. ಕ್ರೈಸ್ತ ಮತಧರ್ಮ

ಏಸುಕ್ರಿಸ್ತನ ಸುವಾರ್ತೆ ಸಂಪ್ರದಾಯದ ಪ್ರಕಾರ; ಕ್ರೈಸ್ತ ಮತಧರ್ಮದ ಸಂಸ್ಥಾಪಕ ಜೀಸಸ್. ತಂದೆ ಬಡಗಿ ವೃತ್ತಿಯ ಜೋಸೆಫ್. ತಾಯಿ ಮೇರಿ. ಅನ್ಯ ಮತಧರ್ಮಗಳ ಸಂಸ್ಥಾಪಕ ನಾಯಕರ ಹುಟ್ಟು ಮತ್ತು ಬಾಲ್ಯದ ಬಗ್ಗೆ ಇದ್ದಂತೆ; ಕಟ್ಟುಕತೆಗಳು ಜೀಸಸ್‌ನ ಹುಟ್ಟು ಮತ್ತು ಬಾಲ್ಯದ ಬಗ್ಗೆಯೂ ಕ್ರಿ.ಶ.ಎರಡನೇ ಶತಮಾನದಲ್ಲಿ ಹುಟ್ಟಿದವು. ಹೊಸ ಒಡಂಬಡಿಕೆ (New Testiment)ಯಲ್ಲಿ ಏಸುವಿನ ಹುಟ್ಟಿನ ಬಗ್ಗೆ ಒಂದು ವಿಷಯ ಪ್ರಸ್ತಾಪವಾಗಿದೆ. ಅದೆಂದರೆ, ಜೋಸೆಫ್‌ನಿಗೆ ಮತ್ತು ಏಸುವಿನ ತಾಯಿ ಮೇರಿಗೂ ಮದುವೆ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮೇರಿ ಗರ್ಭವತಿಯಾಗಿರುವುದು ಜೋಸೆಫ್ ನಿಗೆ ತಿಳಿದುಬಂತು. ಅವನು ನೀತಿವಂತನಾದುದರಿಂದ; ನಿಶ್ಚಿತಾರ್ಥದಂತೆ ಮೇರಿಯನ್ನು ಮದುವೆಯಾಗಿ ದೇಹ ಸಂಬಂಧದಿಂದ ದೂರವಿದ್ದನು. ಆಕೆ ಗಂಡು ಮಗುವಿಗೆ ಜನ್ಮವಿತ್ತಳು. ಅವನೇ ಜೀಸಸ್ ಅಥವಾ ಏಸು.

ಮಗು ಏಸುವಿನ ಜೀವಕ್ಕೆ ರಾಜ ಹೆರೋದನಿಂದ ಹಾನಿ ಇದೆ ಎನ್ನುವುದನ್ನು ದೇವದೂತನಿಂದ ಕನಸಿನಲ್ಲಿ ಕಂಡ ನಂತರ; ಜೋಸೆಫ್ ಮತ್ತು ಮೇರಿ ಮಗುವಿನೊಂದಿಗೆ ಈಜಿಪ್ಟ್ ಗೆ ಪರಾರಿಯಾದರು. ಮಗು ಸಾವಿನ ದವಡೆಯಿಂದ ಪಾರಾಯಿತು. ಸಂದೇಹಕ್ಕೆ ಆಸ್ಪದ ಮಾಡಿಕೊಡುವ ಇಂತಹ ಕತೆಗಳು ಅಂದಿನ ಕ್ರಿಶ್ಚಿಯನ್ ಧರ್ಮದ ಪೌರಾಣಿಕ ನಂಬಿಕೆಗೆ ಹಿಡಿದ ಕನ್ನಡಿಗಳಾಗಿವೆ.

ಜೀಸಸ್ ಒಬ್ಬ ಇಮ್ಯಾನುವೇಲ್ . ಅಂದರೆ ದೇವರೇ ನಮ್ಮೊಡನಿದ್ದಾನೆ ಎನ್ನುವ ಅರ್ಥ. ‘ಏಸು’ ಎಂದರೆ, ‘‘ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರ ಮಾಡುವವನು’’ ಎನ್ನುವ ಅರ್ಥ. ಅವನು ಹುಟ್ಟಿದ್ದು ಜುದೇಯ ನಾಡಿನ ‘ಬೆತ್ಲೆಹೇಂ’ ಎನ್ನುವ ಊರಿನಲ್ಲಿ.

ಕ್ರಿ.ಶ.ಒಂದನೇ ಶತಮಾನದಲ್ಲಿ ಯಹೂದಿ ಧರ್ಮದ ಒಳಪಂಗಡವಾಗಿ ಕ್ರೈಸ್ತಧರ್ಮ ಅಥವಾ ಕ್ರೈಸ್ತಮತಧರ್ಮ ಪ್ರಾರಂಭವಾಯಿತು. ಬೈಬಲ್ ಸಂಪ್ರದಾಯದ ಪ್ರಕಾರ; ಇಸ್ರೇಲ್ ನ ಗಲಿಲೇಯ ಪ್ರಾಂತ್ಯದ ನಜರತ್ ನ ನಿವಾಸಿ ‘ಜೀಸಸ್’ ಅಥವಾ ‘ಏಸು’ ಯಹೂದಿ ‘ಜಾನ್’ ಎನ್ನುವವನಿಂದ ಧರ್ಮ ದೀಕ್ಷೆ ಪಡೆಯುತ್ತಾನೆ. ಕಾರಣಾಂತರದಿಂದ ಜಾನ್‌ನ ಕೊಲೆಯಾಗುತ್ತದೆ. ಆಗ ಜೀಸಸ್ ಜಾನ್ ನ ಉತ್ತರಾಧಿಕಾರಿಯಾಗಿ ಕಾರ್ಯ ಮುಂದುವರೆಸಿ; ಒಂದಷ್ಟು ಅನುಯಾಯಿಗಳನ್ನು ಸಂಘಟಿಸುತ್ತಾನೆ. ಅದು ಪ್ರಾರಂಭದಲ್ಲಿ ಕ್ರೈಸ್ತ ಸಂಘಟನೆಯಾಗಿ ನಂತರ ಚಳುವಳಿಯಾಗಿ ರೂಪುಗೊಳ್ಳುತ್ತದೆ. ಜೀಸಸ್ ಹೆಚ್ಚು ಕ್ರಿಯಾಶೀಲನಾಗಿರುತ್ತಾನೆ. ಆ ಕ್ರಿಯಾಶೀಲತೆ ಎನ್ನುವುದು ಒಂದು ವರ್ಷ ಅಥವಾ ಹೆಚ್ಚೆಂದರೆ ಮೂರು ವರ್ಷಗಳು ಇರಬಹುದು. ಅಷ್ಟರಲ್ಲಿ, ಪಿತೂರಿಯ ಅಪಾದನೆಯ ಮೇಲೆ ಬಂಧಿತನಾಗಿ ಜೈಲು ಸೇರಿ ರೋಮ್ ನ್ಯಾಯಾಲಯದ ತೀರ್ಪಿನಿಂದ ಶಿಲುಬೆಗೆ ಏರುವುದರ ಮೂಲಕ ಮರಣದಂಡನೆಯನ್ನು ಅನುಭವಿಸುತ್ತಾನೆ. ಜೀಸಸ್‌ನ ನಿಧನಾನಂತರದ ಬೆನ್ನಲ್ಲೇ ಆತನ ಅನುಯಾಯಿಗಳು ತಮಗಾದ ಧಾರ್ಮಿಕ ಅನುಭವಗಳನ್ನು ಹೊರಹಾಕಿ; ‘ಜೀಸಸ್ ಮರಣಾನಂತರ ದೈಹಿಕವಾಗಿ ಸ್ವರ್ಗ ಸೇರಿದ್ದಾದನೆ. ಸ್ವರ್ಗ ಎನ್ನುವುದು ಭೂಮಿಯಿಂದ ಉನ್ನತ ಸ್ಥಾನದಲ್ಲಿದೆ’’ ಎಂದು ಸಮಾಧಾನಪಟ್ಟುಕೊಳುತ್ತಾರೆ. ಇದು ಕ್ರಿ.ಶ.ಮೊದಲ ಶತಮಾನದ ನಂಬಿಕೆ. ಜೀಸಸ್ ಸ್ವರ್ಗದ ಮೋಡಗಳಿಂದ ಮರಳಿ ಕ್ರೈಸ್ತ ಮತಧರ್ಮದ ಸಾಮ್ರಾಜ್ಯ ಸ್ಥಾಪಿಸುತ್ತಾನೆಂದು ಆತನ ಅನುಯಾಯಿಗಳು ನಂಬಿದರು. ಯಹೂದಿಯ ತಾರಸಸ್ ನ ಸಾಹುಲ್ ಎನ್ನುವಾತ ಮೊದಲು ಕ್ರಿಶ್ಚಿಯನ್ ಧರ್ಮ ಸೇರಿ; ನಂತರ ಆ ಧರ್ಮದ ಪ್ರಚಾರಕನಾದ. ಯಹೂದಿಗಳಲ್ಲಿನ ಪಾರ್ಸಿಗಳ ‘ಪುನರ್ಜನ್ಮ ನಂಬಿಕೆ. ಭಕ್ತಿ ವೈರಾಗ್ಯದವರ ‘ಲೋಕರಕ್ಷಕ ನಂಬಿಕೆ’ ಮುಂತಾದವನ್ನು ಕ್ರೈಸ್ತ ಅನುಯಾಯಿಗಳು ಪಾಲು ಪಡೆದಿರುವುದು ಕಂಡುಬಂದಿದೆ. ಕ್ರೈಸ್ತ ಮತಾನುಯಾಯಿಗಳ ನಂಬಿಕೆಯ ಸಾರದ ಪ್ರಕಾರ ‘‘ಪ್ರಪಂಚದ ಅಂತ್ಯ ಎನ್ನುವುದು ಕ್ರೈಸ್ತ ಮತದ ಅಂತ್ಯದಲ್ಲಿದೆ.’’ ಅಂತರೆ ಈ ಧರ್ಮ ಸೂರ್ಯ ಚಂದ್ರ ಮತ್ತು ಭೂಮಿಗಳಿರುವವರೆಗೂ ಆಚರಣೆಯಲ್ಲಿರುತ್ತದೆ ಎನ್ನುವ ಅರ್ಥ ಅಥವಾ ಮನುಷ್ಯ ಸಂತತಿ ಇರುವವರೆಗೂ ಜೊತೆಯಾಗಿರುತ್ತದೆ ಎನ್ನುವ ಅರ್ಥ. ಭಾವನೆಗಳು ಹೆಚ್ಚಾದಾಗ ಇಂತಹ ನಂಬಿಕೆಗಳಿಗೆ ಅವಕಾಶವಾಗುವುದು ಸ್ವಾಭಾವಿಕ. ಆದರೆ ಇವರು ಇತರರಿಗಿಂತ ಭಿನ್ನವಾಗುವುದು ಎಲ್ಲೆಂದರೆ; ಜೀಸಸ್ ನ ವಿಷಯದಲ್ಲಿ. ‘‘ಜೀಸಸ್ ಲೋಕರಕ್ಷಕ. ಅವನ ಪುನರ್ಜನ್ಮ ನಿಶ್ಚಿತ’’ ಎನ್ನುವುದನ್ನು ಬಲವಾಗಿ ನಂಬಿದ್ದಾರೆ. ಕಾಲದ ಅಂತ್ಯ ಎನ್ನುವುದು ಜೀಸಸ್‌ನ ಪುನರುತ್ಥಾನದಿಂದ ಎಂದೂ ನಂಬಿದ್ದಾರೆ.

ಮಾನವ ಪ್ರಜ್ಞೆ ವಿಕಾಸವಾದಂತೆ, ಧರ್ಮಪ್ರಜ್ಞೆ ಮತ್ತು ಆಚರಣೆಗಳಲ್ಲಿ ಸೂಕ್ಷ್ಮ ಪರಿಜ್ಞಾನ ಮತ್ತು ಶಿಷ್ಠತೆ ವಿಕಾಸವಾಗುತ್ತಾ ಬಂದಿದ್ದರ ಪರಿಣಾಮವಾಗಿ; ಪ್ರಪಂಚದ ಇತರ ಉನ್ನತ ಮತಧರ್ಮಗಳಂತೆ ಕ್ರೈಸ್ತಧರ್ಮ ಹುಟ್ಟಲು ಕಾರಣವಾಯಿತು. ಕ್ರೈಸ್ತಧರ್ಮದಲ್ಲಿ ದೈವ ಒಂದು. ನಿರಾಕಾರ ಅಥವಾ ಸಾಕಾರ. ಸರ್ವಶಕ್ತ. ಸರ್ವಾಂತರ್ಯಾಮಿ. ಸರ್ವಕಲ್ಯಾಣ. ಗುಣ ಸಂಪನ್ನ ಹಾಗೂ ಪಾರಮಾರ್ಥಿಕ ಅರ್ಥಪಡೆದಿ ದ್ದಾನೆ ಅಥವಾ ಪಡೆದಿದೆ. ದೇವರು ತನ್ನ ತಾಂತ್ರಿಕ, ಮಾಂತ್ರಿಕ ಮತ್ತು ಪ್ರಾಕೃತಿಕ ಸ್ವರೂಪ ಕಳೆದುಕೊಂಡು; ಧಾರ್ಮಿಕ, ನೈತಿಕ ಮತ್ತು ಅಲೌಕಿಕ ಸ್ವರೂಪ ಪಡೆದುಕೊಂಡಿದೆ.

ಸಂಸ್ಕೃತಿ ಮತ್ತು ನಾಗರೀಕತೆಯ ಇತಿಹಾಸದಲ್ಲಿ ಪ್ರತಿಯೊಂದು ಧರ್ಮವೂ ತನ್ನದೇ ಆದ ನೀತಿಸಂಹಿತೆ ಹಾಗೂ ನೈತಿಕ ದೃಷ್ಟಿಕೋನವನ್ನು ಪ್ರತಿಪಾದಿಸಿರುವುದು ಕಂಡುಬರುತ್ತದೆ. ಇದರಿಂದ ಕ್ರೈಸ್ತಧರ್ಮವೂ ಹೊರತಲ್ಲ. ಬೈಬಲ್ಲಿನ ಹೊಸ ಒಡಂಬಡಿಕೆಯಲ್ಲಿ ಬರುವ ‘‘ಪರ್ವತದ ಮೇಲಿನ ಬೋಧನೆಗಳು’’ (Sermon on the mount) ಧರ್ಮವು ಪ್ರತಿಪಾದಿಸುವ ಸನ್ನಡತೆಯ ಅತ್ಯುತ್ತಮ ನೀತಿ ಸಂಹಿತೆಗಳಾಗಿವೆ. ‘‘ದೀನ-ದಲಿತರೇ, ನೀವು ಭಾಗ್ಯವಂತರು! ದೇವರ ಸಾಮ್ರಾಜ್ಯ ನಿಮ್ಮದು. ಈಗ ಹಸಿದಿರುವವರೇ, ನೀವು ಭಾಗ್ಯವಂತರು ! ನಿಮಗೆ ಸಂತೃಪ್ತಿಯಾಗುವುದು. ಈಗ ಅತ್ತು ಗೋಳಾಡುವವರೇ, ನೀವು ಭಾಗ್ಯಂವತರು! ನೀವು ನಕ್ಕು ನಲಿದಾಡುವಿರಿ. ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು. ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು. ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಅವರು ಬಾಧ್ಯಸ್ಥರು. ನ್ಯಾಯ ನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು. ದಯಾವಂತರು ಭಾಗ್ಯವಂತರು; ದೇವರ ದಯೆ ಅವರಿಗೆ ದೊರಕುವುದು. ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು. ನ್ಯಾಯ ನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗ ಸಾಮ್ರಾಜ್ಯ ಅವರದು’’ ಎನ್ನುವವೇ ಆ ಬೋಧನೆಗಳು. ಧಾರ್ಮಿಕ ಜೀವನದಲ್ಲಿ ಸಂಕಷ್ಟಗಳಿಂದ ಬಿಡುಗಡೆಯಾಗುವುದೇ ‘ಮುಕ್ತಿ’ ಎಂದು ಹೇಳಲಾಗಿದೆ. ಕ್ರೈಸ್ತಧರ್ಮದ ದೃಷ್ಟಿಕೋನದಿಂದ ಹೇಳುವುದಾದರೆ; ‘ಮನುಷ್ಯರು ಅನಂತವಾದ ಯಾತನೆಗಳನ್ನು ಹೊಂದಿರುತ್ತಾರೆ. ಅವರಿಗೆ ದೈವದ ಸಹಾಯ ಬೇಕಾಗಿದೆ. ದೈವದ ಸಹಾಯ ಬೇಕಾದವರಿಗೆ ಮಾತ್ರ ಕ್ರೈಸ್ತಧರ್ಮ ಸೇರಿದುದಾಗಿರುತ್ತದೆ. ಇಡೀ ಭೂಮಂಡಲವು ಸಹಾ ಒಂದು ಆತ್ಮನ ಯಾತನೆಗಿಂತ ಮೀಗಿಲಾದ ಯಾತನೆಯನ್ನು ಅನುಭವಿಸಲಾರದು. ಕ್ರೈಸ್ತರ ನಂಬಿಕೆ ಎಂದರೆ ವ್ಯಕ್ತಿಯು ಈ ಅಂತಿಮ ಯಾತನೆಯನ್ನು ತಿರಸ್ಕರಿಸುವುದೇ ಆಗಿದೆ’’ ಎಂದು ವಿಟೆಗೆನ್ ಸ್ಟೈನ್ ಅಭಿಪ್ರಾಯಪಡುತ್ತಾನೆ.

ಕ್ರೈಸ್ತ ಧರ್ಮದಲ್ಲಿ ಪ್ರೀತಿಯೇ ಅತ್ಯುನ್ನತ ನಿಯಮಾವಳಿಯಾಗಿದೆ. ಧರ್ಮ ಮತ್ತು ಪ್ರೀತಿಗಳೆರಡೂ ದೇವರೊಬ್ಬನಲ್ಲಿಯೇ ಇರಲು ಸಾಧ್ಯ. ಆದುದರಿಂದ ಆತನನ್ನು ನೀತಿ ಸಂಹಿತೆಯ ಉದ್ಧಾರಕನೆಂದೂ; ವಿಶ್ವಾತ್ಮಕವಾದ ಪ್ರೀತಿಯ ಮೂರ್ತರೂಪ ಎಂದು ತಿಳಿಯಲಾಗಿದೆ. ಆಧ್ಯಾತ್ಮಿಕ ಜೀವನವು ವ್ಯಕ್ತಿಯ ಅಂತರಾಳದ ನೆಲೆಯಲ್ಲಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವುದು ಆಗಿದೆ. ಆದುದರಿಂದಲೇ ದೇವರ ಸಾಮ್ರಾಜ್ಯವನ್ನು ಮನುಷ್ಯರ ಹೃದಯದಲ್ಲಿಯೇ ಸಾಕ್ಷಾತ್ಕರಿಸಿಕೊಳ್ಳಬೇಕೆಂದು ಕ್ರೈಸ್ತಧರ್ಮ ಹೇಳುತ್ತದೆ. ಈ ಸಮಾಜದಲ್ಲಿ ಎಲ್ಲರೂ ದೇವರ ಮಕ್ಕಳೇ ಆಗಿದ್ದು; ಪ್ರತಿಯೊಬ್ಬರೂ ಆಜ್ಞೇಯವಾದ ಮೂಲದಿಂದಲೇ ಜನಿಸಿದವರಾಗಿದ್ದಾರೆ. ಅಂದರೆ ದೇವರ ಅಸ್ತಿತ್ವವನ್ನು ಒಪ್ಪಿಕೊಳ್ಳುವುದೂ ಇಲ್ಲ ಮತ್ತು ನಿರಾಕರಿಸುವುದೂ ಇಲ್ಲದ ಮೂಲ. ಆದುದರಿಂದ ಕ್ರೈಸ್ತಧರ್ಮವೂ ಉಳಿದ ಧರ್ಮಗಳಂತೆ ಸನ್ಯಾಸತ್ವದ ಆದರ್ಶವನ್ನು ಪ್ರತಿಪಾದಿಸಿದೆ. ಯಾರು ದೇವರಿಗಾಗಿ ಜಗತ್ತನ್ನೇ ಅಂದರೆ ಅಲೌಕಿಕ್ಕಾಗಿ ಲೌಕಿಕವನ್ನೇ ತ್ಯಾಗಮಾಡುತ್ತಾರೋ; ಯಾರು ಪ್ರೇಮದಿಂದ ಕೂಡಿದ ಜೀವನವನ್ನು ನಡೆಸುತ್ತಾ ದೇವರಿಗೆ ಮತ್ತು ಮನುಷ್ಯ ಕುಲಕ್ಕೆ ಸೇವೆ ಮಾಡುತ್ತಾರೋ ಅವರೇ ಸನ್ಯಾಸಿಗಳು ಎನ್ನುವುದನ್ನು ಕ್ರೈಸ್ತಧರ್ಮ ಎತ್ತಿ ಹಿಡಿಯುತ್ತದೆ.

* * *

ದೇವನು ವಿಶ್ವಕ್ಕೆ ಅತೀತನು ಎನ್ನುವುದು ಸಾಂಪ್ರದಾಯಿಕ ಕ್ರೈಸ್ತ ಸಿದ್ಧಾಂತ. ಗಿಯದ್ರನೋ ಬ್ರೂನೋ ಎನ್ನುವವನು ಇದನ್ನು ಅಲ್ಲಗಳೆದು ‘‘ದೇವನು ಸರ್ವಗತನೆಂದೂ, ಸರ್ವವೂ ಅವನಲ್ಲೇ ಇದೆ’’ ಎಂದು ಹೇಳಿ ಚರ್ಚ್ ಅಧಿಕಾರಿಗಳ ಕೋಪಕ್ಕೆ ಗುರಿಯಾದನು. ಬೈಬಲ್ ಭೂಕೇಂದ್ರವಾದವನ್ನು ಪ್ರತಿಪಾದಿಸುತ್ತಿತ್ತು. ಭೂಮಿ ಸ್ಥಿರ. ಅದರ ಸುತ್ತೂ ಸೂರ್ಯ ಸುತ್ತುತ್ತದೆ ಎನ್ನುವುದು ಭೂಕೇಂದ್ರವಾದ. ಬ್ರೂನೋ ಈ ವಾದವನ್ನು ತಿರಸ್ಕರಿಸಿ; ಕೊಪರ್ನಿಕಸ್ ನ ಸೂರ್ಯಕೇಂದ್ರ ವಾದವನ್ನು ಎತ್ತಿ ಹಿಡಿದಿದ್ದರಿಂದ ಅವನನ್ನು ಸಜೀವವಾಗಿ ಸುಡಲಾಯಿತು. ಯಾಕೋಬ್ ಬ್ಯೋಮಾ ಎನ್ನುವ ಹದಿನಾರನೇ ಶತಮಾನದ ಕ್ರೈಸ್ತ ಅನುಭಾವಿ ಸರ್ವದೇವವಾದವನ್ನು ಪ್ರತಿಪಾದಿಸಿ ಚರ್ಚ್‌ನ ಅಧಿಕಾರಿಗಳಿಗೆ ಹೆದರಿ ದೇವ ಮತ್ತು ವಿಶ್ವ ಬೇರೆ ಬೇರೆ ಎಂದು ಸಾರಿದನು. ಬಹುತೇಕ ಅನುಭಾವಿಗಳು ವಿಶ್ವ ಮತ್ತು ದೇವನಲ್ಲಿ ಅಭೇದವನ್ನು ಕಂಡಿದ್ದಾರೆ.

ಕ್ರೈಸ್ತ ಮತಧರ್ಮದ ನಂಬಿಕೆಯಲ್ಲಿ ದೇವರು ಅನಂತ ಸ್ವರೂಪಿ. ಸ್ವಯಂಭು. ಶೂನ್ಯದಿಂದಲೇ ಎಲ್ಲವನ್ನೂ ಸೃಷ್ಟಿಸುವವನು. ಕ್ರೈಸ್ತ ಧರ್ಮದ ಮೂಲ ನಂಬಿಕೆಗಳು ಎಂದರೆ ದೇವರು, ಕ್ರಿಸ್ತ ಅಥವಾ ಏಸು, ಮನುಷ್ಯ ಮತ್ತು ವಿಶ್ವ. ಪ್ರತಿಯೊಂದು ಧರ್ಮದಲ್ಲೂ ನಾಯಕರು ಅವತಾರವೆತ್ತಿ ಬಂದು ಜನರನ್ನು ಕಷ್ಟಗಳಿಂದ ರಕ್ಷಿಸುತ್ತಾರೆ ಹಾಗೂ ಅವರನ್ನು ಆಳುತ್ತಾರೆ ಎನ್ನುವ ನಂಬಿಕೆ ಇದೆ. ಹೀಗೆ ಹುಟ್ಟಿ ಬಂದವರನ್ನು ಪ್ರವಾದಿಗಳು ಎಂದು ಕರೆಯಲಾಗುತ್ತಿದೆ. ಇದನ್ನು ಬೈಬಲ್ ಕೂಡಾ ಪ್ರತಿಪಾದಿಸುವುದರಿಂದ; ಏಸುಕ್ರಿಸ್ತ ಒಬ್ಬ ‘ಪ್ರವಾದಿ’ ಎಂದು ಕ್ರೈಸ್ತರು ನಂಬುತ್ತಾರೆ.

ಪಾಪಿಗಳು ವಾಸಿಸುವ ಹಳ್ಳಿ ಅಥವಾ ಪಟ್ಟಣಗಳಲ್ಲಿ ಅನಾಹುತಗಳು ಉಂಟಾಗುವುದು ಅಥವಾ ಪಾಪಿಗಳು ಬೆಳೆಯುವ ಬೆಳೆಗಳು ನಾಶವಾಗುವುದು ಅಥಾವಾ ಸಾಮೂಹಿಕವಾಗಿ ಸಾವುಗಳು ಉಂಟಾಗುವುದು, ಅತಿವೃಷ್ಟಿ ಅಥವಾ ಅನಾವೃಷ್ಟಿ ಮುಂತಾದ ನೈಸರ್ಗಿಕ ಅನಾಹುತಗಳು ಉಂಟಾಗುವುದು ಮುಂತಾದ ಉದಾಹರಣೆಗಳು ಬೈಬಲ್‌ನಲ್ಲಿ ಕಂಡು ಬರುತ್ತವೆ. ಬೈಬಲ್‌ನ ಪ್ರಕಾರ; ಪಾಪ ಮಾಡಿದ ಮನುಷ್ಯನಿಗೆ ದೈವ ಶಾಪಕೊಟ್ಟಿದ್ದರ ಸಂಕೇತ ಮೇಲಿನ ಉದಾಹರಣೆಗಳು. ಅದು ವ್ಯಕ್ತಿಗತವಾಗಿರಬಹುದು. ಅಥವಾ ಸಾಮೂಹಿಕವಾಗಿರಬಹುದು. ಶಾಪಕ್ಕೆ ಒಳಗಾದವರಿಗೆ ಉಂಟಾದ ಕೆಡಕುಗಳೇ ಮೇಲಿನವು ಎಂದು ಹೇಳಬಹುದು. ಇದರಿಂದ; ಕ್ರೈಸ್ತ ಧರ್ಮದಲ್ಲೂ ‘ಪಾಪ’ ಮತ್ತು ‘ಪುಣ್ಯ’ ಎನ್ನುವ ಪರಿಕಲ್ಪನೆಗಳು ಇವೆ ಎಂದು ಕಂಡುಬರುತ್ತದೆ. ಇವುಗಳ ಹಿಂದಿರುವುದು ನೈತಿಕ ಸ್ವರೂಪದ ‘ಸರಿ’ ಮತ್ತು ‘ತಪ್ಪು’ ಅಥವಾ ‘ಒಳ್ಳೆಯದು’ ಮತ್ತು ‘ಕೆಟ್ಟದ್ದು’ ಎನ್ನುವ ವಿಭೇದವೇ ಆಗಿವೆ. ಆದರೆ; ಮತಧರ್ಮಗಳಲ್ಲಿ ‘ಪಾಪ’ ಮತ್ತು ‘ಪುಣ್ಯ’ ಎನ್ನುವ ಪರಿಕಲ್ಪನೆಗಳು ನೈತಿಕ ಅರ್ಥದಲ್ಲಿ ಬಳಕೆಯಾಗದೆ, ಬರೀ ಆಯಾ ಧಾರ್ಮಿಕ ವಿಧಿಗಳ ಉಲ್ಲಂಘನೆಯ ದುಷ್ಪರಿಣಾಮ ಅಥವಾ ಅನುಸರಣೆಯ ಸತ್ಪರಿಣಾಮ ಎನ್ನುವ ಅರ್ಥದಲ್ಲಿ ಬಳಸಲ್ಪಡುತ್ತಿವೆ. ಇಸ್ಲಾಂ ಧರ್ಮದಲ್ಲಿ ಐದೂ ಹೊತ್ತು ನಮಾಜು ಮಾಡದಿದ್ದರೆ ‘ಪಾಪ’ ಎನ್ನುವ ನಂಬಿಕೆಯಾಗಲೀ ಅಥವಾ ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡುವುದು ಪುಣ್ಯ ಎನ್ನುವ ಹಿಂದೂ ಧರ್ಮದಲ್ಲಿನ ನಂಬಿಕೆ ಮುಂತಾದ ಉದಾಹರಣೆಗಳು ಮೇಲಿನವನ್ನು ಸಮರ್ಥಿಸುತ್ತವೆ. ಬೈಬಲ್‌ನ ಪ್ರಕಾರ; ‘‘ದೇವನ ಪ್ರತಿಬಿಂಬವೇ ಮನುಷ್ಯ ಸೃಷ್ಟಿ. ದೇವನೊಂದಿಗಿನ ಮನುಷ್ಯನ ಸಂಬಂಧ ಜೀವಂತವಾದುದು. ಇಂತಹ ಜೀವಂತ ಸಂಬಂಧವನ್ನು ಕಡಿದುಕೊಳ್ಳುವುದು ಪಾಪವಾಗುತ್ತದೆ. ಮನುಷ್ಯನು ತನ್ನ ಹುಟ್ಟಿನಿಂದಲೇ ಪಾಪಮುಖಿಯಾಗಿರುತ್ತಾನೆ. ಇದಕ್ಕೆ ಕಾರಣ; ಆದಿ ಮಾನವರಾದ ಆಡಂ ಮತ್ತು ಈವ್ ಮಾಡಿದ ಮೂಲಪಾಪ, (Origional sin). ಈಡನ್ನಿನ ತೋಟದಲ್ಲಿ ದೇವನಿಂದ ನಿಷಿದ್ಧವಾಗಿದ್ದ ಹಣ್ಣನ್ನು ಇವರಿಬ್ಬರೂ ತಿಂದಿದ್ದರಿಂದ ಮಾನವನಿಗೆ ಸ್ವಲ್ಪ ಭಾಗ ಮಾತ್ರ ಪುಣ್ಯ ಪಡೆಯಲು ಸಾಧ್ಯವಾಗಿದ್ದು’’ ಎಂದು ತಿಳಿದುಬರುತ್ತದೆ. ಇಲ್ಲಿ ‘ಪಾಪ’ ಎನ್ನುವುದು ಕೇವಲ ನೈತಿಕತೆಯ ವಿರುದ್ಧದ ಅಪರಾಧ ಮಾತ್ರವಲ್ಲ; ಅದು ದೈವ ವಿರೋಧಿ ಮತ್ತು ಧರ್ಮಾಚರಣೆಯ ವಿರೋಧಿ ಅಪರಾಧ ಕೂಡ ಆಗಿರುತ್ತದೆ ಎನ್ನುವುದು ಮುಖ್ಯ. ಮನುಷ್ಯರು ಮಾಡವ ಪಾಪಕೃತ್ಯಗಳು ಕೇವಲ ನೈತಿಕ ಮತ್ತು ಸಾಮಾಜಿಕ ಅಪರಾಧಗಳಷ್ಟೇ ಆಗಿರದೆ; ಅವು ದೈಶಾಸನ ಅಪರಾಧಗಳು ಕೂಡಾ ಆಗಿರುತ್ತವೆ.

ಕ್ರೈಸ್ತಧರ್ಮದ ಪ್ರಕಾರ; ‘ಮಾನವರ ಪಾಪ ಕರ್ಮಗಳ ನಿವಾರಣೆಗಾಗಿ ಏಸುಕ್ರಿಸ್ತ ನಿಷ್ಪಾಪಿಯಾಗಿದ್ದರೂ ಶಿಲುಬೆಗೆ ಏರಿ ಬಲಿದಾನ ಮಾಡಿದ’. ಬೈಬಲ್ ನ ಹೊಸ ಒಡಂಬಿಡಕೆ (New Testiment) ಪ್ರಕಾರ ‘‘ಏಸು ಕ್ರಿಸ್ತನ ಮಹಾಬಲಿದಾನವು ಸಮಸ್ತ ಮಾನವರ ಪಾಪಗಳನ್ನೆಲ್ಲಾ ತೊಳೆದು; ಈ ಭೂಮಿಯ ಮೇಲೆ ದೇವರ ರಾಜ್ಯವನ್ನು (The Kingdom of god) ಪ್ರತಿಷ್ಠಾಪಿಸುತ್ತದೆ.’’ ಇಲ್ಲ ಪಾಪದ ಪ್ರಾಯಶ್ಚಿತ್ತಕ್ಕಿಂತ ಹೆಚ್ಚಾಗಿ ತಪ್ಪನ್ನು ಒಪ್ಪಿಕೊಳ್ಳುವುದಕ್ಕೆ ಹಾಗೂ ಪಶ್ಚಾತ್ತಾಪಕ್ಕೆ ಒತ್ತುಬಿದ್ದಿದೆ.

ಬೈಬಲ್‌ನ ‘ಅಂತಿಮ ತೀರ್ಪು’ (Judgement) ‘ಸಂಭಾವನೆ’ (Reword) ಮತ್ತು ‘ಶಿಕ್ಷೆ’ (Punishment) ಪರಿಕಲ್ಪನೆಗಳಲ್ಲಿ ‘ಪುಣ್ಯ’ದ ಸ್ಪಷ್ಟವಾದ ಕಲ್ಪನೆ ಕಂಡುಬರುತ್ತದೆ. ಕ್ರಿ.ಶ.೩ನೇ ಶತಮಾನದಲ್ಲಿ ಗ್ರಂಥ ರಚನಕಾರನೂ, ಬೋಧಕನೂ ಆಗಿದ್ದ ಟರ್ಟ್ಯೂಲಿ ಯನ್ನನು ‘‘ನಾವು ಕಡ್ಡಾಯವಾಗಿ ಮಾಡಲೇ ಬೇಕಾದ ಸತ್ಕರ್ಮಗಳನ್ನು ಮಾಡುವುದರಿಂದ ಪುಣ್ಯವು ಹಾಗೂ ಧಾರ್ಮಿಕ ಕಡ್ಡಾಯವಿಲ್ಲದಿದ್ದರೂ ನಾವು ಸ್ವಇಚ್ಛೆಯಿಂದ ಮಾಡುವ ಐಚ್ಚಿಕ ಸತ್ಕರ್ಮಗಳಿಂದ ಹೆಚ್ಚಿನ ಪುಣ್ಯವು ಲಭಿಸುತ್ತದೆ. ಪಾಪಿಗಳು ತಮ್ಮ ಪಾಪ-ಕರ್ಮಗಳಿಗಾಗಿ ದೇವರೆದುರು ಪ್ರಾಯಶ್ಚಿತ್ತ ಪಡಬೇಕಾಗುತ್ತದೆ. ಅಂತಹ ಪ್ರಾಯಶ್ಚಿತ್ತವು ನಮ್ಮ ಪುಣ್ಯಕರ್ಮಗಳಿಂದ ಲಭಿಸುತ್ತದೆ. ಮನುಷ್ಯರ ಪುಣ್ಯಕರ್ಮಗಳಿಂದ ಪ್ರಾರ್ಥನೆಗಳು ಪರಿಣಾಮಕಾರಿಯಾಗುತ್ತವೆಂದೂ, ಜೀವಿಗಳು ಗಂಡಾಂತರಗಳಿಂದ ಪಾರಾಗುತ್ತವೆಂದೂ ಹಾಗೂ ಆತ್ಮಗಳು ಮರಣದಿಂದ ಮುಕ್ತವಾಗುತ್ತವೆ’’ ಎಂದು ಬೋಧಿಸಿದನು.

ಕ್ರಿ.ಶ.೫ನೇ ಶತಮಾನದ ಆದಿಯಲ್ಲಿ ಪೆಲಾಗಿಯಸ್ ಎನ್ನುವ ಕ್ರೈಸ್ತ ಸಂಜಾತ ಚಿಂತಕ ಮಾನವನ ಮುಕ್ತಿ ಸಂಪಾದನೆಯ ಪ್ರಯತ್ನದಲ್ಲಿ ಅವನ ‘ಸ್ವತಂತ್ರ ಸಂಕಲ್ಪ’ (free will) ಪ್ರೇರಿತ ಪುಣ್ಯಕಾರ್ಯಗಳ ಮಹತ್ವವನ್ನು ಎತ್ತಿಹಿಡಿಯುತ್ತಾನೆ. ಇದೇ ಸಂದರ್ಭದಲ್ಲಿದ್ದ ಮತ್ತೋರ್ವ ಕ್ರೈಸ್ತ ಸಂಜಾತ ಚಿಂತಕ ಸೇಂಟ್ ಅಗಸ್ಟೈನ್ ಎನ್ನುವ ಧರ್ಮಶಾಸ್ತ್ರಕಾರ ‘ದೈವಾನುಗ್ರಹ’ (Divine grace) ವಿಚಾರವನ್ನು ಮುಂದಿಡುತ್ತಾನೆ. ಎರಡೂ ವಿಚಾರಗಳಲ್ಲಿ ಸಂಘರ್ಷ ಉಂಟಾಗಿ ಕೊನೆಗೆ ದೈವಾನುಗ್ರಹವಾದಕ್ಕೆ ಮಾನ್ಯತೆ ಸಿಕ್ಕು ಮುಂದುವರಿಯುತ್ತದೆ. ಕ್ರೈಸ್ತಧರ್ಮ ಪರಂಪರೆಯಲ್ಲಿ ದೈವಾನುಗ್ರಹವಾದ ಪ್ರಬಲವಾಗಿದೆಯಾದರೂ ಸ್ವಕರ್ಮಾರ್ಜಿತ ಪುಣ್ಯದ ಪರಿಕಲ್ಪನೆಯನ್ನೂ ಉಳಿಸಿಕೊಂಡಿದೆ ಎನ್ನುವುದು ಮುಖ್ಯ. ಕ್ರೈಸ್ತಧರ್ಮದ ಪ್ರಸ್ತುತ ನಿಲುವನ್ನು ‘‘ನಮ್ಮ ಮುಕ್ತಿಗಾಗಿ ನಮ್ಮಷ್ಟಕ್ಕೆ ನಾವೇ ಯಾವ ಪುಣ್ಯ ಕಾರ್ಯವನ್ನೂ ಮಾಡಲಾರೆವು. ಅದಕ್ಕಾಗಿ ನಮಗೆ ದೇವರ ಅನುಗ್ರಹ ಬೇಕೇಬೇಕು. ಆದರೆ ನಮ್ಮ ಪುಣ್ಯಕರ್ಮಗಳ ಕಾಯಕವಿಲ್ಲದೆ; ಕೇವಲ ದೇವರಲ್ಲಿಯ ಅಚಲ ಶ್ರದ್ಧೆಯು ನಮ್ಮನ್ನು ಆಧ್ಯಾತ್ಮಿಕವಾಗಿ ಉಳಿಸಲಾರದು. ಆದುದರಿಂದ ನಮಗೆ ದೈವಾನುಗ್ರಹದ ಜೊತೆಗೆ ನಮ್ಮ ಪುಣ್ಯಕರ್ಮಗಳ ಕಾಯಕ; ಹೀಗೆ ಎರಡೂ ಬೇಕು’’ ಎಂದು ಉಲ್ಲೇಖಿಸಬಹುದು ಎಂದು ಧರ್ಮವಿಮರ್ಶಕರು ಅಭಿಪ್ರಾಯಪಡುತ್ತಾರೆ.

ಆಧುನಿಕ ಚಿಂತಕ ಎಮ್ಯಾನುಯೆಲ್ ಕಾಂಟ್‌ನ ಪ್ರಕಾರ ಕ್ರೈಸ್ತ ಮತಧರ್ಮ ಮಾತ್ರ ನೈತಿಕ ಧರ್ಮ. ಉಳಿದ ಧರ್ಮಗಳು ಅಧೀನ ಧರ್ಮಗಳು. ಮೂಲ ಪಾಪದ ಕಲ್ಪನೆಯನ್ನು ಕಾಂಟ್ ಕೆಡುಕಿನ ಕಡೆ ವಾಲುವ ಮನುಷ್ಯನ ಆಂತರ್ಯದ ಜೊತೆ ಹಾಗೂ ಕರ್ತವ್ಯದ ಕರೆಯನ್ನು ಕಡೆಗಣಿಸಿ ಒಳ ತುಡಿತಗಳಿಗೆ ಈಡಾಗುವ ಸಹಜ ವ್ಯಾಪಾರದ ಜೊತೆ ಬೆಸೆಯುತ್ತಾನೆ. ‘‘ನೈತಿಕ ನಿಯಮಕ್ಕೆ ವಿರುದ್ಧವಾಗಿ ನಡೆಯುವುದು ಮನುಷ್ಯನ ಸಹಜ ನಡವಳಿಕೆಯಾಗಿದೆ. ಆದಾಗ್ಯೂ; ನೈತಿಕ ನಿಯಮಗಳಿಗೆ ಬದ್ಧವಾಗಿರುವುದು ಅವನ ಸಹಜ ನಡವಳಿಕೆಯಲ್ಲ ಎಂದಾಗಲೂ ಮನುಷ್ಯನ ಒಳಗಿನ ಒಳ್ಳೆಯತನಕ್ಕೆ ವಿರೋಧ ವ್ಯಕ್ತಪಡಿಸುತ್ತದೆ ಎಂದೇನೂ ಅಲ್ಲ. ಪ್ರವೃತ್ತಿಗಳ ಮೇಲೆ ಪ್ರಭುತ್ವ ಸಾಧಿಸಿ, ಅವುಗಳನ್ನು ಶಿಸ್ತಿಗೆ ಒಳಪಡಿಸಿ ನೈತಿಕ ನಿಯಮಕ್ಕೆ ಬದ್ಧರಾಗುವ ಸ್ವಾತಂತ್ರ್ಯ ಗಳಿಸುವುದು ಮನುಷ್ಯನ ಮೂಲ ಒಳ್ಳೆಯತನವೆಂಬುದರ ಅರ್ಥವಾಗಿದೆ. ಹಾಗಾಗಿ ಮೂಲ ಒಳ್ಳೆಯತನ ಹಾಗೂ ಕೆಡುಕನ್ನು ಎಸಗಲು ಆಂತರಿಕ ಪ್ರಚೋದನೆ  ಇವೆರಡೂ ಪ್ರತಿಯೊಬ್ಬ ಮನುಷ್ಯನ ಪ್ರಮುಖ ಲಕ್ಷಣಗಳಾಗಿವೆ’’ ಎಂದು ಅಭಿಪ್ರಾಯಪಡುತ್ತಾನೆ. ‘ದೇವರು ಕ್ರಿಸ್ತನಲ್ಲಿ ಆವತರಿಸಿದ್ದಾನೆ’ ಎಂದು ಕಾಂಟ್ ಹೇಳುವಾಗ; ಇದನ್ನು ಅಲೌಕಿಕ ವ್ಯವಸ್ಥೆಯ ಪವಾಡವೆಂದು ಹೇಳುವುದಿಲ್ಲ. ಬದಲಾಗಿ ಅದು ‘ನೈತಿಕ ಆದರ್ಶದ ಪ್ರಕಟಿತ ರೂಪವಾಗಿದೆ’ ಎನ್ನುತ್ತಾನೆ. ಈ ಆದರ್ಶವನ್ನು ಸಾಕ್ಷಾತ್ಕರಿಸಿಕೊಂಡಾಗಲೇ ದೇವರ ಅವತಾರದ ಸತ್ಯಾಸತ್ಯದ ಅರಿವಾಗುವುದು.

‘‘ಇಂದ್ರಿಯ ಗಮ್ಯ ಪ್ರತಿಮೆಗಳನ್ನು ಕ್ರೈಸ್ತಧರ್ಮ ಉಪಯೋಗಿಸುವವರೆಗೆ ಅದು ಪರಿಪೂರ್ಣ ಅರಿವನ್ನು ದಕ್ಕಿಸಿಕೊಳ್ಳಲಾರದು. ಈ ಧರ್ಮವು ಈ ಹಂತವನ್ನು ದಾಟಿ ಆಧ್ಯಾತ್ಮಿಕ ವಲಯವನ್ನು ಪ್ರವೇಶಿಸಲು ಪರಿಶುದ್ಧ ಆಲೋಚನೆಯಿಂದ ಮಾತ್ರ ಸಾಧ್ಯ’’ ಎಂದು ಹೆಗೆಲ್ ಪ್ರತಿಪಾದಿಸಿದ್ದಾನೆ.

* * *

ಕ್ರೈಸ್ತ ಧರ್ಮದಲ್ಲೂ ‘ಪವಿತ್ರ’ ಮತ್ತು ‘ಅಪವಿತ್ರ’ ಎನ್ನುವ ಪರಿಕಲ್ಪನೆಗಳು ಗಟ್ಟಿಯಾಗಿಯೇ ನೆಲೆಯುರಿವೆ. ಈ ಪರಿಕಲ್ಪನೆಗಳಿಗೆ ಸ್ಥಾನವಿರುವಲ್ಲೆಲ್ಲಾ ಧರ್ಮಾನುಯಾಯಿಗಳ ವಿಘಟನೆಗೆ ಆ ಮೂಲಕ ಶ್ರೇಣೀಕೃತ ಸಮಾಜದ ನಿರ್ಮಾಣಕ್ಕೆ ಕಾರಣವಾಗಿರುವುದನ್ನು ನಾವು ಮಾನವ ಇತಿಹಾಸದಿಂದ ಕಂಡುಕೊಳ್ಳಬಹುದು. ‘ಪವಿತ್ರ’ ಅಥವಾ ‘ಪಾವಿತ್ರ್ಯ’ ಎನ್ನುವುದು ಭೌತಿಕ ರೂಪ ಇರಬಹುದು ಅಥವಾ ಬೌದ್ದಿಕತೆಗೆ ಸಂಬಂಧಿಸಿದ ಭಾವನೆಗಳ ರೂಪ ಇರಬಹುದು. ಅವು ಭಾಷಿಕವಾಗಿರಬಹುದು. ಸಾಮಾಜಿಕ ನಡವಳಿಕೆಯಾಗಿರಬಹುದು. ಅಥವಾ ಕಲಾತ್ಮಕ ಕೃತಿಯಾಗಿರಬಹುದು. ಒಟ್ಟಿ ನಲ್ಲಿ ಎಲ್ಲರ ಅವಿರೋಧ ಒಪ್ಪಿಗೆಗೆ ಒಳಪಟ್ಟಾಗ ‘ಪವಿತ್ರ’ ಎನಿಸುತ್ತವೆ.

ಬೈಬಲ್ ಗ್ರಂಥದ ಉತ್ತರ ಭಾಗವನ್ನು ‘ಹೊಸ ಒಡಂಬಡಿಕೆ’ (New Testiment) ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ. ಇದು ಏಸು ಕ್ರಿಸ್ತನನ್ನು ಕುರಿತು ಬರೆಯಲಾದ ಗ್ರಂಥವೆಂದು ಕರೆಯಲಾಗಿದೆ. ದೇವರು ಮಾನವರೊಡನೆ ಹೊಸದಾಗಿ ಮಾಡಿಕೊಂಡ ಒಪ್ಪಂದ ಇದಾಗಿರುತ್ತದೆ. ಏಸುಕ್ರಿಸ್ತನನ್ನು ಪ್ರಭು ಮತ್ತು ಲೋಕೋದ್ಧಾರಕ ಎಂದು ನಂಬಿ ಅವನಲ್ಲಿ ವಿಶ್ವಾಸ ಇಡುವ ಜನರ ಜೀವನ ಉದ್ಧಾರವಾಗುತ್ತದೆ ಎನ್ನುವುದು ಇದರ ತಿರುಳು. ಸುಮಾರು ಇಪ್ಪತ್ತೇಳು ಅಧ್ಯಾಯಗಳಿಂದ ಕೂಡಿದ ಈ ಗ್ರಂಥವನ್ನು ಹನ್ನೆರಡು ಮಂದಿ ಲೇಖಕರು ಐವತ್ತು ವರ್ಷಗಳಲ್ಲಿ ಸಂಗ್ರಹಿಸಿ ಬರೆದಿದ್ದಾರೆ. ಈ ಗ್ರಂಥ ಜನಸಮೂಹದ ಮೇಲೆ ಅಧಿಕಾರಯುತವಾಗಿ ಬೋಧಿಸಿ, ನಿರ್ದೇಶಿಸಿ, ಪರಿಣಾಮ ಬೀರಿದ್ದರಿಂದ; ಕ್ರೈಸ್ತಧರ್ಮಾನುಯಾಯಿಗಳಿಗೆಲ್ಲ ಪ್ರವಿತ್ರ ಗ್ರಂಥವಾಗಿದೆ.

‘ಜೆರುಸಲೆಮ್ ’ ಮತ್ತು ‘ಬೆತ್ಲೆಹೆಮ್ ’ ಕ್ರೈಸ್ತರಿಗೆ ಪವಿತ್ರ ಸ್ಥಳಗಳು. ಒಂದು ಏಸ್ತು ಕ್ರಿಸ್ತ ಬದುಕಿದ ಸ್ಥಳವಾದರೆ ಮತ್ತೊಂದು ಹುಟ್ಟಿದ ಊರು. ಕ್ರೈಸ್ತ ಮತಾನುಯಾಯಿಗಳು ತಮ್ಮ ಧಾರ್ಮಿಕ ಸಂಸ್ಕಾರಗಳನ್ನು ಇಲ್ಲಿ ಆಚರಿಸುತ್ತಾರೆ. ಇಲ್ಲೇ ಆಚರಿಸಬೇಕೆನ್ನುವ ಧಾರ್ಮಿಕ ನಿರ್ದೇಶನವೂ ಅವರಿಗೆ ಇದೆ. ಏಸುವಿನ ಜನ್ಮದಿನದಂದು ಅಪಾರ ಸಂಖ್ಯೆಯ ಜನ ಬೆತ್ಲೆಹೆಮ್ ನಲ್ಲಿ ಸೇರುತ್ತಾರೆ. ಇಟಲಿಯ ವ್ಯಾಟಿಕನ್ ನಗರ ಕ್ರೈಸ್ತರ ಮತ್ತೊಂದು ಪವಿತ್ರ ಸ್ಥಳ. ರೋಮನ್ ಕ್ಯಾಥೋಲಿಕ್ ಚರ್ಚುಗಳ ಪೀಠಾಧಿಪತಿ ಇಲ್ಲಿದ್ದಾರೆ. ಕ್ರೈಸ್ತರಿಗೆ ಚರ್ಚುಗಳೇ ಪವಿತ್ರ ಸ್ಥಳಗಳು. ಶಿಲುಬೆ ಮತ್ತು ಕ್ರೈಸ್ತ ವೃಕ್ಷಗಳು ಇವರಿಗೆ ಪವಿತ್ರ. ಕ್ರೈಸ್ತಧರ್ಮಾನುಯಾಯಿಗಳಿಗೆ ‘ಜೀಸಸ್’, ‘ತಂದೆ’ ಮತ್ತು ‘ಪವಿತ್ರಾತ್ಮ’ ಎನ್ನುವವು ತ್ರಿಸತ್ಯಗಳು. ಇವರು ಪವಿತ್ರ ವ್ಯಕ್ತಿಗಳು. ತಾಯಿ ಮೇರಿಯೂ ಪವಿತ್ರ ವ್ಯಕ್ತಿಯೇ. ಸಂತ ಪಾಲ್ ಮತ್ತು ಏಂಜೆಲ್ಸ್ ಅವರನ್ನು ಧರ್ಮದೇವತೆಗಳೆಂದು ಪರಿಗಣಿಸಲಾಗಿದೆ. ಕ್ರೈಸ್ತಧರ್ಮದಲ್ಲಿ ನ್ಯಾಯ, ನೀತಿ, ಧರ್ಮ, ಸುಖ, ಶಾಂತಿ ಮತ್ತು ನೆಮ್ಮದಿ’ಗಳು ಹೆಚ್ಚುತ್ತಾ ಹೋಗಿ ಗಟ್ಟಿಯಾಗುವ ಕಾಲವನ್ನು ಪವಿತ್ರವೆಂದು ಭಾವಿಸಲಾಗುವುದು. ಕ್ರಿಸ್ತನನ್ನು ಶಿಲುಬೆಗೆ ಏರಿಸಲ್ಪಟ್ಟ ಸಂಸ್ಮರಣೆಯ ‘ಶುಕ್ರವಾರ’ ಪವಿತ್ರ. ಇದನ್ನು ‘ಪವಿತ್ರ ಶುಕ್ರವಾರ’ ಎಂದು ಆಚರಿಸಲಾಗುತ್ತದೆ. ಪವಿತ್ರ ಶುಕ್ರವಾರದ ನಂತರ ಬರುವ ಭಾನುವಾರವನ್ನು ‘ಈಸ್ಟರ್ ಸಂಡೆ’ ಪವಿತ್ರ ಕಾಲವೆಂದು, ಚರ್ಚಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವ ಪ್ರತಿ ಭಾನುವಾರವನ್ನೂ ಪವಿತ್ರವೆಂದೂ ನಂಬಲಾಗಿದೆ. ಕ್ರೈಸ್ತನನ್ನು ಶಿಲುಬೆಗೆ ಏರಿಸಲ್ಪಟ್ಟ ಮೂರನೆಯ ದಿನ ಪುನರುತ್ಥಾನನಾದ ಎನ್ನುವ ನಂಬಿಕೆಯ ಸಂಸ್ಮರಣೆಯ ದಿನವನ್ನೇ ‘ಈಸ್ಟರ್ ಸಂಡೆ’ ಎಂದು ಕರೆಯುವುದು. ಕ್ರಿಸ್ತನನ್ನು ಶಿಲುಬೆಗೇರಿಸಿದ ಶುಕ್ರವಾರವನ್ನು ‘ಬ್ಲ್ಯಾಕ್ ಫ್ರೈಡೆ’ ಅಥವಾ ‘ಕಪ್ಪು ಶುಕ್ರವಾರ’ ಅಥವಾ ‘ಅಪವಿತ್ರ ಶುಕ್ರವಾರ’ ಎಂದು ಕರೆಯಲಾಗಿದೆ. ಏಸುವು ಜೆರುಸಲೆಮ್ ನಗರವನ್ನು ಪ್ರವೇಶಿಸಿದ ನಂತರ ತಾಳೆಮರದ ಕೊಂಬೆಗಳನ್ನು ಸೀಳಿದ ಸಂಸ್ಮರಣೆಯ ದಿನ ‘ಪಾಮ್ ಭಾನುವಾರ’ ಎಂದು ರೂಢಿಯಾಗಿದೆ. ಇದು ಈಸ್ಟರ್ ಭಾನುವಾರಕ್ಕಿಂತ ಮೊದಲು ಬರುವ ಭಾನುವಾರವಾಗಿರು ತ್ತದೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಾರಂಭವಾಗುವುದೇ ಕ್ರಿಸ್ತನ ಜನ್ಮ ದಿನದಿಂದ. ಮಾನವನ ಹೀನ ಗುಣಗಳನ್ನು ಹೋಗಲಾಡಿಸಿ ವ್ಯಕ್ತಿತ್ವವನ್ನು ಹೆಚ್ಚಿಸುವುದಕ್ಕಾಗಿ ‘ಬ್ಯಾಪ್ಟಿಸಂ’ ಎನ್ನುವ ಸಂಸ್ಕಾರವನ್ನು ಮಾಡಲಾಗುತ್ತದೆ. ಇದು ಜನರಿಗೆ ಪ್ರೋತ್ಸಾಹ ಮಾಡುವುದರ ಮೂಲಕ ನಡೆಯುತ್ತದೆ.

ಕ್ರೈಸ್ತ ಮತಧರ್ಮ ದೇವಸ್ಥಾನದ ಹಂತದಿಂದ ಪ್ರಾರ್ಥನಾ ಮಂದಿರದ ಹಂತದವರೆಗೆ; ಪ್ರಾಣಿ ಬಲಿಯ ಯಜ್ಞದ ಹಂತದಿಂದ ಪ್ರಾರ್ಥನೆಯ ಹಂತದವರೆಗೆ ಬದಲಾಗಿ ಬೆಳೆದಿರುವುದನ್ನು ಆ ಧರ್ಮದ ಇತಿಹಾಸದ ಅಧ್ಯಯನದಿಂದ ಕಂಡುಕೊಳ್ಳಬಹುದು. ಆದರೆ; ಎರಡರ ಗುರಿಯೂ ವಿವೇಕಕ್ಕೆ ಬದಲಾಗಿ ನಂಬಿಕೆಯನ್ನು ಬಿತ್ತುವುದೇ ಆಗಿದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ಕ್ರೈಸ್ತ ಮತಧರ್ಮಾನುಯಾಯಿಗಳು ಒಂಟಿಯಾಗಿ ಅಥವಾ ಇಡೀ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಪ್ರಾರ್ಥನೆಗಳಲ್ಲಿ ಭಾಗವಹಿಸುವುದನ್ನು ಸಾಮಾನ್ಯವಾಗಿ ನಾವು ಕಾಣಬಹುದು. ಇಲ್ಲಿ ಗಂಡು-ಹೆಣ್ಣು, ದೊಡ್ಡವರು-ಚಿಕ್ಕವರು, ಬಡವರು-ಬಲ್ಲಿದರು ಮುಂತಾಗಿ ಯಾವ ತಾರತಮ್ಯವೂ ಇರುವುದಿಲ್ಲ. ಇದನ್ನು ಕ್ರೈಸ್ತಧರ್ಮದ ಒಂದು ಅಪರೂಪ ನಡವಳಿಕೆ ಎಂದೇ ಗುರುತಿಸಬಹುದು. ‘ಪ್ರಾರ್ಥನೆ’ ಎನ್ನುವುದು ಭಕ್ತಿಯನ್ನು ಅಭಿವ್ಯಕ್ತಪಡಿಸುವ ಒಂದು ವಿಧಾನ. ‘ಭಕ್ತಿ’ ಎಂದರೆ ನಿಷ್ಠೆ. ವ್ಯಕ್ತಿಯ ಅಥವಾ ಸಮೂಹದ ದೈವದ ಬಗೆಗಿನ ನಿಷ್ಠೆಯನ್ನು ಪ್ರಾರ್ಥನೆಯಲ್ಲಿ ಕಾಣಬಹುದು. ಭೋಜನಕ್ಕೆ ಮುಂಚೆ ಸಲ್ಲಿಸುವ ಪ್ರಾರ್ಥನೆ, ಪ್ರಭು ಭೋಜನ ಸಂಸ್ಕಾರ, ಪ್ರಾತಃಕಾಲದ ಮತ್ತು ಸಾಯಿಂಕಾಲದ ಆಶೀರ್ವಾದಗಳು ಮುಂತಾದವು ಕ್ರೈಸ್ತ ಧರ್ಮಾನುಯಾಯಿಗಳ ಭಕ್ತಿ ಅಭಿವ್ಯಕ್ತಿ ವಿಧಾನಗಳು. ದೇವತಾರಾಧನೆಗಾಗಿ ನಡೆಸುವ ಸಭೆಯಲ್ಲಿ ಅನೇಕ ಭಕ್ತರು ಸಾಮೂಹಿಕವಾಗಿ ಸಲ್ಲಿಸುವ ಪ್ರಾರ್ಥನೆ ಕ್ರೈಸ್ತ ಧರ್ಮದಲ್ಲಿ ಭಕ್ತಿಯ ಅನುಷ್ಠಾನದ ಮತ್ತೊಂದು ಬಗೆಯಾಗಿದೆ.

‘‘ಭಗವಂತನು ಜಗತ್ತಿನ ಸೃಷ್ಟಿಕರ್ತ. ಎಲ್ಲರ ತಂದೆ ಮತ್ತು ಮಾನವ ಮಾಡುವ ಪಾಪ-ಪುಣ್ಯಗಳನ್ನು ನಿರ್ಧರಿಸುವ ನ್ಯಾಯಾದೀಶ. ಅವನಿಗೆ ಪ್ರಾರ್ಥನೆ ಸಲ್ಲಿಸುವುದು ಪವಿತ್ರ ಕರ್ತವ್ಯ’’ ಎಂದು ಏಸು ಬೋಧಿಸಿದ. ಆತ ಮುಂದುವರೆದು ‘‘ನಿನ್ನ ಸ್ವಾಮಿಗೆ ನಿನ್ನ ಪೂರ್ಣ ಹೃದಯವನ್ನು ಧಾರೆ ಎರೆದು; ನಿನ್ನ ಆತ್ಮವನ್ನು ಸಂಪೂರ್ಣವಾಗಿ ಸಮರ್ಪಿಸಿ, ನಿನ್ನ ಸರ್ವ ಸಾಮರ್ಥ್ಯವನ್ನೂ ಉಪಯೋಗಿಸಿ ಪ್ರೀತಿಸು’’ ಎಂದೂ, ಬೋಧಿಸಿ ‘ಪ್ರೇಮ’ದ ಸಂದೇಶವನ್ನು ಲೋಕಕ್ಕೆ ಸಾರಿದ. ಈ ಸಂದೇಶದಲ್ಲಿ ಭಕ್ತಿಯ ಪರಾಕಾಷ್ಠೆಯನ್ನು ಕಾಣಬಹುದು. ‘ಶ್ರದ್ಧೆ’, ‘ಆಶಾಭಾವನೆ’ ಮತ್ತು ‘ಪ್ರೀತಿ’ ಈ ಮೂರನ್ನೂ ದೇವರು ಮಾನವನಿಗೆ ನೀಡಿರುವ ಉಡುಗೊರೆಗಳು ಎಂದು ಕ್ರೈಸ್ತಧರ್ಮ ಭಾವಿಸುತ್ತದೆ. ಭಗವಂತನ ಭಕ್ತಿರೂಪವಾದ ‘ಪ್ರೀತಿ’ ಕೇವಲ ಭಗವಂತನಲ್ಲಿ ಕೇಂದ್ರೀಕೃತಗೊಳ್ಳದೆ ಎಲ್ಲೆಡೆ ಪಸರಿಸಬೇಕೆಂದು ಏಸು ಬಯಸುತ್ತಾನೆ. ಅದು ತನ್ನ ನೆರೆಹೊರೆಯವರ ಬಗ್ಗೆ ಮಾತ್ರವಲ್ಲದೆ, ತನ್ನನ್ನು ದಂಡನೆಗೆ ಗುರಿಮಾಡಲು ಬಯಸುವ ತನ್ನ ಶತೃಗಳ ಬಗ್ಗೆಯೂ ಇರತ್ತಕ್ಕದ್ದೆಂದು ಆತ ಕರೆ ಕೊಡುತ್ತಾನೆ. ಭಗವಂತನಲ್ಲಿ ತೋರಿಸುವ ಭಕ್ತಿ ರೂಪವಾದ ಪ್ರೇಮವನ್ನು ಅನಾಥರ ಕಡೆ, ಬಡವರ ಕಡೆ, ರೋಗಿಗಳ ಕಡೆ ಹೀಗೆ ದುರ್ಬಲರ ಕಡೆ ಮಾತ್ರ ಹರಿಯಬಹುದಾದುದನ್ನು ಶತೃಗಳ ಕಡೆಯೂ ಹರಿಸಬೇಕೆಂದು ಕ್ರೈಸ್ತಧರ್ಮ ಸಾರುತ್ತದೆ.

‘ಪ್ರಾರ್ಥನೆ’ ಎನ್ನುವುದು ಇನ್ನೊಂದು ಅರ್ಥದಲ್ಲಿ ‘ಸ್ತೋತ್ರ’. ‘ಭಕ್ತಿಯ ಅಭಿವ್ಯಕ್ತಿ ರೂಪಗಳು ಇವಾಗಿವೆ. ‘ಸ್ತೋತ್ರ’ ಒಂದು ಅರ್ಥದಲ್ಲಿ ಅಂದರೆ ಭಗವಂತ ಮತ್ತು ಭಕ್ತ ಎನ್ನುವ ಅರ್ಥದಲ್ಲಿ ಅಸಮಾನತೆ ನಿಜ ಎನಿಸಿದರೂ, ಇನ್ನೊಂದು ಅರ್ಥದಲ್ಲಿ ಅಂದರೆ ಸಾಮಾಜಿಕ ಅರ್ಥದಲ್ಲಿ ಸ್ತೋತ್ರ ಅಸಮಾನತೆಗೆ ಆ ಮೂಲಕ ಶ್ರೇಣೀಕೃತ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ ಎನ್ನುವುದೂ ಅಷ್ಟೇ ಸತ್ಯ. ಕ್ರೈಸ್ತಧರ್ಮದಲ್ಲಿ ಭಕ್ತಿ ಪ್ರೇಮರೂಪ ಪಡೆದು ಸೇವೆಯ ಮೂಲಕ ಪರಿಪೂರ್ಣವಾದ ಅರ್ಥ ಪಡೆಯುತ್ತಿದೆ ಎಂದು ಮೇಲುನೋಟಕ್ಕೆ ಅನ್ನಿಸಿದರೂ ಅಸಮಾನತೆಯ ಬೀಜವನ್ನು ತನ್ನಲ್ಲೇ ಇರಿಸಿಕೊಂಡಿದೆ ಎನ್ನುವುದು ಅಷ್ಟೇ ಸ್ಪಷ್ಟ.

ಯಹೂದಿ ಮತ್ತು ಕ್ರೈಸ್ತ ಧಾರ್ಮಿಕ ಜಗತ್ತಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವವರು ಎಂದರೆ ‘ಪಾದ್ರಿ’ಗಳು (Priests) ಅಥವಾ ಪುರೋಹಿತರು ಎಂದು ಹೇಳಬಹುದು. ಯಹೂದಿ ಧರ್ಮಗ್ರಂಥದ ಪ್ರಕಾರ ‘ಪುರೋಹಿತ’ ಎಂದರೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಪ್ರಾಣಿಗಳನ್ನು ಬಲಿಕೊಡುವವನು ಮತ್ತು ನೈವೇದ್ಯವನ್ನು ಅರ್ಪಿಸುವವನು ಎನ್ನುವ ಅರ್ಥ. ಜೊತೆಗೆ ಒಂದು ಸಮುದಾಯದ ಪರವಾಗಿ ಆ ಕಾರ್ಯಗಳನ್ನು ತಲೆಮಾರುಗಳಿಂದ ಮಾಡಿಕೊಂಡು ಬರುತ್ತಿದ್ದ ಇಂತಹ ಜನರನ್ನು ಪುರೋಹಿತಶಾಹಿ ಎಂದು ಕರೆಯಲಾಗುತ್ತಿತ್ತು. ಇದು ಕ್ರಿಸ್ತಪೂರ್ವಕ್ಕೂ ಹಿಂದಿನಿಂದಲೂ ಜರುಸಲೇಮಿನ ದೇವಸ್ಥಾನಗಳಲ್ಲಿ ಇದ್ದ ರೂಢಿ. ಜರುಸಲೇಮಿನ ದೇವಸ್ಥಾನಗಳ ನಾಶದ ನಂತರ ಆ ಸ್ಥಾನಗಳಿಗೆ ‘ಚರ್ಚ್’ಗಳು ಅಥವಾ ಪ್ರಾರ್ಥನಾ ಮಂದಿರಗಳು ಬಂದವು. ಆದರೆ ಪುರೋಹಿತರು ಅಥವಾ ಪಾದ್ರಿಗಳು ಹಾಗೆಯೇ ಮುಂದುವರೆದದ್ದು ಜೊತೆಯಲ್ಲಿ ಅವರ ಕಾರ್ಯವಿಧಾನ ಬದಲಾದದ್ದು ಇತಿಹಾಸದಷ್ಟೇ ಸತ್ಯ. ಯಹೂದಿ ಪುರೋಹಿತರ ಬಗ್ಗೆ ಬೈಬಲ್‌ನಲ್ಲಿ ಇರುವ ವಿವರಗಳಿಂದ ಇದನ್ನು ದೃಢಪಡಿಸಬಹುದು.

ಕ್ರೈಸ್ತರ ಒಂದು ಪಂಗಡವಾದ ‘ಪ್ರಾಟಸ್ಟೆಂಟ’ರು ಪಾದ್ರಿಗಳನ್ನು ‘ಪುರೋಹಿತರು’ ಎಂದು ಕರೆಯುವುದಿಲ್ಲ. ಈ ಪಂಗಡದ ಪೌರೋಹಿತ್ಯದಲ್ಲಿ ‘ಆಹುತಿ’ ಅಥವಾ ‘ಬಲಿ’ಯ ಕಾರ್ಯ ಮುಖ್ಯವಲ್ಲ ಆದರೆ ಪುರೋಹಿತನ ಮಧ್ಯಸ್ಥಿಕೆ ಮುಖ್ಯ. ಬರುಬರುತ್ತಾ ಪಾದ್ರಿ ವರ್ಗದಲ್ಲಿ ಪುರೋಹಿತ ಎನ್ನುವ ಪದದ ಬಳಕೆ ಕಡಿಮೆಯಾಗುತ್ತಾ ಬಂದಿದೆ. ಪುರೋಹಿತ ಇತರ ಕ್ರೈಸ್ತರಿಗಿಂತ ಮೇಲು ಹಾಗೂ ಇತರರಿಗೆ ಸಿಗದ ದೈವದ ಸಹಯೋಗ ಪುರೋಹಿತನಿಗೆ ಲಭಿಸುತ್ತದೆ ಎನ್ನುವ ಭಾವನೆಯನ್ನು ಪ್ರಾಟಸ್ಟೆಂಟರು ತಿರಸ್ಕರಿಸುತ್ತಾರೆ.

ಕ್ರೈಸ್ತರ ಮತ್ತೊಂದು ಪಂಗಡವಾದ ‘ಕ್ಯಾಥೋಲಿಕ್’ರು ಸಾಮೂಹಿಕ ಸಮಾರಾಧನೆಯಾದ ಏಸುಕ್ರಿಸ್ತನ ಅಂತಿಮ ಭೋಜನವನ್ನೇ ಬಲಿದಾನವೆಂದು ಪರಿಗಣಿಸಬೇಕೆನ್ನುವ ರೋಮ್‌ನ ಕ್ರೈಸ್ತ ಪೌರೋಹಿತ್ಯದ ಅರ್ಥವನ್ನು ಒಪ್ಪಲಿಲ್ಲ. ‘‘ಅದು ಏಸುವಿನ ಬಲಿದಾನದ ಸಂಸ್ಮರಣೆಯೇ ಹೊರೆತು ಪುನರ್ ಆಚರಣೆಯಲ್ಲ’’ ಎಂದು ಅವರು ಹೇಳಿದರು. ಮಾರ್ಟಿನ್ ಲೂಥರ್ ಹೇಳುವಂತೆ ‘‘ಪಾದ್ರಿಗಳು ಸತ್ಯವೇದ ಮತ್ತು ಸಂಸ್ಕಾರಗಳ ನಿಯೋಗಿಗಳು.’’ ‘ಪಾದ್ರಿಗಳಿಗೆ ಉಪದೇಶ ಮಾಡುವ ಸಾಮರ್ಥ್ಯ ಇರಬೇಕು’ ಎನ್ನುವುದನ್ನು ಕಾಥೋಲಿಕ್‌ರು ನಂಬುತ್ತಾರೆ.

ದೀಕ್ಷಾಬದ್ಧ ಪಾದ್ರಿಗಳು ಆರಾಧನೆಯಲ್ಲಿ ದೇವರು ಮತ್ತು ಭಕ್ತರ ಮಧ್ಯೆ ಏಜಂಟರಂತೆ ಇರುವುದು ಶೋಷಣೆಗೆ ಕಾರಣವಾಗಿದೆ ಅಥವಾ ಕಾರಣವಾಗಬಹುದು; ಆದರೆ ಇದು ಚರ್ಚ್ ಮತ್ತು ಸಮಾಜ ಸೇವೆಯ ಮಧ್ಯೆ ಅರ್ಥಪೂರ್ಣವೂ ಆಗಿದೆ ಅಥವಾ ಆಗಬಹುದು.

‘‘ಸಮಾನತೆಯು ಮಾನವನಿಗೆ ನಿಸರ್ಗ ನೀಡಿರುವ ಹಕ್ಕು. ಸಂಪನ್ಮೂಲಗಳ ಮೇಲೆ ಎಲ್ಲರಿಗೂ ಸಮಾನ ಅಧಿಕಾರವಿದೆ. ಸ್ವಾವಲಂಬನೆಯೇ ನಿಜವಾದ ಬದುಕು. ಕೆಲಸ ಮಾಡದವರು ತಿನ್ನುವುದು ಪಾಪ. ದಾನ ನೀಡುವುದು ಮಾನವ ಜೀವನದ ಒಂದು ಕರ್ತವ್ಯ’’ ಎಂದು ಕ್ರೈಸ್ತ ಮತ ಧರ್ಮ ವಿಶ್ವಭ್ರಾತೃತ್ವದ ಸಂದೇಶವನ್ನು ಸಾರಿದ್ದರಿಂದ; ಅಲ್ಲಿಯವರೆಗೆ ರೂಢಿಯಲ್ಲಿದ್ದ ಗುಲಾಮಗಿರಿ ನಿಧಾನವಾಗಿ ಪತನವಾಗಲು ಪ್ರಾರಂಭವಾಯಿತು. ಆದರೆ ಈ ಬೋಧನೆಗಳನ್ನು ಜಾರಿಗೊಳಿಸುವಾಗ ಪುರೋಹಿತಶಾಹಿ ಅನೇಕ ಮಾರ್ಪಾಟುಗಳನ್ನು ಮಾಡಿಕೊಂಡಿದ್ದನ್ನು ಇತಿಹಾಸದಿಂದ ಕಂಡುಕೊಳ್ಳಬಹುದು. ಸಮಾನತೆಯ ನೈಸರ್ಗಿಕ ನಿಯಮವನ್ನು ಅಸಮಾನತೆಯ (ಅಂದರೆ ಅದು ಆಸ್ತಿ ವಿಚಾರ ಇರಬಹುದು ಅಥವಾ ಸ್ಥಾನಮಾನದ ವಿಚಾರ ಇರಬಹುದು) ಸಮರ್ಥನೆಗೆ ಬಳಸಿಕೊಳ್ಳಲಾಯಿತು. ಭ್ರಾತೃತ್ವ ಕಲ್ಪನೆಯನ್ನು ಶ್ರೀಮಂತರು ಬಡವರಿಗೆ ದಾನ ನೀಡಬೇಕು ಎಂಬಷ್ಟಕ್ಕೆ ಸೀಮಿತಗೊಳಿಸಲಾಯಿತು. ಅಲ್ಲದೆ ದಾನವನ್ನು ಸಮಾಜದ ಉನ್ನತಿಗಾಗಿ ಅಥವಾ ಬಡವರ ಉದ್ಧಾರದ ಕ್ರಮವೆಂದು ಭಾವಿಸದೆ ಒಂದು ಪವಿತ್ರ ಕರ್ತವ್ಯವೆಂದು ತಿಳಿದುಕೊಳ್ಳಲಾಯಿತು. ಶ್ರಮವನ್ನು ಸಂಪತ್ತಿನ ಉತ್ಪಾದನೆಯ ಒಂದು ಸಾಧನವೆಂದು ಭಾವಿಸದೆ ಮೋಕ್ಷ ಸಂಪಾದನೆಯ ಒಂದು ಶಿಸ್ತು ಎಂದು ಪರಿಗಣಿಸಲಾಯಿತು. ಇಂತಹ ಚಿಂತನೆಗಳು ಅರ್ಥವ್ಯವಸ್ಥೆ ಕ್ರಿಯಾಶೀಲತೆ ಸ್ಥಗಿತತೆಗೆ ಕಾರಣವಾಗಬಹುದು ಎನ್ನುವುದನ್ನು ಮನಗಂಡು ಅರ್ಥವ್ಯವಸ್ಥೆಯನ್ನು ಧರ್ಮದಿಂದ ಪ್ರತ್ಯೇಕಿಸುವ ಪ್ರಯತ್ನಗಳು ನಡೆದವು.

ಕ್ರೈಸ್ತಧರ್ಮದ ಮುಖ್ಯ ಉದ್ದೇಶ ಲೌಕಿಕ ಸಾರ್ಥಕತೆ. ಆದುದರಿಂದ ಧರ್ಮ ಮತ್ತು ರಾಜ್ಯದ ಕಾನೂನುಗಳ ಆಂತರಿಕ ಸಂಬಂಧಗಳ ಮೇಲೆ ಚರ್ಚುಗಳ ಪ್ರಭಾವ ಇತ್ತು. ಚರ್ಚು ಒಂದು ಧಾರ್ಮಿಕ ಸಂಸ್ಥೆ. ರಾಜ್ಯ ಒಂದು ಲೌಕಿಕ ಸಂಸ್ಥೆ. ಈ ಎರಡೂ ಸಂಸ್ಥೆಗಳಲ್ಲಿ ಕಾನೂನಿಗೆ ಪಾವಿತ್ರ್ಯ ಹಾಗೂ ಸ್ವತಂತ್ರ ಅಸ್ತಿತ್ವ ಕೊಡಲಾಗಿತ್ತು. ಮುಖ್ಯ ಉದ್ದೇಶ ಅಂತಿಮ ಗುರಿ ತಲುಪುವುದೇ ಆಗಿತ್ತು. ಇದಕ್ಕೆ ಬೈಬಲ್ ನ ಬೆಂಬಲವೂ ಇತ್ತು. ಕಾನೂನುಗಳ ಕಟ್ಟುನಿಟ್ಟಿನ ಜಾರಿಗೆ ‘‘ಅವು ದೇವರಿಂದ ವಿಧಿಸಲ್ಪಟ್ಟಿವೆ’’ ಎನ್ನುವುದೇ ಕಾರಣ.

ರೋಮ್ ಚಕ್ರಾಧಿಪತ್ಯ ಪ್ರಾರಂಭದಲ್ಲಿ ಕ್ರಿಸ್ತನ ಪೂಜೆಯನ್ನು ವಿರೋಧಿಸಿದ್ದರಿಂದ ಹಾಗೂ ಚರ್ಚುಗಳ ಹೆಸರಿನಲ್ಲಿ ಕ್ರಿಶ್ಚಿಯನ್ ರಾಜರು ಆಗಾಗ್ಗೆ ತಂದ ಕಾನೂನುಗಳನ್ನು ಎದುರಿಸಲು ಕ್ರೈಸ್ತರಿಗೆ ಪ್ರೇರಣೆ ಆಯಿತು. ‘‘ದೇವರ ಇಚ್ಛೆಗೆ ವಿರುದ್ಧವಾದ ಕಾನೂನುಗಳನ್ನು ವಿರೋಧಿಸುವುದು ಹಕ್ಕು ಮತ್ತು ಕರ್ತವ್ಯ’’ ಎನ್ನುವ ಪ್ರತಿರೋಧಕ್ಕೆ ಕಾರಣವಾಯಿತು. ಆದರೆ ರೋಮ್ ಚಕ್ರವರ್ತಿಗಳು ಕ್ರೈಸ್ತಧರ್ಮ ಸ್ವೀಕರಿಸಿದ ನಂತರ ಇದು ತಣ್ಣಗಾಯಿತು ಎನ್ನುವುದು ಮುಖ್ಯ.

ಕ್ರೈಸ್ತ ಧರ್ಮೀಯರಲ್ಲಿ ಸೇಂಟ್ ಜೋಸೆಫ್, ಸೇಂಟ್ ಜಾನ್, ಸೇಂಟ್ ಪಾಲ್, ಸೇಂಟ್ ಫ್ರಾನ್ಸಿಸ್, ಸೇಂಟ್ ಅಗಸ್ಟಿನ್, ಸೇಂಟ್ ಥಾಮಸ್ ಮುಂತಾದ ಹೆಸರುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಎಲ್ಲಾ ಹೆಸರುಗಳು ‘ಸೇಂಟ್’ ಎನ್ನುವ ಪೂರ್ವ ಪದವನ್ನು ಹೊಂದಿವೆ. ಸೆಯಿಂಟ್ (Saint) ಎನ್ನುವ ಇಂಗ್ಲೀಷ್ ಪದದ ಅಪಭ್ರಂಶ ‘ಸೇಂಟ್’ ಎಂದು ಕನ್ನಡದ ಸಂದರ್ಭದಲ್ಲಿ ಬಳಕೆಯಲ್ಲಿದೆ. ಸೇಂಟ್ ಎಂದರೆ ‘ಸಂತ’ ಎನ್ನುವ ಅರ್ಥ. ಏಸುಕ್ರಿಸ್ತನ ಬೋಧನೆಗಳನ್ನು ಅಥವಾ ತತ್ವಗಳನ್ನು ತಮ್ಮ ನಡೆ-ನುಡಿಗಳಲ್ಲಿ ಅಳವಡಿಸಿಕೊಂಡು; ಭಗವಂತನಿಗಾಗಿ, ಏಸುಕ್ರಿಸ್ತನಿಗಾಗಿ, ಕ್ರೈಸ್ತ ಧರ್ಮಕ್ಕಾಗಿ, ಸಮಾಜದ ಕಲ್ಯಾಣಕ್ಕಾಗಿ ಹಿಂಸೆ, ಸಾವು ಮುಂತಾದ ಕಷ್ಟ ನಷ್ಟಗಳನ್ನು ಅನುಭವಿಸಿದ ಅನುಭಾವಿಗಳನ್ನು ಸಂತರು ಎನ್ನುತ್ತಾರೆ.

ಏಸು ತನ್ನ ಶಿಷ್ಯರನ್ನು ಕುರಿತು ‘‘ದೇವರ ರಾಜ್ಯ ಅಲ್ಲಿದೆ ಇಲ್ಲಿದೆ ಎಂದರೆ ನಂಬಬೇಡಿ. ಎಲ್ಲಿಯೂ ಇಲ್ಲ. ನಿಮ್ಮೊಳಗೇ ಇದೆ. ದೇವರ ರಾಜ್ಯದಲ್ಲಿ ಹಣವಂತರಿಗೆ, ಅಹಂಕಾರಿಗಳಿಗೆ ಪ್ರವೇಶವಿಲ್ಲ. ದೀನ-ದಲಿತರಿಗೆ ಅಲ್ಲಿ ಪ್ರವೇಶವಿದೆ. ದೇವರ ಅಪ್ಪಣೆಯಂತೆ ನಡೆಯುವವರಿಗೆ ಅಲ್ಲಿ ಪ್ರವೇಶ ಸಿಗುತ್ತದೆ. ಅನೇಕರಿಗೆ ನಿಜವಾದ ಬದುಕೇ ತಿಳಿಯದು. ಅವರ ಮೇಲೆ ನನಗೆ ಕನಿಕರ. ಊರುಗಳಿಗೆ ಹೋಗಿ ಎಲ್ಲೆಲ್ಲೂ ದೇವರ ರಾಜ್ಯ ಸಂದೇಶವನ್ನು ಸಾರಿರಿ. ನೀವು ನುಡಿದಂತೆ ನಡೆದು ತೋರಿಸಿ. ಹಾವಿನ ಹಾಗೆ ವಿವೇಕಿಗಳಾಗಿರಿ. ಪಾರಿವಾಳಗಳ ಹಾಗೆ ಪರಿಶುದ್ಧರಾಗಿರಿ. ನಿಮ್ಮ ಸಂಗಡ ಏನನ್ನೂ ಒಯ್ಯಬೇಡಿ. ಚೀಲ, ರೊಟ್ಟಿ, ಬಟ್ಟೆ, ಹಣ ಯಾವುದೂ ಬೇಡ. ಮೈಮೇಲೆ ಬಟ್ಟೆ, ಕಾಲಿನಲ್ಲಿ ಮೆಟ್ಟು ಇಷ್ಟು ಸಾಕು. ಜನರಲ್ಲಿ ಭೇದ ಮಾಡಬೇಡಿ. ಸಿಕ್ಕ ಮನೆಯಲ್ಲಿ ಉಳಿದುಕೊಳ್ಳಿ’’ ಎಂದು ಬೋಧಿಸಿದ ಏಸುವಿನ ಈ ಬೋಧನೆಗಳನ್ನು ಸಂತರು ಚಾಚೂ ತಪ್ಪದೆ ಪಾಲಿಸುತ್ತಾ ಬಂದಿದ್ದರಿಂದ ಕ್ರೈಸ್ತಧರ್ಮ ಒಂದು ಚಳುವಳಿಯ ರೂಪು ಪಡೆಯಿತು.

* * *

ಕ್ರೈಸ್ತ ಮತಧರ್ಮ ಜನಪ್ರಿಯವಾದಂತೆಲ್ಲ ಅದರ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಪ್ರಾರಂಭದಲ್ಲಿ ಯಹೂದಿ, ಪೇಗನ್ (ಅಸಂಸ್ಕೃತ) ಮುಂತಾದ ಧರ್ಮಗಳಿಂದ ಜನರು ಹೆಚ್ಚು ಪ್ರಮಾಣದಲ್ಲಿ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು. ಇವರಲ್ಲಿ ವಿಗ್ರಹಾರಾಧನೆಯನ್ನು ವಿರೋಧಿಸುವ ಯಹೂದಿ ಧರ್ಮದ ಹಿನ್ನೆಲೆಯಿಂದ ಬಂದ ಜನ ಒಂದು ಕಡೆಯಾದರೆ; ವಿಗ್ರಹಾರಾಧನೆಯೇ ಮುಖ್ಯ ಹಿನ್ನೆಲೆಯನ್ನಾಗಿ ಹೊಂದಿದ್ದವರು ಪೇಗನ್ ಜನರು. ಹೀಗೆ ವಿಭಿನ್ನ ನಂಬಿಕೆ ಆಚರಣೆ ಮತ್ತು ಸಂಸ್ಕೃತಿಗಳಿಂದ ಬಂದ ಜನರು ಕ್ರೈಸ್ತ ಧರ್ಮಾನುಯಾಯಿಗಳಾಗಿದ್ದರಿಂದ; ಪ್ರಾರಂಭದಲ್ಲಿ ಎರಡೂ ರೀತಿಯ ಆಚರಣೆಗಳು ವ್ಯಕ್ತವಾಗಲು ಸಾಧ್ಯವಾಯಿತು. ಇಂತಹ ಸಂದರ್ಭದಲ್ಲಿ ಸಂಘರ್ಷ ಸ್ವಾಭಾವಿಕ. ಕ್ರೈಸ್ತಧರ್ಮದಲ್ಲಿ ಅದೂ ಪ್ರಾರಂಭದಲ್ಲಿ ಆದದ್ದೂ ಅದೇ.

ಬೈಬಲ್‌ನಲ್ಲಿ ಮೂರ್ತಿಪೂಜೆಯ ಪೊಳ್ಳುತನವನ್ನು ಬಯಲುಮಾಡುವುದರ ಜೊತೆಗೆ ವಿಗ್ರಹಾರಾಧನೆಗೆ ಅಸುರೀ ಗುಣವನ್ನು ಆರೋಪಿಸಿರುವುದನ್ನು ಕಾಣಬಹುದು. ಪವಿತ್ರ ಎನಿಸುವ ವಿಗ್ರಹಗಳೆಲ್ಲಾ ಕಲ್ಲು, ಮರ, ಮಣ್ಣು ಮುಂತಾದ ಸಾಮಾನ್ಯ ವಸ್ತುಗಳಿಂದ ಮಾಡಿದಂಥವು ಎನ್ನುವ ಉಲ್ಲೇಖ ಅದರಲ್ಲಿದೆ. ಹೊಸ ಒಡಂಬಡಿಕೆಯಲ್ಲೂ ಇದನ್ನು ಕಾಣಬಹುದು.

ಕ್ರೈಸ್ತ ಧರ್ಮದ ಪ್ರಾರಂಭಿಕ ಪ್ರಚಾರಕರಲ್ಲಿ ಒಬ್ಬನಾದ ಜಸ್ಟಿನ್ ಮಾರ್ಟಿಯರ್ ವಿಗ್ರಹಾರಾಧನೆಯನ್ನು ವಿರೊಧಿಸುತ್ತಾ ‘‘ದೈವಕ್ಕೆ ನರರೂಪವು ಸರಿಹೊಂದುವುದಿಲ್ಲ. ವಿಗ್ರಹಗಳಿಗೆ ಆತ್ಮ ಇರುವುದಿಲ್ಲ. ಅವನ್ನು ಕ್ಷುದ್ರ ವಸ್ತುಗಳಿಂದ ತಯಾರಿಸಿರುತ್ತಾರೆ. ಅವನ್ನು ತಯಾರಿಸುವವರು ನಡತೆಗೆಟ್ಟ ಶಿಲ್ಪಗಳು. ಅವು ಕಳ್ಳರನ್ನು ಆಕರ್ಷಿಸುವ ವಸ್ತುಗಳು. ಎಲ್ಲಕ್ಕಿಂತ ಹೆಚ್ಚಾಗಿ ಅವುಗಳಿಗೆ ಹಾನಿಕರ ಅಸುರರಂತೆ ಪೋಷಾಕನ್ನು ಹಾಕಿರುತ್ತಾರೆ. ಜೊತೆಗೆ ಅವು ಅವರ ಹೆಸರುಗಳನ್ನೇ ಹೊಂದಿರುತ್ತವೆ’’ ಎಂದು ಬರೆಯುತ್ತಾನೆ. ಅಲೆಕ್ಸಾಂಡ್ರಿಯಾದ ಕ್ಲೆಮೆಂಟ್ ಎನ್ನುವ ಲೇಖಕ ವಿಗ್ರಹಗಳ ಹುಟ್ಟಿನ ಬಗ್ಗೆ ಬರೆಯುತ್ತಾ ‘‘ತಮ್ಮನ್ನು ತಾವೇ ಅತಿಮಾನುಷರೆಂದು ಭಾವಿಸಿಕೊಂಡ ಮಾನವರ ಅಥವಾ ದೊರೆಗಳ ದೈಕರಣದ ಫಲವೇ ಈ ವಿಗ್ರಹಗಳು’’ ಎಂದು ಅಭಿಪ್ರಾಯಪಡುತ್ತಾನೆ.

ಕ್ರಿ.ಶ.೫ನೇ ಶತಮಾನದ ವೇಳೆಗೆ ಇಂತಹ ವಿಚಾರಧಾರೆಯಿಂದ ಪ್ರೇರಿತರಾದ ಕ್ರೈಸ್ತಧರ್ಮಾನುಯಾಯಿಗಳಿಂದ ದೇವಾಲಯಗಳ ಹಾಗೂ ವಿಗ್ರಹಗಳ ಧ್ವಂಸಕಾರ್ಯ ವ್ಯಾಪಕವಾಗಿ ನಡೆದುಹೋಗಿರುತ್ತದೆ. ಚರ್ಚ್ ತನ್ನ ಜನರನ್ನು ಪೇಗನ್ ನಂಬಿಕೆಗಳಿಂದ ದೂರವಿಡಲು ಅನೇಕ ವಿಧಗಳನ್ನು ಅನುಸರಿಸಿತು. ಮೊದಲನೆಯದಾಗಿ ವಿಗ್ರಹಾರಾಧನೆಯಲ್ಲಿ ತೊಡಗಿದವರಿಗೆ ಉಗ್ರ ಶಿಕ್ಷೆ ವಿಧಿಸಿತು. ಎರಡನೆಯದಾಗಿ ನೈತಿಕತೆಯ ಬೋಧನೆಗೆ ಅತಿಯಾದ ಒತ್ತು ನೀಡಿತು. ಕೊನೆಯದಾಗಿ ಕ್ರೈಸ್ತ ಪೂಜಾ ವಿಧಾನವನ್ನು ಶುದ್ದೀಕರಿಸುವ ಪ್ರಯತ್ನವನ್ನೂ ಮಾಡಿತು. ಅದರಲ್ಲೂ ಪಾದ್ರಿಗಳನ್ನು ಅಥವಾ ಸಂತರನ್ನು ವಿಶೇಷವಾಗಿ ಗೌರವಿಸುವುದರ ವಿರುದ್ಧ ಹೆಚ್ಚಿನ ಜಾಗರೂಕತೆ ವಹಿಸಿತು.

ಕ್ರೈಸ್ತಧರ್ಮದಲ್ಲಿ ವಿಗ್ರಹಾರಾಧನೆಯನ್ನು ತೊಡೆದು ಹಾಕುವುದರ ಬಗ್ಗೆ ಇಷ್ಟೆಲ್ಲಾ ಪ್ರಯತ್ನಗಳು ನಡೆದಿದ್ದರೂ ಸಹಾ ಕ್ರಿ.ಶ.೧೬ ಮತ್ತು ೧೭ನೇ ಶತಮಾನಗಳ ಹೊತ್ತಿಗೆ ಅದು ಪ್ರಧಾನವಾಗಿ ಉಳಿದು ಬೆಳೆದು ಬಂದದ್ದು ಒಂದು ವಿಪರ್ಯಾಸವಾಗಿತ್ತು. ವಾಸ್ತವವಾಗಿ ವಿಗ್ರಹಾರಾಧನೆಯ ಬಲವಾದ ಕುರುಹುಗಳನ್ನು ಹೊಂದಿರುವ ಸಂಪ್ರದಾಯ ಮತ್ತು ಉತ್ಸವಗಳನ್ನು ಕ್ಯಾಥೋಲಿಕರು ಇನ್ನೂ ಉಳಿಸಿಕೊಂಡು ಬಂದಿರುವುದನ್ನು ಕಾಣಬಹುದು. ಇದೇ ಸಂದರ್ಭದಲ್ಲಿ ‘ವಿಗ್ರಹ ಭಂಜನೆ’ಯ ಕಾರ್ಯವೂ ಪ್ರಾರಂಭವಾದದ್ದು ಒಂದು ಇತಿಹಾಸ. ವಿಗ್ರಹ ಭಂಜನೆಯ ಮೂಲ ಉದ್ದೇಶ ವಿಗ್ರಹಾರಾಧನೆ ಮತ್ತು ಅದರ ವಿಧಿಯಾಚರಣೆಗಳನ್ನು ಆಧರಿಸಿದ ಸಂಪ್ರದಾಯ ಭ್ರಮಾಧೀನವಾದುದು, ಹಾನಿಕರವಾದುದು ಮತ್ತು ಮೂಢನಂಬಿಕೆಯನ್ನು ಆಧರಿಸಿದುದು ಎನ್ನುವ ಅಂಶವನ್ನು ನಿರೂಪಿಸುವುದು ಆಗಿತ್ತು. ವಿಗ್ರಹಗಳನ್ನು ಗೌರವಿಸುವುದಕ್ಕೆ ಬದಲಾಗಿ ಅವುಗಳನ್ನು ಒಡೆಯುವುದನ್ನು ‘ವಿಗ್ರಹಭಂಜನೆ’ ಎನ್ನಲಾಗಿದೆ.

ಬೈಬಲ್ ಮೂರ್ತಿಪೂಜೆಯನ್ನು ವಿರೋಧಿಸುವುದರಿಂದ ಹಾಗೂ ಜೀಸಸ್ ನಿಗೂ ಅದೇ ಅಭಿಮತ ಆಗಿದ್ದರಿಂದ; ವಾಸ್ತವದಲ್ಲಿ ಅಂದರೆ ನಿಜವಾದ ಅರ್ಥದಲ್ಲಿ ಆ ಆಚರಣೆ ಉಳಿದು ಬರಬಾರದಿತ್ತು. ಆದರೂ ಉಳಿದುಬಂದದ್ದು ಒಂದು ವಿಪರ್ಯಾಸ. ಈ ಕಾರಣದಿಂದ ಕ್ರೈಸ್ತಧರ್ಮದ ಆಚರಣೆಗಳ ಕಟ್ಟುನಿಟ್ಟಿನ ಪಾಲಕರೆನಿಸಿದ್ದ ಪೌರ್ವಾತ್ಯ ಅಥವಾ ಸೆಮೆಟಿಕ್ ಮೂಲದ ಕ್ರೈಸ್ತರು ವಿಗ್ರಹಭಂಜನೆಗೆ ಇಳಿದದ್ದು ಸ್ವಾಭಾವಿಕವೇ ಆಗಿತ್ತು. ಬೈಜಾಂಟಿಕ್‌ನ ಲಿಯೋ ಚಕ್ರವರ್ತಿ ಕ್ರಿ.ಶ.೮ ಮತ್ತು ೯ನೇ ಶತಮಾನದಲ್ಲಿ ವಿಗ್ರಹಾರಾಧನೆಯ ನಿಷೇಧವನ್ನು ಜಾರಿಗೊಳಿಸಿದ್ದನು. ಇದು ಎಲ್ಲಿಯವರೆಗೆ ಹೋಗಿತ್ತೆಂದರೆ; ಕಾನ್‌ಸ್ಟಾಂಟೈನ್ ಚಕ್ರವರ್ತಿಯ ಕಾಲ್ಸಿಡಾನಿನ ಅರಮನೆಯ ಹೆಬ್ಬಾಗಿಲಿನಲ್ಲಿ ಸ್ಥಾಪಿಸಿದ್ದ ಏಸುಕ್ರಿಸ್ತನ ಪ್ರತಿಮೆಯನ್ನು ಕೂಡ ಒಡೆದು ಹಾಕಲು ಕಾರಣವಾಯಿತು. ಲಿಯೋ ಚಕ್ರವರ್ತಿಯ ಮಗ ಕೊಪ್ರಾನಿಮಸ್ ಒಂದು ಕ್ರೈಸ್ತ ಧರ್ಮಶಾಸ್ತ್ರಜ್ಞರ ಸಮಾವೇಶವನ್ನು ಕಲೆಸಿದ್ದ. ಅದರಲ್ಲಿ ೩೩೮ ಮಂದಿ ಭಾಗವಹಿಸಿದ್ದರು ಎನ್ನುವುದು ಇತಿಹಾಸದ ದಾಖಲೆಗಳಿಂದ ತಿಳಿದುಬರುತ್ತದೆ. ಏಸುವನ್ನು ವಿಗ್ರಹರೂಪದಲ್ಲಿ ಅಭಿವ್ಯಕ್ತಪಡಿಸುವುದನ್ನು ಎತ್ತಿ ಹಿಡಿದ ಧರ್ಮಶಾಸ್ತ್ರಜ್ಞರು ಕೊಟ್ಟ ಕಾರಣವೆಂದರೆ; ‘‘ಏಸುವಿನ ಪ್ರತಿಮೆಗಳು ಅವನ ಅವತಾರವನ್ನು ಸಮರ್ಥಿಸುತ್ತವೆ’’ ಎನ್ನುವುದು. ವಿಗ್ರಹ ಭಂಜಕ ಧರ್ಮಶಾಸ್ತ್ರಜ್ಞರು ಈ ವಾದವನ್ನು ಒಪ್ಪಲಿಲ್ಲ. ಅವರ ಪ್ರಕಾರ ‘‘ಏಸುವನ್ನು ವಿಗ್ರಹ ರೂಪದಲ್ಲಿ ಪ್ರತಿಬಿಂಬಿಸುವುದು ಅಸಾಧ್ಯ. ಏಕೆಂದರೆ ಹೀಗೆ ಮಾಡುವುದರ ಮೂಲಕ ಅವನಿಗೆ ಎರಡು ಬಗೆಯ ವ್ಯಕ್ತಿತ್ವವನ್ನು ಆರೋಪಿಸಿದಂತಾಗುತ್ತದೆ. ಎರಡನೆಯದಾಗಿ : ಅವನನ್ನು ವರ್ಣಿಸುವುದು ಅಸಾಧ್ಯ’’ ಎನ್ನುವ ವಿಚಾರವನ್ನು ಮುಂದಿಟ್ಟರು. ವಿಗ್ರಹ ಭಂಜಕರು ತೀವ್ರವಾದಿಗಳಾಗಿದ್ದುದರಿಂದ; ಪಾದ್ರಿಗಳ ಮೇಲಿನ ಅವರ ದೌರ್ಜನ್ಯ ಹೆಚ್ಚಾಗಿ ಹಲವಾರು ಚಚ್ ಗಳು ನಾಶವಾಗಲೂ ಕಾರಣವಾಗಿದ್ದರಿಂದ, ಮುಂದೆ, ಕ್ರೈಸ್ತ ಧರ್ಮದ ಸಮಗ್ರತೆ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಎನ್ನುವ ಒಡಕಿಗೂ ನಾಂದಿಯಾದದ್ದು ಒಂದು ಇತಿಹಾಸ.

* * *

ಒಡಕುಗಳು

ನಾವು ಪ್ರಾರಂಭದಿಂದಲೂ ಗುರುತಿಸಿಕೊಂಡು ಬಂದಂತೆ ಕ್ರೈಸ್ತಧರ್ಮದಲ್ಲೂ ಒಡಕುಗಳನ್ನು ಕಾಣಬಹುದು. ಜೀಸಸ್ ನ ಸ್ಪಷ್ಟವಾದ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಕ್ರೈಸ್ತ ಧರ್ಮೀಯರೇ ಬೇರೆ ಬೇರೆ ಗುಂಪುಗಳಾಗಿ ಒಡೆದು ಹೋದರು. ಪ್ರತಿ ಸ್ವತಂತ್ರ ಗುಂಪಿನ ಹೊಸ ನಂಬಿಕೆ ಉಳಿದ ಗುಂಪುಗಳ ಹಕ್ಕುಗಳು ಮತ್ತು ವ್ಯಾಖ್ಯಾನಗಳನ್ನು ತಿರಸ್ಕರಿಸಲಾಗುತ್ತಿತ್ತು. ಉದಾಹರಣೆಗೆ : ಪರಂಪರಾಗತ ಕ್ರೈಸ್ತರು ಅಥವಾ ಒಂದು ಗುಂಪಿನ ಕ್ರೈಸ್ತರು; ಜೀಸಸ್ ರಕ್ತ-ಮಾಂಸಗಳಿಂದ ಕೂಡಿದ ದೇಹದಿಂದ ಅವತರಿಸಿದ್ದ ಎಂದು ನಂಬಿದ್ದರು. ಆದರೆ; ಏಸುಕ್ರಿಸ್ತನ ಶರೀರ ಮನುಷ್ಯ ಶರೀರ ಅಲ್ಲ. ಅದು ಸ್ವರ್ಗಲೋಕದ ಅಭೌತಿಕ ವಸ್ತುವಿನಿಂದ ಆದ ಛಾಯಾಕಾರ ಮಾತ್ರ ಎಂದು ಮತ್ತೊಂದು ಗುಂಪು ವಾದ ಮಂಡಿಸಿತು. ಇಂತಹ ವಾದವನ್ನು ಪಾಷಂಡವಾದ ಮತ್ತು ಇದನ್ನು ನಂಬಿದವರನ್ನು ಪಾಷಂಡಿಗಳು ಎಂದು ಕರೆಯಲಾಗುತ್ತಿದೆ. ಪಾಷಂಡಿಗಳನ್ನು ಐಜಾನ್ ನಲ್ಲಿ ಕ್ರಿಸ್ತನ ವಿರೋಧಿಗಳು ಎಂದು ಖಂಡಿಸಲಾಗಿದೆ.

‘‘ಆದಿ ಕ್ರೈಸ್ತ ಪಾಷಂಡಿಗಳು’’ ಅಥವಾ ‘‘ಆಧ್ಯಾತ್ಮ ರಹಸ್ಯ ಜ್ಞಾನಿಗಳು’’ ಎಂದು ಕರೆಸಿಕೊಳ್ಳುವ ಕ್ರೈಸ್ತರ ಮತ್ತೊಂದು ಗುಂಪು ಸಹಾ ಜೀಸಸ್ ನ ಮಾನವ ರೂಪದ ಹುಟ್ಟನ್ನು ತಿರಸ್ಕರಿಸಿ; ತಾತ್ಕಾಲಿಕವಾಗಿ ಜೀವಿಸಿದ್ದ ಮನುಷ್ಯ ರೂಪದ ಜೀಸಸ್ ನಲ್ಲಿ ಆಧ್ಯಾತ್ಮದ ಕ್ರಿಸ್ತನನ್ನು ಅಥವಾ ಪಾಷಂಡಿ ಕ್ರೈಸ್ತರ ವಿಚಾರಗಳು-ಇವುಗಳಲ್ಲಿ ಯಾವುದಾದರೂ ಒಂದು ರೂಪದಲ್ಲಿ ಕ್ರಿಸ್ತ ಗೋಚರವಾಗಿದ್ದ ಎಂದು ವಿವರಿಸಿದರು. ಗ್ರೀಕ್ ಭಾಷೆಯಲ್ಲಿ Gnosis ಎಂದರೆ ಜ್ಞಾನ ಎನ್ನುವ ಅರ್ಥ. ಆದಿ ಕ್ರೈಸ್ತ ಪಾಷಂಡಿಗಳು ಕ್ರಿ.ಶ.೧-೩ನೇ ಶತಮಾನದಲ್ಲಿ ಇದ್ದಂತ ಜ್ಞಾನಿಗಳು. ಇವರಿಗೆ ಜೀವನ್ಮುಕ್ತಿ ಎನ್ನುವುದು ಜ್ಞಾನದಿಂದ ಬಂದದ್ದು. ‘‘ಜ್ಞಾನ ಎನ್ನುವುದು ಆಧ್ಯಾತ್ಮಿಕ ವಾಸ್ತವಗಳ ನಿಜವಾದ ಅಧಿಪತ್ಯದಲ್ಲಿ ಪ್ರೇಮ ಅಭಿವ್ಯಕ್ತಿಯ ಒಂದು ಆತ್ಮರೂಪದ ಆತ್ಮಭಾವ’’ ಎಂದು ವಾಕರ್ ಅಭಿಪ್ರಾಯಪಡುತ್ತಾನೆ. ವಾಲೆಂಟಿನಿಯಸ್ ಮನುಷ್ಯರನ್ನು ‘‘ಜ್ಞಾನವನ್ನು ಪಡೆಯಬಹುದಾದ ‘ಆಧ್ಯಾತ್ಮಿಗಳು’, ತಮ್ಮ ನಂಬಿಕೆಯ ಮೂಲಕ ಸ್ವಲ್ಪ ಪ್ರಮಾಣದ ಮೋಕ್ಷ ಪಡೆಯುವ ‘ಅನ್ವೇಷಕರು’ ಹಾಗೂ ವಿಮೋಚನೆಯಿಂದ ದೂರವಿರುವ ‘ಪ್ರಾಪಂಚಿಕರು’ ಎನ್ನುವ ಮೂರು ವರ್ಗಗಳಾಗಿ’’ ವಿಂಗಡಿಸುತ್ತಾನೆ. ಆಧ್ಯಾತ್ಮ ರಹಸ್ಯ ಜ್ಞಾನಿಗಳ ಗುರು ವಾಲೆಂಟಿನಿಯಸ್ ಕ್ರಿ.ಶ.೧೩೦ ರಿಂದ ೧೬೦ರವರೆಗೆ ರೋಮ್‌ನಲ್ಲಿ ನಾಯಕತ್ವಕ್ಕಾಗಿ ಪ್ರಯತ್ನಿಸಿದ್ದನು. ಪಾಷಂಡಿಗಳಾಗಲಿ ಅಥವಾ ಆಧ್ಯಾತ್ಮ ರಹಸ್ಯ ಜ್ಞಾನಿಗಳಾಗಲಿ ಹೀಗೆ ಯಾರೊಬ್ಬರ ವಿಚಾರಗಳೂ ಮೇಲುಗೈ ಪಡೆಯದಿದ್ದ ಕಾರಣದಿಂದ; ಮನುಷ್ಯ ರೂಪದ ಜೀಸಸ್‌ನ ಲೋಕರಕ್ಷಕ ಪಟ್ಟವನ್ನು ಅವತಾರ, ಸಾವು ಮತ್ತು ಪುನರುತ್ಥಾನ ಮುಂತಾದ ನಂಬಿಕಾ ಸಂಪ್ರದಾಯಗಳಿಂದ ಕಿತ್ತುಕೊಳ್ಳಲು ಸಾಧ್ಯವಾಗಲಿಲ್ಲ.

ಏಷ್ಯಾದ ಮರ್ಸಿಯನ್ ಎನ್ನುವ ಕ್ರೈಸ್ತ ಸನ್ಯಾಸಿ ಆಧ್ಯಾತ್ಮ ರಹಸ್ಯ ಪಂಥದವರ ನಂಬಿಕೆಗಳನ್ನು ಎತ್ತಿ ಹಿಡಿದ ಮತ್ತು ಹಳೇ ಒಡಂಬಡಿಕೆಯ ಯಹೂದಿ ದೇವರುಗಳನ್ನು ಕೀಳು ಮತ್ತು ಕೆಡುಕಿನವು ಎಂದು ಕರೆದು ತಿರಸ್ಕರಿಸಿದ. ಯಹೂದಿ ಧರ್ಮದ ತಪ್ಪುಗಳನ್ನು ಸೂಚಿಸಲು ಮತ್ತು ಕ್ರೈಸ್ತಧರ್ಮದಲ್ಲಿದ್ದ ಹಳೇ ಒಡಂಬಡಿಕೆಯ ವಿಚಾರಗಳನ್ನು ಕೈಬಿಡುವಂತೆ ಮಾಡಲು ಮರ್ಸಿಯನ್ ಕ್ರಿ.ಶ.೧೩೯ರಲ್ಲಿ ರೋಮ್ ಪ್ರವಾಸ ಮಾಡಿದ. ಜೀಸಸ್ ಹಳೇ ಒಡಂಬಡಿಕೆಯ ದೇವತೆ ಅಥವಾ ದೇವರು ಎನ್ನುವುದನ್ನು ಈತ ಕೈಬಿಟ್ಟದ್ದರಿಂದ ಕ್ರಿ.ಶ.೧೪೪ರಲ್ಲಿ ಚಚ್ ನಿಂದ ಹೊರದೂಡಲ್ಪಟ್ಟ. ಆದರೂ ಈತನ ವಿಚಾರಧಾರೆ ಕ್ರಿ.ಶ.ಐದನೆಯ ಶತಮಾನದವರೆಗೂ ಮುಂದುವರಿದದ್ದು ಒಂದು ಇತಿಹಾಸ.

ಕ್ರೈಸ್ತಧರ್ಮದ ಪಾಲ್ ಮತ್ತು ಇತರ ಧರ್ಮ ಪ್ರಚಾರಕರು ಮೆಡಿಟರೇನಿಯನ್ ಪ್ರಾಂತ್ಯದಲ್ಲಿ ಸಂಚರಿಸುವಾಗ ‘ಮೈತ್ರಿ’ ಎನ್ನುವ ಧಾರ್ಮಿಕ ನಂಬಿಕೆಗಳ ಸಂಪರ್ಕ ಪಡೆದರು. ಇವು ಏಷ್ಯಾದಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದು ಕ್ರಿ.ಶ.೫೪-೬೮ರ ಅವಧಿಯಲ್ಲಿ ನೆರೋ ಚಕ್ರವರ್ತಿಯ ಆಡಳಿತವಿದ್ದಾಗ ರೋಮ್ ಅನ್ನು ಪ್ರವೇಶಿಸಿರುವುದು ಕಂಡುಬರುತ್ತದೆ. ‘‘ಮೈತ್ರಿಧರ್ಮ’’ ಸಿದ್ಧಾಂತ ಪ್ರಾರಂಭದಲ್ಲಿ ಆಗತಾನೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಕ್ರೈಸ್ತಮತ ಧರ್ಮಕ್ಕೆ ಪ್ರಬಲ ಪೈಪೋಟಿ ಒಡ್ಡಿತು. ‘‘ಮೈತ್ರ’’ ಎನ್ನುವುದು ಪ್ರತಿದಿನವೂ ಬಂಗಾರದ ರಥದಲ್ಲಿ ಕುಳಿತು ಆಕಾಶದಲ್ಲಿ ಸಾಗುತ್ತಾ ಕತ್ತಲನ್ನು ಓಡಿಸುವ ಇಂಡಿಯಾ ಮತ್ತು ಇರಾನಿಯನ್ನರ ದೇವತೆಯಾದ ಸೂರ್ಯ.

ಕ್ರಿ.ಶ.೬೬ರಲ್ಲಿ ಅರ್ಮೇನಿಯಾದ ದೊರೆ ಟಿರಡೇಟ್ ಎನ್ನುವವನು ರೋಮ್ ನ ದೊರೆ ನಿರೋ ಎನ್ನುವವನ ಆಸ್ಥಾನವನ್ನು ಸಂದರ್ಶಿಸಿದಾಗ ‘‘ಓ ನನ್ನ ದೇವರೆ, ನಾನು ಮೈತ್ರನನ್ನು ಆರಾಧಿಸಿದಂತೆ ನಿಮ್ಮನ್ನು ಆರಾಧಿಸಲು ನಿಮ್ಮಲ್ಲಿಗೆ ಬಂದಿದ್ದೇನೆ’’ ಎಂದು ಹೇಳುತ್ತಾನೆ. ಎರಡು ನೂರು ವರ್ಷಗಳ ನಂತರ ಅರೇಲಿಯಸ್ ಎನ್ನುವ ಚಕ್ರವರ್ತಿ ‘ಮೈತ್ರ’ನನ್ನು ರೋಮ್ ನ ಅಧಿಕೃತ ದೇವತೆಯಾಗಿ ಅಂಗೀಕರಿಸುತ್ತಾನೆ. ಆನಂತರ ರೋಮ್ ಸಾಮ್ರಾಜ್ಯದ ಉದ್ದಗಲಕ್ಕೂ ‘ಮೈತ್ರಿ’ ಧರ್ಮಸಿದ್ಧಾಂತ ವ್ಯಾಪಿಸುತ್ತದೆ. ಮೈತ್ರ ದೇವತೆಯ ಹುಟ್ಟುದಿನವನ್ನು ಡಿಸೆಂಬರ್ ೨೫ ಎಂದು ಸಾರಲಾಯಿತು. ಆನಂತರ ಆ ದಿನಾಂಕವನ್ನು ಛಳಿಗಾಲದ ಸಂಕ್ರಾಂತಿ ದಿನವನ್ನಾಗಿ ಸ್ವೀಕರಿಸಲಾಯಿತು. ಕಾನ್‌ಸ್ಟಂಟೈನ್ ರೋಮ್ ನ ಚಕ್ರವರ್ತಿಯಾದ ನಂತರ; ಜನವರಿ ೬ಕ್ಕೆ ಬದಲಾಗಿ ಡಿಸೆಂಬರ್ ೨೫ನ್ನು ಏಸು ಕ್ರಿಸ್ತನ ಜನ್ಮ ದಿನವನ್ನಾಗಿ ಆಚರಣೆಗೆ ತಂದನು.

ಅನ್ಯ ಧರ್ಮಗಳ ಮತಾಚರಣೆಗಳಂತೆ ‘ಮೈತ್ರಿ‘ ಮತಾಚರಣೆಯೂ ತನ್ನ ಉಪಾಸಕರಿಗಾಗಿ ದೈವಪುರಾಣ ಹಾಗೂ ಉಪಾಸನೆಯ ಸಂಸ್ಕಾರಗಳನ್ನು ರೂಢಿಗೆ ತಂದಿತು. ಉಪಾಸನೆಯ ಪುರಾಣ ಒಳ್ಳೆಯದು ಮತ್ತು ಕೆಡುಕಿನ ಮಧ್ಯದ ಸಂಘರ್ಷವನ್ನು ಒಳಗೊಂಡಿತ್ತು. ಈ ಸಂಘರ್ಷದಿಂದ ಪ್ರತಿಯೊಬ್ಬ ವ್ಯಕ್ತಿಯೂ ಜಾಗೃತನಾಗುತ್ತಿದ್ದ. ಕ್ರೈಸ್ತಸ್ನಾನದ (Baptism) ಮೂಲಕ ಪರಿಶುದ್ದಿಗೊಳಿಸುವ ವಿಧಾನ ಮೈತ್ರಿ ಮತಾಚರಣೆಯಲ್ಲಿತ್ತು. ಅಂದರೆ; ಹೋರಿಯೊಂದರ ಕೆಳಗ ವ್ಯಕ್ತಿಯನ್ನು ನಿಲ್ಲಿಸಿ ಅಥವಾ ಮಲಗಿಸಿ ಹೋರಿಯನ್ನು ಚೂರು ಚೂರಾಗಿ ಕತ್ತರಿಸಿ, ವ್ಯಕ್ತಿಯನ್ನು ಹೋರಿಯ ರಕ್ತದಿಂದ ಸ್ನಾನ ಮಾಡಿಸುವ ವಿಧಾನವನ್ನು ಕ್ರೈಸ್ತಸ್ನಾನ ಎನ್ನುತ್ತಾರೆ. ಈ ಶಾಸ್ತ್ರವನ್ನು ‘ಟೌರೋಬೋಲಿಯಾ’ ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ.

ಪ್ರಥಮ ಬಾರಿಗೆ ಚರ್ಚ್ ದೊಡ್ಡ ಪ್ರಮಾಣದಲ್ಲಿ ಕವಲಾಗಿ ಹೊಡೆದು ‘ಪೌರ್ವಾತ್ಯ’ ಮತ್ತು ‘ಪಾಶ್ಚಿಮಾತ್ಯ’ ಎಂದು ಬೇರ್ಪಟ್ಟಿದ್ದು ಹನ್ನೊಂದನೇ ಶತಮಾನದಲ್ಲಿ. ಇಷ್ಟು ಹೊತ್ತಿಗಾಗಲೇ ಕ್ರೈಸ್ತಧರ್ಮ ಯುರೋಪಿನಾದ್ಯಂತ ವ್ಯಾಪಿಸಿ ಉತ್ತರ ಆಫ್ರಿಕಾ ಮತ್ತು ಇಂಡಿಯಾಗಳನ್ನು ಪ್ರವೇಶಿಸಿತ್ತು. ಈ ಕಾರಣದಿಂದ ಅದು ವೈರಾಗ್ಯ, ಸನ್ಯಾಸ ಮುಂತಾದ ಬಗೆಬಗೆಯ ನಂಬಿಕೆಗಳನ್ನು ತನ್ನಲ್ಲಿ ಜೀರ್ಣಿಸಿಕೊಳ್ಳುತ್ತಾ ಬೆಳೆಯಿತು. ಇದು ಚರ್ಚ್‌ಗಳಲ್ಲಿ ಸೇರಿಕೊಂಡು ತಮ್ಮ ದುರಾಸೆ, ವ್ಯಾಮೋಹಗಳಲ್ಲೇ ಕಾಲಕಳೆಯುತ್ತಿದ್ದ ಜನಕ್ಕೆ ಹೊಸ ಚೈತನ್ಯ ತುಂಬಲು ಕಾರಣವಾಯಿತು. ಕ್ರೈಸ್ತಧರ್ಮದ ಮುಕ್ತ ಚಿಂತಕರು ಅದರ ಮೂಲ ತತ್ವಗಳನ್ನೇ ಪ್ರಶ್ನಿಸಿದರು. ಪಾರಮಾರ್ಥಿಕ ವಿವಾದಗಳನ್ನು ಕುರಿತು ಚರ್ಚೆಗಳು ಮತ್ತು ಆಲೋಚನಾ ಸಭೆಗಳು ನಡೆದಿದ್ದರಿಂದ ಮತಾಭಿಪ್ರಾಯಗಳು ಉಂಟಾದವು; ಫಲವಾಗಿ ರೋಮ್ ಮತ್ತು ಕಾನ್ಸ್‌ಟೆಂಟಿನೋಪೋಲ್‌ಗಳ ಮಧ್ಯೆ, ಪಾಶ್ಚಿಮಾತ್ಯ ಮತ್ತು ಪೌರ್ವಾತ್ಯ ಚರ್ಚ್‌ಗಳ ಮಧ್ಯೆ ಬಿಗಿ ವಾತಾವರಣ ಉಂಟಾಗಲು ಕಾರಣವಾಯಿತು. ಕ್ರಿ.ಶ.೧೦೫೪ರಲ್ಲಿ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಚರ್ಚ್‌ಗಳು ಕ್ರಮವಾಗಿ ಪಾರಂಪರಿಕ ಸಂಪ್ರದಾಯಗಳನ್ನು ಮತ್ತು ರೋಮನ್ ಕ್ಯಾಥೊಲಿಕ್ ಸಂಪ್ರದಾಯಗಳನ್ನು ರೂಢಿಸಿಕೊಂಡು ಮತಭೇದವನ್ನು ಎತ್ತಿಹಿಡಿದವು. ಪ್ಯಾಲಸ್ಟೇನಿಯರ ನಿಯಂತ್ರಣದಲ್ಲಿದ್ದ ಕ್ರೈಸ್ತ ಪವಿತ್ರ ಸ್ಥಳಗಳ ರಕ್ಷಣೆಗಾಗಿ ಪೌರ್ವಾತ್ಯ ಕ್ರೈಸ್ತರು ಬೇಡಿಕೆ ಸಲ್ಲಿಸಿದಾಗ; ಪಾಶ್ಚಿಮಾತ್ಯ ಕ್ರೈಸ್ತರು ಪೂರಕಾವಾಗಿ ಪ್ರತಿಸ್ಪಂದಿಸಿದ್ದು ಅಥವಾ ಕ್ರಿ.ಶ.೧೨೧೨ರಲ್ಲಿ ಪೌರ್ವಾತ್ಯ ಕ್ರಿಶ್ಚಿಯನ್ನರು ಆಫ್ರಿಕಾದ ನೀಗ್ರೋ ಜನಾಂಗದ ಚಿಕ್ಕ ಮಕ್ಕಳನ್ನು ಗುಲಾಮಗಿರಿಗೆ ತಳ್ಳಿ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಮರಾಟ ಮಾಡುತ್ತಿದ್ದುದನ್ನು ರೋಮನ್ ಕ್ಯಾಥೋಲಿಕ್ ಕ್ರೈಸ್ತರ ಗುರು ಪೋಪ್ ವಿರೋಧಿಸಿ, ನಿರ್ಬಧಿಸಿದ ಘಟನೆಗಳು; ಅವುಗಳ ಮಧ್ಯದ ಮತಭೇದ ಅರ್ಥಪೂರ್ಣತೆ ಪಡೆದಿರುವುದನ್ನೂ ಕಾಣಬಹುದು.

ರೋಮನ್ ಕ್ಯಾಥೊಲಿಕ್‌ರ ಗುರು ಪೋಪ್ ರ ಸಾರ್ವಭೌಮತ್ವವನ್ನು ಪ್ರಶ್ನಿಸಲೂ ಕ್ರೈಸ್ತ ಮುಕ್ತಚಿಂತಕರು ಹಿಂಜರಿಯಲಿಲ್ಲ. ಜರ್ಮನಿಯ ಮಾರ್ಟಿನ್ ಲೂಥರ್’ (ಕ್ರಿ.ಶ.೧೪೮೩-೧೫೪೬) ರೋಮ್‌ನ ಸಾರ್ವಭೌಮತ್ವಕ್ಕೆ ತಲೆಬಾಗಲು ಒಪ್ಪಲಿಲ್ಲ. ಹತ್ತನೇ ಪೋಪ್ ಲಿಯೋನಿಗೆ ರೋಮ್‌ನಲ್ಲಿನ ಸೇಂಟ್ ಪೀಟರ್ಸ್ ಕೆಥೆಡ್ರಲ್ ಚರ್ಚ್‌ನ ಕಟ್ಟಡವನ್ನು ಪೂರ್ಣಗೊಳಿಸುವುದಕ್ಕೆ ಮತ್ತು ತನ್ನ ಅಳತೆಗೆಟ್ಟ ರೂಢಿಗಳ ಖರ್ಚಿಗಾಗಿ ಹಣ ಬೇಕಾಗಿರುತ್ತದೆ. ಪಾಪಿಗಳ ಪಾಪಕ್ಕೆ ನೀಡುವ ಶಿಕ್ಷೆಯನ್ನು ವಜಾಗೊಳಿಸುವುದಾಗಿ!; ಕ್ಷಮಾ ಪತ್ರಗಳನ್ನು ಸೃಷ್ಟಿಸಿ, ಅವುಗಳ ಮಾರಾಟದಿಂದ ಹಣ ಸಂಗ್ರಹಿಸಿ ದಯೆ ತೋರುವ ಹೊಣೆ ಹೊತ್ತಿದ್ದ. ಇಂತಹ ಹೊಣೆ ಎಲ್ಲಿಯವರೆಗೆ ಸಾಗಿತ್ತೆಂದರೆ; ಆಗಲೇ ಇಹಲೋಕ ತ್ಯಜಿಸಿದ್ದವರಿಗೂ ದಯೆ ತೋರಲು ಮುಂದಾಗಿದ್ದ. ‘‘ಪಾಪ ಮಾಡಿದವನು ತನ್ನ ಪಶ್ಚಾತ್ಥಾಪದ ಪ್ರಾಯಶ್ಚಿತ್ಥದಿಂದ ಮಾತ್ರ ದೈವದಿಂದ ಕ್ಷಮೆ ಪಡೆಯಲು ಸಾಧ್ಯ; ಅದು ಪೋಪ್‌ನ ಕ್ಷಮಾ ಪತ್ರದಿಂದಲ್ಲ’’ ಎಂದು ಮಾರ್ಟಿನ್ ಲೂಥರ್ ಪೋಪ್‌ನ ಕ್ರಮವನ್ನು ವಿರೋಧಿಸುತ್ತಾನೆ.

ನಡತೆ ಅಥವಾ ಕಾಯಕದ ಮೂಲಕ ಪಡೆಯುವ ಮುಕ್ತಿಯ ವಿರುದ್ಧ ನಂಬಿಕೆಯ ಮೂಲಕ ಪಡೆಯುವ ಮುಕ್ತಿ, ಬದುಕಿನ ಮಾರ್ಗದರ್ಶನಕ್ಕೆ ಬೈಬಲ್‌ನಂಥ ಕೃತಿಗಳ ಬರವಣಿಗೆಗಳನ್ನು ಬಳಸುವುದು (ಲೂಥರ್ ಬೈಬಲ್ ಅನ್ನು ಜರ್ಮನ್ ಭಾಷೆಗೆ ತರ್ಜುಮೆ ಮಾಡಿದ), ಮುಂತಾದ ವಿಷಯಗಳಲ್ಲಿ ಲೂಥರ್ ಆಕ್ಷೇಪ ಎತ್ತಿದ, ಜೊತೆಗೆ ‘‘ಪಾದ್ರಿಗಳಿಗಿರುವಂತೆ ಎಲ್ಲಾ ಗೃಹಸ್ತ ಸಂಸಾರಿಗಳಿಗೂ ಆಧ್ಯಾತ್ಮಿಕ ಶಕ್ತಿ ಇದೆ ಎನ್ನುವುದನ್ನು ಒಪ್ಪಿಕೊಂಡು; ಎಲ್ಲಾ ಆಸ್ತಿಕರ ಪರವಾಗಿ ಆಧ್ಯಾತ್ಮಿಕ ಪಾದ್ರಿತನ ಅಥವಾ ಪುರೋಹಿತತನ ವಹಿಸಿಕೊಳ್ಳುವುದು, ಆ ಮೂಲಕ ಪ್ರತಿ ವ್ಯಕ್ತಿಯನ್ನೂ ಆಧ್ಯಾತ್ಮಿಕ ಸ್ವತಂತ್ರನನ್ನಾಗಿ ಮಾಡಬಹುದು’’ ಎಂದು ಹೇಳಿ ಚರ್ಚ್‌ನ ವಿಕೇಂದ್ರೀಕರಣವನ್ನು ಎತ್ತಿ ಹಿಡಿದ. ಈ ಎಲ್ಲಾ ತತ್ವಗಳು ಸೇರಿ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಬೇಡಿಕೆಗಳನ್ನು ನಿರಾಕರಿಸಿ ತಿರಸ್ಕರಿಸಲು ಕಾರಣವಾಯಿತು. ಪ್ರಯುಕ್ತ ಕ್ರೈಸ್ತಧರ್ಮದಲ್ಲಿ ‘‘ಪ್ರಾಟಸ್ಟೆಂಟ್’’ ಎನ್ನುವ ಮತ್ತೊಂದು ಟಿಸಿಲು ಒಡೆಯಿತು.

ಇಂಗ್ಲೇಂಡಿನಲ್ಲಿ; ಚಕ್ರವರ್ತಿ ಎಂಟನೇ ಹೆನ್ರಿ (ಕ್ರಿ.ಶ.೧೪೯೧-೧೫೪೭) ಮತ್ತು ಪೋಪ್‌ರ ಮಧ್ಯೆ ಆದಾಯದ ಬಗ್ಗೆ, ಮದುವೆಯ ಬಗ್ಗೆ ಹಾಗೂ ಚಚ್ ನ ನಿಯಂತ್ರಣದ ಬಗ್ಗೆ ಹೀಗೆ ಬೇರೆ ಬೇರೆ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿ ಸಂಘರ್ಷ ಏರ್ಪಟ್ಟಿತು. ಇದರ ಫಲವಾಗಿ ಚಕ್ರವರ್ತಿ ನೇತೃತ್ವದ ‘‘ಇಂಗ್ಲೆಂಡಿನ ಚರ್ಚ್’’ (church of England) ರೂಪುಗೊಂಡಿತು. ಈ ಚರ್ಚ್‌ನ ಮೂಲಕ ‘‘ಕ್ರಿಶ್ಚಿಯನ್ ’’ (Christian) ಎನ್ನುವ ಹೊಸ ರೂಪದ ಕ್ರೈಸ್ತಧರ್ಮ ಅಥವಾ ಕ್ರೈಸ್ತಧರ್ಮದ ಮತ್ತೊಂದು ಕವಲು ಒಡೆಯಿತು. ಇದು ಸ್ಪಷ್ಟವಾಗಿ ರೋಮನ್ ಚರ್ಚ್‌ಗಿಂತ ಭಿನ್ನ.

ಫ್ರಾನ್ಸ್‌ನಲ್ಲಿ, ಜಾನ್ ಕೆಲ್‌ವಿನ್ (ಜೀನ್ ಕಾವಿನ್ ಕ್ರಿ.ಶ.೧೫೦೯-೧೫೬೪) ನ್ಯಾಯ ಶಾಸ್ತ್ರದ ವಿದ್ಯಾರ್ಥಿ; ಲೂಥರ್ ಮತ್ತು ಎರಾಸ್‌ಮಸ್ ಅವರ ಬೋಧನೆಗಳಿಂದ ಹಾಗೂ ಹೊಸ ಒಡಂಬಡಿಕೆಯಲ್ಲಿ ಕಂಡುಕೊಂಡ ಸತ್ಯಗಳಿಂದ ಪ್ರಟಸ್ಟೆಂಟ್ ಸಿದ್ಧಾಂತಕ್ಕೆ ಪರಿವರ್ತನೆಗೊಂಡ. ಲೂಥರ್‌ನ ಸಿದ್ಧಾಂತವನ್ನು ತುಳಿಯಲು ಪ್ರಯತ್ನಗಳು ನಡೆದಾಗ; ಪ್ಯಾರಿಸ್ ನಗರವನ್ನು ತ್ಯಜಿಸಿ ಕೊನೆಯದಾಗಿ ಎರಾಸ್‌ಮಸ್ ವಾಸಿಸಿದ್ದ ಸ್ವಿಟ್ಜರ್ ಲ್ಯಾಂಡಿನ ಬಾಸೆಲ್‌ಗೆ ಪ್ರಯಾಣಿಸಿದ. ಕೆಲ್‌ವಿನ್ ‘ಇನ್ಸ್‌ಟಿಟ್ಯೂಟ್ಸ್’ (Institutes) ಎನ್ನುವ ಕೃತಿಯನ್ನು ಬರೆದು ಪ್ರಕಟಿಸಿ; ಜಿನೀವಾಕ್ಕೆ ಪ್ರಯಾಣಿಸಿ, ಅಲ್ಲಿ ಸುಧಾರಿಸಿದ ಚರ್ಚ್ ಅನ್ನು ರೂಪುಗೊಳಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಿದ. ದೈನಂದಿನ ಗುಂಪು ಪ್ರಾರ್ಥನೆಗಳಿಗೆ ಬದಲಾಗಿ ‘ಲಾರ್ಡ್ಸ್‌ಸಪ್ಪರ್ ’ ಎನ್ನುವ ಮಾಸಿಕ ಗುಂಪು ಪ್ರಾರ್ಥನೆಗಳನ್ನು ಜಾರಿಗೊಳಿಸುವ ಮೂಲಕ ಹೊಸ ಚರ್ಚ್ ಉದಯಿಸಿತು.

ಹೀಗೆ ಚರ್ಚ್‌ಗಳು ಭಿನ್ನ ಭಿನ್ನ ನಂಬಿಕೆ, ಆಚರಣೆ ಮತ್ತು ರೂಪುಗಳನ್ನು ಪಡೆಯುತ್ತಾ ತಮ್ಮ ಸಂಖ್ಯೆಯನ್ನು ಹೆಚ್ಚಿಸುತ್ತಾ, ಹೋಗಿರುವುದನ್ನು ಕ್ರೈಸ್ತಧರ್ಮದ ಇತಿಹಾಸದಿಂದ ಕಂಡುಕೊಳ್ಳಬಹುದು. ಪ್ರಸ್ತುತ ಸುಮಾರು ೨೨ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಚರ್ಚ್ ಗಳು ಪ್ರಪಂಚದಾದ್ಯಂತ ಇರುವುದನ್ನು ನಾವು ಕಾಣಬಹುದು. ಈ ಎಲ್ಲಾ ಚರ್ಚ್‌ಗಳೂ ಸ್ಥಳೀಯತೆಯ ಹೊರಮೈಯ್ಯನ್ನು ಹೊಂದಿ; ವೈವಿಧ್ಯತೆಯಲ್ಲಿ ಏಕತೆಯ ಸಂಕೇತದಂತಿವೆ.

ದೇವರು ಸತ್ತ ಚಳುವಳಿ

ಕ್ರಿ.ಶ.೧೯೬೦ರಲ್ಲಿ ಯಹೂದಿ ಧರ್ಮದಲ್ಲಿ ನಡೆದ ‘‘ದೇವರು ಸತ್ತ’’ ಚಳುವಳಿಯಂತೆ; ಕ್ರೈಸ್ತ ಮತಧರ್ಮದಲ್ಲೂ ಈ ಚಳುವಳಿ ಪ್ರಾಮುಖ್ಯತೆ ಪಡೆಯಿತ. ಗ್ರಂಥ ಶೋಧನೆಗಳು ವಿಜ್ಞಾನ ಮತ್ತು ಆಧ್ಯಾತ್ಮದ ಸಂಶೋಧನೆಗಳು ಪರಾಕಾಷ್ಠೆ ತಲುಪಿದಾಗ; ದೇವರ ಬಗೆಗಿನ ಕಲ್ಪನೆ, ಅನುಭವ ಮತ್ತು ಅಭಿಪ್ರಾಯಗಳು ಕೆಲವರಲ್ಲಿ ಸ್ಪಷ್ಟವಾಗುತ್ತಾ ಬಂದಿದ್ದರ ಪರಿಣಾಮವಾಗಿ, ಅದರ ಬಗೆಗಿನ ನಂಬಿಕೆ ಕಡಿಮೆಯಾಗಲು ಅಥವಾ ಇಲ್ಲದಂತಾಗಲು ಕಾರಣವಾಯಿತು. ದೇವರ ಬಗೆಗಿನ ಅವರ ಹಳೆಯ ಕಲ್ಪನೆ ಕಾಲಕ್ರಮದಲ್ಲಿ ಸತ್ತಿತ್ತು ಅಂದರೆ ದೇವರ ಬಗೆಗಿನ ನಂಬಿಕೆ ಪೂರ್ಣವಾಗಿ ಸತ್ತಿತು ಎನ್ನುವ ಅರ್ಥವಲ್ಲ; ಆದರೆ ಕೆಲವು ಕ್ರೈಸ್ತರಲ್ಲಿ ಒಂದು ರೀತಿಯ ದೇವರು-ಮನುಷ್ಯನ ಸಂಬಂಧದ ವಿಭಿನ್ನ ಕಲ್ಪನೆ ಉಂಟಾಗಲು ಕಾರಣವಾಯಿತು ಎನ್ನುವುದು ಮುಖ್ಯ. ಈ ಕ್ರೈಸ್ತರಿಗೆ ಜೀಸಸ್ ಶಿಲುಬೆಗೆ ಏರಿ ಸತ್ತ ಕ್ಷಣ ಮತ್ತು ಜಾಗದಲ್ಲೇ ದೇವರೂ ಸತ್ತ ಎನ್ನುವ ನಂಬಿಕೆ.

ವಿಲಿಯಂ ಹ್ಯಾಮಿಲ್‌ಟನ್ ಬರೆಯುತ್ತಾ ‘‘ಕ್ರೈಸ್ತರು ಮತ್ತು ಕ್ರೈಸ್ತರಲ್ಲದವರು, ದೇವರು ಇಲ್ಲ, ದೇವರು ಒಂದು ರೀತಿಯಲ್ಲಿ ಸತ್ತಿರುವುದರಿಂದ ಅವನನ್ನು ಕೈಬಿಡಲಾಗಿದೆ ಎನ್ನುವ ನಂಬಿಕೆಯನ್ನು ಹೊಂದಿದ್ದರು’’ ಎಂದು ತಿಳಿಸುತ್ತಾನೆ. ಹ್ಯಾಮಿಲ್‌ಟನ್ ಮುಂದುವರೆದು ‘‘ಇಂದು ಕ್ರೈಸ್ತನಾಗಿಸಿ ಉಳಿಯಬೇಕಾದರೆ; ದೇವರ ಕಲ್ಪನೆ ಇರದ, ಅದರ ಬಗ್ಗೆ ನಂಬಿಕೆ ಇರದ ಆದರೆ ತನ್ನ ಬಗ್ಗೇ ಭರವಸೆ ಇರುವ ಮನುಷ್ಯ ಆಗಬೇಕು’’ ಎಂದು ಬರೆಯುತ್ತಾನೆ. ಅವನು ಮುಂದುವರೆದು ‘‘ಒಂದಂತೂ ಸತ್ಯ. ನಾವು ದೇವರ ಪ್ರಾಮುಖ್ಯತೆ ಅಥವಾ ದೇವರ ದೌರ್ಬಲ್ಯಗಳ ಆಪಾಯಗಳೊಂದಿಗೆ ಬದುಕುವುದನ್ನು ಆರಿಸಿಕೊಂಡಿದ್ದೇವೆಯೇ ಹೊರೆತು; ದೇವರ ಶಕ್ತಿಯಿಂದಾಗುವ ಅಪಾಯದಿಂದಲ್ಲ’’ ಎಂದು ತಿಳಿಸುತ್ತಾನೆ.

ಪ್ರಾಪಂಚಿಕ ಕ್ರೈಸ್ತಧರ್ಮ

ಕ್ರಿ.ಶ.೧೯೬೬ರಲ್ಲಿ ಆರ್.ಜಿ.ಸ್ಮಿತ್ ಎನ್ನುವವನು ‘ಸೆಕ್ಯುಲರ್ ಕ್ರಿಶ್ಚಿಯಾನಿಟಿ’ ಅಂದರೆ ‘ಪ್ರಾಪಂಚಿಕ ಕ್ರೈಸ್ತಧರ್ಮ’ ಎನ್ನುವ ಕೃತಿಯನ್ನು ಬರೆದು ಪ್ರಕಟಿಸಿ ‘‘ಪ್ರತಿಯೊಬ್ಬ ಮನುಷ್ಯನೂ ಪ್ರಾಪಂಚಿಕವೆ’’ ಎಂದು ಅಭಿಪ್ರಾಯಪಡುತ್ತಾನೆ. ‘‘ಆದರೆ ಆಧುನಿಕ ಪ್ರಾಪಂಚಿಕತೆ ಎನ್ನುವುದು ರೋಗಗ್ರಸ್ತವಾಗಿದೆ. ಆಧುನಿಕ ವಿಜ್ಞಾನ ಮತ್ತು ತತ್ವಜ್ಞಾನದಿಂದ ಒಂದು ರೀತಿಯ ಗಲಿಬಿಲಿ ಉಂಟಾಗಿ ಪ್ರಾಪಂಚಿಕತೆಯ ಬಗ್ಗೆ ಭರವಸೆ ಕಡಿಮೆಯಾಗಿದೆ ಮತ್ತು ಮಾನಯತೆ ಕಡಿಮೆಯಾಗಲೂ ಕಾರಣವಾಗಿದೆ. ಇದರಿಂದ ಮುಕ್ತಿ ಎಂದರೆ ಮಾನವ ಧರ್ಮದಿಂದ ಮಾತ್ರ ಸಾಧ್ಯ’’ ಎಂದು ಬರೆಯುತ್ತಾನೆ. ‘‘ಪ್ರಾಪಂಚಿಕ ಕ್ರೈಸ್ತಧರ್ಮ ಎಂದರೆ ‘ಆತ್ಮ’ನನ್ನು ಭಾಷೆಯ ಮೂಲಕ ವಿವರಿಸುವುದು ಅಂದರೆ ಪ್ರಪಂಚದಲ್ಲಿ ಜೀಸಸ್‌ನನ್ನು ಸೇರುವ ಮಾರ್ಗ. ಈ ಮಾರ್ಗ ಗೋಚರವೂ ಅಲ್ಲ ಅಥವಾ ಲೆಕ್ಕಕ್ಕೆ ಬರುವುದೂ ಇಲ್ಲ. ಪ್ರಪಂಚದಲ್ಲಿ ಕ್ರಿಸ್ತನ ರೂಪ ನಿಜವಾಗಲೂ ಒಂದು ಐತಿಹಾಸಿಕ ಸತ್ಯ’’ ಎಂದು ಅಭಿಪ್ರಾಯ ಪಡುತ್ತಾನೆ.

ವಿಮರ್ಶಾತ್ಮಕ ಚಿಂತನೆ ಹಾಗೂ ಸಂಶೋಧನೆಗಳ ಪಾಂಡಿತ್ಯಗಳಿಂದ ಕ್ರೈಸ್ತರು ಎನ್ನಿಸಿಕೊಂಡ ಅನೇಕರು ಕ್ರೈಸ್ತ ನಂಬಿಕೆಯನ್ನು ತ್ಯಜಿಸಿದರು. ಅವರೆಲ್ಲಾ ಧರ್ಮಾತೀತ ಮತ್ತು ಜಾತ್ಯಾತೀತತೆಯ ಪ್ರಾಪಂಚಿಕರಾದರು. ದೇವರಲ್ಲಿನ ಯಾವ ನಂಬಿಕೆಯನ್ನೂ ಅಭಿವ್ಯಕ್ತಗೊಳಿಸದೆ, ಸತ್ತ ನಂತರದ ಯಾವ ಫಲಾಪೇಕ್ಷೆಯ ನಿರೀಕ್ಷೆಯೂ ಇಲ್ಲದೆ; ತಮ್ಮ ಸುತ್ತಲಿನವರ ಜೊತೆ ಒಳ್ಳೆಯ ಮನಸ್ಸಿನ ಕರುಣಾಳುಗಳಾಗಿ ಬದುಕಿ ಪ್ರಾಪಂಚಿಕತೆಯನ್ನು ಎತ್ತಿ ಹಿಡಿದರು. ಯಾವುದೇ ದೈವ ಪ್ರೇರಣೆಯಿಂದ ನಡೆದುಕೊಳ್ಳುತ್ತಿಲ್ಲ ಎನ್ನುವುದನ್ನು ಅರಿತು; ಅವರು ನರಳುವವರಿಗೆ ಅನ್ನ, ಬಟ್ಟೆ, ಔಷಧ ಮತ್ತು ಶಿಕ್ಷಣ ಮುಂತಾದವನ್ನು ಒದಗಿಸಿ ಪ್ರಾಪಂಚಿಕತೆ ಎನ್ನುವ ಪದಕ್ಕೆ ಹೊಸ ಅರ್ಥ ನೀಡಿ ಎಲ್ಲಾ ಚೌಕಟ್ಟುಗಳನ್ನು ದಾಟಿ ವಿಚಾರವಂತರೆನಿಸಿಕೊಂಡರು.