ನನ್ನ ಪ್ರೀತಿಯ ವಿಚಾರವಂತ ಓದುಗರೆ. ಮಾನವ ಇತಿಹಾಸ ಬೆಳವಣಿಗೆಯ ಉದ್ದಕ್ಕೂ ಮೌಢ್ಯ ಮತ್ತು ವೈಚಾರಿಕತೆಗಳ ಮಧ್ಯೆ ನಿರಂತರವಾಗಿ ನಡೆದುಬಂದಿರುವ ಸಂಘರ್ಷ ಮತ್ತು ಅದರ ಫಲಗಳನ್ನು; ಈ ಕೃತಿಯಲ್ಲಿ ದಾಖಲಿಸಲು ಪ್ರಯತ್ನಿಸಿದ್ದೇನೆ. ಈ ಕೃತಿ ಮುಖ್ಯವಾಗಿ ಎರಡು ಉದ್ದೇಶಗಳ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದೆ.

ಮಾನವ ಇತಿಹಾಸದ ಉದ್ದಕ್ಕೂ ಉಳಿದುಬಂದಿರುವ ‘ಮುಕ್ತ ವಿಚಾರ’ ಮತ್ತು ‘ಮುಕ್ತ ಚಿಂತಕ’ರನ್ನು ಮಾನ್ಯಮಾಡಿ; ಅವರ ಕೊಡುಗೆಗಳು ‘ಮಾನವ ಸ್ವಾತಂತ್ರ್ಯ’ ಮತ್ತು ‘ಮಾನವ ಪ್ರಗತಿ’ಗೆ ಹೇಗೆ ಸಹಕರಿಸಿವೆ ಎನ್ನುವುದನ್ನು ಹಾಗೂ ವಿಚಾರ ಸ್ವಾತಂತ್ರ್ಯದಿಂದ ಜ್ಞಾನ ಮತ್ತ ನಾಗರೀಕತೆಗಳಲ್ಲಿ ಆದ ಪ್ರಗತಿಯನ್ನು ದಾಖಲಿಸುವುದು ಪ್ರಥಮ ಆದ್ಯತೆ ಆಗಿದೆ.

ನಮ್ಮ ಯುವ ಜನತೆಯನ್ನು ಪ್ರೋತ್ಸಾಹಿಸಿ, ಮುಂದಿನ ಜವಾಬ್ದಾರಿಯುತ ನಾಗರೀಕರನ್ನಾಗಿ ರೂಪಿಸುವುದು ಎರಡನೇ ಆದ್ಯತೆ. ಯುವಕರಲ್ಲಿ ಮುಕ್ತ ವಿಚಾರದ ಪರಂಪರೆಯನ್ನು ತುಂಬುವುದು, ಮನುಷ್ಯತ್ವದ ಅಥವಾ ಮಾನಯತೆಯ ಗಟ್ಟಿತನಕ್ಕಾಗಿ ಅವರಲ್ಲಿನ ಅಭಿಪ್ರಾಯಗಳನ್ನು ಶೋಧಿಸಿ; ಉನ್ನತ ಮಟ್ಟದ ಸಮಾಜ ನಿರ್ಮಾಣದ ಗುರಿಯಿಂದ ಈ ಕೃತಿಯ ರಚನೆಯಲ್ಲಿ ತೊಡಗಬೇಕಾಯಿತು.

ಈ ಅಧ್ಯಯನವನ್ನು ಮುಕ್ತಾಯ ಮಾಡುವುದಕ್ಕೆ ಮುಂಚೆ ನಾವು ಭವಿಷ್ಯದ ಕಡೆ ಸ್ವಲ್ಪ ನೋಡೋಣ. ಮಾನವ ಇತಿಹಾಸದಲ್ಲಿ ಮುಕ್ತ ವಿಚಾರ, ವಿಮರ್ಶಾಥ್ಮಕ ಚಿಂತನೆ ಮತ್ತು ತೆರೆದ ಪರಿಶೀಲನೆಗಳಿಗೆ ಪ್ರಾಮುಖ್ಯತೆಯನ್ನು ತಿರಸ್ಕರಿಸಲಾಗದು. ಆದುದರಿಂದ ಇವು ಮಾನಯತೆಯನ್ನು ಆಶಿಸುತ್ತವೆ. ನಮ್ಮ ಮಕ್ಕಳು ಇಪ್ಪತ್ತೊಂದನೇ ಶತಮಾನದಲ್ಲಿ ವಯಸ್ಕರಾಗಿ ನಡೆಯುತ್ತಿದ್ದಾರೆ. ಅವರು ತಮ್ಮ ವಿಮರ್ಶಕ ಸಾಮರ್ಥ್ಯಗಳನ್ನು ಬಳಸಿಕೊಂಡು, ನಿಯಮಗಳನ್ನು ತೆರೆದ ಮನಸ್ಸಿನಿಂದ ಪರೀಕ್ಷಿಸುವುದು ಮತ್ತು ಮನುಷ್ಯ ಸ್ವಭಾವದಿಂದ ಪ್ರತಿಯೊಂದನ್ನೂ ಅರ್ಥಮಾಡಿಕೊಂಡು ಪಡೆಯುವುದನ್ನು ಪ್ರೋತ್ಸಾಹಿಸುವಂತಾ ಆದರ್ಶ ವ್ಯಕ್ತಿಗಳು ಇಂದು ಬೇಕಾಗಿದ್ದಾರೆ.

ಮಾನವ ಇತಿಹಾಸದ ಭಯಂಕರ ನಿರ್ದಯದ ಕಾಲ ಘಟ್ಟದ ಕಡೆ ನಾವು ಅಂದರೆ ಇಳಿ ವಯಸ್ಸಿನವರು ಸಾಗುತ್ತಿದ್ದೇವೆ. ಜಾತಿ, ಮತ, ಪಂಥ ಮತ್ತು ಧರ್ಮ ಆಧಾರಿತ ಅಂಧ ಶ್ರದ್ಧೆಗಳು ಇಡೀ ಭೂಖಂಡವನ್ನು ವ್ಯಾಪಿಸಿ; ಅವುಗಳ ಹೆಸರಿನಲ್ಲಿ ಅಥವಾ ಅವುಗಳಿಗೆ ಆಧಾರವಾಗಿರುವ ದೇವರು ಅಥವಾ ದೇವತೆಗಳ ಕಲ್ಪನೆಗಳ ಹೆಸರಿನಲ್ಲಿ ಭಯಾನಕತೆ ಮತ್ತು ಯುದ್ಧಗಳಿಗೆ ಮಾರ್ಗಗಳು ಇಂದು ತೆರೆದುಕೊಳ್ಳುತ್ತಿವೆ. ಪ್ರಕಟಪಡಿಸಲು ಉದ್ದೇಶಿಸಿರುವ ನಂಬಿಕೆಗಳು ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಪ್ರಶ್ನೆ ಮಾಡಿ ಆಕ್ಷೇಪಿಸುವುದರಿಂದ; ಆಕ್ಷೇಪಣೆ ಎನ್ನುವುದು ಒಳಿತಿಗಾಗಿ ಎನ್ನುವ ಅರ್ಥ ಪಡೆದಿದ್ದಾಗ, ಹೊಸದಾದ ನಾಳೆಗಳನ್ನು ಈ ಸಂಕುಚಿತ ಮತ್ತು ವಿನಾಶಕಾರಿ ಸಂದರ್ಭಗಳಿಂದ ಪಾರುಮಾಡಬಹುದು. ಜನಾಂಗೀಯ, ಜಾತೀಯ, ಧಾರ್ಮಿಕ, ರಾಜಕೀಯ ಮತ್ತು ಸ್ತ್ರೀ-ಪುರುಷ ಮುಂತಾದವುಗಳು ಉಂಟು ಮಾಡಿರುವ ನಿರ್ಬಧಗಳಿಂದ ಅಂಧಶ್ರದ್ಧೆಗಳು ಮತ್ತು ಅಂಧಾಭಿಪ್ರಾಯಗಳು ಗಟ್ಟಿಯಾಗಲು ಅವಕಾಶವಾಗಿ, ಆ ಮೂಲಕ ಮನುಷ್ಯ ಸಂಬಂಧಗಳು ನಿರ್ಬಧಗೊಳ್ಳಲು ಬಿಡಬಾರದು ಪಾರಮಾರ್ತಿಕತೆ, ಪ್ರಾದೇಶಿಕತೆ, ಜನಾಂಗೀಯ ಮತ್ತು ಸ್ತ್ರೀ-ಪುರುಷ ಮುಂತಾದವುಗಳು ಮಾನಯತೆಯ ಬಗ್ಗೆ ಇರುವ ಪುರಾತನ ಬೋದನೆಗಳಿಗೆ ಅಸಹಕಾರ ಮತ್ತು ಅಸಹಾನುಭೂತಿ ತೋರಿ ತಡೆ ಉಂಟುಮಾಡಿದರೆ ಮತ್ಸರಕ್ಕೆ ಪ್ರೋತ್ಸಾಹ ಸಿಕ್ಕುತ್ತದೆ. ಮನುಷ್ಯ ಸಂಬಂಧಗಳು, ಜಗತ್ತಿನೊಂದಿಗಿನ ಮನುಷ್ಯ ಸಂಬಂಧಗಳು, ಮಾನಯ ದೃಷ್ಟಿ ಹಾಗೂ ಭೂಮಿಯ ಮೇಲಿನ ಜೀವಿಗಳ ಪರಸ್ಪರ ಸಂಬಂಧಗಳ ಬಗೆಗಿನ ಪುರಾತನರ ನಂಬಿಕೆಗಳು ಸೀಮಿತ ಹಾಗೂ ಅವೈಜ್ಞಾನಿಕ. ಅಂತಹ ಕಲ್ಪನೆಗಳೇನಿದ್ದರೂ ಬೇರೆ ಬೇರೆ ಸ್ಥಳದ ಬೇರೆ ಬೇರೆ ಕಾಲಘಟ್ಟದ ಉತ್ಪನ್ನಗಳು. ಅವನ್ನು ಮೂಲಭೂತ (Fundamental) ಸತ್ಯಗಳೆಂದು ಪರಿಗಣಿಸಿ ಜಾರಿಗೊಳಿಸಿದರೆ; ಅವು ಮುಕ್ತಪರಿಶೀಲನೆಗೆ ತಡೆಯೊಡ್ಡುವುದು ನಿಶ್ಚಯ. ಆಗ ಶಾಂತಿ, ನ್ಯಾಯ ಮತ್ತು ಎಲ್ಲರ ಏಳಿಗೆ ಮುಂತಾದ ಮೌಲ್ಯಗಳನ್ನು ಹೊಂದಿರುವ ಹೊಸ ಪ್ರಪಂಚದ ಉದಯಕ್ಕೆ ನಿರಾಶೆ ಆಗುವುದಂತೂ ಸತ್ಯ.

ಮುಕ್ತ ವಿಚಾರವನ್ನು ಇಂದು ಪ್ರತಿಯೊಬ್ಬ ವ್ಯಕ್ತಿಗೂ, ಪ್ರತಿಯೊಬ್ಬ ಮಹಿಳೆಗೂ, ಪ್ರತಿಯೊಬ್ಬ ಮಗುವಿಗೂ ತಲುಪಿಸಲು; ಅದು ಆದರ್ಶ ವಿಚಾರವಂತ ವ್ಯಕ್ತಿಗಳನ್ನು ಶಿಕ್ಷಕರಾಗುವಂತೆ ಕೇಳಿಕೊಳ್ಳುತ್ತಿದೆ. ಮಕ್ಕಳ ಮತ್ತು ವಿದ್ಯಾರ್ಥಿಗಳ ಸೃಜನಶೀಲ ವಿಚಾರಗಳಿಗೆ ಉಂಟಾಗುವ ತಡೆಗೋಡೆಗಳನ್ನೆಲ್ಲ ದಾಟುವಂತೆ ಅವರನ್ನು ರೂಪಿಸಬೇಕಿದೆ. ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಹಿಂದಿನ ಸಂಮೃದ್ಧ ಪರಂಪರೆಯನ್ನು ಪರಿಚಯಿಸುವಾಗ; ಹಿಂದಿನ ಪರಂಪರೆ ವಿಧಿಸಿದ್ದ ಮಿತಿಗಳನ್ನು ದಾಟಿ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಜವಾಬ್ದಾರಿ ಅವನ ಮೇಲಿರುತ್ತದೆ. ಇದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಅನುವಾಗುತ್ತದೆ.

ಮಾನವ ಇತಿಹಾಸದಲ್ಲಿ; ಪ್ರತಿಯೊಂದು ಪೀಳಿಗೆಯೂ ತನ್ನ ಕಾಲಘಟ್ಟದಲ್ಲಿ ಯಾವುದಾದರೂ ಗುರುತುಗಳನ್ನು ಉಳಿಸಿರುತ್ತದೆ. ಪ್ರತಿ ಹೊಸಪೀಳಿಗೆ ಹೊಸ ಮಾರ್ಗ, ಹೊಸ ದೃಷ್ಟಿ ಹೊಸ ಪ್ರತಿಕ್ರಿಯೆಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವಾಗಲೂ; ಹಿಂದಿನವರೊಂದಿಗೆ ಸಂಘರ್ಷ ಉಂಟಾಗುತ್ತಿರುವುದು ಒಂದು ದುರಂತ. ಜಾಗತಿಕ ಮಟ್ಟದಲ್ಲಿ ಇಂದು ಇಸ್ಲಾಂ, ಕ್ರೈಸ್ತ, ಹಿಂದೂ, ಯಹೂದಿ ಮುಂತಾದ ಧರ್ಮಗಳಲ್ಲಿ ಹೊಸ ಮೂಲಭೂತವಾದ ತಲೆ ಎತ್ತಿ; ಬದುಕು, ಶಿಕ್ಷಣ ಮತ್ತು ಸ್ವಾತಂತ್ರ್ಯ ಮುಂತಾದವನ್ನೆಲ್ಲ ಧರ್ಮಗಳು ನಿಯಂತ್ರಿಸುತ್ತಿವೆ ಅಥವಾ ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಈ ನಿಯಂತ್ರಣದ ಬೇರುಗಳೆಲ್ಲ ಹಿಂದಿನವರಿಂದ ಸತ್ವ ಪಡೆಯುತ್ತಿವೆ. ಈ ಹೊಸ ಮೂಲಭೂತವಾದ ಮನುಷ್ಯತ್ವದಲ್ಲಿ, ನಮ್ಮ ಸಾಮರ್ಥ್ಯದಲ್ಲಿ, ಭವಿಷ್ಯವನ್ನು ರೂಪಿಸುವ ನಮ್ಮ ನೀತಿಗಳಲ್ಲಿ ನಂಬಿಕೆ ಇರಿಸಿಲ್ಲ. ಹೊಸ ಮೂಲಭೂತವಾದದ ಪ್ರಮುಖ ಉದ್ದೇಶ ಏನೆಂದರೆ; ಹಿಂದಿನ, ಪೀಳಿಗೆಯ ಅದ್ಭುತವಾದಕ್ಕೆ ಜನತೆಯನ್ನು ಕೊಂಡೊಯ್ಯುವುದು ಮತ್ತು ನಮ್ಮ ಯೋಚನಾಕ್ರಮ, ನಮ್ಮ ವಿಜ್ಞಾನ ಮತ್ತು ನಮ್ಮ ಜೀವನ ವಿಧಾನವನ್ನು ನಿಯಂತ್ರಿಸುವುದೇ ಆಗಿರುತ್ತದೆ. ಇಂತಹ ನಿಯಂತ್ರಣದ ಪ್ರಯತ್ನವಾದರೂ ಏಕೆ? ಎನ್ನುವ ಪ್ರಶ್ನೆ ಸ್ವಾಭಾವಿಕ. ಆಯಾ ಕಾಲಘಟ್ಟದಲ್ಲಿನ ನಂಬಿಕೆಗಳು, ಆಚರಣೆಗಳು ಮತ್ತು ಮೌಲ್ಯಗಳ ವಕ್ತಾರಿಕೆಯನ್ನು ಕೆಲವೇ ಕೆಲವು ವ್ಯಕ್ತಿಗಳು ಪಡೆದು ಉಳಿದ ಬಹುಸಂಖ್ಯಾತರಿಗೆ ಏಜೆಂಟರಂತೆ ಕೆಲಸ ಮಾಡಿ; ಸುಖವಾಗಿ ಜೀವನವನ್ನು ನಿರ್ವಹಿಸುತ್ತಿರುತ್ತಾರೆ. ಅಂದರೆ; ಇನ್ನೊಬ್ಬರ ಶ್ರಮದಿಂದ ಜೀವನವನ್ನು ಸಾಗಿಸುವವರು. ಉದಾಹರಣೆಗೆ, ‘ದೇವರು ಒಂದು ನಂಬಿಕೆ. ಇದು ಮಾನವ ಇತಿಹಾಸದ ಪ್ರಾರಂಭಿಕ ಹಂತದಿಂದಲೂ ಬಂದಿರುವ ನಂಬಿಕೆ. ದೇವರು ಮತ್ತು ಭಕ್ತರ ಮಧ್ಯೆ ಪುರೊಹಿತರು ಪ್ರಾರಂಭದಿಂದಲೂ ಸುಖ ಜೀವನಕ್ಕೆ ಮಾರ್ಗ ಮಾಡಿಕೊಂಡು ಬಂದಿರುತ್ತಾರೆ. ಮುಕ್ತ ವಿಚಾರದಿಂದ ಭಕ್ತರ ಸಂಖ್ಯೆ ಕಡಿಮೆಯಾಗುವುದೆನ್ನುವ ಹಾಗೂ ತಮ್ಮ ಸುಖ ಜೀವನಕ್ಕೆ ತೊಂದರೆಯಾಗುವುದೆನ್ನುವ ಭಯದಿಂದ; ಪುರೋಹಿತಶಾಹಿ ಸ್ವಾಭಾವಿಕವಾಗಿ ಪ್ರಗತಿಗೆ ಅಥವಾ ಬದಲಾವಣೆಗೆ ಅಡ್ಡಗೋಡೆ ನಿರ್ಮಿಸಿರುವುದು ಮಾನವ ಇತಿಹಾಸದಿಂದ ಕಂಡುಕೊಳ್ಳಬಹುದು.

ಆಸಕ್ತಿಯಿಂದ ನಾವು ಇಂದಿನ ಇಸ್ಲಾಂ ರಾಷ್ಟ್ರಗಳನ್ನು ನೋಡಿದರೆ, ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಮೇಲೆ ಮೂಲಭೂತವಾದ ಹಕ್ಕು ಸ್ಥಾಪಿಸಿ, ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವುದು ಸ್ಪಷ್ಟವಾಗುತ್ತದೆ. ಅಧಿಕಾರದಲ್ಲಿರುವವರು ಆಧುನಿಕ ವಿಜ್ಞಾನ ನೀಡಿರುವ ಎಲ್ಲಾ ಸಂಪತ್ತು, ಅನುಕೂಲ ಮತ್ತು ಸ್ವಾತಂತ್ರ್ಯಗಳು ಮುಕ್ತ ವಿಚಾರ ಮತ್ತು ತೆರೆದ ಪರಿಶೀಲನೆಗಳಿಂದ ದೂರ ಸರಿಯುವಂತೆ ಮಾಡಲು ಮೂಲಭೂತವಾದವೇ ಕಾರಣ.

ಮಾನವ ಚರಿತ್ರೆಯ ಉದ್ದಕ್ಕೂ ಪ್ರಗತಿ ಕಂಡುಬಂದಿರುವುದು ಸ್ವಾತಂತ್ರ್ಯವನ್ನು ಹರಣ ಮಾಡುವ ಎಲ್ಲಾ ನಿರ್ಬಧಗಳನ್ನು ವಿರೋಧಿಸಿದವರ ಕ್ರಮದಿಂದ ಎನ್ನುವುದು ಮುಖ್ಯ. ಮುಕ್ತ ಚಿಂತನೆ ಎನ್ನುವುದು ಸ್ವಾತಂತ್ರ್ಯಕ್ಕೆ, ಮಾನವ ಹಕ್ಕುಗಳಿಗಾಗಿ ಹಾಗೂ ಮಾನವ ಸಮಾನತೆಗಾಗಿ ಅಗಾಧವಾದ ಕೊಡುಗೆ ನೀಡಿದೆ. ಸರ್ಕಾರ ಮತ್ತು ಧರ್ಮಗಳು ಒಂದಾಗಿರುವಲ್ಲಿ ಮುಕ್ತ ವಿಚಾರ ಬದುಕಲಾರದು ಮತ್ತು ಉಳಿಯಲಾರದು; ಹಾಗೂ ಮಾನವ ಸ್ವಾತಂತ್ರ್ಯ ಮಿತಿಗೊಳ್ಳುತ್ತದೆ. ಬೌದ್ದಿಕ ಬೆಳವಣಿಗೆ ಕುಂದುತ್ತದೆ ಮತ್ತು ಶಿಕ್ಷಣ ಎನ್ನುವುದು ಕಾಟಾಚಾರವಾಗಿ, ಸೃಜನಶೀಲತೆ ಮತ್ತು ನನತೆಗಳು ಹೊರಗುಳಿಯುತ್ತವೆ.

ನಾವು ಇಂದು ಬದಲಾಗುತ್ತಿರುವ ಪ್ರಪಂಚದಲ್ಲಿದ್ದೇವೆ. ಮುಕ್ತ ವಿಚಾರ ಮತ್ತು ಪ್ರಜಾಪ್ರಭುತ್ವ ವಿಧಾನಗಳು ಮಾನವ ಜ್ಞಾನವನ್ನು ವಿಸ್ತರಿಸಿವೆ ಹಾಗೂ ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನಗಳು ಹಿಂದೆ ನಮಗೆ ಉಂಟಾಗಿದ್ದ ಅನ್ಯಾಯಗಳು ಮತ್ತು ಕ್ರೌರ್ಯದ ಬಗ್ಗೆ ಜಾಗೃತಿ ಉಂಟು ಮಾಡಿವೆ.

ಆಧುನಿಕ ಸ್ವತಂತ್ರ ಭಾರತದಲ್ಲಿ ಧಾರ್ಮಿಕ ಅಮಾನಯ ನಿರ್ಬಧಗಳಿಂದ ಮಹಿಳೆ ನಿಧಾನವಾಗಿ ಬಿಡುಗಡೆ ಪಡೆಯುತ್ತಿರುವುದು ಹಾಗೂ ಯಾವುದಾದರೂ ಒಂದು ಧರ್ಮದ ಹಣೆ ಪಟ್ಟಿಯನ್ನು ಭಾರತಕ್ಕೆ ಅಂಟಿಸಲು ನಡೆಯುತ್ತಿರುವ ಪ್ರಯತ್ನಗಳು ವಿಫಲವಾಗಿರುವುದು ವಿದ್ಯೆಯಿಂದ; ಆ ಮೂಲಕ ಮುಕ್ತ ವಿಚಾರದಿಂದ ಎಂದು ಹೇಳಬಹುದು. ಭಾರತದಲ್ಲಿ ಅನೇಕ ಶತಮಾನಗಳಿಂದ ರೂಢಿಯಲ್ಲಿದ್ದ ಅಸ್ಪೃಶ್ಯತೆ, ತಲೆಯ ಮೇಲೆ ಮಲ ಹೊರುವ ಪದ್ಧತಿ, ಹೆಣ್ಣು ಮಕ್ಕಳನ್ನು ದೇವರಿಗೆ ಹರಕೆ ಬಿಡುವುದು, ಸತಿ ಹೋಗುವುದು ಮುಂತಾದ ಅಮಾನಯ ಮತ್ತು ಅನಿಷ್ಠ ಪದ್ಧತಿಗಳು; ಸ್ವಾತಂತ್ರ್ಯಾನಂತರ ನಿಧಾನವಾಗಿ ಅಲುಗಾಡಿ ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತಿರುವುದು ವಿದ್ಯೆಯಿಂದ ಆ ಮೂಲಕ ವೈಜ್ಞಾನಿಕ ಮನೋಭಾವನೆಯ ಮುಕ್ತ ವಿಚಾರದಿಂದ.

ದೇವರು ಮತ್ತು ಧರ್ಮಗಳ ಬಗ್ಗೆ ಪರಂಪರೆಯಿಂದ ಇದ್ದ ಅಥವಾ ಬಂದಿದ್ದ ‘ನಂಬಿಕೆ’ ಮತ್ತು ‘ಭಕ್ತಿ’ಗಳು ಇಂದು ಕಡಿಮೆಯಾಗುತ್ತಿರುವುದರಿಂದ ಪೊಳ್ಳಾಗಿ ಕಂಡು ಜನತೆಯಲ್ಲಿ ಭಯ ಕಡಿಮೆಯಾಗಲು ಕಾರಣವಾಗಿದೆ. ಇದು ಒಂದು ರೀತಿಯಲ್ಲಿ ಸಮಾಜದ ಆರೋಗ್ಯಪೂರ್ಣ ಬೆಳವಣಿಗೆ ಎಂದು ಮೇಲುನೋಟಕ್ಕೆ ಕಂಡರೂ; ಸಮಾಜದ ಅಶಾಂತಿಗೂ ಕಾರಣವಾಗಿದೆ ಎನ್ನುವುದೂ ಅಷ್ಟೇ ಸತ್ಯ. ನಿಜವಾದ ಅರ್ಥದಲ್ಲಿ ‘ನಂಬಿಕೆಯ’ ಸ್ಥಾನಕ್ಕೆ ‘ಪ್ರಜ್ಞಾ’, ‘ಭಕ್ತಿ’ಯ ಸ್ಥಾನಕ್ಕೆ ‘ಕರುಣೆ’ ಹಾಗೂ ‘ಭಯದ’ ಸ್ಥಾನಕ್ಕೆ ‘ಕ್ರಿಯಾಶೀಲತೆ’ ಬರದಿದ್ದ ಕಾರಣದಿಂದ ಅಶಾಂತಿಗೆ ಕಾರಣವಾಗಿದೆ ಎಂದು ಹೇಳಬಹುದು. ಇದು ಮುಕ್ತ ವಿಚಾರದಿಂದ ಮಾತ್ರ ಪಡೆಯಲು ಸಾಧ್ಯ.