. ಬೌದ್ಧ ಧರ್ಮ

ಜೈನ ಧರ್ಮದಂತೆ; ಬೌದ್ಧಧರ್ಮವೂ ಹಿಂದೂ ಸಿದ್ಧಾಂತದ ತಿರಸ್ಕಾರವನ್ನು ಪ್ರತಿನಿದಿ ಸುತ್ತದೆ. ವೇದ ಸಂಸ್ಕಾರಗಳನ್ನು ಮತ್ತು ಪ್ರಾಣಿ ಬಲಿಯನ್ನು ತಿರಸ್ಕರಿಸಿದ್ದರಿಂದ ಸಂಪ್ರದಾಯ ಬದ್ಧ ಹಿಂದುಗಳು ಬುದ್ಧನನ್ನು ನಾಸ್ತಿಕನೆಂದು ಪರಿಗಣಿಸುತ್ತಾರೆ. ಆದರೆ ಅವನೊಬ್ಬ ಮುಕ್ತ ಚಿಂತಕ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.ಬೌದ್ಧಮತ ಸ್ಥಾಪಕ ಸಿದ್ಧಾರ್ಥ ಗೌತಮ (ಪಾಳಿ ಭಾಷೆಯಲ್ಲಿ ಸಿದ್ಧಟ್ಟ ಗೋತಮ). ಉತ್ತರ ಭಾರತಕ್ಕೆ ಹೊಂದಿಕೊಂಡಿರುವ ಈಗಿನ ನೇಪಾಳದ ಕಪಿಲವಸ್ತುವಿನಲ್ಲಿ ಕ್ರಿ.ಪೂ.೫೬೩ರಲ್ಲಿ ಜನಿಸಿದನು. ಇತ್ತೀಚಿನವರೆಗೆ ಕಪಿಲವಸ್ತು ನಗರದ ನೆಲೆ ತಿಳಿದಿರಲಿಲ್ಲ ಹಾಗೂ ಸಿದ್ಧಾರ್ಥ ಯಾವಾಗಲಾದರೂ ಬದುಕಿದ್ದನೇ ಎಂದು ಕೆಲವು ವಿದ್ವಾಂಸರು ಪ್ರಶ್ನಿಸಿಯೂ ಇದ್ದರು. ಪ್ರಾಚ್ಯವಸ್ತು ಇಲಾಖೆ ಕ್ರಿ.ಶ.೧೯೭೦ರಲ್ಲಿ ಮಾಡಿದ ಉತ್ಖನನ ಕಾರ್ಯದಿಂದ ಕಳೆದುಹೋಗಿದ್ದ ನಗರವನ್ನು ಪತ್ತೆಹಚ್ಚಲಾಯಿತು ಹಾಗೂ ಕ್ರಿ.ಪೂ.೫ ಮತ್ತು ೪ನೇ ಶತಮಾನಗಳ ಬೌದ್ಧ ಮತಕ್ಕೆ ಸಂಬಂಧಿಸಿದ ಕೆಲವು ವಸ್ತು ಅವಶೇಷಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಯಿತು. ಕಪಿಲವಸ್ತು ನಗರದ ನಿವೇಶನವನ್ನು ಮೊದಲು ಕ್ರಿ.ಪೂ.೮ನೇ ಶತಮಾನದಲ್ಲಿ ವಶಪಡಿಸಿಕೊಂಡು ಕ್ರಿ.ಶ.೪ನೇ ಶತಮಾನದವರೆಗೆ ಮುಂದುವರಿಸಲಾಯಿತೆಂದು; ಹೀಗೆ ವಶಪಡಿಸಿಕೊಂಡ ಅವಶೇಷಗಳಿಂದ ತಿಳಿದುಬಂದಿತು.

ಸಿದ್ಧಾರ್ಥ ಕ್ರಿ.ಪೂ.೪೮೩ರಲ್ಲಿ ದೇಹತ್ಯಾಗ ಮಾಡಿದಾಗ, ಆತನ ದೇಹವನ್ನು ಸುಡಲಾಯಿತು. ಒಂದು ದಂತಕತೆಯ ಪ್ರಕಾರ, ಎಂಟನೇ ಒಂದಂಶದಷ್ಟು ಆತನ ದೇಹಬೂದಿಯನ್ನು ಕಪಿಲವಸ್ತುವಿನಲ್ಲಿ ಬಿಟ್ಟು; ಉಳಿದದ್ದನ್ನು ಬೇರೆ ಬೇರೆ ಪವಿತ್ರ ಸ್ಥಳಗಳಿಗೆ ಕಳುಹಿಸಲಾಯಿತೆಂದು ತಿಳಿದುಬರುತ್ತದೆ. ಸಿದ್ಧಾರ್ಥನ ವಾಸ್ತವವಾದ ದೇಹದ ಬೂದಿ ಸಿಕ್ಕಿದೆಯೆ ಅಥವಾ ಇಲ್ಲವೇ ಎನ್ನುವುದನ್ನು ಕಂಡುಹಿಡಿಯಲಾಗಿಲ್ಲ; ಆದರೆ ಬೌದ್ಧಮತದ ಅನುಯಾಯಿಗಳ ದೇಹಬೂದಿಯ ಗಟ್ಟಿ ಆಧಾರಗಳನ್ನು ನಿಜವಾಗಲೂ ಕಂಡುಹಿಡಿಯಲಾಗಿದೆ. ಕೆಲವು ಆಧಾರಗಳು ಕ್ರಿ.ಪೂ.೫ನೇ ಶತಮಾನಕ್ಕೆ ಕೊಂಡೊಯ್ಯುತ್ತವೆ. ಈ ಆಧಾರಗಳು ಬುದ್ಧನ ಅಸ್ತಿತ್ವವನ್ನು ಸಾಧಿಸದಿದ್ದರೂ; ಕಪಿಲವಸ್ತು ಇದ್ದಿದ್ದರ ಬಗ್ಗೆ; ಆ ಮೂಲಕ ಬುದ್ಧನ ಜೀವಿತದ ಮಹತ್ವದ ಬಗ್ಗೆ ಹಾಗು ಆತನ ಮರಣಾನಂತರ ಕಪಿಲವಸ್ತು ಒಂದು ಪುಣ್ಯಕ್ಷೇತ್ರವಾಗಿ ಅವು ಆತನ ಹುಟ್ಟು, ಜೀವನ ಮತ್ತು ಸಾವಿನ ಬಗ್ಗೆ ಸಂಬಂಧವಿರಿಸಿಕೊಂಡದ್ದನ್ನು ತಿಳಿಸುತ್ತದವೆ.

ಸಿದ್ಧಾರ್ಥನ ಹುಟ್ಟನ್ನು ಸುತ್ತುವರೆದಿರುವ ದಂತಕತೆಗಳ ಬಗ್ಗೆ ಯಾವುದನ್ನು ಕೇಳಬೇಕು? ಯಾವುದನ್ನು ಬಿಡಬೇಕು? ಅಷ್ಟೊಂದು ಕತೆಗಳು! ತಮ್ಮ ಪ್ರಖಾಂಡ ಜ್ಞಾನ, ವೈಚಾರಿಕತೆ, ಸಜ್ಜನಿಕೆ, ಸರಳತೆ ಮತ್ತು ಆದರ್ಶ ಬದುಕಿನಿಂದ ಜಗತ್ತಿನ ಸಕಲ ಜನತೆಯ ಬದುಕಿಗೆ ಬೆಳಕಾದ ಎಲ್ಲ ಮಹನೀಯರ ಹುಟ್ಟನ್ನು ಸಾಮಾನ್ಯರು ವಿಸ್ಮಯ ಮತ್ತು ಅದೃಷ್ಟ ಎಂದು ಮಾನ್ಯಮಾಡುವ ಸರಳ ವಿಧಾನವೇ ದಂತಕತೆಯಾಗಿಸುವುದು. ಬುದ್ಧನ ವಿಷಯದಲ್ಲಿ ಆದದ್ದೂ ಇದೇ. ಸಿದ್ಧಾರ್ಥ ತನ್ನ ಇಪ್ಪತ್ತನೆಯ ಆಜು-ಬಾಜಿನ ವಯಸ್ಸಿ ನಲ್ಲಿ ಯುವರಾಜಪಟ್ಟವನ್ನು, ಕ್ಷತ್ರಿಯ ಕುಟುಂಬವನ್ನು (ಆತನ ತಂದೆ ಸಿದ್ದೋದನ ಸಖ್ಯ (ಶಾಖ್ಯ) ವಂಶದಲ್ಲಿನ ಒಬ್ಬ ಸಣ್ಣ ಸೇನಾನಾಯಕ ದೊರೆ) ಜೊತೆಯಲ್ಲಿ ತನ್ನ ಮಡದಿ ಮತ್ತು ಮಗುವನ್ನು; ಹೀಗೆ ಐಹಿಕ ಭೋಗವನ್ನು ತ್ಯಜಿಸಿ, ಮುಕ್ತಿಯನ್ನು ಯೋಚಿಸುತ್ತ, ಅರಸುತ್ತಾ ನಡೆದವನು.

ಸಿದ್ಧಾರ್ಥ ಪ್ರಾರಂಭದಲ್ಲಿ ವೈದಿಕರ ಬೋಧನೆಗಳನ್ನು ಪರೀಕ್ಷಿಸಿದ ಹಾಗೂ ಇಬ್ಬರು ಬ್ರಾಹ್ಮಣ ಸನ್ಯಾಸಿಗಳ ಶಿಷ್ಯನಾದ. ಆ ಸನ್ಯಾಸಿಗಳ ಅಥವಾ ವೈದಿಕ ಚಿಂತನಾಕ್ರಮದಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ತಾನು ಮನಗಂಡನಂತರ; ತನ್ನ ದೇಹದಂಡನೆ ಮತ್ತು ನಿಗ್ರಹದ ಮೂಲಕ ಜೈನಧರ್ಮದಲ್ಲಿನ ವೈರಾಗ್ಯವನ್ನು ಪರೀಕ್ಷಿಸಿದ. ಆ ಮಾರ್ಗವೂ ಸೋತಿತು. ಬೋಧಿವೃಕ್ಷದ ಕೆಳಗಿನ ತನ್ನ ಆರು ವರ್ಷಗಳ ನಿರಂತರ ತಪಸ್ಸಿನ ಫಲವಾಗಿ ಜ್ಞಾನೋದಯವಾಯಿತು. ತನ್ನ ತಪಸ್ಸಿನ ಅವಧಿಯಲ್ಲಿ ಸತ್ಯದ ಹುಡುಕಾಟವನ್ನು ತ್ಯಜಿಸಿ ಜೀವನವನ್ನು ಸವಿಯಬೇಕೆಂದು ಆಸೆ ಮತ್ತು ಸಾವಿನ ಸಂಕೇತವಾದ ಮಾಯೆ ಕಾಡಿತ್ತು ಹಾಗೂ ದೈಹಿಕ ಯಾತನೆಗೂ ಕಾರಣವಾಗಿತ್ತು. ಎಲ್ಲವನ್ನೂ ಸಹನೆಯಿಂದ ಸಹಿಸಿಕೊಂಡಿದ್ದರಿಂದ ಜ್ಞಾನೋದಯ (ಬೋಧಿ) ಉಂಟಾಯಿತು. ಇದು ಒಬ್ಬ ಸಾಧಕನಿಗಿರಬೇಕಾದ ಗುಣ. ಇಂದ್ರಯಾಸಕ್ತ ಯೋಚನೆಗಳು ಮತ್ತು ಆಸೆಗಳನ್ನು ಮನಸ್ಸಿನಿಂದ ತೊಳೆದುಹಾಕಿ ಆತ ‘ಜ್ಞಾನಿ’ ಅಥವಾ ‘ಪ್ರಾಜ್ಞ’ ಅಥವಾ ‘ಜಾಗೃತ’ ಆದ; ಹಾಗೂ ‘ತೃಪ್ತಿ’ ಮತ್ತು ‘ಅತೃಪ್ತಿ’ ರಹಿತ ಸ್ಥಿತಿಯನ್ನು ತಲುಪಿದ. ಭೂಮಿಯ ಮೇಲಿದ್ದುಕೊಂಡೇ ಆತ ಪುನರ್ಜನ್ಮದಿಂದ ಬಿಡುಗಡೆ ಹಾಗೂ ನಿರ್ವಾಣದ ಪೂರ್ವಾನುಭವಗಳನ್ನು ಪಡೆದು ಎರಡನ್ನೂ ಇಹದಲ್ಲೇ ಸಿದ್ದಿಸಿಕೊಂಡಿದ್ದ. ಆದುದರಿಂದ ಆತ ಬುದ್ಧನಾದ. ‘ಬುದ್ಧ’ ಎಂದರೆ ಜ್ಞಾನಿ. ಉಳಿದ ತನ್ನ ನಲವತ್ತೈದು ವರ್ಷಗಳ ಆಯಸ್ಸನ್ನು ‘ಬೋಧನೆಯಲ್ಲಿ’, ‘ತತ್ವ ಬೋಧನೆಯಯಲ್ಲಿ’ ಹಾಗೂ ‘ರಚನಾತ್ಮಕ ಯೋಚನೆಗಳಲ್ಲಿ ಕಳೆದ. ಆತ ತನ್ನ ಎಂಭತ್ತನೇ ವಯಸ್ಸಿನಲ್ಲಿ ಅಂದರೆ ಕ್ರಿ.ಪೂ.೪೮೩ರಲ್ಲಿ ದೇಹತ್ಯಾಗ ಮಾಡಿದ.

ಬುದ್ಧ ತನ್ನ ‘ಧ್ಯಾನ’ ಅಥವಾ ‘ತಪಸ್ಸಿನ’ ಅವಧಿಯಲ್ಲಿ ನಾಲ್ಕು ಪರಮಸತ್ಯಗಳನ್ನು ಕಂಡುಕೊಂಡ. ಅವುಗಳ ಮೂಲಕ ‘ನಿರ್ವಾಣ’ವನ್ನು ಅರ್ಥಮಾಡಿಕೊಳ್ಳಬಹುದು.

ಒಂದನೇ ಪರಮಸತ್ಯ : ಮನುಷ್ಯನ ಬದುಕಿನ ಗುಣ-ಲಕ್ಷಣಗಳನ್ನು ನೋವು ಮತ್ತು ದುಃಖದಿಂದ ವಿವರಿಸಬಹುದು. ‘‘ಹುಟ್ಟು ನೋವು, ಅವನತಿ ನೋವು, ಕಾಯಿಲೆ ನೋವು, ಸಾವು ನೋವು. ನಾವು ಇಷ್ಟಪಡದ ವಸ್ತುಗಳಿರುವುದು ಅಥವಾ ಘಟನೆಗಳು ಸಂಭವಿಸುವುದು ನೋವು. ನಾವು ಇಷ್ಟಪಡುವ ವಸ್ತುಗಳಿಂದ ಬೇರ್ಪಡುವುದು ಅಥವಾ ಘಟನೆಗಳು ಸಂಭವಿಸದಿರುವುದು ನೋವು ಅಥವಾ ಇಷ್ಟಪಡುವ ವಸ್ತುಗಳು ದೊರೆಯದಿರುವುದು ನೋವು’’ ಅಂದರೆ ಪ್ರತಿಯೊಂದು ಅಸ್ತಿತ್ವದ ಹಿಂದೆ ನೋವು ಅಥವಾ ದುಃಖ ಇದೆ ಎನ್ನುವ ಸತ್ಯವನ್ನು ಕಂಡುಕೊಂಡ.

ಎರಡನೇ ಪರಮಸತ್ಯ : ಮನುಷ್ಯನ ನೋವಿನ ಅಥವಾ ದುಃಖದ ಮೂಲ ಅವನ ‘ಆಸೆ’ ಮತ್ತು ಅಧಿಕಾರಕ್ಕಾಗಿ, ಆನಂದಕ್ಕಾಗಿ ಹಾಗೂ ಅಂತಸ್ತಿಗಾಗಿ ಇರುವ ‘ದುರಾಸೆ’, ‘ಆನಂದದ’, ‘ಅಸ್ತಿತ್ವದ’ ಮತ್ತು ‘ಅಭ್ಯುದಯ’ದ ಹೀಗೆ ಮೂರು ರೀತಿಯ ಹಸಿವುಗಳು ಮನುಷ್ಯನ ವಿಪತ್ತಿಗೆ ಕಾರಣವಾಗಿವೆ ಎನ್ನುವ ಸತ್ಯವನ್ನು ಕಂಡುಕೊಂಡ.

ಮೂರನೇ ಪರಮಸತ್ಯ : ಆಸೆಯ ಬಿಡುಗಡೆಯಿಂದ ಹಾಗೂ ಮೋಹರಹಿತವಾಗಿರುವುದರಿಂದ; ಮೂರು ರೀತಿಯ ಹಸಿವುಗಳಿಂದ ವಿಮೋಚನೆ ಹೊಂದಬಹುದು. ಎನ್ನುವ ಸತ್ಯವನ್ನು ಕಂಡುಕೊಂಡ.

ನಾಲ್ಕನೇ ಪರಮಸತ್ಯ : ಆಸೆಯನ್ನು ಬಿಡುವುದರಿಂದ ನೋವನ್ನು ನಿಲ್ಲಿಸಬಹುದು ಅಥವಾ ಕಡಿಮೆ ಮಾಡಿಕೊಳ್ಳಬಹುದು. ಆಸೆ ಮತ್ತು ನೋವು ಎರಡೂ ಒಂದಕ್ಕೊಂದು ಪೂರಕ ಮತ್ತು ಎರಡೂ ನೇರಪ್ರಮಾಣದಲ್ಲಿವೆ. ಅದಕ್ಕಾಗಿ ಅಷ್ಟಾಂಗ ಮಾರ್ಗವನ್ನು ಸೂಚಿಸಿದ.

ದುಃಖದಿಂದ ಮುಕ್ತಿ ಹೊಂದಲು ಬುದ್ಧ ಸೂಚಿಸಿದ ಅಷ್ಟಾಂಗ ಮಾರ್ಗಗಳು

. ಸರಿಯಾದ ದೃಷ್ಟಿ : ಮೇಲಿನ ನಾಲ್ಕು ಪರಮ ಸತ್ಯಗಳಲ್ಲಿನ ನಂಬಿಕೆಯೇ ಸರಿಯಾದ ನಂಬಿಕೆ.

. ಸರಿಯಾದ ಆಸೆ : ಅ. ವಿಷಯ ಲಂಪಟತನ ಮತ್ತು ವಿಪತ್ತನ್ನು ಹೆಚ್ಚಿಸುವ ಆಸೆಗಳ ಪರಿತ್ಯಾಗ.

ಆ. ಇತರರಿಗೆ ತೋರಿಸುವ ಆದರಾತಿಥ್ಯದ ನಿಜವಾದ ಪ್ರೇಮ.

ಇ. ಜೀವಿಗಳಿಗೆ ಹಿಂಸೆ ಮಾಡುವುದಿಲ್ಲವೆನ್ನುವ ತೀರ್ಮಾನ.

. ಸರಿಯಾದ ಮಾತು : ಇತರರ ಮನಸ್ಸಿಗೆ ನೋವುಂಟು ಮಾಡದ ಮಾತು.

. ಸರಿಯಾದ ನಡತೆ : ಸಕಲ ಜೀವಿಗಳಿಗೆ ತನ್ನ ಮಾತು ಮತ್ತು ಕೃತಿಯ ಮೂಲಕ ಪ್ರೀತಿ ವ್ಯಕ್ತಪಡಿಸುವುದು.

. ಸರಿಯಾದ ಬದುಕು : ಬೌದ್ಧಧರ್ಮದ ತತ್ವಗಳನ್ನು ಅಳವಡಿಸಿಕೊಂಡು, ಕಾಲವನ್ನು ಸದುಪಯೋಗಿಸಿಕೊಂಡು, ತನ್ನ ಸ್ವಶಕ್ತಿಯಿಂದ ಜೀವನ ನಿರ್ವಹಣೆಗಾಗಿ ದುಡಿಯುವುದು.

. ಸರಿಯಾದ ಪ್ರಯತ್ನ : ವಿವೇಕದ ಆಸೆಗಳು ಮತ್ತು ಸಂಬಂಧಗಳು ಅಥವಾ ಅವಿವೇಕದ ಆಸೆಗಳು ಮತ್ತು ಸಂಬಂಧಗಳ ಮಧ್ಯೆ ಇರುವ ವ್ಯತ್ಯಾಸಗಳನ್ನು ಗುರುತಿಸಲು ಬೇಕಾಗುವ ಮಾನಸಿಕ ಪ್ರಯತ್ನವನ್ನು ಸದಾ ವಿಸ್ತರಿಸಿಕೊಳ್ಳುವುದು.

. ಸರಿಯಾದ ಜಾಗೃತಿ ಸ್ಥಿತಿ : ಸಹಾಯದ ಉದ್ದೇಶಗಳನ್ನು ಗುರಿಯಾಗಿರಿಸಿಕೊಂಡ ಮನಸ್ಸಿನ ಶಿಸ್ತು.

. ಸರಿಯಾದ ಧ್ಯಾನ : ಅರ್ಹಂತ ಅಥವಾ ಜ್ಞಾನಿಯಾಗುವ ಮಾರ್ಗದಲ್ಲಿ ಪ್ರಗತಿಯ ಹಂತವೇ ಸಮಾಧಿ ಸ್ಥಿತಿ. ಈ ಸ್ಥಿತಿಯನ್ನು ಧ್ಯಾನದ (ಏಕಾಗ್ರತೆ) ಮೂಲಕ ತಲುಪಬಹುದು. ಇದು ಸಾವಿನಿಂಧ ನಿರ್ವಾಣಕ್ಕೆ ಸ್ಥಿತ್ಯಂತರ ಮಾಡಿ ಪುನರ್ಜನ್ಮವನ್ನು ಕೊನೆ ಮಾಡುವ ಒಂದು ಭರವಸೆ.

ನಿರ್ವಾಣವೇ ಗುರಿ; ಆಸ್ಥಿತಿಯನ್ನು ತಲುಪುವುದಕ್ಕೆ ಮುಂಚೆ ವ್ಯಕ್ತಿ ಸತ್ತರೆ, ಆ ವ್ಯಕ್ತಿ ಪುನರ್ಜನ್ಮ ಅಥವಾ ಇನ್ನೊಂದು ಜೀವಿಯ ರೂಪ ಪಡೆದು ಹುಟ್ಟಬೇಕಾಗುತ್ತದೆ. ಆದುದರಿಂದ ವ್ಯಕ್ತಿ ಮತ್ತೊಮ್ಮೆ ಜ್ಞಾನ ಪಡೆಯುವುದರ ಕಡೆಗೆ ಸಾಗಬೇಕಾಗುತ್ತದೆ. ವ್ಯಕ್ತಿ ಈ ಜನ್ಮದಲ್ಲಿ ಹೇಗೆ ಜೀವಿಸುತ್ತಾನೆನ್ನುವುದನ್ನು ಅವಲಂಬಿಸಿ ಮುಂದಿನ ಜನ್ಮ ರೂಪುಗೊಳ್ಳುತ್ತದೆ ಎನ್ನುವುದನ್ನು ಕರ್ಮದ ತತ್ವಗಳು ಬೋಧಿಸುತ್ತವೆ. ಆದುದರಿಂದ ವ್ಯಕ್ತಿಯ ಈಗಿನ ಬದುಕಿನ ಸ್ಥಿತಿಯ ಆಧಾರದ ಮೇಲೆ ಹಿಂದಿನ ಜನ್ಮವನ್ನು ಊಹಿಸಬಹುದು. ‘ಸುತ್ತ ನಿಪಾಟ’ ಅದನ್ನು ಈ ರೀತಿ ಇಡುತ್ತದೆ.

ಹುಟ್ಟಿನಿಂದ ಜಾತಿಯೆಂಬುದು ಇಲ್ಲ.

ಜಾತಿಯೆಂಬುದು ಅವನ ನಡತೆಯಿಂದ ನಿರ್ಧಾರವಾಗುತ್ತದೆ.

ಬ್ರಾಹ್ಮಣನೆನ್ನುವವನು ನಡತೆಯಿಂದ ಆದವನು.

ಶಿಷ್ಟ ಸಮಾಜದ ನಾಗರೀಕತೆ ಮತ್ತು ಸಂಸ್ಕೃತಿಗಳು ವಿಶ್ವಧರ್ಮದ ಹುಟ್ಟಿಗೆ ಕಾರಣವಾಗುತ್ತವೆ ಎನ್ನುವ ಅಭಿಪ್ರಾಯ ಇದೆ. ಬೌದ್ಧಧರ್ಮದ ವಿಷಯದಲ್ಲಿ ಇದು ಸತ್ಯವಾಗಿದೆ. ಬೌದ್ಧಧರ್ಮ ಒಂದು ಕ್ಲಾಸಿಕಲ್ ಧರ್ಮ ಹಾಗೂ ವಿಶ್ವಧರ್ಮವೂ ಹೌಧು. ಗೌತಮ ಬುದ್ಧನು ಸಾಮಾನ್ಯ ಜನತೆಯ ಮನಸ್ಸನ್ನು ಆಕರ್ಷಿಸುವುದಕ್ಕಾಗಲೀ, ಧರ್ಮದ ತತ್ವಗಳನ್ನು ಪ್ರಸಾರ ಮಾಡುವುದಕ್ಕಾಗಲೀ ಪವಾಡಗಳನ್ನು ಮಾಡಬಾರದೆಂದು ಕಟ್ಟಪ್ಪಣೆ ಮಾಡಿದ್ದನು. ಅವನ ಪ್ರಕಾರ ಜ್ಞಾನೋದಯಕ್ಕೆ ಧ್ಯಾನ ಬಹಳ ಮುಖ್ಯವಾದುದು. ಧ್ಯಾನವು ಪವಾಡ ಸದೃಶ ಶಕ್ತಿಯನ್ನು ಕೊಡುತ್ತದೆ. ಆದರೆ ಆತ ಸಿದ್ದಿಗಳನ್ನು ಉತ್ತೇಜಿಸುವುದಿಲ್ಲ. ‘‘ಓ ಬಿಕ್ಕುಗಳೇ ! ನೀವು ಜ್ಞಾನದ ಪ್ರಭೆಯನ್ನು ಹೊಂದುವುದಕ್ಕೆ ಮೊದಲು ಅತಿಮಾನುಷ ಶಕ್ತಿಯ ಪ್ರದರ್ಶನಕ್ಕೆ ತೊಡಗಬೇಡಿ. ಯಾರು ಅದನ್ನು ಮಾಡುತ್ತಾರೋ ಅವರು ದುಷ್ಟತೆಯ ಬಗ್ಗೆ ಅಳುಕುಳ್ಳವರಾಗುತ್ತಾರೆ. ಪವಾಡಗಳನ್ನು ಆಧರಿಸಿ ಜೀವನ ರೂಪಿಸಬೇಡಿ. ಎಂದೆಂದಿಗೂ ಇರುವ ಸನಾತನ ನಿಯಮದ ಮೇಲೆ ನೀವು ನಿಮ್ಮ ಬಾಳನ್ನು ರೂಪಿಸಿಕೊಳ್ಳಿ’’ ಎಂದು ಬುದ್ಧ ಹೇಳುತ್ತಾನೆ.

ಬುದ್ಧ ಪ್ರಾರಂಭಿಸಿದ ಸಂಘ ಅಥವಾ ಪಂಥದಿಂದ ಪ್ರಾರಂಭದಲ್ಲಿ ಆಕರ್ಷಿತರಾದವ ರೆಂದರೆ ಸಿದ್ಧಾರ್ಥನ ವರ್ಣದವರಾದ ಕ್ಷತ್ರಿಯರು; ಆನಂತರ ಬ್ರಾಹ್ಮಣರು ಮತ್ತು ಕೆಳಜಾತಿಯವರು. ಪ್ರಾರಂಬದಲ್ಲಿ ಪಂಥದ ಸದಸ್ಯರಾಗಿ ಬರೀ ಗಂಡಸರು ಮಾತ್ರ ಇದ್ದರು. ಆನಂತರ ಬ್ರಹ್ಮಚಾರಿಣಿಯರಾಗಿ ಮಹಿಳೆಯರನ್ನೂ ಸೇರಿಸಿಕೊಳ್ಳಲಾಯಿತು. ಆದರೆ; ಮಹಿಳಾ ಸನ್ಯಾಸಿನಿಯರ ಸ್ಥಾನ-ಮಾನ ಪುರುಷ ಸನ್ಯಾಸಿಗಳಿಗಿಂತ ಕೆಳಹಂತದಲ್ಲಿತ್ತು. ಈ ರೀತಿ ಸ್ತ್ರೀಯರನ್ನು ನಡೆಸಿಕೊಂಡ ಕ್ರಮದ ಮುಖ್ಯ ಉದ್ದೇಶ ಅವರನ್ನು ಬ್ರಹ್ಮಚರ್ಯೆಯಿಂದ ದೂರವಿಡುವುದು ಆಗಿತ್ತು. ಇಲ್ಲಿ ಪವಿತ್ರ-ಅಪವಿತ್ರ ಕಲ್ಪನೆಗೆ ಅವಕಾಶವೇ ಇರಲಿಲ್ಲ. ಅದೇನಿದ್ದರೂ ಪ್ರಕೃತಿ ನಿಯಮಕ್ಕೆ ಸಂಬಂಧಿಸಿದ್ದಾಗಿತ್ತು. ‘ಮಹಾಪರಿನಿಬ್ಬಾಣ ಸುತ್ತ’ದಲ್ಲಿನ ಈ ಪ್ರಸಂಗವನ್ನು ಅವಲೋಕಿಸಿದರೆ ಅರ್ಥವಾಗುತ್ತದೆ.

ಆನಂದ : ‘‘ನಾವು ಮಹಿಳೆಯರೊಂದಿಗೆ ಹೇಗೆ ನಡೆದುಕೊಳ್ಳಬೇಕು’’?

ಬುದ್ಧ : ‘‘ಅವರನ್ನು ತಲೆಯೆತ್ತಿ ನೋಡದಂತೆ, ಆನಂದ.’’

ಆನಂದ : ‘‘ನಾವು ಅವರನ್ನು ನೋಡಲೇಬೇಕಾಗಿ ಬಂದಾಗ, ನಾವೇನು ಮಾಡಬೇಕು’’?

ಬುದ್ಧ : ‘‘ಅವರೊಂದಿಗೆ ಮಾತನಾಡದಂತೆ, ಆನಂದ.’’

ಆನಂದೊ: ‘‘ಅವರು ನಮ್ಮೊಂದಿಗೆ ಮಾತುಕತೆಗೆ ತೊಡಗಿದರೆ; ಸ್ವಾಮಿ ನಾವೇನು ಮಾಡಬೇಕು?

ಬುದ್ಧ : ‘‘ಪಕ್ಕದಲ್ಲಿ ಜಾಗೃತಿಯನ್ನಿಟ್ಟುಕೋ; ಆನಂದ.’’

ಗಂಡು-ಹೆಣ್ಣುಗಳಿಬ್ಬರೂ ಬ್ರಹ್ಮಚರ್ಯೆ ಪಾಲಿಸುವುದು; ಅದೂ ಮಾನವ ಸಂತತಿಯ ಉಳಿವು ಕಷ್ಟವಾಗಿದ್ದ ಹಾಗೂ ಅದೂ ಕಡಿಮೆ ಇದ್ದ ಕಾಲದಲ್ಲಿ ಎಷ್ಟು ಸರಿ? ಎನ್ನುವ ಪ್ರಶ್ನೆಗೆ ಬುದ್ಧನ ವಿಚಾರ ಬೆಳಕು ಚೆಲ್ಲುತ್ತದೆ.

ಬೌದ್ಧ ಧರ್ಮದಲ್ಲಿ ಪಾಪ-ಪುಣ್ಯಗಳ ಪರಿಕಲ್ಪನೆ, ಯಜ್ಞ-ಯಾಗಾದಿಗಳು ಮತ್ತು ಅವುಗಳ ಫಲಗಳು ಮುಂತಾದವುಗಳ ಬಗ್ಗೆ ಅವಕಾಶವಿಲ್ಲ. ಅಹಿಂಸಾಗುಣ ಮತ್ತು ಅದರ ಸತ್ಫಲಗಳ ಮೇಲೆ ಒತ್ತು ನೀಡಲಾಗಿದೆ. ಇದು ಅಹಿಂಸೆಯನ್ನು ಸಾಮಾನ್ಯ ನಿತ್ಯಧರ್ಮ ಎಂದು ಭಾವಿಸಿದೆ. ಇದು ಕರ್ಮ ಮತ್ತು ಪುನರ್ಜನ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದೆ. ಬೌದ್ಧಧರ್ಮದಲ್ಲಿ ದೇವರ ಕಲ್ಪನೆಗೆ ಅವಕಾಶವಿಲ್ಲದಿರುವುದರಿಂದ; ಮನುಷ್ಯ ಪಾಪಗಳಿಗೆ ನರಕಾದಿ ಶಿಕ್ಷೆಗಳನ್ನು ಹಾಗೂ ಪುಣ್ಯಗಳಿಗೆ ಸ್ವರ್ಗಾದಿ ಸುಖಾನುಭವಗಳನ್ನು ಕೊಡುವ ವ್ಯವಸ್ಥೆ ಇಲ್ಲ. ಇಲ್ಲಿ ಮನುಷ್ಯರು ಮಾಡುವ ಪಾಪಕೃತ್ಯಗಳು ಹಾಗೂ ಪುಣ್ಯಕರ್ಮಗಳು ವೈಜ್ಞಾನಿಕ ನಿಯಮಗಳಂತೆ ಸ್ವಾಭಾವಿಕ ನಿಯಮಗಳು. ಈ ನಿಯಮಗಳು ತಮ್ಮ ತಮ್ಮ ದುಷ್ಪರಿಣಾಮ ಹಾಗೂ ಸತ್ಪರಿಣಾಮಗಳನ್ನು ತಾವೇ ಉಂಟುಮಾಡುತ್ತವೆ. ಅವುಗಳಿಂದ ಯಾರಿಗೂ ಬಿಡುಗಡೆಯಿಲ್ಲ. ಅವುಗಳ ಕರ್ಮಫಲಗಳ ಅನುಭೋಗ ಮುಗಿದ ಮೇಲೆಯೇ ಬಿಡುಗಡೆ.

ನಾವು ನಮ್ಮ ಶರೀರ, ಮಾತು ಮತ್ತು ಮನಸ್ಸು; ಈ ಮೂರರಿಂದಲೂ ಮಾಡುವ ಹಿಂಸೆಯು ಪಾಪಕರ್ಮ ಎನಿಸಿಕೊಳ್ಳುತ್ತದೆ. ಸಂನ್ಯಾಸಿ (ಭಿಕ್ಕು) ಅಥವಾ ಸಂನ್ಯಾಸಿನಿ (ಭಿಕ್ಕುನಿ) ಹತ್ಯ ಮಹಾಪಾಪವೆನಿಸುತ್ತದೆ. ಬೌದ್ಧಧರ್ಮದಲ್ಲಿ ಪಾಪಕರ್ಮಗಳಿಗಾಗಿ ಸ್ವಯಂಕೃತ ದೇಹದಂಡನೆ, ದಂಡನಾತ್ಮಕ ಕಠಿಣ ವ್ರತಗಳು ಮುಂತಾದವಕ್ಕೆ ಅವಕಾಶವಿಲ್ಲ. ಆದರೆ ‘ದಶಕುಶಲ ಕಮ್ಮ’ (ಪಾಲಿ)ಗಳೆಂಬ ಹತ್ತು ಪುಣ್ಯಕರ್ಮಗಳನ್ನು ವಿಧಿಸಲಾಗಿದೆ.

೧. ದಾನ ೨. ಶೀಲ (ನೈತಿಕ ಆಚರಣೆ) ೩. ಭಾವನಾ (ಧ್ಯಾನ) ೪. ಅಪಚಾಯನ (ಹಿರಿಯರಿಗೆ ಆದರ ತೋರಿಸುವುದು) ೫. ವೆಯ್ಯಾವಚನಿ (ಹಿರಿಯರ ಅವಶ್ಯಕತೆಗಳನ್ನು ಪೂರೈಸುವುದು) ೬. ಪತ್ತಿದಾನ (ಸ್ವಆರ್ಜಿತ ಪುಣ್ಯವನ್ನು ಬೇರೆಯವರಿಗೆ ದಾನ ಮಾಡುವುದು) ೭. ಪತ್ತಾನುಮೋದನ (ಇತರರ ಪುಣ್ಯಸಂಪಾದನೆಯನ್ನು ಕಂಡು ಸಂತೋಷಪಡುವುದು) ೮.ಧಮ್ಮಸವಣ (ಧರ್ಮ ಶ್ರವಣ) ೯. ಧಮ್ಮಾದೇಸನ (ಧರ್ಮೋಪದೇಶ) ೧೦. ದಿತ್ಥಿಜ್ಜುಕಮ್ಮ (ಸರಿಯಾದ ನಂಬಿಕೆಗಳನ್ನು ಹೊಂದುವುದು). ಬೌದ್ಧಧರ್ಮದಲ್ಲಿ ಆತ್ಮ ಶಾಶ್ವತವಾದದ್ದು. ದುಃಖ ನಿವಾರಿಸಲಾಗದ್ದು ಎಂದು ಯೋಚಿಸುವ ಪ್ರತಿ ಕ್ಷಣವೂ ಅಪವಿತ್ರವಾಗುತ್ತದೆ.

ಸ್ಪಷ್ಟವಾಗಿ ಹೇಳಬೇಕೆಂದರೆ; ಹೊಸ ಪಂಥಕ್ಕೆ ಮಾರ್ಗಸೂಚಿಗಳು ಬೇಕಿದ್ದವು. ಅವು ‘ದಮ್ಮ’ ಮತ್ತು ‘ವಿನಯ’ ರೂಪಗಳಲ್ಲಿ ಬಂದಿವೆ. ‘ದಮ್ಮ’ ಎಂದರೆ ನಿಯಮ ಅಥವಾ ಸತ್ಯ ಅಥವಾ ಧರ್ಮತತ್ವ. ‘ವಿನಯ’ ಎಂದರೆ ಕಟ್ಟುಪಾಡು. ‘ಸಂತೃಪ್ತಿ’ ಮತ್ತು ‘ವಿರಕ್ತಿ’ (ವೈರಾಗ್ಯ)ಗಳು ಎರಡು ಅಂತ್ಯಗಳು. ಈ ಅಂತ್ಯಗಳ ಮಧ್ಯಮ ಮಾರ್ಗಕ್ಕಾಗಿ ಹತ್ತು ನಿಯಮಗಳನ್ನು ಸೂಚಿಸಲಾಯಿತು.

೧. ಜೀವನ ನಾಶವನ್ನು ತಡೆಯುವ ಅಹಿಂಸಾ ತತ್ವವನ್ನು ಅಳವಡಿಸಿಕೊಳ್ಳುವುದು.

೨. ನೀಡಿದ್ದನ್ನು ಬಿಟ್ಟು ಮತ್ತೇನನ್ನೂ ತೆಗೆದುಕೊಳ್ಳಬಾರದು. (ಕದಿಯಬಾರದು)

೩. ಅನೈತಿಕತೆಯನ್ನು ಬಿಡುವುದು.

೪. ಸುಳ್ಳು ಹಾಗೂ ಮೋಸವನ್ನು ತ್ಯಜಿಸುವುದು.

೫. ಮತ್ತು ಬರಿಸುವ ವಸ್ತುಗಳ ಸೇವನೆಯನ್ನು ಬಿಡುವುದು.

೬. ಮಿತವಾದ ಆಹಾರ ಸೇವನೆ ಅದೂ ಮಧ್ಯಾಹ್ನದ ನಂತರ.

೭. ನೃತ್ಯ, ಹಾಡುಗಾರಿಕೆ, ಸಂಗೀತ ಮತ್ತು ನಾಟಕ ಮುಂತಾದವುಗಳಿಂದ ದೂರವಿರುವುದು ಹಾಗೂ ಬಿಡುವುದು.

೮. ಒಡವೆ, ಹಾರ, ಸುಗಂಧ ಮುಂತಾದವುಗಳ ಉಪಯೋಗವನ್ನು ಬಿಡಬೇಕು.

೯. ಮೆತ್ತನೆಯ ತಲ್ಪಗಳ ಮೇಲೆ ಕೂರುವುದಾಗಲೀ, ಮಲಗುವುದಾಗಲೀ ಮಾಡಬಾರದು.

೧೦. ಬೆಳ್ಳಿ ಅಥವಾ ಬಂಗಾರವನ್ನು ಪಡೆಯಬಾರದು.

ಬೌದ್ಧ ತತ್ವಾನುಯಾಯಿಗಳು ಮೇಲಿನ ನಿಯಮಗಳನ್ನು ತಮ್ಮ ಜೀವನದಲ್ಲಿ ಪಾಲಿಸುವುದು ಒಳಿತು, ಆದರೆ ಭಿಕ್ಕುಗಳು ಅಥವಾ ಭಿಕ್ಕುನಿಯರು ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ನಿರ್ದೇಶನವಿದೆ.

‘‘ಯಾವೊಂದು ವಸ್ತವೂ ಒಂದು ಕ್ಷಣಕ್ಕಿಂತ ಹೆಚ್ಚು ಸ್ಥಿರವಾಗಿರುವುದಿಲ್ಲ’’ ಎನ್ನು ವುದನ್ನು ಬೌದ್ಧ ದರ್ಶನವು ಪ್ರತಿಪಾದಿಸಿದ್ದರಿಂದ; ಅದನ್ನು ಭೌತವಾದಿ ಮತ್ತು ಕ್ಷಣಿಕವಾದಿ ಎಂದು ಪರಿಗಣೀಸಲಾಯಿತು. ಪ್ರಯುಕ್ತ ಬುದ್ಧ ಅಂದಿನ ಆಡಳಿತದ ಅವಕೃಪೆಗೆ ಒಳಗಾಗಬೇಕಾಯಿತು.

ಯಾವ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಹೇಳಲು ಸಾಧ್ಯವಿಲ್ಲವೋ ಅವನ್ನು ‘ಅಕಥನೀಯ’ ಎಂದು ಬುದ್ಧ ಕರೆದ. ಅಂದರೆ ಕೇಳಬಾರದ ಪ್ರಶ್ನೆಗಳು ಎನ್ನುವ ಅರ್ಥ. ಕೇಳಬಾರದ್ದು ಮತ್ತು ಹೇಳಲಾಗದದು ಅರ್ಥದ ಹತ್ತು ಅಕಥನೀಯಗಳನ್ನು ಬುದ್ಧ ಪಟ್ಟಿಮಾಡಿದ್ದಾನೆ.

೧. ಈ ಲೋಕ ನಿತ್ಯವೆ?

೨. ಈ ಲೋಕ ಅನಿತ್ಯವೆ?

೩. ಜೀವ ಮತ್ತು ಶರೀರ ಒಂದೆಯೆ?

೪. ಜೀವ ಮತ್ತು ಶರೀರ ಬೇರೆ ಬೇರೆಯೆ?

೫. ಸತ್ತನಂತರ ಮನುಷ್ಯರು ಮುಕ್ತಿ ಹೊಂದುತ್ತಾರೆಯೆ?

೬. ಸತ್ತನಂತರ ಮುಕ್ತಿ ಇಲ್ಲವೆ?

೭. ಸತ್ತನಂತರ ಮುಕ್ತಿ ಇದೆಯೆ?

೮. ಸತ್ತನಂತರ ಮುಕ್ತಿ ಇಲ್ಲದೆ ಇರುತ್ತದೆಯೆ?

೯. ಸತ್ತನಂತರ ಮುಕ್ತರಾಗುವುದಿಲ್ಲವೆ?

೧೦. ಸತ್ತನಂತರ ಮುಕ್ತರಾಗುವುದು ನಿಷೇಧವಾಗುತ್ತದೆಯೆ?

ಬೌದ್ಧ ಧರ್ಮದ ‘ಅಕಥನೀಯ’ ವೈದಿಕ ಧರ್ಮದ ಮೇಲೆ ಬಲವಾದ ತಾರ್ಕಿಕ ಹೊಡೆತವನ್ನು ನೀಡಿತ್ತು. ಇದೇ ಕಾರಣಕ್ಕಾಗಿಯೇ ಬೌದ್ಧ ಧರ್ಮವನ್ನು ವೈದಿಕರು ವಿರೋಧಿಸಿದ್ದು ಮತ್ತು ವಿರೋಧಿಸುತ್ತಿರುವುದು. ಬುದ್ದ ಯಾವುದನ್ನೂ ಪರಮ ಸತ್ಯವೆಂದು ಒಪ್ಪಲಿಲ್ಲ. ಆತ್ಮನನ್ನೇ ಆತ ಒಪ್ಪಲಿಲ್ಲ. ಇನ್ನು ಪರಮಾತ್ಮನನ್ನು ಒಪ್ಪುವುದು ಎಲ್ಲಿಂದ ಬಂತು? ಆದುದರಿಂದ ಬುದ್ಧನ ಸಿದ್ಧಾಂತ ಒಂದು ‘ಅನಾತ್ಮವಾದಿ’ ಸಿದ್ಧಾಂತ. ಬುದ್ಧನ ದರ್ಶನದಲ್ಲಿ ವಿಚಾರ ಸ್ವಾತಂತ್ರ್ಯಕ್ಕೆ ಸಾಕಷ್ಟು ಅವಕಾಶವಿತ್ತು.

ಬೌದ್ಧ ಭಿಕ್ಕುಗಳನ್ನು ಪುರೋಹಿತ ಎನ್ನುವ ಶಬ್ದದಿಂದ ಕರೆಯುವುದೂ ಉಂಟು. ಇಂತಹ ನಡವಳೀಕೆ ಅನ್ಯಧರ್ಮಗಳಿಂದ ಪ್ರಭಾವಿತವಾದದ್ದು ಎಂದು ಹೇಳಬಹುದು. ಬೌದ್ಧ ಭಿಕ್ಕುಗಳ ಪ್ರಧಾನ ಉದ್ದೇಶಗಳೆಂದರೆ ವೈಯಕ್ತಿಕ ನೆಲೆಯಲ್ಲಿ ಆಧ್ಯಾತ್ಮಿಕ ಉನ್ನತಿಗೆ ಕಾರಣವಾಗುವ ‘ಪ್ರಜ್ಞೆ’ (ಜ್ಞಾನ), ‘ಶೀಲ’ (ನೈತಿಕ ಸದ್ಗುಣ) ಮತ್ತು ‘ಸಮಾಧಿ’ (ಮಾನಸಿಕ ಏಕಾಗ್ರತೆ)ಗಳನ್ನು ಬೆಳೆಸುವುದು. ‘‘ಸಂಸಾರ ನಶ್ವರ, ಬದುಕು ಪರಿವರ್ತನ ಶೀಲವಾದುದು, ಜಾಗೃತವಾದದ್ದು ಅವಸಾನವಾಗುತ್ತದೆ’’ ಎನ್ನುವ ಬುದ್ಧನ ಸಂದೇಶಗಳನ್ನು ಸಾರುವುದು ಆಗಿದೆ. ಇವುಗಳ ಬೆಳವಣಿಗೆ ಲೌಕಿಕರ ಧಾರ್ಮಿಕ ಅಥವಾ ಐಹಿಕ ಲಾಭಗಳಿಗೆ ಸಂಬಂಧಿಸಿಲ್ಲ. ಬೌದ್ಧಧರ್ಮ ಸದಾ ವಿಧಿ-ವಿಧಾನಗಳಿಗೆ ವಿರೋಧಿಯಾದುದು. ಶಾಸ್ತ್ರಾಚರಣೆಗಳಿಂದ ಆಧ್ಯಾತ್ಮಿಕ ಪ್ರಗತಿಯಾಗುವುದಿಲ್ಲ ಎನ್ನುವುದನ್ನು ತ್ರಿಪಿಟಿಕಗಳು ಹೇಳುತ್ತವೆ. ಬೌದ್ಧಬಿಕ್ಕುಗಳಿಗೂ, ಶಾಸ್ತ್ರಗಳನ್ನು ಆಚರಿಸುವ ಪುರೋಹಿತರಿಗೂ ವ್ಯತ್ಯಾಸಗಳೀವೆ. ಇದನ್ನು ಬೌದ್ಧರ ಧಾರ್ಮಿಕ ಪರಿಭಾಷೆಯಲ್ಲಿ ಕಾಣಬಹುದು. ಬೌದ್ಧ ಭಿಕ್ಕುಗಳನ್ನು ಟಿಬೆಟ್ ನಲ್ಲಿ ‘ಲಾಮಾ’ಗಳು ಎಂದು ಕರೆದರೆ, ನಿಗೂಢ ಶಕ್ತಿಗಳನ್ನು ಪ್ರದರ್ಶಿಸುವ ಪುರೋಹಿತರನ್ನು ‘ಬಾಲ್‌ಪೋ’ ಎನ್ನುವ ಹೆಸರಿನಿಂದ ಕರೆಯುತ್ತಾರೆ. ‘‘ಜ್ಞಾನವನ್ನು ಅರಸುವವರಿಗೆ ಭಿಕ್ಕುಗಳು ಧರ್ಮವನ್ನು ಬೋಧಿಸಬೇಕು. ಬಹುಜನರ ಹಿತಕ್ಕಾಗಿ ಪರ್ಯಟನ ಮಾಡಬೇಕು. ಒಟ್ಟಿನಲ್ಲಿ ಅವರು ಪುಣ್ಯಕ್ಷೇತ್ರಗಳಾಗಬೇಕು’’ ಎಂದು ಬುದ್ಧ ಆದೇಶಿಸಿದ. ಈ ಆದೇಶಗಳನ್ನು ಪರೋಪಕಾರಾರ್ಥದ ‘ದಾನ’ ಎಂದು ತಿಳಿದು ‘ಅನಾತ್ಮ’ ವಾದವನ್ನಾಗಿ ಮಾಡಲಾಯಿತು. ಈ ಅರ್ಥದಲ್ಲಿ ಪುರೋಹಿತತನ ಬೌದ್ಧಧರ್ಮದಲ್ಲಿ ಕಂಡುಬರಲು ಕಾರಣವಾಯಿತು.

ಬೇರೆ ಬೇರೆ ಪ್ರದೇಶಗಳಿಗೆ ವ್ಯಾಪಿಸಿದ ಬೌದ್ಧಧರ್ಮ ಸಂಸ್ಕೃತೀಕರಣದ ಪ್ರಕ್ರಿಯೆಗೆ ಒಳಗಾದಾಗ, ಬೌದ್ಧಭಿಕ್ಕುಗಳೂ ಅಲ್ಲಲ್ಲಿನ ಪರಿಸರ ಮತ್ತು ಸಂದರ್ಭಗಳಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಬೇಕಾಯಿತು. ಹಾಗಾಗಿ ಬೌದ್ಧ ಭಿಕ್ಕುಗಳು ಇಂದು ಟಿಬೆಟ್‌ನಲ್ಲಿ ಮಂತ್ರಗಳನ್ನು ಪಠಿಸುವುದರಲ್ಲಿ ನಿಪುಣರಾಗಿರುವುದನ್ನೂ, ಶ್ರೀಲಂಕಾದಲ್ಲಿ ಜ್ಯೋತಿಷ್ಯಶಾಸ್ತ್ರವನ್ನು ಕರಗತ ಮಾಡಿಕೊಳ್ಳುವುದರಲ್ಲಿ ಪ್ರಾಣ್ಯತೆ ಪಡೆದಿರುವುದನ್ನೂ, ಚೀನಾದ ಬೌದ್ಧರ ಶವಸಂಸ್ಕಾರದಲ್ಲಿ ಪುರೋಹಿತರಂತೆ ಕೆಲಸ ಮಾಡುವುದನ್ನು ಕಾಣಬಹುದು. ಬಿಕ್ಕುವಿನ ಇಂತಹ ನಡವಳಿಕೆಯಿಂದ; ಅವನು ‘ಬುದ್ಧ, ಧಮ್ಮ ಮತ್ತು ಸಂಘಗಳ ಸಾರಭೂತ ಸದ್ಗುಣಗಳ ಪ್ರತಿನಿಧಿತನದ ಸಂಕೇತವಾಗುತ್ತಾನೆ. ಬೌದ್ಧಧರ್ಮದ ಕೇಂದ್ರ ಸತ್ಯವಾದ ‘‘ಸಂಸಾರ ನಶ್ವರ, ಬದುಕು ಪರಿವರ್ತನಶೀಲವಾದುದು ಜಾಗೃತವಾದದ್ದು ಅವಸಾನವಾಗುತ್ತದೆ. ಹುಟ್ಟಿದ್ದೆಲ್ಲಾ ನಾಶವಾಗುತ್ತದೆ’’ ಎನ್ನುವ ಸತ್ಯವನ್ನು ಸಾರಬೇಕಾದುದು ಭಿಕ್ಕುವಿನ ಕರ್ತವ್ಯವಾಗಿದೆ. ಜನಸಮುದಾಯದ ಹಿತಕ್ಕಾಗಿ ಸಮುದಾಯವನ್ನು ಬೌದ್ದಿಕವಾಗಿ ತಯಾರುಮಾಡುವ ಹೊಣೆ ಇವರ ಮೇಲಿದೆ.

ಪ್ರಸ್ತುತ; ಬೌದ್ಧಭಿಕ್ಕು ಸಂಸಾರಿಗಳ ಒಳಿತಿಗಾಗಿ ಶಾಸ್ತ್ರಗಳನ್ನು ನೆರವೇರಿಸುತ್ತಾ, ನಿರ್ವಾಣಕ್ಕೆ ಅಗತ್ಯವಾದ ಆಧ್ಯಾತ್ಮಿಕ ಸಾಧನೆಗೆ ಪ್ರಾಮುಖ್ಯತೆ ನೀಡುತ್ತಿದ್ದರೂ, ಪರಿಸ್ಥಿತಿ ಆತಂಕಕಾರಿಯಾಗಿದೆ. ಇದಕ್ಕೆ ಪ್ರಮುಖ ಕಾರಣ; ಆಧುನೀಕರಣ ಮತ್ತು ವಿವಿಧ ಧರ್ಮಗಳ ಮಧ್ಯದ ತೀವ್ರ ಸ್ಪರ್ಧೆ. ಜಪಾನ್ ದೇಶದಲ್ಲಿನ ಜನಜೀವನ ಸದ್ದು-ಗದ್ದಲದ ಆಧುನೀಕರಣದಿಂದ ಹಾಗೂ ವಾಣಿಜ್ಯಮಯದಿಂದ, ತುಂಬಾ ಆತಂಕದಿಂದ ಕೂಡಿ ನೆಮ್ಮದಿ ಹಾಳಾಗಿರುವುದನ್ನು ಪ್ರಸ್ತುತ ಕಾಣಬಹುದು. ಇದಕ್ಕಾಗಿ ವಾರದ ಕೊನೆಯಲ್ಲಿ ಏರ್ಪಡಿಸುವ ಧ್ಯಾನಕ್ಕೆ ಸಂಬಂಧಿಸಿದ ‘ಧ್ಯಾನಧಾಮಗಳು ನೆಮ್ಮದಿ ತರುವ ಔಷಧಿಗಳು’ ಎನ್ನುವ ಜಾಹಿರಾತುಗಳ ಮೂಲಕ ಕಾರ್ಯಕ್ರಮಗಳನ್ನು ಪ್ರಚಾರ ಮಾಡಲಾಗುತ್ತಿದೆ. ಇಲ್ಲಿ ಬುದ್ಧನ ವಿಚಾರಗಳಾದ ಪ್ರಜ್ಞೆ, ಶೀಲ, ಸಮಾಧಿ ಮುಂತಾದವು ಜಾಹಿರಾತು ವಿಚಾರಗಳಾಗಿ ತಕ್ಷಣ ಫಲಕೊಡಲು ವಿಫಲವಾಗುತ್ತಿವೆ. ಇನ್ನು ಕ್ರೈಸ್ತ ಮತದ ಪಾದ್ರಿಗಳಂತೆ; ಥೈಲ್ಯಾಂಡ್, ಶ್ರೀಲಂಕಾ ಮುಂತಾದ ದೇಶಗಳಲ್ಲಿ ಬೌದ್ಧ ಬಿಕ್ಕುಗಳು ರಸ್ತೆ ನಿರ್ಮಾಣ ಮಾಡುವುದು, ಆಸ್ಪತ್ರೆಗಳನ್ನು ಪ್ರಾರಂಭಿಸುವುದು, ಬುದ್ಧ ವಿಹಾರಗಳಿಗೆ ಯಾತ್ರೆಗಳನ್ನು ಏರ್ಪಡಿಸುವುದು ಮುಂತಾದ ಸಾಮಾಜಿಕ ಸೇವಾಕಾರ್ಯಗಳಲ್ಲಿ, ತೊಡಗಿಸಿಕೊಂಡಿರುವುದು ಕಂಡುಬಂದಿದೆ. ಇದರಿಂದ ಪ್ರಜ್ಞೆ, ಶೀಲ ಮತ್ತು ಸಮಾಧಿಯಂತಾ ವಿಚಾರಗಳು ಸತ್ವಹೀನವಾಗುತ್ತಿವೆಯೇನೋ ಅನ್ನಿಸುತ್ತಿವೆ. ಪುರೋಹಿತಶಾಹಿಯ ವ್ಯಾಘ್ರ ರೂಪಗಳು ಬೌದ್ಧಧರ್ಮದಲ್ಲೂ ಉದಯಿಸುತ್ತಿವೆ ಎನ್ನುವುದನ್ನು ಕಾಲವೇ ನಿರ್ಧರಿಸಬೇಕು.

ಬುದ್ಧ ವಿಚಾರವಾದಿಯಾದರೂ; ಪ್ರಜ್ಞಾಪೂರಕವಾಗಿ ಜೀವಕಾರುಣ್ಯದ ಮೌಲ್ಯವನ್ನು ರೂಢಿಸಿಕೊಂಡಿದ್ದರಿಂದ ಅವನ ತಾತ್ವಿಕತೆ ಶುಷ್ಕವೆನಿಸುವುದಿಲ್ಲ. ಮನುಷ್ಯ ಜೀವನದಲ್ಲಿ ಸಂಯಮ-ತ್ಯಾಗಗಳು ಮುಖ್ಯ ಎನ್ನುವುದು ಆತನ ನೈತಿಕ ತಾತ್ವಿಕ ಗ್ರಹಿಕೆಯಾಗಿತ್ತು. ತನ್ನ ಮಗ ಸತ್ತ ಗುಡ್ಡದಷ್ಟು ದುಃಖವನ್ನು ಹೊತ್ತುಬಂದಿದ್ದ ಮುಗ್ಧ ತಾಯಿಗೆ ಸಾವಿಲ್ಲದ ಮನೆಯ ಸಾಸುವೆ ತರಹೇಳಿ, ಕಡೆಗೆ ಅವಳ ದುಃಖ ಸಾಸುವೆ ಕಾಳಿನಷ್ಟಾಗುವಂತೆ ಮಾಡಿದ ಅವನ ಚಿಕಿತ್ಸಾಕ್ರಮ ಒಂದು ಮನಃಶಾಸ್ತ್ರೀಯ ಕ್ರಮವೇ ಸರಿ. ಬುದ್ಧನ ಬೋಧನೆಗಳು ಬಹಳ ತೀಕ್ಷಣವೂ ಮತ್ತು ಕಾರ್ಯರೂಪದವು. ಆತ ತತ್ವಶಾಸ್ತ್ರದ ಹಾಗೂ ಪಾರಮಾರ್ಥ ವಿಚಾರದ ಚರ್ಚೆಯನ್ನು ತಪ್ಪಿಸಿದ. ದೇವರಿಗೆ ಸಲ್ಲಿಸುವ ಧಾರ್ಮಿಕ ಉಪಾಸನೆ ನಿರ್ವಾಣ ಹೊಂದುವ ಒಂದು ಮಾರ್ಗ ಎನ್ನುವುದನ್ನು ಬುದ್ಧ ತಿರಸ್ಕರಿಸಿದ. ಆತ ಪ್ರಾಯೋಗಿಕ ನಾಸ್ತಿಕತ್ವ ಅಂದರೆ ಮುಕ್ತವಿಚಾರವನ್ನು ಒಪ್ಪಿಕೊಂಡ. ಸಾವು ಮತ್ತು ಪುನರ್ಜನ್ಮಗಳು ಅಪವಾದ ಎನ್ನುವಂತೆ ಒಂದು ಪರಿಮಿತಿಯಲ್ಲಿ ಉಳಿದು; ವಿಶ್ವವೆಲ್ಲಾ ಹೆಚ್ಚಾಗಿ ದೇವರುಗಳು, ದೇವತೆಗಳು, ದೆವ್ವಗಳು ಮತ್ತು ಅತಿಮಾನಸ ಶಕ್ತಿಗಳ ಪಾರುಪತ್ಯೆಯಿಂದ ತುಂಬಿದೆ ಎನ್ನುವುದನ್ನು ಆತ ನಂಬಿದ್ದ. ಸಾವಿನ ನಂತರ ಮನುಷ್ಯನಿಗೆ ಸ್ವರ್ಗ-ನರಕಗಳನ್ನು ವಿಧಿಸುವ; ಮನುಷ್ಯರ ಹಣೇ ಬರಹಗಳನ್ನು ನಿರ್ಧರಿಸುವ ಹಾಗೂ ಬರೆಯುವ ಮೂಲಕ ವಿಶ್ವವನ್ನು ನಡೆಸುತ್ತಿರುವಂತಹ ಪರಮಶ್ರೇಷ್ಠ ದೈವ ಎನ್ನುವುದು ಯಾವುದೂ ಇಲ್ಲ ಆತನಿಗೆ.