ಐತಿಹಾಸಿಕ ಹಿನ್ನೆಲೆ:

ಈ ಜಿಲ್ಲೆಯು ಧಾರವಾಡ ನಗರವನ್ನು ಕೇಂದ್ರವನ್ನಾಗಿ ಹೊಂದಿ ೧೭ ತಾಲೂಕುಗಳನ್ನು ಒಳಗೊಂಡ ವಿಶಾಲವಾದ ಅಖಂಡ ಧಾರವಾಡ ಜಿಲ್ಲೆಯಾಗಿತ್ತು. ನಂತರ ಜಿಲ್ಲಾ ವಿಭಜನೆಯಿಂದಾಗಿ ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಾಗಿ ಜನ್ಮತಾಳಿದವು. ಅದರಲ್ಲಿ ಧಾರವಾಡ ಜಿಲ್ಲೆ ೫ ತಾಲೂಕುಗಳಿಂದ ರಚಿತವಾಯಿತು. ಅವುಗಳೆಂದರೆ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಕುಂದಗೋಳ, ಈ ಐದು ತಾಲೂಕುಗಳು, ಐತಿಹಾಸಿಕ, ಸಾಂಸ್ಕೃತಿಕ, ಕಲಾತ್ಮಕ ಮತ್ತು ಸಾಹಿತ್ಯಿಕ ಸೇರಿದಂತೆ ವಿವಿಧ ಪರಂಪರೆ ಹೊಂದಿವೆ.

ಧಾರವಾಡ ಜಿಲ್ಲೆಯು ತನ್ನದೇ ಆದಂತಹ ಇತಿಹಾಸವನ್ನು ಹೊಂದಿದ್ದು, ಈ ಜಿಲ್ಲೆಯು ೫ ನೇ ಶತಮಾನದಲ್ಲಿ ಹಲವಾರು ರಾಜ ಮನೆತನಗಳಿಂದ ಆಳಲ್ಪಟ್ಟಿತ್ತು. ಈ ರಾಜ ವಂಶಗಳಲ್ಲಿ ಬಾದಾಮಿಯ ಚಾಲುಕ್ಯರನ್ನು ಒಳಗೊಂಡು ಪುಣೆಯ ಪೇಶ್ವೆಗಳವರೆಗೂ ಆಳಲ್ಪಟ್ಟಿರುತ್ತದೆ. ಪೇಶ್ವೆಗಳ ಆಳ್ವಿಕೆಯಿಂದ ಈ ಜಿಲ್ಲೆಯಲ್ಲಿ ೧೯ನೆಯ ಶತಮಾನದವರೆಗೂ ಮರಾಠಿ ಪ್ರಾಬಲ್ಯವನ್ನು ಹೊಂದಿತ್ತು. ಮುಂದೆ ಬ್ರಿಟೀಷರ ಆಳ್ವಿಕೆಯಲ್ಲಿ ಧಾರವಾಡವು ವಿಭಾಗೀಯ ಶೈಕ್ಷಣಿಕ ಆಡಳಿತ ಕೇಂದ್ರವಾಗಿ ಮುಂದುವರೆದು ಕನ್ನಡ ಭಾಷೆಗೆ ತಮ್ಮ ಆಡಳಿತದಲ್ಲಿ ಪ್ರಥಮಾಧ್ಯತೆಯನ್ನು ಕೊಟ್ಟಿತು.

ಜಿಲ್ಲೆಯು ಹಿಂದೂ, ವೀರಶೈವ, ಇಸ್ಲಾಮ, ಜೈನ, ಕ್ರಿಶ್ಚಿಯನ್‌, ಶಿಖ್‌, ಬೌದ್ಧ ಮುಂತಾದ ಧರ್ಮದ ಜನಸಂಖ್ಯೆಯನ್ನು ಒಳಗೊಂಡಿದ್ದು, ಹಿಂದೂ ಮತ್ತು ವೀರಶೈವ ಧರ್ಮೀಯರು ಬಹುಸಂಖ್ಯಾತರಾಗಿದ್ದಾರೆ. ಈ ಜಿಲ್ಲೆಯು ಕೃಷಿಯನ್ನು ಪ್ರಮುಖ ಉದ್ಯೋಗವನ್ನಾಗಿ ಹೊಂದಿದ್ದು, ಬೆಳೆಗಳಾದ ಹತ್ತಿ, ಕಬ್ಬು, ಮೆಣಸಿನಕಾಯಿ, ಶೇಂಗಾ, ಭತ್ತ, ರಾಗಿ, ಗೋಧಿ, ಕಡಲೆ, ಹೆಸರು ಮುಂತಾದವು ಪ್ರಮುಖ ಬೆಳೆಗಳಾಗಿವೆ. ಇದಕ್ಕೆ ತಕ್ಕಂತೆ ಮಣ್ಣು ಮತ್ತು ಹವಾಗುಣವನ್ನು ಒಳಗೊಂಡಿದೆ.

ಭೌಗೋಳಿಕ ಪರಿಚಯ:

ಧಾರವಾಡ ಜಿಲ್ಲೆಯು ಕರ್ನಾಟಕದ ಪಶ್ಚಿಮ ಭಗದ ಉತ್ತರಾರ್ಧ ಕರ್ನಾಟಕದಲ್ಲಿ ಬರುತ್ತದೆ. ಇದರ ಕ್ಷೇತ್ರ ೪೨೬೩ ಚದರ ಕಿ ಮೀ ವ್ಯಾಪ್ತಿಯನ್ನು ವ್ಯಾಪಿಸಿದೆ. ೧೫.೦೨ ಡಿಗ್ರೀ ಮತ್ತು ೧೫.೫೧ ಉತ್ತರ ಅಕ್ಷಾಂಶ. ೭೩.೪೩ ಮತ್ತು ೭೫.೩೫ ಪೂರ್ವ ರೇಖಾಂಶಗಳ ಮಧ್ಯದಲ್ಲಿದೆ. ಉತ್ತರಕ್ಕೆ ಬೆಳಗಾವಿ, ದಕ್ಷಿಣಕ್ಕೆ ಹಾವೇರಿ, ಪೂರ್ವಕ್ಕೆ ಗದಗ, ಪಶ್ಚಿಮಕ್ಕೆ ಉತ್ತರಕನ್ನಡ ಜಿಲ್ಲೆಗಳು ಆವರಿಸಿವೆ. ಧಾರವಾಡ ಜಿಲ್ಲೆಯು ಸಮುದ್ರ ಮಟ್ಟಕ್ಕಿಂತ ೮೦೦ ಮೀಟರ್‌ಎತ್ತರದಲ್ಲಿದ್ದು ಸಮಶೀತೋಷ್ಣ ಹವಾಗುಣವನ್ನು ಹೊಂದಿದೆ. ಜಿಲ್ಲೆಯು ಮಲೆನಾಡು, ಗಡಿನಾಡು, ಬೆಳವಲನಾಡು ಎಂಬ ಮೂರು ವಿಭಾಗಗಳನ್ನು ಹೊಂದಿದೆ. ಕಲಘಟಗಿ ಮತ್ತು ಅಳ್ನಾವರ ಈ ಸ್ಥಳಗಳು ಅತಿಯಾದ ಮಳೆ ಬೀಳುವ ಪ್ರದೇಶಗಳಾಗಿವೆ.

 

ಧಾರವಾಡ ತಾಲೂಕ

 ಭೌಗೋಳಿಕ ಹಿನ್ನೆಲೆ:

ಧಾರವಾಡ ಜಿಲ್ಲೆಯ ೫ ತಾಲೂಕಗಳಲ್ಲಿ ಧಾರವಾಡ ತಾಲೂಕು ವಿಸ್ತಾರದಲ್ಲಿ ಅತಿ ದೊಡ್ಡ ತಾಲೂಕಾಗಿದೆ. ಹಾಗೂ ಜಿಲ್ಲಾ ಕೇಂದ್ರವನ್ನು ಈ ತಾಲೂಕು ಒಳಗೊಂಡಿದೆ. ತಾಲೂಕಿನ ವಿಸ್ತಾರ ೧೦೩೨ ಚ ಕಿ ಮೀ ಇದ್ದು ಈ ತಾಲೂಕಿನಲ್ಲಿ ಮಲೆನಾಡು ಹಾಗೂ ಬೆಳವಲದಲ್ಲಿ ಬೆಳೆಯುವ ಬೆಳೆಗಳಿಗೆ ಅನುಕೂಲವಾದ ಹದವಾದ ಮಣ್ಣು ಮತ್ತು ಹಿತವಾದ ಹವೆಯನ್ನು ಹೊಂದಿ ಸಮೃದ್ಧಿಯ ಆಗರವಾಗಿದೆ. ಇಲ್ಲಿನ ಜನರ ಬದುಕಿಗೆ ಕೃಷಿಯೇ ಮುಖ್ಯ ಕಸುಬಾಗಿದೆ. ಭತ್ತ, ಜೋಳ, ಗೋಧಿ, ಸೇಂಗಾ, ಆಲುಗಡ್ಡೆ, ಕಬ್ಬು, ಇಲ್ಲಿನ ಮುಖ್ಯ ಬೆಳೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಪ್ರಪ್ರಥಮವಾಗಿ ಬಣ್ಣದ ಹತ್ತಿಯನ್ನು ಬೆಳೆದ ಕೀರ್ತಿ ಈ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ್ದಾಗಿದೆ. ಧಾರವಾಡ ತಾಲೂಕಿನಲ್ಲಿ ೧ ಪಟ್ಟಣ, ೧೨೨ ಜನವಸತಿ ಇರುವ ಗ್ರಾಮ, ೦೭ ಜನವಸತಿರಹಿತ ಗ್ರಾಮ, ಒಟ್ಟು ೧೨೯ ಕಂದಾಯ ಗ್ರಾಮಗಳನ್ನು ನಮ್ಮ ತಾಲೂಕು ಹೊಂದಿದೆ. ೩೭ ಗ್ರಾಮ ಪಂಚಾಯತಿಗಳು ಹಾಗೂ ೧ ನಗರಸಭೆ ಇದೆ.

ಐತಿಹಾಸಿಕ ಹಿನ್ನೆಲೆ:

ಧಾರವಾಡ ಜಿಲ್ಲೆಯ ಕಾಶ್ಮೀರ ಎಂದೇ ಹೆಸರಾದ ಧಾರವಾಡ ತಾಲೂಕು, ಮಲೆನಾಡಿನ ಸೊಬಗನ್ನು ಬೆಳವಲದ ಬೆಡಗನ್ನು ಗಡಿನಾಡಿನ ಗದ್ದಿಗೆಯನ್ನು ಹೊಂದಿದ ಪ್ರಕೃತಿ ರಮಣೀಯ ನಾಡಾಗಿದೆ. ನಮ್ಮ ತಾಲೂಕಿನ ೩೪ ಗ್ರಾಮಗಳಲ್ಲಿ ೭೫ಕ್ಕೂ ಹೆಚ್ಚು ಶಾಸನಗಳು ತಾಲೂಕಿನ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಬದುಕಿನ ಮೇಲೆ ಬೆಳಕು ಚೆಲ್ಲಿವೆ. ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರ‍್ಯರು, ಯಾದವ, ವಿಜಯನಗರ ಹಾಗೂ ಅವರ ಮಾಂಡಲೀಕರು, ಗೋವೆಯ ಕದಂಬರ ಆಳ್ವಿಕೆಗೆ ನಮ್ಮ ನಾಡು ಒಳಪಟ್ಟಿತ್ತು.

ಹೆಬ್ಬಳ್ಳಿ ಶಾಸನ ಶತಮಾನ ೯, ಕಲ್ಲೆ ಶಾಸನ ೧೬ನೇ ಶತಮಾನ, ಮುಗದ ಶಾಸನ ಕ್ರಿ ಶ ೧೦೪೫, ಮಾದನಭಾವಿ ಶಾಸನ ಕ್ರಿ ಶ ೧೧೨೭, ವೆಂಕಟಾಪುರ ಶಾಸನ ಕ್ರಿ.ಶ. ೧೧೩೬, ಅಮ್ಮಿನಭಾವಿ ಶಾಸನ ೧೧೪೬, ಕೊಡಭಾಗಿ ಶಾಸನ ಕ್ರಿ ಶ ೧೨೬೪, ತಡಕೋಡ ಶಾಸನ ಕ್ರಿ ಶ ೧೨೮೨, ದೇವರಹುಬ್ಬಳ್ಳಿ ಶಾಸನ ಕ್ರಿ ಶ ೧೫೪೭, ಇವು ನಮ್ಮ ತಾಲೂಕಿನ ಐತಿಹಾಸಿಕ ನೆನಪುಗಳಾಗಿದ್ದು ಇವು ನಮ್ಮ ನಾಡಿನ ಗತ ಇತಿಹಾಸವನ್ನು ನೆನಪಿಸುತ್ತವೆ.

ನಮ್ಮ ತಾಲೂಕಿನ ಅಮ್ಮಿನಭಾವಿ, ಅಳ್ನಾವರ, ಗರಗ, ತಡಕೊಡ, ನರೆಂದ್ರ, ನುಗ್ಗಿಕೇರಿ, ಮನಗುಂಡಿ, ಮುಗದ, ಹೆಬ್ಬಳ್ಳಿ, ಈ ಗ್ರಾಮಗಳು ಜೈನ ಧಾರ್ಮಿಕ ಕೇಂದ್ರಗಳಾಗಿದ್ದು. ಅಮ್ಮಿನಭಾವಿ, ಕನಕೂರು, ದೇವರಹುಬ್ಬಳ್ಳಿ ಭಾಡ, ಮನಗುಂಡಿ, ಹಾಗೂ ನವಿಲೂರು ಗ್ರಾಮಗಳು ವೀರಶೈವರ ಹಾಗೂ ಬ್ರಾಹ್ಮಣರ ಅಗ್ರಹಾರಗಳಾಗಿದ್ದವು. ಅಮ್ಮಿನಭಾವಿ, ಮನಗುಂಡಿ, ಕೊಟಬಾಗಿ ವೀರಶೈವ ಧಾರ್ಮಿಕ ತಾಣಗಳಾಗಿದ್ದು ಎಂಬುದನ್ನು ಈ ಶಾಸನಗಳು ಸಾರುತ್ತವೆ.

ಜೈನ ಧರ್ಮದ ಮೂರು ನಿಷಧಿ ಕಲ್ಲುಗಳು ನರೇಂದ್ರ, ಅಳ್ನಾವರದಲ್ಲಿ ದೊರೆತರೆ, ಹಿಂದು ಪರ ಎರಡು ಮಾಸ್ತಿ ಕಲ್ಲುಗಳು ಮನಗುಂಡಿ ಮತ್ತು ಧಾರವಾಡಗಳಲ್ಲಿ ದೊರೆತಿವೆ. ಅಮ್ಮಿನಭಾವಿ ಮುಗದ ಗರಗ ಅಳ್ನಾವರ ಕಲ್ಲೆ ಅಂಬೊಳ್ಳಿ ಹಾಗೂ ನರೇಂದ್ರ ಗ್ರಾಮಗಳಲ್ಲಿ ದೊರೆತ ವೀರಗಲ್ಲುಗಳು ನಮ್ಮ ಧೀರ ಪರಂಪರೆಯನ್ನು ಪ್ರತಿನಿಧಿಸುತ್ತವೆ.

ಶೈಕ್ಷಣಿಕ ಹಿನ್ನೆಲೆ:

ಇಷ್ಟೆಲ್ಲಾ ಐತಿಹಾಸಿಕ, ಧಾರ್ಮಿಕ, ಭೌಗೋಳಿಕ, ಕ್ಷೆತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿದ ಈ ತಾಲೂಕು ಇತರ ಕ್ಷೇತ್ರಗಳಲ್ಲಿಯೂ ಹಿಂದೆ ಬಿದ್ದಿಲ್ಲ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದವರು ನರೇಂದ್ರದ ಶ್ರೀ ರಾ. ಹ. ದೇಶಪಾಂಡೆಯವರು. ವರಕವಿ ಜ್ಞಾನಪೀಠ ಪ್ರಶಸ್ತಿ ವಿಜೇತ ದ ರಾ ಬೇಂದ್ರೆಯವರು ಧಾರವಾಡದ ಸಾಧನಕೇರಿಯವರಾದರು ಅವರ ತಾಯಿ ಅಂಬಿಕಾ ತಾಲೂಕಿನ ಚಿಕ್ಕ ಹಳ್ಳಿ ತಲವಾಯಿಯವರು. ಖ್ಯಾತ ಗಾಯಕ ಮಲ್ಲಿಕಾರ್ಜುನ ಮನಸೂರ ಹಾಗೂ ಅವರ ಸಹೋದರ ಪ್ರಖ್ಯಾತ ರಂಗ ಕಲಾವಿದ ದಿ. ಬಸವರಾಜ ಮನಸೂರ ಅವರು ಮನಸೂರು ಗ್ರಾಮದವರು. ಸವಾಯಿ ಗಂಧರ್ವರವರು ಹುಟ್ಟಿದ್ದು ಅಮ್ಮಿನಭಾವಿಯಲ್ಲಿ. ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾದ ಬಾಲಚಂದ್ರ ಶಾಸ್ತ್ರಿಗಳ ಊರು ಉಪ್ಪಿನ ಬೇಟಗೇರಿ. ಶ್ರೀ ಸದಾಶಿವ ಒಡೆಯರ, ಹಾಗೂ ನ್ಯಾಯಮೂರ್ತಿ ಶ್ರೀ ವಿ ಎಸ್‌ಮಳಿಮಠ ಇವರು ಮರೇವಾಡ ಗ್ರಾಮದವರು. ಪ್ರಸಿದ್ಧ ನಾಟಕಕಾರರಾದ ಶ್ರೀ ಬಸವರಾಜ ಮನಸೂರರವರು ತಾಲೂಕಿನ ಮನಸೂರು ಗ್ರಾಮದವರಾಗಿದ್ದಾರೆ.