ಖರ್ಜಿಯನ್ನರು

ಪೈಗಂಬರರ ನಿಧನಾನಂತರ ಇಸ್ಲಾಂನಲ್ಲಿ ತಕ್ಷಣ ಬಂಡೆದ್ದು ಹೋರಾಡಿದ ಗುಂಪನ್ನು ಖರ್ಜಿಯನ್ನರು ಎನ್ನಲಾಗುತ್ತಿದೆ. ಮಹಮ್ಮದರ ನಿಧನಾನಂತರ; ಅವರಿಂದ ತೆರನಾದ ಸ್ಥಾನವನ್ನು ಅವರ ಬುಡಕಟ್ಟಾದ ಖುರೇಷಿಯನ್ನರಿಂದಲೇ ಆರಿಸಿ ತುಂಬಬೇಕು ಎನ್ನುವುದನ್ನು ಜೊತೆಗೆ ಖಲೀಫನ (ನಾಯಕ) ಅಧಿಕಾರ ಮುಂತಾದವನ್ನು ಅವರು ಪ್ರಶ್ನಿಸಿ ತಿರಸ್ಕರಿಸಿದರು. ಬದಲಾಗಿ ಎಲ್ಲಾ ಬುಡಕಟ್ಟುಗಳಿಗೂ ಸಮಾನತೆಯನ್ನು ಪ್ರತಿಪಾದಿಸಿ ‘‘ಆಕ್ಷೇಪಿಸಲಸಾಧ್ಯ ನಡವಳಿಕೆಯುಳ್ಳ ಯಾವುನೇ ಮುಸ್ಲಿಮನು; ಅವನು ಒಬ್ಬ ಕಪ್ಪು ಗುಲಾಮನಾಗಿದ್ದರೂ ಸರಿ (ರಹಮಾನ್ ಪುಟ.೧೬೯-೧೭೦) ಮಹಮ್ಮದರ ಸ್ಥಾನವನ್ನು ತುಂಬಲು ಅರ್ಹನು’’ ಎಂದು ತಿಳಿಸಲಾಯಿತು. ಶುದ್ಧವೆಂದು ಹೇಳಿಕೊಳ್ಳುವ ಈ ಗುಂಪು ‘ಜಿಹಾದ್ ’ (ಅರಬ್ಬಿಯಲ್ಲಿ ಪವಿತ್ರ ಹತ್ಯೆ) ಅನ್ನು ಇಸ್ಲಾಂ ನಂಬಿಕೆಯ ಆರನೇ ಆಧಾರ ಸ್ಥಂಭ’ ಎಂದು ಪರಿಗಣಿಸಲಾಯಿತು. ಯಾವನೇ ಮುಸಲ್ಮಾನ ತನ್ನ ಬದುಕಿನಲ್ಲಿ ಇಸ್ಲಾಂನ ತತ್ವಗಳನ್ನು ಚಾಚೂ ತಪ್ಪದೆ ಅಳವಡಿಸಿಕೊಳ್ಳುವುದಿಲ್ಲವೋ ಅವನನ್ನು ಕೊಲ್ಲಬೇಕೆನ್ನುವುದನ್ನು ‘ಜಿಹಾದ್’ನ ತತ್ವದ ಮೇಲೆ ಸಮರ್ಥಿಸಿಕೊಳ್ಳಲಾಯಿತು. ತಪ್ಪು ಮಾಡುವ ಮುಸ್ಲಿಮನು ಅವನ ಖುಷಿಯಿಂದಲೇ ತಪ್ಪು ನಡೆಸಿರುತ್ತಾನೆ. ಇಂತಹವನು ಸ್ವಾಭಾವಿಕವಾಗಿ ‘ಜಿಹಾದ್’ಗೆ ಬಲಿಯಾಗುತ್ತಾನೆ. ಒಳ್ಳೆಯ ಮುಸಲ್ಮಾನ ಎಂದು ತೀರ್ಮಾನಿಸುವುದು ‘‘ಅವನು ಇಸ್ಲಾಂ ಧರ್ಮದಲ್ಲಿ ಎಷ್ಟು ನಂಬಿಕೆ ಉಳಿಸಿಕೊಂಡಿದ್ದಾನೆ ಎನ್ನುವುದರ ಜೊತೆಗೆ ಅವನ ಗುಣ ಮತ್ತು ಅವನ ಅವಶ್ಯಕತೆಗಳನ್ನು ಅವಲಂಬಿಸಿದೆ.’’ ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ; ‘ನಂಬಿಕೆ’ ಆಧಾರವೊಂದರಿಂದಲೇ ತಪ್ಪಿಲ್ಲವೆಂದು ತೋರಿಸುವುದನ್ನು ಖರ್ಜಿಯನ್ನರು ತಿರಸ್ಕರಿಸಿದರು.

ಸುನ್ನೀಗಳು

ಈ ಹೊತ್ತಿನ ಮುಸಲ್ಮಾನರಲ್ಲಿ ಶೇಕಡಾ ೮೦ರಷ್ಟು ಜನ ಸುನ್ನೀ ಮುಸಲ್ಮಾನ ಗುಂಪಿಗೆ ಸೇರಿದ್ದಾರೆ. ಇವರ ಸಂಪ್ರದಾಯಗಳೆಲ್ಲ ಮಹಮ್ಮದ್ ಪೈಗಂಬರರು ಬೋಧಿಸಿರುವ ಹಾಗೂ ಕುರಾನ್ ಮತ್ತು ಹದಿತ್ ಅಥವಾ ಸುನ್ಹಾಗಳ ಬೋಧನೆಗಳಿಂದ ನೇರವಾಗಿ ಪಡೆಯಲಾಗಿದೆ ಎಂದು ಹೇಳಿ ತಮ್ಮನ್ನು ಹೆಚ್ಚು ಸಂಪ್ರದಾಯವಾದಿಗಳೆಂದು ತಿಳಿದುಕೊಂಡಿದ್ದಾರೆ. ‘ಸುನ್ನೀ’ ಎನ್ನುವ ಪದವು ಅರಬ್ಬೀ ಭಾಷೆಯ ‘ಸುನ್ಹಾ’ ಎನ್ನುವ ಪದದಿಂದ ನಿಷ್ಪತ್ತಿ ಹೊಂದಿದೆ. ಅರಬ್ಬೀ ಭಾಷೆಯಲ್ಲಿ ‘ಸುನ್ಹಾ’ ಎಂದರೆ ‘ಸಂಪ್ರದಾಯ’ ಅಥವಾ ‘ಆಡಳಿತ’ ಅಥವಾ ‘ರೂಢಿ’ ಅಥವಾ ‘ಅಭ್ಯಾಸ’ ಎನ್ನುವ ಅರ್ಥಗಳಿವೆ. ಈ ಎಲ್ಲಾ ಅರ್ಥಗಳು ಪೈಗಂಬರರು ನಡೆಸಿದ ಬದುಕನ್ನು ಆಧರಿಸಿವೆ. ಇಸ್ಲಾಂನ ಕೇಂದ್ರ ಆಧಾರಿತ ನಿಯಮಗಳೆಂದರೆ ಅದರ ಐದೂ ಆಧಾರ ಸ್ಥಂಭಗಳು. ಆದರೆ ಇವುಗಳ ಜೊತೆಗೆ ಆಹಾರ ಕ್ರಮ, ವಿವಾಹ, ವಿವಾಹ ವಿಚ್ಛೇದನ, ವಾಣಿಜ್ಯ ಒಪ್ಪಂದಗಳು ಹಾಗೂ ಕೊಲೆ ಕಳ್ಳತನ ಮುಂತಾದವುಗಳನ್ನು ನಿಷೇಧಿಸಿದ ನೈತಿಕ ನಡವಳಿಕೆ ಮುಂತಾದವುಗಳ ಬಗ್ಗೆ ಸಂಬಂಧಿಸಿದ ನಿಯಮಗಳು ಸುನ್ನೀ ಮುಸ್ಲಿಮರಲ್ಲಿ ಕಂಡುಬರುತ್ತವೆ.

ಯಾವುದೇ ಸಮಯದಲ್ಲಿ ಎಂತಹುದೇ ಸಮಸ್ಯೆಗಳು ಎದುರಾದಾಗ ಸುನ್ನೀಗಳು ಮಾರ್ಗದರ್ಶನಕ್ಕಾಗಿ ಈ ಮೂಲ ಆಕರಗಳನ್ನೇ ಆಶ್ರಯಿಸುತ್ತಾರೆ. ಸುನ್ನೀ ಮುಸ್ಲಿಮರು ತಮ್ಮ ಕಾಲಿಫ್ (ನಾಯಕ)ರನ್ನು ಸಾಮಾನ್ಯ ಜನರಿಗಿಂತ ಉತ್ತಮ ಜನರಂತೆ ಮಾತ್ರ ಪರಿಗಣಿಸುತ್ತಾರೆ.

ಷಿಯಾಗಳು

ಇರಾನ್‌ನಲ್ಲಿ ಷಿಯಾ ಮುಸಲ್ಮಾನರು ಹೆಚ್ಚು ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಇವರು ಸುನ್ನೀಗಳನ್ನು ಆ ಮೂಲಕ ಸಂಪ್ರದಾಯವಾದಿಗಳನ್ನು ವಿರೋಧಿಸುವವರೆಂದು ತಿಳಿದುಕೊಂಡಿದ್ದಾರೆ. ಪ್ರವಾದಿಗಳನ್ನು ಅನುಸರಿಸುವ ಹಕ್ಕುದಾರರೆಂದು ಇವರು ಭಾವಿಸಿದ್ದಾರೆ. ಇವರ ನಾಯಕನಾದ ‘ಇಮಾಂ’ ಅವರನ್ನು ದೈವಾಂಶ ಸಂಭೂತರೆಂದು ಭಾವಿಸಿರುವುದರಿಂದ; ಹೊಸ ಸಮಸ್ಯೆಗಳು ಮತ್ತು ಬದಲಾದ ಸಂದರ್ಭಗಳಲ್ಲಿ ಇಮಾಂ ಅವರು ಹಕ್ಕುಬಾಧ್ಯತೆಯಿಂದ ನಡೆದುಕೊಳ್ಳುತ್ತಾರೆ. ಷಿಯಾಗಳಿಗೆ ಪ್ರೇರಣೆ ಎಂದರೆ ಪರಂಪರೆಗೆ ಮತ್ತು ಪೈಗಂಬರರ ಬೋಧನೆಗಳಿಗೆ ಮಾತ್ರ ಸೀಮಿತವಾಗಿರದೆ; ಎದುರಾಗುವ ವಾಸ್ತವವೂ ಸೇರಿರುತ್ತದೆ. ತನ್ನ ಕುಟುಂಬದ ಹತ್ತಿರದ ಸಂಬಂಧಿಗಳೇ ತನ್ನ ಉತ್ತಾರಾಧಿಕಾರಿ ಗಳಾಗಬೇಕೆಂಬ ಬಯಕೆ ಮಹಮ್ಮದರದಾಗಿತ್ತೆಂದು ಷಿಯಾಗಳು ನಂಬುತ್ತಾರೆ. ಇಸ್ಲಾಂ ಧರ್ಮದ ಇತರ ಅನುಯಾಯಿಗಳಿಗೆ ಇಂತಹ ಮುಕ್ತ ಅವಕಾಶವಿರಲಿಲ್ಲ. ಆದುದರಿಂದಲೇ ಮಹಮ್ಮದರ ಸೋದರ ಅಳಿಯ ‘ಅಲೀ’ ಮತ್ತು ಅಲಿಯ ಇಬ್ಬರು ಮಕ್ಕಳಾದ ‘ಹಸನ್’ ಮತ್ತು ‘ಹುಸೇನ್’ ಅವರುಗಳು ದೈವಾಂಶಸಂಭೂತ ವಾರಸುದಾರರಂತೆ ‘ಕಾಲೀಫ್’ರಾಗಿ ಆಡಳಿತ ನಡೆಸಿದ್ದು.

‘ಷಿಯಾ’ ಎಂದರೆ ‘ಅನುಸರಿಸು’ ಎನ್ನುವ ಅರ್ಥ. ಅಂದರೆ ‘ಅಲೀ’ಯನ್ನು ಅನುಸರಿಸಿದವರು ಎನ್ನುವ ಅರ್ಥ. ‘ಅಬುಬಕರ್’ ಮತ್ತು ‘ಉಮರ್’ ಎನ್ನುವವರು ಬಡ್ಡಿ ವ್ಯಾಪಾರಿಗಳು. ಹನ್ನೆರಡನೇ ಕಲೀಫ್ ಧರ್ಮಸಮ್ಮತ ವ್ಯಕ್ತಿ ಆಗಿರುತ್ತಾನೆ. ಕ್ರಿ.ಶ.೮೭೮ರಲ್ಲಿ ಈತ ಕಣ್ಮರೆಯಾಗುತ್ತಾನೆ. ಆಗ ‘ಮಹ್ ದಿ’ ಎನ್ನುವವನು ಕಲೀಫನಾಗಿ ದೈವದಿಂದ ನೇಮಕಗೊಳ್ಳುತ್ತಾನೆ. ಅಲ್ಲಿಯವರೆಗೆ ಸಂಬಂಧಿಸಿದ ಅಧಿಕಾರ ತಲೆಮರೆಸಿ ಕೊಳ್ಳುತ್ತದೆ. ಇಸ್ಲಾಂ ಧರ್ಮವನ್ನು ಸುಧಾರಿಸಿ ವಾಸ್ತವದತ್ತ ಕೊಂಡೊಯ್ದು ಪ್ರಪಂಚದ ಉದ್ದಗಲಕ್ಕೂ ವ್ಯಾಪಿಸಲು ಕಾರಣವಾದ ಕೀರ್ತಿ ಈತನಿಗೆ ಸಲ್ಲುತ್ತದೆ. ಷಿಯಾ ಪಂಥದಲ್ಲೂ ‘ಜೈದಿಗಳ’, ‘ಇಸ್ಮಾಯಿಲ್‌ಗಳು’, ‘ಅಶಿಷಿನ್‌ಗಳು’, ‘ಅಲಾವಿಗಳು’, ‘ಬಹಾಯಿಗಳು’ ಮುಂತಾಗಿ ಕವಲುಗಳು ಉಂಟಾದವು. ನಿಗೂಢ ಆಚರಣೆಗಳಲ್ಲಿ ನಂಬಿಕೆ ಇರುವ ಭೈರಾಗಿ ಆಚರಣೆಗಳ ‘ಸೂಫಿಗಳು’, ‘ದರ್ವೇಷಿಗಳು’ ಮುಂತಾದ ಕವಲುಗಳೂ ಉಂಟಾದವು.

ಮುತಾಲಿಕರು

ರಹಮಾನ್ ಪುಟ.೯೧ರಲ್ಲಿನ ಒಂದು ಕಥೆ ಇಲ್ಲಿ ನೆನಪಿಗೆ ಬರುತ್ತಿದೆ. ಒಂದೇ ನಂಬಿಕೆಯಿಂದ ಸತ್ತು ಸ್ವರ್ಗದಲ್ಲಿರುವ ಇಬ್ಬರಲ್ಲಿ ಒಂದು ಚಿಕ್ಕ ಮಗುವಾದರೆ ಮತ್ತೊಬ್ಬ ವಯಸ್ಸಾದವ. ಚಿಕ್ಕೊಮಗು ಕೆಳಗಿನ ಸ್ಥಾನದಲ್ಲಿದ್ದರೆ ವಯಸ್ಸಾದವ ಉನ್ನತ ಸ್ಥಾನದಲ್ಲಿದ್ದಾನೆ. ಸ್ವರ್ಗದಲ್ಲಿನ ಈ ತಾರತಮ್ಯವನ್ನು ಮನಗಂಡ ಚಿಕ್ಕಮಗು ಸ್ವರ್ಗದ ಒಡೆಯ ದೇವರನ್ನು ಕುರಿತು ‘ನಮ್ಮಿಬ್ಬರ ಮಧ್ಯೆ ಈ ತಾರತಮ್ಯ ಯಾವ ಕಾರಣದಿಂದ’? ಎಂದು ಪ್ರಶ್ನಿಸುತ್ತದೆ. ಅದಕ್ಕೆ ದೇವರು ‘ವಯಸ್ಸಾದವ ಬಹಳಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾನೆ. ಆದುದರಿಂದ ಅವನಿಗೆ ಉನ್ನತ ಪಟ್ಟ ನೀಡಿದ್ದೇನೆ’ ಎಂದನು. ಅದಕ್ಕೆ ಆ ಮಗು ‘ನನ್ನನ್ನು ಚಿಕ್ಕ ವಯಸ್ಸಿನಲ್ಲೇ ಸಾಯುವಂತೆ ಮಾಡಿ; ಹೆಚ್ಚು ಹೆಚ್ಚು ಒಳ್ಳೆಯ ಕಾರ್ಯಗಳನ್ನು ನನ್ನ ಜೀವಿತಾವಧಿಯಲ್ಲಿ ಮಾಡುವುದನ್ನು ನೀನು ತಪ್ಪಿಸಿದೆ. ಇದು ಯಾವ ನ್ಯಾಯ’ ಎಂದಿತು. ಅದಕ್ಕೆ ದೇವರು ‘ನೀನು ಬಹಳ ಕಾಲ ಬದುಕಿ ಉಳಿದಿದ್ದರೆ ಬಹಳ ಪಾಪ ಕಾರ್ಯಗಳನ್ನು ಮಾಡುತ್ತಿದ್ದೆ. ಅದಕ್ಕಾಗಿ ನೀನು ಚಿಕ್ಕ ವಯಸ್ಸಿನಲ್ಲೇ ಸಾಯುವಂತೆ ಮಾಡಿದೆ’ ಎಂದನು. ಆಗಿನಿಂದ ಒಂದು ಕೂಗು ಎದ್ದಿತು. ಅದೇನೆಂದರೆ ‘ಓ ದೇವರೆ, ನಾವು ಪಾಪಿಗಳಾಗುವುದಕ್ಕೆ ಮುಂಚೆ ಸಾಯುವುದು ಬೇಡ’ ಎನ್ನುವುದು. ಇದನ್ನು ಮಧ್ಯಮ ಮಾರ್ಗದ ಸಮರ್ಥನೆ ಎನ್ನಬಹುದು.

ಇಸ್ಲಾಂನಲ್ಲಿ ತಟಸ್ಥವಾದಿಗಳ ಅಥವಾ ಮಧ್ಯಮ ಮಾರ್ಗದವರ ಒಂದು ಪಂಗಡವನ್ನು ‘ಮುತಾಲಿಕರು’ ಎಂದು ಕರೆಯುತ್ತಾರೆ. ಮುತಾಲಿಕರು ಪೂರ್ಣವಾಗಿ ಮುಕ್ತಚಿಂತಕರಲ್ಲ ದಿದ್ದರೂ; ಇಸ್ಲಾಂನ ಪರಮಾರ್ಥದಲ್ಲಿ ಒಂದಿಷ್ಟು ವಿಚಾರವಾದವನ್ನು ತರಲು ಪ್ರಯತ್ನಿಸಿದವರು ಎಂದು ಹೇಳಬಹುದು. ಕುರಾನ್‌ನಲ್ಲಿ ಭಗವಂತನನ್ನು ಮಾನವರೂಪ ಮತ್ತು ಮಾನವಗುಣಗಳು ಉಳ್ಳಂತೆ ಭಾವಿಸುವುದನ್ನು ಇವರು ಮಾರ್ಪಡಿಸಿದರು. ದೈವತ್ವದ ಅತಿ ಶ್ರೇಷ್ಠ ಸಾರವೆಂದರೆ ‘‘ಸ್ವಭಾವಗಳನ್ನು ಮಿತಿಗೊಳಿಸಿಕೊಳ್ಳುವುದು’’ ಎನ್ನುವುದಕ್ಕೆ ಒತ್ತು ನೀಡಿದರು.

ಕುರಾನ್ ಒಂದು ಸೃಜನ ಕೃತಿಯಾದುದರಿಂದ (ರಹಮಾನ್ ೯೦); ದೇವರನ್ನು ಕುರಿತು ಮಾತನಾಡುವುದನ್ನು ಇವರು ತ್ಯಜಿಸಿದರು. ಧರ್ಮದ ಸತ್ಯವನ್ನು ಕಂಡುಕೊಳ್ಳುವುದರಲ್ಲಿ ಮನುಷ್ಯನ ವಿವೇಚನಾ ಶಕ್ತಿ ಎನ್ನುವುದು ದೈವಪ್ರಪಂಚಕ್ಕೆ ಸಮನಾದುದು ಎನ್ನುವುದನ್ನು ಇವರು ಕಂಡುಕೊಂಡಿದ್ದರು. ಆದರೆ; ವಿವೇಚನೆಯನ್ನು ದೈವಸ್ವಭಾವದ ಅವಶ್ಯ ಅಂಶವಾಗಿ ಪರಿಗಣಿಸಿದಾಗಿನಿಂದಲೂ ಅದು ದೈವವಾಣಿಗಿಂತಲೂ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾ ಬಂದಿದೆ. ದೈವತ್ವದ ನ್ಯಾಯಕಲ್ಪನೆಯಲ್ಲಿ ಮಾತ್ರ ಮಿತಿ ಹಾಕಲು ಮುತಾಲಿಕರಿಗೆ ಅವಕಾಶವಾಯಿತು. ವಿರಕ್ತಿಯನ್ನು ಮಾನ್ಯಮಾಡುವ ತತ್ವಶಾಸ್ತ್ರದಿಂದ ಪಡೆದ ಜ್ಞಾನದಿಂದ; ನೈತಿಕತೆಯ ಸ್ವಾಭಾವಿಕ ನಿಯಮ ದೇವರಿಂದ ಸೃಷ್ಟಿಸಲ್ಪಟ್ಟ ವಿಶ್ವದಲ್ಲೇ ಅಡಗಿದೆ. ದುಷ್ಠಶಿಕ್ಷೆ ಮತ್ತು ಶಿಷ್ಠರಕ್ಷಣೆ ಅವನ ಅಗತ್ಯಕ್ಕೆ ಬಿಡಲಾಗಿದೆ ಎಂದು ಇವರು ವಾದಿಸಿದರು. ಈ ಬೋಧನೆಯನ್ನು (ಧರ್ಮವನ್ನು) ಕೆಲವು ಸಾರಿ ‘‘ಅಭಯ ಮತ್ತು ಬೆದರಿಕೆ’’ ಎಂದೂ ಕರೆಯಲಾಗುತ್ತಿದೆ. ‘‘ಮನುಷ್ಯರ ಸ್ವತಂತ್ರ ಮನಸ್ಸು, ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ವಿವೇಕದಿಂದ ಆರಿಸಿಕೊಳ್ಳುವ ಅವರ ಸಾಮರ್ಥ್ಯದಿಂದ; ದೇವರು ಅವನ ಅಭಯವೆಂಬ ಸ್ವರ್ಗ ಹಾಗು ಬೆದರಿಕೆಯೆಂಬ ನರಕಗಳ ಮೂಲಕ ಒಳ್ಳೆಯದನ್ನು ಮಾಡುತ್ತಾನೆ’’ (ಕ್ರಿಸ್ಟೋಫರ್ ೧೦೭). ಇಲ್ಲಿ ಮನುಷ್ಯನ ವಿವೇಕ ಮತ್ತು ದೈವದ ಬಲ ಎರಡಕ್ಕೂ ಸಮಾನವಾದ ಮಾನ್ಯತೆ ಇದೆ. ಇಂತಹ ಯೋಚನೆ ಅಬ್ದುಲ್ ಹಸನ್ ಅಲ್ ಅಶಾರಿ (೮೭೩-೯೩೫)ಗೆ ಬಂದಿದ್ದರಿಂದ; ಅವನು ಮೊದಲ ಮುತಾಲಿಕನಾಗಿ ರೂಪುಗೊಂಡ ಹಾಗೂ ಸುನ್ನೀಗಳ ಯೋಚನಾಕ್ರಮಕ್ಕೆ ಹತ್ತಿರವಾಗಿ, ಅವರೊಂದಿಗೆ ಸಾಮರಸ್ಯ ಬೆಳೆಯಲು ಕಾರಣನಾದ.

ಬಹಾಯಿಯರು

ಪ್ರತೀ ತಿಂಗಳ ಹತ್ತೊಂಬತ್ತನೇ ದಿವಸ ಹಬ್ಬದಾಚರಣೆಯಲ್ಲಿ ಪಾಲ್ಗೊಳ್ಳುವುದು, ‘ಅಲಾ’ ತಿಂಗಳಲ್ಲಿ ಹತ್ತೊಂಬತ್ತು ದಿನ ಬೆಳಗಿನ ಜಾವದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುವುದು, ಮದ್ಯಪಾನ ವರ್ಜನೆ ಮಾಡುವುದು ಮತ್ತು ಪ್ರತಿದಿನವೂ ಪ್ರಾರ್ಥನೆ ಮಾಡುವುದು ಮುಂತಾದವನ್ನು ತಮ್ಮ ಪರಮಕರ್ತವ್ಯಗಳೆಂದು ಒಪ್ಪಿ ಪಾಲಿಸುವವರನ್ನು ಬಹಾಯಿಯರೆಂದು ಕರೆಯಲಾಗುತ್ತಿದೆ. ಬಹಾಯಿ ಧರ್ಮದಲ್ಲಿ ಸಾರ್ವಜನಿಕ ಪೂಜಾ ವಿಧಿಗಳು ಇಲ್ಲದಿರುವುದು ಇದಕ್ಕೆ ಕಾರಣ ಎನ್ನಬಹುದು.

ಬಹಾಯಿ ಪಂಥದ ಮೂಲ ಇಸ್ಲಾಂ ಧರ್ಮ. ಇಸ್ಲಾಂ ಧರ್ಮದ ಬಾಬಿ ಪಂಥದಿಂದ ಇದು ಉದಯಿಸಿದೆ. ಮಿರ್ಜಾ ಹುಸೇನ್ ಅಲಿ ನೂರಿ (೧೮೧೭-೧೮೯೨) ಇದರ ಸ್ಥಾಪಕ. ಈತನು ಬಹಾ ಅಲ್ಲಾಹ (ದೇವರ ಮಹಿಮೆ) ಎಂದು ಖ್ಯಾತನಾಗಿದ್ದಾನೆ. ಈತ ಟೆಹರಾನ್ ನಗರದ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ. ಬಾಬಿ ಪಂಥದ ಪವಿತ್ರ ಗ್ರಂಥ ‘ಬಯಾನ್ ’ (ಘೋಷಣೆ). ಬಾಬಿ ಪಂಥದ ಬೋಧನೆಗಳಿಂದ ನೂರಿ ಪ್ರಭಾವಿತನಾದ, ಬಾಬಿ ಪಂಥದ ವಿರುದ್ಧ ೧೮೫೭ರಲ್ಲಿ ಪ್ರಾರಂಭವಾದ ದಬ್ಬಾಳಿಕೆಯನ್ನು ಈತ ವಿರೋಧಿಸಿದ್ದರಿಂದ ಜೈಲು ಸೇರಬೇಕಾಯಿತು. ಬಾಬಿ ಪಂಥದ ಸ್ಥಾಪಕ ಬಾಬ್ ಮಹಾತ್ಮನಿಂದ ಘೋಷಿಸಲ್ಪಟ್ಟ ಪ್ರವಾದಿ ತಾನೇ ಎಂದು ಜೈಲಿನಲ್ಲಿ ಮನವರಿಕೆ ಆಯಿತು. ತಾನೊಬ್ಬ ದೇವರ ಪ್ರವಾದಿ ಎಂದು ೧೮೬೩ರಲ್ಲಿ ಹೇಳಿಕೊಂಡನು. ಆತನನ್ನು ಸ್ವೀಕರಿಸಿ ಅನುಸರಿಸಿದ ಬಾಬಿಗಳನ್ನು ಬಹಾಯಿಗಳೆಂದು ಕರೆಯಲಾಯಿತು.

ಬಹಾಯಿ ಪಂಥದ ಪವಿತ್ರ ಗ್ರಂಥ ‘ಕಿತಾಬ್ -ಅಲ್ -ಅಬ್ಬಾಸ್. ಇದರ ಕತೃ ವಿರ್ಜಾ ಅಲಿ ನೂರಿ, ಕಾಲ ೧೮೭೭-೧೯೮೪. ‘‘ಕಾಲಕ್ರಮೇಣ ವಿಕಾಸ ಮತ್ತು ಪ್ರಸ್ತುತ ಸಮಯದಲ್ಲಿ ಐಕ್ಯತೆ’’ ಎನ್ನುವುದು ಈ ಪಂಥದ ಮುಖ್ಯ ನಂಬಿಕೆ. ‘‘ಧಾರ್ಮಿಕ ಸತ್ಯ ಸಾರ್ವತ್ರಿಕ ಅಲ್ಲ, ಆದರೆ ಸಾಪೇಕ್ಷವಾದುದು. ಮಾನವನಿಗೆ ನಿಲುಕದ ದೈ ಸತ್ವವು ಅನಂತ ಶಬ್ದದ ಮೂಲಕ ಅನೇಕ ಅವಿರ್ಭಾವಗಳನ್ನು ಹೊಂದುತ್ತದೆ. ಈ ಅವಿರ್ಭಾವಗಳು ಜಗತ್ತಿನಲ್ಲಿ ಐಕ್ಯತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತವೆ. ಅಬ್ರಹಾಂ ಒಂದು ಬುಡಕಟ್ಟನ್ನು, ಮೋಸೆಸ್ ಒಂದು ಜನಾಂಗವನ್ನು ಮತ್ತು ಮಹಮ್ಮದ್ ಒಂದು ರಾಷ್ಟ್ರವನ್ನು ಕಟ್ಟಿ ಐಕ್ಯತೆಯನ್ನು ರೂಪಿಸಿದರು. ಯೇಸು ಕ್ರಿಸ್ತನು ವೈಯಕ್ತಿಕ ಪರಿಶುದ್ಧತೆಗೆ ಪ್ರಯತ್ನಿಸಿದನು. ಪ್ರತಿಯೊಂದು ಅವಿರ್ಭಾವದಲ್ಲಿ ಸಂಪೂರ್ಣತೆ ಇದೆ. ಎಲ್ಲ ಅವಿರ್ಭಾವಗಳು ತಮ್ಮ ಉದ್ದೇಶ ಸಾಧನೆಯಲ್ಲಿ ಸಫಲವಾಗಿವೆ. ಕ್ರೈಸ್ತಧರ್ಮ ವಿಫಲವಾಗಿಲ್ಲ. ಕ್ರೈಸ್ತ ಧರ್ಮದಲ್ಲಿ ಕ್ರೈಸ್ತ ಇಚ್ಚಿಸಿದ ವೈಯಕ್ತಿಕ ಪಾವನತೆಗೆ ಆದ್ಯತೆ ಸಿಕ್ಕಿದೆ. ಆದರೆ ಸಾಮುದಾಯಿಕ ಪಾವನತೆಯ ಕಾರ್ಯ ಇನ್ನೂ ಉಳಿದಿದೆ. ಈ ಕಾರ್ಯ ಅಲ್ಲಾನಿಂದ ಆಗಬೇಕಾಗಿದೆ’’ ಎಂದು ಬಹಾಯಿಗಳು ನಂಬುತ್ತಾರೆ. ಈ ಪಂಥ ‘‘ಪ್ರಾಣಿ, ಸಸ್ಯ, ವಿಶ್ವಾಸ ಮತ್ತು ಪವಿತ್ರಾತ್ಮ ಎನ್ನುವ ಅನೇಕ ಆತ್ಮಗಳನ್ನು ಒಪ್ಪುತ್ತದೆ. ಆತ್ಮವು ಅಮರ. ಸ್ವರ್ಗ ಮತ್ತು ನರಕಗಳು ಅನುಕ್ರಮವಾಗಿ ಜೀವವು ದೈವದಕಡೆಗೆ ಅಥವಾ ವಿನಾಶದ ಕಡೆಗೆ ಹೋಗುವುದನ್ನು ಸಾಂಕೇತಿಕವಾಗಿ ಸೂಚಿಸುತ್ತವೆ. ಶ್ರದ್ಧೆಯು ಮಾನವನ ಮುಕ್ತಿಗೆ ಅತ್ಯಗತ್ಯ’’ ಎಂದು ಬಹಾಯಿ ಪಂಥ ನಂಬುತ್ತದೆ.

ಬಹಾಯಿ ಪಂಥ ಎಲ್ಲಾ ಧರ್ಮಗಳ ಐಕ್ಯತೆಯನ್ನು ಸಾರುತ್ತದೆ. ಶೈಕ್ಷಣಿಕ ಮತ್ತು ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುತ್ತಿದೆ. ಏಕಪತ್ನಿತ್ವಕ್ಕೆ ಮಹತ್ವವಿದೆ. ವಿವಾಹ ವಿಚ್ಛೇದನಕ್ಕೆ ಅವಕಾಶವಿದ್ದರು ಪ್ರೋತ್ಸಾಹವಿಲ್ಲ. ಬಹಾಯಿಗಳ ದೇವಸ್ಥಾನವನ್ನು ‘‘ಮಶ್ರಿಖ್-ಆಲ್-ಅಧಕಾರ್’’ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಇಲ್ಲಿ ಎಲ್ಲಾ ನಂಬಿಕೆಗಳಿಗೂ ಅವಕಾಶವಿರುತ್ತದೆ. ಬಹಾಯಿಗಳ ಕೇಂದ್ರ ಇಸ್ರೇಲ್‌ನಲ್ಲಿ ಇದೆ. ಬಹಳಷ್ಟು ರಾಷ್ಟ್ರಗಳಿಗೆ ಹಬ್ಬಿದೆ. ಇರಾನ್‌ನ ದೊರೆ ಷಾನನ್ನು ೧೯೭೮ರಲ್ಲಿ ಪದಚ್ಯುತಗೊಳಿಸಿ ದೇಶದಿಂದ, ಹೊರಗಟ್ಟಿದ ಮೇಲೆ ಷಿಯಾ ಮುಸ್ಲಿಮರ ದಾಳಿಯ ಗುರಿ ಬಹಾಯಿರ ಮೇಲೆ ತಿರುಗಿದ್ದು ಇತಿಹಾಸದಷ್ಟೇ ಸತ್ಯ. ಕಾರಣ ‘ಬಹಾಯಿರ ನಂಬಿಕೆ ಇಸ್ಲಾಂನ ತಿರಸ್ಕಾರ’’ ಎನ್ನುವುದು ಷಿಯಾ ಮುಸ್ಲಿಮರ ಮನಸ್ಸಿನಲ್ಲಿ ಉಂಟಾಗಿದ್ದು.

ಮುಸಲ್ಮಾನ್ ಸಂದೇಹವಾದಿಗಳು ಮತ್ತು ಮುಕ್ತ ಚಿಂತಕರು

ಇಸ್ಲಾಂ ಮತಧರ್ಮ ಸ್ಥಾಪಕ ಮಹಮ್ಮದ್ ಪೈಗಂಬರರ ವಿಚಾರಗಳನ್ನು ಪೂರ್ಣವಾಗಿ ಒಪ್ಪಿದ್ದವರು ಅಥವಾ ಒಪ್ಪುವವರು ಒಂದುಕಡೆ ಆದರೆ; ಒಪ್ಪದಿರುವವರು ಪ್ರಾರಂಭದಿಂದಲೂ ಮತ್ತೊಂದು ಕಡೆ ಇದ್ದರು ಎನ್ನುವುದು ಮುಖ್ಯ ಸಂಗತಿ. ಅವರ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು ಅಷ್ಟೆ.

ಅರಬ್ ದೇಶದ ಬುಡಕಟ್ಟೊಂದರ ಖಜ್‌ರಾಜ್ ಕುಲದ ‘ಅಬದಲ್ಲಾ-ಇಬಿನ್ -ಉಬೈ’ ಎನ್ನುವಾತ; ಅಲ್ಲಾಹ್‌ನ ಹೆಣ್ಣುಮಕ್ಕಳಲ್ಲಿ ಒಬ್ಬಳೂ, ವಿಧಿಯ ದೇವತೆಯೂ ಆಗಿದ್ದ ‘ಮನಾತ್’ಳ ಪಾರಂಪರಿಕವಾಗಿ ಬಂದಿದ್ದ ಆರಾಧನೆಯನ್ನು ನಿಷೇಧಿಸಿದ ಹಾಗೂ ಮಹಮ್ಮದರ ಬೋಧನೆಗಳನ್ನು ಒಪ್ಪಿ, ಏಕ ದೇವಾರಾಧನೆಯನ್ನು ಜಾರಿಗೆ ತಂದನು. ಅದೇ ಸಮಯದಲ್ಲಿ ‘ಅವಸೈಟ್’ ಬುಡಕಟ್ಟಿನ ‘ಮದೀನಾ’ ಕುಲದವರು ಮಹಮ್ಮದರ ಏಕ ದೇವೋಪಾಸನೆ ಮತ್ತು ಅವರ ವಿಚಾರಗಳನ್ನು ತಿರಸ್ಕರಿಸಿದ್ದರು.

ಪರ್ಷಿಯಾದ ಗಣಿತಶಾಸ್ತ್ರಜ್ಞ, ವೈದ್ಯ ಮತ್ತು ತತ್ವಜ್ಞಾನಿ ‘ಅರ್‌ರಜಿ’ (ಕ್ರಿ.ಶ.೮೬೫-೯೨೩) ಗ್ರೀಕ್ ಚಿಂತನೆಗಳಿಂದ ಪ್ರಭಾವಿತನಾಗಿ, ಮುಕ್ತ ಚಿಂತಕನಾಗಿ, ವಿಚಾರವಾದಿಯಾಗಿ ಮತ್ತು ಪರಂಪರೆಯಿಂದ ಬಂದ ಅಮಾನಯ ಧಾರ್ಮಿಕ ವಿಚಾರಗಳ ವಿರೋಧಿಯಾಗಿ ರೂಪುಗೊಂಡ. ‘‘ಕಾರಣ, ಎನ್ನುವುದು ಮಾನವನಿಗೆ ದೈವವು ನೀಡಿರುವ ಅಗಾಧವಾದ ಕರುಣೆ. ಆದಿಲ್ಲದಿದ್ದರೆ ನಮ್ಮ ಸ್ಥಿತಿ ಬುದ್ದಿಹೀನ ಪ್ರಾಣಿಗಳಿಗಿಂತಲೂ ಕೊನೆಯದಾಗಿರು ತ್ತಿತ್ತು’’ ಎಂದು ಹೇಳಿ; ಸತ್ಯವನ್ನು ಹುಡುಕುವ ‘ಕಾರಣ’ವನ್ನು ಧರ್ಮಕ್ಕಿಂತಲೂ ಉನ್ನತವಾದ ಸ್ಥಾನದಲ್ಲಿರಿಸಿದ. ಅರ್‌ರಜಿಯ ಕಣ್ಣಿನಲ್ಲಿ ಪೊರೆ ಬೆಳೆದು ಕುರುಡನಾದಾಗ; ಅವನ ವಿಚಾರಗಳ ವಿರೋಧಿಗಳು, ಅದನ್ನು ಅಲ್ಲಾಹ್‌ನೇ ಕೊಟ್ಟಿರುವ ಶಿಕ್ಷೆ ಎಂದು ಮೂದಲಿಸಿದರು.

ಇಬಿನ್ ಖಲ್ದನ್ (ಕ್ರಿ.ಶ.೧೩೩೨-೧೪೦೬) ಒಬ್ಬ ಇತಿಹಾಸಜ್ಞ, ತತ್ವಜ್ಞಾನಿ ಮತ್ತು ಸಮಾಜಶಾಸ್ತ್ರಜ್ಞ. ‘‘ವೈದ್ಯಕೀಯೇತರ ವಿಷಯಗಳಿಗೆ ಪ್ರಾಧಾನ್ಯತೆ ಕೊಡುವುದು ಸಮಂಜಸ ಅಲ್ಲ’’ ಎಂದು ಆತ ಅಭಿಪ್ರಾಯಪಡುತ್ತಾನೆ. ಜ್ಯೋತಿಷ್ಯಶಾಸ್ತ್ರವನ್ನು ಕುರಿತು ‘‘ಧಾರ್ಮಿಕ ನಿಯಮಗಳ ಆಧಾರದ ಮೇಲೆ ಜ್ಯೋತಿಷ್ಯಕ್ಕೆ ಮಾನ್ಯತೆ ಇಲ್ಲ. ವಿವೇಕದ ಅಂಶದ ಆಧಾರದ ಮೇಲೆ ಅದರ ದೌರ್ಬಲ್ಯಗಳು ಸ್ಪಷ್ಟವಾಗಿವೆ. ಜೊತೆಗೆ ಜ್ಯೋತಿಷ್ಯ ಮಾನವ ಸಂಸ್ಕೃತಿಗೆ ಕೆಡಕು ಮಾಡಿದೆ. ಕೆಲವು ಸಲ ಜ್ಯೋತಿಷ್ಯ ನಿಜವಾದಾಗ ಸಾಮಾನ್ಯ ಜನರ ನಂಬಿಕೆಯನ್ನೇ ಘಾಸಿಗೊಳಿಸುತ್ತದೆ. ಇದರಿಂದ ಅಜ್ಞಾನದಿಂದ ಕೂಡಿದ ಜನರಲ್ಲಿ ಜ್ಯೋತಿಷ್ಯವೇ ಸತ್ಯ ಎನ್ನುವ ಭಾವನೆ ಉಂಟಾಗಿ; ಕಾರ್ಯ-ಕಾರಣ ಸಂಬಂಧದ ಪ್ರಜ್ಞೆ ಕಡಿಮೆಯಾಗಲು ಕಾರಣವಾಗುತ್ತದೆ’’ ಎಂದು ಆತ ಅಭಿಪ್ರಾಯಪಡುತ್ತಾನೆ.

ಇಸ್ಲಾಂ ಮತಧರ್ಮದಲ್ಲಿ ಹುಟ್ಟಿ-ಬೆಳೆದು ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಅನೇಕ ಕವಿಗಳು, ಬರಹಗಾರರು ಆಗಾಗ ಧಾರ್ಮಿಕ ಕಟ್ಟಳೆಗಳಿಂದ ಸ್ವಾತಂತ್ರ್ಯವನ್ನು ಪ್ರತಿಪಾದಿಸಿರುವುದು ಕಂಡುಬಂದಿದೆ.

ಅಬುಲ್ ಅಲಾ ಅಲ್‌ಮರ್ ಅರ್ರಿ (ಕ್ರಿ.ಶ.೯೭೩-೧೦೫೭) ಸಿರಿಯಾದ ಪ್ರಖ್ಯಾತ ಕವಿ ಮತ್ತು ತತ್ವಶಾಸ್ತ್ರಜ್ಞ. ಹುಟ್ಟು ಕುರುಡ. ಅವನು ದೇವರ ಅಸ್ತಿತ್ವವನ್ನು ಅಲ್ಲಗಳೆಯದಿದ್ದರೂ; ಅದರ ಜೊತೆಯಲ್ಲಿ ‘‘ವಿಧಿ ಎನ್ನುವುದು ಪ್ರತಿಯೊಂದರಲ್ಲೂ ಪ್ರಮುಖ ನಿರ್ಣಾಯಕ ಪಾತ್ರವಹಿಸುತ್ತದೆ’’ ಎನ್ನುವ ಅಭಿಪ್ರಾಯ ಹೊಂದಿರುತ್ತಾನೆ. ಅವನು ‘ಪುನರುತ್ಥಾನ ಅಥವಾ ದೈವೋಕ್ತಿ’ ಎನ್ನುವ ಮಾತುಗಳನ್ನು ತಿರಸ್ಕರಿಸುತ್ತಾನೆ. ಅವನಿಗೆ ‘ಧರ್ಮ’ ಎನ್ನುವುದು ‘‘ವಿಚಾರ ಮಾಡದೆ ಬರೀ ರೂಢಿಯಿಂದ ಮತ್ತು ಶಿಕ್ಷಣದಿಂದ ಒಪ್ಪಿಕೊಂಡ ಮಾನವ ನಿರ್ಮಿತ ಒಂದು ಉತ್ಪನ್ನ.’’ ಅವನ ಪ್ರಕಾರ, ನಂಬಿಕೆಯನ್ನು ಅನುಮಾನಿಸುವವರು ಬುದ್ದಿವಂತರಾದರೆ; ಅದಕ್ಕೆ ನಿಷ್ಟರಾಗಿರುವವರು ದಡ್ಡರು.

ಓಮರ್ ಖಯ್ಯಾಮ್ ಒಬ್ಬ ಮಹಾನ್ ಕವಿ ಮತ್ತು ಮುಕ್ತ ಚಿಂತಕ. ಪರ್ಷಿಯಾ ದೇಶದವನು. ಕ್ರಿ.ಶ.೧೧೩೨ರಲ್ಲಿ ದಿವಂಗತನಾಗಿದ್ದಾನೆ. ಅರಬ್ಬಿ ಭಾಷೆಯಲ್ಲಿ ಆತನ ಪೂರ್ಣ ಹೆಸರು ‘ಓಮರ್ ಇಬಿನ್ ಇಬ್ರಾಹೀಂ ಅಲ್ ಖಯ್ಯಾಮಿ’ ಎಂದು. ‘ಅಲ್ ಖಯ್ಯಾಮಿ’ ಎಂದರೆ ಗುಡಾರ ಮಾಡುವವನು ಎನ್ನುವ ಅರ್ಥ. ಅದು ಅವನ ವೃತ್ತಿಸೂಚಕವೂ ಆಗಿದೆ ಎಂದು ಊಹಿಸಬಹುದು. ಆತನ ‘ರುಬೈಯಾತ್ ’ ಎನ್ನುವ ಕವನ ಪಾಶ್ಚಿಮಾತ್ಯ ದೇಶಗಳಲ್ಲೆಲ್ಲಾ ಖ್ಯಾತಿಪಡೆದಿದೆ. ಆತನ ಕೃತಿಗಳಲ್ಲಿ ಬರುವ ದೇವರ ಕಲ್ಪನೆಗೆ ಅಷ್ಟೇನೂ ಮಹತ್ವದ ಸ್ಥಾನವಿಲ್ಲ; ಆದರೆ, ಆ ಸ್ಥಾನವನ್ನು ಮಾನಿನಿ ಮತ್ತು ಮದಿರೆಗಳು ಆಕ್ರಮಿಸಿವೆ. ‘‘ಮಣ್ಣಲ್ಲಿ ಮಣ್ಣಾಗುವುದಕ್ಕೆ ಮುಂಚೆ ಪ್ರಾಪಂಚಿಕ ಸುಖಗಳನ್ನೆಲ್ಲಾ ಅನುಭವಿಸಬೇಕು’’ ಎನ್ನುವುದನ್ನು ಪ್ರತಿಪಾದಿಸಿ; ಮರಣಾನಂತರದ ಸ್ಥಿತಿಗೆ ಸಂಬಂಧಿಸಿದ ನಂಬಿಕೆಗಳೆಲ್ಲವನ್ನೂ ತಿರಸ್ಕರಿಸುತ್ತಾ, ತಾನೊಬ್ಬ ಸಂದೇಹವಾದಿ ಅಥವಾ ಮುಕ್ತ ಚಿಂತಕ ಎನ್ನುವುದನ್ನು ತನ್ನ ವಿಚಾರಗಳ ಮೂಲಕ ಮತ್ತು ತನ್ನ ನಡವಳಿಕೆಗಳ ಮೂಲಕ ಪ್ರತಿಪಾದಿಸಿದ್ದಾನೆ.

ಶಿರಾಜ್ (ಕ್ರಿ.ಶ.೧೧೮೫-೧೨೯೨) ಎನ್ನುವ ಕವಿ ತನ್ನ ‘ಸಾದಿ’ ಎನ್ನುವ ಕೃತಿಯಲ್ಲಿ ‘‘ದೇವರ ಪ್ರಾರ್ಥನೆ ಎನ್ನುವುದು ಬೇರೇನೂ ಅಲ್ಲ; ಅದು ಮನುಷ್ಯರ ಸೇವೆ’’ ಎಂದು ಅಭಿಪ್ರಾಯಪಡುತ್ತಾನೆ. ಅವನು ತನ್ನ ‘ಗುಲಿಸ್ಥಾನ್’ ಎನ್ನುವ ಕೃತಿಯಲ್ಲಿ ‘‘ಎಲ್ಲಾ ಮನುಷ್ಯ ದೇಹಗಳೂ ಒಂದೇ ವಿಧದ ವಸ್ತುಗಳಿಂದ ರೂಪುಗೊಂಡಿವೆ. ಆ ಮನುಷ್ಯ ಗುಂಪಿನಲ್ಲಿ ವಿಧಿ ಎನ್ನುವುದು ಯಾರೊಬ್ಬರಿಗೆ ನೋವುಂಟು ಮಾಡಿದರೂ ಉಳಿದವರು ಸುಮ್ಮನಿರಬಾರದು. ಇನ್ನೊಬ್ಬರ ನೋವಿಗೆ ಸ್ಪಂದಿಸದವರನ್ನು ಮನುಷ್ಯರೆಂದು ಕರೆಯಲಾಗದು’’ (ಉಲ್ಲಾ ಪುಟ.೨೯೯) ಎಂದು ಮಾನಯತೆಯನ್ನು ಎತ್ತಿ ಹಿಡಿದಿದ್ದಾನೆ.

ಖಲೀಲ್ ಗಿಬ್ರಾನ್ (ಕ್ರಿ.ಶ.೧೮೮೩-೧೯೩೧) ಅತ್ಯಂತ ಜನಪ್ರಿಯನೂ ಮತ್ತು ಪ್ರೀತಿಪಾತ್ರನೂ ಆದಂತ ಕವಿ. ಲೆಬನಾನಿನವ. ‘‘ಪ್ರತಿಯೊಬ್ಬರ ದೈನಂದಿನ ಬದುಕು ದೈವದ ಆವಾಸಸ್ಥಾನ ಮತ್ತು ಧರ್ಮವನ್ನು ಅಪ್ಪಿಕೊಂಡಿರುತ್ತದೆ. ಪ್ರತಿಯೊಬ್ಬರ ಸಾಧನೆಯೂ ಧರ್ಮದ ಪರೀಕ್ಷೆ ಆಗಿರುತ್ತದೆ. ದೇವರನ್ನು ಕಾಣಲು ಆಡಿ ನಲಿಯುವ ಮಕ್ಕಳನ್ನು ಅಥವಾ ವಿಶಾಲವಾದ ಆಕಾಶವನ್ನು ಅಥವಾ ಪ್ರಕೃತಿಯಲ್ಲಿನ ಆಶ್ಚರ್ಯಗಳತ್ತ ನೋಡುತ್ತಾನೆ. ನಗುವ ಹೂವುಗಳಲ್ಲಿ, ಏರಿ ಬಿದ್ದು ತೂಗುವ ಮಾಮರಗಳಲ್ಲಿ ದೇವರನ್ನು ಕಾಣಬಹುದು. ಅವನು ನಿನ್ನ ತುಟಿಗಳ ಮೂಲಕ ತಾನೇ ಮಾತನಾಡುವಾಗ ನಿನ್ನ ಮಾತುಗಳಿಗೆ ಅರ್ಥವೇನಿದೆ. ಆದುದರಿಂದ ನುಡಿಯುವುದನ್ನು ಕಡಿಮೆ ಮಾಡಿ ಶಕ್ತಿಯನ್ನು ಉಳಿಸು, ಮೌನದಲಿ ಆಲಿಸುವವರಿದ್ದರೆ ಬೆಟ್ಟ, ಗುಡ್ಡ, ಪರ್ವತ, ಗಿಡ, ಮರ, ಸಮುದ್ರ, ಸಾಗರ ಮುಂತಾದವುಗಳ ಪ್ರಾರ್ಥನೆ ಕೇಳಿಸುತ್ತದೆ. ದೈವಶಕ್ತಿ ಅಥವಾ ಪೂಜ್ಯವಾದದ್ದು ಎನ್ನುವುದು ನಮ್ಮ ಬದುಕಿನಲ್ಲೇ ಸೇರಿದೆ. ಆದುದರಿಂದ ಬದುಕು ಅನಂತದ ಅಥವಾ ಕೊನೆಯಿಲ್ಲದ ನುಡಿಗಳಾಯಿತು’’ ಎಂದು ಬರೆದು ಪ್ರಕೃತಿತತ್ವ ವಾದವನ್ನು ಪ್ರತಿಪಾದಿಸಿದ್ದಾನೆ.

ಪಾರಂಪರಿಕ ಇಸ್ಲಾಂ ಧರ್ಮದಲ್ಲಿ ‘ಜಾತ್ಯಾತೀತತೆ’ ಮತ್ತು ‘ನಾಸ್ತಿಕತೆ’ ಎನ್ನುವ ಪದಗಳಿಗೆ ಸ್ಥಾನವೇ ಇಲ್ಲ. ಅಲ್ಲೇನಿದ್ದರೂ ಏಕದೇವೋಪಾಸನೆ ಮತ್ತು ನಿರಾಕಾರ ಆಸ್ತಿಕತೆಗೆ ಪ್ರಮುಖ ಸ್ಥಾನ. ಆಂತರಿಕವಾಗಿ ಈ ಧರ್ಮದಲ್ಲಿರುವ ಉಸಿರು ಕಟ್ಟುವ ವಾತಾವರಣ ಹಾಗೂ ಪ್ರಪಂಚದ ಬೇರೆ ಬೇರೆ ಧರ್ಮಗಳಲ್ಲಿರುವ ನಂಬಿಕೆ, ಆಚರಣೆಗಳಲ್ಲಿರುವ ಅನೇಕತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮುಂತಾದವುಗಳ ಪ್ರಭಾವದಿಂದ ಆಧುನಿಕ ಇಸ್ಲಾಂನಲ್ಲಿ ಸ್ವಲ್ಪ ಮಾರ್ಗ ಬದಲಾವಣೆಗೆ ಅವಕಾಶವಾಗಿರುವುದು ಕಂಡುಬಂದಿದೆ.

ಭಾರತ ಸಂಜಾತ ಸಾಲಮನ್ ರಷ್ದಿಯ ‘ದಿ ಸಟಾನಿಕ್ ವರ್ಸಸ್ ’ ಎನ್ನುವ ಇಂಗ್ಲೀಷ್ ಕೃತಿ ಪ್ರಕಟವಾದಾಗ; ಇರಾನ್‌ನ ಖೊಮೇನಿ ಕ್ರಿ.ಶ.೧೯೮೯ರಲ್ಲಿ ‘ಫತ್ವಾ’ ಜಾರಿ ಮಾಡಿ ಲೇಖಕನ ಪ್ರಾಣ ಹತ್ಯೆಗೆ ಬೆದರಿಕೆ ಒಡ್ಡಲಾಯಿತು. ಇಸ್ಲಾಂನ ಪಾರಂಪರಿಕ ನಂಬಿಕೆಗಳಿಗೆ ಆ ಕೃತಿಯಲ್ಲಿ ಚ್ಯುತಿ ಬಂದಿದೆ ಎನ್ನುವುದು ಅದಕ್ಕೆ ಕಾರಣವಾಗಿತ್ತು. ಈ ಕೃತಿಯನ್ನು ಜಪಾನಿ ಭಾಷೆಗೆ ತರ್ಜುಮೆ ಮಾಡಿದ ತ್ಸುಕೂಬ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹಿಟೋಷಿ ಇಗರಾಷಿ ಅವರನ್ನು ಇರಿದು ಕೊಲ್ಲಲಾಯಿತು. ಇಟಾಲಿಯನ್ ಭಾಷೆಗೆ ತರ್ಜುಮೆ ಮಾಡಿದ ಇಟ್ಟಿಯೋರ್ ಕ್ಯಾಪ್ರಿಯೋಲಿ ಎನ್ನುವವನನ್ನು ಪಾಕೀಸ್ಥಾನೀಯನೊಬ್ಬ ಇರಿದು ಘಾಸಿಗೊಳಿಸಿದ.

ಕೈರೋದ ಅಲಾಹಮೀದ್‌ನ ‘ದಿಮ್ಯಾನ್ ಇನ್‌ಸೈಡ್ ದಿ ಟ್ರಯಾಂಗಲ್ ’ ಕೃತಿ ಪ್ರಕಟವಾದಾಗ; ಇಸ್ಲಾಂನ ಮೂಲಭೂತ ನಂಬಿಕೆಗಳಿಗೆ ಚ್ಯುತಿ ಉಂಟಾಗಿದೆ ಎನ್ನುವ ಕೂಗನ್ನು ಹಾಕಲಾಯಿತು. ಹಮೀದ್ ಬರೆದು ‘‘ಮನುಷ್ಯನ ಪ್ರಾರ್ಥನೆಗಳಿಗೆ ದೇವರು ಉತ್ತರಿಸುತ್ತಾನೆ ಅಥವಾ ಹಸಿದವರಿಗೆ ಆಹಾರವನ್ನು ಕಳುಹಿಸುತ್ತಾನೆ ಅಥವಾ ಬಡವರಿಗೆ ಲಕ್ಷಗಟ್ಟಲೆ ಕೆ.ಜಿ ಬಂಗಾರ ಕಳಹಿಸುತ್ತಾನೆ…. ಹೀಗೆ ಇನ್ನೂ ಅನೇಕ ಪವಾಡಗಳನ್ನು ಮಾಡುತ್ತಾನೆ. ಆದರೆ ಅಂತಹವೆಲ್ಲ ಈಗೇಕೆ ನಡೆಯುವುದಿಲ್ಲ? ಎನ್ನುವುದು ಮಾನವ ಸಮುದಾಯಕ್ಕೆ ಸ್ಪಷ್ಟವಾಗಿಲ್ಲ’’ ಎಂದು ತಿಳಿಸುತ್ತಾನೆ.

ಅರಬ್ಬೀ ಮಹಿಳಾ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥೆ ಹಾಗೂ ಪ್ರಖ್ಯಾತ ಕಾದಂಬರಿಕಾರ್ತಿ ಡಾ.ನಾವಲ್ ಸದಾವಿ ಎನ್ನುವಾಕೆ ‘‘ಮೊದಲ ಹೆಂಡತಿಯ ಒಪ್ಪಿಗೆ ಇಲ್ಲದೆ ಪುರುಷ ಮತ್ತೊಬ್ಬಳನ್ನು ವರಿಸುವುದನ್ನು (ಪುರುಷ ನಾಲ್ಕು ಜನ ಹೆಂಡತಿಯರನ್ನು ಒಟ್ಟಿಗೆ ಏಕಕಾಲದಲ್ಲಿ ಹೊಂದಿರಲು ಇಸ್ಲಾಂ ಧಾರ್ಮಿಕ ಕಾಯಿದೆ ಅನುವು ಮಾಡಿದೆ), ಮಹಿಳೆ ಹೊರಗೆ ಹೋಗಿ ದುಡಿಯುವುದನ್ನು ನಿಷೇಧಿಸಿರುವುದನ್ನು’’, ಇಂತಹ ಧರ್ಮ ನಿಯಂತ್ರಿತ ನಿಯಮಗಳನ್ನು ಖಂಡಿಸಿದ್ದಾಳೆ. ಇದರ ಪರಿಣಾಮವಾಗಿ ಸಂಘಟನೆಯ ಮುಖವಾಣಿ ‘ಅಲ್‌ನೂನ್’ ಎನ್ನುವ ಮಾಸಿಕ ಪತ್ರಿಕೆಯ ಪ್ರಕಾಶನ, ಪ್ರತಿಭಟನೆಯ ಪರಿಣಾಮವಾಗಿ ನಿಲ್ಲಬೇಕಾಯಿತು; ಕೊನೆಯಲ್ಲಿ ಇಡೀ ಸಂಘಟನೆಯೇ ವಿಸರ್ಜನೆಗೊಂಡಿತು. ಮಹಿಳಾ ಪ್ರತಿಭಟನೆಯ ಈ ಧ್ವನಿ ಅನೇಕ ರಾಷ್ಟ್ರಗಳ ಮಹಿಳೆಯರ ಸಂಘಟನೆಗೂ ಕಾರಣವಾಯಿತು.

‘‘ಮಹಿಳೆಯರೆಲ್ಲಾ ಕಡ್ಡಾಯವಾಗಿ ಮುಸುಕು (ಹಿಜಬ್) ಧರಿಸಬೇಕು’’ ಎಂದು ಆಲ್ಜೀರಿಯಾದ ಧಾರ್ಮಿಕ ಮೂಲಭೂತವಾದಿಗಳು ವಿಧಿಸಿದ್ದ ನಿಯಮಗಳನ್ನು ಸುಮಾರು ೨೨ ವರ್ಷ ವಯಸ್ಸಿನ ಮಹಿಳೆಯೊಬ್ಬಳು ‘ಫಾತಿಮಾಬಿ’ ಎನ್ನುವ ಸುಳ್ಳು ಹೆಸರಿನಿಂದ ವಿರೋಧಿಸಿದಳು. ‘‘ಒಬ್ಬ ಶಿಕ್ಷಕನನ್ನು, ಒಬ್ಬ ಪತ್ರಕರ್ತನನ್ನು, ಒಬ್ಬ ಕಾರ್ಮಿಕ ನಾಯಕನನ್ನು, ಒಬ್ಬ ನ್ಯಾಯವಾದಿಯನ್ನು ಅಥವಾ ಮುಕ್ತವಾಗಿ ಚಿಂತಿಸಬಲ್ಲಂತ ಕಾರ್ಮಿಕರನ್ನು ಹತ್ಯೆ ಮಾಡುವುದನ್ನು ನಿಲ್ಲಿಸಿದ ದಿನವೇ ಮಹಿಳಾ ವಿರೋಧಿ ನೀತಿಗೆ ತೆರೆ ಬೀಳುತ್ತದೆ’’ ಎಂದು ಹೇಳಿ ಆಕೆ ಪ್ರತಿಭಟಿಸುತ್ತಾಳೆ.

ಬಾಂಗ್ಲಾ ದೇಶದ ಲೇಖಕಿ ‘ತಸ್ಲೀಮ್ ನಸ್ರೀನ್’ ಇಂತಹುವೇ ವಿಚಾರಗಳನ್ನು ಸಮರ್ಥಿಸಿ ತನ್ನ ಕೃತಿಗಳ ಮೂಲಕ ಬರೆದು ಪ್ರಕಟಿಸಿದಾಗ; ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಸುಮಾರು ೧೯೯೪ರಲ್ಲಿ ಕೊಲೆಯ ಬೆದರಿಕೆಗಳನ್ನೂ ಆಕೆ ಎದುರಿಸಬೇಕಾಯಿತು.

ಪಾಕಿಸ್ಥಾನದ ಪ್ರಥಮ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬೆನಜೀರ್ ಬುಟ್ಟೋ ಅವರು ಮಾಡಿದ ಪ್ರಥಮ ಸಾರ್ವಜನಿಕ ಭಾಷಣದಲ್ಲಿ ‘‘ಇಸ್ಲಾಂ ಧರ್ಮಕ್ಕೆ ಸಹನೆ ಮತ್ತು ಉದಾರತೆ ಅರ್ಥ ತರಬೇಕು’’ ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು.

ಆಫ್ರಿಕಾದ ನೀಗ್ರೋ ಸಂತತಿಯ ಇಸ್ಲಾಂ ದರ್ಮದ ಅನುಯಾಯಿ ಲೇಖಕಿ ಅಬು ಮುಡಾಬಿ ತನ್ನ ಬರವಣಿಗೆಯ ಮೂಲಕ ‘‘ ಇಸ್ಲಾಂ ಪ್ರಪಂಚದಾದ್ಯಂತ ಹರಡಿರುವ ನಡುಗಡ್ಡೆಗಳ ಧರ್ಮ. ಅನುಯಾಯಿಗಳಲ್ಲಿ ಒಂದು ಎನ್ನುವ ವಾಸ್ತವವಾದ ರೂಢಿ ಇಲ್ಲ. ಅದೇನಿದ್ದರೂ ಭಾವನಾತ್ಮಕ ಸಂಬಂಧ. ವಾಸ್ತವ ಅಲ್ಲ. ಧರ್ಮ ಮಾನವರನ್ನು ಒಂದುಗೂಡಿಸುವ ಶಕ್ತಿ ಎನ್ನುವುದಕ್ಕೆ ಅರ್ಥವಿಲ್ಲ. ಉಡುವ ತೊಡುಗೆಗಳಿಂದ, ಇರುವ ಆಕಾರಗಳಿಂದ, ತಿನ್ನುವ ಆಹಾರಗಳಿಂದ, ನಂಬಿರುವ ನಂಬಿಕೆಗಳಿಂದ ಅಥವಾ ಮಾಡುವ ಆಚರಣೆಗಳಿಂದ ಒಂದು ಧರ್ಮದ ಸಮಗ್ರತೆ ನಿರ್ಣಯವಾಗಲಾರದು. ಇವೆಲ್ಲಾ ಒಂದಲ್ಲಾ ಒಂದು ವಿಧದಲ್ಲಿ ಭೌಗೋಳಿಕ ಅಂಶಗಳ ಮೇಲೆ ರೂಪುಗೊಂಡಂಥವು. ಆದುದರಿಂದ ಧರ್ಮ ಅದರ ಅನುಯಾಯಿಗಳನ್ನೆಲ್ಲಾ ಒಂದು ಮಾಡುವ ಶಕ್ತಿ ಆಗಲಾರದು. ಇದರಿಂದ ಇಸ್ಲಾಂ ಧರ್ಮವೂ ಹೊರತಲ್ಲ. ಆದುದರಿಂದಲೇ ಇಸ್ಲಾಂ ಧರ್ಮದಲ್ಲಿ ಆಫ್ರಿಕಾದ ಮುಸ್ಲಿಮರು, ಪಾಕಿಸ್ಥಾನದ ಮುಸ್ಲಿಮರು, ಭಾರತದ ಮುಸ್ಲಿಮರು, ಇರಾನ್ ಮುಸ್ಲಿಮರು ಎಂಬುದಾಗಿ ನಡುಗಡ್ಡೆಗಳು ಉಳಿದಿರುವುದು’’ ಎಂದು ಆಭಿಪ್ರಾಯಪಡುವ ಅವರು ಮುಂದುವರೆದು ‘‘ಪ್ರಪಂಚದಲ್ಲಿರುವ ಎಲ್ಲಾ ಮಹಿಳೆಯರನ್ನೂ ಕಾಡುತ್ತಿರುವ ಬಹುತೇಕ ಸಮಸ್ಯೆಗಳು ಒಂದೇ ತೆರನಾದವು. ಅವರೆಲ್ಲಾ ಒಟ್ಟುಗೂಡಿ ಪ್ರತಿಭಟಿಸಿದಾಗ ಮಾತ್ರ ಬಿಡುಗಡೆ ದೊರೆಯಲು ಸಾಧ್ಯ’’ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಇಸ್ಲಾಂ ಧರ್ಮದಲ್ಲೂ ಮೂಲಭೂತವಾದ ಮತ್ತು ಮುಕ್ತ ಚಿಂತನೆಗಳ ಸಂಘರ್ಷ ಬಿಡುಗಡೆಗಾಗಿ ಇದೆ ಎನ್ನುವುದು ಮುಖ್ಯ.