ಪುರಾತನ ಮಾನವರಿಗೆ ಕಾಡಿನಲ್ಲಿ ವಾಸಿಸುತ್ತಿದ್ದಾಗ ಪ್ರಾಕೃತಿಕವಾಗಿ ಅವರನ್ನು ಕಾಡುತ್ತಿದ್ದ ಬಿರುಗಾಳಿ, ಅತಿವೃಷ್ಟಿ, ಪ್ರವಾಹ, ಗುಡುಗು, ಮಿಂಚು, ಸಿಡಿಲು, ಅನಾವೃಷ್ಟಿ, ಭಯಂಕರ ರೋಗ ಮುಂತಾದ ಅಹಿತಕರ ವಿನಾಶಕಾರಿ ಘಟನೆಗಳಿಂದ ರಕ್ಷಣೆ ಪಡೆಯುವುದು ಒಂದು ಅವಶ್ಯಕತೆ ಆಗಿದ್ದರೆ; ಬದುಕಿಗೆ ಬೇಕಾದ ಹದಮಳೆ, ದುಡಿಯಲು ಸಾಕಷ್ಟು ಮಕ್ಕಳು, ವ್ಯವಸಾಯ ಮತ್ತು ಮಾಂಸಕ್ಕೆ ಸಾಕಷ್ಟು ದನಕರು, ಕುರಿ-ಆಡು ಮುಂತಾದವನ್ನು ಪಡೆಯುವ ಹಿತಕಾರಿ ಬೇಡಿಕೆಗಳ ಅವಶ್ಯಕತೆಯೂ ಮತ್ತೊಂದು.

ಈ ಎರಡೂ ರೀತಿಯ ಅವಶ್ಯಕತೆಗಳನ್ನು ಅಲ್ಪಶಕ್ತಿಯ ಮಾನವರು ಪೂರೈಸಲಾರರು; ಆದರೆ ಇಂದ್ರಿಯ ಗೋಚರವಲ್ಲದ, ಮನುಷ್ಯನ ಶಕ್ತಿಗಿಂತ ಅನೇಕಪಟ್ಟು ಹೆಚ್ಚು ಶಕ್ತಿ ಪಡೆದಿರುವ ಕೆಲವು ಅಲೌಕಿಕ ಶಕ್ತಿಗಳು ಅವನ್ನು ನಿಯಂತ್ರಿಸುತ್ತಿರಬಹುದು ಎಂದು ನಂಬಿದ್ದರಿಂದ ಬಹುದೇವತೆಗಳನ್ನು ಅಥವಾ ಬಹುದೇವತಾವಾದ (Polytheism)ವನ್ನು ಕಲ್ಪಿಸಿಕೊಳ್ಳಲು ಕಾರಣವಾಗಿರಬಹುದು. ಪ್ರಕೃತಿಯಲ್ಲಿನ ವೈವಿಧ್ಯಮಯ ಎಲ್ಲ ವಿಭಾಗಗಳಿಗೂ ಮೂಲತಃ ಒಂದೇ ಶಕ್ತಿ ಆಧಾರ ಎನ್ನುವ ವಿಚಾರವೇನಾದರೂ ಪುರಾತನ ಮಾನವರಲ್ಲಿ ಉಂಟಾಗಿದ್ದರೆ, ಭೂಮಿಯ ತುಂಬಾ ಒಬ್ಬನೇ ದೇವತೆಯ ಏಕದೇವತಾವಾದ (Monotheism) ಮಾತ್ರ ಇರಲು ಸಾಧ್ಯವಿರುತ್ತಿತ್ತು.

ಪ್ರಕೃತಿಯಲ್ಲಿನ ಅತಿಮಾನಸ ಶಕ್ತಿಗಳ ಬಗ್ಗೆ ಮಾನವರಲ್ಲಿ ಇದ್ದ ಅಥವಾ ಇರಬಹುದಾದ ನಂಬಿಕೆಯನ್ನು ದೇವರು ಎಂದು ಅರ್ಥೈಸಬಹುದು. ಆ ಅತಿ ಮಾನಸ ಶಕ್ತಿಗಳಿಗೆ ಸಾಂಕೇತಿಕವಾಗಿ ಆರೋಪಿಸಿಕೊಂಡ ಮಾನವ ಕಲ್ಪನೆಗಳನ್ನು ದೇವತೆಗಳು ಎಂದು ಕರೆಯಬಹುದು. ಹೀಗೆ ನಂಬಿಕೆಗಳು ಕಲ್ಪನಾ ರೂಪಗಳನ್ನು ಪಡೆದದ್ದರಿಂದ ಅದ್ಭುತಗಳ ವ್ಯಕ್ತೀಕರಣ ಉಂಟಾಗಲು ಕಾರಣವಾಯಿತು. ಇಂತಹ ಕಲ್ಪನೆಗಳಲ್ಲಿ ಮನುಷ್ಯರ ಬೇಡಿಕೆಗಳು ಪ್ರಧಾನವಾಗಿ ಅವರ ಸ್ವಂತ ಸಾಮರ್ಥ್ಯಗಳ ಅವಗಣನೆಗೂ ಕಾರಣವಾಗುತ್ತದೆ.

ವೈದಿಕರು ಬೆಳಕಿಗೆ ಸೂರ್ಯನನ್ನು ದೇವತೆಯನ್ನಾಗಿಸಿದ್ದರೆ ಪುರಾತನ ಗ್ರೀಕರು ಅಪೆಲೋನನ್ನು ದೇವತೆಯನ್ನಾಗಿಸಿದ್ದರು. ಮೋಡ ಮತ್ತು ಮಳೆಗೆ ಇಂದ್ರ ದೇವತೆಯಾಗಿದ್ದರೆ ರೋಮನ್ನರಿಗೆ ಔರನೆಸ್ ಆಗಿದ್ದಾನೆ. ಪುರಾತನ ಭಾರತೀಯರು ಗಾಳಿಗೆ ವಾಯುವೆಂದು, ಬೆಂಕಿಗೆ ಅಗ್ನಿಯೆಂದು, ಸಮುದ್ರಕ್ಕೆ ವರುಣನೆಂದು, ಹೀಗೆ ದೇವತೆಗಳ ಕಲ್ಪನೆಗಳನ್ನು ಹೊಂದಿದ್ದರು.

ಪ್ರಾಕೃತಿಕ ಘಟನೆಗಳು ತಮ್ಮ ನಿಯಂತ್ರಣಕ್ಕೆ ಒಳಪಡದ ಸಂದರ್ಭಗಳಲ್ಲೆಲ್ಲಾ ಪುರಾತನರು ಅಧಿದೇವತೆಗಳನ್ನು ಕಲ್ಪಿಸಿಕೊಳ್ಳುತ್ತಿದ್ದರು. ಆ ಕಲ್ಪನೆಗಳಿಂದ ಪ್ರಾಕೃತಿಕ ಘಟನೆಗಳ ನಿಯಂತ್ರಣ ಆಗುತ್ತಿತ್ತು ಎನ್ನುವುದು ಅವರ ಬರೀ ಸಮಾಧಾನವೇ ಹೊರತು ವಾಸ್ತವವಂತೂ ಆಗಿರಲಿಲ್ಲ. ಅವರ ಆ ಕಲ್ಪನೆ ಅನಾವಶ್ಯಕವಾಗಿ ಆದದ್ದಲ್ಲ ಎನ್ನುವುದು ಮುಖ್ಯ. ಬೆಟ್ಟಗಳು ಇಲ್ಲದ ಜಾಗದಲ್ಲಿ ಬೆಟ್ಟದ ದೇವತೆಗಳಾಗಲೀ, ಸಮುದ್ರಗಳಿಲ್ಲದ ಜಾಗದಲ್ಲಿ ಸಮುದ್ರದ ದೇವತೆಗಳನ್ನಾಗಲೀ ಅಥವಾ ನದಿಗಳಿಲ್ಲದ ಜಾಗದಲ್ಲಿ ನದಿ ದೇವತೆಗಳನ್ನಾಗಲೀ ಕಲ್ಪಿಸಿಕೊಂಡಿರಲು ಸಾಧ್ಯವಿಲ್ಲ.

ಮ್ಯಾಕ್ ಗ್ರೇಗರ್ ಹೇಳುವಂತೆ ‘‘ಪುರಾತನರು ಮೊದಲು ದೇವತೆಗಳನ್ನು ಕಲ್ಪಿಸಿಕೊಂಡು ಅವರಿಗೆ ಪ್ರಾಕೃತಿಕ ಘಟನೆಗಳನ್ನು ಅಥವಾ ವಿಭಾಗಗಳನ್ನು ಕೊಡುತ್ತಿರಲಿಲ್ಲ. ಬದಲಾಗಿ ಪ್ರಾಕೃತಿಕ ಘಟನಗಳನ್ನು ನೋಡಿ, ಅವುಗಳ ಹಿಂದೆ ದೇವತೆಗಳು ಇರಬೇಕೆಂದು ತರ್ಕಿಸುತ್ತಿದ್ದರು.’’ ಸುಮೇರಿಯನ್ನರು ವಲಸೆ ಹೋದ ಕಡೆಯಲ್ಲೆಲ್ಲಾ ಒಂದೊಂದು ಊರನ್ನು ಕಟ್ಟಿ ಅದರ ರಕ್ಷಣೆಗೆ ಒಬ್ಬೊಬ್ಬ ದೇವತೆಯನ್ನು ಕಲ್ಪಿಸಿಕೊಂಡಿದ್ದರೆ; ಆರ್ಯರು ಆ ರಕ್ಷಣೆಯ ಕೆಲಸವನ್ನು ಇಂದ್ರನಿಗೆ ಕೊಟ್ಟಿದ್ದರು. ಥಿಬ್ಸ್ ನಗರದ ರಕ್ಷಕ ಏಮೋನ್ ದೇವತೆ ಇದ್ದರೆ, ಅಥೆನ್ಸ್‌ನ ರಕ್ಷಕ ದೇವತೆ ಅಥೀನಾ ಆಗಿದ್ದ. ಹೀಗೆ ಪುರಾತನರ ಅಗತ್ಯಗಳು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆಯಯಾಗಿಯೇ ಇರುತ್ತಿದ್ದವು.

ಬಹುದೇವತಾವಾದವು ಬಹುಶಃ ಆದಿಮ ಮಾನವರ ಬಹುಭೂತಾರಾಧನೆಯಿಂದ ಹುಟ್ಟಿರಬಹುದು ಎನ್ನುವುದು ವಿದ್ವಾಂಸರ ಅಭಿಪ್ರಾಯ. ಬುಡಕಟ್ಟು ಧರ್ಮಗಳು (Tribal Religions) ಬಹುಭೂತಾರಾಧನೆಯಿಂದ ಅಥವಾ ಬಹುದೇವತಾವಾದದಿಂದ ಮುಂದಕ್ಕೆ ಸಾಗಿಯೇ ಇಲ್ಲ. ಹಿಂದೂ ಧರ್ಮವು ಬಹುದೇವತಾ ವಾದದಿಂದ ಪ್ರಾರಂಭವಾಗಿ, ಏಕ ದೇವತಾವಾದದ ಮೂಲಕ ಸಾಗಿ, ಏಕತತ್ವವಾದದಲ್ಲಿ ಪರಾಕಾಷ್ಟತೆಯನ್ನು ಮುಟ್ಟಿದರೆ, ಕ್ರೈಸ್ತಧರ್ಮ ಪ್ರಾರಂಭವಾಗುವುದೇ ಏಕದೇವತಾವಾದದಿಂದ. ಇನ್ನು ಬೌದ್ಧಮತ್ತು ಜೈನ ಮತಧರ್ಮಗಳಲ್ಲಿ ಯಾವ ದೈವದ ಕಲ್ಪನೆಯೂ ಇಲ್ಲ.

ಬುಡಕಟ್ಟುಗಳ ಭೂತಾರಾಧನೆಯಲ್ಲಿನ ಭೂತಗಳ ಸಂಖ್ಯೆ ಹೆಚ್ಚಿದ್ದರೆ, ಬಹುದೇವತಾವಾದದ ಪ್ರಕಾರ ದೇವತೆಗಳ ಸಂಖ್ಯೆ ಬಹಳ ಚಿಕ್ಕದು. ಭೂತಗಳಿಗೆ ನಿರ್ದಿಷ್ಟ ಅಕಾರ, ಹೆಸರು ಮತ್ತು ಗುಣಗಳು ಇಲ್ಲ. ಆದರೆ ದೇವತೆಗಳಿಗೆ ತಮ್ಮದೇ ಆದ ಹೆಸರು ಆಕಾರ ಮುಂತಾದವು ಇರುವುದು ಕಂಡುಬರುತ್ತದೆ. ಭೂತಗಳು ಭಯಂಕರವಾದರೆ ದೇವತೆಗಳು ಆಕರ್ಷಕ ಸುರೂಪಿಗಳು ಮತ್ತು ಸ್ನೇಹಪರರು. ಭೂತಗಳಿಗೆ ಭೂಮಿಯ ಮೇಲೆ ಸೀಮಿತ ಮತ್ತು ನಿರ್ದಿಷ್ಟ ಸ್ಥಳಗಳಿದ್ದರೆ; ದೇವತೆಗಳಿಗೆ ವಿಶಾಲವಾದ ದೇವಲೋಕ ಆವಾಸಸ್ಥಾನ. ಭೂತಗಳ ಶಕ್ತಿ ಅಲ್ಪವಿದ್ದರೆ ದೇವತೆಗಳ ಶಕ್ತಿ ಅಗಾಧ ಮತ್ತು ಅಪರಿಮಿತ. ಆದರೆ ಇವೆರಡರಲ್ಲಿ ಕಂಡುಬರುವ ಸಾಮಾನ್ಯ ಅಂಶವೆಂದರೆ – ಎರಡರಲ್ಲೂ ಇರುವ ಮಾನವತ್ವದ ಆರೋಪ. ಮಾನವರಿಗಿರುವ ಆಹಾರ, ಪಾನೀಯ, ಲೈಂಗಿಕ ಆಸೆ, ಸಿಟ್ಟು, ದುರಾಸೆ, ಧೈರ್ಯ ಮುಂತಾದ ಎಲ್ಲ ಗುಣಗಳೂ ಭೂತಗಳಲ್ಲೂ ಮತ್ತು ಬಹುದೇವತೆ ಗಳಲ್ಲೂ ಇರುವುದು ಮುಖ್ಯ ಕಾರಣ.

ಮನುಷ್ಯರು ತಮ್ಮ ತಮ್ಮಲ್ಲೇ ಕಿತ್ತಾಡುವಂತೆ ಇವೂ ಕಿತ್ತಾಡುತ್ತವೆ. ಮನುಷ್ಯರು ತಮ್ಮಂತಾ ಬೇರೆ ಮನುಷ್ಯರಿಗೆ ಯಾವುದಾದರೂ ಕೆಲಸ ಮಾಡಿಕೊಡಲು ಲಂಚ ಪಡೆಯುವಂತೆ ಭೂತಗಳು, ದೇವತೆಗಳೂ ಉಡುಗೊರೆ, ಕಾಣಿಕೆ, ಎಡೆ ಮುಂತಾದ ಲಂಚ ಪಡೆಯುತ್ತವೆ. ಆದರೆ ಬೇಡಿಕೆಯ ಈಡೇರಿಕೆ ಮಾತ್ರ ಮನುಷ್ಯರ ಪ್ರಯತ್ನಗಳನ್ನೇ ಅವಲಂಬಿಸಿರುತ್ತವೆ ಎನ್ನುವುದು ಮಾತ್ರ ಸೂರ್ಯನಷ್ಟೇ ಸತ್ಯ.

* * *

ಪ್ರತಿ ನಗರ ಅಥವಾ ರಾಜ್ಯ ತನ್ನದೇ ಆದ ಜನನಾಯಕ ಅಥವಾ ಯಜಮಾನ ಅಥವಾ ರಾಜನನ್ನು ಹೊಂದಿರುವಂತೆ; ತನ್ನದೇ ಆದ ಪ್ರಮುಖ ದೇವತೆಯನ್ನು ಹೊಂದಿರುವುದು ಮಾನವ ಇತಿಹಾಸದಿಂದ ತಿಳಿದುಬರುತ್ತದೆ. ದೇವತೆಗಳ ವ್ಯಕ್ತಿತ್ವವು ಮನುಷ್ಯರ ವ್ಯಕ್ತಿತ್ವವನ್ನು ಹಾಗೂ ದೇವತೆಗಳ ವ್ಯವಸ್ಥೆ ಮನುಷ್ಯರ ವ್ಯವಸ್ಥೆಯನ್ನು ಪ್ರತಿಫಲಿಸುತ್ತವೆ. ಮನುಷ್ಯ ಆಡಳಿತಗಾರರು ಅವರದೇ ಆದ ಸ್ವಂತ ಸ್ಥಳಗಳನ್ನು ಹೊಂದಿರುವಂತೆ ದೇವತೆಗಳೂ ಅವರದೇ ಆದ ದೇವಸ್ಥಾನಗಳು ಅಥವಾ ಪುಣ್ಯ ಕ್ಷೇತ್ರಗಳನ್ನು ಹೊಂದಿವೆ.

ಬೆಬಿಲೋನ್‌ನ ಪ್ರಥಮ ಸಂತಿಯ ಆರನೇ ದೊರೆ ಹಮ್ಮುರಾಬಿ (೧೭೨೮- ೧೬೮೬ ಕಿ.ಪೂ.)ಮೆಸಪಟೋಮಿಯಾದಲ್ಲಿ; ಅಧಿಕಾರದಲ್ಲಿದ್ದಾಗ  ನಗರ-ರಾಜ್ಯದ ಅಧಿದೇವತೆ ‘ಮಾರ್‌ಡಕ್’ನನ್ನು ರಾಜರ ರಾಜ ಹಾಗೂ ಪ್ರಭುಗಳ ಪ್ರಭು ಎಂದು ಆರಾಧಕರು ಪರಿಗಣಿಸಿದ್ದರು. ಪ್ರತಿ ‘ನಿಸಾನು’ (ಮಾರ್ಚಿ-ಏಪ್ರಿಲ್) ತಿಂಗಳಿನಲ್ಲಿ ನಡೆಯುವ ಹೊಸ ವರ್ಷದ ಹಬ್ಬ ‘ಅಕಿಟು’ ಸಂದರ್ಭದಲ್ಲಿ ಬೆಬಿಲೋನ್‌ನ ನಿಯಂತ್ರಣದಲ್ಲಿದ್ದ, ನಗರ-ರಾಜ್ಯದ ಅಧಿದೇವತೆಯ ಪವಿತ್ರ ಶಿಲಾ ವಿಗ್ರಹವನ್ನು ಆರಾಧಿಸಲು ತರುತ್ತಿದ್ದರು. ಅದೇ ರೀತಿ ಆಯಾ ರಾಜ್ಯಗಳ ಆಡಳಿತಗಾರರೂ ಹಮ್ಮುರಾಬಿಗೆ ಗೌರವ ಅರ್ಪಿಸಿ ಆರಾಧಿಸಲು ಪ್ರತಿವರ್ಷ ಬರುತ್ತಿದ್ದರು. ಬೆಬಿಲೋನಿಯಾ ಸನಿಹದಲ್ಲೇ ‘ಮಾರ್‌ಡಕ್ ಜಿಗ್ಗುರಾತ್’ ಗೋಪುರದ ಜೊತೆಗೆ, ಪ್ರೇಮ ಮತ್ತು ಸಂತತಿಯ ಅಧಿದೇವತೆ ‘ಇಶ್‌ತಾರ್’ ಬೇಟೆಯ ಅಧಿದೇವತೆ ಮತ್ತು ತಾಯಿ ದೇವತೆ ಎಂದು ಖ್ಯಾತವಾಗಿರುವ ‘ನಿನುರ್ತಾ’ ಅವರ ಪವಿತ್ರ ದೇವಾಲಯಗಳೂ ಇವೆ.

ಎಲ್ಲ ಅಜ್ಞಾನದ ಕತ್ತಲೆಯನ್ನು ನಿವಾರಿಸಿ ಜ್ಞಾನದ ಬೆಳಕನ್ನು ನೀಡಿ ನ್ಯಾಯ ದೇವತೆಯೆಂದು ಹೆಸರು ಪಡೆದಿರುವವನು, ‘ಶಮಾಶ್’ ಹೆಸರಿನಿಂದ ಕರೆಯಲ್ಪಡುತ್ತಿರುವವನು ಸೂರ್ಯ. ಬೆಬಿಲೋನಿಯಾದ ಧಾರ್ಮಿಕ ಪುರಾಣದಂತೆ; ತನ್ನ ದೇಶವನ್ನಾಳಲು ಹಮ್ಮುರಾಬಿಗೆ ಕಾಯಿದೆಗಳನ್ನು ಒದಗಿಸಿದ್ದೇ ‘ಶಮಾಶ್’. ಶಮಾಶ್ ದಯಪಾಲಿಸಿದ ಪವಿತ್ರ ಕಾಯಿದೆಗಳನ್ನು; ಅವನ ಪ್ರತಿನಿಧಿಯಾಗಿ ಹಮ್ಮುರಾಬಿ ಜಾರಿಗೊಳಿಸಿದನೆಂದು ಕಪ್ಪು ಡಯಾರೈಟ್ ಶಿಲೆಯ ಮೇಲ್ಭಾಗದಲ್ಲಿ ಬೆಬಿಲೋನಿಯಾದ ಕಲಾವಿದರು ಚಿತ್ರಿಸಿರುವುದು ಕಂಡುಬಂದಿದೆ. ಗಡ್ಡದಾರಿ ಶಮಾಶ್ ಮೂರು ಅಂತಸ್ತಿನ ಸಿಂಹಾಸನದಲ್ಲಿ ಕುಳಿತಿರುವಂತೆ ಅದರಲ್ಲಿ ಚಿತ್ರಿಸಲಾಗಿದೆ. ಆ ದೇವತೆಯ ಇಳೀಬಿದ್ದ ಉಡುಪಿನ ನಿರಿಗೆಗಳು ಬಲ ತೋಳನ್ನು ಮಾತ್ರ ಸುತ್ತುವರಿಯದೆ ಹಾಗೇ ಬರಿದಾಗಿ ಬಿಟ್ಟಿದೆ ಹಾಗೂ ಭುಜಗಳಿಂದ ಉರಿಯುವ ಕಿರಣಗಳು ಹೊರಟಿವೆ. ಕೋಡುಗಳು ಇರುವ ಮಡಿಕೆಯ ಕಿರೀಟವನ್ನು ತೊಟ್ಟಿದ್ದು; ಬಲಗೈನಿಂದ ಅಧಿಕಾರ ಸಂಕೇತವಾದ ಒಂದು ದಂಡ ಮತ್ತು ಮುದ್ರಾ ಉಂಗುರವನ್ನು ಕೊಡುತ್ತಿರುವಂತಿದೆ. ಕೆಳಗೆ ಬಾಗಿದ ಗಡ್ಡದಾರಿ ರಾಜ ತನ್ನ ಬಲಗೈಯನ್ನು ತುಟಿಗಳ ಹತ್ತಿರ ತಂದು ಬೇಡಿಕೊಳ್ಳುತ್ತಿರುವಂತೆ ಚಿತ್ರಿಸಿದೆ. ಆ ದೃಶ್ಯದ ಕೆಳಗೆ ದೇಶದ ಕಾಯಿದೆಗಳನ್ನು ಕೆತ್ತಿದೆ. ಹಮ್ಮುರಾಬಿ ಕಾಲಕ್ಕಿಂತ ಹಿಂದೆ ಇದ್ದ ಕಾಯಿದೆಗಳನ್ನು ಶಿಲೆಯಲ್ಲಿರುವ ಕಾಯಿದೆಗಳೊಂದಿಗೆ ಹೋಲಿಸಿದಾಗ; ಬೆಬಿಲೋನಿಯಾದ ನಿಯಮಗಳು ಪಕ್ಕಾ ಮತ್ತು ಎರಡೂ ಒಂದೇ ಎನ್ನುವುದು ತಿಳಿದುಬರುತ್ತದೆ.

ಹಮ್ಮುರಾಬಿಗಿಂತ ಒಂದು ಶತಮಾನಕ್ಕೂ ಹಿಂದೆ ‘ಎಶ್‌ನುನ್ನ’ (Eshnunna) ರಾಜ್ಯವನ್ನು ಆಳಿದ ‘ಲಿಪಿಟ್ ಇಷ್‌ತಾರ್’ (Lipit Ishtar) ದೊರೆಯ ಕಾಯಿದೆಗಳಿಂದ ನೇರವಾಗಿ ಪಡೆದ ಕೆಲವು ಕಾಯಿದೆಗಳು ಹಮ್ಮುರಾಬಿ ಕಾಯಿದೆಗಳಲ್ಲಿ ಕಂಡುಬಂದಿವೆ. ಲಿಪಿಟ್ ಇಷ್‌ತಾರ್ ತನ್ನ ನಿಯಮಗಳನ್ನು ಆಕಾಶ ದೇವತೆ ‘ಅನು’ (Anu) ಮತ್ತು ವಾಯುದೇವತೆ ‘ಎನ್‌ಲಿಲ್’ (Enlil) ಅವರಿಂದ ನೇರವಾಗಿ ಪಡೆದದ್ದು ಎನ್ನುವ ವಿಚಾರ ಇದೆ. ಪುರಾತನ ಬೆಬಿಲೋನಿಯಾದಲ್ಲಿ ರಾಜ್ಯ ಮತ್ತು ದೇವಸ್ಥಾನ, ಮಸೀದಿ ಮುಂತಾದವುಗಳ ಮಧ್ಯೆ ಯಾವ ತಾರತಮ್ಯಗಳೂ ಇರಲಿಲ್ಲ ಹಾಗೂ ಒಟ್ಟಿಗೆ ಒಂದೇ ಆಡಳಿತಕ್ಕೊಳಪಟ್ಟಿದ್ದವು. ಕಾಯಿದೆ ಮತ್ತು ನಿಯಮಗಳನ್ನು ನೇರವಾಗಿ ದೇವರಿಂದ ಪಡೆಯಲಾಯಿತು ಎನ್ನುವ ವಾದ; ಹೆಬ್ರ್ಯೂ ಚಕ್ರಾಧಿಪತ್ಯಗಳು ಬೆಳೆದು ಇಸ್ರೇಲ್‌ನ ಆಡಳಿತದ ಕಾನೂನುಗಳು ನೇರವಾಗಿ ಹೆಬ್ರ್ಯೂಗಳ ದೇವತೆ ‘ಯಾಹ್‌ವೆಹ್’ನಿಂದ ಬಂದವು ಎಂದು ಪ್ರತಿಪಾದಿಸುವವರೆಗೆ ಮುಂದುವರೆದವು.

ದೇವತೆಗಳು ತಮ್ಮತಮ್ಮಲ್ಲೇ ಅಥವಾ ಮನುಷ್ಯರೊಂದಿಗೆ ನಡೆಸಿದ ನಡವಳಿಕೆಗಳ ಕತೆಗಳನ್ನು ಕಟ್ಟುಕಥೆಗಳು ಎನ್ನಲಾಗುತ್ತಿದೆ. ಕೆಲವು ಕಟ್ಟುಕಥೆಗಳು ಪ್ರಪಂಚ ಸೃಷ್ಟಿ ಮತ್ತು ಅದರ ನಿವಾಸಿಗಳ ಬಗ್ಗೆ ಹೇಳಿದರೆ, ಮತ್ತೆ ಕೆಲವು ದೇವತೆಗಳ ಕುಟುಂಬಗಳಿಗೆ ಸಂಬಂಧಿಸಿದ ಮಾನಸಿಕ ತುಮುಲಗಳು ಮತ್ತು ಮನುಷ್ಯರ ಮೇಲೆ ಅವುಗಳ ಪರಿಣಾಮಗಳನ್ನು ತಿಳಿಸುತ್ತವೆ. ಬೆಬಿಲೋನಿಯದಲ್ಲಿ ಸೃಷ್ಟಿಯಾದ ‘ಎನುಮಾ ಎಲಿಷ್’ (Enuma Elish) ಎನ್ನುವ ಒಂದು ಕಟ್ಟುಕಥೆಯ ಪ್ರಕಾರ; ‘ಮಾರ್ ಡುಕ್’ (Marduk) ಎನ್ನುವ ದೇವತೆ ಉಳಿದೆಲ್ಲ ದೇವತೆಗಳ ಮೇಲೆ ಗೆಲುವು ಸಾಧಿಸಿ ಒಂದು ವ್ಯವಸ್ಥಿತ ಜಗತ್ತನ್ನು ಸೃಷ್ಟಿಸಿದ. ಇನ್ನೊಂದು ಕಟ್ಟುಕಥೆಯಪ್ರಕಾರ; ಮನುಷ್ಯರನ್ನು ಸೃಷ್ಟಿಸಿರುವುದೇ ದೇವತೆಗಳ ಸೇವೆಗಾಗಿ. ಶಕ್ತಿ ಮತ್ತು ಸಂಪತ್ತು, ಗುಡಿ ಮತ್ತು ಅದರ ಪರಿವಾರ, ಎಲ್ಲ ಇರುವುದೂ ದೈವದ ಸೇವೆಗಾಗಿ. ಇದು ಹೇಗೆಂದರೆ; ಸೆರೆ ಹಿಡಿದ ಗುಲಾಮರು ಅವರ ಯಜಮಾನರ ಸೇವೆಗಾಗಿ ಇರುವಂತೆ.

* * *

ದೇವತೆಗಳಿಗೆ ಸಂಬಂಧಿಸಿದ ಇಷ್ಟೆಲ್ಲಾ ವಿಚಾರಗಳು ಬೆಬಿಲೋನಿಯಾಕ್ಕೆ ಸಂಬಂಧಿಸಿದ್ದರೆ; ಅದೇ ಸಂದರ್ಭದಲ್ಲಿ, ಈಜಿಪ್ಟಿನಲ್ಲಿ ಬೇರೆಯೇ ಆದ ಧಾರ್ಮಿಕ ನಮೂನೆ ರೂಪುಗೊಂಡಿರುವುದು ಇತಿಹಾಸದಿಂದ ತಿಳಿದುಬರುತ್ತದೆ. ಈಜಿಪ್ಟ್ ಮಳೆಯನ್ನು ಆಶ್ರಯಿಸಿದ ದೇಶವಲ್ಲ. ಅದರ ಜೀವ ನೈಲ್ ನದಿ. ಆಫ್ರಿಕಾದ ಉತ್ತರದಿಂದ ದಕ್ಷಿಣಕ್ಕೆ ಹಾಗೂ ಆಫ್ರಿಕಾದ ಮಧ್ಯದಲ್ಲಿ ಅದು ಹರಿಯುತ್ತದೆ. ಅದು ತಂದುಹಾಕುವ ಮೆಕ್ಕಲು ಮಣ್ಣು ಈಜಿಪ್ಟ್ ನೆಲದ ಫಲವತ್ತತೆಯನ್ನು ಹೆಚ್ಚಿಸಿದೆ. ಇಂತಹ ಅನುಕೂಲ ಮೆಸಪಟೋಮಿಯಾಕ್ಕೆ ಇರಲಿಲ್ಲ. ಮೆಸಪಟೋಮಿಯಾದಂತೆ ಮಳೆಯ ದೇವತೆಗಳು, ಗಾಳಿಯ ದೇವತೆಗಳು ಈಜಿಪ್ಟ್ ನಲ್ಲಿ ಕಂಡುಬಂದಿಲ್ಲ. ಆದರೆ ಪ್ರತಿ ಜುಲೈನ ೧೯ರಂದು ತನ್ನ ಮಟ್ಟವನ್ನು ಏರಿಸಿಕೊಳ್ಳುವ ನೈಲ್ ನದಿ ಸೊಥಿಸ್ (Sirus)ನಂತೆ ಕಾಣುತ್ತದೆ. ಆ ಸಂದರ್ಭವನ್ನು ದೈಕರಿಸಿ ನೈಲ್ ನದಿಯನ್ನು ಆರಾಧಿಸಲಾಗುತ್ತಿದೆ.

ಈಜಿಪ್ಟ್‌ನಲ್ಲಿ ಸೂರ್ಯ ಜೀವ ನೀಡುವ ಒಂದು ಶಕ್ತಿ. ಆದುದರಿಂದ ಅದೂ ಒಂದು ಆರಾಧನಾ ವಸ್ತು. ಅಲ್ಲಿ; ಆಕಾಶ ದೇವತೆ ತನ್ನ ಕೈಗಳೆರಡನ್ನೂ ಬಾಗಿಸಿ ಚಾಚಿ ಭೂಮಿಯ ಮೇಲೆ ಆಕಾಶ ಉಂಟು ಮಾಡಿರುವ ಸುಂದರ ಬೀಜ ದೇಹದ ಹೆಣ್ಣು. ಆಕೆಗೆ ಹೊಂದಿಕೊಂಡು ಕೆಳಭಾಗದಲ್ಲಿ ಬರುವುದು ವಾಯು ದೇವತೆ. ಬೀಜ ದೇಹದ ಆಕಾಶದೇವತೆ ಮತ್ತು ಆಕೆಯ ಪ್ರಿಯಕರ ‘ಗೆಬ್’ ಎನ್ನುವ ಭೂದೇವತೆ; ಇಬ್ಬರನ್ನೂ ವಾಯುದೇವತೆ ಬೇರ್ಪಡಿಸುತ್ತದೆ. ಈಜಿಪ್ಟ್‌ನಲ್ಲಿ ಭೂಮಿ ಒಂದು ಗಂಡು ದೇವತೆ. ‘ಒಸಿರಿಸ್’ನಿಂದ ನೇರವಾಗಿ ಇಳಿದುಬಂದು ಸತ್ತನಂತರ ದೇವತ್ವದ ಪಟ್ಟಪಡೆದ ರಾಜರುಗಳ ಸಂತತಿಯ ಮೂಲುಪುರುಷರೆಂದರೆ ಭೂಮಿ ಮತ್ತು ಆಕಾಶ ಎಂದು ತಿಳಿದುಬರುತ್ತದೆ.

ಈಜಿಪ್ಟ್‌ನ ಪುರಾಣ ಅನೇಕ ದೇವತೆಗಳಿಂದ ತುಂಬಿದೆ. ಎಂಭತ್ತಕ್ಕಿಂತ ಹೆಚ್ಚು ದೇವತೆಗಳ ಹೆಸರುಗಳು ತಿಳಿದುಬಂದಿದೆ. ಪ್ರಾರಂಭದ ಕಾಲದಲ್ಲಿ ಈಜಿಪ್ಟ್ ಅನೇಕ ಸಣ್ಣ ಸಣ್ಣ ಮಾನವ ಸಮಾಜಗಳಿಂದ ಕೂಡಿತ್ತು. ಆ ಎಲ್ಲ ಸಮಾಜಗಳೂ ಜೀವನಕ್ಕೆ ಆಧಾರವಾಗಿರುವ ನೈಲ್ ನದಿಯ ದಡದ ಉದ್ದಕ್ಕೂ ನೆಲೆನಿಂತಿದ್ದವು. ಪ್ರತಿ ಮಾನವ ಸಮಾಜವೂ ದೇವರ ಅಥವಾ ದೇವತೆಗಳ ಕುಟುಂಬವನ್ನೇ ಹೊಂದಿತ್ತು. ಕಾಲಕ್ರಮದಲ್ಲಿ ಕೆಲವು ದೇವತೆಗಳು ಒಂದುಗೂಡಿ ಉಳಿದವುಗಳ ಮೇಲೆ ಪ್ರಭುತ್ವ ಸಾಧಿಸಿದವು. ಕೆಲವು ದೇವತೆಗಳು ಬೇರೆಯವನ್ನು ಪ್ರತಿರೋಧವಿಲ್ಲದೆ ಒಪ್ಪಿಕೊಂಡವು. ದೇವರು ಅಥವಾ ದೇವತೆಗಳು ಮನುಷ್ಯ ರೂಪದ ಜೊತೆಗೆ ಪ್ರಾಣಿಗಳ, ಪಕ್ಷಿಗಳ, ಕೀಟಗಳ ರೂಪವನ್ನೂ ಪಡೆದವು. ‘ಹೊರಸ್’ ಎನ್ನುವ ದೇವತೆಯನ್ನು ಗಿಡುಗನಂತೆ ಚಿತ್ರಿಸಿದೆ. ಪುರಾತನ ಚಂದ್ರದೇವತೆಯಾದ ‘ಥೊತ್’ ಅನ್ನು ನಾಯಿ ಮುಖದ ಮಂಗನಂತೆ ಚಿತ್ರಿಸಿದೆ.

ದೇವರು ಅಥವಾ ದೇವತೆಗಳನ್ನೂ ಸೇರಿಸಿ ಸೃಷ್ಟಿಯಲ್ಲಿರುವ ಸಕಲವನ್ನೂ ತನ್ನ ಒಂದು ಮಾತಿನಿಂದ ಸೃಷ್ಟಿಸಿದ್ದಾನೆಂದು ಮೆಂಫಿಸ್ (Memphis)ನ ‘ಥಾಹ್’ (Ptah) ದೇವತೆಯನ್ನು ಪೂಜಿಸುತ್ತಾರೆ. ಗ್ರೀಕರು ‘ಹೆಲಿಯೊಪೊಲಿಸ್’ ಎಂದು ಕರೆಯುವ, ‘ಆನ್’ ನಗರದ ಹತ್ತಿರವಿರುವ ಸೂರ್ಯದೇವ (Atum); ‘ರ’ (Ra)ನೊಂದಿಗೆ ಸೇರಿ ‘ಆಟಮ್‌ರ’ ಆದವನನ್ನು ಸೃಷ್ಟಿಕರ್ತ ಎಂದು ನಂಬಲಾಗಿದೆ.

ಹರ್ಮಪೊಲಿಸ್ (Hermopolis)ನ ಹತ್ತಿರ ‘ಥೊತ್’ ಎನ್ನುವ ನಾಯಿ ಮುಖದ ಮಂಗನಾಕೃತಿಯ ಚಂದ್ರದೇವತೆ ಆದಿ ವಿಶ್ವಸೃಷ್ಟಿಯ ಅಂಡವನ್ನು ಹಾಕಿದ; ಅದರಿಂದ ಸೂರ್ಯದೇವತೆ ಹುಟ್ಟಿದ; ನಂತರ ಥೆಬೇಸ್ ಅಮಾನ್‌ನ ಹತ್ತಿರ ‘ರ’ (Ra)ನೊಂದಿಗೆ ಸೇರಿ ‘ಅಮಾನ್‌ರ’ ಆದ. ಅವನನ್ನು ಸೃಷ್ಟಿಕರ್ತ ದೇವತೆ ಎಂದು ಪರಿಗಣಿಸಲಾಯಿತು. ‘ಅಮಾನ್‌ರ’ ದೇವತೆ ಒಂದು ಬಾತುಕೋಳಿ ರೂಪಪಡೆದು ವಿಶ್ವಸೃಷ್ಟಿಗೆ ಕಾರಣವಾದ ಮೊಟ್ಟೆ ಇಟ್ಟದ್ದು ಇಂತಹ ಪರಿಗಣನೆಗೆ ಪ್ರಮುಖ ಕಾರಣವಾಯಿತು.

ಮರಣಾನಂತರದ ಬಗ್ಗೆ ತಿಳಿಸುವ ಶ್ರೀಮಂತ ಪುರಾಣಕ್ಕೆ ಪುರಾತನ ಈಜಿಪ್ಟ್ ದೊರೆ ಪರೋಹ್ ದೈವತ್ವದ ಸ್ಥಾನ ಪಡೆದಿರುವುದೇ ಆಧಾರ. ಸುಗಂಧ ದ್ರವ್ಯಗಳನ್ನು ಪೂಸಿ, ಸಂಸ್ಕಾರಗಳನ್ನು ಮಾಡುವುದರ ಮೂಲಕ ಪೈರೋಹ್‌ನ ದೇಹವನ್ನು ಹೂಳಿ ರಕ್ಷಿಸಿಟ್ಟಿದ್ದರಿಂದ; ಅವನು ಪ್ರಪಂಚದಲ್ಲಿ ಒಸಿರಿಸ್ ದೈವವಾದ. ಅದೇ ಕಾಲದಲ್ಲಿ; ಅಮರತ್ವ ಪಡೆಯುವ ಅವಕಾಶ ಗೌರವಾನ್ವಿತ ರಾಜ-ಮಹಾರಾಜರಿಂದ ಸಾಮಾನ್ಯ ಮನುಷ್ಯನಿಗೂ ವಿಸ್ತಾರವಾಯಿತು.

* * *

ದೇವರು ಅಥವಾ ದೇವತೆಗಳ ಹುಟ್ಟಿನ ಬಗ್ಗೆ ಪುರಾತನ ಈಜಿಪ್ಟ್ ಮತ್ತು ಬೆಬಿಲೋನಿಯಾಗಳ ನಮೂನೆಗಳಂತೆ ಗ್ರೀಸ್‌ನ ದೇವದೇವತೆಗಳ ಬಗ್ಗೆ ಹೇಸಿಯಾಡ್ ಗಲಿಬಿಲಿಯಿಂದಲೇ ಪ್ರಾರಂಭಿಸುತ್ತಾನೆ.

ಸುಮಾರು ಕ್ರಿ.ಪೂ.೭೦೦ರಲ್ಲಿ ಬರೆದ ಹೇಸಿಯಾಡ್‌ನ ‘ದೇವಸಂತತಿ’ (Theogony) ಎನ್ನುವ ಕೃತಿಯಲ್ಲಿ ಸೃಷ್ಟಿಗೆ ಸಂಬಂಧಿಸಿದ ಕಥೆಗಳಿವೆ. ಅವುಗಳಲ್ಲಿ ಆದಿಗಳಿಗೆ ಜೀವಂತಿಕೆ ಇದೆ. ಯಾರಿಂದ ಎಲ್ಲವೂ ಸೃಷ್ಟಿಯಾಯಿತೋ ಅಂಥಾ ಭೂಮಿತಾಯಿ ‘ಗೈಯಾ’ ಬಂದಳು. ಹೊಸ ಶಿಲಾಯುಗದಲ್ಲಿ ಹೆಚ್ಚಾಗಿ ಕಂಡುಬಂದ ಬಸಿರಾದ ಸ್ತ್ರೀಯರ ಚಿತ್ರಗಳು ಪ್ರಕಟಪಡಿಸುವಂತೆ ಹೇಸಿಯಾಡ್‌ನಲ್ಲಿ ಗೈಯಾ ಕಂಡುಬಂದಿರುವುದು ಹಿಂದಿನವರ ಬದುಕಿನ ಬಗ್ಗೆ ಪ್ರಾರಂಭದಲ್ಲಿ ಇದ್ದ ನಂಬಿಕೆಗಳನ್ನು ಸೂಚಿಸುತ್ತವೆ.

ಭೂಮಿತಾಯಿ ‘ಗೈಯಾ’ಳಿಂದ ‘ಮೌಂಟ್ ಒಲಂಪಸ್’ ಮತ್ತು ಪಾತಾಳ ಲೋಕದ ದೇವತೆಗಳಲ್ಲೇ ಪ್ರಮುಖವಾದ ಪ್ರೇಮದೇವತೆ ‘ಇರೋಸ್’ ಉದಯಿಸಿದರು. ಮೇಲಿನ ನಕ್ಷತ್ರ ಲೋಕದ ಸ್ವರ್ಗವನ್ನು, ತಗ್ಗು-ದಿಣ್ಣೆಗಳ ಪರ್ವತ ಶ್ರೇಣಿಯ ತೆರೆಗಳನ್ನು, ನಿರಂತರ ಹರಿಯುವ ನದಿಗಳನ್ನು ಗೈಯಾ ಉಂಟು ಮಾಡಿದಳು. ಆಕೆಯ ಗಲಿಬಿಲಿಯಿಂದ ‘ಇರೆಬಸ್’ ಎನ್ನುವ ರಾತ್ರಿ, ಇರೆಬಸ್‌ನಿಂದ ಹಗಲು ಮತ್ತು ‘ಈಥರ್’ ಎನ್ನುವ ವಾಯು ಉಂಟಾದವು. ‘ಗೈಯಾ’ ಅಕಾಶದೊಂದಿಗೆ ಭೋಗಿಸಿದ್ದರಿಂದ ಸಾಗರಗಳು ಉಂಟಾದವು ಎನ್ನುವ ನಂಬಿಕೆಗಳು ಗ್ರೀಕರಲ್ಲಿವೆ.

ಅಪೊಲೋ (Apollo), ಅಥೇನಾ (Athena), ಅಪ್‌ರೋಡೈಟ್ (Aphrodite), ಹರ್‌ಮೀಸ್ (Hermes) ಮುಂತಾದ ಹೆಸರಿನ ದೇವತೆಗಳ ಸಮೂಹವನ್ನೇ ಹೇಸಿಯಾಡ್ ನೀಡುತ್ತಿದೆ. ಒಲಂಪಸ್ ಪರ್ವತದ ಮೇಲೆ ಜೀವಿಸಿರುವ ದೇವತೆಗಳ ರತ್ನದ ಪಟ್ಟಿಯ ಮೇಲೆ ದಾಖಲಾಗಿರುವ ಗ್ರೀಕ್ ಧರ್ಮದ ಬಗ್ಗೆ ಹೋಮರ್ ಮತ್ತು ಹೇಸಿಯಾಡ್ ನ ಬರಹಗಳು ಬಹಿರಂಗಪಡಿಸುತ್ತಿವೆ. ಸಾಂಪ್ರದಾಯಿಕವಾದ ಗ್ರೀಕ್ ಧರ್ಮದಲ್ಲಿ ಹನ್ನೆರಡು ದೇವತೆಗಳನ್ನು ಮಾನ್ಯಮಾಡಲಾಗಿದೆ. ಏಳು ಗಂಡು, ಐದು ಹೆಣ್ಣು. ಜೀಯಸ್ (zeus), ಪೋಸಿಯಡಾನ್ (Poseidon), ಹರ್ಮೀಸ್ (Hermes), ಏರ್ಸ್ (Ares), ಅಪೊಲೋ (Apollo), ಹೆಪಯಿಸ್ಟೋಸ್ (Hephaistos) ಮತ್ತು ದಿಯೋನ್‌ಯುಸಸ್ (Dionysus) ಗಂಡುದೇವತೆಗಳಾದರೆ; ಹೀರಾ (Hera), ಆರ್‌ಟೆಮಿಸ್ (Artemis), ಆಪ್ರೋ (Aphrodite), ಅಥೇನಾ (Athena) ಮತ್ತು ಡಿಮೀಟರ್ (Demeter) ಎನ್ನುವವು ಹೆಣ್ಣು ದೇವತೆಗಳು. ಪ್ರತಿ ದೇವತೆಯೂ ತನ್ನದೇ ಆದ ಗಡಿ ವ್ಯಾಪ್ತಿಯನ್ನು ಹೊಂದಿವೆ. ಜೀಯಸ್ ಸ್ವರ್ಗದ ಅಧಿದೇವತೆಯಾದರೆ, ಹೀರಾ ಅವನ ಮಡದಿ. ಪೋಸಿಯಾಡಾನ್ ಸಮುದ್ರದೇವತೆ. ಹೀಗೆ ಒಂದೊಂದಕ್ಕೂ ಒಂದೊಂದು ದೇವತೆ. ಅವರವರ ಗಡಿ ನಿಯಂತ್ರಣ ವ್ಯಾಪ್ತಿಯನ್ನು ಯಾರಾದರೂ ಉಲ್ಲಂಘಿಸಿ ಪ್ರವೇಶಿಸಿದರೆ ಕೊಡುವ ಶಿಕ್ಷೆ ಅಥವಾ ಪ್ರಶಸ್ತಿಗಳನ್ನು ಆಯಾ ದೇವತೆಗಳೇ ನಿರ್ಧರಿಸುತ್ತಾರೆ. ಒಲಂಪಿಯನ್ ದೇವತೆಗಳ ದೇವಾಲಯಗಳು ಗ್ರೀಸ್ ದೇಶದ ಅಲ್ಲಲ್ಲಿ ಕಂಡುಬರುತ್ತಿವೆ.

ಜಾನ್ ಬಿ.ನಾಸ್ ಸೂಚಿಸುವಂತೆ; ‘‘ಜೀಯಸ್ ಬರೀ ಒಲಂಪಸ್‌ಗೆ ಮಾತ್ರ ಸಂಬಂಧಿಸಿದಲ್ಲ. ಆರ್ಕೆಡಿಯಾದಲ್ಲಿ ಆತ ಜೀಯಸ್ ಲೈಕಯೋಸ್ ಆಗಿದ್ದರೆ; ಗ್ರೀಸ್‌ನ ದಕ್ಷಿಣದ ಥೆಸ್ಸಲೆಯಲ್ಲಿ ಜೀಯಸ್ ಲೆಫಿಸ್ಟಿಯೋಸ್ ಆಗಿದ್ದ. ಬಯೋಟಿಯಾದಲ್ಲಿ ಜೀಯಸ್ ಕಿಥೈರಾನ್. ಹೀಗೆ ಗ್ರೀಸ್‌ನ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಜೀಯಸ್ ಪ್ರಖ್ಯಾತ ದೇವತೆಯಾಗಿದ್ದ. ಬೇರೆ ಬೇರೆ ಜಿಲ್ಲಾ ಪ್ರದೇಶಗಳಲ್ಲಿ ಜೀಯಸ್ ಸಂತಾನ ನೀಡುವ ದೇವತೆಯಾಗಿದ್ದ. ಕನಿಷ್ಠ ಮೂರು ಭೂಗತ ಸ್ಥಳಗಳಲ್ಲಿ ದೇವತೆಯಾಗಿದ್ದ. ಜೀಯಸ್ ಪೋಲಿಯಸ್ ಹೆಸರಿನಿಂದ ಅನೇಕ ನಗರ-ರಾಜ್ಯಗಳ ರಕ್ಷಕನಾಗಿದ್ದ. ಅಥೆನ್ಸ್‌ನಲ್ಲಿ ಆ ದೇವತೆ ಜೀಯಸ್ ಪರಟ್ರಿಯೋಸ್. ದಿಡೋನಾದಲ್ಲಿ ಜೀಯಸ್ ಮೋಡಗಳನ್ನು ಉಂಟು ಮಾಡುವವನು, ಹೊಳೆಯುವ ಸಿಡಿಲನ್ನು ಹೊತ್ತು ಮಳೆ ಉಂಟುಮಾಡುವವನು, ಕೆಲವು ಸಲ ಆ ಸಿಡಿಲಿನಿಂದ ಮನುಷ್ಯರ ದುಷ್ಟತನವನ್ನು ಶಿಕ್ಷಿಸುವ ನ್ಯಾಯಕರ್ತನಾಗಿದ್ದ.’’ ಹೀಗೆ ಬೇರೆ ದೇವತೆಗಳೂ ಬೇರೆ ಬೇರೆ ಪಾತ್ರವಹಿಸುತ್ತಿದ್ದವು.

ಒಲಂಪಿಯಾದಲ್ಲಿರುವ ಜೀಯಸ್‌ನ ದೇವಸ್ಥಾನ, ಡೆಲ್‌ಫಿಯಾದಲ್ಲಿರುವ ಅಪೊಲೋ ದೇವಸ್ಥಾನಗಳನ್ನು ಗ್ರೀಸ್ ದೇಶದ ಎಲ್ಲಾ ಭಾಗದ ಗ್ರೀಕರೂ ಸಂದರ್ಶಿಸುತ್ತಿದ್ದರು. ಇದು ಅಲೌಕಿಕ ಶಕ್ತಿಗಳ ಬಗ್ಗೆ ಗ್ರೀಕರಲ್ಲಿ ಇದ್ದ ಆಶ್ರಯ ಗುಣವನ್ನು ಸೂಚಿಸುತ್ತದೆ; ಜೊತೆಗೆ ಮಾನವಿಯ ಸಂಬಂಧವನ್ನು ಗಟ್ಟಿಗೊಳಿಸಿರುವುದು ಅವರು ಹುಟ್ಟುಹಾಕಿರುವ ಒಲಂಪಿಕ್ ಕ್ರೀಡೆಗಳಿಂದ ಮನಗಾಣಬಹುದಾಗಿದೆ.

* * *

ಇಟಲಿಗೆ ಪ್ರವೇಶಿಸುವ ಯಾರು ಬೇಕಾದರೂ ಅವರಿಗೆ ಇಷ್ಟಬಂದ ದೇವರು ಅಥವಾ ದೇವತೆಯನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದು. ಇದರ ಪರಿಣಾಮವಾಗಿ ದೇವರು ಅಥವಾ ದೇವತೆಗಳಿಂದ ರೋಮ್ ತುಂಬಿದೆ. ಉತ್ತಮ ಪ್ರಾರಂಭಕ್ಕೆ ಹಾಗೂ ವರ್ಷದ ಪ್ರಾರಂಭಿಕ ಮಾಸದ (ಜನವರಿ) ಹೆಸರಿಗೂ ಕಾರಣವಾಗಿರುವ ದೇವತೆ ‘ಜಾನುಸ್ ’ (Janus)ನಂಥ; ಹೆಬ್ಬಾಗಿಲುಗಳ ಬಳಿ ಇರುವ ದ್ವಾರಪಾಲಕ ದೇವತೆ ‘ಪೋರ್‌ಟುನಸ್’ (Portunus)ನಂಥ; ಹಾಗೂ ಪ್ರತಿ ಫೆಬ್ರವರಿ ೨೩ ರಂದು ಸರಹದ್ದು ಕಲ್ಲುಗಳಿಗೆ ಭಕ್ತಿಯಿಂದ ಎಣ್ಣೆ ಹಚ್ಚಿ, ಹೂ ಮುಡಿಸಿ, ಬಲಿ ನೀಡಿ ಅವುಗಳ ಅಸ್ತಿತ್ವವನ್ನು ಮಾನ್ಯ ಮಾಡುವ ಸರಹದ್ದು ದೇವತೆ ‘ಟರ್ಮಿನಸ್’ (Terminous)ನಂಥ ಅಸಂಖ್ಯಾತ ಸಣ್ಣ ಸಣ್ಣ ದೇವತೆಗಳನ್ನು ರೋಮ್‌ನಲ್ಲಿ ಕಾಣಬಹುದು.

‘ಪ್ರಿಯಾಪಸ್ ’ (Priyapus) ಫಲ ನೀಡುವ ಅಥವಾ ಸಂತಾನಭಾಗ್ಯ ನೀಡುವ ದೇವತೆ ಆಗಿದ್ದರೆ; ‘ಸೈಲ್ವನಸ್’ (Sylvenus) ಉಳುಮೆ ಮತ್ತು ಬಡಗಿತನಕ್ಕೆ ಸಂಬಂಧ ಹೊಂದಿದೆ. ಈ ದೇವತೆಗಳು ಎಲ್ಲೆಲ್ಲೂ ಕಂಡುಬರುವ ‘ನುಮಿನ’ ಅಥವಾ ‘ಶಕ್ತಿಗಳಲ್ಲಿ’ ಕೆಲವು ಮಾತ್ರ ಆಗಿವೆ.

ದೈವಶಕ್ತಿಗಳು ಮೃತರೊಂದಿಗೆ ಸಹಯೋಗ ಹೊಂದಿವೆ. ಮೃತ ಉತ್ತಮರ ಆತ್ಮಗಳೆ ‘ಮನೇಸ್ ’ಗಳಾದರೆ; ದುಷ್ಟ ಮೃತರ ಆತ್ಮಗಳೇ ‘ಲೆಮ್ಯೂರ್‌ಗಳು’. ಗ್ರೀಕರಿಂದ ಎರವಲು ಪಡೆದ ‘[flow]ಟೋ’ ಇಲ್ಲಿ ನರಕದ ದೇವತೆ. ಜೊತೆಗೆ, ಪ್ರತಿ ರೋಮನ್ನರ ಕುಟುಂಬದಲ್ಲೂ ಒಬ್ಬ ‘ಲಾರ್ ’ (Lar) ಹೆಸರಿನವನು ಇರುತ್ತಾನೆ ಅಥವಾ ಕಂಡುಬರುತ್ತಾನೆ. ‘ಲಾರ್’ ಎನ್ನುವುದು ರೋಮನ್ನರ ಮನೆ ದೇವತೆ ಹೆಸರು. ಹಿಂದಿನವರ ಆತ್ಮಗಳೇ ‘ಲಾರ್’ ಆಗಿವೆ. ಒಲೆ ಮತ್ತು ಉಗ್ರಾಣದ ರಕ್ಷಕ ದೇವತೆಗಳು ಕೆಲವು ಕುಟುಂಬ (ರೋಮನ್)ಗಳಲ್ಲಿ ಮನೆದೇವತೆಗಳಾಗಿವೆ.

ಪ್ರಮುಖ ದೇವತೆಗಳಿಗೆ ಹೆಚ್ಚು ಮಾನ್ಯತೆ ಇತ್ತು. ಅವುಗಳ ಪುರಾಣ ಕಥೆಗಳಿಂದ ಅವುಗಳ ಮೂಲ ಸ್ವಭಾವದ ಭೇದ ಕಂಡುಹಿಡಿಯುವುದು ಕಷ್ಟ. ರೋಮ್‌ನ ದೇವತೆಗಳು ಗ್ರೀಸ್‌ನಲ್ಲಿ ಯಾವ ಯಾವ ಹೆಸರುಗಳಿಂದ ಪ್ರಖ್ಯಾತವಾಗಿದ್ದವು ಎನ್ನುವುದನ್ನು ಪರಿಶೀಲಿಸೋಣ. ರೋಮ್‌ನ ‘ಜ್ಯೂಪಿಟರ್’ ದೇವತೆ ಗ್ರೀಕ್ ನಲ್ಲಿ ‘ಜೀಯಸ್’ ಹೆಸರಿನಿಂದ ಪ್ರಖ್ಯಾತವಾಗಿತ್ತು. ಹೀಗೆ ‘ಜುನೋ’ – ‘ಹೀರಾ’ ಹೆಸರಿನಿಂದ, ‘ನೆಪ್ಚೂನ್’ – ‘ಪೊಸಿಯಿಡಾನ್ ’ ಹೆಸರಿನಿಂದ ‘ವೆಸ್ಟಾ’-‘ಹೆಸ್ಟಿಯಾ’ ಹೆಸರಿನಿಂದ, ‘ಸ್ಯಾಟರ್ನ್’ – ‘ಕ್ರೋನಸ್ ’ ಹೆಸರಿನಿಂದ ‘ಮಾರ್ಸ್ ’ ‘ಏರೀಸ್’ ಹೆಸರಿನಿಂದ ‘ಮಿನರ್ವ’- ‘ಅಥೇನಾ’ ಹೆಸರಿನಿಂದ ‘ನಸ್’-‘ಅಫ್ರೋ’ ಹೆಸರಿನಿಂದ ‘ಮರ್‌ಕ್ಯೂರಿ’- ‘ಹರ್ಮೀಸ್’ ಹೆಸರಿನಿಂದ ‘ಡಯಾನಾ’-‘ಆರ‍್ಟೆಮಿಸ್’ ಹೆಸರಿನಿಂದ ‘ವಲಾನ್’-‘ಹಯೇಫಿಸ್ಟಸ್’ ಹೆಸರಿನಿಂದ ಮತ್ತು ‘ಸೆರೀಸ್’-‘ಡಿಮೀಟರ್’ ಹೆಸರಿನಿಂದ ಪ್ರಖ್ಯಾತವಾದ ದೇವತೆಗಳಾಗಿವೆ. ರೋಮ್‌ನ ಸರ್ವ ದೇವತೆಗಳಲ್ಲಿ ‘ಅಪೆಲೋ’ ದೇವತೆ ಮಾತ್ರ ಗ್ರೀಕ್‌ನ ತನ್ನ ಮೂಲ ಹೆಸರನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಉಳಿದೆಲ್ಲ ದೇವತೆಗಳೂ ಗ್ರೀಕ್‌ತನವನ್ನು ಕಳೆದುಕೊಂಡು ರೋಮನೀಕರಣ ಆಗಿರುವುದು ಗಮನಿಸಬೇಕಾದ ಅಂಶವಾಗಿದೆ. ಆದುದರಿಂದ ಗ್ರೀಕ್‌ನ ಪುರಾಣಗಳೆಲ್ಲ ಕಾಲಾನುಕ್ರಮದಲ್ಲಿ ರೋಮನ್ ಪುರಾಣಗಳಾಗಿರುವುದರಲ್ಲಿ ಯಾವ ಅತಿಶಯವೂ ಇಲ್ಲ.

* * *

ಬೆಬಿಲೋನಿಯಾವು ಜ್ಯೋತಿಷ್ಯ ಶಾಸ್ತ್ರದ ಕೇಂದ್ರ ಸ್ಥಾನವಾಗಿತ್ತು ಎನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ. ಬೆಬಿಲೋನಿಯನ್ನರು ಜಗತ್ತಿನ ಘಟನೆಗಳಿಗೂ ನಕ್ಷತ್ರ ಅಥವಾ ಗ್ರಹಗಳಿಗೆ ಸಂಬಂಧ ಕಲ್ಪಿಸಿದ್ದರಿಂದ; ವ್ಯಕ್ತಿಯ ವೈಯಕ್ತಿಕ ಭವಿಷ್ಯ ಧರ್ಮದ ಕೇಂದ್ರಾಸಕ್ತಿಯಾಗಲು ಕಾರಣವಾಯಿತು. ಈ ಹೊಸ ಬೆಳವಣಿಗೆ ರೋಮ್‌ನಲ್ಲಿ ‘ರಾಜಾರಾಧನೆ’ ಎನ್ನುವ ಹೊಸ ಪರಂಪರೆಯ ಹುಟ್ಟಿಗೆ ಕಾರಣವಾಯಿತು. ರಾಜನು ಸತ್ತಬಳಿಕ ಆತನ ಆರಾಧನೆಯನ್ನು ಸಾಮ್ರಾಜ್ಯದ ಅಧಿಕೃತ ಆರಾಧನೆಯನ್ನಾಗಿ ಮಾಡಲಾಗುತ್ತಿತ್ತು. ಆ ಮೂಲಕ ಆತ ಪ್ರಜೆಗಳ ಹಿತಚಿಂತಕನಾದ ‘ದೇವರು’ ಎಂದು ನಂಬಲಾಗುತ್ತಿತ್ತು. ರಾಜನು ದೈವಿಕ ಸ್ವರೂಪನೆಂದೂ, ಪರಮಾತ್ಮನಾದ ಜ್ಯೂಸ್ ಅಥವಾ ಜ್ಯೂಪಿಟರ್ ನಿಂದ ಆಯ್ಕೆಯಾದವನೆಂದೂ ಅಗ ನಂಬಿಕೆ ಇತ್ತು. ಸ್ಥೂಲವಾಗಿ ಹೇಳಬೇಕೆಂದರೆ; ಗ್ರೀಕರ ಪ್ರಕಾರ ಮನುಷ್ಯ ಮತ್ತು ದೇವರ ನಡುವೆ ತೋರಿಸುವಂತಹ ಅಂತರವೇನೂ ಇಲ್ಲ. ಗ್ರೀಕರ ಪಿಂಡಾರಸ್ ಎನ್ನುವ ತತ್ವಜ್ಞಾನಿ ‘‘ದೇವರು ಮತ್ತು ಮನುಷ್ಯರು ಒಂದೇ ಗುಂಪಿಗೆ ಸೇರಿದವರು, ಒಂದೇ ತಾಯಿಯಿಂದ ನಾವು ಉಸಿರನ್ನು ಪಡೆದುಕೊಂಡೆವು’’ ಎಂದು ಹೇಳಿದ್ದಾನೆ. ದೇವರು ಅವತಾರದ ಮೂಲಕ ಮಾನವ ಪ್ರಪಂಚವನ್ನು ಬೋಧಿಸಬಹುದು ಎನ್ನುವ ನಂಬಿಕೆಯೂ ಇತ್ತು. ಇನ್ನು ಈಜಿಪ್ಟ್‌ನಲ್ಲಿ; ರಾಜನನ್ನು ದೇವರ ಅವತಾರ ಎಂದು ನಂಬಲು ಪ್ರಾರಂಭಿಸಿದರು.

ರಾಜಾರಾಧನೆ ಎನ್ನುವುದು ಇನ್ನೊಂದು ಅರ್ಥದಲ್ಲಿ ನಾಯಕಾರಾಧನೆಯೇ ಆಗಿರುತ್ತದೆ. ಇಬ್ಬರಲ್ಲೂ ಶಕ್ತಿಯೇ ಪ್ರಧಾನವಾಗಿರುತ್ತದೆ. ಎಲ್ಲರಿಗಿಂತ ಹೆಚ್ಚು ಶಕ್ತಿ ಹೊಂದಿರುವವನು ರಾಜ ಅಥವಾ ನಾಯಕ ಆಗುತ್ತಾನೆ. ರಾಜ ಅಥವಾ ನಾಯಕನಾದವನು ತನ್ನ ಆ ಶಕ್ತಿಯನ್ನು ಸಾಮಾನ್ಯ ಜನಹಿತಕ್ಕೆ ಬಳಸಿದಾಗ ಅವನು ‘ರಾಜಾ ಪ್ರತ್ಯಕ್ಷ ದೇವತಾ’’ ಆಗುತ್ತಾನೆ. ಇಂಥವರು ತಮ್ಮ ಸಾವಿನ ನಂತರ ಅಲೌಕಿಕರಾಗಿ ‘ದೇವತೆ’ ಪಟ್ಟ ಪಡೆದರೆ; ಮತ್ತೆ ಕೆಲವು ಸಾಮಾನ್ಯ ಜನ ಜೀವಿಸಿರುವಾಗಲೇ ಪವಾಡ, ಭವಿಷ್ಯ, ತಪಸ್ಸು, ಮುಂತಾದವುಗಳ ಮೂಲಕ ಅಂತಹ ಶಕ್ತಿ ಪಡೆದು ಲೌಕಿಕದಲ್ಲೇ ಅಲೌಕಿಕ ಪಟ್ಟಪಡೆದು ದೇವತೆಗಳಾಗಿರುತ್ತಾರೆ. ಇಲ್ಲಿ ತಂತ್ರಗಾರಿಕೆ ಶಕ್ತಿಯ ಮುಖವಾಡ ಧರಿಸಿರುತ್ತದೆ ಎನ್ನುವುದು ಅಷ್ಟೇ ಸ್ಪಷ್ಟ. ಈ ಅಭಿಪ್ರಾಯ ‘ತಪಸ್ಸಿಗೆ’ ಅನ್ವಯವಾಗಲಾರದು.

* * *

ಪೂರ್ವ ಇರಾಕ್‌ನ ನಿವೇಶನವೊಂದರಲ್ಲಿ ಹೊಸ ಶಿಲಾಯುಗ (ಕ್ರಿ.ಪೂ.೭೦೦೦ ಮತ್ತು ೬೫೦೦ರ ಮಧ್ಯೆ)ಕ್ಕೆ ಸೇರಿದ ನೆಲೆನಿಂತ ಬದುಕಿಗೆ ಸಂಬಂಧಿಸಿದ ಸಾಕ್ಷ್ಯಗಳು ದೊರೆತಿವೆ. ನುಣ್ಣಗೆ ಕುಟ್ಟಿ ಪುಡಿಮಾಡಿದ ಜೇಡಿಮಣ್ಣನ್ನು ವಸತಿಗಳ ತಳಪಾಯಗಳಿಗೆ ಹಾಗೂ ಒಲೆಗಳಿಗೆ ಉಪಯೋಗಿಸಿರುವುದು; ಪ್ರಾಣಿಗಳ ಎಲುಬುಗಳಿಂದ ಚಿತ್ತಾರದ ಮತ್ತು ಬಳಕೆಯ ಉಪಕರಣಗಳನ್ನು ತಯಾರಿಸಿರುವುದರ ಬಗ್ಗೆ ಸಾಕ್ಷ್ಯಗಳು ದೊರೆತಿವೆ. ಕುರಿ, ದನ, ಹಂದಿ, ನಾಯಿ ಮುಂತಾದ ಪ್ರಾಣಿಗಳ ಸಾಕಾಣಿಕೆ ಬಗ್ಗೆ ಸ್ಪಷ್ಟ ಸಾಕ್ಷ್ಯಗಳು ದೊರೆತಿವೆ. ಒಟ್ಟಿನಲ್ಲಿ ಇವು ನೆಲೆನಿಂತ ಸಂಸ್ಕೃತಿಯ ಪ್ರಾರಂಭವನ್ನು ಸೂಚಿಸುತ್ತವೆ.

ಮಾನವ ತನ್ನ ಆಹಾರಕ್ಕಾಗಿ ಅಲೆಮಾರಿತನವನ್ನು ಕಡಿಮೆ ಮಾಡಿ ನದಿಯ ಬಯಲುಗಳಲ್ಲಿ ನೆಲೆನಿಂತು, ವ್ಯವಸಾಯ ಮತ್ತು ಪಶುಪಾಲನೆ ಮುಂತಾದವನ್ನು ಪ್ರಾರಂಭಿಸಿ, ವಸತಿಗಳನ್ನು ನಿರ್ಮಿಸಿಕೊಂಡಾಗ; ತಾನು ನಂಬಿದ ದೇವರು ಮತ್ತು ದೇವತೆಗಳಿಗೂ ವಸತಿಗಳನ್ನು ನಿರ್ಮಿಸಿ ನೆಲೆಗೊಳಿಸುವುದನ್ನು ಮರೆಯಲಿಲ್ಲ. ಮಾನವ ವಸತಿ ಹುಲ್ಲಿನ ಗುಡಿಸಲಿನಿಂದ ಪ್ರಾರಂಭವಾಗಿ ಕಲ್ಲಿನ ಅಥವಾ ಕಾಂಕ್ರೀಟಿನ ಮನೆಗಳವರೆಗೆ ಅಥವಾ ಮಣ್ಣಿನಿಂದ ಪ್ರಾರಂಭವಾಗಿ ಗಾರೆ, ಸಿಮೆಂಟಿನವರೆಗೆ ಮುಂದುವರೆದಂತೆ; ದೇವರು ಅಥವಾ ದೇವತೆಗಳ ಆವಾಸಸ್ಥಾನಗಳೂ ಅದೇ ದಾರಿಯಲ್ಲೇ ಸಾಗಿವೆ.

ಕ್ರಿ.ಪೂ.ಸುಮಾರು ೪೦೦೦ ವರ್ಷಗಳ ಹಿಂದಿನ ಧಾರ್ಮಿಕ ಕಟ್ಟಡಗಳನ್ನು ಮೆಸಪಟೋಮಿಯಾದ ಇರಿಡು (Eridu) ಎನ್ನುವ ಸ್ಥಳದಲ್ಲಿ ಉತ್ಖನನ ಮಾಡಲಾಗಿದೆ. ಬರೀ ಬುನಾದಿ ಮತ್ತು ನುಣುಪು ಮಾಡಿದ ಗಾರೆ ನೆಲ ಮಾತ್ರ ಉಳಿದಿದೆ. ಇದರ ಆಧಾರದ ಮೇಲೆ ಕಟ್ಟಡದ ರಚನೆ, ಉಪಯೋಗಿಸಿರುವ ವಸ್ತುಗಳು ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ, ಕಟ್ಟಡವನ್ನು ಯಾವ ಉದ್ದೇಶಕ್ಕಾಗಿ ಕಟ್ಟಲಾಗಿತ್ತು? ಎನ್ನುವುದನ್ನು ತಿಳಿದುಕೊಳ್ಳಬಹುದು. ಅದು ಪೂರ್ಣವಾಗಿ ದೇವಾಲಯದ ಕಟ್ಟಡ ಎನ್ನುವುದು ವಾಸ್ತುತಜ್ಞರ ಅಭಿಪ್ರಾಯ. ಆ ದೇವಾಲಯ ಕಾಲಾನುಕ್ರಮದಲ್ಲಿ ಭುಮಿಯಲ್ಲಿ ಸೇರಿಹೋಗಿ ಮೇಲೆಲ್ಲಾ ಮಣ್ಣು ಮುಚ್ಚಿಹೋಗಿ ಗಟ್ಟಿದಿಬ್ಬವಾಗಿದೆ. ಎಷ್ಟೋ ಕಾಲಾನಂತರ ಅದೇ ಮಣ್ಣಿನ ಗಟ್ಟಿ ದಿಬ್ಬದ ಮೇಲೆ ಮತ್ತೊಂದು ದೇವಸ್ಥಾನ ಕಟ್ಟಿರುವುದು ಉತ್ಖನನ ಸಮಯದಲ್ಲಿ ಬೆಳಕಿಗೆ ಬಂದಿದೆ. ಎರಡನೇ ದೇವಸ್ಥಾನದ ಮಟ್ಟ ಸುತ್ತಲ ಪ್ರದೇಶದ ಮಟ್ಟಕ್ಕಿಂತ ಸಾಕಷ್ಟು ಎತ್ತರದಲ್ಲಿರುವುದು ಮುಖ್ಯವಾದ ಸಂಗತಿಯಾಗಿದೆ.

ಯುರುಕ್ (uruk) ಎನ್ನುವ ಮತ್ತೊಂದು ಸ್ಥಳದಲ್ಲಿ ಪತ್ತೆ ಮಾಡಿರುವ ದೇವಸ್ಥಾನ ಸುಮಾರು ೧೫೦ ಅಡಿ ಎತ್ತರದ ದಿಣ್ಣೆಯ ಮೇಲಿದೆ. ಆ ಮಾನವ ನಿರ್ಮಿತ ದಿಣ್ಣೆ ಜೇಡಿಮಣ್ಣು ಮತ್ತು ಬಿಸಿಲಿನಲ್ಲಿ ಒಣಗಿಸಿದ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ದೇವಸ್ಥಾನ ಮತ್ತು ದಿಣ್ಣೆಯ ಒಟ್ಟು ಅಳತೆ ೬೫x೧೫೦x೧೫ ಅಡಿಗಳು ಇದೆ. ಅದೂ ಕ್ರಿ.ಪೂ ನಾಲ್ಕನೆ ಸಹಸ್ರಮಾನಕ್ಕೆ ಸೇರಿದೆ ಎನ್ನುವುದು ತಜ್ಞರ ಅಭಿಪ್ರಾಯ. ಯುರುಕ್‌ನ ಸುತ್ತೂ ಆ ಉಬ್ಬು ದಿಣ್ಣೆಯನ್ನು ಜಿಗ್ಗುರಾತ್ (ziggurat) ಅಂದರೆ ‘ಎತ್ತರವಾದ ಸ್ಥಳ’ ಎನ್ನುವ ಅರ್ಥ’ದ ಹೆಸರಿನಿಂದ ಕರೆಯಲಾಗುತ್ತಿದೆ. ಇಂತಹ ಒಂದು ‘ಜಿಗ್ಗುರಾತ್’ ಅನ್ನು ಬೈಬಲ್‌ನಲ್ಲಿ ‘‘ಬಾಬೆಲ್‌ನ ಸ್ಥಂಭ’’ ಎಂದು ಉಲ್ಲೇಖಿಸಲಾಗಿದೆ.

ದೇವರು ಅಥವಾ ದೇವತೆಗಳ ಆವಾಸಸ್ಥಾನಗಳಾದ ದೇವಾಲಯಗಳ ನಿರ್ಮಾಣದ ಕಾಲ ಕ್ರಿ.ಪೂ.ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದಕ್ಕೆ ಸರಿಯುತ್ತದೆ ಹಾಗೂ ಅವುಗಳನ್ನು ಎತ್ತರವಾದ ಸ್ಥಳಗಳಲ್ಲಿ ನಿರ್ಮಿಸುತ್ತಿದ್ದರು ಎನ್ನುವುದು ವಾಸ್ತು ಇತಿಹಾಸದಿಂದ ತಿಳಿದುಬರುತ್ತದೆ. ದೇವಾಲಯಗಳನ್ನು ಎತ್ತರವಾದ ಸ್ಥಳಗಳಲ್ಲಿ ಹೆಚ್ಚಾಗಿ ನಿರ್ಮಿಸಲು ಮುಖ್ಯ ಕಾರಣ; ದೇವರು ಅಥವಾ ದೇವತೆ ಸಾಮಾನ್ಯ ಮನುಷ್ಯನಿಗಿಂತ ಹೆಚ್ಚು ಶಕ್ತಿ ಹೊಂದಿದೆ. ಅದನ್ನು ಉನ್ನತ ಸ್ಥಾನದಲ್ಲಿರಿಸಿ ಅದರ ಕೃಪೆಗೆ ಒಳಗಾಗಲು ಇದೂ ಒಂದು ಮಾರ್ಗ ಎನ್ನುವುದು ಮನುಷ್ಯನ ನಂಬಿಕೆ. ಅವನ ಈ ನಂಬಿಕೆ ಒಂದು ರೀತಿಯ ‘ರಾಜಾರಾಧನೆ’ ಅಥವಾ ‘ನಾಯಕಾರಾಧನೆ’ ಆಗಿದೆ. ಮನುಷ್ಯ ತನ್ನಲ್ಲಿರುವ ಕ್ರಿಯಾಶೀಲ ಶಕ್ತಿಯನ್ನು ಜಡಕ್ಕೆ ಆರೋಪಿಸಿಕೊಳ್ಳುವುದರಿಂದ; ಅವನಲ್ಲಿ ಸ್ತೋತ್ರ ಸಂಸ್ಕೃತಿಗೆ ಕಾರಣವಾಗುತ್ತದೆ.