ಒಂದು ಧರ್ಮದ ಅಥವಾ ಒಂದು ಮತಧರ್ಮದ ಆಚಾರ, ವಿಚಾರ, ರೂಢಿ, ಸಂಪ್ರದಾಯ, ನಂಬಿಕೆ, ನಡವಳಿಕೆ ಮುಂತಾದವುಗಳಿಗೆ ಪೂರ್ಣವಾಗಿ ಅಂಟಿಕೊಳ್ಳುವುದರಿಂದ ದೂರ ಸರಿದವರನ್ನು ಧರ್ಮಾತೀತರು ಅಥವಾ ಧರ್ಮಭ್ರಷ್ಠರು ಎಂದು ಕರೆಯಲಾಗುತ್ತಿದೆ. ಇದು ವೈಯಕ್ತಿಕ ನೆಲೆಯಲ್ಲಿರಬಹುದು ಅಥವಾ ಸಾರ್ವತ್ರಿಕ ನೆಲೆಯಲ್ಲಿರಬಹುದು. ವ್ಯಕ್ತಿ ಸ್ವಇಚ್ಛೆಯಿಂದ ತಾನೇ ಧರ್ಮದಿಂದ ಅಥವಾ ಮತಧರ್ಮದಿಂದ ದೂರ ಸರಿಯುವುದು ಧರ್ಮಾತೀತನಾದರೆ; ಬಲವಂತವಾಗಿ ಧರ್ಮದಿಂದ ಹೊರಹಾಕಲ್ಪಟ್ಟರೆ ಧರ್ಮಭ್ರಷ್ಠನಾಗುತ್ತಾನೆ. ಹೀಗೆ ಸೇರಿದವರ ಬೇರೆ ಬೇರೆ ಗುಂಪುಗಳಿಗೆ ಧರ್ಮಾತೀತರ ಗುಂಪು ಅಥವಾ ಧರ್ಮಭ್ರಷ್ಠರ ಗುಂಪು ಎಂದು ಕರೆಯಲಾಗುತ್ತಿದೆ. ಮೊದಲಿನದರಲ್ಲಿ ವ್ಯಕ್ತಿ ತನ್ನ ಧರ್ಮದ ಆಚರಣೆಗಳಿಗೆ ಅಥವಾ ಅವನ್ನು ಆಚರಿಸುತ್ತಿರುವವರ ನಂಬಿಕೆಗಳಿಗೆ ಯಾವುದೇ ಭಂಗ ತರದೆ ತಾನೇ ಸ್ವ ಇಚ್ಛೆಯಿಂದ ದೂರಸರಿಯುತ್ತಾನೆ. ಎರಡನೆಯದರಲ್ಲಿ ವ್ಯಕ್ತಿ ತನ್ನ ಧರ್ಮದ ಆಚರಣೆಗಳಿಗೆ ಭಂಗ ತಂದಾಗ; ಆ ಧರ್ಮದ ಆಚರಣೆಗಳನ್ನು ಪಾಲಿಸುತ್ತಿರುವ ಇತರರಿಂದ ಹೊರನೂಕಲ್ಪಟ್ಟಿರುತ್ತಾನೆ. ಆಧುನಿಕ ಧರ್ಮಾತೀತ ಮನುಷ್ಯ ತನ್ನನ್ನು ಪೂರ್ಣವಾಗಿ ಇತಿಹಾಸದ ಅಧೀನ ಮತ್ತು ಸಹಾಯಕನಂತೆ ತೊಡಗಿಸಿಕೊಂಡು ಹಾಗೂ ದಾಟಲು ಎಲ್ಲ ಬೇಡಿಕೆಗಳನ್ನು ತಿರಸ್ಕರಿಸುತ್ತಾನೆ. ಇತಿಹಾಸದ ಬೇರೆ ಬೇರೆ ಸಂದರ್ಭಗಳಲ್ಲಿ ಕಾಣುವಂತೆ, ಮಾನವ ಸಂದರ್ಭದಿಂದ ಹೊರತಾದ ಯಾವ ಮಾದರಿಯನ್ನೂ ಅವನು ಒಪ್ಪಲಾರ.

ಮಾನವ ತನ್ನನ್ನು ತಾನು ರೂಪಿಸಿಕೊಳ್ಳುತ್ತಾನೆ. ಅವನ ಸ್ವಾತಂತ್ರ್ಯಕ್ಕೆ ಮತಧರ್ಮವೊಂದು ಮಾತ್ರ ತೊಡಕಾಗಿದೆ. ಅಂತ್ಯವೆಂಬುವ ದೇವರ ಕಲ್ಪನೆಯನ್ನು ಬಿಡದ ಹೊರತು, ಅವನು ನಿಜವಾದ ಅರ್ಥದಲ್ಲಿ ಸ್ವತಂತ್ರನಲ್ಲ. ಧರ್ಮಾತೀತ ಮನುಷ್ಯರನ್ನು ಗುರುತಿಸುವ ಚಿನ್ಹೆಗಳು ಈ ರೀತಿ ಇವೆ.

ಸಂದೇಹವಾದಿಗಳು (Skeptics)

ಪ್ರಶ್ನೆ ಮಾಡುವವರನ್ನು, ಅನುಮಾನಿಸುವವರನ್ನು, ನಂಬಿಸುವಂತಹ ಹೇಳಿಕೆಗಳು ಮತ್ತು ಒಪ್ಪಿಕೊಳ್ಳುವಂತಹ ವಿಶ್ವಾಸಗಳಿಗೆ ಸಂಬಂಧಿಸಿದ ಸಂಗತಿಗಳನ್ನು ಆಕ್ಷೇಪಿಸುವವರನ್ನು ಸಂದೇಹವಾದಿಗಳು (Skeptics) ಎಂದು ಕರೆಯುತ್ತಾರೆ. ಆಕ್ಷೇಪಣೆಯಲ್ಲಿ ಪ್ರಶ್ನೆ ಮಾಡುವುದಕ್ಕಿಂತ ಅನುಮಾನದ ಪಾಲು ಹೆಚ್ಚಿರುತ್ತದೆ. ಪಾಲ್‌ಕುರ್ಟ್ಸ್ ಎನ್ನುವ ಸಂಶೋಧಕ ಇನ್ನೂ ಸರಳೀಕರಿಸಿ ‘‘ಯಾವನು ಸತ್ಯವನ್ನು ಅಪೇಕ್ಷಿಸುತ್ತಾನೋ, ವಿವರಣೆಯಲ್ಲಿ ಸ್ಪಷ್ಟತೆಯನ್ನು ಕೇಳುತ್ತಾನೋ, ಸಾಕ್ಷ್ಯದಲ್ಲಿ ಯುಕ್ತತೆ ಮತ್ತು ತರ್ಕದಲ್ಲಿ ಸ್ಥಿರತೆ ಇರುತ್ತೋ ಅವನನ್ನು ಒಬ್ಬ ಸಂದೇಹವಾದಿ ಅಥವಾ ಸಂದೇಹಿ’’ ಎನ್ನುತ್ತಾನೆ. ಸತ್ಯಶೋಧನೆಯಲ್ಲಿ ಸಂದೇಹಪಡುವ ಮತ್ತು ಪ್ರಶ್ನಿಸುವ ಎರಡೂ ಗುಣಗಳು ಒಂದೇ ಆಗಿರುತ್ತವೆ. ಸಮಸ್ಯೆ ಗ್ರಹಿಕೆಗೆ ಬಂದತಕ್ಷಣ ಪ್ರಶ್ನೆ ಏರ್ಪಡುತ್ತದೆ. ಇದರಿಂದ ವಿಸ್ಮಯದ ಉತ್ತರ ಸಿಗುತ್ತದೆ. ಪ್ರಶ್ನೆ ಇಲ್ಲದೆ ಸಿಗುವ ಉತ್ತರದ ಸತ್ಯತೆ ಸಂದೇಹಕ್ಕೆ ಎಡೆಮಾಡುತ್ತದೆ. ಅಂದರೆ, ಸಂದೇಹ ಎನ್ನುವುದು ಸತ್ಯದ ಸಮರ್ಥಕವಾಗಿ ನಿಲ್ಲುತ್ತದೆ. ನಿಶ್ಚಯ ಜ್ಞಾನ ಸಾಧ್ಯವಿಲ್ಲವೆಂದು ವಾದಿಸುವವನು, ಮತಧರ್ಮಗಳ ಸಿದ್ಧಾಂತಗಳನ್ನು ನಂಬದಿರುವವನು, ಅನಿಶ್ಚಯಿ, ಒಂದು ಸಂಗತಿಯ ಅಥವಾ ಸಿದ್ಧಾಂತದ ಸತ್ಯತೆಯನ್ನು ಒಪ್ಪಿಕೊಳ್ಳುವುದಕ್ಕೆ ರುಜುವಾತು ಸಾಲದೆಂದು ಸಂದೇಹಪಡುವವನು ಸಂದೇಹವಾದಿ ಅಥವಾ ಸಂದೇಹಿ ಆಗುತ್ತಾನೆ.

ಸ್ಕೆಪ್ಟಿಕೋಸ್ (Skepticose) ಎನ್ನುವ ಗ್ರೀಕ್ ಪದ ‘ಶೋಧನೆ’, ‘ವಿಚಾರಿಸು’, ‘ಪರೀಕ್ಷಿಸು’, ‘ಅಭಿಪ್ರಾಯಪಡು’ ಮುಂತಾದ ಅರ್ಥಗಳನ್ನು ಕೊಡುತ್ತದೆ. ಸ್ಕೆಪ್ಟಿಕೋಸ್ ಪದಕ್ಕೆ ಕನ್ನಡದ ಸಂದರ್ಭದಲ್ಲಿ ಸಂದೇಹ, ಸಂದೇಹಿ, ಮುಂತಾದ ಪದಗಳನ್ನು ಸಂವಾದಿಯಾಗಿ ಬಳಸಲಾಗುತ್ತಿದೆ. ‘ಸ್ಕೆಪ್ಟಿಸಿಸಂ’ ಪದಕ್ಕೆ ‘ಸಂದೇಹವಾದ’ ಎನ್ನುವ ಪದದ ಬಳಕೆ ಇದೆ.

ಒಂದು ಕಾಲದಲ್ಲಿ, ಪುರಾತನ ಗ್ರೀಸ್‌ನಲ್ಲಿ ಇಲಿಸ್ ನ ಪೈರೋಹ್ ನೇತೃತ್ವದಲ್ಲಿ ‘ಸಂದೇಹಪಂಥ’ ಎನ್ನುವುದು ಏರ್ಪಟ್ಟಿತ್ತು. ‘‘ವಸ್ತುನಿಷ್ಠ ನಿಜವಾದ ಜ್ಞಾನವೆನ್ನುವುದು ಸಾಧ್ಯವೇ ಇಲ್ಲ ಮತ್ತು ಸತ್ಯ ಪಡೆಯುವುದು ಅಸಾಧ್ಯ ಹಾಗೂ ಸತ್ಯಶೋಧನೆ ಎನ್ನುವುದು ವೃಥಾ ಶ್ರಮಮಾತ್ರ’’ ಎನ್ನುವುದು ಪೈರೋಹ್‌ನ ಅಭಿಪ್ರಾಯವಾಗಿತ್ತು. ಇದರ ರೂಪವಾದ ವ್ಯವಸ್ಥಿತ ಸ್ಕೆಪ್ಟಿಸಿಸಂ ಅಥವಾ ಸಂದೇಹವಾದ ಎನ್ನುವುದು ಎಲ್ಲೂ ನಾಯಕತ್ವ ವಹಿಸಿಲ್ಲ. ಇದನ್ನು ತಾರ್ಕಿಕವಾಗಿ ಪ್ರತಿಪಾದಿಸಲು ಅಸಾಧ್ಯವಾದುದು ಹಾಗೂ ಇಂದು ರೂಢಿಯಲ್ಲಿರುವ ‘‘ಕ್ರಮಬದ್ಧ ಸಂದೇಹವಾದದಿಂದ’’ ಇದನ್ನು ಬೇರ್ಪಡಿಸಬೇಕಾಗಿದೆ.

ಕ್ರಮಬದ್ಧ ಆಧುನಿಕ ಸಂದೇಹವಾದಿಗಳು ನಿರ್ದಯದವರಲ್ಲ. ಆದರೂ, ತಾರ್ಕಿಕತೆ ಯಿಂದ ಕೂಡಿದ ವೈಜ್ಞಾನಿಕ ಅನ್ವೇಷಣೆಗೆ ಬಳಸುವ ಕಾರ್ಯಾಕಾರಣ ನಿಯಮಗಳನ್ನು ಬಳಸಿ ಧರ್ಮಕ್ಕೆ ಮತ್ತು ಧರ್ಮಾತೀತತೆಯ ಸತ್ಯಾಂಶಗಳಿಗೆ ಸಂಬಂಧಿಸಿದ ಹಕ್ಕನ್ನು ಸಂದೇಹವಾದಿಗಳೂ ಪ್ರತಿಪಾದಿಸುತ್ತಾರೆ. ಸಂದೇಹವಾದಿಗಳು ಭರವಸೆಗೆ ಅರ್ಹರು.

ತತ್ವಜ್ಞಾನಿ ಮಾರಿಯೋ ಬಂಗೇ ಅವರು ಒಂದು ಕಡೆ ಬರೆಯುತ್ತಾ ‘‘ಕ್ರಮಬದ್ಧ ಸಂದೇಹವಾದವನ್ನು ರೂಢಿಸಿಕೊಂಡವರು, ಅದು ದಡ್ಡತನ ಎನ್ನುವುದನ್ನು ನಂಬುತ್ತಾರೆ. ಅವಿವೇಕ, ಮತ್ತು ಪ್ರಚುರಪಡಿಸುವುದು ನೈತಿಕವಾಗಿ ತಪ್ಪು, ಆಚರಣೆ, ಅಥವಾ ಪ್ರಮುಖ ವಿಚಾರದ ಬೋಧನೆ, ಅಥವಾ ಪ್ರಯೋಗಕ್ಕೊಳಪಡಿಸದೆ ಆಚರಣೆಗೆ ತರುವುದು, ಅಥವಾ ಅತಿ ಕೆಟ್ಟದ್ದನ್ನು ನಿರ್ಣಾಯಕವೆಂಬಂತೆ ತೋರಿಸುವುದು ಶುದ್ಧ ತಪ್ಪು, ನಿಷ್ಪ್ರಯೋಜಕ ಅಥವಾ ಕೆಡುಕಿನಿಂದ ಕೂಡಿದ್ದು. ಆದುದರಿಂದ ಸಂಶೋಧನೆ ಮತ್ತು ಕ್ರಿಯೆ ಆಧಾರಿತ ಸಂಶೋಧನೆಗಳನ್ನು ನಾವು ಒಪ್ಪುತ್ತೇವೆ. ನಾವು ಕ್ರಮಬದ್ಧ ಸಂದೇಹವಾದಿಗಳಲ್ಲ. ನಾವು ಸುಳ್ಳುಗಳನ್ನು ಒಪ್ಪುವುದಿಲ್ಲ ಹಾಗೂ ಪರೀಕ್ಷೆಗೊಳಪಡದೆ ಯಾವುದರ ಬಗ್ಗೆಯೂ ತೀರ್ಮಾನ ಮುಂದೂಡಲಾಗುತ್ತದೆ, ಆದರೆ ಬೇಕಾಗಿರುವ ಪ್ರಯೋಗಗಳು ಹೇಳುವುದನ್ನು ತಾತ್ಕಾಲಿಕವಾದರೂ ನಾವು ನಂಬುತ್ತೇವೆ. ಅದೇ ವೇಳೆಯಲ್ಲಿ, ಆಧಾರವಿಲ್ಲದ ನಂಬಿಕೆಗಳನ್ನು ತ್ಯಜಿಸಲು ಇಚ್ಛಿಸುತ್ತೇವೆ. ಒಟ್ಟಿನಲ್ಲಿ ಕ್ರಮಬದ್ಧ ಸಂದೇಹವಾದಿ ಆಗಿರುವವರು ರಚನಾತ್ಮಕ’’ ಎಂದು ತಿಳಿಸುತ್ತಾರೆ.

ವಿಶ್ವದಲ್ಲಿನ ಪ್ರತಿಯೊಂದೂ ಸಾಕಾರ ಅಥವಾ ವಾಸ್ತವ ಹಾಗೂ ನಿಯಮಬದ್ಧ ಎನ್ನುವುದನ್ನು ಮಾನ್ಯ ಮಾಡುವ ‘ಭೌತಿಕವಾದ’, ತನ್ನಷ್ಟಕ್ಕೆ ತಾನೇ ಸೃಷ್ಟಿಯಾದ ವಿಶ್ವ ಮತ್ತು ನಿಧಾನವಾಗಿ ಹಾಗೂ ಸಣ್ಣ ಪ್ರಮಾಣದಲ್ಲಿ ಅದರ ಸತ್ಯವನ್ನು ಅರುಹುತ್ತಿರುವ ‘ವಾಸ್ತವವಾದ’, ನಮ್ಮ ಮನೋಭಾವನೆಗಳು ಆಂತರ್ಯದಲ್ಲಿ ಸ್ಥಿರ ಮತ್ತು ಒಂದಕ್ಕೊಂದು ಬದ್ಧವಾಗಿರಬೇಕು ಎಂದು ಬಯಸುವ ‘ವಿಚಾರವಾದ’, ವಾಸ್ತವವೆಂದು ನಂಬುವ ಪ್ರತಿಯೊಂದು ಮನೋಭಾವನೆಯೂ ಪರೀಕ್ಷಾರ್ಹ ಎನ್ನುವುದನ್ನು ಮಾನ್ಯ ಮಾಡುವ ‘ಅನುಭಾವವಾದ’, ವಿಜ್ಞಾನದ ಕಲ್ಪಿತ ಸಿದ್ಧಾಂತ ಮತ್ತು ಮಾಹಿತಿಗಳು ಗುರಿ ಇಲ್ಲದವು ಎನ್ನುವುದಕ್ಕಿಂತ ಒಂದು ಕ್ರಮವನ್ನು ರೂಪಿಸುತ್ತವೆ ಎನ್ನುವ ‘ವ್ಯವಸ್ಥಿತವಾದ’ ಮುಂತಾದ ವೈಜ್ಞಾನಿಕ ತಿಳುವಳಿಕೆ ಮತ್ತು ವಿಧಾನಗಳು ತತ್ವಜ್ಞಾನದ ಕೆಲವು ಅವಶ್ಯಕತೆಗಳನ್ನು ತೃಪ್ತಿಪಡಿಸುತ್ತವೆ.

ಡಾ.ಬಂಗೇ ಅವರು ಮುಂದುವರೆದು; ‘‘ಕ್ರಮಬದ್ಧ ಸಂದೇಹವಾದ ಅನೇಕ ತತ್ವಗಳನ್ನು ಎತ್ತಿ ಹಿಡಿಯುತ್ತದೆ ಮತ್ತು, ಎಲ್ಲಕ್ಕಿಂತ ಹೆಚ್ಚಾಗಿ, ವಾಸ್ತವವೆಂಬ ಜ್ಞಾನದಲ್ಲಿ ಮಾನವರು ಮುಂದುವರೆಯುತ್ತಿದ್ದಾರೆ ಎನ್ನುವುದರಲ್ಲಿ ಅವರಿಗೆ ನಂಬಿಕೆ ಇದೆ. ಅವರ ಈ ನಂಬಿಕೆ ವಿವೇಕದಿಂದ ಕೂಡಿದ್ದು, ಕುರುಡಲ್ಲ; ಇದು ಅನ್ವೇಷಕರ ನಂಬಿಕೆಯೇ ಹೊರೆತು ಆಸ್ತಿಕರದಲ್ಲ. ಅವರು ಪುರಾವೆಗಳ ರಹಿತವಾಗಿ ಯಾವುದನ್ನೂ ನಂಬುವುದಿಲ್ಲ. ಅವರು ತೆರೆದ ಮನಸ್ಸಿನವರೇ ಹೊರತು ದಡ್ಡರಲ್ಲ.’’ ಎಂದು ಅಭಿಪ್ರಾಯಪಡುತ್ತಾರೆ.

ಸಂದೇಹ ಯೋಚನೆ ಮತ್ತು ಶೋಧನೆ ಎನ್ನುವುದು ಮಾನವ ಇತಿಹಾಸದಷ್ಟೇ ಹಳೆಯದು. ಸಂದೇಹಗುಣ ಎನ್ನುವುದು ಮಾನವನ ಉತ್ಕೃಷ್ಟ ಗುಣ. ಒಪ್ಪಿರುವ ಅಥವಾ ಸ್ವೀಕರಿಸಲ್ಪಟ್ಟಿರುವ ಅಭಿಪ್ರಾಯಗಳನ್ನು ಅದು ಆಕ್ಷೇಪಿಸಿ ಪ್ರಗತಿಯನ್ನು ಉಂಟುಮಾಡುತ್ತಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಅಭಿಪ್ರಾಯವನ್ನು ಸಮರ್ಥಿಸಲು ಒಂದು ಸಂದರ್ಭವನ್ನು ಇಲ್ಲಿ ವಿಶ್ಲೇಷಿಸುವುದು ಒಳ್ಳೆಯದು.

ಸರಿ ಸುಮಾರು ಎರಡನೇ ಶತಮಾನದಲ್ಲಿ ಪ್ರಖ್ಯಾತ ಗಣಿತ ಮತ್ತು ಖಗೋಳ ಶಾಸ್ತ್ರಜ್ಞನಾಗಿದ್ದ ಟಾಲೆಮಿ; ಭೂಮಿ ಸ್ಥಿರ ಅಥವಾ ನಿಶ್ಚಲ ಮತ್ತು ಚಪ್ಪಟೆ. ಸೂರ್ಯ ಅದರ ಸುತ್ತೂ ಚಲಿಸುತ್ತಿದೆ. ಸೂರ್ಯ ಭೂಮಿಯ ಮೇಲಿನ ಆಕಾಶದಲ್ಲಿ ಬಂದಾಗ ಹಗಲಾಗುತ್ತದೆ. ಅದು ಚಪ್ಪಟೆ ಭೂಮಿಯ ಕೆಳಗೆ ಹಾಯುವಾಗ ಭೂಮಿಯ ಮೇಲೆ ಕತ್ತಲಾಗಿರುತ್ತದೆ ಎಂದು ಸಾರಿದ್ದ. ಇದಕ್ಕೆ ರೋಮನ್ ಕ್ಯಾಥಲಿಕ್ ಚರ್ಚ್ ಒಪ್ಪಿಗೆ ಮುದ್ರೆ ಒತ್ತಿತ್ತು. ಈ ನಂಬಿಕೆ ಹದಿನಾರನೇ ಶತಮಾನದವರೆಗೆ ಮುಂದುವರೆದಿತ್ತು. ಆದರೆ ಸಂದೇಹ ಮಾತ್ರ ವಿಜ್ಞಾನಿಗಳನ್ನು ಕಾಡುತ್ತಿತ್ತು. ಹದಿನಾರನೇ ಶತಮಾನದಲ್ಲಿ ಬಂದ ಪೋಲಿಷ್ ಖಗೋಳ ಶಾಸ್ತ್ರಜ್ಞ ನಿಕೊಲಾಸ್ ಕೊಪರ್ನಿಕಸ್ ನ ಸಂದೇಹ, ಅನುಭವ ಮತ್ತು ವಿಚಾರಗಳೇ ಬೇರೆಯಾಗಿದ್ದವು. ಎಲ್ಲ ಆಕಾಶಕಾಯಗಳೂ ಗೋಲಾಕಾರದಲ್ಲಿವೆ ಹಾಗೂ ಪರಿಭ್ರಮಿಸುತ್ತಿವೆ. ಭೂಮಿಯೂ ಒಂದು ಗೋಲಾಕಾರದ ಗ್ರಹ. ಅದು ತನ್ನ ಅಕ್ಷದ ಸುತ್ತೂ ಸುತ್ತುತ್ತಾ ಸೂರ್ಯನನ್ನು ಸುತ್ತುತ್ತಿರುವುದರಿಂದ ಹಗಲೂ, ರಾತ್ರಿ ಮತ್ತು ವರ್ಷ ಉಂಟಾಗುತ್ತವೆ ಎಂದು ಪ್ರತಿಪಾದಿಸಿದ. ಇದರಿಂದ ಜನರ ಮತ್ತು ಹೆಚ್ಚಾಗಿ ಚರ್ಚಿನ ವಿರೋಧಕ್ಕೆ ಗುರಿಯಾಗಬೇಕಾಯಿತು. ನಂತರ ಬಂದ ಗೆಲಿಲಿಯೋ ಕೊಫರ್ನಿಕಸ್‌ನ ಸಿದ್ಧಾಂತವನ್ನು ತನ್ನ ದೂರದರ್ಶಕ ಮತ್ತು ಪ್ರಯೋಗಗಳಿಂದ ಸಮರ್ಥಿಸಿದಾಗ; ಚರ್ಚ್‌ನ ಅವಕೃಪೆಗೆ ಇವನೂ ಗುರಿಯಾಗಿ, ಜೈಲು ಸೇರಿ ನೋವು ಅನುಭವಿಸಬೇಕಾಯಿತು. ಗೆಲಿಲಿಯೋನ ಸತ್ಯಶೋಧನೆಗೆ ಕಾರಣವಾಗಿದ್ದು ಅವಲ್ಲಿನ ಸಂದೇಹಗುಣ.

ಮಾನವನಲ್ಲಿ ಸ್ವಾಭಾವಿಕವಾಗಿ ಇರುವ ಸಂದೇಹಗುಣ ಅವನ ಬದುಕಿನ ಅನ್ವೇಷಣೆಗೂ ಕಾರಣವಾಗಿದೆ. ಈ ಸಂದೇಹಗುಣ ವಿಜ್ಞಾನಿಗಳ ಅಥವಾ ಸತ್ಯಶೋಧಕರ ಪರೀಕ್ಷಾ ಮನೋಭಾವಕ್ಕೆ ಕಾರಣವಾಗಿರುವುದರಿಂದಲೇ ಬದುಕು ವೈವಿಧ್ಯವಾಗಿ ಮತ್ತು ಅನುಕೂಲತೆಗಳು ಹೆಚ್ಚಾಗಲು ಕಾರಣವಾಗಿರುವುದು.

ಮುಕ್ತ ಚಿಂತಕರು (Free Thinkers)

ಪ್ರಬಲ ಅಧಿಕಾರ ಮತ್ತು ಸಂಪ್ರದಾಯಗಳನ್ನು ಮಾನ್ಯಮಾಡದೆ ವಿಮರ್ಶಾತ್ಮಕ ಚಿಂತನೆ ಹಾಗೂ ಮುಕ್ತ ವಿವೇಕದ ಆಧಾರದ ಮೇಲೆ ತೀರ್ಮಾನಕ್ಕೆ ಬರುವವರನ್ನು ಮುಕ್ತಚಿಂತಕರು ಎನ್ನುತ್ತಾರೆ. ಮುಕ್ತ ವಿಚಾರ ನಿಜವಾಗಲೂ ಸ್ವತಂತ್ರವಾಗಿರುತ್ತದೆ. ಅಭಿವ್ಯಕ್ತಿಸಲು ಹದ ಮಾಡಿದ ವಾತಾವರಣ ಮತ್ತು ಅವಕಾಶ ಬೇಕಿದೆ.

‘ಹದಮಾಡುವುದು’ ಎಂದರೆ ಮುಕ್ತವಾಗಿ ವಿಚಾರಣೆಗೆ ಒಳಪಡಿಸಿದ ಫಲಿತಾಂಶಗಳನ್ನು ಜೊತೆಗೆ ಅನುಮಾನಗಳು ಅಥವಾ ಪ್ರತಿವಿಚಾರಗಳನ್ನು ಪೀಡನೆಯ ಭಯ ಅಥವಾ ವ್ಯಾಜ್ಯಗಳಿಲ್ಲದೆ ವ್ಯಕ್ತಪಡಿಸುವುದು. ಕ್ರಮವಾಗಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಜಾಪ್ರಭುತ್ವ ಸಮಾಜಗಳಲ್ಲಿ ಧರ್ಮ ಮತ್ತು ರಾಜಕೀಯವನ್ನು ಕುಗ್ಗಿಸುವುದು ಸುಲಭದ ಕೆಲಸವಲ್ಲ. ಪರಿಣಾಮವಾಗಿ, ಸಂದೇಹ ವಿಚಾರಣೆಯ ಅಥವಾ ಮುಕ್ತಚಿಂತನೆಯ ಫಲಿತಾಂಶಗಳು ಹಿಂಸೆಯ ಭಯವಿಲ್ಲದೆ ಅಥವಾ ತಡೆಯೊಡ್ಡುವ ಪ್ರಯತ್ನಗಳಿಲ್ಲದ ಗೌರವಾನ್ವಿತ ವಿಚಾರಗಳಾಗುತ್ತವೆ.

ಪ್ರಜಾಪ್ರಭುತ್ವವಿರುವ ಹಾಗೂ ಸಮಾನತೆಯನ್ನು ಘೋಷಿಸಿಕೊಂಡಿರುವ ರಾಷ್ಟ್ರಗಳಲ್ಲಿ ಅದೂ ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎನ್ನುವುದು ಒಂದು ರೀತಿಯಲ್ಲಿ ಮರೀಚಿಕೆಯೇ ಆಗಿದೆ. ಮುಕ್ತ ಚಿಂತನೆ ಇರುವಲ್ಲೆಲ್ಲಾ ಅಭಿವ್ಯಕ್ತಿಯೂ ಮುಕ್ತವಾಗಿರುತ್ತದೆ ಮತ್ತು ಇರಲೇಬೇಕು. ಪ್ರಸ್ತುತ ಅಮೆರಿಕಾದ ನಿವಾಸಿಯಾಗಿದ್ದು; ಈ ಹಿಂದೆ ಇಂಗ್ಲೇಂಡಿನ ಪ್ರಜೆಯಾಗಿದ್ದ ಭಾರತ ಸಂಜಾತ ಸಾಲಮನ್ ರಶ್ದಿಯವರ ‘ಸೆಟಾನಿಕ್ ವರ್ಸಸ್’ ಕೃತಿ ಪ್ರಕಟವಾದಾಗ, ಬಹಳಷ್ಟು ಮತೀಯವಾದಿಗಳ ಆಕ್ರೋಶದ ಪ್ರತಿಭಟನೆಗೆ ಒಳಗಾಗಿ, ಲೇಖಕ ಪ್ರಾಣಭಯದಿಂದ ಭೂಗತರಾಗಿ ಬದುಕುತ್ತಿರುವುದು; ಕನ್ನಡ ಸಾಹಿತ್ಯ ಸಂದರ್ಭಕ್ಕೆ ಬಂದಾಗ ಮಾಸ್ತಿ ಅವರ ‘ಚಿಕರರಾಜೇಂದ್ರ’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ವ್ಯಕ್ತವಾದ ಪ್ರತಿಭಟನೆ, ಪಿ.ವಿ.ನಾರಾಯಣ ಅವರ ‘ಧರ್ಮಕಾರಣ’ ಕಾದಂಬರಿಯ ಬಗ್ಗೆ ಬಂದ ಪ್ರತಿಭಟನೆ ಮುಂತಾದವನ್ನು ಮುಕ್ತ ಚಿಂತನೆಯ ನೆಲೆಯಲ್ಲಿ ಅವಲೋಕಿಸಬೇಕಿದೆ. ಇಂತಹ ಸಂದರ್ಭದಲ್ಲಿ ಮುಕ್ತಚಿಂತನೆ ಮತ್ತು ಮುಕ್ತ ಪರಿಶೀಲನೆ ಕಷ್ಟವಾಗುತ್ತದೆ ಮತ್ತು ಪೂರ್ಣವಾಗಿ ಅಸಾಧ್ಯವಾಗುತ್ತದೆ.

ಅಜ್ಞೇಯವಾದಿಗಳು (Agnostics)

ಕೊಟ್ಟಿರುವ ಒಂದು ವಿಷಯವನ್ನು ಗಣನೆಗೆ ತೆಗೆದುಕೊಂಡಾಗ ‘ಅದಕ್ಕೆ ಸಂಬಂಧಿಸಿದ ಯಾವ ವಿಷಯವೂ ಗೊತ್ತಿಲ್ಲ ಅಥವಾ ತಿಳಿದಿಲ್ಲ’ ಎನ್ನುವವರನ್ನು ಆಜ್ಞೇಯವಾದಿಗಳು ಎಂದು ಕರೆಯಲಾಗುತ್ತಿದೆ.

ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಥಾಮಸ್ ಟಿ.ಹಕ್ಸ್ ಲೀ ಎನ್ನುವಾತ ‘Agnosticism’ ಎನ್ನುವ ಪದವನ್ನು ಮೊದಲು ಬಳಕೆಗೆ ತಂದ. ಗ್ರೀಕ್ ಭಾಷೆಯ ‘gnosis’ ಮತ್ತು ಅದೇ ಭಾಷೆಯಲ್ಲಿ ‘a’ ಎನ್ನುವ ಪೂರ್ವಪದ ಒಟ್ಟಿಗೆ ಸೇರಿ ‘Agnosis’ ಎನ್ನುವ ಸಂಯುಕ್ತ ಪದ ಉಂಟಾಗಿದೆ. ‘gnosis’ ಎಂದರೆ ‘ಜ್ಞಾನ’ ಹಾಗೂ ‘a’ ಎಂದರೆ ‘ಇಲ್ಲ’ ಎನ್ನುವ ಅರ್ಥಗಳು ಗ್ರೀಕ್ ಭಾಷೆಯಲ್ಲಿ ಈ ಪದಗಳಿಗಿವೆ. ‘Agnosis’ ಎನ್ನುವ ಪದಕ್ಕೆ ‘ಜ್ಞಾನವಿಲ್ಲ’, ‘ಗೊತ್ತಿಲ್ಲ’ ಅಥವಾ ತಿಳಿದಿಲ್ಲ’ ಎನ್ನುವ ಅರ್ಥಗಳಿವೆ. Agnostic ಎನ್ನುವ ಪದಕ್ಕೆ ಕನ್ನಡದಲ್ಲಿ ‘ಅಜ್ಞೇಯವಾದಿ’ ಎನ್ನುವ ಪದದ ಬಳಕೆ ಇದೆ.

ಅಜ್ಞೇಯವಾದಿಗಳು ದೇವರ ಅಸ್ತಿತ್ವವನ್ನು ದೃqsಕರಿಸುವುದೂ ಇಲ್ಲ ಮತ್ತು ತಿರಸ್ಕರಿಸುವುದೂ ಇಲ್ಲ. ದೇವರ ಪರವಾಗಿ ಮತ್ತು ವಿಷಯವಾಗಿ ಎಷ್ಟೇ ಚರ್ಚಿಸಿದರೂ ಮತ್ತು ಪ್ರಾರ್ಥಿಸಿದರೂ; ಅವನಿದ್ದಾನೆ ಎನ್ನುವುದು ಯಾರಿಗೂ ಗೊತ್ತಿಲ್ಲ ಮತ್ತು ಗೊತ್ತಾಗುವುದೂ ಇಲ್ಲ ಎಂದು ಅಜ್ಞೇಯವಾದಿಗಳು ಸರಳವಾಗಿ ಉತ್ತರಿಸುತ್ತಾರೆ. ಹಕ್ಸ್ ಲೇ ಅವರು ಮುಂದುವರೆದು; ‘ಆಜ್ಞೇಯವಾದ ಎನ್ನುವುದು ಒಂದು ಪಂಥ ಅಲ್ಲ ಅದು ಒಂದು ವಿಧಾನ. ಒಂದು ತತ್ವದ ಅನುಸರಣೆಯಲ್ಲಿ ಅಜ್ಞೇಯವಾದದ ಸತ್ವ ಪ್ರಧಾನ ಪಾತ್ರವಹಿಸುತ್ತದೆ. ಆ ಸತ್ವ ಪ್ರಾಚೀನತೆಯನ್ನು ಪಡೆದಿರುತ್ತದೆ. ‘‘ಎಲ್ಲ ವಿಷಯಗಳಲ್ಲಿ ಪ್ರಯತ್ನಿಸು, ಯಾವುದು ಒಳ್ಳೆಯದೆನಿಸುವುದೋ ಅದನ್ನು ಜಾಗ್ರತೆ ಹಿಡಿ’’; ಇದು ಸುಧಾರಣೆಗೆ ಆಧಾರ, ಪ್ರತಿಯೊಬ್ಬ ಮನುಷ್ಯನೂ ತನ್ನಲ್ಲಿರುವ ನಂಬಿಕೆಗೆ ಪ್ರತ್ಯಕ್ಷ ಪ್ರಮಾಣವಾಗಿ ಕೊಡುವ ಸುಧಾರಣೆಯ ಆಧಾರ ಇದಾಗಿರುತ್ತದೆ. ಇದು ಆಧುನಿಕ ವಿಜ್ಞಾನದ ಪ್ರಧಾನ ಪ್ರಮಾಣವು ಆಗಿದೆ.

ಧಾರ್ಮಿಕ ಆಜ್ಞೇಯವಾದವನ್ನು ವಿಜ್ಞಾನಿಗಳು ಆಗಾಗ ಒಪ್ಪಿಕೊಳ್ಳುತ್ತಾರೆ. ದೈವಿಕ ಶಕ್ತಿಯೊಂದು ಇದೆ ಅಥವಾ ಇಲ್ಲ ಎನ್ನುವುದನ್ನು ಸಾಧಿಸಲು ಅಥವಾ ತೋರಿಸಲು ಸಾಧ್ಯವಿಲ್ಲ ಎನ್ನುವುದನ್ನು ಆಜ್ಞೇಯವಾದಿಗಳು ಪ್ರತಿಪಾದಿಸುತ್ತಾರೆ. ಇವರು ಆರಾಧನೆ, ಪ್ರಾರ್ಥನೆ ಮುಂತಾದವುಗಳಲ್ಲಿ ನಿಯಮಿತವಾಗಿ ಭಾಗವಹಿಸುವುದಿಲ್ಲ.

ತಾರ್ಕಿಕ ಪ್ರತ್ಯಕ್ಷವಾದ ಪ್ರವರ್ಧಮಾನಕ್ಕೆ ಬಂದನಂತರ ‘‘ದೇವರು ಇದ್ದಾನೆಂಬುದೂ ಗೊತ್ತಿಲ್ಲ, ಇಲ್ಲವೆನ್ನುವುದೂ ಗೊತ್ತಿಲ್ಲ’ ಎನ್ನುವ ಹೊಸ ಅರ್ಥವನ್ನು ಆಜ್ಞೇಯವಾದ ಪಡೆದಿದೆ. ದೇವರಿದ್ದಾನೆ ಎನ್ನುವುದನ್ನು ಒಪ್ಪಿಕೊಂಡರೆ, ಸೃಷ್ಟಿಯಲ್ಲೇಕಿಷ್ಟು ತಾರತಮ್ಯ? ಅವನು ಒಳ್ಳೆಯವನೇ ಆಗಿದ್ದರೆ, ಒಳ್ಳೆಯವರಿಗೂ ಏಕಿಷ್ಟು ಕಷ್ಟ? ಎನ್ನುವ ಪ್ರಶ್ನೆಗಳು ಎದುರಾಗುವುದರಿಂದ; ಸ್ವಾಭಾವಿಕವಾಗಿ ಜನತೆಯಲ್ಲಿ ದೈವಭಕ್ತಿ ಅಥವಾ ದೈವದ ಬಗ್ಗೆ ಶ್ರದ್ಧೆ ಕಡಿಮೆಯಾಗುತ್ತದೆ. ಎರಡನೇ ಅರ್ಥವೂ ಧರ್ಮಕ್ಕೆ ಸಹಾಯಕ ಮತ್ತು ಸಹಕಾರಿ ಅಲ್ಲ. ಆದುದರಿಂದ ಅಜ್ಞೇಯವಾದದಂತೆ ದೇವರ ಕಲ್ಪನೆ ಧರ್ಮಕ್ಕೆ ಅಗತ್ಯವೂ ಅಲ್ಲ ಮತ್ತು ಅನಿವಾರ್ಯವೂ ಅಲ್ಲ ಎನ್ನುವುದು ಮುಖ್ಯ.

ನಾಸ್ತಿಕರು (ಚಾರ್ವಾಕರು) (Atheists)

ಪಾಶ್ಚಿಮಾತ್ಯ ಕಲ್ಪನೆಯಲ್ಲಿ ; ದೇವರು ಅಥವಾ ದೇವರುಗಳು ಅಥವಾ ಯಾವುವಾದರೂ ಅಲೌಕಿಕ ಶಕ್ತಿಗಳ (Snpernatural power) ಅಸ್ತಿತ್ವದಲ್ಲಿ ನಂಬಿಕೆ ಇಲ್ಲದವರನ್ನು ನಾಸ್ತಿಕರು ಎಂದು ಸ್ವಾಭಾವಿಕವಾಗಿ ಕರೆಯುವುದುಂಟು.

ಗ್ರೀಕ್ ಭಾಷೆಯಲ್ಲಿ ‘theos’ ಎಂದರೆ ‘ದೇವರು’ ಹಾಗೂ ಪೂರ್ವಪದ ‘a’ನ ಅರ್ಥ ‘ಇಲ್ಲ’ ಎನ್ನುವ ಎರಡೂ ಪದಗಳು ಸೇರಿ ‘ದೇವರು ಇಲ್ಲ’ ಎನ್ನುವ ಅರ್ಥದ ‘Atheos’ ಎನ್ನುವ ಪದ ಬಳಕೆಗೆ ಬಂದಿದೆ. ಆದುದರಿಂದ ದೇವರು ಅಥವಾ ದೈವತ್ವದಲ್ಲಿ ನಂಬಿಕೆ ಇಲ್ಲದವರನ್ನು Atheists ಎಂದು ಕರೆಯಲಾಗುತ್ತಿದೆ. ದೇವರಿಲ್ಲವೆಂದು ಸಾಧಿಸಲು ನಾಸ್ತಿಕರಿಗೆ ಶೋಧಿಸುವ ಅವಶ್ಯವಿಲ್ಲ; ಖಂಡಿಸಲು ಅವರಿಗೆ ಸಂಬಂಧಿಸಿಲ್ಲ. ದೇವರಿದ್ದಾನೆ ಎನ್ನುವುದನ್ನು ಸಾಧಿಸಲು ತಿಳಿದಿರುವ ಮಾರ್ಗಗಳಾಗಲೀ ಅಥವಾ ಅವನಿದ್ದಾನೆ ಅಥವಾ ಇಲ್ಲ ಎನ್ನಲು ನಿದರ್ಶನಗಳಾಗಲೀ ಇಲ್ಲ ಎನ್ನುವುದು ನಾಸ್ತಿಕರ ಸರಳ ಉತ್ತರ.

ಭಾರತೀಯ ಸಂದರ್ಭದಲ್ಲಿ ನಾಸ್ತಿಕರನ್ನು ಚಾರ್ವಾಕರೂ ಎನ್ನುವ ಮತ್ತೊಂದು ಹೆಸರಿನಿಂದ ಕರೆಯುವುದು ರೂಢಿ. ಇಲ್ಲಿ ‘ಇಲ್ಲ’ ಎಂದು ನಂಬುವವರನ್ನು ನಾಸ್ತಿಕರು ಎಂದು ಕರೆಯಲಾಗುತ್ತಿದೆ. ಮನು ತನ್ನ ಧರ್ಮಶಾಸ್ತ್ರದಲ್ಲಿ ‘ನಾಸ್ತಿಕೋ ವೇದ       ನಿಂಧಕಃ’ ಅಂದರೆ ವೇದಪ್ರಾಮಾಣ್ಯವನ್ನು ಒಪ್ಪದಿರುವವರು ನಾಸ್ತಿಕರು ಎಂಬುದಾಗಿ ಉಲ್ಲೇಖಿಸುತ್ತಾನೆ. ಷಡ್‌ದರ್ಶನಗಳನ್ನು ಒಪ್ಪದ ಬೌದ್ಧರು, ಜೈನರು ಹಾಗೂ ಚಾರ್ವಾಕರು ನಾಸ್ತಿಕರು ಎಂದ ಹಾಗಾಯಿತು. ಪಾಣಿನಿಯ ಪ್ರಕಾರ; ಆತ್ಮದ ಅಮರತ್ವವನ್ನೂ ಮತ್ತು ಪರಲೋಕವನ್ನೂ ಒಪ್ಪದವರು ನಾಸ್ತಿಕರು.

ದೇವರ ಅಸ್ತಿತ್ವವನ್ನು ನಂಬದಿರುವವರನ್ನು ಸಾಮಾನ್ಯವಾಗಿ ನಾಸ್ತಿಕರು ಎಂದು ಪರಿಗಣಿಸಲಾಗಿದೆ. ಇಲ್ಲಿ ‘ದೇವರು’ ಅಥವಾ ‘ದೇವ’ ಎನ್ನುವ ಪದವು ಜಗತ್ತಿನ ಸೃಷ್ಟಿಕರ್ತ, ಪಾಲಕ ಮತ್ತು ಲಯಕರ್ತ ಅರ್ಥದಲ್ಲಿ ದೇವನಾದರೆ; ಇನ್ನೊಂದು ಅರ್ಥದಲ್ಲಿ ನಿರ್ಗುಣ, ನಿರಾಕಾರ ಬ್ರಹ್ಮನೂ ದೇವನಾಗುತ್ತಾನೆ. ಮತ್ತೊಂದು ಅರ್ಥದಲ್ಲಿ ಈಶ್ವರ ದೇವನಾದರೆ ಮಗದೊಂದು ಅರ್ಥದಲ್ಲಿ ಅಗ್ನಿ, ಇಂದ್ರ, ವರುಣ, ಯಮ ಮುಂತಾದವರಲ್ಲಿ ಒಬ್ಬನು ದೇವನಾಗುತ್ತಾನೆ. ಈ ಗೊಂದಲದಿಂದ ಹೊರಬರಲು ದಾರ್ಶನಿಕರು ‘ನಾಸ್ತಿಕ’ ಎನ್ನುವ ಪದಕ್ಕೆ ಬದಲಾಗಿ ‘ನಿರೀಶ್ವರವಾದಿ’ ಎನ್ನುವ ಪದವನ್ನು ಬಳಕೆಗೆ ತಂದರು. ಆದುದರಿಂದ ‘ನಾಸ್ತಿಕವಾದ’ ಎನ್ನುವ ಪದಕ್ಕೆ ಪರ್ಯಾಯವಾಗಿ ‘ನಿರೀಶ್ವರವಾದ’ ಎನ್ನುವ ಪದವನ್ನು ಚಾಲ್ತಿಗೊಳಿಸಿದರು.

ಸಹಜವಾದಿಗಳು ಜಾತ್ಯಾತೀತರು, ವಿಜ್ಞಾನಿಗಳು, ದಾರ್ಶನಿಕರು ಮುಂತಾದವರ ನಡವಳಿಕೆ, ಅವರ ಯೋಚನೆ ಮತ್ತು ತೀರ್ಮಾನಗಳು ಪ್ರಕೃತಿ ವಿಜ್ಞಾನದ ವಿವರಣೆಗಳಾಗಿರುವುದರಿಂದ, ಮತ್ತು ಯಾವುದೇ ಅಲೌಕಿಕತನವನ್ನು ಒಪ್ಪದೆ, ಮಾನವ ಪ್ರಪಂಚದ ಬಗ್ಗೆ ಅವರಿಗೆ ಅತಿಯಾದ ಕಾಳಜಿ ಇರುವುದರಿಂದ, ಎಲ್ಲರನ್ನೂ ನಾಸ್ತಿಕರ ಅಥವಾ ನಿರೀಶ್ವರವಾದಿಗಳ ಗುಂಪಿಗೆ ಸೇರಿಸಲಾಗಿದೆ. ನಾಸ್ತಿಕವಾದಕ್ಕೆ ಆಧಾರವಾಗಿರುವ ಕೆಲವು ಮೂಲಭೂತ ಅಂಶಗಳನ್ನು ವಿಶ್ಲೇಷಿಸುವುದು ಒಳಿತು.

ದೇವರು ಇದ್ದಾನೋ ಇಲ್ಲವೋ ಎನ್ನುವುದು ವೈಜ್ಞಾನಿಕ ಪರೀಕ್ಷೆಗೆ ಒಳಪಡುವುದಿಲ್ಲ. ಆದುದರಿಂದ ವಿಜ್ಞಾನವು ಅವನ ಅಸ್ತಿತ್ವವನ್ನು ಒಪ್ಪುವುದಿಲ್ಲ. ಮನುಷ್ಯನ ಯೋಚನೆ, ಚಿಂತನೆ, ವೇದನೆ, ನಿರ್ಧಾರ, ಆಸೆ, ಆಮಿಷ ಮುಂತಾದವುಗಳು ಅವನ ಮೆದುಳೆಂಬ ಭೌತಶಕ್ತಿಯ ಪರಿಣಾಮವೇ ಹೊರತು; ಚಿತ್ ಎಂಬ ಇನ್ನೊಂದರ ಪರಿಣಾಮವಲ್ಲ ಎನ್ನುವುದನ್ನು ನಾಸ್ತಿಕವಾದ ಸಾರುತ್ತದೆ.

ಭೌತವಸ್ತು (matter) ಮತ್ತು ಭೌತಶಕ್ತಿ (Energy) ಅನಾದಿ ಮತ್ತು ಅವಿನಾಶಿಯಾಗಿವೆ; ಜೊತೆಗೆ ಭೌತವಸ್ತು ಶಕ್ತಿಯಾಗಿ, ಶಕ್ತಿ ಭೌತವಸ್ತುವಾಗಿ ಮಾರ್ಪಾಟಾಗುವ ನಿತ್ಯ ಸತ್ಯತೆಯ ನಿಯಮ ಸೃಷ್ಟಿಯಲ್ಲಿರುವುದರಿಂದ, ಇದರಿಂದ ರಚಿತವಾದ ವಿಶ್ವವೂ ನಿತ್ಯವೂ ಮತ್ತು ಸದಾ ರೂಪಾಂತರವಾಗುವುದೂ ಆಗಿರಲೇಬೇಕು. ಈ ರೂಪಾಂತರವನ್ನೇ ಸೃಷ್ಟಿ, ಪಾಲನೆ ಮತ್ತು ಲಯ ಎನ್ನುವುದು. ವಿಶ್ವವು ನಿತ್ಯವಾದುದರಿಂದ ಅದನ್ನು ಯಾರೂ ಸೃಷ್ಟಿಸುವ ಅವಶ್ಯಕತೆ ಇಲ್ಲ. ಪ್ರಸ್ತುತವಿರುವ ವಿಶ್ವನಿಯಮಗಳು ಮತ್ತು ವ್ಯವಸ್ಥೆಗಳೂ ಹಿಂದಿನ ಮುಂದುವರಿಕೆಯೇ ಹೊರತು ಹೊರಗಿನಿಂದ ಬಂದವಲ್ಲ ಮತ್ತು ಹೊಸದಾಗಿ ಬಂದವಲ್ಲ. ವಿಶ್ವದಲ್ಲಿ ನಿಯಮ ಮತ್ತು ವ್ಯವಸ್ಥೆಯ ಶೂನ್ಯಕಾಲ ಯಾವಾಗಲೂ ಇಲ್ಲ.

ನಿರೀಶ್ವರವಾದಕ್ಕೆ ಪುಷ್ಠಿ ನೀಡುವ ಅಂಶವೆಂದರೆ ‘ಕೆಡಕು’. ಮನುಷ್ಯನಿಗೆ ಅಥವಾ ಸಕಲ ಜೀವಿಗಳಿಗೆ ಒದಗುವ ‘ಕೆಡಕು’ ಅಥವಾ ಕಷ್ಟವನ್ನು ನಿವಾರಿಸುವ ಶಕ್ತಿ; ಇವರನ್ನು ಸೃಷ್ಟಿಸಿದ ದೇವರಿಗೇ ಇಲ್ಲ ಎಂದಾದ ಮೇಲೆ; ದೇವರಿಗೆ ಎಷ್ಟು ಶಕ್ತಿ ಇದ್ದೀತು? ಅಥವಾ ಅವನೆಷ್ಟು ಕರುಣಾಳು? ಎನ್ನುವ ಪ್ರಶ್ನೆಗಳು ಏಳುತ್ತವೆ. ಆಗ ನಿರೀಶ್ವರವಾದಿಗಳ ಮುಖದಲ್ಲಿ ಜಯದ ಮಿಂಚು ಹೊಳೆಯುತ್ತದೆ.

‘ದರ್ಶನ’ ಎಂದರೆ ವಿಮರ್ಶಾತ್ಮಕ ಚಿಂತನೆ, ಭಾರತೀಯ ಸಂದರ್ಭದಲ್ಲಿ ಚಾರ್ವಾಕರನ್ನುಳಿದು ಮಿಕ್ಕ ಎಲ್ಲ ವಿಮರ್ಶಕರ ದರ್ಶನ ಧರ್ಮ ಪ್ರತಿಪಾದನೆಯೇ ಆಗಿದೆ. ಸಾಂಖ್ಯ, ವೈಶೇಷಿಕ, ಯೋಗ ಮತ್ತು ನ್ಯಾಯ ಮುಂತಾದವನ್ನು ಧರ್ಮಪ್ರತಿಪಾದಕ ದರ್ಶನಗಳೆಂದೇ ಪರಿಗಣಿಸಲಾಗಿದೆ. ಆದರೆ; ಇವುಗಳಲ್ಲೂ ನಿರೀಶ್ವರವಾದದ ಅಂಶಗಳನ್ನು ಗಮನಿಸಬಹುದು.

ಸೃಷ್ಟಿಯ ಪ್ರತಿಯೊಂದು ನಿಯಮವೂ ಅದರಲ್ಲೇ ಇದೆ. ಕರ್ಮಗಳಿಗೆ ತಕ್ಕಂತಹ ಕರ್ಮಫಲಗಳು ಉಂಟಾಗುತ್ತವೆ. ಮನುಷ್ಯನ ಸುಖ-ದುಃಖಗಳಿಗೆ ಅವನು ಮಾಡುವ ಕೆಲಸಗಳು ಅಥವಾ ಕೃತ್ಯಗಳು ಮಾತ್ರ ಕಾರಣ. ಇದಕ್ಕೆ ಯಾವ ದೇವನಾಗಲೀ ಅಥವಾ ದೇವರಾಗಲೀ ಕಾರಣರಲ್ಲ ಎನ್ನುವುದನ್ನು ಸಾಂಖ್ಯದರ್ಶನ ವಿವರಿಸುತ್ತದೆ. ಆದುದರಿಂದ ಸೃಷ್ಠಿ, ಸ್ಥಿತಿ, ಲಯಗಳಿಗಾಗಲೀ ಅಥವಾ ಮನುಷ್ಯನ ಸುಖ-ದುಃಖಗಳಿಗಾಗಲೀ ದೇವರು ಕಾರಣನಲ್ಲ ಅಂದ ಮೇಲೆ ಅವನು ಏಕೆ ಬೇಕು? ಎನ್ನುವ ಪ್ರಶ್ನೆ ನಿರೀಶ್ವರವಾದವನ್ನು ಸಮರ್ಥಿಸುತ್ತದೆ.

ಕಣಾದುವಿನ ವೈಶೇಷಿಕ ವೇದಪ್ರಾಮಾಣ್ಯವನ್ನು ಒಪ್ಪಿಕೊಳ್ಳುತ್ತದೆಯೇ ಹೊರತು ಎಲ್ಲೂ ದೇವರ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಇಡೀ ವಿಶ್ವವು ಅಣುಗಳಿಂದಾಗಿದೆ. ಇದರಲ್ಲಿ ಆತ್ಮ ಸೇರುವುದಿಲ್ಲ. ಈ ಅಣುಗಳ ಕರ್ಮ (ಕೆಲಸ)ದಿಂದಾಗಿ ಸೃಷ್ಟಿ ಸ್ಥಿತಿ-ಲಯಗಳಿಗೆ ಒಳಗಾಗುತ್ತದೆ ಎನ್ನುವುದನ್ನು ಮಾತ್ರ ವೈಶೇಷಿಕ ಹೇಳುತ್ತದೆ.

ನಿರೀಶ್ವರವಾದಿ ನಾಸ್ತಿಕನಾಗಿದ್ದು, ಧರ್ಮನಿರಪೇಕ್ಷನಾಗಿರಬಹುದು ಅಥವಾ ನಿರೀಶ್ವರವಾದಿ ನಾಸ್ತಿಕನಾಗಿದ್ದೂ ಧಾರ್ಮಿಕನಾಗಿರಬಹುದು. ಚಾರ್ವಾಕರು ದೇವರ ಕಲ್ಪನೆಯನ್ನಷ್ಟೇ ತಿರಸ್ಕರಿಸದೆ, ಪುನರ್ಜನ್ಮ, ಪರಲೋಕಗಳನ್ನೂ ತಿರಸ್ಕರಿಸುವುದರಿಂದ, ಅವರು ಎಲ್ಲ ರೀತಿಯ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಂದ ದೂರವಿರಲು ಬಯಸುತ್ತಾರೆ.

ದೇವಾಸ್ತಿಕ್ಯರು (Deists)

ಅಪೌರುಷೇಯ ವಾಕ್ಕಿನಲ್ಲಿ ನಂಬಿಕೆ ಇಡದೆ ದೇವರಿರುವನೆಂದು ನಂಬುವವರನ್ನು ದೇವಾಸ್ತಿಕ್ಯರು ಅಥವಾ ದೇವಾಸ್ತಿಕರು ಎಂದು ಕರೆಯಲಾಗಿದೆ. ದೇವಾಸ್ತಿಕತೆ ಎನ್ನುವುದು ಪ್ರಕೃತಿ ಸಿದ್ಧ ಮತ. ಆಕಾಶದ ಅಗಾಧತೆಯಿಂದ ಅನಂತವಾದ ಸೂಕ್ಷ್ಮಾಣುವಿನವರೆಗೆ ವಿಶ್ವದ ಸಂಕೀರ್ಣತೆ ಮತ್ತು ರಚನೆಯಿಂದ ಅವರು ಪ್ರಭಾವಿತರಾಗಿದ್ದಾರೆ. ಸೃಷ್ಟಿಯನ್ನಾಳುತ್ತಿರುವ ನಿಯಮಗಳು ಆಗಲೇ ದೇವರಿಂದ ನಿರ್ಧರಿತವಾದವು ಎನ್ನುವ ಕಾರಣವನ್ನು ದೇವಾಸ್ತಿಕರು ಕೊಡುತ್ತಾರೆ; ಆದರೆ ಅಂತಹ ಪಾಲನಕರ್ತನನ್ನು ವಿವರಿಸಲೂ ಇಚ್ಚಿಸುವುದಿಲ್ಲ ಹಾಗೂ ಒಪ್ಪುವುದೂ ಇಲ್ಲ. ಅವರ ದೇವರು ಮನುಷ್ಯನ ಬುದ್ದಿ ಗಣನೆಗೆ ಸಿಲುಕದವ ಮತ್ತು ಅವನ ಸೃಷ್ಟಿಯಿಂದ ಬೇರೆ ಮತ್ತು ಅದನ್ನು ಮೀರಿದವನು. ಸೃಷ್ಟಿಕರ್ತ ದೇವರು ಅವನ ಕರ್ತವ್ಯವನ್ನು ನೆರವೇರಿಸಿದ್ದಾನೆ. ಮಾಡಲು ಇನ್ನೇನೂ ಉಳಿದಿಲ್ಲ. ‘ಸೃಷ್ಟಿ’ ಪೂರ್ಣವಾಗಿದೆ. ದೇವಾಸ್ತಿಕರು ಅತಿಲೌಕಿಕ ಸಮ್ಮೋದ ಸಂಭ್ರಮದಲ್ಲಿರಬೇಕೆಂಬುದನ್ನು ತಿರಸ್ಕರಿಸುತ್ತಾರೆ. ಒಟ್ಟಿನಲ್ಲಿ ಅವರ ಜೀವನ ವಿಧಾನ ನಾಸ್ತಿಕರಂತೆ.

ದೇವಾಸ್ತಿಕ್ಯರನ್ನು ತಟಸ್ಥ ದೇವತಾವಾದಿಗಳು ಎಂದೂ ಕರೆಯುವುದುಂಟು. ಲಾರ್ಡ್ ಹೆರ್ಬರ್ಟ್ ತನ್ನ ‘‘ದೆ ವೆರಿಟೇಜ್’’ (೧೬೨೪) ಎನ್ನುವ ಗ್ರಂಥದಲ್ಲಿ ತಟಸ್ಥ ದೇವತಾವಾದಕ್ಕೆ (Deism) ಒತ್ತು ಕೊಟ್ಟಿದ್ದರಿಂದ; ಅದು ಯುರೋಪಿನಲ್ಲಿ ಒಂದು ಸೈದ್ಧಾಂತಿಕ ಚಳುವಳಿ (೧೬೮೮-೧೭೯೦)ಯಾಗಿ ರೂಪುಗೊಂಡಿತು.

‘‘ದೇವರು ಒಬ್ಬನೇ ಹಾಗೂ ಅವನೇ ಸರ್ವಸೃಷ್ಟಿಗೆ ಕಾರಣ. ಮಾನವರನ್ನೂ ಅವರ ಪ್ರಯೋಜನಕ್ಕಾಗಿ ವಿಶ್ವವನ್ನೂ ಸೃಷ್ಟಿಸಿದ್ದಕ್ಕಾಗಿ ಮಾನವರು ಆ ದೇವರಿಗೆ ಕೃತಜ್ಞತೆಯಿಂದಿರಬೇಕು ಹಾಗೂ ಪೂಜೆ ಸಲ್ಲಿಸಬೇಕು. ಪುಣ್ಯ ಕಾರ್ಯಗಳನ್ನು ಮಾಡುವುದೇ ದೇವರನ್ನು ಸ್ಮರಿಸುವ ಮತ್ತು ಆರಾಧಿಸುವ ನಿಜವಾದ ಮಾರ್ಗ. ನಮ್ಮ ಮರಣದ ನಂತರ ಆ ದೇವರು ನಮ್ಮ ಪಾಪ-ಪುಣ್ಯಗಳನ್ನು ನಿರ್ಧರಿಸಿ; ಅವುಗಳಿಗನುಗುಣವಾಗಿ ನಮಗೆ ನಿರಂತರ ಸುಖ ಅಥವಾ ದುಃಖಗಳನ್ನು ನೀಡುತ್ತಾನೆ’’ಎನ್ನುವುದು ಹೆರ್ಬರ್ಟ್‌ನ ಅಭಿಪ್ರಾಯಗಳು. ಆದರೆ ಹೆರ್ಬರ್ಟನ ನಂತರ; ‘‘ದೇವರು ತಾನೇ ಸೃಷ್ಟಿಸಿದ ವಿಶ್ವದ ಬಗೆಗೆ ತಟಸ್ಥನಾಗಿರುತ್ತಾನೆ. ಅಂದರೆ ನಿಷ್ಠಾವಂತ ಭಕ್ತರಿಗೆ ಅನುಗ್ರಹ ನೀಡುವುದಾಗಲೀ; ದುಷ್ಟರನ್ನು ಶಿಕ್ಷಿಸುವುದಾಗಲೀ ಅವನ ಕೆಲಸವಲ್ಲ. ದೇವರು ಮನುಷ್ಯನಿಗೆ ವೈಚಾರಿಕ ಶಕ್ತಿಯನ್ನು ಕೊಟ್ಟಿರುವುದರಿಂದ ಅವನ ದಿವ್ಯ ಬೋಧೆ ಮನುಷ್ಯನಿಗೆ ಅನಾವಶ್ಯಕ’’ ಎನ್ನುವ ಮತ್ತೆರಡು ಸಿದ್ಧಾಂತಗಳನ್ನು ಮುಂದಿನವರು ಸೇರಿಸಿದರು. ಮನುಷ್ಯ ದೇವರನ್ನು ಕಲ್ಪಿಸಿಕೊಂಡು ಪೂಜಿಸುತ್ತಿರುವುದೇ ತನ್ನ ಇಷ್ಟಾರ್ಥ ಸಿದ್ದಿಗಾಗಿ, ಮನುಷ್ಯನ ಪ್ರಯತ್ನದ ಫಲ ಇಷ್ಟಾರ್ಥ ಸಿದ್ದಿಯಾದರೂ ಅದರ ಆರೋಪ ಮಾತ್ರ ದೇವರಿಗೆ. ಹೀಗೆ ಬೆಳೆದು ಬಂದ ಮನುಷ್ಯನಿಗೆ ತಾನೇ ಪ್ರತಿಯೊಂದಕ್ಕೂ ಮೂಲ ಎನ್ನುವ ವಿಚಾರವನ್ನು ಕೇಳಿದಾಕ್ಷಣ ಗಾಬರಿಯಾಗುವುದು ಸ್ವಾಭಾವಿಕ. ಹಾಗಾಗಿ ತಟಸ್ಥ ದೇವತಾವಾದ ಜನತೆಯಿಂದ ಆದಷ್ಟೂ ಬೇಗ ದೂರವಾಯಿತು.

ಅಜ್ಞಾನಿಗಳು (ತಿಳಿಗೇಡಿಗಳು) (Igtheists)

ಆಸ್ತಿಕವಾದದ ತಳಬುಡವೂ ಅರ್ಥವಾಗದ ಹಾಗೂ ಆಸ್ತಿಕರ ಮಾತುಗಳನ್ನೂ ಅರ್ಥಮಾಡಿಕೊಳ್ಳಲಾರದವರನ್ನು ಅಜ್ಞಾನಿಗಳು ಅಥವಾ ತಿಳಿಗೇಡಿಗಳು ಎಂದು ಕರೆಯಲಾಗುತ್ತಿದೆ.

ಡಾ.ಪಾಲ್ ಕರ್ಟ್ಸ್ ತನ್ನ ‘ದಿ ನ್ಯೂ ಸ್ಕೆಪ್ಟಿಸಿಸಂ’ ಎನ್ನುವ ಕೃತಿಯಲ್ಲಿ ‘Igtheist’ ಎನ್ನುವ ಪದವನ್ನು ಬಳಸಿದ್ದಾನೆ. ಕನ್ನಡದ ಸಂದರ್ಭದಲ್ಲಿ ಈ ಪದಕ್ಕೆ ಸಮಾನಾರ್ಥಕವಾಗಿ ‘ಅಜ್ಞಾನಿಗಳು’ ಅಥವಾ ‘ತಿಳಿಗೇಡಿಗಳು’ ಎನ್ನುವ ಪದಗಳನ್ನು ಬಳಸಲಾಗುತ್ತಿದೆ.

ದೇವರಿದ್ದಾನೆ ಎನ್ನುವುದನ್ನು ತಿರಸ್ಕರಿಸಲು ಸಾಕ್ಷ್ಯಗಳನ್ನು ಒದಗಿಸದ ನಾಸ್ತಿಕವಾದದಿಂದ ಅಜ್ಞಾನಿಗಳು ದೂರಸರಿದು; ಆಸ್ತಿಕವಾದ ಎಂದರೇನು ಎನ್ನುವುದರ ಅರಿವಿಲ್ಲದ ಅಜ್ಞಾನದ ಕಡೆ ನಿಲ್ಲುತ್ತಾರೆ.

ದೈವವನ್ನು ಸಾಕ್ಷಾತ್ಕರಿಸಿಕೊಳ್ಳುವ ಆಸ್ತಿಕ ದರ್ಶನದ ಭಾಷೆಯೇ ತಿಳಿಗೇಡಿಗಳಿಗೆ ಅಸ್ಪಷ್ಟ ಹಾಗೂ ದೇವರ ವಿಷಯಗಳೇ ನಿರ್ದಿಷ್ಟ ಗುರಿಗಳಿಂದ ಸಂಕೇತ ಭಾಷೆಯವರೆಗೆ ಹರಡಿರುತ್ತವೆ.

‘ದೇವರು ಅಗೋಚರ’ ಎನ್ನುವ ಮಾತುಗಳು; ಅಜ್ಞಾನಿಗಳಲ್ಲಿ ಇದ್ದ ದೇವರ ಬೇರೆ ಬೇರೆ ಕಲ್ಪನೆಗಳ ಬಗ್ಗೆಯೇ ಗಲಿಬಿಲಿ ಉಂಟಾಗಿ ತಿಳಿಗೇಡಿತನಕ್ಕೆ ಕಾರಣವಾಗಿದೆ. ದೇವರ ಬಗ್ಗೆ ಅಥವಾ ಆಸ್ತಿಕವಾದದ ಬಗ್ಗೆ ಮಾತನಾಡುವುದೇ ಅಜ್ಞಾನಿಗಳಿಗೆ ಅರ್ಥಹೀನವಾಗಿ ಕಾಣುತ್ತದೆ. ದೇವರ ಅಸ್ಥಿತ್ವದ ಬಗ್ಗೆ ಅನುಮಾನಗಳು ಉಳಿದಿರುವವರೆಗೆ ಪ್ರತಿಯೊಬ್ಬರೂ ಅಜ್ಞಾನಿಗಳೇ ಆಗಿರುತ್ತಾರೆ.

ಭೌತವಾದಿಗಳು (Materialists)

ಭೌತದ್ರವ್ಯ, ಅದರ ರೂಪಾಂತರಗಳು, ಅದರ ಚಲನೆ-ಇವುಗಳ ಹೊರತು ಮತ್ತೆ ಯಾವುದೂ ಸೃಷ್ಟಿಯಲ್ಲಿಲ್ಲ ಎನ್ನುವ ವಾದವನ್ನು ‘ದ್ರವ್ಯವಾಸ್ತವತಾವಾದ’ ಎನ್ನುತ್ತಾರೆ. ಇದು ದ್ರವ್ಯ-ಶಕ್ತಿಯ ನಿತ್ಯ ಸತ್ಯತೆಯನ್ನೂ ಒಳಗೊಂಡಿದೆ. ಮನಸ್ಸಿನ ಕಾರ್ಯಗಳೆಲ್ಲ ಸಂಪೂರ್ಣವಾಗಿ ಭೌತದ್ರವ್ಯದಿಂದಲೇ ನಡೆಯುವುವೆಂಬುದು ಈ ವಾದದ ತಿರುಳು. ಐಹಿಕ ಭೋಗಗಳಿಗೆ ಹೆಚ್ಚು ಪ್ರಾಮುಖ್ಯ ಕೊಡುವ ಈ ವಾದದಿಂದ ಪ್ರಭಾವಿತರಾದವರನ್ನು ಅಥವಾ ಪ್ರವೃತ್ತಿಯವರನ್ನು ‘ದ್ರವ್ಯವಾಸ್ತವತಾವಾದಿಗಳು’ ಅಥವಾ ‘ಭೌತವಾದಿಗಳು’ ಅಥವಾ ‘ದೇಹಾತ್ಮವಾದಿಗಳು’ ಎಂದು ಕರೆಯಲಾಗುತ್ತಿದೆ.

ಭೌತದ್ರವ್ಯ ಅದರ ಪರಿವರ್ತನೆಗಳಲ್ಲಿ ಮತ್ತು ಚಲನೆಗಳಲ್ಲಿ ಮಾತ್ರ ವಾಸ್ತವ ಎನ್ನುವುದನ್ನು ದೇಹಾತ್ಮವಾದ ತಿಳಿಸುತ್ತದೆ. ವಿಶ್ವದಲ್ಲಿನ ಎಲ್ಲ ವಿಧಾನಗಳು ಮತ್ತು ಅದ್ಭುತಗಳು; ಯೋಚನೆ, ಅನುಭವ ಮತ್ತು ಬುದ್ದಿಯನ್ನು ಸೇರಿಸಿಕೊಂಡು ಎಲ್ಲವನ್ನೂ ಭೌತನಿಯಮಗಳಲ್ಲಿ ವಿವರಿಸಬಹುದು. ನಾವು ಬದುಕುತ್ತಿರುವ ಭೌತವಿಶ್ವವನ್ನು ಅರ್ಥೈಸಿಕೊಳ್ಳಲು; ದೇಹಾತ್ಮವಾದಿಗಳು ಅಥವಾ ಭೌತವಾದಿಗಳು ವೈಜ್ಞಾನಿಕ ವಿಧಾನದ ಪರೀಕ್ಷೆ ಮತ್ತು ಮರುಪರೀಕ್ಷೆಗಳನ್ನು ಅವಲಂಬಿಸಿರುತ್ತಾರೆ. ಅಂತಹ ತತ್ವಜ್ಞಾನ ಆಧ್ಯಾತ್ಮಿಕ ಬೇಡಿಕೆ ಮತ್ತು ಮಹತ್ವವನ್ನು ಅಮಾನ್ಯಮಾಡಿ ನಾಸ್ತಿಕತ್ವವನ್ನು ಸ್ಥಾಪಿಸುತ್ತದೆ.

ಲೌಕಿಕವಾದಿಗಳು (Secularists)

ಮಾನವನ ಏಳಿಗೆಗೆ ಪ್ರಮುಖವಾಗಿ ಕಾರಣವಾಗುವ ಲೌಕಿಕ ವಿಷಯಗಳನ್ನೇ ಪ್ರಧಾನವಾಗಿ ಪರಿಗಣಿಸುವವರನ್ನು ಲೌಕಿಕವಾದಿಗಳು ಅಥವಾ ಐಹಿಕವಾದಿಗಳು ಎಂದು ಕರೆಯುತ್ತಾರೆ. ದೈವತ್ವದ ಮತ್ತು ಅದ್ಭುತದ ಅಭಿಪ್ರಾಯಗಳನ್ನು ಅವರು ತಿರಸ್ಕರಿಸುತ್ತಾರೆ. ಕೆಲವು ಲೌಕಿಕವಾದಿ ಗುಂಪುಗಳು ತಮ್ಮ ಅಭಿಪ್ರಾಯಗಳನ್ನು ‘ಧರ್ಮ’ಗಳೆಂದು ಗುರ್ತಿಸಿಕೊಳ್ಳುತ್ತಾರೆ. ಆದರೆ, ‘ಧರ್ಮ’ ಎನ್ನುವ ಪದ ದೈವಿಕ ಮತ್ತು ಅಲೌಕಿಕ ಅರ್ಥವನ್ನು ಹೆಚ್ಚು ಪ್ರತಿನಿಧಿಸುವ ಕಾರಣಕ್ಕಾಗಿ ಹಾಗೆ ಕರೆದುಕೊಳ್ಳುವುದನ್ನು ಕೆಲವು ಲೌಕಿಕವಾದಿಗಳು ತಿರಸ್ಕರಿಸುತ್ತಾರೆ.

ಪ್ರಕೃತಿತತ್ವ ವಾದಿಗಳು (Naturalists)

ಸ್ವಾಭಾವಿಕವಾಗಿ ಬಂದ ಹುಟ್ಟುಗುಣಗಳ ಆಧಾರದ ಮೇಲೆ ಏರ್ಪಟ್ಟ ನೈತಿಕವಾದವನ್ನು ಪ್ರಕೃತಿತತ್ವವಾದ ಎನ್ನುತ್ತಾರೆ. ಅತಿಮಾನುಷವನ್ನಾಗಲೀ, ಆಧ್ಯಾತ್ಮಿಕವನ್ನಾಗಲೀ ಪರಿಗಣಿಸದ ಭೌತಪ್ರಪಂಚದೃಷ್ಠಿ ಪ್ರಕೃತಿತತ್ವವಾದಿಗಳದಾಗಿರುತ್ತದೆ. ಸಂಪ್ರದಾಯಗಳ ಅಲಕ್ಷ್ಯತೆ ಮತ್ತು ಅವುಗಳ ಉಪೇಕ್ಷೆ ಅವರ ಪ್ರಮುಖ ಲಕ್ಷಣ. ಅಸ್ವಾಭಾವಿಕ ವಸ್ತುಗಳು, ಘಟನೆಗಳು ಅಥವಾ ಪರಿಣಾಮಗಳು, ಮುಂತಾದವುಗಳಲ್ಲಿ ನಂಬಿಕೆ ಇಡದೆ; ಅವುಗಳನ್ನು ಪ್ರಕೃತಿ ನಿಯಮಗಳಂತೆ ಹಾಗೂ ವೈಜ್ಞಾನಿಕ ವಿಧಾನದಂತೆ ಕಾಣುವುದರಲ್ಲಿ ಅವರಿಗೆ ನಂಬಿಕೆ ಇದೆ. ವಿಶ್ವದಲ್ಲಿ ನಡೆಯುವ ಘಟನೆಗಳಿಗೆ ಅಥವಾ ವಿಷಯಗಳಿಗೆ, ಅಲೌಕಿಕ ಪ್ರಭಾವಗಳಿಗೆ ಅಥವಾ ಧಾರ್ಮಿಕ ಅಥವಾ ಆಧ್ಯಾತ್ಮಿಕ ದೃಷ್ಟಿಗೆ ವಿಶೇಷಣ ಕೊಡುವ ಅವಶ್ಯಕತೆ ಇಲ್ಲ. ಮನುಷ್ಯನ ಸ್ವಭಾವ ಮತ್ತು ಒಲವನ್ನು ಪ್ರಕೃತಿತತ್ವವಾದಿಗಳು ಮಾನ್ಯ ಮಾಡುತ್ತಾರೆ. ಮಾನವರು ಪ್ರಕೃತಿಯ ಉತ್ಪನ್ನ; ಆದುದರಿಂದ ಅವರು ಪ್ರಕೃತಿಗಿಂತ ಮಿಗಿಲಲ್ಲ ಅಥವಾ ಬೇರೆಯಲ್ಲ. ದೇಹ ಮತ್ತು ಆತ್ಮ ಎನ್ನುವ ಮನುಷ್ಯ ದ್ವಂದ್ವಗಳನ್ನು ಹಾಗೂ ಮರಣಾನಂತರದ ಬಗೆಗಿನದನ್ನು ಅವರು ತಿರಸ್ಕರಿಸುತ್ತಾರೆ.

ವಿಚಾರವಾದಿಗಳು (Rationalists)

ಮತದಲ್ಲಿಯ ಅತಿಮಾನುಷ ವಿಷಯಗಳನ್ನು ಸಯುಕ್ತಿಕವಾಗಿ, ಬುದ್ದಿಗೊಪ್ಪುವಂತೆ ವಿವರಿಸುವ ಪದ್ಧತಿಯನ್ನು ವಿಚಾರವಾದ ಎನ್ನುತ್ತಾರೆ. ಬೇರೆ ವಿಷಯಗಳಲ್ಲಿ ಹೇಗೋ ಹಾಗೆ ಮತ ವಿಷಯದಲ್ಲೂ ಯುಕ್ತಿ ಪ್ರಮಾಣವೇ ಪರಮ ಪ್ರಮಾಣವೆಂಬ ವಾದ; ಇದು ಜ್ಞಾನದ ನಿಶ್ಚಯತತೆಗೆ ಆಧಾರವಾಗಿರುತ್ತದೆ.

ಅತಿಮಾನುಷ ವಿಷಯಗಳನ್ನು ತಿರಸ್ಕರಿಸಿ; ಜ್ಞಾನದ ಮೂಲಾಧಾರ ‘ಕಾರಣ’ ಎಂದು ವಾದಿಸುವವರನ್ನು ವಿಚಾರವಾದಿಗಳು ಎಂದು ಮಾನ್ಯ ಮಾಡಲಾಗಿದೆ.

ಆಧ್ಯಾತ್ಮಿಕವೂ ಅಲ್ಲದ, ಅತಿಮಾನುಷವೂ ಅಲ್ಲದ ಕಾರಣಗಳು ನೀತಿಗಳಿಗೆ ಮತ್ತು ನಂಬಿಕೆಗಳಿಗೆ ಅರ್ಥಪೂರ್ಣ ಆಧಾರಗಳಾಗಿರುತ್ತವೆ. ಕೆಲವು ವಿಚಾರವಾದಿಗಳು ದೇವಾಸ್ತಿಕರಾಗಿದ್ದರೆ ಉಳಿದವರು ನಾಸ್ತಿಕರು.

ಮಾನವತಾವಾದಿಗಳು (Humanists)

ನಾವು ಇದುವರೆವಿಗೂ ಚರ್ಚಿಸಿದ ಪ್ರತಿ ಮುಕ್ತ ವಿಚಾರದ ಗುಂಪಿಗೂ ಮಾನಯತೆ ಒತ್ತಿನ ಆಧಾರವಿರುವುದನ್ನು ಗಮನಿಸಿರಬಹುದು. ಹಾಗಾದರೆ ಮಾನಯತೆಯೊಂದನ್ನೇ ಬೇರ್ಪಡಿಸಿ; ಅದೂ ಒಂದು ಮುಕ್ತ ವಿಚಾರ ಎನ್ನುವ ಅರ್ಥದಲ್ಲಿ ಚರ್ಚಿಸುವ ಅಗತ್ಯವೇನಿತ್ತು ಎನ್ನುವ ಜಿಜ್ಞಾಸೆ ಉಂಟಾಗುವುದು ಸ್ವಾಭಾವಿಕ.

ಡಾರ್ವಿನ್ನನ ವಿಕಾಸವಾದದಂತೆ ಮಾನವನೂ ಪ್ರಾಣಿಜನ್ಯ. ಮನುಷ್ಯ ಸಮಾಜ ಮತ್ತು ಪ್ರಾಣಿ ಸಮಾಜ ಬಹುತೇಕ ಜೈವಿಕ ವಿಷಯಗಳಲ್ಲಿ ಸಾಮ್ಯತೆ ಹೊಂದಿದ್ದರೂ ಅವು ಬೇರ್ಪಡುವುದು ಸಂಸ್ಕೃತಿಯ ವಿಷಯದಲ್ಲಿ ಮಾತ್ರ. ಮನುಷ್ಯ ತನ್ನಲ್ಲಿರುವ ಮಾತಿನ ಚಲನಶೀಲ ಶಕ್ತಿಯಿಂದ; ತನ್ನ ಹಿಂದಿನ ಪೀಳಿಗೆಯ ಅನುಭವಗಳನ್ನು ಮಾರ್ಪಡಿಸಿಕೊಂಡು ಅನ್ವಯಿಸಿಕೊಳ್ಳುವ ವಿವೇಕದಿಂದ ಸಂಸ್ಕೃತಿಯನ್ನು ಕಟ್ಟಿಕೊಳ್ಳುತ್ತಾನೆ; ಆ ಮೂಲಕ ಪ್ರಾಣಿ ಸಮಾಜದಿಂದ ಭಿನ್ನನಾಗುತ್ತಾನೆ ಮತ್ತು ಸಕಲ ಜೀವಿಗಳ ಲೇಸು ಬಯಸುತ್ತಾನೆ. ವಿವೇಕ ಮತ್ತು ಸಂಸ್ಕೃತಿ ಎರಡೂ ಇಲ್ಲದ ಮನುಷ್ಯ ಒಂದು ರೀತಿಯಲ್ಲಿ ಮನುಷ್ಯ ರೂಪದ ಪ್ರಾಣಿಯೇ ಆಗಿರುತ್ತಾನೆ.

ಮಾನವ ಕಲ್ಪಿತ ಮತಧರ್ಮದ ದತ್ತಾಂಶ ದೇವರು ಅಥವಾ ದೈವ ಅಥವಾ ದೇವತೆ ಆಗಿದೆ. ಇಂತಹ ದೈವ ಏಕ, ನಿರಾಕಾರ ಅಥವಾ ಸಾಕಾರ, ನಿರಂತರ, ಸರ್ವಾಂತರ್ಯಾಮಿ, ಗುಣಸಂಪನ್ನ, ಸರ್ವಕಲ್ಯಾಣ ಇತ್ಯಾದಿ ಇತ್ಯಾದಿ ಆಗಿರುತ್ತಾನೆ. ಈ ಗುಣಸಮೂಹವನ್ನು ದೈವತ್ವ ಎಂದು ಪರಿಗಣಿಸಲಾಗಿದೆ. ಅದ್ವೈತ, ವಿಶಿಷ್ಟಾದ್ವೈತ ಮತ್ತು ಶಕ್ತಿವಿಶಿಷ್ಟಾದ್ವೈತಗಳು ಮನುಷ್ಯನಲ್ಲಿ ದೈವತ್ವವನ್ನು ಗುರುತಿಸುತ್ತವೆ. ಆದುದರಿಂದ ಮನುಷ್ಯನೂ ದೇವರು ಎಂದ ಹಾಗಾಯಿತು. ಈ ವಾದ ಕೆಲವು ಅನುಮಾನಗಳಿಗೆ ಅವಕಾಶ ಮಾಡಿಕೊಡುತ್ತದೆ. ಮನುಷ್ಯನಿಗೆ ಹುಟ್ಟು-ಸಾವುಗಳಿರುವುದರಿಂದ, ಸಾಕಾರನಾಗಿರುವುದರಿಂದ ಹಾಗೂ ಚಲನಶೀಲನಾಗಿರುವುದರಿಂದ ಜಡರೂಪದ ದೇವರಾಗಿರಲು ಸಾಧ್ಯವಿಲ್ಲ. ಇದಕ್ಕೆ ಉದಾಹರಣೆಯಾಗಿ ನಳ-ದಮಯಂತಿ ಸ್ವಯಂವರದಲ್ಲಿ ದೇವೇಂದ್ರನಿಗಾದ ಅವಮಾನದ ಕಥೆಯನ್ನು ಉಲ್ಲೇಖಿಸಬಹುದು.

ತನ್ನ ವಿವೇಕ ಮತ್ತು ಸಂಸ್ಕೃತಿಯ ಮೂಲಕ ಮನುಷ್ಯರೂಪದ ಪ್ರಾಣಿತನದಿಂದ ಮೇಲೇರಿದ ಹಾಗೂ ಸಕಲ ಜೀವಿಗಳ ಮಧ್ಯೆ ಚಲನಶೀಲವಾಗಿದ್ದುಕೊಂಡು ಅವುಗಳ ಲೇಸ ಬಯಸುತ್ತ ಜಡ ದೇವರ ಕಲ್ಪನೆಯಿಂದ ಕೆಳಗೆ ಉಳಿದ ಮಾನವನ ಗುಣ ಸಮೂಹ ವನ್ನು ಮಾನವತಾವಾದ ಎನ್ನಬಹುದು. ಮಾನವತಾವಾದದ ದೈವತ್ವವು ಮನುಷ್ಯನಿಗಿಂತ ಅಥವಾ ಮನುಷ್ಯನನ್ನು ಬಿಟ್ಟು ಮೇಲೇರುವುದೇ ಇಲ್ಲ.

ಸಕಲ ಜೀವಿಗಳ ಲೇಸು ಬಯಸುವುದು ಎಂದರೆ ಪೂರ್ಣವಾಗಿ ಅಹಿಂಸೆ ಪಾಲಿಸುವುದು ಎನ್ನುವ ಅರ್ಥ. ಹಾಗಾದರೆ, ಪ್ರಕೃತಿ ನಿಯಮಕ್ಕೆ ಇದು ವಿರೋಧವಲ್ಲವೆ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯೂ ತನ್ನ ಆಹಾರಕ್ಕಾಗಿ ಮತ್ತೊಂದು ಜೀವಿಯನ್ನು ಅವಲಂಬಿಸಿ ಆಹಾರದ ಬಲೆ ಏರ್ಪಟ್ಟಿದೆ. ಸಸ್ಯಗಳೂ ಜೀವಿಗಳೇ ಎಂದು ಪರಿಗಣಿಸಿದಾಗ ಅಹಿಂಸೆ ಎನ್ನುವ ಪದಕ್ಕೆ ಅರ್ಥವಾದರೂ ಎಲ್ಲಿ ರುತ್ತದೆ? ಆದುದರಿಂದ ನನ್ನ ವಿಚಾರವೇನೆಂದರೆ; ಮಾನಯತೆ ಎನ್ನುವುದು ಮನುಷ್ಯನಿಗೆ ಮಾತ್ರ ಸೀಮಿತವಾದುದು, ಮನುಷ್ಯರು ಕನಿಷ್ಠ ತಮ್ಮಂತಾ ಮನುಷ್ಯರಿಗೆ ಹಿಂಸೆ ಮಾಡಿದಿದ್ದರೆ ಸಾಕು ಎನ್ನವ ಉದ್ದೇಶದಿಂದ ಹಾಗೂ ಸಾಮಾಜಿಕ ನೆಮ್ಮದಿಯ ಅಸ್ತ್ರವಾಗಿ ಬಳಕೆಯಾಗಿದೆಯೆಂಬುದು ತನ್ನ ಖಚಿತ ಅಭಿಪ್ರಾಯ.

ಮಾನವತಾವಾದದ ಪ್ರಕಾರ, ಮನುಷ್ಯ ತನ್ನ ಮನುಷ್ಯತ್ವವನ್ನು ಉನ್ನತ ಮಟ್ಟಕ್ಕೇರಿಸಿ ಕೊಳ್ಳಲು ಸ್ವ-ಪ್ರಯತ್ನದಿಂದ ಮಾತ್ರ ಸಾಧ್ಯವೇ ಹೊರೆತು ಅನುಗ್ರಹದಿಂದಲ್ಲ. ಇದೇ ಕಾರಣದಿಂದಲೇ ಮಾನಯತೆಯ ಅಧ್ಯಯನ ಬೇರೆಯಾಗಿಯೇ ನಡೆಯುತ್ತಿರುವುದು.

ಮಾನವತಾವಾದವು ಮಾನವರನ್ನೆಲ್ಲಾ ಸಮಾನವಾಗಿ ಮಾನ್ಯ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಕನಿಷ್ಠ ಮಾನವರನ್ನಾದರೂ ಸಮಾನವಾಗಿ ಮಾನ್ಯ ಮಾಡುವುದನ್ನು ಫ್ರೆಂಚ್ ದೇಶದ ಆಗಸ್ಟ್ ಕೊಮ್ಟೆ ಎನ್ನುವ ಚಿಂತಕ ಪಾಸಿಟಿವಿಸಂ ಎಂದು ಕರೆದನು. ಇವನ ಸಮಕಾಲೀನನಾದ ಲುಡ್ವಿಗ್ ಪಾಯರ್ ಬಾಕ್ ಎನ್ನುವವನು ಇಂಥದೇ ಇನ್ನೊಂದು ವಾದವನ್ನು ಮಂಡಿಸಿ ‘ಮಾನವತಾವಾದ’ ಎಂದು ಹೆಸರಿಟ್ಟನು.

ಮತಧರ್ಮಗಳು ಪುರೋಹಿತಶಾಹಿ ಹಿಡಿತದಲ್ಲಿ ಸಿಕ್ಕಿ ಜನಾಂಗಗಳ ನಡುವೆ ಧರ್ಮ ಯುದ್ಧಗಳನ್ನು ಹುಟ್ಟು ಹಾಕುತ್ತಾ; ಮತೀಯ ಕಲಹಗಳು ಮತ್ತು ಮತಧಾರ್ಮಿಕ ಪೀಡನೆಗಳು ಹೆಚ್ಚಿ ಮಾನವನ ಶಾಂತಿಗೆ ಭಂಗ ಬಂದಾಗಲೆಲ್ಲ ಮಾನವತಾವಾದಿಗಳು ಮತಧರ್ಮಗಳನ್ನು ಧಿಕ್ಕರಿಸಿ ನಿರಾಕರಿಸಿರುವುದು ಇತಿಹಾಸದಿಂದ ಕಂಡುಬರುತ್ತದೆ. ಆದುದರಿಂದ, ಮಾನವತಾವಾದಿಗಳು ಬಹುಪಾಲು ಮತಧರ್ಮನಿರಪೇಕ್ಷಿಗಳು ಅಥವಾ ಸಂದೇಹವಾದಿಗಳಾಗಿರುತ್ತಾರೆ.

ಅಸ್ತಿತ್ವದಲ್ಲಿರುವ ಅನೇಕ ಧರ್ಮಗಳು ಮಾನಯತೆಗೆ ಸಂಬಂಧಿಸಿವೆ. ಸಮಾಜದಲ್ಲಿನ ತಿರಸ್ಕೃತರಿಗೆ, ನಿರ್ಗತಿಕರಿಗೆ, ಬಡವರಿಗೆ, ರೋಗಪೀಡಿತರಿಗೆ ಆಹಾರ, ಬಟ್ಟೆ, ಔಷಧ ಉಪಚಾರ ಮುಂತಾದವನ್ನು ಒದಗಿಸುವಲ್ಲಿ ಅವು ಈಗಾಗಲೇ ತೊಡಗಿವೆ. ಈ ಎಲ್ಲ ಉದಾತ್ತ ಕಾರ್ಯಗಳೂ ಮುಕ್ತಚಿಂತಕರ ಮಾನಯ ಪ್ರಾಧಾನ್ಯತೆಯ ಚಿಂತನೆಯ ಫಲವೆಂದೇ ಹೇಳಬೇಕು.

ಹಿಂದೂ ಧರ್ಮದಂತಾ ಧರ್ಮದಲ್ಲಿ ಮಾನಯತೆ ಎನ್ನುವುದು ವ್ಯಕ್ತಿಯ ವೈಯಕ್ತಿಕ ವಿವೇಕ ಮತ್ತು ಸಂಸ್ಕಾರಗಳನ್ನು ಅವಲಂಬಿಸಿ ವೈವಿಧ್ಯತೆಯಿಂದ ಕೂಡಿದ್ದರೆ; ಮತಧರ್ಮಗಳು ಅವುಗಳ ಧಾರ್ಮಿಕ ಗ್ರಂಥಗಳಿಂದ ಮಾನಯತೆಗೆ ಪ್ರೇರಣೆ ನೀಡುವುದರಿಂದ ವೈವಿಧ್ಯತೆಯ ಕೊರತೆ ಸ್ವಾಭಾವಿಕವಾಗಿರುತ್ತದೆ.

ಮಾನವತಾವಾದದಲ್ಲಿರಬಹುದಾದ ಮೂಢನಂಬಿಕೆ, ತಾರತಮ್ಯಗುಣ, ಅಸಹಿಷ್ಣತೆ ಮುಂತಾದವುಗಳನ್ನು ನಿವಾರಿಸಿ ವೈಚಾರಿಕತೆಯನ್ನು ಬೆಳೆಸುವಲ್ಲಿ ವಿಜ್ಞಾನವು ಸಹಕರಿಸಿದೆ ಎಂದು ಹೇಳಬಹುದು.

ಅಪರಾಧ, ಬಡತನ, ಯುದ್ಧಗಳು, ಆಹಾರಕ್ಕಾಗಿ ಹೋರಾಟ, ಬೇಟೆ ಮುಂತಾದ ಸಂದರ್ಭಗಳಲ್ಲಿ ಮಾನಯ ಕಾರ್ಯಗಳು ಪರಿಣಾಮಕಾರಿಯಾಗಿರುವುದಿಲ್ಲ. ಮಾನವತಾವಾದವು ಇಡೀ ಮಾನವಸಮಾಜದ ಮೇಲೆ ಪಾರ್ಶ್ಚಿಕ ಪರಿಣಾಮ ಮಾತ್ರ ಬೀರುತ್ತದೆ. ಈ ಎಲ್ಲ ಅವಗುಣಗಳ ಮಧ್ಯೆ ಅದು ಒಂದು ರೀತಿಯ ಆತ್ಮಸಂತೋಷವನ್ನು ವ್ಯಕ್ತಿಯಲ್ಲಿ ಆ ಮೂಲಕ ಸಮಾಜದಲ್ಲಿ ಉಂಟುಮಾಡುತ್ತದೆ.