ಇಂಡಿಯಾದ ಪ್ರಾಚೀನತೆ ಎಂದರೆ ಎರಡು ಸಾವಿರ ವರ್ಷಗಳಿಗೂ ಹಿಂದಿನ; ಅತೀ ಹಿಂದಿನ ಇಂಡಿಯಾ. ಪಶ್ಚಿಮಕ್ಕೆ ಈಗಿನ ಪಾಕಿಸ್ಥಾನ, ಬಲೂಚಿಸ್ಥಾನ ಮತ್ತು ಆಪ್ಘಾನಿಸ್ಥಾನಗಳನ್ನು ದಾಟಿ, ದಕ್ಷಿಣದ ಶ್ರೀಲಂಕಾವನ್ನು ಸೇರಿಸಿಕೊಂಡು, ಹಿಮಾಲಯದ ಶಿಖರಗಳನ್ನೂ ದಾಟಿ, ಪೂರ್ವದ ಬರ್ಮಾವನ್ನು ಒಳಗೊಂಡ ವಿಶಾಲ ವ್ಯಾಪ್ತಿಯ ಭೂಖಂಡವನ್ನು ಪ್ರಾಚೀನ ಇಂಡಿಯಾ ಎನ್ನುವ ಅರ್ಥದಲ್ಲಿ ಬಳಸುತ್ತಿದ್ದೇನೆ. ಇದನ್ನು ‘ಹಿಂದುಸ್ಥಾನ’, ‘ಭಾರತ’ ಇನ್ನೂ ಮುಂತಾದ ಹೆಸರುಗಳಿಂದಲೂ ಕರೆಯುತ್ತಿದ್ದಾರೆ.

ಈಜಿಪ್ಟ್ ಮತ್ತು ಮೆಸಪಟೋಮಿಯಾಗಳ ನದಿ ನಾಗರೀಕತೆಗಳಲ್ಲಿರುವಂತೆ; ಕ್ರಿ.ಪೂ.೪ ಮತ್ತು ೩ನೇ ಸಹಸ್ರಮಾನದ ಪ್ರಾಚೀನ ಇಂಡಿಯಾದಲ್ಲಿನ ನದಿ ನಿವೇಶನಗಳಲ್ಲಿ ನೆಲೆನಿಂತ ಜನಜೀವನದ ಕೇಂದ್ರಗಳನ್ನು ಕಂಡುಹಿಡಿಯಲಾಗಿದೆ. ನಗರಗಳು ಅಸ್ತಿತ್ವಕ್ಕೆ ಬರುವ ಮೊದಲೇ ವೈಭವದ ಸಮಾಜ ರಚನೆ ಹೊಂದಿ ಹೊರಹೊಮ್ಮಿರುವುದನ್ನು ಇಂಡಿಯಾದ ಸಾಂಸ್ಕೃತಿಕ ಇತಿಹಾಸದಿಂದ ಕಂಡುಕೊಳ್ಳಬಹುದು.

ಪ್ರಾಚೀನ ಇಂಡಿಯಾದ ಆದಿವಾಸಿಗಳೆಂದರೆ ಮಿಶ್ರ ಆದಿ ದ್ರಾವಿಡರು. ಇವರು ಕ್ರಿ.ಪೂ.೪೦೦೦ ಮತ್ತು ೨೫೦೦ರ ಮಧ್ಯೆ ಒಂದೇ ಸಮನೆ ತೆರೆತೆರೆಯಾಗಿ ಉಪಖಂಡವನ್ನು ಪ್ರವೇಶಿಸಿದವರು. ಪ್ರಾಚೀನ ಇಂಡಿಯಾದ ನಾಗರೀಕತೆಗೆ ಸಂಬಂಧಿಸಿದಂತೆ ಸುಮಾರು ನಲವತ್ತು ನಿವೇಶನಗಳನ್ನು ಸಿಂಧೂ ನದಿಯ ಬಲದಂಡೆಯ ಮೇಲೆ, ರಾವಿ ನದಿಯ  ಎಡದಂಡೆಯ ಮೇಲೆ ಸಮುದ್ರ ದಂಡೆಗೆ ಹೊಂದಿಕೊಂಡಂತೆ ಪುರಾತತ್ವ ಇಲಾಖೆಯವರು ಪತ್ತೆ ಹಚ್ಚಿದ್ದಾರೆ. ಇಂಡಿಯಾದ ಸ್ವಾತಂತ್ರ್ಯಾನಂತರ ಪಾಕಿಸ್ಥಾನದಲ್ಲಿ ಸೇರಿರುವ ‘ಮೊಹೆಂಜೊದಾರೊ’, ‘ಹರಪ್ಪ’ ನಿವೇಶನಗಳು; ಇವಕ್ಕೆ ಸಮಕಾಲೀನವಾದ ಗುಜರಾತ್‌ನ ‘ಲೊಥೆಲ್’ ನಿವೇಶನ ಪ್ರಮುಖವಾದವು. ಈ ಎಲ್ಲ ನಿವೇಶನಗಳ ಅಧ್ಯಯನದಿಂದ ಆಗಿನ ಜನಜೀವನದ ಗುಣಾತ್ಮಕತೆಯ ಬಗ್ಗೆ ಸ್ಪಷ್ಟ ಚಿತ್ರಣ ನಮಗೆ ಉಂಟಾಗುತ್ತದೆ. ಪ್ರತಿ ನಿವೇಶನದ ಸುತ್ತಳತೆ ಸುಮಾರು ೫ ಕಿ.ಮೀ.ಗಳಿಗೂ ಹೆಚ್ಚಿದೆ. ಕ್ರಿ.ಪೂ.೩ನೇ ಸಹಸ್ರಮಾನದ ಮಧ್ಯದಲ್ಲೇ ಪ್ರಾಚೀನ ಇಂಡಿಯನ್ನರು ಉನ್ನತಮಟ್ಟದ ವಸ್ತುಶಿಲ್ಪ ಮತ್ತು ನಗರ ಯೋಜನೆಗಳ ಬಗ್ಗೆ ಅರಿತುಕೊಂಡಿದ್ದರು ಎಂದು ತಿಳಿದುಬರುತ್ತದೆ.

ಪ್ರಸ್ತುತ ಪಾಕಿಸ್ತಾನದಲ್ಲಿ; ಸಿಂಧೂನದಿಯ ಬಲದಂಡೆಯ ಮೇಲೆ ಪತ್ತೆ ಮಾಡಿರುವ ‘ಮೊಹೆಂಜೊದಾರೊ’ವನ್ನು ಸ್ಥಳೀಯರು ‘ಮೊಹೆಂಜೊದರೊ’ ಎಂದು ಉಚ್ಚರಿಸುತ್ತಾರೆ. ಇದು ‘ಹರಪ್ಪಾ‘ ನಿವೇಶನದಿಂದ ಸುಮಾರು ೬೫೦ ಕಿ.ಮೀ. ದೂರದಲ್ಲಿದೆ. ಪುರಾತತ್ವ ಶೋಧನೆ ಆರಂಭವಾದಾಗ ಸ್ಥಳೀಯರು ಆ ದಿಬ್ಬವನ್ನು ‘ಮೊಹೆಂಜದಾರೊ’ ಅಂದರೆ ‘ಸತ್ತವರ ದಿಬ್ಬ’ ಎನ್ನುವ ಅರ್ಥದ ಹೆಸರಿನಿಂದ ಕರೆಯುತ್ತಿದ್ದರು.

ಸಿಂಧೂ ನದಿಯಲ್ಲಿ ಪ್ರವಾಹ ಬಂದಾಗಲೆಲ್ಲಾ ಹೊಸ ಹೊಸ ಮಣ್ಣಿನ ಪದರುಗಳು ಉಂಟಾಗಿರಬೇಕು. ಒಂದರ ಕೆಳಗ ಒಂದರಂತೆ ಮುಚ್ಚಿ ಹೋಗಿರುವ ಏಳು ಸ್ತರಗಳನ್ನು ಇದುವರೆಗೆ ಅಗೆದು ಪರಿಶೀಲಿಸಲಾಗಿದೆ. ಇನ್ನೂ ಆಳಕ್ಕೆ ಅಗೆಯುವುದು ನದಿಯ ದೆಸೆಯಿಂದ ಸಾಧ್ಯವಾಗಿಲ್ಲ. ಪ್ರತಿ ಸ್ಥರದ ಅವಧಿ ನುರಾರು ವರ್ಷಕಾಲ ಪ್ರತಿನಿಧಿಸುತ್ತದೆ. ಮೆಹೆಂಜೊದಾರೊ ನಗರದ ರಸ್ತೆಗಳು ಪ್ರತಿಯೊಂದು ಸ್ಥರದಲ್ಲೂ ಒಂದೇ ವಿಧವಾಗಿರುವುದು ಗಮನಾರ್ಹ. ಮುಖ್ಯ ಬೀದಿಯ ಅಗಲ ೩೩ ಅಡಿಗಳು. ನಿವಾಸಿಗಳು ಅಭಿವೃದ್ದಿಪಡಿಸಿದ್ದ ಎರಡು ಚಕ್ರದ ಗಾಡಿಗಳನ್ನು ಆ ಬೀದಿಯಲ್ಲಿ ಬಳಸುತ್ತಿದ್ದದ್ದು ಕಂಡುಬಂದಿದೆ. ಅಂತಹ ಗಾಡಿಗಳ ಬಳಕೆಯನ್ನು ಈಗಲೂ ಇಂಡಿಯಾದಾದ್ಯಂತ ಕಾಣಬಹುದು. ಮೊಹೆಂಜೊದಾರೊದ ಮುಖ್ಯ ಕಟ್ಟಡಗಳಲ್ಲಿ ಒಂದೆಂದು ಪರಿಗಣಿತವಾಗಿರುವುದು ಸಾರ್ವಜನಿಕ ಸ್ನಾನಗೃಹ. ಅದರ ಅಳತೆ ೩೯x೨೩x೮ ಅಡಿಗಳಿದೆ. ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಿರುವ ಇದರ ಗೋಡೆಗಳಿಗೆ ಡಾಮರಿನಂತ ಪದಾರ್ಥ ಲೇಪಿಸಿ ನೀರು ಹೊರಹರಿಯದಂತೆ ತಡೆಯಲಾಗಿದೆ. ಸ್ನಾನಗೃಹದ ಸುತ್ತಲೂ ಸನ್ಯಾಸಿ ಮಠದ ಅಥವಾ ಖಾಸಗಿ ಸ್ನಾನಕ್ಕೆ ಕೋಣೆಗಳು ಇದ್ದದ್ದು ಕಂಡುಬಂದಿದೆ. ಪ್ರಸ್ತುತ ಹಿಂದೂ ಧಾರ್ಮಿಕ ಸಂಸ್ಕಾರಗಳಲ್ಲಿ ಉಪಯೋಗಿಸುತ್ತಿರುವಂತಾ ಉಪಯೋಗಕ್ಕಾಗಿ ಕಟ್ಟಿದಂತಹವು ಇರಬೇಕು ಅಥವಾ ಪ್ರಸ್ತುತ ಇಂಡಿಯಾದಲ್ಲಿ ಕಾಣುತ್ತಿರುವ ಪುಷ್ಕರಣಿಗಳ ಅಥವಾ ಸ್ನಾನಗೃಹಗಳ ಅಥವಾ ಸಾಮೂಹಿಕ ಬಳಕೆಯ ಕೆರೆಗಳ ಪ್ರಾರಂಭವನ್ನು ಅದು ಸೂಚಿಸುತ್ತಿದೆ ಎನ್ನುವುದು ವಿದ್ವಾಂಸರ ಅಭಿಪ್ರಾಯ. ತಾಯಿ ದೇವತೆಯ ಸೇವೆಯಲ್ಲಿ ನಿರತರಾದ ದೇವದಾಸಿ ಮಹಿಳೆಯರು ಪುರುಷ ಭಕ್ತರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡ ಫಲವಂತಿಕೆ ಪದ್ಧತಿಯೊಂದಿಗೆ ಆ ಸ್ನಾನಗೃಹ ಸಂಬಂಧ ಹೊಂದಿದ್ದಿರಬಹುದು. ಅಂತಹ ದೇವದಾಸಿ ಮಹಿಳೆಯರು ವಿವಾಹವಾಗಿ ನೆಲೆನಿಂತ ಬದುಕು ಸಾಗಿಸಲು ಅವಕಾಶವಿರಲಿಲ್ಲ. ಸೌಂದರ್ಯವತಿಯರನ್ನು ಆರಿಸಿ; ಹಾಡು ಮತ್ತು ನರ್ತನದ ತರಬೇತಿ ನೀಡಿ ಗಂಡಸರನ್ನು ಆಕರ್ಷಿಸುವಂತೆ ಮಾಡಲಾಗುತ್ತಿತ್ತು. ಹೆಂಗಸರು ತಮ್ಮ ತಲೆಯನ್ನು ಪೂರ್ತಿ ಮುಚ್ಚಿದ ಪಕ್ಷಿಯ ಭಾರವಾದ ಮುಖವಾಡ ಧರಿಸಿರುವ ಚಿತ್ರಗಳು ದೊರೆತಿವೆ. ಆ ಚಿತ್ರಗಳು ಹುಟ್ಟು ಮತ್ತು ಸಾವಿನ ದೇವತೆಗೆ ಸಂಬಂಧಿಸಿದವು ಆಗಿವೆ.

ಪ್ರಾಚೀನ ಇಂಡಿಯಾದ ಸಿಂಧೂ ಕಣಿವೆಗಳ ನಾಗರೀಕತೆ ಮಾತೃ ಪ್ರಧಾನ ವ್ಯವಸ್ಥೆಯೇ ಆಗಿದ್ದಿರಬೇಕು. ಇಂಡಿಯಾದಲ್ಲಿ ಮುಂದಿನ ಧಾರ್ಮಿಕ ಚರಿತ್ರೆಯ ಉದ್ದಕ್ಕೂ ಸ್ತ್ರೀತತ್ವವು ಪ್ರಧಾನ್ಯತೆ ವಹಿಸಲು ಸಿಂಧೂ ಸಂಸ್ಕೃತಿಯಲ್ಲಿದ್ದ ಸ್ತ್ರೀತತ್ವ ಅಥವಾ ಮಾತೃಪ್ರಧಾನ ನೆಲೆಯೇ ಕಾರಣವಾಗಿರಬೇಕು. ಇದು ವ್ಯವಸಾಯೋತ್ಪಾದನೆಯ ಸಮೃದ್ದಿಯನ್ನು ಆಧರಿಸಿದೆ. ವ್ಯವಸಾಯ ಪ್ರಧಾನವಾದ ಸಿಂಧೂ ಅಥವಾ ಹಿಂದೂ ಜನಜೀವನದ ಮೇಲೆ ಪಶುಪಾಲಕ ಆರ್ಯ ಜನಾಂಗವು ದಾಳಿ ಮಾಡಿ, ಕೊಳ್ಳೆ ಹೊಡೆದು, ಅಲ್ಲಿದ್ದ ಧಾರ್ಮಿಕ ವ್ಯವಸ್ಥೆಯನ್ನು ಧ್ವಂಸ ಮಾಡಲು ಯತ್ನಿಸಿದ್ದರೂ, ಮಹಾಮಾತೆಯ ಪ್ರತಿನಿಧಿಗಳಾದ ಗ್ರಾಮದೇವತೆಗಳ ರೂಪದಲ್ಲಿ ಮಾತೃ ಆರಾಧನೆಯ ಅಂಶಗಳು ಇಂದಿಗೂ ಇಂಡಿಯಾದಾದ್ಯಂತ ಉಳಿದುಬಂದಿವೆ. ಆರ್ಯೇತರ ಇಂಡಿಯಾದ ಜನಾಂಗಗಳಲ್ಲಿ, ಆದಿವಾಸಿ ಬುಡಕಟ್ಟುಗಳಲ್ಲಿ ಹಾಗೂ ದ್ರಾವಿಡ ಮೂಲದ ಸಾಂಸ್ಕೃತಿಕ ವಲಯಗಳಲ್ಲಿ ಇಂದಿಗೂ ಮಾತೃ ಆರಾಧನೆಗೆ ರಾಷ್ಟ್ರೀಯ ಗೌರವವಿದೆ. ಇವು ಭೂಮಾತೆಯನ್ನು ಇಂದಿಗೂ ಆರಾಧಿಸುವುದನ್ನು ಕಾಣಬಹುದು.

ಮೊಹೆಂಜೊದಾರೊದಲ್ಲಿ ಮತ್ತೊಂದು ಬೃಹತ್ ಕಟ್ಟಡವನ್ನು ಪತ್ತೆಹಚ್ಚಲಾಗಿದೆ. ಅದರ ಅಳತೆ ಸುಮಾರು ೮೭x೬೪ ಅಡಿಗಳಿದ್ದು ಜೊತೆಗೆ ತೋಡಿರುವ ಶಂಖಾಕೃತಿಯ ಐದು ಗುಂಡಿಗಳಿವೆ. ಆ ಕಟ್ಟಡ ಅರಮನೆಯದ್ದು ಆಗಿರಬಹುದು ಅಥವಾ ಬಣ್ಣ ಹಾಕುವ ಕಾರ್ಖಾನೆಯದು ಆಗಿದ್ದಿರಬಹುದು ಅಥವಾ ಸಾರ್ವಜನಿಕ ಭೋಜನಶಾಲೆಯದು ಆಗಿದ್ದಿರಬಹುದು ಎಂದು ವಾಸ್ತುಶಿಲ್ಪ ಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ದಿವಾನ್ ಖಾನೆ ಇರುವ ಒಂಟಿ ಮನೆಗಳಿಂದ ಹಿಡಿದು, ಸುಟ್ಟ ದೊಡ್ಡ ಗಾತ್ರದ ಇಟ್ಟಿಗೆಗಳು, ಮರದ ಕಣಜಗಳು ಮತ್ತು ಉಗ್ರಾಣಗಳವರೆಗೆ ತಜ್ಞತೆ ಮತ್ತು ಸಹಕಾರ ಜೊತೆಗೂಡಿರುವುದು ಮೊಹೆಂಜೊದಾರೊ ವಾಸ್ತುಶಿಲ್ಪದಿಂದ ಸ್ಪಷ್ಟವಾಗುತ್ತಿದೆ.

ಎತ್ತರದಲ್ಲಿ ಕೋಟೆಯಂಥ ರಚನೆ. ಅದಕ್ಕಿಂತ ತಗ್ಗಾದ ಪ್ರದೇಶದಲ್ಲಿ ಊರು. ಮುಖ್ಯ ಬೀದಿಗೆ ಹೊಂದಿಕೊಂಡು; ಇಕ್ಕೆಲಗಳಲ್ಲಿ ಅಂಗಡಿ ಮಳಿಗೆಗಳು, ಎರಡು ಮೂರು ಅಂತಸ್ಥಿನ ಮನೆಗಳ ಸಾಲು, ಎಲ್ಲ ಮನೆಗಳಿಗೂ ಒಂದೇ ವಿಧವಾದ ರಚನೆ ಮುಖ್ಯ ಲಕ್ಷಣಗಳು. ಬೀದಿಯ ಕಡೆಗೆ ವಾಸದ ಮನೆಗಳ ಕಿಟಕಿಗಳು ಕಂಡುಬರದಿರುವುದು ಒಂದು ಆಶ್ಚರ್ಯದ ಸಂಗತಿಯ ಜೊತೆಗೆ ಅಚ್ಚುಕಟ್ಟಾದ ಒಳಚರಂಡಿ ವ್ಯವಸ್ಥೆ ಮೊಹೆಂಜೊದಾರೊ ಮತ್ತು ಹರಪ್ಪ ನಿವೇಶನಗಳ ಪ್ರಮುಖ ಲಕ್ಷಣಗಳು. ಇವು ನಗರ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತವೆ.

ಹರಪ್ಪ ಮತ್ತು ಮೊಹೆಂಜಾದಾರೊ ನಿವಾಸಿಗಳು ಗೋಧಿ, ಬಾರ್ಲಿ, ನೆಲಗಡಲೆ, ಕಲ್ಲಂಗಡಿ, ಎಳ್ಳು, ಬಟಾಣಿ, ಖರ್ಜೂರ ಮುಂತಾದವುಗಳ ವ್ಯವಸಾಯದಲ್ಲಿ ತೊಡಗಿಸಿ ಕೊಂಡು; ಎಮ್ಮೆ, ಕೋಣ, ಒಂಟೆ, ಕುದುರೆ, ಕತ್ತೆ, ದನ ಮತ್ತು ಹಸು ಮುಂತಾದವುಗಳ ಪಶುಪಾಲನೆಯನ್ನೂ ಮಾಡಿಕೊಂಡು, ಜೊತೆಗೆ ಕುಂಬಾರಿಕೆ, ತಾಮ್ರ ಕಂಚು, ಕಬ್ಬಿಣ ಮುಂತಾದ ಲೋಹಗಳ ವಸ್ತುಗಳನ್ನು ತಯಾರಿಸಿಕೊಂಡು; ಮೆಸಪಟೋಮಿಯ ಮುಂತಾದ ಅಕ್ಕ-ಪಕ್ಕದ ಪ್ರದೇಶಗಳಲ್ಲಿ ವ್ಯಾಪಾರ ಮಾಡುವುದು ಮುಂತಾದ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದರೆಂದು ತಿಳಿದುಬಂದಿದೆ. ಒಟ್ಟಿನಲ್ಲಿ ಸಿಂಧೂ ಕಣಿವೆ ನಾಗರೀಕತೆ ಎನ್ನುವುದು ನಗರ ನಾಗರೀಕತೆ ಆಗಿತ್ತು. ಅದು ವ್ಯವಸಾಯ ಪ್ರಧಾನ ನೆಲೆನಿಂತ ಜನಜೀವನ ಆಗಿತ್ತು ಎಂದು ಊಹಿಸಬಹುದು. ಪ್ರಪಂಚದಲ್ಲಿ ಹತ್ತಿಯ ಬಳಕೆ ಮೊಟ್ಟ ಮೊದಲು ಕಂಡುಬರುವುದೇ ಇಲ್ಲಿ.

ಕಲಾವಿದರು ಮನುಷ್ಯನ ಚಿತ್ರಗಳನ್ನು ಬಿಡಿಸಿ ಹಾಗೂ ಮಣ್ಣಿನಿಂದ ಮಾಡಿ ಸುಟ್ಟು ಗಟ್ಟಿಗೊಳಿಸಿದ ಆಕೃತಿಗಳನ್ನು ಮಾಡಿರುತ್ತಾರೆ. ಚಿನ್ನದ ಒಡವೆಗಳು, ಸೊಗಸಾದ ಕಂಚು ಮತ್ತು ತಾಮ್ರದ ಉಪಕರಣಗಳು ಇಲ್ಲಿ ದೊರೆತಿವೆ. ಮೊಹೆಂಜೊದಾರೊದಲ್ಲಿ ದೊರೆತ ಕಂಚಿನ ನರ್ತಕಿ ಪ್ರತಿಮೆ ಗಮನಾರ್ಹವಾದುದು. ಶಿಲೆಗಳನ್ನು ಕೆತ್ತಿ ವಿಗ್ರಹಗಳನ್ನು ಬಿಡಿಸುವುದರಲ್ಲಿ, ಶಿಲೆಯಲ್ಲಿ ಕೊರೆದು ಮುದ್ರೆಗಳನ್ನು ತಯಾರಿಸುವುದರಲ್ಲಿ ಆ ಜನ ತೊಡಗಿಸಿಕೊಂಡಿದ್ದರು. ಅದಕ್ಕಾಗಿ ಮೃದುವಾದ ಬಳಪದ ಶಿಲೆಯನ್ನು ಬಳಸುತ್ತಿದ್ದರು. ಪಿಂಗಾಣಿ ಮುಂತಾದ ವಸ್ತುಗಳನ್ನು, ಮಣ್ಣಿನ ಸುಟ್ಟ ಮಡಕೆ ಮುಂತಾದವನ್ನು ತಯಾರಿಸಿ ಅವುಗಳನ್ನು ಬಣ್ಣಗಳಿಂದ ಚಿತ್ತಾರಗೊಳಿಸಿರುವುದು ಕಂಡುಬಂದಿದೆ. ಬರವಣಿಗೆ ಪ್ರಾರಂಭದ ಕುರುಹುಗಳು ಕಂಡುಬಂದಿದ್ದರೂ ಅವನ್ನು ಇದುವರೆವಿಗೂ ಓದಲಾಗಿಲ್ಲ. ಚೌಕ ಅಥವಾ ಆಯತಾಕಾರದ ಮೊಹರುಗಳು ಇವರವು. ಒಂದು ಮುದ್ರೆಯಲ್ಲಿ ಬಿಡಿಸಿರುವ ಚಿತ್ರ ಹಿಂದು ದೇವತೆ ಶಿವನದೆಂದು ವಿದ್ವಾಂಸರು ನಂಬಿಕೆ ವ್ಯಕ್ತಪಡಿಸಿದ್ದಾರೆ. ಆ ಚಿತ್ರದಲ್ಲಿ ಮೂರು ಮುಖಗಳು ಕಂಡುಬಂದಿವೆ. ಬಹುಷಃ ಹಿಂದಿನ ಭಾಗದಲ್ಲಿ ನಾಲ್ಕನೆಯ ಮುಖದ ಕಲ್ಪನೆ ಕಲಾವಿದನಿಗೆ ಅಂದರೆ ಶಿಲ್ಪಿಗೆ ಇದ್ದಿರಬಹುದು. ಚತುರ್ಮುಖ ಶಿವ ಯೋಗಮುದ್ರೆಯಲ್ಲಿ ಆಸೀನನಾಗಿದ್ದರೆ; ಹುಲಿ, ಆನೆ, ಎಮ್ಮೆ ಅಥವಾ ಕೋಣ ಮತ್ತು ಗೇಂಢಾಮೃಗ ಅಥವಾ ಖಡ್ಗಮೃಗ ಅದಕ್ಕೆ ಆಧಾರವಾಗಿ ನಿಂತು ಸೇವೆ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಸಿಂಧೂ ನಾಗರೀಕತೆಯ ಮುದ್ರಿಕೆಗಳಲ್ಲಿ ವೃಕ್ಷಗಳ ಚಿತ್ರಗಳನ್ನು ಯಥೇಚ್ಛವಾಗಿ ಕಾಣಬಹುದು. ಮೂರ್ತಿಪೂಜೆ ಮತ್ತು ಪ್ರಕೃತಿ ಪೂಜೆ ಎರಡೂ ಸಿಂಧೂ ನಾಗರೀಕತೆಯ ಕೊಡುಗೆ ಎಂದೇ ಹೇಳಬಹುದು. ಈ ಎರಡೂ ಆಚರಣೆಗಳು ಇಂದಿಗೂ ಇಂಡಿಯಾದ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿವೆ. ಅದೂ ವ್ಯವಸಾಯೋತ್ಪಾದನ ಸಂಸ್ಕೃತಿಯಲ್ಲಿ ಪ್ರಕೃತಿ ಪೂಜೆ ಪ್ರಧಾನವಾಗಿದೆ. ವ್ಯವಸಾಯ ಪ್ರಧಾನವಾದ ಸಿಂಧೂನದಿ ಸಂಸ್ಕೃತಿಯ ಧರ್ಮವನ್ನು ಫಲವಂತಿಕೆ ವಿಷಯಗಳು ಆಕ್ರಮಿಸಿರುವುದರಲ್ಲಿ ಎಳ್ಳಷ್ಟೂ ಅನುಮಾನವೇ ಇಲ್ಲ.

ಸಿಂಧೂನದಿ ಜನಜೀವನದ ಬಗ್ಗೆ ಸ್ಪಷ್ಟವಾಗಿ ಅರಿತುಕೊಳ್ಳಲು; ಅವರ ನಂಬಿಕೆ, ಆಚಾರ ಮುಂತಾದುವನ್ನು ಅಭ್ಯಸಿಸಲು ಸ್ಪಷ್ಟವಾದ ನಿದರ್ಶನಗಳು ಸಿಕ್ಕಿಲ್ಲ. ಮೊಹೆಂಜೊದಾರೊ ಮತ್ತು ಹರಪ್ಪ ನಗರಗಳಲ್ಲಿ ಸತ್ತ ದೇಹಗಳನ್ನು ಹೂಳುತ್ತಿದ್ದರೂ; ಸಮಾಧಿಗಳಲ್ಲಿ ಇಡುತ್ತಿದ್ದ ಸಾಮಾನುಗಳ ಬಗ್ಗೆ, ಆಚರಣೆಗಳ ಬಗ್ಗೆ ಯಾವ ಮಾಹಿತಿಯೂ ದೊರೆತಿಲ್ಲ.

ಭಾರೀ ನಗರ ಮೊಹೆಂಜೊದಾರೊವನ್ನು ಕ್ರಿ.ಪೂ.ಎರಡನೇ ಸಹಸ್ರಮಾನದ ಮಧ್ಯದಲ್ಲಿ ನಾಶಪಡಿಸಲಾಯಿತು. ಪ್ರಾಚೀನ ಇಂಡಿಯಾವನ್ನು ಅತಿಕ್ರಮಿಸಿದ ಇಂಡೋ ಯುರೋಪಿಯನ್ ಆರ್ಯರು ತಮ್ಮಲ್ಲಿ ‘ಕೋಟೆಗಳ ನಾಶಕಾರಕ’ನೆಂದೇ ಖ್ಯಾತನಾದ ಯುದ್ಧ ದೇವತೆ ಇಂದ್ರನ ಹೆಸರಿನಲ್ಲಿ ನಾಶದ ಕೆಲಸ ನಡೆದಿದೆ ಎನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ. ವ್ಯಥೆಪಡುವ ಸಂಗತಿ ಎಂದರೆ; ವಾಸ್ತು ಶಾಸ್ತ್ರಜ್ಞರು ಪತ್ತೆ ಹಚ್ಚುವುದಕ್ಕೆ ಮುಂಚೆಯೇ ಅದರ ಸುಟ್ಟ ಇಟ್ಟಿಗೆಗಳಿಗಾಗಿ ಹರಪ್ಪ ನಿವೇಶನವನ್ನು ಜನ ಕೊಳ್ಳೆಹೊಡೆದಿದ್ದರು. ಹರಪ್ಪಾದ ಒಂದು ಭಾಗವನ್ನು ಕ್ರಿ.ಶ.ಎರಡನೇ ಶತಮಾನದಿಂದ ಬೌದ್ಧ ಸ್ಮಾರಕ ಮುಚ್ಚಿದೆ. ಆದರೂ; ನಗರ ಜೀವನ ಮತ್ತು ಸಂಸ್ಕೃತಿಯ ಮಿಶ್ರಣ ವಾಸ್ತು ಶಾಸ್ತ್ರಜ್ಞರಿಗಾಗಿ ಉಳಿದಿದೆ.

ಸಿಂಧೂ ಕೊಳ್ಳದ ಸಂಸ್ಕೃತಿಯ ಪಾಲುದಾರ ಜನತೆಯ ಧರ್ಮದ ಕೆಲವು ಮೂಲ ಅಂಶಗಳನ್ನು ಹಿಂದೂ ಧರ್ಮ ಬೋಧನೆಯ ‘ಕರ್ಮ’ ಮತ್ತು ‘ಪುನರ್ಜನ್ಮ’ ಸಿದ್ಧಾಂತದಲ್ಲಿ ಕಾಣಬಹುದು. ‘ಕರ್ಮ’ ಮತ್ತು ‘ಪುನರ್ಜನ್ಮ’ ವಿಚಾರಗಳನ್ನು ಅವರು ಬೇರೆ ಬೇರೆ ನೆಲೆಗಳಲ್ಲಿ ಅರ್ಥೈಸಿಕೊಂಡಿದ್ದರು. ಅಂದರೆ ‘ಕರ್ಮ’ ಮತ್ತು ‘ಪುನರ್ಜನ್ಮ’ ತಿಳುವಳಿಕೆ ಸಿಂಧೂ ಸಂಸ್ಕೃತಿಯ ಜನಾಂಗವಾದ ದ್ರಾವಿಡರದಾಗಿದ್ದಿತು. ‘ಕರ್ಮ: ಮತ್ತು ‘ಪುನರ್ಜನ್ಮ’ ವಿಚಾರಗಳು ವೇದಗಳಲ್ಲಿ ಎಲ್ಲೂ ಉಲ್ಲೇಖವಾಗಿಲ್ಲದಿರುವುದರಿಂದ ಅವು ಅತಿಕ್ರಮಿಸಿಬಂದ ಆರ್ಯರ ಧರ್ಮದ ಭಾಗಗಳಾಗಿರಲು ಸಾಧ್ಯವಿಲ್ಲ. ಆದರೆ, ಆರ್ಯರು ಆ ಎರಡಕ್ಕೂ ಸಂಬಂಧ ಕಲ್ಪಿಸಿ ಬಹುಪಾಲು ಜನತೆಯನ್ನು ಕತ್ತಲಿನಲ್ಲಿರಿಸಿ; ಅಲ್ಲಿಂದ ನಿರಂತರವಾಗಿ ಶೋಷಿಸುತ್ತಾ ಬರುತ್ತಿರುವುದನ್ನು ಇಂಡಿಯಾದ ಸಾಮಾಜಿಕ ಇತಿಹಾಸದಿಂದ ಕಂಡುಕೊಳ್ಳಬಹುದು.

ಇಂಡೊ ಯುರೋಪಿಯನ್ ಪೀಳಿಗೆಯ, ಬಹುಪಾಲು ಯುರೋಪಿಯನ್ನರೇ ಆದ ಬಿಳಿ ಚರ್ಮದವರನ್ನು ಆರ್ಯರೆಂದು ಕರೆಯಲಾಗುತ್ತಿದೆ. ಅವರ ಭಾಷೆ ಸಂಸ್ಕೃತ. ಈ ಸಂಸ್ಕೃತ ಭಾಷೆ ಗ್ರೀಕ್, ಲ್ಯಾಟಿನ್, ಜರ್ಮನ್ ಮತ್ತು ಇಂಗ್ಲೀಷ್ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವುದರಿಂದ ಯುರೋಪಿಯನ್ ಭಾಷಾ ಗುಂಪಿನಲ್ಲಿ ಕಂಡುಬರುತ್ತದೆ. ಆರ್ಯರು ಪಶುಪಾಲಕರು, ದ್ರಾವಿಡರಿಗೆ ಕೋಣ, ಎಮ್ಮೆ ಪ್ರೀತಿಪಾತ್ರವಾಗಿದ್ದರೆ, ಆರ್ಯರಿಗೆ ‘ಹಸು’ ಅಥವಾ ‘ಗೋವು’ ಪ್ರೀತಿಯ ಮತ್ತು ಪವಿತ್ರ ಪ್ರಾಣಿಯಾಗಿತ್ತು. ಆರ್ಯರ ಪ್ರತಿ ಬುಡಕಟ್ಟು ಸಂಘಟನೆಯ ನೇತೃತ್ವವನ್ನು ಅದರ ನಾಯಕ ‘ರಾಜ’ವಹಿಸುತ್ತಿದ್ದ. ಕುದುರೆಯ ರಥ ಮತ್ತು ಗೋವುಗಳ ಹಿಂಡುಗಳೊಂದಿಗೆ ಆರ್ಯರು ಕ್ರಿ.ಪೂ.ಎರಡನೇ ಸಹಸ್ರಮಾನದ ಮಧ್ಯದಲ್ಲಿ ಇಂಡಿಯಾದ ಆದಿವಾಸಿಗಳಾದ ಕಪ್ಪು ಚರ್ಮದ ದ್ರಾವಿಡರನ್ನು ದಕ್ಷಿಣಕ್ಕೆ ಓಡಿಸಿ; ವಾಯುವ್ಯ ಮೂಲೆಯಿಂದ ಇಂಡಿಯಾವನ್ನು ಪ್ರವೇಶಿಸಿ ಆಕ್ರಮಿಸಿದರು.

ಹಿಂದೂ ಧರ್ಮ

ಧರ್ಮಗಳನ್ನು ಕುರಿತು ವಿವರವಾಗಿ ಚರ್ಚಿಸುವುದಕ್ಕೆ ಮುಂಚೆ; ಪ್ರಾರಂಭದಲ್ಲಿಯೇ ‘ಧರ್ಮಕ್ಕೂ’ ಮತ್ತು ‘ಮತಧರ್ಮ’ಕ್ಕೂ ಇರುವ ಪ್ರಮುಖ ವ್ಯತ್ಯಾಸವನ್ನು ಕಂಡುಕೊಳ್ಳುವುದು ಒಳಿತು. ವ್ಯಕ್ತಿಯೊಬ್ಬನು ತನ್ನ ಜೀವಿತದ ಅವಧಿಯಲ್ಲಿ ಪಡೆದ ಸತ್ಯದ ಅನುಭವಗಳು ಅಭಿಪ್ರಾಯಗಳ ರೂಪು ಪಡೆದಾಗ ಅದು ‘ಮತ’ವಾಗುತ್ತದೆ. ಆ ಅಭಿಪ್ರಾಯಗಳು ನಿಯಮಗಳಾಗಿ ಸಮಷ್ಠಿ ಅದನ್ನು ಮಾನ್ಯ ಮಾಡಿ ಅನ್ವಯಿಸಿಕೊಂಡಾಗ ಅದು ‘ಧರ್ಮ’ ಆಗುತ್ತದೆ. ಅದನ್ನು ‘ಮತಧರ್ಮ’ ಎನ್ನಲಾಗುತ್ತದೆ. ಯಾರೇ ಒಬ್ಬ ವ್ಯಕ್ತಿಯ ಅನುಭವಗಳಿಗಿಂತ, ಸಮಾಜದ ಎಲ್ಲರ ಅನುಭವಗಳನ್ನು ಮಾನ್ಯ ಮಾಡುತ್ತಾ ಒಂದು ಜೀವನ ವಿಧಾನ ರೂಪುಗೊಂಡಿದ್ದರೆ ಅದನ್ನು ‘ಧರ್ಮ’ ಎಂದು ಮಾತ್ರ ಕರೆಯಲಾಗುತ್ತಿದೆ. ಧರ್ಮದಲ್ಲಿ ವೈಯಕ್ತಿಕತೆಗಿಂತ ‘ಸಾರ್ವತ್ರಿಕತೆಗೆ ಮಾನ್ಯತೆ ಇರುತ್ತದೆ. ಆದುದರಿಂದ ಜೈನಧರ್ಮ, ಭೌದ್ಧಧರ್ಮ, ಸಿಖ್ ಧರ್ಮ, ಇಸ್ಲಾಂಧರ್ಮ, ಕ್ರೈಸ್ಥಧರ್ಮ ಮುಂತಾದವನ್ನು ಮತಧರ್ಮಗಳೆಂದೂ; ಹಿಂದೂ ಜೀವನ ವಿಧಾನವನ್ನು ಹಿಂದೂ ಧರ್ಮವೆಂದೂ ಪರಿಗಣಿಸಬೇಕಿದೆ. ಮತಧರ್ಮಗಳು ಬರುಬರುತ್ತಾ ಬರೀ ಧರ್ಮದ ರೂಪುಪಡೆದುಕೊಂಡಿವೆ ಎನ್ನುವುದು ಗಮನಿಸಬೇಕಾದ ವಿಷಯ.

ಹೆಚ್ಚು ಜನಸಂಖ್ಯೆ ಹೊಂದಿರುವ ಹಾಗೂ ಅತಿ ಪುರಾತನವೂ ಆಗಿರುವ ಈ ಹೊತ್ತಿನ ಭೂಮಿಯ ಮೇಲಿನ ಧರ್ಮಗಳಲ್ಲಿ ಹಿಂದೂ ಧರ್ಮವೂ ಒಂದು. ಇದು ಹಿಂದೂಸ್ಥಾನದ ಮೂಲ ದ್ರಾವಿಡರ ಧರ್ಮವಾದರೂ; ಅತಿಕ್ರಮಿಸಿ ಬಂದ ಆರ್ಯರೂ ಈ ಧರ್ಮವನ್ನು ಕೆಲವು ಮಾರ್ಪಾಟುಗಳೊಂದಿಗೆ ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿರುವುದರಿಂದ; ಇದು ಈರ್ವರ ಧರ್ಮವಾಗಿ ಇಲ್ಲಿ ನೆಲೆನಿಂತಿದೆ. ಪ್ರಸ್ತುತ ಹಿಂದೂ ಧರ್ಮದಲ್ಲಿ ದ್ರಾವಿಡರ ಹಾಗೂ ಆರ್ಯರ ಹೀಗೆ ಎರಡೂ ಜನಾಂಗದ ನಂಬಿಕೆಗಳು, ಆಚರಣೆಗಳು ಉಳಿದು ಬಂದಿರುವುದನ್ನು ಕಾಣಬಹುದು. ಆದರೆ ಆರ್ಯರ ನಂಬಿಕೆಗಳು ಮತ್ತು ಆಚರಣೆಗಳು ಪ್ರಧಾನವಾಗಿ ಪ್ರಾಮುಖ್ಯತೆ ಪಡೆದಿರುವುದು ಮೂಖ್ಯ ವಿಷಯ. ಉದಾಹರಣೆಗೆ; ವ್ಯವಸಾಯ ಸಂಸ್ಕೃತಿಯ ಹಿಂದುಗಳ ಅಂದರೆ ಮೂಲ ದ್ರಾವಿಡರ ದೇಶೀಯ ಪ್ರಾಣಿ ‘ಎಮ್ಮೆ’ಗಿಂತ ಪಶುಪಾಲಕ ಸಂಸ್ಕೃತಿಯ ಆರ್ಯರ ಜೊತೆಯಲ್ಲಿ ಬಂದ ‘ಗೊವು’ ಅನ್ನು ಕಟ್ಟುಕಥೆಗಳ ಮೂಲಕ ವೈಭಕರಿಸಿ, ಪೂಜನೀಯವನ್ನಾಗಿಸಿ ಅದರ ಗಂಜು ಮತ್ತು ಸಗಣಿಯನ್ನು ಜನತೆ ಕುಡಿದು-ತಿನ್ನುವಂತೆ ಮಾಡಿರುವುದನ್ನು, ಈ ಹೊತ್ತೂ ಮಾಡುತ್ತಿರುವುದನ್ನು ಇಲ್ಲಿ ಕಾಣಬಹುದು. ಮೂತ್ರ ಮೂತ್ರವೇ. ಯಾವ ಪ್ರಾಣಿಯದಾದರೇನು? ಗೋವಿನ ಮೂತ್ರ; ಈ ಮೂಲಕ ಗೋವು ಮಾತ್ರ ಪವಿತ್ರವಾಗಿದೆ ಎಂದರೆ, ಆರ್ಯರ ನಂಬಿಕೆಗೆ ಹಿಂದೂ ಧರ್ಮದಲ್ಲಿ ಪ್ರಾಧಾನ್ಯತೆ ಸಿಕ್ಕಿದೆ ಎನ್ನುವ ಅರ್ಥವಲ್ಲವೆ? ಈ ಧಾರ್ಮಿಕ ಸಮುದಾಯದ ಸಂಕೀರ್ಣ ಧರ್ಮಗ್ರಂಥವೆಂದರೆ, ಶತಮಾನಗಳ ಕಾಲ ವ್ಯಾಖ್ಯಾನಕ್ಕೊಳಪಟ್ಟಿರುವ ‘ವೇದಾಂತ’. ‘ವೇದ’ ಎಂದರೆ ಧರ್ಮಜ್ಞಾನ, ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ ಎನ್ನುವ ನಾಲ್ಕು ವೇದಗಳು ಅತ್ಯಂತ ಹಳೆಯವೂ ಮತ್ತು ಅಧಿಕೃತವೂ ಆದಂತಹ ಧಾರ್ಮಿಕ ಕೃತಿಗಳು. ಇವು ಹಿಂದೂಸ್ಥಾನದ ದ್ರಾವಿಡರ ಮತ್ತು ಆರ್ಯರ ದೇವತೆಗಳ ಬಗ್ಗೆ ವಿವರ ನೀಡುತ್ತವೆ. ಆದರೆ, ವೇದಗಳಲ್ಲಿನ ತಪ್ಪುಗಳನ್ನು ತಿದ್ದಲು ‘ಬ್ರಾಹ್ಮಣಗಳು’ ಹುಟ್ಟಿಕೊಂಡವು. ಬ್ರಾಹ್ಮಣಗಳು ವೇದಗಳಲ್ಲಿನ ಶ್ಲೋಕ ಮತ್ತು ಪ್ರಾರ್ಥನೆಗಳನ್ನು ಪಠಿಸುವ ಸಂಸ್ಕಾರವನ್ನು ಕಲಿಸುತ್ತವೆ. ಬ್ರಾಹ್ಮಣಗಳಿಗೆ ಪೂರಕವಾಗಿ ಋಷಿ-ಮುನಿಗಳ ಕೃತಿಗಳು ಸಹಾಯ ಮಾಡಿದವು. ಋಷಿ-ಮುನಿಗಳು ಕಾಡಿನಲ್ಲಿ ಮಾಡಿದ ತಪಸ್ಸಿನ ಫಲವಾಗಿ ಶ್ಲೋಕಗಳು ಮತ್ತು ಪ್ರಾರ್ಥನೆಗಳು ಹುಟ್ಟಲು ಕಾರಣವಾದವು. ಈ ಋಷಿ-ಮುನಿಗಳ ಕೃತಿಗಳಿಗೆ ಪೂರಕವಾಗಿ ತತ್ವಜ್ಞಾನದ ಚರ್ಚೆಗಳಾದ ‘ಉಪನಿಷತ್ತುಗಳು’ ಹುಟ್ಟಿಕೊಂಡವು. ಜೊತೆಯಲ್ಲೇ; ಹಿಂದೂ ಧರ್ಮದ ಧಾರ್ಮಿಕ ಗ್ರಂಥಗಳು ಬಹಳ ಕಾಲ ಬೃಹತ್ತಾಗಿಯೂ ಮತ್ತು ಸಂಕೀರ್ಣವೂ ಆಗಿ ಬೆಳೆಯುತ್ತಲೇ ಹೋದವು. ಉದಾಹರಣೆಗೆ; ಋಗ್ವೇದದ ಪುರಾತನ ಭಾಗ ಸುಮಾರು ಹತ್ತು ಸಾವಿರ ಶ್ಲೋಕಗಳಿಂದ ಹತ್ತು ಗ್ರಂಥಗಳವರೆಗೆ ಬೆಳೆಯಿತು.

‘ದೇವತೆಗಳೆಂದರೆ ಅದ್ಭುತಗಳ ವ್ಯಕ್ತೀಕರಣ’ ಎಂದು ಮ್ಯಾಕ್ ಗ್ರೇಗರ್ ಒಂದುಕಡೆ ಅಭಿಪ್ರಾಯಪಡುತ್ತಾನೆ. ಪ್ರಕೃತಿಯಲ್ಲಿನ ಅದ್ಭುತಗಳನ್ನು ಅದೇ ಚರ್ಯೆಯ ಶಕ್ತಿಯುತ ಮಾನವರಿಗೆ ಸಮೀಕರಿಸಿರುವುದು ದೇವತೆಗಳ ಮತ್ತು ರಾಕ್ಷಸರ ಉಗಮಕ್ಕೆ ಕಾರಣವಾಗಿರುತ್ತದೆ. ಇದನ್ನು ಪ್ರತಿಯೊಂದು ಜನಸಮುದಾಯದ ಸಾಂಸ್ಕೃತಿಕ ಇತಿಹಾಸದಿಂದ ಕಂಡುಕೊಳ್ಳಬಹುದು. ಹಿಂದೂ ಧರ್ಮದಲ್ಲಿ ಆಗಿರುವುದೂ ಇದೇ. ದ್ರಾವಿಡ ಜನ ಸಮುದಾಯದಲ್ಲಿ ಶಕ್ತಿಯುತನೂ, ಸಕಲ ಕಲಾವಲ್ಲಭನೂ, ದಯಾಪರನೂ, ಜನಪರನೂ ಆದಂತ ಶಿವ ಅಥವಾ ರುದ್ರ ಒಬ್ಬ ದೇವತೆ ಆಗಿದ್ದ. ಆರ್ಯರಲ್ಲಿ ಇಷ್ಟೇ ಶಕ್ತಿಯ ವಿಷ್ಣುವೂ ಒಬ್ಬ ದೇವತೆ. ಎರಡೂ ಜನಾಂಗದ ದೇವತೆಗಳು ಸಮಶಕ್ತಿಯವರು ಆಗಿದ್ದಾಗ; ಎರಡೂ ಜನಾಂಗ ಸಂಕರವಾಗುವ ಸಮಯದ ಪ್ರಾರಂಭದಲ್ಲಿ ದ್ವಿಮೂರ್ತಿ ಆರಾಧನಾ ವಿಧಾನವು, ಆನಂತರ ಎರಡೂ ಜನಾಂಗದಲ್ಲಿ ಜ್ಞಾನದ ಒಡೆತನ ಹೊಂದಿದ ಪುರೋಹಿತಶಾಹಿಯಿಂದ ತ್ರಿಮೂರ್ತಿ ಕಲ್ಪನೆಯೂ ಉಂಟಾಗಿರಲು ಸಾಧ್ಯವಿದೆ. ದ್ವಿಮೂರ್ತಿ ಕಲ್ಪನೆ ದೈಹಿಕ ಮತ್ತು ಮಾನಸಿಕ ಶಕ್ತಿ-ಸಾಮರ್ಥ್ಯಗಳೆರಡನ್ನೂ ಆಧರಿಸಿದ್ದರೆ; ತ್ರಿಮೂರ್ತಿ ಕಲ್ಪನೆಯಲ್ಲಿನ ಬ್ರಹ್ಮನ ಸೃಷ್ಟಿ ಬರೀ ಮಾನಸಿಕ ಶಕ್ತಿ-ಸಾಮರ್ಥ್ಯಗಳನ್ನಷ್ಟೇ ಪ್ರತಿನಿಧಿಸುತ್ತಿರು ವುದರಿಂದ, ಈ ದೇವತೆಗೆ ಎಲ್ಲೂ ಸಾಮಾಜಿಕ ಮಾನ್ಯತೆ ಕಂಡುಬರುತ್ತಿಲ್ಲ.

ದ್ರಾವಿಡರ ‘ಶಿವ’ ಮತ್ತು ಆರ್ಯರ ‘ವಿಷ್ಣು’ ಸಮಶಕ್ತಿಯ ದೇವತೆಗಳಾಗಿದ್ದರೂ; ಎರಡೂ ಜನಾಂಗದ ಸಂಕರದ ಪ್ರಾರಂಭದಲ್ಲಿ ಈರ್ವರಿಗೂ ಸಮಾನ ಮಾನ್ಯತೆ ಇದ್ದರೂ; ಬರುಬರುತ್ತಾ ದ್ರಾವಿಡರ ಶಿವನಿಗೆ ‘ಲಯಕರ್ತ’, ‘ಕೊಳಕ’, ‘ಬೂದಿಬಡುಕ’, ‘ದಡ್ಡ’ ಮುಂತಾಗಿಯೂ; ಆರ್ಯರ ವಿಷ್ಣುವಿಗೆ ‘ಪಾಲನಕರ್ತ’, ‘ಶುಭ್ರ’, ‘ಬುದ್ದಿವಂತ’ ಮುಂತಾಗಿಯೂ ಗುಣ ವಿಶೇಷಣಗಳನ್ನು ಆರೋಪಿಸಲು ಕಥೆಗಳನ್ನು ಕಟ್ಟಿರುವುದು ಹಿಂದೂ ಸಾಂಸ್ಕೃತಿಕ ಇತಿಹಾಸದಿಂದ ಕಂಡುಕೊಳ್ಳಬಹುದು. ಈ ಪ್ರಯತ್ನದ ಫಲವಾಗಿಯೇ ರಾವಣ, ಹಿರಣ್ಯಕಶಪು, ಮಹಿಷ ಮುಂತಾದ ಶೂರರೂ, ಜ್ಞಾನಿಗಳೂ ಆಗಿದ್ದ ಬಹಳ ಜನ ಶಿವನ ಭಕ್ತರು ಮಾತ್ರ ರಾಕ್ಷಸ ಪಟ್ಟ ಪಡೆಯಲು ಕಾರಣವಾಗಿದೆ. ಇದು ಆರ್ಯರು ದ್ರಾವಡಿರ ಮೇಲೆ ಸ್ಥಾಪಿಸಿದ ಸಾಂಸ್ಕತಿಕ ಯಜಮಾನಿಕೆಯಲ್ಲವೆ? ಮೂಲತಃ ಅಷ್ಟೇನೂ ಖ್ಯಾತರಲ್ಲದ ಶಿವ ಮತ್ತು ವಿಷ್ಣು ದೇವತೆಗಳು ಬರುಬರುತ್ತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿರುವುದು. ಇಂದೂ ವಹಿಸುತ್ತಿರುವುದು ಮುಖ್ಯವಾದ ವಿಷಯವಾಗಿದೆ.

ಆರ್ಯರಲ್ಲಿ ಸ್ತ್ರೀಲೋಲನೂ, ಮತ್ತುಬರಿಸುವ ಸೋಮರಸದ ಒಡನಾಡಿಯೂ ಹಾಗೂ ಯುದ್ಧಗಳಲ್ಲಿ ಶತೃ ಸಂಹಾರಕನೆಂದೇ ಖ್ಯಾತನಾಗಿದ್ದ ಇಂದ್ರನನ್ನು ದೇವತೆ ಎಂದು ಮಾನ್ಯಮಾಡಿ; ‘ದೇವೇಂದ್ರ’ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು. ಜಗತ್ತಿನ ಪ್ರಭೆಯನ್ನೇ ತಡೆಯುವಷ್ಟು ಶಕ್ತನಾಗಿದ್ದ ರಾಕ್ಷಸ ‘ವೃತ್ರ’ನನ್ನು ಕೊಂದದ್ದು ಇಂದ್ರ. ಈ ವೃತ್ರನೂ (Vritra) ಆರ್ಯ ಜನಾಂಗಕ್ಕೆ ಸೇರಿದವನು. ಈರ್ವರೂ ಆರ್ಯ ಜನಾಂಗದ ಸಮಶಕ್ತಿಯ ರರಾದರೂ; ಅವರಲ್ಲಿ ಹೇಗೋ ಗೆದ್ದ ಇಂದ್ರ ದೇವತೆಯಾಗಿದ್ದಾನೆ. ಸೋತವ ರಾಕ್ಷಸನಾಗಿದ್ದಾನೆ. ಹೀಗೆ ಒಂದು ಜನಸಮುದಾಯದಲ್ಲೇ ದೇವತೆ ಮತ್ತು ರಾಕ್ಷಸ ಸಮೀಕರಣ ಕ್ರಿಯೆ ನಡೆದಿರುವುದು ಒಂದುಕಡೆಯಾದರೆ; ಒಂದು ಜನಸಮುದಾಯದ ರ ಮತ್ತೊಂದು ಜನಸಮುದಾಯದ ರನಿಗಿಂತ ಶಕ್ತಿಯುತನಾದವನು ದೇವತೆಯಾಗಿರುವುದು; ದುರ್ಬಲನಾದವನು ಅಥವಾ ಸೋತವನು ರಾಕ್ಷಸನಾಗಿರುವುದೂ ಸಾಂಸ್ಕೃತಿಕ ಇತಿಹಾಸದಿಂದ ತಿಳಿದುಬರುತ್ತಿದೆ.

ಅಗ್ನಿ, ವರುಣ, ವಾಯು, ಸೂರ್ಯ, ಯಮ ಮುಂತಾದವರು ಆರ್ಯರ ಪ್ರಮುಖ ದೇವತೆಗಳು. ಅಗ್ನಿ ಬೆಂಕಿಯ ದೇವತೆ. ಅಗ್ನಿಯನ್ನು ಲ್ಯಾಟಿನ್ ಭಾಷೆಯಲ್ಲಿ ‘ಇಗ್ನಿಸ್’ (Ignis) ಎಂದೂ; ಇಂಗ್ಲೀಷ್ ಭಾಷೆಯಲ್ಲಿ ‘ಇಗ್ನೈಟ್’ (Ignite) ಎಂದೂ, ಕರೆಯಲಾಗು ತ್ತಿದೆ. ಅಗ್ನಿಯನ್ನು ಮಿಂಚು, ಜ್ವಾಲೆ ಮುಂತಾದವುಗಳಿಗೆ ಸಮೀಕರಿಸಿರುವುದನ್ನು ಕಾಣಬಹುದು. ಇದೇ ರೀತಿ ಜೀವ ಜಗತ್ತಿನ ಅಸ್ತಿತ್ವಕ್ಕೆ ಕಾರಣರಾದ ವಾಯು, ವರುಣ, ಸೂರ್ಯ ಮುಂತಾದವರನ್ನು ಆರ್ಯರ ಆಕಾಶ ದೇವತೆಗಳೆಂದು ಮಾನ್ಯ ಮಾಡಲಾಗಿದೆ.

ಹೀಗೆ ಪ್ರಕೃತಿದತ್ತ ಶಕ್ತಿಗಳೊಂದಿಗೆ, ಮೂಲವಸ್ತುಗಳೊಂದಿಗೆ ದೇವತೆಗಳು, ರಾಕ್ಷಸರು ಮುಂತಾಗಿ ಸಮೀಕರಿಸಿಕೊಂಡವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪೀಡನೆ ಮಾಡಿದ ಅಥವಾ ಕಾಟಕೊಟ್ಟ ಆರ್ಯರ ದೇವತೆಗಳು ಮತ್ತು ರಾಕ್ಷಸರನ್ನು ಹಿಂದೂ ಧರ್ಮದ ಆಧಾರವಾದ ಈ ಎಲ್ಲ ಪುರಾತನ ಬರಹಗಳಿಂದ ಕಂಡುಕೊಳ್ಳಬಹುದು.