. ಸಿಖ್ ಧರ್ಮ

‘ಸಿಖ್’ ಎಂದರೆ ‘‘ವಿದ್ಯಾರ್ಥಿ’’ ಅಥವಾ ‘‘ಶಿಷ್ಯ’’ ಅಥವಾ ‘‘ಅನುಯಾಯಿ’’ ಎನ್ನುವ ಅರ್ಥ. ‘‘ಸಿಖ್ ಮತಧರ್ಮ’ದ ಸ್ಥಾಪಕ ನಾನಕ್. ಕ್ರಿ.ಶ.೧೪೬೯ರಲ್ಲಿ ಪಂಜಾಬ್ ಪ್ರಾಂತ್ಯದ ತಾಲವಂಡಿಯ ಒಂದು ಹಳ್ಳಿಯಲ್ಲಿ ಹಿಂದೂ ತಂದೆ-ತಾಯಿಗಳಿಗೆ ಜನಿಸಿದ. ನಾನಕನ ಶಾಲಾ ವಿದ್ಯಾಭ್ಯಾಸ ಒಬ್ಬ ಮುಸ್ಲಿಂ ಶಿಕ್ಷಕನಲ್ಲಿ ನಡೆಯಿತು. ಹೀಗೆ ಸ್ಥಾಪಿಸಿದ ಸಿಖ್ಧರ್ಮ ಹಿಂದೂ ಮತ್ತು ಮುಸ್ಲಿಂ ಧರ್ಮಗಳೆರಡರಿಂದಲೂ ಸತ್ವವನ್ನು ಪಡೆದಿದೆ. ಇಲ್ಲಿ ಜ್ಞಾನವನ್ನು ನೀಡಿ ಮಾರ್ಗದರ್ಶನ ಮಾಡುವ ‘ಗುರು’ವಿಗೆ, ಆ ಮೂಲಕ ಅವನ ಬೋಧನೆಗಳಿಗೆ ಮಾನ್ಯತೆ. ಆದುದರಿಂದಲೇ ನಾನಕನನ್ನು ‘ಗುರುನಾನಕ್’ ಎಂದು ಕರೆಯುವುದು.

ಇಸ್ಲಾಂ ಧರ್ಮ ವಿಗ್ರಹಾರಾಧನೆ ಮತ್ತು ಅದರ ಆಚರಣೆಗಳನ್ನು ತಿರಸ್ಕರಿಸುತ್ತದೆ ಮತ್ತು ಏಕದೇವ ವಾದವನ್ನು ಎತ್ತಿಹಿಡಿಯುತ್ತದೆ. ಇದರಿಂದ ಪ್ರಭಾವಿತರಾದ ಹಿಂದೂಧರ್ಮ ಪ್ರವರ್ತಕರು; ಹಿಂದೂ ಧರ್ಮದಲ್ಲಿನ ಕೆಲವು ನಂಬಿಕೆಗಳು ಮತ್ತು ಆಚರಣೆಗಳನ್ನು ಮಾರ್ಪಡಿಸುತ್ತಾರೆ. ಉದಾಹರಣೆಗೆ; ಕ್ರಿ.ಶ.ಹದಿನಾಲ್ಕನೇ ಶತಮಾನದಲ್ಲಿ ರಮಾನಂದರು ಜಾತಿಪದ್ಧತಿ ಮತ್ತು ಮಾಂಸಾಹಾರದ ಮೇಲಿನ ನಿರ್ಬಧವನ್ನು ತಿರಸ್ಕರಿಸುತ್ತಾರೆ. ಏಕದೇವತಾವಾದವನ್ನು ಒಪ್ಪಿದ ಇಸ್ಲಾಂನಲ್ಲಿ ಮುಸಲ್ಮಾನನಾಗಿ ಹುಟ್ಟಿದ ‘ಕಬೀರ್ (೧೪೪೦-೧೫೧೮) ರಮಾನಂದರ ಅನುಯಾಯಿಯಾಗುತ್ತಾನೆ. ಒಂದು ಶತಮಾನದ ಹಿಂದೆ ಜೀವಿಸಿದ್ದ ಕವಿ ನಾಮದೇವನಂತೆ ಕಬೀರ್; ವಿಗ್ರಹಗಳಲ್ಲಿ ದೇವರಿದ್ದಾನೆ ಎನ್ನುವುದನ್ನು ಅಪಹಾಸ್ಯ ಮಾಡುತ್ತಾನೆ. ‘‘ಆಂತರ್ಯದ ನಿಷ್ಠೆ ಅಥವಾ ಜೀವನದ ನೈತಿಕತೆಯನ್ನು ಹೊರತುಪಡಿಸಿದ ಶಾಸ್ತ್ರಗಳು, ಧರ್ಮಗ್ರಂಥಗಳು, ಯಾತ್ರಾ ಸ್ಥಳಗಳು, ವೈರಾಗ್ಯ, ಗಂಗಾಸ್ನಾನ’’ ಇಂತಹ ಧರ್ಮದ ಬಾಹ್ಯಾಚರಣೆಗಳ ಬಗ್ಗೆ ಕಬೀರ್ ಅತೃಪ್ತಿ ವ್ಯಕ್ತಪಡಿಸುತ್ತಾನೆ.

‘‘ದೇವನೊಬ್ಬ. ಅವನು ಸತ್ಯ. ಅವನು ಸೃಷ್ಟಿಕರ್ತ, ಭಯ ಮತ್ತು ಶತೃತ್ವವಿರದವ. ವಿಶ್ವವನ್ನು ವ್ಯಾಪಿಸಿರುವ ಅವನು ಎಲ್ಲೆಲ್ಲೂ ಇದ್ದಾನೆ. ಅವನು ಹುಟ್ಟಿಲ್ಲದ ಸ್ವಯಂಭು ಮತ್ತು ಚಿರಂತನ. ಅವನು ಹೃದಯ ವೈಶಾಲ್ಯದ ಮಹಾನುಭಾವ. ಪ್ರಾರಂಭದಲ್ಲಿ ಅವನು ಸತ್ಯ, ಕಾಲ ಸರಿದಂತೆಲ್ಲಾ ಅವನೇ ಸತ್ಯ. ಆ ಸತ್ಯ ಈಗ ಮತ್ತು ಯಾವಾಗಲೂ ಇರುವಂತಹುದು.’’ ಈ ವಾಕ್ಯಗಳನ್ನು ಸಿಖ್ಖರು ಪ್ರತಿದಿನ ಪಠಿಸುತ್ತಾರೆ. ಸಿಖ್ ಧರ್ಮದ ಪ್ರವಿತ್ರ ಗ್ರಂಥವಾದ ‘ಗ್ರಂಥಸಾಹೇಬ್’ ಅಥವಾ ‘ಆದಿಗ್ರಂಥ’ದಲ್ಲಿ ಉಲ್ಲೇಖವಾಗಿರುವ ಈ ಸಾಲುಗಳು ಗುರುನಾನಕನ ಧಾರ್ಮಿಕ ಅನುಭವಗಳನ್ನು ಪ್ರತಿನಿಧಿಸುತ್ತವೆ. ಆತನ ಈ ಬೋಧನೆಗಳು ಅರ್ಥಪೂರ್ಣವಾದ ಕಾವ್ಯಧಾರೆಯಂತೆ, ಸುಮಧುರ ಕಾವ್ಯಗಾನದಂತೆ ಹರಡಿದ್ದರಿಂದ ಮತ್ತು ಆತ ಮೆಕ್ಕಾಕ್ಕೆ ಪ್ರವಾಸ ಮಾಡಿದ್ದರಿಂದ; ಪಂಜಾಬಿನಾದ್ಯಂತ ಅನುಯಾಯಿಗಳು ಹೆಚ್ಚಿದರು. ನಾನಕ್ ಸಾಯುವುದಕ್ಕೆ ಮುಂಚೆ; ತನ್ನ ಬೋಧನೆಗಳನ್ನು ಮತ್ತು ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಮಧ್ಯದ ಕಂದಕವನ್ನು ಮುಚ್ಚುವಂತಾ ಹಾಗೂ ತನ್ನ ನಂಬಿಕಾ ವಿಧಾನದ ಪ್ರಯತ್ನವನ್ನು ಮುಂದುವರೆಸಲು ಅಂಗದ ಎನ್ನುವಾತನನ್ನು ನೇಮಿಸಿದ.

‘‘ಹಿಂದು ಎನ್ನುವುದಾಗಲಿ ಅಥವಾ ಮುಸಲ್ಮಾನ ಎನ್ನುವುದಾಗಲಿ ಯಾವುದೂ ಸೃಷ್ಟಿಯಲ್ಲಿ ಇಲ್ಲ.’’ ಎನ್ನುವುದನ್ನು ಗುರುನಾನಕ್ ಬೋಧಿಸಿದ. ಪ್ರಪಂಚದ ನಶ್ವರತೆಯನ್ನು ಹಾಗೂ ಆತ್ಮ ಮತ್ತು ಕರ್ಮಗಳ ಮಿಳಿತವನ್ನು ಈ ಧರ್ಮ ಒಪ್ಪುತ್ತದೆ. ಸಿಖ್ ಧರ್ಮದಲ್ಲಿ ಮಾನವರಿಗೆ ಪುನರ್ಜನ್ಮವಿದ್ದು; ಪ್ರತಿಯೊಂದು ಜನ್ಮದ ಸುಖ-ದುಃಖಗಳ ಪ್ರಮಾಣವನ್ನು ಅವರವರ ಕರ್ಮಗಳಿಗೆ ತಕ್ಕಂತೆ ದೇವರು ಹಂಚುತ್ತಾನೆ. ಇಸ್ಲಾಂನಲ್ಲಿ ಇರುವುದು ಒಂದೇ ಜನ್ಮ. ಅದರಲ್ಲಿ ಮುಕ್ತಿಯ ಸ್ವರ್ಗ ಎನ್ನುವುದು ಕಂಡುಬರುವುದಿಲ್ಲ. ಇಸ್ಲಾಂನಲ್ಲಿ ಬಾಗಿಯಾಗುವುದರ ಮೂಲಕ ದೇವರು ಅಥವಾ ಅಲ್ಲಾಹ್ ಎನ್ನುವ ಅಂತಿಮ ಸತ್ಯದಲ್ಲಿ ಸೇರಿ ಅಸ್ತಿತ್ವ ಕಳೆದುಹೋಗುತ್ತದೆ. ‘‘ಇಲ್ಲಿ ಮಾನವರಿಗೆ ಅಂತಿಮ ಸತ್ಯ ಎನ್ನುವುದು ಬೇರೆಯವರ ಅನುಭವವಲ್ಲ, ಆದರೆ ಅದು ತನ್ನ ಹೃದಯದಲ್ಲಿ ಮತ್ತು ಗುರುವಿನ ಬೋಧನೆಗಳಲ್ಲಿ ಮಾತ್ರ ಕಂಡುಬರುತ್ತದೆ’’ ಎಂದು ನಾನಕ್ ಬೋಧಿಸಿದ.

ಗುರುನಾನಕ್‌ನ ಬೋಧನೆಗಳು ಮತ್ತು ಅವನನ್ನು ಅನುಸರಿಸಿದ ಎಲ್ಲಾ ಗುರುಗಳ ಬೋಧನೆಗಳ ಜೊತೆಗೆ ಹಿಂದೂ ಆಚಾರ್ಯರ ಮತ್ತು ಮುಸಲ್ಮಾನ ಧರ್ಮ ಪಂಡಿತರ ಜ್ಞಾನಸಾರ ‘ಆದಿಗ್ರಂಥ’ ಅಥವಾ ‘ಗ್ರಂಥ ಸಾಹೇಬ್’ನಲ್ಲಿ ಸೇರದೆ. ಸಿಖ್ ಧರ್ಮದ ನೀತಿ-ನಿಯಮಗಳು ಜಾತ್ಯಾತೀತ ಸಮಾಜಕ್ಕೆ; ಸ್ತ್ರೀಯರು ಧರಿಸುವ ‘ಬುರ್ಖಾ’ ಮತ್ತು ‘ಸತಿ’ ಹೋಗುವುದನ್ನು ತಿರಸ್ಕರಿಸುವುದಕ್ಕೆ ಒತ್ತು ನೀಡುತ್ತದೆ. ಧರ್ಮಕ್ಕಾಗಿ ಕೊನೆಯ ಉಸಿರಿರುವವರೆಗೂ ಹೋರಾಡುವ ಪ್ರತಿಕ್ಷಣವೂ ಸಿಖ್ ಧರ್ಮದಲ್ಲಿ ಪವಿತ್ರ. ಪಿತೃಪೂಜೆ ಪವಿತ್ರ.

ಸಿಖ್ ಧರ್ಮ ಸಂಕೇತದಲ್ಲಿನ ಖಡ್ಗಗಳು, ಕೃಪಾಣ ಮತ್ತು ಗುರಾಣಿಗಳು ಸಿಖ್ ಸಮುದಾಯದ ಯುದ್ಧೋತ್ಸಾಹೀ ಮನೋಧರ್ಮವನ್ನು ಪ್ರತಿನಿಧಿಸುತ್ತವೆ. ತನ್ನ ಧರ್ಮ ಅಥವಾ ನಂಬಿಕೆಯನ್ನು ರಕ್ಷಿಸುವುದಕ್ಕಾಗಿ ಸಿಖ್ ಧರ್ಮಕ್ಕೆ ಸೇರಿದ ವ್ಯಕ್ತಿಯು; ಹೋರಾಟಕ್ಕೆ ಹಾಗೂ ಬಲಿದಾನಕ್ಕೆ ಸಿದ್ಧನಾಗಿರಬೇಕೆಂದು ಈ ಸಂಕೇತಗಳು ಸೂಚಿಸುತ್ತವೆ.

ಗುರುನಾನಕ್ ತನ್ನ ವಿಚಾರಗಳನ್ನು ಜನತೆಗೆ ತಲುಪಿಸಲು ಹಾಡುಗಾರಿಕೆ ಮಾಧ್ಯಮವನ್ನು ಬಳಸಿಕೊಂಡ. ‘ಮರ್ದಾನ’ ಎನ್ನುವ ವಾದ್ಯವನ್ನು ನುಡಿಸುತ್ತಿದ್ದ. ಹೀಗೆ ಸುಮಾರು ಇಪ್ಪತ್ಮೂರು ವರ್ಷಗಳ ಕಾಲ ಧರ್ಮ ಪ್ರಚಾರಕ್ಕಾಗಿ ದೇಶದ ಉದ್ದಗಲಕ್ಕೆ ಸುತ್ತಿದ. ಇಂತಹ ಸಂದರ್ಭದಲ್ಲಿ ಒಮ್ಮೆ ಒಬ್ಬ ‘ಖಾಜಿ’ ನಾನಕನನ್ನು ಕುರಿತು ‘‘ನಿನ್ನ ದೃಷ್ಟಿಯಲ್ಲಿ ಇಸ್ಲಾಂನ ಕಲ್ಪನೆಯೇನು’’? ಎಂದು ಪ್ರಶ್ನಿಸಿದ. ಅದಕ್ಕೆ ನಾನಕ ‘‘ಕರುಣೆಯೇ ಮಸೀದಿ, ಭಕ್ತಿಯೇ ಚಾಪೆ, ಮನುಷ್ಯತ್ವವೇ ಕುರಾನ್, ಸಹನೆ-ಸನ್ನಡತೆಗಳೇ ಉಪವಾಸ, ನಡೆಯುವ ಒಳ್ಳೆಯ ದಾರಿಯೇ ಕಾಬಾ ಯಾತ್ರೆ, ಪ್ರಾರ್ಥನೆಯೇ ಜಪಮಣಿ’’ ಎಂದು ಉತ್ತರಿಸಿದ.

ನಾನಕ್ ಒಮ್ಮೆ ಹರಿದ್ವಾರದಲ್ಲಿದ್ದಾಗ ಅಲ್ಲಿಯ ಪಾಂಡಗಳ (ಪುರೋಹಿತರ) ಆಚರಣೆಗಳು ವಿಚಿತ್ರವಾಗಿ ಕಂಡವು. ಒಬ್ಬ ಪಾಂಡ ಸೂರ್ಯನಿಗೆ ಗಂಗಾ ಜಲವನ್ನು ಅರ್ಪಿಸುತ್ತಿದ್ದ. ಅದನ್ನು ಕಂಡ ನಾನಕ್ ‘‘ಸೂರ್ಯನ ಕಡೆ ಯಾಕೆ ನೀರು ಎರಚುತ್ತಿರುವಿ’’? ಎಂದು ಪ್ರಶ್ನಿಸಿದ. ಅದಕ್ಕೆ ಪಾಂಡ ‘‘ಸ್ವರ್ಗದಲ್ಲಿರುವ ನನ್ನ ಪೂರ್ವಿಕರಿಗೆ ಗಂಗಾ ಜಲ ಅರ್ಪಿಸುತ್ತಿದ್ದೇನೆ’’ ಎಂದು ಹೇಳಿ ತನ್ನ ಕಾರ್ಯವನ್ನು ಮುಂದುವರಿಸುತ್ತಾನೆ. ಪಾಂಡಾನ ಮಾತು ನಾನಕನಿಗೆ ಆಶ್ಚರ್ಯ ಉಂಟು ಮಾಡುತ್ತದೆ. ಸ್ವಲ್ಪ ಹೊತ್ತು ಯೋಚಿಸಿದ ನಾನಕ್ ತಾನೂ ನದಿಗೆ ಇಳಿದು ಪಶ್ಚಿಮದ ಕಡೆಗೆ ತಿರುಗಿ ನೀರು ಎರಚಲು ಪ್ರಾರಂಭಿಸುತ್ತಾನೆ. ಇದನ್ನು ಕಂಡ ಪಾಂಡಾ ‘‘ನೀನು ವಿರುದ್ಧ ದಿಕ್ಕಿಗೆ ಏತಕ್ಕೆ ನೀರು ಎರಚುತ್ತಿರುವೆ’’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ನಾನಕ್ ‘‘ಊರಿನಲ್ಲಿರುವ ನನ್ನ ಹೊಲಕ್ಕೆ ನೀರುಣಿಸಲು ಎರಚುತ್ತಿರುವೆ’’ ಎಂದು ಉತ್ತರಿಸುತ್ತಾನೆ. ಅದಕ್ಕೆ ಪಾಂಡ ‘‘ನಿನಗೆಲ್ಲೊ ಹುಚ್ಚು’’ ಎಂದ. ನಾನಕ್ ನಸುನಕ್ಕು ‘‘ನೀನು ಎರಚಿದ ನೀರು ಸ್ವರ್ಗದಲ್ಲಿರುವ ನಿನ್ನ ಹಿರಿಯರಿಗೆ ತಲುಪುವುದಾದರೆ; ನಾನು ಎರಚಿದ ನೀರು ಈ ಭೂಮಿಯ ಮೇಲಿರುವ ನನ್ನ ಜಮೀನಿಗೇಕೆ ತಲುಪುವುದಿಲ್ಲ’’? ಎಂದು ಮರುಪ್ರಶ್ನೆ ಹಾಕಿದಾಗ; ಪಾಂಡಾನ ಮುಖ ಪೆಚ್ಚಾಗುತ್ತದೆ. ಹೀಗೆ ಗುರುನಾನಕ್ ದುಡಿಯುವ ಸಂಸ್ಕೃತಿಗೆ ಗೌರವ ತಂದ. ಮೌಢ್ಯದ ಬೇರಿಗೇ ಕೈ ಹಾಕಿದ.