ವಾಸ್ತವದಿಂದ ಪ್ರಾರಂಭಿಸೋಣ.

ಈ ನಾವೆಲ್ಲ ಅದು ಹೇಗೋ ಒಂದಲ್ಲ ಒಂದು ಮತ-ಧರ್ಮಕ್ಕೆ ಸೇರಿದವರಾಗಿದ್ದೇವೆ. ಹೀಗಿರುವುದು ನಮ್ಮ ಆಯ್ಕೆಯೇನೂ ಅಲ್ಲ; ಅಥವಾ ಕಾಣದ ದೇವರಿಗೆ ಯಾವತ್ತೋ ಅರ್ಜಿ ಸಲ್ಲಿಸಿದ್ದರ ಪರಿಣಾಮವೂ ಅಲ್ಲ! ಇದು ಕೇವಲ ಆಕಸ್ಮಿಕ. ಹೀಗೆ ಆಕಸ್ಮಿಕವಾಗಿ ಹುಟ್ಟಿಬಂದ ಹಾಗೂ ಯಾವುದೋ ಧರ್ಮವೊಂದನ್ನು ನಂಬಿಕೊಂಡ ಮತ್ತು ಆಚರಿಸುವ ಕುಟುಂಬವನ್ನೊಳಗೊಂಡ ಸಮುದಾಯ ಅಥವಾ ಸಮಾಜಕ್ಕೆ ಸೇರಿದ ನಾವು, ಆ ಧರ್ಮದ ಆಚಾರ-ವಿಚಾರ- ಶ್ರದ್ಧೆ ಇತ್ಯಾದಿಗಳ ಪರಂಪರೆಯೊಳಕ್ಕೆ ಬಂದ ನಾವು, ಇದೇ ರೀತಿ ನಮ್ಮ ಪರಿಸರದಲ್ಲಿ ಮತ್ತು ಅದರಾಚೆಯ ವಿಶಾಲ ಪ್ರಪಂಚದೊಳಗಿನ ದೇಶಗಳ ಸಮುದಾಯಗಳೂ ಹೀಗೆಯೇ ಯಾವುದೊ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರಾಗಿದ್ದಾರೆ ಎಂಬುದನ್ನು ಗುರುತಿಸುತ್ತೇವೆ. ಅಂತೂ ಜಗತ್ತಿನ ಜನಸಮುದಾಯವೆಲ್ಲ ಯಾವುದೋ ಒಂದು ಧರ್ಮಕ್ಕೆ ಸೇರಿದವರೆಂಬ ಹಿನ್ನೆಲೆಯಲ್ಲಿ ಧರ್ಮಕ್ಕೂ ಸಮಾಜಕ್ಕೂ ಇರುವ ಸಂಬಂಧಗಳನ್ನು ಕುರಿತು ಯೋಚಿಸುತ್ತೇವೆ.

ಧರ್ಮ ಎಂದ ಕೂಡಲೆ ಥಟ್ಟನೆ ಗೋಚರವಾಗುವ ಕೆಲವು ಲಕ್ಷಣಗಳು ಇವು: ಪ್ರತಿಯೊಂದು ಧರ್ಮದ ಹಿಂದೆ ಅದನ್ನು ಸ್ಥಾಪಿಸಿದ ಅಥವಾ ಪ್ರವರ್ತನಗೊಳಿಸಿದ ಒಬ್ಬ ವ್ಯಕ್ತಿ, ಆತ ಪ್ರವಾದಿಯೋ, ಸಂತನೋ, ಆಚಾರ್ಯನೋ, ಅವತಾರಪುರುಷನೋ ಇದ್ದಾನೆ. ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಅದು ಇತರ ಧರ್ಮಗಳಂತೆ ಯಾವ ಒಬ್ಬ ನಿರ್ದಿಷ್ಟವಾದ ವ್ಯಕ್ತಿಯಿಂದಲೂ ಸ್ಥಾಪಿತವಾದುದಲ್ಲ. ಅದು ಅನೇಕ ತತ್ವಜ್ಞಾನಿಗಳು ಪ್ರತಿಪಾದಿಸಿದ ಹಲವು ಪರ್ಯಾಯ ಚಿಂತನೆಗಳ ಒಂದು ಸ್ರೋತ ಅಥವಾ ಪ್ರವಾಹ ಎಂದು ಹೇಳಬಹುದು. ಎರಡನೆಯ ಲಕ್ಷಣವೆಂದರೆ, ಒಂದು ಧರ್ಮದ ಮೂಲದಲ್ಲಿ ಇರುವ ಈ ವ್ಯಕ್ತಿ ಅಥವಾ ಶಕ್ತಿ ಪ್ರತಿಪಾದಿಸಿದ ಆಧ್ಯಾತ್ಮಿಕ ಧಾರ್ಮಿಕ, ಸಾಮಾಜಿಕ ಸ್ವರೂಪದ ಮಾರ್ಗದರ್ಶಕ ತತ್ವಜ್ಞಾನ ಅಥವಾ ಬೋಧನೆಗಳನ್ನು ಒಳಗೊಂಡ ಗ್ರಂಥಗಳಿರುತ್ತವೆ. ನಿದರ್ಶನಕ್ಕೆ ಹೇಳುವುದಾದರೆ, ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಖುರಾನ್, ಹಿಂದೂಗಳಿಗೆ ಭಗವದ್ಗೀತೆ, ಬೌದ್ಧರಿಗೆ ತ್ರಿಪಿಟಕಗಳು, ವೀರಶೈವರಿಗೆ ವಚನಗಳು- ಸಿದ್ಧಾಂತ ಶಿಖಾಮಣಿ ಇವುಗಳನ್ನು ಹೆಸರಿಸಬಹುದು. ಮೂರನೆಯದು ಈ ಗ್ರಂಥಗಳನ್ನು ಕುರಿತು ಕಾಲದಿಂದ ಕಾಲಕ್ಕೆ ವ್ಯಾಖ್ಯಾನ ಬರೆದ ಆಚಾರ್ಯರಿದ್ದಾರೆ ಮತ್ತು ಬೋಧಕರಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಪ್ರತಿಯೊಂದು ಧರ್ಮಕ್ಕೂ ಒಂದು ದೇವರ ಕಲ್ಪನೆ ಇರುತ್ತದೆ. ಅದನ್ನು ಸಾಕಾರಗೊಳಿಸುವ ಗುಡಿಗಳೂ, ಮಠಗಳೂ ಇವೆ. ಇವುಗಳನ್ನು ಆಶ್ರಯಿಸಿಕೊಂಡ ಪೂಜಾರಿಗಳೂ, ಪುರೋಹಿತರೂ, ಗುರುಗಳೂ, ಅವರು ಹುಟ್ಟುಹಾಕಿದ ಪೂಜಾವಿಧಾನಗಳೂ ರಿಚ್ಯುಯಲ್ಲುಗಳೂ, ಅವುಗಳ ಜತೆಗೆ ಬೆಸೆದುಕೊಂಡ ಅತಿಮಾನುಷ ಕಲ್ಪನೆಗಳೂ, ಮತ್ತು ಭಕ್ತಾದಿಗಳೂ ಇರುತ್ತಾರೆ. ಇದು ಧರ್ಮ ಎಂದ ಕೂಡಲೆ ಕಣ್ಣಿಗೆ ಕಟ್ಟುವ ವಿವಿಧ ಸಂಗತಿಗಳ ಒಂದು ಹೆಣಿಗೆ ಅಥವಾ Network. ಇಲ್ಲಿ ಪ್ರತ್ಯೇಕವಾಗಿ ಹೇಳಬೇಕಾದ ಮಾತೇನೆಂದರೆ, ಎಲ್ಲ ಧರ್ಮಗಳಿಗೂ ಒಂದು ದೇವರ ಕಲ್ಪನೆ ಇದೆ ಎಂಬ ಮಾತು ಜೈನ ಹಾಗೂ ಬೌದ್ಧಧರ್ಮಗಳಿಗೆ ಅನ್ವಯಿಸುವುದಿಲ್ಲ. ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ದೇವನಾಗುವ ಅಧಿಕಾರ ಮತ್ತು ಅವಕಾಶಗಳಿವೆ ಎಂಬುದನ್ನು ಎತ್ತಿ ಹಿಡಿದ ಹೆಗ್ಗಳಿಕೆ ಜೈನಧರ್ಮಕ್ಕೆ ಇದೆ. ಬುದ್ಧ ಸ್ಥಾಪಿಸಿದ ಧರ್ಮ ದೇವರಿಲ್ಲದ ಧರ್ಮವಾಗಿತ್ತು. ದೇವರ ಮೇಲಿನ ನಂಬಿಕೆಯು ಧರ್ಮಕ್ಕೆ ಅನಿವಾರ್ಯವಾದುದೇನಲ್ಲ; ಕಣ್ಣೆದುರಿಗೆ ದುಃಖಭೂಯಿಷ್ಠವಾದ ಜಗತ್ತು ಇರುವಾಗ, ಅದನ್ನು ನಿರ್ಲಕ್ಷಿಸಿ ದೇವರನ್ನು ಕುರಿತು ಯೋಚಿಸುವುದು ನಿಷ್ಪ್ರಯೋಜಕ ಎಂದು ಹೇಳಿದ. ದೇವರು- ಗುರು-ಶಾಸ್ತ್ರ ಇತ್ಯಾದಿಗಳ ನೆರವಿಲ್ಲದೆಯೇ ಮನುಷ್ಯ ತನ್ನ ಬಿಡುಗಡೆಯ ದಾರಿಯನ್ನು ತಾನೇ ಕಂಡುಕೊಳ್ಳಬಲ್ಲ- ಎಂಬ ಮಾತನ್ನು ಜಗತ್ತಿನ ಚರಿತ್ರೆಯಲ್ಲಿ ಮೊಟ್ಟಮೊದಲಿಗೆ ಹೇಳಿದವನು ಬುದ್ಧ. ಜೈನ-ಬೌದ್ಧ ಧರ್ಮಗಳು ಮೂಲದಲ್ಲಿ ‘ದೇವರ’ ಬಗೆಗೆ ಏನೂ ಹೇಳದಿದ್ದರೂ, ಆಯಾ ಧರ್ಮಗಳವರಿಗೆ ತೀರ್ಥಂಕರರೂ, ಬುದ್ಧನೂ ದೇವತಾ ವಿಗ್ರಹಗಳಾಗಿ ಪರಿಣಮಿಸಿದರೆಂಬುದು ಬೇರೆಯ ಮಾತು.

ಇಂಥ ಯಾವುದಾದರೊಂದು ಧರ್ಮವನ್ನು ಒಪ್ಪಿಕೊಂಡ ಹಾಗೂ ಆಚರಿಸುವ ವಿವಿಧ ಜನಸಮುದಾಯ ಅಥವಾ ಒಂದು ಸಮಾಜ ಆಯಾ ಧರ್ಮದ ನಿರ್ದೇಶನಕ್ಕೆ ಅನುಗುಣವಾದ ಜೀವನಕ್ರಮವೊಂದನ್ನು ಅಥವಾ ಸಂಸ್ಕೃತಿಯನ್ನು ಕಟ್ಟಿಕೊಳ್ಳುತ್ತದೆ. ಮನುಷ್ಯನ ಅಸ್ತಿತ್ವಕ್ಕೆ ಒಂದು ನಂಬಿಕೆಯ ನೆಲೆಯನ್ನೂ ಸಾಮಾಜಿಕ ಸ್ವಾಸ್ಥ ವನ್ನೂ ಕಲ್ಪಿಸುವ ಧರ್ಮ ಎನ್ನುವುದು ಮನುಷ್ಯನ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆವಶ್ಯಕತೆಯ ಪರಿಣಾಮವಾಗಿದೆ. ಒಂದು ಕುಟುಂಬದ ವ್ಯಕ್ತಿಯಾಗಿ, ಒಂದು ಸಮಾಜದ ಸದಸ್ಯನಾಗಿ ಬದುಕಬೇಕಾದರೆ ಯಾವ ಯಾವ ಲೌಕಿಕ, ನೈತಿಕ, ಹಾಗೂ ಆಧ್ಯಾತ್ಮಿಕ ವಿಚಾರಗಳನ್ನೂ, ನಿಲುವುಗಳನ್ನೂ, ಮೌಲ್ಯಗಳನ್ನೂ ರೂಢಿಸುವುದರ ಮೂಲಕ ಒಂದು ಸಮಾಜದ ಎಲ್ಲರನ್ನೂ ಒಂದುಗೂಡಿಸುವ, ಒಂದು ವ್ಯವಸ್ಥೆಗೆ ತರುವ ವಿಧಾನವೇ ಧರ್ಮ. ‘ಯಾವುದು ಸಮಾಜಕ್ಕೆ ಒಂದು ಧಾರಣಶಕ್ತಿಯನ್ನು ತಂದುಕೊಡುತ್ತದೋ ಅದೇ ಧರ್ಮ’ ಎಂಬ ಸುಪ್ರಸಿದ್ಧ ಸಂಸ್ಕೃತೋಕ್ತಿಯ ಅರ್ಥವೇ ಇದು.

ಗಮನಿಸಬೇಕಾದ ಸಂಗತಿ ಎಂದರೆ ಜಗತ್ತಿನ ಎಲ್ಲ ಧರ್ಮಗಳೂ ಮನುಷ್ಯನು ತನಗಿಂತ ದೊಡ್ಡದಾದ ಆ ಪರಾತ್ಪರ ಅಥವಾ ದೇವರು ಒಬ್ಬನೇ  ಎಂದು ಹೇಳುತ್ತವೆ. ಮನುಷ್ಯರೆಲ್ಲರೂ ಸಮಾನರು ಎಂದು ಹೇಳುತ್ತವೆ. ಶಾಂತಿಯನ್ನು- ಕರುಣೆಯನ್ನು- ಪ್ರೀತಿಯನ್ನು ಒತ್ತಿ ಹೇಳುತ್ತವೆ. ಯಾವ ಧರ್ಮವೂ ಸಹಜೀವಿಗಳನ್ನು ಹಿಂಸಿಸಬೇಕೆಂದಾಗಲೀ ದ್ವೇಷಿಸಬೇಕೆಂದಾಗಲೀ ಹೇಳುವುದಿಲ್ಲ. ಬದಲು ಎಲ್ಲರನ್ನೂ ಪ್ರೀತಿಸಬೇಕೆಂದು ಹೇಳುತ್ತವೆ.

ಆದರೆ ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ಯಾಕೆ ಇಷ್ಟು ಸಂಘರ್ಷಗಳಾಗಿವೆ, ಯಾಕಿಷ್ಟು ರಕ್ತಪಾತವಾಗಿದೆ? ಮನುಷ್ಯರನ್ನು ಬೆಸೆಯಬೇಕಾದ ಈ ಧರ್ಮಗಳು ಯಾಕೆ ಧುತ್ತೆಂದು ಅಡ್ಡಗೋಡೆಗಳಾಗಿ ನಿಲ್ಲುತ್ತಿವೆ!

ಕಾರಣ, ಮನುಷ್ಯನ ಸ್ವಾರ್ಥ ಹಾಗೂ ಅವೈಚಾರಿಕತೆಗಳೇ. ಹಾಗೂ ಆ ಮೂಲಕ ಧರ್ಮದ ಸ್ವರೂಪವನ್ನು ಕುರಿತ ಹ್ರಸ್ವಬುದ್ಧಿಯ ಅಪವ್ಯಾಖ್ಯಾನಗಳೇ. ಈ ಪೂರ್ವಪೀಠಿಕೆಯ ಹಿನ್ನೆಲೆಯಲ್ಲಿ ಒಂದು ಧರ್ಮಕ್ಕೆ ಇರುವ ಸಾಮಾಜಿಕ ಜವಾಬ್ದಾರಿಯನ್ನು ಕುರಿತು ಕೆಲವು ಸಂಗತಿಗಳನ್ನು ಪ್ರಸ್ತಾಪಿಸೋಣ:

ದೇವರಾಗಲಿ, ದೇವಸ್ಥಾನಗಳಾಗಲಿ, ಧರ್ಮವಾಗಲಿ ಇರುವುದು ಮನುಷ್ಯರಿಂದ ಮನುಷ್ಯರಿಗಾಗಿ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ. ಯಾವುದೇ ಒಂದು ಧರ್ಮ ಸಮುದಾಯದ ಶ್ರೇಯಸ್ಸನ್ನು ಸಾಧಿಸಬೇಕಾದರೆ ಅದು ತನ್ನ ಸಮಾಜದ ಎಲ್ಲ ವರ್ಗದವರನ್ನೂ ಸಮಾನರೆಂದು ಪರಿಗಣಿಸುವುದು ಅದರ ಸಾಮಾಜಿಕ ಜವಾಬ್ದಾರಿಯಾಗಿದೆ. ಯಾಕೆಂದರೆ ನಿಜವಾದ ಧಾರ್ಮಿಕ ಮನಃಸ್ಥಿತಿ ಎಂದರೆ ಮನುಷ್ಯರೆಲ್ಲರ ಏಕತೆ ಹಾಗೂ ಸಮಾನತೆಯನ್ನು ಕಾಣುವ ಮತ್ತು ಕಟ್ಟುವ ನಿಲುವು.

ಎಲ್ಲ ಧರ್ಮಗಳೂ ಹೇಳುತ್ತವೆ: ಮನುಷ್ಯರೆಲ್ಲರೂ ಸಮಾನರು. ಆದರೆ ವಾಸ್ತವಸ್ಥಿತಿ ದೃಢಪಡಿಸುತ್ತದೆ: ಮನುಷ್ಯರೆಲ್ಲರೂ ಸಮಾನರಲ್ಲ. ಇವುಗಳಲ್ಲಿ ಮೊದಲನೆಯದು ‘ನಿಜವಾದ ಸತ್ಯ’, ಎರಡನೆಯದು ಸಾಮಾಜಿಕ ಸತ್ಯ. ಆದರೆ ಈ ಎರಡೂ ಒಂದಕ್ಕೊಂದು ವಿರುದ್ಧವಾದ ಸಂಗತಿಗಳಾದ ಕಾರಣ ಒಂದು ನಿಜ, ಮತ್ತೊಂದು ಸುಳ್ಳು. ಮೊದಲನೆಯದು ‘ಸಹಜ’ ಸತ್ಯ; ಎರಡನೆಯದು ‘ಕೃತಕ’. ನಿಜವಾದ ಸತ್ಯವನ್ನು ಸಾಮಾಜಿಕ ನೆಲೆಯಲ್ಲಿ ಹೀಗೆ ‘ಕೃತಕ’ವನ್ನಾಗಿ ಮಾಡಿದ್ದು, ಅಥವಾ ಬೇರೊಂದು ಮಾತಿನಲ್ಲಿ ಹೇಳುವುದಾದರೆ, ನಿಜವಾಗಿಯೂ ಸಮಾನರಾದ ಮನುಷ್ಯರನ್ನು, ಸಮಾನರಲ್ಲವೆಂಬಂತೆ ವಿಭಜನೆ ಮಾಡಿದ್ದು ಮನುಷ್ಯನ ಸ್ವಾರ್ಥ ಮತ್ತು ಅಹಂಕಾರ. ಧರ್ಮದ ಹೆಸರಿನಲ್ಲಿ ಇದನ್ನು ಸಮರ್ಥಿಸುವುದಂತೂ ಬೌದ್ಧಿಕ ಅಪ್ರಮಾಣಿಕತೆಯಂತೆ ತೋರುತ್ತದೆ. ಇದಕ್ಕೆ ಕೂಡಲೆ ದೊರೆಯುವ ನಿದರ್ಶನವೆಂದರೆ ಹಿಂದೂ- ವೈದಿಕ ಧರ್ಮದ ಚಾತುರ್ವರ್ಣ ವ್ಯವಸ್ಥೆ. ಇದು ಸ್ಥಾಪಿಸಿದ ಶ್ರೇಣೀಕರಣದಲ್ಲಿ ಕೆಲವರು ಶ್ರೇಷ್ಠರು, ಕೆಲವರು ಕನಿಷ್ಠರು. ಕೆಲವರು ಮಾತ್ರ ಎಲ್ಲ ಬಗೆಯ ಸವಲತ್ತುಗಳಿಗೂ ಅರ್ಹರು; ಮತ್ತೆ ಕೆಲವರು ಯಾವ ಸವಲತ್ತುಗಳಿಗೂ ಅರ್ಹರಲ್ಲ. ಇಂಥ ನಿಲುವನ್ನು ಪ್ರತಿಪಾದಿಸುವ ವ್ಯವಸ್ಥೆ ಮನುಷ್ಯರ ಸಮಾನತೆಯ ಪರವಾಗಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಅಷ್ಟೇ ಅಲ್ಲ ಈ ವ್ಯವಸ್ಥೆಯಲ್ಲಿ ಯಾವ ಯಾವುದು ಎಲ್ಲೆಲ್ಲಿ ಇರಬೇಕೋ ಅದು ಅಲ್ಲಲ್ಲಿಯೇ ಇರಬೇಕು. ಈ ವ್ಯವಸ್ಥೆಯಲ್ಲಿ ಸಂಕರವಾಗದಂತೆ ಅಂದರೆ ಒಂದು ವರ್ಣ ಮತ್ತೊಂದರೊಳಗೆ ಅತಿಕ್ರಮಿಸದಂತೆ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಬರುವುದು ರಾಜರಾದವರ ಕರ್ತವ್ಯ ಮತ್ತು ಧರ್ಮ ಎಂದು ನೀತಿಶಾಸ್ತ್ರಜ್ಞರು ಶಾಸನಗಳನ್ನು ಬರೆದರು. ಅಷ್ಟೇ ಅಲ್ಲ, ಶತಶತಮಾನಗಳಿಂದ ಭಾಷ್ಯಗಳ ಮೇಲೆ ಭಾಷ್ಯಗಳನ್ನು ಬರೆದ ಯಾವ ಆಚಾರ್ಯರೂ, ಸಾಮಾಜಿಕ ಅಸಮಾನತೆಯನ್ನು ನಿರಂತರವಾಗಿ ಉಳಿಸುವ ಈ ವರ್ಣವ್ಯವಸ್ಥೆಯನ್ನು ತಪ್ಪು ಎನ್ನಲಿಲ್ಲ. ಬದಲಾಗಿ ಅದನ್ನು ಭದ್ರಪಡಿಸಿ ಸಮರ್ಥಿಸಿದರು. ವೈಯಕ್ತಿಕ ನೆಲೆಯಲ್ಲಿ, ‘ಸರ್ವಂ ಖಲ್ವಿದಂ ಬ್ರಹ್ಮಂ’ ಎಂದೂ, ಮಾನವಿಕ ನೆಲೆಯಲ್ಲಿ ‘ಸರ್ವೇಜನಾಃ ಸುಖಿನೋ ಭವಂತು’ ಎಂದೂ ಘೋಷಿಸುವ ಈ ಆಚಾರ್ಯರು, ಸಾಮಾಜಿಕ ನೆಲೆಯಲ್ಲಿ ವರ್ಣವ್ಯವಸ್ಥೆಯ ಪರವಾಗಿ ನಿಲ್ಲುವುದು ಒಂದು ವಿಪರ‍್ಯಾಸವಾಗಿದೆ. ಇದಕ್ಕೆ ಕಾರಣ ಧರ್ಮ ಮತ್ತು ಸಮಾಜಗಳನ್ನು ಪ್ರತ್ಯೇಕವಾಗಿ ಇರಿಸಿ ಸಿದ್ಧಾಂತಗಳನ್ನು ರೂಪಿಸುವ ಬೌದ್ಧಿಕ ದ್ವಂದ್ವವೇ ಎನ್ನಬಹುದು.

ಒಂದು ಗಮನಿಸಬೇಕಾದ ಸಂಗತಿ ಎಂದರೆ ಭಾರತದ ಚರಿತ್ರೆಯನ್ನು ನೋಡಿದರೆ, ಅದರ ರಾಜ್ಯ ವ್ಯವಸ್ಥೆಗಳಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಅದರ ಸಾಮಾಜಿಕ ವ್ಯವಸ್ಥೆ ಮಾತ್ರ ಶತಮಾನಗಳ ಕಾಲ ಹೆಚ್ಚು ಬದಲಾಗದೆ ೧೯ನೆಯ ಶತಮಾನದವರೆಗೂ ಸ್ಥಗಿತಗೊಂಡದ್ದಕ್ಕೆ ವರ್ಣಾಶ್ರಮ ಅಥವಾ ಜಾತಿ ವಿಂಗಡಣೆಯೆ ಕಾರಣ ಎನ್ನುತ್ತಾನೆ ಕಾರ್ಲ್‌ಮಾರ್ಕ್ಸ್. ೨೦ನೆಯ ಶತಮಾನದ ಭಾರತೀಯ ಪುನರುಜ್ಜೀವನದ ನಂತರ, ಕೈಗಾರೀಕರಣ, ಶಿಕ್ಷಣ ಇತ್ಯಾದಿಗಳ ಕಾರಣದಿಂದ ಚಾತುರ್ವರ್ಣ ಎಂಬುದು ಸಾಕಷ್ಟು ಸಡಿಲವಾಗಿದೆ. ಮೀಸಲಾತಿ, ಅಂತರ್‌ಜಾತೀಯ ವಿವಾಹಗಳಿಂದ ವರ್ಣ ವ್ಯವಸ್ಥೆಯ ಪರವಾದ ನಿಲುವು ಬದಲಾಗಿದೆ. ಆದರೆ ಯಾವ ಧಾರ್ಮಿಕ ವ್ಯವಸ್ಥೆ ಒಂದು ಸಮಾಜದ ಕೆಲವರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುತ್ತ, ಇನ್ನುಳಿದ ಬಹುಸಂಖ್ಯಾತ ಸ್ತರಗಳವರನ್ನು ಸದಾ ಶೋಷಣೆಗೆ ಗುರಿಪಡಿಸುತ್ತ, ಮೇಲೆ ಮಾತ್ರ ಸರ್ವರ ಸಮಾನತೆಯ ಹುಸಿ ಘೋಷಣೆಗಳನ್ನು ಮಾಡುತ್ತದೆಯೋ ಆ ಧರ್ಮ ಸಾಮಾಜಿಕ ಜವಾಬ್ದಾರಿಯುಳ್ಳದೆಂದು ಹೇಗೆ ಹೇಳುವುದು? ಭಗವಾನ್ ಬುದ್ಧ ಮೊಟ್ಟಮೊದಲ ಬಾರಿಗೆ ಮನುಷ್ಯರ ಸಮಾನತೆಯ ಪರವಾಗಿ ಮಾತನಾಡಿದ. ತನ್ನ ಸಂಘಕ್ಕೆ ಸೇರಿದವರನ್ನು ಕುರಿತು ಬುದ್ಧ ಹೇಳಿದ:

‘ನೀವೆಲ್ಲರೂ ಸಮಾನರು. ಸಮುದ್ರಕ್ಕೆ ಹಲವು ದಿಕ್ಕುಗಳಿಂದ ನದಿಗಳು ಹರಿದು ಬರುತ್ತವೆ. ಕಡಲನ್ನು ಕೂಡುವ ಮೊದಲು ಅವುಗಳಿಗೆ ತಮ್ಮದೇ ಆದ ಪಾತ್ರರೂಪಗಳೂ, ಹೆಸರುಗಳೂ – ಗಂಗಾ ಸಿಂಧೂ ಯಮುನಾ ಸರಸ್ವತಿ ಹೀಗೆ- ಇರುತ್ತವೆ. ಅವೆಲ್ಲ ಸಮುದ್ರವನ್ನು ಸೇರಿದ ಮೇಲೆ ತಮ್ಮ ಹೆಸರು ಆಕಾರಗಳನ್ನು ಕಳೆದುಕೊಂಡು ಸಮುದ್ರವೇ ಆಗಿಬಿಡುತ್ತವೆ. ಹಾಗೆ ನೀವು ಒಪ್ಪಿಕೊಂಡ ಧರ್ಮದಿಂದಾಗಿ ನೀವೆಲ್ಲ ಒಂದೇ.’

ಮಾನವ ಜನಾಂಗವೆಲ್ಲ ಒಂದೇ ಎಂಬ ಕಲ್ಪನೆಯನ್ನು ಜಗತ್ತಿನ ಚರಿತ್ರೆಯಲ್ಲಿ ಮೊಟ್ಟಮೊದಲಿಗೆ ಘೋಷಿಸಿದವನು ಭಗವಾನ್ ಬುದ್ಧನೇ. ಏಸುಕ್ರಿಸ್ತ ಮನುಷ್ಯರ ಸಮಾನತೆಯ ಪರವಾಗಿ ಮಾತನಾಡಿದ; ಗುರುನಾನಕ್ ಕಬೀರರು ಮನುಷ್ಯರ ಸಮಾನತೆಯ ಪರವಾಗಿ ಮಾತನಾಡಿದರು; ಬಸವಣ್ಣನವರು ಹಿಂದೂ ವೈದಿಕ ಧರ್ಮದ ಚಾತುರ್ವರ್ಣ ವ್ಯವಸ್ಥೆಯನ್ನು ವರ್ಣಸಂಕರದ ಮೂಲಕ ಸ್ಫೋಟಿಸಿ ಶರಣಧರ್ಮದ ಚೌಕಟ್ಟಿನಲ್ಲಿ ಮನುಷ್ಯರ ಸಮಾನತೆಯನ್ನು ಸ್ಥಾಪಿಸಲು ಪ್ರಯತ್ನಿಸಿದರು.

ಒಂದು ಧರ್ಮದ ಸಾಮಾಜಿಕ ಜವಾಬ್ದಾರಿ ಎಂದರೆ, ಸಮಾಜದ ಕನಿಷ್ಠ ಘಟಕವಾದ ಕುಟುಂಬ ಜೀವನದ ಸದಸ್ಯರಲ್ಲಿ ಏಕತೆಯನ್ನು ಸಾಧಿಸುವುದು. ಅಂದರೆ ಕುಟುಂಬದ ಗಂಡು-ಹೆಣ್ಣುಗಳಿಬ್ಬರಿಗೂ ಸಾಮಾಜಿಕವಾಗಿ ಆಧ್ಯಾತ್ಮಿಕವಾಗಿ ಸಮಾನವಾದ ಅಧಿಕಾರ ಮತ್ತು ಅವಕಾಶಗಳಿವೆ ಎಂಬುದನ್ನು ಎತ್ತಿ ಹಿಡಿಯುವುದು.

ಆದರೆ ನಮಗೆ ತೋರುವ ಮಟ್ಟಿಗೆ ಜಗತ್ತಿನ ಯಾವ ಧರ್ಮವೂ ಮಹಿಳೆಯರು ಪುರುಷರಿಗೆ ಸಮಾನ ಎಂಬ ಉದಾರತೆಯಿಂದ ನಡೆದುಕೊಂಡಿಲ್ಲ. ಮಹಿಳೆ ಪುರುಷನಿಗೆ ಅಧೀನಳೆಂಬಂತೆಯೋ, ಒಂದು ವಸ್ತುವೆಂಬಂತೆಯೋ ನಡೆಯಿಸಿ ಕೊಳ್ಳಲ್ಪಟ್ಟಿದ್ದಾಳೆ. ಅರಿಸ್ಟಾಟಲ್‌ನಂತಹ ತತ್ವಜ್ಞಾನಿ ಮಹಿಳೆಯರ ಬಾಯಲ್ಲಿ ಪುರುಷರಿಗಿರುವಷ್ಟು ಸಂಖ್ಯೆಯ ಹಲ್ಲುಗಳಿಲ್ಲ ಎಂದು ತಿಳಿದಿದ್ದನಂತೆ!

ಹಿಂದೂ ವೈದಿಕ ಧರ್ಮದ ಪ್ರಕಾರ ಮಹಿಳೆ ಪುರುಷನಷ್ಟು ಶ್ರೇಷ್ಠಳಲ್ಲ; ಪುರುಷರಿಗಿರುವಷ್ಟು ಆಧ್ಯಾತ್ಮಿಕ ಅಧಿಕಾರಗಳಿಲ್ಲ; ಪತಿಯೆ ಪರದೈವ; ಅವಳು ಸದಾ ತಂದೆತಾಯಂದಿರ, ಗಂಡನ ಹಾಗೂ ಮಕ್ಕಳ ಅಧೀನ; ಆದಕಾರಣ ಆಕೆ ಸ್ವಾತಂತ್ರ ಕ್ಕೆ ಅರ್ಹಳಲ್ಲ. ಆಕೆ ತಪೋವಿಘ್ನಕಾರಿ; ಮಾಯೆ. ಹಿಂದೆ, ಮೈತ್ರೇಯಿ, ಗಾರ್ಗಿ ಮೊದಲಾದ ಬ್ರಹ್ಮವಾದಿನಿಯರಿದ್ದರೆಂದು ಹೇಳಲಾಗಿದ್ದರೂ, ‘ಸ್ತ್ರೀಶೂದ್ರಾದಿಗಳಿಗೆ ವೇದಾಧ್ಯಯನದ ಅಧಿಕಾರವಿಲ್ಲ’ ಎಂಬ ನೀತಿಶಾಸ್ತ್ರಕಾರರ ಮಾತು ಸಮಾಜದಲ್ಲಿ ಅವಳ ಸ್ಥಾನ-ಮಾನಗಳನ್ನು ನಿರ್ದೇಶಿಸುತ್ತದೆ. ಕ್ರೈಸ್ತಧರ್ಮದ ಪ್ರಕಾರ- ಹೆಣ್ಣು, ಗಂಡಿನ ಪತನಕ್ಕೆ ಕಾರಣಳಾದವಳು. ಇಸ್ಲಾಂ ಧರ್ಮದ ಪ್ರಕಾರ ಆಕೆ ಒಂದು  ಸ್ವತ್ತು; ಶೋಷಣೆಯ ವಸ್ತು. ಬುದ್ಧ ಕೂಡಾ ಮೊದಮೊದಲು ಹೆಣ್ಣು ಸಂಘಕ್ಕೆ ಸೇರುವುದು ಬೇಡ ಎಂದ; ಜೈನಧರ್ಮದ ಪ್ರಕಾರ ಸ್ತ್ರೀಯರು ಮೋಕ್ಷಕ್ಕೆ ಅರ್ಹರಲ್ಲ; ಹನ್ನೆರಡನೆಯ ಶತಮಾನದ ಕರ್ನಾಟಕದ ಶರಣ ಧರ್ಮ ಮಾತ್ರ ‘ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು; ನಡುವೆ ಸುಳಿವಾತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ’ ಎಂದು ಆತ್ಮ ಪ್ರಾಮಾಣ್ಯದ ಮೂಲಕ ಲಿಂಗಭೇದವನ್ನು ನಿರಾಕರಿಸಿ ಒಂದು ಚಾರಿತ್ರಿಕ ವಿಕ್ರಮವನ್ನೆ ಸ್ಥಾಪಿಸಿತೆಂಬುದನ್ನು ಗಮನಿಸುವುದು ಅಗತ್ಯವಾಗಿದೆ.

ಧರ್ಮಕ್ಕೆ ಇರುವ ಸಾಮಾಜಿಕ ಜವಾಬ್ದಾರಿ ಎಂದರೆ ಅದು ಲೋಕವಾಸ್ತವ ಜೀವನದ ಬಗ್ಗೆ ಯಾವ ಬಗೆಯ ನಿಲುವನ್ನು ಪ್ರತಿಪಾದಿಸುತ್ತದೆ ಎನ್ನುವುದು. ಬೇರೆಯ ಮಾತಿನಲ್ಲಿ ಹೇಳುವುದಾದರೆ ಅದು ಹೆಚ್ಚು ಒತ್ತನ್ನು ಕೊಡುವುದು ಇಹನಿಷ್ಠ ನಿಲುವಿಗೋ ಪರನಿಷ್ಠ ನಿಲುವಿಗೋ?

ಜಗತ್ತಿನ ಎಲ್ಲ ಧರ್ಮಗಳೂ ಜೀವ- ಜಗತ್ತು- ದೇವರು ಈ ಮೂರರ ಸಂಬಂಧವನ್ನು ಕುರಿತು ಚರ್ಚಿಸುತ್ತ, ಮನುಷ್ಯನ ಗುರಿ ಆ ದೈವತ್ವದ ಸಾಕ್ಷಾತ್ಕಾರವೇ ಮತ್ತು ಅದನ್ನು ಸಾಧಿಸಲು ತನ್ನ ಈ ಲೋಕದ ಬದುಕನ್ನು ಅದಕ್ಕೆ ತಕ್ಕ ಸಾಧನೆಯ ನೆಲೆಯನ್ನಾಗಿ ಮಾಡಿಕೊಳ್ಳಬೇಕು – ಎಂದು ಹೇಳುತ್ತವೆ. ಇದರ ಜತೆಗೆ ಈ ಲೋಕದ ಬದುಕನ್ನು ಇಹ ಮತ್ತು ಪರ ಎಂದು ವಿಭಾಗಿಸಿ ಅನೇಕ ವೇಳೆ ಪರಲೋಕದ ಅಥವಾ ಸ್ವರ್ಗದ ಆಕರ್ಷಣೆಯನ್ನು ಮುಂದೆ ಮಾಡಿ, ವಾಸ್ತವ ಜಗತ್ತಿನ ಬಗ್ಗೆ ಒಂದು ಬಗೆಯ ನಿರಾಕರಣೆಯ ಅಥವಾ ತಿರಸ್ಕಾರದ ನಿಲುವನ್ನು ಬೆಳೆಯಿಸಿವೆ. ನಮ್ಮಲ್ಲಂತೂ ಮನುಷ್ಯನ ಬದುಕೇನಿದ್ದರೂ ಪರಕ್ಕೆ ಟಿಕೇಟ್ ತೆಗೆದುಕೊಂಡು ಇಹದ ವೇಟಿಂಗ್ ರೂಮಿನಲ್ಲಿ  ರೈಲಿಗೆ ಕಾಯುತ್ತ ಕೂತಂತ ಮನಃಸ್ಥಿತಿಯನ್ನು ಬಿಂಬಿಸುವಂತೆ ಭಾಸವಾಗುತ್ತದೆ. ‘ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ’ ಎಂಬ ದಾಸರ ಉಕ್ತಿ ಈ ಮನೋಧರ್ಮದ ಸಾಕ್ಷಿಯಾಗಿದೆ. ತೀವ್ರ ವೈರಾಗ್ಯವನ್ನು ಪ್ರತಿಪಾದಿಸುತ್ತ, ಲೋಕಜೀವನದ ಬಗ್ಗೆ ಒಂದು ಬಗೆಯ ವಿಮುಖತೆಯನ್ನು ಬೆಳೆಯಿಸಿದ ಬೌದ್ಧ – ಜೈನಧರ್ಮಗಳ ನಿಲುವೂ ಹೆಚ್ಚು- ಕಡಿಮೆ ಹೀಗೇ ಇದೆ. ನಿಜವಾದ ಧರ್ಮವಾಗಲೀ ಧಾರ್ಮಿಕ ಜೀವನವಾಗಲೀ ಜೀವನಪ್ರೀತಿಯನ್ನು ಹಾಗೂ ಬದುಕನ್ನೆದುರಿಸುವ ಧೈರ್ಯವನ್ನು ವ್ಯಕ್ತಿಗಳಲ್ಲಿ ಬಿತ್ತುವುದೆ ಅದರ ಸಾಮಾಜಿಕ ಜವಾಬ್ದಾರಿಗಳಲ್ಲಿ ಮುಖ್ಯವಾದದ್ದು. ಮಹಾ ಅನುಭಾವಿ ಅಲ್ಲಮಪ್ರಭು ಹೇಳಿದ ಮಾತೊಂದು ನೆನಪಾಗುತ್ತದೆ: “ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದ ಬಯಸುವವರು ವೀರರೂ ಅಲ್ಲ, ಧೀರರೂ ಅಲ್ಲ.”

ಈ ಲೋಕಜೀವನವನ್ನು ಒಪ್ಪಿಕೊಳ್ಳಬೇಕು ಎಂದರೆ ಒಬ್ಬ ಧಾರ್ಮಿಕ ಮನುಷ್ಯ ತನ್ನ ಪಾಡಿಗೆ ತಾನು ಬದುಕುತ್ತ ಜಪತಪಾದಿಗಳಲ್ಲಿ ಮಗ್ನವಾಗುತ್ತ ತನ್ನ ಮೋಕ್ಷವನ್ನು ತಾನು ಗಳಿಸಿಕೊಳ್ಳುವುದು ಎಂದಲ್ಲ. ಆತ ಈ ಜಗತ್ತಿನ ಸಹಜೀವಿಗಳ ದುಃಖಕ್ಕೆ ಸ್ಪಂದಿಸುತ್ತ ಅವರ ನೋವನ್ನು, ಅಜ್ಞಾನವನ್ನು ನಿವಾರಿಸುತ್ತ ‘ಬಹುಜನಹಿತ’ಕ್ಕಾಗಿ ಶ್ರಮಿಸುವುದು ಆತನ ಸಾಮಾಜಿಕ ಜವಾಬ್ದಾರಿಯಾಗಿದೆ. ‘ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನವನ್ನು ನೀಡಲಾರದ, ವಿಧವೆಯ ಕಣ್ಣೀರನ್ನು ಒರೆಸಲಾಗದ ಧರ್ಮದಲ್ಲಾಗಲೀ, ದೇವರಲ್ಲಾಗಲೀ ನನಗೆ ನಂಬಿಕೆಯಿಲ್ಲ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು ಈ ಅರ್ಥದಲ್ಲಿ. ಭಗವಾನ್ ಬುದ್ಧನ ಜೀವಕಾರುಣ್ಯದ ಹಾಗೂ ಏಸುಕ್ರಿಸ್ತನು ಬೋಧಿಸಿದ ಹಾಗೂ ಬದುಕಿದ ಧರ್ಮದ ಸ್ವರೂಪ ಈ ಬಗೆಯದೇ. ಧರ್ಮ ಎಂದರೆ ಮನುಷ್ಯನ ವಾಸ್ತವ ಬದುಕನ್ನು ಸುಧಾರಿಸುತ್ತ, ಅವನೊಳಗಿನ ಪರಮಾರ್ಥದ ಹಂಬಲವನ್ನು ಜಾಗ್ರತಗೊಳಿಸುತ್ತ ಮಾನವ ಪ್ರೇಮವನ್ನು ವಿಸ್ತರಿಸುತ್ತ, ಅವನನ್ನು ಸಹಜೀವಿಗಳ ಸೇವೆಯಲ್ಲಿ ತೊಡಗಿಸುವ ಒಂದು ಸತ್ವವೇ ಸರಿ.

ಧರ್ಮ ಎಂದರೆ Man making ಎಂದು ಸ್ವಾಮಿ ವಿವೇಕಾನಂದರು ಸೂತ್ರೀಕರಿಸುತ್ತಾರೆ. ಆದರೆ ಈ ಮನುಷ್ಯ ಇಹ-ಪರಗಳ ನಡುವೆ ಹರಿದು ಹಂಚಿಹೋಗಿದ್ದಾನೆ; ಶ್ರೇಣೀಕರಣದ ನಡುವೆ ಛಿದ್ರವಾಗಿದ್ದಾನೆ; ಅರ್ಥಹೀನವಾದ ಆಚರಣೆಗಳ ಸೀಗೇಮೆಳೆಯಲ್ಲಿ ಸಿಕ್ಕಿಕೊಂಡಿದ್ದಾನೆ; ಸಾಂಪ್ರದಾಯಿಕವಾದ ವಿಚಾರಗಳ ಸಂಕೋಲೆಯಲ್ಲಿ ಸೆರೆಯಾಗಿದ್ದಾನೆ; ಅವೈಚಾರಿಕತೆಯಲ್ಲಿ ಸ್ಥಗಿತಗೊಂಡಿದ್ದಾನೆ. ಈ ಮನುಷ್ಯನನ್ನೂ, ಅವನನ್ನು ಒಳಕೊಂಡ ಸಮಾಜವನ್ನೂ ವೈಚಾರಿಕವಾಗಿ ಬೆಳೆಯುವಂತೆ ಮಾಡುವುದು ಯಾವುದೇ ಧರ್ಮಕ್ಕೆ ಇರುವ ಸಾಮಾಜಿಕ ಜವಾಬ್ದಾರಿಗಳಲ್ಲಿ ಬಹುಮುಖ್ಯವಾದದ್ದು.

ಕೇವಲ ಭಜನೆ ಮಾಡುವ ಬಾಯಿಗಳನ್ನು ಪ್ರೋತ್ಸಾಹಿಸುವ ಮಠೀಯ ಪರಿಸರದಲ್ಲಿ, ವಿಚಾರ ಮಾಡುವ ತಲೆಗಳನ್ನು ತಯಾರಿಸುವುದು ಸುಲಭವಾದ ಕೆಲಸವಲ್ಲ. ತಿರುಪತಿ ತಿಮ್ಮಪ್ಪನಿಗೆ ಪಚ್ಚೆಯ ಪದಕವನ್ನು ಮಾಡಿಸುವುದಾಗಲಿ, ಉಡುಪಿ ಕೃಷ್ಣನನ್ನು ಚಿನ್ನದ ರಥದಲ್ಲಿ ಕೂರಿಸಿ ಉತ್ಸವ ಮಾಡುವುದಾಗಲಿ, ಕೃಷ್ಣನಿಗೆ ವಜ್ರದ ಕವಚವನ್ನು ತೊಡಿಸಿ ರೋಮಾಂಚನಗೊಳ್ಳುವುದಾಗಲಿ, ಜಗದ್ಗುರುಗಳು ಚಿನ್ನದ ಕಿರೀಟ ಧರಿಸಿ ಅಡ್ಡಪಲ್ಲಕ್ಕಿ ಉತ್ಸವಗಳಲ್ಲಿ ಮೆರೆಯುವುದಾಗಲಿ, ಈ ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನ ಬಡತನದ ರೇಖೆಯೊಳಗೆ ಬದುಕುತ್ತಿರುವ ಸಾಮಾಜಿಕ ಪರಿಸರದಲ್ಲಿ ಅತ್ಯಂತ ಅಮಾನವೀಯವೂ ಅವೈಚಾರಿಕವೂ ಆದ ನಡವಳಿಕೆಗಳಾಗಿವೆ. ಅದಕ್ಕಾಗಿ ಒಂದು ಸಮಾಜದ ಸದಸ್ಯರು, ಪರಂಪರಾಗತವಾದ ವಿಚಾರಗಳನ್ನು ಕುರಿತು, ನಂಬಿಕೆಗಳನ್ನು ಕುರಿತು, ಜೀವವಿರೋಧಿಯಾದ ನಿಲುವುಗಳನ್ನು ಕುರಿತು, ಧರ್ಮದ ಹೆಸರಿನಲ್ಲಿ ಪುರೋಹಿತಶಾಹಿಯ ಶೋಷಣೆಗೆ ಅವಕಾಶವಾಗುವ ಸಂದರ್ಭಗಳನ್ನು ಕುರಿತು ಸ್ಪಷ್ಟವಾಗಿ ಹಾಗೂ ಧೈರ್ಯದಿಂದ ವಿಚಾರಮಾಡುವ ಪರಿಸರ ಮತ್ತು ವಾತಾವರಣವನ್ನು ನಿರ್ಮಿಸುವುದು ಧರ್ಮದ ಸಾಮಾಜಿಕ ಜವಾಬ್ದಾರಿಯಾಗಿದೆ. ಭಗವಾನ್ ಬುದ್ಧ ಮತ್ತು ಬಸವ ಈ ಬಗೆಯ ಕೆಲಸವನ್ನು ಮಾಡಿದವರಲ್ಲಿ ಮುಖ್ಯವಾದವರು. ಬುದ್ಧ ಹೇಳಿದ:

‘ಅವರಿವರು ಹೇಳಿದ್ದಾರೆ ಎಂಬ ಕಾರಣಕ್ಕೆ ಯಾವುದನ್ನೂ ಒಪ್ಪಬೇಡ. ಪರಂಪರಾಗತವಾಗಿ ಬಂದದ್ದೆಂಬ ಕಾರಣಕ್ಕೆ ಒಪ್ಪಬೇಡ; ಶಾಸ್ತ್ರಗಳಲ್ಲಿ ಹೇಳಿದೆ ಎಂಬ ಕಾರಣಕ್ಕೆ ಒಪ್ಪಬೇಡ; ಆಚಾರ‍್ಯರು ಹೇಳಿದ್ದಾರೆ ಎಂಬ ಕಾರಣಕ್ಕೆ ಒಪ್ಪಬೇಡ. ಆದರೆ ಯಾವುದು ಮೌಲಿಕವಾದದ್ದೆಂದು, ಉಪಯುಕ್ತವಾದದ್ದೆಂದು ನಿನಗೆ ತೋರುತ್ತದೊ ಅದನ್ನು ಮಾತ್ರ ಒಪ್ಪಿಕೋ’. ಹಾಗಾದರೆ ಬುದ್ಧ ಹೇಳಿದ್ದನ್ನು ಮಾತ್ರ ಒಪ್ಪಿಕೊಳ್ಳಬೇಕೆ ಎಂದು ಪ್ರಶ್ನಿಸಿದವರಿಗೆ ಹೇಳಿದ: “ನಾನು ಹೇಳಿದ್ದನ್ನು ಕೂಡ ಒಪ್ಪಬೇಕಾಗಿಲ್ಲ” – ಎಂಥ ಧೈರ್ಯದ ಹಾಗೂ ವಿನಯದ ಮಾತು!

ಹೀಗೆ ಒಂದು ವೈಚಾರಿಕ ವಾತಾವರಣವನ್ನು ನಿರ್ಮಾಣ ಮಾಡಬೇಕಾದರೆ ಪ್ರತಿಯೊಂದು ಧರ್ಮವೂ ತನ್ನ ಕಾಲದ ಅಗತ್ಯಗಳಿಗೆ ತಕ್ಕಂತೆ ‘ನಿರಾಕರಣ ಪ್ರಕ್ರಿಯೆ’ ‘ಶುದ್ಧೀಕರಣ ಪ್ರಕ್ರಿಯೆ’ ಮತ್ತು ‘ನವೀಕರಣ ಪ್ರಕ್ರಿಯೆ’ಗಳ ಮೂಲಕ ತನ್ನನ್ನು  ತಾನು ಪುನರ್ಭವಗೊಳಿಸಿಕೊಳ್ಳುವುದು ಅಗತ್ಯವಾಗಿದೆ.

ಒಂದು ಧರ್ಮಕ್ಕೆ ಇರುವ ಸಾಮಾಜಿಕ ಜವಾಬ್ದಾರಿಗಳಲ್ಲಿ ತುಂಬ ಮುಖ್ಯವಾದದ್ದೆಂದರೆ: ತನ್ನ ಸಮಾಜದ ಸದಸ್ಯರನ್ನು ಸ್ವಧರ್ಮದ ಅಹಂಕಾರದಿಂದ ವಿಮುಕ್ತಿಗೊಳಿಸುವುದು. ಅಂದರೆ ತನ್ನ ಧರ್ಮದಷ್ಟೆ ಜಗತ್ತಿನ ಉಳಿದೆಲ್ಲ ಧರ್ಮಗಳೂ ಸತ್ಯ ಹಾಗೂ ಶ್ರೇಷ್ಠ ಎಂಬ ತಿಳಿವಳಿಕೆಯನ್ನು ರೂಢಿಸುವುದು. ತನ್ನ ಧರ್ಮವೊಂದೇ ಶ್ರೇಷ್ಠ, ಉಳಿದವು ಅಷ್ಟು ಶ್ರೇಷ್ಠವಲ್ಲ ಎಂದು ತಿಳಿದ ಸಮಾಜ ಯಾವೊತ್ತೂ ವೈಚಾರಿಕವಾಗಿ ಬೆಳೆಯಲಾರದು. ಈ ಸಂದರ್ಭದಲ್ಲಿ ಧರ್ಮವನ್ನು ಕುರಿತು ಭಗವಾನ್ ಬುದ್ಧನು ಹೇಳಿದ ಮಾತೊಂದನ್ನು ನೆನೆಯಬಹುದು. ಅವನು ಹೇಳುತ್ತಾನೆ:

ನನ್ನ ಧರ್ಮವೇ ಶ್ರೇಷ್ಠವೆಂದು ನಾನು ಹೇಳುವುದಿಲ್ಲ.
ನೀನು ಹೋಗಿ ಇತರ ಧರ್ಮಗಳವರನ್ನು ಕೇಳಿ ಬಾ
ಆಮೇಲೆ ನನ್ನನ್ನು ಕೇಳು.
ಯಾವ ಧರ್ಮ ಅತ್ಯುತ್ತಮವೆಂದು ನಿನಗೆ ತೋರುತ್ತದೋ
ಅದನ್ನು ಅನುಸರಿಸು.

ಎರಡು ಸಾವಿರದ ಐನೂರು ವರ್ಷಗಳಿಗೂ ಹಿಂದೆ ಹೇಳಿದ ಈ ಮಾತು, ಈ ದಿನ ಮತಾಂತರಗಳ ಬಗ್ಗೆ ಅನಗತ್ಯವಾದ ಗೊಂದಲಗಳು ಹುಟ್ಟುತ್ತಿರುವ ಸಂದರ್ಭದಲ್ಲಿ, ನಿಜವಾದ ಮಾರ್ಗದರ್ಶಕವಾದ ನಿಲುವನ್ನು ಮಂಡಿಸುತ್ತದೆ. ತನಗೆ ಯಾವ ಮತಧರ್ಮ ಅತ್ಯುತ್ತಮವೆಂದು ತೋರುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ  ಪ್ರತಿಯೊಬ್ಬ ವ್ಯಕ್ತಿಗೂ ಇರಬೇಕು; ತಾನು ಹುಟ್ಟಿ ಬೆಳೆದ ಮತಧರ್ಮದ ಕಟ್ಟುಪಾಡುಗಳಲ್ಲಿ ಸ್ಥಗಿತಗೊಳ್ಳಬೇಕಾದ ಅಗತ್ಯವೇನೂ ಇಲ್ಲ. ಆದರೆ ನಿಜವಾಗಿ ವಿರೋಧಿಸಬೇಕಾದುದೆಂದರೆ, ಬಹುಬಗೆಯ ಆಸೆ-ಆಮಿಷಗಳಿಂದಲೋ ಅಥವಾ ಬಲವಂತವಾಗಿಯೋ ಜನರನ್ನು ಮತಾಂತರಗೊಳಿಸುವ ಪ್ರಯತ್ನವನ್ನು. ಈ ಯುಗದಲ್ಲಿ, ಎಲ್ಲ ಧರ್ಮಗಳೂ ಮೂಲತಃ ಆ ವಿಶ್ವಧರ್ಮದ ತರಂಗಗಳು ಎಂಬುದನ್ನು ತಮ್ಮ ಯೋಗ ವಿಜ್ಞಾನದ ಪ್ರಯೋಗಶಾಲೆಯಲ್ಲಿ ಸಾಕ್ಷಾತ್ಕರಿಸಿಕೊಂಡ ಶ್ರೀರಾಮಕೃಷ್ಣ ಪರಮಹಂಸರು ಸಾರಿದ ಸಾರವತ್ತಾದ ಸಂದೇಶವೇನೆಂದರೆ: ‘ಮತಗಳೆಲ್ಲವೂ ಪಥಗಳು’. ಎಲ್ಲ ಮತಧರ್ಮಗಳೂ, ಆಯಾ ಧರ್ಮೀಯರ ಪರಮಾರ್ಥದ ಕಲ್ಪನೆಯ ಕಡೆಗೆ ಹಾಸಿಕೊಂಡ ಪಥಗಳಾದ ಕಾರಣದಿಂದ, ಜಗತ್ತಿನ ಎಲ್ಲ ಜನರಿಗೂ ಒಂದೇ ಪಥವಿರಬೇಕೆಂದೂ, ಇದ್ದರೆ ಚೆನ್ನಾಗಿತ್ತೆಂದೂ ಯೋಚನೆ ಮಾಡುವುದು ವ್ಯರ್ಥ. ಮಹಾತ್ಮಾ ಗಾಂಧಿ ಹೇಳುತ್ತಾರೆ: ‘ಜಗತ್ತಿಗೆಲ್ಲ ಒಂದೇ ಧರ್ಮ ಇರಬೇಕೆನ್ನುವುದು ಈ ಹೊತ್ತಿನ ಅಗತ್ಯವಲ್ಲ; ಬೇಕಾದದ್ದು ಧರ್ಮಗಳ ಬಗ್ಗೆ ಪರಸ್ಪರ ಗೌರವ ಮತ್ತು ಸಹನೆ.’ ಬಹುಕಾಲದಿಂದ ಅದು ಹೇಗೋ ಕಾಪಾಡಿಕೊಂಡು ಬಂದ ಕೋಮುಸಾಮರಸ್ಯದ ಆಕೃತಿಗಳು ಧಾರ್ಮಿಕ ಮೂಲಭೂತವಾದಿಗಳಿಂದ ಛಿದ್ರವಾಗುತ್ತಿರುವ ಈ ಹೊತ್ತಿನಲ್ಲಿ ಮಹಾತ್ಮಾ ಗಾಂಧಿಯವರ ಈ ಉಕ್ತಿಯನ್ನು ಕುರಿತು ಪರಿಭಾವಿಸುವ ಸಮಚಿತ್ತ ಯಾರಿಗಿದೆ?

ಯಾವುದೂ ಸಣ್ಣದಲ್ಲ : ೨೦೦೪