ನನ್ನ ಪ್ರೀತಿಯ ವಿಚಾರವಂತ ಓದುಗರೆ, ತುಂಬಾ ಗಹನವಾದ ವಿಚಾರವೊಂದರ ಪ್ರವೇಶ ಮಾಡುವುದಕ್ಕೆ ಮುಂಚೆ, ನನ್ನನ್ನು ಬಹಳ ಕಾಲ ಕಾಡುತ್ತಿದ್ದ ಸಮಸ್ಯೆ ಒಂದನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಮೊದಲು ಪ್ರಯತ್ನಿಸುತ್ತೇನೆ. ‘‘ಮನೋಭಾವನೆಗಳು, ನಂಬಿಕೆಗಳು ಮತ್ತು ನಡವಳಿಕೆಗಳು ಮೌಲ್ಯವಾಗುವುದು ಹೇಗೆ?’’ ಎನ್ನುವುದೇ ಆ ಸಮಸ್ಯೆ. ನಂಬಿಕೆಗಳ ಹುಟ್ಟಿನ ಬಗ್ಗೆ ನಾವು ಊಹಿಸುತ್ತೇವೆ. ನಮ್ಮ ಪೂರ್ವಿಕರು ಒಂದು ಬೇಟೆ ಪ್ರವಾಸ ಮಾಡಿದುದನ್ನು ನಾವು ಊಹಿಸಿದರೆ ಆ ನಂತರ ಸತ್ಯ ಅರಿವಾಗುತ್ತದೆ.

ಸಮುದ್ರ ದಂಡೆಯ ಪಕ್ಕದಲ್ಲಿರುವ ಕಡಿದಾದ ಬಂಡೆಯೊಂದರಿಂದ ಕಲ್ಲೊಂದು ಇದ್ದಕ್ಕಿದ್ದಂತೆ ಕೆಳಗೆ ಬೀಳುತ್ತದೆ. ಆ ಶಬ್ದಕ್ಕೆ ಅಲ್ಲೇ ಇದ್ದ ಜಿಂಕೆಯೊಂದು ಬೆದರಿ ತಬ್ಬಿಬ್ಬಾಗಿ ಚಲಿಸದೆ ನಿಂತಿರುತ್ತದೆ. ಅದನ್ನು ಕಂಡ ಬೇಟೆಗಾರ; ಬಾಣ ಹೊಡೆದು ಅದನ್ನು ಸಾಯಿಸಿ ಹೆಗಲ ಮೇಲೆ ಹಾಕಿಕೊಂಡು, ಕೈನಲ್ಲಿ ಆ ಕಲ್ಲನ್ನು ಹಿಡಿದು ತನ್ನ ಬಿಡಾರಕ್ಕೆ ಬರುತ್ತಾನೆ. ಕಲ್ಲಿನಲ್ಲಿದ್ದ ಮಾಟಶಕ್ತಿ ಬೇಟೆಯ ಮೇಲೆ ಪರಿಣಾಮ ಬೀರಿತು ಎಂದು ಊಹಿಸಿ ಬೇಟೆಗೆ ಸಂಬಂಧ ಕಲ್ಪಿಸಿ ಕಥೆ ಕಟ್ಟುತ್ತಾನೆ. ಎರಡು ದಿನಗಳನಂತರ ತಿರುಗಿ ಬೇಟೆಗೆ ಹೋಗುತ್ತಾನೆ. ಬಿಡಾರ ಬಿಡುವಾಗ ತಾನು ಮೊದಲ ಸಲ ತಂದಿದ್ದ ಕಲ್ಲನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಾನೆ. ಆ ಕಲ್ಲನ್ನು ಬಂಡೆಗೆ ಕುಟ್ಟಿ ತನ್ನ ಆಹಾರಕ್ಕೆ ಸಹಾಯ ಮಾಡುವಂತೆ ಅದರಲ್ಲಿನ ಶಕ್ತಿಯನ್ನು ಬೇಡಿಕೊಳ್ಳುತ್ತಾನೆ. ಈ ಸಲ ಮೊಲಗಳು ಮತ್ತು ಕಲ್ಲಿನೊಂದಿಗೆ ಬಿಡಾರಕ್ಕೆ ಹಿಂತಿರುಗುತ್ತಾನೆ. ಕಲ್ಲಿನಲ್ಲಿರುವ ಮಾಟಶಕ್ತಿ ಕೆಲಸದಿಂದ ಹೀಗೆ ಆಗುತ್ತಿದೆ ಏನ್ನುವುದು ಅವನಿಗೆ ಮನವರಿಕೆಯಾಗುತ್ತದೆ. ಬೇಟೆ ಸಿಗದ ದಿನಗಳಲ್ಲಿ ಅವನಿಂದ ಅಥವಾ ಅವನ ಗುಂಪಿನ ಇತರರಿಂದ ಆ ಕಲ್ಲಿನ ಶಕ್ತಿಗೆ ಅಪಚಾರವಾಗಿರಬಹುದೆನ್ನುವ ಭಾವನೆ ಅವನನ್ನು ಕಾಡುತ್ತಿತ್ತು. ಆದುದರಿಂದ ಆ ಕಲ್ಲನ್ನು ತೃಪ್ತಿ ಪಡಿಸಲೋಸುಗ ಅವನು ಪ್ರತಿಸಾರಿ ಬೇಟೆ ಸಿಕ್ಕಾಗಲೂ ಅದರ ಕೊಬ್ಬನ್ನು ಆ ಕಲ್ಲಿನ ಮೇಲಿಡುತ್ತಿದ್ದ. ಆಗಿನಿಂದ ಆ ಕಲ್ಲು ಅವಿವೇಕ ಆರಾಧನೆಯ ವಿಗ್ರಹ (Icon) ಪ್ರತಿಮೆಯಾಯಿತು.

ಕನ್ನಡದ ಸಂದರ್ಭದಲ್ಲಿ ದಲಿತಕವಿ ಸಿದ್ದಲಿಂಗಯ್ಯನವರ ‘ಕತ್ತೆ ಮತ್ತು ಧರ್ಮ’ ಎನ್ನುವ ಕವಿತೆಯ ಕತೆ ಇಲ್ಲಿ ಜ್ಞಾಪಕಕ್ಕೆ ಬರುತ್ತಿದೆ. ಅಗಸನೊಬ್ಬ ಕತ್ತೆಯೊಂದನ್ನು ಪ್ರೀತಿಯಿಂದ ಸಾಕಿರುತ್ತಾನೆ. ಅವನ ಬಹುಪಾಲು ಕೆಲಸಗಳಲ್ಲಿ ಇದರ ಭಾಗಿತ್ವ ಇರುತ್ತದೆ. ಒಂದು ದಿನ ಯಾವುದೋ ಕಾರಣದಿಂದ ಆ ಕತ್ತೆ ಸತ್ತು ಹೋಗುತ್ತದೆ. ಅಗಸ ಕತ್ತೆಯ ದೇಹವನ್ನು ಬಿಸಾಡದೆ; ಊರ ಹೊರಗೆ ಗುಂಡಿಮಾಡಿ ಅದನ್ನು ಹೂಳಿ, ಸಮಾಧಿಯ ಮೇಲೆ ಹರಿಶಿಣ, ಕುಂಕುಮ, ಹೂವು ಎಲ್ಲ ಹಾಕಿ; ಗಂಧದಕಡ್ಡಿ ಹಚ್ಚಿ ಕರ್ಪೂರದಾರತಿ ಬೆಳಗುತ್ತಿರುವಾಗ; ಪಕ್ಕದ ರಸ್ತೆಯಲ್ಲಿ ವ್ಯಾಪಾರಕ್ಕಾಗಿ ಪಟ್ಟಣಕ್ಕೆ ಹೋಗುತ್ತಿದ್ದ ಶೆಟ್ಟಿಯೊಬ್ಬ ಇದನ್ನು ಕಂಡು ನಿಂತು ತಾನೂ ಅಲ್ಲಿಂದಲೇ ಸಮಾಧಿಗೆ ಕೈಮುಗಿದು, ಚೆನ್ನಾಗಿ ಲಾಭ ಬರಲೆಂದು ಬೇಡಿಕೊಂಡು ಮುಂದೆ ಹೋಗುತ್ತಾನೆ. ಇತ್ತ ಅಗಸ ದುಃಖದಿಂದ ಆ ಊರನ್ನೇ ತೊರೆದು ಹೋಗುತ್ತಾನೆ. ಶೆಟ್ಟಿಗೆ ಪಟ್ಟಣದಲ್ಲಿ ಅಧಿಕ ಲಾಭ ಬಂದು ಕೋಟ್ಯಾಧಿಪತಿಯಾಗುತ್ತಾನೆ. ಇದೆಲ್ಲ ಆ ಸಮಾಧಿಗೆ ಕೈಮುಗಿದು ಬೇಡಿಕೊಂಡಿದ್ದರಿಂದ ಸಾಧ್ಯವಾಯಿತು ಎಂದು ಯೋಚಿಸಿ; ಕೆಲವು ವರ್ಷಗಳ ನಂತರ ಮರಳಿ ಆ ಊರಿಗೆ ಬಂದು ಸಮಾಧಿಗೆ ದೊಡ್ಡ ಗುಡಿ ಕಟ್ಟಿಸಿ ಜಾತ್ರೆ ಮಾಡಿಸುತ್ತಾನೆ. ಜಾತ್ರೆಯದಿನ ಎಂಟೂ ದಿಕ್ಕುಗಳಿಂದ ಸಾವಿರಾರು ಜನ ಭಕ್ತಾದಿಗಳು ಬಂದು ಕಲೆತು ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸುತ್ತಿರುತ್ತಾರೆ. ದೇಶಾಂತರ ಹೋಗಿದ್ದ ಕತ್ತೆಯ ಯಜಮಾನ ಅಗಸನೂ ಯಾವುದೋ ಕಾರಣದಿಂದ ಅಂದೇ ಆ ಊರಿಗೆ ಬರುತ್ತಾನೆ. ಕತ್ತೆ ಸಮಾಧಿಯ ಜಾಗದಲ್ಲಿ ದೊಡ್ಡ ಗುಡಿ, ಭಕ್ತಾದಿಗಳು ಉಳಿದುಕೊಳ್ಳಲು ಗುಡಿಯ ಸುತ್ತೂ ಮಂಟಪಗಳು, ಛತ್ರಗಳು, ರಸ್ತೆ, ಇಕ್ಕೆಲಗಳಲ್ಲಿ ಪೂಜಾ ಸಾಮಗ್ರಿಗಳ ಅಂಗಡಿಗಳು, ಜನದ ಜಾತ್ರೆ ಕಂಡು ಆಶ್ಚರ್ಯವಾಗುತ್ತದೆ. ಈ ಜಾತ್ರೆಯಲ್ಲಿ ತನ್ನ ಪ್ರೀತಿಯ ಕತ್ತೆಯ ಸಮಾಧಿ ದರ್ಶನ ಮಾಡಲು ಟಿಕೆಟ್‌ಗೆ ದುಡ್ಡಿಲ್ಲದೆ ಅಗಸ ವ್ಯಾಕುಲದಿಂದ ಊರುಬಿಟ್ಟು ಹೋಗುತ್ತಾನೆ. ಇದು ಈಗಿನ ಕತೆ.

ಮೊದಲ ದೃಷ್ಟಾಂತದ ಗುಂಪಿನಲ್ಲಿ ಒಬ್ಬ ಮುಕ್ತ ಚಿಂತಕ ಇದ್ದಿದ್ದರೆ, ಆ ಪವಾಡಕಲ್ಲು ಬೇಟೆಗಾರನಿಗೆ ಸಹಾಯ ಮಾಡುವುದಕ್ಕಾಗಿಯೇ ಬಿದ್ದಿಲ್ಲ. ಕಲ್ಲನ್ನು ಬಿಗಿಯಾಗಿ ಹಿಡಿದಿದ್ದ ಮಣ್ಣು ಇತ್ತೀಚೆಗೆ ಬಿದ್ದ ಮಳೆಯಿಂದ ಸಡಿಲಾಗಿ ಕೊಚ್ಚಿಕೊಂಡು ಹೋಗಿದ್ದರಿಂದ; ಅದರ ಗುರುತ್ವಾಕರ್ಷಣ ಬಲ ವ್ಯತ್ಯಾಸವಾಗಿದ್ದರಿಂದ ಉರುಳಿ ಕೆಳಗೆ ಬಿದ್ದಿದೆ. ಹೀಗೆ ಬಿದ್ದ ಕಲ್ಲಿನ ಘಟನೆ ಬೇಟೆಗಾರನಿಗೆ ಅದೃಷ್ಟದ ಕಾಕತಾಳೀಯ ಘಟನೆಯೇ ಹೊರೆತು ಮತ್ತಿನ್ನೇನೂ ಅಲ್ಲ. ಬೇರೆ ಮಾತಿನಲ್ಲಿ ಹೇಳಬೇಕೆಂದರೆ, ಆ ಕಲ್ಲಿನಲ್ಲಿದೆ ಎಂದು ಹೇಳುವ ಮಾಂತ್ರಿಕ ಶಕ್ತಿಯ ಪೂರ್ವಕಲ್ಪನೆ ಆಧಾರವನ್ನೇ ಮುಕ್ತಚಿಂತನೆ ವಿರೋಧಿಸುತ್ತದೆ. ಬೇಟೆಗಾರನ ಮೂಲಭೂತ ನಂಬಿಕೆಗಳನ್ನೇ ಪ್ರಶ್ನಿಸುವ ಪ್ರಶ್ನೆಗಳನ್ನು ಎತ್ತಬೇಕಿದೆ. ಕೊನೆಯದಾಗಿ; ಅನೇಕ ಸಲ ಬೇಟೆಗಳನ್ನು ಏರ್ಪಡಿಸುವ ಮೂಲಕ ಅವನ ನಂಬಿಕೆಯನ್ನು ಪರೀಕ್ಷಿಸಿ ಕಲ್ಲಿನ ಮಾಂತ್ರಿಕ ಶಕ್ತಿಯನ್ನು ಉಪೇಕ್ಷಿಸುವಂತೆ ಮಾಡಬಹುದು. ಆದರೆ ಬೇಟೆ ಸಂಸ್ಕೃತಿ ಕಾಲದಲ್ಲಿ ಹೀಗೆ ವಿಮರ್ಶಾತ್ಮಕವಾಗಿ ಪ್ರಶ್ನೆ ಮಾಡುವುದು ಇದ್ದದ್ದು ಅಥವಾ ಇಲ್ಲದ್ದು ನಮಗೆ ತಿಳಿದುಬರುತ್ತಿಲ್ಲ. ಯಾವಾಗಲಾದರೂ ಮತ್ತು ಎಲ್ಲಾದರೂ ಸ್ತ್ರೀ-ಪುರುಷರು ವೈಯಕ್ತಿಕವಾಗಿ ಮುಕ್ತ ವಿಚಾರದಲ್ಲಿ ತೊಡಗಿದ್ದು ಹಾಗೂ ಪುರೋಹಿತವರ್ಗ ಮತ್ತು ಆಡಳಿತ ವರ್ಗಗಳಿಂದ ದೃqsಕರಣಗೊಂಡು ಸ್ಥಾಪನೆಗೊಂಡು ತತ್ವಗಳನ್ನು ಪ್ರತಿಭಟಿಸಿದ್ದರೂ; ಮೂಢನಂಬಿಕೆ ಮತ್ತು ವಿಚಾರಹೀನ ನಂಬಿಕೆಗಳನ್ನು ಮಾತ್ರ ಬಿಟ್ಟುಬಿಡಲೂ ಇಲ್ಲ ಅಥವಾ ಪರಿವರ್ತಿಸಲೂ ಇಲ್ಲ ಎನ್ನುವುದನ್ನು ನಾವು ಮಾನವ ಇತಿಹಾಸ ಕಾಲದಲ್ಲಿ ಕಾಣುತ್ತೇವೆ.

* * *

ಈ ಕೃತಿ ಮುಕ್ತ ವಿಚಾರವನ್ನು ಕುರಿತದ್ದು. ವಿಮರ್ಶಾತ್ಮಕ ಚಿಂತನೆ ಹಾಗೂ ಮುಕ್ತತರ್ಕ ಇದರ ಹಂಬಲ. ಪ್ರಶ್ನೆ ಮಾಡುವ, ಪ್ರತಿಭಟಿಸುವ; ಆಳರಸರ ಹಾಗೂ ಮಠಮಾನ್ಯಗಳ ನಂಬಿಕೆಗಳು, ಅಭಿಪ್ರಾಯಗಳು ಮತ್ತು ಹಕ್ಕುಗಳನ್ನೂ ತಲೆಕೆಳಗು ಮಾಡಿ ಸರಿಸಮ ಮಾಡುವ ಧೈರ್ಯವಂತ ಸ್ತ್ರೀ ಪುರುಷರನ್ನು ಇದು ಮಾನ್ಯ ಮಾಡುತ್ತದೆ. ಜೀವಿ ಹಾಗೂ ಜೀವನದ ಅರ್ಥ ಮತ್ತು ಉದ್ದೇಶದ ಹುಡುಕಾಟ ಹಾಗೂ ಅರ್ಥಮಾಡಿಕೊಳ್ಳುವ ಮಾನವನ ವ್ಯಾಪಾರವನ್ನು ಇದು ತಿಳಿಸುತ್ತದೆ. ಹಾಗೂ ಕೊನೆಯದಾಗಿ, ಸತ್ವಪೂರ್ಣ ಪ್ರಜಾಪ್ರಭುತ್ವ ಮತ್ತು ಸ್ತ್ರೀ-ಪುರುಷರ ಹಕ್ಕುಗಳ ಹುಟ್ಟಿಗೆ ಕಾರಣವಾದ ಯೋಚನಾ ವಿಧಾನ ಮತ್ತು ಪ್ರತಿಕ್ರಿಯೆಗಳನ್ನು ಸಹಿಸುತ್ತದೆ; ಅವರ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಇತರರಿಗೆ ಭಯರಹಿತ ಮುಕ್ತ ಅಭಿಪ್ರಾಯ ಸ್ವಾತಂತ್ರ್ಯವನ್ನೂ ಒದಿಗಸುತ್ತದೆ.

‘ಮುಕ್ತವಿಚಾರ’ ಎನ್ನುವುದು ಆಧಾರರಹಿತ ಊಹಾಪೋಹದ ಮೇಲಾಗಲಿ ಅಥವಾ ಅವಿಚಾರದ ನಂಬಿಕೆ (Credulity) ಮೇಲಾಗಲೀ ಅವಲಂಬಿತವಾಗಿಲ್ಲ. ವಿವೇಕ, ತರ್ಕ, ವಿಶ್ಲೇಷಣೆ ಹಾಗೂ ಪರೀಕ್ಷೆ ಮುಂತಾದವುಗಳ ಸಂಯೋಗವನ್ನು ಇದು ಒಳಗೊಂಡಿರುತ್ತದೆ. ಮಾತನಾಡಲು ಗಾಳಿಯಲ್ಲಿ ತೇಲಿಬಿಟ್ಟ ಬರೀ ಊಹೆಗಳಾಗಲಿ, ಅಥವಾ ‘ಇರಬಹುದುಗಳು’ ಮತ್ತು ‘ಬಹುಶಃಗಳನ್ನು’ ಹೊಂದಿರುವವು ಮುಕ್ತ ವಿಚಾರವನ್ನು ಸ್ಥಾಪಿಸಲಾರವು. ಯಾವಾಗಲಾದರೂ ಹೊಸ ವಿಚಾರ ದೊರಕಿದರೆ; ಶಿಸ್ತು ಬದ್ಧ ಯೋಚನೆ, ಜಾಗರೂಕ ಮೌಲ್ಯಮಾಪನ ಹಾಗೂ ಬದಲಾವಣೆ ಮತ್ತು ಬೆಳವಣಿಗೆಗೆ ಮುಕ್ತತೆ ಇರಬೇಕಾಗುತ್ತದೆ. ‘ಬುದ್ದಿ’ ಮತ್ತು ‘ಭಾವನೆಯನ್ನು’ ಮುಕ್ತವಾಗಿ ಮತ್ತು ಜೀವಂತವಾಗಿಟ್ಟಿರುವುದರಲ್ಲಿ ಮುಕ್ತ ವಿಚಾರ ಶೋಧಕನನ್ನು ಸಾಹಸಿಯನ್ನಾಗಿ ತೊಡಗಿಸಿರುತ್ತದೆ. ಸದಾ ಶೋಧಿಸುವ, ಪ್ರಶ್ನೆ ಮಾಡುವ, ಹುಡುಕುವ ಮತ್ತು ಕೊನೆಯ ಉತ್ತರಗಳು ಎನ್ನುವುವು ಯಾವಾಗಲೂ ಕೊನೆಯಲ್ಲ ಎನ್ನುವ ಎಚ್ಚರಿಕೆ ಹಾಗೂ ‘ಅಂತಿಮ ಸತ್ಯ’ ಎನ್ನುವುದು ಯಾವಾಗಲೂ ನಮ್ಮ ಅನುಭವಾತೀತವಾದುದು ಎನ್ನುವುದು ಮುಕ್ತವಿಚಾರ. ಮುಕ್ತ ವಿಚಾರ ಸದಾ ಕತ್ತಿಯ ಅಲಗಿನ ಮೇಲೆ ಮತ್ತು ಮುಂಚೂಣಿಯಲ್ಲಿರುತ್ತದೆ. ಹಳೆಯದು ಅಥವಾ ಪೂಜ್ಯವಾದುದು ಎನ್ನುವ ಒಂದೇ ಕಾರಣಕ್ಕಾಗಿ ಹಳೆಯದನ್ನು ಮಾನ್ಯಮಾಡದೆ ಪ್ರಜ್ಞಾಪೂರಕವಾಗಿ ಹೊಸದಕ್ಕೆ ಇದು ತೆರೆದುಕೊಳ್ಳುತ್ತದೆ. ‘ಸಂಪ್ರದಾಯ’ ಎಂದು ಘೋಷಿಸಿಕೊಳ್ಳುವುದನ್ನು ಇದು ಒಪ್ಪದಿರುವುದು ಅದರ ವೈಚಾರಿಕತೆಯನ್ನು ಹೊಗಳಬಹುದಾದ ಅಧಿಕಾರವಾಗಿರುತ್ತದೆ.

‘ಮುಕ್ತ ವಿಚಾರ’ ಎನ್ನುವುದು ‘ವಿಮರ್ಶಾತ್ಮಕ ಚಿಂತನೆ’ ಅಥವಾ ‘ಸ್ವತಂತ್ರ ಚಿಂತನೆ’ಗಳಿಗೆ ತುಂಬಾ ಹತ್ತಿರವಾದುದು. ಇವುಗಳಲ್ಲಿ ಪ್ರತಿಯೊಂದೂ ವ್ಯಕ್ತಿಗತವಾಗಿದ್ದು; ಬೇರೆಯವರ ಅಭಿಮತ, ಅಭಿಪ್ರಾಯಗಳನ್ನು ಕುರುಡಾಗಿ ಒಪ್ಪದೆ ‘ವಿವೇಚನೆ’ ಮತ್ತು ‘ಮುಕ್ತ ಶೋಧನೆ’ ಆಧಾರದ ತೀರ್ಮಾನವಾಗಿರುತ್ತದೆ. ಇದು ಸತ್ಯವೆಂದು ನಮಗೆ ಹೇಗೆ ಗೊತ್ತಾಗುತ್ತದೆ? ಈ ತೀರ್ಮಾನಕ್ಕೆ ಪೂರಕವಾಗುವ ಸಾಕ್ಷಿ ಯಾವುದು? ಈ ನಂಬಿಕೆಯನ್ನು ಪುಷ್ಟೀಕರಿಸುವ ಮೂಲಭೂತ ಪೂರ್ವಕಲ್ಪನೆಗಳು ಯಾವುವು? ಹಾಗೂ ಅವುಗಳ ನ್ಯಾಯಸಮ್ಮತೆಯನ್ನು ನಾವು ಹೇಗೆ ಪರೀಕ್ಷಿಸಬೇಕು? ಮುಂತಾದ ಮೂಲಭೂತ ಪ್ರಶ್ನೆಗಳನ್ನು ಮುಕ್ತವಿಚಾರ ಉಂಟು ಮಾಡುತ್ತದೆ. ಇಂದು ನಾವು ಮುಕ್ತ ವಿಚಾರದ ವಿಶ್ಲೇಷಣೆಯಲ್ಲಿ ವಿವೇಕ ಮತ್ತು ತರ್ಕಗಳನ್ನು ಇಟ್ಟುಕೊಂಡು ಮುಕ್ತ ಪರೀಕ್ಷೆ ಮತ್ತು ಮರುಪರೀಕ್ಷೆಯ ವೈಜ್ಞಾನಿಕ ಮಾರ್ಗವನ್ನು ಉಪಯೋಗಿಸುತ್ತಿದ್ದೇವೆ. ಈ ಮಾರ್ಗಗಳು ಬದಲಾವಣೆ ಆಧಾರಿತ ಹೊಸ ಆವಿಷ್ಕಾರಗಳಿಗೆ ಯಾಂತ್ರಿಕವಾಗಿ ಬಾಗಿಲು ತೆರೆಯುತ್ತವೆ.

ವಿಮರ್ಶಾತ್ಮಕ ಮತ್ತು ಸ್ವತಂತ್ರ ಚಿಂತನೆ ಮಾನವ ಸಂತತಿಯಷ್ಟೇ ಹಳೆಯವು ಎನ್ನುವುದನ್ನು ಪ್ರಸ್ತುತ ಅಧ್ಯಯನ ಬೆಳಕು ಚೆಲ್ಲುತ್ತಿದೆ. ಬರಹದ ದಾಖಲು ಹೊಂದಿರುವ ಪ್ರತಿಯೊಂದು ಸಂಸ್ಕೃತಿಯಲ್ಲಿ ದೊರೆಯುವ ಕಲ್ಪನೆಗಳು ಮತ್ತು ಅಭಿಪ್ರಾಯಗಳಿಗೆ ಇದ್ದ ಪ್ರತಿಭಟನೆ; ನಂಬಿಕೆಗಳನ್ನು ಬರಹದ ರೂಪದಲ್ಲಿ ದಾಖಲುಗೊಳಿಸುವುದಕ್ಕೆ ಲಕ್ಷಾಂತರ ವರ್ಷಗಳಿಗೂ ಹಿಂದೆ ರೂಢಿಯಲ್ಲಿದ್ದ ಇಂತಹ ಪ್ರಶ್ನೆ ಮಾಡುವ ಗುಣವನ್ನು ಊಹೆ ಮಾಡಬಹುದಾಗಿದೆ. ಮೇಲೆ ಮೇಲೆ ಯಾವುದನ್ನು ಪ್ರತಿಪಾದಿಸಲಾಯಿತೋ ಅದು ಶಕ್ತಿ ಮತ್ತು ಅಧಿಕಾರದ ಪರಮ ಸತ್ಯವನ್ನು ತಿರಸ್ಕರಿಸಲಾರದೆ; ನಿಸರ್ಗದ ಪ್ರಪಂಚ ಜ್ಞಾನವನ್ನು ವಿಸ್ತರಿಸುತ್ತಾ ನೀತಿ, ನಿಯಮ, ನಡವಳಿಕೆ, ಮಾನವ ಸಂಬಂಧ, ಮಾನವ ಸ್ವಾತಂತ್ರ್ಯ ಹಾಗೂ ಮಾನವ ಬದುಕಿನ ಗುಣ-ಮಟ್ಟಗಳ ಹೆಚ್ಚಳದ ಮೂಲಕ ಮಾನವನ ಏಳಿಗೆಗೂ ಕಾರಣವಾಗಿದೆ.

ದುರದೃಷ್ಟವಶಾತ್ , ಇಂದು ಬಹಳಷ್ಟು ಜನ ಮುಕ್ತಚಿಂತನೆ ಅಥವಾ ವಿಮರ್ಶಾತ್ಮಕ ಚಿಂತನೆಯನ್ನು ತಮ್ಮ ಬದುಕಿನ ಎಲ್ಲ ರಂಗಗಳಲ್ಲಿ ಅಳವಡಿಸಿಕೊಳ್ಳಲು ಸಿದ್ಧರಿಲ್ಲ. ನಡವಳಿಕೆ ಹಾಗೂ ನಂಬಿಕೆಗಳನ್ನು ಕುರುಡಾಗಿ ಒಪ್ಪಿದುದರ ಫಲವಾಗಿ ಪರಧರ್ಮ ವಿರೋಧ, ಜನಾಂಗವಾದ, ಸ್ವಮತಾಭಿಮಾನ, ವಿಜ್ಞಾನ ವಿರೋಧಭಾವ ಮತ್ತು ಅನುಕಂಪ ಅಥವಾ ಅರ್ಥಮಾಡಿಕೊಳ್ಳುವಿಕೆಯನ್ನು ದೃqsಕರಿಸುವ ಅಭಾವ; ಇತರರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮಿತಿಗೊಳಿಸಿದೆ. ಮಠಮಾನ್ಯಗಳು ಅಥವಾ ಅಧಿಕಾರ ಮಾನ್ಯ ಮಾಡಿದ ಅಥವಾ ತಿರಸ್ಕರಿಸಿದ ಸ್ವಮತಾಭಿಮಾನ, ನಡವಳಿಕೆಗಳು, ನಂಬಿಕೆಗಳು, ಮನೋಸ್ಥಿತಿ, ಜೀವನ ಶೈಲಿಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸದೆ ಅಥವಾ ತೀರ್ಮಾನಿಸದೆ ಒಪ್ಪಿದರೆ, ಸಮಾಜದ ಮೇಲೆ ಅಥವಾ ಮಾನವ ಸ್ವಾತಂತ್ರ್ಯದ ಮೇಲೆ ಕೂಡ ಅದರ ಪರಿಣಾಮ ಅವಿಚಾರವಾಗಿರುತ್ತದೆ. ಇಲ್ಲೇ ಮುಕ್ತ ವಿಚಾರ ಚಳುವಳಿ ಭಿನ್ನವಾಗಿ ನಿಲ್ಲುವುದು. ಯಾವುದೇ ವಿಚಾರಸರಣಿ ಅಥವಾ ಪ್ರಬಂಧ ಅಥವಾ ಕಲ್ಪನೆ ಪ್ರತಿಭಟನೆಗೆ ಮುಕ್ತವಾದರೆ ಹಾಗೂ ತರ್ಕದ, ವಿವೇಕದ ಹಾಗೂ ವೈಜ್ಞಾನಿಕ ಶೋಧನೆ ಆಧಾರದ ಮೇಲೆ ಮತ್ತು ಮಾನವ ಕಲ್ಯಾಣದ ಮೇಲಿನ ಪರಿಣಾಮ ಹಾಗೂ ಮಾನವ ಸ್ವಾತಂತ್ರ್ಯದ ಆಧಾರದ ಮೇಲೆ ಒಪ್ಪುವುದನ್ನು ಮುಕ್ತವಿಚಾರ ಉಳಿಸಿಕೊಳ್ಳುತ್ತದೆ.

* * *

ಲಿಖಿತ ದಾಖಲಾತಿಗಳನ್ನು ನಾವು ಹೊಂದಿದ್ದರೂ, ವ್ಯಕ್ತಿಗಳ ಮನೋಭಾವನೆಯ ಯೋಚನೆಗಳನ್ನು ದಾಖಲಿಸಿಲ್ಲದಿರುವುದನ್ನು ಅಥವಾ ಕಳೆದುಹೋಗಿರುವುದನ್ನು ಅರ್ಥಮಾಡಿಕೊಳ್ಳಲು ನಮಗೆ ಮಾರ್ಗಗಲೇ ಇಲ್ಲ. ಉದಾ : ಭೂ ಕಾಯಿದೆಯನ್ನು ಕೊರೆದಿದ್ದ ಕಪ್ಪು ಡಯೋರೈಟ್ ಖನಿಜದ ಹಲಗೆಯ ಶಾಸನವನ್ನು (ಈಗ ಅದು ಲವ್ರೆಯಲ್ಲಿದೆ) ಬೆಬಿಲೋನಿಯಾದ ದೊರೆ ಹಮ್ಮುರಾಬಿ ಹೊಂದಿದ್ದ. ಆ ಶಾಸನವನ್ನು ನ್ಯಾಯ ರಕ್ಷಕ ಸೂರ್ಯದೇವನಾದ ಶಮಾಶ್ ನಿಂದ ನೇರವಾಗಿ ಪಡೆದಿದ್ದೆಂದು ತಾನೇ ಹೇಳಿಕೊಳ್ಳುತ್ತಿದ್ದ. ವಾಸ್ತವಿಕವಾಗಿ, ಶಿಲಾಶಾಸನದ ಮೇಲಿನ ಭಾಗದಲ್ಲಿ; ಕುಳಿತಿರುವ ಸೂರ್ಯದೇವನ ಮುಂದೆ ಹಮ್ಮುರಾಬಿ ನಿಂತಿರುವ ಚಿತ್ರವಿರುವುದು ಕಂಡುಬಂದಿದೆ. ಕಾಯಿದೆಯನ್ನು ಜಾರಿಗೊಳಿಸುವುದು ರಾಜನ ಪವಿತ್ರ ಕರ್ತವ್ಯ ಎನ್ನುವುದನ್ನು ಊಹಿಸಬಹುದು.

ಸೂರ್ಯ ಒಂದು ದೇವರೆ? ಅಥವಾ ಹಮ್ಮುರಾಬಿಗೆ ನೇರವಾಗಿ ಸೂರ್ಯ ಕಾನೂನು ಅಥವಾ ಕಾಯ್ದೆಗಳನ್ನು ಕೊಟ್ಟನೆ? ಎನ್ನುವ ಪ್ರಶ್ನೆಗಳು ಮುಕ್ತ ಚಿಂತಕನಿಗೆ ಎದುರಾಗುತ್ತವೆ. ಹೀಗೆ ಅವನು ಮುಕ್ತವಾಗಿ ಪ್ರಶ್ನೆ ಮಾಡುವುದಕ್ಕೆ ಮುಂಚೆ ಮಠಮಾನ್ಯ ಮತ್ತು ಅಧಿಕಾರವನ್ನು ಪ್ರಶ್ನೆ ಮಾಡಬೇಕಾಗುತ್ತದೆ. ಪರಂಪರಾಗತವಾಗಿ ಪಾಲಿಸಿಕೊಂಡು ಬಂದ ಕಾಯಿದೆಗಳಿಗಿಂತ ಸ್ವಲ್ಪ ಹೆಚ್ಚು ಪ್ರಭಾವಯುತವಾಗಿ ಪಾಲನೆಗೆ ಒಳಪಟ್ಟ ಕಾಯಿದೆಗಳು ಪಾವಿತ್ರ್ಯತೆಯ ಅನುಮೋದನೆ ಪಡೆದಿದ್ದವು ಎನ್ನುವುದನ್ನು ಗಮನಿಸುತ್ತಾನೆ. ಶಮಾಶ್ ನನ್ನು ಹೊರೆತುಪಡಿಸಿ ಮತ್ತಾವುದೋ ದೇವರಿಂದ ಬಂದವೆಂದು ಹಿಂದಿನ ಪ್ರತಿಯೊಬ್ಬ ರಾಜನೂ ದೃqsಕರಿಸಿರುವ ನಿಯಮಗಳನ್ನು ಹಮ್ಮುರಾಬಿ ಕಾನೂನುಗಳೂ ಪ್ರತಿಫಲಿಸಿರುವುದನ್ನು ಅದೇ ಮನುಷ್ಯ ಗಮನಿಸುತ್ತಾನೆ. ಹಣವಂತರಿಗೆ ಮತ್ತು ಶಕ್ತಿವಂತರಿಗೆ ಒಂದು ರೀತಿಯ ನಿಯಮಗಳು ಹಾಗೂ ಬಡವರಿಗೆ ಮತ್ತು ಗುಲಾಮರಿಗೆ ಮತ್ತೊಂದು ರೀತಿಯ ಕಾನೂನುಗಳನ್ನು ದೃqsಕರಿಸಿರುವುದನ್ನು ನ್ಯಾಯಸಮ್ಮತ ಮುಕ್ತಚಿಂತಕ ಪ್ರಶ್ನಿಸಿರುತ್ತಾನೆ. ಆದರೆ ಆಗಿನವೇ ಬೇರೆ ಕಾಲಗಳು. ಪ್ರತಿಭಟನೆಗಳು ಸಮಾಜದಿಂದ ಬಹಿಷ್ಕಾರ ಅಥವಾ ಸಾವು ಮುಂತಾದ ಅಪಾಯಕಾರಿ ಶಿಕ್ಷೆಯ ತೊಂದರೆಗಳೇ ಆಗಿದ್ದವು. ಇಂದು ವಿದ್ವಾಂಸರು ಅಂತಹೊಎಲ್ಲ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಪುರಾತನ ಕಾಲದ ಉದ್ದಕ್ಕೂ ಮಾನವನಿಗೆ ವಿಧಿಸಿದ್ದ ನಿಯಮಗಳ ಹಿಂದೆ ದೈವಿಕ ಪ್ರೇರಣೆ ಇದೆ ಎನ್ನುವ ಭಾವನೆ ಜನಗಳಲ್ಲಿ ಇತ್ತು. ಸೂರ್ಯ ಒಂದು ಸಣ್ಣ ನಕ್ಷತ್ರ ಎನ್ನುವುದು ನಮಗೆ ಗೊತ್ತು. ಅದು ದೇವರಾದರೆ; ವಿಶ್ವದಲ್ಲಿರುವ ಅಸಂಖ್ಯಾತ ನಕ್ಷತ್ರಗಳು, ಆಕಾಶಕಾಯಗಳು ಎಲ್ಲವೂ ದೇವರುಗಳೇ! ಎನ್ನುವ ಜಿಜ್ಞಾಸೆ ಮುಕ್ತಚಿಂತಕನಿಗೆ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ವ್ಯಕ್ತಿ ಕೇಂದ್ರಿತ ಅಧಿಕಾರವನ್ನು ನಾವು ತ್ಯಜಿಸಿದ್ದೇವೆ. ದೈವ ಶಕ್ತಿಯನ್ನು ಕುರಿತ ಅವನ ಅಥವಾ ಅವಳ ಬೇಡಿಕೆ ಏನೇ ಇದ್ದರೂ ಅದು ಅಪ್ರಸ್ತುತ. ಒಬ್ಬರಿಗೊಂದು ಒಬ್ಬರಿಗೊಂದು ಎನ್ನುವ ತಾರತಮ್ಯದ ಕಾನೂನುಗಳನ್ನು ನಾವು ತಿರಸ್ಕರಿಸಿದ್ದೇವೆ. ನ್ಯಾಯ ಎಲ್ಲರಿಗೂ ಎನ್ನುವುದರಲ್ಲಿ ಮುಕ್ತ ಚಿಂತಕನ ನಂಬಿಕೆ.

ಮುಕ್ತವಿಚಾರ ಇತ್ತೀಚಿನದಾದರೆ, ಮುಕ್ತ ಚಿಂತನೆ ಎನ್ನುವುದು ಬಹಳ ಹಿಂದಿನದು ಹಾಗೂ ಮುಕ್ತವಿಚಾರದ ಪರಂಪರೆ ತುಂಬಾ ಸಂಮೃದ್ಧವಾದುದು. ಮಾನವ ಇತಿಹಾಸದುದ್ದಕ್ಕೂ ಅಧಿಕಾರಯುತ ಅಭಿಪ್ರಾಯವನ್ನು, ಅಲೌಕಿಕ ಶಕ್ತಿಯಲ್ಲಿನ ಬುದ್ದಿಪೂರ್ವಕ ನಂಬಿಕೆಯನ್ನು ಪ್ರಶ್ನೆ ಮಾಡಿರುವರು. ಅಲೌಕಿಕ ಅನುಭವಗಳಾಗಿವೆ ಎಂದು ಅಧಿಕಾರಯುತವಾಗಿ ಘೋಷಿಸಿಕೊಳ್ಳುವವರ ಸತ್ಯತೆಯ ಬಗ್ಗೆ ಅಥವಾ ಪ್ರವಾದಿಗಳೆಂದು ಅಥವಾ ಪುರೋಹಿತರೆಂದು ಹೇಳಿಕೊಂಡು ಅಲೌಕಿಕ ವ್ಯಕ್ತಿ ಅಥವಾ ವ್ಯಕ್ತಿಗಳ ಪರವಾಗಿ ಹೇಳಿಕೊಳ್ಳುವವರ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಮನುಷ್ಯರು ಬಯಸುವ ಅಥವಾ ಅವರಿಗೆ ಬೇಕಾಗಿರುವ ದೈವತ್ವ ಅಥವಾ ಅಮರತ್ವಗಳನ್ನು ಪಡೆಯುವುದರ ಮೇಲೆ ಜ್ಞಾನಾಧಾರಿತ ಪ್ರಾರ್ಥನೆಗಳು, ಸಂಪ್ರದಾಯಗಳು, ನಿವೇದನೆಗಳು ಮತ್ತು ಸಮರ್ಥನೆಗಳ ಪರಿಣಾಮವನ್ನು ಕುರಿತು ಪ್ರಶ್ನೆಗಳನ್ನು ಎತ್ತಲಾಯಿತು. ದೇವರು ನೀಡಿರುವ ಅಧಿಕಾರ ಅಥವಾ ದೈವಾಂಶ ಸಂಭೂತರೆಂದು ಹೇಳಿಕೊಳ್ಳುವವರ ಹಕ್ಕನ್ನು ಪ್ರಶ್ನಿಸಲಾಯಿತು. ರಾಜರು, ಚಕ್ರವರ್ತಿಗಳು ಮತ್ತು ಅವತಾರ ಪುರುಷರು ಮತ್ತು ಪುರೋಹಿತರು ದೇವರ ಕಾರ್ಯಪಡೆಯೆಂದು ಹೇಳಿಕೊಳ್ಳುವವರನ್ನು ಅನುಮಾನ ಪಟ್ಟು ವಿಚಾರಣೆಗೆ ಒಳಪಡಿಸಬೇಕು. ಪರಿಣಾಮವಾಗಿ, ಮಾನವರನ್ನು ಕೀಳೆಂದು ಅಥವಾ ಪಾಪದ ಹುಳುಗಳೆಂದು ಹಣೆಪಟ್ಟಿ ಹಚ್ಚದೆ, ಮಾನಯತೆ ಮತ್ತು ಮಾನಯತೆಯ ಸಾಮರ್ಥ್ಯವನ್ನು ಎತ್ತಿ ಹಿಡಿದು ಮುಕ್ತ ಚಿಂತಕರು ಆನಂದಪಟ್ಟಿದ್ದಾರೆ.

* * *

ಒಂದು ಸಂಸ್ಕೃತಿಯ ನಂತರ ಮತ್ತೊಂದು ಸಂಸ್ಕೃತಿ; ಹೀಗೆ ಬೇರೆ ಬೇರೆ ಕಾಲಗಳಲ್ಲಿ ಉದಯಿಸಿದ ಅಥವಾ ಬೇರೆ ಬೇರೆ ಪ್ರದೇಶಗಳಲ್ಲಿ ಒಂದೇ ಕಾಲದಲ್ಲಿ ಉದಯಿಸಿದ ಬಹುಸಂಸ್ಕೃತಿಗಳಲ್ಲಿ ನೀತಿ ಮತ್ತು ಶಿಕ್ಷಣ ಧರ್ಮಪ್ರಭಾವದ ಚಿಂತನೆಯಿಂದ ಹಾಗೂ ದೈವತ್ವ ಪಡೆಯುವ ಚಿಂತನೆಯಿಂದ ಮುಕ್ತವಾಗಬೇಕೆಂಬ ಹಾಗೂ ಅನುಮಾನಿಸುವವರು ಮತ್ತು ನಾಸ್ತಿಕರು ಇದ್ದಿದ್ದರಿಂದ, ಧಾರ್ಮಿಕ ನಂಬಿಕೆಯ ವಿಧಾನದ ಒಳಗೆ ಮುಕ್ತ ವಿಚಾರ ಉಂಟಾಯಿತು. ಆದುದರಿಂದ; ದೇವರುಗಳ ಅನೇಕತ್ವದ ಹಿಂದೂ ಧರ್ಮವನ್ನು ಬುದ್ಧ ತ್ಯಜಿಸಿದಾಗ ಹಾಗೂ ಮಾನವನ ಅಸ್ತಿತ್ವದ ಅರ್ಥದ ಬಗ್ಗೆ ಅವನ ಸ್ವತಂತ್ರ ಹುಡುಕಾಟ ಪ್ರಾರಂಭವಾದಾಗ, ಪುರಾತನ ಭಾರತದ ಸಾಮಾಜಿಕ ಮತ್ತು ಧಾರ್ಮಿಕ ಸಂದರ್ಭದಲ್ಲಿ ಅವನೊಬ್ಬ ಮುಕ್ತಚಿಂತಕ ಅಥವಾ ಒಬ್ಬ ಸ್ವತಂತ್ರ ಚಿಂತಕ ಆಗಿದ್ದನು. ಪುರಾತನ ಅರೇಬಿಯಾದ ಬಹು ದೇವರುಗಳ ಧರ್ಮದಿಂದ ಮಹಮದ್ ಬೇರ್ಪಟ್ಟು ಇಸ್ಲಾಂ ಅನ್ನು ಸ್ಥಾಪಿಸಿದಾಗ; ಅವನೊಬ್ಬ ಆರನೇ ಶತಮಾನದ ಮುಕ್ತಚಿಂತಕ ಅಥವಾ ಸ್ವತಂತ್ರ ಚಿಂತಕ ಆಗಿದ್ದನು. ಪರಂಪರಾಗತ ಇಸ್ಲಾಂನಲ್ಲೇ ಸಂಘರ್ಷಕ್ಕೆ ಕಾರಣವಾದ ಕಲ್ಪನೆಗಳನ್ನು ಆ ಧರ್ಮದ ತತ್ವಜ್ಞಾನಿಗಳು ಮತ್ತು ಕವಿಗಳು ವ್ಯಕ್ತಪಡಿಸಿದಾಗ ಒಳಪಂಗಡಗಳು ಉಂಟಾದವು. ಆದುದರಿಂದ, ಒಂದು ರೀತಿಯಲ್ಲಿ ತತ್ವಜ್ಞಾನಿಗಳು ಮತ್ತು ಕವಿಗಳು ಮುಕ್ತಚಿಂತಕರೇ ಆಗಿದ್ದರು. ರೋಮ್ ನಗರದ ಚರ್ಚ್‌ನ ಪರಂಪರಾಗತ ಅಧಿಕಾರ ಮತ್ತು ತತ್ವದಿಂದ ಮಾರ್ಟಿನ್ ಲೂಥರ್ ಬೇರ್ಪಟ್ಟಾಗ, ಅವನೂ ಒಬ್ಬ ಮುಕ್ತ ಚಿಂತಕ ಆಗಿದ್ದನು. ಮುಂದುವರೆದು, ಅವನು ಬಾಹ್ಯ ಅಧಿಕಾರವಾದ ಬೈಬಲ್ಲನ್ನು ಚರ್ಚಿನ ಸ್ಥಾನಕ್ಕೆ ಬದಲಿಸಿದನು; ಆದರೆ ಅವನು ಚಾಲನೆಗೊಳಿಸಿದ ಒಡಕು ಮತ್ತೆ ವಿಷಯಾಂತರವಾಗಲು ಬಾಗಿಲು ತೆರೆದುಕೊಂಡು, ತಟಸ್ಥ ಆಸ್ತಿಕವಾದ (Desim) ಮತ್ತು ಆಧುನಿಕ ಸಾಮ್ರಾಜ್ಯತನಕ್ಕೆ ಕೊಡುಗೆಯಾಯಿತು.

ನಮ್ಮ ಪೂರ್ವಿಕರಿಗಿಂತ ಭಿನ್ನವಾದ ಕಾಲ ಮತ್ತು ಸ್ಥಳದಲ್ಲಿ ನಾವು ಇಂದು ವಾಸಿಸುತ್ತಿದ್ದೇವೆ. ನಮ್ಮ ಪ್ರಪಂಚವನ್ನು ಅರ್ಥೈಸಲು, ಅವರಿಗೆ ತಿಳಿದಿರದಿದ್ದ ಉಪಕರಣಗಳು ಇಂದು ನಮ್ಮ ಕೈನಲ್ಲಿವೆ. ನಾವು ಯಾರು? ನಾವು ಹೇಗೆ ಬಂದೆವು? ಮತ್ತು ನಾವು ಎಲ್ಲಿದ್ದೇವೆ? ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಈ ಉಪಕರಣಗಳು ಗೊತ್ತು ಮಾಡುತ್ತವೆ. ಇಂದು, ನಾವು ಏನನ್ನು ಯೋಚಿಸುತ್ತೇವೆ, ಏನು ಗೊತ್ತಿದೆ ಎನ್ನುವುದನ್ನು ವಿಸ್ತರಿಸಲು ನಿರಂತರವಾಗಿ ಸ್ವತಂತ್ರ ಮತ್ತು ಮುಚ್ಚುಮರೆ ಇಲ್ಲದ ಶೋಧನೆ ನಡೆಯುತ್ತಿದೆ ಮತ್ತು ಸಧ್ಯ ಹೊಂದಿರುವ ಅಭಿಪ್ರಾಯಗಳು ಮತ್ತು ನಂಬಿಕೆಗಳ ಬಗ್ಗೆ ಕಾರ್ಯಾಕಾರಣ ಸಂಬಂಧ ಮತ್ತು ವಿಜ್ಞಾನವನ್ನು ಬಳಸಿಕೊಳ್ಳುತ್ತಿರುವುದರಿಂದ ಅಪನಂಬಿಕೆ ಉಂಟಾಗಿ ಹಳೆಯದರಿಂದ ಬೇರ್ಪಡಿಸಿಕೊಂಡು ದೂರ ಹೋಗುತ್ತಿದ್ದೇವೆ, ಬಹುಶಃ ರಕ್ಷಣೆಯ ಕಾರಣಕ್ಕಾಗಿ ಅಥವಾ ಇತರ ಕಾರಣಗಳಿಗಾಗಿ ಇನ್ನೂ ಹಳೆಯದಕ್ಕೇ ಅಂಟಿಕೊಂಡಿರುವ ಕೆಲವರು ನಮ್ಮ ಮಧ್ಯೆ ಇದ್ದಾರೆ. ಪರಿಚಯವಿರುವುದರಲ್ಲಿ ಸುಖ ಮತ್ತು ಸಮಾಧಾನವನ್ನು ಕಂಡುಕೊಂಡಿರುವುದು ಹಾಗೂ ಹೊಸದರಲ್ಲಿ ಇದು ಲಭಿಸುವುದರ ಬಗ್ಗೆ ಅನುಮಾನ ಇರುವುದರಿಂದ ಅವರು ಹಳೆಯದಕ್ಕೇ ಅಂಟಿಕೊಂಡಿರಲು ಕಾರಣವಿರಬಹುದು. ಅವರು ಹೀಗಿರಲು ಅವರ ಹಕ್ಕುಕೂಡಾ ಆಗಿದೆ. ಆದರೆ ಅದು ನೈತಿಕ ಆಧಾರದ ಹಕ್ಕಂತೂ ಅಲ್ಲ.

ನಮ್ಮ ಪೂರ್ವಿಕರು ತಾವು ಕಂಡಂತಹ ಮತ್ತು ಕೇಳಿದಂತಹ ಎಲ್ಲವನ್ನೂ ಗ್ರಹಿಸಿ, ಅರ್ಥಮಾಡಿಕೊಂಡು ವಿವರಿಸಲು ಪ್ರಯತ್ನಿಸಿದರು. ಅವರು ಅರ್ಥೈಸಿಕೊಂಡಂತೆ ವಿಶ್ವದಲ್ಲಿನ ತಮ್ಮ ಸ್ಥಾನವನ್ನು ವಿವರಿಸುತ್ತಿದ್ದರು ಮತ್ತು ಹೊಗಳಿಕೊಳ್ಳುತ್ತಿದ್ದರು. ಉದಾ : ನಮಗೆಲ್ಲ ತಿಳಿದಿರುವಂತೆ ಆಕಾಶ ಭೂಮಿಯನ್ನು ದಿಗಂತದಲ್ಲಿ ಸ್ಪರ್ಶಿಸಿದಂತೆ ಕಾಣುತ್ತದೆ. ನಾವು ದಿಗಂತಗಳ ಕಡೆ ನೋಡಿದಾಗ ಭೂಮಿ ಚಪ್ಪಟೆಯಾದ ತಟ್ಟೆಯಂತೆ, ಆಕಾಶ ಅದರ ಮೇಲೆ ಬೋರಲು ಬಿದ್ದ ತೆಂಗಿನ ಅರ್ಧ ಚಿಪ್ಪಿನಂತೆ ಕಾಣುತ್ತದೆ. ಪ್ರತಿದಿನ ಮುಂಜಾನೆ ಸೂರ್ಯ ಪೂರ್ವ ದಿಗಂತದಲ್ಲಿ ಕಾಣಿಸಿಕೊಳ್ಳುವುದು ಮತ್ತು ಪ್ರತಿ ಸಂಜೆ ಪಶ್ಚಿಮ ದಿಗಂತದಲ್ಲಿ ಮುಳುಗುವುದು ಅಷ್ಟೇ ಸ್ಪಷ್ಟ. ಭೂಮಿಯ ಚಪ್ಪಟೆ ಪ್ರಪಂಚ ಮತ್ತು ಬಾಗಿದ ಆಕಾಶದ ಕಲ್ಪನೆಯಲ್ಲಿರುವವರು ‘‘ಪಶ್ಚಿಮದಲ್ಲಿ ಮುಳುಗಿದ ಸೂರ್ಯ ಬೆಳಕು ಹರಿಯುವ ಹೊತ್ತಿಗೆ ಪೂರ್ವಕ್ಕೆ ಹೇಗೆ ಬಂದ?’’ ಎನ್ನುವ ಪ್ರಶ್ನೆಗೆ ಅವರ ಖಗೋಳ ಜ್ಞಾನದ ಅರ್ಥದ ಮಿತಿಯಲ್ಲೇ ‘‘ರಾತ್ರಿಯಲ್ಲಿ ಸೂರ್ಯ ಭೂಮಿಯ ಕೆಳಗಿರುವ ಸುರಂಗದ ಮೂಲಕ ಹಾದು ಹೋಗಿ ಪೂರ್ವ ದಿಗಂತವನ್ನು ತಲುಪಿರುತ್ತದೆ’’ ಎಂದು ಉತ್ತರಿಸುವುದು ಸ್ವಾಭಾವಿಕ. ವಿಶ್ವದ ಬಗ್ಗೆ ಇದ್ದ ಅವರ ಸೀಮಿತ ಜ್ಞಾನ ಇಂತಹ ಉತ್ತರಕ್ಕೆ ಕಾರಣವಾಗಿರುತ್ತದೆ. ಮಾನವರು ವಿಶ್ವನಿಯಮಗಳನ್ನು ಅರಿಯಲು ಇಂತಹ ಸನ್ನಿವೇಶಗಳು ಕಾರಣವಾದವು.

ಇಂದು, ನಾವು ನಮ್ಮ ಪ್ರಪಂಚವನ್ನು ಬೇರೆ ದೃಷ್ಟಿಕೋನದಿಂದ ಕಾಣುತ್ತಿದ್ದೇವೆ. ಕೋಣೆಯಲ್ಲಿ ಕುಳಿತೇ ಮಾನವ ಚಂದ್ರನ ಮೈಮೇಲೆ ಇಳಿದು ನಡೆದಾಡುವುದನ್ನು ಕಾಣುತ್ತಿದ್ದೇವೆ. ಆಕಾಶ ನಿಲ್ದಾಣದಲ್ಲಿ ಅವನು ನಡೆದಾಡುವುದು ಮತ್ತು ವಾಸಿಸುತ್ತಿರುವುದನ್ನು ನೋಡುತ್ತಿದ್ದೇವೆ. ಭೂಮಿ ಚಪ್ಪಟೆಯಾಗಿಲ್ಲ, ಅದು ಗುಂಡಗೆ ಗೋಲವಾಗಿದೆ, ಆಕಾಶ ಕಮಾನು ಬಾಗಿಲ್ಲ ಎನ್ನುವ ಸತ್ಯಗಳನ್ನು ಪ್ರಾತ್ಯಕ್ಷಿಕತೆಯಿಂದ ತೋರಿಸಬಹುದು. ಇವು ಮುಂದಿನ ಹೊಸ ಅನುಭವಗಳವರೆಗೂ ಸತ್ಯವಾಗೇ ಉಳಿದಿರುತ್ತವೆ. ವಿಶ್ವಕ್ಕೆ ಸಂಬಂಧಿಸಿದಂತೆ ಅತಿ ಕನಿಷ್ಠ ಗ್ರಹದಲ್ಲಿ ನಾವು ಹುಟ್ಟಿ ಜೀವಿಸುತ್ತಿದ್ದೇವೆ ಎನ್ನುವ ಸತ್ಯವನ್ನು ಅರಿಯಲು ಮನುಷ್ಯನಿಗೆ ಸಾಧ್ಯವಾಗಿದ್ದು, ಅವನ ಸತ್ಯಾನ್ವೇಷಣೆಯ ಹಾಗೂ ಮುಕ್ತ ಚಿಂತನೆಯ ಮನೋಸ್ಥಿತಿಯಿಂದ.

ಬಾಹ್ಯ ಶಕ್ತಿಗಳ ಬಗ್ಗೆ ಹೇಳುವುದಾದರೆ, ನಾವು ಈ ಹೊತ್ತು ಮಾಡುತ್ತಿರುವುದನ್ನು ಅಂದೇ ಅವರು ಮಾಡಿದ್ದರು. ಅವರು ಬಾಹ್ಯ ಶಕ್ತಿಗಳನ್ನು ಅಧ್ಯಯನ ಮಾಡಿದ್ದರು ಮತ್ತು ಕಲಿತಿದ್ದರು. ಅವರು ನಿಸರ್ಗ ಮತ್ತು ಪ್ರಕೃತಿಯ ಚಕ್ರಗಳನ್ನು ಪಟ್ಟಿಮಾಡಿದ್ದರು. ಬೇಸಿಗೆ ಮತ್ತು ಮಳೆಗಾಲಕ್ಕೆ ದಾರಿ ಮಾಡುವ ಚಳಿಗಾಲವನ್ನು ವಸಂತ ಋತು ಹಿಂಬಾಲಿಸುವುದು ಅವರಿಗೆ ತಿಳಿದಿತ್ತು. ಯಾವಾಗ ಹಗಲಿನ ಅವಧಿ ಹೆಚ್ಚು ಯಾವಾಗ ಕಡಿಮೆ, ಯಾವಾಗ ರಾತ್ರಿ ಅವಧಿ ಹೆಚ್ಚು ಯಾವಾಗ ಕಡಿಮೆ ಎನ್ನುವುದನ್ನು ತೋರಿಸುವ ಕ್ಯಾಲೆಂಡರುಗಳನ್ನು ಅವರು ತಯಾರಿಸಿದ್ದರು. ಗ್ರಹಗಳ ಮತ್ತು ನಕ್ಷತ್ರಗಳ ಚಲನೆಯನ್ನು ಗಮನಿಸುವುದನ್ನು ಕಲಿತಿದ್ದರು. ಪ್ರಕೃತಿಯಲ್ಲಿನ ತಾಳಗತಿಯನ್ನು ಕಂಡುಕೊಂಡು; ಅದು ಅವರ ಕ್ಷೇಮದ ಮೇಲೆ ಬೀರುವ ಪರಿಣಾಮವನ್ನು ಅರಿತಿದ್ದರು. ಈ ಎಲ್ಲ ನಮೂನೆಗಳು ಏಕೆ ಉಂಟಾದವು. ಋತುಗಳು ಹೇಗೆ ಉಂಟಾದವು, ಪ್ರತಿವರ್ಷ ನಿಗಧಿತ ಅವಧಿಯಲ್ಲೇ ನೈಲ್ ನದಿ ಏಕೆ ಉಬ್ಬುತ್ತದೆ, ಚಂದ್ರನ ಕ್ಷಯ-ವೃದ್ದಿಗಳು ಏಕೆ ಮತ್ತು ಇನ್ನೂ ಮುಂತಾದವನ್ನು ವಿವರಿಸಲು ಅವರಿಗೆ ಸಾಧ್ಯವಾಗಿತ್ತು. ಪ್ರಕೃತಿಯಲ್ಲಿ ತಾವೂ ಒಬ್ಬರು ಎನ್ನುವುದನ್ನು ಅವರು ಕಂಡುಕೊಂಡಿದ್ದರು. ಬದುಕಿನ ಉದ್ದಕ್ಕೂ ಕಂಡುಕೊಂಡದ್ದೆಂದರೆ ಪ್ರಕೃತಿಯ ಅಧ್ಯಯನ. ಹೊರಗಿನ ಬಲಗಳಿಗೆ ಅಥವಾ ಶಕ್ತಿಗಳಿಗೆ ಅಥವಾ ಸಾಮರ್ಥ್ಯಗಳಿಗೆ ಹೆಸರುಗಳನ್ನು ಅಥವಾ ವ್ಯಕ್ತಿತ್ವ ಉಳ್ಳವರ ಹೆಸರುಗಳನ್ನು ನೀಡಿ ಶ್ರೇಷ್ಠ ವ್ಯಕ್ತಿಗಳಾಗಿ ಅವರನ್ನು ಮಾನ್ಯಮಾಡಿದ್ದರು. ಅವರು ಪ್ರಯೋಗಶೀಲ ಜನಗಳಾಗಿದ್ದರು. ಅವರ ಮೂಲಭೂತ ಪ್ರಶ್ನೆ ಎಂದರೆ : ಈ ಅತಿಮಾನುಷ ಶಕ್ತಿಗಳನ್ನು ನಾವು ಹೇಗೆ ನಿಭಾಯಿಸಬೇಕು? ಎನ್ನುವುದು ಆಗಿತ್ತು. ಅವರಿಗೆ ಏನು ತಿಳಿದಿತ್ತೋ ಅದರ ಆಧಾರದ ಮೇಲೆ ಉತ್ತರಗಳನ್ನೂ ಹುಡುಕಿಕೊಂಡಿದ್ದರು. ಅತಿಮಾನುಷ ಶಕ್ತಿಗಳೊಂದಿಗೆ ನಿಭಾಯಿಸುವುದೆಂದರೆ ಅತಿ ಶಕ್ತಿವಂತ ಜನರನ್ನೇ ನಿಭಾಯಿಸಿದಂತೆ ಆಗಿತ್ತು. ಮುಖಸ್ತುತಿ, ಬೇಡುವುದು, ಲಂಚಕೊಡುವುದು, ಕೊಳ್ಳುವುದು ಮುಂತಾದ ಎಲ್ಲ ರೀತಿಯ ನಡತೆಗಳಿಗೆ ಮನುಷ್ಯರನ್ನು ಒಳಪಡಿಸಿದಂತೆ ಮಾನವಗತ ಅತಿಮಾನುಷ ಶಕ್ತಿಗಳಿಗೂ ಒಳಪಡಿಸಬಹುದು. ಸುಳ್ಳು, ಮೋಸ, ವಂಚನೆ ಎನ್ನುವವು ಪುರೋಹಿತರು, ಪ್ರವಾದಿಗಳು, ಸ್ವಾಮಿಗಳು ಹಾಗೂ ಅಗೋಚರ ಶಕ್ತಿಗಳೊಂದಿಗೆ ವ್ಯವಹರಿಸುವ ಶಕ್ತಿಹೊಂದಿದ್ದೇವೆಂದು ಹೇಳಿಕೊಳ್ಳುವ ಎಲ್ಲರ ಜೊತೆಯಲ್ಲೇ ಬಂದಿವೆ ಹಾಗೂ ಹೊರಗಿನ ಶಕ್ತಿಗಳ ಮೇಲೆ ಪರಿಣಾಮಗಳನ್ನು ಬೀರಲು ಮಾಟ, ಮಂತ್ರ ಮುಂತಾದ ಎಲ್ಲ ರೀತಿಯ ಸಂಸ್ಕಾರಗಳು ಮತ್ತು ನಿಯಮಗಳನ್ನು ರೂಪಿಸಿಕೊಳ್ಳಲಾಯಿತು.

ಪ್ರಕೃತಿಯಲ್ಲಿನ ಋತುಚಕ್ರಗಳಿಗೆ ಮಾನ್ಯತೆ ನೀಡಿದ್ದರಿಂದ, ಋತುಗಳ ವಿಧವಿಧದ ನಿಯಮಗಳಿಗೆ ಕಾರಣವಾಗುವ ದೈವ ಸೃಷ್ಠಿತ ವಸ್ತುಗಳ ಸ್ವಭಾವ ಮತ್ತು ಚಟುವಟಿಕೆಗಳನ್ನು ವಿವರಿಸುವ ಕತೆಗಳು ಅಥವಾ ಕಟ್ಟುಕತೆಗಳ ಆಧಾರಿತ ಆಚರಣೆಗಳು ಹುಟ್ಟಿಕೊಂಡವು. ಋತುಗಳ ಸ್ವಾಭಾವಿಕ ಬದಲಾವಣೆಗಳ ಮೇಲೆ ಪ್ರಭಾವ ಬೀರುವ ಹಾಗೂ ಪರಿಣಾಮ ಬೀರುವ ಮಾಟ, ಮಂತ್ರ ಮುಂತಾದ ಆಚರಣೆಗಳನ್ನು ವೃದ್ದಿ ಪಡಿಸಲಾಯಿತು. ಸಂಕ್ರಾಂತಿ ಸಮಯದಲ್ಲಿ ಸೂರ್ಯ ಕಳೆಗುಂದಿದಾಗ ಅದನ್ನು ಮೊದಲಿನಂತೆ ತೇಜೋಮಯವಾಗಿ ಮಾಡಲು ಕೆಲವು ಜನ ಮಾಟ-ಮಂತ್ರಗಳನ್ನೂ ಮಾಡಿರುತ್ತಾರೆ. ಶಿಲುಬೆ ಮರಗಳನ್ನು ಹೊತ್ತಿಸಿ ಬೆಳಕಿನ ಹಬ್ಬಗಳನ್ನು ಆಚರಿಸಿದ್ದಾರೆ. ಸ್ವಾಭಾವಿಕ ಶಕ್ತಿಗಳು ಏಕೆ ಹಾಗೆ ನಡೆದಿವೆ ಎನ್ನುವುದನ್ನು ದೇವರು ಅಥವಾ ದೇವರುಗಳ ಬಗೆಗಿನ ಕಟ್ಟುಕತೆಗಳು ವಿವರಿಸುತ್ತವೆ. ಕತ್ತಲೆಯನ್ನು ವಿರೋಧಿಸಿದ ಅಥವಾ ಭೂಮಿಯನ್ನು ಬರದಿಂದ ತಪ್ಪಿಸಿದ ಸ್ವಾಭಾವಿಕ ಶಕ್ತಿಗಳಾದ ಬೆಳಕು, ಮಳೆ ಮುಂತಾದವುಗಳನ್ನು ಪ್ರತಿನಿಧಿಸುವ ದೇವರುಗಳ ಮಧ್ಯೆ ಇದ್ದ ಸಂಘರ್ಷವನ್ನು ಅಥವಾ ಜೊತೆಗೂಡಿ ಕೆಲಸ ಮಾಡಿದ್ದನ್ನು ಕಟ್ಟುಕತೆಗಳು ಹೇಳುತ್ತವೆ. ಬೇಸಿಗೆಯಲ್ಲಿ ಮಳೆ ಏಕೆ ಬೀಳುವುದಿಲ್ಲ? ಎನ್ನುವುದಕ್ಕೆ ಪ್ಯಾಲಸ್ಟೀನ್‌ನಲ್ಲಿ ಒಂದು ಕಟ್ಟುಕತೆ ಇದೆ. ‘ಇಲ್’ ಎನ್ನುವ ದೇವಮಾನವನಿಗೆ ಇದ್ದ ಅನೇಕ ಮಕ್ಕಳಲ್ಲಿ ‘ಬಾಅಲ್’ ಮತ್ತು ‘ಮಾಟ್’ ಎನ್ನುವ ಇಬ್ಬರು ಮಕ್ಕಳೂ ಸೇರಿದ್ದರು. ‘ಬಾಅಲ್’ ಸಂತಾನ ಮತ್ತು ಮಳೆನೀಡುವ, ಒಂದು ಅರ್ಥದಲ್ಲಿ ಸೃಷ್ಠಿ ಮತ್ತು ಪಾಲನಕರ್ತ ದೇವತೆಯಾಗಿದ್ದರೆ; ‘ಮಾಟ್’ ಲಯಕರ್ತ ಹಾಗೂ ಪಾತಾಳದೊಡೆಯ ದೇವನಾಗಿದ್ದ. ಅಣ್ಣ ‘ಮಾಟ್’ನ ಪಾತಾಳವೆಂಬ ಸಾವಿನ ರಾಜ್ಯದಲ್ಲಿ ‘ಬಾಅಲ್ ’ ಬಂಧಿಯಾಗಿದ್ದ. ಆಗ ಬೇಸಿಗೆಯಾಗಿತ್ತು. ಆದುದರಿಂದ ಮಳೆ ಬರುತ್ತಿರಲಿಲ್ಲ. ಶರತ್ಕಾಲ ಪ್ರಾರಂಭವಾಯಿತು. ಕೆನಾನೈಟಿಗಳು ‘ಬಾಅಲ್’ನನ್ನು ಅಣ್ಣನ ಬಂಧನದಿಂದ ಬಿಡಿಸಿ ಹೊಸ ವರ್ಷವನ್ನು ಪ್ರಾರಂಭಿಸಿ ಆಚರಿಸಿದರು. ಈ ಸಂಸ್ಕಾರ ಅಥವಾ ಆಚರಣೆ ಮಾಡುವಾಗ ಮಧ್ಯವರ್ತಿ ಪುರೋಹಿತ ಕಿಟಕಿ, ಬಾಗಿಲುಗಳನ್ನು ತೆರೆಯುತ್ತಾನೆ. ಸ್ವರ್ಗದಿಂದ ಮಳೆ ಸುರಿಯುವಂತೆ ಪ್ರಚೋದಿಸಲಿ ಎನ್ನುವುದೇ ಕಿಟಕಿ, ಬಾಗಿಲು ತೆರೆಯುವ ಗುರಿ. ಮಳೆ ಬಂದು ಗುಡುಗಿನ ಶಬ್ದ ಕೇಳಿಸಿಕೊಂಡಾಗ; ‘ಬಾಅಲ್’ ಬದುಕಿದ್ದಾನೆ ಮತ್ತು ಪುನರುತ್ಥಾನಗೊಂಡಿದ್ದಾನೆ ಎಂದು ತಿಳಿಯುತ್ತಿದ್ದರು. ಸ್ವರ್ಗದ ಕಿಟಕಿ, ಬಾಗಿಲ ಕಲ್ಪನೆ ಬೈಬಲ್ ನ ಪ್ರವಾಹ ಕತೆಯಲ್ಲಿ ಕಂಡುಬರುತ್ತದೆ. ಯಹೂದಿಗಳ ಹೊಸವರ್ಷ ಕೆನಾನೈಟ್‌ನ ಪೂರ್ವಿಕರಿಂದ ಪಡೆದದ್ದೆಂದು ತಿಳಿದುಬರುತ್ತದೆ.

ಬೆಬಿಲೋನಿಯಾದಲ್ಲಿ, ವಸಂತ ಋತುವಿನಲ್ಲಿ, ಅದೂ ಹಗಲು ರಾತ್ರಿ ಸಮವಾಗಿರುವ ಕಾಲದಲ್ಲಿ ಹೊಸ ವರ್ಷವನ್ನು ಆಚರಿಸುತ್ತಾರೆ. ಬೆಬಿಲೋನಿಯಾದ ಪುರಾಣ ಕತೆಯಂತೆ, ‘ತಮ್ಮುಜ್’ ಎನ್ನುವ ದೇವರು ಪಾತಾಳದಲ್ಲಿದ್ದಾಗ, ಮಾರ್ಚಿ-ಏಪ್ರಿಲ್‌ನಲ್ಲಿ ಆಕೀಟು ಹಬ್ಬ ಆಚರಣೆಯ ಮೂಲಕ ಪಾತಾಳದಿಂದ ಬಿಡಿಸಿ ‘ತಮ್ಮುಜ್’ನನ್ನು ಮತ್ತೆ ಆರೋಹಣಗೊಳಿಸಲಾಗುತ್ತದೆ. ಕ್ರಿಶ್ಚಿಯನ್ನರ ಈಸ್ಟರ್ ಹಬ್ಬ ಆಚರಣೆಗಳಲ್ಲಿ ಪುರಾತನ ಈ ಕಟ್ಟುಕತೆಗಳನ್ನು ಗುರ್ತಿಸಬಹುದು.

ಈಜಿಪ್ಟ್‌ನಲ್ಲಿ ಮಳೆಗೆ ಸಂಬಂಧಿಸಿದ ಕಟ್ಟುಕತೆಗಳು ಕಂಡುಬರುವುದಿಲ್ಲ. ಪ್ರತಿವರ್ಷ ನೈಲ್ ನದಿ ಉಕ್ಕಿ ಹರಿಯುವುದು ಮತ್ತು ಭೂಮಿಗೆ ಮೆಕ್ಕಲು ಮಣ್ಣನ್ನು ತಂದುಹಾಕಿ ಫಲವತ್ತತೆಯನ್ನು ಹೆಚ್ಚಿಸುವುದೇ ದೈವಶಕ್ತಿ ಎನ್ನುವುದು ಈಜಿಪ್ಟಿಯನರ ನಂಬಿಕೆ.

ದುರದೃಷ್ಟವೆಂದರೆ, ಸೋಜಿಗಪಡುವಂತಹ ಈ ಪ್ರಾರಂಭದ ಕಟ್ಟುಕತೆಗಳು ನಮ್ಮಿಂದ ಕಳೆದುಹೋಗಿವೆ. ಆಗಿನ ಕಾಲದಲ್ಲಿ ಬರವಣಿಗೆ ರೂಪದಲ್ಲಿ ದಾಖಲಾಗಿರುವ ಕಟ್ಟುಕತೆಗಳು ಮಾತ್ರ ನಮಗೆ ತಿಳಿದಿವೆ. ದೇವರು ಅಥವಾ ದೇವತೆಗಳು ಪೂರ್ಣ ವ್ಯಕ್ತಿತ್ವ ಪಡೆದಿದ್ದರು. ‘ಇಷ್ತಾರ್’ ಎನ್ನುವ ಒಬ್ಬ ದೇವತೆಯನ್ನು ಪ್ರೇಮದ ರತಿಯಂತೆ ಒಂದು ಕಟ್ಟುಕತೆಯಲ್ಲಿ ಚಿತ್ರಿಸಲಾಗಿದೆ. ಇನ್ನೊಂದರಲ್ಲಿ ಕೆಟ್ಟ ಕಾದಾಳುವಾಗಿ, ಮತ್ತೊಂದರಲ್ಲಿ ಸಿಡುಕಿನ ಮತ್ತು ತಗಾದೆಯ ಮಗಳಂತೆ ಚಿತ್ರಿಸಲಾಗಿದೆ. ಆಕೆಯ ಸಿಡುಕನ್ನು ಕಡಿಮೆಗೊಳಿಸಲು ಅಥವಾ ಪ್ರಭಾವ ಮತ್ತು ಬೆಂಬಲ ಗಳಿಸಲು ಮಾಡಿದ ಎಲ್ಲ ವಿಧಿಗಳ ವಿವರಗಳು ನಮಗೆ ತಿಳಿದುಬರುತ್ತಿಲ್ಲ. ಮಾನವ ಬದುಕಿನಲ್ಲಿನ ಸಂಕೀರ್ಣತೆ ಹಾಗೂ ಜೀವ ಮತ್ತು ಜೀವನದ ಅರ್ಥಪೂರ್ಣತೆಯನ್ನು ನಮ್ಮ ಪೂರ್ವಿಕರು ಹೇಳಲು ಪ್ರಯತ್ನಿಸಿದ್ದು ಮುಖ್ಯ.

ನಾವು ಈ ಎಲ್ಲ ಕಲ್ಪನೆಗಳ ವಿಕಾಸವನ್ನು ನೋಡಿದಂತೆ, ದೇವರ ಪ್ರತಿನಿಧಿಗಳೆಂದು ಹೇಳಿಕೊಳ್ಳುವ ಪುರೋಹಿತರು ಮತ್ತು ಆಡಳಿತಗಾರರ ವಿವರಣೆ, ಹಕ್ಕು ಮತ್ತು ಅಧಿಕಾರವನ್ನು ವಿರೋಧಿಸಿದ ಜನರನ್ನೂ ಮಾನ್ಯ ಮಾಡುವುದು ಅಷ್ಟೇ ಮುಖ್ಯವೆನಿಸುತ್ತದೆ. ಇಂತಹ ನಿರಂತರ ವಿರೋಧಗಳು ಮನುಷ್ಯರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ಮಾನ್ಯಮಾಡಲು ಕಾರಣವಾಯಿತು. ಇದು ಮುಕ್ತ ಚಿಂತನೆಯ ಫಲವಾದ ಮುಕ್ತವಿಚಾರಕ್ಕೆ ಸಾಧ್ಯವಾಯಿತು.