ಭಾರತೀಯ ಸಂಸ್ಕೃತಿಯ ಇತಿಹಾಸದುದ್ದಕ್ಕೂ ಧರ್ಮಯುದ್ಧಗಳು, ಧಾರ್ಮಿಕ ಪೀಡನೆಗಳು ನಡೆದಿರುವುದು; ಅಧರ್ಮ ಹೆಚ್ಚಾಗಿ ಧರ್ಮಕ್ಕೆ ಕುಂದುಂಟಾದಾಗ, ಪರಮಾತ್ಮ ನಾನಾ ಅವತಾರಗಳಲ್ಲಿ ಅವತರಿಸಿ, ಅಧರ್ಮದ ವಿರುದ್ಧ ಹೋರಾಡಿ, ಧರ್ಮ ಸಂಸ್ಥಾಪನೆ ಮಾಡಿರುವ ಅನೇಕ ಕತೆಗಳು ಮತ್ತು ಉಪಕತೆಗಳು ಕಂಡುಬರುತ್ತಿವೆ. ರಾಮಾಯಣ, ಮಹಾಭಾರತ ಹಾಗೂ ದಶಾವತಾರದ ಕಲ್ಪನೆ ಒಂದುಕಡೆಯಾದರೆ; ಪರಕೀಯರ ಹಾಗೂ ಪರಧರ್ಮಗಳ ಆಕ್ರಮಣ ಮತ್ತು ಪೀಡನೆ ಮತ್ತೊಂದು ಕಡೆ ಇದಕ್ಕೆ ಸಾಕ್ಷಿಗಳಾಗಿವೆ. ಈಗಲೂ ಭಾರತೀಯ ಮನಸ್ಸುಗಳು ಬುದ್ಧ, ಗಾಂಧಿ ಮುಂತಾದವರನ್ನು ಅವತಾರ ಪುರುಷರಿಗೆ ಸಮೀಕರಿಸುವುದನ್ನು ಕಾಣಬಹುದು. ಈ ಪರಿಕಲ್ಪನೆಯ ಆಧಾರದ ಮೇಲೆ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಯಾವಾಗಲಾದರೂ ಧರ್ಮಯುದ್ದಗಳಾಗಲೀ ಅಥವಾ ಧಾರ್ಮಿಕ ಪೀಡನೆಗಳಾಗಲೀ ನಡೆದಿವೆಯೇ? ಎಂದು ಪ್ರಶ್ನಿಸಿಕೊಂಡರೆ; ಬಹಳ ಹಿಂದಿನದೇನೋ ಗೊತ್ತಿಲ್ಲ, ಆದರೆ ಇತ್ತೀಚೆಗಂತೂ ಇಲ್ಲ ಎನ್ನುವ ಉತ್ತರ ಥಟ್ಟನೆ ಬರುತ್ತದೆ. ಅಮೆರಿಕಾದ ವಿಷಯವನ್ನು ಇಲ್ಲಿ ಪ್ರಸ್ತಾಪಿಸುತ್ತಿರುವ ಮುಖ್ಯ ಉದ್ದಿಶ್ಯ ನಿಮಗೆ ಮುಂದೆ ಅರ್ಥವಾಗುತ್ತದೆ.

ಅಮೆರಿಕಾದ ಚರ್ಚುಗಳ ಜೊತೆ ಜೊತೆಯಲ್ಲೇ ಸರಿಸಮಾನವಾಗಿ ಪಿಟ್ಸ್ ಬರ್ಗ್ ನಗರದ ವೆಂಕಟೇಶ್ವರ ದೇವಸ್ಥಾನ, ಹ್ಯೂಸ್ಟನ್ನಿನ ಮೀನಾಕ್ಷಿ ದೇವಾಲಯ, ನ್ಯೂಯಾರ್ಕಿನ ಗಣಪತಿ ದೇವಾಲಯ; ಇಷ್ಟೇ ಅಲ್ಲದೆ ಅರಿಜೋನಾದ ಗ್ರಾಂಡ್ ಕ್ಯಾನಿಯಾನ್ ಕಣವೆಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರ ಹೆಸರಿನ ಶಿಖರಗಳು ಹಾಗೂ ರಾಮ ಮತ್ತು ಕೃಷ್ಣರ ಪುಣ್ಯಕ್ಷೇತ್ರಗಳು, ಹಿಂದೂ ಅಂಫಿಥಿಯೇಟರ್ ಹಾಗೂ ಬುದ್ಧ ದೇವಾಲಯಗಳು; ಜೊತೆಗೆ ಬೇರೆ ಬೇರೆ ನಗರಗಳಲ್ಲಿ ಮಸೀದಿಗಳು, ಗುರುದ್ವಾರಗಳು ಮುಂತಾದವು ನಿರಮ್ಮಳಾಗಿ ಉಳಿದಿರುವುದು; ಅನೇಕ ಅಮೆರಿಕನ್ನರು ತಲೆ ಬೋಳಿಸಿಕೊಂಡು, ಪಿಳ್ಳಿಜುಟ್ಟು ಬಿಟ್ಟುಕೊಂಡು, ಜನಿವಾರ ಬಿಗಿದುಕೊಂಡು, ನಾಮ ಹಾಕಿಕೊಂಡು, ಹರೇರಾಮ ಹರೇಕೃಷ್ಣ ಎಂದು ಅರಚಿಕೊಂಡು ಓಡಾಡುವುದು ಮುಂತಾದವು. ಅವರ ಧರ್ಮ ನಿರಪೇಕ್ಷತೆ ಮತ್ತು ಪರಧರ್ಮ ಸಹಿಷ್ಣತೆಗೆ ಸಾಕ್ಷಿಗಳಾಗಿವೆ. ಅರಿಜೋನಾ ಕಣಿವೆಯಲ್ಲಿನ ಬೃಹತ್ ಶಿಖರಗಳಿಗೆ ಹಿಂದೂ ದೇವತೆಗಳ ಹೆಸರುಗಳನ್ನು (೧೮೮೦-೮೧) ಇಟ್ಟವರು ಮೇಜರ್ ಕ್ಲಾರೆನ್ಸ್ ಎಡ್ವರ್ಡ್ ಡ್ಯೂಟನ್ ಅವರು. ಇವೆಲ್ಲ ಅಮೆರಿಕಾದ ಪ್ರಬುದ್ಧ ಸಮಾಜವನ್ನು ಸೂಚಿಸುವುದಿಲ್ಲವೆ? ಅಮೆರಿಕನ್ನರಲ್ಲಿ ಪೀಳಿಗೆಗಳ ಮಧ್ಯೆ ಒಂದಷ್ಟು ತಾರತಮ್ಯವಿದ್ದರೂ ಅದಕ್ಕೆ ಧರ್ಮದ ಆಧಾರವಾಗಲೀ ಅಥವಾ ಸಮರ್ಥನೆಯಾಗಲೀ ಇರುವುದಿಲ್ಲ ಎನ್ನುವುದು ಮುಖ್ಯ.

ಸಂವಿಧಾನದ ಪಿತಾಮಹನೆಂದು ಕರೆಸಿಕೊಳ್ಳುವ ಜೇಮ್ಸ್ ಮಾಡಿಸನ್ ನ್ನನಿಗೆ ಚರ್ಚ್ ಮತ್ತು ರಾಜ್ಯದ ಬೇರ್ಪಡಿಕೆಯ ಪ್ರಾಮುಖ್ಯತೆ ಸ್ಪಷ್ಟವಾಗಿತ್ತು. ಪ್ಯಾಟ್ರಿಕ್ ಹೆನ್ರಿ ಎನ್ನುವವನು ೧೭೮೫ರ ಜೂನ್ ನಲ್ಲಿ ಜಾರಿಗೆ ತಂದ ಒಂದು ಕಾಯಿದೆಯನ್ನು ಮಾಡಿಸನ್ ವಿರೋಧಿಸಿದ. ಭೇದಭಾವವಿಲ್ಲದೆ ಧರ್ಮವನ್ನು ಬೆಂಬಲಿಸಿದ ಎಲ್ಲ ಸನ್ಯಾಸಿನಿಯರ ಮೇಲೆ ತೆರಿಗೆ ವಿಧಿಸಲಾಗಿತ್ತು. ಪ್ರತಿಯೊಬ್ಬ ತೆರಿಗೆದಾರಳೂ ತನ್ನ ತೆರಿಗೆ ಹಣ ಯಾವ ಬಾಬತ್ತಿಗೆ ಸೇರಬೇಕೆಂಬುದನ್ನು ಚರ್ಚಿಗೆ ಒಪ್ಪಿಸಬೇಕಿತ್ತು. ಧರ್ಮದಲ್ಲಿ ನಂಬಿಕೆ ಇಲ್ಲದವರ ತೆರಿಗೆ ಹಣವನ್ನು ಧರ್ಮಾತೀತ ಅಥವಾ ಜಾತ್ಯಾತೀತ ಶಿಕ್ಷಣಕ್ಕೆ ಬಳಸಬೇಕು ಎನ್ನುವುದು ಆ ಕಾಯಿದೆಯಲ್ಲಿತ್ತು. ಕಾರಣ ಮತ್ತು ದೃಢವಾದ ನಂಬಿಕೆಗಳು ಮಾತ್ರ ಧರ್ಮವನ್ನು ನಿರ್ದೇಶಿಸುತ್ತವೆಯೇ ಹೊರೆತು ಬಲವಂತ ಅಥವಾ ಹಿಂಸೆಗಳಲ್ಲ. ಪ್ರತಿಯೊಬ್ಬರ ಧರ್ಮ ಅವರವರ ನಂಬಿಕೆ ಮತ್ತು ಪ್ರಜ್ಞೆಗೆ ಬಿಡಲಾಗಿದೆ; ಅವುಗಳ ನಿರ್ದೇಶನದಂತೆ ಜಾರಿಗೊಳಿಸುವುದು ಪ್ರತಿಯೊಬ್ಬರ ಹಕ್ಕು, ಧರ್ಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಯಾರೊಬ್ಬರ ಹಕ್ಕನ್ನೂ ನಾಗರೀಕ ಸಮಾಜ ಮೊಟಕುಗೊಳಿಸುವುದಿಲ್ಲ. ಹಾಗೂ ಧರ್ಮ ಅದರ ಅರ್ಥದಿಂದ ಪೂರ್ಣ ಮುಕ್ತ ಎಂದು ಮಾಡಿಸನ್ ಒಂದು ಕಡೆ ಬರೆಯುತ್ತಾನೆ.

ಎಲ್ಲ ಜನರೂ ಸ್ವಭಾವತಹ ಸಮಾನವಾಗಿ ಮುಕ್ತರು ಮತ್ತು ಸ್ವತಂತ್ರರು. ಆತ್ಮಸಾಕ್ಷಿಯ ನಿರ್ದೇಶನದಂತೆ ಧರ್ಮಾಚರಣೆಯಲ್ಲಿ ಸಮಾನವಾದ ಸ್ವತಂತ್ರ ಹಕ್ಕುಳ್ಳವರು. ದೈವ ಮೂಲದ್ದೆಂದು ನಂಬುವ ಧರ್ಮವನ್ನು ನಾವು ನಮಗಾಗಿ ಸ್ವೀಕರಿಸಿ ಒಪ್ಪಿಕೊಳ್ಳುವುದನ್ನು ಪ್ರತಿಪಾದಿಸುವಾಗ, ನಮಗೆ ಖಾತ್ರಿಯಾದದ್ದನ್ನು ದೃಷ್ಟಾಂತಗಳಿಂದ ಒಪ್ಪಿಕೊಳ್ಳದ ಮನಸ್ಸುಗಳಿಗೂ ಸಮಾನವಾದ ಸ್ವಾತಂತ್ರ್ಯವನ್ನು ನಾವು ನಿರಾಕರಿಸಲಾಗದು. ಧಾರ್ಮಿಕ ನಂಬಿಕೆಗಳನ್ನು ಬಲವಂತದಿಂದ ಒಪ್ಪಿಕೊಳ್ಳುವುದರಿಂದ ಅಥವಾ ಬಲವಂತದಿಂದ ಆಚರಿಸುವುದರಿಂದ ಮುಕ್ತರಾದ ಜನರಿಂದ ರೂಪುಗೊಂಡ ಆಸ್ತಿಕವಾದ ಮತ್ತು ವಿವೇಕ ಮಿಶ್ರಿತ ಮುಕ್ತ ಸಮಾಜ ಉದಯವಾಗಬೇಕಿದೆ ಎನ್ನುವ ತೀರ್ಮಾನಕ್ಕೆ ಬರಬೇಕಾಯಿತು. ಇತಿಹಾಸಕಾರ ಹೆನ್ರಿ ಸ್ಟೀಲೆ ಕಮೇಗರ್‌ನ ಪ್ರಕಾರ, ಈ ತೀರ್ಮಾನ ಹೊಸ ಪ್ರಪಂಚದಲ್ಲಿ ಒಂದು ಪ್ರಮುಖವಾದುದು. ಹದಿನೆಂಟನೇ ಶತಮಾನದಲ್ಲಿ, ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರತಿಯೊಂದು ಕಡೆ ಚರ್ಚು ಮತ್ತು ರಾಜ್ಯ ಒಂದಾಗಿದ್ದಾಗ ಎಲ್ಲಾ ಕಡೆ ನೆಲೆ ನಿಂತಿದ್ದ ಚರ್ಚ್ ತನ್ನ ವಿಚಾರಗಳನ್ನು ಒಪ್ಪಿಕೊಳ್ಳಲು ಜನತೆಯನ್ನು ಪೀಡಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಧಾರ್ಮಿಕ ಸ್ವಾತಂತ್ರ್ಯವನ್ನು ಸ್ಥಾಪಿಸುವ ನಾಯಕತ್ವವನ್ನು ಪ್ರಪಂಚದ ಇತರ ರಾಷ್ಟ್ರಗಳಿಂದ ಪಡೆಯಿತು. ಇಂತಹ ಒಂದು ಕಾರಣದಿಂದ ಅಮೇರಿಕಾದಲ್ಲಿ ಎಂದೂ ಧಾರ್ಮಿಕ ಯುದ್ಧಗಳಾಗಲೀ ಅಥವಾ ಧಾರ್ಮಿಕ ಪೀಡನೆಗಳಾಗಲೀ ನಡೆದಿಲ್ಲ ಮತ್ತು ನಡೆಯುತ್ತಿಲ್ಲ. ಯಾವುದೇ ಧರ್ಮದಿಂದ ಸ್ವಾತಂತ್ರ್ಯ ಮತ್ತು ಧರ್ಮದ ಸ್ವಾತಂತ್ರ್ಯವನ್ನು ಈ ಸುಧಾರಣೆ ಒದಗಿಸಿಕೊಟ್ಟಿತು. ಇದರ ಅರ್ಥವೆಂದರೆ, ಯಾವುದೇ ಅನ್ಯ ನಂಬಿಕೆ ವ್ಯವಸ್ಥೆಯ ಹಕ್ಕುಗಳನ್ನು ತಿರಸ್ಕರಿಸುವ ಮೂಲಕ ಅಮೇರಿಕನ್ನರು ತಮಗೆ ಸರಿಯೆನ್ನಿಸಿದ ಧಾರ್ಮಿಕ ಸಂಘಟನೆಯೊಂದಿಗೆ ಸಂಬಂಧ ಹೊಂದಲು ಸ್ವತಂತ್ರರು. ಜೊತೆಗೆ, ಬೇರೆಯವರ ನಂಬಿಕೆಗಳನ್ನು ಒಪ್ಪಿಕೊಳ್ಳುವ ಅವಶ್ಯಕತೆಯಲ್ಲಿಯೂ ಅವರು ಸ್ವತಂತ್ರರು. ಅದೇ ಸಮಯದಲ್ಲಿ, ಆಗಲೇ ಬೇರೂರಿರುವ ಎಲ್ಲ ಅನ್ಯ ಧರ್ಮಗಳನ್ನು ತ್ಯಜಿಸೊ ಹೊಸ ಧರ್ಮಗಳನ್ನು ರೂಪಿಸಿಕೊಳ್ಳಲೂ ಅವರು ಸ್ವತಂತ್ರರು. ಯಾವುದೇ ಧರ್ಮದೊಂದಿಗೆ ಸಂಬಂಧ ಹೊಂದದೆ ಅಥವಾ ಧರ್ಮದಲ್ಲಿ ನಂಬಿಕೆ ಇಡದೆ ಇರುವುದನ್ನು ಆರಿಸಿಕೊಳ್ಳಲೂ ಅವರು ಸ್ವತಂತ್ರರು. ಯಾವುದನ್ನೇ ಆರಿಸಿಕೊಂಡರೂ ಪ್ರತಿಯೊಬ್ಬ ಅಮೇರಿಕನ್ನನೂ ಉತ್ತಮ ಸ್ಥಿತಿಯ ನಾಗರೀಕತ್ವವನ್ನು ಮಾತ್ರ ಆದಷ್ಟೂ ಕಾಪಾಡಿಕೊಂಡಿದ್ದಾನೆ. ಅಲ್ಲಿಯ ಈ ನಾಗರೀಕ ಹಕ್ಕುಗಳು ಎಲ್ಲರ ಮಾನ್ಯತೆಗೆ ಪಾತ್ರವಾಗಿವೆ.

ಧರ್ಮವನ್ನು ಕುರಿತು

ಮಾನವ ವಿಕಾಸದ ಇತಿಹಾಸದೊಂದಿಗೆ ತಳಕು ಹಾಕಿಕೊಂಡು ಬಂದಿರುವ ಪದವೆಂದರೆ ‘ಧರ್ಮ’. ‘ಧರ್ಮ’ ಎನ್ನುವ ಪದಕ್ಕೆ ಸಂವಾದಿಯಾಗಿ ‘ರಿಲಿಜನ್ ’ (Religion) ಎನ್ನುವ ಪದವನ್ನು ಇಂಗ್ಲೀಷ್ ಭಾಷೆಯಲ್ಲಿ ಬಳಸಲಾಗುತ್ತಿದೆ. ಲ್ಯಾಟಿನ್ ಭಾಷೆಯಲ್ಲಿ ಬಳಕೆಯಲ್ಲಿರುವ ‘ರಿಲಿಗೋ’ ಎನ್ನುವ ನಾಮಪದದಿಂದ ಇದು ನಿಷ್ಪತ್ತಿಹೊಂದಿದೆ. ‘ರಿಲಿಗೋ’ ಪದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥಗಳಿವೆ. ಭಕ್ತಿಯಿಂದ ಕೂಡಿದ ಪೂಜಾ ಕೈಂಕರ್ಯ (ಪವಿತ್ರ) ಒಂದು ಅರ್ಥವಾದರೆ, ‘ರಿಲಿಗೇರ್ ’ (Religare) (Re:back, and ligare : to bind) ಹಿಂದಿನದನ್ನು ಒಟ್ಟುಗೂಡಿಸು ಎನ್ನುವ ಅರ್ಥವನ್ನೂ, ‘ರೆಲಿಗೇರ್’ (Religare) ಎನ್ನುವುದು ಹತ್ತಿರದ ಸಂಬಂಧ ಹೊಂದು ಎನ್ನುವ ಅರ್ಥವನ್ನೂ, ‘ರಿ-ಎಲಿಗೇರ್’ (R-eligare) ಪದವು ಆಯ್ಕೆಯಾಗು ಎನ್ನುವ ಅರ್ಥವನ್ನು ಕೊಡುತ್ತಿವೆ. ಈ ಮೂರೂ ಕ್ರಿಯಾಪದಗಳ ಅರ್ಥಗಳೆಲ್ಲವನ್ನೂ ಒಳಗೊಂಡಿರುವ ನಾಮಪದವೆಂದರೆ ‘ರಿಲಿಗೋ’ ಎನ್ನುವುದು. Religion ಎಂದರೆ ‘to tie back’ ಎನ್ನುವ ಅರ್ಥವಿರಬಹುದು ಎನ್ನುವುದು ವಿದ್ವಾಂಸರ ಅಭಿಪ್ರಾಯ. ಎಂದರೆ ‘ಹಿಂದಿನದಕ್ಕೆ ಅಂಟಿಕೊಂಡಿರು’ ಎಂತಲೂ ಆಗುತ್ತದೆ. ‘ರಿಲಿಜನ್’ ಪದಕ್ಕೆ ಲ್ಯಾಟಿನ್ ಭಾಷೆಯಲ್ಲಿ ‘ಪೂಜ್ಯ’ (Reverence) ಎನ್ನುವ ಅರ್ಥವಿರುವುದರಿಂದ ಅದು ‘ಪವಿತ್ರವಾದ’ ಎನ್ನುವ ಅರ್ಥವನ್ನೂ ಪಡೆಯಬಹುದು. ಈ ಅರ್ಥದಲ್ಲೇ ‘ರಿಲಿಜನ್’ ಎನ್ನುವ ಪದ ಹೆಚ್ಚು ಬಳಕೆಯಲ್ಲಿರುವುದು ಎನ್ನುವುದು ಬಹುಜನ ವಿದ್ವಾಂಸರ ಅಭಿಪ್ರಾಯ.

ಭಾರತೀಯ ಸಂದರ್ಭದಲ್ಲಿ ‘ಧರ್ಮ’ ಎನ್ನುವ ಪದಕ್ಕೆ ‘ಧಾರಣ ಮಾಡಿದುದು’, ‘ನೀತಿ’ (ನಿಯಮ), ‘ನ್ಯಾಯ’, ‘ಕರ್ತವ್ಯ’ ಅಥವಾ ‘ಪವಿತ್ರ ಕರ್ತವ್ಯ’, ‘ವರ್ತನೆ ಅಥವಾ ನಡವಳಿಕೆ’, ‘ಸದ್ಗುಣ’, ‘ಪುಣ್ಯ’, ‘ಅಹಿಂಸೆ’, ‘ಭಿಕ್ಷೆ’, ‘ಸ್ವಭಾವ’, ‘ಆಚರಣೆ’, ‘ಹಕ್ಕು’, ‘ಸಮದೃಷ್ಟಿ’, ‘ಸ್ವರೂಪ’, ‘ಪುರುಷಾರ್ಥ’, ‘ದಯೆ ಅಥವಾ ಕರುಣೆ’ ಮುಂತಾದ ಇನ್ನೂ ಅನೇಕ ಅರ್ಥಗಳು ಕಂಡುಬರುತ್ತಿವೆ. ಸಂಮೃದ್ಧವಾಗಿ ಕೇಳಿಬರುವ ‘ಧರ್ಮಕಾರ್ಯ’, ‘ಧರ್ಮಕ್ಷೇತ್ರ’, ‘ಧರ್ಮದ್ರೋಹ’, ‘ಧರ್ಮಶಾಲ’, ‘ಧರ್ಮಸಂಕಟ’, ‘ಧರ್ಮಪತ್ನಿ’, ‘ಧರ್ಮರಾಜ’ ಮುಂತಾದ ಇತ್ಯಾದಿ ಪದಗಳಲ್ಲಿ ಗುಣವಾಚಕವಾಗಿ ಕಂಡುಬರುವ ‘ಧರ್ಮ’ ಎನ್ನುವ ಪದ ಇಡೀ ಮಾನವ ಬದುಕಿನ ಅರ್ಥಪೂರ್ಣಸತ್ವದ ಅವಿಭಾಜ್ಯ ಸಂಕೇತವಾಗುತ್ತದೆ.

ಸಂಸ್ಕೃತ ಭಾಷಾ ಜನ್ಯವಾದ ‘‘ಧರ್ಮ’’ ಎನ್ನುವ ಪದದ ಮೂಲಧಾತು ‘‘ಧೃ’’ ಆಗಿದೆ. ಆ ಭಾಷೆಯಲ್ಲಿ ‘‘ಧೃ’’ ಎಂದರೆ ಬೆಂಬಲಿಸು ಅಥವಾ ಎತ್ತಿಹಿಡಿ (uphold), ಧರಿಸು (Hold) ಎನ್ನುವ ಅರ್ಥಗಳಿವೆ. ಮಹಾಭಾರತದ ಕರ್ಣಪರ್ವದಲ್ಲಿ ‘‘ಧಾರಣಾತ್ ಧರ್ಮ ಇತ್ಯಾಹುಃ, ಧರ್ಮೋ ಧಾರಯತಿ ಪ್ರಜಾಃ’’ ಎನ್ನುವ ಮಾತು ಬರುತ್ತದೆ. ಯಾವುದು ಇನ್ನೊಂದನ್ನು ಎತ್ತಿ ಹಿಡಿಯುವುದೋ ಅಥವಾ ಇನ್ನೊಂದಕ್ಕೆ ಆಧಾರವಾಗಿ ಅದನ್ನು ರಕ್ಷಿಸುವುದೋ, ಅದು ‘‘ಧರ್ಮ’’ ಅನ್ನಿಸಿಕೊಳ್ಳುತ್ತದೆ. ಪ್ರಕೃತಿದತ್ತ ವ್ಯತ್ಯಾಸಗಳಲ್ಲೂ ಸರ್ವ ಜೀವಿಗಳ ಏಳಿಗೆ ಮತ್ತು ಒಳಿತನ್ನು ಬಯಸುವ ಅರ್ಥವನ್ನು ‘‘ಧರ್ಮ’’ ಎನ್ನುವ ಪದ ಇಲ್ಲಿ ಧ್ವನಿಸುತ್ತಿದೆ. ಈ ಎಲ್ಲ ಅರ್ಥಗಳ ಹಿನ್ನೆಲೆಯಲ್ಲಿ ಧರ್ಮದ ಕಾರ್ಯಗಳನ್ನು ಮತ್ತು ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕಿದೆ.

ಮಾನವನ ಸಾಮಾಜಿಕ ಜೀವನಕ್ಕೆ ಸ್ಥಿರತೆ ಹಾಗೂ ಭದ್ರತೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವುದು ಧರ್ಮ. ಧರ್ಮದ ಸಾರವಾದ ‘‘ಪಾವಿತ್ರ್ಯತೆಯ ಅಡಿಪಾಯ ದಲ್ಲಿ ಸಮಾಜವೇ ಮೂರ್ತಿವೆತ್ತ ಸ್ವರೂಪದಂತಿದೆ’’ ಎಂಬುದಾಗಿ ಕ್ರಿಯಾತ್ಮಕವಾದಿ ಸಮಾಜ ಶಾಸ್ತ್ರಜ್ಞ ಡರ್ಖೀಮ್ ಅಭಿಪ್ರಾಯಪಡುತ್ತಾನೆ. ಧರ್ಮ ವ್ಯಕ್ತಿಗತ ಹಾಗೂ ಸಾಮೂಹಿಕ ಅಥವಾ ಸಾಮಾಜಿಕ ಪ್ರಾಮುಖ್ಯವುಳ್ಳ ಕಾರ್ಯಗಳನ್ನು ನಿರ್ವಹಿಸುತ್ತದೆ.

ಮಾನವನ ಲೌಕಿಕ ಮತ್ತು ಅಲೌಕಿಕ ಅನುಭವಗಳಿಗಿರುವ ವ್ಯತ್ಯಾಸ; ಪ್ರಾಪಂಚಿಕ ಸುಖ ಮತ್ತು ದುಃಖಗಳಿಗಿರುವ ವ್ಯತ್ಯಾಸಗಳ ಆತ್ಮಾನುಭವ ಅಥವಾ ಧಾರ್ಮಿಕ ಅನುಭವ ಪಡೆಯಲು ವ್ಯಕ್ತಿ ಧ್ಯಾನ, ಚಿಂತನೆ, ಭಕ್ತಿ, ಶ್ರದ್ಧೆ, ಭಜನೆ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಧರ್ಮ ಅವನ ವ್ಯಕ್ತಿತ್ವದ ಬೆಳವಣಿಗೆ ಹಾಗೂ ಕ್ರಿಯಾಶೀಲತೆಗೆ ಪೂರಕವಾಗಿದೆ ಎನ್ನುವುದು ಎಷ್ಟು ಸತ್ಯವೋ; ಅವನ ಸಾಮರ್ಥ್ಯದ ಅವಗಣನೆಗೂ ಕಾರಣವಾಗಿದೆ ಎನ್ನುವುದು ಅಷ್ಟೇ ಸತ್ಯ. ಇದು ವ್ಯಕ್ತಿಯ ಮೂಲಕ ಸಮಾಜದಲ್ಲಿ ಸ್ತೋತ್ರ ಸಂಸ್ಕೃತಿಗೆ ಕಾರಣವಾಗಿ; ವ್ಯಕ್ತಿ ತನ್ನ ಚಲನಶೀಲ ಶಕ್ತಿಯನ್ನು ಧರ್ಮದ ಮೂಲಕ ದೇವರೆಂಬ ಜಡಕ್ಕೆ ಆರೋಪಿಸಿಕೊಳ್ಳುವುದರಿಂದ ಸ್ವಶಕ್ತಿಯ ಮೇಲಿನ ನಂಬಿಕೆ ಕಡಿಮೆಯಾಗಿ ಭಯಕ್ಕೂ ಕಾರಣವಾಗಿದೆ. ಚಲನಶೀಲತೆ ಮತ್ತು ಜಡಗಳ ಮಧ್ಯೆ ಪುರೋಹಿತಶಾಹಿ ಪ್ರವೇಶಿಸುವಂತಾಗಿ ಸಮಾಜದ ಶೋಷಣೆಗೂ ಕಾರಣವಾಗಿದೆ ಹಾಗೂ ಸಮಾಜದ ಸ್ಥಗಿತತೆ ಮತ್ತು ಚಲನಶೀಲತೆಗಳ ಸಂಘರ್ಷಕ್ಕೂ ಕಾರಣವಾಗಿ ಸಮಾಜದ ನೆಮ್ಮದಿ ಕೆಡಲೂ ಅನುವು ಮಾಡಿಕೊಟ್ಟಿದೆ. ‘ಒಳ್ಳೆಯ ಬೆಳವಣಿಗೆಗಳುಂಟಾಗುವಂತೆ ಮಾಡಲು ಮತ್ತು ಉಪಯುಕ್ತ ಪರಿವರ್ತನೆಗಳನ್ನು ತರಲು ಸ್ವಲ್ಪಮಟ್ಟಿನ ಸಂಘರ್ಷಗಳು ಅನಿವಾರ್ಯ. ಅವು ಸುಧಾರಣೆಗೂ ಕಾರಣವಾಗುವುದುಂಟು. ಆದರೆ ಇಂತಹ ಪ್ರತಿಭಟನೆ ಅಥವಾ ಸಂಘರ್ಷವನ್ನು ಧರ್ಮವೂ ಹತ್ತಿಕ್ಕುವುದರಿಂದ ಮುಂದೆ ವಿಸ್ಫೋಟಕ ಪರಿಸ್ಥಿತಿ ಉಂಟಾಗಿ ಅದನ್ನು ನಿಯಂತ್ರಿಸಲು ಬಹು ದೊಡ್ಡ ಬೆಲೆಯನ್ನು ತೆರಬೇಕಾಗಿ ಬರಬಹುದು’ ಎಂದು ಥಾಮಸ್ ಎಫ್.ಓಡಿಯಾ ಅಭಿಪ್ರಾಯಪಡುತ್ತಾನೆ.

ಆಧುನಿಕವೂ ; ಸಂಕೀರ್ಣವೂ ಆದಂತಹ ಇಂದಿನ ಸಮಾಜದಲ್ಲಿ ಅಶಾಂತಿ, ಅಭದ್ರತೆ, ಅತೃಪ್ತಿ, ಭಯ, ದುಃಖ-ದುಮ್ಮಾನಗಳಿಗೆ ಬದುಕು ಸಿಲುಕಿದಾಗ, ಧರ್ಮ ಶಾಂತಿ-ಸಮಾಧಾನಗಳನ್ನು ನೀಡುವ ಉಪಕರಣವಾಗುತ್ತದೆ. ತನ್ನ ಅಪರಾಧಗಳ ಬಗ್ಗೆ ಪರಿತಪಿಸುವ ವ್ಯಕ್ತಿಯ ಮನಸ್ಸಿನಿಂದ ಪಾಪದ ಭೀತಿಯನ್ನು ದೂರವಾಗಿಸಿ ಅವನನ್ನು ಮಾನಸಿಕವಾಗಿ ಸಹಜಸ್ಥಿತಿಗೆ ತರುವುದು ಧರ್ಮ. ಕ್ರೈಸ್ತ ಮತದಲ್ಲಿ ಇದನ್ನು ‘ತಪ್ಪೊಪ್ಪಿಗೆ’ (Confession) ಎನ್ನುತ್ತಾರೆ. ಧರ್ಮವು ವ್ಯಕ್ತಿಯಲ್ಲಿ ಧೈರ್ಯ ಮತ್ತು ಭರವಸೆಗಳನ್ನು ಮೂಡಿಸಿ ಅವನ ಬದುಕು ವಿಘಟಿತವಾಗದಂತೆ ನೋಡಿಕೊಳ್ಳುತ್ತದೆ ಹಾಗೂ ಆತನಿಗೆ ಆತ್ಮದ ಔನ್ನತ್ಯದ ಅರಿವಾಗುವಂತೆಯೂ ಮಾಡುತ್ತದೆ. ಧರ್ಮದ ಕನಿಷ್ಠಾಂಶ ದೇವರು. ವ್ಯಕ್ತಿಯೊಬ್ಬ ತಾನು ಸಮಾಜದಲ್ಲಿ ಮಾಡಿದ ಅತ್ಯಾಚಾರ, ಅನಾಚಾರ, ದುರಾಚಾರ, ಮೋಸ, ವಂಚನೆ ಮುಂತಾದವುಗಳಿಂದ ಆರ್ಜಿಸಿದ ಸಂಪತ್ತಿನ ಒಂದಿಷ್ಟು ಭಾಗವನ್ನು ದೇವರಿಗೆ ಅರ್ಪಿಸಿದಾಗ; ಆ ದೇವರು ಅವನ ಪಾಪಪ್ರಜ್ಞೆಯನ್ನು ನಿವಾರಿಸುತ್ತಾನೆ ಮತ್ತು ಸಹಜ ಸ್ಥಿತಿಗೆ ತರುತ್ತಾನೆ ಎನ್ನುವ ಧಾರ್ಮಿಕ ನಂಬಿಕೆ ಮೋಸ, ವಂಚನೆ ಮುಂತಾದವುಗಳ ಮುಂದುವರಿಕೆಗೆ ಕಾರಣವಾಗುವುದಿಲ್ಲವೆ? ಹಾಗೂ ಆ ವ್ಯಕ್ತಿಯನ್ನು ಮಾನಸಿಕವಾಗಿ ಸಿದ್ಧಗೊಳಿಸಿ ಅದೇ ದಂದೆಯನ್ನು ಮುಂದುವರೆಸಲು ಅನುವು ಮಾಡಿದಂತಾಗುವುದಿಲ್ಲವೆ? ಎನ್ನುವ ಪ್ರಶ್ನೆಗಳು ಏಳುವುದು ಸಹಜ. ಧರ್ಮದ ಈ ಕಾರ್ಯ ಸಮಾಜದ ಅಸಮಾನತೆ ಮತ್ತು ಶೋಷಣೆಗೆ ಕಾರಣವಾಗುತ್ತದೆ. ಇದೇ ಅರ್ಥದಲ್ಲೇ ಧರ್ಮದ ಅತ್ಯಗ್ರ ಠೀಕಾಕಾರನಾದ ಕಾರ್ಲ್‌ಮಾರ್ಕ್ಸ್ ‘ಧರ್ಮವೆಂಬುದು ಜನತೆಯನ್ನು ಮರುಳುಗೊಳಿಸುವ ಅಫಿಮು’ ಎಂದು ಕರೆದದ್ದು.

ಒಂದು ನಿರ್ದಿಷ್ಟ ನಂಬಿಕೆ ಮತ್ತು ಆಚರಣೆಗಳಿಗೆ ವ್ಯಕ್ತಿಗತವಾಗಿ ಅಥವಾ ಸಮುದಾಯಿಕವಾಗಿ ಬದ್ಧವಾದಾಗ; ವ್ಯಕ್ತಿ ತನ್ನ ಸ್ವಂತ ಬದುಕನ್ನು ಹೇಗೆ ನಡೆಸುತ್ತಾನೆ ಅಥವಾ ಒಂದು ನಿರ್ದಿಷ್ಟ ಬದ್ಧತೆಯ ಬೆಳಕಿನಲ್ಲಿ ಸ್ವಂತ ಬದುಕು ಹೇಗೆ ನಡೆಯುತ್ತದೆ ಎನ್ನುವುದು ಮುಖ್ಯ. ಜನಪದ ಭಾಷೆಯಲ್ಲಿ ಹೇಳಬೇಕೆಂದರೆ ‘ಜೀವನ ವಿಧಾನ’ ಎನ್ನುವುದು ವ್ಯಕ್ತಿಯೊಬ್ಬನ ವೈಯಕ್ತಿಕ ಧರ್ಮವಾಗುತ್ತದೆ. ‘ನಂಬಿಕೆ’ ಎನ್ನುವ ಆಲೋಚನೆಯನ್ನು ಧರ್ಮ ವ್ಯಕ್ತಿಗತವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಇದನ್ನು ‘ಮಾನವಕುಲದ ನಂಬಿಕೆಗಳು’ ಎಂದು ಸರಳೀಕರಿಸಿ ಅರ್ಥೈಸಲು ಸಾಧ್ಯವಿಲ್ಲ. ಈ ಉಲ್ಲೇಖ ಸಾಮಾನ್ಯವಾಗಿ ‘ನಂಬಿಕೆ’ಗೆ ನಿಷ್ಠವಾಗಿರುವ ವ್ಯಕ್ತಿಗಳು ಅಥವಾ ಗುಂಪುಗಳನ್ನು ಕುರಿತದ್ದು. ಮನುಷ್ಯಜಾತಿಯ ಸಾಮರ್ಥ್ಯಗಳು ಮತ್ತು ಸಾಧ್ಯತೆಗಳಲ್ಲಿ ನಂಬಿಕೆ ಇಡುವುದನ್ನು ‘ಮೌಲ್ಯಕೇಂದ್ರಿತ’ ಅನ್ನುವುದು. ‘ವಿಶ್ವಾಸ’, ‘ನಿಷ್ಠೆ’, ‘ಅರ್ಥ’, ‘ಮೌಲ್ಯಕೇಂದ್ರಿತ’ ಮುಂತಾದ ಪದಗಳು ಒಂದಕ್ಕೊಂದು ಸೇರಿ ‘ನಂಬಿಕೆ’ ಅಥವಾ ‘ಒಂದು ನಂಬಿಕೆ’ ಎನ್ನುವುದನ್ನು ವಿವರಿಸುತ್ತವೆ. ನೈತಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ವ್ಯಕ್ತಿಯ ನಂಬಿಕೆಗಳ ಮೂಲಕ ಧರ್ಮ ಸಂರಕ್ಷಿಸುತ್ತದೆ.

ದೈವದಲ್ಲಿ ನಂಬಿಕೆ ಇಡುವ ಆಸ್ತಿಕನನ್ನು, ಜೀವನಕ್ರಮಕ್ಕೆ ಮೌಲ್ಯಕೇಂದ್ರಿತ ಅರ್ಥಕೊಡುವ ಚಾರ್ವಾಕ ಅಥವಾ ಮಾನವಶಾಸ್ತ್ರಜ್ಞನನ್ನು ಅರ್ಥಮಾಡಿಕೊಳ್ಳುವುದು ಕಷ್ಟವಲ್ಲ. ಒಂದು ಸೂರ್ಯಾಸ್ತ, ಒಂದು ಒಳ್ಳೆಯ ಅರಣ್ಯ ಅಥವಾ ಒಂದು ಸರೋವರ ಅಥವಾ ಸಮುದ್ರದ ಅಲೆಗಳ ಆಟ ಅಥವಾ ಮರದ ಮೇಲೆ ಬೀಸುವ ತಂಗಾಳಿಯ ಕಲರವ, ಝರಿಯ ನೀರಿನ ಜುಳುಜುಳು ಮುಂತಾದುವನ್ನು ಅನುಭವಿಸಿದ ಇಬ್ಬರ ಅಭಿವ್ಯಕ್ತಿಯಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಆಸ್ತಿಕ ತನ್ನ ಅನುಭವಗಳನ್ನು ದೈವ ಮೂಲದ್ದೆಂದು ಹೇಳಿದರೆ ಚಾರ್ವಾಕ ಅಥವಾ ಮಾನವಶಾಸ್ತ್ರಜ್ಞ ಅವೇ ಅನುಭವಗಳನ್ನು ಪ್ರಾಕೃತಿಕ ಎಂದು ಹೇಳುತ್ತಾನೆ. ಈರ್ವರ ಅನುಭವಗಳು ಒಂದೇ ಆದರೂ ಅಭಿವ್ಯಕ್ತಿಯಲ್ಲಿ ಮಾತ್ರ ವ್ಯತ್ಯಾಸವಿದೆ. ಆದರೆ ಈರ್ವರೂ ತಮ್ಮ ಅನುಭವಗಳನ್ನು ‘ಆಧ್ಯಾತ್ಮಿಕ’ ಎಂದು ಹೇಳಿಕೊಳ್ಳಬಹುದು.

ಸಮುದಾಯದ ಸಂದರ್ಭದಲ್ಲಿ ಮಾನವ ಸಂಬಂಧಗಳನ್ನು ಮತ್ತು ಚಟುವಟಿಕೆಗಳನ್ನು ಧರ್ಮ ನಿಯಂತ್ರಿಸುತ್ತದೆ. ಸ್ವರ್ಗ-ನರಕ, ಭೂತ-ಪ್ರೇತ, ಆತ್ಮ-ಪರಮಾತ್ಮ, ದೈವಾಜ್ಞೆ ಮುಂತಾದ ಮಾನವ ಕಲ್ಪನೆಗಳ ಮೂಲಕ; ಮಾನವ ಚಟುವಟಿಕೆಗಳನ್ನು ಶಿಸ್ತಿನ ಮೌಲ್ಯ ಹೊಂದಿರುವ ಧರ್ಮ ನಿಯಂತ್ರಿಸಿ ಸಾಮಾಜಿಕ ನಿಯಂತ್ರಣದ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಸಮಾಜದ ಐಕ್ಯತೆಗೆ ಕಾರಣವಾಗಿದೆ. ಥಾಮಸ್ ಎಫ್ . ಓಡಿಯಾ ಹೇಳುವಂತೆ ‘‘ತ್ವರಿತ ಗತಿಯ ಸಾಮಾಜಿಕ ಪರಿವರ್ತನೆ ಹಾಗೂ ವ್ಯಾಪಕ ಸಾಮಾಜಿಕ ಚಲನಶೀಲತೆಯ ಸಂದರ್ಭಗಳಲ್ಲಿ ಜನರನ್ನು ಒಂದುಗೂಡಿಸುವಲ್ಲಿ ಧರ್ಮವು ನೀಡುವ ಕೊಡುಗೆಯು ಮಹತ್ವದ್ದೆನಿಸುವುದು.’’ ಆದಿವಾಸಿ ಸಮಾಜಗಳಲ್ಲಿ ತಮ್ಮ ಸಮುದಾಯಗಳನ್ನು ರೋಗ-ರುಜಿನಗಳಿಂದ, ಕ್ಷಾಮ-ಡಾಮರುಗಳಿಂದ, ನೆರೆ-ಪ್ರವಾಹಗಳಿಂದ, ವಿಪತ್ತುಗಳಿಂದ, ಶತೃಗಳ ಕಾಟ ಮೊದಲಾದವುಗಳಿಂದ ರಕ್ಷಿಸಿಕೊಳ್ಳಲು ಜನ ಐಕ್ಯಮತ್ಯದಿಂದ ಸಾಮೂಹಿಕವಾಗಿ ಧರ್ಮಾಚರಣೆಯಲ್ಲಿ ತೊಡಗುವುದನ್ನು ಹಾಗೂ ಇದು ಆಧುನಿಕ ಸಮಾಜದಲ್ಲಿ ಮುಂದುವರೆದಿರುವುದನ್ನೂ ಕಾಣಬಹುದು. ಜನಸಮುದಾಯದ ಈ ಧಾರ್ಮಿಕ ನಂಬಿಕೆ ಕೆಲವು ಅನಿಷ್ಟ ಆಚರಣೆಗಳಾದ ಬತ್ತಲೆ ಸೇವೆ, ಸತೀಪದ್ಧತಿ, ಪ್ರಾಣಿವಧೆ, ನರಬಲಿ, ವೇಶ್ಯಾವೃತ್ತಿ, ಗುಲಾಮಗಿರಿ, ಅಸ್ಪೃಶ್ಯತೆ, ದುರ್ಬಲರ ಶೋಷಣೆ, ಬಾಲ್ಯ ವಿವಾಹ ಮುಂತಾದ ಸಾಮಾಜಿಕ ಅನಿಷ್ಟ ಆಚರಣೆಗಳಿಗೂ ಕಾರಣವಾಗಿದೆ ಎನ್ನುವುದು ಅಷ್ಟೇ ಸತ್ಯ. ‘‘ಸಮಾಜದ ಜನರ ನಡತೆಯನ್ನು ನಿಯಂತ್ರಿಸುವ ನೈತಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಸಂರಕ್ಷಿಸಿ ಪವಿತ್ರವನ್ನಾಗಿಸುವುದು ಧರ್ಮ’’ ಎಂದು ಓಡಿಯಾ ಅಭಿಪ್ರಾಯಪಡುತ್ತಾನೆ.

ಜನರಲ್ಲಿ ತ್ಯಾಗ, ಅನುಕಂಪ, ದಯೆ, ಸಹನಶೀಲತೆ, ಸೇವೆ, ಸಹಾಯ, ಸಹಕಾರ ಮುಂತಾದವುಗಳನ್ನು ಪ್ರೇರೇಪಿಸಿ ಸಮಾಜ ಕಲ್ಯಾಣ ಕಾರ್ಯಗಳಿಗೆ ಸ್ಫೂರ್ತಿ ನೀಡುವುದರ ಮೂಲಕ ಧರ್ಮ ಜನಸೇವೆ ಮಾಡುತ್ತಿದೆ. ಜನರಲ್ಲಿ ಸದ್ಭಾವನೆ, ಸದ್ವರ್ತನೆ ಮುಂತಾದವನ್ನು ಕಲೆ, ಸಾಹಿತ್ಯ, ಸಂಗೀತ, ಹಬ್ಬ, ಉತ್ಸವ, ಭಜನೆ ಮುಂತಾದವನ್ನು ಬೆಳೆಸುವುದರ ಮೂಲಕ ಧರ್ಮ ಸಮಾಜವನ್ನು ಸದಾ ಚಲನಶೀಲವಾಗಿಟ್ಟಿರುತ್ತದೆ.

* * *

ಧರ್ಮವನ್ನು ಸಾಮಾಜಿಕ ನೆಲೆಯಲ್ಲಿ ಅಧ್ಯಯನ ಮಾಡಿದ ರೊನಾಲ್ಡ್ ಎಲ್. ಜಾನ್ ಸ್ಟೋನ್, ಧರ್ಮದ ಮೂಲಾಂಶಗಳನ್ನು ಕುರಿತು ಬರೆಯುತ್ತ; ‘‘ಧರ್ಮವು ‘ಆಸ್ತಿಕರ (Believers) ಸಮೂಹ’ವನ್ನು ಒಳಗೊಂಡಿರುತ್ತದೆ’’ ಎಂದು ತಿಳಿಸುತ್ತಾನೆ. ಆಸ್ತಿಕತೆ ಎನ್ನುವುದು ದೇವರನ್ನು ಅಥವಾ ದೈವಿಕ ಶಕ್ತಿಯನ್ನು ಕುರಿತದ್ದಾಗಿರುತ್ತದೆ. ಇಂತಹ ಆಸ್ತಿಕ ಸಮೂಹ ಏಕದೇವತಾರಾಧಕರಿರಬಹುದು ಇಲ್ಲವೇ ಬಹುದೇವತಾರಾಧಕರಿರಬಹುದು. ‘‘ಧರ್ಮ ಪವಿತ್ರವೆಂದು ಪರಿಗಣಿಸಬಹುದಾದ ವಿಷಯಗಳನ್ನು ಒಳಗೊಂಡಿರುತ್ತದೆ’’ ಎಂದೂ ತಿಳಿಸುತ್ತಾನೆ. ಪವಿತ್ರ ವಿಷಯಗಳೆನ್ನುವವು ಅಂತ್ಯದಲ್ಲಿ ಅಲೌಕಿಕ ಸ್ವರೂಪ ಪಡೆದು ವೈಚಾರಿಕ ನೆಲೆಯಿಂದ ದೂರವಾಗುತ್ತವೆ ಎನ್ನುವುದು ಅಷ್ಟೇ ಮುಖ್ಯ. ‘‘ಧರ್ಮವು ಕೆಲವು ನಿರ್ದಿಷ್ಟ ಆಚರಣೆಗಳನ್ನು ಅಥವಾ ಕ್ರಿಯಾವಿಧಿಗಳನ್ನು ಒಳಗೊಂಡಿರುತ್ತದೆ’’ ಎನ್ನುವುದು ಜಾನ್ ಸ್ಟೋನ್‌ನ ಅಭಿಪ್ರಾಯ. ಕ್ರಿಯಾವಿಧಿಗಳು ಧರ್ಮದ ಪ್ರಾಯೋಗಿಕ ಕ್ಷೇತ್ರಕ್ಕೆ ಸಂಬಂಧಿಸಿರುವುದರಿಂದ; ಧಾರ್ಮಿಕ ಮನೋಭಾವನೆಗಳನ್ನು ಸಾಂಕೇತಿಕವಾಗಿ ವ್ಯಕ್ತಪಡಿಸುವ ವ್ಯಕ್ತಿಯ ನಡೆತೆಯ ಅನೇಕ ಅಂಶಗಳನ್ನು ಒಳಗೊಂಡಿರುತ್ತವೆ. ಕ್ರಿಯಾವಿಧಿ ಧಾರ್ಮಿಕವಾಗಿ ವ್ಯಕ್ತವಾಗುವಾಗ ಕುಡಿಯಲು, ತೊಳೆಯಲು ಬಳಸುವ ನೀರು ದೇವರಿಗೆ ಅಭಿಷೇಕ ಮಾಡಿದಾಕ್ಷಣ ತೀರ್ಥವಾಗುವಂತೆ ಪವಿತ್ರವಾಗುವುದು. ‘‘ಬಹಳಷ್ಟು ಧರ್ಮಗಳು ನೀತಿ ಸಂಹಿತೆಯೊಂದನ್ನು ಹೊಂದಿರುತ್ತವೆ’’ ಎನ್ನುವುದು ಆತನ ಮತ್ತೊಂದು ಅಭಿಪ್ರಾಯ. ಭೌದ್ಧ ಧರ್ಮ ಅದರ ‘ನಡತೆಯ ಅಷ್ಟಾಂಗ’ ಸೂತ್ರಗಳ ಮೇಲೆ, ಕ್ರೈಸ್ತಧರ್ಮ ಅದರ ‘ಹತ್ತು ದೈವಾಜ್ಞೆಗಳ’ ಮೇಲೆ, ಜೈನಧರ್ಮ ಅದರ ‘ತ್ರಿರತ್ನಗಳ’ ಮೇಲೆ ನಿಂತಿರುವುದನ್ನು ಮೇಲಿನ ಅಭಿಪ್ರಾಯದ ಬೆಳಕಿನಲ್ಲಿ ಕಾಣಬೇಕು. ಇಲ್ಲಿ ವ್ಯಕ್ತಿಯ ತನ್ಮೂಲಕ ಸಮಾಜದ ನಿಯಂತ್ರಣ ಸಿದ್ಧ ನೀತಿ-ನಿಯಮಗಳಿಂದ ಆಗಿರುತ್ತದೆಯೇ ಹೊರೆತು ಸಾಂದರ್ಭಿಕ ಸ್ವವಿಚಾರದಿಂದ ಆಗಿದ್ದಲ್ಲ ಎನ್ನುವುದು ಮುಖ್ಯ. ಇದರಿಂದ ಬದುಕು ವೈವಿಧ್ಯತೆ ಪಡೆಯುವುದರ ಬದಲಿಗೆ ಸಿದ್ಧ ಮಾದರಿ ಪಡೆಯಲು ಕಾರಣವಾಗುತ್ತದೆ. ಇನ್ನು ಕೊನೆಯದಾಗಿ; ಧರ್ಮವು ‘ಕೆಲವು ವಿಶಿಷ್ಟ ನಂಬಿಕೆಗಳ ಒಂದು ವ್ಯವಸ್ಥೆಯನ್ನು ಒಳಗೊಂಡಿರುತ್ತದೆ’ ಎನ್ನುವುದು. ಈ ನಂಬಿಕೆಗಳನ್ನು ಧಾರ್ಮಿಕ ನಂಬಿಕೆಗಳು ಎಂದು ಕರೆಯಲಾಗುತ್ತಿದೆ. ಧಾರ್ಮಿಕ ನಂಬಿಕೆಗಳು ವ್ಯಕ್ತಿಯಲ್ಲಿ ಅಥವಾ ಸಮಾಜದಲ್ಲಿ ಶ್ರದ್ಧೆಯ ಮೂಲಕ ವಿಶ್ವಾಸ ಹೆಚ್ಚಲು ಕಾರಣವಾಗುವುದರಿಂದ ಸಾಕ್ಷ್ಯಾಧಾರಗಳು ತನ್ಮೂಲಕ ವಾಸ್ತವಿಕ ಸತ್ಯ ಉಪೇಕ್ಷೆಗೆ ಒಳಗಾಗುವ ಸಾಧ್ಯತೆಗಳೂ ಇವೆ ಎನ್ನುವುದು ಅಷ್ಟೇ ಮುಖ್ಯ.

* * *

ಮಾನವನ ಬದುಕು ವಿಕಾಸವಾದಂತೆಲ್ಲ; ಜೊತೆ ಜೊತೆಯಲ್ಲೇ ಧರ್ಮದ ಸ್ವರೂಪವೂ ಬದಲಾಗುತ್ತಾ ಬಂದಿರುವುದನ್ನು ನಾವು ಅದರ ಇತಿಹಾಸದಿಂದ ಕಂಡುಕೊಳ್ಳಬಹುದು.

ಭೂಮಿಯ ಮೇಲೆ ಹರಿಯುವ ನದಿಗಳು, ಬೆಳೆಯುವ ಮರಗಳು, ಬೃಹದಾಕಾರವಾಗಿ ನಿಂತಿರುವ ಪರ್ವತಗಳು, ಬಂಡೆಗಳು ಮುಂತಾದವನ್ನು ಕಂಡ ಆದಿಮಾನವರಲ್ಲಿ ಭಯ ಮತ್ತು ಆಶ್ಚರ್ಯಗಳು ಉಂಟಾದವು. ಎಲ್ಲ ಚರಾಚರ ವಸ್ತುಗಳೂ ತಮ್ಮಂತೆಯೇ ಜೀವ ಹೊಂದಿವೆ ಎಂದು ಭಾವಿಸಿದರು. ಅವರ ಈ ಭಾವನೆ ಅವುಗಳ ಬಗ್ಗೆ ಗೌರವ ಮತ್ತು ಆದರಗಳು ಉಂಟಾಗಲು ಕಾರಣವಾಗಿ, ಅವುಗಳ ಆರಾಧನೆಗೆ ತೊಡಗಿ ಒಂದು ರೀತಿಯ ಧಾರ್ಮಿಕ ನಡವಳಿಕೆಗೆ ಕಾರಣವಾಯಿತು. ಪ್ರೊ.ಗ್ಯಾಲೊವೆ ಸರ್ವಚೇತನವಾದದ ಧಾರ್ಮಿಕ ಮಹತ್ವವನ್ನು ಕುರಿತು ‘‘ಒಂದು ವಸ್ತುವಿಗೆ ತನ್ನ ಆತ್ಮಕ್ಕಿರುವ ಗುಣವನ್ನು ಆರೋಪಿಸಿ, ಅದನ್ನು ಧಾರ್ಮಿಕ ಕಾಯಕಕ್ಕೆ ಅನುರೂಪವಾದುದನ್ನಾಗಿಸುವುದು’’ ಎಂದು ವಿವರಿಸುತ್ತಾನೆ. ವಿಶ್ವ ಮತ್ತು ಪ್ರಕೃತಿಗಳೆರಡರಲ್ಲೂ ಒಂದು ಜೀವಂತ ಶಕ್ತಿ ಸರ್ವಾಂತರ್ಯಾಮಿಯಾಗಿ ಪ್ರವಹಿಸುತ್ತಿದೆ ಮತ್ತು ಜಾಗೃತವಾಗಿದೆ ಎನ್ನುವ ನಂಬಿಕೆಯನ್ನು ಆದಿಮಾನವರು ಹೊಂದಿದ್ದರು. ಈ ನಂಬಿಕೆ ಅವರ ಚೈತನ್ಯಕ್ಕೂ ಕಾರಣವಾಗಿತ್ತು. ಆದಿಮಾನವರ ಧಾರ್ಮಿಕ ಆರಾಧನಾ ಪದ್ಧತಿ ಆಧುನಿಕ ಕಾಲವಾದ ಇಂದು ಕೂಡ ಮುಂದುವರೆದಿರುವುದನ್ನು ಕಾಣಬಹುದು.

ಭಾರತದಲ್ಲಿ ಪ್ರಚಲಿತವಿರುವ ನಾಗರಪಂಚಮಿ ಅಥವಾ ನಾಗಪ್ಪನ ಹಬ್ಬ, ಗಂಗಾಪೂಜೆ ಮುಂತಾದ ಧರ್ಮಾಚರಣೆಗಳಿವೆ. ಬೇರೆ ಯಾವ ಹಾವುಗಳನ್ನೂ ಪೂಜಿಸದೆ ನಾಗರಹಾವೊಂದನ್ನು ಮಾತ್ರ ಪೂಜಿಸುವ ಧರ್ಮಾಚರಣೆ ಬೆಳೆದುಬಂದಿರುವುದಕ್ಕೆ ಪ್ರಮುಖ ಕಾರಣ ಅದರ ವಿಷದ ತೀವ್ರತೆ. ನಾಗರ ಹಾವಿನ ಕಡಿತ ಮತ್ತು ವಿಷದ ತೀವ್ರತೆಯಿಂದ ಭಯಭೀತರಾಗಿದ್ದ ಹಾಗೂ ಔಷಧೋಪಚಾರ ಜ್ಞಾನದ ಕೊರತೆಯಿದ್ದ ಆದಿಮಾನವರು ನಾಗರಹಾವನ್ನು ಪೂಜಿಸುವುದರ ಮೂಲಕ, ಅದರ ಒಲುಮೆ ಗಳಿಸಿ ಕೆಡುಕಿನಿಂದ ಪಾರಾಗಲು ಪ್ರಯತ್ನಿಸಿದ್ದು; ಎಲ್ಲಾ ಕಡೆಗಳಲ್ಲೂ ಜೀವಂತ ನಾಗರ ಹಾವುಗಳು ದೊರೆಯದಿದ್ದರಿಂದಲೋ ಅಥವಾ ಜೀವಂತ ಹಾವುಗಳನ್ನು ಪೂಜಿಸಿ ಹಾಲೆರೆಯುವ ಸಂದರ್ಭದಲ್ಲಿ ಅವು ಕಡಿದು ತೊಂದರೆಯಾಗಬಹುದೆನ್ನುವ ಭಯದಿಂದಲೋ ಏನೋ, ಕಲ್ಲುನಾಗರ ವಿಗ್ರಹಗಳನ್ನು ಕೆತ್ತಿಸಿ ಪೂಜಿಸಲು ಪ್ರಾರಂಭಿಸಿದರು. ಹೀಗೆ ವಿಗ್ರಹಾರಾಧನೆ ಆದಿಮಾನವರಲ್ಲಿ ಪ್ರಾರಂಭವಾಗಿ ಅದು ಧರ್ಮದ ಒಂದು ಭಾಗವಾಗಿ ಇಂದೂ ಮುಂದುವರೆದಿದೆ.

ಗ್ರಾಮೀಣ ಭಾರತದ ಮದುವೆಗಳಲ್ಲಿ ಗಂಗೆಯನ್ನು ಪೂಜಿಸುವ ಅಥವಾ ತುಂಬಿ ಹರಿಯುವ ಕೆಲವು ವೇಳೆ ಖಾಲಿ ಇರುವ ನದಿ ಪಾತ್ರಗಳನ್ನು ದಾಟುವಾಗ, ಗ್ರಾಮೀಣರು ನಾಣ್ಯ ಅಥವಾ ಳ್ಯವನ್ನು ನದಿಗೆ ಬಿಟ್ಟು ನಮಸ್ಕರಿಸುವ ಧರ್ಮಾಚರಣೆಯನ್ನು ಗಮನಿಸಬಹುದು. ರಭಸವಾಗಿ ಬಿದ್ದು ಪ್ರವಾಹವಾಗಿ ಹರಿಯುವ ಮಳೆಯ ನೀರಿನಿಂದ, ಭೋರ್ಗರೆದು ಅಪ್ಪಳಿಸುವ ಸಾಗರದಲೆಗಳಿಂದ ಜೀವಹಾನಿಯಾಗುವ ಭಯದಿಂದ ತತ್ತರಿಸಿದ ಆದಿಮಾನವ ನೀರನ್ನು ಹೆಣ್ಣು ರೂಪದ ಗಂಗೆಗೆ ಸಮೀಕರಿಸಿಕೊಂಡು, ಆಕೆಯನ್ನು ಒಲಿಸಿಕೊಳ್ಳಲು ಮಾಡಿದ ಆಚರಣೆ ಇದು. ಪ್ರಕೃತಿಯಲ್ಲಿ ನಡೆಯುತ್ತಿದ್ದ ಅಸ್ವಾಭಾವಿಕ ಘಟನೆಗಳಿಂದ ಭಯಭೀತರಾಗಿದ್ದ ಆದಿಮಾನವರು ನಿರ್ಜೀವವಾಗಿದ್ದ ವಸ್ತುಗಳಲ್ಲಿಯೂ ಚೈತನ್ಯದ ಅಸ್ತಿತ್ವವನ್ನು ಭಾವಿಸಿಕೊಂಡು; ಅದನ್ನು ಭಯ ಮಿಶ್ರಿತ ಧಾರ್ಮಿಕ ಭಾವನೆಯಿಂದ ಆರಾಧಿಸುತ್ತಿದ್ದರು. ಅಜ್ಞಾನ ಅಥವಾ ಅಪಕ್ವ ಜ್ಞಾನ ಎನ್ನುವುದೇ ಆಶಕ್ತಿ. ಈ ಅಶಕ್ತಿ ಭಯಕ್ಕೆ ಕಾರಣ. ಭಯವೇ ಸೋಲು ಅಥವಾ ಸಾವು. ಇಂತಹ ಎಲ್ಲಾ ಸಂದರ್ಭಗಳಲ್ಲಿ ಮನುಷ್ಯ ಆರಾಧನೆಗೆ ತೊಡಗುತ್ತಾನೆ. ಆರಾಧನೆ ಎಂದರೆ ಒಲಿಸಿಕೊಳ್ಳುವುದು ಎನ್ನುವ ಅರ್ಥ. ಭೂಮಿಯ ಮೇಲೆ ವಿಷ ಸರ್ಪಗಳಿರುವವರೆಗೆ ಅಥವಾ ವಿಷ ನಿವಾರಕ ಔಷಧಿಗಳು ತುಂಬಾ ಸರಳವಾಗಿ ದೊರೆತು ನಿಖರವಾದ ಪೂರಕ ಫಲಿತಾಂಶ ನೀಡುವವರೆಗೆ ನಾಗರಪೂಜೆ ಅದರ ಮೂಲಕ ಹಾಲು-ತುಪ್ಪ ಮತ್ತು ಮಾನವ ಶಕ್ತಿ ಅಪವ್ಯಯ ನಿಲ್ಲುವುದಿಲ್ಲ. ಇದೇ ರೀತಿ ಭೂಮಿಯ ಮೇಲೆ ನೀರಿರುವವರೆಗೆ ಅಥವಾ ಮಾನವನಿಗೆ ನೀರಿನ ಅವಶ್ಯಕತೆ ಇರುವವರೆಗೆ ಅಥವಾ ಮಾನವ ಪೂರ್ಣವಾಗಿ ವಿಚಾರಶೀಲನಾಗುವವರೆಗೆ ಇಂತಹ ಆಚರಣೆಗಳು ಧರ್ಮಾಚರಣೆಗಳಾಗಿ ಉಳಿದಿರುತ್ತವೆ.

ಸತ್ತವರ ಶವ ಸಂಸ್ಕಾರದಲ್ಲಿ ಹೆಣವನ್ನು ಹೂಳಿ ಗೋರಿ ಅಥವಾ ಸಮಾಧಿ ಕಟ್ಟಿ ಪೂಜಿಸುವುದು ಒಂದು ವಿಧವಾದರೆ; ಸುಟ್ಟು ಬೂದಿಯನ್ನು ಹರಿಯುವ ನೀರಿನಲ್ಲಿ ತೇಲಿಬಿಟ್ಟು ಪೂಜಿಸುವುದು ಇನ್ನೊಂದು ವಿಧ. ಸತ್ತ ಹಿರಿಯರ ನೆನಪಿನಲ್ಲಿ ಗೋರಿಗಳನ್ನು ಪೂಜಿಸುವುದು ಅಥವಾ ಶ್ರಾದ್ಧ ಇಲ್ಲವೇ ಹಿರಿಯರ ಪೂಜೆ ಆಚರಣೆ ಮಾಡುವುದು ಬಹುತೇಕ ಮತಧರ್ಮಗಳಲ್ಲಿ ಕಂಡುಬರುತ್ತದೆ. ಪ್ರಕೃತಿಯಲ್ಲಿ ನಡೆಯುತ್ತಿದ್ದ ಘಟನೆಗಳಿಗೆ ಅಥವಾ ಅನುಭವಿಸುತ್ತಿದ್ದ ಕಷ್ಟಗಳಿಗೆ ಸತ್ತುಹೋದ ಪಿತೃಗಳ ಆತ್ಮಗಳ ಆತೃಪ್ತಿಯೇ ಕಾರಣ; ಆದುದರಿಂದ ಆ ಆತ್ಮಗಳು ಭೂತ, ಪ್ರೇತ, ಪಿಶಾಚಿ, ದೆವ್ವಗಳ ರೂಪದಲ್ಲಿ ಜೀವಂತವಾಗಿ ಬದುಕಿರುವವರಿಗೆ ಹಿಂಸೆ ನೀಡುತ್ತವೆ. ಅವರನ್ನು ಒಲಿಸಿಕೊಂಡರೆ ಎಲ್ಲ ಪೀಡೆಗಳು ನಿವಾರಣೆಯಾಗುತ್ತವೆ ಎನ್ನುವ ಭಯದಿಂದ ಕೂಡಿದ ಹಿಂದಿನವರ ನಂಬಿಕೆ ಪಿತೃಪೂಜೆ ಅಥವಾ ಹಿರಿಯರ ಹಬ್ಬ ಮತ್ತು ಕುಲದೇವತಾ ಆರಾಧನಾ ಧಾರ್ಮಿಕ ಆಚರಣೆ ಉಂಟಾಗಲು ಕಾರಣವಾಯಿತು. ಆ ನಂಬಿಕೆ ಧಾರ್ಮಿಕ ಆಚರಣೆಯಾಗಿ ಈಗಲೂ ಮುಂದುವರೆದಿದೆ.

ಧರ್ಮದ ಸ್ವರೂಪದಲ್ಲಿ ದೈವದ ನಂಬಿಕೆಯೂ ಒಂದು. ಜಗತ್ತಿನ ಬಹುಪಾಲು ಮಾನವ ಸಮುದಾಯಗಳು ದೈವಕ್ಕೆ ಆಕಾರ ನೀಡಿ ಅಥವಾ ನಿರಾಕಾರವಾಗಿ ನಂಬುವುದನ್ನು ಹಾಗೂ ಪೂಜೆ, ಪ್ರಾರ್ಥನೆ, ಧ್ಯಾನ ಮುಂತಾದವುಗಳಿಂದ ದೇವರನ್ನು ಒಲಿಸಿಕೊಳ್ಳುವುದು ಒಂದು ಮಾರ್ಗವಾದರೆ; ಮಾಟ-ಮಂತ್ರಗಳ ಮೂಲಕ ಒಲಿಸಿಕೊಳ್ಳುವುದು ಇನ್ನೊಂದು ಮಾರ್ಗ. ಒಟ್ಟಿನಲ್ಲಿ ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳುವುದೇ ಇವುಗಳ ಗುರಿ. ಆರ್.ಆರ್.ಮಾರೆಟ್ ಎನ್ನುವ ಪ್ರಸಿದ್ಧ ಮಾನವ ಶಾಸ್ತ್ರಜ್ಞನ ಪ್ರಕಾರ ‘‘ಮಂತ್ರ ಮತ್ತು ಧರ್ಮ ಎರಡೂ ಮಾನವ ಅನುಭವದ ಒಂದೇ ಬಗೆಯ ವಿಭಾಗಕ್ಕೆ ಸೇರಿದಂತಹವು; ಇತಿಹಾಸದುದ್ದಕ್ಕೂ ಮಾನವ ಅನುಭವವು ಹೆಚ್ಚೂ ಕಡಿಮೆ ಎರಡು ಜಗತ್ತುಗಳು ಎಂದೇ ಪರಿಗಣಿಸಬಹುದಾದ ಈ ಎರಡು ಮಹಾವಿಭಾಗಗಳಲ್ಲಿ ವಿಂಗಡಣೆಗೊಂಡಿದೆ; ಅವು ಒಂದುಗೂಡಿ ಪ್ರಕೃತಿಗೆ ಅತೀತದ ಜಗತ್ತಿಗೆ, ಅನುಭವದ ಅಜ್ಞಾತ ಪ್ರದೇಶಕ್ಕೆ, ಮನಸ್ಸಿನ ಬೆಳಕು ಕತ್ತಲುಗಳ ಸಂಧಿ ಪ್ರದೇಶಕ್ಕೆ ಸೇರಿದಂತಹವು’’ ಎಂದು ಬರೆಯುತ್ತಾನೆ.

ಒಂದು ಸಮಸ್ಯೆ ವೈಯಕ್ತಿಕವಾಗಿರಬಹುದು ಇಲ್ಲವೇ ಸಮುದಾಯದ್ದಾಗಿರಬಹುದು; ಒಟ್ಟಿನಲ್ಲಿ ಪರಿಹಾರವನ್ನು ಕಾಲಜ್ಞಾನ, ಜ್ಯೋತಿಷ್ಯ, ಶಕುನ, ಹಲ್ಲಿಶಾಸ್ತ್ರ, ಗಿಣಿಶಾಸ್ತ್ರ, ಹಸ್ತಸಾಮುದ್ರಿಕೆ, ಅಂಜನ ಹಾಕುವುದು ಮುಂತಾದ ಕ್ರಿಯೆಗಳಿಂದ ಪರಿಹಾರ ಪಡೆಯುವ ಪ್ರಯತ್ನವನ್ನು ಆದಿಮ ಧರ್ಮದಲ್ಲಿ ಗುರುತಿಸಬಹುದು. ಆರೋಗ್ಯ ಕಾಪಾಡಿಕೊಳ್ಳುವ ಬಾಲಗ್ರಹ, ದೃಷ್ಟಿ ನೀವಾಳಿಸುವುದು, ಬದ್ದ ಬೀಳುವುದು, ತಾಯಿ ಕಟ್ಟುವುದು ಮುಂತಾದ ಕ್ರಿಯೆಗಳ ಜೊತೆಗೆ; ಸೇಡು, ಈರ್ಷ್ಯೆ, ವಿಫಲ ಪ್ರೇಮ ಮುಂತಾದ ಸಂದರ್ಭಗಳಲ್ಲಿ ಮಾಡುವ ವಶೀಕರಣ, ಬಾನಾಮತಿ, ಮಾಟ-ಮಂತ್ರ, ಶಾಪ ಹಾಕುವುದು, ಆಣೆಯಿಟ್ಟು ಬಯ್ಯುವುದು ಮುಂತಾದವನ್ನೂ ಆದಿಮ ಧರ್ಮದಲ್ಲಿ ಹಾಗೂ ಅವು ಇಂದಿಗೂ ಮುಂದುವರೆದಿರುವುದನ್ನು ಕಾಣಬಹುದು.

ಮಾನವನ ಬದುಕಿನಲ್ಲಿ ಆಕಸ್ಮಿಕ ಮತ್ತು ಅನಿರೀಕ್ಷಿತಗಳು ಉಂಟಾಗುತ್ತಿರುವವರೆಗೂ, ಮನುಷ್ಯ ಪ್ರಯತ್ನಗಳಿಗೆ ದೊರೆಯುವ ಪ್ರತಿಫಲಗಳು ಅನಿಶ್ಚಿತವಾಗಿರುವವರೆಗೂ, ತಮ್ಮನ್ನು ಬಹಿರಂಗಗೊಳಿಸಿಕೊಳ್ಳದೆ ವ್ಯಕ್ತಿಗಳು ದ್ವೇಷಸಾಧನೆಗಳಲ್ಲಿ ತೊಡಗಿರುವವರೆಗೂ ಮಾಟ-ಮಂತ್ರಗಳು ಮನುಷ್ಯ ಬದುಕಿನ ಅವಿಭಾಜ್ಯ ಧರ್ಮವಾಗಿರುತ್ತದೆ.

ಆದಿಮ ಜನಾಂಗ ಗುಂಪುಗಳ ಬದುಕಿನ ಕಾರ್ಯಕ್ಷೇತ್ರ, ಲೋಕಾನುಭವ ಮತ್ತು ಜ್ಞಾನದ ಮಟ್ಟ ಅತ್ಯಂತ ಸೀಮಿತವೂ, ಅಸ್ಪಷ್ಟವೂ ಮತ್ತು ಜೊತೆಗೆ ಪರಿಸರದ ಭಿನ್ನತೆಯೂ ಇದ್ದಿದ್ದರಿಂದ; ಅವರ ಧರ್ಮ ಸೀಮಿತ ಮತ್ತು ಭಿನ್ನತೆಯಿಂದ ಕೂಡಿತ್ತು. ಬರುಬರುತ್ತಾ ಮಾನವ ಪ್ರಜ್ಞೆ ವಿಕಾಸವಾದುದರಿಂದ, ಬದುಕಿನ ಕಾರ್ಯಕ್ಷೇತ್ರ ವಿಸ್ತಾರವಾದದ್ದರಿಂದ, ಜ್ಞಾನದ ಮಟ್ಟ ಹೆಚ್ಚುತ್ತಾ ಬಂದು ಸ್ಪಷ್ಟತೆ ಉಂಟಾಗಿದ್ದರಿಂದ, ಧರ್ಮಪ್ರಜ್ಞೆ ಮತ್ತು ಆಚರಣೆಗಳಲ್ಲಿ ಹೆಚ್ಚು ಶಿಷ್ಟತೆ ಮತ್ತು ಸೂಕ್ಷ್ಮ ಪರಿಜ್ಞಾನಗಳು ಕಾಣಿಸಿಕೊಳ್ಳಲು ಪ್ರಾರಂಭವಾಗಿ ಬೌದ್ಧಧರ್ಮ, ಸನಾತನ ಹಿಂದೂ ಧರ್ಮ, ಕ್ರೈಸ್ತಧರ್ಮ, ಇಸ್ಲಾಂಧರ್ಮ, ಜೈನಧರ್ಮ, ಸಿಖ್ ಧರ್ಮ, ಯಹೂದಿಧರ್ಮ, ಪಾರಸಿಕ ಧರ್ಮ, ಚೀನಾದ ಕನ್‌ಫ್ಯೂಸಿಯನಿಸಂ, ತಾವೋಯಿಸಂ ಮುಂತಾದ ರಾಷ್ಟ್ರಧರ್ಮ, ವಿಶ್ವಧರ್ಮಗಳಂತ ಲಕ್ಷಣಗಳ ವಿಶಾಲ ತಳಹದಿಯ ಮತಧರ್ಮಗಳು ಹುಟ್ಟಲು ಕಾರಣವಾಯಿತು.

ನಾಗರೀಕತೆ ಮತ್ತು ಸಂಸ್ಕೃತಿಗಳನ್ನು ಸೃಷ್ಟಿಸಿಕೊಂಡ ಮಾನವ ತಮ್ಮ ಧರ್ಮಾರಾಧನೆಗೆ ಧಾರ್ಮಿಕವಾಗಿ, ಪಾರಮಾರ್ಥಿಕವಾಗಿ ಹಾಗೂ ನೈತಿಕವಾಗಿ ಅತ್ಯಂತ ಉನ್ನತ ಮಟ್ಟದ ಅಪೇಕ್ಷೆಯನ್ನೇ ಹೊಂದಿರುತ್ತಾನೆ. ಅದು ಏಕ, ನಿರಾಕಾರ ಅಥವಾ ಸಾಕಾರ, ಸರ್ವಶಕ್ತ, ಸರ್ವಾಂತರ್ಯಾಮಿ, ಸರ್ವಕಲ್ಯಾಣ ಗುಣಸಂಪನ್ನ ಹಾಗೂ ಪಾರಮಾರ್ಥಿಕವಾಗಿರಬೇಕು. ವಿಶಾಲ ತಳಹದಿಯ ಮತಧರ್ಮಗಳ ಎರಡನೇ ಮಹತ್ವದ ಲಕ್ಷಣಗಳೆಂದರೆ ಅವುಗಳ ಆದರ್ಶ, ನೈತಿಕತೆ ಮತ್ತು ಮಾನವ ವ್ಯಕ್ತಿತ್ವಕ್ಕೆ ಕೊಟ್ಟ ಪ್ರಾಮುಖ್ಯತೆ. ಇದರಿಂದಾಗಿ ಮಾನವರು ಧರ್ಮ ಮತ್ತು ದೇವರನ್ನು ನೈತೀಕರಿಸಿದರು. ರಾಷ್ಟ್ರಕ್ಕೆ ಅಥವಾ ಒಂದು ಜನಾಂಗಕ್ಕೆ ರಾಷ್ಟ್ರಧರ್ಮ ಸೀಮಿತವಾದರೆ; ವಿಶ್ವದ ಎಲ್ಲ ರಾಷ್ಟ್ರಗಳ ಮಾನವ ಕುಲಕ್ಕೆ ಮಾನ್ಯವಾಗುವ ಧರ್ಮವನ್ನು ವಿಶ್ವಧರ್ಮ ಎಂದು ಮಾನ್ಯ ಮಾಡಲಾಗಿದೆ. ಸರ್ವಕಾಲಿಕ, ಸರ್ವಮಾನವ ನೈತಿಕತೆ, ಏಕದೇವತಾವಾದ (Monatheism) ಮತ್ತು ಅನುಭಾವವಾದ (Mysticism), ಇವು ಮೂರೂ ವಿಶ್ವಧರ್ಮದ ಮೂಲಭೂತ ತತ್ವಗಳು ಎಂದು ಪರಿಗಣಿಸಲಾಗಿದೆ. ಬೌದ್ಧಧರ್ಮ ದೇವರ ಅಸ್ತಿತ್ವವನ್ನು ಪ್ರತಿಪಾದಿಸದೆ ಮಾನವ ಜನಾಂಗದ ದುಃಖ ಶಮನಕ್ಕೆ ಅಷ್ಟಾಂಗ ಮಾರ್ಗವನ್ನು ಸೂಚಿಸಿದ್ದರಿಂದ ಹಾಗೂ ಧರ್ಮಕ್ಕೆ ದೇವರ ಕಲ್ಪನೆ ಅನಿವಾರ್ಯವಲ್ಲ ಎನ್ನುವುದನ್ನು ಸಾರಿದ್ದರಿಂದ; ಕ್ರೈಸ್ತಧರ್ಮ ಪ್ರತಿಪಾದಿಸಿದ ಹತ್ತು ದೈವಾಜ್ಞೆಗಳಿಂದ; ಇಸ್ಲಾಂ, ಕ್ರೈಸ್ತ ಮತ್ತು ಯಹೂದಿ ಧರ್ಮಗಳು ಪ್ರತಿಪಾದಿಸುವ ಏಕದೇವತಾವಾದ ಹಾಗೂ ಸರ್ವಕಾಲಿಕ ಅನುಭಾವಗಳಿಂದ; ಈ ಎಲ್ಲ ಧರ್ಮಗಳನ್ನು ವಿಶ್ವಧರ್ಮಗಳೆಂದು ಪರಿಗಣಿಸಲು ಕಾರಣವಾಗಿದೆ.

ಮೂಲಭೂತ ನಂಬಿಕೆ ಅಥವಾ ನಂಬಿಕಾ ವಿಧಾನಗಳನ್ನು ತಿರಸ್ಕರಿಸಿದವರ ಜೊತೆಗೆ ಎಂತಹುದೇ ರೂಪದ ಅತಿ ಸ್ವಾಭಾವಿಕತೆಯನ್ನು ಮುಲಾಜಿಲ್ಲದೆ ಹೊರಗಿಟ್ಟವರನ್ನು ಮಾನ್ಯ ಮಾಡುವುದೂ ನಮಗೆ ಮೂಲತಃ ಸಂಬಂಧಿಸಿದ್ದು. ಈ ಧರ್ಮಾತೀತ (Non-religious) ವ್ಯಕ್ತಿಗಳು ಅಥವಾ ಗುಂಪುಗಳು ತಮ್ಮನ್ನು ಸಂದೇಹವಾದಿಗಳು (Skeptics) ಮಾನವತಾವಾದಿಗಳು (Humanists), ನಾಸ್ತಿಕರು (Atheists), ಆಜ್ಞೇಯವಾದಿಗಳು (Agnostics), ಚಾರ್ವಾಕರು (Atheists), ಜಾತ್ಯಾತೀತರು (Secularists), ವಾಸ್ತವವಾದಿಗಳು (Naturalists), ಅಪನಂಬಿಕೆಯುಳ್ಳವರು (unbelievers), ವಿಚಾರವಾದಿಗಳು (Rationalists), ಭೌತಿಕವಾದಿಗಳು (Materialists) ಮುಂತಾಗಿ ಬೇರೆ-ಬೇರೆ ವಿಧಾನಗಳಿಂದ ಅರ್ಥೈಸಿಕೊಳ್ಳುತ್ತಾರೆ. ಪ್ರಸ್ತುತ ನಮ್ಮ ಕಾಲವೂ ಸೇರಿ ಇತಿಹಾಸದುದ್ದಕ್ಕೂ ಇವರು ಇದ್ದಾರೆ. ಮಾನವ ಇತಿಹಾಸದಲ್ಲಿ ಇವರ ಸ್ಥಾನವೇನು? ಮುಕ್ತ ಸಮಾಜಕ್ಕೆ ಇವರ ಕೊಡುಗೆ ಏನು? ಗುಡಿ, ಮಠ, ಮಂದಿರ, ಮಸೀದಿ, ಚರ್ಚು ಮುಂತಾದವು ಒಂದು ಕಡೆ ಹಾಗೂ ರಾಜ್ಯ ಇನ್ನೊಂದು ಕಡೆ; ಇವೆರಡನ್ನು ಬೇರ್ಪಡಿಸುವ ಸಂವಿಧಾನವೆಂಬ ಗೋಡೆಯನ್ನು ಇವರು ಹೇಗೆ ನಿರ್ಮಿಸಿದರು ಮತ್ತು ಉಳಿಸಿಕೊಂಡರು? ಪ್ರಾರಂಭಿಕವಾಗಿ, ಮತಧರ್ಮ ವ್ಯವಸ್ಥೆಗಳನ್ನು ಒಪ್ಪದೇ ಪ್ರಶ್ನಿಸಿದವರನ್ನು ಗುರುತಿಸುವ ಚರ್ಯೆಗಳನ್ನು ವಿವರಿಸುವುದು ಅವಶ್ಯ.