ಅತಿಕ್ರಮಿಸಿ ಬಂದ ಆರ್ಯರು ಕ್ರಿ.ಪೂ.೬೦೦ರ ಹೊತ್ತಿಗೆ ಚಿಕ್ಕ ಚಿಕ್ಕ ರಾಜ್ಯಗಳನ್ನು ಏರ್ಪಡಿಸಿಕೊಂಡು ನೆಲೆ ನಿಂತಿದ್ದರು. ಕೆಲವು ರಾಜ್ಯಗಳು ವಂಶಪಾರಂಪರಿಕ ರಾಜರ ಆಳ್ವಿಕೆಗೆ ಒಳಪಟ್ಟಿದ್ದರೆ; ಕೆಲವನ್ನು ಗುಂಪಿನ ಮುಖ್ಯಸ್ಥರು ಆಳುತ್ತಿದ್ದರು. ಆರ್ಯರಲ್ಲಿನ ಪುರೋಹಿತರಾದ ಬ್ರಾಹ್ಮಣರು, ರಾಜಮಾನ್ಯರಾದ ಕ್ಷತ್ರಿಯರು; ಆರ್ಯರಲ್ಲಿ ಸಾಮಾನ್ಯರೂ, ವ್ಯವಸಾಯಗಾರರೂ ಮತ್ತು ವಣಿಕರೂ ಆದ ವೈಶ್ಯರು ಹಾಗೂ ಕಪ್ಪು ಚರ್ಮದ ಅನಾರ್ಯ ಗುಲಾಮರಾದ ಶೂದ್ರರೂ ಮುಂತಾಗಿ ನಾಲ್ಕು ಸಾಮಾಜಿಕ ಗುಂಪುಗಳು ಉಂಟಾದವು. ವರ್ಣವನ್ನು ಆಧರಿಸಿ ಮೊದಲ ಮೂರು ಸಾಮಾಜಿಕ ಆರ್ಯರ ಗುಂಪುಗಳು ನಾಲ್ಕನೆಯ ಕಪ್ಪು ವರ್ಣದ ಅನಾರ್ಯ ಗುಂಪಿನಿಂದ ಆಹಾರ ಪಡೆಯುವುದು, ಮದುವೆ ಮೂಲಕ ಸಂಬಂಧ ಏರ್ಪಡಿಸುವುದು ಮುಂತಾದವುಗಳಿಂದ ದೂರ ಉಳಿದವು. ಇದರಿಂದ ಅಶುದ್ಧರೂ ಮತ್ತು ಸಾಮಾಜಿಕ ಸ್ಥಾನಮಾನದ ಮಟ್ಟಕ್ಕೆ ಏರದವರೂ ಆದ ‘ಅಸ್ಪೃಶ್ಯರು’ ಎನ್ನುವ ಮತ್ತೊಂದು ವರ್ಣ ಹಿಂದೂ ಸಮಾಜದಲ್ಲಿ ಉಂಟಾಗಲು ಕಾರಣವಾಯಿತು. ಇದರಿಂದ ಶ್ರೇಣೀಕೃತ ಜಾತಿ ಪದ್ಧತಿ ಬೆಳೆಯಿತು. ಬಿಳಿ ಚರ್ಮದ ಆರ್ಯರು ಸಮಾಜದ ಮೇಲಿನ ಸ್ಥರದಲ್ಲಿ, ಕಪ್ಪು ಚರ್ಮದ ಅನಾರ್ಯರು ಹೆಚ್ಚಾಗಿ ದ್ರಾವಿಡರು ಕೆಳಗಿನ ಸ್ಥರದಲ್ಲಿ ಉಳಿಯಲು ಕಾರಣವಾಯಿತು.

‘ಪುನರ್ಜನ್ಮ’ ಮತ್ತು ‘ಕರ್ಮ ಸಿದ್ಧಾಂತ’ ನಂಬಿಕೆ ಮೂಲತಃ ಪುರಾತನ ದ್ರಾವಿಡ ಧರ್ಮದ ಭಾಗವಾಗಿತ್ತು. ಆರ್ಯರ ಪ್ರಭಾವದಿಂದ ಈ ಕಲ್ಪನೆ ಹಿಂದೂ ಧರ್ಮದ ಭಾಗವಾಗಿ ಬೆಳೆಯಿತು. ‘ಪುನರ್ಜನ್ಮ’ ಎಂದರೆ ದೇಹದ ಮರಣಾನಂತರ ಆತ್ಮವು ಬೇರೆ ದೇಹವನ್ನು ಪಡೆದು ಜನ್ಮತಾಳುವುದು ಎಂದು ಅರ್ಥ. ಮರಣ ಎನ್ನುವುದು ದೇಹಕ್ಕೆ ಮಾತ್ರ ಇದೆ. ಆತ್ಮಕ್ಕೆ ಸಾವಿಲ್ಲ ಎನ್ನುವ ವಿಚಾರ ಪುನರ್ಜನ್ಮಕ್ಕೆ ಆಧಾರವಾಗಿದೆ. ಪುನರ್ಜನ್ಮ, ಅವತಾರ ಅಥವಾ ಪುನರವತಾರ ಮತ್ತು ಪುನರುತ್ಥಾನ ಇವುಗಳಿಗೆ ವ್ಯತ್ಯಾಸಗಳಿವೆ. ಪುನರ್ಜನ್ಮದಲ್ಲಿ ಸಸ್ಯಗಳ, ಪ್ರಾಣಿಗಳ, ಮನುಷ್ಯರ ಹೀಗೆ ಯಾವುದರ ದೇಹವನ್ನಾದರೂ ಪಡೆದು ಆತ್ಮ ಮರು ಹುಟ್ಟುವುದು ಎಂದಾದರೆ; ಅವತಾರದಲ್ಲಿ ಆತ್ಮಕ್ಕೆ ಬದಲಾಗಿ ದೇವರು ಮನುಷ್ಯನ ದೇಹವನ್ನೋ ಅಥವಾ ಇನ್ನಾವುದೋ ಜೀವಿಯ ದೇಹವನ್ನೊ ಪಡೆದು ಜನ್ಮ ತಾಳುತ್ತದೆ ಎನ್ನುವುದು. ಆದರೆ ಪುನರುತ್ಥಾನದಲ್ಲಿ ಆತ್ಮವು ಅದೇ ದೇಹದಲ್ಲೇ ತೇಜಸ್ಸು, ಸೂಕ್ಷ್ಮತೆ ಪಡೆಯುವುದು. ಮೂರರಲ್ಲೂ ದೇಹಕ್ಕೆ ಸಾವಿದೆ.

ಆತ್ಮ ಅಮರ, ಪ್ರತಿಯೊಬ್ಬರಿಗೂ ಪುನರ್ಜನ್ಮ ಇದೆ. ಪುನರ್ಜನ್ಮ ಸಿದ್ಧಾಂತದ ಪ್ರಕಾರ; ಪುನರ್ಜನ್ಮ ಬರೀ ಮನುಷ್ಯರಿಗಷ್ಟೇ ಸೀಮಿತವಾಗಿಲ್ಲ. ಅದು ಸಕಲ ಜೀವಿಗಳಿಗೂ ಅನ್ವಯವಾಗುತ್ತದೆ. ಪುನರ್ಜನ್ಮದಲ್ಲಿ ಪಡುವ ಸುಖ-ದುಃಖಗಳು ಹಿಂದಿನ ಜನ್ಮದಲ್ಲಿ ಮಾಡಿದ ಸತ್ಕಾರ್ಯ ಮತ್ತು ದುಷ್ಕಾರ್ಯಗಳನ್ನು ಅವಲಂಬಿಸಿವೆ. ಅವರವರ ಕರ್ಮಗಳಿಗೆ ತಕ್ಕಂತೆ ಕರ್ಮಫಲಗಳನ್ನು ಅನುಭವಿಸಬೇಕಾಗುತ್ತದೆ ಎನ್ನುವುದು ಸಾಂಖ್ಯಯೋಗ ಮತ್ತು ಪ್ರಾಚೀನ ವೈಶೇಷಿಕರ ವಾದ. ಪುನರ್ಜನ್ಮ ಸಿದ್ಧಾಂತ ಒಪ್ಪಿದರೆ ಅದು ಕೆಲವು ಅನುಮಾನಗಳಿಗೂ ಅವಕಾಶ ಮಾಡಿಕೊಡುತ್ತದೆ. ಮೊದಲನೆಯದಾಗಿ; ಭೂಮಿಯ ಮೇಲಿನ ಜೀವಗಳ ಸಂಖ್ಯೆ ಒಂದೇ ಇರಬೇಕಾಗುತ್ತದೆ. ಅವು ಯಾವ ರೂಪದಲ್ಲಿದ್ದರೂ ಸರಿ. ಎರಡನೆಯದಾಗಿ; ಜನ್ಮಾಂತರಗಳಿಂದ ಬಿಡುಗಡೆಯಾಗಿ ಮೋಕ್ಷ ಪ್ರಾಪ್ತಿ ಹೊಂದಿದ ಮನುಷ್ಯರ ಸ್ಥಾನಗಳನ್ನು ತುಂಬಲು ಹೊಸ ಜೀವಿಗಳು ಹೇಗೆ ಹುಟ್ಟುತ್ತವೆ? ಎನ್ನುವುದನ್ನು ವಿವರಿಸುವುದಿಲ್ಲ. ಆದರೆ, ಆತ್ಮ ಎನ್ನುವ ಶಕ್ತಿ ವಿಶ್ವಶಕ್ತಿಯಲ್ಲಿ ಲೀನವಾಗುತ್ತದೆ ಎನ್ನುವುದನ್ನು ಮಾತ್ರ ಒಪ್ಪಬಹುದು.

ಅವತಾರವು ಪಾರಂಪರಿಕ ದೇವಮಾನವರ ಕಲ್ಪನೆಯನ್ನು ಗಟ್ಟಿಗೊಳಿಸಿದರೆ; ಪುನರ್ಜನ್ಮದ ಕಲ್ಪನೆ ಆಧುನಿಕ ದೇವಮಾನವರ ಕಲ್ಪನೆಯನ್ನು ಹುಟ್ಟುಹಾಕಿದೆ. ಅವತಾರ ಮತ್ತು ಪುನರ್ಜನ್ಮಗಳಲ್ಲಿ ಪರಮಾತ್ಮ ಮತ್ತು ಆತ್ಮಕಲ್ಪನೆಗಳು ಪ್ರಮುಖವಾಗಿವೆ. ಪರಮಾತ್ಮ ಕಲ್ಪನೆ ಮನುಷ್ಯನ ಉನ್ನತ ಸ್ಥಿತಿಯನ್ನು ಪ್ರತಿನಿಧಿಸಿದರೆ ಆತ್ಮ ಅವನ ಸಾಮಾನ್ಯ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿ ಮನುಷ್ಯ ಮತ್ತು ದೇವರ ನಡುವೆ ನಿರ್ದಿಷ್ಟವಾದ ಅಂತರ ಇಲ್ಲ ಎನ್ನುವುದು ಮುಖ್ಯ. ಆತ್ಮ ಅವಿನಾಶಿ; ದೇಹ ನಶ್ವರ ಎನ್ನುವ ತರ್ಕದಲ್ಲಿ ದೇವಮಾನವರನ್ನು ದೇವರ ಅವತಾರವೆಂದೂ; ಕೆಲವು ವೇಳೆ ಇನ್ನೊಂದು ದೇವಮಾನವರ ಪುನರ್ಜನ್ಮ ಎಂದೂ ಪರಿಗಣಿಸಿದಾಗ, ಅವತಾರ ಮತ್ತು ಪುನರ್ಜನ್ಮದ ನಡುವಿನ ಅಂತರ ಕಡಿಮೆಯಾಗುತ್ತದೆ. ಈ ಸಿದ್ಧಾಂತ ಪಾಪ-ಪುಣ್ಯ ಕರ್ಮ ಫಲಗಳ ಅನುಭೋಗಕ್ಕೆ ಹೆಚ್ಚು ಜನ್ಮಗಳ ವ್ಯಾಪ್ತಿಯನ್ನು ಒದಗಿಸಿಕೊಟ್ಟಿದೆ.

ಪುನರ್ಜನ್ಮದಲ್ಲಿನ ನಂಬಿಕೆಯಿಂದ ಆತ್ಮದ ಕಲ್ಪನೆ ಉಂಟಾಗುತ್ತದೆ. ಆತ್ಮದ ಅಮರತ್ವದ ನಂಬಿಕೆಯಿಂದ ವ್ಯಕ್ತಿ ಮೋಕ್ಷ ಸಂಪಾದನೆಗಾಗಿ ಜನ್ಮಾಂತರಗಳನ್ನು ಎತ್ತಬೇಕಾಗುತ್ತದೆ. ಮತ್ತು ಸಾಧಿಸಬೇಕಾಗುತ್ತದೆ. ಈ ನಂಬಿಕೆ ಮಾನವರು ವ್ಯಕ್ತಿತ್ವಗಳನ್ನು ತಿದ್ದಿಕೊಳ್ಳಲು ಅನುವಾಗುತ್ತದೆ. ಸಣ್ಣ ವಯಸ್ಸಿನ ಮಗುವು ತನ್ನ ಬೌದ್ದಿಕ ವಿಕಾಸಕ್ಕೆ ಮೀರಿದ ವಿಚಾರಗಳನ್ನು ಹೇಳಿದಾಗ ಅಥವಾ ನಿಪುಣತೆಯನ್ನು ಪ್ರದರ್ಶಿಸಿದಾಗ; ಆ ಮಗು ತನ್ನ ಹಿಂದಿನ ಜನ್ಮಗಳಲ್ಲಿ ಮಾಡಿದ ಸಾಧನೆಯೇ ಇದಕ್ಕೆ ಕಾರಣ ಎನ್ನುವುದನ್ನು ಊಹಿಸುತ್ತೇವೆ. ಜಗತ್ತಿನ ಮಾನವರಲ್ಲಿ ಕಾಣುವ ವೈವಿಧ್ಯಮಯವಾದ ವ್ಯಕ್ತಿತ್ವಗಳಿಗೆ ಅವರ ಪೂರ್ವಜನ್ಮದ ಕರ್ಮಗಳೇ ಕಾರಣ ಅಥವಾ ವರ್ತಮಾನದ ಕರ್ಮಗಳು ಭವಿಷ್ಯದ ಫಲಗಳು ಎನ್ನುವುದನ್ನು ಸಾಬೀತುಪಡಿಸುತ್ತವೆ. ಇದರಿಂದ ವ್ಯಕ್ತಿ ವರ್ತಮಾನದಲ್ಲಿ ಒಳ್ಳೆಯ ಕರ್ಮಗಳಲ್ಲಿ ತೊಡಗಲು ಕಾರಣವಾಗುತ್ತದೆ. ವ್ಯಕ್ತಿಯ ಸುಖ-ದುಃಖಗಳು ಅವನ ಕರ್ಮಕ್ಕೆ ತಕ್ಕಂತೆ ಇರುತ್ತವೆಯೇ ಹೊರತು ಅವಕ್ಕೆ ದೇವರು ಕಾರಣವಲ್ಲ ಎನ್ನುವುದು ಮುಖ್ಯ. ಹಾಗಾದರೆ ಕರ್ಮವನ್ನೂ ಒಂದಿಷ್ಟು ಪರಿಶೀಲಿಸೋಣ.

‘ಕರ್ಮ’ ಎನ್ನುವ ಪದ ಕೆಲಸ, ಪರಿಣಾಮ, ಕ್ರಿಯೆ ಮುಂತಾದ ಅರ್ಥಗಳನ್ನು ಸೂಚಿಸುತ್ತದೆ. ಕಾರ್ಯಾಕಾರಣ ನಿಯಮಕ್ಕೆ ಅನುಸಾರವಾಗಿ ಪ್ರತಿಯೊಂದು ಘಟನೆಗೆ ಒಂದು ನಿರ್ದಿಷ್ಟ ಕಾರಣವಿರುತ್ತದೆ. ಮನುಷ್ಯರ ಸ್ಥಿತಿ-ಗತಿಗಳನ್ನು ಅರ್ಥೈಸುವಾಗ ಕಾರ್ಯಾ-ಕಾರಣದ ನಿಯಮವನ್ನು ಅನುಸರಿಸಲಾಗುತ್ತಿದೆ. ಅನುಕೂಲ ಕರ್ಮದಿಂದ ಹಿತವಾದ ಪರಿಣಾಮ, ಪ್ರತಿಕೂಲ ಕರ್ಮದಿಂದ ಅಹಿತ ಪರಿಣಾಮ ಉಂಟಾಗುವುದು ದೃqsಕರಣಗೊಂಡ ಅನುಭವ ಆಗಿದೆ. ವಿಧಿವಾದವು ಕರ್ಮಸಿದ್ಧಾಂತಕ್ಕೆ ಸಂಬಂಧ ಹೊಂದಿದೆ. ಸುಖವು ಮನುಷ್ಯರ ಪುರುಷಾರ್ಥವಾಗಿರುವುದರಿಂದ; ಯೋಗ್ಯವಾದ ಕರ್ಮ ಅಥವಾ ಕಾರ್ಯಗಳನ್ನಷ್ಟೇ ಆಚರಿಸಬೇಕಾಗುತ್ತದೆ. ಒಳ್ಳೆಯ ಕರ್ಮವನ್ನು ಮಾಡಬೇಕೆಂಬ ಇಚ್ಛಾ ವಿಷಯಕ್ಕೆ ‘ಚಿಕೀರ್ಷಾ’ ಎಂಬ ಹೆಸರು. ಚಿಕೀರ್ಷಾದಲ್ಲಿ ಕಾರ್ಯಸಾಧ್ಯತೆಯ ಗುಣಧರ್ಮ ಪ್ರಧಾನವಾಗಿರುತ್ತದೆ. ಉದಾಹರಣೆಗೆ : ಒಂದು ಹಳ್ಳಿಯಿಂದ ಪಕ್ಕದ ಹಳ್ಳಿಗೆ ತುರ್ತಾಗಿ ಹೋಗಬೇಕೆಂದು ಇಚ್ಛಿಸುವ ವ್ಯಕ್ತಿ ವಿಮಾನಕ್ಕಾಗಿ ಕಾಯುವುದಿಲ್ಲ. ಅಂದರೆ ಇಲ್ಲಿ ಕೃತಿ ಸಾಧ್ಯತಾ ಇಚ್ಛೆ ಇರುವುದಿಲ್ಲ. ಅಂದರೆ ವ್ಯಕ್ತಿ ಒಂದು ಕಾರ್ಯವನ್ನು ಮಾಡಬೇಕಾದರೆ; ಅದನ್ನು ಮಾಡಲು ತಾನು ಸಮರ್ಥನೆ ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕಾಗುತ್ತದೆ. ಹೀಗೆ ಅರಿತುಕೊಳ್ಳುವುದನ್ನು ನೈತಿಕ ಕರ್ಮಸಿದ್ಧಾಂತವು ನಿಯಂತ್ರಿಸುತ್ತದೆ.

ಕರ್ಮಗಳನ್ನು ಸಂಚಿತಕರ್ಮ, ಪ್ರಾರಬ್ಧಕರ್ಮ ಮತ್ತು ಆಗಾಮಿಕರ್ಮಗಳೆಂದು ವಿಂಗಡಿಸಲಾಗಿದೆ. ಭೂತಕಾದಲ್ಲಿ ಮಾಡಿರುವ ಎಲ್ಲ ಕರ್ಮಗಳನ್ನು ಒಟ್ಟಿಗೆ ಸಂಚಿತಕರ್ಮ ಎನ್ನಲಾಗುತ್ತಿದೆ. ಸಂಚಿತ ಕರ್ಮಗಳ ಪರಿಣಾಮದಿಂದಾಗಿ ವ್ಯಕ್ತಿತ್ವದ ರೀತಿ, ನೀತಿ, ನಡವಳಿಕೆ, ಸಾಮರ್ಥ್ಯ, ಒಲವುಗಳು ವೈಶಿಷ್ಟ್ಯಪುರ್ಣವಾಗಿರುತ್ತವೆ. ಒಂದು ಕರ್ಮವು ವರ್ತಮಾನದಲ್ಲೇ ಕರ್ಮ ಕೂಡಲು ಪ್ರಾರಂಭಿಸಿದರೆ ಅದು ಪ್ರಾರಬ್ಧಕರ್ಮ ಎನಿಸಿಕೊಳ್ಳು ತ್ತದೆ. ಪ್ರಾರಬ್ಧ ಕರ್ಮವು ವ್ಯಕ್ತಿಯ ವರ್ತಮಾನ ಕಾಲಕ್ಕೆ ಸಂಭವಿಸಿದ ಅನುಭವಗಳಿಗೆ ಕಾರಣವಾಗಿರುತ್ತದೆ. ಉದಾಹರಣೆಗೆ ; ವೇಶ್ಯಾವೃತ್ತಿಯ ಕರ್ಮಮಾಡುತ್ತಿರುವ ವ್ಯಕ್ತಿ ಜೀವಿತ ಕಾಲದಲ್ಲೇ ರೋಗ-ರುಜಿನಗಳಿಗೆ ಒಳಗಾಗುವುದು ಒಂದು ಕರ್ಮವಾಗುವುದು ಅನಿವಾರ್ಯವಾಗುತ್ತದೆ. ಯೋಗಿಗಳು ಮತ್ತು ಜ್ಞಾನಿಗಳನ್ನು ಹೊರತುಪಡಿಸಿ ಉಳಿದ ಸಾಮಾನ್ಯ ಜನರೆಲ್ಲ ಪ್ರಾರಬ್ಧ ಕರ್ಮವನ್ನು ಅನುಭವಿಸಲೇಬೇಕಾಗುತ್ತದೆ. ಮುಂದಿನ ಕರ್ಮವನ್ನು ಊಹಿಸಿ ಒಳ್ಳೆಯ ಕರ್ಮವನ್ನು ಮಾಡುವುದರಿಂದ ಹಿತಕರವಾದ ಪರಿಣಾಮ ಪಡೆಯುವುದನ್ನು ಆಗಾಮಿಕರ್ಮ ಅಥವಾ ಕ್ರಿಯಾಮಣ ಕರ್ಮ ಎಂದು ಕರೆಯಲಾಗುತ್ತಿದೆ. ಆಗಾಮಿಕರ್ಮವನ್ನು ವಿವೇಕ ಮತ್ತು ಉತ್ತಮ ಕಾರ್ಯ ಎನ್ನುವ ಮನೋಭಾವನೆಯಿಂದ ಆಚರಿಸುವುದರಿಂದ ಕೆಟ್ಟ ಕರ್ಮಗಳ ಪರಿಣಾಮವನ್ನು ದುರ್ಬಲಗೊಳಿಸಬಹುದು. ಒಟ್ಟಿನಲ್ಲಿ, ಮನುಷ್ಯನ ಬದುಕು ಎನ್ನುವುದು ಅವನು ಮಾಡುವ ಕರ್ಮಕ್ಕೆ ನೇರ ಪ್ರಮಾಣದಲ್ಲಿರುತ್ತದೆ ಎನ್ನುವುದು ಮುಖ್ಯ. ಇಂತಹ ವೈಜ್ಞಾನಿಕ ಸತ್ಯವನ್ನು ಬದುಕಿನಲ್ಲಿ ಕ್ಷೀಣಗೊಳಿಸಿದ್ದು ಎಂದರೆ ಧಾರ್ಮಿಕ ಸಂಪ್ರದಾಯದ ಭಕ್ತಿಮಾರ್ಗ.

ವ್ಯಕ್ತಿ ತಾನು ಮಾಡಿದ ಕೆಟ್ಟ ಕೆಲಸಗಳೆಲ್ಲವನ್ನೂ ಕ್ಷಮಿಸಲು ದೇವರ ಮರೆಬಿದ್ದು ಭಕ್ತಿಯನ್ನು ಪ್ರದರ್ಶಿಸಿದಾಗ; ಅವುಗಳ ಪಾಪ ನಿವಾರಣೆಯಾಗುತ್ತದೆ ಎನ್ನುವ ಅವನ ನಂಬಿಕೆ, ಬದುಕಿನಲ್ಲಿನ ಒಳ್ಳೆಯ ಕರ್ಮಗಳು ಕಡಿಮೆಯಾಗಲು ಕಾರಣವಾಯಿತು. ಉದಾಹರಣೆಗೆ: ವ್ಯಕ್ತಿ ವರ್ಷದುದ್ದಕ್ಕೂ ಕೆಟ್ಟ ಕರ್ಮಗಳಿಂದ ಆರ್ಜಿಸಿದ ಸಂಪತ್ತಿನಲ್ಲಿ ಒಂದಿಷ್ಟನ್ನು ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿದಾಗ ತನ್ನ ಪಾಪಗಳೆಲ್ಲ ಪರಿಹಾರವಾದವು ಎನ್ನುವ ಭಾವನೆ ಆ ವ್ಯಕ್ತಿಗೆ ಉಂಟಾದರೂ; ಅದು ಕೆಟ್ಟ ಕಾರ್ಯಗಳನ್ನು ಮುಂದುವರಿಸಲೂ ಕಾರಣವಾಗುತ್ತದೆ ಎನ್ನುವುದೂ ಅಷ್ಟೇ ಸತ್ಯ. ಇಲ್ಲಿ ಕರ್ಮಸಿದ್ಧಾಂತ ದಾರಿ ತಪ್ಪಲು ಭಕ್ತಿ ಕಾರಣವಾಗಿದೆ.

ಕರ್ಮಸಿದ್ಧಾಂತ ಹಿಂದೂ ಧರ್ಮದ ವರ್ಣಗಳಲ್ಲಿನ ಅಸಮಾನತೆಯನ್ನು ಪುರೋಹಿತ ವರ್ಗ ಸಮರ್ಥಿಸಿಕೊಳ್ಳಲು ಸಹಾಯಮಾಡಿದೆ. ಕರ್ಮಸಿದ್ಧಾಂತ ಸಹಾಯಮಾಡಿದೆ ಎನ್ನುವುದಕ್ಕಿಂತ ಪುರೋಹಿತಶಾಹಿ ಬಳಸಿಕೊಂಡಿದೆ ಎಂದು ಹೇಳಿದರೆ ತಪ್ಪಾಗಲಾರದು. ವ್ಯಕ್ತಿಯು ತನ್ನ ಕರ್ಮಾನುಸಾರ ಮೇಲಿನ ಅಥವಾ ಕೆಳಗಿನ ಜಾತಿಯಲ್ಲಿ ಹುಟ್ಟುತ್ತಾನೆ ಎಂದು ವ್ಯಾಖ್ಯಾನಿಸಲಾಯಿತು. ಹಿಂದಿನ ಜನ್ಮದಲ್ಲಿ ಒಬ್ಬ ವ್ಯಕ್ತಿಯು ಪುಣ್ಯದ ಕರ್ಮ ಅಥವಾ ಕೆಲಸ ಮಾಡಿದ್ದರೆ, ಮುಂದಿನ ಜನ್ಮದಲ್ಲಿ ಉತ್ತಮ ಜಾತಿಯಲ್ಲಿ ಹುಟ್ಟುತ್ತಾನೆ. ಪಾಪ ಕೆಲಸಗಳನ್ನು ಮಾಡಿದ್ದರೆ ಹೀನ ಜಾತಿಯಲ್ಲಿ ಹುಟ್ಟುತ್ತಾನೆ. ಕೆಳ ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ಈ ಜನ್ಮದಲ್ಲಿ ಮೇಲು ಜಾತಿಯ ಸೇವೆ ಮಾಡಿದರೆ, ಮುಂದಿನ ಜನ್ಮದಲ್ಲಿ ಉತ್ತಮ ಜಾತಿ ಪ್ರಾಪ್ತವಾಗುತ್ತದೆ ಎಂದು ಬೋಧಿಸಲಾಯಿತು ಮತ್ತು ಬೋಧಿಸಲಾಗುತ್ತಿದೆ.

ಜೀವದ ಕರ್ಮಚಕ್ರದಿಂದ ಬಿಡುಗಡೆ ಎನ್ನುವುದು ಆತ್ಮನನ್ನು ಕಳೆದುಕೊಳ್ಳುವುದರಿಂದ ಅಥವಾ ಸೃಷ್ಟಿಕರ್ತನೂ, ಸರ್ವಶಕ್ತನೂ ಹೀಗೆ ಎಲ್ಲವೂ ಆಗಿ; ಅಂತ್ಯವೂ, ಅಂಕೆಯೂ ಇಲ್ಲದ ಬ್ರಹ್ಮನಲ್ಲಿ ಐಕ್ಯವಾಗಿ ಒಂದಾಗುವುದರಿಂದ ಉಂಟಾಗುತ್ತದೆ. ಈ ಪ್ರಾಪಂಚಿಕ ಬಂಧನದಿಂದ ಜೀವವನ್ನು ಮುಕ್ತಿಗೊಳಿಸುವುದೇ ಹಿಂದೂ ಧರ್ಮದ ಸ್ಪಷ್ಟ ಉದ್ದೇಶವಾಗಿತ್ತು. ಆದರೆ, ಉತ್ತಮ ಕಾರ್ಯಗಳ ಮೂಲಕ ಕರ್ಮ ಚಕ್ರದಿಂದ ಅಥವಾ ಪುನರ್ಜನ್ಮ ಚಕ್ರದಿಂದ ಪಾರಾಗಬಹುದೆನ್ನುವ ನಿಜವಾದ ಅರ್ಥ ಕಳೆದು ಹೋಗಿ; ಮೇಲ್ಜಾತಿಯವರ ಸೇವೆ ಮಾಡುವುದರ ಮೂಲಕ ಮುಕ್ತಿ ಪಡೆಯಬಹುದೆನ್ನುವ ಅರ್ಥವನ್ನು ಕರ್ಮಸಿದ್ಧಾಂತ ಪಡೆದದ್ದರಿಂದ ಶ್ರೇಣೀಕೃತ ಶೋಷಣಾ ಸಮಾಜ ಹಿಂದೂ ಧರ್ಮದಲ್ಲಿ ಉಂಟಾಗಲು ಮತ್ತು ಮುಂದುವರೆಯಲು ಕಾರಣವಾದದ್ದು ದೊಡ್ಡ ದುರಂತ.

ಹಿಂದುಗಳು ಅವತಾರಗಳನ್ನು ಮುಕ್ತವಾಗಿ ಸ್ವೀಕರಿಸಿದರೂ ವೇದ ಮತ್ತು ಅದರ ಉಪಾಂಗಗಳಾದ ಸಂಹಿತೆ, ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತುಗಳು ಮೌನವಾಗಿವೆ ಮತ್ತು ಕೆಲವೆಡೆ ಅವತಾರದ ನಂಬಿಕೆಗೆ ವಿರೋಧಿಯಾಗಿವೆ. ‘‘ಸೃಷ್ಟಿಯಲ್ಲಿ ಎಲ್ಲ ಜೀವಿಗಳೂ ಬ್ರಹ್ಮನೇ ಆಗಿರುವುದರಿಂದ ಅವತಾರವು ಯಾವ ರೀತಿಯಾಗಿ ಶ್ರೇಷ್ಠ ವಾದೀತು:’’? ಎಂದು ಪ್ರಶ್ನಿಸುವುದರ ಮೂಲಕ ಅದ್ವೈತ ಸಿದ್ಧಾಂತ ಕತೃವಾದ ಶಂಕರಾಚಾರ್ಯರು ಅವತಾರಗಳನ್ನು ಅಲ್ಲಗಳೆದರೆ; ವಿಶಿಷ್ಟಾದ್ವೈತ ಪ್ರತಿಪಾದಕರಾದ ರಾಮಾನುಜರು ‘‘ಕರುಣಾಮಯಿಯಾದ ಭಗವಂತನು ತನ್ನ ಭಕ್ತರ ಸಂತೃಪ್ತಿಗಾಗಿ ಮಾನವ, ದೈವ ಅಥವಾ ಇನ್ನಾವುದೇ ರೂಪದಿಂದಲಾದರೂ ಗೋಚರಿಸುತ್ತಾನೆ. ಅವತಾರಗಳು ಮಾಯಾಜಾಲವಲ್ಲ’’ ಎಂದು ಪ್ರತಿಪಾದಿಸಲು ‘‘ನನ್ನ ಸೃಷ್ಠಿ ಸಾಮರ್ಥ್ಯದಿಂದಲೇ ನಾನು ಪರಿಪೂರ್ಣನಾಗಿದ್ದೇನೆ’’ ಎನ್ನುವ ಗೀತಾ ವಾಕ್ಯವನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ದ್ವೈತ ಸಿದ್ಧಾಂತದ ಪ್ರವರ್ತಕರಾದ ಮಧ್ವಾಚಾರ್ಯರೂ ‘‘ಪರಮಾತ್ಮನ ಸ್ವರೂಪ ಮತ್ತು ಅಂಶಗಳ ಮೂಲ ಸ್ವಭಾವದ ಅಂಗವಾಗಿಯೇ ಈ ಅವತಾರಗಳು’’ ಎಂದು ಹೇಳಿ ಅವತಾರ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುತ್ತಾರೆ.

ಎಲ್ಲ ಜೀವಾತ್ಮಗಳೂ ಅಂತಿಮವಾಗಿ ಬ್ರಹ್ಮೈಕ್ಯದಲ್ಲಿ ಪರ್ಯಾವಸಾನವಾಗುತ್ತವೆಂದು ಅದ್ವೈತ ಹೇಳುವುದರಿಂದ; ಆಧ್ಯಾತ್ಮಿಕ ಭೂಮಿಕೆಯಲ್ಲಾದರೂ ಅನಿವಾರ್ಯವಾಗಿ ಮಾನವ ಸಮಾನತೆಯನ್ನು ಅದು ಒಪ್ಪಿಕೊಂಡಂತಾಗುತ್ತದೆ. ಆದರೆ; ದ್ವೈತ ಸಿದ್ಧಾಂತದ ನಿಲುವು ಮಾತ್ರ ಮಾನವ ಸಮಾನತೆಗೆ ಕಂಠಕವಾಗಿದೆ. ಅದು ಜೀವಿಗಳನ್ನೆಲ್ಲ ಮುಕ್ತಿಯೋಗ್ಯರು. ನಿತ್ಯ ಸಂಸಾರಿಗಳು ಮತ್ತು ತಮೋಯೋಗ್ಯರು ಅಥವಾ ನಿತ್ಯ ನಾರಕಿಗಳು ಎಂದು ವಿಭಜಿಸುತ್ತದೆ. ಪರಮಾತ್ಮ ಮತ್ತು ಜೀವಾತ್ಮರ ಭೇದ ದ್ವೈತದಲ್ಲಿ ಶಾಶ್ವತ ಮತ್ತು ಅಚಲ. ಆದುದರಿಂದ ಉತ್ತಮ-ಅಧಮ ಜಾತಿ ಭೇದವೂ ಶಾಶ್ವತ ಮತ್ತು ಅಚಲ ಸ್ವಭಾವದವು. ಮುಕ್ತಿಯೋಗ್ಯರಿಗೆ ಮುಕ್ತಿ ಎನ್ನುವುದು ಖಾಯಂ ಎನ್ನುವುದು ತಿಳಿದಾಗ; ಅದು ಎಲ್ಲ ರೀತಿಯ ಅನಾಚಾರಗಳಿಗೆ ಕಾರಣವಾಗುವುದಿಲ್ಲವೆ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಹಾಗೆಯೇ; ನಿತ್ಯನಾರಕಿಗಳು ತಪಸ್ಸು ಮಾಡಲಿ, ಜ್ಞಾನ ಸಂಪಾದಿಸಲಿ, ಸನ್ಮಾರ್ಗಿಗಳಾಗಿರಲಿ; ಸದಾ ನರಕದಲ್ಲೇ ಇರಬೇಕಾದವರು ಎಂದು ಪರಿಗಣಿಸುವುದು ಯಾವ ನ್ಯಾಯ? ಇಂತಹ ಪರಿಗಣನೆಯಿಂದ ಸಮಾಜದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಲು ಕಾರಣವಾಗುವುದಿಲ್ಲವೆ? ಎನ್ನುವ ಅನೇಕ ಪ್ರಶ್ನೆಗಳು ಎದುರಾಗುತ್ತವೆ.

ಮೇಲ್ಜಾತಿಯ ಜನ ಎಂತಹುದೇ ಘೋರ ತಪ್ಪು ಮಾಡಿದರೂ ಅವರಿಗೆ ಸ್ವರ್ಗದ ಬಾಗಿಲು ಸದಾ ತೆರೆದಿರುತ್ತದೆ ಹಾಗೂ ಜೀವನ್ಮುಕ್ತಿಗೆ ಅವಕಾಶವೂ ದ್ವೈತದಲ್ಲಿ ಇದೆ. ಆದರೆ; ಕೆಳಜಾತಿಯ ಜನ ಎಷ್ಟೇ ತಪಸ್ಸು ಮಾಡಿ, ಜ್ಞಾನ ಸಂಪಾದಿಸಿ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗಿಗಳಾಗಿದ್ದರೂ; ಅವರು ನಿತ್ಯನಾರಿಕಿಗಳು ಅಥವಾ ಸದಾ ನರಕದಲ್ಲಿ ಇರಬೇಕಾದವರು ಎಂದು ಅದು ಪರಿಗಣಿಸುವುದರಿಂದ; ಅದನ್ನು ಜೀವ ವಿರೋಧಿ ಎಂದು ಪರಿಗಣಿಸದೆ ಅನ್ಯ ಮಾರ್ಗವಿಲ್ಲ. ದ್ವೈತ ಸಿದ್ಧಾಂತ ಹುಟ್ಟಿ ಸುಮಾರು ಏಳು ಶತಮಾನಗಳೇ ಕಳೆದಿದ್ದರೂ; ಮುಕ್ತಿಯೋಗ್ಯರಿಗೆ ಸೇರಿದ ಯಾರೊಬ್ಬರ ಮನೆಯಲ್ಲೂ ದಡ್ಡನೋ, ಹುಚ್ಚನೋ, ಪುಂಡನೋ, ಕೊಲೆಗಡುಕನೋ, ದುರ್ಮಾರ್ಗಿಯೋ, ಹೀಗೆ ಯಾವನೊಬ್ಬನೂ ಹುಟ್ಟಿಲ್ಲವೆ? ಹುಟ್ಟಿದ್ದರೆ; ಅವನು ನಿತ್ಯನಾರಕಿಯಲ್ಲವೆ? ಇಂತಹ ಎಷ್ಟು ಜನ ನಿತ್ಯನಾರಕಿಗಳು ಮೇಲ್ಜಾತಿಯಲ್ಲಿದ್ದಾರೆ? ಎಂದು ಪ್ರಶ್ನಿಸಿಕೊಂಡು; ದುರ್ಬೀನು ಹಾಕಿ ಹುಡುಕಿದರೂ ಒಬ್ಬನೇ ಒಬ್ಬ ಸ್ಯಾಂಪಲ್ಲಿಗಾಗಿ ಸಿಗಲಾರ. ಆದುದರಿಂದ ದ್ವೈತ ಸಿದ್ಧಾಂತ ಕುತಂತ್ರದಿಂದ ಕೂಡಿದೆ ಎಂದು ಹೇಳಬೇಕಾಗುತ್ತದೆ.

ಹಿಂದೂ ಧರ್ಮದ ಪ್ರಾರಂಭದಲ್ಲಿ ಜಾತಿಯ ಪರಿಕಲ್ಪನೆಯೇ ಇರಲಿಲ್ಲ. ಪುರಾಣ ಕಾಲದಲ್ಲಿ ಜಾತಿಪದ್ಧತಿ, ವರ್ಣಾಶ್ರಮ ಮುಂತಾದವು ಜನ್ಮ ಪಡೆದವು. ಪುರಾಣ ಕಾಲಕ್ಕೂ ಹಿಂದಿನ ಕಾಲವೆಂದರೆ ಅದು ಉಪನಿಷತ್ತಿನ ಕಾಲ. ಉಪನಿಷತ್ತಿನ ಕಾಲವನ್ನು ವಿಶ್ವ ತತ್ವಗಳ ಕಾಲವೆಂದೇ ಹೇಳಬಹುದು. ವಿಶ್ವತತ್ವಗಳು ಕಾಲ, ದೇಶ ಮುಂತಾದ ವ್ಯಾಪ್ತಿಯನ್ನು ಮೀರಿ ನಿಲ್ಲುವಂತಹವು ಆಗಿರುವುದರಿಂದ; ಅವುಗಳಿಗೆ ಬುದ್ದಿಜೀವಿಗಳ ಮಾನ್ಯತೆ ಇದೆ.

ಭಗವದ್ಗೀತೆಯಲ್ಲಿ ‘‘ಚಾತುರ್ವರ್ಣ್ಯಂ ಮಯಾ ಸೃಷ್ಟ್ಯಂ ಗುಣಕರ್ಮ ವಿಭಾಗಶಃ’’ ಎನ್ನುವ ಶ್ರೀಕೃಷ್ಣನು ಆಡಿದ ಒಂದು ಮಾತು ಬರುತ್ತದೆ. ‘‘ನಾಲ್ಕು ವರ್ಣಗಳನ್ನು ನಾನೇ ಸೃಷ್ಟಿಸಿದ್ದೇನೆ’’ ಎನ್ನುವುದು ಅದರ ಅರ್ಥ. ಶ್ರೀಕೃಷ್ಣನನ್ನು ಪರಮಾತ್ಮನನ್ನಾಗಿಸಿ; ಅವನ ಬಾಯಿಂದಲೇ ಚತುರ್ವರ್ಣಗಳ ಬಗ್ಗೆ ಹೇಳಿಸಿ; ಅದಕ್ಕೆ ಇಲ್ಲದ ಅರ್ಥಗಳನ್ನು ಕಲ್ಪಿಸಿ, ಬಹು ಜನತೆಯನ್ನು ಕತ್ತಲಿಗೆ ತಳ್ಳಲು ಮೇಲ್ವರ್ಣದ ಕುಬುದ್ದಿಯವರಿಗೆ ಸಾಧ್ಯವಾಯಿತು. ಧರ್ಮ ಶಾಸ್ತ್ರಜ್ಞನೆಂದು ಮಾನ್ಯ ಮಾಡಿರುವ ಮನು ಅಂತವನೂ ಮಾಡಿದ್ದು ಅದನ್ನೇ. ಆದರೆ ಶ್ರೀ ಅರವಿಂದರಂಥವರು ಚಾತುರ್ವರ್ಣ್ಯ ಎನ್ನುವ ಮಾತಿಗೆ ಹೊಸ ಅರ್ಥಕೊಟ್ಟು ವಿಶ್ವಮಾನ್ಯವಾಗುವಂತೆ ಮಾಡಿದ್ದಾರೆ. ಅರವಿಂದರ ಪ್ರಕಾರ; ಚಾತುರ್ವರ್ಣ್ಯ ಎನ್ನುವುದು ಮನುಷ್ಯ ಮಾಡಿದ ಚತುರ್ವರ್ಣ ಅಲ್ಲ. ಅದು ನಿಸರ್ಗ ಮಾಡಿರುವ ಚತುರ್ವರ್ಣ. ಅದು ಪ್ರಪಂಚಕ್ಕೆಲ್ಲ ಅನ್ವಯ. ಬರೀ ಹಿಂದೂ ಧರ್ಮಕ್ಕೆ ಸೀಮಿತವಲ್ಲ. ಎಲ್ಲಾ ದೇಶ, ಧರ್ಮ ಮತ್ತು ಕಾಲಗಳಿಗೂ ಅನ್ವಯ. ನಿಸರ್ಗ ಮಾಡಿರುವ ಚತುರ್ವರ್ಣ ಮನಸ್ಸಿನ ಸ್ಥಿತಿಯನ್ನು ಅವಲಂಭಿಸಿದೆ. ನಿಸರ್ಗದ ಚತುರ್ವರ್ಣದ ಪ್ರಕಾರ; ವರ್ಣ ನಿರ್ಣಯ ಹುಟ್ಟಿನಿಂದಲ್ಲ. ಜೀವನ ಸ್ವರೂಪ, ಸ್ವಭಾವ, ಜನ್ಮಾಂತರ ಸಂಸ್ಕಾರ ಮತ್ತು ಅದಕ್ಕೆ ಅನುಸಾರವಾಗಿ ಕೈಗೊಳ್ಳುವ ಕರ್ಮ ಮುಂತಾದವುಗಳಿಂದ ಸಿದ್ಧವಾಗುತ್ತವೆ. ಇನ್ನೂ ಸರಳೀಕರಿಸಿ ಹೇಳಬೇಕೆಂದರೆ; ಬೌದ್ದಿಕವಾಗಿ ತುಂಬಾ ವಿಕಾಸವಾದವರು ಕಲೆ, ಸಾಹಿತ್ಯ, ಸಂಸ್ಕೃತಿ ಮುಂತಾದವುಗಳನ್ನು ರೂಢಿಸಿಕೊಳ್ಳುತ್ತಾ ಬದುಕಿಗೆ ವಿವೇಕದ ಅರ್ಥ ತಂದುಕೊಳ್ಳುವವರು ಒಂದುಕಡೆಯಾದರೆ; ಹುಟ್ಟುವುದು, ತಿನ್ನುವುದು, ತನ್ನ ಸಂಸಾರಕ್ಕಾಗಿ ಸಾಯುವುದು ಮುಂತಾದವುಗಳಲ್ಲೇ ಸುತ್ತುವವರು ಇನೊಂದು ಕಡೆ. ಬಾಹ್ಯರೂಪಿನಿಂದ ಇವರು ಮೊದಲ ವರ್ಗದವರಂತೆ ಕಂಡರೂ; ನಡವಳಿಕೆಗಳಲ್ಲಿ ಹಿಂಸಾಪರರೂ, ಕ್ರೂರಿಗಳೂ, ಅಮಾನಯ ಸ್ವಾರ್ಥಪರರೂ ಆಗಿರುತ್ತಾರೆ. ಇದನ್ನು ರಾಕ್ಷಸಗುಣ ಎನ್ನುತ್ತಾರೆ. ಈ ಗುಣದವರನ್ನು ‘ರಾಕ್ಷಸರು’ ಎಂದು ಪರಿಗಣಿಸಬೇಕಾಗುತ್ತದೆ. ಇದು ಯಾವುದರ ಪರಿಜ್ಞಾನವೂ ಇಲ್ಲದೆ ಪ್ರಾಣಿಗಳ ಬದುಕಿಗೆ ಸಮಾನರಾಗಿ ಬದುಕುವವರು ಮತ್ತೊಂದು ಕಡೆ. ‘ಪ್ರಾಣಿಗಳು’ ಎಂದರೆ ವಿಕಾಸದ ಕೆಳಹಂತದಲ್ಲಿದ್ದು, ಆದಿಮಾನವ ಗುಣವನ್ನು ಹೊಂದಿರುವ ರಾಮಾಯಣದ ಜಾಂಬುವಂತನಂತವರು ಒಂದು ಕಡೆಯಾದರೆ; ವಿಕಾಸದ ಸ್ವಲ್ಪ ಮೇಲುಹಂತದಲ್ಲಿದ್ದು, ಬರೀ ಸೇವೆ ಮಾಡಲಷ್ಟೇ ಲಾಯಖ್ಖಾದ ರಾಮಾಯಣದ ವಾಲಿ, ಸುಗ್ರೀವ, ಹನುಮಂತರಂತವರು ಇನ್ನೊಂದು ಕಡೆ. ಮೊದಲ ವರ್ಣದವರಲ್ಲಿ ಮನಸ್ಸಿನ ವಿಕಾಸ ಹೆಚ್ಚಾಗಿದ್ದರೆ; ಕೊನೆಯವರಲ್ಲಿ ಅದು ತುಂಬಾ ಕಡಿಮೆ ಇರುತ್ತದೆ. ಈಗ ಹೇಳಿ; ಗೀತಾಚಾರ್ಯನ ಮಾತು ಇಡೀ ಮಾನವ ಕುಲಕ್ಕೆಲ್ಲಾ ಅನ್ವಯವಾಗುತ್ತದೋ ಇಲ್ಲವೊ?

ಹಿಂದೂ ಧರ್ಮದ ಸಂಸ್ಕೃತಿಗೆ ಸಂಬಂಧಿಸಿದ ನೃತ್ಯ, ಸಂಗೀತ, ಸಾಹಿತ್ಯ, ಶಿಲ್ಪ, ಕುಶಲಕಲೆ, ಜಾನಪದ ಮುಂತಾದ ಎಲ್ಲ ಕಲೆಗಳೂ ಶೂದ್ರರ ಸೃಷ್ಟಿ. ಅರವಿಂದರ ಪ್ರಕಾರ ಇವರೆಲ್ಲ ಮೊದಲ ವರ್ಣದವರಾಗಬೇಕಿತ್ತು. ಆದರೆ; ವಾಸ್ತವದಲ್ಲಿ ಇವರೆಲ್ಲ ಶೂದ್ರ ಸ್ಥಾನದಲ್ಲೇ ಉಳಿದರು. ಇದಕ್ಕೆ ಪ್ರಮುಖ ಕಾರಣ; ವೇದ, ಉಪನಿಷತ್ತು, ಗೀತೆಗಳ ಕಾಲದಿಂದಲೂ ಕರ್ಮ ಕೀಳೆಂಬ ಭಾವನೆ ಮೇಲಿನ ವರ್ಣದವರಲ್ಲಿ ಉಂಟಾಗಿದ್ದು, ಅಂದರೆ, ಹಿಂದೂ ಸಾಮಾಜಿಕ ವ್ಯವಸ್ಥೆಯ ರಚನೆಯಲ್ಲಿರುವ ಶ್ರೇಣೀಕೃತ ವ್ಯವಸ್ಥೆಯಿಂದ ಮೇಲಿನ ವರ್ಣದವರಾರೂ ಸಂಸ್ಕೃತಿಗೆ ಸಂಬಂಧಿಸಿದ ನೃತ್ಯ, ಶಿಲ್ಪ, ಕುಶಲಕಲೆ, ಜಾನಪದ ಮುಂತಾದವುಗಳಿಗೆ ಕೈ ಹಾಕಲಿಲ್ಲ. ಶೂದ್ರರಿಂದಲೇ ಸೃಷ್ಟಿ ಪಡೆದು ಸಂರಕ್ಷಿಸಿಕೊಂಡು ಬಂದ ಈ ಕಲೆಗಳು ತಮ್ಮ ನಡಿಗೆಯಲ್ಲಿ ಎಂದೂ ಬದಲಾಗದೆ, ಹೊಸದನ್ನು ಸ್ವೀಕರಿಸದೆ, ಶಾಸ್ತ್ರಕ್ಕೆ ಕಟ್ಟುಬಿದ್ದು ತಮ್ಮ ಮೂಲ ಸ್ವರೂಪವನ್ನು ತದ್ವತ್ತಾಗಿ ಬಳಸಿಕೊಂಡು ಬಂದಿದೆಯೇ ಹೊರತು ಸೃಜನಶೀಲ ಸೃಷ್ಟಿಯಾಗಿ ಬೆಳೆದುಬಂದಿಲ್ಲ.

ಹಿಂದೂ ಸಮಾಜಕ್ಕೂ ಇತರ ಸಮಾಜಗಳಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಉದಾ : ಇತರ ಸಂಸ್ಕೃತಿಯ ಯಾವುದೇ ಒಂದು ಹಳ್ಳಿಯನ್ನು ಪರೀಕ್ಷಿಸಿದರೂ; ಅದೊಂದು ಒಟ್ಟಾಗಿರುವ, ಆಹಾರ-ವಿಹಾರ, ದೇಹಸಂಪರ್ಕ-ರಕ್ತ ಸಂಪರ್ಕ, ಕುಡಿತ-ಕುಣಿತ ಇತ್ಯಾದಿ ಸಾಮಾಜಿಕ ವ್ಯವಹಾರಗಳಲ್ಲಿ ಒಟ್ಟಾಗಿ ಒಂದು ಸಮುದಾಯ (Community) ವ್ಯವಸ್ಥೆಯಾಗಿರುತ್ತದೆ ಆದರೆ ಹಿಂದೂ ಸಮಾಜದ ಪ್ರತಿಯೊಂದು ಹಳ್ಳಿಯೂ ಜಾತಿಗಳಿಗನುಗುಣವಾಗಿ ಬ್ರಾಹ್ಮಣರ ಕೇರಿ, ಶೆಟ್ರ ಬೀದಿ, ವಡ್ಡ್ರಕೇರಿ, ನಾಯಕರ ಕೇರಿ, ಸುಣ್ಣಗಾರ್ರ ಬೀದಿ, ಎಂಬುದಾಗಿ ‘ಓಣಿ’ ‘ಕೇರಿ’ಗಳಾಗಿ ವಿಭಜಿಸಲ್ಪಟ್ಟು; ಒಂದು ಜಾತಿಯಿಂದ ಇನ್ನೊಂದು ಜಾತಿಗೆ, ಒಂದು ಓಣಿಯಿಂದ ಇನ್ನೊಂದು ಓಣಿಗೆ ಊಟ ತಿಂಡಿ, ಹೆಣ್ಣು-ಗಂಡುಗಳ ರಕ್ತ ಸಂಬಂಧಗಳಿಲ್ಲದೆ; ಪ್ರತಿ ಓಣಿಯೂ ಪ್ರತ್ಯೇಕವಾಗಿ ಉಳಿದುಬಿಡುತ್ತದೆ.

ಹೀಗೆ ಒಡೆದು ಆಳುವ ಇಂತಹ ತತ್ವದ ಪ್ರಥಮ ಭೀಜ ಋಗ್ವೇದದಲ್ಲಿ ಬಿತ್ತನೆಯಾಗಿದೆ. ಋಗ್ವೇದದಲ್ಲಿ ಪುರುಷನು ತನ್ನನ್ನು ನಾಲ್ಕು ಭಾಗಗಳಾಗಿ ವಿಭಜಿಸಿಕೊಂಡು; ಬಾಯಿಂದ ಬ್ರಾಹ್ಮಣರನ್ನೂ, ಭುಜಗಳಿಂದ ಕ್ಷತ್ರಿಯರನ್ನೂ, ತೊಡಗಳಿಂದ ವೈಶ್ಯರನ್ನೂ, ಪಾದಗಳಿಂದ ಶೂದ್ರರನ್ನೂ ಸೃಷ್ಟಿಸುತ್ತಾನೆ. ಈ ಶ್ರೇಣೀಕೃತ ವ್ಯವಸ್ಥೆಯಲ್ಲಿ ತೀರಾ ಕೆಳಗಿರುವ ಬಡಪಾಯಿಗಳೆಂದರೆ ಶೂದ್ರರು ಮತ್ತು ಸ್ತ್ರೀಯರು. ಹಿಂದೂ ಧರ್ಮದಲ್ಲಿ ಒಂದು ದುಃಖದಾಯಕ ಮತ್ತು ದುರಂತ ಸಂಗತಿಯೆಂದರೆ; ಜಾತಿ ವ್ಯವಸ್ಥೆಯನ್ನು ಒಂದು ಸಾಮಾಜಿಕ ವ್ಯವಸ್ಥೆಯನ್ನಾಗಿ ಒಪ್ಪಿಕೊಂಡಿದ್ದರ ಜೊತೆಗೆ ಅದನ್ನು ಒಂದು ನೀತಿ ವ್ಯವಸ್ಥೆಯನ್ನಾಗಿ ಒಪ್ಪಿಕೊಂಡದ್ದು

ಹಿಂದೂ ಧರ್ಮದಲ್ಲಿನ ವರ್ಣ ವ್ಯವಸ್ತೆ ಎಷ್ಟು ಕ್ರೂರವಾದದ್ದು ಎಂದರೆ; ಅದು ಒಂದು ರೀತಿಯ ದಮನಕಾರಿ. ಅದೂ ಬರೀ ದಮನಕಾರಿಯಲ್ಲ. ಒಂದು ವಿಧದ ‘ಶೀತಲ ದುರ್ದವನ.’ ಕೆಳಸ್ಥರದವರನ್ನೆಲ್ಲ ಒಳಗೇ ಕೊಲ್ಲುತ್ತಿರುವಂಥಾದ್ದು. ರಾಮಾಯಣದಲ್ಲಿನ ರಾಮ ಶೂದ್ರ ಶಂಭೂಕನನ್ನು ವಧಿಸಿದ್ದು, ಮಹಾಭಾರತದಲ್ಲಿನ ದ್ರೋಣ ಏಕಲವ್ಯನು ತನ್ನ ಹೆಬ್ಬೆರಳನ್ನು ಕತ್ತರಿಸಿಕೊಳ್ಳುವಂತೆ ಮಾಡಿ ನಿರ್ವೀರ್ಯಗೊಳಿಸಿದ್ದು, ಪರಶುರಾಮ ಕರ್ಣನನ್ನು ಶಪಿಸಿ ಅಚಲನನ್ನಾಗಿಸಿದ್ದು, ಇವೆಲ್ಲಕ್ಕಿಂತಲೂ ಹೆಚ್ಚಾಗಿ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಹಾಗೂ ಮನುವಿನ ಧರ್ಮಶಾಸ್ತ್ರದಲ್ಲಿ ಈ ಶೀತಲ ದುರ್ದವನ ಮಡುಗಟ್ಟಿ ಘನೀಭೂತವಾಗಿದೆ.

ಮನು ಧರ್ಮಶಾಸ್ತ್ರದಲ್ಲಿ; ವೇದ ಪಠಣ ಕೇಳುವ ಶೂದ್ರನ ಕಿವಿಗೆ ಕಾದ ಸೀಸೆ ಅಥವಾ ಕಾದ ಅರಗನ್ನು ತುಂಬುವುದು; ಶೂದ್ರನೊಬ್ಬ ವೇದಮಂತ್ರ ಉಚ್ಛರಿಸಿದಲ್ಲಿ ಅವನ ನಾಲಗೆಯನ್ನು ಕತ್ತರಿಸುವುದು; ವೇದ ಮಂತ್ರವನ್ನು ನೆನಪಿಸಿಕೊಂಡಲ್ಲಿ ಶೂದ್ರನ ದೇಹವನ್ನು ಇಬ್ಭಾಗವಾಗಿ ಸೀಳುವುದು. ಶೂದ್ರನೊಬ್ಬ ತನ್ನನ್ನು ತಾನು ಬ್ರಾಹ್ಮಣನೆಂದು ಕರೆದುಕೊಂಡಲ್ಲಿ ಆತನ ಕಣ್ಣುಗಳನ್ನು ವಿಷಪೂರಿತ ಮುಲಾಮಿನಿಂದ ನಾಶಗೊಳಿಸುವುದು. ಬೇರೆಯವರ ಆಸ್ತಿಗೆ ಬೆಂಕಿ ಹಚ್ಚಿದ ಹೆಂಗಸನ್ನು ಅವಳು ಗರ್ಭಿಣಿಯಾಗಿರಲಿ ಅಥವಾ ಒಂದು ತಿಂಗಳ ಬಾಣಂತಿಯಾಗಿರಲಿ, ಗೂಳಿಗಳಿಂದ ಸಿಗಿಸುವುದು ಮುಂತಾಗಿ ಮನುವು ಅಪ್ಪಣೆ ಕೊಡಿಸುತ್ತಾನೆ. ಐತ್ತರೀಯ ಬ್ರಾಹ್ಮಣದಲ್ಲಿ ಶೂದ್ರನನ್ನು ‘ಅನ್ಯಶ್ಯ ಪ್ರೇಶ್ಯ’ ಅಂದರೆ ಇನ್ನೊಬ್ಬರ ದಾಸ. ‘ಯಥಾ ಕಾಮ ವಧ್ಯಾ’ ಅಂದರೆ ಇಷ್ಟಬಂದಂತೆ ಕೊಲ್ಲಲರ್ಹನು ಎಂದು ಹೇಳಲಾಗಿದೆ. ಮನಸ್ಸು ಸ್ವಲ್ಪವೂ ತಲ್ಲಣಗೊಳ್ಳದೆ ಹಿಂಸೆಯನ್ನು ಮೆಲುಕು ಹಾಕುತ್ತಾ ಶಿಕ್ಷೆಯನ್ನು ವಿಧಿಸುವ ಈ ಶೀತಲ ಮನೋಭಾವ ಇಡೀ ಮಾನಯತೆಯನ್ನೇ ತಲ್ಲಣಗೊಳಿಸುತ್ತದೆ.

ಹಿಂದೂ ಧರ್ಮದಲ್ಲಿನ ಜಾತಿ ಕಲ್ಪನೆಯೇ ಹಿಂಸಾತ್ಮಕ. ಈ ಹಿಂಸೆಗೆ ತುತ್ತಾದವರು ಶೂದ್ರರು ಮತ್ತು ಸ್ತ್ರೀಯರು. ಈ ಧರ್ಮದಲ್ಲಿ ಶೂದ್ರರು ಕೀಳು ಮಾನವರಾದರೆ, ಸ್ತ್ರೀ ನೀಚಳಾಗಿದ್ದಾಳೆ. ಆದುದರಿಂದ ಹಿಂದೂ ಸಮಾಜದಲ್ಲಿ ಸ್ತ್ರೀ ಶೂದ್ರರಿಗಿಂತ ಹೆಚ್ಚಿನ ತುಚ್ಛೀಕರಣಕ್ಕೆ ಒಳಗಾಗಿದ್ದಾಳೆ. ಋಗ್ವೇದದಲ್ಲಿ ಸ್ತ್ರೀ ‘ಕಿರುಬನ ಹೃದಯದವಳು’. ಮಹಾಭಾರತದಲ್ಲಿ ಅವಳು ‘ಎಲ್ಲ ಕೆಡುಕಿನ ಬೇರು’. ರಾಮಾಯಣದಲ್ಲಿ ಅವಳು ‘ಚಂಚಲೆ, ಖಡ್ಗದಂತೆ ಹರಿತವಾದವಳು, ಬಿರುಗಾಳಿಯಂತೆ ಅಸ್ಥಿರಳು. ಮನುಧರ್ಮಶಾಸ್ತ್ರದಲ್ಲಿ ‘ಹೆಂಗಸು ಕಾಮ ಪಿಪಾಸೆಯುಳ್ಳವಳು; ಕುಟಿಲೆ, ಸ್ವಾತಂತ್ರ್ಯಕ್ಕೆ ಸ್ತ್ರೀ ಎಂದಿಗೂ ಅನರ್ಹಳು’. ಶಾಕ್ತದಲ್ಲಿ ‘ಸ್ತ್ರೀ ಒಂದು ವಸ್ತು, ಪದಾರ್ಥ’, ರಾಮಾಯಣ ಮತ್ತು ಮಹಾಭಾರತಗಳಲ್ಲಿ ಸೀತೆ ಮತ್ತು ದ್ರೌಪದಿ ಫಣಕ್ಕಿಟ್ಟ ಒಂದು ವಸ್ತು. ಫಣದಲ್ಲಿ ರಾಮ ಮತ್ತು ಅರ್ಜುನ ಗೆಲ್ಲುತ್ತಾರೆ; ಧರ್ಮರಾಯ ಸೋಲುತ್ತಾನೆ. ಐತ್ತರೀಯ ಬ್ರಾಹ್ಮಣದಲ್ಲಿ ‘ಹೆಣ್ಣು ಮಗುವಿನ ಜನನ ಒಂದು ಶಾಪ’, ‘ಹೆಣ್ಣು ಹೃದಯವನ್ನು ಭೇದಿಸುವ ಚೂಪಾದ ಸಲಾಕೆ; ಹೆಣ್ಣು ಯಾವಾಗಲೂ ಒಂದು ಭಾರ; ಹುಟ್ಟಿ ತಂದೆ-ತಾಯಿಗಳಿಗೆ ಹೊರೆ; ಮದುವೆಯಾಗದಿದ್ದರೆ ಮನೆತನಕ್ಕೆ ಕಳಂಕ; ಮದುವೆಯಾದರೆ ಗಂಡನಿಗೆ ದಾಸಿ; ವಿಧವೆಯಾದರೆ ಸಮಾಜ ಬಾಹಿರಳು’ ಎಂದು ಹೇಳಲಾಗಿದೆ.

ಹಿಂದೂ ಧರ್ಮದಲ್ಲಿನ ಸ್ತ್ರೀಯ ಲೈಂಗಿಕ ಶೋಷಣೆಯಂತೂ ನಿರಂತರ. ಸತ್ಯಯುಗ ವೆಂದು ಕರೆಸಿಕೊಳ್ಳುವ ಪೂರ್ವಕಾಲದ ಸ್ಥಿತಿಯನ್ನು ಪರಿಶೀಲಿಸಿದರೆ ಸತ್ಯ ಅರಿವಾಗುತ್ತದೆ.

ಬ್ರಹ್ಮ ಸರಸ್ವತಿಯನ್ನು ಸೃಷ್ಟಿಸಿ ಮುಂದೆ ಅವಳನ್ನೇ ವರಿಸಿ ತಂದೆಯಾಗಬೇಕಿದ್ದವನು ಗಂಡನಾದ. ಇದೇ ಬ್ರಹ್ಮ ಮತ್ತೋರ್ವ ದೇವಕನ್ಯೆಯ ಸೌಂದರ್ಯಕ್ಕೆ ಮಾರುಹೋಗಿ ಲೈಂಗಿಕ ಸುಖಕ್ಕಾಗಿ ತಹತಹಿಸಿದ್ದರಿಂದ ಸ್ಕಲನವಾದ ರ್ಯದಿಂದ ಭೃಗು ಮಹರ್ಷಿ ಹುಟ್ಟಿದನು.

ಗೌತಮ ಮಹರ್ಷಿಯ ಹೆಂಡತಿ ಅಹಲ್ಯೆ ಅಪ್ರತಿಮ ಸುಂದರಿ. ಆಕೆಯನ್ನು ಬಯಸದ ದೇವತೆಯೇ ಇಲ್ಲ. ದೇವೇಂದ್ರ ಮಾತ್ರ ಆಕೆಯನ್ನು ಮೊದಲು ಭೋಗಿಸಿದ ಪರಪುರುಷನಾದ. ಅದರ ಫಲವಾಗಿ ಶತಾನಂದ ಹುಟ್ಟಿದ. ಅದೇ ಇಂದ್ರ ಅಹಲ್ಯೆಯನ್ನು ಮತ್ತೊಮ್ಮೆ ಭೋಗಿಸಿದ್ದರಿಂದ ವಾಲಿಯು ಹುಟ್ಟಿದನು. ಬಹಳ ಜನ ದೇವತೆಗಳಿಗೆ ಕಾಮಜ್ವರ ಉಂಟುಮಾಡಿದ್ದ ಅಹಲ್ಯೆಯ ಸೌಂದರ್ಯವನ್ನು ಕೊಳ್ಳೆ ಹೊಡೆಯುವ ಮುಂದಿನ ಛಾನ್ಸು ದೊರೆತದ್ದು ಸೂರ್ಯ ಪರಮಾತ್ಮನಿಗೆ. ಅದರಿಂದ ಸುಗ್ರೀವ ಹುಟ್ಟಿದ. ಹೀಗೆ ಆರ್ಯರ ಇಂದ್ರಾದಿ ದೇವತೆಗಳು ಅಹಲ್ಯೆಯ ಸೌಂದರ್ಯವನ್ನು ಕೊಳ್ಳೆ ಹೊಡೆದು ಸೂರೆಗೊಂಡರೆ; ಶೋಷಿತರಾದವರು ಅಹಲ್ಯೆ ಮತ್ತು ಗೌತಮರು.

ದೇವತೆಗಳ ಗುರುವೆನಿಸಿಕೊಂಡಿದ್ದ ಬೃಹಸ್ಪತಿ ತನ್ನ ಅಣ್ಣನ ಹೆಂಡತಿಯಾದ ಮಮತಳನ್ನು; ಆಕೆ ಬೇಡವೆಂದು ಬೇಡಿಕೊಂಡರೂ ಬಿಡದೆ ಬಲವಂತವಾಗಿ ಭೋಗಿಸಿದ್ದರ ಫಲವಾಗಿ ಭಾರಧ್ವಾಜ ಮಹರ್ಷಿ ಹುಟ್ಟಿದನು. ಸೌಂದರ್ಯವತಿಯಾದ ಮತ್ಸ್ಯಗಂಧಿಯನ್ನು ನೋಡಿದ ಪರಾಶರ ಋಷಿ ಕಾಮದ ಪರಾಕಾಷ್ಠೆಯನ್ನು ತಲುಪಿ ಹಾಡುಹಗಲೇ ಭೋಗಿಸಿದ್ದರ ಫಲವಾಗಿ ವೇದವ್ಯಾಸ ಮುನಿ ಹುಟ್ಟಿ ಮುಂದೆ ಮಹಾಭಾರತದಂಥ ಕಾವ್ಯ ರಚನೆಗೆ ಕಾರಣನಾದ.

ಹಿಂದೂ ದೇವತೆಗಳಾದ ವರುಣ ಮತ್ತು ಸೂರ್ಯರು ಇಂದ್ರನ ಆಸ್ಥಾನದಲ್ಲಿದ್ದ ಅಪರಿಮಿತ ಸುಂದರಿ, ನರ್ತಕಿ ಊರ್ವಶಿಯನ್ನು ಒಟ್ಟಾಗಿ ಮೊದಲ ಸಲ ನೋಡಿದ್ದರ ಫಲವಾಗಿ; ಈರ್ವರೂ ಕಾಮೋದ್ರಿಕ್ತರಾಗಿದ್ದರಿಂದ, ಈರ್ವರಲ್ಲೂ ರ್ಯ ಸ್ಕಲನವಾಗು ತ್ತದೆ. ಅದನ್ನು ಕಂಡ ಊರ್ವಶಿ; ಈರ್ವರ ರ್ಯವನ್ನೂ ಬಳಿದುಕೊಂಡು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ ಒಟ್ಟಿಗೆ ಇಡುತ್ತಾಳೆ. ಆ ರ್ಯದಿಂದ ವಸಿಷ್ಠ ಮತ್ತು ಅಗಸ್ತ್ಯ ಎನ್ನುವ ಇಬ್ಬರು ಋಷಿಗಳು ಹುಟ್ಟುತ್ತಾರೆ. ದೇವತೆಗಳ ಭೋಗದ ವಸ್ತುವಿನಂತಿದ್ದ ಘೃತಾಚಿಯನ್ನು ನೋಡಿದ ಭಾರದ್ವಾಜ ಮಹರ್ಷಿ ಒಮ್ಮೆ ಕಾಮೋದ್ರಿಕ್ತನಾದ. ಅದರಿಂದ ರ್ಯ ಸ್ಕಲನವಾಯಿತು. ಆ ರ್ಯವನ್ನು ಆತ ಒಂದು ದ್ರೋಣದಲ್ಲಿ (ಪಾತ್ರೆಯಲ್ಲಿ) ಸಂಗ್ರಹಿಸಿಟ್ಟ. ಅದರಿಂದ ದ್ರೋಣಾಚಾರ್ಯರು ಹುಟ್ಟಿದರು. ಮಹಾಭಾರತ ಯುದ್ಧಕ್ಕೆ ಮೊದಲು ಸಂಧಾನಕ್ಕೆಂದು ರಾಯಭಾರಿಯಾಗಿ ಕೌರವನ ಕಡೆ ಹೋದ ಶ್ರೀಕೃಷ್ಣ ಕರ್ಣನನ್ನು ಕುರಿತು; ‘‘ಕರ್ಣಾ, ದಪ್ಪ ಮೊಲೆಗಳ ಸುಂದರಿಯಾದ ದ್ರೌಪದಿಯನ್ನು ಅನುಭವಿಸಲಿಕ್ಕಾದರೂ ನೀನು ಪಾಂಡವರ ಪಕ್ಷವನ್ನು ಸೇರು’’ ಎಂದು ಅಪ್ಪಣೆ ಕೊಡಿಸುತ್ತಾನೆ. ಹೀಗೆ ಅಂದಿನಿಂದ ಇಂದಿನವರೆಗಿನ ಹಿಂದೂ ಧರ್ಮದಲ್ಲಿ ಹುಡುಕುತ್ತಾ ಹೋದರೆ, ಹೆಣ್ಣಿನ ಲೈಂಗಿಕ ಶೋಷಣೆಯ ಉದಾಹರಣೆಗಳ ಸರಮಾಲೆಯೇ ನಮ್ಮ ಮುಂದೆ ನಿಲ್ಲುತ್ತದೆ.

ಹಿಂದೂ ಧರ್ಮದಲ್ಲಿ ಹೆಣ್ಣು ಇಷ್ಟೊಂದು ಶೋಷಣೆಗೆ ಒಳಗಾಗಿರುವುದು ಸತ್ಯ. ಆದರೆ; ಆಕೆಯನ್ನು ಲಕ್ಷ್ಮಿ, ಸರಸ್ವತಿ, ಪಾರ್ವತಿ ಮುಂತಾದ ಹೆಣ್ಣು ದೇವತೆಗಳ ಸ್ಥಾನದಲ್ಲಿರಿಸಿ ಪೂಜಿಸುವುದನ್ನು ಅಥವಾ ಪೂಜಿಸುತ್ತಿರುವುದನ್ನೂ ಕಾಣುತ್ತೇವೆ. ಈ ವಿಚಿತ್ರ ಹೇಗೆ ಸಾಧ್ಯವಾಯಿತು? ಎನ್ನುವುದೇ ನಮ್ಮ ಮುಂದಿರುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭ. ಆರ್ಯರು ಇಂಡಿಯಾಕ್ಕೆ ಬಂದು ಇಲ್ಲಿನ ಆದಿವಾಸಿಗಳಾಗಿದ್ದ ದ್ರಾವಿಡರೊಡನೆ ಹೋರಾಡಿ ಅವರನ್ನು ಸೆರೆಯಾಳುಗಳನ್ನಾಗಿ ಮಾಡಿಕೊಂಡನಂತರ ಸಂಸ್ಕೃತೀಕರಣ ಅಥವಾ ಸಂಕರ ಪ್ರಾರಂಭವಾಯಿತು. ಬಹುಸಂಖ್ಯೆಯ ಸ್ಥಳೀಯ ದ್ರಾವಿಡರಲ್ಲಿ ಮಾತೃ ದೇವತಾರಾಧನೆ ಪ್ರಧಾನವಾಗಿತ್ತು ಮತ್ತು ಹೆಣ್ಣಿಗೆ ಸಾಮಾಜಿಕವಾಗಿ ಸಮಾನತೆಯಿತ್ತು. ಮಾತೃದೇವತೆಗಳು ಅಥವಾ ಹೆಣ್ಣು ದೇವತೆಗಳು ಭೀಕರ ಸ್ವರೂಪವನ್ನು ಪಡೆದಿದ್ದವು. ಅಗಲದ ಚಪ್ಪಟೆ ಮುಖ. ತೆರೆದ ದಪ್ಪ ಕಣ್ಣುಗಳು, ಉದ್ದಕ್ಕೆ ಹೊರಗೆ ಚಾಚಿಕೊಂಡ ನಾಲಗೆ, ಉದ್ದನೆಯ ಬಿಳಿಯ ಕೋರೆಗಳು ಇಂತಹ ಭಯಂಕರ ಹೆಣ್ಣು ದೇವತೆಗಳ ಆರಾಧನೆ ದ್ರಾವಿಡರದಾಗಿತ್ತು. ಶಿವ ದ್ರಾವಿಡರ ಗಂಡು ದೇವತೆ ಆಗಿದ್ದರಿಂದ ಅವನ ಹೆಂಡತಿ ಪಾರ್ವತಿಯನ್ನು ಹೆಣ್ಣು ದೇವತೆಯಾಗಿ ಪರಿಗಣಿಸಿ ಆರಾಧಿಸಲಾಗುತ್ತಿತ್ತು ಹಾಗೂ ಆರಾಧಿಸಲಾಗುತ್ತಿದೆ. ಇಂತಹ ಪಾರ್ವತಿಗೂ ಭಯಂಕರ ಲಕ್ಷಣಗಳು ಇರುವುದನ್ನು ಅವಳ ಇನ್ನೊಂದು ಹೆಸರಿನ ‘ದುರ್ಗೆ’ಯ ರೂಪದಲ್ಲಿ ಕಾಣಬಹುದು. ಆದರೆ ಲಕ್ಷ್ಮಿ ಮತ್ತು ಸರಸ್ವತಿಯರಲ್ಲಿ ಈ ಭಯಂಕರ ರೂಪಗಳನ್ನು ಕಾಣಲಾಗದು. ಇವರೀರ್ವರನ್ನೂ ಸೌಮ್ಯದೇವತೆಗಳು ಎಂದು ಪರಿಗಣಿಸಲಾಗಿದೆ. ಲಕ್ಷ್ಮಿ ಮತ್ತು ಸರಸ್ವತಿ ವೃದ್ದಿಯ ಸಂಕೇತವಾಗಿದ್ದರೆ; ಪಾಲನಕರ್ತೆಯಾಗಿದ್ದ ಪಾರ್ವತಿ ಬರುಬರುತ್ತಾ ರಾಕ್ಷಸರನ್ನು ಕೊಲ್ಲುವ; ಒಟ್ಟಿನಲ್ಲಿ ನಾಶದ ಸಂಕೇತವಾಗಿದ್ದಾಳೆ. ದ್ರಾವಿಡರ ಪಾರ್ವತಿ ದೇವತೆಗೆ ಲಕ್ಷ್ಮಿ ಮತ್ತು ಸರಸ್ವತಿ ಆರ್ಯರ ಸಮಾನಾಂತರ ಸೃಷ್ಟಿ ಎಂದೇ ಹೇಳಬೇಕು. ಹೆಣ್ಣಿಗೆ ಸಮಾನತೆಯ ಸ್ಥಾನವೇ ಇಲ್ಲದ ಆರ್ಯರಲ್ಲಿ ಲಕ್ಷ್ಮಿ ಮತ್ತು ಸರಸ್ವತಿಯರನ್ನು ಹೆಣ್ಣುದೇವತೆಗಳೆಂದು ಒಪ್ಪಿಕೊಂಡಿರುವುದು ತ್ರಿಮೂರ್ತಿಗಳ ಕಲ್ಪನೆ ಉಂಟಾದ ನಂತರವೇ ಎಂದು ಹೇಳಬಹುದು. ದ್ರಾವಿಡರ ಮತ್ತು ಆರ್ಯರ ಸಂಸ್ಕೃತೀಕರಣದ ಸಂದರ್ಭದಲ್ಲಿ ಬಹು ಸಂಖ್ಯೆಯ ದ್ರಾವಿಡರ ಕೆಲವು ನಂಬಿಕೆ ಮತ್ತು ಆಚರಣೆಗಳಿಂದ ಆರ್ಯರು ಪ್ರಭಾವಿತರಾಗಿದ್ದರಿಂದ ಅಥವಾ ಸಮಾನತೆಗಾಗಿ; ಹೆಣ್ಣು ದೇವತಾರಾಧನೆಗೆ ಆರ್ಯರು ಒಲ್ಲದ ಮನಸ್ಸಿನಿಂದ ತೊಡಗಬೇಕಾಯಿತು ಎಂದು ತೀರ್ಮಾನಿಸಬಹುದು. ಆರ್ಯರು ನಂಬಿಕೆ ಮತ್ತು ವಿಚಾರಗಳ ಹಿಂದೂ ಧರ್ಮದಲ್ಲಿ ಪ್ರಾಧಾನ್ಯತೆ ಪಡೆದಂತೆಲ್ಲ; ಹೆಣ್ಣಿನ ಬಗ್ಗೆ ದ್ರಾವಿಡರಲ್ಲಿ ಇದ್ದ ಸಮಾನತೆ ಅಂಶ ಕಡಿಮೆಯಾಗುತ್ತಾ ಬಂತು. ಹೆಣ್ಣನ್ನು ಒಂದು ಕಡೆ ಪೂಜಿಸುವುದು ಮತ್ತೊಂದುಕಡೆ ಕಾಲಿನ ಕಸಕ್ಕಿಂತ ಕಡೆಯಾಗಿ ಕಾಣುವುದು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಯಿತು ಎಂದು ಹೇಳಬಹುದು.

ವಲಸೆ ಬಂದ ಆರ್ಯರು ದ್ರಾವಿಡ ಸ್ತ್ರೀಪುರುಷರನ್ನು ತಮ್ಮ ಸೇವಕರಂತೆ ದುಡಿಸಿ ಕೊಂಡದ್ದು, ಕೀಳಾಗಿ ನಡೆಸಿಕೊಂಡದ್ದು ಸ್ವಾಭಾವಿಕ. ಅವರು ಎಷ್ಟಾದರೂ ಯುದ್ಧಗಳಲ್ಲಿ ಸೋತು ಸೆರೆಸಿಕ್ಕ ಕಪ್ಪುಜನರಲ್ಲವೆ. ಆದರೆ ತಮ್ಮವರೇ ಆದ ಆರ್ಯ ಸ್ತ್ರೀಯರನ್ನೂ ಸೇರಿಸಿಕೊಂಡು; ಒಟ್ಟಿನಲ್ಲಿ ಇಂಡಿಯಾದ ಇಡೀ ಸ್ತ್ರೀ ಕುಲಕ್ಕೇ ಸಮಾನತೆಯ ಸ್ವಾತಂತ್ರ್ಯವನ್ನು ನಿರಾಕರಿಸಿ ದಾಸಿಯರಂತೆ ನಡೆಸಿಕೊಂಡದ್ದು ಏಕೆ? ಎನ್ನುವುದು ಒಂದು ಮುಖ್ಯ ಪ್ರಶ್ನೆಯಾಗುತ್ತದೆ.

ಆರ್ಯ ಪುರುಷರು ಜ್ಞಾನ, ಸಂಪತ್ತು ಮತ್ತು ಶಕ್ತಿ ಸಂಪಾದನೆಯ ಕ್ರಿಯೆಗಳಲ್ಲಿ ತೊಡಗಿದಾಗ ಹೆಣ್ಣು ತನ್ನ ಪ್ರಕೃತಿದತ್ತ ಋತುಕ್ರಿಯೆ, ಜೀವ ಸೃಷ್ಟಿ, ಪೋಷಣೆ ಮುಂತಾದ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆಗಳಿಂದ, ದೈಹಿಕ ಶಕ್ತಿಯ ಅಸಮಾನತೆಯಿಂದ ಹಿಂದುಳಿದಿದ್ದರಿಂದ; ಸಂಪಾದನೆಯಲ್ಲಿ ಪುರುಷನಿಗೆ ಸಮನಾಗಿ ನಿಲ್ಲಲು ಸಾಧ್ಯವಾಗಿಲ್ಲ. ಇದು ನಿಸರ್ಗನಿಯಮ. ಈ ಹೊತ್ತಿಗೂ ಹೆಣ್ಣಿನ ದೈಹಿಕ ಶಕ್ತಿ ಗಂಡಿನ ದೈಹಿಕ ಶಕ್ತಿಗೆ ಸಮವಿಲ್ಲ. ಅದು ಕಡಿಮೆಯೇ ಇದೆ. ಹೀಗಿರುವಾಗ; ಅಂದಿನ ಸಂಪಾದನೆಯಲ್ಲಾ ಬಹುಪಾಲು ದೈಹಿಕ ಶಕ್ತಿಯ ಪುರುಷನದೇ ಆಗಿದ್ದರಿಂದ ಹಾಗೂ ಇನ್ನೂ ಹೆಚ್ಚಾಗಿ ಸಂಪಾದಿಸಬೇಕೆನ್ನುವ ಮಹತ್ವಾಕಾಂಕ್ಷೆ ಅವನಲ್ಲಿ ಇದ್ದಿದ್ದರಿಂದ; ಮತ್ತು ಅದರಲ್ಲಿ ಯಶಸ್ವಿಯಾಗುತ್ತಾ ಬಂದಿದ್ದರಿಂದ; ಸ್ವಾಭಾವಿಕವಾಗಿ ಉಳಿದವರನ್ನೆಲ್ಲಾ ತನ್ನ ಸಹಾಯಕ್ಕಾಗಿ ಪ್ರಾರಂಭದಲ್ಲಿ ಇರಿಸಿಕೊಂಡದ್ದು ಬರುಬರುತ್ತಾ ಸಹಾಯ ಸೇವೆಯ ಅರ್ಥ ಪಡೆದು ಆನಂತರ ದಾಸ್ಯದ ಅರ್ಥವನ್ನೂ ಪಡೆದಿದೆ.