ಕೃಷಿ ವಿಶ್ವವಿದ್ಯಾಲಯ ಧಾರವಾಡ

ಇದು ಧಾರವಾಡ ಬೆಳಗಾಂವ ಮಾರ್ಗದಲ್ಲಿ ಧಾರವಾಡದಿಂದ ಉತ್ತರಕ್ಕೆ ೫ ಕಿ.ಮೀ. ಅಂತರದಲ್ಲಿ ಬರುತ್ತದೆ. ಧಾರವಾಡ ಅಗ್ರೀಕಾಲೇಜು ಎಂದೇ ಪ್ರಸಿದ್ಧವಾದ ಈ ಸಂಸ್ತೆ ೧೯೮೬ರಲ್ಲಿ ಕೃಷಿ ವಿಶ್ವವಿದ್ಯಾಲಯವಾಗಿ ರೂಪಾಂತರಗೊಂಡು ಧಾರವಾಡ ವಿದ್ಯಾಕಾಶಿಯ ಮುಕುಟದ ಮಣಿಯಾಗಿದೆ.

ಈ ಕೃಷಿ ವಿಶ್ಯವಿದ್ಯಾಲಯದ ಕೊಡುಗೆ ಎಂದರೆ ರೈತರಿಗೆ ವಾಣಿಜ್ಯ ಬೆಳೆಯಾದ ಡಿ ಸಿ ಎಚ್‌ಹತ್ತಿ ಬೆಳೆಯನ್ನು ಸಂಶೋಧನೆ ಮಾಡಿ ಇಡೀ ದೇಶಕ್ಕೆ ಮಾದರಿಯಾಗಿದೆ. ಅಲ್ಲದೆ ಬಣ್ಣದ ಹತ್ತಿ ಸಂಶೋಧನೆ ಮಾಡಿರುವುದು. ವಿವಿಧ ಜಾತಿಗಳ ಜಾನುವಾರುಗಳ ತಳಿ ಸಂಶೋಧನಾ ಕೇಂದ್ರವನ್ನು ಒಳಗೊಂಡ ಮಾದರಿಯಾದ ಜಾನುವಾರು ಆಸ್ಪತ್ರೆಯನ್ನು ಹೊಂದಿದೆ. ರೈತರಿಗೆ ಕೃಷಿ ಮಾಹಿತಿಯನ್ನು ನೀಡಲು ದೇಶದಲ್ಲೇ ಪ್ರಥಮದ್ದಾದ ಎಫ್‌ಎಂ ರೇಡಿಯೋ ಕೇಂದ್ರವನ್ನು, ಹಾಗೂ ರೈತ ಸಂಪರ್ಕ ಕೇಂದ್ರವನ್ನು ಒಳಗೊಂಡಿದೆ. ಈ ಆವರಣದಲ್ಲಿ ನಾಡಿನಾದ್ಯಂತ ಇರುವ ಮಣ್ಣಿನ ಮಾದರಿಗುಣಗಳನ್ನು ಉಳ್ಳ ವ್ಯವಸಾಯ ಕ್ಷೇತ್ರವನ್ನು ಒಳಗೊಂಡಿದೆ. ತೋಟಗಾರಿಕಾ ಕ್ಷೇತ್ರ, ಮೀನು ಸಾಕಾಣಿಕೆ, ಪ್ರಮುಖದ್ದಾಗಿದೆ. ಹಾಗೂ ವ್ಯವಸ್ಥಿತವಾದ ವಸ್ತು ಸಂಗ್ರಹಾಲಯವನ್ನು ಹೊಂದಿರುವುದು ಮಾದರಿಯಾಗಿದೆ.

 

ಉಚ್ಛನ್ಯಾಯಾಲಯ ಸಂಚಾರಿ ಪೀಠ

ಈ ಭಾಗದ ಜನರ ಮನೆಬಾಗಿಲಿಗೆ ನ್ಯಾಯ ಒದಗಿಸಲು ನ್ಯಾಯ ದೇವತೆಯೇ ಮೈದಳೆದು ನಿಂತಂತೆ ಪ್ರಕೃತಿಯ ಮಡಿಲಲ್ಲಿ ಧಾರವಾಡದಿಂದ ರಾಷ್ಟ್ರೀಯ ಹೆದ್ದಾರಿ ನಂ ೪ ಪೂನಾ ಬೆಂಗಳೂರು ರಸ್ತೆಯ ಮೇಲೆ ೧೪ ಕಿಮೀ ದೂರದಲ್ಲಿದೆ.

ಸುಂದರವಾದ ವಿಶಾಲವಾದ ಪ್ರದೇಶದ ಮಧ್ಯದಲ್ಲಿ ಕೆಂಪು ವರ್ಣದಲ್ಲಿ ಬೆಂಗಳೂರು ಉಚ್ಛ ನ್ಯಾಯಾಲಯದ ಕಟ್ಟಡವನ್ನೇ ಇಲ್ಲಿ ತಂದಿಳಿಸಿದಂತಿದೆ. ಇದು ಧಾರವಾಡದ ವೈವಿಧ್ಯಮಯ ಕ್ಷೇತ್ರಕ್ಕೆ ಇದೊಂದು ಚಿನ್ನದ ಗರಿಯಾಗಿದೆ.

 

ಬೇಲೂರ ಕೈಗಾರಿಕಾ ಪ್ರದೇಶ:

ಜಿಲ್ಲಾ ಕೇಂದ್ರದಿಂದ ದೂರ: ೧೬ ಕಿ ಮೀ
ತಾಲೂಕಾ ಕೇಂದ್ರದಿಂದ: ೧೬ ಕಿ ಮೀ

ಇದಕ್ಕೆ ಹೊಂದಿಕೊಂಡಂತೆ ಬೇಲೂರು, ಮುಮ್ಮಿಗಟ್ಟಿ, ನೀರಲಕಟ್ಟಿ ಗ್ರಾಮಗಳ ನಡುವೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೃಹತ್‌ಬೇಲೂರು ಕೈಗಾರಿಕಾ ಪ್ರದೇಶ ಜಿಲ್ಲೆಯ ಜನರಿಗೆ ಆರ್ಥಿಕ ಆಧಾರವಾಗಿ ದುಡಿಯುವ ಕೈಗಳಿಗೆ ಕೆಲಸ ಒದಗಿಸಿದೆ. ಇಲ್ಲಿರುವ ಪ್ರಮುಖ ಕೈಗಾರಿಕೆಗಳೆಂದರೆ HPCL, TATA, NRI ಕೋಕ್‌ಹಿಂದುಸ್ಥಾನ ಲಿವರ್‌ಲಿಮಿಟೆಡ್‌, Telco, IAL, ಮುಂತಾದವುಗಳಾಗಿವೆ.

 

ಸಮೀಪದ ಪ್ರೇಕ್ಷಣೀಯ ಸ್ಥಳ ಕಿತ್ತೂರು:

ಕಿತ್ತೂರು ಎಂದೊಡನೆ ಮೈ ಜುಮ್ಮೆನ್ನುವುದು ಕಾರಣ ವೀರರಾಣಿ ಭಾರತದ ಪ್ರಥಮ ಸ್ವಾತಂತ್ರ‍್ಯ ಹೋರಾಟಗಾರ್ತಿ ಕಿತ್ತೂರ ಚೆನ್ನಮ್ಮ ಆಳಿದ ಶೂರ ಸಂಗೊಳ್ಳಿ ರಾಯಣ್ಣ ಬಾಳಿದ ನಾಡು ಕಿತ್ತೂರು. ಇಲ್ಲಿ ಕಿತ್ತೂರಿನ ಕೋಟೆ, ವಸ್ತು ಪ್ರದರ್ಶನ ಗತಕಾಲದ ಇತಿಹಾಸವನ್ನು ನೆನಪಿಸುತ್ತವೆ. ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಈ ನಾಡಿನ ಹೆಮ್ಮೆಯ ಕುವರಿಯರನ್ನು ತರಬೇತುಗೊಳಿಸುವ ಕೇಂದ್ರವಾಗಿದೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಲೇಬೇಕಾದ ಸ್ಥಳ ಕಿತ್ತೂರು. ದೇಶ ವಿದೇಶದ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಸ್ಥಳವಾಗಿದೆ.

 

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ:

ಜಿಲ್ಲಾ ಕೇಂದ್ರದಿಂದ ದೂರ: ೧೧ ಕಿ ಮೀ
ತಾಲೂಕಾ ಕೇಂದ್ರದಿಂದ ದೂರ: ೧೧ ಕಿ ಮೀ

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮುಖ್ಯ ಕಟ್ಟಡ

ಧಾರವಾಡ ನಗರದಿಂದ ೧೧ ಕಿ.ಮೀ ಅಂತರದಲ್ಲಿ ಮಡಿವಾಳೇಶ್ವರ ಪುಣ್ಯ ಗ್ರಾಮ ನಗರಕ್ಕೆ ಹೋಗುವ ಮಾರ್ಗದಲ್ಲಿದೆ. ೨೦೦೫ನೇ ಶೈಕ್ಷಣಿಕ ವರ್ಷದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಬೆಂಗಳೂರು ಸಂಚಾಲಿತ ಕೇಂದ್ರೀಯ ಪಠ್ಯಕ್ರಮ ಹೊಂದಿರುವ ವಸತಿ ಶಾಲೆಯಾಗಿ ಪ್ರಾರಂಭವಾಯಿತು. ಈ ಶಾಲಾ ಆವರಣಕ್‌ಎಕ ಮಾಧವನಗರ ಎಂದು ಹೆಸರು. ಭರತೀಯ ಸಂಸ್ಕೃತಿ ಹಾಗೂ ಆಧುನಿಕ ಶಿಕ್ಷಣ ಧ್ಯೇಯವಿಟ್ಟುಕೊಂಡು ನಡೆಯುತ್ತಿರುವ ವಸತಿ ಶಾಲೆ ಧಾರವಾಡ ವಿದ್ಯಾನಗರಕ್ಕೆ ಒಂದು ಗರಿಯಾಗಿದೆ. ಇಲ್ಲಿ ಯೋಗ, ವ್ಯಾಯಾಮ, ಧ್ಯಾನ, ಸ್ವ ಅಧ್ಯಯನ, ಸುಸಜ್ಜಿತ ಪ್ರಯೋಗಾಲಯಗಳೊಂದಿಗೆ ಮಾದರಿಯಾದ ಆಡಿಟೋರಿಯಂ ಕ್ರೀಡಾ ಮೈದಾನಗಳು ತೋಟಗಳನ್ನು ಹೊಂದಿದೆ. ಭಾಷೆ, ಜ್ಞಾನ ವಿಷಯಗಳಲ್ಲದೆ ಕರಾಟೆ, ಯೋಗ, ಸಂಗೀತ, ನೃತ್ಯ, ಅಬಿನಯ ಹೀಗೆ ಅಧ್ಯಯನ ನಿರಂತರ ಸಾಗುತ್ತಿದೆ.

ಈ ಆವರಣದಲ್ಲಿ ವಿಘ್ನನಿವಾರಕ ಗಣೇಶ ಹಾಗೂ ಮಾತೆ ಕಾಳಿಕಾದೇವಿಯ ಸುಮದರವಾದ ದೇವಸ್ಥನಗಳಿರುವುದು ವಿಶೇಷವಾಗಿದೆ. ರಾಜ್ಯ ಮತ್ತು ಹೊರರಾಜ್ಯದ ವಿದ್ಯಾರ್ಥಿಗಳನ್ನಲ್ಲದೇ ಪ್ರವಾಸಿಗರನ್ನು ಈ ಶಾಲೆ ಕೈ ಬೀಸಿ ಕರೆಯುತ್ತಿದೆ.

 

ಗುಂಗರಗಟ್ಟಿ

ಜಿಲ್ಲಾ ಕೇಂದ್ರದಿಂದ ದೂರ: ೧೨ ಕಿ ಮೀ
ತಾಲೂಕಾ ಕೇಂದ್ರದಿಂದ ದೂರ: ೧೨ ಕಿ ಮೀ

ಕ್ಷೇತ್ರದಲ್ಲಿ ಬೆಳೆದಿರುವ ಔಷಧಿ ಸಸ್ಯಗಳು

ಇದು ಧಾರವಾಡ ನಗರದಿಂದ ಗರಗ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ೧೨ ಕಿ ಮೀ ದೂರದಲ್ಲಿದ್ದು ಇದು ಅರಣ್ಯ ಸಸ್ಯ ಸಂಶೋಧನಾ ಕೇಂದ್ರ ಇಲ್ಲಿ ತೇಗ, ಹೊನ್ನಿ, ಮಾವು, ಶ್ರೀಗಂಧ, ನೀಲಗಿರಿ ಮುಂತಾದ ಸಸ್ಯಗಳ ತಳಿ ಅಭಿವೃದ್ಧಿ ಸಂಶೋಧನೆಗಳು ನಡೆಯುತ್ತಿವೆ. ಇಲ್ಲಿಯೇ ಸಂರಕ್ಷಿತ ಶ್ರೀಗಂಧ ಮರಗಳ ವಿಶಾಲವಾದ ಪ್ರದೇಶವಿದೆ. ಕನ್ನಡ ನಾಡು ಗಂಧದ ಬೀಡು ಎಂಬುದನ್ನು ಈ ಪ್ರದೇಶವು ನೆನಪಿಸುತ್ತದೆ.

 

ಪುಣ್ಯ ಕ್ಷೇತ್ರ ಗರಗ:

ಜಿಲ್ಲಾ ಕೇಂದ್ರದಿಂದ ದೂರ: ೧೮ ಕಿ ಮೀ
ತಾಲೂಕು ಕೇಂದ್ರದಿಂದ ದೂರ: ೧೮ ಕಿ ಮೀ

ಶ್ರೀ ಗುರು ಮಡಿವಾಳೇಶ್ವರ ಮಠ ಗರಗ

ಗರಗ ಎಂದಾಕ್ಷಣ ನೆನಪಿಗೆ ಬರುವುದು ಶ್ರೀ ಗುರು ಮಡಿವಾಳೇಶ್ವರ ಮಠ. ಗರಗ ಗ್ರಾಮವು ಧಾರವಾಡದಿಂದ ೧೬ ಕಿ.ಮೀ ಅಂತರದಲ್ಲಿ ಹಾಗೂ ಪೂನಾ, ಬೆಂಗಳೂರು ಹೆದ್ದಾರಿ ನಂ ೪ ರಿಂದ ಮುಮ್ಮಗಟ್ಟಿ ಗ್ರಾಮದಿಂದ ೭ ಕಿ.ಮೀ ಅಂತರದಲ್ಲಿ ಇದೆ. ಹಿಂದೆ ಗಾರ್ಗಿ ಎಂಬ ಋಷಿಮುನಿಗಳ ವಾಸಸ್ಥಾನವೇ ಇಂದಿನ ಗರಗ. ಇಂದು ೧೨೦೦೦ ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದೆ.

ತುಪರಿ ಹಳ್ಳದ ದಂಡೆಯ ಮೇಲೆ ನಯನ ಮನೋಹರವಾದ ಪ್ರಕೃತಿಯ ಮಡಿಲಲ್ಲಿ ಸುಂದರವಾದ ಭವ್ಯ ಮಂದಿರದಲ್ಲಿ ಶ್ರೀ ಗುರು ಮಡಿವಾಳೇಶ್ವರರ ವಿರಾಜಮಾನರಾದ ಮೂರ್ತಿ ಈ ಗ್ರಾಮದ ಆರಾಧ್ಯ ದೈವರಾಗಿದ್ದಾರೆ. ಗುರು ಮಡಿವಾಳೇಶ್ವರರು ನವಲಗುಂದದ ನಾಗಲಿಂಗ, ಸಂತ ಶಿಶುನಾಳ ಶರೀಫರ ಸಮಕಾಲೀನ ಪವಾಡಪುರುಷರು. ಈ ಮಠದಿಂದ ವಿದ್ಯಾದಾನದ ಕೇಂದ್ರಗಳಾದ ಪ್ರೌಢಶಾಲೆ ಡಿ.ಇ.ಡಿ, ಆಯ್‌.ಟಿ.ಆಯ್‌ಸಂಸ್ಥೆಗಳನ್ನು ಹೊಂದಿದೆ.

ಇದೇ ಗ್ರಮದಲ್ಲಿ ಸ್ವಸ್ತಿ ಶ್ರೀ ೧೦೮ ಕುಲಭೂಷಣ ಮುನಿ ಮಹಾರಾಜರ ಪ್ರೇರಣೆಯಿಂದ ಆಚಾರ್ಯ ಜಯಕೀರ್ತಿ ವಿದ್ಯಾಲಯವು ೧೯೮೫ ರಿಂದ ಪ್ರಾರಂಭವಾಗಿ ಪ್ರಮುಖ ವಿದ್ಯಾಕೇಂದ್ರಗಳಲ್ಲಿ ಒಂದಾಗಿದೆ. ಸ್ವಸ್ತಿ ಶ್ರೀ ೧೦೮ ಜ್ಞಾನೇಶ್ವರ ಮುನಿ ಮಹಾರಾಜ ಪ್ರಯತ್ನದ ಫಲವಾಗಿ ಪ್ರಶಾಂತವಾದ ಜಯಕೀರ್ತಿ ಕ್ಷೇತ್ರದಲ್ಲಿ ನೆಲದಿಂದ ೨೦ ಅಡಿ ಎತ್ತರದಲ್ಲಿ ನಯನಮನೋಹರವಾದ ಜಗತ್ತಿಗೆ ಶಾಂತಿ ಸಂದೇಶ ಸಾರುವ ೫ ಅಡಿ ಎತ್ತರದ ತ್ಯಾಗ ಮೂರ್ತಿಗಳಾದ ಪಾರಿಶ್ವನಾಥ, ಪದ್ಮಪ್ರಭ, ಚಂದ್ರಪ್ರಭ ತೀರ್ಥಂಕರರ ಮೂರ್ತಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಗುಡಿ ಕೈಗಾರಿಕೆಗಳಲ್ಲಿ ಒಂದಾದ ಖಾದಿ ಗ್ರಾಮೋದ್ಯೋಗಕ್ಕೆ ಪ್ರಸಿದ್ಧವಾದ ಕ್ಷೇತ್ರ. ಹಳ್ಳಿಯಿಂದ ದಿಲ್ಲಿಯವರೆಗೂ ಬಾನಂಗಳದಲ್ಲಿ ಹಾರಾಡುವ ನಮ್ಮ ರಾಷ್ಟ್ರಧ್ವಜ ತಯಾರಿಸುವ ದೇಶದ ಏಕೈಕ ಖಾದಿ ಕೇಂದ್ರ ಎಂಬ ಹೆಗ್ಗಳಿಕೆಯ ಗ್ರಾಮ. ಸ್ವಾತಂತ್ರ‍್ಯ ಹೋರಾಟದಲ್ಲೂ ಮುಂಚೂಣಿಯ ಪಾತ್ರವಹಿಸಿದ ಸ್ವಾತಂತ್ರ‍್ಯ ಹೋರಾಟಗಾರರೂ ಹೆಚ್ಚಿರುವ ಗ್ರಾಮ ಇದಾಗಿದೆ.

 

ಅಮ್ಮಿನಭಾವಿ:

ಜಿಲ್ಲಾ ಕೇಂದ್ರದಿಂದ ದೂರ: ೧೦ ಕಿ ಮೀ
ತಾಲೂಕಾ ಕೇಂದ್ರದಿಂದ ದೂರ: ೧೦ ಕಿ ಮೀ

ಸಾಂಸ್ಕೃತಿಕ ರಾಜಧಾನಿ ಧಾರವಾಡ ಮಹಾನಗರದಿಂದ ಉತ್ತರಕ್ಕೆ ೧೧ ಕಿ ಮಿ ಅಂತರದಲ್ಲಿರುವ ಅಮ್ಮಿನಭಾವಿ ಐತಿಹಾಸಿಕ ಹಿನ್ನೆಲೆಯಿಂದ ಕೂಡಿದ ಗ್ರಾಮ. ಇದಕ್ಕೆ ಸಾಕ್ಷಿಯಾಗಿ ೧೦ ಶಾಸನಗಳು ಲಭ್ಯವಿದ್ದು ಪ್ರಬುದ್ಧ ಮಾಹಿತಿ ಒದಗಿಸುತ್ತವೆ.

ಅಮ್ಮಿನಭಾವಿ ರಟ್ಟರ ರಾಜ ಪ್ರಭುತ್ವಕ್ಕೆ ಒಳಪಟ್ಟ ಗ್ರಾಮ ಅಮ್ಮಯ್ಯನೆಂಬ ಪಾಳೆಯಗಾರ ಇಲ್ಲಿ ದೊಡ್ಡದಾದ ಕುಡಿಯುವ ನೀರಿನ ಭಾವಿಯನ್ನು ಕಟ್ಟಿಸಿದನೆಂದು ಅದಕ್ಕೆ ಅಮ್ಮಯ್ಯನ ಭಾವಿ ಎಂದು ಕರೆಯುತ್ತಾ ದಿನಗಳೆದಂತೆ ಅದು ಅಮ್ಮಿನಭಾವಿ ಎಂದು ಪ್ರಸಿದ್ಧವಾಯಿತು ಎಂಬ ಹೇಳಿಕೆ. ಈ ಗ್ರಾಮದ ಹೃದಯ ಭಾಗದಲ್ಲಿರುವ ಶ್ರೀ ಪಂಚಗೃಹ ಹಿರೇಮಠವು ಪ್ರಸಿದ್ಧ ಅಗ್ರಹಾರವಾಗಿತ್ತೆಂದು ತಿಳಿದು ಬರುತ್ತದೆ. ಇದು ಶ್ರೇಷ್ಠ ವಿದ್ಯಾಕೇಂದ್ರವಿತ್ತೆಮದು ತಿಳಿಯುತ್ತದೆ. ಸ್ಪಷ್ಟ ದಾಖಲೆಗಳಿರುವ ಸುಮಾರು ೧೦೦೦ ವರ್ಷ ಇತಿಹಾಸವಿರುವ ಅಮ್ಮಿನಭಾವಿ ಪಂಚಗೃಹ ಹಿರೇಮಠವು ವೀರಶೈವ ಧರ್ಮದ ಶ್ರೀಜಗದ್ಗುರು ಪಂಚಾಚಾರ್ಯರ ಪಂಚಪೀಠಗಳಲ್ಲಿ ಒಂದಾಗಿರುವ ಬಾಳೇಹೊನ್ನೂರಿನ ಶ್ರೀಮದ್‌ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಖಾಸಾ ಶಾಖಾಮಠವು. ಈ ಕಟ್ಟಡದ ವಿನ್ಯಾಸ ಅತ್ಯಂತ ವಿರಳವಾದುದು. ಈ ಮಠದ ಛಾವಣಿ ಕೆಳಭಾಗದಲ್ಲಿ ಅಪರೂಪದ ಚಿತ್ರಕಲೆ ಅರಳಿದೆ. ಚಿಕಣಿ ಕಲೆ ಎಂದು ಪ್ರಸಿದ್ಧವಾಗಿರುವ ಈ ತೈಲ ಚಿತ್ರಗಳು ಸಹ ಅಪರೂಪದ್ದೆಂದು ಹೇಳಲಾಗುತ್ತಿದೆ.

ಈ ಗ್ರಾಮಕ್ಕೆ ಪುಷ್ಟಿ ನೀಡುವ ಇನ್ನೊಂದು ತಾಣ ಶ್ರೀ ೧೦೦೮ ನೇಮಿನಾಥ ತೀರ್ಥಂಕರರ ಜೈನ ಬಸದಿ. ಈ ಬಸದಿಯು ಅಪರೂಪದ ಶ್ರೀ ಚೌವ್ಹಿಸ ತೀರ್ಥಂಕರರ ಮೂರ್ತಿ ಇತಿಹಾಸದ ಪುಟಗಳನ್ನು ತಿರುಗಿಸುತ್ತದೆ. ಬ್ರಿಟೀಷರ ಕಾಲದಲ್ಲಿ ಈ ವಿಗ್ರಹವನ್ನು ಲಂಡನ್‌ಮ್ಯೂಜಿಯಂಗೆ ಕೊಂಡೊಯ್ಯುವ ಪ್ರಯತ್ನ ನಡೆದು ಗ್ರಾಮದ ಮುಖಂಡರ ಮನವಿಯ ಮೇರೆಗೆ ಇದೊಂದು ಧಾರ್ಮಿಕ ವಿಷಯವಾದ್ದರಿಂದ ಮೂರ್ತಿ ತರಕೊಡದೆಂದು ಬ್ರಿಟನ್‌ರಾಣಿಯ ಆಜ್ಞೆಯ ಮೇರೆಗೆ ಪುನಃ ಈ ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿತು. ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ನೀರು ಪೂರೈಸುವ ಮಲಪ್ರಭಾ ನೀರು ಜಲ ಶುದ್ಧೀಕರಣ ಕೇಂದ್ರವು ಇಲ್ಲಿದೆ. ಹಾಗೂ ಇದರ ಪಕ್ಕದಲ್ಲಿಯೇ ಗುಹೆಯನ್ನು ಸಹ ನೋಡಬಹುದು.

 

ಹೆಬ್ಬಳ್ಳಿ:

ಜಿಲ್ಲಾ ಕೇಂದ್ರದಿಂದ ದೂರ: ೧೬ ಕಿ ಮೀ
ತಾಲೂಕಾ ಕೇಂದ್ರದಿಂದ ದೂರ: ೧೬ ಕಿ ಮೀ

ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜರ ಮಂದಿರ

ಧಾರವಾಡದಿಂದ ನವಲಗುಂದ ಧಾರವಾಡ ಮಾರ್ಗದಲ್ಲಿ ಪೂರ್ವಕ್ಕೆ ೧೫ ಕಿ ಮೀ ದೂರದಲ್ಲಿದೆ ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಉತ್ತರಕ್ಕೆ ೧೫ ಕಿ ಮೀ ದೂರದಲ್ಲಿರುವ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದು ಹೆಬ್ಬಳ್ಳಿ. ಇದು ದೊಡ್ಡ ಊರಾಗಿದ್ದುದರಿಂದ ಹಿರಿದಾದ ಹಳ್ಳಿ ಹೆಬ್ಬಳ್ಳಿ ಎಂದು ಕರೆಯುತ್ತಿರಬಹುದು ಎಂಬುದು ಹಿರಿಯರ ಅನಿಸಿಕೆ.

ಈ ಗ್ರಾಮ ೧೦೧ ದೇವಸ್ಥಾನ, ೧೦೧ ಭಾವಿಗಳನ್ನು ಹೊಂದಿರುವ ಪುಣ್ಯ ಕ್ಷೇತ್ರ. ಮಹಾರಾಷ್ಟ್ರದ ಗೊಂದಾವಲೆಯಿಂದ ೧೯೦೯ರಲ್ಲಿ ಇಲ್ಲಿಗೆ ಆಗಮಿಸಿದ ಪೂಜ್ಯರು, ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜರ ಶಿಲಾ ಪಾದುಕೆಯನ್ನು ಸ್ಥಾಪಿಸಿದರು. ಇಲ್ಲಿ ಶ್ರೀ ಬ್ರಹ್ಮ ಚೈತನ್ಯ ಗೊಂದಾವಲೇಕರ ಮಹಾರಾಜರ ಮಂದಿರ, ಚಿಂತಾಮಣಿ ಮಹಾಗಣಪತಿ ಮಂದಿರ ಶ್ರೀ ರಾಮ ದೇವಸ್ಥಾನ, ದತ್ತ ದೇವಸ್ಥಾನ, ಚಿದಂಬರೇಶ್ವರ ದೇವಸ್ಥಾನ ಹೀಗೆ ಹೇಳುತ್ತ ಹೋದರೆ ೧೦೧ ದೇವಸ್ಥಾನಗಳ ಪಟ್ಟಿ ಬೆಳೆಯುತ್ತದೆ. ಗ್ರಾಮದ ಪೂರ್ವ ಭಾಗದಲ್ಲಿ ಇತಿಹಾಸ ಪ್ರಸಿದ್ಧ ೨೦೦ ವರ್ಷಗಳ ಇತಿಹಾಸವಿರುವ ಶ್ರೀ ಚಂದ್ರಲಾ ಪರಮೇಶ್ವರಿ ದೇವಸ್ಥಾನವಿದೆ. ಇದನ್ನು ಗ್ರಾಮಸ್ಥರು ಚಂಗಳೆಮ್ಮ ದೇವರು ಎಂದು ಕರೆಯುವ ರೂಢಿ ಇದೆ.

 

ಮುಗದ

ಜಿಲ್ಲಾ ಕೇಂದ್ರದಿಂದ ದೂರ: ೧೦ ಕಿ ಮೀ
ತಾಲೂಕಾ ಕೇಂದ್ರದಿಂದ ದೂರ: ೧೦ ಕಿ ಮೀ

ಭತ್ತದ ತಳಿ ಸಂಶೋಧನಾ ಕ್ಷೇತ್ರ

ಇದು ಧಾರವಾಡದಿಂದ ೧೦ ಕಿ ಮೀ ಅಂತರದಲ್ಲಿ ಧಾರವಾಡ ಅಳ್ನಾವರ ಮಾರ್ಗದಲ್ಲಿ ಧಾರವಾಡದಿಂದ ಪಶ್ಚಿಮಕ್ಕೆ ಇರುತ್ತದೆ. ಮಲೆನಾಡಿನ ಸೊಬಗನ್ನು ಹೊಂದಿರುವ ಈ ಗ್ರಾಮ ಧಾರವಾಡ ತಾಲೂಕಿನ ಭತ್ತದ ಕಣಜವಾಗಿದೆ. ಇಲ್ಲಿ ಕೃಷಿ ವಿಶ್ವವಿದ್ಯಾಲಯದ ಭತ್ತದ ತಳಿ ಸಂಶೋಧನಾ ಕೇಂದ್ರವಿದೆ. ೩೫ ಎಕರೆ ಪ್ರದೇಶದಲ್ಲಿ ೧೯೨೩ರಲ್ಲಿ ಸ್ಥಾಪನೆಯಾಗಿ ಇಂದಿಗೆ ವಿವಿಧ ತಳಿಗಳನ್ನು ನಾಡಿಗೆ ನೀಡಿದೆ. ಸುಗಂಧ ಸೂಸುವ ವಿಶೇಷ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಿದೆ.

 

ಅಳ್ನಾವರ ಜೇನು ಸಾಕಾಣಿಕಾ ಕೇಂದ್ರ:

ಜಿಲ್ಲಾ ಕೇಂದ್ರದಿಂದ ದೂರ: ೩೩ ಕಿ ಮೀ
ತಾಲೂಕಾ ಕೇಂದ್ರದಿಂದ ದೂರ: ೩೩ ಕಿ ಮೀ

ಇದು ಧಾರವಾಡದಿಂದ ೩೪ ಕಿ ಮೀ ದೂರದಲ್ಲಿ ಧಾರವಾಡ ಗೋವಾ ಮಾರ್ಗದಲ್ಲಿ ಪಶ್ಚಿಮ ದಿಕ್ಕಿಗೆ ಬರುತ್ತದೆ. ಇದು ಪಟ್ಟಣ ಪಂಚಾಯತ ಆಡಳಿತಕ್ಕೆ ಒಳಪಟ್ಟಿದೆ. ಇಲ್ಲಿ ೧೯೮೯ರಲ್ಲಿ ಜಿಲ್ಲಾ ಮಟ್ಟದ ಜೇನು ಕೃಷಿ ಕೇಂದ್ರವನ್ನು ಸ್ಥಾಪಿಸಲಾಯಿತು. ಇಂದು ಇದು “ಮಧುವನ” ಕೇಂದ್ರ ಎಂದು ರಾಜ್ಯದಲ್ಲೇ ಪ್ರಸಿದ್ಧವಾದ ಜೇನು ಸಾಕಾಣಿಕೆ ಕೇಂದ್ರವಾಗಿದೆ. ಇಲ್ಲಿ ಸುಮಾರು ೨೫ ಜೇನು ಕುಟುಂಬಗಳಿವೆ. ಹೊರ ಜಿಲ್ಲೆಗಳಿಂದ ತರಬೇತಿಗೆ ಇಲ್ಲಿಗೆ ಬರುತ್ತಾರೆ. ಹೊರ ರಾಜ್ಯಗಳಿಂದ ಮಧುವನ ವೀಕ್ಷಣೆಗೆ ಜನರು ಆಗಮಿಸುತ್ತಾರೆ. ಅಳ್ನಾವರ ಧಾರವಾಡ ಜಿಲ್ಲಾ ಕೇಂದ್ರದಿಂದ ದೂರವಿದ್ದರೂ ಧಾರವಾಡ ತಾಲೂಕಿಗೆ ಸಿಹಿಯನ್ನು ನೀಡುವ ಊರಾಗಿದೆ.