. ವೀರಶೈವ ಧರ್ಮ

ಕರ್ನಾಟಕದಲ್ಲಿ ಹನ್ನೊಂದನೇ ಶತಮಾನದ ಹೊತ್ತಿಗೆ ಜೈನ ಹಾಗೂ ವೈಷ್ಣವ ಧರ್ಮಗಳ ಪ್ರಾಬಲ್ಯವು ಕುಂಠಿತವಾಗಿ; ಹನ್ನೆರಡನೆಯ ಶತಮಾನದ ಮಧ್ಯಭಾಗದಲ್ಲಿ ‘ವೀರಶೈವವೆಂಬ’ ಇನ್ನೊಂದು ಭಕ್ತಿ ಪಂಥ ಹುಟ್ಟಿತು. ಇದನ್ನು ಪಂಥ ಎನ್ನುವುದಕ್ಕಿಂತ; ಧಾರ್ಮಿಕ ಮತ್ತು ವೈಚಾರಿಕತೆಯ ಸಮನ್ವಯವನ್ನು ಸಾಧಿಸಿದ ಶರಣರ ಒಂದು ಚಳುವಳಿ ಅಥವಾ ಆಂದೋಲನ ಎನ್ನಬಹುದು. ಯಜ್ಞಯಾಗಾದಿಗಳ ಹಾಗೂ ದೇವಾಲಯಗಳ ಮೂಲಕ ಮೇಲುಜಾತಿಯವರು ಕೆಳಜಾತಿಯವರನ್ನು ವ್ಯವಸ್ಥಿತಿ ಶೋಷಣೆಗೆ ಒಳಪಡಿಸಿ; ಹಿಂದೂ ಧರ್ಮದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಗಟ್ಟಿ ಮಾಡಿದ್ದ ಕಾಲದಲ್ಲಿ ಬಸವಣ್ಣ ಜಾತಿವ್ಯವಸ್ಥೆಯ ವಿರುದ್ಧ ಬಂಡೆದ್ದು ವೀರಶೈವ ಅಥವಾ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ.

ಬಸವಣ್ಣ ಮಾಡಿದ ಸುಧಾರಣೆಗಳನ್ನು ಈ ರೀತಿ ಪಟ್ಟಿ ಮಾಡಬಹುದು.

೧. ವರ್ಣಾಶ್ರಮ ಧರ್ಮದಿಂದ ಅಂದರೆ ಹಿಂದೂ ಧರ್ಮದಿಂದ ಪ್ರಾಚೀನ ಶೈವಪಂಥವನ್ನು ಮುಕ್ತಗೊಳಿಸಿ ವೀರಶೈವವನ್ನು ರೂಪಿಸಿದ್ದು.

೨. ಬ್ರಾಹ್ಮಣರಿಂದ ಹಿಡಿದು ಚಮ್ಮಾರರವರೆಗೆ ಶ್ರೇಣೀಕೃತವಾಗಿದ್ದ ಎಷ್ಟೋ ಜಾತಿಗಳವರನ್ನು ಹೊಸಧರ್ಮ ಸೇರಲು ಆಹ್ವಾನಿಸಿದ್ದು ಮತ್ತು ಪ್ರೇರಿಸಿದ್ದು.

೩. ಶರಣರ ಚಳುವಳಿಯಲ್ಲಿ ಸ್ತ್ರೀಯರಿಗೂ ಪುರುಷರೊಡನೆ ಸಮಾನ ಸ್ಥಾನಮಾನಗಳಿದ್ದವು.

೪. ಶೂನ್ಯ ಸಂಪಾದನೆಯಲ್ಲಿ ಮುಕ್ತ ಚರ್ಚೆಯ ಪರಿಕಲ್ಪನೆ ಅತ್ಯಂತ ಪ್ರಜಾಸತ್ತಾತ್ಮಕವಾಗಿ ಮೂಡಿಬಂದಿದೆ. ಅಲ್ಲಿಯ ಚರ್ಚೆಯಲ್ಲಿ ಭಾಗವಹಿಸಿದ್ದ ೩೦೦ ಜನ ಶರಣರಲ್ಲಿ ೬೦ ಜನ ಸ್ತ್ರೀಯರಿದ್ದರು ಎನ್ನುವುದು ಮುಖ್ಯ.

೫. ಪುರೋಹಿತಶಾಹಿಯ ಮೂಲಕ ಆಗುತ್ತಿದ್ದ ಶೋಷಣೆಯನ್ನು ತಪ್ಪಿಸಲು ಕಾಯಕ ಮತ್ತು ದಾಸೋಹ ತತ್ವವನ್ನು ರೂಢಿಯಲ್ಲಿ ತಂದರು. ಕಾಯಕವೇ ಕೈಲಾಸವೆಂದು ಸಾರಿದ ವೀರಶೈವ ಧರ್ಮ. ಕಾಯಕದ ಫಲವನ್ನು ದಾಸೋಹದ ಮೂಲಕ ಸಮುದಾಯದ ಇತರರೊಡನೆ ಹಂಚಿಕೊಂಡು ಸುಖಪಡುವುದನ್ನು ಕಲ್ಪಿಸಿತು.

೬. ದೇವಾಲಯ ಸಂಸ್ಕೃತಿಯಲ್ಲಿ ರೂಢಿಯಲ್ಲಿದ್ದ ಅರ್ಚಕಶಾಹಿಯನ್ನು ತಪ್ಪಿಸಿ ಜನರಿಗೆ ಸುಲಭವಾಗಿ ಸಾಧ್ಯವಾಗುವ ಇಷ್ಟ ಲಿಂಗಾರ್ಚನೆಯ ಮಹತ್ವವನ್ನು ಬೋಧಿಸಿದ್ದು.

೭.ಬೋಧನೆಗಳನ್ನು ಜನಪ್ರಿಯಗೊಳಿಸಲು ದೇವ ಭಾಷೆಯೆಂದು ಖ್ಯಾತವಾಗಿದ್ದ ಸಂಸ್ಕೃತಕ್ಕೆ ಬದಲಾಗಿ ಜನಭಾಷೆಯಾದ ಸರಳ ಕನ್ನಡವನ್ನು ಬಳಸಿ ವಚನ ಸಾಹಿತ್ಯವನ್ನು ನಿರ್ಮಾಣ ಮಾಡಿದ್ದು.

ವೀರಶೈವ ಧರ್ಮವನ್ನು ವಿವರವಾಗಿ ಚರ್ಚಿಸುವುದಕ್ಕೆ ಮುಂಚೆ ಪ್ರಾಚೀನ ಶೈವಪಂಥದ ಬಗ್ಗೆ ಸ್ವಲ್ಪವೇ ಸ್ವಲ್ಪ ಅವಲೋಕಿಸೋಣ. ಅತ್ಯಂತ ಪ್ರಾಚೀನವಾದ ಶೈವಪಂಥ ಶಿವನನ್ನು ಸತ್ಯದ ಸಾಕಾರಮೂರ್ತಿ ಎಂದು ಪ್ರತಿಪಾದಿಸುತ್ತದೆ. ಪ್ರತಿಯೊಬ್ಬ ಜೀವನೂ ಆತ್ಮ, ಮಾಯೆ ಮತ್ತು ಕಾರ್ಮಿ ಎನ್ನುವ ಮೂರು ಮಲಗಳಿಂದ ಆವೃತನಾಗಿ ತನ್ನ ಸರ್ವಜ್ಞತ್ವವನ್ನು ಕಳೆದುಕೊಂಡು ಅನೇಕ ಜನ್ಮಗಳನ್ನು ಪಡೆಯುತ್ತಾನೆ. ಈ ಜೀವನೇ ಪಶು. ಇವನನ್ನು ಜನನ ಮರಣಗಳಿಂದ ರಕ್ಷಿಸುವವನೇ ಶಿವ. ಇನ್ನೊಂದು ಹೆಸರೆಂದರೆ ಪಶುಪತಿ. ಗುರುವಿತ್ತ ದೀಕ್ಷೆಯಿಂದ ಮಾತ್ರ ಜೀವ-ಮುಕ್ತಿಯನ್ನು ಸಾಧಿಸಬಲ್ಲ. ದೀಕ್ಷೆಯಿಂದ ಶುದ್ಧನಾದ ಜೀವನೇ ಅಂಗ. ಇವನು ಅಂಗದೊಡನೆ ಸತತ ಭಕ್ತಿಯಿಂದ ಮಾತ್ರ ದೈವತ್ವವನ್ನು ಪಡೆಯಬಲ್ಲ. ಇಲ್ಲಿ ಭಕ್ತಿ ಆಧ್ಯಾತ್ಮಿಕ ಸಾಧನೆಯ ಪ್ರಮುಖ ಆಚಾರವಾಗಿದೆ.

ವೀರಶೈವ ಧರ್ಮವು ಸೃಷ್ಟಿ-ಸಂಹಾರಗಳ ಮೂಲವಾದ ಶಿವನನ್ನು ಸ್ಥಲ ಎಂದು ಕರೆಯುತ್ತದೆ. ಸೃಷ್ಟಿ ಕಾರ್ಯೋನ್ಮುಖವಾದ ಶಕ್ತಿಯಿಂದಾಗಿ ಶಿವ; ಲಿಂಗ ಮತ್ತು ಅಂಗ ಎಂದು ಎರಡಾಗುತ್ತಾನೆ. ಶಿವನ ಭಕ್ತಿ; ಭಕ್ತಿ ಮತ್ತು ಶಕ್ತಿ ಎಂದು ಎರಡಾಗುತ್ತದೆ. ಲಿಂಗ ಉಪಾಸ್ಯ, ಅಂಗ ಉಪಾಸಕ. ಭಕ್ತಿಯೇ ಉಪಾಸನೆ. ಈ ಉಪಾಸನೆ ಹಂತ-ಹಂತವಾಗಿ ವಿಕಾಸಗೊಳ್ಳುವ ಮಾರ್ಗವೇ ಷಟ್ ಸ್ಥಲ. ಭಕ್ತಸ್ಥಲ, ಮಹೇಶ್ವರ ಸ್ಥಲ, ಪ್ರಸಾದಿ ಸ್ಥಲ, ಪ್ರಾಣಲಿಂಗಸ್ಥಲ, ಶರಣಸ್ಥಲ ಮತ್ತು ಐಕ್ಯಸ್ಥಲ ಎನ್ನುವವೇ ಷಟ್ ಸ್ಥಲ ಅಥವಾ ಆರು ಸ್ಥಲಗಳು. ಈ ಆರು ಸ್ಥಲಗಳ ಉಪಾಸನೆಯ ಮಾರ್ಗದಲ್ಲಿ ಭಕ್ತಿ ಪ್ರಧಾನ ಪಾತ್ರವಹಿಸುತ್ತದೆ. ಈ ಆರೂ ಸ್ಥಲಗಳಲ್ಲಿ ಭಕ್ತಿ ವಿಕಾಸವಾಗುತ್ತದೆ.

ಜೀವಾತ್ಮನಲ್ಲಿ ಸೂಕ್ಷ್ಮರೂಪದಲ್ಲಿರುವ ಭಕ್ತಿಯು ಆಚಾರದಲ್ಲಿ ಶ್ರದ್ಧಾಯುಕ್ತವಾಗಿ ನೆಲೆಗೊಂಡಾಗ ಅದನ್ನು ಸದ್ಭಕ್ತಿ ಎನ್ನುತ್ತಾರೆ. ಸದ್ಭಕ್ತಿಯೇ ಗುರು. ಶಾಸ್ತ್ರ ಮೊದಲಾದವು ಗಳಲ್ಲಿರುವ ನಿಷ್ಠೆಯಿಂದ ನೈಷ್ಟಿಕೀ ಭಕ್ತಿ ಎನಿಸುವುದು. ಗುರುವು ಅನುಗ್ರಹಿಸಿದ ಶಿವಲಿಂಗದಲ್ಲಿರುವ ನೈಷ್ಟಿಕೀ ಭಕ್ತಿಯೇ ಅವಧಾನ. ಅಂದರೆ ಎಚ್ಚರಿಕೆಯಿಂದ ಅವಧಾನ ಭಕ್ತಿ ಎನಿಸುವುದು. ಜೀವನು ಎಚ್ಚರಿಕೆ ಅಥವಾ ಅವಧಾನ ಭಕ್ತಿಯಿಂದ ಅನನ್ಯವಾದ ಅನುಭಾವ ಪಡೆದಾಗ ಅನುಭವ ಭಕ್ತಿ ಎನಿಸುವುದು. ಅನುಭವ ಭಕ್ತಿ ಶಿವಾನುಭವ ಆದಾಗ ಉಂಟಾಗುವ ಆನಂದದ ಕಾರಣದಿಂದ ಅದು ಆನಂದ ಭಕ್ತಿ ಎನಿಸುವುದು. ಆನಂದ ಭಕ್ತಿಯಿಂದ ಉಂಟಾಗುವ ಅಂತರಾನಂದ ಮಜ್ಞತೆಯು ಶಿವನೊಂದಿಗೆ ಸಮರಸತೆಯನ್ನು ಜೀವನಿಗೆ ತಂದುಕೊಡುವುದು. ಈ ಭಕ್ತಿ ಸಮರಸಭಕ್ತಿ ಎನಿಸುವುದು. ಅಂದರೆ ಸದ್ಭಕ್ತಿಯಿಂದ ಭಕ್ತಿಸ್ಥಲ, ಅವಧಾನ ಭಕ್ತಿಯಿಂದ ಪ್ರಸಾದಿ ಸ್ಥಲ, ಅನುಭವ ಭಕ್ತಿಯಿಂದ ಪ್ರಾಣಲಿಂಗ ಸ್ಥಲ, ಆನಂದ ಭಕ್ತಿಯಿಂದ ಶರಣ ಸ್ಥಲ ಮತ್ತು ಸಮರಸ ಭಕ್ತಿ ಯಿಂದ ಐಕ್ಯಸ್ಥಲ ಉಂಟಾಗುವುದನ್ನು ವೀರಶೈವ ಸಿದ್ಧಾಂತವು ನಿರೂಪಿಸುತ್ತದೆ. ಆಚಾರದಲ್ಲಿ ಶ್ರದ್ಧೆ, ಗುರು-ಲಿಂಗ-ಜಂಗಮರಲ್ಲಿ ಗೌರವ; ಇವು ಭಕ್ತಿಯ ವಿವಿಧ ಮುಖಗಳು.

ವೀರಶೈವ ಮತಧರ್ಮದ ಪ್ರಕಾರ; ಜೀವವು ಲೋಕವನ್ನು ನಿಯಂತ್ರಿಸುವ ಶಕ್ತಿಯಾದ ಲಿಂಗದಿಂದ ಹುಟ್ಟುತ್ತದೆ. ಲಿಂಗದಿಂದ ಹೊರಹೊಮ್ಮಿದ ಅನುರೂಪದ ಆತ್ಮ ದೇಹರೂಪ ಪಡೆಯುತ್ತಲೇ ಮಲತ್ರಯದಿಂದ ಬಾಧಿತವಾಗುತ್ತದೆ. ಇದರಿಂದ ಆತ್ಮದ ಸರ್ವವ್ಯಾಪಕತ್ವ, ಸರ್ವಜ್ಞತ್ವ, ಸರ್ವಕತೃತ್ವಗಳು ಸೀಮಿತವಾಗುತ್ತವೆ. ಇಷ್ಟಲಿಂಗವು ಚೈತನ್ಯರೂಪವಾಗಿದ್ದು, ಜೀವ ಮತ್ತು ಸೃಷ್ಟಿ ಇದರ ಅಂಶದಿಂದ ಉತ್ಪತ್ತಿಯಾಗುತ್ತವೆ. ಅನುಭಾವವು ಜೀವನು ಪಡೆಯುವ ಸುಖ ಮತ್ತು ತೃಪ್ತಿಗಳಿಗೆ ಆಶ್ರಯವಾಗುತ್ತದೆ. ಅದು ಜೀವನದಲ್ಲಿ ನೆಲೆಸಿದ ಆತ್ಮನ ಅರಿವನ್ನುಂಟು ಮಾಡುತ್ತದೆ.

ವೀರಶೈವರ ಪ್ರಕಾರ ಜೀವಿಗಳು ಭಿನ್ನ ಭಿನ್ನ ರೂಪು, ಆಕಾರಗಳನ್ನು ಪಡೆದಿರುವುದಾದರೂ; ಅವೆಲ್ಲವುಗಳಲ್ಲಿಯೂ ಅಂತರ್ಗತವಾಗಿರುವ ಆತ್ಮನು ಒಬ್ಬನೇ ಆಗಿರುವನು. ಭಿನ್ನ ಭಿನ್ನ ರೂಪಗಳನ್ನು ಧರಿಸಿ ಬಂದ ಜೀವರು ಅಂತಿಮ ಸ್ಥಿತಿಯನ್ನು ಮುಟ್ಟಿದಾಗ; ಮುಕ್ತಾತ್ಮರಾಗಿ, ಸತ್ಯವೇ ಆಗಿ ಎಲ್ಲ ಕಡೆಗೂ ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳುವರು. ಅಂತಹ ಹಂತಕ್ಕೇರಿದ ಆತ್ಮನ ಸ್ಥಿತಿಯನ್ನು ‘ಲಿಂಗೈಕ್ಯ’ ಅಥವಾ ‘ಶಿವೈಕ್ಯ’ ಎಂದು ಕರೆಯುತ್ತಾರೆ.

ಲಿಂಗಾಯತನ ಪರಮಧ್ಯೇಯ ಜೀವ ಮತ್ತು ಚೈತನ್ಯವು. ಅಂದರೆ ಅಂಗ ಮತ್ತು ಲಿಂಗವು ಪೂರ್ಣವಾಗಿ ಸಮರಸವಾಗುವುದನ್ನು ಸಾಧಿಸುವುದೇ ಆಗಿದೆ. ದೇಹವು ಜೀವಕ್ಕೂ, ಆತ್ಮಕ್ಕೂ ಆಶ್ರಯ ಕೊಡುತ್ತದೆ. ಆದುದರಿಂದ ದೇಹವನ್ನು ದೇವಾಲಯವೆಂದು ಬಗೆದಿದೆ. ಅದರಲ್ಲಿ ನಿರ್ಲಿಪ್ತಭಾವನೆಯಿಂದ ಇರುವ ಆತ್ಮನನ್ನು ಶಿವತತ್ವಗಳ, ಸಾಧನೆಯ ಮೂಲಕ ಪರಮಾತ್ಮನಲ್ಲಿ ಐಕ್ಯಗೊಳ್ಳುವಂತೆ ಮಾಡಬೇಕು. ಇದುವೇ ಮೋಕ್ಷದ ಸ್ಥಿತಿ. ಶಿವಚೈತನ್ಯದಿಂದ ಉಂಟಾದ ಆತ್ಮವು ಮತ್ತೆ ಹುಟ್ಟುವುದಿಲ್ಲ. ಜೀವನಿಗೆ ಇರುವುದೊಂದೇ ಹುಟ್ಟು; ಒಂದೇ ಸಾವು. ಆದರೆ; ಆತ್ಮ ತತ್ವ ನಿರಂತರವಾದದ್ದು. ಆದಿ-ಅಂತ್ಯಗಳಿಲ್ಲದ ಅದು ಕಾಲ ಮತ್ತು ಸ್ಥಳಗಳಿಂದ ನಿಯಂತ್ರಿತವಾದ ಅಪೇಕ್ಷೆಯಲ್ಲ. ಯಾವ ಮಧ್ಯಸ್ತಿಕೆಯಿಂದಲೂ ಅದನ್ನು ಸಾಧಿಸುವ ಸ್ಥಿತಿಯೂ ಇಲ್ಲ. ಆತ್ಮನು ಸ್ವತಂತ್ರನೂ, ಪೂರ್ಣನೂ, ನಿತ್ಯನೂ ಆದವನು.

ಮರಣದ ಬಗೆಗೆ ಮನುಕುಲಕ್ಕಿರುವ ಭಯ ಸಾರ್ವತ್ರಿಕವಾದುದು. ಮನುಷ್ಯನಿಗೆ ಸಾವಿನಿಂದ ಉಂಟಾಗುವ ಭಯಕ್ಕೆ ಕಾರಣ; ಮರಣ ಸಮಯದಲ್ಲಾಗುವ ನೋವಿನ ಜೊತೆಗೆ, ತಾನು ಬಿಟ್ಟು ಹೋಗಬೇಕಾಗಿರುವ ವಸ್ತುಗಳು, ವ್ಯಕ್ತಿಗಳು, ನಾಶವಾಗುವ ಶರೀರ ಮತ್ತು ಎಲ್ಲಕ್ಕೂ ಮೇಲಾಗಿ ಮರಣದ ನಂತರ ಏನಾಗುತ್ತದೆ ಎನ್ನುವ ಆತಂಕ ಮುಂತಾದವು ಮರಣವನ್ನು ಭಯಾನಕಗೊಳಿಸಿವೆ.

ವೀರಶೈವ ಧರ್ಮದಲ್ಲಿ ಸಾವು ಅನ್ನುವುದನ್ನು ಲೀಲೆಯ ಅವಸಾನ ಎನ್ನುವರು. ಅಲ್ಲಿ ಲಿಂಗ ತನ್ನ ವಿನೋದಕ್ಕೆ ಅಂಗವಾಗುತ್ತದೆ. ಮತ್ತೆ ಅದು ಷಟ್‌ಸ್ಥಲ ಕ್ರಮದಲ್ಲಿ ಲಿಂಗವಾಗುತ್ತದೆ. ಲಿಂಗ ಅಂಗವಾಗಿ ಬದುಕುವುದು ಶಿವಪ್ರೀತಿಗಾಗಿ. ಬಸವಣ್ಣನ ಪ್ರಕಾರ ಮರಣವೇ ಮಹಾನವಮಿ. ಅದೊಂದು ವಿಜಯ ಯಾತ್ರೆ. ಹಾಗಾಗಿ ವೀರಶೈವಧರ್ಮದಲ್ಲಿ ಸಾವಿನ ಬಗೆಗೆ ಭೀತಿಯಿಲ್ಲ. ಇನ್ನೊಂದು ಅರ್ಥದಲ್ಲಿ ಸಾವು ಮಲತ್ರಯಗಳಿಂದ ಬಾಧಿತವಾದ ಆಥ್ಮಕ್ಕೆ ಬಿಡುಗಡೆಯೂ ಹೌದು. ಮರಣ ಲಿಂಗೈಕ್ಯಕ್ಕೆ ಕಾರಣವಾಗುತ್ತದೆ. ವೀರಶೈವ ಧರ್ಮದಲ್ಲಿ ಪುನರ್ಜನ್ಮ ಕಲ್ಪನೆ ಬರುವುದೇ ಇಲ್ಲ.

ಯಾವುದೇ ಒಂದು ಧರ್ಮವನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಉಪಕರಣಗಳಲ್ಲಿ ಆ ಕಾಲದ ಸಾಹಿತ್ಯಕ್ಕೆ ಪ್ರಮುಖ ಸ್ಥಾನವಿದೆ. ವೀರಶೈವ ಧರ್ಮದ ವಿಚಾರದಲ್ಲೂ ಇದು ಸತ್ಯವಾಗಿದೆ. ವಚನ ಸಾಹಿತ್ಯವನ್ನು ಪಕ್ಕಕ್ಕಿಟ್ಟು ವೀರಶೈವ ಧರ್ಮವನ್ನು ಅಧ್ಯಯನ ಮಾಡುವ ಪ್ರಯತ್ನ ಗಾಳಿಯನ್ನು ಗುದ್ದಿದಷ್ಟೇ ಪ್ರಯಾಸವೆನಿಸುವುದು.

ವೀರಶೈವ ಧರ್ಮದಲ್ಲಿ ಎರಡು ಆಯಾಮಗಳನ್ನು ಗುರುತಿಸಬಹುದು. ಒಂದನೆಯದು ಧಾರ್ಮಿಕ ಆಂದೋಲನವಾದರೆ ಎರಡನೆಯದು ಸಾಮಾಜಿಕ ಪರಿವರ್ತನೆ. ಈ ಎರಡೂ ಆಯಾಮಗಳನ್ನು ವಚನ ಸಾಹಿತ್ಯ ತುಂಬಾ ಪರಿಣಾಮಕಾರಿಯಾಗಿ ಪ್ರತಿಫಲಿಸುತ್ತಿದೆ. ಧರ್ಮದ ಮೂಲಕ ಮಾನಯತೆಯನ್ನು ಬಿತ್ತುವುದಕ್ಕಾಗಿ ವಚನ ಸಾಹಿತ್ಯವನ್ನು ಬಳಿಸಿಕೊಳ್ಳಲಾಯಿತು. ಆದುದರಿಂದ ವಚನಕಾರರಿಗೆ ಧರ್ಮ ಪ್ರಮುಖ ಅಂಶವಾದರೆ ಸಾಹಿತ್ಯ ಮತ್ತು ಸಮಾಜ ಉಳಿದ ಅಂಶಗಳಾದವು. ಧಾರ್ಮಿಕ ಪ್ರಾಮುಖ್ಯತೆ ಪಡೆದ ವಚನ ಸಾಹಿತ್ಯದಲ್ಲಿ ಶಾಸ್ತ್ರಗುಣ, ಮಂತ್ರ, ತಂತ್ರ, ಪವಾಡ ಮುಂತಾದವು ಪ್ರಾಮುಖ್ಯತೆ ಪಡೆದವು. ಅಲ್ಲಮಪ್ರಭು, ಚನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ ಮುಂತಾದವರು ಧರ್ಮಾಚರಣೆಗೆ ಪ್ರಾಮುಖ್ಯತೆ ಕೊಟ್ಟು; ಧರ್ಮವನ್ನು ಅದರ ಎಲ್ಲಾ ನಿಯಮಗಳೊಂದಿಗೆ ಬೆಳೆಸಲು ಪ್ರಯತ್ನಿಸಿದರು. ಇವರು ಅಷ್ಟಾವರಣ, ಷಟ್‌ಸ್ಥಲ ಮತ್ತು ಪಂಚಾಚಾರ ಮುಂತಾದ ಧಾರ್ಮಿಕ ಆಚರಣೆಗಳನ್ನು ಯಥಾವತ್ತಾಗಿ ಒಪ್ಪಿಕೊಂಡು ಅತ್ಯಂತ ಭಕ್ತಿಯಿಂದ ಮತ್ತು ನಿಷ್ಠೆಯಿಂದ ಆಚರಣೆಗೆ ತಂದರು ಹಾಗೂ ತಮ್ಮ ವಚನಗಳ ಮೂಲಕ ಇತರರನ್ನೂ ಪ್ರೇರೇಪಿಸಿದರು. ಇವರು ಬರೀ ಧರ್ಮಾಚರಣೆಗಷ್ಟೇ ಒತ್ತು ಕೊಡದೆ ಜೊತೆಯಲ್ಲಿ ಕೆಲವು ಪವಾಡಗಳನ್ನೂ ಮಾಡಿರುವುದು ಅವರ ವಚನಗಳಿಂದಲೇ ತಿಳಿದುಬರುತ್ತದೆ. ಆದುದರಿಂದ ಇವರನ್ನು ತಾಂತ್ರಿಕರು ಎಂದು; ವೀರಶೈವ ಧರ್ಮವನ್ನು ಒಂದು ತಾಂತ್ರಿಕ ಮತ ಎಂದು ಪರಿಗಣಿಸಿರುವುದೂ ಉಂಟು.

ವೀರಶೈವ ಮತದಂತೆ, ಸಮಕಾಲೀನವಾಗಿ ಪವಾಡಗಳ ಮೊರೆ ಹೋಗಿದ್ದ ಕಾಳ, ಕಾಪಾಲಿಕ, ಕಾಳಮುಖ ಮುಂತಾದ ತಾಂತ್ರಿಕ ಪಂಥಗಳೂ, ಮಧ್ಯಕಾಲಿನ ಚರಿತ್ರೆಯಲ್ಲಿ ಕಂಡು ಬರುತ್ತವೆ. ಈ ಪಂಥಗಳ ಸಂಬಂಧವಿರಿಸಿಕೊಂಡಿದ್ದ ಸಿದ್ಧರು, ಆರೂಢರು ಹಾಗೂ ಕೆಳವರ್ಗದ ಸಾಂಸ್ಕೃತಿಕ ನಾಯಕರನ್ನು ಪವಾಡ ಪುರುಷರೆಂದು ಕರೆದಿದ್ದಾರೆ. ಇವರಲ್ಲಿ ಮುಖ್ಯವಾಗಿ ಎಡೆಯೂರು ಸಿದ್ಧಲಿಂಗೇಶ್ವರ, ಸಿದ್ಧಾರೂಢ, ಸೊನ್ನಲಿಗೆ ಸಿದ್ಧರಾಮ ಮುಂತಾದವರು ಪ್ರಮುಖರು. ಇನ್ನು ಕೆಳವರ್ಗದ ಜನ ತಮ್ಮ ಸಾಂಸ್ಕೃತಿಕ ನಾಯಕರನ್ನಾಗಿ ಮಂಟೇಸ್ವಾಮಿ, ಮಾದೇಶ್ವರ ಮುಂತಾದವರನ್ನು ಸ್ವೀಕರಿಸಿದ್ದಾರೆ.

ಮಂಟೇಸ್ವಾಮಿಯ ಬಳೆಪವಾಡ, ವಿಭೂತಿಪವಾಡ, ಹಿತ್ತಾಳೆ ಕೊಪ್ಪರಿಕೆ ಪವಾಡ, ಕಾದೆಣ್ಣೆ ಪವಾಡ, ಸುಣ್ಣದ ಪವಾಡ, ಅಡಿಗಲ್ಲು ಪವಾಡ ಮತ್ತು ಕಾದಗಟ್ಟಿ ಪವಾಡಗಳು ಮುಖ್ಯವಾದರೆ; ಎಡೆಯೂರು ಸಿದ್ಧಲಿಂಗೇಶ್ವರನು ಸೌರಾಷ್ಟ್ರ, ಕೊಲ್ಲಿಪಾಕಿ, ಕೇದಾರ, ಚಿದಂಬರ, ಶ್ರೀರಂಗ, ಕಂಚಿ, ಕಾಳಹಸ್ತಿ, ಅರುಣಾಚಲ ಮುಂತಾದ ಸ್ಥಳಗಳಲ್ಲಿ ಮಾಡಿರುವ ಪವಾಡಗಳು ಗಮನಾರ್ಹ. ಒಮ್ಮೆ ಸಿದ್ಧಲಿಂಗೇಶ್ವರನು ಈಗಿನ ಸಿದ್ಧಗಂಗಾ ಕ್ಷೇತ್ರಕ್ಕೆ ಬಂದಾಗ ನೀರಿನ ಕ್ಷಾಮದಿಂದ ಬಳಲುತ್ತಿದ್ದ ಈ ನಾಡಿನಲ್ಲಿ ಅವರ ಪಾದಸ್ಪರ್ಶದಿಂದ ಗಂಗೆ ಚಿಮ್ಮಿದಳೆನ್ನುವ ಪ್ರತೀತಿಯಿದೆ. ಇನ್ನು ವಚನ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಸಿದ್ಧರಾಮ ಪವಾಡ ಪುರುಷನೆಂದೇ ಖ್ಯಾತನಾಗಿದ್ದಾನೆ. ರಾಘವಾಂಕನ ಸಿದ್ಧರಾಮ ಚರಿತೆಯಲ್ಲಿ ಅನೇಕ ಪವಾಡಗಳು ವರ್ಣಿತವಾಗಿವೆ. ಹನ್ನೆರಡನೇ ಶತಮಾನದ ರಗಳೆಯ ಕವಿಯೆಂದೇ ಖ್ಯಾತನಾದ ಹರಿಹರನ ಬಗ್ಗೆ ಹಾಗೂ ಆತನ ಅಳಿಯ ಮತ್ತು ಶಿಷ್ಯ ರಾಘವಾಂಕನ ಬಗ್ಗೆ ಹಾಗೂ ಅವರು ಮಾಡಿರುವ ಪವಾಡಗಳ ಬಗ್ಗೆ ಉದ್ದನೆಯ ಪಟ್ಟಿಯೇ ದೊರೆಯುತ್ತದೆ. ಒಮ್ಮೆ ಹರಿಹರ ಕವಿ ಹಳೇಬೀಡಿನಲ್ಲಿ ತಂಗಿರುತ್ತಾನೆ. ಅದೇ ವೇಳೆಯಲ್ಲಿ ಹಂಪೆಯ ವಿರೂಪಾಕ್ಷ ದೇವಾಲಯದ ಗರ್ಭಗುಡಿಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ಹರಿಹರನು ಕುಂತ ಜಾಗದಿಂದಲೇ ಆ ಬೆಂಕಿಯನ್ನು ಆರಿಸುತ್ತಾನೆ. ಇದು ಒಂದು ಪವಾಡ, ರಾಘವಾಂಕನು ಹರಿಶ್ಚಂದ್ರ ಕಾವ್ಯ ಬರೆದಾಗ; ಹರಿಹರನು ಅವನ ಐದು ಹಲ್ಲುಗಳನ್ನು ಉದುರಿಸಿದನಂತೆ. ನಂತರ ರಾಘವಾಂಕ ಐದು ಶಿವಶರಣರ ಕಥೆ ಬರೆದಾಗ; ಒಂದೊಂದಾಗಿ ಹಲ್ಲು ಮರಳಿ ಹುಟ್ಟಿದವು ಎಂದು ತಿಳಿದುಬರುತ್ತದೆ.

ಧರ್ಮವನ್ನು ಒಂದು ಆಚರಣೆಯಾಗಿ ಜನತೆಯಲ್ಲಿ ನೆಲೆನಿಲ್ಲುವಂತೆ ಮಾಡಲು ಪವಾಡಗಳಂತಾ ಅಸತ್ಯಗಳ ಮೊರೆ ಬಿದ್ದಿರುವುದು ವೀರಶೈವ ಧರ್ಮದ ಒಂದು ಮುಖದಿಂದ ತಿಳಿದುಬರುತ್ತದೆ. ವೈಚಾರಿಕ ನೆಲಗಟ್ಟಿಗೇ ಕೊಡಲಿ ಹಾಕುವ ಪವಾಡದಂತ ವಿಚಾರಗಳು ಸಂಪ್ರದಾಯವಾದಿ ಪಟ್ಟಭದ್ರರ ಅಥವಾ ಕುಯುಕ್ತಿಗಳ ಸೃಷ್ಟಿಯೂ ಇರಬಹುದು. ಒಟ್ಟಿನಲ್ಲಿ ವೈಚಾರಿಕತೆಗೆ ಒಂದು ಕಪ್ಪು ಚುಕ್ಕಿ. ಕೆಲವು ಸಂದರ್ಭಗಳಲ್ಲಿ ಮುಗ್ಧ ಅನುಯಾಯಿಗಳ ಅತಿಯಾದ ಭಾವುಕತೆಯಿಂದ ವಾಸ್ತವಿಕ ಸತ್ಯಗಳು ಪವಾಡಗಳ ರೂಪು ಪಡೆದಿರಲೂ ಸಾಧ್ಯವಿದೆ. ಉದಾಹರಣೆಗೆ ‘ಬಸವಣ್ಣ ಮೂರು ಸಾವಿರ ಅಸ್ಪೃಶ್ಯ ಜನರನ್ನು ಬದುಕಿಸಿದ’ ಎನ್ನುವ ಒಂದು ಪವಾಡ ಕತೆ ಬರುತ್ತದೆ. ಇಷ್ಟೆಲ್ಲಾ ಅಸ್ಪೃಶ್ಯ ಜನರನ್ನು ಬದುಕಿಸಿದ ಬಸವಣ್ಣ ಮತ್ತೆ ತಾನೇಕೆ ಸತ್ತ? ಎನ್ನುವ ಪ್ರಶ್ನೆ ವಿಚಾರವಂತರಲ್ಲಿ ಹುಟ್ಟುವುದು ಸ್ವಾಭಾವಿಕ. ಆದ್ದರಿಂದ ಇಲ್ಲಿ ‘ಬದುಕಿಸಿದ’ ಎನ್ನುವ ಪದವನ್ನು ಬೇರೆ ರೀತಿ ಅರ್ಥೈಸಬೇಕು. ಧಾರ್ಮಿಕ-ಸಾಮಾಜಿಕ-ಆರ್ಥಿಕವಾಗಿ ಸತ್ತುಹೋಗಿದ್ದ, ಎಲ್ಲಾ ಸವಲತ್ತುಗಳಿಂದಲೂ ವಂಚಿತರಾಗಿದ್ದ ಅಸ್ಪೃಶ್ಯರ ಬದುಕು ಇದ್ದೂ ಸತ್ತಂತೆಯೇ ಇತ್ತು. ಬಸವಣ್ಣ ತನ್ನ ಸಾಮಾಜಿಕ ಚಳುವಳೀಯಲ್ಲಿ ಸಮಾನತೆ ತರುವುದರ ಮೂಲಕ ಸತ್ತಂತಿದ್ದ ಅಸ್ಪೃಶ್ಯರಿಗೆ ಹೊಸ ಬದುಕು ಕೊಟ್ಟ. ಸ್ಪರ್ಶದ ಸುಖಕೊಟ್ಟ. ದುಡಿದುಣ್ಣುವ ಅವಕಾಶ ಕೊಟ್ಟ. ‘ಅಪ್ಪನು ನಮ್ಮ ಮಾದಾರ ಚನ್ನಯ್ಯ-ಬೊಪ್ಪನು ನಮ್ಮ ಡೋಹರ ಕಕ್ಕಯ್ಯ’ ಎಂದು ಹೇಳುವುದರ ಮೂಲಕ ಶೋಷಿತ ವರ್ಗಕ್ಕೆ ಸಮಾನತೆಯ ಸ್ಥಾನ ಕಲ್ಪಿಸಿಕೊಟ್ಟ. ಶತಮಾನಗಳಿಂದ ಮೂಕರಾಗಿದ್ದ ಶೋಷಿತರಿಗೆ ದನಿಕೊಟ್ಟ ಎನ್ನುವುದು ‘ಬದುಕಿಸಿದ’ ಪದದ ಅರ್ಥ. ‘‘ಹೊಸ ಬದುಕು ಕಲ್ಪಿಸುವುದರ ಮೂಲಕ ಬದುಕಿಸಿದ’’ ಎಂದು ತಿಳಿಯಬೇಕು. ‘‘ಜೀವ ಹೋಗಿ ಸತ್ತವರಿಗೆ ಜೀವ ಕೊಟ್ಟು ಬದುಕಿಸಿದ’’ ಎಂದು ಅರ್ಥ ಮಾಡಬಾರದು. ಚಾರಿತ್ರಿಕ ವ್ಯಕ್ತಿಗಳಾದ ವಚನಕಾರರನ್ನು ಪುರಾಣಕತೆಗಳ ಹಿನ್ನೆಲೆಯಲ್ಲಿ ನೋಡಿದ್ದರಿಂದ ಆದ ಅಪಾಯ ಇದು ಎಂದು ಊಹಿಸಬಹುದು.

ಹಿಂದೂ ಧರ್ಮದ ಶ್ರೇಣೀಕೃತ ಜಾತಿವ್ಯವಸ್ಥೆಯನ್ನು ತಿದ್ದಿ ಸಮಮಾಡುವ ಪ್ರಯತ್ನ ವೀರಶೈವ ಧರ್ಮದಲ್ಲಿ ನಡೆಯಿತಾದರೂ; ಆ ಚಳವಳಿ ಶರಣರ ಸಾವಿನ ಮೂಲಕ ಕೊನೆಗೊಂಡದ್ದು ಆ ಧರ್ಮದ ಮಿತಿಯೂ ಹೌದು. ಬ್ರಾಹ್ಮಣನಾದ ಮಧುವರಸನ ಮಗಳು ಹಾಗೂ ಹೊಲೆಯನಾದ ಹರಳಯ್ಯನ ಮಗ; ಇವರಿಬ್ಬರ ವಿವಾಹವನ್ನು ಶರಣರು ಮಾಡುತ್ತಾರೆ. ಹರಳಯ್ಯನ ಮಗನೂ ಮತ್ತು ಮಧುವರಸನ ಮಗಳೂ ಇಬ್ಬರೂ ಲಿಂಗ ಧರಿಸಿದ ಮೇಲೆಯೇ ಅವರಿಗೆ ಮದುವೆ ಮಾಡಿಸಿದ್ದು ಎನ್ನುವುದು ಮುಖ್ಯ ಸಂಗತಿ. ಇಲ್ಲಿ ಈರ್ವರ ಜಾತಿ ನಾಶವೇ ಮುಖ್ಯ ಉದ್ದೇಶವಾಗಿತ್ತು ಎಂದು ಪರಿಗಣಿಸಿದರೂ; ಅವರಿಗೆ ಲಿಂಗಧಾರಣೆಯನ್ನು ಮದುವೆಗೆ ಮುಂಚೆ ಮಾಡಿಸಿದ್ದು ಭವಿಷ್ಯದಲ್ಲಿ ಮತ್ತೊಂದು ಜಾತಿ ಹುಟ್ಟಿಗೆ ಕಾರಣವಾಗುವುದೆನ್ನುವುದನ್ನು ಆಗ ಯಾರೂ ಊಹಿಸಿರಲಾರರು. ಹೀಗೆ ಹಿಂದೂ ಧರ್ಮದ ನೂರೆಂಟು ಜಾತಿಗಳನ್ನು ಒಂದುಗೂಡಿಸಿ ಲಿಂಗವಂತ ಭಕ್ತರ ಸಮಾಜವನ್ನು ವಿಸ್ತರಿಸುತ್ತಾ ಹೋದರು. ಆದರೆ ಆ ಸಮಾಜದಲ್ಲೆ ಪೂರ್ವಾಶ್ರಮ ಕೇರಿಗಳು ಮಾತ್ರ ಹಾಗೆಯೇ ತಮ್ಮ ಸತ್ವವನ್ನು ಉಳಿಸಿಕೊಂಡು ಬಂದಿರುವುದು ಮತ್ತು ಬರುತ್ತಿರುವುದು ಮಾತ್ರ ವಾಸ್ತವ. ಧಾರ್ಮಿಕ ಚೌಕಟ್ಟಿನಲ್ಲಿ ಸಾಮಾಜಿಕ ಹೋರಾಟ ಮಾಡಲು ಪ್ರಾರಂಭಿಸಿದರೆ ಹೇಗೆ ದುರಂತವಾಗುತ್ತದೆ ಎನ್ನುವುದಕ್ಕೆ ಮೇಲಿನ ಚಳುವಳಿ ಒಂದು ಉದಾಹರಣೆ. ಜಾತಿ ವಿನಾಶದ ಚಳುವಳಿ ಭವಿ-ಭಕ್ತರ ಪಡೆಗಳಾಗಿ ಮಾರ್ಪಟ್ಟು; ಜಾತಿ-ಜಾತಿಗಳಲ್ಲಿ ನಡೆಯುತ್ತಿದ್ದ ಹೊಡೆದಾಟಗಳು ಭವಿ-ಭಕ್ತರ ಮಧ್ಯೆ ಗುಂಪು ಹೊಡೆದಾಟಗಳಾಗಿ ಮಾರ್ಪಟ್ಟಿದ್ದು ಒಂದು ದುರಂತ.

ವಚನಕಾರರ ಹೋರಾಟವನ್ನು ಒಂದು ‘ಕ್ರಾಂತಿ’ ಎಂದು ಪರಿಗಣಿಸಿರುವುದೂ ಉಂಟು. ಆಮೂಲಾಗ್ರ ಬದಲಾವಣೆಯನ್ನು ಕ್ರಾಂತಿ ಎನ್ನುತ್ತಾರೆ. ಹಳೆಯ ವ್ಯವಸ್ಥೆಯೆಲ್ಲಾ ಹೋಗಿ ಹೊಸ ವ್ಯವಸ್ಥೆ ಹುಟ್ಟಿಕೊಳ್ಳುವುದು ಕ್ರಾಂತಿಯ ಸಾಧನೆ. ಆರ್ಥಿಕ ಸಮಾನತೆ ಇದ್ದಾಗ ಸಾಮಾಜಿಕ ಸಮಾನತೆ ಸಹಜವಾಗಿಯೇ ಬರುತ್ತದೆ. ಆದ್ದರಿಂದ ನಿಜವಾದ ಕ್ರಾಂತಿ ಆರ್ಥಿಕ ಸಮಾನತೆಯ ಉದ್ದೇಶವನ್ನಿಟ್ಟುಕೊಂಡು ಸಾಮಾಜಿಕ ಕ್ಷೇತ್ರದಿಂದ ಹೋರಾಟ ಪ್ರಾರಂಭಿಸುತ್ತದೆ. ಆದರೆ ವಚನಕಾರರು ಹೋರಾಟ ಪ್ರಾರಂಭಿಸಿದ್ದು ಧಾರ್ಮಿಕ ಕ್ಷೇತ್ರದಿಂದ. ಶೋಷಣೆಗೆ ಕಾರಣವಾಗುವ ಎಲ್ಲಾ ಶಕ್ತಿಗಳನ್ನು ಕ್ರಾಂತಿ ದಮನ ಮಾಡುತ್ತದೆ. ಶೋಷಣೆಯ ಮೂಲಗಳಲ್ಲಿ ಧರ್ಮವೂ ಒಂದು. ಹೀಗಿದ್ದಾಗ; ಧರ್ಮದಿಂದಲೇ ಕ್ರಾಂತಿ ಮಾಡುವುದು ಕೇವಲ ಭ್ರಮೆಯಾಗುತ್ತದೆ. ಕ್ರಾಂತಿ ಮತ್ತು ಧರ್ಮ ಒಂದಕ್ಕೊಂದು ಪೂರಕವಲ್ಲ. ಆದುದರಿಂದ ವಚನಕಾರರದು ಒಂದು ಚಳುವಳಿ ಎನ್ನಬಹುದು.

ವಚನ ಸಾಹಿತ್ಯದಲ್ಲಿನ ಒಂದು ವಚನ ‘‘ಉಳ್ಳವರು ಶಿವಾಲಯವ ಮಾಡುವರು. ನಾನೇನು ಮಾಡಲಿ ಬಡವನಯ್ಯಾ’’ ಎನ್ನುವ ಮಾತು ಬರುತ್ತದೆ. ಇಲ್ಲಿ ಉಳ್ಳವರನ್ನೂ ಎದುರುಹಾಕಿಕೊಳ್ಳದ; ಬಡವರನ್ನೂ ಬಿಡದ ಒಂದು ಸ್ಥಿತಿಯನ್ನು ಕಾಣುತ್ತೇವೆ. ಸಾಮಾಜಿಕ ಸಂದರ್ಭದಲ್ಲಿ ಉಳ್ಳವರೆಂದರೆ ಆರ್ಥಿಕ ಒಡೆತನ ಹೊಂದಿದ್ದ ಮೇಲಿನ ವರ್ಣದವರು. ಅವರಿಗೆ ದೇವಾಲಯಗಳ ಪ್ರವೇಶವಿದ್ದ ಅಥವಾ ಅವರು ವೀರಶೈವ ಧರ್ಮವನ್ನು ಒಪ್ಪಿ ಸ್ವೀಕರಿಸಿದ ಸಂದರ್ಭದಲ್ಲಿ ಅವರಿಗೆ ದೊರೆತ ರಿಯಾಯಿತಿ ಇದಾಗಿತ್ತು. ಬೇಕಿದ್ದರೆ ಅವರು ದೇವಾಲಯಗಳಂತೆ ಶಿವಲಾಯಗಳನ್ನೂ ಕಟ್ಟಿಕೊಳ್ಳಲಿ ಎನ್ನುವ ರಿಯಾಯಿತಿ. ಆದರೆ ದೇವಾಲಯಗಳಿಗೆ ಪ್ರವೇಶವಿಲ್ಲದ ಕೆಲವರ್ಣದ ಮತ್ತು ಕೆಳವರ್ಗದ ಜನತೆಗೆ ಅವರವರ ದೇಹವೇ ದೇವಾಲಯಗಳೆಂದು ಹೇಳಲಾಯಿತು. ಯಾವುದೇ ಕಾರಣಕ್ಕೂ ದೇವಾಲಯಗಳನ್ನು ತ್ಯಜಿಸಿರಿ ಅಥವಾ ದೇವಾಲಯಗಳಿಗೆ ನುಗ್ಗಿರಿ ಎನ್ನಲಿಲ್ಲ. ಉಳ್ಳವರ ಮತ್ತು ಬಡವರ ಮಧ್ಯೆ ಇರುವ ಆರ್ಥಿಕ ಮತ್ತು ಸಾಮಾಜಿಕ ಅಂತರದ ಸ್ಥಿತಿಯನ್ನು ಹಾಗೇ ಉಳಿಸಿಕೊಂಡು ಒಪ್ಪಿಕೊಳ್ಳುವಂತೆ ಮಾಡಿದ ಪ್ರಯತ್ನವನ್ನು ಕಾಣಬಹುದು. ಆರ್ಥಿಕ ತೃಪ್ತಿಯ ಉಳ್ಳವರನ್ನು ಧರ್ಮದ ಕಡೆಗೆ ಎಳೆಯುವುದು; ಬಡವರ ಆರ್ಥಿಕ ಅತೃಪ್ತಿಯನ್ನು ಧರ್ಮದ ಭ್ರಮೆಯಿಂದ ತೃಪ್ತಿಪಡಿಸುವ ವಿಧಾನವೆಂದೇ ಹೇಳಬಹುದು. ಒಟ್ಟಿನಲ್ಲಿ ಎರಡೂ ವರ್ಗಗಳನ್ನು ಧರ್ಮದ ಕಡೆಗೆ ಆಕರ್ಷಿಸುವುದೇ ಆಗಿದ್ದಾಗ; ಇದು ಸಮಾನತೆಯ ಸಮಾಜ ಮುಖಿ ಎಂದು ಹೇಳುವುದಾದರೂ ಹೇಗೆ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಲ್ಲಿ ‘ಧರ್ಮ’ ಎನ್ನುವುದು ಸಾಂಪ್ರದಾಯಿಕ ಶುಷ್ಕ ಆಚರಣೆ ಅರ್ಥ ಪಡೆದಿರುತ್ತದೆ. ಎಲ್ಲಾ ವಚನಕಾರರು ಭಕ್ತನನ್ನು ಮೆಚ್ಚಿ ಭವಿಯನ್ನು ಅಲ್ಲಗಳೆಯುತ್ತಾರೆಯೇ ಹೊರತು ಹಣವಂತನನ್ನು ಧಿಕ್ಕರಿಸಿ ಬಡವನನ್ನು ಮೇಲೆತ್ತುವುದಿಲ್ಲ. ಇಲ್ಲಿ ಬಡವ ಮತ್ತು ಬಲ್ಲಿದರ ಮಧ್ಯೆ ನಡೆಯಬೇಕಿದ್ದ ಸಂಘರ್ಷ ಭಕ್ತ-ಭವಿಗಳ ಮಧ್ಯೆ ತಣ್ಣಗಾಗುತ್ತದೆ. ಭಕ್ತಿ ಇಲ್ಲದ ಎಲ್ಲರನ್ನೂ ತಿರಸ್ಕರಿಸಿದ್ದೇ ಅದಕ್ಕೆ ಕಾರಣ ಎಂದು ಹೇಳಬಹುದು.

ರಾಜಕೀಯ ಬದಲಾವಣೆಯನ್ನು ತರದ ಯಾವ ಹೋರಾಟವೂ ಕ್ರಾಂತಿಯಾಗಲಾರದು. ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳೆಲ್ಲಾ ರಾಜಕೀಯ ಕ್ಷೇತ್ರದ ಹಿಡಿತದಲ್ಲೇ ಇರುವುದು ಇದಕ್ಕೆ ಕಾರಣ. ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಬದಲಾವಣೆ ತರುವುದು ಶರಣರ ಪ್ರಥಮ ಉದ್ದೇಶವಾಗಿರಲಿಲ್ಲ. ವಚನಕಾರರಂತೂ ರಾಜಕೀಯದಿಂದ ತುಂಬಾ ದೂರವಿದ್ದರು. ಬಸವಣ್ಣನಿಗೆ ರಾಜಕೀಯದ ಸಂಪರ್ಕವಿದ್ದರೂ; ಧರ್ಮ ಪ್ರಮುಖವಾಗಿ ಕಂಡಿತೇ ಹೊರತು ರಾಜಕೀಯವಲ್ಲ. ಬಸವಣ್ಣನಿಗೆ ಅರಸರ ಮನೆಯಲ್ಲಿ ಅರಸಿಯಾಗಿರುವುದಕ್ಕಿಂತ ಭಕ್ತರ ಮನೆಯಲ್ಲಿ ತೊತ್ತಾಗಿರುವುದೇ ಉತ್ತಮವೆನಿಸಿತ್ತು. ಆದುದರಿಂದ ಅನುಭವ ಮಂಟಪದಲ್ಲಿ ವಚನಕಾರರು ಚರ್ಚಿಸಿದ ಸಾಮಾಜಿಕ ಹಿತದ ವಿಚಾರಗಳು ಪ್ರಜ್ಞಾಮಟ್ಟದಲ್ಲಿ ಉಳಿದವೇ ಹೊರತು ಜನರ ಬದುಕಿನಲ್ಲಿ ತರುವ ರಾಜಕೀಯ ಇಚ್ಛಾಶಕ್ತಿ ಇಲ್ಲದಾಯಿತು.

ವಚನಕಾರರು ‘ಧರ್ಮ’ಕ್ಕೆ ಮತ್ತು ಅದರ ಆಚರಣೆಗೆ ಬದ್ಧಾರಾಗಿದ್ದರೂ; ಅವರು ಸಮಾಜ ಮುಖಿಯಾಗಿ ಚಿಂತಿಸಿ ಸ್ಪಂದಿಸಿದ್ದರಿಂದ ನಮಗೆ ಪ್ರಮುಖರಾಗುತ್ತಾರೆ. ಮಾತು ಬಿದ್ದುಹೋಗಿದ್ದ ಅಥವಾ ಮಾತನಾಡುವುದೇ ಅಪರಾಧವಾಗಿದ್ದ ಅಂದಿನ ವ್ಯವಸ್ಥೆಯಲ್ಲಿ ಹರಳಯ್ಯ, ಚೌಡಯ್ಯ, ಕಾಳವ್ವೆ, ಗೊಗ್ಗವ್ವೆ ಮುಂತಾದ ದಲಿತರು, ದುಡಿವ ವರ್ಗದವರು ಮೊಟ್ಟ ಮೊದಲು ಬಾಯಿ ತೆರೆದು, ದನಿಯೆತ್ತಿ ಮಾತನಾಡಿದ್ದು, ಚರ್ಚಿಸಿದ್ದು, ಪ್ರಶ್ನಿಸಿದ್ದು ನಮಗಿಂದು ಬಹಳ ಮುಖ್ಯವೆನಿಸುತ್ತದೆ. ಅದೂ ಶತಮಾನಗಳಿಂದ ಬೌದ್ದಿಕ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಮಹಿಳೆ ಮೊದಲ ಬಾರಿಗೆ ಮಾತನಾಡಲು ತೊಡಗಿದ್ದು ಇನ್ನೂ ಮಹತ್ವದ್ದು ಎನಿಸುತ್ತದೆ. ಈ ಜನರಿಗೆ ಧಾರ್ಮಿಕ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಮಾನವಾಗಿ ಭಾಗಿಯಾಗಲು ಸಿಕ್ಕ ಅವಕಾಶಗಳಿಂದ ಪುಳಕಿತರಾಗಿದ್ದರು. ಧಾರ್ಮಿಕ ಆಚರಣೆಗೆ ಮಾತ್ರ ಒತ್ತು ಕೊಟ್ಟ ಶರಣರಿಗೆ ಹಾಗೂ ಸಮಾಜ ಮುಖಿಯಾಗಿ ಚಿಂತನೆ ನಡೆಸಿದ ವಚನಕಾರರಿಗೆ ಮಧ್ಯೆ ಕೊಂಡಿಯಂತೆ ಕೆಲಸ ಮಾಡಿದವನು ಬಸವಣ್ಣ. ‘ಎನಗಿಂತ ಕಿರಿಯರಿಲ್ಲ’ ಎನ್ನುತ್ತಲೇ ಚಳುವಳಿಯ ನಾಯಕನಾಗುತ್ತಾನೆ. ‘‘ಮಸಿಯನೇಸು ಕಾಲ ಬೆಳಗಿದರೆ ಬಿಳಿದಾಗಬಲ್ಲುದಯ್ಯ’’ ‘‘ಕಪಟವೇಷದ ಡಂಭಕ ನಾನು’’ -ಎಂದು ಹೇಳುತ್ತಾ ಬಸವಣ್ಣ ಅಲ್ಲಮಪ್ರಭು ಮುಂತಾದವರ ಮುಂದೆ ತನ್ನ ಆಂತರ್ಯದ ವಾಸ್ತವವನ್ನು ವ್ಯಕ್ತಪಡಿಸಿ ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಇತ್ತ ‘‘ಅಪ್ಪನು ನಮ್ಮ ಮಾದಾರ ಚನ್ನಯ್ಯ’’, ‘‘ಭರಣಿಯಾರಿಸಲು ಹೋದಲ್ಲಿ ಹೊಲೆ ಮಾದಿಗರಿಗೆ ಹುಟ್ಟಿದವ ನಾನು’’ -ಎಂದು ಹೇಳುತ್ತಾ ದಲಿತ ವರ್ಗದ ವಚನಕಾರರ ಪ್ರೀತಿಗೆ ಪಾತ್ರನಾಗುತ್ತಾನೆ. ತಾನು ಸಣ್ಣವ ಎನ್ನುತ್ತಲೇ ದೊಡ್ಡವನಾಗುತ್ತಾನೆ. ಪ್ರಾರಂಭದಲ್ಲಿ ಬಹುದೇವೋಪಾಸನೆ ಯನ್ನು ಖಂಡಿಸಿ ಏಕದೇವೋಪಾಸನೆಯಾದ ಇಷ್ಟಲಿಂಗದಲ್ಲಿ ಕೇಂದ್ರಿಕೃತನಾದ ಅಂಬಿಗರ ಚೌಡಯ್ಯ ನಂತರದ ತನ್ನ ವಚನಗಳಲ್ಲಿ ‘‘ಎರೆದರೆ ನೆನೆಯದು ಬಿಟ್ಟರೆ ಬಾಡದು’’ ಎಂದು ಇಷ್ಟಲಿಂಗದ ಕಲ್ಪನೆಯನ್ನು ಮೀರಿ ಬೆಳೆಯುತ್ತಾನೆ. ‘‘ಗಂಡು ಹೆಣ್ಣನ್ನು ಮೋಹಿಸಿ ಕೈಹಿಡಿದಾಗ ಆಕೆ ಗಂಡಿನ ಆಸ್ತಿ ಅಥವಾ ಒಂದು ವಡವೆ. ಆದರೆ ಹೆಣ್ಣೇ ಗಂಡನ್ನು ಮೋಹಿಸಿ ಕೈಹಿಡಿದರೆ? ಇದಕ್ಕೆ ಉತ್ತರವೇನು?’’ ಎನ್ನುವ ಪ್ರಶ್ನೆಯನ್ನು ಗೊಗ್ಗವ್ವೆಯಂತಹ ದಲಿತ ಮಹಿಳೆ ಎತ್ತುತ್ತಾಳೆ. ದುಡಿವ ವರ್ಗದಿಂದ ಬಂದ ನುಲಿಯ ಚಂದಯ್ಯ ಲಿಂಗವನ್ನು ಕಡೆಗಣಿಸಿ, ಧರ್ಮ ಆಚರಣೆಯನ್ನು ಪಕ್ಕಕ್ಕೆ ದೂಡಿ ಕಾಯಕಕ್ಕೆ ಪ್ರಾಧಾನ್ಯತೆ ಕೊಡುತ್ತಾನೆ. ಅಮುಗೆ ರಾಯಮ್ಮ ಎನ್ನುವ ವಚನಕಾರ್ತಿ ಮಂಡೆಬೋಳಿಸಿಕೊಂಡು ತುಂಡುಗಂಬಳಿ ಹೊದ್ದ ವೇಷಧಾರಿಗಳನ್ನು ತೀವ್ರವಾಗಿ ಠೀಕಿಸುತ್ತಾಳೆ.

ಸಮಾಜವೊಂದರ ವ್ಯವಸ್ಥೆಯನ್ನು ಹಾಗೂ ಅದರ ರಕ್ಷಕ ಶಕ್ತಿಗಳನ್ನು ವಿಮರ್ಶಿಸಿ ಕ್ರಾಂತಿಕಾರಕವಾಗಿ ಮಾತನಾಡುವ ಕೆಚ್ಚು ಜನಸಾಮಾನ್ಯರಲ್ಲಿ ಮೂಡಿದ್ದು ವಚನ ಚಳುವಳಿಯ ನಿಜವಾದ ಸಾಧನೆಯಾಗುತ್ತದೆ. ದುಡಿವ ವರ್ಗದಿಂದ ಬಂದ ವಚನಕಾರರು ಸಾಮಾಜಿಕ ಸಮಸ್ಯೆಗಳನ್ನು ಎತ್ತಿಕೊಂಡು ಚರ್ಚಿಸಿದ್ದು; ಧಾರ್ಮಿಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅಸ್ಪೃಶ್ಯಳಾಗಿದ್ದ ಮಹಿಳೆಗೆ ಸಮಾನತೆಯ ಅವಕಾಶ ಕಲ್ಪಿಸಿದ್ದು ವೀರಶೈವಧರ್ಮ ಎನ್ನುವುದು ಹೆಮ್ಮೆಯ ಸಂಗತಿ. ರಾಜಪರ ಮೌಲ್ಯಗಳನ್ನು ಧಿಕ್ಕರಿಸಿದ್ದು, ಧರ್ಮಪರ ಮೌಲ್ಯಗಳನ್ನು ಬೆಳೆಸಿದ್ದು, ಜನಪರ ಮೌಲ್ಯಗಳಿಗಾಗಿ ಹೋರಾಡಿದ್ದು ಹೀಗೆ ಎಲ್ಲಕ್ಕೂ ವೀರಶೈವ ಧರ್ಮವೇ ಕಾರಣ. ಒಟ್ಟಿನಲ್ಲಿ ಜನತೆಗೆ ಬೆಳಕು ನೀಡಿ ಮತ್ತು ನೀಡುತ್ತಾ ಈ ಧರ್ಮ ಇಂದಿಗೂ ಹಸಿರಾಗಿದೆ.