. ಜೈನಧರ್ಮ

ಹಿಂದೂ ಧರ್ಮದ ತತ್ವ, ಸಿದ್ಧಾಂತ ಮತ್ತು ವಾದವನ್ನು ತಿರಸ್ಕರಿಸುವುದರ ಮೂಲಕ ಪೂರ್ಣವಾಗಿ ಹಿಂದೂಧರ್ಮದಿಂದ ಬೇರೆಯಾಗಿ; ಹೊಸ ಧರ್ಮವಾಗಿ ರೂಪುಗೊಂಡ ಧರ್ಮಗಳಲ್ಲಿ ಜೈನಧರ್ಮವೂ ಒಂದು. ಹಿಂದೂ ಧರ್ಮದಲ್ಲಿ ಶ್ರೇಣೀಕೃತ ಜಾತಿಪದ್ಧತಿ ಉಂಟಾಗಿ, ಧಾರ್ಮಿಕ ಶ್ರೇಷ್ಠತೆಯ ವಾರಸುದಾರತನವನ್ನು ಬ್ರಾಹ್ಮಣ ಜಾತಿ ಪಡೆದಿದ್ದಾಗ; ಇಂಡಿಯಾದಲ್ಲಿ ಕ್ರಿ.ಪೂ.೬ನೇ ಶತಮಾನದಲ್ಲಿ ಜೈನಧರ್ಮ ವಿಕಾಸವಾಯಿತು. ಇಂಡಿಯಾದ ಇತಿಹಾಸಜ್ಞ ‘ಹೆನ್ರಚ್ ಜಿಮ್ಮರ್’ ‘‘ಜೈನಧರ್ಮವು ಇಂಡಿಯಾದ ಧಾರ್ಮಿಕ ಸಿದ್ಧಾಂತಗಳಲ್ಲೇ ಅತಿ ಪುರಾತನದಾಗಿದ್ದು, ಕ್ರಿ.ಪೂ. ೪೦೦ರ ಸಿಂಧೂಕಣಿವೆ ನಾಗರೀಕತೆಯಷ್ಟು ಪ್ರಾಚೀನವಾದದ್ದು’’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾನೆ.

ಜೈನಧರ್ಮ ಒಂದು ‘ವ್ರತಬದ್ಧ ತತ್ವಜ್ಞಾನ’. ‘ಮಹಾರ’ ಎಂದು ಖ್ಯಾತರಾದ ‘ನಾಥಪುಟ್ಟ ವರ್ಧಮಾನ’ (ಕ್ರಿ.ಪೂ.೫೯೯-ಕ್ರಿ.ಪೂ.೫೨೭) ಜೈನಧರ್ಮದ ಸ್ಥಾಪಕರೆಂದು ಜನ ಗುರುತಿಸುತ್ತಾರೆ. ಆದರೆ ಜೈನರ ಪ್ರಕಾರ; ‘‘ಜೈನಧರ್ಮ ಅನಾದಿ, ವರ್ಧಮಾನ ಅದನ್ನು ಪರಿಷ್ಕರಿಸಿದರು ಅಷ್ಟೇ ಹೊರತು ಸ್ಥಾಪಕರಲ್ಲ; ಆದುದರಿಂದಲೇ ಅವರನ್ನು ‘ಮಹಾರ’ ಅಂದರೆ ‘ಹೆಚ್ಚು ಶಕ್ತಿವಂತ’ ಎನ್ನುವ ಅರ್ಥದ ಹೆಸರಿನಿಂದ ಕರೆಯಲಾಗುತ್ತಿರು ವುದು. ಮಹಾರರಿಗೂ ಹಿಂದೆ ೨೩ ಜನ ಜಿನರೂ ತೀರ್ಥಂಕರರೇ ಆಗಿದ್ದರೆನ್ನುವ ನಂಬಿಕೆಯನ್ನು ಜೈನರು ಉಳಿಸಿಕೊಂಡು ಬಂದಿದ್ದಾರೆ. ಮೊದಲನೆಯ ತೀರ್ಥಂಕರ ಅಥವಾ ಆದಿನಾಥನನ್ನು ‘ವೃಷಭದೇವ’ ಎಂದು ಕರೆಯುತ್ತಿದ್ದು; ಅವರೂ ಲಕ್ಷಾಂತರ ವರ್ಷಗಳ ಹಿಂದೆ ಜೀವಿಸಿದ್ದರೆನ್ನುವುದು ಜೈನರ ನಂಬಿಕೆ. ಅವರ ನಂತರ ಬಂದ ೨೩ ಜನ ತೀರ್ಥಂಕರರಲ್ಲಿ ಕೊನೆಯವರೇ ‘ಮಹಾರ’. ವರ್ಧಮಾನ ಮಹಾರರಿಗಿಂತ ತಕ್ಷಣ ಹಿಂದೆ ಇದ್ದ ತೀರ್ಥಕರರೆಂದರೆ ‘ಪಾರ್ಶ್ವನಾಥ’ (ಕ್ರಿ.ಪೂ.೭೭೨)ರು. ಮಹಾರರನ್ನು ಶ್ರೇಷ್ಠ ತೀರ್ಥಕರರೆಂದು ಪರಿಗಣಿಸಲು ಪ್ರಮುಖ ಕಾರಣವೆಂದರೆ; ಸಂಸಾರ ಸಾಗರವನ್ನು ದಾಟಲು ತನ್ನ ವೈಯಕ್ತಿಕ ಬದುಕನ್ನೇ ಆದರ್ಶವನ್ನಾಗಿ ಮಾಡಿಕೊಂಡ ಆಧ್ಯಾತ್ಮಿಕ ಗುರುವೆಂದು ಜೈನರು ಭಾವಿಸಿ ಗೌರವಿಸುತ್ತಿರುವುದು.

ಬಿಹಾರದ ಶಕ್ತಿಯುತ ಹಾಗೂ ಸಂಪತ್ ಭರಿತ ರಾಜ ಮನೆತನದ ರಾಜನೊಬ್ಬನ ಮಗನಾಗಿ ಜನಿಸಿದ ವರ್ಧಮಾನರು ತಮ್ಮ ಮೂವತ್ತನೆಯ ವಯಸ್ಸಿನಲ್ಲಿ ತಂದೆ-ತಾಯಿಗಳಿಬ್ಬರನ್ನೂ ಕಳೆದುಕೊಳ್ಳುತ್ತಾರೆ. ವರ್ಧಮಾನರು ಒಬ್ಬ ಸ್ವತಂತ್ರ ಚಿಂತಕರಾಗಿದ್ದರಿಂದ, ತಮ್ಮ ಸಂಪತ್ತನ್ನೆಲ್ಲ ದಾನ ಮಾಡಿ; ಇಹಲೋಕದ ಸ್ವತ್ತಾಗಿ ಒಂದು ನಿಲುವಂಗಿಯನ್ನು ಮಾತ್ರ ತಮ್ಮಲ್ಲಿ ಉಳಿಸಿಕೊಂಡು ಸನ್ಯಾಸಿಗಳ ಗುಂಪನ್ನು ಸೇರಿಕೊಳ್ಳುತ್ತಾರೆ. ಸ್ವಲ್ಪ ಕಾಲಾನಂತರ ಆ ನಿಲುವಂಗಿಯನ್ನೂ ತ್ಯಜಿಸಿ ಬೆತ್ತಲೆಯಾಗಿ ಹೋಗುತ್ತಾರೆ. ಆ ನಂತರ ಇಡೀ ಪ್ರಕೃತಿಯೇ ಹೊದಿಕೆಯ ಬಟ್ಟೆಯಾಯಿತು ಅವರಿಗೆ. ಹುಟ್ಟು, ಸಾವು ಮತ್ತು ಪುನರ್ಜನ್ಮಗಳ ಚಕ್ರದಿಂದ ಬಿಡುಗಡೆಯ ಬಗ್ಗೆ ಸತ್ಯ ಹುಡುಕುತ್ತಾ ಬಹಳ ಕಾಲ ಸುತ್ತಿದ ನಂತರ; ನಿಷ್ಠುರ ವೈರಾಗ್ಯದಿಂದ ಮತ್ತು ಅಹಿಂಸಾ ಮಾರ್ಗದ ಅನುಸರಣೆಯಿಂದ ಮಾತ್ರ ಆತ್ಮಶುದ್ದಿಯನ್ನು ಪಡೆಯಬಹುದು ಮತ್ತು ಕಾಪಾಡಬಹುದು ಎನ್ನುವುದು ಮನದಟ್ಟಾಯಿತು. ಅವರು ತಮ್ಮ ಆಹಾರವನ್ನು ಭಿಕ್ಷೆ ಬೇಡುವಾಗಲೆಲ್ಲಾ; ತಮ್ಮ ಆಹಾರದಲ್ಲಿ ಕ್ರಿಮಿ, ಕೀಟ ಮುಂತಾದ ಯಾವುದೇ ರೀತಿಯ ಜೀವಿಗಳು ಇಲ್ಲದಿರುವಂತೆ ಎಚ್ಚರವಹಿಸುತ್ತಿದ್ದರು. ನಡೆದಾಡುವಾಗ ಜೀವಿಗಳ ಹತ್ಯೆ ತಪ್ಪಿಸುವುದಕ್ಕಾಗಿ ಚಾಮರದಿಂದ ಬೀಸಿಕೊಂಡು ಹಾದಿಯಲ್ಲಿ ನಡೆಯುತ್ತಿದ್ದರು. ಅವರು ಹದಿಮೂರು ವರ್ಷಗಳ ಗಾಢವಾದ ತಪಸ್ಸಿನಿಂದ ನಿರ್ವಾಣ ಪದವಿ ಪಡೆದರು. ಸ್ವತಂತ್ರ ಲೋಕದ ಶ್ರೇಷ್ಠ ಪದವಿ ಅದಾಗಿತ್ತು. ಆನಂತರದ ಮೂವತ್ತು ವರ್ಷಗಳನ್ನು ತಮ್ಮ ತತ್ವಗಳ ಬೋಧನೆಯಲ್ಲಿ ಕಳೆದು ತಮ್ಮ ಎಪ್ಪತ್ತೆರಡನೇ ವಯಸ್ಸಿನಲ್ಲಿ ಸಲ್ಲೇಖನ ವ್ರತದಿಂದ ದೇಹತ್ಯಾಗ ಮಾಡಿದರು.

ಜೈನ ಸಿದ್ಧಾಂತವು ಹಿಂದೂ ಧರ್ಮದಿಂದ ಪೂರ್ಣವಾಗಿ ಬಿಡುಗಡೆ ಹೊಂದಿದ ಒಂದು ನಂಬಿಕಾ ವಿಧಾನವಾದರೂ; ಕರ್ಮದ ನಿಯಮ ಮತ್ತು ಜೀವನ್ಮುಕ್ತಿ ವಿಚಾರಗಳಲ್ಲಿ ಸಮನ್ಮಯ ಪಾಲುದಾರಿಕೆ ಹೊಂದಿದೆ. ‘ಕರ್ಮ’ದ ಮೇಲೆ ಪರಿಣಾಮ ಉಂಟುಮಾಡುವ ವ್ಯಕ್ತಿಯ ನಂಬಿಕೆ ಅಥವಾ ಅಪನಂಬಿಕೆಯ ನಡವಳಿಕೆಗಳು, ಆನಂದ ಅಥವಾ ನೋವಿನ ಸಾಮರ್ಥ್ಯಗಳು, ಜಾತಿಗಳು, ದೈಹಿಕ ಮತ್ತು ಮಾನಸಿಕ ನಡವಳಿಕೆಗಳ ಜೊತೆಯಲ್ಲಿ ವ್ಯಕ್ತಿಯ ಜೀವಿತದ ಅವಧಿ ಮುಂತಾದ ಅಂಶಗಳನ್ನು ಜೈನರು ಮಾನ್ಯಮಾಡಿದ್ದಾರೆ. ಭೌತಿಕ, ಮಾನಸಿಕ ಮತ್ತು ಐಹಿಕ ಅಂಶಗಳಿಂದ ಮುಕ್ತಿ ಪಡೆಯಲು ಜೈನರು ಮಾಡಿದ ಪ್ರಯತ್ನಗಳು ದೈವದ ಅಥವಾ ವೇದದ ಸಹಾಯವನ್ನು ಅವಲಂಬಿಸಿರಲಿಲ್ಲ. ಜೈನರಿಗೆ ದೇವರ ಅಸ್ತಿತ್ವದಲ್ಲಾಗಲಿ ಅಥವಾ ಆಧ್ಯಾತ್ಮ ಉನ್ನತಿಯಲ್ಲಾಗಲಿ ನಂಬಿಕೆ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು. ದೇವರ ಅಸ್ತಿತ್ವವನ್ನು ಎರಡು ಆಧಾರಗಳ ಮೇಲೆ ತಿರಸ್ಕರಿಸುತ್ತಾರೆ. ‘‘ಪ್ರಪಂಚವಿಲ್ಲದ ಕಾಲವೇ ಇಲ್ಲ. ಒಂದು ವೇಳೆ ಅದು ಇಲ್ಲದ ಕಾಲವೊಂದಿದ್ದರೆ; ಆಗ ಅದನ್ನು ಸೃಷ್ಟಿ ಮಾಡಿದ ಸೃಷ್ಟಿಕರ್ತ ಇದ್ದನೆನ್ನಬಹುದಿತ್ತು’’ ಎನ್ನುವುದು ಮೊದಲ ಆಧಾರವಾದರೆ; ‘‘ದೇವರು ಇಲ್ಲದೆಯೂ ಕರ್ಮಫಲಗಳ ದೋಷರಹಿತ ಹಂಚಿಕೆ ಸಾಧ್ಯ. ನಾವು ಮಾಡಿದ ಪ್ರತಿಯೊಂದೂ ಕಾರ್ಯದ ಪರಿಣಾಮವಾಗಿ ನಮ್ಮ ಆತ್ಮಕ್ಕ ಕರ್ಮವೆಂಬ ಕೆಲವು ಸೂಕ್ಷ್ಮಾಣುಗಳು ಬಂದು ಅಂಟಿಕೊಳ್ಳುತ್ತವೆ. ಅವು ತಮ್ಮ ಫಲವನ್ನು ನೀಡುವವರೆಗೂ ಆತ್ಮಕ್ಕೆ ಅಂಟಿಕೊಂಡೇ ಇದ್ದು; ಫಲ ನೀಡಿದ ನಂತರ ಬಿದ್ದು ಹೋಗುತ್ತವೆ. ಆದರೆ; ಅಷ್ಟರೊಳಗೆ ಹೊಸ ಕರ್ಮಾಣುಗಳು ಬಂದು ಅಂಟಿಕೊಳ್ಳುವುದರಿಂದ, ನಾವು ನಿರಂತರವಾಗಿ ಕರ್ಮಕ್ಕೊಳಗಾಗಿರ ಬೇಕಾಗುತ್ತದೆ. ಕರ್ಮಫಲವನ್ನು ನೀಡುವ ಶಕ್ತಿ ಕರ್ಮಾಣುಗಳಲ್ಲೇ ಅಂತಸ್ಥವಾಗಿರು ವುದರಿಂದ ಅದರ ವಿತರಣೆಗೆ ಯಾವ ಬಾಹ್ಯ ಪ್ರೇರಣೆಯೂ ಬೇಕಿಲ್ಲ’’ ಎನ್ನುವುದು ಎರಡನೆಯ ಆಧಾರ.

ಅಶಕ್ತ ಜೀವಜಂತುಗಳಿಗೆ ಜೀವನ್ಮುಕ್ತಿ ಅಥವಾ ಕೈವಲ್ಯ ಬೇಕಾಗಿದೆ; ಆದುದರಿಂದ ಅವೆಲ್ಲಾ ತಮ್ಮ ಪುನರ್ಜನ್ಮದ ಬಗ್ಗೆ ವಿಶೇಷ ಆಸಕ್ತಿ ಹೊಂದಿವೆ. ಎಲ್ಲ ರೀತಿಯ ಬಿಡುಗಡೆ ಎನ್ನುವುದು ಸ್ವಯಾರ್ಜಿತ. ಅದು ಪುರೋಹಿತರನ್ನೂ ಒಳಗೊಂಡಂತೆ ತನ್ನಂತಹ ಮನುಷ್ಯರಾರಿಂದಲೂ ಸಹಾಯ ಪಡೆಯಲು ಬರುವುದಿಲ್ಲ. ಕೈವಲ್ಯ ಅಥವಾ ಮುಕ್ತಿ ಎನ್ನುವುದು ವ್ಯಕ್ತಿಯಲ್ಲೇ ಅಡಗಿದೆ. ಪ್ರಪಂಚದ ಉದ್ದಗಲ್ಲಕ್ಕೂ ಇರುವ ಸಕಲ ಚರಾಚರ ವಸ್ತುಗಳನ್ನು ಅವಲಂಬಿಸುವ ಜೀವಾತ್ಮರನ್ನು ಶುದ್ದಿ ಮಾಡುವ ‘ಸ್ವನಿಯಂತ್ರಣ’ ಪಡೆಯುವ ಮೂಲಕ ‘ಮೋಕ್ಷ’ ಪಡೆಯಬಹುದು.

ಜೈನರು ನಿರೀಶ್ವರವಾದಿಗಳೂ ಹೌದು; ವೇದ ಪ್ರಾಮಾಣ್ಯವನ್ನು ನಿರಾಕರಿಸುವ ನಾಸ್ತಿಕರೂ ಹೌದು. ಆದರೆ ಧರ್ಮ ನಿರಪೇಕ್ಷವಾದಿಗಳಲ್ಲ. ಜೈನ ಎನ್ನುವುದು ವೇರಾಗ್ಯಪರ ಚಳುವಳಿ. ಜೈನ ಧರ್ಮವು ಸೃಷ್ಟಿಕರ್ತನೆಂದು ಯಾವೊಬ್ಬ ದೇವರನ್ನೂ ಅಂಗೀಕರಿಸಿಲ್ಲ. ಆದುದರಿಂದ ಅಂತಹ ದೇವರಲ್ಲಿ ಭಕ್ತಿಯನ್ನು ತೋರಿಸುವ ಪ್ರಸಕ್ತಿ ಆ ಧರ್ಮದಲ್ಲಿ ಏರ್ಪಟ್ಟಿಲ್ಲ. ಆದರೆ; ಕರ್ಮಗಳನ್ನೆಲ್ಲಾ ಸಂಪೂರ್ಣ ಜಯಿಸಿ, ಸಾಂಸಾರಿಕ ಬಂಧನಗಳನ್ನು ಕಿತ್ತುಹಾಕಿ; ಆತ್ಮವು ಅನಂತ ದರ್ಶನ, ಅನಂತ ಜ್ಞಾನ, ಅನಂತ ಸುಖ ಮತ್ತು ಅನಂತ ಶಕ್ತಿಗಳಿಂದ ಸಮನ್ವಿತವಾಗಿ, ಸಿದ್ಧಪರಮೇಷ್ಟಿಯಾಗಿ ತನ್ನ ಪರಮಶುದ್ಧ ಸ್ವರೂಪದಲ್ಲಿರುತ್ತದೆ. ಇವರೇ ಜಿನರು (ಜೈನರು). ಮುಕ್ತಿಯನ್ನು ಬಯಸುವ ಪ್ರತಿಯೊಬ್ಬ ಮಾನವನ ಆದರ್ಶ ಜಿನರು. ಜೈನಧರ್ಮದ ೨೪ ಜನ ತೀರ್ಥಕರರು, ಯತಿಗಳು ಆ ಧರ್ಮದ ಪವಿತ್ರ ವ್ಯಕ್ತಿಗಳೆನಿಸುವರು.

ಸಿದ್ದಿ ಪಡೆದ ತೀರ್ಥಂಕರ ಯತಿಗಳು ಮುಂತಾದವರ ಸ್ವರೂಪವನ್ನು ತಿಳಿದು ಅವರಂತೆ ಪರಿಶುದ್ಧನಾಗಲು ವ್ಯಕ್ತಿ ಸಾಧನೆ ಮಾಡುವುದೇ ಭಕ್ತಿ. ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯ ಎನ್ನುವ ರತ್ನತ್ರಯದ ತಳಹದಿ ಭಕ್ತಿಗೆ ಅವಶ್ಯಕ ಎಂದು ಜೈನಧರ್ಮ ಪ್ರತಿಪಾದಿಸುತ್ತದೆ. ‘‘ಸಿದ್ಧಭಕ್ತಿ, ಶುತಭಕ್ತಿ, ಚಾರಿತ್ರ್ಯಭಕ್ತಿ, ಯೋಗಿಭಕ್ತಿ, ಆಚಾರ್ಯಭಕ್ತಿ, ನಿರ್ವಾಣಭಕ್ತಿ, ನಂದೀಶ್ವರಭಕ್ತಿ, ಚೈತ್ಯಭಕ್ತಿ, ಶಾಂತಿಭಕ್ತಿ, ಪಂಚಗುರುಭಕ್ತಿ, ತೀರ್ಥಂಕರಭಕ್ತಿ ಮತ್ತು ಸಮಾಧಿಭಕ್ತಿ’’ ಎನ್ನುವ ಹನ್ನೆರಡು ಬಗೆಯ ಭಕ್ತಿಗಳನ್ನು ಜೈನಗ್ರಂಥಗಳು ನಿರೂಪಿಸುತ್ತವೆ. ನೀತಿ, ನ್ಯಾಯ, ಋಜುತ್ವ, ಸುಖ, ಶಾಂತಿ, ನೆಮ್ಮದಿ ಮುಂತಾದವು ಊರ್ಧ್ವಮುಖವಾಗಿ ಗಟ್ಟಿಯಾಗಿ, ಅಧಿಕವಾಗುತ್ತಾ ಹೋಗುವ ಕಾಲವನ್ನು ಪವಿತ್ರಕಾಲ ಅಥವಾ ಶುಭಕಾಲ ಅಥವಾ ‘ಉತ್ಸರ್ಪಿಣಿ’ ಎಂದೂ; ಅಪಕರ್ಷಿಸುವ ಕಾಲವನ್ನು ಅಪವಿತ್ರಕಾಲ ಅಥವಾ ‘ಅಪಸರ್ಪಿಣಿ’ ಎಂದು ಜೈನಧರ್ಮ ವಿಂಗಡಿಸುತ್ತದೆ. ಇಂತಹ ಪರಿಗಣೆ ಭೂತಕಾಲಕ್ಕೆ ಮಾತ್ರ ಅನ್ವಯಿಸಲು ಸಾಧ್ಯ. ಭವಿಷ್ಯತ್ತಿಗೆ ಅನ್ವಯಿಸಿದರೆ; ಹಿಂದೂಧರ್ಮದಂತೆ, ಶೋಷಣೆಗೂ ಅವಕಾಶ ಮಾಡಿಕೊಳ್ಳಬಹುದು. ಪ್ರಸ್ತುತ ಆಗಿರುವುದೂ ಎರಡನೆಯದೇ.

ಜೈನಧರ್ಮ ವೇದ ಪ್ರಾಮಾಣ್ಯವನ್ನು, ಯಜ್ಞ-ಯಾಗಾದಿಗಳನ್ನು, ಬ್ರಾಹ್ಮಣೀಯ ಯಜಮಾನ್ಯವನ್ನು ತಿರಸ್ಕರಿಸಿದ್ದರಿಂದ; ಅದನ್ನು ಅಸಂಪ್ರದಾಯಿಕ ಧರ್ಮ ಅಥವಾ ನಾಸ್ತಿಕ ಧರ್ಮ ಎಂದು ಪರಿಗಣಿಸಲಾಯಿತು. ಜೈನರು ದೇವರ ಅಸ್ತಿತ್ವವನ್ನು ಅಲ್ಲಗಳೆಯಲು ಕೆಲವು ಆಧಾರಗಳನ್ನು ಕೊಡುತ್ತಾರೆ. ‘‘ದೇವರು, ಸೃಷ್ಟಿ ಮಾಡಲು ಪ್ರಕೃತಿಯನ್ನು ಅವಲಂಬಿಸುತ್ತಾನೆಂದೂ, ಪ್ರಕೃತಿ ಮಾತ್ರ ಯಾರಿಂದಲು ಸೃಷ್ಟಿಯಾಗಿಲ್ಲವೆಂದು ಆಸ್ತಿಕರು ನಂಬುವುದಾದರೆ; ಪ್ರಪಂಚವೂ ಯಾರಿಂದಲೂ ಸೃಷ್ಟಿಯಾಗಿಲ್ಲ ಎಂದೇಕೆ ಅವರು ನಂಬಬಾರದು? ದೇವರು ನಿತ್ಯ ತೃಪ್ತನಾಗಿದ್ದರೆ, ಯಾವ ಆಸೆಯನ್ನು ತೀರಿಸಿಕೊಳ್ಳಲು ಅವನು ಈ ಪ್ರಪಂಚವನ್ನು ಸೃಷ್ಟಿಸಿದ? ಒಂದು ವೇಳೆ ತನ್ನ ವಿನೋದಕ್ಕಾಗಿ ಈ ಪ್ರಪಂಚವನ್ನು ಸೃಷ್ಟಿಸಿದ್ದರೆ, ಅವನಿಗೆ ಬಾಲಿಶ ಬುದ್ದಿಯಿದೆ. ಸರ್ವಜ್ಞತ್ವವಿಲ್ಲ ಎನ್ನಬೇಕಾದೀತು.’’ ಎನ್ನುವವು ಅವರ ಅಭಿಪ್ರಾಯಗಳು. ಪರಮಾತ್ಮರು ಅನೇಕರಿ ದ್ದಾರೆಂದೂ, ಅವರಾರೂ ಸೃಷ್ಟಿಕಾರ್ಯ ಮಾಡುವುದಿಲ್ಲವೆಂದೂ ಜೈನರು ನಂಬಿರುವುದರಿಂದ; ಅವರು ನಾಸ್ತಿಕರೇ ಹೊರತು ಆಸ್ತಿಕರಲ್ಲ. ಜೈನ ಧರ್ಮಗ್ರಂಥಗಳಲ್ಲಿ ಯಕ್ಷ, ಯಕ್ಷಿಣಿ, ನಾಗ ಮುಂತಾದ ಮಾನವಾತೀತರ ಪ್ರಸ್ತಾಪ ಬರುತ್ತದೆ. ತೀರ್ಥಂಕರರಿಗೆ ಹೇಗೋ ಹಾಗೆಯೇ ಇವರಿಗೆ ಪೂಜೆ ಸಲ್ಲುತ್ತದೆ. ಆದರೆ, ಅವರಾರೂ, ಸೃಷ್ಟಿ ಮುಂತಾದ ಕಾರ್ಯಗಳನ್ನು ಮಾಡದಿರುವುದರಿಂದ; ಅವರಾರೂ ದೇವರಲ್ಲ ಎನ್ನುವುದು ಜೈನರ ಸ್ಪಷ್ಟವಾದ ನಂಬಿಕೆ. ಜೈನಧರ್ಮ ಕೇವಲ ‘ದರ್ಶನತತ್ವ’ ಮತ್ತು ‘ನೈತಿಕ ನಿಯಮಗಳನ್ನು’ ಮಾತ್ರ ಒಳಗೊಂಡಿದೆ. ಶಕುನ, ಮಂತ್ರ, ತಂತ್ರ, ಪವಾಡ ಮುಂತಾದ ಪ್ರದರ್ಶನ ಅಥವಾ ಆಚರಣೆ ಅಥವಾ ಅವುಗಳಲ್ಲಿನ ನಂಬಿಕೆಗಳನ್ನು ಹಾಗೂ ಅಲೌಕಿಕ ಶಕ್ತಿಗಳ ಉಪಯೋಗಗಳನ್ನು ಈ ಧರ್ಮ ನಿಷೇಧಿಸುತ್ತದೆ. ಆದರೆ; ಪ್ರತಿಯೊಬ್ಬ ಜೈನನೂ ಜ್ಞಾನ ಮತ್ತು ವಿವೇಕಕ್ಕೆ ಕಾರಣವಾಗುವ, ಮಸ್ತಕವನ್ನು ಸದಾ ಶುಭ್ರವಾಗಿ ತೆರೆದಿಟ್ಟುಕೊಳ್ಳಬೇಕೆನ್ನುವ ಸಂದೇಶವನ್ನು ಅರ್ಥಹೀನ ಆಚರಣೆಯಾಗಿ ಮಾಡಿಕೊಂಡು, ಅಹಿಂಸೆಯ ಪ್ರತಿಪಾದಕನಿಗೆ ಹಸಿವಿನ ಹಿಂಸೆಯಿಂದ ಮಾಡುವ ಮಹಾಮಸ್ತಕಾಭಿಷೇಕ, ಬಸದಿಗಳಲ್ಲಿ ತೀರ್ಥಂಕರರ ಆರಾಧನೆ ಮುಂತಾದ ಆಚರಣೆಗಳು ಮುಖ್ಯವಾಗಿವೆ.

ಮಹಾರನ ಬೋಧನೆಯ ಪ್ರಕಾರ ಜ್ಞಾನೋದಯವಾಗದಿರುವ ಆತ್ಮವು ಪುನರ್ಜನ್ಮ ಪಡೆಯುತ್ತದೆ. ಈ ಅಭಿಪ್ರಾಯ ಎಷ್ಟು ಸರಿ? ಎನ್ನುವುದೇ ಪ್ರಶ್ನೆ. ಆತ್ಮ ಮತ್ತು ಪುನರ್ಜನ್ಮ ಎನ್ನುವುದು ಎಲ್ಲಾ ಜೀವಿಗಳಿಗೂ ಇರಬೇಕು ಹಾಗೂ ಇದೆ ಎಂದು ಪರಿಗಣಿಸಿದರೆ; ಅದು ಯಾವ ರೂಪದಲ್ಲಾದರೂ ಇರಬಹುದು. ಮನುಷ್ಯನನ್ನು ಹೊರತುಪಡಿಸಿ ಉಳಿದ ಯಾವ ಜೀವಿಯಲ್ಲೂ ತನ್ನ ಜೀವಿತಾವಧಿಯಲ್ಲಿ ಜ್ಞಾನೋದಯಕ್ಕೆ ಅವಕಾಶವಿಲ್ಲ. ಒಂದುವೇಳೆ ಪ್ರಾಣಿಗಳಲ್ಲಿ ಜ್ಞಾನೋದಯಕ್ಕೆ ಅವಕಾಶವೇನಾದರೂ ಇದ್ದಿದ್ದರೆ; ಅವುಗಳ ಜೀವಿತಾವಧಿಂiಲ್ಲೇ ತಮ್ಮ ನಡವಳಿಕೆಗಳನ್ನು ಶಾಶ್ವತವಾಗಿ ಬದಲಾಯಿಸಿಕೊಂಡು ಉನ್ನತ ಸ್ಥಾನಕ್ಕೇರಲು ಅವಕಾಶವಾಗುತ್ತಿರಲಿಲ್ಲವೆ? ಇದಕ್ಕಾಗಿ ಮತ್ತೊಂದು ಜನ್ಮ ಎತ್ತುವ ಪ್ರಮೇಯವಾದರೂ ಎಲ್ಲಿದೆ? ಎನ್ನುವ ಪ್ರಶ್ನೆಗಳು ಎದುರಾಗುತ್ತವೆ. ಪುನರ್ಜನ್ಮ ಚಕ್ರದಿಂದ ಬಿಡುಗಡೆ ಹೊಂದುವ ನಿಯಮಗಳಲ್ಲಿ ಅಹಿಂಸಾ ಪಾಲನೆ ಮುಖ್ಯವಾದುದು. ವೈರಾಗ್ಯಕ್ಕೆ ಅಡ್ಡಿಪಡಿಸುವ ಕೋಪ, ಲೋಭ, ಮಧ, ಮಾತ್ಸರ್ಯ, ಲೈಂಗಿಕ ಆನಂದ ಅಥವಾ ವ್ಯಕ್ತಿಯನ್ನು ಉದ್ರೇಕಗೊಳಿಸಿ; ಅವನಲ್ಲಿ ಹುಸಿ ಅನಂದವನ್ನು ಉಂಟುಮಾಡುವ ಅಂಶಗಳಿಂದ ದೂರವಿರುವುದು ಮುಂತಾದವು ಇತರ ನಿಯಮಗಳು. ಪಾಲಿಸಲು ಕಷ್ಟಕರವಾದ ಇಂತಹ ನಿಯಮಗಳಿಂದ ಸಂಸಾರಿಗಳಿಗೆ ವಿನಾಯಿತಿ ನೀಡಲಾಯಿತು. ಒಂದು ಜೀವಿಯ ಜೀವವನ್ನು ಪ್ರಜ್ಞಾಪೂರ್ವಕವಾಗಿ ಹತ್ಯೆಮಾಡುವುದಿಲ್ಲವೆನ್ನುವ ಪ್ರತಿಜ್ಞೆಯನ್ನು ಒಬ್ಬ ಜೈನನೆನಿಸಿಕೊಳ್ಳುವವನು ಮೊದಲು ತೆಗೆದುಕೊಂಡು, ಆನಂತರ ಪಾಲಿಸಬೇಕಾಗುತ್ತದೆ. ಆದರೆ ಬುದ್ದಿವಂತರಾದ ಜೈನರು ತಮ್ಮ ಪ್ರತಿಜ್ಞೆಯನ್ನು ದೈಹಿಕ ಹಿಂಸೆಗೆ ಕಾರಣವಾಗುವ ಹತ್ಯೆಯನ್ನು ಬಿಡುತ್ತಾ ಮಾನಸಿಕ ಹಿಂಸೆಯನ್ನು ಬುದ್ದಿಪೂರ್ವಕವಾಗಿ ಪಾಲಿಸುತ್ತಾ ಬರುತ್ತಿರುವುದು ವಿಷಾದದ ಸಂಗತಿ. ಈ ಪ್ರತಿಜ್ಞೆ ತನ್ನಷ್ಟಕ್ಕೆ ತಾನೇ ಜೈನರನ್ನು ಹೊಲದ ಉಳುಮೆಯಿಂದ ಅಥವಾ ಇನ್ನಾವುದೇ ರೀತಿಯಿಂದ ಪ್ರಾಣಿಗಳಿಗೆ ಹಿಂಸೆಯಾಗುವ ಕೆಲಸಗಳಿಂದ ದೂರವಿರಿಸಲು ಕಾರಣವಾಯಿತು. ಆದುದರಿಂದಲೇ ಬಹುಪಾಲು ಜೈನರು ತಮ್ಮ ಜೀವನಕ್ಕಾಗಿ ವ್ಯಾಪಾರ, ವಹಿವಾಟು ಹಾಗೂ ಉದ್ದಿಮೆಗಳಿಗೆ ಅಂಟಿಕೊಂಡಿರುವುದು. ವ್ಯವಸಾಯ ಪ್ರಾಣಿಗಳ ಸಹಾಯದಿಂದ ಮಾತ್ರ ನಡೆಯುತ್ತಿದ್ದ ಕಾಲಕ್ಕೆ ಈ ರೀತಿಯ ಯೋಚನೆ ಸರಿ ಎನ್ನಿಸಬಹುದು. ಆದರೆ; ಯಂತ್ರಗಳು, ಪೆಟ್ರೋಲ್, ಡೀಸಲ್ ಮುಂತಾದವುಗಳೇ ಪ್ರಧಾನವಾಗಿರುವ ಪ್ರಸ್ತುತ ಸಂದರ್ಭದಲ್ಲಿ ಸದರಿ ನಂಬಿಕೆ ಎಷ್ಟು ಸರಿ? ಎನ್ನುವ ಪ್ರಶ್ನೆ ಏಳುತ್ತದೆ. ಸುಳ್ಳು ಹೇಳುವುದಿಲ್ಲವೆಂದು ಅಥವಾ ಕದಿಯುವುದಿಲ್ಲವೆಂದು ಅಥವಾ ಅಪನಂಬಿಕಸ್ತನಾಗುವುದಿಲ್ಲ ವೆಂದೂ ಅವರು ಪ್ರತಿಜ್ಞೆ ಮಾಡಬೇಕಾಗುತ್ತದೆ. ಸತ್ಯ ಮತ್ತು ವ್ಯಾಪಾರ ವಹಿವಾಟುಗಳು ಪ್ರಸ್ತುತ ಎಣ್ಣೆ ಸೀಗೇಕಾಯಿ ಇದ್ದಂತೆ ಎನ್ನುವುದನ್ನು ಜೈನರು ಪ್ರತಿಪಾದಿಸುತ್ತಿದ್ದಾರೆ.

ಒಂದು ಧರ್ಮವು ತನ್ನನ್ನು ಶೋಧನೆಗೆ ಒಳಪಡಿಸಿಕೊಳ್ಳುವುದು ‘ಸಂನ್ಯಾಸ’ದ ಸ್ಥಿತಿಯಲ್ಲಿ ಮಾತ್ರ. ಇಂತಹ ಶೋಧನೆಯಿಂದ ಧರ್ಮದ ಶುದ್ದಿಯಾಗುತ್ತದೆ. ಸಂನ್ಯಾಸವನ್ನು ಸಾಮಾನ್ಯವಾಗಿ ‘ಸಂಸ್ಕಾರ’ ಮತ್ತು ‘ದೀಕ್ಷೆ’ ಎನ್ನುವ ಸಂಪ್ರದಾಯಗಳಿಂದ ಪಡೆಯಲಾಗು ತ್ತದೆ. ಬ್ರಹ್ಮಚರ್ಯೆ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಎನ್ನುವ ನಾಲ್ಕು ಆಶ್ರಮ ವ್ಯವಸ್ಥೆಯಿಂದ ಸಂಸ್ಕಾರ ಸಂಪ್ರದಾಯ ಆಗಿದೆ. ವ್ಯಕ್ತಿ ಗುರುಕುಲ ಪೂರೈಸುವವರೆಗೆ ಬ್ರಹ್ಮಚರ್ಯೆ ಪಾಲಿಸಿ, ನಂತರ ಗೃಹಸ್ಥಾಶ್ರಮ ಪಡೆದು, ಮಗನಿಗೂ ಗುರುಕುಲ ಮತ್ತು ಗೃಹಸ್ಥಾಶ್ರಮ ದೊರಕುವವರೆಗೆ ಸಂಸಾರದಲ್ಲಿದ್ದು; ಆನಂತರ ತಾನು ಅರ್ಥಕಾಮ ಪ್ರಪಂಚವನ್ನು ಕೊಡವಿ ಮೋಕ್ಷ ಸಾಧನೆಗಾಗಿ ಸಪತ್ನೀಕನಾಗಿ ಅಥವಾ ಓರ್ವನೇ ವನವಾಸಿಯಾಗುವುದು, ಆನಂತರ ಆಶ್ರಮದಲ್ಲಿ ಸಾಧನೆಯನ್ನು ಮಾಡಿ ಕೊನೆಯದಾಗಿ ಸರ್ವಸಂಗ ಪರಿತ್ಯಾಗ ರೂಪವಾದ ಸಂನ್ಯಾಸಾಶ್ರಮವನ್ನು ಸ್ವೀಕರಿಸುವುದನ್ನು ‘ಸಂಸ್ಕಾರ ಸಂನ್ಯಾಸ’ ಎಂದು ಕರೆಯಲಾಗುತ್ತಿದೆ. ಲೌಕಿಕ ವಿಷಯಗಳಲ್ಲಿ ಇರುವ ವೈರಾಗ್ಯದಿಂದ ವ್ಯಕ್ತಿ ನೇರವಾಗಿ ಸನ್ಯಾಸಾಶ್ರಮಕ್ಕೆ ತೆರಳುವುದನ್ನು ‘ದೀಕ್ಷಾ ಸಂನ್ಯಾಸ’ ಎಂದು ಕರೆಯಲಾಗುತ್ತಿದೆ. ಇದರಲ್ಲಿ ಗೃಹಸ್ಥ, ವಾನಪ್ರಸ್ಥ ಮುಂತಾದ ಆಶ್ರಮಗಳಾವುವೂ ಇರುವುದಿಲ್ಲ.

ಜೈನಧರ್ಮದಲ್ಲಿ ದಿಗಂಬರ, ಶ್ವೇತಾಂಬರ, ಯಾಪನೀಯ, ಶಾಕ್ತ ಮುಂತಾದ ಪಂಥಗಳಿದ್ದು; ದೀಕ್ಷಾ ಸಂಪ್ರದಾಯದ ಮೂಲಕ ಸಂನ್ಯಾಸ ಜೀವನವನ್ನು ಸ್ತ್ರೀ-ಪುರುಷರಿ ಬ್ಬರೂ ನಡೆಸಲು ಅವಕಾಶವಿದೆ. ಇಂತಹ ಜೀವನ ನಡೆಸುವ ಜೈನರನ್ನು ‘ನಿರ್ಗ್ರಂಥಿ’, ‘ಸಾಧು’, ‘ಮುನಿ’, ‘ಸಾಧ್ವಿ’ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸಂನ್ಯಾಸಕ್ಕಾಗಿ ಇರುವ ನಾನಾ ರೀತಿಯ ಉಪಾಸನಾ ಮಾರ್ಗಗಳಲ್ಲಿ ಧ್ಯಾನವಿಧಾನಗಳು, ತಂತ್ರಗಳು ಮತ್ತು ದೇಹದಂಡನೆಗಳು ಮುಖ್ಯವಾದವು. ಸಂನ್ಯಾಸಿಗಳು ಮಸ್ತಕದ ಮತ್ತು ಮೈನ ಕೂದಲುಗಳನ್ನು ಕೀಳಿಸಿಕೊಳ್ಳುವುದು, ‘ಸಲ್ಲೇಖನ’ ಎಂಬ ನಿರಾಹಾರ ವ್ರತವನ್ನು ಹಿಡಿದು ದೇಹತ್ಯಾಗ ಮಾಡುವುದು ಮುಂತಾದ ದೇಹದಂಡನೆ ಜೈನಧರ್ಮದಲ್ಲಿ ಸಾಮಾನ್ಯ. ಪ್ರಪಂಚದ ಧರ್ಮಗಳಲ್ಲಿ ‘ಸಾವನ್ನು’ ಆಹ್ವಾನಿಸುವುದು ಇದೊಂದೇ ಎಂದು ಕಂಡುಬರುತ್ತದೆ.

ಜೈನಧರ್ಮದಲ್ಲಿ ಹೆಣ್ಣಿನ ಸ್ಥಾನಮಾನ ಅಷ್ಟಕ್ಕಷ್ಟೇ ಎಂದು ಹೇಳಬಹುದು. ಹಿಂದೂಧರ್ಮಕ್ಕಿಂತ ಉತ್ತಮವೆಂದು ಕಂಡುಬಂದರೂ ಅದು ಒಂದು ಭ್ರಮೆ ಎನ್ನುವುದು ವಾಸ್ತವ. ಜೈನ ಒಂದು ಶ್ರವಣ ಧರ್ಮ ಆಗಿರುವುದರಿಂದ; ಸಾಮಾನ್ಯ ಮಹಿಳೆಯರ ಆದರ್ಶಗಳು, ಕರ್ತವ್ಯಗಳು ಈ ಧರ್ಮದಲ್ಲಿ ಪ್ರಮುಖ ವಿಷಯಗಳಾಗಿರುವುದಿಲ್ಲ. ಮಹಿಳೆಯರ ಸಂನ್ಯಾಸ, ಜೀವನ ವಿರಕ್ತಿ ಮುಂತಾದವುಗಳನ್ನು ಎತ್ತಿ ಹಿಡಿಯಲು ಈ ಧರ್ಮ ತಿರಸ್ಕರಿಸುತ್ತದೆ. ಆದರೆ ದೀಕ್ಷೆ ಕೊಟ್ಟು ಮೋಕ್ಷ ಸಾಧನೆಗೆ ಮಾರ್ಗ ಮಾಡಿಕೊಟ್ಟಿದೆ. ದಿಗಂಬರ ಪಂಥ ಸ್ತ್ರೀಗೆ ಅದೇ ಜನ್ಮದಲ್ಲಿ ಮೋಕ್ಷವಿಲ್ಲವೆಂದು ಸಾರಿದರೂ; ಜೈನರ ಒಳಪಂಗಡ ‘ಯಾಪನೀಯರು’ ಮಾತೃ ಪಂಥದ ಆರಾಧಕರಾಗಿ ಸ್ತ್ರೀಯರಿಗೂ ಮುಕ್ತಿಯನ್ನು ಬೋಧಿಸಿದರು. ಶಾಕ್ತರ ಜ್ವಾಲಮಾಲಿನಿ ಪಂಥದವರೂ ಇದನ್ನೇ ಮಾಡಿದ್ದು.

ಜೈನಧರ್ಮದ ಮುಖ್ಯ ಸಿದ್ಧಾಂತ ‘ಅನೇಕಾಂತವಾದ’. ಸತ್ಯವನ್ನು ಕಂಡುಕೊಳ್ಳಲು ಒಂದು ಮಾರ್ಗವಲ್ಲ. ಹಲವು ಮಾರ್ಗಗಳು ಇರಬಹುದು ಎನ್ನುವುದು ಇದರ ಸಾರ. ಮನುಷ್ಯನ ಜ್ಞಾನ ಅಪೂರ್ಣವಾಗಿರುವುದರಿಂದ; ಒಬ್ಬನೇ ವ್ಯಕ್ತಿ ಸತ್ಯದ ಎಲ್ಲ ಮುಖಗಳನ್ನು ಕಾಣಲಾರ. ಆದುದರಿಂದ ನಿಜವಾದ ಅಹಿಂಸಕ ಯಾವುದನ್ನೂ ಇದೇ ಕೊನೆ ಎಂದು ಸಾರಲಾರ. ಆದುದರಿಂದ ‘ಅನೇಕಾಂತವಾದ’ವನ್ನು ಸಹಿಷ್ಣತೆಯ ಪರಮ ಸಿದ್ಧಾಂತ ಎಂದು ಮಾನ್ಯ ಮಾಡಲಾಗಿದೆ. ಇದನ್ನು ಬಳಸಿಕೊಂಡಿದ್ದರಿಂದ ಮಹಾರರು ಒಬ್ಬ ಶ್ರೇಷ್ಠಮಟ್ಟದ ‘ಪಾಷಂಡಿ’ಯೆನ್ನಿಸಿಕೊಂಡರು.

ಒಂದು ಧರ್ಮ ಜನರ ಧರ್ಮವಾಗುವ ಅನೇಕ ಅಂಶಗಳಲ್ಲಿ ಜನರ ಆಡುಭಾಷೆಯೂ ಒಂದು. ಜೈನಧರ್ಮ ಸಂಸ್ಕೃತಕ್ಕೆ ಬದಲಾಗಿ ‘ಅರ್ಧಮಾಗಧಿ’ ಎನ್ನುವ ಜನಸಾಮಾನ್ಯರ ಆಡುಭಾಷೆಯನ್ನು ಸಂವಹನಕ್ಕಾಗಿ ಬಳಸಿಕೊಂಡಿದ್ದರಿಂದ ಬಹುಜನತೆಯನ್ನು ತಲುಪಲು ಕಾರಣವಾಯಿತು.