ಒಂದು ಆರೋಗ್ಯಕರ ವರ್ಗರಹಿತ ಸಮಾಜದ ಮೇಲ್ಮೆ ವ್ಯವಸ್ಥೆ ಎಂದರೆ ಅದರ ರಾಜಕೀಯ, ಧಾರ್ಮಿಕ, ನೈತಿಕ ಹಾಗೂ ಸಾಂಸ್ಕೃತಿಕ ಅಂಶಗಳಾಗಿರುತ್ತವೆ. ಇವುಗಳನ್ನು ಸೃಷ್ಟಿಸುವ ಜವಾಬ್ದಾರಿ ಆ ಸಮಾಜದ ಹಾಗೂ ಅದರ ಆರ್ಥಿಕ ವ್ಯವಸ್ಥೆಯನ್ನು ಅವಲಂಭಿಸಿರುತ್ತದೆ. ಇದು ಮೇಲ್ಮೈ ವ್ಯವಸ್ಥೆಯೇ ಹೊರೆತು ಪೂರ್ಣ ವ್ಯವಸ್ಥೆ ಅಲ್ಲ. ಆದುದರಿಂದ ವ್ಯವಸ್ಥೆಯಲ್ಲಿ ‘ಮೂಲವ್ಯವಸ್ಥೆ’ ಎನ್ನುವುದೂ ಒಂದು ಇರಲೇಬೇಕಲ್ಲ; ಇದೆ. ಈ ಮೇಲ್ಮೈ ವ್ಯವಸ್ಥೆ ಅಲ್ಪ ಪ್ರಮಾಣದ್ದಾಗಿದ್ದರೆ ಮೂಲ ವ್ಯವಸ್ಥೆ ಅಧಿಕ ಪ್ರಮಾಣದ್ದಾಗಿರುತ್ತದೆ. ಇಂತಹ ಮೂಲ ವ್ಯವಸ್ಥೆಯೇ ಸಮಾಜ ಮತ್ತು ಅದರ ಆರ್ಥಿಕ ವ್ಯವಸ್ಥೆ, ನಿಜವಾದ ಅರ್ಥದಲ್ಲಿ ಮೂಲವ್ಯವಸ್ಥೆ ಮೇಲ್ಮೈವ್ಯವಸ್ಥೆಯನ್ನು ನಿಯಂತ್ರಿಸಬೇಕು ಅಥವಾ ಆಳಬೇಕು; ಆದರೆ ಹಿಂದೂ ಧರ್ಮದಲ್ಲಿ ಅದು ತಿರುಗು-ಮುರುಗಾಯಿತು.

ಧರ್ಮ, ಅರ್ಥ, ಕಾಮ, ಮೋಕ್ಷ -ಇವು ವ್ಯಕ್ತಿಯ ಜೀವಿತದ ಒಟ್ಟು ಪುರುಷಾರ್ಥಗಳು (Values of life) ಎಂದು ಒಂದು ಚೌಕಟ್ಟನ್ನು ಹಾಕಲಾಯಿತು. ಅರ್ಥ-ಕಾಮ-ಮೋಕ್ಷಗಳು ಹದ್ದುಮೀರಿ ಹೋಗದಂತೆ, ಇವುಗಳ ಮೇಲೆ ಧರ್ಮದ ನಿಯಂತ್ರಣ ಇಡಲಾಯಿತು. ಅರ್ಥ ಎಂದರೆ ಉತ್ಪಾದನೆ. ಕಾಮ ಎಂದರೆ ಭೋಗ ಅಥವಾ ಬೇಡಿಕೆ ಹಾಗೂ ಮೋಕ್ಷ ಎಂದರೆ ಸುಖಜೀವನ ಎನ್ನುವ ಅರ್ಥಗಳನ್ನು ಕೊಟ್ಟು ಪುರುಷಾರ್ಥಗಳ ವೈಶಾಲ್ಯತೆ ಹೆಚ್ಚಿಸಿ; ಇಡೀ ಸಮಷ್ಟಿ ಜೀವನಕ್ರಮಕ್ಕೆ ಅಂದರೆ ಮೂಲ ವ್ಯವಸ್ಥೆಗೆ ಅನ್ವಯವಾಗುವಂತೆ ಮಾಡಲಾಯಿತು. ಈ ಮೂರರ ಸಮತೋಲನ ಕಾಪಾಡಲು ನೈತಿಕ ಮೌಲ್ಯಗಳ ಅಂದರೆ ಧರ್ಮದ ಕಾವಲಿಟ್ಟರು. ಅಂದರೆ, ಇದರಿಂದ ಹಿಡಿಯಷ್ಟು ಮೇಲ್ವರ್ಣದ ಜನರು ಧರ್ಮದ ಹೆಸರಿನಲ್ಲಿ ಮೂಲವ್ಯವಸ್ಥೆಗೆ ಸೇರಿದ ಬಹುಜನರ ಉತ್ಪಾದನೆ, ಭೋಗ ಮತ್ತು ಸುಖ ಅಂದರೆ; ಅರ್ಥ, ಕಾಮ ಮತ್ತು ಮೋಕ್ಷಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಕಾರಣವಾಯಿತು. ಮೇಲ್ಮೈ ವ್ಯವಸ್ಥೆಯೆಲ್ಲಾ ಒಂದೇ ವರ್ಣದವರ ಕೈನಲ್ಲಿ ಇದ್ದುದೇ ಇದಕ್ಕೆ ಕಾರಣ ಎನ್ನಬಹುದು. ಇಂತಹ ಕಾವಲುಗಾರ ಧರ್ಮ ಮೂಲವ್ಯವಸ್ಥೆಯ ನಿಯಂತ್ರಣದಲ್ಲಿರುವ ಬದಲು ಮೇಲ್ಮೈವ್ಯವಸ್ಥೆಯ ಕೈ ಸೇರಿದ್ದು ಹಿಂದೂ ಧರ್ಮದ ದೊಡ್ಡ ದುರಂತ. ಪರಿಣಾಮವಾಗಿ ಮೂಲವ್ಯವಸ್ಥೆಗೆ ಸೇರಿದ ಜನ ಅರ್ಥದಲ್ಲಿ ಪಾಲುದಾರರಾದರೂ, ಕಾಮ ಮತ್ತು ಮೋಕ್ಷಗಳಿಂದ ವಂಚಿತರಾಗಬೇಕಾಯಿತು.

‘ಧರ್ಮ’ಕ್ಕೆ ದಾನ ಮತ್ತು ನೀತಿ ಎನ್ನುವ ಅರ್ಥಗಳನ್ನು ಮೇಲ್ಮೈವ್ಯವಸ್ಥೆ ಲೇಪಿಸಿದ್ದರಿಂದ; ಮೇಲ್ಮೈ ವ್ಯವಸ್ಥೆಯ ಜನರ ಕಾಮ ಮತ್ತು ಮೋಕ್ಷಗಳು ತಮ್ಮವೆಂದೇ ಭ್ರಮಿಸುವಷ್ಟು ಮೂಲವ್ಯವಸ್ಥೆಯ ಜನರು ಬುದ್ದಿಹೀನರಾದರು. ಅಂದರೆ, ತಾವಿದ್ದ ಸ್ಥಿತಿಯಷ್ಟರಲ್ಲಿಯೇ ತೃಪ್ತಿಯನ್ನು ಕಾಣುವ ತಾತ್ವಿಕ ನಿಲುವು ಪಡೆದುಕೊಂಡರು. ಹೀಗೆ ಭೌತಿಕ ಅಂದರೆ ಪ್ರಾಪಂಚಿಕ ಸ್ಥಿತಿಗತಿಗಳಿಗೆ ಸಮರ್ಥನೆ ಕೊಡುಲು ಅಸಮರ್ಥರಾದ್ದರಿಂದ; ಅಂತರಂಗಕ್ಕೆ ಹೊರಳಿ ಆತ್ಮನಿಷ್ಠತೆ, ಆತ್ಮಶೋಧನೆ, ಪರಮಾತ್ಮ ದರ್ಶನ ಮುಂತಾದ ಅಲೌಕಿಕ ವಿಚಾರಗಳಲ್ಲಿ ಮಗ್ನರಾಗಿ ಪಾರಮಾರ್ಥಿಕ ಆನಂದವನ್ನು ಮೋಕ್ಷ ಎಂದು ಭ್ರಮಿಸಲು ಕಾರಣವಾಯಿತು. ಅಂದರೆ; ಇಹದ ಆನಂದಕ್ಕಿಂತ ಪರದ ಆನಂದ ಮೇಲ್ಮಟ್ಟದ್ದು ಎನ್ನುವ ಭ್ರಮೆಯನ್ನು ಧರ್ಮ ಬಿತ್ತಿದ್ದರಿಂದ, ಹಾಗೂ ಅದನ್ನು ನೈತಿಕತೆಗೊಳಿಸಿದ್ದರಿಂದ ಮೇಲ್ಮಟ್ಟದ್ದು ಎನ್ನುವ ಭ್ರಮೆಯನ್ನು ಧರ್ಮ ಬಿತ್ತಿದ್ದರಿಂದ ಹಾಗೂ ಅದನ್ನು ನೈತಿಕತೆಗೊಳಿಸಿದ್ದರಿಂದ ಉತ್ಪಾದಕರಿಗೆ ಶೋಷಣೆ ಅರ್ಥವಾಗದಂತಾಯಿತು. ಆದುದರಿಂದಲೇ; ಹಿಂದೂ ಧರ್ಮದಲ್ಲಿ ಎಂದೂ ವರ್ಗಕ್ರಾಂತಿ ನಡೆದಿಲ್ಲ. ಇಂಥ ವಿಫಲತೆಯಿಂದ ಬಿಚ್ಚಿಕೊಂಡ ಆಧ್ಯಾತ್ಮ ಕ್ರಿಯೆಗೆ ‘ದಾರ್ಶನಿಕತೆ‘ ಎನ್ನಲಾಯಿತು. ಜೀವನ ಆನಂದ ಜನ್ಯ ಎನ್ನುವ ದರ್ಶನವನ್ನು ಹಿಂದೂ ಧರ್ಮದ ಸರ್ವಸ್ವ ಎಂದು ಬಿಂಬಿಸಿದ್ದರಿಂದ; ಸಮಷ್ಟಿಯ ಸುಖವನ್ನು ಧರ್ಮ ಬಯಸುತ್ತಿದೆ ಎನ್ನುವ ಭ್ರಮೆಯಲ್ಲಿ ಆ ಧರ್ಮದ ಜನರು ಮುಳುಗಲು ಕಾರಣವಾಯಿತು. ಆನಂದ ಸ್ಥಿತಿಯ ಕಲ್ಪನೆ ಲೌಕಿಕ ಸ್ಥಿತಿಗತಿಗಳಿಂದ ನಿರ್ಬಧಿತವಾದದ್ದಲ್ಲ; ಭೌತಿಕ ತುಡಿತದಾಚೆಗಿನ ಮತ್ತು ಇಂದ್ರಿಯಗಳನ್ನು ಮೀರಿನಿಂತ ಆತ್ಮಸಿದ್ದಿ, ಆತ್ಮತೃಪ್ತಿಗಳು ಮನುಷ್ಯ ಜೀವನದ ಪರಮೋದ್ದೇಶಗಳು ಎಂದು ತಿಳಿಸಲಾಯಿತು. ಆದರೆ ‘ಸುಖ’ ಎನ್ನುವುದು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಾಮರಸ್ಯಗಳ ಮೂಲಕ ಇಂದ್ರಿಯಗಳಿಂದ ಹುಟ್ಟುತ್ತದೆ ಎನ್ನುವ ವಾಸ್ತವಿಕ ಸತ್ಯಕ್ಕೆ ‘ದಾರ್ಶನಿಕರು ಬೆನ್ನು ತಿರುಗಿಸಿದ್ದು ಅಷ್ಟೇ ವಾಸ್ತವ.

ಒಂದು ಜನಸಮುದಾಯದ ನಿಯಂತ್ರಣಕ್ಕೆ ಕಾರಣವಾಗುವುದು ಅದರ ಧರ್ಮ ಮತ್ತು ಕಾನೂನು. ಧರ್ಮ ಮತ್ತು ಕಾನೂನುಗಳು ಸೀಮಿತ ಅರ್ಥದಲ್ಲಿ ಬೇರೆ ಬೇರೆ ಎಂದು ಕಂಡುಬಂದರೂ, ಅವು ವಿಶಾಲ ಅರ್ಥದಲ್ಲಿ ಪರಸ್ಪರ ಪೂರಕ. ಹಿಂದೂ ಚಿಂತನೆಯಲ್ಲಿ ಧರ್ಮ ಮತ್ತು ಕಾನೂನು ಎನ್ನುವ ವಿಂಗಡಣೆ ಆದದ್ದು ಇತ್ತೀಚಿನ ಶತಮಾನದಲ್ಲಿ. ಆದರೆ ಇದಕ್ಕೂ ಹಿಂದೆ ಅವೆರಡೂ ಮಿಳಿತವಾಗಿ ಧರ್ಮದ ರೂಪವನ್ನು ಪಡೆದುಕೊಂಡಿದ್ದವು. ನ್ಯಾಯಕ್ಕೆ ಧರ್ಮವೇ ಆಧಾರವಾಗಿತ್ತು. ಹಿಂದೂ ನ್ಯಾಯಶಾಸ್ತ್ರದಲ್ಲಿ ಧರ್ಮದ ಉಗಮಕ್ಕೆ ವೇದ, ಸ್ಮೃತಿ, ಸದಾಚಾರ ಅಥವಾ ಸಂಪ್ರದಾಯ ಮತ್ತು ಆತ್ಮಸಾಕ್ಷಿ ಎನ್ನುವ ನಾಲ್ಕು ಮೂಲಗಳನ್ನು ಗುರುತಿಸಲಾಗಿದೆ. ಧರ್ಮಕ್ಕೆ ವೇದ ಆಧಾರವಾದರೆ, ಸ್ಮೃತಿ ಮತ್ತು ಸಂಪ್ರದಾಯ ವೇದಗಳ ಮೇಲೆ ನಿಂತಿವೆ. ಆತ್ಮಸಾಕ್ಷಿ ಎನ್ನುವುದು ವ್ಯಕ್ತಿಗತವಾದದ್ದು. ಅವರವರ ಅಂತಃಸಾಕ್ಷಿಗೆ ಸರಿಯೆಂದು ತೋರುವಂತಾದ್ದು. ಸ್ಮೃತಿಯ ಮುಖ್ಯ ಭಾಗ ಧರ್ಮಶಾಸ್ತ್ರ. ವೈದಿಕರಿಗೆ ಅಥವಾ ಆರ್ಯ ಹಿಂದುಗಳಿಗೆ ವೇದದಲ್ಲಿರುವ ಲೌಕಿಕ ಮತ್ತು ಅಲೌಕಿಕ ಧರ್ಮವನ್ನು ತಿಳಿಯ ಹೇಳುವುದು ಇದರ ಗುರಿ.

ಮನು ಸ್ಮೃತಿಯನ್ನು ಕುರಿತು ಡಾ.ಅಂಬೇಡ್ಕರ್ ಅವರು ‘‘ಮನುಸ್ಮೃತಿ ಕಾನೂನು ಶಾಸ್ತ್ರ, ಧರ್ಮಶಾಸ್ತ್ರ ಮತ್ತು ನೀತಿಶಾಸ್ತ್ರ ಎಲ್ಲಾ ಒಟ್ಟಿಗೆ ಸೇರಿರುವ ಗ್ರಂಥವಾಗಿದೆ. ಅದು ನೀತಿಶಾಸ್ತ್ರ; ಏಕೆಂದರೆ ಅದು ಮನುಷ್ಯನ ಕರ್ತವ್ಯಗಳನ್ನು ಹೇಳುತ್ತದೆ. ಅದು ಧರ್ಮಶಾಸ್ತ್ರ; ಏಕೆಂದರೆ, ಹಿಂದೂ ಧರ್ಮದ ಜೀವವಾದ ಜಾತಿಗಳ ಬಗ್ಗೆ ಹೇಳುತ್ತದೆ. ಅದು ಕಾನೂನು ಶಾಸ್ತ್ರ; ಏಕೆಂದರೆ, ಕರ್ತವ್ಯ ಭ್ರಷ್ಠತೆಗೆ ಶಿಕ್ಷೆ ವಿಧಿಸುತ್ತದೆ’’ ಎಂದು ವಿಶ್ಲೇಷಿಸಿದ್ದಾರೆ. ಜಾತಿ ವ್ಯವಸ್ಥೆ ಹಿಂದೂ ಧರ್ಮದ ಒಂದು ಏಕೈಕ ಅವಿಭಾಜ್ಯ ಅಂಗ ಎನ್ನುವುದನ್ನು ಮನುಸ್ಮೃತಿ ಒತ್ತಿ ಒತ್ತಿ ಹೇಳುತ್ತದೆ.

‘‘ಅಗ್ನಿಯನ್ನು ಯಜ್ಞಕ್ಕೆ ಉಪಯೋಗಿಸಲಿ ಅಥವಾ ಉಪಯೋಗಿಸದಿರಲಿ; ಅದು ಹೇಗೆ ತನ್ನ ಮಹತ್ವವನ್ನು ಉಳಿಸಿಕೊಳ್ಳುತ್ತದೆಯೋ ಹಾಗೆ ಬ್ರಾಹ್ಮಣನು ವಿದ್ಯಾವಂತನಾಗಿರಲಿ ಅಥವಾ ಅವಿದ್ಯಾವಂತನಾಗಿರಲಿ, ಅವನು ದೇವರಿಗೆ ಸಮಾನ’’ ಎಂದು ಮನು ತಿಳಿಸುತ್ತಾನೆ. ಬ್ರಾಹ್ಮಣ ದೇವನಾಗಿರುವುದರಿಂದ ರಾಜನಿಗೂ ಅತೀತನಾಗಿದ್ದಾನೆ ಎಂದೂ ಅವನು ತಿಳಿಸುತ್ತಾನೆ. ಆದಕಾರಣ; ಸಾಮಾಜಿಕ ಹಾಗೂ ಧಾರ್ಮಿಕ ನ್ಯಾಯ-ಅನ್ಯಾಯಗಳ ನಿರ್ಣಯವನ್ನು ವರ್ಣಗಳ ಆಧಾರದ ಮೇಲೆ ಮನು ನಿರ್ದೇಶಿಸಿದ್ದಾನೆ.

ಹಿಂದೂ ಧರ್ಮದಲ್ಲಿ ಒಂದು ಕೇಂದ್ರೀಕೃತ ನ್ಯಾಯವ್ಯವಸ್ಥೆ ಇದ್ದದ್ದು ಕಂಡು ಬರುವುದಿಲ್ಲ. ನ್ಯಾಯದ ಪೂರ್ಣಾಧಿಕಾರ ರಾಜನದಾಗಿತ್ತು. ಜೊತೆಗೆ; ಬುಡಕಟ್ಟುಗಳಲ್ಲಿ ಬುಡಕಟ್ಟು ನ್ಯಾಯಗಳು ಆಚರಣೆಯಲ್ಲಿದ್ದವು. ರಾಜ ತನ್ನ ಅಧಿಕಾರದ ಮೂಲಕ ನ್ಯಾಯ ನೀಡುತ್ತಿದ್ದನು. ನ್ಯಾಯ ನೀಡುವುದು ಅವನಿಗೆ ರಾಜಕೀಯ ವಿಷಯವಾಗಿರದೆ; ಧರ್ಮವನ್ನು ಎತ್ತಿಹಿಡಿಯುವ ಧಾರ್ಮಿಕ ಕ್ರಿಯೆಯಾಗಿತ್ತು. ರಾಜ ಪ್ರತ್ಯಕ್ಷ ದೇವತಾ. ರಾಜ ದೈವಾಂಶ ಸಂಭೂತ ಮುಂತಾಗಿ ಪರಿಗಣಿಸಲಾಗುತ್ತಿತ್ತು. ಆದುದರಿಂದ; ಅಧರ್ಮಿಗಳನ್ನು ಶಿಕ್ಷಿಸುವ ಜವಾಬ್ದಾರಿ ರಾಜನದಾಗಿತ್ತು.

ಶಿಕ್ಷೆಯ ಉದ್ದೇಶ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು. ಆದಕಾರಣ ಕೊಡುತ್ತಿದ್ದ ಶಿಕ್ಷೆ ಪಾಪ ವಿಮೋಚನೆಗೆ ಎಂದು ಪರಿಗಣಿಸಲಾಗುತ್ತಿತ್ತು. ಆದುದರಿಂದ ಆಚಾರ, ವ್ಯವಹಾರ ಮತ್ತು ಪ್ರಾಯಶ್ಚಿತ್ತಗಳನ್ನು ಧರ್ಮಶಾಸ್ತ್ರದ ಧರ್ಮಸೂತ್ರಗಳು ಎಂದು ಪರಿಗಣಿಸಲಾಯಿತು. ಇವು ಧರ್ಮಾಚರಣೆಯಲ್ಲಿ ಮಾರ್ಗಸೂಚಿಗಳಾಗಿದ್ದರೂ; ಸ್ಥಳೀಯ ಸಂಪ್ರದಾಯಗಳು ಆಯಾ ಜಾತಿ, ಸಮುದಾಯಗಳ ಧರ್ಮಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿರುವುದೂ ಅಷ್ಟೇ ಮುಖ್ಯವೆನಿಸಿದೆ.

ಹಿಂದೂ ಧರ್ಮದಲ್ಲಿನ ‘ಪಾಪ’ ಮತ್ತು ‘ಪುಣ್ಯ’ಗಳ ಪರಿಕಲ್ಪನೆಗಳು ಮೊದಲು ರೂಪು ಪಡೆದದ್ದು ಋಗ್ವೇದದಲ್ಲಿ. ‘ವರುಣ’ ಋತದ ಮುಖ್ಯದೇವತೆ. ‘ಋತ’ ಎಂದರೆ ನಿಯಮ ಅಥವಾ ನೀತಿ. ಪುಣ್ಯವಂತರನ್ನು ರಕ್ಷಿಸುವುದು ಮತ್ತು ಪಾಪಿಗಳನ್ನು ಶಿಕ್ಷಿಸುವುದು ವರುಣನ ಕೆಲಸ. ಪಾಪಿಗಳಿಗೆ ವರುಣನು ಉದರ ರೋಗವನ್ನು ಶಿಕ್ಷೆಯ ರೂಪದಲ್ಲಿ ಉಂಟುಮಾಡುತ್ತಾನೆ ಎನ್ನುವ ಮಾತು ಋಗ್ವೇದದಲ್ಲಿ ಬರುತ್ತದೆ. ಪ್ರಳಯ, ಭೂಕಂಪ ಮುಂತಾದ ನೈಸರ್ಗಿಕ ಅನಾಹುತಗಳೆಲ್ಲ ಹಾಗೂ ಕುಷ್ಠರೋಗ, ಕ್ಷಯರೋಗ ಮುಂತಾದ ರೋಗಗಳು ಆಯಾ ಮಾನವರ ಪಾಪಕರ್ಮಗಳ ದುಷ್ಫಲ ಎನ್ನುವ ನಂಬಿಕೆಗಳು ಧಾರ್ಮಿಕ ವೈಚಾರಿಕತೆಯಲ್ಲಿ ರೂಪುಗೊಂಡಂಥವು. ಪಾಪಕರ್ಮಗಳಿಂದ ನಮ್ಮನ್ನು ರಕ್ಷಿಸು ಎಂದು ವರುಣನನ್ನು ಬೇಡುವ ಮಾತು ವೇದಗಳಲ್ಲಿ ಬರುತ್ತದೆ. ಎಚ್ಚರದಿಂದಿರುವುದು ಎಲ್ಲಿ ಕರ್ತವ್ಯವಾಗಿರುತ್ತೋ ಅಲ್ಲಿ ನಿದ್ರಿಸುವುದೂ ಪಾಪದ ಕೆಲಸ ಎನ್ನುವುದೂ ವೇದಗಳಿಂದ ತಿಳಿದುಬರುತ್ತದೆ. ವೇದಗಳಲ್ಲಿ ಪಾಪವನ್ನು ದೈವಾಜ್ಞೆಯ ಉಲ್ಲಂಘನೆ ಎಂದು ಭಾವಿಸಲಾಗಿದೆ.

ಉಪನಿಷತ್ತುಗಳಲ್ಲಿ ಜ್ಞಾನಕ್ಕೆ ಪ್ರಾಧಾನ್ಯತೆ ಇದ್ದರೂ ಜೊತೆಯಲ್ಲಿ ಕರ್ಮಗಳಿಗೂ ಸ್ಥಾನವಿರುವುದರಿಂದ ಸತ್ಕರ್ಮ, ಪುಣ್ಯಕರ್ಮ, ನಿಷ್ಕಾಮಕರ್ಮ ಮುಂತಾದವನ್ನು ಭಗವದ್ಗೀತೆಯಲ್ಲಿ ಕಾಣಲು ಸಾಧ್ಯವಿದೆ. ಧರ್ಮಶಾಸ್ತ್ರಗಳಲ್ಲಿ ‘ಪಾಪ’ ಮತ್ತು ‘ಪುಣ್ಯ’ಗಳ ಬಗ್ಗೆ ತಾತ್ವಿಕ ವಿವೇಚನೆ ಕಾಣುವುದಿಲ್ಲ. ಆದರೆ ಪಾಪಕೃತ್ಯಗಳು ಮತ್ತು ಅವುಗಳಿಗೆ ವಿಧಿಸಲಾಗಿರುವ ಶಿಕ್ಷೆ ಮತ್ತು ಪ್ರಾಯಶ್ಚಿತ್ತಗಳು ಹಾಗೂ ಪುಣ್ಯಕಾರ್ಯಗಳು ಮತ್ತು ಅವುಗಳ ಸತ್ಫಲಗಳ ಬಗ್ಗೆ ವಿವರಗಳು ಸಿಗುತ್ತವೆ. ಹಿಂದೂ ಧರ್ಮದಲ್ಲಿ ಮನು, ಗೌತಮ, ಬೋಧಾಯನ, ಯಾಜ್ಞವಲ್ಕ್ಯ ಮುಂತಾದ ಧರ್ಮಶಾಸ್ತ್ರಕಾರರ ದೃಷ್ಟಿಯಲ್ಲಿ ಪಾಪ ಮತ್ತು ಪುಣ್ಯ ಕಲ್ಪನೆಗಳು ಬಹುಮಟ್ಟಿಗೆ ಒಂದೇ ಇದ್ದರೂ ಕೆಲವು ವ್ಯತ್ಯಾಸಗಳನ್ನು ಗುರುತಿಸಬಹುದು. ಮನುಸ್ಮೃತಿಯಲ್ಲಿ ೧. ಬ್ರಹ್ಮಹತ್ಯೆ ೨. ಬ್ರಾಹ್ಮಣನನ್ನು ಗಾಯಗೊಳಿಸುವುದು ೩. ಗುರುಪತ್ನಿಯನ್ನು ಸಂಭೋಗಿಸುವುದು ೪. ಗೋಹತ್ಯೆ, ೫. ಉಚ್ಛವರ್ಣ ಅಥವಾ ಕುಲವನ್ನು ಕುರಿತು ಸುಳ್ಳು ಹೇಳುವುದು ೬. ವೇದಗಳನ್ನು ನಿಂಧಿಸುವುದು, ೭. ವೇದಗಳನ್ನು ದುಡ್ಡುಕೊಟ್ಟು ಕಲಿಯುವುದು ಅಥವಾ ಕಲಿಸುವುದು, ೮. ಆಯೋಗ್ಯ ವ್ಯಕ್ತಿಗಳಿಗಾಗಿ ಯಜ್ಞ ಮಾಡುವುದು ಇಲ್ಲವೆ, ತ್ಯಾಗ ಮಾಡುವುದು ೯. ಆರ್ಥಿಕವಾಗಿ ತನ್ನ ಹೆಂಡತಿಯನ್ನವಲಂಬಿಸಿ ಜೀವಿಸುವುದು, ೧೦. ಮದ್ಯಪಾನ, ೧೧. ಕಳ್ಳತನ ೧೨. ಮಧ್ಯವನ್ನು ಸೇವಿಸುವವಳೊಂದಿಗೆ ಲೈಂಗಿಕ ಸಂಬಂಧ ಹೊಂದುವುದು, ೧೩. ಮದ್ಯದ ಜೊತೆಗೆ ಆಹಾರ ಸೇವಿಸುವುದು; ಹೀಗೆ ಪಾಪಗಳ ಪಟ್ಟಿಮಾಡಿ ಉಲ್ಲೇಖಿಸಿರುವುದನ್ನು ಕಾಣಬಹುದು.

ಈ ಲೋಕದಲ್ಲಿ ಅಥವಾ ಪರಲೋಕದಲ್ಲಿ ಒಳ್ಳೆಯ ಫಲ ಸಿಗುತ್ತದೆಂದು ಮಾಡುವ ಯಾವ ಕಾರ್ಯವನ್ನಾದರೂ ಪುಣ್ಯಕಾರ್ಯ ಎಂದು ಮತಧರ್ಮಗಳು ಪರಿಗಣಿಸುತ್ತವೆ. ಪುಣ್ಯಕಾರ್ಯದ ಸತ್ಫಲವೇ ಪುಣ್ಯ ಎನಿಸುತ್ತದೆ. ಪರೋಪಕಾರ, ಅನ್ನದಾನ, ವಸ್ತ್ರದಾನ, ಧನದಾನ ಮುಂತಾದ ದಾನ-ಧರ್ಮಗಳು, ಸಜ್ಜನರ ಪ್ರಾಣ ಮತ್ತು ಮಾನರಕ್ಷಣೆ, ಧಾರ್ಮಿಕ ವ್ರತ-ನಿಯಮಗಳ, ಪೂಜೆ-ಪುರಸ್ಕಾರಗಳ ಮತ್ತು ಧಾರ್ಮಿಕ ವಿಧಿ-ವಿಧಾನ ಸಂಸ್ಕಾರಗಳ ಅನುಷ್ಠಾನ ಮುಂತಾದವನ್ನು ಪುಣ್ಯಕಾರ್ಯಗಳೆಂದು ಮನುಸ್ಮೃತಿಯಲ್ಲಿ ಸ್ಮರಿಸಲಾಗಿದೆ.

‘ಪಾಪ’ ಮತ್ತು ‘ಪುಣ್ಯ’ ಪರಿಕಲ್ಪನೆಗಳಿಗೆ ಆಧಾರವಾಗಿರುವುದು ‘ಸರಿ’ ಮತ್ತು ‘ತಪ್ಪು’ ಅಥವಾ ‘ಒಳ್ಳೆಯದು’ ಮತ್ತು ‘ಕೆಟ್ಟದ್ದು’ ಎನ್ನುವ ‘ನೈತಿಕತೆ’. ಆದರೆ ನೈತಿಕತೆಯ ಜಾಗದಲ್ಲಿ ಧಾರ್ಮಿಕೀಕರಣ ಬಂದಿದ್ದರಿಂದ ಶೋಷಣೆಗೆ ಅವಕಾಶವಾಯಿತು. ಪಾಪ-ಪುಣ್ಯದ ಕಲ್ಪನೆ ವೈಯಕ್ತಿಕ ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ನಿಯಂತ್ರಿಸುವುದರ ಮೂಲಕ ಸಾರ್ವತ್ರಿಕ ಅರ್ಥದಲ್ಲಿ ಆರೋಗ್ಯಪೂರ್ಣ ವೈವಿಧ್ಯಮಯ ಸಮಾಜ ನಿರ್ಮಾಣದ ಗುರಿ ಹೊಂದಿದ್ದರೂ; ಅವು ಮತಧರ್ಮದ ಆಶ್ರಯ ಪಡೆದಾಗ ಇಡೀ ಸಮಾಜದ ವಿಘಟನೆಗೂ ಕಾರಣವಾಗುವುದರ ಜೊತೆಗೆ ಸಮಾಜದ ಒಂದು ಘಟಕ ಮತ್ತೊಂದು ಘಟಕದ ಶೋಷಣೆಗೂ ಕಾರಣವಾಗುತ್ತದೆ ಎನ್ನುವುದನ್ನು ನಾವು ಮೇಲಿನ ಪಟ್ಟಿಗಳಿಂದ ಅರಿತುಕೊಳ್ಳಬಹುದು. ಪಾರಮಾರ್ಥಿಕ ಆನಂದಸ್ಥಿತಿಯ ಸಂಪಾದನೆ; ವ್ಯಕ್ತಿ ಜೀವನದ ಉತ್ಪಾದನೆ ಅಥವಾ ಗಳಿಕೆಯನ್ನು ಪುಣ್ಯ ಎಂದು ಹೇಳುವ ಮೂಲಕ; ಆರ್ಥಿಕ ಉತ್ಪಾದನೆ ಸಂಪಾದನೆಗಳಲ್ಲಿರುವ ಅಸಮಾನತೆಯನ್ನು ಮುಚ್ಚಿಕೊಳ್ಳಲಾಯಿತು; ಹಾಗೂ ಅಂತಹ, ಆಲೋಚನಾಕ್ರಮವನ್ನೇ ವ್ಯಕ್ತಿ ಮತ್ತು ಸಮಷ್ಠಿಗಳ ಮಟ್ಟದಲ್ಲಿ ಬೆಳೆಸಲಾಯಿತು. ಹಿಂದೂ ಜಾತಿಪದ್ಧತಿಯ ಒಬ್ಬ ಶೂದ್ರ ತನ್ನ ವಸ್ತುಸ್ಥಿತಿಯಲ್ಲೇ ನೆಮ್ಮದಿ ಕಾಣುವಂತೆ ಲೌಕಿಕ ಪರಿಸರದೊಡನೆ ಸಾಮರಸ್ಯದಿಂದ ಹೊಂದಿಕೊಳ್ಳುವಂತೆ ಹಾಗೂ ಇದರಾಚೆಗೆ ಆತ ಯೋಚಿಸದಂತೆ ಅವನ ಸುತ್ತೂ ಪಾಪ-ಪುಣ್ಯದ ಬೇಲಿ ಹಾಕಿರುವುದೂ ಅಷ್ಟೇ ಸತ್ಯ.

ಒಂದು ಜನಾಂಗದ ಸಾಂಸ್ಕೃತಿಕ ಇತಿಹಾಸವನ್ನು ಅಧ್ಯಯನ ಮಾಡುವಲ್ಲಿ; ಅವರ ಆಚಾರವ್ಯವಹಾರಗಳು ಮತ್ತು ರೂಪರೇಷೆಗಳ ಜೊತೆಗೆ, ಆ ಜನರು ಆಡುವ ಭಾಷೆ ಒಂದು ಪ್ರಮುಖ ಸಾಧನವಾಗುತ್ತದೆ. ಆರ್ಯರ ಆಗಮನಕ್ಕಿಂತ ಮುಂಚೆ ದ್ರಾವಿಡರು ಇಂಡಿಯಾದಲ್ಲಿ ವಾಸಿಸಿದ್ದರು ಎನ್ನುವುದಕ್ಕೆ ಬಲೂಚಿಸ್ಥಾನದಲ್ಲಿ ನೆಪಮಾತ್ರಕ್ಕೆ ಉಳಿದಿರುವ ‘ಬ್ರಾಹೂಯಿ’ ಭಾಷೆ, ಇಂಡಿಯಾದ ಪೂರ್ವದಲ್ಲಿ ಕಂಡುಬರುವ ‘ಮಲ್ತೋ’ ಮತ್ತು ‘ಕುರುಖ್’ ಭಾಷೆಗಳು ಸಾಕ್ಷಿಯಾಗಿ ಉಳಿದುಬಂದಿರುವುದೇ ನಿದರ್ಶನವಾಗಿದೆ. ಈ ಎಲ್ಲಾ ಭಾಷೆಗಳೂ ದ್ರಾವಿಡ ಪರಿವಾರದ ಭಾಷಾಗುಂಪಿಗೆ ಸೇರಿವೆ ಎನ್ನುವುದು ಮುಖ್ಯ.

ಇಪ್ಪತ್ತನೆಯ ಶತಮಾನದ ಮಧ್ಯದವರೆಗೆ ಇಂಡಿಯಾದ ಎಲ್ಲ ಭಾಷೆಗಳೂ ಸಂಸ್ಕೃತ ಜನ್ಯ. ‘ಸಂಸ್ಕೃತ’ ದೇವಭಾಷೆ ಎನ್ನುವ ಭ್ರಮೆಗಳನ್ನು ಪಟ್ಟಭದ್ರರು ಜನತೆಯಲ್ಲಿ ಹುಟ್ಟುಹಾಕಿದ್ದರಿಂದ; ಸಂಸ್ಕೃತ ಭಾಷೆ ವರ್ಣ ಆಧಾರಿತ ಸಮಾಜವನ್ನು ಗಟ್ಟಿಗೊಳಿಸಿದ್ದರಲ್ಲಿ ಪ್ರಮುಖಪಾತ್ರ ವಹಿಸಿರುವುದನ್ನು, ಇಂತಹ ಸಂಸ್ಕೃತ ಭಾಷೆಯ ಮೂಲವನ್ನು ಭಾಷಾ ತಜ್ಞರು ನಿರ್ಣಯಿಸುವವರೆಗೂ ಅದು ಮೇಲಾಟದಲ್ಲೇ ನಿರತವಾಗಿದ್ದದ್ದನ್ನು ಹಿಂದೂ ಸಾಂಸ್ಕೃತಿಕ ಇತಿಹಾಸದಲ್ಲಿ ಗುರುತಿಸಬಹುದು.

ಇಡೀ ಭೂಮಿಯ ಮೇಲೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳಿದ್ದು; ಭಾಷಾ ತಜ್ಞರು ಅವನ್ನೆಲ್ಲಾ ವರ್ಗೀಕರಿಸಿ ಇಂಡೋ-ಯುರೋಪಿಯನ್ ಪರಿವಾರ, ಫಿನ್ನೊ-ಉನ್ರಿಕ್ ಪರಿವಾರ, ಅಲ್ಬೇಯಿಕ್ ಪರಿವಾರ, ಬಾಸ್ಕ್ ಪರಿವಾರ, ಆಪ್ರೋ-ಏಷಿಯಾಟಿಕ್ ಪರಿವಾರ, ನೈಜರ್-ಕಾಂಗೋ ಪರಿವಾರ, ಸೈನೋ-ಟಿಬೆಟಿಯನ್ ಪರಿವಾರ, ದ್ರಾವಿಡ ಪರಿವಾರ, ಮಲಯೋ-ಪಾಲಿನೇಷಿಯನ್ ಪರಿವಾರ, ಆಸ್ಟ್ರೇಲಿಯನ್ ಪರಿವಾರ, ಆಸ್ಟೋ-ಏಷಿಯಾಟಿಕ್ ಪರಿವಾರ, ಎಸ್ಕಿಮೋ-ಅಲೆಂಡ್ ಪರಿವಾರ ಎಂಬುದಾಗಿ ಸುಮಾರು ಮೂವತ್ತೈದು ಭಾಷಾ ಪರಿವಾರಗಳನ್ನಾಗಿ ವಿಂಗಡಿಸಿದ್ದಾರೆ. ಇದಕ್ಕೆ ಭೌಗೋಳಿಕ, ಜನಾಂಗಿಕ, ರಾಚನಿಕ ಹಾಗೂ ವಾಂಶಿಕ ಅಂಶಗಳನ್ನು ಆಧಾರವನ್ನಾಗಿ ಇಟ್ಟುಕೊಳ್ಳಲಾಗಿದೆ.

ಇಂಡಿಯಾದಲ್ಲಿ ದ್ರಾವಿಡ ಭಾಷಾ ಪರಿವಾರ, ಇಂಡೋ-ಯುರೋಪಿಯನ್ ಪರಿವಾರದ ಇಂಡೋ ಆರ್ಯನ್ ಗುಂಪು, ಆಸ್ಟ್ರೋ ಏಷಿಯಾಟಿಕ್ ಅಥವಾ ಆಸ್ಟ್ರಿಕ್ ಪರಿವಾರ, ಸೈನೋ ಟಿಬೆಟನ್ ಪರಿವಾರದ ಟಿಬೆಟೋ ಬರ್ಮನ್ ಗುಂಪು ಹಾಗೂ ಅವರ್ಗೀಕೃತ ಭಾಷೆಗಳು ಹೀಗೆ ವಿವಿಧ ಭಾಷಾಪರಿವಾರಕ್ಕೆ ಸೇರಿದ ಭಾಷೆಗಳನ್ನು ಗುರ್ತಿಸಬಹುದು. ಇಂಡೋ ಆರ್ಯನ್ ಗುಂಪಿನಲ್ಲಿ ಸಂಸ್ಕೃತ, ಪಾಲಿ, ಪ್ರಾಕೃತ, ಹಿಂದಿ, ಉರ್ದು, ಬಂಗಾಲಿ, ಒರಿಯಾ, ಮರಾಠಿ, ಅಸ್ಸಾಮಿ ಹಾಗೂ ಗುಜರಾತಿ ಭಾಷೆಗಳ ಹುಟ್ಟನ್ನು ಭಾಷಾ ತಜ್ಞರು ಗುರುತಿಸಿದ್ದರೆ; ದ್ರಾವಿಡ ಭಾಷಾ ಪರಿವಾರದಲ್ಲಿ ತಮಿಳು, ಕನ್ನಡ, ತೆಲುಗು, ಮಲೆಯಾಳಂ, ತುಳು, ಕೊಡವ, ಬಡಗ, ಕೋತ, ತೊದ, ಕೊರಗ, ಕೋಲಾಮಿ, ನಾಯಿತಿ, ಪೆಂಗೊ, ಮಂಡ, ಒಲ್ಲಾರಿ, ಗೋಂಡಿ, ಕೋಯ, ಕೊಂಡ, ಕುವಿ, ಕುಯಿ, ಕುರುಖ್, ಮಲ್ತೊ, ಬ್ರಾಹೂಯಿ, ಪರ್ಜಿ, ಗದಬ ಮುಂತಾಗಿ ಇಪ್ಪತ್ತೈದಕ್ಕೂ ಹೆಚ್ಚು ಭಾಷೆಗಳ ಹುಟ್ಟನ್ನು ಪತ್ತೆಹಚ್ಚಲಾಗಿದೆ.

ಒಂದು ಭಾಷಾ ಪರಿವಾರಕ್ಕೆ ಸೇರಿದ ಹಲವು ಭಾಷೆಗಳು ಒಂದೇ ಮೂಲದಿಂದ ಬಂದವೆಂದು ನಿರೂಪಿಸಲು ಸಾಮಾನ್ಯವಾಗಿ ಗಮನಿಸುವ ಅಂಶಗಳಲ್ಲಿ ಮೊದಲನೆಯದಾಗಿ; ಭಾಷೆಯ ಮೂಲಭೂತ ಅಥವಾ ನಿತ್ಯೋಪಯೋಗಿ ಪದಗಳೆಂದು ಹೇಳುವ ಅಂಗ, ಸಂಖ್ಯೆ, ಸರ್ವನಾಮ, ಸಂಬಂಧ ಸೂಚಕ ಶಬ್ದಗಳು ಮುಂತಾದವುಗಳಲ್ಲಿ ಸಾಮ್ಯತೆ ಇರುತ್ತದೆ ಹಾಗೂ ಎರಡನೆಯದಾಗಿ; ಧ್ವನ್ಯನುರೂಪತೆ ಇರುತ್ತದೆ.

ಉದಾಹರಣೆಗೆ

ಕನ್ನಡ ತಮಿಳು ಮಲೆಯಾಳಂ ತೆಲುಗು ಸಂಸ್ಕೃತ

೧. ದೇಹದ ಅಂಗ – ಕಣ್ಣು ಕಣ್ ಕಣ್ ಕನ್ನು ಅಕ್ಷಿ

೨. ಸಂಖ್ಯಾ ವಾಚಕ – ಹತ್ತು ಪತ್ತು ಪತ್ತು ಪದಿ ದಶಂ

ಹೀಗೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಮೇಲಿನ ಉದಾಹರಣೆಗಳಲ್ಲಿ ಮೊದಲ ನಾಲ್ಕೂ ಭಾಷೆಗಳ ಪದಗಳಲ್ಲಿ ಸಾಮ್ಯತೆ ಕಂಡುಬರುವುದರಿಂದ; ಆ ಭಾಷೆಗಳೆಲ್ಲಾ ಒಂದು ಭಾಷಾ ಪರಿವಾರಕ್ಕೆ ಸೇರಿದವು. ಅದು ದ್ರಾವಡಿ ಭಾಷಾ ಪರಿವಾರ ಎಂದು ನಿರ್ಣಯಿಸಬಹುದು. ಆದುದರಿಂದ ದ್ರಾವಿಡ ಭಾಷೆಗಳು ಸಂಸ್ಕೃತ ಜನ್ಯವಲ್ಲ; ಆದರೆ ಸಂಸ್ಕೃತದಿಂದ ಪೋಷಣೆಗೆ ಒಳಗಾಗಿವೆ ಎನ್ನುವುದನ್ನು ಒಪ್ಪಬಹುದು. ಇಂತಹ ಆದಾನ-ಪ್ರದಾನ ಎಲ್ಲಾ ಜೀವಂತ ಭಾಷೆಗಳ ಲಕ್ಷಣ. ಸಂಸ್ಕೃತ ಭಾಷೆ ಇಂಡಿಯಾದ ಮೂಲದ್ದಲ್ಲ. ಅದು ಯುರೋಪು ಮೂಲದ್ದು ಆಗಿರುವುದರಿಂದ; ಇಂಡಿಯಾಕ್ಕೆ ವಲಸೆ ಬಂದ ಆರ್ಯರದೇ ಆಗಿದೆ ಎನ್ನುವುದು ಮುಖ್ಯ.

ಸಂಸ್ಕೃತ ಹಾಗೂ ದ್ರಾವಿಡ ಭಾಷೆಗಳನ್ನಾಡುವ ಆರ್ಯರ ಮತ್ತು ದ್ರಾವಿಡರ ಸಂಸ್ಕೃತಿ ಸಂವೇದನೆಗಳು ಪರಸ್ಪರ ಭಿನ್ನವಿದ್ದದ್ದು ಮತ್ತಷ್ಟು ವೈರುಧ್ಯವನ್ನು ಬೆಳೆಸಲು ಸಾಧ್ಯ ಮಾಡಿತು. ಆರ್ಯರು ತಮಗೆ ಪರಕೀಯ ಅಪರಿಚಿತಗಳಂತಿದ್ದ ಹಾಗೂ ಅರ್ಥವಾಗದಿದ್ದ ದ್ರಾವಿಡ ಭಾಷೆಗಳನ್ನು ಕಿರಾತ ಭಾಷೆಗಳೆಂದು, ಮ್ಲೇಚ್ಛ ಭಾಷೆಗಳೆಂದು ಕೀಳಾಗಿ ಪರಿಗಣಿಸುತ್ತಾ ಹೋದದ್ದು ಒಂದು ಕಡೆಯಾದರೆ; ಇದಕ್ಕೆ ಪ್ರತಿಯಾಗಿ ತಾವು ಬಳಸುತ್ತಿದ್ದ ಭಾಷೆ ದೇವಭಾಷೆ, ದೇವತೆಗಳು ಮಾತನಾಡುವ ಭಾಷೆ ಸಂಸ್ಕೃತ ಭಾಷೆ ಎಂದು ಮುಂತಾಗಿ ಪ್ರತಿಷ್ಠೆಯನ್ನು ಬಿಂಬಿಸುತ್ತಾ ಹೋದರು. ಜೊತೆಗೆ ಆರ್ಯರ ಅಥವಾ ಹಿಂದೂ ಧರ್ಮದ ಮೇಲ್ವರ್ಗಗಳ ಬೌದ್ದಿಕ, ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳು ದ್ರಾವಿಡರಿಗೆ ದಕ್ಕಲಿಲ್ಲವಾದ್ದರಿಂದ; ದ್ರಾವಿಡ ಭಾಷೆಗಳಿಗೆ ಸಾಂಸ್ಕೃತಿಕ ಬೆಳವಣಿಗೆಯ ಹೊಸ ಆಯಾಮ ಸಿಕ್ಕಲಿಲ್ಲ. ಹೀಗಾಗಿ, ಸಂಸ್ಕೃತದ ಪ್ರಾಬಲ್ಯ ಹೆಚ್ಚಿದಂತೆಲ್ಲ ದ್ರಾವಿಡ ಭಾಷೆಗಳ ಶೋಷಣೆಯೂ ನಡೆಯುತ್ತಾ ಬಂತು. ಒಂದು ಜನಾಂಗದ ಶೋಷಣೆ ಎಂದರೆ ಶೋಷಿತರ ಭಾಷೆಯೂ ಅದರಲ್ಲಿ ಸೇರಿರುತ್ತದೆ. ಆದುದರಿಂದಲೇ ಬಹುಸಂಖ್ಯಾತ ದ್ರಾವಿಡರಿಗೆ ಅರ್ಥವಾಗದ ಸಂಸ್ಕೃತವನ್ನು ದೇವರಿಗೂ ಮತ್ತು ಭಕ್ತರಿಗೂ ಮಧ್ಯೆ ಪುರೋಹಿತ ವರ್ಗ ಸಂಪರ್ಕ ಭಾಷೆಯನ್ನಾಗಿಸಿ ಉಪಯೋಗಿಸುತ್ತಿರುವುದು ಇಂದಿಗೂ ಮುಂದುವರೆದಿದೆ. ಕನ್ನಡದಲ್ಲಿ ದೇವರನ್ನು ಪ್ರಾರ್ಥಿಸಿದರೆ ಅದು ಸಲ್ಲುವುದಿಲ್ಲವೆ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಕನ್ನಡದಲ್ಲಿ ಪ್ರಾರ್ಥಿಸಿದರೆ ಅದರ ಅರ್ಥ ಎಲ್ಲರಿಗೂ ತಿಳಿದು; ಮಧ್ಯವರ್ತಿ ಏಕೆ ಬೇಕು? ಎನ್ನುವ ಪ್ರಶ್ನೆ ಭಕ್ತರಲ್ಲಿ ಬಂದರೆ ಎನ್ನುವ ಭಯ ಪುರೋಹಿತಶಾಹಿಯಲ್ಲಿ ಇರುವುದರಿಂದಲೇ ಅವರು ಸಂಸ್ಕೃತವೆಂಬ ಬಡಿಗೆಯನ್ನು ಇಂದಿಗೂ ಹಿಡಿದಿರುವುದು. ಪ್ರಯುಕ್ತ ಆರ್ಯ ಸಂವೇದನೆಯ ಸಂಸ್ಕೃತಿಗಳನ್ನು ಬಿಂಬಿಸುವಂತಹ ಸಾಹಿತ್ಯ ರಚನೆಯಲ್ಲಿ ದ್ರಾವಿಡರ ವಾಲ್ಮೀಕಿ, ವ್ಯಾಸ, ಕಾಳಿದಾಸ ಮುಂತಾದ ಪ್ರತಿಭಾವಂತ ಶೂದ್ರ ಲೇಖಕರು ತೊಡಗಿಸಿಕೊಂಡದ್ದು ಹಿಂದೂ ಧರ್ಮದಲ್ಲಿನ ಒಂದು ಸಾಂಸ್ಕೃತಿಕ ದುರಂತ ಎಂದು ಪರಿಗಣಿಸಬೇಕಾಗುತ್ತದೆ.

ಹಿಂದೂಧರ್ಮದ ಉತ್ತುಂಗ ಕಾಲವೆಂದು ಪರಿಗಣಿಸುವ ವೇದಗಳ ಮತ್ತು ಉಪನಿಷತ್ತುಗಳ ಕಾಲದ ಸಂದರ್ಭದಲ್ಲೇ ಅನೇಕ ನೀಚ ಪದ್ಧತಿಗಳು ಸಾಮಾಜಿಕ ಬದುಕಿನಲ್ಲಿ ಆಳವಾಗಿ ಬೇರುಬಿಟ್ಟಿದ್ದವು ಎನ್ನುವುದನ್ನು ಕಾಣಬಹುದು. ಇಂತಹ ನೀಚ ಪದ್ಧತಿಗಳಲ್ಲಿ ದಾಸ್ಯ ಪದ್ಧತಿಯೂ ಒಂದು. ಆರ್ಯರು ಇಂಡಿಯಾದ ಮೂಲನಿವಾಸಿಗಳಾದ ದ್ರಾವಿಡರನ್ನು ಸೋಲಿಸಿ ತಮ್ಮ ದಾಸರನ್ನಾಗಿ ಮಾಡಿಕೊಂಡರು ಎನ್ನುವುದನ್ನು ಋಗ್ವೇದ ತೆರೆದಿಡುತ್ತದೆ. ಸೋತು ಶರಣಾಗತರಾದ ದ್ರಾವಿಡರನ್ನು ಆರ್ಯರು ‘ದಾಸ’, ‘ದಸ್ಯು’ ಮತ್ತು ‘ಶೂದ್ರ’ ಮುಂತಾದ ಹೆಸರುಗಳಿಂದ ಕರೆದದ್ದೇ ಅಲ್ಲದೆ; ದುಡಿಸಿಕೊಳ್ಳಲು ಪ್ರಾಣಿಗಳಿಗಿಂತ ಕೊನೆಯಾಗಿ ಬಳಸಿಕೊಂಡದ್ದೂ ಅಲ್ಲದೆ, ಕಾಣಿಕೆಯಾಗಿ ಕೊಡುವ ವಸ್ತುಗಳಂತೆಯೂ ಬಳಸಿಕೊಂಡದ್ದನ್ನು ಋಗ್ವೇದದಲ್ಲಿ ಕಾಣಬಹುದು. ‘‘ನೀನು ನನಗೆ ನೂರು ಹೇಸರಗತ್ತೆಗಳನ್ನು, ನೂರು ಕುರಿಗಳನ್ನು ಹಾಗೂ ನೂರು ದಾಸರನ್ನು ನೀಡಿದೆ’’ ಎನ್ನುವ ಮಾತು ಋಗ್ವೇದದಲ್ಲಿ ಬರುತ್ತದೆ. ದಾಸರನ್ನು ಕತ್ತೆ ಮತ್ತು ಕುರಿಗಳಂತೆ ಪರಿಗಣಿಸಿರುವುದು ಮುಖ್ಯ. ರಾಜ ಹರಿಶ್ಚಂದ್ರ ವರುಣನಿಗೆ ನರಬಲಿ ಕೊಡಲು ಅಜಿಗರ್ತ ಋಷಿಯ ಮಗ ಶುನಶ್ಯೇಪನನ್ನು ಕೊಂಡುಕೊಂಡ ಎನ್ನುವ ವಿಚಾರ ಐತ್ತರೇಯ ಬ್ರಾಹ್ಮಣದಲ್ಲಿ ಕಂಡುಬರುತ್ತದೆ. ಬಲಿಗಾಗಿ ಪ್ರಾಣಿಯನ್ನು ಕೊಂಡುಕೊಳ್ಳುವಂತೆ ಶುನಶ್ಯೇಪನನ್ನು ಕೊಂಡುಕೊಂಡ ಎನ್ನುವುದು ಯೋಚಿಸಬೇಕಾದ ವಿಚಾರ.

ಛಾಂದೋಗ್ಯ ಉಪನಿಷತ್ತಿನಲ್ಲಿ ಒಂದು ಪ್ರಸಂಗ ಬರುತ್ತದೆ. ಜಾನಶೃತಿ ಎನ್ನುವ ರಾಜನೋರ್ವ ಬ್ರಹ್ಮಜ್ಞಾನವನ್ನು ಪಡೆಯಲು ರೈಕ್ವ ಎನ್ನುವವನಿಗೆ ಒಂದು ಸಾವಿರ ಹಸುಗಳು, ಒಂದು ಕಂಠಹಾರ, ಹೇಸರುಗತ್ತೆಗಳಿಂದ ಕೂಡಿದ  ರಥದ ಜೊತೆಗೆ ತನ್ನ ಮಗಳನ್ನೂ ದಾನವಾಗಿ ಕೊಡುತ್ತಾನೆ. ತುಂಬಾ ವೈಚಾರಿಕ ಪ್ರಖರತೆಯಿಂದ ಕೂಡಿದ ಕಾಲವೆಂದು ಮಾನ್ಯಮಾಡಿರುವ ಉಪನಿಷತ್ತಿನ ಕಾಲದಲ್ಲೂ; ಒಬ್ಬ ಹೆಣ್ಣನ್ನು ಹಸುಗಳು, ಕತ್ತೆಗಳು ಮುಂತಾದವುಗಳ ಜೊತೆಯಲ್ಲಿ ದಾನ ಕೊಟ್ಟಿರುವುದು ಗಮನಿಸಬೇಕಾದ ವಿಚಾರ. ಮಹಾಭಾರತದ ಸಭಾಪರ್ವ, ವನಪರ್ವ ಮತ್ತು ವಿರಾಟಪರ್ವಗಳಲ್ಲಿ ದಾಸ್ಯ ಪದ್ಧತಿಯ ವಿವರಗಳು ಹೆಚ್ಚಾಗಿ ಕಂಡುಬರುತ್ತವೆ. ಶ್ರೀಕೃಷ್ಣ ಸುಭದ್ರೆಯ ಮದುವೆಯಲ್ಲಿ ಬೆಳೆಬಾಳುವ ವಸ್ತುಗಳ ಜೊತೆಗೆ ಸೇವೆಗಾಗಿ ‘‘ಒಂದು ಸಾವಿರ ಹೊಳೆಯುವ ಮೈಕಾಂತಿಯ ಗುಂಗರು ಕೂದಲಿನ ಬಂಗಾರದ ಒಡವೆಗಳನ್ನು ಧರಿಸಿದ ನುರಿತ ಸೇವಕಿಯರನ್ನು’’ ಅರ್ಜುನನಿಗೆ ವರದಕ್ಷಿಣೆಯಾಗಿ ನೀಡುತ್ತಾನೆ ಎನ್ನುವ ಪ್ರಸ್ತಾಪ ಬರುತ್ತದೆ. ಇದೇ ರೀತಿ ಮಹಾಭಾರತದ ಋಷಿಗಾಲವನು ತನ್ನ ವಿಶ್ವಾಮಿತ್ರನಿಗಾಗಿ ಎಂಟು ನೂರು ಕುದುರೆಗಳನ್ನು ಕೊಡುವಂತೆ ಯಯಾತಿಯನ್ನು ಕೇಳುವುದು; ಕುದುರೆಗಳಿಗೆ ಬದಲಾಗಿ ಯಯಾತಿ ತನ್ನ ಮಗಳಾದ ಮಾಧವಿಯನ್ನೇ ಕೊಟ್ಟು; ಅವಳನ್ನು ಯಾರಿಗಾದರೂ ಮಾರಿಕೋ ಎಂದು ಹೇಳುವ ಸಂದರ್ಭ ಹೆಣ್ಣಿನ ನಿಜವಾದ ಅಂದಿನ ಸ್ಥಿತಿಯನ್ನು ಹೇಳುತ್ತದೆ.

ಮನುಸ್ಮೃತಿ ದಾಸರನ್ನು; ಯುದ್ಧದಲ್ಲಿ ಸೆರೆಸಿಕ್ಕವರು, ತಮ್ಮನ್ನು ತಾವು ಮಾರಿಕೊಂಡವರು, ದಾಸಿಯರಿಗೆ ಹುಟ್ಟಿದವರು, ಇತರರಿಂದ ಮಾರಲ್ಪಟ್ಟವರು, ಹೆಣ್ಣು ಮಕ್ಕಳಿಗೆ ಬಳುವಳಿಯಾಗಿ ಕೊಡಲ್ಪಟ್ಟವರು, ಪಿತ್ರಾರ್ಜಿತವಾಗಿ ಬಂದವರು ಮತ್ತು ರಾಜನಿಂದ ಶಿಕ್ಷೆಗೆ ಒಳಗಾದವರು ಎಂದು ಏಳು ವಿಧಗಳಾಗಿ ವಿಂಗಡಿಸಿದ್ದರೆ; ನಾರದ ಸ್ಮೃತಿ ಅವರನ್ನು ಮನೆಯಲ್ಲಿ ಹುಟ್ಟಿದವರು, ಕೊಂಡುತಂದವರು, ದಾನ ಅಥವಾ ದಕ್ಷಿಣೆಯಾಗಿ ಕೊಡಲ್ಪಟ್ಟವರು, ಉಯಿಲು ಮೂಲಕ ಪಡೆದವರು, ಬೇರೆ ಮಾಲೀಕರಿಂದ ಕೊಡಲ್ಪಟ್ಟವರು. ಕ್ಷಾಮ-ಡಾಮರುಗಳಲ್ಲಿ ಮಾರಲ್ಪಟ್ಟವರು, ಸಾಲತೀರಿಸಲಾರದೆ ದಾಸರಾದವರು, ಯುದ್ಧ ಕೈದಿಗಳು, ಪಣ ಅಥವಾ ಜೂಜುಗಳಲ್ಲಿ ಗೆಲ್ಲಲ್ಲಟ್ಟವರು, ಸ್ವಂತ ಇಚ್ಛೆಯಿಂದ ದಾಸರಾದವರು, ಸನ್ಯಾಸವನ್ನು ತ್ಯಜಿಸಿದವರು, ಗೊತ್ತಾದ ಕಾಲಾವಧಿಗೆ ದಾಸರಾದವರು, ಆಹಾರಕ್ಕಾಗಿ ದಾಸರಾದವರು, ದಾಸಿಯರ ಪ್ರೇಮ ಪಾಶಕ್ಕೆ ಒಳಗಾದವರು ಮತ್ತು ತಮ್ಮನ್ನು ತಾವೇ ಮಾರಿಕಂಡವರು ಎಂದು ಹದಿನೈದು ವಿಧಗಳಾಗಿ ವಿಂಗಡಿಸಿದೆ.

ನಾರದ ಸ್ಮೃತಿಯ ಪ್ರಕಾರ; ದಾಸ-ದಾಸಿಯರು ಕಸ ಗುಡಿಸುವುದು, ಮುಸುರೆ ತೊಳೆಯುವುದು, ಮನೆಯನ್ನು ಸ್ವಚ್ಛವಾಗಿಡುವುದು; ಒಡೆಯ ಒಡತಿಯರ ಶುಶ್ರೂಷೆ ಮಾಡುವುದು, ಮಲವನ್ನು ಹೊತ್ತು ಸಾಗಿಸುವುದು ಮುಂತಾಗಿ ಒಡೆಯರು ಹೇಳಿದ ಕೆಲಸಗಳೆಲ್ಲವನ್ನೂ ಮಾಡಬೇಕಿತ್ತು. ಕೌಟಿಲ್ಯನ ಅರ್ಥಶಾಸ್ತ್ರದ ಪ್ರಕಾರ ದಾಸರನ್ನು ಮಾರಾಟ ಮಾಡುವ, ಒತ್ತೆ ಇಡುವ ಅಥವಾ ಬಲಿಕೊಡುವ ಅಧಿಕಾರ ಒಡೆಯನಿಗೆ ಇತ್ತು. ದಾಸ-ದಾಸಿಯರು ತುಂಬಾ ದಾರುಣನಾದ ಸ್ಥಿತಿಯಲ್ಲಿ ಜೀವಿಸುತ್ತಿದ್ದರು. ತಪ್ಪಿಸಿಕೊಂಡು ಹೋಗುವ ಪ್ರಯತ್ನದಲ್ಲಿ ಸಿಕ್ಕಿಬಿದ್ದರೆ ಜೀವನ ಪರ್ಯಂತ ದಾಸ-ದಾಸಿಯರಾಗಿ ದುಡಿಯಬೇಕಿತ್ತು. ಇನ್ನು ದಾಸಿಯರ ಪಾಡು ಹೇಳತೀರದಾಗಿತ್ತು. ಸುಂದರ ದಾಸಿಯರು ಒಡೆಯನಿಗೆ ಬೇಕೆನಿಸಿದಾಗ ದೈಹಿಕ ಸುಖ ನೀಡಬೇಕಿತ್ತು. ಜೊತೆಗೆ ಅವರ ಅತಿಥಿಗಳಿಗೂ ದೈಹಿಕ ಸುಖ ಉಣಬಡಿಸಬೇಕಿತ್ತು.

ಯಾಜ್ಞವಲ್ಕ್ಯ ಸ್ಮೃತಿಯು ದಾಸ-ದಾಸಿಯರನ್ನು ಅವರ ವರ್ಣದ ಆಧಾರದ ಮೇಲೆ ವಿಭಜನೆ ಮಾಡಿದೆ. ಬ್ರಾಹ್ಮಣರಿಗೆ ಕ್ಷತ್ರಿಯ, ವೈಶ್ಯ, ಶೂದ್ರರು ದಾಸರಾಗಬಹುದು. ಆದರೆ ಕ್ಷತ್ರಿಯನು ವೈಶ್ಯ, ಶೂದ್ರರಿಗೆ ದಾಸನಾಗಲಾರ. ವೈಶ್ಯನು ಶೂದ್ರನ ದಾಸನಾಗಲಾರ. ಪರಿಸ್ಥಿತಿಯ ಒತ್ತಾಯದಿಂದ ಬ್ರಾಹ್ಮಣನು ದಾಸನಾಗಬೇಕಾದಲ್ಲಿ ಅವನು ಬ್ರಾಹ್ಮಣರ ಸ್ಥಾನಮಾನಗಳಿಗೆ ತಕ್ಕ ಪವಿತ್ರ ಕೆಲಸಗಳನ್ನು ಮಾತ್ರ ಮಾಡಬೇಕು ಎನ್ನುವುದನ್ನು ಅದು ನಿರ್ದೇಶಿಸುತ್ತದೆ.

ಬಹಳ ಪ್ರಾಚೀನ ಕಾಲದಿಂದ ಹಿಂದೂ ಧರ್ಮದಲ್ಲಿ ರೂಢಿಗೆ ಬಂದಿರುವುದು ದೇವದಾಸಿ ಪದ್ಧತಿ. ಇದು ದೇವರು ಮತ್ತು ಧರ್ಮದ ಹೆಸರಿನಲ್ಲಿ ರೂಢಿಗೆ ಬಂದಿದೆ. ಪ್ರಾಯದ ಹೆಣ್ಣು ಮಕ್ಕಳನ್ನು ದೇವರಿಗೆ ಹರಕೆ ಅಥವಾ ಬಸವಿ ಬಿಡುವುದು; ನಂತರ ಅವರು ಸೂಳೆಗಾರಿಕೆ ಕಸುಬನ್ನು ಅವಲಂಬಿಸುವುದು. ಇದು ಹಿಂದೂ ಧರ್ಮಸಂಪ್ರದಾಯಗಳ ಅಧಃಪತನದ ಸಂಕೇತವಾಗುತ್ತದೆ. ಭವಿಷ್ಯ ಪುರಾಣ ಎನ್ನುವ ಹೆಸರಿನ ಒಂದು ಪುರಾಣ; ದೇವಾಲಯಗಳಿಗೆ ಅಥವಾ ದೇವರಿಗೆ ಹೆಣ್ಣು ಮಕ್ಕಳನ್ನು ಅರ್ಪಿಸುವವರು ರ್ಸೂಲೋಕ ಸೇರುತ್ತಾರೆ ಎಂದು ಘೋಷಿಸುತ್ತದೆ. ಹೀಗೆ ದಾಸ್ಯಪದ್ಧತಿಗೆ ಹಿಂದೂ ಧರ್ಮಗ್ರಂಥಗಳು ಬೆಂಬಲ ಸೂಚಿಸಿ ಆಧಾರ ಒದಗಿಸಿರುವುದು ಒಂದು ಗಂಭೀರ ವಿಷಯವಾಗಿದೆ. ಹಿಂದೂ ಧರ್ಮದ ಪುರೋಹಿತ ವರ್ಗವು ತನ್ನ ಸ್ವಾರ್ಥ ಸಾಧನೆಗಾಗಿ ರಚಿಸಿಕೊಂಡ ಅತ್ಯಂತ ಕ್ರೂರ ಮತ್ತು ಅಮಾನುಷ ಗ್ರಂಥಗಳನ್ನು ಸ್ಮೃತಿಗಳು ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ.

೧೦

ಹಿಂದೂ ಧರ್ಮದ ಇಷ್ಟೆಲ್ಲಾ ಸಾಮಾಜಿಕ ಅನಿಷ್ಠಗಳಿಗೆ ಕಾರಣವಾದ ವರ್ಣವ್ಯವಸ್ಥೆ ಹುಟ್ಟಿದ್ದಾದರೂ ಹೇಗೆ? ಮೇಲುವರ್ಣಗಳು ಮತ್ತು ಕೆಳವರ್ಣಗಳು ಎಂಬುದಾಗಿ ವಿಭಾಗವಾಗಿದ್ದು ಯಾಕೆ? ಎನ್ನುವ ಪ್ರಶ್ನೆಗಳು ಪ್ರಮುಖವಾಗಿ ಕಾಡುತ್ತವೆ.

ಸಮಾಜವೊಂದರ ಚಲನಶೀಲತೆ ಎನ್ನುವುದು ಅದರ ಶಕ್ತಿಗಳು; ಪ್ರಮುಖವಾಗಿ ಜನಶಕ್ತಿ, ಜವಾಬ್ದಾರಿಗಳು, ಉತ್ಪಾದನೆ, ವಿತರಣೆ ಮುಂತಾದ ಅಂಶಗಳನ್ನು ಅವಲಂಬಿಸಿರುತ್ತದೆ. ಸಮಾಜದ ವ್ಯಾಪ್ತಿಯೊಳಗಿನ ಜನತೆಯ ಜೀವನಕ್ಕೆ ಒಂದು ರೂಪು ಕೊಡುವುದಕ್ಕಾಗಿ; ಸಮಾಜದ ಕ್ರಿಯಾಶೀಲತೆಗೆ ಬೇಕಾದ ಶಕ್ತಿಗಳನ್ನು, ಜವಾಬ್ದಾರಿಗಳನ್ನು ಹಂಚಿಕೊಟ್ಟು ಉತ್ಪಾದನೆ ಹಾಗೂ ವಿತರಣೆಗಳಿಗೆ ಒಂದು ಸಾಮಾಜಿಕ ಆಕಾರ ನೀಡುವ ಉದ್ದೇಶದಿಂದ ವರ್ಣವ್ಯವಸ್ಥೆ ಹಿಂದೂ ಧರ್ಮದ ದ್ರಾವಿಡರಲ್ಲಿ ಮೊದಲು ಹುಟ್ಟಿಕೊಂಡಿತು. ಇದನ್ನು ಸರಳೀಕರಿಸಿ ಹೇಳಬೇಕೆಂದರೆ; ಸಮಾಜದ ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಭಾಗವಹಿಸುತ್ತಾ, ಹಂಚಿಕೆಯಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾ; ಸಮಾಜದ ಜನತೆಯೆಲ್ಲಾ ಸಮಾನತೆ ಮತ್ತು ಸಹಕಾರ ತತ್ವಗಳ ಅಡಿಯಲ್ಲಿ ಕ್ರಿಯಾಶೀಲರಾಗಿದ್ದುಕೊಂಡು ಸಮಾಜದ ಚಲನಶೀಲತೆಗೆ ಕಾರಣವಾಗುವುದು ಎಂದು. ಹೀಗೆ ಹಿಂದೂ ದ್ರಾವಿಡರಲ್ಲಿ ಜವಾಬ್ದಾರಿಯ ಹಂಚಿಕೆಯಾಗಿತ್ತು.

ಜನತೆ ಚಿಕ್ಕ ಚಿಕ್ಕ ಸಮಾಜಗಳಲ್ಲಿ ಜೀವಿಸುತ್ತಾ ಉತ್ಪಾದನೆ ಮತ್ತು ಹಂಚಿಕೆಯಲ್ಲಿ ಭಾಗವಹಿಸುತ್ತಿತ್ತು. ಪ್ರಾರಂಭದಲ್ಲಿ ಅಂದರೆ; ದ್ರಾವಿಡರ ಕಾಲದ ಚಿಕ್ಕ ಚಿಕ್ಕ ಸಮಾಜಗಳಲ್ಲಿ ವ್ಯವಸಾಯ ಮಾಡುವುದು, ದನ ಕೊಯ್ಯುವುದು, ಕೆರೆ ಹೊಲಿಯುವುದು, ವ್ಯಾಪಾರ ಮಾಡುವುದು, ಬಟ್ಟೆ ಹೊಲಿಯುವುದು, ಬಳೆ ತೊಡಿಸುವುದು, ಬಟ್ಟೆ ತೊಳೆಯುವುದು, ಹೀಗೆ ಯಾವ ಕೆಲಸವನ್ನಾದರೂ ಯಾರು ಬೇಕಾದರೂ ಮಾಡಬಹುದಿತ್ತು. ಒಬ್ಬನು ಅಥವಾ ಸಮೂಹ ಪ್ರಾರಂಭದಿಂದ ಜೀವಿತದ ಕೊನೆಯವರೆವಿಗೂ ಒಂದೇ ವಿಧದ ಕೆಲಸವನ್ನೇ ಮಾಡುತ್ತಿದ್ದರೆ; ಅಂತಹ ಕೆಲಸ ವೃತ್ತಿ ಅಥವಾ ಕಸಬು ಎಂದು ಕರೆಸಿಕೊಳ್ಳುತ್ತದೆ. ಹೀಗೆ ಸಾಮಾಜಿಕ ಜವಾಬ್ದಾರಿಗಳಾದ ಉತ್ಪಾದನೆ ಮತ್ತು ವಿತರಣೆ ಕೆಲಸಗಳು ಬರುಬರುತ್ತಾ ವೃತ್ತಿಗಳು ಅಥವಾ ಕಸಬುಗಳಾದವು. ಆನಂತರ ಇವು ಅನುವಂಶಿಕವಾದವು. ವೃತ್ತಿಗಳು ಅನುವಂಶಿಕವಾಗಿ ಕೊನೆಗೆ ಜಾತಿ ಸೂಚಕಗಳಾಗಲು ಕಾರಣವಾಯಿತು. ಉದಾಹರಣೆಗೆ : ಬೇರೆ ಬೇರೆ ಸಮಾಜಗಳಲ್ಲಿನ ಎಲ್ಲಾ ಬಟ್ಟೆ ತೊಳೆಯುವವರು ಅಗಸರಾದರು, ಮಡಿಕೆ-ಕುಡಿಕೆ ಮಾಡುವವರು ಕುಂಬಾರರಾದರು, ಚರ್ಮದ ಕೆಲಸ ಮಾಡುವವರು ಚಮ್ಮಾರರಾದರು, ಬಳೆ ತೊಡಿಸುವವರು ಬಳೆಗಾರರಾದರು, ವ್ಯಾಪಾರ ಮಾಡುವವರು ಕೋಮಟಿಗರಾದರು. ಹೀಗೆ ಜವಾಬ್ದಾರಿ ಹಂಚಿಕೆಯ ರೂಪಗಳಾದ ವೃತ್ತಿಗಳು ಜಾತಿ ಮತ್ತು ವರ್ಣಗಳ ಹುಟ್ಟಿಗೆ ಕಾರಣವಾದವು.

ಹಂಚಿಕೆಯಾದ ಕೆಲವು ವೃತ್ತಿಗಳು ಬೆವರಿನ ಕಮಟು ವಾಸನೆಯ ಅಸಹ್ಯ ಹಾಗೂ ಕೊಳಕಿನ ವೃತ್ತಿಗಳಾಗಿದ್ದವು. ಈ ವೃತ್ತಿಗಳು ಸಾಮಾಜಿಕ, ಆರ್ಥಿಕ, ರಾಜಕೀಯ ಅವಶ್ಯಕತೆಗಳನ್ನು ಪೂರೈಸಿಕೊಡುವ ವೃತ್ತಿಗಳಾಗಿರಲಿಲ್ಲ. ಅಂದರೆ ಇವು ಯಾವುದೇ ಆಳ್ವಿಕೆ, ಆಲೋಚನೆ, ವ್ಯವಹಾರ ಮುಂತಾದವನ್ನು ಒಳಗೊಂಡಿರಲಿಲ್ಲ. ಆದುದರಿಂದ ಇವನ್ನು ಕ್ಷುಲ್ಲಕವಾದವು; ನಿರುಪಯುಕ್ತವಾದವು ಎಂದು ಮುಂತಾಗಿ ಇತರ ವೃತ್ತಿಗಳವರು ಪರಿಗಣಿಸಲು ಅವಕಾಶವಾದ್ದರಿಂದ; ಮೇಲು ವೃತ್ತಿಗಳು ಅಥವಾ ಉತ್ತಮ ವೃತ್ತಿಗಳು ಮತ್ತು ಕೀಳುವೃತ್ತಿಗಳು ಎಂಬುದಾಗಿ ವರ್ಗೀಕರಣಗೊಂಡು; ಮೇಲುವೃತ್ತಿಯ ಜನರನ್ನು ಮೇಲ್ವರ್ಣದವರು ಹಾಗೂ ಕೀಳುವೃತ್ತಿಯ ಜನರನ್ನು ಕೆಳವರ್ಣದವರು ಎಂದು ವಿಭಾಗಿಸಲು ಕಾರಣವಾಯಿತು. ಇದು ಉಚ್ಚ-ಮಧ್ಯಮ-ನೀಚ ಎನ್ನುವ ಸ್ತರಗಳ ಸೃಷ್ಟಿಗೆ ಅವಕಾಶ ಮಾಡಿಕೊಟ್ಟಿತು. ಆಯಾಯ ವೃತ್ತಿಗಳಿಗೆ ಬೇಕಾದ ಅರ್ಹತಾ ಗುಣಗಳು, ಅವಕಾಶಗಳು ಆಯಾಯ ವರ್ಣಗಳಿಗೆ ಮಾತ್ರ ಸೀಮಿತವಾದವು. ಆದುದರಿಂದ ಅಕ್ಕಸಾಲಿಗನ ವೃತ್ತಿ ನೈಪುಣ್ಯತೆ ಕಮ್ಮಾರನಿಗೆ ಸಿಗಲಿಲ್ಲ, ನೇಕಾರನ ನೈಪುಣ್ಯತೆ ಕುಂಬಾರನಿಗೆ ಸಿಗಲಿಲ್ಲ, ಆಳ್ವಿಕೆಯ ನೈಪುಣ್ಯತೆ ವ್ಯಾಪಾರಗಾರನಿಗೆ ಸಿಗಲಿಲ್ಲ ಹಾಗೂ ಆಲೋಚನೆಯ ನೈಪುಣ್ಯತೆ ಇವರಾರಿಗೂ ಸಿಗಲಿಲ್ಲ. ಹೀಗೆ ಒಂದು ವರ್ಣಕ್ಕಿದ್ದ ಸೌಲಭ್ಯ, ಸವಲತ್ತುಗಳು ಮತ್ತೊಂದು ವರ್ಣಕ್ಕೆ ಸಿಗದಂಥಾ ಸಂದರ್ಭ ಉಂಟಾಯಿತು. ಕೆಳವರ್ಣದ ವೃತ್ತಿಗಳು ಉತ್ಪತ್ತಿ ಇಲ್ಲದ ಸೇವೆಗಳಾಗಿದ್ದರಿಂದ ದಾಸ್ಯತ್ವ ಪಡೆಯಲು ಕಾರಣವಾಯಿತು. ಆದುದರಿಂದ ಕೆಳವರ್ಣಗಳು ಆರ್ಥಿಕ ಪರಾವಲಂಬಿಗಳಾಗುವುದರ ಜೊತೆಗೆ ಬಡತನ ಅವರಿಗೆ ಅನಿವಾರ್ಯವಾಯಿತು. ಹಿಂದೂ ದ್ರಾವಿಡರು ಸಮಾಜದ ಚಲನಶೀಲತೆಗಾಗಿ ಸಾಮಾಜಿಕ ಜವಾಬ್ದಾರಿಗಳನ್ನು ಹಂಚಿಕೊಟ್ಟರೂ ಜೊತೆಯಲ್ಲೇ ಅದರಲ್ಲಿನ ಅವರೋಹಣ ಕ್ರಮವು ಅಸಮಾನತೆಯ ಹುಟ್ಟಿಗೂ ಕಾರಣವಾಯಿತು.

ಇಂತಹ ಸಂದರ್ಭದಲ್ಲಿ ಇಂಡಿಯಾವನ್ನು ಪ್ರವೇಶಿಸಿದ ಆರ್ಯರಿಗೆ ಶ್ರೇಣೀಕೃತ ವರ್ಣವ್ಯವಸ್ಥೆಯ ಮೇಲಿನಸ್ಥರದಲ್ಲಿ ಸುಲಭವಾಗಿ ನಿಲ್ಲಲು ಹಾಗೂ ಇಡೀ ವ್ಯವಸ್ಥೆಯನ್ನು ತುಳಿದುಕೊಳ್ಳಲು ಅವಕಾಶವಾಯಿತು. ಮಧ್ಯ ಏಶಿಯಾದಿಂದ ಇಂಡಿಯಾಕ್ಕೆ ವಲಸೆ ಬಂದ ಆರ್ಯರಿಗೆ ಕೆಂಪು ಹಾಸಿನ ಸ್ವಾಗತವೇನೂ ಇಲ್ಲಿ ಕಾದಿರಲಿಲ್ಲ. ಇಲ್ಲಿನ ಮೂಲನಿವಾಸಿ ದ್ರಾವಿಡ ಜನಾಂಗದೊಡನೆ ಹೋರಾಡಿ, ದ್ರಾವಿಡರನ್ನು ಸೆರೆಯಾಳಾಗಿಸಿಕೊಂಡರು. ದ್ರಾವಿಡರ ಒಟ್ಟು ಸಂಸ್ಕೃತಿ ಆರ್ಯರ ಸಂಸ್ಕೃತಿಯಿಂದ ಭಿನ್ನವಿತ್ತು. ದ್ರಾವಿಡರಲ್ಲಿ ಭೀಕರ ರೂಪದ ಮಾತೃದೇವತಾರಾಧನೆ ಇತ್ತು. ದ್ರಾವಿಡರ ಇಂತಹ ಆರಾಧನೆ ಮತ್ತು ಸಂಸ್ಕೃತಿ ಆರ್ಯರಿಗೆ ಅನಾಗರೀಕವಾಗಿ ಕಂಡು; ಭಯ, ಭೀಭತ್ಸ, ಅಸಹ್ಯ ಹುಟ್ಟಿಸಿ; ತುಚ್ಛವಾಗಿ ಕಾಣಿಸತೊಡಗಿದರು. ಆದುದರಿಂದ ದ್ರಾವಿಡರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯವಾದ ಯಾವುದೇ ರೀತಿಯ ಪ್ರಮುಖ ವೃತ್ತಿಗಳು ಸಿಗದಂತೆ ನೋಡಿಕೊಂಡರು. ಯಾವುದೇ ರೀತಿಯ ಸ್ಥಾನಮಾನ ಸ್ಥಾಪಿಸಿಕೊಳ್ಳಲೂ ಅವರಿಗೆ ಅವಕಾಶವನ್ನೇ ನೀಡಲಿಲ್ಲ. ಜೊತೆಗೆ ತಮ್ಮ ಅಧೀನದಲ್ಲಿರುವಂತೆಯೂ ನೋಡಿಕೊಂಡರು.

ಆರ್ಯರು ದ್ರಾವಿಡರ ಬಗ್ಗೆ ಇಷ್ಟೊಂದು ಕಠಿಣ ಹೃದಯಿಗಳಾಗಲು ಪ್ರಮುಖ ಕಾರಣ; ದ್ರಾವಿಡರ ಬಗ್ಗೆ ಅವರಲ್ಲಿದ್ದ ಭಯ. ಆಕ್ರಮಣಕಾರರಲ್ಲಿ ಸ್ವಾಭಾವಿಕವಾಗಿ ಇರುವ ಭಯ ಮತ್ತು ಹುಂಬು ಧೈರ್ಯಗಳು ಆರ್ಯರಲ್ಲೂ ಇದ್ದವು. ದ್ರಾವಿಡರನ್ನು ಬೆಳೆಯಲು ಬಿಟ್ಟರೆ; ತಮ್ಮ ಮೇಲೆರೆಗಿ ಸೇಡು ತೀರಿಸಿಕೊಳ್ಳುವರು ಎನ್ನುವ ಭಯ ಅವರನ್ನು ಕಠಿಣ ಹೃದಯದವರನ್ನಾಗಿಸಿತ್ತು. ಆಕ್ರಮಣಕಾರರು ಆಳುವ ವರ್ಗವಾಗುತ್ತಾ ಹೋದಂತೆಲ್ಲ; ಇಡೀ ಹಿಂದೂ ಸಮಾಜವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಯಜಮಾನಿಕೆ ಸ್ಥಾಪಿಸಿಕೊಳ್ಳಲು ಸಹಾಯಮಾಡಿದ್ದು ವರ್ಣವ್ಯವಸ್ಥೆ. ದ್ರಾವಿಡರ ವರ್ಣವ್ಯವಸ್ಥೆಯನ್ನು ಆರ್ಯರು ಶ್ರೇಣೀಕೃತ ವರ್ಣವ್ಯವಸ್ಥೆಯಾಗಿ ಪರಿವರ್ತಿಸಿ; ಅದರ ಮೇಲೆ ಆರಾಮವಾಗಿ ಕುಳಿತು ದ್ರಾವಿಡರನ್ನು ಬೌದ್ದಿಕ ಗುಲಾಮರನ್ನಾಗಿ ಮಾಡಿಕೊಂಡರು.