.ಇಸ್ಲಾಂ ಮತಧರ್ಮ

ಇಬ್ಬರು ವ್ಯಕ್ತಿಗಳು ಮಾತನಾಡುತ್ತಿರುತ್ತಾರೆ. ಮಾತಿನ ಮಧ್ಯೆ ಒಬ್ಬ ವ್ಯಕ್ತಿ ಮತ್ತೊಬ್ಬನನ್ನು ಸ್ವಲ್ಪ ಹೊತ್ತು ನಿಲ್ಲುವಂತೆ ಹೇಳಿ, ಸ್ವಲ್ಪ ದೂರ ಹೋಗಿ ತನ್ನ ಹೆಗಲ ಚೀಲದಲ್ಲಿದ್ದ ಸಣ್ಣ ನೆಲಹಾಸನ್ನು ಹೊರತೆಗೆದು ಹಾಸಿ, ತಲೆಯ ಮೇಲೆ ಕರವಸ್ತ್ರವನ್ನು ಹರಡಿ, ಮಂಡಿಯೂರಿ ಕುಳಿತಾಕ್ಷಣ ಆತ ಮುಸಲ್ಮಾನ, ಆ ಸಮಯ ಪ್ರಾರ್ಥನಾ ಸಮಯವೆಂದು ಥಟ್ ಅಂತ ಹೇಳಬಹುದು. ನಮಾಜ್ ಅಥವಾ ‘ಪ್ರಾರ್ಥನೆ’ ಎಂದರೆ ‘ಇಸ್ಲಾಂ’ನ (ಅರಬ್ಬಿ ಭಾಷೆಯಲ್ಲಿ ಅಲ್ ಇಸ್ಲಾಂ) ಬೋಧನೆಗಳಲ್ಲಿ ‘ಒಂದಾಗುವುದು’ ಅಥವಾ ‘ಅಧೀನನಾಗುವುದು’ ಎನ್ನುವ ಅರ್ಥ. ಅಂದರೆ ‘ಒಪ್ಪುವುದು’ ಅಥವಾ ‘ನಂಬುವುದು’ ಅಥವಾ ‘ತನಗೆ ತಾನೇ ಕಟ್ಟುಪಾಡು ಹೇರಿಕೊಂಡು, ಆಂತರಿಕವಾಗಿ ಒಪ್ಪಿ, ಬೌದ್ದಿಕವಾಗಿ ತೊಡಗಿಸಿಕೊಂಡು, ಬಾಹ್ಯದ ಬದುಕಿನಲ್ಲಿ ವ್ಯಕ್ತಪಡಿಸುತ್ತಾ ಬದುಕುವುದು’ ಎನ್ನುವ ಅರ್ಥ.‘ಇಸ್ಲಾಂ’ ಒಂದು ಏಕದೇವೋಪಾಸಕ ಮತಧರ್ಮ ಅಥವಾ ನಂಬಿಕೆ. ಕ್ರಿ.ಶ.ಏಳನೇ ಶತಮಾನದಲ್ಲಿ ತನ್ನ ಪ್ರಾರಂಭವನ್ನು ಅರೇಬಿಯಾದಲ್ಲಿ ಕಂಡುಕೊಂಡಿತು. ಇಸ್ಲಾಂ ಮತಧರ್ಮ ಸ್ಥಾಪಕ ಮಹಮ್ಮದ್ (ಕ್ರಿ.ಶ.೫೭೦-೬೩೨) ವಾಣಿಜ್ಯ ನಗರಿ ‘ಮೆಕ್ಕಾ’ದ ಖುರೇಷಿ ಬುಡಕಟ್ಟಿನ ಹಷಿಮ್ ಕುಲದಲ್ಲಿ ಹುಟ್ಟಿದ. ತಂದೆ ಅಬ್ದುಲ್ಲಾ, ತಾಯಿ ಅಮಿನ. ಮಹಮ್ಮದ್ ನ ಮರಣಾನಂತರ ನೂರಪ್ಪತ್ತೈದು ವರ್ಷಗಳವರೆಗೆ ಆತನ ಬದುಕಿನ ಯಾವ ಘಟನೆಗಳೂ ದಾಖಲಾಗಿರಲಿಲ್ಲ. ಆತನ ಹುಟ್ಟು ಮತ್ತು ಬಾಲ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಆಶ್ಚರ್ಯಪಡುವಂತಹ ಕಟ್ಟುಕತೆಗಳು ಹುಟ್ಟಿಕೊಂಡು ಆತನನ್ನು ನಾಯಕನಂತೆ ಚಿತ್ರಿಸಿದ್ದವು. ಆತನ ಜನ್ಮದಿನಾಂಕ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಕ್ರಿ.ಶ.೫೭೦ ಮತ್ತು ೫೭೧ರ ಮಧ್ಯೆ ಎಂದು ಊಹಿಸಲಾಗಿದೆ. ಒಂದು ಸಾಂಪ್ರದಾಯಿಕ ನಂಬಿಕೆಯ ಪ್ರಕಾರ; ಮಹಮ್ಮದ್ ಹುಟ್ಟುವುದಕ್ಕೆ ಮುಂಚೆಯೇ ತಂದೆಯನ್ನು ಕಳೆದುಕೊಂಡು ಅನಾಥನಾಗಿರುತ್ತಾನೆ. ಇವನಿಗೆ ಆರುವರ್ಷ ವಯಸ್ಸಾಗಿದ್ದಾಗ ತಾಯಿಯೂ ತೀರಿಕೊಳ್ಳು ತ್ತಾಳೆ. ಮೊದಲು ತಾತ ಅಬ್ದುಲ್ ಮುತಾಲಿಬ್ ರ ಆಶ್ರಯದಲ್ಲಿ; ಆ ನಂತರ ಸೋದರ ಚಿಕ್ಕಪ್ಪ ಅಬುತಾಲಿಬ್‌ರ ಆಶ್ರಯದಲ್ಲಿ ಬೆಳೆಯುತ್ತಾನೆ. ಆತನ ಪ್ರಾರಂಭಿಕ ವರ್ಷಗಳು ಬಡತನದಿಂದ ಕೂಡಿದ್ದು ಮಕ್ಕಾ ಮತ್ತು ಮದೀನ ಪ್ರದೇಶಗಳಲ್ಲಿ ಕಳೆಯುತ್ತವೆ. ಖದೀಜಾ ಬಿನ್ತ್ ಖುವೇಲಿದ್ ಎನ್ನುವ ಸಿರಿವಂತ ವಿಧವೆಯನ್ನು ವಿವಾಹವಾದನಂತರ ಆತನ ಅದೃಷ್ಟ ಖುಲಾಯಿಸುತ್ತದೆ.

ಮಹಮ್ಮದ್ ನಲವತ್ತು ವರ್ಷದ ವಯಸ್ಸಿನವನಾಗಿದ್ದಾಗ; ಆತನಿಗೆ ದಿವ್ಯ ದರ್ಶನದ ಅನುಭವವಾಗಲು ಪ್ರಾರಂಭಿಸಿತು. ರಮಜಾನ್ ಮಾಸದ ಸಮಯದಲ್ಲಿ ಮೆಕ್ಕಾದ ಮರಳುಗಾಡಿನ ಹತ್ತಿರವಿದ್ದ ಗವಿಯಲ್ಲಿ ಒಂಟಿಯಾಗಿ ಕಾಲಕಳೆಯುವುದು ಆತನಿಗೆ ಅಭ್ಯಾಸವಾಗಿತ್ತು. ಕ್ರಿ.ಶ.೬೧೦ನೇ ವರ್ಷದ ಒಂದು ನಿರ್ದಿಷ್ಟ ರಾತ್ರಿ; ಆತನಿಗೆ ಅಶರೀರವಾಣಿಯೊಂದು ‘‘ಓದಲು’’ ತಿಳಿಸಿತು. ಆದರೆ ತನಗೆ ಓದಲು ಬರುವುದಿಲ್ಲವೆಂದು ತನ್ನ ಅಶಕ್ತತೆಯನ್ನು ಮಹಮದ್ ತೋಡಿಕೊಂಡ. ತನ್ನ ಒಂದು ಹನಿ ರಕ್ತದಿಂದ ಮಾನವ ಮತ್ತು ಸರ್ವವನ್ನೂ ಸೃಷ್ಟಿ ಮಾಡಿರುವ ಆ ಸರ್ವಶಕ್ತನ ಹೆಸರಿನಲ್ಲಿ ಓದಲು ಮತ್ತೊಮ್ಮೆ ಆ ಅಶರೀರವಾಣಿ ಕೇಳಿಕೊಂಡಿತು. ಬರವಣಿಗೆ ಅರಿಯದ ಮಹಮ್ಮದನಿಗೆ ಸರ್ವಶಕ್ತ ತನ್ನ ಲೇಖಣಿಯ ಮೂಲಕ ಬೋಧಿಸಿದ ಎನ್ನುವ ಒಂದು ಕತೆ ಇದೆ. ಯಹೂದಿ ಮತ್ತು ಕ್ರಿಶ್ಚಿಯನ್ನರ ನಂಬಿಕೆಯಲ್ಲಿ ಬರುವ ಗೇಬ್ರಿಯಲ್‌ನ ಪ್ರಭಾವದಿಂದ ಇಂತಹ ಕತೆ ಹುಟ್ಟಿಕೊಳ್ಳಲು ಕಾರಣವಾಗಿರಬಹುದು. ಏಕಾಗ್ರ ಚಿತ್ರದಿಂದ ಮಾತ್ರ ಜ್ಞಾನೋದಯ ಆಗಲು ಸಾಧ್ಯ. ಇದು ಮಹಮ್ಮದನ ವಿಷಯದಲ್ಲೂ ಸತ್ಯವಿರುತ್ತದೆ.

ತನಗೆ ದೆವ್ವ ಹಿಡಿದಿದೆಯೆಂದು ಮಹಮ್ಮದ್ ಪ್ರಾರಂಭದಲ್ಲಿ ನಂಬಿದ. ಆದರೆ ತನ್ನ ಮನೆಗೆ ಹಿಂತಿರುಗಿದ ನಂತರ; ‘‘ನಿಮ್ಮ ನಡವಳಿಕೆ ಕಂಡ ಆ ದೇವರು; ನಿಮಗೆ ತೊಂದರೆ ನೀಡುವ ಯಾವ ದುಷ್ಟಶಕ್ತಿಗೂ ಅವಕಾಶ ನೀಡಲಾರ’’ ಎಂದು ಆತನ ಮಡದಿ ಖದೀಜಾ ಭರವಸೆ ನೀಡಿದಳು. ಆತ ‘ಪ್ರವಾದಿ’ ಆಗುವನೆಂಬ ನಂಬಿಕೆ ಆಕೆಯದಾಗಿತ್ತು. ಯೂಹೂದಿ ಮತ್ತು ಕ್ರಿಶ್ಚಿಯನ್ ಧರ್ಮಗಳ ಧರ್ಮಗ್ರಂಥಗಳನ್ನು ಚೆನ್ನಾಗಿ ಓದಿಕೊಂಡಿದ್ದ ವರ್ಹಾಕ್ ಇಬಿನ್ ನಹ್‌ಫಾಲ್ ಎನ್ನುವ ತನ್ನ ಚಿಕ್ಕಪ್ಪನ ಹಿರಿಯ ಮಗನ ಹತ್ತಿರ ಮಹಮ್ಮದನನ್ನು ಕರೆದುಕೊಂಡು ಹೋದಳು. ‘‘ತನ್ನ ಜನದ ಉದ್ಧಾರಕ್ಕಾಗಿ ಪ್ರವಾದಿಯನ್ನಾಗಿ ಆರಿಸಿದಾಗ ಈ ರೀತಿ ಸಂಭವಿಸುವುದು ವಾಡಿಕೆ. ಆದುದರಿಂದ ಮಹಮ್ಮದ್ ಒಬ್ಬ ಪ್ರವಾದಿಯಾಗುವುದು ಖಚಿತ’’ ಎಂದು ಆತ ತಿಳಿಸಿದ.

ಮಹಮ್ಮದ್ ತನ್ನ ಜೀವಿತಕಾಲದ ಕೊನೆಯವರೆವಿಗೂ ಅಶರೀರವಾಣಿಯಿಂದ ವಿಚಾರಗಳನ್ನು ಪಡೆಯುತ್ತಲೇ ಬಂದ ಎನ್ನುವ ಪ್ರತೀತಿ ಇದೆ. ಸತ್ಯಗಳನ್ನು ಅಶರೀರವಾಣಿಯಿಂದ ಪಡೆದ ಎನ್ನುವುದಕ್ಕಿಂತ; ತನ್ನ ಬದುಕಿನ ಅನುಭವಗಳಿಂದ ಕಂಡುಕೊಂಡ ಎಂದು ಹೇಳಿದರೆ ಮಹಮ್ಮದನಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಪ್ರಾರಂಭಿಕ ಕೆಲವು ವರ್ಷಗಳು, ಮಹಮ್ಮದ್ ತಾನು ಕಂಡುಕೊಂಡ ಬದುಕಿನ ಸತ್ಯಗಳನ್ನು ತನ್ನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಮಾತ್ರ ಬೋಧನೆ ಮಾಡುತ್ತಿದ್ದ. ಆತನ ವಿಚಾರಗಳ ಅನುಯಾಯಿಗಳಾದವರಲ್ಲಿ ಮೊದಲಿಗೆ ಆತನ ಹೆಂಡತಿ ಖದೀಜಾ, ಆಕೆಯ ಚಿಕ್ಕಪ್ಪನ ಮಗ ಅಲೀ, ಆತನ ಸೇವಕ ಜೆಯೀದ್, ಆತನ ಸ್ನೇಹಿತ ಅಬೂಬಕರ್, ಜೊತೆಗೆ ಅಬೂಬಕರ್‌ನ ಗುಲಾಮರು ಮತ್ತು ಅವರ ಅವಲಂಬಿತರು. ಮಹಮ್ಮದನ ಬೋಧನೆಗಳು ಮೌಖಿಕವಾಗಿ ಜನತೆಗೆ ತಲುಪಲು ಪ್ರಾರಂಭವಾಯಿತು. ಮಹಮ್ಮದನಿಗೆ ಬರವಣಿಗೆ ಬರುತ್ತಿರಲಿಲ್ಲವಾದ್ದರಿಂದ ಬೋಧನೆ ಮೌಖಿಕವಾಗಿ ಮಾತ್ರ ಮುಂದುವರೆಯಿತು. ಆತ ಸಾರ್ವಜನಿಕವಾಗಿ ಸ್ಥಳೀಯ ದೇವರುಗಳ ವಿರುದ್ಧ ಮೆಕ್ಕಾದಲ್ಲಿ ಮಾತನಾಡಲು ಪ್ರಾರಂಭಿಸಿದ ಮತ್ತು ತನ್ನ ಖುರಾಯಿಷ್ ಬುಡಕಟ್ಟಿನ ಸಹ ಸದಸ್ಯರನ್ನು ಸಿಟ್ಟಿಗೇಳುವಂತೆ ಮಾಡಿದ. ಮೆಕ್ಕಾದ ನಿವಾಸಿಗಳೆಲ್ಲ ಮಹಮ್ಮದನಿಗೆ ತಲೆ ಕೆಟ್ಟಿದೆ ಎಂದು ನಂಬಿದರು. ಮೆಕ್ಕಾದಲ್ಲಿನ ತಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನಗಳಿಗೆ ಮಹಮ್ಮದನ ಹೊಸಧರ್ಮ ಅಪಾಯ ತರುತ್ತದೆಂಬ ಭಯದಿಂದ ಆತನ ಜನ ಗೇಲಿ ಮಾಡಿದರು. ಆದರೆ ಕೆಲವು ನಡವಳಿಕೆಗಳು ಮತ್ತು ಕ್ರಿಯೆಗಳ ಆಧಾರದ ಮೇಲೆ ಮಹಮ್ಮದನನ್ನು ಒಬ್ಬ ಮುಕ್ತ ಚಿಂತಕ, ಹೊಸ ನಂಬಿಕಾ ವಿಧಾನದ ವಕ್ತಾರ ಹಾಗೂ ಪರಂಪರೆಯಿಂದ ಬಂದ ನಂಬಿಕಾ ವಿಧಾನದ ವಿರುದ್ಧ ಬಂಡಾಯ ಮಾಡಿದವನು ಎಂದು ಗುರುತಿಸಲಾಗುವುದು.

‘ಅಲ್ ಕುರಾನ್’ ಇಸ್ಲಾಂ ಮತಧರ್ಮದ ಪವಿತ್ರ ಗ್ರಂಥ. ‘ಅಲ್ ಕುರಾನ್ ’ ಎಂದರೆ ಮಹಮ್ಮದ್ ಪೈಗಂಬರರ ‘ವಚನ’ ಅಥವಾ ‘ಅನುವಾಚನ’; ಅಂದರೆ ಬರೀ ‘ಮೌಖಿಕ ಹಾಡುಗಾರಿಕೆಗಳು’ ಎನ್ನುವ ಅರ್ಥ. ‘ಹದಿತ್’ ಎಂದರೆ ಪ್ರವಾದಿಯ ಹೇಳಿಕೆಗಳು. ‘ಸುನ್ನಾಹ್’ ಎಂದರೆ ಪ್ರವಾದಿಯ ರೂಢಿಗಳು ಮತ್ತು ಆಚರಣೆಗಳು. ಸ್ಪಷ್ಟವಾಗಿ ಹೇಳಬೇಕೆಂದರೆ; ಇಸ್ಲಾಂ ಎನ್ನುವುದು ಧಾರ್ಮಿಕ ನಿರ್ವಾತದಲ್ಲಿ ಬೆಳೆಯಲಿಲ್ಲ. ಮಹಮ್ಮದ್ ಹುಟ್ಟಿ ಬೆಳೆದ ಮೆಕ್ಕಾ-ಮದೀನಾಗಳಲ್ಲಿದ್ದ ಅರಬ್ಬೀ ಧಾರ್ಮಿಕ ಪರಂಪರೆಯ ತುಂಬಾ ದೇವರುಗಳು, ದೇವತೆಗಳು ಮತ್ತು ‘ಕಹಿನ್’ ಎನ್ನುವ ಪೂಜಾರಿಗಳಿಂದ ತುಂಬಿತ್ತು. ಅದೇ ಸಮಯದಲ್ಲಿ ಅರಬ್ ದೇಶಕ್ಕೆ ಹೊಂದಿಕೊಂಡು ಯಹೂದಿ, ಕ್ರಿಶ್ಚಿಯನ್, ಪರ್ಷಿಯನ್, ಜೊರಾಷ್ಟ್ರೀಯನ್‌ಗಳಲ್ಲಿ ಏಕದೇವತಾ’ ನಂಬಿಕೆಗಳು ರೂಢಿಯಲ್ಲಿದ್ದವು. ಕಹಿನ್‌ಗಳು ಶಕ್ತಿಗಳನ್ನು ಆವೇಶಿಸಿಕೊಂಡು ಕಳೆದುಹೋದ ಒಂಟೆಗಳನ್ನು ಹುಡುಕಿಕೊಡುವುದು ಅಥವಾ ಭವಿಷ್ಯವನ್ನು ನುಡಿಯುವುದು ಮಾಡುತ್ತಿದ್ದರು. ಇದರ ಜೊತೆಗೆ ‘ಜಿನ್‌ಗಳು’ ಎನ್ನುವ ಶಕ್ತಿಗಳ ಬಗ್ಗೆ ಜನಜನಿತವಾದ ನಂಬಿಕೆ. ಮೆಕ್ಕಾ ಮತ್ತು ಮದೀನಾಗಳಲ್ಲಿ ‘ಅಲ್ಲಾಹ್’ ವಿಶ್ವದ ಸೃಷ್ಟಿಕರ್ತ ಮತ್ತು ಪರಮಶ್ರೇಷ್ಠ ದೇವತೆ; ಆದರೆ ನಂಬಿಕೆ ಮಾತ್ರ ಏಕದೇವತಾ ವಾದದ್ದಲ್ಲ. ಅಲ್ಲಾಹ್ ನಿಗೆ ‘ಅಲ್ಲಾಟ್’, ‘ಉಜ್ಜಾ’ ಮತ್ತು ‘ಮನತ್’ ಎನ್ನುವ ಮೂರು ಜನ ಹೆಣ್ಣು ಮಕ್ಕಳು ಎನ್ನುವ ನಂಬಿಕೆ ಆ ಜನದ್ದು. ಮೊದಲ ಮಗಳು ಅಲ್ಲಾಟ್‌ಳನ್ನು ದೇವತೆ, ಬೆಳ್ಳಿಚುಕ್ಕಿ ಎಂದು ಪರಿಗಣಿಸಿದ್ದರೆ; ಎರಡನೆಯ ಉಜ್ಜಾಳನ್ನು ಸರ್ವಶಕ್ತೆ ಎಂದು ಬೆಳ್ಳಿಚುಕ್ಕಿಯ ಜೊತೆಗೆ ಸೇರಿಸಲಾಗಿದೆ. ಮೂರನೆಯ ಮನತ್‌ಳನ್ನು ಅದೃಷ್ಟದೇವತೆ, ಬದುಕು ಮತ್ತು ಸಾವಿನ ಮೇಲೆ ಪ್ರಭಾವ ಹೊಂದಿರುವವಳು ಎಂದು ಪರಿಗಣಿಸಲಾಗಿತ್ತು ಎನ್ನುವ ನಂಬಿಕೆಗಳನ್ನು ಕುರಾನ್ ನ ಸುರಾ ೫೩ರಲ್ಲಿ ಕಾಣಬಹುದು. ದೇವರಿಗೆ ಮಕ್ಕಳಿದ್ದರು ಎನ್ನುವ ನಂಬಿಕೆ ಅಂತ್ಯದಲ್ಲಿ ಬಹುದೇವತಾವಾದವನ್ನು ಸಮರ್ಥಿಸುತ್ತದೆ. ಈ ನಂಬಿಕೆಗೆ ಮಹಮ್ಮದನ ಒಪ್ಪಿಗೆ ಇತ್ತು ಎನ್ನುವುದನ್ನು ಈಗೀಗ ತಿರಸ್ಕರಿಸಲಾಗುತ್ತಿದೆ. ‘ಅಲ್ಲಾಟ್ , ಉಜ್ಜಾ ಮತ್ತು ಮನತ್ ಎನ್ನುವವು ಉತ್ಕರ್ಷ ಹೊಂದಿದ ಪಕ್ಷಿಗಳು ಮಾತ್ರ. ಅವು ಅಲ್ಲಾಹ್ ನ ಮಕ್ಕಳಲ್ಲ. ಸೈತಾನ್ ಮೋಸ ಮಾಡಿದ್ದರಿಂದ ತಪ್ಪು ನಂಬಿಕೆಗೆ ಕಾರಣವಾಯಿತು’ ಎಂದು ಆನಂತರ ಮಹಮ್ಮದನಿಗೆ ತಿಳಿಸಲಾಯಿತು.

ಮೆಕ್ಕಾದಲ್ಲಿರುವ ಪವಿತ್ರ ‘ಕಬಹ್’ ಎನ್ನುವ ರಚನೆ ಮಹಮ್ಮದನ ವಂಶಸ್ಥರಾದ ಖುರೇಷಿ ಬುಡಕಟ್ಟಿನವರ ಉಸ್ತುವಾರಿಯಲ್ಲಿದೆ. ‘ಕಬಹ್’ ಎಂದರೆ ‘ಘನ’. ಮೆಕ್ಕಾದ ಒಂದು ಮೂಲೆಯಲ್ಲಿರುವ ಈ ಕಬಹ್ ಕಪ್ಪು ಬಣ್ಣದ ಉಲ್ಕಾ ಶಿಲೆಯಾಗಿದೆ. ಪವಿತ್ರವೆಂದು ಕರೆಯುವ ಬೇರೆ ಬೇರೆ ಶಿಲೆಗಳು, ಕೆಲವು ವಿಗ್ರಹಗಳು ಜೊತೆಗೆ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಕೆಲವು ಚಿತ್ರಗಳು ಮುಂತಾದವನ್ನು ಈ ಕಬಹ್ ನಲ್ಲಿ ಸಂಗ್ರಹಿಸಿಡಲಾಗಿದೆ. ಆದುದರಿಂದ ಈ ಪವಿತ್ರ ರಚನೆ ಅನೇಕ ಗುಂಪುಗಳಿಗೆ ಅರ್ಥಪೂರ್ಣವಾಗಿದೆ. ಉದಾಹರಣೆಗೆ : ಊರು ದೇವತೆ ‘ಹುಬಲ್’ನ ಚಿತ್ರವನ್ನು ಕೆಂಪು ಕಾಮುಕನಂತೆ ಚಿತ್ರಿಸಿದೆ. ಸುಮಾರು ಕ್ರಿ.ಶ.ಐದು ನೂರರ ಹೊತ್ತಿಗೆ ಬೇರೆ ಬೇರೆ ಬುಡಕಟ್ಟುಗಳ ಆರಾಧನೆಗೆ ಸೇರಿದ ಸುಮಾರು ೩೬೦ ವಿಗ್ರಹಗಳು ಕಬಹ್ ಅನ್ನು ಸೇರಿದ್ದವು. ಶುದ್ಧ ನೀರಿನ ಪವಿತ್ರ ಬಾವಿ ‘ಜಾಮ್ ಜಾಮ್’ ವಾಣಿಜ್ಯ ವ್ಯಾಪಾರ ಮಾರ್ಗದಲ್ಲಿ ಮೆಕ್ಕಾ ಒಂದು ಪ್ರಮುಖ ತಂಗುದಾಣವಾಗಲು ಕಾರಣವಾಗಿತ್ತು. ಮೆಕ್ಕಾ ಮತ್ತು ಕಬಹ್‌ನ ಹತ್ತಿರ ಪ್ರತಿವರ್ಷದಲ್ಲಿ ನಾಲ್ಕು ತಿಂಗಳು ಕಾದಾಟ ಮುಂತಾದವನ್ನು ನಿಷೇಧಿಸುತ್ತಿದ್ದರಿಂದ ಹಾಗು ಉಳಿದ ಸಂಧರ್ಭದಲ್ಲಿ ಬುಡಕಟ್ಟುಗಳ ಮಧ್ಯೆ ಕಾದಾಟಗಳು ಸಾಮಾನ್ಯವಾಗಿರುತ್ತಿದ್ದರಿಂದ; ಆ ನಾಲ್ಕೂ ತಿಂಗಳ ಸಮಯದಲ್ಲಿ ಖುರೇಷಿ ವ್ಯಾಪಾರಸ್ಥರು ನೆಮ್ಮದಿಯಾಗಿ ವ್ಯಾಪಾರ ಮಾಡುತ್ತಿದ್ದರು. ಬೇರೆ ಬೇರೆ ಬುಡಕಟ್ಟಿನವರು ನಿರಮ್ಮಳವಾಗಿ ಅಲ್ಲಿಗೆ ಬಂದು ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಇತರ ಯಾತ್ರಾರ್ಥಿ ಮತ್ತು ವ್ಯಾಪಾರಸ್ಥರ ಮೇಲೆ ಖುರೇಷಿ ಬುಡಕಟ್ಟಿನವರು ಕರ ವಿಧಿಸುತ್ತಿದ್ದರು.

ಮಹಮ್ಮದನ ಬೋಧನೆಗಳಿಂದ ಪ್ರಾರಂಭದಲ್ಲಿ ಪ್ರಭಾವಿತರಾದ ಬಹಳಷ್ಟು ಜನರು ಆರ್ಥಿಕವಾಗಿ, ಮತ್ತು ಸಾಮಾಜಿಕವಾಗಿ ದುರ್ಬಲರು. ಇಂತಹ ಜನರು ಜ್ಞಾನದ ಕಡೆಗೆ ಸರಿದದ್ದರಿಂದ; ಇವರನ್ನು ಶೋಷಣೆ ಮಾಡುತ್ತಿದ್ದ ಖುರೇಷಿಯನ್ನರ ವ್ಯಾಪಾರಕ್ಕೆ ಧಕ್ಕೆ ಉಂಟಾಯಿತು. ವ್ಯಾಪಾರವನ್ನು ಉತ್ತಮಪಡಿಸುವ ಅವರ ಎಲ್ಲಾ ಪ್ರಯತ್ನಗಳು ವಿಫಲವಾದಾಗ; ಮಹಮ್ಮದನನ್ನು ಹತ್ಯೆ ಮಾಡುವ ಪ್ರಯತ್ನಗಳೂ ನಡೆದವು. ಮೆಕ್ಕಾ ದಿಂದ ಇನ್ನೂರು ಮೈಲಿ ಅಂದರೆ ಸುಮಾರು ಮುನ್ನೂರು ಇಪ್ಪತ್ತು ಕಿ.ಮೀ. ದೂರವಿರುವ ಹಾಗೂ ಮರಳುಗಾಡಿನಲ್ಲೇ ಫಲವತ್ತಾದ ಪ್ರದೇಶವೆಂದು ಖ್ಯಾತಿ ಹೊಂದಿರುವ ಮದೀನ ಪಟ್ಟಣದ ಹತ್ತಿರದ ‘ಯಾತ್ರಿಬ್’ ಪಟ್ಟಣದ ಜನತೆ ಮಹಮ್ಮದನನ್ನು ಪ್ರವಾದಿಯಾಗಿ ಸ್ವೀಕರಿಸಿದರು. ತನ್ನ ಮೇಲಿನ ಹತ್ಯೆಯ ಪ್ರಯತ್ನದಿಂದ ಬೇಸರಗೊಂಡ ಆತ ಮೆಕ್ಕಾದಿಂದ ಯಾತ್ರಿಬ್‌ಗೆ ಕ್ರಿ.ಶ.೬೨೨ರಲ್ಲಿ ವಲಸೆ ಹೋದ. ಇದನ್ನು ‘ಹಿಜ್ರಾ’ ಎಂದು ಕರೆಯಲಾಗುತ್ತಿದೆ. ಇದು ಮುಸಲ್ಮಾನರ ಚಂದ್ರಮಾನ ಪಂಚಾಂಗದ ಪ್ರಾರಂಭವನ್ನು ಸೂಚಿಸುತ್ತದೆ. ಮಹಮ್ಮದ್ ಒಬ್ಬ ಬೋಧಕನ ಪಾತ್ರದಿಂದ ಚಿಕ್ಕ ಸಾಮ್ರಾಜ್ಯವೊಂದರ ಚಕ್ರವರ್ತಿ ಯಾದದ್ದನ್ನು ಇದ್ದು ಸೂಚಿಸುತ್ತದೆ. ಯುದ್ಧ ಮತ್ತು ಬಲಗಳಿಂದ ಜನತೆಯನ್ನು ಪರಿವರ್ತಿಸುವ ಕಾರ್ಯ, ಮುಂದುವರೆದದ್ದರಿಂದ ಬಹಳಷ್ಟು ಬುಡಕಟ್ಟುಗಳೆಲ್ಲ ಆತನ ಬಾಹುಬಂಧಗಳೊಳಗೆ ಸಿಲುಕಿದ್ದರಿಂದ ಅರಬ್ ಸಾಮ್ರಾಜ್ಯ ಏರ್ಪಟ್ಟಿತು. ಮಹಮ್ಮದನ ನಿಧನಾನಂತರದ ಒಂದು ಶತಮಾನದಷ್ಟು ಹೊತ್ತಿಗೆ ಇಸ್ಲಾಂ ಧರ್ಮ ದಕ್ಷಿಣದ ಯೂರೋಪ್, ಮಧ್ಯಪ್ರಾಚ್ಯ, ಆಗ್ನೇಯ ಏಷಿಯ ಹಾಗೂ ಈಶಾನ್ಯ ಆಫ್ರಿಕಾ ಮುಂತಾದ ಪ್ರದೇಶಗಳಿಗೆಲ್ಲಾ ಕ್ಷಿಪ್ರಗತಿಯಲ್ಲಿ ವ್ಯಾಪಿಸಿತು.

ಪ್ರಸ್ತುತ; ಪ್ರಪಂಚದ ಒಟ್ಟು ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಜನರು ಇಸ್ಲಾಂ ಧರ್ಮದ ಅನುಯಾಯಿಗಳಿದ್ದಾರೆ. ಇಸ್ಲಾಂನ ಪವಿತ್ರ ಗ್ರಂಥ ‘ಅಲ್ ಕುರಾನ್’. ಇದು ನೂರಾಹದಿನಾಲ್ಕು ‘ಸುರಾ’ (ಅಧ್ಯಾಯಗಳು)ಗಳಿಂದ ಹಾಗೂ ಆರುಸಾವಿರದ ಎರಡು ನೂರು ‘ಆಯತ್’ (ಸೂಕ್ತ ಅಥವಾ ವಚನ)ಗಳಿಂದ ಕೂಡಿದೆ. ಮಹಮ್ಮದ್ ನಿಧನಹೊಂದಿದ (ಕ್ರಿ.ಶ.೬೩೨) ಇಪ್ಪತ್ತು ವರ್ಷಗಳ ನಂತರ; ಮೌಖಿಕ ಜನಪದ ಹಾಡುಗಾರರಿಂದ ಆಯತ್‌ಗಳನ್ನೆಲ್ಲಾ ಸಂಗ್ರಹಿಸಿ ಪ್ರಕಟಿಸಲಾಯಿತು. ಇವುಗಳಲ್ಲಿ ದೊರೆತವು ಎಷ್ಟೊ? ಕಳೆದುಹೋದವು ಎಷ್ಟೊ? ಹಾಗೆಯೇ ಮಹಮ್ಮದನವು ಎಷ್ಟೊ? ಬೇರೆಯವರವು ಎಷ್ಟೊ? ತಜ್ಞ ವಿದ್ವಾಂಸರು ನಿರ್ಣಯಿಸಬೇಕು.

* * *

ಬಹು ದೇವೋಪಾಸನೆಯಿಂದ (ಶಿರ್ಕ್) ಏಕ ದೇವೋಪಾಸನೆಗೆ ಪರಿವರ್ತನೆಗೊಂಡು ಬಹು ವ್ಯಾಪಕವಾಗಿ ಹರಡಿದ ಧರ್ಮವೆಂದರೆ ‘ಇಸ್ಲಾಂ ಧರ್ಮ’. ‘ಇಸ್ಮಾಂ’ ಎಂದರೆ ಶರಣು. ಜಗತ್ತಿಗೆ ಒಬ್ಬನೇ ದೇವರಾದ ‘ಅಲ್ಲಾಹ್ ’ನಿಗೆ ಶರಣು ಹೋಗುವುದು. ವಿನಂಮ್ರನಾಗಿರುವುದು ಎಂದು ಅರ್ಥ. ಅಲ್ಲಾಹ್ ಸರ್ವಶಕ್ತ, ಸರ್ವಜ್ಞ, ಸರ್ವಾಂತ ರ್ಯಾಮಿ, ಕರುಣಾಮಯಿ, ಪರಿಪೂರ್ಣ, ಸೃಷ್ಟಿಕರ್ತ, ಪಾಲನಕರ್ತ, ಲಯಕರ್ತ ಹೀಗೆ ಎಲ್ಲವೂ ಆಗಿದ್ದಾನೆ. ‘ಇಸ್ಲಾಂ’ನ ಶಾಸನಕ್ಕೆ ‘ಶರೀಯತ್’ ಎಂದು ಕರೆಯುತ್ತಾರೆ. ಯಾವುದು ಧರ್ಮಬದ್ಧ? ಯಾವುದು ನಿಷಿದ್ಧ? ಎನ್ನುವುದನ್ನು ಶರೀಯತ್ ವಿಷದಪಡಿಸುತ್ತದೆ. ಇದರಲ್ಲಿ ಭಗವಂತನಿಗೆ ಸೇರಿದ ಹಾಗೂ ವ್ಯಕ್ತಿಗೆ ಸೇರಿದ ಎನ್ನುವ ಎರಡು ರೀತಿಯ ಹಕ್ಕುಗಳನ್ನು ಪ್ರಸ್ತಾಪಿಸಲಾಗಿದೆ. ಶ್ರದ್ಧೆ ಅಥವಾ ಇಮಾನ್, ಐದು ಹೊತ್ತು ಪ್ರಾರ್ಥನೆ, ಉಪವಾಸ, ಜಕಾತ್ ಅಂದರೆ ದಾನ, ಕೊಲೆ ಮಾಡದಿರುವುದು, ಮಾದಕ ವಸ್ತುಗಳನ್ನು ಸೇವಿಸದಿರುವುದು. ವ್ಯಭಿಚಾರ ಮತ್ತು ಜೂಜುಗಳಲ್ಲಿ ತೊಡಗದಿರುವುದು ಮುಂತಾದವು ಭಗವಂತನ ಹಕ್ಕಿಗೆ ಸೇರಿವೆ. ವ್ಯಕ್ತಿಯ ಕ್ಷೇಮ, ವ್ಯಕ್ತಿತ್ವದ ಕ್ಷೇಮ, ಆಸ್ತಿಯ ಕ್ಷೇಮ, ವಿವಾಹ ಸಂಬಂಧಕ್ಷೇಮ, ಪೋಷಕತ್ವ ಕ್ಷೇಮ, ಅನುವಂಶಿಕ ಹಕ್ಕುಗಳ ಕ್ಷೇಮ, ಸ್ವಾತಂತ್ರ್ಯದ ಕ್ಷೇಮ, ಇವು ವ್ಯಕ್ತಿಗತ ಹಕ್ಕುಗಳಲ್ಲಿ ಸೇರಿವೆ.

ಒಬ್ಬನೇ ದೇವ ಅಲ್ಲಾಹ್ ಮತ್ತು ಕೊನೆಯ ಪ್ರವಾದಿ ಮಹಮ್ಮದ್ ಎನ್ನುವ ನಂಬಿಕೆಯನ್ನು ‘ಸಾದಹ್’ ಎಂದೂ; ಮೆಕ್ಕಾ ಕಡೆಗೆ ಮುಖ ಮಾಡಿ ಸೂರ್ಯೋದಯಕ್ಕೆ ಮುಂಚೆ, ಅಪರಾಹ್ನ, ಮಧ್ಯಾಹ್ನ, ಸೂರ್ಯಾಸ್ಥ ಮತ್ತು ರಾತ್ರಿ ಮಲಗುವುದಕ್ಕೆ ಮುಂಚೆ ಹೀಗೆ ದಿನದಲ್ಲಿ ಐದು ಸಾರಿ ‘ನಮಾಜ್’ (ಪ್ರಾರ್ಥನೆ) ಮಾಡುವುದನ್ನು ‘ಸಾಲತ್’ ಎಂದೂ; ‘ರಮಜಾನ್’ ತಿಂಗಳು ಪೂರ್ತಿ ಹಗಲು ಸಮಯದಲ್ಲಿ ಉಪವಾಸ ಮಾಡುವುದನ್ನು ‘ರೋಜಾ’ ಅಥವಾ ‘ಸಾಮ್’ ಎಂದೂ; ವ್ಯಕ್ತಿ ತನ್ನ ಅಸ್ತಿಯಲ್ಲಿ ಶೇಕಡಾ ಎರಡೂವರೆಯಷ್ಟು ಪಾಲನ್ನು ಸಮಾಜದಲ್ಲಿನ ಅಶಕ್ತರಿಗೆ ಮತ್ತು ಬಡವರಿಗೆ ದಾನ ಮಾಡುವುದನ್ನು ‘ಜಕಾತ್’ ಎಂದೂ ಹಾಗೂ ತಮ್ಮ ಜೀವಿತಾವಧಿಯಲ್ಲಿ ಮೆಕ್ಕಾಕ್ಕೆ ಯಾತ್ರೆ ಮಾಡುವುದನ್ನು ‘ಹಜ್’ ಎಂದು ಇಸ್ಲಾಂನಲ್ಲಿ ಪರಿಗಣಿಸಲಾಗಿದೆ. ಇವು ಇಸ್ಲಾಂ ಧರ್ಮದ ಐದು ಮುಖ್ಯ ಆಧಾರಸ್ಥಂಭಗಳು.

ದೇವರ ಎದುರು ಎಲ್ಲರೂ ಸಮಾನರು. ಮೇಲು-ಕೀಳು, ಬಡವ-ಬಲ್ಲಿದ ಎನ್ನುವುದು ನಿಷಿದ್ಧ. ಧಾರ್ಮಿಕ ಆಚರಣೆಗಳಲ್ಲಿ ಶ್ರೇಷ್ಠ, ಕನಿಷ್ಠ ಎನ್ನುವ ಭೇದಭಾವ ಇರಕೂಡದು ಎನ್ನುವುದನ್ನು ಇಸ್ಲಾಂ ಧರ್ಮ ಪ್ರತಿಪಾದಿಸಿ ಆಚರಣೆಗೆ ತಂದಷ್ಟು ಬೇರೆ ಯಾವ ಧರ್ಮವೂ ತಂದಿಲ್ಲ. ಈ ಧರ್ಮದಲ್ಲಿ ಆದರ್ಶ ರಾಜ್ಯದ ಕಲ್ಪನೆ ಇದೆ. ಈ ರಾಜ್ಯದಲ್ಲಿ ಜಾರಿಗೆ ಬರುವ ಶಾಸನಗಳ ಮೂಲ ‘ಕುರಾನ್, ಸುನ್ನಾ, ಕೈಯಾಸ್ ಹಾಗೂ ಇಜ್ಮಿ’ ಎನ್ನುವ ಧರ್ಮಗ್ರಂಥಗಳು. ಈ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿರುವ ಅಂಶಗಳ ಹೊರತಾಗಿ ಬೇರೆ ಯಾವ ಸ್ವಾತಂತ್ರ್ಯವನ್ನೂ ವ್ಯಕ್ತಿ ಬಯಸುವಂತಿಲ್ಲ. ವ್ಯಕ್ತಿ ಸ್ವಾತಂತ್ರ್ಯದಿಂದ ಸುಖ, ಸಂತೋಷ ಸಿಗುತ್ತದೆ ಎನ್ನುವುದನ್ನು ಇದು ಒಪ್ಪುವುದಿಲ್ಲ.

ದಿವ್ಯ ಕುರಾನ್ ನಲ್ಲಿ ಮನುಷ್ಯ ಮಾಡುವ ಅಪರಾಧಗಳಿಗೆ ತಕ್ಕ ಶಿಕ್ಷೆಯನ್ನು ನಮೂದಿಸಿದೆ. ಹಿಂಸೆಗೆ ಪ್ರತಿಹಿಂಸೆಯನ್ನು ಶಾಸನಬದ್ಧಗೊಳಿಸಲಾಗಿದೆ. ‘‘ಸ್ವತಂತ್ರನಿಗೆ ಬದಲು (ಘಾತುಕನಾದ) ಸ್ವತಂತ್ರನೂ, ಗುಲಾಮನಿಗೆ ಬದಲು (ಘಾತುಕನಾದ) ಗುಲಾಮನೂ, ಸ್ತ್ರೀಗೆ ಬದಲು (ಘಾತುಕಿಯಾದ) ಸ್ತ್ರೀಯೂ ವಧಿಸಲ್ಪಡಲಿ, ಕಳ್ಳತನ ಮಾಡಿದ ಸ್ತ್ರೀಪುರುಷರ ಕೈಗಳನ್ನು ಕಡಿಯಿರಿ. ಜೀವಕ್ಕೆ (ಪ್ರತಿ) ಜೀವ, ಕಣ್ಣಿಗೆ ಕಣ್ಣು, ಮೂಗಿಗೆ ಮೂಗು, ಕಿವಿಗೆ ಕಿವಿ, ಗಾಯಗಳಿಗೆ ಗಾಯ, ವ್ಯಭಿಚಾರಿಣಿ ಮತ್ತು ವ್ಯಭಿಚಾರಿ – ಪ್ರತಿಯೊಬ್ಬರಿಗೂ ನೂರು ಛಡಿ ಏಟುಗಳನ್ನು ಕೊಡಿರಿ’’ ಎಂದು ಹೇಳುತ್ತದೆ. ಹಿಂಸೆ ಪ್ರಜ್ಞಾಪೂರಕದಿಂದ ಆಗಿದ್ದಾಗ ಮೇಲಿನ ಶಿಕ್ಷೆ ಸರಿ ಎನಿಸಬಹುದು. ಆದರೆ ಅದು ಅಪ್ರಜ್ಞಾಪೂರಕದಿಂದ ಅಥವಾ ಅಚಾತುರ್ಯದಿಂದ ಅಥವಾ ಬೇರೆಯವರ ಕುತಂತ್ರದಿಂದ ಅಥವಾ ಪರಿಸ್ಥಿತಿಯ ಒತ್ತಡದಿಂದ ಹೀಗೆ ಯಾವುದಾದರೂ ಬೇರೆ ಕಾರಣಗಳಿಂದ ಆಗಿದ್ದರೆ; ಅಂತಹುದಕ್ಕೆ ಪ್ರತಿಹಿಂಸೆ ಎಷ್ಟು ಸರಿ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ನ್ಯಾಯ ನಿರ್ಣಯಿಸುವವರ ಪ್ರಾಮಾಣಿಕತೆ ಪೂರ್ಣವಾಗಿ ರಾಗ ರಹಿತವಾಗಿರಲು ಸಾಧ್ಯವೆ? ಎನ್ನುವ ಪ್ರಶ್ನೆ ಏಳುತ್ತದೆ. ಜೊತೆಗೆ ವ್ಯಕ್ತಿಯ ನೈತಿಕ ನಡವಳಿಕೆ ಎನ್ನುವುದು ಭಯದಿಂದ ಉಂಟಾಗಿರುತ್ತದೆಯೇ ಹೊರತು ನೈಜತೆಯಿಂದಲ್ಲ.

ಇಸ್ಲಾಂ ಧರ್ಮದಲ್ಲೂ ಪಾಪ-ಪುಣ್ಯಗಳ ಕಲ್ಪನೆ ಇದೆ. ಕುರಾನಿನ ಪ್ರಕಾರ ‘ಪಾಪ’ ಎನ್ನುವುದು ಮನುಷ್ಯನ ಅಹಂಕಾರ, ಇದು ಅಲ್ಲಾಹ್‌ನನ್ನು ವಿರೋಧಿಸುವುದು ಆಗಿರುತ್ತದೆ. ಮನುಷ್ಯನ ಸಂಕಲ್ಪಶಕ್ತಿಯ ದೌರ್ಬಲ್ಯವಾಗಿರುತ್ತದೆ. ಪಾಪವನ್ನು ಸುಲಭವಾಗಿ ತೊಳೆದುಕೊಳ್ಳಲು ಎಲ್ಲರಿಗೂ ಸಾಧ್ಯವಿದೆ. (ಕುರಾನ್ ೫೭:೨೮). ಪಶ್ಚಾತ್ತಾಪಕ್ಕೆ ಪ್ರಾಯಶ್ಚಿತ್ತದ ಅವಶ್ಯಕತೆಯಿಲ್ಲ ಎಂದು ಅದು ಹೇಳುತ್ತದೆ. ಒಂದು ಕಡೆ ಹಿಂಸೆಗೆ ಪ್ರತಿಹಿಂಸೆಯ ಪ್ರತಿಪಾದನೆ ಇದ್ದರೆ ಮತ್ತೊಂದು ಕಡೆ ಪಶ್ಚಾತ್ತಾಪದ ಮಾತು ಬರುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಎದುರಾಗುತ್ತದೆ.

ಬಹುದೇವತಾರಾಧನೆ, ಕೊಲ್ಲುವುದು, ಕಳ್ಳತನ ಮಾಡುವುದು, ವ್ಯಭಿಚಾರ ಮಾಡುವುದು, ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಡದಿರುವುದು, ಅಸ್ವಾಭಾವಿಕ ಲೈಂಗಿಕ ಸಂಬಂಧ ಹೊಂದುವುದು, ರಮಜಾನ್ ನಲ್ಲಿ ಉಪವಾಸ ಮಾಡದಿರುವುದು, ಶುಕ್ರವಾರದ ನಮಾಜ್ ಮಾಡಿದಿರುವುದು, ಮಂತ್ರ-ತಂತ್ರ-ಮಾಟ ಮುಂತಾದವನ್ನು ಮಾಡುವುದು, ಜೂಜಾಡುವುದು, ಮದ್ಯಪಾನ ಮಾಡುವುದು, ಸುಳ್ಳು ಪ್ರತಿಜ್ಞೆ ಮಾಡುವುದು, ಸುಳ್ಳು ಸಾಕ್ಷಿ ಹೇಳುವುದು, ಅಧಿಕ ಬಡ್ಡಿ ಹೇರಿ ಸಾಲ ಕೊಡುವುದು, ತಂದೆ-ತಾಯಿಗಳಿಗೆ ಅವಿಧೇಯರಾಗಿರುವುದು, ಅನಾಥರನ್ನು ವಂಚಿಸುವುದು, ದೇವರ ದಯೆಯ ಬಗ್ಗೆ ಅನಾಸಕ್ತಿ ಹೊಂದುವುದು ಹಾಗೂ ಹೇಡಿತನದಿಂದ ರಣರಂಗ ಬಿಟ್ಟು ಓಡಿಹೋಗುವುದು ಮುಂತಾದವು ಇಸ್ಲಾಂ ಧರ್ಮದಲ್ಲಿ ಪಾಪದ ಕೆಲಸಗಳು. ಇವುಗಳಿಗೆ ವಿರುದ್ಧವಾದವನ್ನೆಲ್ಲಾ ಪೂಣ್ಯಕಾರ್ಯಗಳೆಂದು ಪರಿಗಣಿಸಲಾಗಿದೆ. ಪುಣ್ಯದ ಕೆಲಸಗಳಲ್ಲಿ ಎಲ್ಲೂ ‘ಅಹಿಂಸೆ’ಯ ಪ್ರಸ್ತಾಪವೇ ಬರುತ್ತಿಲ್ಲ. ಆದುದರಿಂದ ಇಡೀ ಧರ್ಮದ ಉದ್ದಕ್ಕೂ ‘ಹಿಂಸೆ’ ಪ್ರಮುಖಸ್ಥಾನ ಪಡೆಯುತ್ತಾ ಹೋಗುತ್ತದೆ. ಆಹಾರಕ್ಕಾಗಿ (ಅರಬ್ಬಿದೇಶದಲ್ಲಿ) ಪ್ರಾಣಿಗಳನ್ನೇ ಬಹುವಾಗಿ ಅವಲಂಬಿ ಸಿದ್ದದ್ದು, ಭೌಗೋಳಿಕ ಕಾರಣವಾದರೆ; ಅಲ್ಲಾಹ್‌ನಲ್ಲಿ ನಂಬಿಕೆ ಇಟ್ಟು ಮಾಡುವ ಹಿಂಸೆಯ ಪಾಪವನ್ನು ಅವನೇ ನಿವಾರಿಸುತ್ತಾನೆ ಎನ್ನುವ ನಂಬಿಕೆ ಮತ್ತೊಂದು ಕಾರಣ. ಆದುದರಿಂದಲೇ ಪ್ರಾಣಿಗಳನ್ನು ವಧಿಸುವುದಕ್ಕೆ ಮುಂಚೆ ‘ಅಲಾಲ್’ ಮಾಡುವುದು. ‘ಅಲಾಲ್’ ಎಂದರೆ ದೇವರನ್ನು ಪ್ರಾರ್ಥಿಸಿ ಕೊಲ್ಲುವುದು. ಅಂದರೆ ದೇವರ ಹೆಸರಿನಲ್ಲಿ ಹಿಂಸೆ ಮಾಡುವುದು.

ಸಾವು ಪ್ರತಿಯೊಂದು ಜೀವಿಗೂ ಅನಿವಾರ್ಯ ಸತ್ಯವಾದರೂ ಆತ್ಮತತ್ವದ ಪ್ರತಿಪಾದನೆಯನ್ನು ಬಹಳಷ್ಟು ಧರ್ಮಗಳು ಒಪ್ಪಿಕೊಳ್ಳುತ್ತವೆ. ಆದರೆ ಇದರ ಬಗ್ಗೆ ಇಸ್ಲಾಂ ಧರ್ಮಾನುಯಾಯಿಗಳಲ್ಲಿ ಭಿನ್ನಾಭಿಪ್ರಾಯವಿದೆ. ಸಂಪ್ರದಾಯವಾದಿಗಳು, ಮೌಲ್ವಿಗಳು, ತತ್ವಶಾಸ್ತ್ರಜ್ಞರು ಮತ್ತು ಸೂಫಿಗಳು ಕುರಾನನ್ನು ಆಧರಿಸಿಯೇ ಆತ್ಮದ ಸ್ವರೂಪವನ್ನು ಭಿನ್ನ ಭಿನ್ನವಾಗಿ ವಿವರಿಸುತ್ತಾರೆ. ಅರಬ್ಬೀ ಭಾಷೆಯಲ್ಲಿನ ‘ರೂಹ್ ’ ಮತ್ತು ‘ನಪ್ಸ್’ ಎನ್ನುವ ಪದಗಳನ್ನು ಕುರಾನಿನಲ್ಲಿ ಬೇರೆ ಬೇರೆ ಅರ್ಥಗಳಲ್ಲಿ ಬಳಸಲಾಗಿದೆ. ‘ರೂಹ್’ ಎನ್ನುವುದು ದೇವರಿಂದ ಹೊರಡುವ ಆತ್ಮ. ಅದು ದೇವರ ಸೃಜನಾತ್ಮಕ ಉಸಿರು. ದೇವರು ಮಾನವನನ್ನು ಮಣ್ಣಿನಿಂದ ಸೃಷ್ಟಿಸಿ ತನ್ನ ಉಸಿರನ್ನು ಅವನಲ್ಲಿ ಊದುವುದರಿಂದ ಮನಷ್ಯ ಜೀವಂತಗೊಳ್ಳುತ್ತಾನೆ. ‘ಪ್ರವಾದಿ ಮಹಮ್ಮದನ ಹೃದಯದೊಳಕ್ಕೆ ಅಲ್ಲಾಹ್ ತನ್ನ ಆತ್ಮವನ್ನು ದೂತನಾಗಿ ಕಳುಹಿಸಿದ್ದಾನೆ’’ ಎನ್ನುವುದು. ‘ರೂಹ್’ನ ಅರ್ಥ. ‘ರೂಹ್’ ಎಂದರೆ ದೇವರ ಆಜ್ಞೆಯೂ ಎನ್ನುವ ಅರ್ಥವನ್ನು ಹೊಂದಿದೆ. ‘ನಫ್ಸ್’ ಎಂದರೆ ಮನುಷ್ಯನ ಆತ್ಮ ಎಂದು ತಿಳಿದು ಬರುತ್ತದೆ. ಇದು ದೇವರ ಆತ್ಮ ಅಲ್ಲ. ಮನುಷ್ಯನಿಗೆ ಜೀವಕೊಡುವುದು ದೇವರು ಎನ್ನುವ ಭಾವನೆ ಜನರಲ್ಲಿ ಇರುವುದರಿಂದ; ದೇವರ ಆತ್ಮಕ್ಕೂ, ಮನುಷ್ಯರ ಆತ್ಮಕ್ಕೂ ಸಂಬಂಧವಿದೆ ಎನ್ನುವುದನ್ನು ಕಂಡುಕೊಳ್ಳಬಹುದು. ಕುರಾನಿನಲ್ಲಿ ‘ಜೀವ’ ಮತ್ತು ‘ಆತ್ಮ’ನ ಸಂಬಂಧ ಸ್ಪಷ್ಟವಾಗಿ ಕಂಡುಬರುವುದಿಲ್ಲ; ಜೊತೆಗೆ ಆತ್ಮವು ಭೌತಿಕವೋ ಅಥವಾ ಅಭೌತಿಕವೋ ಎನ್ನುವುದೂ ಸ್ಪಷ್ಟವಾಗುವುದಿಲ್ಲ. ಆದರೆ ಆತ್ಮನ ನೈತಿಕತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಸಾವಿನ ಜೊತೆಗೆ ಆತ್ಮವು ದೇಹವನ್ನು ಬಿಡುತ್ತದೆ. ‘ಅಖಿರತ್’ ಎಂದು ಕರೆಯಲಾಗುವ ಕೊನೇ ತೀರ್ಮಾನದ ದಿವಸ ಅದು ಮತ್ತೆ ಶರೀರವನ್ನು ಸೇರುತ್ತದೆ. ಆ ನಂತರ ಸತ್ಪುರುಷರು ಸ್ವರ್ಗಕ್ಕೂ, ಪಾಪಿಗಳು ನರಕಕ್ಕೂ ಹೋಗುತ್ತಾರೆ. ಆ ದಿನದವರೆಗೆ ಆತ್ಮಗಳು ಶಿಕ್ಷೆಯನ್ನೋ ಅಥವಾ ಸುಖವನ್ನೋ ಅನುಭವಿಸುತ್ತಿರುತ್ತವೆ ಎಂದು ಕುರಾನ್ ತಿಳಿಸು ತ್ತದೆ.ಕುರಾನ್‌ನ ಪ್ರಕಾರ ಪ್ರತಿಯೊಬ್ಬನೂ ಸಾಯಲೇಬೇಕು. ಯಾರು ಯಾವಾಗ ಸಾಯಬೇಕು ಎನ್ನುವುದು ಮೊದಲೇ ನಿಶ್ಚಿತವಾಗಿರುತ್ತದೆ. ಮನುಷ್ಯರು ಸಾವನ್ನು ತಾವೇ ಬಯಸುವುದು ನಿಷಿದ್ಧ. ಇಂತಹ ಸಾವು ಮುಂದಿನ ಸುಸ್ಥಿತಿಗೆ ಅಥವಾ ದುಃಸ್ಥಿತಿಗೆ ಕಾರಣವಾಗುತ್ತದೆ ಎಂದು ತಿಳಿಸುತ್ತದೆ. ಇದು ಪುನರ್ಜನ್ಮ ಪ್ರತಿಪಾದನೆಯೇ ಆಗಿದೆ ಎನ್ನುವುದು ಮುಖ್ಯ.

ಕುರಾನ್‌ನಲ್ಲಿ ‘ಜನ್ನತ್’ ಎನ್ನುವ ಪದ ಬರುತ್ತದೆ. ‘ಜನ್ನತ್’ ಎಂದರೆ ಉದ್ಯಾನ ಅದೂ ಭೂಮಿ-ಆಕಾಶಗಳಷ್ಟು ವಿಶಾಲವಾದ ಉದ್ಯಾನ ಎನ್ನುವ ಅರ್ಥ ಅದಕ್ಕೆ. ಇನ್ನೊಂದು ಅರ್ಥದಲ್ಲಿ ಇದು ‘ಸ್ವರ್ಗ’ ಎನ್ನುವ ಪದಕ್ಕೆ ಸಮಾನವಾಗಿದೆ. ಸ್ವರ್ಗ-ನರಕಗಳ ಕಲ್ಪನೆ ಇಸ್ಲಾಂ ಧರ್ಮದಲ್ಲೂ ಕಂಡುಬರುತ್ತದೆ ಎಂದು ನಿರ್ಣಯಿಸಬಹುದು. ಕುರಾನ್‌ನ ಪ್ರಕಾರ ‘‘ಸ್ವರ್ಗದಲ್ಲಿ ಅಡೆತಡೆಗಳಿಲ್ಲ. ಎಲ್ಲಾ ಕಡೆಗೂ ಸಲೀಸಾಗಿ ಓಡಾಡಬಹುದು. ಸ್ವರ್ಗಕ್ಕೆ ೧೦೦ ಸೋಪಾನಗಳಿವೆ. ಸ್ವರ್ಗ-ನರಕಗಳನ್ನು ಒಂದು ದೊಡ್ಡ ಗೋಡೆ ಬೇರ್ಪಡಿಸುತ್ತದೆ. ಈ ಗೋಡೆಯ ಮೇಲೆ ಸ್ವರ್ಗಕ್ಕೆ ಹೋಗುವಷ್ಟು ಪೂಣ್ಯ ಮಾಡಿದವರೂ ಅಲ್ಲದ, ನರಕಕ್ಕೆ ಹೋಗುವಷ್ಟು ಪಾಪ ಮಾಡಿದವರೂ ಅಲ್ಲದ ಕೆಲವರು ಇರುತ್ತಾರೆ. ಅಲ್ಲಾಹ್ ನಮ್ಮನ್ನು ಸ್ವರ್ಗಕ್ಕೆ ಕರೆದಾನು ಎನ್ನುವ ನಿರೀಕ್ಷೆಯಲ್ಲಿ ಇರುವವರು ಅವರು ಆಗಿರುತ್ತಾರೆ. ‘ವಸೀಲಾ’ ಎಂದರೆ ಸ್ವರ್ಗದಲ್ಲಿನ ಮಹತ್ತರವಾದ ಒಂದು ಸ್ಥಾನ. ಅಲ್ಲಾಹ್‌ನ ಸೇವಕರಲ್ಲಿ ಒಬ್ಬನಿಗೆ ಮಾತ್ರ ದೊರಕಬಹುದಾದದ್ದು. ಸ್ವರ್ಗಕ್ಕೆ ‘ಫಿರ್ ದೌಸ್’ ಎನ್ನುವ ಹೆಸರೂ ಇದೆ. ಹಣ್ಣು-ಹಂಪಲುಗಳಿಂದ ತುಂಬಿದ ಮರ-ಗಿಡಗಳಿಂದ ಕೂಡಿದ ತಂಪಾದ ಸ್ಥಳ. ಸ್ವರ್ಗದ ಕೆಳಭಾಗದಲ್ಲಿ ಶುದ್ಧಜಲ ತುಂಬಿದ ನದಿ, ಹಾಲು ತುಂಬಿದ ನದಿ, ಆರೋಗ್ಯಕ್ಕೆ ಹಾನಿಕರವಲ್ಲದ ಮದ್ಯ ತುಂಬಿದ ನದಿ ಹಾಗೂ ಸಿಹಿಜೇನು ತುಂಬಿದ ನದಿ ಎನ್ನುವ ನಾಲ್ಕು ನದಿಗಳು ಹರಿಯುತ್ತವೆ. ಜೊತೆಗೆ ಕರ್ಪೂರ ರಸ ತುಂಬಿದ ನದಿ ಮುಂತಾದ ಸಾಮಾನ್ಯ ನದಿಗಳೂ ಇವೆ. ಇವುಗಳಲ್ಲಿ ‘ಕೌಸರ್ ’ ನದಿ ಪ್ರಸಿದ್ಧವಾದುದು. ಸ್ವರ್ಗದಲ್ಲಿ ರತ್ನ ಸೌಧಗಳು, ಮುತ್ತಿನಂತೆ ಶೋಭಿಸುವ ಬಾಲಸೇವಕರೂ ಇರುತ್ತಾರೆ.’’

ಮಹಮ್ಮದ್ ಪೈಗಂಬರ್ ಸಮುದಾಯದವರಿಗೆ ಸ್ವರ್ಗಕ್ಕೆ ಮೊದಲ ಪ್ರವೇಶ. ಆ ನಂತರ ಅಲ್ಲಾಹ್‌ನ ಪ್ರವಚನಗಳನ್ನು ಸ್ವಾಗತಿಸುವವರು, ನೀತಿಮಾರ್ಗದಲ್ಲಿ ನಡೆದುಕೊಳ್ಳು ವವರು, ಅಧಾರ್ಮಿಕ ಕೃತ್ಯಗಳನ್ನು ದೂರಮಾಡುವವರು ಅರ್ಹತೆ ಪಡೆಯುತ್ತಾರೆ.

ಕುರಾನ್‌ನಲ್ಲಿ ನರಕದ ಕಲ್ಪನೆ ಭೀಭತ್ಸ. ನರಕವೆಂದರೆ ಆಳಕ್ಕೆ ಇಳಿದಿರುವ ಅಗಾಧವಾದ ಹೊಂಡ. ನರಕದಲ್ಲಿ ಆಳಕ್ಕೆ ಹೋದಂತೆಲ್ಲ ವೇದನೆಗಳು, ಸಂಕಟಗಳು ಹೆಚ್ಚುತ್ತಾ ಹೋಗುತ್ತವೆ. ನರಕ ಅಗ್ನಿಜ್ವಾಲೆಗಳು ತುಂಬಿದ ಒಂದು ಗುಂಡಿ. ದುರ್ಭಾವನೆಗಳ ಕೇಂದ್ರವೆನಿಸಿದ ಮನುಷ್ಯನ ಹೃದಯವನ್ನು ಸುಡುವ ಬೆಂಕಿ ಅಲ್ಲಿದೆ. ನರಕದಲ್ಲಿ ಕಪ್ಪಾದ ಹೊಗೆ ಆವರಿಸುತ್ತದೆ. ಅಲ್ಲಿ ಕುಡಿಯಲು ಸುಡುನೀರನ್ನು ಕೊಡುತ್ತಾರೆ. ಕೆಲವು ವೇಳೆ ಸುಡುನೀರನ್ನು ಪಾಪಿಗಳ ತಲೆಯ ಮೇಲೂ ಸುರಿಯಲಾಗುತ್ತದೆ. ಕುಡಿಯಲು ಜಿಡ್ಡು ಎಣ್ಣೆಯ ಪಾನೀಯಗಳನ್ನು ಕೊಡಲಾಗುತ್ತದೆ. ನರಕದ ಅಡಿಯಲ್ಲಿ ‘ಸಖೂಮ್ ’ ಎನ್ನುವ ಮರವಿದೆ. ಆ ಮರದ ಹಣ್ಣು ಕಹಿಯೂ, ಕೆಟ್ಟ ವಾಸನೆಯುಳ್ಳದ್ದೂ ಆಗಿದೆ. ಮುಳ್ಳುಗಳನ್ನು ತಿನ್ನಲು ಕೊಡುತ್ತಾರೆ. ಉಡಲು-ತೊಡಲು ಬೆಂಕಿಯಿಂದ ತಯಾರಿಸಿದ ಬಟ್ಟೆಗಳನ್ನು ಕೊಡಲಾಗುತ್ತದೆ. ನರಕ ಶಿಕ್ಷೆಯಿಂದ ತಪ್ಪಿಸಿಕೊಳ್ಳುವವರನ್ನು ಮತ್ತೆ ಬಂಧಿಸಲು ಕಬ್ಬಿಣದ ಸರಳುಗಳನ್ನು ಬಳಸಲಾಗುತ್ತದೆ. ಕೈಕಾಲುಗಳನ್ನು ಸಂಕಲೆಗಳಿಂದ ಬಂಧಿಸಲಾಗುತ್ತದೆ. ನರಕಕ್ಕೆ ಏಳು ಬಾಗಿಲುಗಳು ಇರುತ್ತವೆ. ಸುತ್ತಲೂ ಗಟ್ಟಿಯಾದ ಗೋಡೆ ಇರುತ್ತದೆ. ಎಲ್ಲಾ ಪಾಪಿಗಳನ್ನು ಒಳಗೆ ನುಗ್ಗಿಸಿದ ಮೇಲೆ ಮುಚ್ಚಳವನ್ನು ಮುಚ್ಚಿ ನರಕಕುಂಡವನ್ನು ಮುಚ್ಚಲಾಗುತ್ತದೆ. ಇದನ್ನೆಲ್ಲಾ ಕಾವಲು ಕಾಯುವ ಹತ್ತೊಂಭತ್ತು ಜನರನ್ನು ‘ಮಲಕ್ಕುಗಳು’ ಎಂದು ಕರೆಯಲಾಗುತ್ತದೆ. ಮೊದಲು ಅಪರಾಧಿಗಳ ನಾಯಕರನ್ನು ಆನಂತರ ಅಪರಾಧಿಗಳನ್ನು ನರಕಕ್ಕೆ ತಳ್ಳಲಾಗುತ್ತದೆ. ನರಕದ ಶಿಕ್ಷೆಗಳು ರಿಯಾಯಿತಿ ಇಲ್ಲದಂಥವುಗಳು ಹಾಗೂ ನಿರಂತರವಾಗಿ ಮುಂದುವರೆಯುವಂಥವು. ಶಿಕ್ಷೆ ನೀಡುವಾಗ ಮೈನ ಚರ್ಮ ಬೆಂಕಿಯಲ್ಲಿ ಬೆಂದು ಹೋದರೆ, ಬೇರೆ ಚರ್ಮವನ್ನು ಹೊದಿಸಲಾಗುತ್ತದೆ. ಸಖೂಮ್ ಮರದ ಹಣ್ಣುಗಳು ಹೊಟ್ಟೆಯನ್ನೇ ಸುಡುತ್ತವೆ. ಒಟ್ಟಿನಲ್ಲಿ; ನರಕದ ಕಲ್ಪನೆಯೇ ಇಸ್ಲಾಂನಲ್ಲಿ ಭಯಾನಕ. ಅನಕ್ಷರತೆ ಮತ್ತು ಅಜ್ಞಾನದಲ್ಲಿರುವ ಜನಸಮುದಾಯವನ್ನು ಒಟ್ಟಿಗಿಡಲು ಇಂತಹ ಕಲ್ಪನೆಗಳು ಹುಟ್ಟಿ ಕೊಳ್ಳುವುದು ಸ್ವಾಭಾವಿಕ.

ಹಿಜರಾ ಶೆಕೆಗೆ ಮುಂಚೆ ಅರೇಬಿಯನ್ ಬುಡಕಟ್ಟುಗಳು ಹಲವಾರು ದೇವರನ್ನು ವಿಗ್ರಹಗಳ ರೂಪದಲ್ಲಿ ಪೂಜಿಸುತ್ತಿದ್ದರು. ಪ್ರತಿಷ್ಠಾಪಿಸಿದ ಕಲ್ಲುಗಳನ್ನು ‘ಅನ್ಸಬ್’ ಎಂದೂ; ಬಲಿಯ ರಕ್ತ ಹಚ್ಚಿದ ಕಲ್ಲುಗಳನ್ನು ‘ಗಾರಿಸ್’ ಎಂದೂ ಕರೆಯಲಾಗುತ್ತಿತ್ತು. ಸಣ್ಣ ಸಣ್ಣ ವಿಗ್ರಹ ಹಾಗೂ ಮರಗಳನ್ನೂ ದೇವತೆಗಳೆಂದು ಭಾವಿಸುತ್ತಿದ್ದರು. ಮೆಕ್ಕಾದ ಪ್ರತಿ ಮನೆಯಲ್ಲೂ ವಿಗ್ರಹಾರಾಧನೆ ಇತ್ತು ಎಂದು ತಿಳಿದುಬರುತ್ತದೆ. ವಿಗ್ರಹವನ್ನು ಸೂಚಿಸುವ ‘ಸನಂ’ ಎನ್ನುವ ಪದ ಕುರಾನ್ ನಲ್ಲಿ ಕಂಡುಬರುತ್ತದೆ. ಮುಸ್ಲಿಮರು ಈ ಪದವನ್ನು ತಿರಸ್ಕರಿಸಬೇಕು ಎನ್ನುವುದೂ ಅದರಲ್ಲಿ ಇದೆ. ಬಹುದೇವತಾರಾಧನೆಯನ್ನು ವಿವರಿಸಲು ಹಾಗೂ, ವ್ಯಕ್ತಿಯೊಬ್ಬನನ್ನು ದೇವರೊಂದಿಗೆ ಸಮೀಕರಿಸುವುದನ್ನು ಸೂಚಿಸಲು ‘ಶಿರ್ಕ್’ ಎನ್ನುವ ಪದವನ್ನು ಬಳಸಲಾಗಿದೆ. ಇಸ್ಲಾಂನ ಅನುಯಾಯಿಗಳು ಇಂತಹ ಜನರಿಂದ ದೂರವಿರಬೇಕೆಂದು ಕುರಾನ್ ಸ್ಪಷ್ಟವಾಗಿ ಸೂಚಿಸಿದೆ. ಮತಶ್ರದ್ಧೆ ಇಲ್ಲದವರನ್ನು ಸೂಚಿಸಲು ‘ಕಾಫಿರ್’ ಎನ್ನುವ ಪದವನ್ನು ಬಳಸಲಾಗಿದೆ.

ಕುರಾನ್‌ನಲ್ಲಿ ವಿಗ್ರಹಗಳನ್ನು ದೇವರು ಮತ್ತು ಅವನ ಭಕ್ತರ ಶತೃವೆಂದು ಪರಿಗಣಿಸಲಾಗಿದೆ ಕುರಾನ್ (೨೬,೬೯, ೮೩)ನಲ್ಲಿ ಮೂರ್ತಿಪೂಜೆಯು ನಿಜವಾದ ದೇವರಪೂಜೆಗೆ ವಿರುದ್ಧವಾದುದು ಎಂದು ಉಲ್ಲೇಖಿಸಲಾಗಿದೆ. ಆದುದರಿಂದ; ಮುಸ್ಲಿಮರು ವಿಗ್ರಹಾರಾಧನೆ ಎನ್ನುವ ಪಾಪದಿಂದ ದೂರವಿದ್ದು, ದೇವರನ್ನು ನಿಷ್ಠೆಯಿಂದ ಆರಾಧಿಸಬೇಕು (೨೦, ೩೦, ೩೧) ಎಂದು ತಿಳಿಸುತ್ತದೆ. ಸೃಷ್ಟಿಕರ್ತನನ್ನು ನಂಬದೆ ಅವನನ್ನು ಮಾನವ ಸೃಷ್ಟಿಸಿದ ಒಂದು ವಸ್ತುವಿಗೆ ಹೋಲಿಸುವುದು ಅಪರಾಧ ಎನ್ನುವುದು ಇಸ್ಲಾಂನ ಅಭಿಪ್ರಾಯ. ಆದುದರಿಂದ; ವಿಗ್ರಹಾರಾಧಕರನ್ನು ಮುಸ್ಲಿಮರು ಮದುವೆಯಾಗಬಾರದು ಎಂದು ಕುರಾನ್ ಒತ್ತಾಯಿಸಿತು. ವಿಗ್ರಹಾರಾಧಕರ ವಿರುದ್ಧ ಹೋರಾಡಬೇಕೆನ್ನುವ ಕರೆಯನ್ನೂ ಕುರಾನ್ ನೀಡಿತು.

ವಿಗ್ರಹಾರಾಧನೆಯನ್ನು ನಿಯಂತ್ರಿಸಲು ಮೂರು ಬಗೆಯ ಸಂಬಂಧಗಳಿಂದ ದೂರವಿರಬೇಕೆಂದು ಕುರಾನ್ ಸೂಚಿಸುತ್ತದೆ. ಸೃಷ್ಟಿಕರ್ತ ಮತ್ತು ಆತನ ಭಕ್ತರನ್ನು ಹತ್ತಿರ ತರುತ್ತಾರೆ ಎನ್ನುವ; ವಿಗ್ರಹಾರಾಧಕರು ನಂಬುವ ಸಂತರು ಅಥವಾ ಪುಣ್ಯಪುರುಷರನ್ನು ದೂರವಿಡಬೇಕು. ಭಕ್ತ ಮತ್ತು ಭಗವಂತನ ಮಧ್ಯೆ ಯಾವ ಮಧ್ಯವರ್ತಿಗೂ ಎಡೆಕೊಡಬಾರದು ಎನ್ನುವುದು ಮೊದಲ ಸೂಚನೆ. ಅರಸೊತ್ತಿಗೆಯೊಂದಿಗಿನ ಸಂಪರ್ಕದಿಂದಾಗಿ ಅನೇಕ ಸಲ ಸುಳ್ಳು ದೇವತೆಗಳನ್ನೂ ಕೂಡಾ ದೇವರಿಗೆ ಸರಿಸಮವೆಂದು ಹೇಳುವಂತಾಗಿದೆ. ಇದನ್ನು ಯಾವ ಮುಲಾಜೂ ಇಲ್ಲದೆ, ಠೀಕಿಸಬೇಕು. ಇಸ್ಲಾಂ ಪ್ರಕಾರ ಇಡೀ ಜಗತ್ತಿಗೆ ದೇವನೊಬ್ಬನೇ ಒಡೆಯ ಎನ್ನುವುದು ಎರಡನೆಯ ಸೂಚನೆ. ಮಕ್ಕಳನ್ನು ದೇವರೆಂದು ಭಾವಿಸಬಾರದು ಎನ್ನುವುದು ಮೂರನೇ ಸೂಚನೆ. ಅಲ್ಲಾಹ್ ನನ್ನು ಸರ್ವಶಕ್ತ ಮತ್ತು ದಯಾಮಯಿಯಾದ ಸೃಷ್ಟಿಕರ್ತ ಎಂದು ಗ್ರಹಿಸುವುದೇ ಕುರಾನಿನ ಅಂತಿಮಗುರಿಯಾಗಿತ್ತು.

ಇಂಡಿಯಾದ ಮೇಲೆ ದಾಳಿಮಾಡಿದ ಘಸ್ನಿ, ಗೋರಿ ಮುಂತಾದ ಬಹುತೇಕ, ಮುಸಲ್ಮಾನ ದೊರೆಗಳು ಇಲ್ಲಿನ ದೇವಸ್ಥಾನಗಳಲ್ಲಿದ್ದ ಸಂಪತ್ತನ್ನು ಲೂಠಿ ಮಾಡುವುದು ಒಂದು ಕಾರಣವಿದ್ದರೆ; ದೇವಸ್ಥಾನಗಳಲ್ಲಿದ್ದ ವಿಗ್ರಹಗಳು ಮತ್ತು ಶಿಲ್ಪಗಳನ್ನು ನಾಶಮಾಡಿ, ಆ ಮೂಲಕ ವಿಗ್ರಹಾರಾಧನೆಯನ್ನು ಭಂಗಪಡಿಸುವುದರ ಮೂಲಕ ಕುರಾನ್ ನ ಬೋಧನೆಗಳನ್ನು ಜಾರಿಗೊಳಿಸುವುದೇ ಪ್ರಧಾನ ಉದ್ದೇಶವಾಗಿತ್ತೆಂದು ಹೇಳಬಹುದು.

ಹೆಣ್ಣಿನ ವಿಚಾರದಲ್ಲಿ ಭೂಮಿಯ ಮೇಲಿನ ಧಾರ್ಮಿಕ ಚರಿತ್ರೆ ಮಾತೃದೇವತೆಯ ಆರಾಧನೆಯ ನೆಲೆಯಿಂದ ಪ್ರಾರಂಭವಾಗಿ ನಿಕೃಷ್ಠ ಪ್ರಾಣಿಯಂತೆ ಕಂಡಿರುವ ಹಂತದವರೆಗೆ ಸಾಗಿರುವುದನ್ನು ನಾವು ಕಾಣಬಹುದು. ಈ ಎರಡೂ ಅತಿರೇಕಗಳ ಮಧ್ಯೆ ಹೆಣ್ಣಿನ ಬದುಕು ಹರಡಿಕೊಂಡಿರುವುದು; ಆಕೆಯು ಸವೆಸಿದ ದಾರಿಗೆ ಹಿಡಿದ ಕನ್ನಡಿಯಾಗಿದೆ. ಇದರಿಂದ ಇಸ್ಲಾಂ ಧರ್ಮವೇನೂ ಹೊರತಲ್ಲ. ಇಸ್ಲಾಂ ಒಂದು ಪಿತೃ ಪ್ರಧಾನ ಅಥವಾ ಪುರುಷ ಪ್ರಧಾನ ಧರ್ಮವಾಗಿರುವುದರಿಂದ; ಇದರಲ್ಲಿ ಬರುವ ಮಹಿಳೆಯ ಸ್ಥಾನ-ಮಾನದ ಪ್ರಾಮುಖ್ಯತೆ ಅಷ್ಟಕ್ಕಷ್ಟೇ ಎಂದು ಹೇಳಬಹುದು.

ಸೆಮೆಟಿಕ್ ಜನಾಂಗಗಳು ಪ್ರಾರಂಭದಲ್ಲಿ ಮಾತೃ ಮೂಲದ ಕುಲಗಳಲ್ಲಿ ಸಂಘಟಿತ ವಾಗಿದ್ದವು. ತಾಯಿಯ ಮೂಲದಿಂದ ವಂಶವನ್ನೂ, ರಕ್ತ ಸಂಬಂಧವನ್ನೂ ಗುರುತಿಸ ಲಾಗುತ್ತಿತ್ತು. ಇಂತಹ ಸಮಾಜಗಳಲ್ಲಿ ಬಹುಪತಿತ್ವ ಪದ್ಧತಿಯೂ ಒಂದು. ಇಂತಹ ಹಳೇ ಪದ್ಧತಿಗಳನ್ನು ಕುರಾನ್‌ನ ಕಾನೂನುಗಳು ರದ್ದುಗೊಳಿಸಿದವು. ಈ ನಿಷೇಧದಿಂದ ಸ್ತ್ರೀಯರಿಗೆ ಸ್ವಲ್ಪ ಅನುಕೂಲವೂ ಆಗಿತ್ತು. ಹೆಣ್ಣಿನ ಒಪ್ಪಿಗೆಯಿಲ್ಲದೆ ಅವಳನ್ನು ಮದುವೆಯಾಗುವುದು ಅಸಾಧ್ಯವಾಗಿತ್ತು.

ಹಸಿರೇ ಕಾಣದ ಮರಳುಗಾಡಿನಲ್ಲಿ ಆಹಾರಕ್ಕಾಗಿ ಬುಡಕಟ್ಟುಗಳ ಮಧ್ಯೆ ಹೋರಾಟಗಳು ಮತ್ತು ಯುದ್ಧಗಳು ಸಾಮಾನ್ಯವಾಗಿದ್ದಾಗ; ಸ್ವಾಭಾವಿಕವಾಗಿ ಬಹುಸಂಖ್ಯಾತ ಮಹಿಳೆಯರು ವಿಧವೆಯರಾಗಿರುತ್ತಿದ್ದರು. ಜೊತೆಗೆ ಗಂಡಸರ ಸಂಖ್ಯೆಯೂ ಕಡಿಮೆಯಾಗುತ್ತಿತ್ತು. ಇದು ಪ್ರಾಯದ ಮಹಿಳೆಯರ ಅಭದ್ರತೆಗೆ ಕಾರಣವಾಗಿ; ಸಮಾಜದ ಅನೀತಿಗೂ ಕಾರಣವಾಗಿ ಸಮಾಜದ ನೆಮ್ಮದಿ ಹಾಳಾಗಿತ್ತು. ಇದನ್ನು ಮನಗಂಡ ಮಹಮ್ಮದ್ ವಿಧವಾ ವಿವಾಹ ವನ್ನು ಬೆಂಬಲಿಸಿದ್ದರ ಜೊತೆಗೆ ಬಹುಪತ್ನಿತ್ವಕ್ಕೂ ದಾರಿ ಮಾಡಿಕೊಟ್ಟನು. ಬಹುಪತ್ನಿಯರನ್ನು ಹೊಂದುವವರು ಮೊದಲ ಒಬ್ಬಳನ್ನು ಬಿಟ್ಟು ಮಿಕ್ಕವರೆಲ್ಲಾ ವಿಧವೆಯರಿರಬಹುದು ಅಥವಾ ಗಂಡನಿಂದ ಬೇರ್ಪಟ್ಟವರಿರಬಹುದು ಅಥವಾ ಎಲ್ಲರೂ ವಿಧವೆಯರಿರಬಹುದು ಎನ್ನುವ ನಿರ್ಬಧವಿದೆ. ಆದರೆ ವಿಧವೆಯರು ಅಥವಾ ಪರಿತ್ಯಕ್ತೆಯರ ಸ್ಥಾನಗಳನ್ನು ನವ ವಧುಗಳೇ ತುಂಬುತ್ತಿರುವುದು ಒಂದು ದುರಂತ. ಗಂಡು-ಹೆಣ್ಣಿನ ಮದುವೆ ವಯಸ್ಸಿನ ನಿರ್ಬಧವನ್ನು ಸಡಿಲಿಸಿದ್ದೂ ಇದೇ ಕಾರಣಕ್ಕಾಗಿಯೇ ಎಂದು ಹೇಳಬೇಕು. ವಯಸ್ಸಿನಲ್ಲಿ ಹಿರಿಯವಳಾದವಳನ್ನು ವರಿಸಲು ಗಂಡಿಗೆ ಅನುವು ಮಾಡಿಕೊಟ್ಟಿದ್ದೇ ಇಸ್ಲಾಂ ಧರ್ಮ ಎಂದು ಹೇಳಬಹುದು. ಒಟ್ಟಿನಲ್ಲಿ; ಎರಡೂ ಸಂದರ್ಭಗಳಲ್ಲಿ ವಿವೇಕದ ಪ್ರಾಮುಖ್ಯತೆ ಇದೆ.

ಇಸ್ಲಾಂನ ಆರಂಭಕಾಲವು ಅಭದ್ರತೆಯಿಂದ ಕೂಡಿತ್ತು. ಬುಡಕಟ್ಟುಗಳ ಮಧ್ಯೆ ಸಂಘರ್ಷಗಳು ನಡೆಯುತ್ತಲೇ ಇದ್ದವು. ಮಹಮ್ಮದ್ ಪೈಗಂಬರರು ಸ್ತ್ರೀಯರಿಗಾಗಿ ಹಲವು ನಿಯಮಗಳನ್ನು ಇದೇ ಸಂದರ್ಭದಲ್ಲಿ ರೂಪಿಸಿದರು. ಇಂತಹ ನಿಯಮಗಳಿಗೆ ಕೆಲವು ಸಾಮಾಜಿಕ ಮತ್ತು ನೈತಿಕ ಬದ್ಧತೆಗಳಿದ್ದವು. ಆದರೆ ಕಾಲಕ್ರಮದಲ್ಲಿ ಅವು ಪೈಗಂಬರರ ಮೂಲ ಉದ್ದೇಶವನ್ನೂ ಮೀರಿದ್ದೇ ಅಲ್ಲದೆ; ಇಸ್ಲಾಂ ಧರ್ಮದ ಇತಿಹಾಸದ ಉದ್ದಕ್ಕೂ ಉಳಿದುಕೊಂಡು ವಿಸ್ತಾರಗೊಂಡವು. ಕುರಾನ್ ನಲ್ಲಿ ಮಹಮದ್ ಹೇಳಿದ್ದಾನೆ ಎನ್ನುವುದೇ ಮಾನದಂಡವಾಗಿ; ಎಲ್ಲಾ ಕಾಲ ದೇಶಗಳಿಗೂ ಆ ನಿಯಮಗಳನ್ನು ವಿಸ್ತರಿಸಿದ ಧರ್ಮಗುರುಗಳು, ಅವುಗಳನ್ನು ಆ ಧರ್ಮದ ಶಾಶ್ವತ ಲಕ್ಷಣಗಳನ್ನಾಗಿ ಬೆಳೆಸಿದರು.

ಮೆಕ್ಕಾ ಮತ್ತು ಮದೀನಾಗಳಲ್ಲಿ ಮಹಮ್ಮದನ ಅನುಯಾಯಿಗಳು ಪಿತೃಪ್ರಧಾನತೆಗೆ ಬಹುವಾಗಿ ಅಂಟಿಕೊಂಡು; ಹೆಂಗಸರನ್ನು ಪ್ರತ್ಯೇಕಿಸಿ ಪರದೆಯಲ್ಲಿಡಲು ಪ್ರಾರಂಭಿಸಿದರು. ಹೆಣ್ಣಿಗೆ ಗಂಡಿನ ಶೌರ್ಯ, ಸಾಹಸಗಳು ಹಾಗೆಯೇ, ಗಂಡಿಗೆ ಹೆಣ್ಣಿನ ಸೌಂದರ್ಯ ಆಕರ್ಷಣೀಯ ಮೌಲ್ಯಗಳಾಗಿದ್ದಾಗ ಹಾಗೂ ಪುರುಷ ಪ್ರಧಾನ ಸಮಾಜವಿದ್ದಾಗ ಇಂತಹ ನಡವಳಿಕೆಗೆ ಅವಕಾಶವಿರುತ್ತದೆ. ಇಸ್ಲಾಂನ ಸಮುದಾಯದ ಆಧ್ಯಾತ್ಮಿಕ ಬದುಕಿನಲ್ಲಿ ಸ್ತ್ರೀಯರೂ ಪಾಲುದಾರರಾಗಲಿ ಎನ್ನುವ ಪ್ರವಾದಿಯ ಇಚ್ಛೆಗೆ ಅರೇಬಿಯಾ ಮತ್ತು ಪರ್ಶಿಯಾಗಳಲ್ಲಿ ಪ್ರಬಲ ವಿರೊಧ ಹುಟ್ಟಿಕೊಂಡಿತು. ಸ್ತ್ರೀಯರಿಗೆ ಆಸ್ತಿಯ ಪಾಲಿನಲ್ಲಿ ಹಕ್ಕು ನೀಡಲು ಮಹಮ್ಮದ್ ನಿರ್ಧರಿಸಿದ್ದನು; ಆದರೆ ಅದು ಸಾಧ್ಯವಾಗದೆ ಒಟ್ಟಾರೆಯಾಗಿ ಸ್ತ್ರೀಯರು ಎರಡನೆಯ ದರ್ಜೆಗೆ ಇಳಿಯಲು ಕಾರಣವಾಯಿತು.

ಇಸ್ಲಾಂ ಧರ್ಮ ಏಕದೇವತಾ ಆರಾಧನೆಯನ್ನು ಮಾನ್ಯ ಮಾಡಿದ್ದರೂ; ಮಹಮ್ಮದನ ಕಾಲದಲ್ಲಿ ಮಾತೃ ಆರಾಧಕ ಧರ್ಮದ ಅಂಶಗಳು ಇನ್ನೂ ಉಳಿದಿದ್ದವು. ಮಹಮ್ಮದ್ ನ ಮೂಲದ ಖುರೇಶ್ ಬುಡಕಟ್ಟಿನವರು ಆರಾಧಿಸುತ್ತಿದ್ದ ‘ಅಲ್ ಉಷ್ಟಾ’ ಮತ್ತು ‘ಅಲ್ ಲಾತ್’ ಎನ್ನುವ ದೇವಿಯರ ಹಾಗೂ ಮದೀನಾದ ಅಲೆಮಾರಿ ಅರಬ್ಬರ ಅಧಿದೇವತೆಯಾಗಿದ್ದ ‘ಮನಾತ್ ’ ಮುಂತಾದವರ ಹೆಸರುಗಳು ಕುರಾನಿನ ಒಂದು ಭಾಗದಲ್ಲಿ ಪ್ರಸ್ತಾಪಗೊಂಡಿದ್ದವು. ಆದರೆ ಮುಂದೆ ಮುಸ್ಲಿಂ ಮೂಲಭೂತವಾದಿಗಳು ಸೈತಾನನು ಮಹಮ್ಮದನ ನಾಲಿಗೆಯಿಂದ ಆ ನುಡಿಗಳನ್ನು ಆಡಿಸಿದ್ದೆಂದು ಸಾರಿ; ‘ಸೈತಾನನ ಪದ್ಯಗಳು’ ಎಂದು ಆ ಭಾಗವನ್ನು ಬಹಿಷ್ಕರಿಸಿದರು. ಸ್ತ್ರೀ ವಿರೋಧಿ ಧೋರಣೆ ಹೆಚ್ಚಾದಂತೆ ಮುಸ್ಲಿಂ ಸ್ತ್ರೀಯರ ಸಾಮಾಜಿಕ ಕ್ರಿಯಾಶೀಲತೆಯೂ ಕಡಿಮೆಯಾಗುತ್ತಾ ಸಾಗಿತು.

ಇಸ್ಲಾಂ ಧರ್ಮ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದೆ. ಸ್ತ್ರೀ ಪುರುಷರಿಬ್ಬರಿಗೂ ಜ್ಞಾನಾರ್ಜನೆ ಕಡ್ಡಾಯ ಎಂದು ಕುರಾನ್ ವಿಧಿಸುತ್ತದೆ. ‘‘ಜ್ಞಾನದ ಒಂದು ತುಣುಕೂ ನೂರು ಪ್ರಾರ್ಥನೆಗಿಂತ ಅಧಿಕ. ಜ್ಞಾನಿಯು ಬರೆಯುವ ಶಾಯಿಯು ಹುತಾತ್ಮನ ರಕ್ತದಷ್ಟೇ ಅಮೂಲ್ಯವಾದುದು’’ ಎಂದು ಪೈಗಂಬರರ ಸೂತ್ರಗಳು ವಿವರಿಸುತ್ತವೆ. ಶಿಕ್ಷಣಕ್ಕೆ ಮಹಮ್ಮದ್ ಹೆಚ್ಚಿನ ಮಾನ್ಯತೆ ಕೊಟ್ಟು; ಸೂಕ್ತವಾದ ಯಾವುದೇ ಮಾರ್ಗದಿಂದಲಾದರೂ ಜ್ಞಾನವನ್ನು ಸಂಪಾದಿಸಲು ತನ್ನ ಅನುಯಾಯಿಗಳಿಗೆ ಪ್ರೇರಣೆ ನೀಡಿದನು. ‘ಬದುಕು ಮತ್ತು ಸಾವಿನ ನಂತರದ ಬದುಕಿಗಾಗಿ ಸಿದ್ಧತೆಯೇ ಅಲ್ಲದೆ ಆತ್ಮಶುದ್ದಿಯು’ ಶಿಕ್ಷಣದ ಮೂಲ ಉದ್ದೇಶವಾಗಿತ್ತು. ಅಂದಿನ ಶಿಕ್ಷಣ ಧರ್ಮದ ಒಂದು ಅವಿಭಾಜ್ಯ ಅಂಗವಾಗಿತ್ತು. ಧಾರ್ಮಿಕ ಮುಖಂಡರಾಗಿದ್ದ ‘ಉಲೇಮಾ’ಗಳ ಕೈಯಲ್ಲಿ ಶಿಕ್ಷಣ ಬಂಧಿಯಾಗಿತ್ತು. ಪೈಗಂಬರ್ ಸೂತ್ರವು ‘ಜ್ಞಾನವು ಧಾರ್ಮಿಕ ಮತ್ತು ಭೌತಿಕ ಎನ್ನುವ ಎರಡು ವಿಧವೆಂದು ಹೇಳುತ್ತದೆ. ‘‘ಪ್ರತಿಯೊಬ್ಬ ಮುಸ್ಲಿಂ ಸ್ತ್ರೀ-ಪುರುಷನಿಗೂ ಜ್ಞಾನಾರ್ಜನೆಯ ಕರ್ತವ್ಯ ಇದೆ. ತಮ್ಮ ಗಂಡು ಅಥವಾ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ತರಬೇತಿಯನ್ನು ಕೊಡುವುದೇ ಒಬ್ಬ ತಂದೆಯು ಕೊಡಬಹುದಾದ ಉತ್ತಮ ಕೊಡುಗೆ. ದೂರದ ಚೀನಾಕ್ಕೆ ಹೋಗಿಯಾದರೂ ಸರಿ ಮುಸ್ಲಿಮರು ಶಿಕ್ಷಣವನ್ನು ಹೊಂದಲೇಬೇಕು.’’ ಇಲ್ಲಿ ‘ಶಿಕ್ಷಣ’ (ಇಲ್ಮ್) ಎಂದರೆ ಅಂದಿನ ಚೀನಾದಲ್ಲಿ ಬಹಳ ಪ್ರಗತಿ ಹೊಂದಿದ್ದ ವೈಜ್ಞಾನಿಕ ಅಧ್ಯಯನ. ಇಸ್ಲಾಂ ಧರ್ಮದ ಉಚ್ಛ್ರಾಯದಿನಗಳಲ್ಲಿಯೂ ಮುಸ್ಲಿಮರು ಲೌಕಿಕ ಜ್ಞಾನದ ಅನುಸರಣೆಯನ್ನು ಕಡೆಗಣಿಸಿರಲಿಲ್ಲ ಎನ್ನುವುದು ಇದರಿಂದ ಅರ್ಥವಾಗುತ್ತದೆ. ಯಾವುದೇ ಧರ್ಮದಲ್ಲಿ ಜ್ಞಾನ ಸಾಂಪ್ರದಾಯಿಕ ಆಚರಣೆಯ ಅರ್ಥ ಪಡೆದು, ಸಮಾಜ ಜ್ಞಾನಕ್ಕೆ ಅಥವಾ ಲೌಕಿಕ ಜ್ಞಾನಕ್ಕೆ ಹಿನ್ನಡೆ ಉಂಟಾದಾಗ; ಅಂತಹ ಧರ್ಮದಲ್ಲಿ ಮೂಲಭೂತವಾದ ತಲೆ ಎತ್ತಲು ಕಾರಣವಾಗುತ್ತದೆ. ಪ್ರಸ್ತುತ ಇಸ್ಲಾಂ ಧರ್ಮವೂ ಇದಕ್ಕೆ ಹೊರತಾಗಿಲ್ಲ.

ಮಹಮ್ಮದ್ ಪೈಗಂಬರರ ವೈಯಕ್ತಿಕ ಬದುಕು ಏರಿಳಿತಗಳನ್ನು ಕಂಡಿರುವಂತೆ ತಿಳಿದುಬರುತ್ತದೆ. ಅವರ ಬೋಧನೆಗಳನ್ನು ಪ್ರಾರಂಭದಲ್ಲೇ ಕೆಲವರು ತಿರಸ್ಕರಿಸಿದ್ದು ಅವರನ್ನು ಬಳಲಿಸಿತ್ತು. ಅವರಿಗೆ ಆಧಾರಗಳೂ, ಸ್ಫೂರ್ತಿಯೂ ಆಗಿದ್ದ ಮೊದಲ ಮಡದಿ ಖದೀಜಾ ಮರಣ ಹೊಂದಿದ ನಂತರ, ಮಹಮ್ಮದರ ವಿಚಾರಗಳಿಗೆ ನಿಷ್ಠೆ ತೋರಿಸಿದರೂ, ಇಸ್ಲಾಂ ಧರ್ಮವನ್ನು ಸ್ವೀಕರಿಸದೇ ಉಳಿದಿದ್ದ; ಅವರ ಸೋದರ ಚಿಕ್ಕಪ್ಪ ‘ಅಬು ತಾಲಿಬ್’ ಅತ್ಯಲ್ಪ ಕಾಲದಲ್ಲೇ ಅಸುನೀಗಿದ್ದು ಪ್ರವಾದಿಯ ಸ್ಥೈರ್ಯ ಕುಸಿಯಲು ಕಾರಣವಾಯಿತು. ಒಂದೇ ಸಮನೆ ಒದಗಿಬಂದ ಗೆಲುವುಗಳು ಅವರು ಬೇರೆಯವರನ್ನು ವರಿಸಲೂ ಕಾರಣವಾಯಿತು.

ಇಸ್ಲಾಂ ಧರ್ಮದ ಎರಡನೇ ಪವಿತ್ರ ಸ್ಥಳವೆಂದು ಖ್ಯಾತಿ ಹೊಂದಿದ್ದ ಮದೀನಾ ನಗರದಲ್ಲಿ ಕ್ರಿ.ಶ.೬೩೨ರಲ್ಲಿ ಮಹಮ್ಮದ್ ಪೈಗಂಬರರು ತಮ್ಮ ದೇಹತ್ಯಾಗ ಮಾಡಿದರು. ಇಸ್ಲಾಂನ ಪ್ರಥಮ ಮಸೀದಿ ಪಕ್ಕದ ಮನೆಯ ಕೋಣೆಯಲ್ಲಿ ಅವರ ದೇಹವನ್ನು ಹೂಳಲಾಯಿತು. ಮಹಮ್ಮದರ ಬುಡಕಟ್ಟಾದ ಖುರೇಷಿಯನ್ನರ ಸದಸ್ಯರು ಮಹಮ್ಮದರ ಉತ್ತಾರಾಧಿಕಾರಿಗಳಾದರು. ಮಹಮ್ಮದರ ಸೈನ್ಯದ ಮುಖ್ಯಸ್ಥನೂ, ಮಡದಿ ಆಯೀಷಾಳ ತಂದೆಯೂ, ಮಹಮ್ಮದರ ಮಾವಂದಿರಲ್ಲಿ ಒಬ್ಬನೂ ಆಗಿದ್ದ ‘ಅಬೂಬಕರ್’ ಎನ್ನುವವನು ‘ಕಾಲೀಫ್ ಅಂದರೆ ‘ಉತ್ತರಾಧಿಕಾರಿ’ ಆದ. ಅಬೂಬಕರ್ ಕ್ರಿ.ಶ.೬೩೪ರಲ್ಲಿ ನಿಧನ ಹೊಂದಿದ. ಮಹಮ್ಮದರ ಮೂರನೇ ಹೆಂಡತಿ ‘ಹಫ್ ಸಾ’ಳ ತಂದೆ ‘ಉಮರ್ ಇಬಿನ್ ಅಲ್ ಖತಾಬ್’ ಮಹಮ್ಮದರ ವಚನಗಳ ಸಂಗ್ರಹಕಾರ್ಯ ಕೈಗೊಂಡ. ‘ಉಮರ್ ’ ಎನ್ನುವವನು ಕ್ರಿ.ಶ.೬೪೪ರಲ್ಲಿ ಇಸ್ಲಾಂ ಸೈನ್ಯದ ನಾಯಕತ್ವ ವಹಿಸಿಕೊಂಡನಂತರ ಅದು ಪರ್ಷಿಯನ್ ಸಾಮ್ರಾಜ್ಯದ ಶಕ್ತಿಯನ್ನು ಸೋಲಿಸಿ ‘ಬೈಜನ್ ಟೈನ್’ ಅಡಳಿತದಿಂದ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡಿತು.

ಪೈಗಂಬರರು ಎಲ್ಲಿಯವರೆಗೆ ಜೀವಿಸಿದ್ದರೋ ಅಲ್ಲಿಯವರೆಗೆ ಅವರ ಅನುಯಾಯಿಗಳ ನಂಬಿಕೆ ಮತ್ತು ನಡವಳಿಕೆಗಳಿಗೆ ಪೂರ್ಣಪ್ರಮಾಣದ ಮಾರ್ಗದರ್ಶಕರಾಗಿದ್ದರು. ಮಹಮ್ಮದರ ಮರಣಾನಂತರ ಅವರ ವಚನಗಳ (ಹದಿತ್‌ಗಳು) ಬಗ್ಗೆ ಅವರ ಅನುಯಾಯಿಗಳ ಮಧ್ಯೆಯೇ ಮತಭೇದ ಭಿನ್ನತೆಗಳು ಉಂಟಾದವು. ಒಂಭತ್ತನೇ ಶತಮಾನದಲ್ಲಿ ಅವರ ವಚನ ಸಂಗ್ರಹದ ಆರು ಸಂಪುಟಗಳನ್ನು ಅಧಿಕೃತವೆಂದು ಒಪ್ಪಿಕೊಳ್ಳಲಾಯಿತು. ಹೀಗೆ ಸಂಗ್ರಹಿಸಲ್ಪಟ್ಟ ವಚನಗಳಲ್ಲಿ ವಾಸ್ತವವಾಗಿ ಪ್ರವಾದಿಗಳವು ಎಷ್ಟು? ಎನ್ನುವುದರ ಬಗ್ಗೆ ಇಂದು ಜಿಜ್ಞಾಸೆ ಇದೆ. ಮಹಮ್ಮದರ ನಿಧನಾನಂತರ ಇಸ್ಲಾಂ ಅನ್ನು ಹೊಸ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡಲು ಹದಿತ್ ಗಳನ್ನು ಭಾಗಶಃ ಮಾನ್ಯ ಮಾಡಲಾಯಿತು ಎನ್ನುವ ವಿಮಶೆಗಾರರೂ ಇದ್ದಾರೆ.

ಇಸ್ಲಾಂನಲ್ಲಿನ ಒಡಕುಗಳು

ಬೇರೆ ಬೇರೆ ಧರ್ಮಗಳಲ್ಲಿ ಆದಂತೆ ಇಸ್ಲಾಂನಲ್ಲೂ ಒಡಕುಗಳು ಉಂಟಾಗಿ ಗುಂಪುಗಳು ರೂಪುಗೊಂಡವು. ಒಂದೇ ಕುಟುಂಬ ಭಾವನೆಗಳು ಇದ್ದರೂ; ನಂಬಿಕೆಗಳ ಅಭಿವ್ಯಕ್ತಿ ಭಿನ್ನತೆಯಿಂದ ಆ ಗುಂಪುಗಳ ಮಧ್ಯೆ ಬಿಗಿತ ಉಂಟಾಗುತ್ತಾ ಬರುತ್ತಿದೆ. ಪ್ರತಿ ಗುಂಪನ್ನೂ ಬೇರೆ ಘಟಕವೆಂದೇ ಪರಿಗಣಿಸಲಾಗಿದೆ. ಪ್ರತಿಯೊಂದಕ್ಕೂ ತನ್ನದೇ ಆದ ಮುಕ್ತ ಚಿಂತನೆಯಿಂದ ಗಟ್ಟಿಯಾದ ದೈವಜ್ಞಾನವಿದೆ. ಪೈಗಂಬರರು ಯಾವ ಧರ್ಮವನ್ನು ಪ್ರಾರಂಭಿಸಿದರೋ; ಅವರ ಅನುಯಾಯಿಗಳು ಅದರ ಪರಮಾರ್ಥ ವಿಚಾರದಲ್ಲಿ, ತತ್ವ ಬೋಧನೆಯಲ್ಲಿ ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಧಾರ್ಮಿಕ ಪದ್ಧತಿಗಳ ವೈವಿಧ್ಯಮಯ ಬೆಳವಣಿಗೆಯಲ್ಲಿ ನಿರತರಾಗಿದ್ದಾರೆ.