ಪ್ರಯತ್ನ

ಮಾನವ ಇತಿಹಾಸದ ಉದ್ದಕ್ಕೂ ‘ಧರ್ಮ ಮತ್ತು ವೈಚಾರಿಕತೆ’ಗಳು ಸಮನ್ವಯವಾಗುವುದರ ಬದಲು ಸಮಾನಾಂತರ ಸಂಘರ್ಷದ ವಿಷಯಗಳಾಗಿಯೇ ಬೆಳೆದುಬಂದಿರುವುದನ್ನು ನಾವು ಕಾಣಬಹುದು. ಹಿಂದೂ ಧರ್ಮವೂ ಇದರಿಂದ ಹೊರತಾಗಿಲ್ಲ. ವೇದಗಳು, ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು, ಬ್ರಹ್ಮಸೂತ್ರಗಳು, ಭಗವದ್ಗೀತೆ ಮುಂತಾದ ಧಾರ್ಮಿಕ ಕೃತಿಗಳು ಹಾಗೂ ಪರಾಶರ, ಗೌತಮ, ಯಾಜ್ಞವಲ್ಕ್ಯ, ಮನು, ಕಾಶ್ಯಪ, ಆಪಸ್ತಂಭ ಮುಂತಾದವರ ಗ್ರಂಥಗಳೂ ಹಿಂದೂ ಧರ್ಮದ ಧಾರ್ಮಿಕ ಶಾಸ್ತ್ರಗ್ರಂಥಗಳಾಗಿವೆ. ಇವುಗಳ ಜೊತೆಯಲ್ಲೇ ವೈಚಾರಿಕತೆ ಮತ್ತು ವೈಚಾರಿಕ ಸಾಹಿತ್ಯ ಕೃತಿಗಳೂ ಹುಟ್ಟಿ ಬೆಳೆದುಬಂದಿರುವುದು ಒಂದು ಮಹತ್ವದ ವಿಚಾರ. ಋಗ್ವೇದ ಕಾಲದಿಂದಲೇ ಅವುಗಳಲ್ಲಿರುವ ಮೂಢ ಸಂಪ್ರದಾಯಗಳನ್ನು ವಿರೋಧಿಸುತ್ತಾ ಬಂದವರು ಚಾರ್ವಾಕರು, ಲೋಕಾಯತರು ಮುಂತಾದ ಭೌತವಾದಿಗಳು. ಇವರು ವೇದ ಮುಂತಾದವನ್ನು ಕುರುಡು ಕುರುಡಾಗಿ ವಿರೋಧಿಸದೆ; ವಿಶ್ಲೇಷಣೆ, ವಿವೇಚನೆ, ಸಾಕ್ಷಿ ಮುಂತಾದವನ್ನು ಒಳಗೊಂಡ ತಾತ್ವಿಕ ಚಿಂತನೆಗಳ ಆಧಾರದಿಂದ ವಿರೋಧಿಸಿರುವುದು ಮುಖ್ಯ ವಿಚಾರ. ಇವರ ಕೃತಿಗಳು ಇಂದು ಸುಲಭವಾಗಿ ದೊರಕು ತ್ತಿಲ್ಲ. ವೈದಿಕ ಪಂಥದವರು ಅವನ್ನು ನಾಶಪಡಿಸಿರಬೇಕು ಅಥವಾ ವಿಕೃತಗೊಳಿಸಿರಬೇಕು.

ಹಿಂದೂ ಧರ್ಮದ ಧಾರ್ಮಿಕ ಗ್ರಂಥಗಳನ್ನು ಅವಲೋಕನ ಮಾಡುವ ವೈಶೇಷಿಕ, ನ್ಯಾಯ, ವೇದಾಂತ, ಸಾಂಖ್ಯ, ಯೋಗ ಮತ್ತು ಮೀಮಾಂಸೆಗಳನ್ನು ಷಡ್‌ದರ್ಶನಗಳೆಂದು, ಇವನ್ನು ರಚಿಸಿದವರನ್ನು ದಾರ್ಶನಿಕರು ಎಂದು ಕರೆಯಲಾಗುತ್ತಿದೆ. ಧಾರ್ಮಿಕ ವಿಚಾರಗಳ ವಿಮರ್ಶೆಯೇ ಇವರ ಗುರಿ. ಇವರು ಪರಲೋಕವನ್ನು ನಂಬದಿದ್ದರೂ ಆತ್ಮದ ಅಮರತ್ವವನ್ನು ನಂಬುತ್ತಾರೆ. ಆದುದರಿಂದ ಇವರನ್ನು ಆಸ್ತಿಕ ದಾರ್ಶನಿಕರು ಎಂದೂ; ಷಡ್‌ದರ್ಶನಗಳನ್ನು ಆಸ್ತಿಕ ಷಡ್‌ದರ್ಶನಗಳೆಂದೂ ಪರಿಗಣಿಸಲಾಗಿದೆ. ವೇದ, ಉಪನಿಷತ್, ಬ್ರಹ್ಮಸೂತ್ರ, ಅರಣ್ಯಕ ಮುಂತಾದವನ್ನು ವಿಮರ್ಶಿಸಿದ ಅನೇಕ ಮಂದಿಯಲ್ಲಿ ದಾರ್ಶನಿಕರು ಅತಿ ಪ್ರಾಚೀನರು. ಕ್ರಿ.ಪೂ.ಎಂಟನೇ ಶತಮಾನದಿಂದ ಕ್ರಿ.ಪೂ. ಒಂದನೇ ಶತಮಾನದವರೆಗೆ ಇಂಡಿಯಾದಲ್ಲಿ ಆಗಿ ಹೋಗಿರುವ ಅತಿ ಪ್ರಾಚೀನರು. ಕ್ರಿ.ಪೂ.ಎಂಟನೇ ಶತಮಾನದಿಂದ ಕ್ರಿ.ಪೂ.ಒಂದನೇ ಶತಮಾನದವರೆಗೆ ಇಂಡಿಯಾದಲ್ಲಿ ಆಗಿಹೋಗಿರವ ಎಷ್ಟೋ ಭೌತವಾದಿ ದಾರ್ಶನಿಕರಲ್ಲಿ ಅಸಿ (ಜಿ)ತ ಕೇಶಕಂಬಳಿ, ಮಕ್ಕಲಿ ಗೋಶಾಲ ಮುಂತಾದವರು ಪ್ರಸಿದ್ಧರು.

ಕೋಶಲ ದೇಶದ ರಾಜ ಪ್ರಶೇನಚಿತ್ತ ಎನ್ನುವವನು ಒಮ್ಮೆ ಬುದ್ಧನನ್ನು ಕುರಿತು: ‘‘ಪ್ರಜೆಗಳಿಂದ ಸನ್ಮಾನಿತರೂ ದಾರ್ಶನಿಕರೂ ಆದ ಪೂರ್ಣಕಶ್ಯಪ, ಮಕ್ಕಲಿ ಗೋಶಾಲ, ನಿಗಂಠನಾಥ ಪುತ್ತ, ಪ್ರಕೃತ ಕಾತ್ಯಾಯನ, ಅಸಿ (ಜಿ)ತ ಕೇಶಕಂಬಳಿಯಂಥವರನ್ನು; ನೀವು ಅನನ್ಯವಾದ ಪರಮ ಜ್ಞಾನವನ್ನು ಹೊಂದಿರುವಿರಾ? ಎಂದು ಪ್ರಶ್ನಿಸಿದರೆ; ಇಲ್ಲಾ ಎಂದು ಉತ್ತರಿಸುತ್ತಾರೆ. ಆದರೆ ಚಿಕ್ಕ ವಯಸ್ಸಿನ ನೀನು ಸಂಪೂರ್ಣ, ಜ್ಞಾನವನ್ನು ಹೊಂದಲು ಹೇಗೆ ಸಾಧ್ಯವಾಯಿತು’’? ಎಂದು ಪ್ರಶ್ನಿಸುತ್ತಾನೆ. ಅಂದರೆ; ಈ ಎಲ್ಲಾ ದಾರ್ಶನಿಕರೂ ಬುದ್ಧನಿಗಿಂತ ಹಿರಿಯರು ಮತ್ತು ಆ ಕಾಲದಲ್ಲೇ ಪ್ರಖ್ಯಾತರೂ ಆಗಿದ್ದರು ಎಂದು ತಿಳಿದುಬರುತ್ತದೆ.

ಅಸಿ (ಜಿ)ತ ಕೇಶಕಂಬಳಿ ಎಂದರೆ ಕಪ್ಪು ಕೂದಲಿನ ಕಂಬಳಿ ಅಥವಾ ಕರಿಯ ಕಂಬಳಿಯವನು ಎಂದು ಅರ್ಥ. ಇವನು ಅವೈದಿಕನಿದ್ದಂತೆ ಕಾಣುತ್ತದೆ. ಈತ ಸುಮಾರು ಕ್ರಿ.ಪೂ.೫೨೩ರಲ್ಲಿ ಜೀವಿಸಿದ್ದಿರಬಹುದೆಂದು ತಿಳಿದುಬರುತ್ತದೆ. ‘‘ಮಾನವ ನಾಲ್ಕು ಮೂಲವಸ್ತುಗಳಿಂದ ಅಸ್ತಿತ್ವ ಪಡೆಯುತ್ತಾನೆ, ಪರಲೋಕಕ್ಕಾಗಿ ಮಾಡುವ ದಾನ ಮುಂತಾದ ಪುಣ್ಯಕಾರ್ಯಗಳು ವ್ಯರ್ಥ, ಆಸ್ತಿಕವಾದ ಎಂಬುದು ಸುಳ್ಳಿನ ಕಂತೆ’’ ಎಂದು ಅಸಿತ ಕೇಶಕಂಬಳಿ ಹೇಳಿದ್ದಾನೆ. ಇದೇ ರೀತಿ ; ಬುದ್ಧನ ಸಮಕಾಲೀನನೂ, ದಾರ್ಶನಿಕನೂ ಆಗಿದ್ದ ಪ್ರಕೃತ ಕಾತ್ಯಾಯನ ‘‘ಪ್ರಕೃತಿಯನ್ನು ಯಾರೂ ಸೃಷ್ಟಿಸಿಲ್ಲ, ಅದು ತನಗೆತಾನೇ ಆಗಿದೆ. ಭೂಮಿ, ನೀರು, ಬೆಂಕಿ, ಗಾಳಿ, ಸುಖ, ದುಃಖ, ಜೀವನ ಎನ್ನುವ ಈ ಏಳು ತತ್ವಗಳು ಒಂದಕ್ಕೊಂದು ಹಾನಿ ಮಾಡಲಾರವು. ಒಂದು ಇನ್ನೊಂದಕ್ಕೆ ಕಾರಣವಾಗಲಾರವು. ಈ ತತ್ವಗಳ ಮಧ್ಯೆ ಖಾಲಿ ಅವಕಾಶ ಹೆಚ್ಚಾಗಿ ಇರುವುದೆಂದೂ, ನಾವು ಎಷ್ಟೇ ಬಲವಾಗಿ ಹೊಡೆದರೂ; ಅದು ಖಾಲೀ ಪ್ರದೇಶವನ್ನು ತಗಲುತ್ತದೆಯೋ ಹೊರತು ಮೂಲತತ್ವಕ್ಕೆ ಪೆಟ್ಟು ಬೀಳುವುದಿಲ್ಲ’’ ಎಂದು ಪ್ರತಿಪಾದಿಸಿದ. ಪರಮಾಣು ಸಿದ್ಧಾಂತಕ್ಕೂ ಮೊದಲೇ ಈ ರೀತಿ ಚಿಂತಿಸಿದ್ದರ ಕೀರ್ತಿ ಕಾತ್ಯಾಯನನಿಗೆ ಸಲ್ಲುತ್ತದೆ. ಈತ ಕರ್ಮ ಸಿದ್ಧಾಂತವನ್ನು ಬಲವಾಗಿ ಖಂಡಿಸಿದ್ದಾನೆ. ಬುದ್ಧನ ಇನ್ನೊಬ್ಬ ಸಮಕಾಲೀನನೂ, ತನ್ನ ಒಡೆಯನಿಗೆ ನೂರನೆಯ ಜೀತದಾಳುವೂ ಆಗಿದ್ದ ಪೂರ್ಣಕಶ್ಯಪನು : ‘‘ತಪಸ್ಸು ಮತ್ತು ಯಜ್ಞ ಯುಗಾದಿಗಳು ಅಸಂಬದ್ಧವಾದವು’’ ಎಂದು ಹೇಳಿದ್ದಾನೆ. ಅನಾರ್ಯ ಜನಾಂಗಕ್ಕೆ ಸೇರಿದವನೂ, ದನಗಳ ಕೊಟ್ಟಿಗೆಯಲ್ಲಿ ಹುಟ್ಟಿದವನೂ ಆದ ಮಕ್ಕಲಿ ಗೋಶಾಲ ಎನ್ನುವ ದಾರ್ಶನಿಕ:‘‘ಪಾಪ-ಪುಣ್ಯ ಕರ್ಮಗಳಿಂದ ಪೂಜಾ-ಪುರಸ್ಕಾರಗಳಿಂದ ಯಾವ ಪರಿಣಾಮವೂ ಉಂಟಾಗುವುದಿಲ್ಲ’’ ಎಂದು ಆರ್ಯರ ಚಿಂತನೆಗಳನ್ನು ಠೀಕಿಸಿದ್ದಾನೆ. ಹೀಗೆ ವೇದ, ಉಪನಿಷತ್ತುಗಳ ಕಾಲದಲ್ಲೇ ದಾರ್ಶನಿಕರೆನ್ನಿಸಿಕೊಂಡವರು ಯಾವ ಮುಲಾಜೂ ಇಲ್ಲದೆ ಅವುಗಳಲ್ಲಿನ ಲೋಪ-ದೋಷಗಳನ್ನು ಎತ್ತಿ ತೋರಿಸಿರುವುದನ್ನು ಪ್ರಾಚೀನ ಹಿಂದೂ ಧರ್ಮದಲ್ಲಿ ಕಾಣಬಹುದು.

ಹಿಂದೂ ಧರ್ಮದ ವೈಚಾರಿಕ ಇತಿಹಾಸದಲ್ಲಿ ಸಾಂಖ್ಯದ್ದು ಪ್ರಮುಖ ಸ್ಥಾನ. ಸಾಂಖ್ಯ ದರ್ಶನದಲ್ಲಿ ನಿರೀಶ್ವರವಾದ ಅಥವಾ ನಾಸ್ತಿಕವಾದಕ್ಕೆ ಪ್ರಮುಖ ಸ್ಥಾನವಿದೆ. ಇದು ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿರುವ ಅತಿ ಪ್ರಾಚೀನ ತತ್ವಶಾಸ್ತ್ರ ದರ್ಶನವಾಗಿದೆ. ವೈದಿಕರ ದಾಳಿಗೊಳಗಾಗಿ ಧ್ವಂಸವಾದ ವೈಚಾರಿಕ ಸಾಹಿತ್ಯದಲ್ಲಿ ಲೋಕಾಯತದ ನಂತರದ ಸ್ಥಾನ ಸಾಂಖ್ಯ ದರ್ಶನದ್ದು.

‘‘ಜಗತ್ತಿಗೆಲ್ಲಾ ಮೂಲವಾದುದು ಮತ್ತು ಅವ್ಯಕ್ತವಾದುದಕ್ಕೆಲ್ಲಾ ಕಾರಣವಾದುದು ಪ್ರಕೃತಿ. ಆ ಪ್ರಕೃತಿ ನಿತ್ಯವಾದುದು ಮತ್ತು ಪರಿವರ್ತನಶೀಲವಾದುದು. ಸತ್ವ, ರಜಸ್ ಮತ್ತು ತಮಸ್‌ಗಳು ಮೂಲ ಪ್ರಕೃತಿಯ ಗುಣಗಳು. ಇವು ಮೂರು ಸೇರಿ ಪ್ರಕೃತಿ ಯಾಗಿದೆ. ಜಗತ್ತಿನಲ್ಲಿರುವ ವಸ್ತುಗಳೆಲ್ಲವೂ ಕಾರ್ಯಗಳು. ಅವುಗಳಲ್ಲಿ ಸುಖ, ದುಃಖ, ಮೋಹ ಎನ್ನುವ ಗುಣಗಳು ಕಾಣಿಸುತ್ತವೆ. ಆದುದರಿಂದಲೇ ಈ ಕಾರ್ಯಗಳಿಗೆಲ್ಲ ಅಂತಿಮ ಕಾರಣವಾಗಿರುವುದು ಪ್ರಕೃತಿ’’ ಎಂದು ಅರಿತಿದ್ದ ಸಾಂಖ್ಯರು ಪ್ರಪಂಚದ ಆದಿ ಕಾರಣವನ್ನು ತಿಳಿಯಲು ಅನ್ವೇಷಣೆಗೆ ತೊಡಗಿ, ಆ ಮೂಲಕ ಭೌತಿಕ ಸಿದ್ಧಾಂತಗಳನ್ನು ಕಂಡುಕೊಂಡರು. ಈ ಕಾರಣಕ್ಕಾಗಿ ಅವರು ದೇವರು, ಆತ್ಮ ಮತ್ತು ಬ್ರಹ್ಮವಾದವನ್ನು ತಿರಸ್ಕರಿಸಿ; ಪ್ರಪಂಚದ ಕಾರಣವನ್ನು ಪ್ರಕೃತಿಯಿಂದ ತಿಳಿಯಬಹುದೆಂದು ವಾದಿಸಿದರು.

‘‘ಪ್ರತ್ಯಕ್ಷ ಪ್ರಮಾಣದ ಮೂಲಕ ವಿಷಯಗಳನ್ನು ತಿಳಿಯಬಹುದು. ಇಂದ್ರಿಯಗಳ ಮೂಲಕ ತಿಳಿಯಲಾಗದ ವಿಷಯಗಳನ್ನು ಅನುಮಾನದ ಮೂಲಕ ತಿಳಿಯಬಹುದು. ಮಿಕ್ಕ ವಿಷಯಗಳನ್ನು ವಿವೇಚನೆಯಿಂದ ತಿಳಿಯುತ್ತೇವೆ. ಪ್ರಕೃತಿಯು ಅಸತ್ ನಿಂದ ಬಂದಿದೆ ಎಂದು ಕೆಲವರು ವಾದಿಸುತ್ತಾರೆ. ಆದರೆ ಅದು ಸರಿಯಲ್ಲ. ಇರುವುದರಿಂದ ಮಾತ್ರ ಏನಾದರೂ ಉಂಟಾಗಲು ಸಾಧ್ಯ. ಇಲ್ಲದಿರುವುದರಿಂದ ಯಾವುದಾದರೂ ಹೇಗೆ ಉತ್ಪನ್ನವಾಗುತ್ತದೆ? ಅದು ಸಾಧ್ಯ ಎಂದು ಒಪ್ಪಿಕೊಂಡರೆ ಶೂನ್ಯದಿಂದ ಏನನ್ನಾದರೂ ತಯಾರು ಮಾಡಬಹುದು ಎಂದಾಯಿತು. ಮಡಕೆ ಮಾಡಲು ಮಣ್ಣು ಬೇಕು. ಆದುದರಿಂದ ಪ್ರಕೃತಿ ಇರುವುದರಿಂದ ಉಂಟಾಗಿದೆಯೇ ಹೊರತು ಇಲ್ಲದಿರುವುದರಿಂದ ಅಲ್ಲ’’ ಎಂದು ಸಾಂಖ್ಯರು ಭೌತಿಕ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.

‘‘ಭಾವ (Idea) ಸ್ಥಿರವಾದರೆ ಅದಕ್ಕೆ ಕಾರಣವಾದ ಭೌತಿಕ ಪ್ರಪಂಚವೂ ಸ್ಥಿರ’’ ಎಂದು ಕಪಿಲ ವಾದಿಸಿದರೆ; ‘‘ಪ್ರಕೃತಿಯೇ ಪ್ರಥಮ ಕಾರಣವೆಂದು’’ ಗೌಡಪಾದನು ತನ್ನ ಸಾಂಖ್ಯಕಾರಿಕದಲ್ಲಿ ವ್ಯಾಖ್ಯಾನಿಸಿದ್ದಾನೆ. ‘‘ಭೌತಿಕ ವಸ್ತುಗಳು ಭೌತಿಕ ಪದಾರ್ಥಗಳಿಂದಲೇ ಜನಿಸುತ್ತವೆ. ಬಿಳಿಯ ದಾರದಿಂದ ಬಿಳಿಯ ವಸ್ತ್ರ, ಕರಿಯ ದಾರದಿಂದ ಕರಿಯ ವಸ್ತ್ರ ಬರುವಂತೆ ಭೌತಿಕ ಪ್ರಕೃತಿಯಿಂದ ಭೌತಿಕ ಪ್ರಪಂಚ ಹೊರಹೊಮ್ಮುತ್ತದೆ. ದೇವರು ಅಭೌತಿಕವಾದ್ದರಿಂದ ಭೌತಿಕ ಪ್ರಪಂಚ ದೇವರಿಂದ ಉಗಮವಾಗಲಾರದು’’ ಎಂದು ಸಾಂಖ್ಯರು ವಾದಿಸಿದರು.

ಆರ್ಯರು ಅನಾರ್ಯರ ಮೇಲೆ ಅದೂ ದ್ರಾವಿಡರ ಮೇಲೆ ದಾಳಿಗಳನ್ನು ಮಾಡುವ ವೇಳೆ; ತಂತ್ರ ಮತ್ತು ಲೋಕಾಯತ ಸಿದ್ಧಾಂತಗಳು ಜರ್ಜರಿತವಾದಾಗಲೂ, ಸಾಂಖ್ಯರು ತಮ್ಮ ಪ್ರಕೃತಿ ಸಿದ್ಧಾಂತವನ್ನು ಮುಂದುವರೆಸಿಕೊಂಡು ಬಂದರು. ಈಶ್ವರ ಕೃಷ್ಣನ ‘ಸಾಂಖ್ಯಕಾರಿಕ’, ಗೌಡಪಾದನ ‘ಸಾಂಖ್ಯಕಾರಿಕ ಭಾಷ್ಯೆ’, ವಾಚಸ್ಪತಿ ವಿರಚಿತ ‘ತತ್ವ ಕೌಮುದಿ’ ಮತ್ತು ವಿಜ್ಞಾನ ಭಿಕ್ಷುವಿನ ‘ಸಾಂಖ್ಯ’ ಎನ್ನುವ ಕೃತಿಗಳು ಮಾತ್ರ ಪ್ರಸ್ತುತ ಲಭ್ಯ.

‘ವೈಶೇಷಿಕ ದರ್ಶನದ’ ಮೂಲಪುರುಷ ಕಣಾದ. ಈತ ಕ್ರಿ.ಪೂ. ಆರನೇ ಶತಮಾನದಲ್ಲಿ ಜೀವಿಸಿದ್ದವನು. ‘‘ಎಲ್ಲ ದುಃಖದ ಮೂಲ ರಾಗ, ದ್ವೇಷ ಭಾವಗಳಲ್ಲಿ ಅಡಗಿದೆ. ನಿಸರ್ಗದ ಉಗಮ ನಿಸರ್ಗದಲ್ಲೇ ಇದೆ’’ ಎಂದು ವೈಶೇಷಿಕತೆ ಮೊಟ್ಟಮೊದಲಿಗೆ ಸಾರಿತು. ‘‘ವಾಸ್ತವಿಕತೆ ಅಥವಾ ಸತ್ಯವು ವಸ್ತುವಿನ ಅತಿ ಚಿಕ್ಕ ಘಟಕದಲ್ಲಿ ಅಡಗಿದೆ’’ ಎಂದು ಕಣಾದನು ಅಣುವಾದವನ್ನು ಪ್ರತಿಪಾದಿಸಿದನು. ‘‘ಜಗತ್ತು ಅಸಂಖ್ಯ, ಅದೃಶ್ಯ, ಶಾಶ್ವತ ಹಾಗೂ ಆದಿ ಅಂತ್ಯವಿಲ್ಲದ ಕಣಗಳಿಂದ ರಚಿತವಾಗಿದೆ’’ ಎಂದು ಅವನು ಪ್ರತಿಪಾದಿಸಿದನು. ವಿಶ್ವದ ಮೂಲ ಶುದ್ಧಪ್ರಜ್ಞೆ ಅಥವಾ ಬ್ರಹ್ಮ ಅಥವಾ ಈಶ್ವರ ಎನ್ನುವುದನ್ನು ಕಣಾದ ಒಪ್ಪುವುದಿಲ್ಲ. ಹಾಗಿದ್ದರೆ ವಿಶ್ವವೂ ಬೌದ್ದಿಕ ಪ್ರಜ್ಞೆಯನ್ನು ಹೊಂದಿರಬೇಕಾಗಿತ್ತು. ಆದರೆ ಅದು ಹಾಗಿಲ್ಲ. ಅಣುಗಳ ಒಂದು ವಿಶೇಷ ವ್ಯವಸ್ಥೆಯಿಂದ ಪ್ರಜ್ಞೆ ಉಂಟಾಗುತ್ತದೆ’’ ಎಂದು ಕಣಾದುವು ಭಾವಿಸುತ್ತಾನೆ. ‘‘ನಿಶ್ಚಲವಾಗಿರುವ ಮತ್ತು ಪ್ರತ್ಯೇಕವಾಗಿರುವ ಅಣುಗಳು ಏನನ್ನೂ ಉತ್ಪಾದಿಸಲಾರವು. ಆದ್ದರಿಂದ ಅಗೋಚರವಾದ ಇನ್ನೊಂದು ಅಂಶ ಅಲ್ಲಿ ಕೆಲಸ ಮಾಡುತ್ತದೆ. ಅಣುಗಳ ಜೋಡಣೆ ಅದೃಷ್ಟದ ಜೊತೆಗೆ ಸೇರಿ ವಸ್ತುವಿನ ಉತ್ಪಾದನೆಯಾಗುತ್ತದೆ. ಜೀವಿಯ ಬೆಳವಣಿಗೆ ಹೊಂದಿದ ರೂಪವೇ ಆತ್ಮ ಮತ್ತು ವಸ್ತುವಿನ ವಿಶೇಷ ಬೆಳವಣಿಗೆಯೇ ಜೀವಿ’’ ಎಂಬುದು ಕಣಾದುವಿನ ವಾದ. ಕಣಾದನ ‘ವೈಶೇಷಿಕ’ ಸೂತ್ರದಲ್ಲಿ ಎಲ್ಲೂ ಶೂದ್ಧ ಪ್ರಜ್ಞೆ ಅಥವಾ ಬ್ರಹ್ಮ ಅಥವಾ ಈಶ್ವರ ಪ್ರಜ್ಞೆಗಳು ಬರದಿರುವುದರಿಂದ ಅದು ನಿರೀಶ್ವರ ಪಂಥ ಅಥವಾ ನಾಸ್ತಿಕ ಪಂಥ ಎಂದು ಪರಿಗಣಿಸಬಹುದು. ಇಲ್ಲಿ ಅಣುಗಳು ಕರ್ಮ ಅಥವಾ ಅದೃಷ್ಟದ ಪ್ರೇರಣೆಯಿಂದಾಗಿ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಒಳಗಾಗುತ್ತವೆಯೇ ಹೊರತು, ಬ್ರಹ್ಮನ ಅಥವಾ ಈಶ್ವರನ ದೆಸೆಯಿಂದಲ್ಲ ಎನ್ನುವುದು ಆತನ ತಾತ್ಪರ್ಯ. ಸಾಂಪ್ರದಾಯಿಕ ವೈದಿಕರು ವೈಶೇಷಿಕ ಸೂತ್ರವನ್ನು ಅರ್ಧ-ವಿನಾಶಕಾರಿ ಮತ್ತು ಅರ್ಧ-ನಾಸ್ತಿಕವಾದಿ ಎಂದು ತಿರಸ್ಕರಿಸುತ್ತಾರೆ.

ಮೀಮಾಂಶ ದರ್ಶನ ಇಂದ್ರ, ವರುಣ, ಅಗ್ನಿ ಮುಂತಾದ ದೇವತೆಗಳ ಅಸ್ತಿತ್ವವನ್ನು ಒಪ್ಪಿದರೂ ಬ್ರಹ್ಮನ ಅಸ್ತಿತ್ವವನ್ನು ಒಪ್ಪುವುದಿಲ್ಲ. ದೇವತೆಗಳಿಗೆ ಸೃಷ್ಟಿ ಸ್ಥಿತಿ ಮತ್ತು ಲಯ ಮುಂತಾದ ಕತೃತ್ವಶಕ್ತಿ ಇಲ್ಲದಿದ್ದರೂ; ನಾವು ಮಾಡಿದ ಯಜ್ಞಗಳನ್ನು ಸ್ವೀಕರಿಸುವುದರಿಂದ; ಯಜ್ಞಕ್ಕೆ ಫಲ ಸಿಗುವುದರಿಂದ ಬ್ರಹ್ಮ ಏಕೆ ಬೇಕು? ಎಂದು ಮೀಮಾಂಸಕರು ಪ್ರಶ್ನಿಸುತ್ತಾರೆ.

‘‘ಜೀವಿಗಳು ತಮ್ಮ ತಂದೆ-ತಾಯಿಗಳ ಸಮಾಗಮದಿಂದ ಹುಟ್ಟುತ್ತವೆಯೇ ಹೊರತು; ಬ್ರಹ್ಮನ ಇಚ್ಛೆಯಿಂದಾಗಲಿ, ಕಾರ್ಯ ಶಕ್ತಿಯಿಂದಾಗಲೀ ಅಲ್ಲ. ಬ್ರಹ್ಮನಿಗೆ ದೇಹಾದಿ ಕರಣಗಳೂ ಇಲ್ಲ; ಉಪಕರಣಗಳೂ ಇಲ್ಲ. ಆದುದರಿಂದ ವಿಶ್ವಸೃಷ್ಟಿಗೆ ಕಾರಣನಾಗಿರಲಾರ. ಅವನಿಗೆ ಮನಸ್ಸು, ಬುದ್ದಿ, ಇತ್ಯಾದಿಗಳು ಇಲ್ಲವೆಂದ ಮೇಲೆ; ಅವನಿಗೆ ಆಸೆ ಅಥವಾ ಉದ್ದೇಶವಿರಲಾರದು, ಆದುದರಿಂದ ಅವನು ಸೃಷ್ಟಿಕರ್ತನಾಗಿರಲಾರ. ಬ್ರಹ್ಮ ತನ್ನ ಜೀವಿಗಳಿಗೆ ಕರುಣೆ ತೋರಿಸಲು ಸೃಷ್ಟಿಸುತ್ತಾನೆ ಎನ್ನುವ ಅಭಿಪ್ರಾಯ ಬರೀ ಸುಳ್ಳು; ಸೃಷ್ಟಿಯೇ ಮಾಡಿಲ್ಲದ ಮೇಲೆ ಕರುಣೆ ಯಾರಿಗೆ ತೋರಿಸಬೇಕು? ಬ್ರಹ್ಮನಿಗೆ ಮನಸ್ಸು ಅಥವಾ ಬುದ್ದಿಯೇ ಇಲ್ಲದಿದ್ದಮೇಲೆ ಕರುಣೆ ಎಲ್ಲಿಂದ ಹುಟ್ಟುತ್ತದೆ? ಒಂದುವೇಳೆ ಬುದ್ದಿ ಇದೆ ಎಂದು ಭಾವಿಸಿದರೆ; ಸಾಮಾನ್ಯ ಮನುಷ್ಯನಿಗೂ ಬ್ರಹ್ಮನಿಗೂ ವ್ಯತ್ಯಾಸವೇನು? ಎನ್ನುವ ಪ್ರಶ್ನೆಗಳು ಏಳುತ್ತವೆ. ಒಂದು ವೇಳೆ ಬ್ರಹ್ಮನಿಗೆ ದೇಹವಿದ್ದರೆ, ಅದನ್ನು ಯಾರು ಸೃಷ್ಟಿಸಿದರು? ತಾನೇ ಅದನ್ನು ಸೃಷ್ಟಿಸಿಕೊಂಡಿರಲಾರ, ಏಕೆಂದರೆ ಅದನ್ನು ಯಾವುದರಿಂದ ಸೃಷ್ಟಿಸಿಕೊಳ್ಳುತ್ತಾನೆ? ಒಂದು ವೇಳೆ, ಅವನ ದೇಹ ನಿತ್ಯವಾಗಿದ್ದರೆ, ಉಳಿದ ವಸ್ತುಗಳೂ ನಿತ್ಯವೆಂದೇಕೆ ಊಹಿಸಿಕೊಳ್ಳಬಾರದು? ಬ್ರಹ್ಮ ವಸ್ತುಗಳನ್ನು ಸೃಷ್ಟಿಸುತ್ತಾನೆಂದು ಉಹಿಸಿಕೊಳ್ಳುವುದಾದರೆ; ಬ್ರಹ್ಮನನ್ನೂ ಮತ್ತಾರೋ ಸೃಷ್ಟಿಸಿದ್ದಾರೆಂದು ಏಕೆ ಊಹಿಸಿಕೊಳ್ಳಬಾರದು? ಆದುದರಿಂದ ಜಗತ್ತು ನಿತ್ಯವೇ ಹೊರುತು; ಅದು ಯಾರಿಂದಲೂ ಸೃಷ್ಟಿಯಾಗಿಲ್ಲ. ಧರ್ಮ-ಅಧರ್ಮಗಳನ್ನು ನೋಡಿಕೊಳ್ಳಲು ಹಾಗೂ ಪಾಪ-ಪುಣ್ಯಗಳನ್ನು ಹಂಚಲು ಸರ್ವಜ್ಞನಾದ ಬ್ರಹ್ಮ ಬೇಕೇ ಬೇಕು ಎನ್ನುವ ನೈಯಾಯಿಕರ ವಾದ ಸರಿಯಲ್ಲ. ಏಕೆಂದರೆ; ಧರ್ಮಾಧರ್ಮಗಳು ಕರ್ಮಮಾಡುವವರಿಗೆ ಸೇರಿರುವುದರಿಂದ ಅವರನ್ನು ಹೊರತುಪಡಿಸಿ, ಅವು ಯಾರಿಗೂ ತಿಳಿಯುವುದಿಲ್ಲ. ಅವು ಬ್ರಹ್ಮನಿಗೂ ತಿಳಿಯಲು ಸಾಧ್ಯವಿಲ್ಲ; ಏಕೆಂದರೆ ಅವು ಅವನಲ್ಲಿಲ್ಲ. ಅವು ಕರ್ಮ ಮಾಡುವವರಲ್ಲಿ ಇರುತ್ತವೆ. ಪ್ರಪಂಚವನ್ನು ಬ್ರಹ್ಮ ಸೃಷ್ಟಿಸಿದ ಎನ್ನುವುದನ್ನು ಯಾರು ನೋಡಿದ್ದಾರೆ?’’ ಎಂದು ಮುಂತಾಗಿ ಮೀಮಾಂಸಕರು ಆಸ್ತಿಕವಾದವನ್ನು ಖಂಡಿಸುತ್ತಾರೆ.

ವ್ಯಕ್ತಿ ತನ್ನ ವೈಯಕ್ತಿಕ ಬಿಡುಗಡೆಯನ್ನು ಗಳಿಸಿಕೊಂಡು ಲೋಕದ ಬಿಡುಗಡೆಗೆ ಶ್ರಮಿಸುವಂತೆ ಪ್ರೇರೇಪಿಸಿ ಆತ್ಮಶಕ್ತಿಯನ್ನು ಸಿದ್ಧಗೊಳಿಸುವ ವಿದ್ಯೆ ಅಥವಾ ದರ್ಶನಗಳಲ್ಲಿ ಯೋಗ ಪ್ರಮುಖವಾದುದು. ಯೋಗ ಆಧ್ಯಾತ್ಮ ಮತ್ತು ಅನುಭಾವಗಳ ಜೊತೆಗೂಡಿ ದೇಹ, ಮನಸ್ಸು ಮತ್ತು ಹೃದಯಗಳ ಸಮತೋಲನವನ್ನು ಸಾಧಿಸುತ್ತದೆ. ದೇಹದ ಮೇಲೆ ಒತ್ತು ನೀಡುತ್ತಾ; ದೇಹದಂಡನೆಯ ಮೂಲಕ ಮನೋನಿಗ್ರಹಕ್ಕೆ ಕಾರಣವಾಗುತ್ತದೆ. ದೇಹಶುದ್ದಿ, ಆರೋಗ್ಯವೃದ್ದಿ ಮತ್ತು ದೀರ್ಘಾಯುಷ್ಯ ಸಿದ್ದಿಗಳಿಗೆ ಪ್ರಾಮುಖ್ಯತೆ ನೀಡಿ; ಕೊನೆಯ ಹಂತದಲ್ಲಿ ಧ್ಯಾನ ಮತ್ತು ಸಮಾಧಿಗಳನ್ನು ವಿಧಿಸುತ್ತದೆ.

‘ಯೋಗ’ ಎನ್ನುವ ಪದ ‘ಒಂದಾಗುವುದು’ ಎನ್ನುವ ಅರ್ಥದ ‘ಯುಜ್’ ಎನ್ನುವ ಧಾತುವಿನಿಂದ ಬಂದಿದೆ. ಆತ್ಮ ಪರಮಾತ್ಮನಲ್ಲಿ ಒಂದಾಗುವುದೆ ಯೋಗ ಎನ್ನಲಾಗಿದೆ. ಷಡ್ ದರ್ಶನಗಳಲ್ಲಿ ಒಂದಾದ ಯೋಗದಲ್ಲಿ; ರಾಜಯೋಗ, ಭಕ್ತಿಯೋಗ, ಜ್ಞಾನಯೋಗ ಮತ್ತು ಕರ್ಮಯೋಗ ಮುಂತಾದ ಬಗೆಗಳಿವೆ. ಲೌಕಿಕದಲ್ಲಿ ಇದ್ದುಕೊಂಡು ಅಲೌಕಿಕ ಸಿದ್ದಿ ಪಡೆಯುವ ಮಾರ್ಗವನ್ನು ರಾಜಯೋಗ ಎಂತಲೂ, ಆತ್ಮವಿಧಿಯನ್ನು ಭಕ್ತಿಯೋಗ ಎಂತಲೂ, ದೈಹಿಕ ಶ್ರಮದ ಕೆಲಸ ಅಥವಾ ಕಾಯಕ ನಿಷ್ಠೆಯನ್ನು ಕರ್ಮಯೋಗ ಎಂತಲೂ ಹಾಗೂ ವೇದಾಂತ ಜಿಜ್ಞಾಸೆ ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಜ್ಞಾನಯೋಗ ಎಂತಲೂ ಕರೆಯಲಾಗುತ್ತಿದೆ.

ಹಿಂದೂ ಧರ್ಮದ ವೈದಿಕರೆಲ್ಲ ಜ್ಞಾನ, ಭಕ್ತಿ ಮತ್ತು ವೈರಾಗ್ಯಕೊಡು ಎಂದು ದೇವರಲ್ಲಿ ಬೇಡುತ್ತಾ ಬಂದಿದ್ದರೆ; ಸಂತರೆಲ್ಲಾ ಜ್ಞಾನಯೋಗ, ಭಕ್ತಿಯೋಗ ಮತ್ತು ಕರ್ಮಯೋಗದಲ್ಲಿ ತಲ್ಲೀನರಾಗಿ, ಮೂರೂ ಯೋಗಗಳ ಸತ್ಯಾಂಶಗಳನ್ನು ಅಳವಡಿಸಿ ಕೊಂಡು ಬದುಕು ಸಾಗಿಸಿರುವುದನ್ನು ನಾವು ಕಾಣಬಹುದು. ಮುಖ್ಯ ಸಂಗತಿ ಎಂದರೆ ಜ್ಞಾನ ಮತ್ತು ಭಕ್ತಿ ವೈದಿಕರಿಗೆ ಮತ್ತು ಸಂತರಿಗೆ ಬೇಕಾದ ಸಮಾನ ಅಂಶಗಳಾಗಿದ್ದರೆ; ಸಂತರು ‘ಕರ್ಮ’ಕ್ಕೆ ಕೊಡುವ ಒತ್ತನ್ನು ವೈದಿಕರು ‘ವೈರಾಗ್ಯ’ಕ್ಕೆ ಕೊಟ್ಟಿರುವುದು ಯಾವ ಕಾರಣದಿಂದ? ಎನ್ನುವ ಪ್ರಶ್ನೆ ಉಂಟಾಗುತ್ತದೆ.

ಸಂತರು, ಅನುಭಾವಿಗಳು, ಯೋಗಿಗಳು ಮುಂತಾದವರು ಬಹುಪಾಲು ಕೆಳವರ್ಗ, ಕೆಳವರ್ಣಗಳಿಂದ ಬಂದವರು ಅಥವಾ ಕೆಳವರ್ಗ, ಕೆಲವರ್ಣಗಳ ಚಿಂತನಾ ಕ್ರಮವನ್ನು ಒಪ್ಪಿಬಂದ ಮೇಲ್ವರ್ಗ, ಮೇಲ್ವರ್ಣದವರು ಆಗಿದ್ದರು. ವೈದಿಕರಿಗೆ ಜ್ಞಾನ ಪಡೆಯುವುದು, ಪಡೆದ ಜ್ಞಾನದ ಮೂಲಕ ಆಧ್ಯಾತ್ಮ ಜಿಜ್ಞಾಸೆಯಲ್ಲಿ ತೊಡಗುವುದು ಮುಂತಾದ ಕೆಲಸಗಳಿಗಾಗಿ ಬಿಡುವು ಬೇಕಾಗಿತ್ತು. ಜ್ಞಾನ ಮತ್ತು ಬುದ್ದಿಯ ಆಧಾರದಿಂದ ಮಾತ್ರ ಜೀವನ ನಡೆಸಲು ಮತ್ತು ಉಳಿದ ಎಲ್ಲಾ ವರ್ಣಗಳ ಜನತೆಯ ಮೇಲೆ ಬೌದ್ದಿಕ ಯಜಮಾನಿಕೆ ಸ್ಥಾಪಿಸಿಕೊಳ್ಳಲು ಅವರಿಗೆ ಅವು ಅನಿವಾರ್ಯವಾಗಿದ್ದವು. ಕರ್ಮದಿಂದ ಅಂದರೆ ದೈಹಿಕ ಶ್ರಮದಿಂದ ಜೀವನ ನಡೆಸುವ ಬ್ರಾಹ್ಮಣ ಅಥವಾ ವೈದಿಕ ಶೂದ್ರನಿಗೆ ಸಮಾನ ಎಂದು ಮನು ಮಹಾರಾಜ ಕಟ್ಟಳೆ ವಿಧಿಸಿಲ್ಲವೆ? ವೈದಿಕರದು ಶ್ರಮ ತಪ್ಪಿಸಿ ಕೊಳ್ಳುವ, ದುಡಿಮೆಯನ್ನು ಅಂದರೆ ದೈಹಿಕ ಶ್ರಮವನ್ನು ಇತರರ ಹೆಗಲಿಗೆ ಕಟ್ಟುವ, ಆ ಮೂಲಕ ಆಧ್ಯಾತ್ಮಿಕ ಜಿಜ್ಞಾಸೆಗೆ ಬೇಕಾದ ಪುರಸತ್ತು ಮತ್ತು ಮನಃಸ್ಥಿತಿಗಳನ್ನು ಉಳಿಸಿ ಕೊಳ್ಳುವ ತಂತ್ರವಾಗಿ ಕರ್ಮಯೋಗವನ್ನು ಇತರರಿಗೆ ಬಿಟ್ಟು ವೈರಾಗ್ಯಕ್ಕೆ ಅಂಟುಬಿದ್ದರು.

‘ಬಿಟ್ಟಿರುವುದು’ ಅಥವಾ ‘ಇಲ್ಲದಿರುವುದು’ ಅರ್ಥದ ‘ವೈರಾಗ್ಯ’ ಎನ್ನುವ ಪದ ‘ವಿರಾಗ’ ಎನ್ನುವ ಪದದಿಂದ ನಿಷ್ಪತ್ತಿ ಹೊಂದಿದೆ. ಜೀವಿಸಿರಲು ಬೇಕಾಗುವ ಆಹಾರ, ಬಟ್ಟೆ ಮುಂತಾದ ಅವಶ್ಯಕತೆಗಳನ್ನು ಪಡೆಯಲು ದೈಹಿಕ ಶ್ರಮವೂ ಬೇಕಾಗುತ್ತದೆ. ಆರ್ಥಿಕ ಪರಿಭಾಷೆಯಲ್ಲಿ ಹೇಳುವುದಾದರೆ ದೈಹಿಕ ಶ್ರಮ ಒಂದು ಬಂಡವಾಳವಿದ್ದಂತೆ. ವೈದಿಕರು ತಮ್ಮ ಆಹಾರ, ಬಟ್ಟೆ ಮುಂತಾದವನ್ನು ಜ್ಞಾನ ಮತ್ತು ಬುದ್ದಿಯ ಮೂಲಕ ಗಳಿಸುತ್ತಿದ್ದಾರೆ. ಇಲ್ಲಿ ದೈಹಿಕ ಶ್ರಮದ ಜಾಗದಲ್ಲಿ ಜ್ಞಾನ ಮತ್ತು ಬುದ್ದಿ ಬಂಡವಾಳವಾಗಿ ಕೆಲಸ ಮಾಡುತ್ತಿರುವುದರಿಂದ; ಸಮಾಜದ ಶ್ರಮಿಕರ ಶೋಷಣೆಗೆ ಕಾರಣವಾಗಿದೆ.

ಇನ್ನು ಅವೈದಿಕ ಸಂತರದು ಕಾಯಕದ ಹಿರಿಮೆಯನ್ನು ಸಾರುವ, ಸೇವೆಯ ಶ್ರೇಷ್ಟತೆ ಯನ್ನು ಎತ್ತಿ ಹಿಡಿಯುವ, ಆ ಮೂಲಕ ದೈಹಿಕ-ಮಾನಸಿಕ ಆರೋಗ್ಯ ಸಮತೋಲನ ಕಾಪಾಡುವ ಪ್ರಯತ್ನ. ಆದ್ದರಿಂದಲೇ ಪುನರ್ಜನ್ಮ, ಪಾಪ-ಪುಣ್ಯ-ಕರ್ಮ ಎಂದು; ಇಂದಿನ ಕಾಯಕದ ಕರ್ಮಕ್ಕೆ ಇತರೆಯವರನ್ನು, ಶೂದ್ರರನ್ನು, ಪಂಚಮರನ್ನು, ಹೆಚ್ಚಾಗಿ ಮಹಿಳೆಯರನ್ನು ತಳ್ಳೀದ ವೈದಿಕರ ತಂತ್ರವನ್ನು ವಿರೋಧಿಸಿದವರು ಸಾಧು-ಸಂತರು.

ಧರ್ಮದ ಯಾವ ಪಂಥವನ್ನೂ ಒಪ್ಪದಿರುವವರನ್ನು ಚಾರ್ವಾಕರು ಅಥವಾ ಲೋಕಾಯುತರೆಂದು ಕರೆಯಲಾಗುತ್ತಿದೆ. ಚಾರ್ವಾಕರು ಅನುಭವ ನಿಷ್ಠತೆಯಲ್ಲಿ ಹೆಚ್ಚು ನಂಬಿಕೆ ಉಳ್ಳವರು. ಅದು ಅವರ ತಾತ್ವಿಕತೆ ಕೂಡ ಆಗಿದೆ. ಅವರು ಆತ್ಮದ ಅಮರತ್ವ ವನ್ನು ನಂಬುವುದಿಲ್ಲವಾದುದರಿಂದ ಅವರನ್ನು ನಾಸ್ತಿಕರು ಎಂದೂ ಕರೆಯಲಾಗುತ್ತಿದೆ. ಚಾರ್ವಾಕರು ದೇವರ ಅಸ್ತಿತ್ವವನ್ನು, ವೇದ ಪ್ರಾಮಾಣ್ಯವನ್ನು, ಚಿದ್ವಸ್ತುವಾದ ಆತ್ಮವನ್ನು, ಪುನರ್ಜನ್ಮ, ಕರ್ಮಸಿದ್ಧಾಂತ, ಪರಲೋಕ ಮುಂತಾದವನ್ನು ಅಲ್ಲಗಳೆದದ್ದರಿಂದ ದರ್ಶನಕಾರರ ಠೀಕೆಗೆ ಗುರಿಯಾದರು. ಚಾರ್ವಾಕರಿಗೆ ‘ಲೋಕಾಯತರು’ ಎನ್ನುವ ಮತ್ತೊಂದು ಹೆಸರೂ ಇದೆ. ಲೋಕದ ವಿಷಯವನ್ನು ಮಾತ್ರ ಹೊಂದಿರುವ ಹಾಗೂ ಲೋಕದ ಜನರಿಗೆ ಮಾತ್ರ ಸಂಬಂಧಿಸಿದ ವಿಷಯಗಳನ್ನುಳ್ಳ ಶಾಸ್ತ್ರವನ್ನು ಲೋಕಾಯತ ಎಂದು ಕರೆದಿರಬಹುದು. ‘‘ಬದುಕಿರುವವರೆಗೆ ಸುಖವಾಗಿ ಬದುಕಬೇಕು. ಸಾವಿನನಂತರ ಇನ್ನೇನೂ ಇಲ್ಲ. ಬೂದಿಯಾದ ಶರೀರ ಪುನಃ ಹುಟ್ಟಲಾರದು. ಜೀವನದಲ್ಲಿ ದುಃಖವಿದೆ ಎನ್ನುವ ಕಾರಣಕ್ಕಾಗಿ ಇಡೀ ಜೀವನವನ್ನೇ ತೊರೆ ಎನ್ನುವುದು ಮೂರ್ಖರ ಅಭಿಪ್ರಾಯ. ಹೊಟ್ಟು ಸೇರಿದೆ ಎನ್ನುವ ಕಾರಣಕ್ಕಾಗಿ ವಿವೇಕಿಗಳು ಧಾನ್ಯವನ್ನು ಬಿಸಾಡುವರೆ? ಜೀವನದಲ್ಲಿ ದುಃಖವಿದೆ ಎನ್ನುವ ಕಾರಣಕ್ಕಾಗಿ ಈ ಜೀವನವೇ ವ್ಯರ್ಥ ಎನ್ನುವ ವೇದಾಂತದ ಮಾತುಗಳು ಯಥಾರ್ಥವಲ್ಲ.’’

‘‘ಅಗ್ನಿಹೋತ್ರ, ಮೂರು ವೇದಗಳು, ತ್ರಿದಂಡಗಳು, ವಿಭೂತಿ ಬಳಿದುಕೊಳ್ಳುವುದು’’ -ಇವು ಪೌರುಷವಿಲ್ಲದವರ ಮತ್ತು ಬುದ್ದಿ ಇಲ್ಲದವರ ಜೀವನ ಮಾರ್ಗಗಳು ಎನ್ನುವುದು ಬೃಹಸ್ಪತಿಯ ಅಭಿಪ್ರಾಯ. ‘‘ಪುರುಷನು ಸ್ತ್ರೀಯನ್ನು ಅಪ್ಪಿಕೊಳ್ಳುವುದರಿಂದ ದೊರೆಯುವ ಸುಖವೇ ಸ್ವರ್ಗ. ಮುಳ್ಳು ಚುಚ್ಚುವಂತಹವುಗಳಿಂದ ದೊರೆಯುವ ದುಃಖವೇ ನರಕ. ಇವುಗಳನ್ನು ಬಿಟ್ಟು ಬೇರೆ ಸ್ವರ್ಗ ನರಕಗಳಿಲ್ಲ’’ ಎಂದು ಆತ ಅಭಿಪ್ರಾಯಪಡುತ್ತಾನೆ. ‘‘ಬಹುಜನರಿಗೆ ಶ್ರೇಯಸ್ಸನ್ನುಂಟುಮಾಡುವುದರಿಂದ ಚಾರ್ವಾಕ ಮತವು ಆಶ್ರಯ ಸ್ಥಾನವೂ, ರಮಣೀಯವೂ ಆಗಿತ್ತು. ಚಾರ್ವಾಕ ಮತವು ನಿಜವಾಗಿಯೂ ಲೋಕಾಯತ ವಾಗಿತ್ತು’’ ಎಂದು ಮಾಧವಾಚಾರ್ಯ ಅಭಿಪ್ರಾಯ ಪಡುತ್ತಾನೆ.

ಧರ್ಮದಲ್ಲಿ ವಿಚಾರರಹಿತ ಆಚಾರಕ್ಕೆ ಕಾರಣವಾದ ವರ್ಣವ್ಯವಸ್ಥೆಯನ್ನು ಚಾರ್ವಾಕರು ನುಚ್ಚು ನೂರು ಮಾಡಲು ಪ್ರಯತ್ನಿಸಿದರು. ಸ್ತ್ರೀಯರ ಮೇಲಿನ ಬಂಧನಗಳನ್ನು ಧಿಕ್ಕರಿಸಿದರು. ಚಾರ್ವಾಕರು ತಮ್ಮ ಶಿಷ್ಯ ಪ್ರಶಿಷ್ಯರ ಮೂಲಕ ಜನಸಾಮಾನ್ಯರಲ್ಲಿ ತಮ್ಮ ತತ್ವಗಳನ್ನು ಪ್ರಚಾರ ಮಾಡಿದರು. ‘‘ಸ್ವರ್ಗ, ನರಕ, ಆತ್ಮ, ಪರಲೋಕಗಳೆಂಬುವು ಇಲ್ಲ. ವರ್ಣಾಶ್ರಮ ಕರ್ಮಗಳಿಂದ ಏನೂ ಪ್ರಯೋಜನವಿಲ್ಲ’’ ಎನ್ನುವಂತಹ ಚಾರ್ವಾಕರ ಮಾತುಗಳು ಪುರೋಹಿತರ ಕಪಿಮುಷ್ಠಿಯಲ್ಲಿ ಸಿಕ್ಕಿಕೊಂಡಿದ್ದ ಜನಸಾಮಾನ್ಯರಿಗೆ ಬಿಡುಗಡೆಯ ಭರವಸೆಯನ್ನು ನೀಡಿದ್ದರ ಜೊತೆಗೆ ಆತ್ಮವಿಶ್ವಾಸವನ್ನು ಉಂಟು ಮಾಡಿದವು.