ಭೂಮಿಯ ಮೇಲೆ ಮಾನವನ ಹುಟ್ಟು ಅಥವಾ ವಿಕಾಸವನ್ನು  ಮತಧರ್ಮ ಅಥವಾ ಧರ್ಮ ಮತ್ತು ವಿಜ್ಞಾನದ ತಳಹದಿಯ ಮೇಲೆ ಅವಲೋಕಿಸಬೇಕಾಗುತ್ತದೆ. ಬಹಳಷ್ಟು ಮತಧರ್ಮಗಳಲ್ಲಿ ದೇವರು ಮನುಷ್ಯನನ್ನೂ ಒಳಗೊಂಡಂತೆ ಸಕಲ ಜೀವಿಗಳ ಸೃಷ್ಟಿಕರ್ತ, ಪಾಲನಕರ್ತ ಮತ್ತು ಲಯಕರ್ತ ಆಗಿರುತ್ತಾನೆ. ಹಿಂದೂ ಧರ್ಮದಲ್ಲಿ ಬ್ರಹ್ಮ ಸೃಷ್ಟಿಕರ್ತ, ವಿಷ್ಣುಪಾಲನಕರ್ತ ಹಾಗೂ ಈಶ್ವರ ಲಯಕರ್ತ. ಕ್ರೈಸ್ತ ಮತಧರ್ಮದಲ್ಲಿ ಆಡೆಮ್ ಮತ್ತು ಈವ್ ಆ ಸ್ಥಾನಗಳನ್ನು ತುಂಬಿದರೆ; ಇಸ್ಲಾಂನಲ್ಲಿ ಅಲ್ಲಾಹ್ ಎಲ್ಲವೂ ಆಗಿದ್ದಾನೆ. ಋಗ್ವೇದದಲ್ಲಿ ದಾಖಲಾಗಿರುವಂತೆ ಪ್ರಾಚೀನ ಹಿಂದುಗಳಲ್ಲಿ ಮನುಷ್ಯನ ಹುಟ್ಟಿನ ಸಾಮಾನ್ಯ ನಂಬಿಕೆಯ ಪ್ರಕಾರ ಭೂಮಿಯಿಂದ ಮಾಂಸವೂ, ಜಲದಿಂದ ರಕ್ತ-ಮೂತ್ರಗಳೂ, ವಾಯುವಿನಿಂದ ಉಸಿರೂ, ಸೂರ್ಯನಿಂದ ಕಣ್ಣುಗಳೂ, ಚಂದ್ರನಿಂದ ಮನಸ್ಸೂ (ಮೆದುಳು) ಹೀಗೆ ಪಂಚಭೂತಗಳಿಂದ ಮನುಷ್ಯ ಶರೀರ ಆಗಿದೆ. ಇವೆಲ್ಲವುಗಳಿಗೆ ಆಧಾರವಾಗಿರುವ ‘‘ಆತ್ಮ’’ ಮಾತ್ರ ಬ್ರಹ್ಮನಿಂದ ಸೃಷ್ಟಿಯಾಗಿದೆ. ಪಂಚಭೂತಗಳಿಂದಾದ ಭೌತಿಕ ದೇಹಕ್ಕೆ ನಾಶವಿದ್ದರೆ, ಆತ್ಮ ಮಾತ್ರ ಅವಿನಾಶ. ಅಂಗದೇಹವು ಭಂಗವಾದಾಗ ಪಿಂಡಾಂಡವು ಬ್ರಹ್ಮಾಂಡದೊಡನೆ ಬೆರೆತು ಹೋಗುತ್ತದೆ ಎನ್ನುವುದು ಉಪನಿಷತ್ತಿನ ಅಭಿಪ್ರಾಯ. ಜಗತ್ತು ಮತ್ತು ಜೀವಿಯ ಸೃಷ್ಟಿಗೆ ಸಂಬಂಧಿಸಿದ ಪುರಾಣಗಳಲ್ಲಿ; ಶೂನ್ಯದಿಂದ ಜಗತ್ತು ಮೂಡಿಬರುವುದು, ಅವ್ಯವಸ್ತಿತ ಅಸ್ತವ್ಯಸ್ತ ಸ್ಥಿತಿಯಲ್ಲಿದ್ದ ಧಾತುಗಳಿಂದ ವ್ಯವಸ್ಥಾ ಪ್ರಕ್ರಿಯೆಯ ಬೆಳವಣಿಗೆ ಪರಿಣಾಮವಾಗಿ ಮೂಡಿಬರುವುದು, ಅಂಡದಿಂದ ಉದ್ಭವಿಸುವುದು, ಜಗನ್ಮಾತೆ-ಪಿತರಿಂದ ಸೃಷ್ಟಿಯಾಗುವುದು, ಸ್ವಯಂಭೂ ವಿಧಾನದಲ್ಲಿ ತನ್ನಿಂದ ತಾನೆ ಹುಟ್ಟಿಕೊಳ್ಳುವುದು, ನೀರಿನಲ್ಲಿ ಮುಳುಗಿ ಜಗತ್ತನ್ನು ಮೇಲೆತ್ತಿ ತರುವುದು ಮುಂತಾದ ಪ್ರಕಾರಗಳನ್ನು ಕಾಣಬಹುದು. ಉದಾಹರಣೆಯಾಗಿ : ಗ್ರೀಕರ ಪುರಾಣಗಳ ಪ್ರಕಾರ ‘ಯುರೇನಸ್’ ಮತ್ತು ‘ಗೇ’ ಎನ್ನುವವರು ಕ್ರಮವಾಗಿ ಪುರುಷ ಮತ್ತು ಪ್ರಕೃತಿ. ‘ಗೇ’ ಅರ್ಥಾತ್ ಪ್ರಕೃತಿ ‘ಯುರೇನಸ್‌ಗೆ’ ಜನ್ಮ ನೀಡುತ್ತಾಳೆ. ಅದೇ ‘ಯುರೇನಸ್’ ಮತ್ತು ‘ಗೇ’ ತಮ್ಮ ಪುಂ-ಸ್ತ್ರಿ ರೂಪದಲ್ಲಿ ಸಮಾಗಮಿಸಿದಾಗ ದೇವಸಂತಾನ ಹುಟ್ಟುತ್ತದೆ. ‘ಗೇ’ಯು ಜನಕರಿಲ್ಲದೆ ಶೂನ್ಯದಿಂದ ಹುಟ್ಟಿಬಂದ ಶೂನ್ಯಜಾತೆ-ಸ್ವಯಂಭೂ. ಇವಳ ಹಾಗೆಯೇ ಹುಟ್ಟಿಬಂದ ಮತ್ತಿಬ್ಬರೆಂದರೆ ‘ತಾರ್ತರಸ್’ ಮತ್ತು ‘ಇರೋಸ್’. ‘ಇರೋಸ್’ ಕಾಮ ಮತ್ತು ಮೋಹದ ಸಂಕೇತ. ಈ ಮೋಹವೇ ‘ಗೇ’ ಯು ಯುರೇನಸ್ ನನ್ನು ಆತ್ಮಯೋನಿಯಿಂದ ಹುಟ್ಟಿಸಿಕೊಳ್ಳಲು ಕಾರಣವಾಗುತ್ತದೆ. ಬಳಿಕ ತನ್ನ ಯೋನಿಯಿಂದಲೇ ಹುಟ್ಟಿದ ಯುರೇನಸ್‌ನನ್ನು ‘ಗೇ’ಯು ಕಾಮಿಸಿದ್ದರಿಂದ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.

ಸುಮಾರು ಕ್ರಿ.ಪೂ.೩ ಸಾವಿರ ವರ್ಷಗಳಿಗೂ ಹಿಂದೆ; ಸುಮೇರಿಯನ್ -ಬೆಬಿಲೋನಿಯನ್, ಗ್ರೀಕ್ ಮತ್ತು ವೇದಕಾಲದ ಆರ್ಯರ ಚಿಂತನೆಗಳಲ್ಲಿ, ಆಕಾಶ ಮತ್ತು ಪೃಥ್ವಿಯನ್ನು ಪುರುಷ ಮತ್ತು ಸ್ತ್ರೀ ರೂಪದಲ್ಲಿ ಗ್ರಹಿಸಲಾಗಿತ್ತು. ಇವರ ಸಮಾಗಮದಿಂದ ದೇವತೆಗಳ ಮತ್ತು ಮಾವನರ ಸೃಷ್ಟಿಯಾಯಿತು ಎನ್ನುವ ಚಿಂತನೆ ಇದೆ. ಆದರೆ ಬಹುತೇಕ ಎಲ್ಲ ಧಾರ್ಮಿಕ ನಂಬಿಕೆಗಳೂ ಮನುಷ್ಯ ಅಥವಾ ಮಾನವ ಭೂಮಿಯ ಮೇಲೆ ಮೊದಲು ಎಲ್ಲಿ ಹುಟ್ಟಿದ? ಹಾಗೂ ಯಾವಾಗ ಹುಟ್ಟಿದ? ಎನ್ನುವುದರ ಮೇಲೆ ಬೆಳಕು ಚೆಲ್ಲುವುದರಲ್ಲಿ ವಿಫಲವಾಗಿವೆ. ಆದುದರಿಂದ ವಿಜ್ಞಾನ ತಳಹದಿಯೊಂದೇ ಈ ಕೊರತೆ ತುಂಬಲು ಸಾಧ್ಯ.

ಮಾನವ ವಿಕಾಸದ ಬಗೆಗಿನ ಇತ್ತೀಚಿನ ಕೆಲವು ವಿವಾದಾಸ್ಪದ ವೈಜ್ಞಾನಿಕ ಅಧ್ಯಯನಗಳ ಪ್ರಕಾರ; ನೀಗ್ರಾಯಿಡ್‌ಗಳು (Negroids), ಪಿಗ್ಮಿನಾಯಿಡ್‌ಗಳು (pygminoids), ಬುಷ್ಮ ನಾಯಿಡ್‌ಗಳು (Bushmanoids), ಕಾಕಸಾಯಿಡ್‌ಗಳು (caucasoids) ಮತ್ತು ಮಂಗೊ ಲಾಯಿಡ್‌ಗಳು (Mongoloids) ಮುಂತಾದ ಎಲ್ಲ ಮಾನವ ಪೀಳಿಗೆಗಳೂ ಒಂದೇ ಕುಟುಂಬಕ್ಕೆ ಸೇರಿದವರು  ಮತ್ತು ಆಫ್ರಿಕಾ ಈ ಎಲ್ಲ ಪೀಳಿಗೆಗಳ ಮಾತೃಭೂಮಿ.

ಜೀವ ವಿಜ್ಞಾನದಲ್ಲಿ ಮೈಟೋಕಾಂಡ್ರಿಯಾದ ಡಿಎನ್‌ಎ (DNA) (ಡೀ ಆಕ್ಸಿರಿಬೋ ನ್ಯೂಕ್ಲಿಯಿಕ್ ಆಮ್ಲ) ಅಧ್ಯಯನ ತಿಳಿಸುವಂತೆ ಎಲ್ಲಾ ಮಾನವರೂ ಒಂದು ಸಾಮಾನ್ಯ ವಂಶದಿಂದ ಹುಟ್ಟಿ ಬಂದಿರುತ್ತಾರೆ; ಆದರೆ ಮಾನವಶಾಸ್ತ್ರಜ್ಞರು ಹೇಳುವಂತೆ ಜಗನ್ಮಾತೆ (Eve) ಎಂಬ ಒಬ್ಬ ತಾಯಿಯಿಂದ ಜನ್ಮ ಪಡೆದು ಬಂದಿರುತ್ತಾರೆ. ಇದರರ್ಥ; ಜಗನ್ಮಾತೆಗೆ ಸಮಕಾಲೀನವಾಗಿ ಭೂಮಿಯ ಮೇಲೆ ಬೇರೆ ಹೆಣ್ಣುಗಳು ಇರಲಿಲ್ಲ ಎನ್ನುವ ಅರ್ಥ ಅಲ್ಲ. ಅವರು ಜೀವಂತ ಇದ್ದಾಗ್ಯೂ, ಆಫ್ರಿಕಾದ ಜಗನ್ಮಾತೆಯ ವಂಶವಾಹಿನಿ ಮಾತ್ರ ಉಳಿದುಬಂದಿದೆ ಎನ್ನುವುದು ಮುಖ್ಯ.

ಮಾನವ ಕುಲದ ವಿವಿಧ ಪೀಳಿಗೆಗಳ ವರ್ಗೀಕರಣದಲ್ಲಿ ಚರ್ಮ, ಕೂದಲು ರಚನೆ, ಧ್ವನಿ, ಕಣ್ಣಿನ ಆಕಾರ, ಎತ್ತರ, ದೇಹದ ಆಕಾರ ಮುಂತಾದವುಗಳನ್ನು ಆಧಾರವಾಗಿಟ್ಟು ಕೊಳ್ಳಲಾಗಿದೆ. ಈ ಅಂಶಗಳಲ್ಲಿರುವ ವ್ಯತ್ಯಾಸಗಳ ಆಧಾರದಿಂದ ಮೇಲಿನ ಪೀಳಿಗೆಗಳನ್ನು ಗುರುತಿಸಲು ಸಾಧ್ಯವಾಯಿತು. ಯಾವುದೇ ಒಂದು ಕುಟುಂಬದ ಪ್ರತಿ ಮಗುವಿನ ಸಾಮ್ಯತೆ ಮತ್ತು ಭಿನ್ನತೆಗಳೇನೇ ಇದ್ದರೂ ಒಂದು ಕುಟುಂಬದ ಸದಸ್ಯರಾಗಿರುವಂತೆ; ಮಾನವ ಪೀಳಿಗೆಗಳೂ ಒಂದು ಕುಟುಂಬಕ್ಕೆ ಸೇರಿರಲೇಬೇಕು. ಅದು ಆಫ್ರಿಕಾದ ಜಗನ್ಮಾತೆಯ (Eve) ವಂಶ ಎನ್ನುವ ವಾದವಿದೆ.

ಮೋಟುಬಾಲದ ಅಥವಾ ಬಾಲವಿಲ್ಲದ ದೊಡ್ಡ ಗಾತ್ರದ ಕೋತಿಗಳ ವರ್ಗೀಕರಣದ ಅಧ್ಯಯನ ಮಾಡಿದ ಡಾರ್ವಿನ್ (೧೮೭೧) ತನ್ನ ‘‘ಮಾನವ ಪೀಳಿಗೆ’’ (Descent of man) ಎನ್ನುವ ಕೃತಿಯಲ್ಲಿ ‘ಮಾನವ ಸಂತತಿಯ ಹುಟ್ಟು ಆಫ್ರಿಕಾದಲ್ಲಿ ಕಾಣಬಹುದು’ ಎಂದು ಅಭಿಪ್ರಾಯಪಟ್ಟಿದ್ದಾನೆ. ಆಫ್ರಿಕಾದಲ್ಲಿ ಈ ಹಿಂದೆ ಜೀವಿಸಿದ್ದು ಅಳಿದುಹೋದ ಬಾಲವಿಲ್ಲದ ದೊಡ್ಡ ಕೋತಿಗಳು (Apes) ಈಗಿನ ಗೊರಿಲ್ಲಾ ಮತ್ತು ಚಿಂಪಾಂಜಿಗಳಿಗೆ ಹತ್ತಿರದ ಸಂಬಂಧವಿದ್ದುದಕ್ಕೆ ಸಾಧ್ಯತೆ ಇದೆ; ಹಾಗೂ ಈಗ ಎರಡೂ ಸಂತತಿಗಳು ಮಾನವ ಸಂತತಿಗೆ ಹತ್ತಿರವಾಗಿವೆ. ಆದುದರಿಂದ, ಬಹುಷಃ ನಮ್ಮ ಪೂರ್ವಿಕ ಆದಿಮಾನವರು ಬೇರೆಲ್ಲೂ ಅಲ್ಲದೆ ಆಫ್ರಿಕಾ ಖಂಡದಲ್ಲಿ ಮಾತ್ರ ಬದುಕಿರಲು ಸಾಧ್ಯ.

ಭೂಮಿಯ ಮೇಲೆ ಮನುಷ್ಯ ಹುಟ್ಟಿದುದರ ಬಗ್ಗೆ ಪುರೋಹಿತಶಾಹಿ ಅದುವರೆವಿಗೂ ಕಟ್ಟಿದ್ದ ಕಟ್ಟುಕತೆಗಳೊಂದಿಗೆ ಡಾರ್ವಿನ್ನನ ಸಿದ್ಧಾಂತಗಳು ಸಂಘರ್ಷ ಏರ್ಪಡಿಸಿ ಕೊಂಡಿದ್ದರಿಂದ, ‘ಮಾನವ ಸಂತತಿಗೆ ಮಸಿಹಚ್ಚಲಾಗಿದೆ’ ಎನ್ನುವ ಪುರೋಹಿತ ಶಾಹಿಯ ಆಪಾದನೆಗೆ ಗುರಿಯಾಗಬೇಕಾಯಿತು. ಮಾನವರ ಉಗಮ ಸ್ಥಾನವು ಆಫ್ರಿಕಾ ಎನ್ನುವ ಆತನ ವಿಚಾರವನ್ನು ವಿದ್ವಾಂಸರು ವಿರೋಧಿಸಿದ್ದೇ ಅಲ್ಲದೆ, ಅದು ಏಷ್ಯಾ ಖಂಡ ಎನ್ನುವ ವಾದವನ್ನೂ ಮುಂದಿಟ್ಟರು. ಮಾನವ ಶಾಸ್ತ್ರಜ್ಞರಾದ ಮೇರಿ ಲೀಕೇ ಮತ್ತು ಆಕೆಯ ಪತಿ ಎಲ್.ಎಸ್.ಬಿ.ಲೀಕೇ, ರೇಮಂಡ್ ಎ.ಡಾರ್ಟ್, ರಾಬರ್ಟ್ ಬ್ರೂಮ್ ಮತ್ತು ಡೊನಾಲ್ಡ್ ಜಾನ್‌ಸನ್ ಮುಂತಾದವರ ಅನ್ವೇಷಣೆಗಳು ಮತ್ತು ತನಿಖೆಗಳಿಂದ ೧೯೨೪ರಲ್ಲಿ ಏಷಿಯಾ ವಾದವನ್ನು ಕೊನೆಯದಾಗಿ ಕೈಬಿಡಲಾಯಿತು.

ಪ್ರಪಂಚದಾದ್ಯಂತ ಜೀವಿಸಿರುವ ಮಾನವರ ವಂಶವಾಹಿನಿ ಸಂಬಂಧಗಳು ಹಾಗೂ ಮಾತೃ ಪರಂಪರೆಯಿಂದ ಬಂದ ಸಂತತಿಗಳ ಅಧ್ಯಯನಕ್ಕೆ ತಾಯಿಯ ಮೂಲಕ ಅನುವಂಶೀಯವಾಗಬಹುದಾದ ಮೈಟೋಕಾಂಡ್ರಿಯಾದ (mitocondrial) ಡಿಎನ್‌ಎ ಉಪಕರಣವಾಗಿದೆ. ವಿನ್ಸೆಂಟ್ ಸ್ಯಾರಿಚ್ ಎನ್ನುವ ವಿಜ್ಞಾನಿ ನಡೆಸಿದ ಸೂಕ್ಷ್ಮಾಣು ಜೀವಿ ಜೀವಶಾಸ್ತ್ರ (Microbiology) ಅಧ್ಯಯನಗಳು ‘‘ಬಾಲವಿಲ್ಲದ ಕೋತಿಗಳು ಮತ್ತು ಮಾನವರು ಸುಮಾರು ಐದು ಮತ್ತು ಏಳು ದಶಲಕ್ಷ ವರ್ಷಗಳ ಮಧ್ಯೆ ಪರಸ್ಪರ ಬೇರ್ಪಟ್ಟಿವೆ’’ ಎನ್ನುವ ತೀರ್ಮಾನಕ್ಕೆ ಬಂದಿವೆ. ‘‘ಎಲ್ಲ ಆಧುನಿಕ ಮನುಷ್ಯಜಾತಿ ಸುಮಾರು ಎರಡು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಉದಯಿಸಿ ನಂತರ ಯೂರೋಪು ಮತ್ತು ಏಷಿಯಾಗಳಿಗೆ ವಲಸೆ ಹೋಗಿದೆ’’ ಎನ್ನುವ ಅಭಿಪ್ರಾಯ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಅಲೆನ್ ವಿಲ್ಸನ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಲಿಂಡಾ ವಿಜಿಲೆಂಟ್ ಅವರ ಅಧ್ಯಯನಗಳನ್ನು ಆಧರಿಸಿದೆ. ಮಾನವ ಸಂತತಿಯ (Homo Sapiens) ವಂಶಾವಳಿಯ ಮರ ೧೫ ರೆಂಬೆಗಳನ್ನು ಹೊಂದಿರುವುದನ್ನು ಲಿಂಡಾ ವಿಜಿಲೆಂಟ್ ಕಂಡುಹಿಡಿದ. ಇದರಲ್ಲಿ ಆಳದ ೧೪ ರೆಂಬೆಗಳು ಆಫ್ರಿಕಾ ಮೂಲವನ್ನು ಸಮರ್ಥಿಸಿದರೆ, ಕೊನೆಯ ರೆಂಬೆ ಆಫ್ರಿಕಾ ಮತ್ತು ಆಫ್ರಿಕೇತರ ಮಾನವ ಸಂತತಿಗಳನ್ನು ಸಮರ್ಥಿಸುತ್ತದೆ. ಈ ಎಲ್ಲ ಅಧ್ಯಯನಗಳಿಂದ ‘ಮಾನವ ಸಂತತಿಯ ಉಗಮ ಆಫ್ರಿಕಾದಲ್ಲಿ ಆಗಿದೆ’ ಎನ್ನುವುದು ತಿಳಿದುಬರುತ್ತದೆ.

ಆಫ್ರಿಕಾದ ವಾದವನ್ನು ಕೆಲವು ಪಳಿಯುಳಿಕೆ ಶಾಸ್ತ್ರಜ್ಞರು ವಿರೋಧಿಸಿ; ‘‘ಒಂದೇ ಒಂದು ಜನಾಂಗದ ಚಟುವಟಿಕೆ ಮಾತ್ರ ಆಫ್ರಿಕಾದಿಂದ ಹೊರಗಿತ್ತು, ಅದು ಪ್ರಾಚೀನ ನೆಟ್ಟಗೆ ನಿಂತ ಮಾನವ (Homo Erectus) ಒಂದು ದಶಲಕ್ಷ ವರ್ಷಗಳ ಹಿಂದೆ ಯೂರೋಪ್ ಮತ್ತು ಏಷಿಯಾಗಳಲ್ಲಿ ಹರಡಿತ್ತು. ಅದಾದನಂತರ ಆಧುನಿಕ ಮಾನವರು ಬೇರೆ ಬೇರೆಯಾಗಿ ಬೇರೆ ಬೇರೆ ಸ್ಥಳಗಳಲ್ಲಿ ವಿಕಾಸವಾದರು’’ ಎಂದು ವಾದಿಸುತ್ತಿದ್ದರು. ಪಳಿಯುಳಿಕೆ ಶಾಸ್ತ್ರದ ಗ್ರಂಥಗಳ ಪ್ರಕಾರ; ಮಾನವ ಸಂತತಿ ಭಿನ್ನ ಭೀನ್ನ ಪ್ರದೇಶಗಳಲ್ಲಿ ಸುಮಾರು ೪ ಲಕ್ಷ ವರ್ಷಗಳ ಹಿಂದೆ ಬೆಳೆದಿದೆ.

ಮಾನವನ ಹುಟ್ಟಿನ ಅಧ್ಯಯನಕ್ಕೆ ಡಿಎನ್‌ಎ ಸಂಶೋಧನೆ ಹೊಸ ವೈಜ್ಞಾನಿಕ ಸಮರ್ಥನೆ ನೀಡುತ್ತಿರುವುದರಿಂದ ಪಳೆಯುಳಿಕೆ ಅಧ್ಯಯನವನ್ನು ಪುನರ್ ಮೌಲೀಕರಿಸಬೇಕಿದೆ. ಪೀಳಿಗೆಯ ಕಲ್ಪನೆಗಳಿಗೆ ಜೀವಿಶಾಸ್ತ್ರದ ಆಧಾರವಿಲ್ಲದಿರುವುದು ತಳಿ ಅಧ್ಯಯನಗಳಿಂದ ಸ್ಪಷ್ಟವಾಗುತ್ತದೆ. ಆದುದರಿಂದ ಮನುಷ್ಯ ಜೀವಿಗಳನ್ನು ಚರ್ಮದ ಬಣ್ಣ, ಕೂದಲು, ಮುಖದ ಲಕ್ಷಣಗಳು ಮುಂತಾದವುಗಳ ಆಧಾರದ ಮೇಲೆ ನಿರ್ಧರಿಸುವುದು ಅರ್ಥವಿಲ್ಲದ್ದು. ಇವು ಏನಿದ್ದರೂ ಮೇಲ್ಮೈ ಭಿನ್ನತೆಗಳು. ಮೂಲ ಜೈವಿಕ ವ್ಯತ್ಯಾಸಗಳೊಂದಿಗೆ ಯಾವ ಸಂಬಂಧವೂ ಇಲ್ಲ. ಮಾನವ ಶಾಸ್ತ್ರಜ್ಞ ಹೆಚ್.ಕಟ್ಜ್ ‘‘ವೈಜ್ಞಾನಿಕ ಭಿನ್ನತೆಗಳಿಗೆ ಪೀಳಿಗೆ ಬಹಳ ಕಾಲ ಆಧಾರವಾಗಲಾರದು’’ ಎಂದು ಅಭಿಪ್ರಾಯಪಡುತ್ತಾನೆ. ಈ ಎಲ್ಲ ವಾದಗಳಿಂದ ಪೀಳಿಗೆಯ ಮೇಲುತನವೆನ್ನುವುದಕ್ಕೆ ಅರ್ಥವಿಲ್ಲ ಎಂದು ತಿಳಿದುಬರುತ್ತದೆ.

ದೇವರು ಅಥವಾ ದೇವತೆಗಳು ಉಂಟಾದುದರ ಬಗ್ಗೆ ಅಥವಾ ಶಕ್ತಿಗಳು ಮತ್ತು ನಿಗೂಢತೆಗಳ ಬಗ್ಗೆ, ಧರ್ಮ ಅಥವಾ ಅಲೌಕಿಕ ಶಕ್ತಿಗಳ ಬಗ್ಗೆ ನಮ್ಮ ಪೂರ್ವಿಕರು ಯಾವಾಗ ಮತ್ತು ಹೇಗೆ ಯೋಚಿಸಲು ಪ್ರಾರಂಭಿಸಿದರು ಎನ್ನುವುದು ಯಾರಿಗೂ ತಿಳಿದಿಲ್ಲ. ನಮಗೆ ತಿಳಿದಿರುವಂತೆ ಸುಮಾರು ೭೦ ಸಾವಿರ ವರ್ಷಗಳ ಹಿಂದಷ್ಟೇ ಮನುಷ್ಯರು ತಮ್ಮ ಹೆಣಗಳನ್ನು ಹೂಳಲು ಪ್ರಾರಂಭಿಸಿದರು. ಇಂತಹ ರೂಢಿಗಳು ಮನುಷ್ಯರು ಮತ್ತು ಪ್ರಾಣಿಗಳ ಮಧ್ಯದ ಅಂತರ ಹೆಚ್ಚಲು ಕಾರಣವಾಯಿತು. ಅಂತರದ ಈ ಹೆಚ್ಚಳಕ್ಕೆ ಪ್ರಮುಖವಾಗಿ ಕಾರಣವಾದದ್ದು; ಮನುಷ್ಯರ ಬೌದ್ದಿಕ, ದೈಹಿಕ ಸಾಮರ್ಥ್ಯಗಳಲ್ಲಿ ಮತ್ತು ಕೌಶಲಗಳಲ್ಲಿ ಹೆಚ್ಚುಗಾರಿಕೆ ಆದದ್ದು. ಜೊತೆಗೆ ಮನುಷ್ಯರು ಸಂವಹನಕ್ಕಾಗಿ ಭಾಷಾ ಸಾಮರ್ಥ್ಯ, ಬೆಂಕಿಯ ಉತ್ಪಾದನೆ ಮತ್ತು ಅದರ ನಿಯಂತ್ರಣ, ವೈವಿಧ್ಯಮಯ ಶಸ್ತ್ರಗಳು ಮತ್ತು ಉಪಕರಗಳ ಉತ್ಪನ್ನ ಮುಂತಾದವುಗಳ ಸಾಮರ್ಥ್ಯವನ್ನು ಗಳಿಸಿದ್ದು ಪ್ರಮುಖ ಕಾರಣ. ಪ್ರಾಣಿ ಸಂತತಿಗೆ ಇಲ್ಲದ ಮತ್ತೊಂದು ಪ್ರಕೃತಿಯ ಕೊಡುಗೆ ಮನುಷ್ಯನಿಗೆ ಇದೆ ಎಂದರೆ ಭಾವನೆಗಳ ಅಭಿವ್ಯಕ್ತಿ. ಈ ಕೊಡುಗೆ ಮನುಷ್ಯನ ನಂಬಿಕೆಗಳು, ಆಚರಣೆಗಳು ಹಾಗೂ ಮರಣಾನಂತರದ ಬದುಕಿನ ಬಗ್ಗೆ ಯೋಚಿಸಲು ಕಾರಣವಾಯಿತು.

ಗುಹಾ ಚಿತ್ರಗಳು ಮತ್ತು ಶಿಲ್ಪಕಲೆ

ಮಾನವ ವಿಕಾಸದೊಂದಿಗೆ ತಳಕು ಹಾಕಿಕೊಂಡು ಬಂದಿರುವ ಅನೇಕ ಅಂಶಗಳಲ್ಲಿ ‘ಕಲೆ‘ಯೂ ಒಂದು. ಅದು ಆಂಗಿಕ ಚಲನೆಗಳ ಅಭಿನಯ ಕಲೆ ಇರಬಹುದು. ಚಿತ್ರಗಳ ರಚನಾ ಕಲೆ ಇರಬಹುದು. ಶಿಲ್ಪಕಲೆ ಇರಬಹುದು, ಸಂಗೀತ ಕಲೆ ಇರಬಹುದು, ಕಸಬುಗಳ ಕಲೆ ಇರಬಹುದು. ಹೀಗೆ ಒಂದಲ್ಲಾ ಒಂದು ಕಲೆ ಮಾನವ ಬದುಕಿನ ಅವಿಭಾಜ್ಯ ಅಂಗವಾಗಿ ಬಂದಿರುವುದು ಮುಖ್ಯವಾಗುತ್ತದೆ.

ಆದಿಮ ಮಾನವನಲ್ಲಿ ಮಾತು ಪೂರ್ಣವಾಗಿ ಸ್ಪಷ್ಟತೆ ಮತ್ತು ಅರ್ಥ ಪಡೆಯದೆ; ಅಂದರೆ ಪೂರ್ಣವಾಗಿ ಮಾತು ಆಗದೆ ಅರ್ಧಂಬರ್ಧ ಶಬ್ದ ಆಗಿದ್ದಾಗ, ಅವನ ಅಗತ್ಯಗಳನ್ನು ಪೂರೈಸಿಕೊಳ್ಳಲು ಆಂಗಿಕ ಚಲನೆಯ ಅಭಿನಯ ಕಲೆಗೆ ಮೊರೆ ಹೋಗಿದ್ದಾನೆ. ತನ್ನ ಹಸಿವು, ಬಾಯಾರಿಕೆ, ಕಾಮ ಮುಂತಾದ ಭಾವನೆಗಳ ಅಗತ್ಯತೆಯನ್ನು ಆ ಕಲೆಯ ಮೂಲಕವೇ ವ್ಯಕ್ತಪಡಿಸಿರುತ್ತಾನೆ. ತನ್ನ ಅನುಭವ ಮತ್ತು ಉದ್ದೇಶಗಳನ್ನು ಆತ ದಾಖಲಿಸುವಾಗ ಮಾತ್ರ ಚಿತ್ರ ಮತ್ತು ಶಿಲ್ಪಕಲೆಗಳಿಗೆ ಮೊರೆ ಹೋಗಿರುವುದನ್ನು ಸ್ಪಷ್ಟವಾಗಿ ಊಹಿಸಬಹುದು.

ಆದಿಮ ಮಾನವ ತನ್ನ ಆಹಾರಕ್ಕಾಗಿ ಬೇಟೆಯನ್ನಷ್ಟೇ ಅವಲಂಬಿಸಿದ್ದಾಗ ಅವನು ವಾಸಿಸುತ್ತಿದ್ದ ‘ಗುಹೆ’ಯ ಸುತ್ತಲ ಸೀಮಿತ ಪ್ರದೇಶ ಮಾತ್ರ ಅವನ ಜೀವನ ಕ್ಷೇತ್ರವಾಗಿತ್ತು. ಚೂಪಾದ ಮತ್ತು ಹರಿತವಾದ ಬೆಣಚು ಕಲ್ಲುಗಳು, ಮರದ ಬಡಿಗೆಗಳು, ಕೋಲುಗಳು ಬೇಟೆಯ ಪ್ರಾರಂಭಿಕ ಆಯುಧಗಳಾಗಿದ್ದವು. ಬೇಟೆಯಲ್ಲಿ ಕೊಂದ ಪ್ರಾಣಿಯ ಹಾಗೂ ಕೊಲ್ಲಲು ಬಳಸಿದ ಆಯುಧಗಳ ಚಿತ್ರಗಳನ್ನು ಗುಹೆಯೆ ಬಂಡೆಗಳ ಮೇಲೆ ಬಿಡಿಸಿ; ತನ್ನ ಬೇಟೆಯ ಅನುಭವಗಳನ್ನು ಸಂಗಾತಿಗಳಿಗೆ ಮನವರಿಕೆ ಮಾಡುತ್ತಿದ್ದ. ಕಾಲಾನಂತರ ಪ್ರಕೃತಿಯಲ್ಲಿನ ವಿವಿಧ ಬಣ್ಣಗಳಿಂದ ಆಕರ್ಷಿತನಾಗಿ; ಸಸ್ಯಗಳಿಂದ, ಕಲ್ಲುಗಳಿಂದ, ಮಣ್ಣಿನಿಂದ ಬಣ್ಣಗಳನ್ನು ತೆಗೆದು ಬಂಡೆಗಳ ಮೇಲೆ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದ. ಹೀಗೆ ವರ್ಣಕಲೆ ಅಥವಾ ವರ್ಣಚಿತ್ರಕಲೆ ವಿಕಾಸವಾಯಿತು. ಆ ಚಿತ್ರಗಳು ಪ್ರಾರಂಭದಲ್ಲಿ ಏಕ ವರ್ಣದಿಂದಲೂ ನಂತರ ಬಹುವರ್ಣದಿಂದಲೂ ರಚಿತಗೊಂಡು ಆಕರ್ಷಣೀಯವಾಗುತ್ತಾ ಬಂದಿವೆ.

ಆದಿಮ ಮಾನವ ತಾನು ನಡೆಯುತ್ತಿದ್ದ ಭೂಮಿಯ ಮೇಲಿನ ಮಣ್ಣು ಅಥವಾ ಮರಳಿನಲ್ಲಿ ಮೂಡುತ್ತಿದ್ದ ಹೆಜ್ಜೆಯ ಗುರುತುಗಳು ಮುಂತಾದವು ಕುತೂಹಲ ಹೆಚ್ಚಿಸಿದ್ದರಿಂದ; ಪ್ರಾರಂಭದಲ್ಲಿ ಮರಳು ಅಥವಾ ಮಣ್ಣಿನಲ್ಲಿ ಆಕೃತಿಗಳನ್ನು ರಚಿಸುವುದರಿಂದ ಪ್ರಾರಂಭವಾಗಿ ತನ್ನ ಅನುಭವಗಳ ಮತ್ತು ಉದ್ದೇಶಗಳ ಅಭಿವ್ಯಕ್ತಿಗಾಗಿ ಕಲ್ಲಿನ ಶಿಲ್ಪಗಳವರೆಗೆ ವಿಕಾಸವಾಗಿರುವುದನ್ನು ಕಾಣಬಹುದು.

ಆಸ್ಟ್ರೇಲಿಯಾದ ಆದಿವಾಸಿಗಳು ಕಾಂಗರೂ ಬೇಟೆಗೆ ಹೊರಡುವ ಮೊದಲು ಅದರ ಚಿತ್ರ ರಚಿಸಿ ಬೇಟೆಯಾಡಿದಂತೆ ಅದರ ಮೇಲೆ ಆಯುಧಗಳನ್ನು ಪ್ರಯೋಗಿಸಿ ನಂತರ ಬೇಟೆಗೆ ಹೊರಡುತ್ತಿದ್ದರು ಎಂದು ಎಫ್.ಕೊರೋಡ್ ಕಿನ್ ತಿಳಿಸುತ್ತಾನೆ. ಬೇಟೆಗೆ ಹೊರಡುವ ಮುಂಚೆಯೇ ತಾನು ಬೇಟೆಯಾಡಲಿರುವ ಪ್ರಾಣಿಯ ಚಿತ್ರ ಹಾಗೂ ಬೇಟೆಯಾಡುವವರನ್ನೂ, ಹಲವಾರು ಬಾಣಗಳು ಪ್ರಾಣಿಗೆ ತಗುಲಿದಂತೆಯೂ ಆದಿಮ ಮಾನವ ಚಿತ್ರಿಸುತ್ತಿದ್ದನು. ಇದರಿಂದ ತನಗೆ ಪ್ರಾಣಿಯ ಬೇಟೆ ಸಿಗುತ್ತಿತ್ತೆಂದು ಆತ ಭಾವಿಸುತ್ತಿದ್ದನು ಎನ್ನುವ ಅಭಿಪ್ರಾಯವಿದೆ.

ಸುಮಾರು ೨೫ ಸಾವಿರ ವರ್ಷಗಳ ಹಿಂದೆ, ಯುರೋಪಿನ ಉತ್ತರದ ಬಹುಭಾಗ ಐಸ್‌ನಿಂದ ಆವರಿಸಿದ್ದಾಗ, ಸ್ಪೇನ್ ಮತ್ತು ಫ್ರಾನ್ಸ್‌ನ ಆಲ್ಟಮಿರಾ ಮತ್ತು ಇತರೆಡೆಗಳಲ್ಲಿನ ವಾಸದ ಗುಹೆಗಳಲ್ಲಿ ಮನುಷ್ಯರ ಮತ್ತು ಪ್ರಾಣಿಗಳ ಫಳಫಳ ಹೊಳೆಯುವ ಸೀಸದ ವಿಧವಿಧದ ಹಳದಿ ಬಣ್ಣದ ಚಿತ್ರಗಳನ್ನು ಪ್ರತಿಭಾವಂತ ಕಲಾವಿದರು ವರ್ಣಿಸಿರುವುದು ಕಂಡುಬಂದಿದೆ. ಅದೂ ಕಠಿಣ ಮತ್ತು ಸುಲಭವಾಗಿ ತಲುಪಲಸಾಧ್ಯವಾದ ಮೂಲೆಯಲ್ಲೆಲ್ಲೋ ಇಂತಹ ವರ್ಣಚಿತ್ರಗಳು ಕಂಡುಬರಲು ಮಾನವ ಶಾಸ್ತ್ರಜ್ಞರ ಅಭಿಪ್ರಾಯ ಏನೆಂದರೆ, ಯಶಸ್ವೀ ಬೇಟೆಯ ಅವಕಾಶಗಳು ಹೆಚ್ಚಲಿ ಎನ್ನುವ ಉದ್ದೇಶದ ಆಚಾರ ಅದರ ಜೊತೆಗಿರುವುದು. ಯಾವ ಸಂಪ್ರದಾಯಗಳನ್ನು ಸೇರಿಸಿಕೊಂಡಿದ್ದರು ಅಥವಾ ಅವನ್ನು ಆಚರಿಸಿದವರ ವಿಚಾರ ಏನಿತ್ತು ಎನ್ನುವುದರ ಬಗ್ಗೆ ಲಿಖಿತ ದಾಖಲಾತಿಗಳಾವುವೂ ಇಲ್ಲದ್ದರ ಬಗ್ಗೆ ಅಥವಾ ಇದ್ದದ್ದರ ಬಗ್ಗೆ ಏನೂ ತಿಳಿಯುತ್ತಿಲ್ಲ.

ತಿವಿತದಿಂದ ಗಾಯಗೊಂಡಿರುವ ಕಾಡುಕೋಣದಂತಹ ಚಿತ್ರಗಳು ಆಲ್ಟಮಿರಾ ಮತ್ತು ಲೆಸ್‌ಕಾಕ್ಸ್‌ನ ಗುಹೆಗಳಲ್ಲಿ ಕಂಡುಬಂದಿವೆ. ಈ ಚಿತ್ರಗಳೇನು ಕಲಾವಿದನವೆ? ಬೇಟೆಯವೇಳೆ ಏನು ಸಂಭವಿಸಿತು ಎನ್ನುವುದನ್ನು ಸೂಚಿಸುವ ಚಿತ್ರಗಳೆ? ಬೇಟೆಯ ವೇಳೆ ನಡೆದ ಕಾದಾಟದ ಚಿತ್ರಣವೆ? ಅಥವಾ ಬೇಟೆಯ ಪೂರ್ವದಲ್ಲಿ ಮಾಡುವ ಧಾರ್ಮಿಕ ಆಚರಣೆಗೆ ಸಂಬಂಧಿಸಿದವೆ? ಎನ್ನುವ ಪ್ರಶ್ನೆಗಳ ಸರಮಾಲೆಯೇ ಎದುರಾಗುತ್ತದೆ.

ಫ್ರಾನ್ಸ್ ನ ಪೈರೆನೀಸ್ ನಲ್ಲಿನ ಅರಿಗೇ ಎನ್ನುವಲ್ಲಿನ ಗುಹೆಯಲ್ಲಿರುವ ಚಿತ್ರಗಳ ಒಂದು ಚಿತ್ರದಲ್ಲಿ ಗಡ್ಡದಾರಿ ಮನುಷ್ಯನೊಬ್ಬ ಜಿಂಕೆಯ ಕವಲು ಕೊಂಬಿನ ಮುಖವಾಡ ಹಾಗೂ ಒತ್ತಾದ ಮತ್ತು ಉದ್ದ ಬಾಲದ ಮತ್ತೊಂದು ಪ್ರಾಣಿಯ ಚರ್ಮ ಹೊದ್ದಿರು ವುದಿದೆ. ಬಹುಶಃ ಆ ಚರ್ಮ ತೋಳಕ್ಕೆ ಸಂಬಂಧಿಸಿದ್ದು ಇರಬಹುದು. ಆ ಚಿತ್ರ ‘ಮಾಟಗಾರ’ ಎಂದು ಜನಪ್ರಿಯಗೊಂಡಿದೆ. ಮಂತ್ರ ಮತ್ತು ಮಾಟದ ಕೌಶಲ್ಯಗಳನ್ನು ಹೊಂದಿದ್ದು; ತನ್ನ ನರ್ತನ ಮತ್ತು ಮಾಟದಿಂದ ಬೇಟೆ ಸಿಗುವಂತೆ ಮಾಡುತ್ತಿದ್ದ ವ್ಯಕ್ತಿಯನ್ನು ಕುರಿತ ಚಿತ್ರ ಅದಾಗಿರಬಹುದು.

ಗುಹಾ ಚಿತ್ರಗಳಲ್ಲಿ ಶಿರೋಭೂಷಣ ಧರಿಸಿ ಮೈಮೇಲೆ ಪಟ್ಟೆಯಾಗಿ ಆಕಾರಗಳನ್ನು ಚಿತ್ರಿಸಿದಂತಿರುವ ವ್ಯಕ್ತಿಗಳ ಚಿತ್ರಣವನ್ನು ಕುಲದ ಮುಖಂಡ ಅಥವಾ ಪುರೋಹಿತನ ಚಿತ್ರವೆಂದು ಭಾವಿಸಲಾಗಿದೆ. ಆತನ ಹಾಗೂ ಗುಂಪು ಕುಣಿತದ ಚಿತ್ರಗಳನ್ನು ಯಾವುದೋ ಧಾರ್ಮಿಕ ವಿಧಿ ಕ್ರಿಯೆಯ ಚಿತ್ರಣ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ನಿಶ್ಚಿತವಾದ ಒಂದು ಧರ್ಮ ಅದರ ದೇವರು ಹಾಗೂ ಧಾರ್ಮಿಕ ತತ್ವಗಳು ಇನ್ನೂ ರೂಪುಗೊಳ್ಳುತ್ತಿದ್ದ ಸ್ಥಿತಿಯಲ್ಲಿ ಬುಡಕಟ್ಟಿನ ನಂಬಿಕೆಗೆ ಅನುಗುಣವಾಗಿ ನಡೆಸುತ್ತಿದ್ದ ಆಚರಣೆಯನ್ನು ಈ ಗುಹಾಲಯಗಳಲ್ಲಿ ಚಿತ್ರಿಸಿದ್ದಿರಬಹುದು. ಅಂತೆಯೇ ಕೆಲವು ಗುಹೆ ಹಾಗೂ ಶಿಲಾಶ್ರಯಗಳಲ್ಲಿ ನಿಶ್ಚಿತವಾದ ಒಂದು ಸ್ಥಳದಲ್ಲಿ ಮಾತ್ರವೇ ಮೇಲಿಂದ ಮೇಲೆ ಚಿತ್ರ ರಚಿಸಿರುವುದೂ ಬೆಳಕಿಗೆ ಬಂದಿದೆ. ಆ ಗುಹೆ ಅಥವಾ ಶಿಲಾಶ್ರಯದಲ್ಲಿ ವಾಸಿಸುತ್ತಿದ್ದವರಿಗೆ ಆ ಒಂದು ಭಾಗ ಮಾತ್ರ ‘ಪವಿತ್ರ’ ಎಂದು ಅನ್ನಿಸಿದ್ದರಿಂದ ಈ ರೀತಿ ಆಗಲು ಕಾರಣವಿರಬಹುದು ಎನ್ನುವ ಅಭಿಪ್ರಾಯವಿದೆ.

ಹಾಂಟೇಗರೊನ್ನೆಯ ಮಾಂಟೆಸ್ಪಾನ್ ಗುಹೆಯಲ್ಲಿ ಕಂಡುಬಂದಿರುವ ಜೇಡಿ ಮಣ್ಣಿನಲ್ಲಿ ಮಾಡಿದ ಕುಳಿತ ಕರಡಿ ಆಕೃತಿಯ ಎರಡೂ ಪಾದಗಳ ಮಧ್ಯೆ ನಿಜವಾದ ಕರಡಿ ತಲೆಬುರುಡೆ ಇರುವುದೂ; ಆ ಆಕೃತಿಯ ಹಿಂಭಾಗದಲ್ಲಿ ವಾಸ್ತವವಾಗಿ ತಿವಿದ ಗಾಯಗಳಿರುವುದು ಕಂಡುಬಂದಿದೆ. ಪ್ರಾಣಿಯ ಮೇಲೆ ನಡೆಸಿದ ಕಾದಾಟದ ಸಂಕೇತವಾಗಿ ಜೇಡಿಮಣ್ಣಿನ ಕರಡಿ ಆಕೃತಿಯ ಮೇಲೆ ನಿಜವಾದ ಕರಡಿ ಚರ್ಮವನ್ನು ಹೊದಿಸಿದ್ದರಿಂದ ಹಾಗೆ ಇರಬಹುದೆಂದು ಇ.ಓ.ಜೇಮ್ಸ್ ಊಹಿಸುತ್ತಾನೆ. ತನ್ನ ಆಹಾರ ಪಡೆಯಲು ಅಣಕು ಆಚರಣೆಗಳಿಂದ ಅಲೌಕಿಕ ಶಕ್ತಿಗಳ ಮೇಲೆ ಹಕ್ಕು ಸಾಧಿಸಲು ಹಳೇ ಶಿಲಾಯುಗದ ಆದಿಮಾನವ ತಾನು ವಾಸಿಸಿದ ಸ್ಥಳಗಳನ್ನು ಪವಿತ್ರಗೊಳಿಸಿರುವುದು ನಿಜ ಎಂದೂ ಜೇಮ್ಸ್ ತೀರ್ಮಾನಿಸುತ್ತಾನೆ.

ಪೈರೆನೀಸ್ ನಲ್ಲಿನ ಮತ್ತೊಂದು ಗುಹೆಯಲ್ಲಿ ಒಂದು ವೃತ್ತಾಕಾರದ ಕೋಣೆಯಲ್ಲಿ ಜೇಡಿಮಣ್ಣಿನಿಂದ ಮಾಡಿದ ಎರಡು ಕಾಡುಕೋಣದಂತ ಆಕೃತಿಯ ವಿಗ್ರಹಗಳು ಮಧ್ಯದಲ್ಲಿರುವ ಕಲ್ಲಿಗೆ ಗುದ್ದುತ್ತಿರುವಂತೆ ಇರುವುದು; ಹಾಗೂ ಆ ವಿಗ್ರಹಗಳ ಸುತ್ತೂ ಮಣ್ಣಿನ ನೆಲದಲ್ಲಿ ಸುಮಾರು ೫೦ ಚಿಕ್ಕ ಚಿಕ್ಕ ಹಿಮ್ಮಡಿಗಳ ಮುದ್ರೆಗಳು ಇರುವುದು ಕಂಡುಬಂದಿದೆ. ಆ ಪಾದ ಮುದ್ರೆಗೆಳು, ಚಿಕ್ಕ ಮಕ್ಕಳು ಪ್ರಾಢಾವಸ್ಥೆಗೆ ಬಂದು ಬೇಟೆಗಾರ ತನಕ್ಕೆ ಕಾಲಿಟ್ಟಾಗ ಮಾಡುತ್ತಿದ್ದ ಸಂಪ್ರದಾಯದ ನೃತ್ಯದಿಂದ ಮೂಡಿದ ಹೆಜ್ಜೆಗಳಿರಬಹುದು; ಅಥವಾ ಪ್ರಾಯಕ್ಕೆ ಬಂದ ಹೆಂಗಸರ ನೃತ್ಯದಿಂದ ಉಂಟಾದ ಮುದ್ರೆಗಳಿರಬಹುದು ನೃತ್ಯ ಮಾಡಿರುವ ಊಹೆ ಸರಿ ಇದ್ದರೆ ಅದಕ್ಕೆ ಸರಿಹೊಂದುವ ಸಂಗೀತ ಉಪಕರಣಗಳು ಇದ್ದಿರಲೇಬೇಕು. ಪಕ್ಷಿಗಳ ಹಾಗೂ ಪ್ರಾಣಿಗಳ ಟೊಳ್ಳು ಮೂಳೆಗಳಿಂದ ಪಿಳ್ಳಂಗೋವಿ, ಪೀಪಿ ಮುಂತಾದವನ್ನು ತಯಾರಿಸುವುದು ಕಂಡುಹಿಡಿದ ನಂತರ; ಭರ್ ಭರ್ ಎನ್ನುವ ಶಬ್ದ ಮಾಡಲು ಪ್ರಾರಂಭಿಸಿ ನಂತರ ತಾಳಬದ್ಧ ಧ್ವನಿಗಳನ್ನು ಗುಹೆಗಳ ಒಳಗಿನ ಶಾಸ್ತ್ರಗಳಲ್ಲಿ ಬಳಸುತ್ತಿದ್ದರು.

ಪ್ರಾರಂಭಿಕ ಕಾಲದ ಸಾವಿರಾರು ಮನುಷ್ಯಾಕೃತಿ ಶಿಲ್ಪಗಳಲ್ಲಿ ನೂರಾರು ಸ್ತ್ರೀನ ಆಕೃತಿಗಳೇ ಆಗಿವೆ. ಅವು ಕೆಲವೇ ಸೆಂಟಿಮೀಟರ್ ಗಳಷ್ಟು ಎತ್ತರವಿದ್ದು, ಸುಟ್ಟ ಜೇಡಿ ಮಣ್ಣಿನವು ಅಥವಾ ದಂತ ಅಥವಾ ಮೂಳೆಯ ಮೇಲೆ ಕೊರೆದಂತವು ಆಗಿವೆ. ಸಾಮಾನ್ಯವಾಗಿ ಭಾವಚಿತ್ರಗಳನ್ನು ಬಿಡಿಸಿದ ಬಗ್ಗೆ ಪ್ರಯತ್ನಗಳು ಇಲ್ಲ. ಆಗಾಗ ಭಾವವಿಲ್ಲದ ಮುಖ ಅಥವಾ ಬರೀ ಗಂಟುತಲೆ ಮತ್ತು ಕೃಶವಾಗಿ ತೋರಿಸಿರುವ ಕೈಕಾಲುಗಳು; ಲೈಂಗಿಕ ರಚನೆಗಳಿಗೆ ಮಾತ್ರ ಒತ್ತುಕೊಡಲಾಗಿದೆ. ತೂಗಾಡುವ ತುಂಬು ಮೊಲೆಗಳು, ದೊಡ್ಡ ಗಾತ್ರದ ನಿತಂಬಗಳು ಮತ್ತು ಗರ್ಭವತಿಯರಾಗಿರುವ ಸ್ಪಷ್ಟ ಚಿಹ್ನೆಗಳು, ಈ ಕಲಾಕೃತಿಗಳು ತಾಯಿ ದೇವತೆಯ ಉಪಾಸನಾ ಪದ್ಧತಿಯ ಪ್ರಾರಂಭವನ್ನು ಪ್ರತಿನಿಧಿಸಿದರೂ ಬಹು ಜನರ ಮಾನ್ಯತೆಯನ್ನು ಗಳಿಸಲಾಗಲಿಲ್ಲ. ಆ ಸ್ತ್ರೀ ಆಕೃತಿಗಳು ಮಾನವ ಜನ್ಮದ ಬಗ್ಗೆ ಮತ್ತು ಹುಟ್ಟಿನ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗಿವೆ. ಸಮೂಹ ಗರ್ಭಧಾರಣೆಯ ರಕ್ಷಣೆಗಾಗಿ ಅಥವಾ ಸಹಾಯಕ್ಕಾಗಿ ರೂಪಿಸಿಕೊಂಡ ಆಕೃತಿಗಳು ಇರಬಹುದು.

ಗುಹೆ ಅಥವಾ ಶಿಲಾಶ್ರಯಗಳಲ್ಲಿ ಚಿತ್ರರಚನೆ, ಬಂಡೆಯ ಮೇಲೆ ರೇಖಾಚಿತ್ರ ಕೊರೆಯುವಿಕೆ, ಮಣ್ಣಿನ ಮಡಕೆ ಅಥವಾ ಉಪಕರಣಗಳ ಮೇಲೆ ಚಿತ್ರ ಅಥವಾ ಉಬ್ಬುಶಿಲ್ಪ ರಚಿಸುವಿಕೆ ಮುಂತಾದವು ಆದಿಮ ಮಾನವನ ಕೃತಿಗಳಲ್ಲಿ ಒಂದು ಧಾರ್ಮಿಕ ವಿಧಿಕ್ರಿಯೆ ಅಥವಾ ಆಚರಣೆಯ ಅಂಶಗಳನ್ನು ಕಾಣಬಹುದು. ಪುರಾತನ ಗುಹಾಚಿತ್ರಗಳು ಧರ್ಮದ ಪ್ರಾರಂಭದೊಂದಿಗೆ ತಳಕು ಹಾಕಿಕೊಂಡಿದ್ದರೆ; ನಮ್ಮ ಪೂರ್ವಿಕರು ಅವರ ನಂಬಿಕೆಗಳು, ಆಚರಿಸಿದ ಶಾಸ್ತ್ರಗಳು, ಅನುಸರಿಸಿದ ಸೂತ್ರಗಳು ಹಾಗೂ ಅಭಿವೃದ್ದಿಹೊಂದಿ ವಿಶಾಲವಾಗಿ ಹರಡಿದ ಎಲ್ಲಾ ಕಲ್ಪನೆಗಳನ್ನೂ ಚಿತ್ರಕಲೆಯಲ್ಲಿ ದಾಖಲಿಸಿರುವುದರ ಪ್ರಾಚೀನತೆ ೨೫ ಸಾವಿರ ವರ್ಷಗಳ ಹಿಂದಕ್ಕೆ ಸರಿಯುತ್ತದೆ. ವರ್ಣಗಳ ಬಳಕೆ, ಆಭರಣಗಳ ಅನ್ವೇಷಣೆ, ದಂತ ಕೆತ್ತನೆ ಮುಂತಾದವು ಕಲಾಪ್ರಜ್ಞೆಯ ಅಭಿವ್ಯಕ್ತಿ ಪ್ರಾರಂಭಿಕ ಇತಿಹಾಸದಲ್ಲಿ ಸೇರಿಹೋಗಿವೆ.

ಇವೆಲ್ಲವನ್ನೂ ಸ್ವಾಭಾವಿಕವಾಗಿ ಮತ್ತು ಸ್ಪಷ್ಟವಾಗಿ ತಿಳಿದಿರುವ ಅಂಶಗಳ ಆಧಾರದ ಮೇಲೆ ಬದುಕಿನ ಹಿಂದಿರುವ ಅಗೋಚರ, ಅಸ್ಪಷ್ಟ ಮತ್ತು ಅಂತರ್ಗತ ಶಕ್ತಿಗಳನ್ನು ಅರಿಯುವ ಮನುಷ್ಯ ಪ್ರಯತ್ನಗಳು ಎನ್ನಬಹುದು.

ಪೂರ್ವ ಬೇಟೆಗಾರರು ಮತ್ತು ಅವರ ಕೂಟ ಬದುಕುವುದಕ್ಕಾಗಿ ಬೇರುಗಳು, ಹಣ್ಣು ಮತ್ತು ಕಾಳು, ಗಿಡಮೂಲಿಕೆ ಮುಂತಾದವನ್ನು ಹುಡುಕುವುದು ಮುಂದುವರೆಸಿದ್ದರಿಂದ ಅವರು ತಾಂತ್ರಿಕವಾಗಿ, ಸಾಮಾಜಿಕವಾಗಿ ವಿಕಾಸವಾಗಲು ಕಾರಣವಾಯಿತು. ಪ್ರಯುಕ್ತ ಮನುಷ್ಯರು ೧೫ ಸಾವಿರ ವರ್ಷಗಳ ನಂತರ ಬದುಕುವ ವಿಧಾನದ ಮೇಲೆ ನಿಯಂತ್ರಣ ಹೊಂದಲು ಕಲಿತರು. ಹೀಗೆ ಬೇಟೆಗಾರರು ಪಶುಪಾಲಕರಾಗಿ ವಿಕಾಸಹೊಂದಿದರು. ಪ್ರಸ್ತುತ ಪ್ರಾಣಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಉಡುಪಿಗಾಗಿ ಉಣ್ಣೆ ಮತ್ತು ಚರ್ಮ, ಆಹಾರಕ್ಕಾಗಿ ಹಾಲು ಮತ್ತು ಮಾಂಸ, ಕೆಲಸಕ್ಕೆ ಬೇಕಾಗುವ ಶಕ್ತಿ ಮೂಲವಾಗಿ ಬಳಸಿಕೊಳ್ಳಲಾಗುತ್ತಿದೆ. ಮನುಷ್ಯ ಸದಾ ಚಲನಶೀಲನಾಗಿರುವುದರಿಂದ ಅವನ ಮೂಲ ನೆಲೆಗಳನ್ನು ಗುರುತಿಸುವುದು ಸುಲಭ ಸಾಧ್ಯವಲ್ಲ.

ಪಟ್ಟಣಗಳು ಮತ್ತು ನಗರಗಳು

ಆದಿಮ ಮಾನವ ಬಹಳಕಾಲ ತನ್ನ ಆಹಾರಕ್ಕಾಗಿ ಬೇಟೆಯೊಂದನ್ನೇ ಅವಲಂಬಿಸು ವಂತಿರಲಿಲ್ಲ. ಇದಕ್ಕೆ ಬೇರೆ ಬೇರೆ ಕಾರಣಗಳು ಇದ್ದಿರಬಹುದು. ಅವನು ಬೇಟೆಯಾಡುತ್ತಿದ್ದ ಪ್ರದೇಶದಲ್ಲಿ ಪ್ರಾಣಿಗಳ ಸಂಖ್ಯೆ ಕಾಲಾನುಕ್ರಮದಲ್ಲಿ ಕಡಿಮೆಯಾಗುತ್ತಾ ಬಂದಾಗ; ಗೆಡ್ಡೆ-ಗೆಣಸು, ಹಣ್ಣ-ಹಂಪಲು, ಕಾಯಿ, ಎಲೆ ಮುಂತಾದುವನ್ನು ಪರ್ಯಾಯವಾಗಿ ತಿಂದು ಜೀವಿಸಿದ್ದದ್ದು ಹಾಗೂ ಅವುಗಳನ್ನು ಸಂಗ್ರಹಿಸಿಡುವ ಕಾರ್ಯ ಕಲಿತದ್ದು ಪ್ರಮುಖ ಕಾರಣ ಎನ್ನಬಹುದು. ಸುಮಾರು ಹತ್ತು ಸಾವಿರ ವರ್ಷಗಳ ಹಿಂದಷ್ಟೇ ಕೆಲವು ಮಾನವರು ವ್ಯವಸಾಯಗಾರರಾದರು. ಈಗ ಅವರು ಬೇಕಾದದ್ದನ್ನು ಬೆಳೆದುಕೊಳ್ಳುತ್ತಿದ್ದಾರೆ. ಅವರು ತಮ್ಮ ಪಶುಗಳೊಂದಿಗೆ ಬಯಲು ಪ್ರದೇಶದಿಂದ ಬೆಟ್ಟ ಪ್ರದೇಶಗಳಿಗೆ ವಲಸೆ ಹೋಗಲಿಲ್ಲ. ಹತ್ತಿರದ ಬೆಟ್ಟಗಳ ಪಕ್ಕದ ಹುಲ್ಲುಗಾವಲಿನಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ಮೇಯಿಸಿದರು. ಮೇವು ಮತ್ತು ಕಾಳುಗಳನ್ನು ಬೆಳೆದರು ಹಾಗೂ ತಮಗೂ ಮತ್ತು ತಮ್ಮ ಸಾಕುಪ್ರಾಣಿಗಳ ಉಳಿವಿಗಾಗಿ ಸಂಗ್ರಹಿಸಿ ಇಡುವುದನ್ನು ಕಲಿತರು. ಪ್ರತಿಯೊಂದು ಪ್ರಾಣಿಯನ್ನೂ ತನ್ನ ಆಹಾರದ ದೃಷ್ಟಿಯಿಂದ ಕಾಣುತ್ತಿದ್ದ ಆದಿಮ ಮಾನವನಿಗೆ ಸಾಕು ಪ್ರಾಣಿಗಳ ಬಗ್ಗೆ ಪ್ರಾಮುಖ್ಯತೆ ಮತ್ತು ಕರುಣೆ ಉಂಟಾಗಿದ್ದು ಹೇಗೆ? ಎನ್ನುವ ಪ್ರಶ್ನೆಗೆ ಉತ್ತರ ನಿಗೂಢವಾಗಿಯೇ ಉಳಿದಿದೆ. ಬಹುಶಃ, ಈ ಪ್ರಾಣಿಗಳ ಅವಶ್ಯಕತೆ ವ್ಯವ್ಯಸಾಯದಲ್ಲಿ ಅವನಿಗೆ ಪ್ರಧಾನವಾಗಿದ್ದು ಕಾರಣವಿರಬಹುದು. ಈ ಹೊಸ ವಿಧದ ಬದುಕು ಸರ್ವ ಋತುವಿನಲ್ಲೂ ನೀರು ದೊರೆಯುವ ಸನಿಹದಲ್ಲೇ ಮಾನವ ಸಮಾಜ ನೆಲೆ ನಿಲ್ಲಲು ಕಾರಣವಾಯಿತು. ಇತ್ತೀಚೆಗೆ ನೆಲೆನಿಂತ ಇಂತಹ ಒಂದು ಸಮಾಜವನ್ನು ಪರಿಶೀಲಿಸೋಣ.

ಜೋರ್ಡಾನ್ ಕಣಿವೆಯ ಐನೀಸ್ ಸುಲ್ತಾನ್ ನ ಜೆರಿಕೋ ಎನ್ನುವಲ್ಲಿನ ಒಂದು ನೀರಿನ ಬುಗ್ಗೆ ಮನುಷ್ಯ ಸಮಾಜವೊಂದು ಬದುಕಲು ಒದಗಿಸಿದ್ದು ಸಾಕಷ್ಟು ನೀರು. ಆ ಸ್ಥಳದಲ್ಲಿ ಆದಿಮರು ನೆಲೆಸಿದ್ದ ಬಗ್ಗೆ ಜಾನ್‌ಗರ್‌ಸ್ಟ್ಯಾಂಗ್ ಮತ್ತು ಕಥ್‌ಲೀನ್ ಕೆನ್ಯಾನ್ ಅವರ ಸಂಶೋಧನೆಗಳು ಬೆಳಕು ಚೆಲ್ಲಿವೆ.

ಹೊಸ ಶಿಲಾಯುಗಕ್ಕೆ ಸೇರಿದ ಜೆರಿಕೋ ತುಂಬಾ ಅಭಿವೃದ್ದಿಹೊಂದಿದ ಸಮಾಜದ ಪಟ್ಟಣ. ಚೆನ್ನಾಗಿ ಕಟ್ಟಿದ ಮನೆಗಳು, ಗಾರೆ ಗಚ್ಚಿನ ನುಣುಪಾದ ನೆಲ. ಆ ನೆಲದ ಮೇಲೆ ಮೂಡಿರುವ ಮುದ್ರೆಗಳು; ಇವೆಲ್ಲವನ್ನೂ ಪ್ರಾಚ್ಯವಸ್ತು ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಜೆರಿಕೋ ಪಟ್ಟಣದ ಸುತ್ತೂ ದೊಡ್ಡ ದೊಡ್ಡ ಕಲ್ಲುಗಳಿಂದ ಕಟ್ಟಿದ ಕೋಟೆಯಂತಾ ಗೋಡೆ. ಅದಕ್ಕೆ ಹೊಂದಿಕೊಂಡಿರುವಂತೆ ಆಳವಾದ ಕಂದಕ. ಒಂದು ಕಾಲದಲ್ಲಿ ಕಂದಕದ ತುಂಬಾ ನೀರು ನಿಂತಿರುವುದರ ಅಲ್ಲಲ್ಲಿನ ಗುರುತುಗಳು. ಮುಂದುವರೆದು ಎತ್ತರವಾದ ಕಲ್ಲುಗೋಪುರ. ಅದಕ್ಕೆ ಬುಡದಿಂದ ತುದಿಯವರೆಗೆ ಇರುವ ಮೆಟ್ಟಿಲು. ಐನೀಸ್ ಸುಲ್ತಾನ್ ನ ನೀರನ ನಿಯಂತ್ರಣ ಮತ್ತು ರಕ್ಷಣಾಗೋಡೆ, ಗೋಪುರ ಮುಂತಾದವುಗಳ ನಿರ್ಮಾಣ ಸಹಕಾರ ಪ್ರಯತ್ನದಿಂದ ಆಗಿರಲು ಮಾತ್ರ ಸಾಧ್ಯ ಹಾಗೂ ಅದು ಮುಂದುವರಿದ ಸಾಮಾಜಿಕ ರಚನೆಯನ್ನು ಸೂಚಿಸುತ್ತದೆ.

ಆ ಪಟ್ಟಣದ ಒಂದು ಮನೆಯ ಗಾರೆ ಗಚ್ಚಿನ ನಯವಾದ ನೆಲದಲ್ಲಿ ಮೂರು ಮನುಷ್ಯಾಕೃತಿ ಚಿತ್ರಗಳನ್ನು ಪತ್ತೆಹಚ್ಚಿರುವುದು ಒಂದು ಆಕರ್ಷಣೀಯವಾದ ಸಂಗತಿ. ಆ ಮೂರು ಚಿತ್ರಗಳಲ್ಲಿ – ಒಬ್ಬ ಗಡ್ಡದಾರಿ ಗಂಡಸು, ಒಬ್ಬ ಹೆಂಗಸು ಮತ್ತು ಒಂದು ಮಗು. ಅವು ಪೂರ್ಣವಾಗಿ ಮನುಷ್ಯ ಗಾತ್ರದ, ತೆಳ್ಳಗೆ ಚಪ್ಪಟೆಯಾದ ಚಿತ್ರಗಳು. ಕೂದಲು ಮತ್ತು ಇತರ ರಚನೆಗಳನ್ನು ಕರಟದ ಕಣ್ಣಿನ ಬಣ್ಣದಿಂದ ಬಳಿದಿದೆ. ನಂತರದ ಕಾಲದಲ್ಲಿ ತಂದೆ, ತಾಯಿ, ಮಗು ಎನ್ನುವ ಪೂಜ್ಯತೆ ಪಡೆದ ಸಂಪ್ರದಾಯ ಉಂಟಾಗಲು ಆ ಮೂರು ಚಿತ್ರಗಳು ಕಾರಣವಾದವು ಎನ್ನುವ ವಾದವಿದೆ. ಆದರೆ ಅದೇ ಕಾಲದಲ್ಲಿ ಜೋರ್ಡಾನ್ ನ ಅಮ್ಮಾನ್ ಹತ್ತಿರದ ಇನ್‌ಗಜ್ಜಿ ಎಂಬಲ್ಲಿ ದೊರೆತ ನಾಲ್ಕು ಮನುಷ್ಯ ಗಾತ್ರದ ಜೇಡಿಮಣ್ಣಿನ ವಿಗ್ರಹಗಳು ದೊರೆತಿರುವುದು ಮೇಲಿನ ವಾದವನ್ನು ಒಪ್ಪಲು ಕಷ್ಟವಾಗುತ್ತದೆ.

ಜೆರಿಕೋದಲ್ಲಿ ಒಂದು ಮನೆ. ಅದರಲ್ಲಿ ಒಂದು ಆಯತಾಕಾರದ ಸಣ್ಣ ಕೊಠಡಿ. ಅದರ ಗೋಡೆಯಲ್ಲೊಂದು ಅರ್ಧ ವೃತ್ತಾಕಾರದ ಗೂಡು. ಬಹುಷಃ ಅದು ತೆರೆದ ದೇವರ ಗೂಡಿರಬಹುದು. ಮೃತ ಸಮುದ್ರದಲ್ಲಿ ಪತ್ತೆ ಹಚ್ಚಿದ ಒಂದೂವರೆ ಅಡಿ ಉದ್ದದ ಅಂಡಾಕಾರದ ಅಗ್ನಿ ಶಿಲೆಯ ಕಂಬವನ್ನು ಆ ಮನೆಯ ಗೂಡಿನಲ್ಲಿ ಜೋಡಿಸಿಡ ಲಾಗಿದೆ. ಬಹುಶಃ ಅದು ದೇವರ ಗೂಡಿರಬಹುದು. ನಂತರ ಪವಿತ್ರವೆಂದು ಕರೆಯಲ್ಪಡುವ ಬೇರೆ ಬೇರೆ ಸ್ಥಳಗಳಲ್ಲಿ ಕಂಡುಬಂದ ಮಜ್‌ಬಾತ್ ಎಂದು ಕರೆಯಲಾಗುವ ಕಂಬಗಳಿಗೆ ಅದು ಮಾರ್ಗಸೂಚಿಯೋ ಎನ್ನುವಂತೆ ಕಾಣುತ್ತಿತ್ತು. ಶಕ್ತಿಯ ಆವಾಸಸ್ಥಾನವೆಂದು ಆ ಕಂಬವನ್ನು ನಂಬಲಾಗಿದೆ. ಆ ಕಂಬಕ್ಕೆ ಆರಾಧನೆಯನ್ನೂ ಮಾಡಲಾಗುತ್ತಿದೆ. ಅದು ನಮ್ಮಲ್ಲಿನ ಲೀಂಗ ಪೂಜೆಗೆ ಸಮಾನವಾದ ಅರ್ಥ ಪಡೆದಿದೆ.

ಅದೇ ಜೆರಿಕೋದಲ್ಲಿ ಮಾನವನ ಏಳು ತಲೆ ಬುರುಡೆಗಳನ್ನು ಪತ್ತೆ ಹಚ್ಚಿರುವುದು ಮತ್ತೂ ಗಾಬರಿಪಡುವ ವಿಷಯ. ಬುರುಡೆಗಳ ಕೆಳಭಾಗಗಳನ್ನು ಗಾರೆಯಿಂದ ಮುಚ್ಚಿ ಮನುಷ್ಯ ಮುಖದ ಕಣ್ನು ಗುಳಿಗಳ ಆಕೃತಿಗಳನ್ನು ಉಂಟು ಮಾಡಿದೆ. ಈ ಕಲೆಯ ಬಗ್ಗೆ ತೃಪ್ತಿದಾಯಕ ಯಾವ ವಿವರಣೆಯೂ ಇಲ್ಲ. ಅವು ಶತೃಗಳ ಬುರುಡೆಗಳಿರಬೇಕು ಮತ್ತು ಯುದ್ಧದ ಪಾರಿತೋಷಕಗಳಿರಬೇಕು. ಮತ್ತೊಂದು ಕಡೆ, ಆ ಬುರುಡೆಗಳ ಆಕೃತಿಗಳನ್ನು ತೆಗೆದು ರಕ್ಷಿಸಿಟ್ಟಿರುವುದು; ಪಿತೃಪೂಜಾ ಪದ್ಧತಿಗೆ ಕಾರಣವಾಗಿರುವ ಬಹುಶಃ ಅವರ ಪಿತೃಗಳ ಅಥವಾ ಹಿಂದಿನವರ ಬುರುಡೆಗಳಿರಬಹುದು.

ಆದಿಮ ಮಾನವರು ದೊಡ್ಡ ದೊಡ್ಡ ಸಾಮಾಜಿಕ ಗುಂಪುಗಳಾಗಿ ಒಟ್ಟಿಗೆ ಜೀವಿಸು ವುದನ್ನು ಕಲಿತಾಗ; ವಸ್ತುಗಳು, ಜವಾಬ್ದಾರಿಗಳು, ಶ್ರಮ ಮತ್ತು ಹೊರಗಿನವರೊಂದಿಗಿನ ಸಂಬಂಧ ಮುಂತಾದವುಗಳ ಹಂಚಿಕೆಗಾಗಿ ಹಾಗೂ ಗುಂಪುಗಳ ಮಧ್ಯದಲ್ಲಿನ ಸಾಮರಸ್ಯವನ್ನು ಉಳಿಸಿಕೊಳ್ಳಲು ಕಾನೂನು, ಕಾಯಿದೆ ಮುಂತಾದ ಕಟ್ಟುಪಾಡುಗಳನ್ನು ಮಾಡಿಕೊಂಡಿರುವುದು ಪ್ರಾಚ್ಯವಸ್ತು ದಾಖಲಾತಿಗಳು ತಿಳಿಸುತ್ತಿವೆ.

ಗಂಡಸರು ಬೇಟೆಯಲ್ಲಿ ನೌಕಾ ನಿರ್ಮಾಣ ಮತ್ತು ನೌಕಾಯಾನದಲ್ಲಿ ತೊಡಗಿದ್ದಾಗ; ದೇವತೆಗಳ ಆರಾಧನೆ ಏನಿದ್ದರೂ ಹೆಚ್ಚೂ ಕಡಿಮೆ ಪೂರ್ಣವಾಗಿ ಹೆಣ್ಣಿನದು ಆಗಿತ್ತು ಎನ್ನುವ ವಿಚಾರ ವಿವಾದದಿಂದ ಕೂಡಿದೆ. ಮನುಷ್ಯರ ಮಧ್ಯದ ಸಂವಹನದ ಕಾನೂನು ಗಳು, ಮೌಲ್ಯಗಳು ಮತ್ತು ನೀತಿ ಮುಂತಾದ ಸಾಮಾಜಿಕ ನಿಯಂತ್ರಣದ ಅಂಶಗಳೆಲ್ಲ ಸಮಾಜದಿಂದಲೇ ಬೆಳೆದು ಬಂದಂತಹವು ಆಗಿದ್ದವು. ಪುರಾತನ ಕುಟುಂಬಗಳು ಬದುಕುಳಿಯಲು ಜೊತೆಗೂಡಿ ಬದುಕುವುದನ್ನು ಮತ್ತು ಸಹಕಾರದ ಘಟಕಗಳಾಗಿ ಕೆಲಸ ಮಾಡುವುದನ್ನು ಕಲಿತಿರಬೇಕು.

ಕುಟುಂಬಗಳು ವಿಸ್ತಾರಗೊಂಡಾಗ ಕುಲ ಮತ್ತು ಬುಡಕಟ್ಟುಗಳು ಉಂಟಾದವು. ಹೀಗೆ ಉದ್ಭವಿಸಿದ ಗುಂಪುಗಳಿಗೆ ಸಂಬಂಧಗಳು ಮತ್ತು ಜವಾಬ್ದಾರಿಗಳನ್ನು ವಹಿಸಲಾಯಿತು. ಗ್ರಾಮಗಳು ಮತ್ತು ಪಟ್ಟಣಗಳು ಬೆಳೆದಾಗ ಕೋಮನ್ನು ಆಳಲು ಕಾನೂನುಗಳನ್ನು ಮಾಡ ಬೇಕಾಯಿತು. ಕಾನೂನುಗಳನ್ನು ಹೇಗೆ ರೂಪಿಸಲಾಯಿತು ಎನ್ನುವುದು ಮುಖ್ಯ. ಶಕ್ತಿಯ ಪ್ರಭಾವದಿಂದ ರೂಪಿಸಲಾಯಿತೆ ಅಥವಾ ಒಡಂಬಡಿಕೆಯಿಂದಲೇ ಅಥವಾ ಪ್ರಜಾಪ್ರಭುತ್ವ ಅಭಿಮತದಿಂದಲೇ ಎನ್ನುವುದು ಯಾವುದೂ ತಿಳಿದಿಲ್ಲ.

ಪೂಜ್ಯವೆಂದು ಕಂಡುಬಂದ ಕಾನೂನು ಕಾಯಿದೆಗಳನ್ನು ಪಟ್ಟಣ ಮತ್ತು ನಗರಗಳಲ್ಲಿ ಜನರು ವಾಸಿಸಲು ಪ್ರಾರಂಭಿಸಿದಾಗ ಏರ್ಪಡಿಸಿಕೊಂಡರು. ಆ ಅಸ್ವಾಭಾವಿಕ ಅಧಿಕಾರ ವೈಯಕ್ತಿಕ ಅನಿಸಿಕೆಗಳು ಮತ್ತು ಆಕಾಂಕ್ಷೆಗಳನ್ನು ಮುಚ್ಚಿಹಾಕಲು ಕಾರಣವಾಯಿತು. ಒಂದು ನಿರ್ದಿಷ್ಟ ಸಮಾಜವನ್ನು ಆಳುವ ನೈತಿಕ ಮಾನದಂಡಗಳನ್ನು ರೂಪಿಸಿ ಒಪ್ಪಿ ಕೊಳ್ಳಲಾಯಿತು. ಆ ನೈತಿಕ ಮಾನದಂಡಗಳಿಗೇ ಕೋಮುಗಳು ದೈವತ್ವವನ್ನು ಲೇಪಿಸಿ; ದೇವರೇ ದಯಪಾಲಿಸಿದವು ಎನ್ನುವ ಅರ್ಥದಲ್ಲಿ ಮುಂದೆ ಮಾಡಲಾಯಿತು.

ಪಟ್ಟಣಗಳು ಮತ್ತು ನಗರಗಳು ವಿಸ್ತಾರವಾದಂತೆಲ್ಲ ಮತ್ತು ಅವುಗಳ ಸಂಖ್ಯೆ ಹೆಚ್ಚಿದಂತೆಲ್ಲ ತೀರ್ಥಕ್ಷೇತ್ರಗಳು, ದೇವಸ್ಥಾನಗಳು, ದೇವರುಗಳು, ಪುರೋಹಿತರು, ಆಚರಣೆಗಳು ಮುಂತಾದವು ಹೆಚ್ಚಾಗುತ್ತಾ ಬಂದವು. ಇದಕ್ಕೆ ಪ್ರಮುಖ ಕಾರಣ ಎಂದರೆ; ನಗರ ಮತ್ತು ಪಟ್ಟಣಗಳಲ್ಲಿ ಮನುಷ್ಯ ಜೀವಕ್ಕೆ ಇರುವ ಅಭದ್ರತೆ ಮತ್ತು ಮಾನಯ ಗುಣದ ಕೊರತೆ ನಗರವಾಸಿಗಳಲ್ಲಿ ಭಯ ಉಂಟು ಮಾಡಿದೆ. ಹೆಚ್ಚಿನ ಜನಸಂದಣಿ, ದೈನಂದಿನ ಬದುಕಿನ ಹೆಚ್ಚು ತೀವ್ರತೆ, ಅವಶ್ಯಕತೆಗಳ ಹಂಚಿಕೆಯಲ್ಲಿನ ಸ್ಪರ್ಧೆ ಮುಂತಾದವೂಕ್ಕೆ ಕಾರಣವಾದವು. ಸಮಾಜ ಸಂಕೀರ್ಣವಾದಂತೆಲ್ಲ, ಮನುಷ್ಯರಿಗೆ ದಾಖಲಾತಿಗಳನ್ನು ಇಡುವುದು ಅನಿವಾರ್ಯವಾಗಿದ್ದರಿಂದ ಬರವಣಿಗೆ ವಿಕಾಸವಾಗಲು ಕಾರಣವಾಗಿ; ಆದಿಮ ಬದುಕನ್ನು ಅರಿಯುವುದರಲ್ಲಿ ಆ ದಾಖಲಾತಿಗಳೂ ಸಹಕಾರಿಯಾಗಿವೆ.