ಪ್ರಯತ್ನ 

ಇಂಡಿಯಾದ ಇತಿಹಾಸದ ಹಿಂದಕ್ಕೆ ಹೋದಷ್ಟೂ; ಹಿಂದೂ ಧರ್ಮದ ಕಟ್ಟು-ಕಟ್ಟಳೆಗಳನ್ನು ತಿರಸ್ಕರಿಸಿದವರ ಬಗ್ಗೆ ನಮಗೆ ಸ್ಪಷ್ಟವಾಗುತ್ತಾ ಹೋಗುತ್ತದೆ. ಸಾಂಖ್ಯ ಮತ್ತು ಮೀಮಾಂಸ ಪಂಥದವರು, ಅಜೀವಕರು ಮುಂತಾದ ಕೆಲವು ನಾಸ್ತಿಕರು ಮತ್ತು ಮುಕ್ತ ಚಿಂತಕರು ಈ ಗುಂಪಿಗೆ ಸೇರುತ್ತಾರೆ. ಆದರೆ ಈ ಎಲ್ಲಾ ನಾಸ್ತಿಕರೂ ಹಿಂದೂ ಧರ್ಮದಲ್ಲೇ ಇದ್ದವರು ಮತ್ತು ಉಳಿದವರು ಎನ್ನುವುದು ಮುಖ್ಯ. ಧರ್ಮದ ವಿಭಜನೆಗಳು ಮತ್ತು ಜಾತ್ಯಾತೀತ ಸಮಾಜಗಳು ರೂಪುಗೊಂಡದ್ದು ಆ ನಂತರ.

ಇಂಗ್ಲೀಷ್ ಸಾಮ್ರಾಜ್ಯಶಾಹಿ ಆಡಳಿತ ಕಾಲದಲ್ಲಿ; ಇಂಗ್ಲೀಷ್ ಶಿಕ್ಷಣ ಕ್ರಮವನ್ನು ಇಂಡಿಯಾದಲ್ಲಿ ಜಾರಿಗೊಳಿಸಲಾಯಿತು ಮತ್ತು ಕೆಳಜಾತಿಗಳಿಗೂ ಶಿಕ್ಷಣ ಪಡೆಯಲು ಅವಕಾಶ ನೀಡಲಾಯಿತು. ಅಬ್ರಾಹ್ಮಣ ಜಸ್ಟೀಸ್ ಪಾರ್ಟಿ ೧೯೧೯ರಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ಅಧಿಕಾರಕ್ಕೆ ಬಂದಾಗ; ಕಡ್ಡಾಯ ಶಿಕ್ಷಣ ಜಾರಿಗೊಳಿಸುವ ಬಗ್ಗೆ ಪ್ರಾರಂಭಿಕ ಹೆಜ್ಜೆಗಳನ್ನು ಇಡಲಾಯಿತು. ತಮಿಳುನಾಡಿನಲ್ಲಿ ‘ಪೆರಿಯಾರ್’ ಎನ್ನುವ ಜನಪ್ರಿಯ ಹೆಸರಿನಿಂದ ಪ್ರಖ್ಯಾತರಾಗಿದ್ದ ಇ.ವಿ.ರಾಮಸ್ವಾಮಿ ನಾಯಕರ್ ಅವರ ಬೆಂಬಲದಿಂದ ೧೯೫೪ ರಿಂದ ೬೨ರವರೆಗೆ ಆಳ್ವಿಕೆ ನಡೆಸಿದ ಜಸ್ಟೀಸ್ ಪಾರ್ಟಿಯಿಂದ ಮುಖ್ಯಮಂತ್ರಿ ಆಗಿದ್ದವರು ಕೆ.ಕಾಮರಾಜ್ ಅವರು. ಇವರ ಆಡಳಿತಾವಧಿಯಲ್ಲಿ ಎಲ್ಲ ಕೆಳಗಿನ ಜಾತಿಯವರಿಗೆ ಶಿಕ್ಷಣ ಸುಲಭವಾಗಿ ದೊರಕಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಯಿತು. ಮುಕ್ತ ಚಿಂತಕರಾದ ಜಾನ್ ಲಾಕೆ, ಸರ್ ಫ್ರಾನ್ಸಿಸ್ ಬೇಕನ್, ಥಾಮಸ್ ಪೈನೆ ಮತ್ತು ವಾಲ್ಟೈರ್ ಮುಂತಾದವರ ಬರಹಗಳ ಮೂಲಕ; ಬ್ರಿಟಿಷರ ಹಾಗೂ ಉದಾರವಾದಿ ಇಂಡಿಯಾದ ಶಿಕ್ಷಕರ ಮೂಲಕ ಈ ದೇಶದ ಯುವಕರಿಗೆ ಪ್ರಪಂಚದ ಇತಿಹಾಸವನ್ನು ಹಾಗೂ ದಬ್ಬಾಳಿಕೆಯ ಏಳು-ಬೀಳುಗಳನ್ನು ಪರಿಚಯಿಸಲಾಯಿತು. ಈ ಸತ್ವಯುತ ಬರಹಗಾರರು ಇಂಡಿಯಾದ ಜಾತ್ಯಾತೀತ ಹಾಗೂ ಮುಕ್ತ ಚಿಂತಕ ಸಮಾಜಗಳ ಬೆಳವಣಿಗೆಗೆ ಪ್ರೋತ್ಸಾಹಿಸಿದರು. ಸ್ತ್ರೀಯರ ಸ್ಥಾನ-ಮಾನ ಮತ್ತು ಜಾತಿಪದ್ಧತಿಗೆ ಸಂಬಂಧಿಸಿದಂತೆ ಎರಡನ್ನೂ ಸೇರಿಸಿಕೊಂಡು ಹಿಂದೂ ಧರ್ಮಬೋಧನೆಯ ಮೌಲ್ಯಗಳು ಮತ್ತು ಆಚರಣೆಗಳಿಗೆ ಧಾರ್ಮಿಕ ಮತ್ತು ರಾಜಕೀಯ ವ್ಯಾಪ್ತಿ ಇರುವ ಇಂತಹ ಗುಂಪುಗಳು ಮುಕ್ತ ಹಾಗೂ ಕ್ರಮಬದ್ಧ ಪ್ರತಿಭಟನೆಗಳನ್ನು ಪ್ರಾರಂಭಿಸಿದವು. ಹಿಂದೂ ಮುಕ್ತ ಚಿಂತಕರ ಸಂಘಟನೆಯೊಂದು ಮದ್ರಾಸ್‌ನಲ್ಲಿ ೧೮೭೫ರಲ್ಲಿ ರೂಪುಗೊಂಡು ಮನು ಧರ್ಮಶಾಸ್ತ್ರದ ಬೋಧನೆಗಳನ್ನು ಪ್ರಶ್ನಿಸಿ ವಿರೋಧಿಸಲಾಯಿತು ಮತ್ತು ಜೊತೆಯಲ್ಲೇ ವಿಧವಾ ವಿವಾಹ ಮತ್ತು ಬಾಲ ವಿಧವೆಯರನ್ನು ಗೌರವದ ಪುನರ್ ಸ್ಥಿತಿಗೆ ತರುವುದು ಮುಂತಾದ ಕಾರ್ಯಗಳಿಗೆ ಚಾಲನೆ ಕೊಡಲಾಯಿತು.

ದಕ್ಷಿಣ ಇಂಡಿಯಾದಲ್ಲಿ ಇ.ವಿ.ರಾಮಸ್ವಾಮಿ ನಾಯ್ಕರ್ ಅವರು ‘ಸ್ವಾಭಿಮಾನ ಚಳುವಳಿ’ ಎನ್ನುವ ಹೆಸರಿನ ಚಳುವಳಿಯೊಂದನ್ನು ಪ್ರಾರಂಭಿಸಿದರು. ಅವರು ೧೮೭೯ ರಿಂದ ೧೯೭೩ರವರೆಗೆ ಜೀವಿಸಿದ್ದರು. ಅವರನ್ನು ಜನತೆ ‘ಪೆರಿಯಾರ್ ’ ಎನ್ನುವ ಪ್ರೀತಿಯ ಮತ್ತು ಗೌರವದ ಹೆಸರಿನಿಂದ ಕರೆಯುತ್ತಿದ್ದರು. ತಮಿಳು ಭಾಷೆಯಲ್ಲಿ ‘ಪೆರಿಯಾರ್ ’ ಎಂದರೆ ‘ದೊಡ್ಡ-ಮನುಷ್ಯ’ ಎನ್ನುವ ಅರ್ಥ. ಪೆರಿಯಾರ್ ಅವರು ಅಂತರಂಗ ಮತ್ತು ಬಾಹ್ಯ ಎರಡರಲ್ಲೂ ನಾಸ್ತಿಕರು.

ಹಿಂದೂ ದೇವತೆಗಳ ಮಂತ್ರಶಕ್ತಿಯಲ್ಲಿನ ಜನದ ಮುಗ್ಧನಂಬಿಕೆ, ಗೋಮೂತ್ರ ಮತ್ತು ಸಗಣಿಯ ಬಗೆಗಿನ ಅವರ ಪೂಜ್ಯ ಭಾವನೆ ಹಾಗೂ ಮಾನವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಧಾರ್ಮಿಕ ಆಚರಣೆ ಮತ್ತು ಮಂತ್ರ, ಯಂತ್ರಗಳಲ್ಲಿನ ಅವರ ನಿಷ್ಕಪಟ ನಂಬಿಕೆ ಮುಂತಾದವುಗಳನ್ನು ಅರಿಯಲು ಬೇರೆ ವಿಚಾರವಾದೀ ಚಳುವಳಿಗಳಂತೆ ‘ಸ್ವಾಭಿಮಾನ ಚಳುವಳಿ’ ಗುಂಪಿನ ಜನರೂ ಆಧುನಿಕ ವಿಜ್ಞಾನದ ಕಡೆ ನೋಡಿ; ಕಾರ್ಯಾಕಾರಣದ ಉಪಯೋಗ ಮತ್ತು ತರ್ಕಗಳ ಕಲ್ಪನೆಗಳನ್ನು ಪರೀಕ್ಷಿಸಲು ಮತ್ತು ಪ್ರಶ್ನಿಸಲು ಬಳಸಿಕೊಂಡರು. ಸ್ವಾಭಿಮಾನ ಚಳುವಳಿಯ ಗುಂಪು ಹಿಂದೂ ಧರ್ಮಗ್ರಂಥಗಳ ಸಮರ್ಥನೆಯನ್ನು, ಮನುಧರ್ಮಸೂತ್ರದ ಕಟ್ಟಳೆಗಳನ್ನು, ಅಸಮಾನ ವೃತ್ತಿಗಳ ಮೂಲಕ ಉಂಟಾದ ಶ್ರೇಣೀಕೃತ ಜಾತಿವ್ಯವಸ್ಥೆಯನ್ನು ಪ್ರಶ್ನಿಸಿತು. ಸಾರ್ವಜನಿಕವಾಗಿ ಮನುಧರ್ಮ ಶಾಸ್ತ್ರವನ್ನು ಸುಡುವುದರ ಮೂಲಕ ಈ.ವಿ.ರಾಮಸ್ವಾಮಿ ನಾಯ್ಕರ್ ಅವರ ಅದರ ಬೋಧನೆಗಳನ್ನು ಅವಹೇಳನ ಮಾಡಿದರು.

ಪೆರಿಯಾರರ ೯೪ನೇ ವರ್ಷದ ಜನ್ಮದಿನದ ಆಚರಣೆಯ ನೆನಪಿಗಾಗಿ ಹೊರತಂದ ಸ್ಮರಣ ಸಂಚಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹಿಂದೂ ಧರ್ಮಗ್ರಂಥಗಳನ್ನು ಕುರಿತು ‘‘ಎರಡು ಸಾವಿರ ಅಥವಾ ಮುರು ಸಾವಿರ ವರ್ಷಗಳ ಹಿಂದಿನ ವಿಚಾರಗಳ ಸರಕನ್ನು ಹೊಂದಿರುವಂತಹವು. ಒಂದು ರೀತಿಯಲ್ಲಿ ಮಾನವ ಅನಾಗರೀಕನಾಗಿದ್ದಾಗ ರೂಪುಗೊಂಡಂಥವು. ಆ ಕಾಲ ವೈಜ್ಞಾನಿಕ ಜ್ಞಾನದ ಕೊರತೆಯಿಂದ ಹಾಗೂ ಜ್ಞಾನದ ಬೆಳವಣಿಗೆ ಮತ್ತು ವಿಕಾಸದ ಬಗ್ಗೆ ಜನ ಅಜ್ಞಾನಿಗಳಾಗಿದ್ದರು’’ ಎಂದು ಹೇಳುತ್ತಾರೆ. ಹಿಂದೂ ಧರ್ಮದಲ್ಲಿನ ಜಾತಿ ಪದ್ಧತಿಯನ್ನು ಆಧಾರ ಸಹಿತ ವಿರೋಧಿಸಿದ ಅವರು ‘‘ಜಾತಿಯಿಂದ ಮನುಷ್ಯ ಅವಮಾನಿತನಾಗುತ್ತಾನೆ ಹಾಗೂ ಧರ್ಮದಿಂದ ಜಾತಿ ಅವಮಾನಿತವಾಗುತ್ತದೆ. ನಾವು ಒಂದನ್ನು ಜೀವಂತ ಉಳಿಸಿಕೊಂಡು ಮತ್ತೊಂದನ್ನು ನಾಶಪಡಿಸುವುದಾದರೂ ಹೇಗೆ’’ ಎಂದು ಪ್ರಶ್ನಿಸಿದ್ದಾರೆ. ಅಂದರೆ ಮಾನವ ಕಲ್ಯಾಣಕ್ಕಾಗಿ ಜಾತಿ ಮತ್ತು ಧರ್ಮದ ಬೇಲಿಗಳನ್ನು ಕೀಳಬೇಕು ಎನ್ನುವುದು ಅವರ ಮಾತಿನ ಅರ್ಥ. ಅವರು ಮುಂದುವರೆದು ‘‘ಆಧ್ಯಾತ್ಮ ಮತ್ತು ಭಾವನಾತ್ಮಕತೆಗಳ ಮೂಲಕ ಮುಕ್ತಿ ಪ್ರಾಪ್ತಿಗಾಗಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಮಾಡಿದ ವಿಫಲ ಪ್ರಯತ್ನಗಳನ್ನು ಪಕ್ಕಕ್ಕಿಟ್ಟು; ಇತಿಹಾಸದ ಉದ್ದಕ್ಕೂ ಮಾನವ ತನ್ನ ವಿಮರ್ಶಾತ್ಮಕ ಬುದ್ದಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡಿದ್ದರೆ, ಮಾನವ ಸಮಾಜದ ಪ್ರಗತಿ ಅನೇಕಪಟ್ಟು ಹೆಚ್ಚಾಗಿ, ವೇಗವಾಗಿ ಮತ್ತು ಉನ್ನತ ಮಟ್ಟದ್ದಾಗಿ ಇರುತ್ತಿತ್ತು’’ ಎಂದು ಅಭಿಪ್ರಾಯಪಡುತ್ತಾರೆ. ಪೆರಿಯಾರರ ನಾಸ್ತಿಕವಾದ ಮೇಲ್ಮಟ್ಟದ ಬೌದ್ದಿಕ ಹಂತದಲ್ಲಿ ದೇವರ ಅಸ್ತಿತ್ವವನ್ನು ತಿರಸ್ಕರಿಸುವುದೇ ಆಗಿದೆ. ಜೊತೆಗೆ ಸಮಾಜದಲ್ಲಿ ಮಾನವನ ವಿಮರ್ಶಾ ಬುದ್ದಿಯನ್ನು ಜಾಗೃತಗೊಳಿಸಿ ದೇವರಲ್ಲಿನ ಭಯ ಮತ್ತು ಧರ್ಮದಲ್ಲಿನ ನಂಬಿಕೆಗಳ ಬಗ್ಗೆ ಯಾವ ನಿರ್ಬಧವೂ ಇಲ್ಲದಂತೆ ಮಾಡುತ್ತದೆ. ಪೆರೆಯಾರರ ನಾಸ್ತಿಕವಾದ ಸಮಾಜಿಕ ಚಲನಶೀಲತೆಯ ಒಂದು ತಂತ್ರ ಎಂದು ಹೇಳಬಹುದು. ಪೆರಿಯಾರರ ‘ಸ್ವಾಭಿಮಾನ ಸಿದ್ಧಾಂತ’ ವಿಮರ್ಶಾತ್ಮಕ ಬುದ್ದಿ, ಕಾರ್ಯಾ-ಕಾರಣ ಸಂಬಂಧ, ವಿಶ್ಲೇಷಣಾತ್ಮಕ ಪ್ರಜ್ಞೆ, ಅನುಭವದ ಸಾಕ್ಷ್ಯ, ಅಂಕಿ-ಅಂಶಗಳ ಪರಿಶೀಲನೆ ಮತ್ತು ವೈಜ್ಞಾನಿಕ ಅನುಸಂಧಾನ ಮುಂತಾದವುಗಳನ್ನು ಆಧರಿಸಿದೆ.

ಇಂಡಿಯಾದಲ್ಲಿ ಮುಕ್ತ ಶೋಧನೆ ಮತ್ತು ವೈಜ್ಞಾನಿಕ ವಿಚಾರವಾದವನ್ನು ಮುಂಚೂಣಿಗೆ ತಂದವರು ಎಂ.ಎನ್.ರಾಯ್ (೧೮೮೭-೧೯೫೪) ಅವರು. ಅವರು ‘‘ಇಂಡಿಪೆಂಡೆಂಟ್ ಇಂಡಿಯಾ’’ ಎನ್ನುವ ನಿಯತಕಾಲಿಕವನ್ನು ನಡೆಸುತ್ತಿದ್ದರು. ಅವರು ‘ರ‍್ಯಾಡಿಕಲ್ ಡೆಮಾಕ್ರಟಿಕ್ ಪಾರ್ಟಿ’ ಎನ್ನುವ ಪಕ್ಷವನ್ನು ಪ್ರಾರಂಭಿಸಿ; ಅದರ ಮೂಲಕ ನೈತಿಕತೆ ಮತ್ತು ನೀತಿಗಳು ಧರ್ಮ ಮತ್ತು ಮೂಢನಂಬಿಕೆಯನ್ನು ಆಧರಿಸಿ ಇರಬೇಕಿಲ್ಲ ಎಂದು ಬೋಧಿಸಿದರು.

ಹಿಂದೂ ಧರ್ಮದಲ್ಲಿ ಇದ್ದ ಅನಿಷ್ಟ ಪದ್ಧತಿಗಳಲ್ಲಿ ಮಹಿಳೆಯರ ಸತಿ ಪದ್ಧತಿ ಮತ್ತು ಘಟಶ್ರಾದ್ಧ ಪ್ರಮುಖವಾದವು. ‘ಸತಿ’ ಪದ್ಧತಿ ಹೃದಯ ವಿದ್ರಾವಕ. ಸತಿ ಪದ್ಧತಿಯ ವಿರುದ್ಧ ಹೋರಾಡಿದವರು ರಾಜ ರಾಮಮೋಹನ ರಾಯ್ ಅವರು. ಸತ್ತ ಮನುಷ್ಯ ದೇಹಗಳನ್ನು ಸುಡುವ ಪದ್ಧತಿ ಆರ್ಯ ಹಿಂದೂಗಳಲ್ಲಿ ಸಾಮಾನ್ಯ. ಅಂದರೆ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರಲ್ಲಿ ಇಂದಿಗೂ ಹೆಣಗಳನ್ನು ಸುಟ್ಟರೆ ದ್ರಾವಿಡ ಹಿಂದೂಗಳು ಹೆಣಗಳನ್ನು ಹೂಳುತ್ತಾರೆ. ಅಂದರೆ ಸತಿ ಪದ್ಧತಿ ಆರ್ಯ ಹಿಂದೂಗಳಲ್ಲಿ ಹೆಚ್ಚಾಗಿ, ರೂಢಿಯಲ್ಲಿ ಇದ್ದಿರಬಹುದೆಂದು ಮತ್ತು ಅದರಿಂದ ಪ್ರಭಾವಿತರಾದ ದ್ರಾವಿಡ ಹಿಂದೂಗಳಲ್ಲಿ ಅಲ್ಪ-ಸ್ವಲ್ಪ ಅನುಕರಣೆಯಾಗಿರಬಹುದೆಂದು ಹೇಳಬಹುದು. ಧರ್ಮಶಾಸ್ತ್ರವನ್ನು ಆಧರಿಸಿದ್ದ ‘ಸತಿ’ ಪದ್ಧತಿ; ಮಹಿಳೆಯರ ಬಗ್ಗೆ ಅಂದು ಇದ್ದ ಕ್ರೌರ್ಯ ಮತ್ತು ಅಮಾನಯತೆಗೆ ಹಿಡಿದ ಕನ್ನಡಿಯಂತಿದೆ.

ಸತ್ತ ಗಂಡನ ಹೆಣವನ್ನು ಸುಡುವ ಚಿತೆಯ ಮೇಲೆ ಜೀವಿಸಿರುವ ಆತನ ಹೆಂಡತಿ ತಾನಾಗಿಯೇ ಕುಳಿತು ಅಥವಾ ಸಮಾಜದವರ ಬಲವಂತದಿಂದ ಅಥವಾ ಕುತಂತ್ರದಿಂದ ಕುಳಿತು ಸುಟ್ಟು ಬೂದಿಯಾಗುವುದೇ ‘ಸತಿ’ ಪದ್ಧತಿ. ಹೀಗೆ ಸತಿ ಹೋದ ಮಹಿಳೆಯ ಬಗ್ಗೆ ಪುರೋಹಿತ ಶಾಹಿ ಇಲ್ಲ-ಸಲ್ಲದ ಕತೆಗಳನ್ನು ಕಟ್ಟಿ ವೈಭಕರಿಸುವುದು, ಸ್ವರ್ಗ ಪ್ರಾಪ್ತಿಯಾಯಿತೆಂದು ಬೊಗಳೆಬಿಡುವುದು ಮುಂತಾದವು ಮುಂದುವರಿಯುತ್ತಿದ್ದರಿಂದ; ಶಿಕ್ಷಣ, ಚಿಂತನೆ ಮುಂತಾದ ಯಾವುವೂ ಇಲ್ಲದ ಮಹಿಳೆಯರು ಇದಕ್ಕೆ ಬಲಿಯಾಗಲು ಮುಂದೆ ಬರುತ್ತಿದ್ದರು, ಅಥವಾ ಬಲವಂತವಾಗಿ ಚಿತೆಯೊಳಗೆ ದೂಡಿ ಕೈತೊಳೆದು ಕೊಳ್ಳುತ್ತಿತ್ತು. ಮುಗ್ಧ ಸಮಾಜ. ಮಹಿಳೆಯರ ಬಗ್ಗೆ ಸಮಾಜ ಎಷ್ಟು ಕ್ರೂರಿಯಾಗಿತ್ತೆಂದರೆ; ಚಿತೆಗೆ ಬೆಂಕಿ ಹಚ್ಚಿದಾಗ ಅದರ ಮೇಲೆ ಜೀವಂತ ಕುಳಿತ ಮಹಿಳೆ ಎದ್ದು ನೆಗೆದು ಹೊರಗೆ ಓಡದಂತೆ ತಡೆಯಲು ಜನರು ಉದ್ದನೆ ಕವೆಗೋಲುಗಳನ್ನು ಹಿಡಿದು ಸುತ್ತಲೂ ನಿಂತಿರುತ್ತಿದ್ದರು. ಓಡಲು ಪ್ರಯತ್ನಿಸಿದರೆ ಆ ಕವೆಗೋಲುಗಳಿಂದ ಅವಳನ್ನು ಬೆಂಕಿಯಲ್ಲಿ ಬಿಗಿಯಾಗಿ ಹಿಡಿದಿಡುತ್ತಿದ್ದರು. ಅವಳ ರೋಧನೆ ಮತ್ತು ಆರ್ತನಾದಕ್ಕೆ ಹೊರಗಿನವರ ಮನಸ್ಸು ಕರಗಿ ಬಿಡಿಸುವುದನ್ನು ತಪ್ಪಿಸಲು ಶಂಖ, ಜಾಗಟೆ, ಗಂಟೆ, ಡೋಲು, ತಮಟೆ, ಮ್ಯಾಳ, ಕಹಳೆ ಮುಂತಾದವುಗಳ ಶಬ್ದದ ಜೊತೆಗೆ; ಪುರೋಹಿತರು ಸಂಸ್ಕೃತದ ಮಂತ್ರಗಳನ್ನು ಗಟ್ಟಿಯಾಗಿ ಉಚ್ಛರಿಸಿ, ಅವಳ ಆರ್ತನಾದ ಯಾರಿಗೂ ಕೇಳಿಸದಂತೆ ಮಾಡಲಾಗುತ್ತಿತ್ತು.

ಸ್ವಾತಂತ್ರ್ಯಾನಂತರದ ಇಂಡಿಯಾದ ಪ್ರಜಾಪ್ರಭುತ್ವ ಸರ್ಕಾರ ‘ಸತಿಪದ್ಧತಿ’ಯನ್ನು ನಿಷೇಧಿಸಿ; ಅದನ್ನು ವೈಭಕರಿಸುವವರ, ಅದಕ್ಕೆ ಪ್ರಚೋದಿಸುವವರ, ಯಾವುದೇ ರೀತಿಯಲ್ಲಿ ಆ ಕ್ರಿಯೆಯಲ್ಲಿ ಭಾಗವಹಿಸುವುದು ಕಠಿಣ ಶಿಕ್ಷಾರ್ಹ ಅಪರಾಧ ಎಂದು ಕಾಯಿದೆ ಮಾಡಿದೆ. ಆದರೂ; ಈಗಲೂ ಅಲ್ಲಲ್ಲಿ ‘ಸತಿ’ ಹೋಗುವುದು ಮತ್ತು ಮತೀಯ ಸಂಘಟನೆಗಳು ಅದನ್ನು ವೈಭಕರಿಸುವುದು ನಡೆದೇ ಇದೆ. ಇಂತಹ ಅನಿಷ್ಠ ಪದ್ಧತಿಗೆ ಮೊದಲು ತಡೆಯೊಡ್ಡಿದ್ದು ಬ್ರಿಟಿಷ್ ಸರ್ಕಾರ ಎನ್ನುವುದು ಬಹು ಮುಖ್ಯ ಸಂಗತಿ.

ಪ್ರಪಂಚದ ನಾಸ್ತಿಕರ ಪ್ರಥಮ ಕೇಂದ್ರ ಆಂಧ್ರಪ್ರದೇಶದ ಮುದುನಾರ್ ಎನ್ನುವಲ್ಲಿ ೧೯೪೦ರಲ್ಲಿ ಗೋರಾ ದಂಪತಿಗಳಿಂದ ಸ್ಥಾಪಿತವಾಯಿತು. ಗೋಪರಾಜು ರಾಮಚಂದ್ರರಾವ್ (೧೯೦೨-೧೯೭೫) ಮತ್ತು ಅವರ ಮಡದಿ ಸರಸ್ವತಿ ಗೋರಾ ಅವರು ಈ ಕೇಂದ್ರದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಕೇಂದ್ರವನ್ನು ೧೯೪೭ರಲ್ಲಿ ವಿಜಯವಾಡಕ್ಕೆ ಸ್ಥಳಾಂತರಿಸಲಾಯಿತು. ಅಂತರ್‌ಜಾತಿ ವಿವಾಹ, ಅಂತರ್‌ಜಾತಿ ಸಹಪಂಕ್ತಿ ಭೋಜನ ಮುಂತಾದವುಗಳಿಗೆ ಅವಕಾಶ ಕಲ್ಲಿಸುತ್ತಾ; ಜಾತೀಯತೆಯನ್ನು ಖಂಡಿಸುತ್ತಾ, ವಿಧವಾ ವಿವಾಹ ಮತ್ತು ಜನಸಂಖ್ಯೆ ಹೆಚ್ಚಳದ ಬಗ್ಗೆ ಮಾರ್ಗದರ್ಶನವನ್ನು ಈ ನಾಸ್ತಿಕ ಕೇಂದ್ರ ಕೊಡುತ್ತಿದೆ. ಮನಃಶಾಸ್ತ್ರಜ್ಞರ, ಸಮಾಜ ಸೇವಕರ, ವೈದ್ಯರ, ವಿಜ್ಞಾನಿಗಳ, ಜಾದೂಗಾರರ ಹಾಗೂ ವಶೀಕರಣ ವಿದ್ಯೆ ತಿಳಿದಿರುವವರ ತಂಡಗಳ ಸಹಾಯದಿಂದ ಮಾಟ-ಮಂತ್ರ, ಮೂಢನಂಬಿಕೆ ಮುಂತಾದ ಅಲೌಕಿಕ ಘಟನೆಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ಸತ್ಯವನ್ನು ಹೊರಗೆಡಹುವ ಕೆಲಸಗಳನ್ನು ಈ ಕೇಂದ್ರ ಮಾಡುತ್ತಿದೆ.

ಗೋರಾ ಅವರು ಒಂದು ಕಡೆ ‘‘ದುಡಿಮೆಯ ವರ್ಗೀಕರಣ ತತ್ವಗಳನ್ನು ಅರ್ಥ ಮಾಡಿಕೊಳ್ಳುವುದಕ್ಕಾಗಿ ಹಿಂದೂಗಳನ್ನು ಜಾತಿಗಳಾಗಿ ಒಡೆಯಲಾಗಿದೆ ಎಂದು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವುದಕ್ಕಿಂತ ಮಿಗಿಲಾಗಿ ಅವರನ್ನು ಸಾಂಪ್ರದಾಯಿಕ ವಾಗಿ ತರಬೇತಿಗೊಳಿಸಲಾಗಿದೆ ಮತ್ತು ಆಚಾರದಿಂದ ಬಂಧಿಸಲಾಗಿದೆ’’ ಎಂದು ಅಭಿಪ್ರಾಯಪಡುತ್ತಾರೆ. ಅವರು ಮುಂದುವರೆದು ‘‘ಓಬಿರಾಯನ ಕಾಲದ ಜಾತಿ ತಾರತಮ್ಯಗಳಿಂದ ಹಿಂದೂಗಳು ಭಾವನಾತ್ಮಕವಾಗಿ ಆದರ್ಶವಾದಿಗಳು ಆದರೆ ವಾಸ್ತವದಲ್ಲಿ ನೀಚರು’’ ಎಂದು ಹೇಳುತ್ತಾರೆ. ‘‘ಆತ್ಮಸಂತೃಪ್ತಿಯ ನಿರ್ವೀರ್ಯ ಹಿಂದೂಗಳಲ್ಲಿ ಕೋಲಾಹಲ ಮತ್ತು ಅತ್ಯಾಶ್ಚರ್ಯ ಉಂಟು ಮಾಡುವುದು ಒಂದೇ ಒಂದು; ಅದೆಂದರೆ ನಾಸ್ತಿಕವಾದ. ಅದು ಕರ್ಮ ಮತ್ತು ಪುನರ್ಜನ್ಮದಲ್ಲಿನ ಅವರ ನಂಬಿಕೆಯನ್ನು ಕಟ್ಟುಕಥೆ ಹಾಗೂ ವಂಚನೆ ಎಂದು ಹೇಳಿ ತಳ್ಳಿಹಾಕುವುದರ ಮೂಲಕ ಜಾತಿಪದ್ಧತಿಯ ಅಡಿಪಾಯವನ್ನು ಕೆಡವಿಹಾಕುತ್ತದೆ. ನಾಸ್ತಿಕವಾದದಿಂದ ಜಾಗೃತರಾದ ಅಸ್ಪೃಶ್ಯರು ಕಣ್ಣು ತೆರೆದು ತಾವೂ ಬೇರೆಯವರಂತೆ ಮನುಷ್ಯರು ಎನ್ನುವುದನ್ನು ಕಂಡುಕೊಳ್ಳುತ್ತಿದ್ದಾರೆ. ನಾಸ್ತಿಕವಾದದ ಜಾಗೃತಿ ಪರಂಪರಾಗತ ಜಾತಿಕಟ್ಟಳೆಗಳನ್ನು ತುಂಡರಿಸುತ್ತದೆ ಮತ್ತು ಎಲ್ಲಾ ಜಾತಿಗಳನ್ನು ಒಂದು ಮಾನವ ಜಾತಿಯಾಗಿ ಪರಿವರ್ತಿಸುತ್ತದೆ. ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಮಾನವನಿಗೆ ನ್ಯಾಯವನ್ನು ಉಂಟು ಮಾಡುವ ನಾಸ್ತಿಕವಾದವನ್ನು ಒಪ್ಪಿ ಕೊಳ್ಳುವುದರಿಂದ ಏನೂ ಕಳೆದುಕೊಳ್ಳುವುದಿಲ್ಲ’’ ಎಂದು ಅಭಿಪ್ರಾಯಪಡುತ್ತಾರೆ.

ಅಂತರರಾಷ್ಟ್ರೀಯ ಮಾನಯ ಮತ್ತು ನೀತಿ ಸಂಸ್ಥೆ ೧೯೮೬ರಲ್ಲಿ ನಾರ್ವೆ ದೇಶದ ಓಸ್ಲೊವಿನಲ್ಲಿ ಅಂತರರಾಷ್ಟ್ರೀಯ ಮಾನಯ ಪ್ರಶಸ್ತಿಯನ್ನು ಇಂಡಿಯಾದ ನಾಸ್ತಿಕ ಕೇಂದ್ರಕ್ಕೆ ನೀಡಿ ಗೌರವಿಸುವ ಸಂದರ್ಭದಲ್ಲಿ; ಕೇಂದ್ರದ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಶ್ರೀಮತಿ ಮೈತ್ರಿ ಅವರು ಆಡಿದ ಮಾತುಗಳು ಗೋರಾ ಅವರ ನಾಸ್ತಿಕವಾದದ ಸ್ಪಷ್ಟ ಪ್ರತಿಧ್ವನಿಯಂತಿತ್ತು: ‘‘ಧರ್ಮಕ್ಕೆ ಸ್ಪಷ್ಟವಾದ ಪರ್ಯಾಯವೊಂದು ಪ್ರಪಂಚಕ್ಕೆ ಬೇಕಾಗಿದೆ. ಆಸ್ತಿಕವಾದದಂತೆ; ಧರ್ಮಕ್ಕೆ ಪರ್ಯಾಯವಾದ ನಾಸ್ತಿಕವಾದವೂ ಒಂದು ಜೀವನ ವಿಧಾನ. ಭಾ ಧಾರ್ಮಿಕ ಸಮಾಜಕ್ಕಾಗಿ ಧರ್ಮರಹಿತ ಜೀವನ ವಿಧಾನವನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ……. ರಾಜಕೀಯದಿಂದ ಧರ್ಮವನ್ನು ಬೇರ್ಪಡಿಸಿದ್ದರಿಂದ ಷ್ಟರಿಂದಲೇ ನಾವು ತೃಪ್ತಿ ಹೊಂದಬೇಕಿಲ್ಲ…… ಮೂಢನಂಬಿಕೆಗಳನ್ನು ದೂರ ಓಡಿಸಿ, ಅನಕ್ಷರತೆಯನ್ನು ಅಳಿಸಿಹಾಕಿ, ಜನಾಂಗಗಳ ತಾರತಮ್ಯಗಳ ವಿರುದ್ಧ ಹೋರಾಡುವುದರ ಮೂಲಕ ನಾವು ಮನುಷ್ಯರ ನೋವನ್ನು ಕಡಿಮೆ ಮಾಡೋಣ, ಅನ್ಯಾಯ ಎಲ್ಲೇ ಇದ್ದರೂ ಅದು ನ್ಯಾಯಕ್ಕೆ ಎಲ್ಲ ಕಡೆಯಿಂದಲೂ ಬೆದರಿಕೆ ಉಂಟು ಮಾಡುತ್ತದೆ. ಅನ್ಯಾಯ, ಅಸಮಾನತೆ ಮತ್ತು ಬಡತನದ ವಿರುದ್ಧ ನಾವು ನಿಷ್ಕರುಣೆಯ ಸಮರ ಸಾರಬೇಕಿದೆ….. ಮೂಢನಂಬಿಕೆ, ಅನ್ಯಾಯ, ಯುದ್ಧ ಮತ್ತು ಬಡತನಮುಕ್ತ ಪ್ರಪಂಚಕ್ಕಾಗಿ ನಾವೆಲ್ಲಾ ಒಟ್ಟಾಗಿ ದುಡಿಯೋಣ’’ ಎನ್ನುವ ಕರೆ ನೀಡುತ್ತಾರೆ.

ಎ.ಬಿ.ಷಾ (೧೯೨೦-೧೯೮೧) ಎನ್ನುವವರು ೧೯೫೯ರಲ್ಲಿ ‘‘ಭಾರತೀಯ ಜಾತ್ಯಾತೀತ ಸಮಾಜ’’ ಎನ್ನುವುದನ್ನು ಪ್ರಾರಂಭಿಸಿದರು. ಹಿಂದೂ ಸಮಾಜದಲ್ಲಿನ ಗಂಡು-ಹೆಣ್ಣಿನ ತಾರತಮ್ಯವನ್ನು ಅದು ವಿರೋಧಿಸಿತು. ಗಂಡು ಹೆಣ್ಣನ್ನು ಗೌರವದಿಂದ ಕಾಣುವಂತೆ ಸ್ವಲ್ಪ ಕಾಲ ಹಿಂದೂ ಧರ್ಮಕ್ಕೆ ಅದು ಮಾರ್ಗದರ್ಶನ ಮಾಡಿತು.

ಮದ್ರಾಸ್, ಕಲ್ಕತ್ತ ಮತ್ತು ಶ್ರೀಲಂಕಾಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅನೇಕ ಗುಂಪುಗಳಂತೆ ೧೯೩೦ರಲ್ಲಿ ಬೊಂಬಾಯಿಯಲ್ಲಿ ವಿಚಾರವಾದಿ ಸಂಘಟನೆಯೊಂದು ಪ್ರಾರಂಭವಾಯಿತು. ‘‘ದಿ ರ‍್ಯಾಡಿಕಲ್ ಹ್ಯುಮಾನಿಷ್ಟ್’’ ಮತ್ತು ‘‘ಸಮೀಕ್ಷಾ’’ ಹೆಸರಿನ ನಿಯತಕಾಲಿಕೆಗಳ ಮೂಲಕ ಹಿಂದೂ ಧರ್ಮದಲ್ಲಿನ ಮೂಢನಂಬಿಕೆಗಳು, ಸ್ತ್ರೀನ ಹಕ್ಕುಬಾಧ್ಯತೆಗಳ ಹರಣ ಹಾಗೂ ಸಾಮಾಜಿಕ ಸಮಾನತೆಯ ವಿರುದ್ಧ ಜಾತೀಯ ಪಡೆಗಳ ಕುತಂತ್ರ ಮುಂತಾದ ವಿಷಯಗಳನ್ನು ಕುರಿತು ಬೌದ್ದಿಕ ಸಮರವನ್ನೇ ಸಾರಲಾಯಿತು. ಮದ್ರಾಸಿನ ಭಾರತೀಯ ವಿಚಾರವಾದೀ ಸಂಘಟನೆ ‘‘ಮುಕ್ತವಿಚಾರ’’ ಎನ್ನುವ ನಿಯತಕಾಲಿಕ ಒಂದನ್ನು ೧೯೭೦ರಲ್ಲಿ ಬಿಡುಗಡೆ ಮಾಡಿತು, ಅದು ಹೆಚ್ಚು ಪ್ರಸಾರದ ವಿಚಾರವಾದಿ ಮಾಸಿಕವಾಗಿತ್ತು. ವಿಚಾರವಾದಿ ಗುಂಪುಗಳು ಜಿಲ್ಲಾ ಮಟ್ಟದಲ್ಲಿ, ಪಟ್ಟಣಗಳಲ್ಲಿ ಭಾರತ ದಾದ್ಯಂತ ರೂಪುಗೊಂಡವು. ಈ ಕ್ರಿಯೆ ಶ್ರೀಲಂಕಾಕ್ಕೂ ವ್ಯಾಪಿಸಿತು.

ನಾಸ್ತಿಕ ಮತ್ತು ಮಾನಯ ಗುಂಪುಗಳು ಜನಜನಿತವಾಗಿದ್ದ ಮೂಢನಂಬಿಕೆಗಳನ್ನು ಪ್ರಶ್ನಿಸಲು ವಿಜ್ಞಾನಿಗಳ ಮತ್ತು ಶಿಕ್ಷಕರ ಸಹಕಾರ ಪಡೆಯಲಾಯಿತು. ಶ್ರೀಲಂಕಾದ ವಿಚಾರವಾದಿ, ಸಂಘಟನೆಯ ಅಧ್ಯಕ್ಷರಾಗಿ ಡಾ.ಅಬ್ರಹಾಂ ಟಿ.ಕೋವೂರ್ (೧೮೯೬-೧೯೭೮) ಅವರು ೧೯೬೩ರಲ್ಲಿ ಆರಿಸಲ್ಪಟ್ಟರು. ಅವರು ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರು ಅಧ್ಯಕ್ಷರಾದ ತಕ್ಷಣ; ಅಸ್ವಾಭಾವಿಕ ಅಥವಾ ಅಲೌಕಿಕ ಶಕ್ತಿಗಳನ್ನು ಪ್ರದರ್ಶಿಸುವವರಿಗಾಗಿ ಒಂದು ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಯಿತು. ವಿಚಿತ್ರವೆಂದರೆ, ಪ್ರಪಂಚದಲ್ಲಿ ಯಾರೊಬ್ಬರೂ ಇದುವರೆವಿಗೂ ಆ ಬಹುಮಾನ ಪಡೆಯಲು ಸಾಧ್ಯವಾಗಿಲ್ಲ. ಜನತೆಯಲ್ಲಿ ಹೊರಗೆ ಕಂಡುಬರದ ಗುಪ್ತ ಭಯವನ್ನು ನಿವಾರಿಸಲು ಅವರು ಜ್ಯೋತಿಷಿಗಳ, ಪವಾಡ ಪುರುಷರ, ಸಂಖ್ಯಾ ಶಾಸ್ತ್ರಜ್ಞರ, ಯಕ್ಷಿಣೆಗಾರರ ಹಾಗೂ ಇಂತಹ ಅಸ್ವಾಭಾವಿಕ ವಿದ್ಯೆಗಳನ್ನು ಪ್ರದರ್ಶಿಸುವವರ ವಿರೋಧವನ್ನು ಎದುರಿಸಬೇಕಾಯಿತು. ದೆವ್ವ, ಭೂತ, ಪ್ರೇತ, ಪಿಶಾಚಿಗಳಿವೆ ಎಂದು ಹೇಳುತ್ತಿದ್ದ ಸ್ಥಳಗಳಲ್ಲಿ; ಹಗಲು ಮತ್ತು ರಾತ್ರಿಗಳಲ್ಲಿ ಅವರು ಒಂಟಿಯಾಗಿ ಇದ್ದು ಬರುತ್ತಿದ್ದರು. ಡಾ.ಕೋವೂರ್ ಅವರು ಭಾರತದಲ್ಲಿ ನಾಲ್ಕು ಸಲ ಪ್ರವಾಸ ಮಾಡಿ ಪವಾಡ ಗುಟ್ಟು ಬಯಲು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುತ್ತಾರೆ. ಆ ಸಂದರ್ಭಗಳಲ್ಲಿ ಪವಾಡ ಪುರುಷರಿಗೆ, ದೈವಾಂಶ ಸಂಭೂತರೆಂದು ಕರೆದುಕೊಳ್ಳುವವರಿಗೆ ನಿದ್ದೆ ಕೆಟ್ಟಿದ್ದಂತೂ ಸತ್ಯ.

ಸುಮಾರು ಮುನ್ನುರು ಶಾಖೆಗಳು ಮತ್ತು ಎಂಭತ್ತಾರು ಸಾವಿರ ಸದಸ್ಯರನ್ನು ಹೊಂದಿರುವ ಭಾರತೀಯ ವಿಜ್ಞಾನ ಮತ್ತು ವಿಚಾರವಾದಿಗಳ ಸಂಘ ೧೯೪೯ ರಿಂದ ಧರ್ಮದ ಹೆಸರಿನಲ್ಲಿ ಪವಾಡಗಳು ಮತ್ತು ತಂತ್ರಗಳ ಮೂಲಕ ಸುಲಭವಾಗಿ ಜನತೆ ಯನ್ನು ವಂಚಿಸುತ್ತಿದ್ದ ‘ದೇವಮಾನವ’ರ ಮೋಸವನ್ನು ಬಯಲು ಮಾಡುತ್ತಾ ಬಂದಿದೆ. ಒಂದು ದಿನ ಇದ್ದಕ್ಕಿದ್ದಂತೆ; ಭಾರತದಾದ್ಯಂತ ಬಹಳಷ್ಟು ಹಿಂದೂ ದೇವಾಲಯಗಳಲ್ಲಿನ ದೇವರ ವಿಗ್ರಹಗಳು ಹಾಲು ಕುಡಿಯಲು ಪ್ರಾರಂಭಿಸಿದವು. ಅಂದು ೧೯೯೫ರ ಸೆಪ್ಟೆಂಬರ್ ೨೧ನೇ ತಾರೀಖು. ವಿಗ್ರಹಗಳು ಹಾಲು ಕುಡಿದ ಸುದ್ದಿಯನ್ನು ಪುರೋಹಿತರು ಆಕಾಶವಾಣಿ ಯಂತೆ ಹರಡಿದರು. ದಿಲ್ಲಿಯಿಂದ ಹಳ್ಳಿಯವರೆಗೆ ದೇಶದ ಜನರು ನಿಬ್ಬೆರಗಾಗಿ ಆ ಸುದ್ದಿಯನ್ನು ಕುರಿತು ಚರ್ಚಿಸಿದ್ದರು. ಶಿಲೆಗಳ ಮೇಲು ಪದರದ ಹರಡಿಕೊಳ್ಳುವ ಗುಣ ಮತ್ತು ಲೋಮನಾಳ ಕ್ರಿಯೆ (Surface tension and copillary action) ಈ ಘಟನೆಗೆ ಕಾರಣ ಎನ್ನುವುದನ್ನು ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಬಹಿರಂಗಗೊಳಿಸುವುದಕ್ಕೂ ಮುಂಚೆ ದೆಹಲಿಯ ದೂಲ್‌ಚಂದ್ ಎನ್ನುವ ಒಬ್ಬ ಚಮ್ಮಾರ ಘಟನೆಯ ಸತ್ಯವನ್ನು ವಿವರಿಸಿದ್ದ. ಧರ್ಮಗಳಲ್ಲಿ ಹೆಚ್ಚುತ್ತಿರುವ ವಿಚಾರವಾದಿಗಳು ಬಹುಪಾಲು ನಾಸ್ತಿಕರು ಮತ್ತು ಎಲ್ಲ ಧರ್ಮಗಳಲ್ಲಿನ ನೀಚ ರಹಸ್ಯಗಳ ಮೇಲೆ ಸಮರ ಸಾರುವವರು ಆಗಿದ್ದಾರೆ.

ಭಾರತದ ಮಾನವತಾವಾದಿ ಸಂಘಟನೆ ‘‘ಹ್ಯುಮಾನಿಸ್ಟ್ ಔಟ್‌ಲುಕ್’’ ಎನ್ನುವ ತ್ರೈಮಾಸಿಕ ಪತ್ರಿಕೆಯೊಂದನ್ನು ೧೯೭೪ರಲ್ಲಿ ಪ್ರಕಟಿಸಲು ಪ್ರಾರಂಭಿಸಿತು. ಕೋಮು ಸಾಮರಸ್ಯ, ಸಾಮಾಜಿಕ ಪರಿವರ್ತನೆ, ನೈತಿಕ ಮೌಲ್ಯಗಳು ಮತ್ತು ವೈಜ್ಞಾನಿಕ ಮನೋ ಭಾವನೆ ಮುಂತಾದವುಗಳಿಗೆ ಉತ್ತೇಜನ ಕೊಡುವುದೇ ಆ ಪತ್ರಿಕೆಯ ಮುಖ್ಯ ಉದ್ದೇಶವಾಗಿತ್ತು. ಇಂತಹ ಸಂಘಟನೆಯ ಕೇಂದ್ರ ಲಕ್ನೋ ನಗರದಲ್ಲೂ, ಅಂತರ ರಾಷ್ಟ್ರೀಯ ಮಾನವತಾ ಮತ್ತು ನೈತಿಕ ಸಂಘಟನೆಯ ಕೇಂದ್ರ ಹಾಲೆಂಡ್ ದೇಶದ ಯುಟ್ರಿಚ್ ನಗರದಲ್ಲೂ ಇದೆ. ಈ ಸಂಘಟನೆಯ ಸದಸ್ಯರು ಪ್ರಪಂಚದಾದ್ಯಂತ ಹರಡಿದ್ದಾರೆ.

ಮಾನವತಾವಾದಿಗಳು ಪ್ರತಿಯೊಬ್ಬ ಮಾನವನ ವ್ಯಕ್ತಿಗತ ಬದುಕಿನ ಮೌಲ್ಯದ ಬಗ್ಗೆ ಒತ್ತು ನೀಡಿದ್ದೇ ಅಲ್ಲದೆ; ಭಾರತದಲ್ಲಿ ಹೆಣ್ಣು ಹಸುಳೆಗಳನ್ನು ಭ್ರೂಣಾವಸ್ಥೆಯಲ್ಲೇ ನಿರ್ದಯವಾಗಿ ಕೊಲ್ಲುವುದನ್ನು ವಿರೋಧಿಸಿ ನಿಂತವರು ಕೂಡಾ ಆಗಿದ್ದಾರೆ. ಬೆಳೆದು ದೊಡ್ಡವರಾದ ಮೇಲೆ ಮದುವೆಗಾಗಿ, ವರದಕ್ಷಿಣೆಗಾಗಿ; ಹೀಗೆ ಲಕ್ಷಾಂತರ ರೂಪಾಯಿಗಳ ಆರ್ಥಿಕ ಹೊರೆ ತರುವರೆನ್ನುವ ಭಯದಿಂದ ಹಾಗೂ ಕೊಟ್ಟ ಮನೆಯ ಉದ್ಧಾರಕ್ಕಾಗಿ ದುಡಿಯುತ್ತಾರೆ ಮತ್ತು ಮುದಿ ವಯಸ್ಸಿನಲ್ಲಿ ತಮಗೆ ರಕ್ಷಣೆ ನೀಡಿ ಸಾಕಿ-ಸಲಹುವವರು ಗಂಡುಮಕ್ಕಳು ಮಾತ್ರ ಎನ್ನುವ ಮನೋಭಾವ ಹೆಣ್ಣಿನ ತಂದೆ-ತಾಯಿಗಳಲ್ಲಿ ಇರುವುದರಿಂದ; ಇವೆಲ್ಲಕ್ಕೂ ಹೆಚ್ಚಾಗಿ ಆಸ್ತಿಯ ಹಕ್ಕು ಗಂಡುಮಕ್ಕಳಿಗೆ ಮಾತ್ರ ಇದ್ದಿದ್ದರಿಂದ, ಸ್ವಾಭಾವಿಕ ವಾಗಿ ಹೆಣ್ಣು ಮಕ್ಕಳ ಬಗ್ಗೆ ಉಪೇಕ್ಷೆ ಉಳಿದು ಬರಲು ಕಾರಣವಾಗಿದೆ. ಮನುಧರ್ಮಶಾಸ್ತ್ರ ಗೊಬ್ಬರ ಹಾಕಿ ಇದನ್ನು ಪೋಷಿಸುತ್ತಾ ಬಂದಿದೆ. ಈ ಎಲ್ಲಾ ಕಾರಣಗಳಿಂದ; ಆರ್ಥಿಕವಾಗಿ ಮಧ್ಯಮ ದರ್ಜೆಯ ತಂದೆ-ತಾಯಿಗಳು ಹೆಣ್ಣು ಮಗುವನ್ನು ಭ್ರೂಣಾವಸ್ಥೆಯಲ್ಲೇ ಗರ್ಭಪಾತ ಮಾಡಿರುವ ಕ್ರಿಯೆ ಈ ದೇಶದಲ್ಲಿ, ಅದೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದಕ್ಕಾಗಿ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ‘‘ಅಲ್ಟ್ರಾಸೌಂಡ್ ಕ್ಲಿನಿಕ್’’ಗಳು ಕೇರಿಗೆ ಹತ್ತರಂತೆ ತಲೆ ಎತ್ತಿವೆ. ಇನ್ನು ವರದಕ್ಷಿಣೆ ತರಲಿಲ್ಲವೆನ್ನುವ ಕಾರಣಕ್ಕಾಗಿ ಪ್ರತಿವರ್ಷ ಮದುವೆಯಾದ ಸಾವಿರಾರು ಹೆಣ್ಣು ಮಕ್ಕಳನ್ನು ಸೀಮೆ ಎಣ್ಣೆ ಅಥವಾ ಪೆಟ್ರೋಲ್ ಹಾಕಿ ಸುಡಲಾಗುತ್ತಿದೆ. ಅಥವಾ ಹಿಂಸೆಯನ್ನು ತಾಳಲಾರದೆ ತಾವೇ ಸುಟ್ಟುಕೊಂಡು ಸಾಯಲಾಗುತ್ತಿದೆ. ಇದಿಷ್ಟು ಪಟ್ಟಣ ಪ್ರದೇಶಗಳ ಕಥೆಯಾದರೆ; ಅನಕ್ಷರತೆ, ಅಜ್ಞಾನ ಮತ್ತು ಬಡತನಗಳ ಆವಾಸಸ್ಥಾನಗಳಾದ ಹಳ್ಳಿಗಳಲ್ಲಿ, ದೇವರು ಧರ್ಮದ ಹೆಸರಿನಲ್ಲಿ ಪ್ರಾಯದ ಹೆಣ್ಣುಮಕ್ಕಳನ್ನು, ಅದೂ ಕೆಳಜಾತಿಯ ಹೆಣ್ಣು ಮಕ್ಕಳನ್ನು ದೇವರಿಗೆ ಹರಕೆ ಬಿಟ್ಟು ದೇವದಾಸಿಯರನ್ನಾಗಿಸಿ ಆನಂತರ ಸೂಳೆಗಾರಿಕೆಗೆ ದೂಡುವುದು ನಿರಂತರವಾಗಿ ನಡೆದೇ ಇತ್ತು. ಇಂತಹ ಸಾಮಾಜಿಕ ಅನಿಷ್ಠಗಳಿಂದ ಏಯ್ಡ್ಸ್‌ನಂಥ ರೋಗಗಳು ಸಮಾಜದಲ್ಲಿ ಉಂಟಾಗಲು ಕಾರಣವಾಯಿತು. ಹೆಣ್ಣು ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ; ಭಾರತದಲ್ಲಿ ಗಂಡು ಹೆಣ್ಣಿನ ಸಂಖ್ಯಾ ಪ್ರಮಾಣ ವ್ಯತ್ಯಾಸ ವಾಗುತ್ತಿದ್ದು, ಹೆಣ್ಣಿನ ಮೇಲಿನ ಲೈಂಗಿಕ ಅತ್ಯಾಚಾರ ಹೆಚ್ಚುವ ಸಂಭವೇ ಹೆಚ್ಚು. ಆ ನಿಟ್ಟಿನಲ್ಲಿ ಸಾಗಿಯೂ ಇದೆ. ಸರ್ಕಾರವೇನಾದರೂ ಇಂತಹ ಎಲ್ಲ ಅನಿಷ್ಠಗಳಿಗೆ ತಡೆಯೊಡ್ಡುವ ಕಾಯಿದೆಗಳನ್ನು ಅಥವಾ ವಾತಾವರಣವನ್ನು ರೂಪಿಸಿದ್ದರೆ ಅಥವಾ ರೂಪಿಸುತ್ತಿದ್ದರೆ; ಅದಕ್ಕೆ ಕಾರಣ, ಮಾನವತಾವಾದಿಗಳ ಅಥವಾ ಮಾನವತಾವಾದಿ ಸಂಘಟನೆಗಳ ಪ್ರಯತ್ನ ಮತ್ತು ಒತ್ತಡ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಸ್ವಾತಂತ್ರ್ಯಾನಂತರದ ಭಾರತದಲ್ಲಿ ದೊರೆತ ಶಿಕ್ಷಣದ ಅವಕಾಶ, ಆಧುನಿಕ ಶಿಕ್ಷಣ ಹಾಗೂ ವಿಜ್ಞಾನ ಶಿಕ್ಷಣದಿಂದ ಹೆಣ್ಣು ಎಲ್ಲಾ ರಂಗಗಳಲ್ಲೂ ಗಂಡಿಗೆ ಪ್ರತಿಸ್ಫರ್ಧಿಯಾಗಿ ಸಮಾನವಾಗಿ ಸಾಗುತ್ತಿದ್ದಾಳೆ ಎಂದು ಮೇಲು-ಸ್ಥರದಲ್ಲಿ ಅನ್ನಿಸಿದರೂ; ಆಂತರ್ಯದಲ್ಲಿ ಆಕೆಯ ಸ್ವಾಭಿಮಾನದ ವ್ಯಕ್ತಿತ್ವ ಪೂರ್ಣವಾಗಿ ಅರಳಿಲ್ಲ ಅನ್ನಿಸುತ್ತಿದೆ. ಸರಳೀಕರಸಿ ಹೇಳಬೇಕೆಂದರೆ; ಆಧುನೀಕತೆಯ ಹೆಸರಿನಲ್ಲಿ ಆಕೆ ವಾಣಿಜ್ಯ ಸರಕಾಗುತ್ತಿದ್ದಾಳೆ. ಬಂಗಾರದ ಆಸೆ, ಮೇಕಪ್ ಮಾಡಿಕೊಂಡು ಪ್ರದರ್ಶನಕ್ಕಿಳಿಯುವ ಗುಣಗಳು ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಜೀವನ ಮೌಲ್ಯಗಳನ್ನು ಗ್ರಾಹಿಸುವ ಶಕ್ತಿ, ಸಮಾನತೆಯನ್ನು ಅನ್ವಯಿಸುವ ಯಕ್ತಿ; ಆಧುನಿಕ ಮಹಿಳೆ ಪೂರ್ಣವಾಗಿ ಪಡೆದಿಲ್ಲ ಅನ್ನಿಸುತ್ತಿದೆ. ಒಟ್ಟಿನಲ್ಲಿ ಆಕೆಯ ಬಂಧನಕ್ಕೆ ಮತ್ತೊಂದು ಆಯಾಮ ಸಿಕ್ಕಿ ಹಿಂದಿನ ಸ್ಥಿತಿ ಮತ್ತೊಂದು ರೂಪದಲ್ಲಿ ಮುಂದುವರೆಯುತ್ತಿದೆ ಎನ್ನಿಸುತ್ತಿದೆ. ಆಕೆ ಬರೀ ಆಧುನಿಕಳಾದರೆ ಸಾಲದು. ಮಾನಯ ಸಾಕಾರ ಶಕ್ತಿಯಾದಾಗ ಗಂಡು ಹೆಣ್ಣಿನ ಮಧ್ಯದ ಅಂತರ ಕಡಿಮೆಯಾಗಲು ಕಾರಣವಾಗಿ ಇಬ್ಬರೂ ಪೂರಕ ಶಕ್ತಿಗಳಾಗಿರುತ್ತಾರೆ. ಒಟ್ಟಿನಲ್ಲಿ ಹೆಣ್ಣು ಬಿಡುಗಡೆಯ ಹಾದಿಯಲ್ಲಿದ್ದಾಳೆ. ಎಚ್ಚರ ಅವಶ್ಯಕ. ತಪ್ಪಿದರೆ; ಕುಟುಂಬ ವ್ಯವಸ್ಥೆಯಲ್ಲಿ ಮುದ ನೀಡುವ ತಣ್ಣನೆಯ ಗಾಳಿಯ ಬದಲಿಗೆ ಅಲ್ಲೋಲ ಕಲ್ಲೋಲ ಮಾಡುವ ಬಿರುಗಾಳಿಯಾಗುತ್ತಾಳೆ. ಆಗ ಇಡೀ ವ್ಯವಸ್ಥೆಯ ಅಡಿಯಲ್ಲಿ ತಾನೇ ಸಿಕ್ಕು ನಲುಗಬೇಕಾಗುತ್ತದೆ.

ಈ ದೇಶದಲ್ಲಿ ಶತಮಾನಗಳಿಂದ ಆಚರಣೆಯಲ್ಲಿದ್ದ ಶ್ರೇಣೀಕೃತ ವರ್ಣವ್ಯವಸ್ಥೆಯಲ್ಲಿ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ವಂಚನೆಗೆ ಒಳಗಾಗಿ; ಎಲ್ಲ ರೀತಿಯ ಅವಮಾನಗಳನ್ನು ಅನುಭವಿಸಿಕೊಂಡು, ಪ್ರಾಣಿಗಳ ಜೀವನಕ್ಕಿಂತಲೂ ಕಡೆಯದಾಗಿ ಜೀವಿಸಿದ್ದ ಬಹುಸಂಖ್ಯಾತ ಶೂದ್ರರು ಮತ್ತು ದಲಿತರಿಗೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಒಂದು ವರವೆಂದೇ ಹೇಳಬೇಕು. ರಾಜಶಕ್ತಿಯನ್ನು ತಮ್ಮ ಅಂಕಿತದಲ್ಲಿಟ್ಟುಕೊಂಡು ದೇಶದ ಬಹುಸಂಖ್ಯಾತ ಜನತೆಯನ್ನು ಕತ್ತಲೆಯಲ್ಲಿಟ್ಟು; ಸವಲತ್ತುಗಳನ್ನು ಸಂಮೃದ್ಧವಾಗಿ ಮೇಯುತ್ತಿದ್ದ ಪುರೋಹಿತಶಾಹಿಯ ಕೈಯಿಂದ ಮೊದಲ ಬಾರಿಗೆ ರಾಜಕೀಯ ಶಕ್ತಿ ಕೈಬಿಟ್ಟಿತ್ತು. ಶಿಕ್ಷಣವನ್ನು ಪಡೆಯುವ ಅವಕಾಶ ದೊರೆತದ್ದರಿಂದ ಈ ಜನಾಂಗದ ಬಾಯಿಗಳು ಮಾತನಾಡಲು ಪ್ರಾರಂಭಿಸಿದವು. ರಾಜಕೀಯ ಅಧಿಕಾರಕ್ಕಾಗಿ ಪ್ರಯತ್ನಗಳು ಉಂಟಾಗಿದ್ದರಿಂದ, ಆರ್ಥಿಕ ಮಾರ್ಗಗಳು ತೆರೆದುಕೊಳ್ಳುತ್ತಿರುವುದರಿಂದ; ಸಾಮಾಜಿಕ ಅಸಮಾನತೆಗೆ ಕಾರಣವಾಗಿದ್ದ ಅಸ್ಪೃಶ್ಯತೆಯ ಬೇರುಗಳು, ನಿಧಾನವಾಗಿ, ಸಡಿಲಾಗುತ್ತಿವೆ ಅನ್ನಿಸುತ್ತಿದೆ. ಆದರೆ; ಶೋಷಿತರು ಆ ಬೇರುಗಳನ್ನು ಪೂರ್ಣವಾಗಿ ಕೀಳುವಷ್ಟು ಮಾನಸಿಕವಾಗಿ ಶಕ್ತಿವಂತರಾಗುತ್ತಿದ್ದಾರೆಯೆ? ಅಥವಾ ಅವರು ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದಾರೆಯೇ? ಎನ್ನುವ ಅನೇಕ ಅನುಮಾನದ ಪ್ರಶ್ನೆಗಳು ಪ್ರಸ್ತುತ ಎಲ್ಲರನ್ನೂ ಕಾಡುತ್ತಿವೆ.

ಬುದ್ಧ ಬಸವ ಮುಂತಾದವರ ಪ್ರಯತ್ನಗಳನ್ನೆಲ್ಲ ಟುಸ್ ಎನ್ನಿಸಿದ್ದ ಪುರೋಹಿತಶಾಹಿಗೆ ಇವರನ್ನು ದಾರಿ ತಪ್ಪಿಸುವುದು ಅಷ್ಟೇನೂ ಕಷ್ಟವಾಗಲಾರದು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸ್ವಲ್ಪ ದೂರ ಸಾಗಿಯೂ ಇದ್ದಾರೆ. ಜೊತೆಯಲ್ಲೇ ವಿಚಾರವಾದಿಗಳೂ ಮಾನವತಾವಾದಿಗಳೂ ಅಲ್ಲಲ್ಲಿ ಸಿಡಿದು ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಭವಿಷ್ಯದ ದೃಷ್ಟಿಯಿಂದ, ಒಳ್ಳೆಯದೇ ಎಂದು ಪರಿಗಣಿಸಬೇಕಾಗಿದೆ. ಸಹಸ್ರ ಮಾನಗಳಿಂದ ಉಳಿದು ಬೆಳೆದು ಬಂದಿರುವ ಅಸ್ಪೃಶ್ಯತೆ ಎನ್ನುವ ಸತ್ಯವನ್ನು ಹುಸಿ ಸ್ವಾಭಿಮಾನದಿಂದ ಬದಲಾಯಿಸಲು ಸಾಧ್ಯವಿಲ್ಲ. ಮತೀಯ ಸಂಕುಚಿತ ನೆಲೆಯಿಂದ ಮತ್ತೊಂದರ ಶ್ರೇಷ್ಠತೆ ಯನ್ನು ಪ್ರಶ್ನೆ ಮಾಡುವ ವಿಧಾನವೇ ವೈಜ್ಞಾನಿಕವಾಗಿ ಸರಿಯಾದುದಲ್ಲ. ಮನುಷ್ಯ-ಮನುಷ್ಯರ ಮಧ್ಯೆ ಭೇದ ಉಂಟು ಮಾಡವ ನಂಬಿಕೆಗಳು, ಆಚರಣೆಗಳು ಮುಂತಾದುವು ಗಳನ್ನು ಅಪಮೌಲೀಕರಣಗೊಳಿಸಿ ನಿರಾಕರಿಸುವ ಮೂಲಕ ಕೆಟ್ಟದ್ದನ್ನು ನಾಶಮಾಡುವ ಹಾಗೂ ಬದಲಿಗೆ ಒಳ್ಳೆಯದನ್ನು ಕಟ್ಟುವ ಎರಡೂ ಜವಾಬ್ದಾರಿಗಳ ಪ್ರಜ್ಞೆ ಕಣ್ಣು ಬಿಡುತ್ತಿರುವ ಶೋಷಿತರಿಗೆ ಇರಬೇಕಾಗಿದೆ. ಇಲ್ಲದಿದ್ದರೆ ಪ್ರಯತ್ನ ಮಗದೊಮ್ಮೆ ಟುಸ್ ಎಂದು; ಮತ್ತೊಂದು ರೂಪದಲ್ಲಿ ಶೋಷಣೆಯ ಬಲೆಗೆ ಬೀಳುವುದು ಖಂಡಿತ ಎನ್ನುವುದು ವಿಚಾರವಂತರ ಎಚ್ಚರಿಕೆ.