು ಪ್ರೇರೇಪಿಸಿದರೆ ನನ್ನ ಐದು ವರ್ಷಗಳ ಚಿಂತನೆ, ಬರವಣಿಗೆಯ ಶ್ರಮ ಸಾರ್ಥಕವೆನಿಸುತ್ತದೆ.

ನಾನೊಬ್ಬ ಗಣಿತ ಹಾಗೂ ವಿಜ್ಞಾನದ ವಿದ್ಯಾರ್ಥಿ. ನಾನು ಪದಧರ ಶಿಕ್ಷಕ ಆಗಿದ್ದರೂ, ಈ ಕೃತಿಯಲ್ಲಿ ಸ್ತ್ರೀ-ಪುರುಷರ ಸಮಾನತೆಯನ್ನು ಒತ್ತಿ ಹೇಳಿದ್ದರೂ; ದೇವರು-ದೇವತೆಗಳನ್ನು ಪುಲ್ಲಿಂಗದಲ್ಲೇ ಉಲ್ಲೇಖಿಸಿದ ಅನಿವಾರ್ಯ ದೋಷ ಎಸಗಿದ್ದೇನೆ. ಉದಾ. ‘ದೇವರು ನಿರಾಕಾರ, ಅವನು ನಿರ್ಗುಣ’, ‘ಅದು’ ಎಂದಿರಬೇಕಾದ ಸ್ಥಳದಲ್ಲಿ ‘ಅವಳು’ ಎಂದು ಬರೆಯದೆ, ‘ಅವನು’ ಎಂದೇ ಉಲ್ಲೇಖಿಸಲು ಮುಖ್ಯ ಕಾರಣ ರೂಢಿದೋಷ. ಇದೇ ರೀತಿ ನಿಖರತೆಯನ್ನು ವಿಷಯದಲ್ಲೂ ‘ಬಹುದು’ ಎನ್ನುವ ಊಹಾತ್ಮಕ ಪದದ ಬಳಕೆಯಾಗಿದೆ ಎನ್ನುವುದು ನನ್ನ ಭಾಷೆಯ ಅಥವಾ ಬರವಣಿಗೆಯ ಮಿತಿಯೂ ಹೌದು.

ಈ ಕೃತಿಗೆ ಮುನ್ನುಡಿ ಬರೆದು ತಮ್ಮ ವಿಶ್ವವಿದ್ಯಾಲಯದ ವತಿಯಿಂದ ಪ್ರಕಟಿಸಲು ಅನುಮತಿ ನೀಡಿದ ಆದರಣೀಯ ಕುಲಪತಿಗಳಾದ ಡಾ.ಎ.ಮುರಿಗೆಪ್ಪ ಅವರನ್ನು; ತಮ್ಮ ಪ್ರಸಾರಾಂಗದ ಮೂಲಕ ಪ್ರಕಟಿಸುವುದರ ಜೊತೆಗೆ ಅಭಿಮಾನದ ಮಾತುಗಳನ್ನು ಆಡಿರುವೊಸಾಹಿತ್ಯದ ಸಜ್ಜನಿಕೆ ವಿಮರ್ಶಕರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರನ್ನು; ಕೃತಿ ರಚನೆ, ಪ್ರಕಟಣೆ ಮುಂತಾದ ಎಲ್ಲಾ ತರಹದ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ನನ್ನೊಂದಿಗಿರುವ ಮಿತ್ರ ಪ್ರೊ.ಲಕ್ಷ್ಮಣ ತೆಲಗಾವಿ ಮತ್ತು ಡಾ.ಗುಡಿಹಳ್ಳಿ ನಾಗರಾಜ ಅವರನ್ನು; ಕೃತಿಗೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ನನ್ನೊಂದಿಗೆ ಚರ್ಚಿಸಿ ನನ್ನ ಚಿಂತನಾಕ್ರಮವನ್ನು ರೂಪಿಸಿದ ವಿಚಾರವಾದಿ ಲೇಖಕರಾದ ಪ್ರೊ.ಬಿ.ವಿ. ರಭದ್ರಪ್ಪ ಅವರನ್ನು; ನನ್ನ ಚಿಂತನೆಗೆ ನೆಲೆಗಟ್ಟನ್ನು ಒದಗಿಸಿದ ಸೋದರ ಬಿ.ವಿ.ತಿಪ್ಪೇಸ್ವಾಮಿ, ಮೊಳಕಾಲ್ಮೂರು ಶ್ರೀನಿವಾಸಮೂರ್ತಿ, ವಂ.ಆಂತೋನಿ ಪೀಟರ್ ಮತ್ತು ಅಬ್ದುಲ್ ಮಜೀದ್ ಅವರುಗಳನ್ನು; ಅಂದವಾಗಿ ಅಕ್ಷರ ಸಂಯೋಜಿಸಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನ ಶ್ರೀಮತಿ ರಶ್ಮಿಕೃಪಾಶಂಕರ್ ಅವರನ್ನು; ಅಂದವಾಗಿ ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ.ಮಕಾಳಿ ಅವರನ್ನು; ಅಂದವಾಗಿ ಮುದ್ರಿಸಿದ ಮುದ್ರಣಾಲಯದವರನ್ನು ಈ ಮೂಲಕ ಸ್ಮರಿಸುತ್ತೇನೆ.

ಯಳನಾಡು ಅಂಜನಪ್ಪ
೨೦.೦೩.೨೦೦೮
ಹಿರಿಯೂರು