ಬೌದ್ಧ ಧರ್ಮದ ಬೆಳವಣಿಗೆ

ಬುದ್ಧನ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆಲ್ಲ ಭೌಗೋಳಿಕವಾಗಿ ವ್ಯಾಪ್ತಿಯೂ ಹೆಚ್ಚುತ್ತಾ ಹೋಯಿತು. ಪ್ರಾರಂಭದಲ್ಲಿ; ಗಂಗಾನದಿಯ ಬಯಲಿನಲ್ಲಿ; ಆನಂತರ ಇಂಡಿಯಾದ ಉಪಖಂಡದ ಉದ್ದಕ್ಕೂ ಬೌದ್ಧಧರ್ಮ ವ್ಯಾಪಿಸುತ್ತಾ ಹೋಯಿತು. ಬೌದ್ಧಧರ್ಮ ಬುದ್ಧನ ಕಾಲದಲ್ಲೇ ಅನೇಕ ಅಡೆ-ತಡೆಗಳನ್ನು ಹುಟ್ಟಿದ ನೆಲದಲ್ಲೇ ಎದುರಿಸಬೇಕಾಯಿತು. ಬುದ್ಧನ ಕಾಲಾನಂತರವೂ ಅದು ಮುಂದುವರೆಯಿತು. ಹಿಂದೂವಾದಿ ಕೆಲವು ಆಚಾರ್ಯರ ಮುಂದಾಳತ್ವದಲ್ಲಿ ಜೈನರ ಬಸದಿಗಳು, ಬೌದ್ಧರ ಶಿಕ್ಷಣ ಕೇಂದ್ರಗಳಾಗಿದ್ದ ಸ್ಥೂಪಗಳು ಮುಂತಾದವು ನಾಶಗೊಂಡದ್ದು ಇಂಡಿಯಾದ ಇತಿಹಾಸದ ಕಪ್ಪು ಪುಟಗಳಲ್ಲಿ ಕಾಣಬಹುದು. ಪುರೋಹಿತಶಾಹಿಯ ಐಹಿಕ ಜೀವನಕ್ಕೆ ಬಂಡವಾಳದಂತಿದ್ದ ದೇವರ ಅಸ್ತಿತ್ವವನ್ನೇ ಬೌದ್ಧಧರ್ಮ ತಿರಸ್ಕರಿಸಿದ್ದರ ಜೊತೆಗೆ ವೈಚಾರಿಕ ತಳಹದಿಯ ಮೇಲೆ ಧರ್ಮವನ್ನು ರೂಪಿಸಹೊರಟಿದ್ದು ವೈದಿಕರಿಗೆ ಹಸಿಮೆಣಸಿನಕಾಯಿ ಕಡಿದು ತಿಂದಷ್ಟು ಅನುಭವವಾಗಿತ್ತು. ಬೌದ್ಧಧರ್ಮ ಇಂಡಿಯಾದ ವೈದಿಕರಿಂದ ಅರ್ಧಚಂದ್ರ ಪ್ರಯೋಗಕ್ಕೆ ಒಳಗಾಗಿ; ಚೀನ, ಜಪಾನ್, ಶ್ರೀಲಂಕಾ, ಬರ್ಮಾ, ಕಾಂಬೋಡಿಯಾ, ಥಾಯ್ ಲ್ಯಾಂಡ್‌ಗಳಲ್ಲಿ; ಪಶ್ಚಿಮದಲ್ಲಿ ಆಫ್ಘಾನಿಸ್ಥಾನ, ಸಿರಿಯಾ ಮುಂತಾದ ರಾಷ್ಟ್ರಗಳವರೆಗೆ ಹಬ್ಬಿತು. ಬುದ್ಧ ಮನೋಸ್ವಾಸ್ಥ್ಯಕ್ಕಾಗಿ ಬೋಧಿಸಿದ ‘ಧ್ಯಾನ’ ಆ ಎಲ್ಲಾ ದೇಶಗಳ ಜನತೆಯನ್ನೂ ತೆಕ್ಕೈಸಿತ್ತು. ಬುದ್ಧ ಪಾಳಿ ಭಾಷೆಯಲ್ಲಿ ಹೇಳಿಕೊಟ್ಟ ‘ಮತ್ತಜಾನ’ (ಮೈತ್ರಿಧ್ಯಾನ) ಚೀನಾದಲ್ಲಿ ‘ಜಾನ್’ ಆಗಿ ಜಪಾನಿನಲ್ಲಿ ‘ಝೆನ್’ ಆಗಿ ರೂಪುಗೊಂಡಿತು. ಚೀನಾದಲ್ಲಿ ‘ಚಾನ್’ ನಿಸರ್ಗ ಸಹಜ ಅರಿವಾದರೆ; ಜಪಾನಿನಲ್ಲಿ ಅನುಭಾವಿಕ ಅರಿವಾದ ಝೆನ್ ಆಗಿ ಮಾರ್ಪಟ್ಟಿತು. ಝೆನ್ ಸಾಧಕರು, ಗುರುಗಳು, ಭಿಕ್ಷುಗಳು ಸತ್ಯದ ಸಹಜ ಅರಿವಾದ ‘ಸತೋರಿ’ (ಜ್ಞಾನ)ಗಾಗಿ ಹಾತೊರೆಯುತ್ತಾರೆ.

ಬೌದ್ಧ ಸಂಪ್ರದಾಯ ತಿಳಿಸುವಂತೆ, ಬುದ್ಧನು ನಿರ್ವಾಣವಾದ ಮೂರು ವರ್ಷಗಳ ನಂತರ ಅಂದರೆ ಕ್ರಿ.ಪೂ.೪೮೦ರಲ್ಲಿ ರಾಜಘರ್‌ನಲ್ಲಿ ಸುಮಾರು ಐದುನೂರು ಬೌದ್ಧ ಸನ್ಯಾಸಿಗಳ ಸಮಾವೇಶ ನಡೆದಿದೆ. ಇಂತಹ ಸಭೆ ನಡೆದಿರುವುದು ಅದೇ ಪ್ರಥಮ. ಪ್ರಾರಂಭದಲ್ಲಿ ಬುದ್ಧನ ಬೋಧನೆಗಳೆಲ್ಲವನ್ನೂ ಮೌಖಿಕವಾಗಿ ಬೋಧಿಸಲಾಯಿತು. ಕ್ರಿ.ಪೂ.೨೫ರಲ್ಲಿ ಶ್ರೀಲಂಕಾದ ಮಟಾಲೆಯಲ್ಲಿ ನಡೆದ ಬೌದ್ಧರ ನಾಲ್ಕನೇ ಸಮಾವೇಶದವರೆಗೆ ಮೌಖಿಕ ಪಠಣದಿಂದಲೇ ಬೌದ್ಧ ಧರ್ಮಗ್ರಂಥಗಳ ಸಾರವನ್ನು ಪ್ರಚಾರ ಮಾಡಲಾಗುತ್ತಿತ್ತು. ಆ ಸಮ್ಮೇಳನಾನಂತರ ಮೌಖಿಕ ಪರಂಪರೆಯನ್ನು ಲಿಪಿ ರೂಪಕ್ಕೆ ತರಲಾಯಿತು. ಅದಕ್ಕಾಗಿ ಪಾಳಿ ಭಾಷೆ ಮತ್ತು ಲಿಪಿಯನ್ನು ಬಳಸಲಾಯಿತು. ಅಂದು ಪಾಳಿ ಭಾಷೆ ಜನಸಾಮಾನ್ಯರ ಆಡು ಭಾಷೆಯಾಗಿತ್ತು ಎನ್ನುವುದು ಮುಖ್ಯ. ಅದೇ ಸಂದರ್ಭದಲ್ಲಿ ಆರ್ಯ ಹಿಂದುಗಳು ಹೆಚ್ಚಾಗಿ ಸಂಸ್ಕೃತ ಭಾಷೆಯನ್ನು ಅವಲಂಬಿಸಿದ್ದರು. ಬೌದ್ಧ ಧರ್ಮದ ಎಲ್ಲ ಬರಹಗಳನ್ನೂ ‘ತ್ರಿಪಿಟಕ’ ಅಂದರೆ ‘ಮೂರು ಬುಟ್ಟಿಗಳು’ ಎನ್ನುವ ಅರ್ಥದಿಂದ ವರ್ಗೀಕರಿಸಲಾಗಿದೆ. ಬೌದ್ಧ ಸನ್ಯಾಸಿಗಳು ಪಾಲಿಸಬೇಕಾದ ನಿಯಮಗಳನ್ನು ‘ವಿನಯ ಪಿಟಿಕ’ದಲ್ಲೂ, ಬುದ್ಧನ ಬೋಧನೆಗಳು ಮತ್ತು ಅವುಗಳ ವ್ಯಾಖ್ಯಾನ ಅಥವಾ ವೃತ್ತಾಂತಗಳನ್ನು ‘ಸುತ್ತಪಿಟಿಕ’ದಲ್ಲೂ ಹಾಗೂ ತತ್ವಜ್ಞಾನದ ಹೆಚ್ಚುವರಿ ಅನುಬಂಧವನ್ನು ‘ಅಭಿಧಮ್ಮಪಿಟಿಕ’ದಲ್ಲೂ ಸೇರಿಸಿ ಗುಂಪು ಮಾಡಲಾಗಿದೆ.

‘ವಸಾಲಿ’ ನಗರದಲ್ಲಿ ಕ್ರಿ.ಪೂ.೩೮೦ರ ಆಜೂ-ಬಾಜಿನಲ್ಲಿ ನಡೆದ ಬೌದ್ಧರ ಎರಡನೇ ಸಮಾವೇಶದಲ್ಲಿ; ‘ಶಿಸ್ತಿಗೆ’ ಸಂಬಂಧಿಸಿದಂತೆ ವಿವಾದಗಳು ಉಂಟಾದವು. ಕ್ರಿ.ಪೂ.೨೪೦ರ ಮೂರನೇ ಬೌದ್ಧರ ಸಮಾವೇಶದ ಹೊತ್ತಿಗೆ; ಇಂಡಿಯಾದ ರಾಜಕೀಯದಲ್ಲಿ ನಾಟಕೀಯ ಬದಲಾವಣೆಗಳು ಉಂಟಾದವು. ಕ್ರಿ.ಪೂ.ನಾಲ್ಕನೇ ಶತಮಾನದ ಕೊನೆಯಲ್ಲಿ ಹಾಗೂ ಮೂರನೇ ಶತಮಾನದ ಪ್ರಾರಂಭದಲ್ಲಿ; ಅಲೆಕ್ಸಾಂಡರ್‌ನ ಗ್ರೀಕ್ ಸೈನ್ಯ ಇಂಡಿಯಾದಲ್ಲಿ ನೆಲೆಯೂರಿತ್ತು. ಗ್ರೀಕ್ ಸೈನ್ಯದ ಅನೇಕ ನೆಲೆಗಳನ್ನು ಮಗಧ ರಾಜ್ಯದ ಚಂದ್ರಗುಪ್ತನು ತೆರವುಗೊಳಿಸಿದ್ದನು. ಆನಂತರ ಚಂದ್ರಗುಪ್ತನು ಇಂಡಿಯಾದ ಉಳಿದ ಭಾಗಗಳನ್ನು ಆಕ್ರಮಿಸುತ್ತಾ ಹೋದನು. ಚಂದ್ರಗುಪ್ತ ಮೌರ್ಯನ ಮೊಮ್ಮಗ ‘ಅಶೋಕ’ನು ಕ್ರಿ.ಪೂ.೨೭೩ರಲ್ಲಿ ಆಡಳಿತಕ್ಕೆ ಬಂದನು ಹಾಗೂ ಬೌದ್ಧ ಧರ್ಮವನ್ನು ಸ್ವೀಕರಿಸಿದನು. ‘‘ಕುಟುಂಬದ ಜವಾಬ್ದಾರಿಗಳು, ಅಹಿಂಸೆಯ ತತ್ವಗಳು, ವಿನಯಶೀಲ ನಡವಳಿಕೆ ಹಾಗೂ ಗುಲಾಮರನ್ನು, ಸೇವಕರನ್ನು, ಗುರುಗಳನ್ನು, ಸನ್ಯಾಸಿಗಳನ್ನು ಮತ್ತು ಬ್ರಾಹ್ಮಣರನ್ನು ಒಳಗೊಂಡಂತೆ ಎಲ್ಲ ಅನ್ಯರನ್ನೂ ಪ್ರೀತಿ ಮತ್ತು ಗೌರವದಿಂದ ನಡೆಸಿಕೊಳ್ಳುವುದು’’ ಮುಂತಾದ ಬೌದ್ಧ ಧರ್ಮದ ಕಲ್ಪನೆಗಳನ್ನು ತನ್ನ ಆಡಳಿತದಲ್ಲಿ ತರಲು ಪ್ರಯತ್ನಿಸಿದನು. ಬೌದ್ಧರ ಎರಡನೇ ಸಮಾವೇಶದ ಸಂದರ್ಭದಲ್ಲಿ ನಡೆದ ಘಟನೆಗಳಿಂದ ಅಶೋಕನಲ್ಲಿ ಉದ್ವೇಗ ಮತ್ತು ಅತೃಪ್ತಿಗಳು ಜಾಗೃತವಾಗಿ ಧೈರ್ಯಗೆಡಿಸಿದ್ದವು. ಆದುದರಿಂದ ಬೌದ್ಧರ ಭಿನ್ನ ಗುಂಪುಗಳ ಮಧ್ಯೆ ಸಾಮರಸ್ಯ ಉಂಟುಮಾಡುವ ಬಗ್ಗೆ ಒತ್ತು ನೀಡಲಾಯಿತು. ಅಶೋಕನ ಮಾರ್ಗದರ್ಶನದಲ್ಲಿ ಬೌದ್ಧ ಭಿಕ್ಕುಗಳು ಈಜಿಪ್ಟ್, ಗ್ರೀಸ್ ಹಾಗೂ ಮಧ್ಯಪ್ರಾಚ್ಯ ದೇಶಗಳಿಗೆ ಪ್ರವಾಸ ಮಾಡಿದರು. ಅಶೋಕನ ಹತ್ತಿರದ ಸಂಬಂಧಿ ‘ಮಹಿಂದ’ ಎನ್ನುವವನು ಶ್ರೀಲಂಕಾಕ್ಕೆ ಹೋದನು. ಬೌದ್ಧ ಧರ್ಮದ ಅಧ್ಯಯನ ಮತ್ತು ಸಂಪ್ರದಾಯಗಳ ಕೇಂದ್ರವಾಗಿ ಶ್ರೀಲಂಕಾ ಬೆಳೆಯಿತು. ಇಲ್ಲಿ ಒಂದು ಸಣ್ಣ ಅನುಮಾನಕ್ಕೆ ಅವಕಾಶವಾಗುತ್ತಿದೆ. ಅದೆಂದರೆ; ತತ್ವಶಾಸ್ತ್ರವಾಗಿ ವರ್ಗೀಕರಿಸಲ್ಪಟ್ಟಿದ್ದ ಪ್ರಾರಂಭಿಕ ಬೌದ್ಧಧರ್ಮ ಅಶೋಕನ ಪ್ರಭಾವದಿಂದ ಅದು ಮತಧರ್ಮದ ಅರ್ಥಪಡೆಯಿತೆ? ಎನ್ನುವುದು. ಅಂದರೆ ವಿಚಾರದ ಅರ್ಥ ಕಡಿಮೆಯಾಗಿ ಶುಷ್ಕ ಆಚರಣೆಯ ಅರ್ಥದ ಕಡೆಗೆ ಸಾಗಿತು ಎನ್ನುವುದು. ಅದಕ್ಕೇ ಇರಬೇಕು; ಬುದ್ದ ‘ಪ್ರಜ್ಞೆ’ಗೆ ಮಹತ್ವ ನೀಡಿದ್ದುದು.

ಬುದ್ಧನಿಗೆ ಸಂಬಂಧಿಸಿದ ಸ್ಥಳಗಳನ್ನು ಅಶೋಕ ಸಂದರ್ಶಿಸಿದ. ಕಲಾತ್ಮಕ ಸ್ಮಾರಕಗಳಾದ ಬೌದ್ಧ ಸ್ಥೂಪಗಳನ್ನು, ಭಿಕ್ಕುಗಳು ತಂಗುವ ತಾಣಗಳನ್ನು ಆತ ನಿರ್ಮಾಣ ಮಾಡಿದ. ಇಂಡಿಯಾದ ವಾಯುವ್ಯ ಪ್ರಾಂತ್ಯದ ರಾಜಧಾನಿ ‘ಸಗಲ’ (ಈಗಿನ ಸಿಯಾಲ್ ಕೋಟ್) ದಲ್ಲಿದ್ದ ರಾಜ ‘ಮಿಳಿಂದ’ನಿಗೆ ಶಿಕ್ಷಣದಲ್ಲಿ ಆಸಕ್ತಿ ಇದ್ದಿದ್ದರಿಂದ; ಬೌದ್ಧ ಭಿಕ್ಕುಗಳಲ್ಲಿ ಶಿಕ್ಷಣ ತಜ್ಞನೆಂಬ ಖ್ಯಾತಿ ಹೊಂದಿದ್ದ ‘ನಾಗಸೇನ’ ನೊಂದಿಗೆ ಆ ವಿಷಯವಾಗಿ ಚರ್ಚಿಸಿದ್ದ. ಮಿಳಿಂದನ ಆ ಚರ್ಚೆಗಳು ‘ರಾಜ ಮಿಳಿಂದನ ಪ್ರಶ್ನೆಗಳು’ ಎನ್ನುವ ಹೆಸರಿನಿಂದ ಪ್ರಖ್ಯಾತವಾಗಿವೆ. ‘‘ಬೌದ್ಧ ಧರ್ಮೀಯನೊಬ್ಬನ ಪ್ರೇಮ ಪ್ರಕರಣದ ಚರಿತ್ರೆ ಮಿಳಿಂದನ ಸಾವಿನ ಹಿಂದೆಯೇ ಹುಟ್ಟಿಕೊಂಡಿತು.’’ ಇದೂ ಒಂದು ವಿಪರ್ಯಾಸ.

ಬೌದ್ಧ ಚಳುವಳಿಯಲ್ಲಿನ ಬಿಗುವನ್ನು ಕಡೆಮೆ ಮಾಡುವ ಅಶೋಕನ ಪ್ರಯತ್ನಗಳು ಫಲಿಸಲಿಲ್ಲ. ಗೌತಮ ಬುದ್ಧನ ಜೀವಿತಾವಧಿಯಲ್ಲೇ ‘ಹೀನಾಯಾನ’, ‘ಮಹಾಯಾನ’ ಮತ್ತು ‘ತೇರಾವ’ ಪಂಥಗಳ ಬಗ್ಗೆ ಮುಂದಾಗಿಯೇ ಅರಿತಿದ್ದನು. ಶಿಷ್ಯರ ಅನಾದರಣೆಯಿಂದ ಬಹುವಾಗಿ ನೊಂದಿದ್ದನು. ಶ್ರೀಲಂಕಾದಲ್ಲಿ; ‘ಥೆರವದ’ (ಹಿರಿಯರ ಗೀತ) ಅಥವಾ ಕೆಲವು ವೇಳೆ ‘ಹೀನಾಯಾನ’ (ಪುಟ್ಟವಾಹನ) ಎನ್ನುವ ಹೆಸರಿನ ಒಂದು ಬೌದ್ಧ ಪಂಥ ಪ್ರಬಲವಾಯಿತು. ‘‘ಪಾಳೀ ಭಾಷೆಯಲ್ಲಿದ್ದ ಬೌದ್ಧಧರ್ಮದ ಹಳೆಯ ಕೃತಿಗಳನ್ನು ರಕ್ಷಿಸುತ್ತಾ; ಹೊಸ ತತ್ವಗಳನ್ನು ಸ್ವೀಕರಿಸುತ್ತಾ, ಬುದ್ದನ ದಾರಿಯಲ್ಲಿ ಸಾಗಿದ್ದೇವೆ’’ ಎಂದು ಹೀನಾಯಾನದವರು ಸಮರ್ಥಿಸಿಕೊಂಡರು. ಹೀನಾಯಾನ ಬೌದ್ಧಪಂಥ ‘ಆತ್ಮ’ನ ಅಸ್ತಿತ್ವವನ್ನು ತಿರಸ್ಕರಿಸುತ್ತದೆ. ಪ್ರಪಂಚ ಅಸ್ಥಿರ; ಅದರಲ್ಲಿನ ಎಲ್ಲಾ ರೂಪದ ಜೀವಿಗಳ ಅಸ್ತಿತ್ವ ಕಷ್ಟ ಮತ್ತು ದುಃಖದ ಪ್ರವಾಹ ನಿರಂತರ. ‘ನಿರ್ವಾಣ’ ಅದರ ಗುರಿ. ಹೀನಾಯಾನದವರೆಗೆ ‘‘ಬುದ್ಧ ಆಗಲೇ ನಿರ್ವಾಣ ಹೊಂದಿರುವುದರಿಂದ ಹಾಗೂ ಚಿರಶಾಂತಿಯನ್ನು ಪಡೆಯುತ್ತಿರುವುದರಿಂದ; ಬುದ್ಧ ಹುಟ್ಟಿಯೇ ಇಲ್ಲ.’’

ಬೌದ್ಧರು ವೇದ ಪ್ರಾಮಾಣ್ಯ, ಆತ್ಮದ ಅಮರತ್ವ, ದೇವರ ಅಸ್ತಿತ್ವವನ್ನು ನಂಬುವುದಿಲ್ಲವಾದುದರಿಂದ ನಾಸ್ತಿಕರು. ಕರ್ಮಫಲಗಳ ವಿತರಣೆಗೆ ದೇವರ ಅವಶ್ಯಕತೆ ಇಲ್ಲ ಎಂದು ಅವರು ಭಾವಿಸುತ್ತಾರೆ. ಹೀನಾಯಾನ ಬೌದ್ಧರ ಪ್ರಕಾರ; ಇಡೀ ಪ್ರಪಂಚವು ‘ಧರ್ಮ’ಗಳೆಂಬ ಮೂಲ ಘಟಕಗಳಿಂದ ಆಗಿದೆ. ಮನುಷ್ಯರಲ್ಲಿರುವ ಧರ್ಮಗಳನ್ನು ೧. ರೂಪಸ್ಕಂಧ ೨. ವೇದನಾ ಸ್ಕಂಧ ೩. ಸಂಜ್ಞಾಸ್ಕಂಧ ೪. ವಿಜ್ಞಾನ ಸ್ಕಂಧ ೫. ಸಂಸ್ಕಾರಸ್ಕಂಧ ಎಂದು ವಿಂಗಡಿಸಲಾಗಿದೆ. ಸ್ಕಂಧ ಎಂದರೆ ಗುಂಪು.

. ರೂಪಸ್ಕಂಧ : ಮಾನವನ ರಕ್ತಮಾಂಸಾದಿಗಳಿಂದಾದ ಸ್ಥೂಲ ಶರೀರ ಭೌತಾಣುಗಳ ಒಂದು ಗುಂಪು; ಜಡ ವಿಶ್ವವೂ ಬೌತಾಣುಗಳ ಒಂದು ಗುಂಪು. ಭೌತಾಣುಗಳ ಗುಂಪು ರೂಪಕ್ಕೆ ಕಾರಣವಾಗಿದೆ.

. ವೇದನಾ ಸ್ಕಂಧ : ಮನುಷ್ಯನಲ್ಲಿ ಅನೇಕ ವೇದನೆಗಳಿವೆ. ಅವನ್ನು ಸುಖ, ದುಃಖ ಮತ್ತು ವಿಷಾದ ಎಂದು ಮೂರು ಗುಂಪು ಮಾಡಿದೆ. ಈ ಮೂರು ಗುಂಪುಗಳ ಒಂದು ಗುಂಪನ್ನು ವೇದನಾಸ್ಕಂಧ ಎನ್ನುತ್ತಾರೆ.

. ಸಂಜ್ಞಾಸ್ಕಂಧ : ಮನುಷ್ಯನಲ್ಲಿ ಆಲೋಚನೆ, ಪ್ರಶ್ನೆ, ಸಂದೇಹ, ವಸ್ತುಗಳ ಬಗೆಗಿನ ಪರಿಕಲ್ಪನೆ ಮುಂತಾದ ಅನೇಕ ಸಂಜ್ಞೆಗಳು ಇವೆ. ಇವುಗಳ ಗುಂಪನ್ನು ಸಂಜ್ಞಾಸ್ಕಂಧ ಎನ್ನುತ್ತಾರೆ.

. ವಿಜ್ಞಾನ ಸ್ಕಂಧ : ಮನುಷ್ಯನಲ್ಲಿ ಇರುವ ವಿವಿಧ ವಸ್ತುಗಳ ಜ್ಞಾನವನ್ನು ವಿಜ್ಞಾನ ಸ್ಕಂಧ ಎನ್ನಲಾಗುತ್ತಿದೆ.

. ಸಂಸ್ಕಾರ ಸ್ಕಂಧ : ಮನುಷ್ಯನ ಭವಿಷ್ಯ ಜೀವನವನ್ನು ಆಸೆ-ಆಕಾಂಕ್ಷೆಗಳು, ನಿರ್ಧಾರ ಗಳು ರೂಪಿಸುತ್ತವೆ. ಜನ್ಮದ ಇಂತಹ ಸುಖ-ದುಃಖಗಳನ್ನು ಹಳೆಯ ಸಂಸ್ಕಾರಗಳು ನಿರ್ಧರಿಸುತ್ತವೆ. ಇಂತಹ ಸಂಸ್ಕಾರಗಳ ಗುಂಪನ್ನು ಸಂಸ್ಕಾರಸ್ಕಂಧ ಎನ್ನುತ್ತಾರೆ.

ಮನುಷ್ಯನೆಂದರೆ ಯಾರು? ಎನ್ನುವ ಪ್ರಶ್ನೆಗೆ ‘‘ಮೇಲಿನ ಐದೂ ಸ್ಕಂಧಗಳ ಒಂದು ಸ್ಕಂಧ’’ ಎಂದು ಹೀನಾಯಾನದಲ್ಲಿ ಪರಿಗಣಿಸಲಾಗಿದೆ. ಸಾವಿನಲ್ಲಿ ರೂಪಸ್ಕಂಧ ಬೇರೆ ಯಾದರೂ; ಉಳಿದ ನಾಲ್ಕೂ ಸ್ಕಂಧಗಳು ಒಟ್ಟಿಗೇ ಇರುತ್ತವೆ. ಸಂಸ್ಕಾರ (ಕರ್ಮಫಲ) ಸ್ಕಂಧದ ಪ್ರಕಾರ ಮುಂದಿನ ಜನ್ಮದಲ್ಲಿ ಮತ್ತೊಂದು ರೂಪಸ್ಕಂಧ (ಸ್ಥೂಲಶರೀರ) ಪ್ರಾಪ್ತವಾಗುತ್ತದೆ. ಈ ಎಲ್ಲ ಧರ್ಮಗಳನ್ನು ಪ್ರಸ್ತಾಪಿಸುತ್ತಿರುವುದಕ್ಕೆ ಮುಖ್ಯ ಕಾರಣ ವೆಂದರೆ; ದೇವರ ಸ್ಥಾನವನ್ನು ನಿರ್ಧರಿಸುವುದಕ್ಕಾಗಿ. ಈಗಿನ ಜನ್ಮವನ್ನೂ ಮುಂದಿನ ಜನ್ಮವನ್ನೂ ನಿರ್ಧರಿಸುವುದು ಧರ್ಮಗಳೇ ಆಗಿರುವುದರಿಂದ ದೇವರಿಗೆ ಸ್ಥಾನವೇ ಇಲ್ಲ. ಧರ್ಮಗಳಲ್ಲಿ ಯೋಚಿಸುವ ಶಕ್ತಿ, ಆಶಿಸುವ ಶಕ್ತಿ, ನಿರ್ಧರಿಸುವ ಶಕ್ತಿ, ಕರ್ಮಫಲವನ್ನು ನೀಡುವ ಶಕ್ತಿ, ಎಲ್ಲವೂ ಅಡಕವಾಗಿರುವುದರಿಂದ ಹಾಗೂ ಅವು ಕಾಲಕ್ರಮದಲ್ಲಿ ತಮ್ಮಷ್ಟಕ್ಕೆ ತಾವೇ ಫಲ ನೀಡುವುದರಿಂದ, ಅವುಗಳನ್ನು ನಿಯಂತ್ರಿಸಲು ಅವುಗಳನ್ನು ಮೀರಿದ ಒಬ್ಬ ದೇವರು ಎನ್ನುವುದು ಬೇಕಾಗಿಲ್ಲ. ಒಂದು ಸಂದರ್ಭ ಮನುಷ್ಯನೊಬ್ಬ ಯಾರಿಗೂ ತಿಳಿಯದಂತಹ ಒಂದು ಪಾಪ ಅಥವಾ ಪುಣ್ಯ ಕಾರ್ಯವನ್ನು ಮಾಡಬಹುದು; ಆದರೆ ಅದರ ಫಲವನ್ನು ಧರ್ಮಗಳಿಂದ (ಸಂಸ್ಕಾರ ಸ್ಕಂಧದಿಂದ) ತಪ್ಪಿಸಿಕೊಳ್ಳಲಾರ.

ಭೌದ್ಧಧರ್ಮದ ಮತ್ತೊಂದು ಕವಲು ಅಥವಾ ಪಂಥ ಎಂದರೆ ‘ಮಹಾಯಾನ’ (ದೊಡ್ಡ ವಾಹನ). ಈ ಪಂಥ ಈಶಾನ್ಯ ಇಂಡಿಯಾದಲ್ಲಿ, ರೂಪುಗೊಂಡಿತು. ಇದು ಮಾನವ ಬುದ್ಧನನ್ನು ವೈಭಕರಿಸಿ ಅಸಮಾನ್ಯಗೊಳಿಸುತ್ತದೆ. ಮಹಾಯಾನದ ಪ್ರಕಾರ ‘ದೇವತೆಗಳ ಪ್ರಾರ್ಥನೆಯಿಂದ ಲೋಕೋದ್ಧಾರಕ್ಕಾಗಿ ಬುದ್ಧ ಮಾನವರೂಪ ಪಡೆಯುತ್ತಾನೆ’; ಇಂತಹ ಬೋಧನೆಗಳು ಬುದ್ಧನ ಜನ್ಮದ ಬಗ್ಗೆ ಆಶ್ಚರ್ಯಪಡುವಂತಹ ಕತೆಗಳನ್ನು ಹುಟ್ಟುಹಾಕಿವೆ. ‘ಜಾತಕಮಾಲ’ ಎನ್ನುವ ಗ್ರಂಥದಲ್ಲಿ ಬುದ್ಧನ ನಾಲ್ಕು ನೂರು ಜನ್ಮ ಕಥೆಗಳನ್ನು ನಿರೂಪಿಸಿ ಬೌದ್ದ ಅನುಯಾಯಿಗಳಿಗೆ ಹಂಚಲಾಗಿದೆ. ಪಾಳಿ ಭಾಷೆಯ ಕೃತಿಯಾದ ‘ಮಹಾಪದಾನ ಸುತ್ತ’ವು ಬುದ್ಧನ ಜನ್ಮ-ಪುನರ್ಜನ್ಮಗಳ ಅಸಂಖ್ಯಾತ ಕಲ್ಪಿತ ಕಥೆಗಳನ್ನು ಹುಟ್ಟುಹಾಕಿದೆ. ಮತ್ತೊಂದು ಕೃತಿಯಾದ ‘ದೀರ್ಘ ನಿಕಾಯ’ವು ಸಪ್ತ ಬುದ್ಧರು ಅವತಾರ ಎತ್ತಿದ ಕಥೆ ಹೇಳುತ್ತದೆ. ಗೌತಮನೇ ಏಳನೆಯವನು. ‘‘ಈ ಹಿಂದೆ ಆರು ಜನ ಬುದ್ಧರು ಆಗಿ ಹೋದರು. ಈಗ ನಾನು ಏಳನೆಯವನಾಗಿ ಬಂದಿದ್ದೇನೆ’’ ಎಂದು ಕೃತಿಯಲ್ಲಿ ಬುದ್ಧನ ಬಾಯಿಂದಲೇ ಹೇಳಿಸಲಾಗಿದೆ. ‘ದೀರ್ಘನಿಕಾಯ’ದ ಪ್ರಕಾರ ಮೊದಲ ಬುದ್ಧನ ಹೆಸರು ‘ವಿಪಸ್ಸಿ’. ಇವನು ತೊಂಭತ್ತೊಂದು ಯುಗಗಳಿಗೂ ಪೂರ್ವದಲ್ಲಿ ಹುಟ್ಟಿದ್ದ ‘ಅರಿಹಂತ’ (ಅರ್ಹಂತ=ಏರಿದವನು) ಎಂದು ಹೇಳಲಾಗಿದೆ. ‘ಸಿಂಹಗಜ್ಜನ ಸುತ್ತ’ ಎನ್ನುವ ಕೃತಿಯಲ್ಲಿ ಹೀಗೆ ಹೇಳುತ್ತದೆ. ‘‘ಅಧರ್ಮದ ದಿನಗಳು ಬಂದು ಹೋದನಂತರ ಪ್ರಬಲನಾದ ಚಕ್ರವರ್ತಿಯು ಹುಟ್ಟಿಬಂದು ಧರ್ಮ ಮತ್ತು ಸುಸ್ಥಿತಿಯನ್ನು ಇಡೀ ವಿಶ್ವದಲ್ಲಿ ನೆಲೆಗೊಳಿಸುತ್ತಾನೆ. ಅವನೇ ಮೈತ್ರೇಯ ಬುದ್ದ ಶ್ರೇಷ್ಟ ಅರ್ಹಂತ. ಪೂರ್ಣಬುದ್ಧ ಅಥವಾ ಸೂಕ್ತಾರ್ಥದಲ್ಲಿ ಅವನೇ ಬುದ್ಧ. ಈ ಮೈತ್ರೇಯನು ಜ್ಞಾನ ಮತ್ತು ಸತ್ ನಿಂದ ಕೂಡಿರುತ್ತಾನೆ. ಅವನು ಸದ್ಧರ್ಮವನ್ನು ಘೋಷಿಸುತ್ತಾನೆ’’ ಎನ್ನುವುದು ಮುಖ್ಯ. ಈ ಎಲ್ಲಾ ಕಥೆಗಳು ಸಂಸ್ಕೃತ ಭಾಷೆಯಲ್ಲಿ ಇರುವುದು ಒಂದು ಆಶ್ಚರ್ಯವಾದರೆ;  ತುಂಬಾ ವಿಚಾರಪೂರ್ಣವೂ ಮತ್ತು ವೈಜ್ಞಾನಿಕ ವಿಧಾನಗಳನ್ನೊಳಗೊಂಡ ಬೋಧನೆಗಳನ್ನು ಪ್ರಪಂಚಕ್ಕೆ ನೀಡಿದ ಬುದ್ಧನ ಹುಟ್ಟಿನ ಬಗ್ಗೆಯೇ ಕಟ್ಟುಕಥೆಗಳು ಹುಟ್ಟಿಕೊಂಡದ್ದು ಇನ್ನೂ ಆಶ್ಚರ್ಯದ ಸಂಗತಿ. ಆದರೆ ಈ ಕಥೆಗಳೆಲ್ಲಾ ಬುದ್ಧನ ನಿರ್ವಾಣಾ ನಂತರ ಹಾಗೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅದರ ಅವನತಿಗೆ ಕಾರಣರಾದ ಕೆಲವು ಕುತಂತ್ರಿಗಳ ಸೃಷ್ಟಿ ಎಂದು ವಿಚಾರವಂತರು ತೀರ್ಮಾನಿಸಿ ವೈಚಾರಿಕತೆಗೆ ಗೌರವ ತಂದಿದ್ದಾರೆ. ಅಥವಾ ದಡ್ಡ ಬೌದ್ಧಾನುಯಾಯಿಗಳಿಂದಲೂ ಇಂತಹ ಸೃಷ್ಟಿ ನಡೆದಿರಬಹುದು. ಪೂರ್ವಾಶ್ರಮದ ವಾಸನೆಯೂ ಇದಕ್ಕೆ ಪ್ರಚೋದನೆ ನೀಡರಬಹುದು ಅಥವಾ ಪೂರ್ವಾಶ್ರಮದ ಬದ್ಧತೆಯೂ ಕಾರಣವಾಗಿರಬಹುದು.

ಮಹಾಯಾನ ಬೌದ್ಧರು ನಿರೀಶ್ವರವಾದೀ ಧರ್ಮ ಸಿದ್ಧಾಂತದಡಿಯಲ್ಲಿ ಅವತಾರವನ್ನು ಎತ್ತಿ ಹಿಡಿಯುವುದು ಕಷ್ಟಕರವಾಗಿತ್ತು. ಆದ್ದರಿಂದ ಅವರು ‘ತ್ರಿಕಾಯ’ (ಮೂರು ಶರೀರಗಳು) ಸಿದ್ಧಾಂತಕ್ಕೆ ಮೊರೆಹೊಕ್ಕರು. ಬುದ್ಧನ ಆ ಮೂರು ಶರೀರರೂಪಗಳೆಂದರೆ ‘ರೂಪಕಾಯ ಅಥವಾ ನಿರ್ಮಾಣಕಾಯ’, ‘ಸಂಭೋಗಕಾಯ’ ಮತ್ತು ‘ಧರ್ಮಕಾಯ’. ಸೃಷ್ಟಿಸಿಕೊಂಡ ಶರೀರವು ಮೊದಲನೆಯದಾದರೆ, ಆನಂದದಿಂದ ಉತ್ಪನ್ನವಾದುದು ಎರಡನೆಯದು. ಧರ್ಮವು ನೆಲೆಗೊಳ್ಳುವುದರಿಂದ ಉಂಟಾಗುವುದು ಧರ್ಮಕಾಯ. ಈ ತ್ರಿಕಾಯ ಸಿದ್ಧಾಂತವು ಚೀನ ಮತ್ತು ಜಪಾನಿನ ಬೌದ್ಧಧರ್ಮದಿಂದ ವಿಕಾಸಗೊಂಡಿದ್ದು ಎಂದು ಹೇಳಬಹುದು.

ಜ್ಞಾನಿಯಾದ ಬುದ್ಧನು ವಿಶ್ವವನ್ನು ಸೃಷ್ಟಿಸುವುದೂ ಇಲ್ಲ. ನಿಯಂತ್ರಿಸುವುದೂ ಇಲ್ಲ ಹಾಗೂ ಸಂಹರಿಸುವುದೂ ಇಲ್ಲ. ಬುದ್ಧನು ಭಕ್ತರಿಗೆ ಅನುಗ್ರಹ ನೀಡುವುದೂ ಇಲ್ಲ; ಪಾಪಿಗಳನ್ನು ಶಿಕ್ಷಿಸುವುದೂ ಇಲ್ಲ. ಆದುದರಿಂದ ಹೀನಾಯಾನ ಬೌದ್ದರು ಆಸ್ತಿಕರಲ್ಲ ಆದರೆ ಮಹಾಯಾನ ಬೌದ್ಧರು ಸೃಷ್ಟಿ, ಸ್ಥಿತಿ ಮತ್ತು ಲಯಕರ್ತನಾದ ದೈವವು ಯಾವುದೂ ಇಲ್ಲವೆಂದು ಸ್ಪಷ್ಟವಾಗಿ ಕಡ್ಡಿಮುರಿದಂತೆ ಹೇಳುತ್ತಾರೆ.

ಬೌದ್ಧಧರ್ಮ ಇಂಡಿಯಾದಲ್ಲಿ ಕ್ರಿ.ಪೂ.ಆರನೇ ಶತಮಾನದಲ್ಲಿ ಜನ್ಮ ತಳೆದರೂ; ಚೀನಾ ದೇಶವನ್ನು ಪ್ರವೇಶಿಸಲು ಸುಮಾರು ಆರುನೂರು ವರ್ಷಗಳೇ ಕಳೆದಿವೆ. ಕ್ರಿ.ಶ.ಒಂದನೇ ಶತಮಾನದಲ್ಲಿ ರೇಷ್ಮೆ ವ್ಯಾಪಾರಿಗಳ ಮೂಲಕ ಈ ಧರ್ಮ ಚೀನಾವನ್ನು ಪ್ರವೇಶಿಸಿದಾಗ ‘ಹನ್’ ಸಂತತಿ ಅಲ್ಲಿ ಪ್ರಮುಖವಾಗಿತ್ತು. ಹೀಗೆ ಆಮದಾದ ಬೌದ್ಧ ಧರ್ಮದ ಜೊತೆಯಲ್ಲಿ ಅದರ ಪಂಗಡಗಳಾದ ಹೀನಾಯಾನ ಮತ್ತು ಮಹಾಯಾನಗಳೂ ಪ್ರವೇಶ ಮಾಡಿದ್ದವು. ಆನಂತರ ಬೌದ್ಧಧರ್ಮದ ಕೆಲವು ಹೊಸಪಂಥಗಳು ಚೈನಾದಲ್ಲೇ ಜನ್ಮತಾಳಿದವು. ಅವುಗಳಲ್ಲಿ ‘ಟೆಯೆನ್ ಟಿಐ’ ಅಂದರೆ ‘ಸ್ವರ್ಗ ಲೋಕದ ಬೌದ್ಧಧರ್ಮ’ ಎನ್ನುವುದು ಒಂದು. ಇದು ಕ್ರಿ.ಶ.ಆರನೇ ಶತಮಾನದಲ್ಲಿ ‘ಚಿಹ್‌ಕಐ’ ಎನ್ನುವವನಿಂದ ಸ್ಥಾಪಿತವಾಯಿತು. ಇದು ಹೀನಾಯಾನ ಮತ್ತು ಮಹಾಯಾನಗಳೆರಡರ ಸತ್ವವನ್ನೂ ಗ್ರಹಿಸಿತ್ತು. ಸ್ವರ್ಗಲೋಕದ ಬೌದ್ಧಧರ್ಮ ‘ಧ್ಯಾನ’ ಮತ್ತು ‘ತತ್ವಜ್ಞಾನ’ಕ್ಕೆ ಒತ್ತು ನೀಡಿತ್ತು. ‘‘ಭೂಮಿಯ ಮೇಲೆ ಹುಟ್ಟಿದ ಒಳ್ಳೆಯ ಕಮಲದಂತೆ; ಬುದ್ಧ ವಿಶ್ವದ ಎಲ್ಲಾ ತತ್ವಗಳಿಗೆ ಕಾರಣ’’ ಎಂದು ಇದು ವೈಭಕರಿಸಿತು. ಬುದ್ಧನ ವಿಚಾರಗಳ ಹಂತಕ್ಕೇರಲು ಸ್ವರ್ಗ ಲೋಕದ ಬೌದ್ಧಧರ್ಮ ಮೂರು ಹಂತದ ಸತ್ಯಗಳ ಏಣಿಯನ್ನು ಕಲ್ಪಿಸಿತ್ತು. ‘‘ಭೌತಿಕ ಪ್ರಪಂಚದ ವಾಸ್ತವತೆ ಮತ್ತು ಮೌಲ್ಯಗಳನ್ನು ಒಪ್ಪುವವರಿಗೆ ‘ಸರಳಸತ್ಯ’ ಎಂಬುದಾಗಿ; ಗೊಂದಲದಲ್ಲಿರುವವರಿಗೆ ಇದಕ್ಕಿಂತ ಸ್ವಲ್ಪ ಉನ್ನತ ಮಟ್ಟದ ಸತ್ಯ ಹಾಗೂ ಇಹದ ಭೌತಿಕ ಪ್ರಪಂಚದಲ್ಲಿದ್ದು, ಆಧ್ಯಾತ್ಮಿಕ ಜೀವನ ನಡೆಸುತ್ತಾ ಬುದ್ಧನ ತತ್ವಗಳಲ್ಲಿನ ಸತ್ಯ ಗ್ರಹಿಸಲು ‘ಧ್ಯಾನ’ಮಾರ್ಗ ಹಿಡಿದವರಿಗೆ ಮೂರನೇ ಹಂತದ ಸತ್ಯವನ್ನು ಇದು ಒದಗಿಸುತ್ತದೆ.

‘ಚಿಂಗ್ ಟು’ ಅಂದರೆ ಪೂರ್ಣವಾಗಿ ‘ಭೂಮಿಯ ಮೇಲಿನ ಬೌದ್ಧಧರ್ಮ’ ಎನ್ನುವುದು ಮತ್ತೊಂದು ಪಂಥ. ಇದು ‘ಕೃತಿ’ಗಿಂತ ‘ನಂಬಿಕೆ’ಗೆ ಹೆಚ್ಚು ಒತ್ತು ಕೊಟ್ಟಿದೆ. ಇದನ್ನು ‘ಶ್ವೇತ ಕಮಲ ಸಮಾಜ’ ಎನ್ನುವ ಹೆಸರಿನಿಂದ ಕರೆಯಲಾಗಿದೆ. ಈ ಪಂಥ ಬುದ್ಧನನ್ನು ಅಮಿತಭ ಬುದ್ಧ’ ಎಂದು ಕರೆದಿದೆ.

ಕ್ರಿ.ಶ.ಎಂಟನೇ ಶತಮಾನದಲ್ಲಿ ಇಂಡಿಯಾದ ‘ತಾಂತ್ರಿಕ ಬೌದ್ಧಧರ್ಮ’ ಚೀನಾವನ್ನು ಪ್ರವೇಶಿಸಿ ‘ಚೆನ್ ಹೆನ್’ ಎನ್ನುವ ಹೆಸರಿನಿಂದ ಖ್ಯಾತಿ ಹೊಂದಿತು. ಮೋಡಿ, ಮಾಟ, ಮಂತ್ರ, ಯಂತ್ರ, ತಂತ್ರ, ಮಂಡಲ, ಪೀಡೆ ತೊಲಗಿಸುವ ಕರ್ಮಗಳು ಮತ್ತು ಸಂಸ್ಕಾರಗಳಿಗೆ ಇದು ಒತ್ತು ನೀಡಿತು. ಜೊತೆಗೆ ರೋಗ-ರುಜಿನಗಳನ್ನು ಗುಣಪಡಿಸುವ, ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳುವ ಬೌದ್ಧ ಸನ್ಯಾಸಿಗಳ ಬಗ್ಗೆಯೂ ಇದು ಒತ್ತು ನೀಡಿತು.

ಸೂರ್ಯೋದಯದ ನಾಡೆಂದೇ ಖ್ಯಾತಿ ಪಡೆದಿರುವ ಜಪಾನಿನಲ್ಲಿ ಬೌದ್ಧಧರ್ಮ ಕ್ರಿ.ಶ.ಆರನೇ ಶತಮಾನದಲ್ಲಿ ಕಾಲೂರಿತು. ಬುದ್ಧನ ಪ್ರತಿಮೆ ಇರುವ ಸುವರ್ಣಲೇಪಿತ ತಾಮ್ರದ ಪಟ ಹಾಗೂ ಬುದ್ಧನ ಬರಹಗಳಿರುವ ವಸ್ತುಗಳನ್ನು ಜಪಾನಿನ ಚಕ್ರವರ್ತಿ ‘ಕಿಮ್ಮೇಯಿ ಟೆನ್ನೋ’ ಕೊರಿಯಾ ದೇಶದ ರಾಜನಿಂದ ಪಡೆದಾಗಲೇ ಬೌದ್ಧಧರ್ಮ ಜಪಾನನ್ನು ಪ್ರವೇಶಿಸಿತ್ತು. ರಾಜಕುಮಾರ ‘ಶೊಟುಕೋ’ ಬೌದ್ಧಧರ್ಮವನ್ನು ಸ್ವೀಕರಿಸಿದನಂತರ ಈ ಧರ್ಮಕ್ಕೆ ಹೆಚ್ಚು ಪ್ರೋತ್ಸಾಹ ದೊರಕಿತು.

‘ಕುಕೈ’ ಅಥವಾ ‘ಕೊಬೊದೈಶಿ’ ಎನ್ನುವ ಜಪಾನೀಯ ಚೈನಾದ ಬೌದ್ಧ ವಿಹಾರ ವೊಂದರಲ್ಲಿ ಸ್ವಲ್ಪಕಾಲ ಕಳೆದು ಕ್ರಿ.ಪೂ.೮೦೭ರಲ್ಲಿ ಮರಳಿ ಜಪಾನಿಗೆ ಹಿಂದಿರುಗಿ ಬಂದು ‘ಶಿಂಗಾನ್ ಒಳಪಂಗಡ’ ಅಥವಾ ‘ಸೂತ್ರಗಳ ಒಳಪಂಗಡ’ ಎನ್ನುವ ಬೌದ್ಧಧರ್ಮದ ಒಂದು ಪಂಥವನ್ನು ಹುಟ್ಟು ಹಾಕಿದ. ಅದು ಪೂರ್ಣವಾಗಿ ತಾಂತ್ರಿಕ ಬೌದ್ಧ ಧರ್ಮವೇ ಆಗಿತ್ತು. ಸೂತ್ರಗಳನ್ನೆಲ್ಲಾ ತಂತ್ರಗಳ ಮೇಲೆ ದಾಖಲಿಸಲಾಗಿತ್ತು. ಸಂಕೇತಗಳ ಬಳಕೆ, ಧರ್ಮಾಚರಣೆಯ ‘ದೃಶ್ಯಗಳು ಮತ್ತು ಕಲೆ’ ಈ ಪಂಥವನ್ನು ಜನಪ್ರಿಯಗೊಳಿಸಿದವು.

‘ಕ್ವಾನ್ ಇನ್’ ಮತ್ತು ‘ಜಿಝೊ’ ಬೋಧಿಸತ್ವಗಳು ಅಲೆಮಾರಿಗಳಿಗೆ ಹಾಗು ಅವರ ಹೆಂಗಸರು ಮಕ್ಕಳಿಗೆ ಸೇವಾ ಹಸ್ತ ನೀಡಿದ್ದರಿಂದ ಜನಪ್ರಿಯವಾದವು. ಮಂತ್ರ ಮತ್ತು ತಂತ್ರಾಚರಣೆಗಳು ಸೇವೆಯ ಆಕರ್ಷಣೆಗೆ ಕಾರಣವಾಗಿದ್ದವು.

‘ಟೆನ್ ದೈಪಂಥ’ದಲ್ಲಿ ‘ಅಮಿದ ಬೌದ್ಧಧರ್ಮ’ ಒಂದು ಸಂರಕ್ಷಕ ಶಕ್ತಿ. ಬುದ್ಧನ ಸಹಾಯವಿಲ್ಲದೆ ಬಹಳ ಜನಕ್ಕೆ ಜ್ಞಾನೋದಯ ಸಾಧ್ಯವೆಂದು ಅವರು ಬೋಧಿಸಿದರು. ಬುದ್ಧ ಎಂದರೆ ಪ್ರಜ್ಞೆ. ಇಂತಹ ಪ್ರಜ್ಞೆಯೇ ಬೇಕಿಲ್ಲವೆಂದ ಮೇಲೆ ಸಂಬಂಧಿಸಿದವರು ಎಷ್ಟು ಉದಾರಿಗಳು ನೋಡಿ. ಅದಕ್ಕಾಗಿ ವ್ಯಕ್ತಿ ಶುದ್ಧತೆಯಲ್ಲಿ ಪುನರ್ಜನ್ಮವೆತ್ತಬೇಕೆಂದು ‘ಅಮಿದಬುದ್ಧ’ ಬೋಧಿಸಿದ. ‘‘ಮಾನವರು ತಮ್ಮ ದುಷ್ಟತನದ ಅಸಹಾಯಕತೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರರು’’ ಎಂದು ಅಮಿದ ಬೌದ್ಧಧರ್ಮದಲ್ಲಿ ಶ್ರದ್ಧೆಯಿದ್ದ ‘ಹೊನೆನ್’ ಎನ್ನುವ ಭಿಕ್ಕು ಅಭಿಪ್ರಾಯಪಟ್ಟಿದ್ದಾನೆ. ಹೊನೆನ್‌ನ ನಂಬಿಕೆಗಳನ್ನು ಪ್ರಚಾರ ಮಾಡುವ ಪ್ರಯತ್ನಗಳ ಫಲ ‘ಜೋಡೊ’ ಎನ್ನುವ ಮತ್ತೊಂದು ಪಂಥದ ಉದಯ.

‘‘ಶಿನ್ ರಾನ್’’ ಎನ್ನುವವನು ಹೊನೆನ್ ನ ಅನುಯಾಯಿ ಭಿಕ್ಷು. ಈತ ಸನ್ಯಾಸ ಸ್ವೀಕರಿಸುವಾಗ ಬ್ರಹ್ಮಚರ್ಯೆ ಕಾಪಾಡುವುದಾಗಿ ಮಾಡಿದ್ದ ಪ್ರತಿಜ್ಞೆಯನ್ನು ಮುರಿದು, ಮದುವೆಯಾಗಿ ಸಂಸಾರ ಸ್ವೀಕರಿಸಿದ್ದರಿಂದ; ಧರ್ಮದಿಂದ ಹೊರಹಾಕಲಾಯಿತು. ಆದುದರಿಂದ ಈತ ‘ಶಿನ್’ ಎನ್ನುವ ಮತ್ತೊಂದು ಪಂಥವನ್ನು ಹುಟ್ಟುಹಾಕಿದ. ಬೌದ್ಧಧರ್ಮ ಭಿಕ್ಕುಗಳು ಮದುವೆಯಾಗಿ ಸಂಸಾರಿಗಳಾಗುವುದರಿಂದ; ಧರ್ಮ ಜನತೆಯ ಹತ್ತಿರ ಹೋಗಿ ಅವರನ್ನು ಪ್ರಭಾವಗೊಳಿಸಬಹುದೆಂದು ‘ಶಿನ್ ’ ಪಂಥದ ಅನುಯಾಯಿಗಳು ವಾದಿಸಿದರು.

ಬುದ್ಧನ ಬೋಧನೆಗಳ ಪ್ರಸಾರದ ವ್ಯಾಪ್ತಿ ಹೆಚ್ಚಿದಂತೆಲ್ಲ; ಅವುಗಳಲ್ಲಿನ ಅರ್ಥಗಳು, ಅನುಷ್ಟಾನಗಳು ಕಾಲದಿಂದ ಕಾಲಕ್ಕೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಾ ಬಂದಿರುವುದನ್ನು ನಾವು ಮೇಲಿನ ನಿದರ್ಶನಗಳಿಂದ ಕಂಡುಕೊಳ್ಳಬಹುದು.

ಬೌದ್ಧಧರ್ಮ ಹುಟ್ಟಿದ ನೆಲದಲ್ಲೇ ನೆಲೆ ಕಳೆದುಕೊಂಡಿದ್ದಕ್ಕೆ ಅನೇಕ ಕಾರಣಗಳನ್ನು ಗುರ್ತಿಸಬಹುದು.

೧. ಒಂದು ಧರ್ಮ ಬೆಳೆಯಲು, ಉಳಿಯಲು ಅದರ ವಿಚಾರಗಳು ಮತ್ತು ತತ್ವಗಳು ಸರಳವೂ, ಸತ್ಯವೂ ಮತ್ತು ಜನಪರವೂ ಆಗಿರಬೇಕಾಗುತ್ತದೆ. ಬೌದ್ಧಧರ್ಮ ಸತ್ಯವೂ ಮತ್ತು ಜನಪರವೂ ಆಗಿದ್ದರೂ ಅದರ ತತ್ವಗಳೂ ಮತ್ತು ವಿಚಾರಗಳೂ ಪ್ರಜ್ಞೆಯನ್ನೇ ಪೂರ್ಣವಾಗಿ ಆಶ್ರಯಿಸಿ ಬೌದ್ದಿಕ ಮಟ್ಟದಲ್ಲೇ ಉಳಿದದ್ದು ಒಂದನೇ ಕಾರಣ.

೨. ಒಂದು ಧರ್ಮ ಬೆಳೆಯಲು, ಉಳಿಯಲು ರಾಜಾಶ್ರಯ ಬೇಕು. ಬೌದ್ಧಧರ್ಮಕ್ಕೆ ಅಶೋಕ ಚಕ್ರವರ್ತಿಯ ರಾಜಾಶ್ರಯ ದೊರಕಿದ್ದರಿಂದ ಪ್ರಾರಂಭದಲ್ಲಿ ಚೆನ್ನಾಗಿ ಬೆಳೆಯಿತು. ಆನಂತರ ನೆಲೆ ಕಳೆದುಕೊಂಡಿತು. ಇದು ಎರಡನೇ ಕಾರಣ. ಇದೇ ಕಾರಣದಿಂದಲೇ ಮತೀಯವಾದಿ ಸಂಘಟನೆಗಳು ಅಧಿಕಾರ ಹಿಡಿಯಲು ಈಗಲೂ ಪ್ರಯತ್ನಿಸುತ್ತಿರುವುದು.

೩. ಒಂದು ಮತ ಧರ್ಮದ ಹುಟ್ಟಿಗೆ ಒಬ್ಬ ವ್ಯಕ್ತಿ ಕಾರಣನಾದರೂ; ಅದನ್ನು ಸ್ವೀಕರಿಸಿ ಬೆಳೆಸಿ ಉಳಿಸುವವರು ಜನ.

ಬೌದ್ಧ ಧರ್ಮವನ್ನು ಒಪ್ಪಿ ಸ್ವೀಕರಿಸಿ ಬಂದವರು; ಅದುವರೆಗೆ ಹಿಂದುಗಳಾಗಿದ್ದ ಕೆಳಗಿನ ವರ್ಣದವರು. ಅನಕ್ಷರತೆ, ಅಜ್ಞಾನಗಳೇ ಪ್ರಧಾನವಾಗಿದ್ದು; ಜೊತೆಗೆ ವರ್ಣನೀತಿ ಮತ್ತು ಅಸ್ಪೃಶ್ಯತೆಯಿಂದ ನೊಂದಿದ್ದ ಹಿಂದುಗಳಿಗೆ ಬೌದ್ಧಧರ್ಮ ಒಂದು ಬೆಳಕಾಗಿ ಕಂಡಿದ್ದರೂ ಅದು ಒಂದು ‘ಪ್ರಜ್ಞೆ’ ಎನ್ನುವುದನ್ನು ಅರ್ಥಮಾಡಿ ಕೊಳ್ಳುವಲ್ಲಿ ಧರ್ಮವನ್ನು ಸ್ವೀಕರಿಸಿದ ಜನತೆ ಸೋತಿದ್ದರ ಜೊತೆಗೆ; ಪರಂಪರೆಯಿಂದ ಬಂದಿದ್ದ ಹಿಂದೂ ಧರ್ಮದ ಶ್ರದ್ಧೆಯನ್ನು ಪೂರ್ಣವಾಗಿ ಕಳೆದುಕೊಳ್ಳುವುದರಲ್ಲಿ ಸೋತಿದ್ದು ಮೂರನೆಯ ಕಾರಣವಾಗಿತ್ತು.

೪. ಇನ್ನು ಹಿಂದೂವಾದಿ ಪುರೋಹಿತಶಾಹಿ ಮತ್ತು ಧರ್ಮಗುರುಗಳ ಕುತಂತ್ರಗಳು, ದೌರ್ಜನ್ಯಗಳು ಮತ್ತು ದಾಳಿಗಳು ನಾಲ್ಕನೆಯ ಕಾರಣ.

ಹೀಗೆ ಕಾರಣಗಳನ್ನು ಪಟ್ಟಿಮಾಡುತ್ತಾ ಹೋಗಬಹುದು.

ಬುದ್ಧನ ಬೋಧನೆಗಳ ಸಂಕ್ಷಿಪ್ತ ರೂಪ

೧. ಅನಾತ್ಮವೆಲ್ಲವೂ ಅನಿತ್ಯ ಮತ್ತು ದುಃಖ.

೨. ನಿತ್ಯವಾದ ‘ಆತ್ಮ’ನೆಂದು ಹೇಳಬಹುದಾದ ಯಾವ ವಸ್ತುವೂ ಇಲ್ಲ.

೩. ‘ಆತ್ಮ’ ಎನ್ನುವ ಭಾವನೆ ಬರಿಯ ಒಂದು ಕಲ್ಪನೆ.

೪. ಶುದ್ಧವಾದ ‘ನಿರ್ವಾಣ’ ಮಾತ್ರ ಸತ್ಯವಾದುದು. ಉಳಿದದ್ದೆಲ್ಲ ಅನಿತ್ಯ ಮತ್ತು ದುಃಖ

೫. ‘ನಿರ್ವಾಣ’ ಎನ್ನುವುದು ಹುಟ್ಟು, ಮುಪ್ಪು, ರೋಗ, ಸಾವು, ಆಸೆ-ನಿರಾಸೆ ಯಾವುದೂ ಇಲ್ಲದ ಒಂದು ಪರಮಸ್ಥಿತಿ. ಎಲ್ಲಾ ದುಃಖಗಳ ಶೋಧದ ಸ್ಥಿತಿ ಇದು. ಇದೇ ಶಾಶ್ವತವಾದ ಮತ್ತು ಶ್ರೇಷ್ಠವಾದ ‘ನಿರ್ವಾಣ’.

೬. ‘ನಿರ್ವಾಣ’ವನ್ನು ಪಡೆಯಲು ‘ಶ್ರದ್ಧೆ’, ‘ಸಮಾಧಿ’ ಮತ್ತು ‘ಪ್ರಜ್ಞೆ’ ಇವು ಮುಖ್ಯ ಸಾಧನಗಳು.

೭. ‘‘ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ’’ ಇವುಗಳ ಬಗೆಗಿನ ಪೂಜ್ಯ ಭಾವವೇ ಶ್ರದ್ಧೆ.

೮.‘ಸಮಾಧಿ’ ಮನುಷ್ಯನ ಸಮಸ್ತ ಮಾನಸಿಕ ಅಸ್ತಿತ್ವ ಮತ್ತು ಅನುಭವದ ವಲಯಗಳನ್ನು ಒಳಗೊಂಡಿದೆ. ವಿಚಾರ ಮಾರ್ಗ ಮತ್ತು ನೇರವಾದ ನಡವಳಿಕೆ ಈ ಸ್ಥಿತಿಯ ಮುಖ್ಯ ಲಕ್ಷಣಗಳು.

೯. ‘ಪ್ರಜ್ಞೆ’ ಎಂದರೆ ವಿಚಾರ ಶಕ್ತಿಯಿಂದ, ಭಾವನೆಗಳ ಸಂಪರ್ಕದಿಂದ ಉಂಟಾಗುವ ಜ್ಞಾನ.

ಇವೇ ‘ನಿರ್ವಾಣ’ದ ಸಾಧನಗಳು. ಬುದ್ಧನು ಉಪದೇಶಿಸಿದ ಅಷ್ಟಾಂಗ ಮಾರ್ಗವನ್ನು ಅನುಸರಿಸಿದರೆ ನಿರ್ವಾಣ ಪ್ರಾಪ್ತವಾಗುತ್ತದೆ.