ಧೀರೇಂದ್ರ ಮಜುಂದಾರ್ಗಾಂಧೀಜಿಯವರ ಮಾರ್ಗವನ್ನನುಸರಿಸಿ ಹಳ್ಳಿಗರಿಗಾಗಿ ದುಡಿದ ಜನಸೇವಕರು. ಮದುವೆಯಾಗದೆ, ತಮ್ಮದೆಂದು ಏನೂ ಇಲ್ಲದೆ, ದೇಶಕ್ಕಾಗಿ ಬಾಳನ್ನೆ ಅರ್ಪಿಸಿದರು. ಸರ್ಕಾರದ ನೆರವು, ಇತರರ ಸಹಾಯ ಯಾವುದಕ್ಕೂ ಕಾಯದೆ ತಮ್ಮ ಸ್ಥಿತಿಯನ್ನು ತಾವೇ ಉತ್ತಮಗೊಳಿಸುವುದನ್ನು ಜನತೆಗೆ ಕಲಿಸಿದರು.

ಧೀರೇಂದ್ರ ಮಜುಂದಾರ್

ಧೀರೇಂದ್ರ ಮಜುಂದಾರ್ ಮಹಾತ್ಮಾ ಗಾಂಧಿಯವರ ಶಿಷ್ಯರು. ರಚನಾತ್ಮಕ ಕೆಲಸಗಾರರಲ್ಲಿ ಅವರದು ಅಗ್ರಸ್ಥಾನ. ಮೂಲ ಶಿಕ್ಷಣದಲ್ಲಿ ಅವರು ನಡೆಸಿದ ಪ್ರಯೋಗ ಅನಂತ, ಅಪಾರ ಖಾದೀ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸ ಮರೆಯಲಾಗದಂತಹುದು. ಕೃಷಿ, ಗ್ರಾಮೋದ್ಯೋಗ, ಅಸ್ಪೃಶ್ಯತಾ ನಿವಾರಣೆ, ಸಮಗ್ರ ಗ್ರಾಮಸೇವೆ ಮುಂತಾದ ಕಾರ‍್ಯ ಕ್ಷೇತ್ರಗಳಲ್ಲಿ ಅವರದು ಅವಿಶ್ರಾಂತ ದುಡಿತ. ಗಾಂಧಿಯವರಷ್ಟೇ ಸರಳ ಜೀವಿ. ಮೈ ಮೇಲೆ ಒಂದು ಬನೀನು, ಮೊಣಕಾಲ ಮೇಲೆ ಒಂದು ತುಂಡು ಪಂಚೆ, ಇದೇ ಅವರ ಉಡುಪು ಗ್ರಾಮಸ್ವರಾಜ್ಯ ಅವರ ಉಸಿರಾಗಿತ್ತು. ಅವರು ಬದುಕಿದ್ದೂ-ಬಾಳಿದ್ದೂ ಅದಕ್ಕಾಗಿಯೇ. ಜೀವನದ ಕೊನೆಯವರೆಗೂ ಅವರು ಅಧಿಕಾರಕ್ಕಾಗಿ ಆಸೆಪಡದೆ ಗ್ರಾಮಸ್ವರಾಜ್ಯಕ್ಕಾಗಿ ದುಡಿದರು. ಅಜನ್ಮ ಬ್ರಹ್ಮಚಾರಿ, ಮಹಾನ್ ಸಾಧಕ.

ಭೂತದ ಮನೆಯಲ್ಲಿ ವಾಸ

ಧೀರೇಂದ್ರರು ೧೯೦೦ರ ಸೆಪ್ಟಂಬರ್ ಹತ್ತರಂದು ಗೋರಖ್‌ಪುರದಲ್ಲಿ ಜನಿಸಿದರು. ತಂದೆ ನರೇಂದ್ರನಾಥ ಮಜುಂದಾರ್ ರೈಲ್ವೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದರು. ಇವರು ಬ್ರಹ್ಮ ಸಮಾಜದ ಅನುಯಾಯಿಗಳು. ನರೇಂದ್ರನಾಥರು ವಾಸವಾಗಿದ್ದ ಮನೆ ಭೂತದ ಮನೆಯೆಂದು ಹೆಸರಾಗಿತ್ತು. ಯಾರೂ ಆ ಮನೆಯಲ್ಲಿ ವಾಸ ಮಾಡಲು ಹಿಂಜರಿಯುತ್ತಿದ್ದರು. ಆದರೆ ನರೇಂದ್ರನಾಥರು ಧೈರ್ಯವಾಗಿ ಅದೇ ಮನೆಯಲ್ಲಿ ವಾಸವಾಗಿದ್ದರು.

ಬಾಲಕ ಧೀರೇಂದ್ರ ಓಡುವುದರಲ್ಲಿ ಬಹು ಗಟ್ಟಿಗ. ಎಲ್ಲರನ್ನೂ ಹಿಂದೆ ಹಾಕಿ ತಾನು ಯಾವಾಗಲೂ ಮುಂದಿರುತ್ತಿದ್ದ. ದೊಡ್ಡವರಂತೆ ಮಾತನಾಡುತ್ತಿದ್ದ.

ಕಾಲೇಜಿಗೆ ಶರಣು

ಲಹೋರಿಯಾ ಸರಾಯನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಧೀರೇಂದ್ರ ಮುಂದೆ ಕಾಶಿಯಹಿಂದೂ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ತರಗತಿಗೆ ಸೇರಿಕೊಂಡ. ಇದೇ ಕಾಲೇಜಿನ ಪ್ರಪ್ರಥಮ ಇಂಜನಿಯರಿಂಗ್ ತಂಡವೂ ಆಗಿತ್ತು.

ಆಗ ರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿತ್ತು. ೧೯೨೧ರಲ್ಲಿ ಗಾಂಧೀಜಿ ತಮ್ಮ ಅಸಹಕಾರ ಚಳವಳಿಯನ್ನು ಪ್ರಾರಂಭಿಸಿದರು. ಬ್ರಿಟಿಷ್ ಸರಕಾರದೊಡನೆ ಸಹಕರಿಸದಿರುವಂತೆ ರಾಷ್ಟ್ರದ ಜನತೆಗೆ ಕರೆಕೊಟ್ಟರು. ಕಾಲೇಜಿನಲ್ಲಿ ಓದುತ್ತಿದ್ದ ಅನೇಕ ಯುವಜನರು ಈ ಕರೆಗೆ ಓಗೊಟ್ಟರು. ಹಿಂದೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ ಧೀರೇಂದ್ರ ತನ್ನ ಸಹಪಾಠಿಗಳಾದ ವಿಚಿತ್ರಭಾಯಿ, ರಾಜಾರಾಮಭಾಯಿ, ಕಪಿಲಭಾಯಿ ಮುಂತಾದವರೊಡನೆ ಹೊರ ಬಂದು ಅಸಹಕಾರ ಚಳವಳಿಯಲ್ಲಿ ಧುಮುಕಿದ ಆಚಾರ್ಯ ಕೃಪಲಾನಿಯವರ ನೇತೃತ್ವದಲ್ಲಿ ಕಾಶಿಯ ಈಶ್ವರಗಂಗಿ ಮೊಹಲ್ಲಾ ಇವರ ಕಾರ‍್ಯಕ್ಷೇತ್ರವಾಯಿತು. ಖಾದಿಯ ಉತ್ಪತ್ತಿ ಮತ್ತು ಮಾರಾಟದಲ್ಲಿ ಇವರು ತೊಡಗಿದರು. ಆಚಾರ್ಯ ಕೃಪಲಾನಿಯವರು ‘ಗಾಂಧೀ ಆಶ್ರಮ’ ಸ್ಥಾಪಿಸಿದ ನಂತರ ಅಲ್ಲಿನ ಆಶ್ರಮವಾಸಿಗಳಾದರು.

ಆಶ್ರಮದಲ್ಲಿ

ಯುವಕ ಧೀರೇಂದ್ರ ವಿಶ್ವವಿದ್ಯಾನಿಲಯದಿಂದ ಬಂದವನು. ನಗರ ಮನೋವೃತ್ತಿ ಬೆಳೆಸಿಕೊಂಡ ಈತನಿಗೆ ಆಶ್ರಮದ ವಾತಾವರಣ ಮೊದಮೊದಲು ಒಗ್ಗಲಿಲ್ಲ. ಆಶ್ರಮದ ರೀತಿ-ನೀತಿಗಳು ಹಿಡಿಸಲಿಲ್ಲ. ಆಶ್ರಮ ಜೀವನಕ್ಕೆ ಹೊಂದಿಕೊಳ್ಳುವುದು ತುಂಬ ಕಠಿಣವೆನಿಸಿತು. ಧೀರೇಂದ್ರ ಎಲ್ಲರ ಜೊತೆ ಕುಳಿತು ಊಟ ಮಾಡುತ್ತಿರಲಿಲ್ಲ. ಬೇರೆಯಾಗಿಯೆ ತನ್ನ ತಟ್ಟೆಯಲ್ಲಿ ಊಟ ಬಡಿಸಿಕೊಂಡು, ಯಾರಿಗೂ ಕಾಣಿಸದಂತೆ ಹೊರಗೆ ಹೋಗಿ ಚೆಲ್ಲಿಬಿಡುತ್ತಿದ್ದ. ಆಮೇಲೆ ಹೋಟೆಲಿಗೆ ಹೋಗಿ ಊಟಮಾಡಿ ಬರುತ್ತಿದ್ದ. ಹೀಗೆಯೆ ಎಷ್ಟೋ ದಿನ ನಡೆಯಿತು. ಆದರೆ ತನ್ನ ಜೊತೆಗಾರರನ್ನು ನೋಡಿದಾಗ ಈತನಿಗೆ ಆಶ್ಚರ್ಯವಾಗುತ್ತಿತ್ತು. ಅವರ ಸರಳ ಜೀವನ ಈತನ ಕಣ್ಣು ತೆರೆಸಿತು. ತನ್ನ ಅವಿವೇಕಕ್ಕೆ ತಾನೇ ನೊಂದುಕೊಂಡು ಕ್ರಮೇಣ ಆಶ್ರಮಜೀವನಕ್ಕೆ ಒಗ್ಗಿಕೊಂಡ.

ಆಶ್ರಮವಿದ್ದುದು ಕಾಶಿಯಲ್ಲಿ. ನಗರದ ವಾತಾವರಣವಿದ್ದುದರಿಂದ ಹಳ್ಳಿಯ ಪರಿಸ್ಥಿತಿಯ ಬಗ್ಗೆ ತಿಳಿವಳಿಕೆ ಇರಲಿಲ್ಲ. ಗಾಂಧಿಯವರ ಭಾಷಣ ಮತ್ತು ಲೇಖನಗಳಿಂದ ಪ್ರಭಾವಿತನಾಗಿ ಧೀರೇಂದ್ರನಿಗೆ ಹಳ್ಳಿಗಳ ಸೇವೆ ಮಾಡಬೇಕೆಂಬ ಬಯಕೆ ಹುಟ್ಟಿತು. ಆಚಾರ್ಯ ಕೃಪಲಾನಿಯವರ ಪ್ರೇರಣೆಯಿಂದ ಖಾದಿಯ ಮೂಲಕ ಗ್ರಾಮ ಸಂಘಟನೆ ಮಾಡಲು ನಿರ್ಧರಿಸಿದ. ಅದಕ್ಕಾಗಿ ಒಂದು ದಿನ ಗೆಳೆಯ ರಾಜಾರಾಮ ಭಾಯಿಯೊಡನೆ ದೌರಹರಾ ಗ್ರಾಮಕ್ಕೆ ಹೊರಟ. ಗ್ರಾಮದಲ್ಲಿಯ ಮಣ್ಣಿನ ಮನೆಗಳು, ಸಂದಿಗೊಂದಿಗಳು, ತಿಪ್ಪೆಗುಂಡಿಗಳ ದುರ್ಗಂಧ ಇದೆಲ್ಲ ಆತನಿಗೆ ಅಸಹ್ಯವೆನಿಸಿತು. ಹಳ್ಳಿಜನರ ಬಟ್ಟೆ-ಬರೆ, ಅವರ ಹಾಸಿಗೆ, ಮನೆಯಲ್ಲೆ ದನಗಳ ಕೊಟ್ಟಿಗೆ, ಇವನ್ನು ನೋಡಿದಾಗ ಹಳ್ಳಿಗಳ ಬಗ್ಗೆ ಇದ್ದ ಶ್ರದ್ಧೆಯೂ ಹೊರಟುಹೋಯಿತು. ಮುಂದೇನು? ಮನಸ್ಸು ಹೊಯ್ದಾಡತೊಡಗಿತು. ಮತ್ತೆ ಕಾಲೇಜಿಗೆ ಹೋಗಿ ಸೇರಲೆ ಎಂದೂ ಅನಿಸುತ್ತಿತ್ತು. ಆದರೆ ಈ ಮಧ್ಯೆ ಯುವಕ ದಿನೇಶಚಂದ್ರ ಚಕ್ರವರ್ತಿಯ ಗೆಳೆತನವಾಯಿತು. ಈ ಯುವಕ ಹರಿಜನ ಸೇವೆಯಲ್ಲಿ ತೊಡಗಿದ್ದ. ಈತನಿಗೆ ಚಂದಾ ವಸೂಲಿ ಮಾಡಿಕೊಡುವುದು, ಈತನ ಜೊತೆಯಲ್ಲಿ ಹರಿಜನ ಕೇರಿಗಳಿಗೆ ಹೋಗುವುದು, ಅವರೊಡನೆ ಮಾತನಾಡುವುದು ಮುಂತಾದ ಕಾರ್ಯಕ್ರಮಗಳಲ್ಲಿ ಧೀರೇಂದ್ರ ಭಾಗವಹಿಸತೊಡಗಿದ. ಇದರಿಂದ ಹಳ್ಳಿಗರ ಬಗ್ಗೆ ಇದ್ದ ಬೇಸರದ ಭಾವನೆ ದೂರವಾಯಿತು. ಅವರ ಜೀವನದಲ್ಲಿ ಪರಿವರ್ತನೆಯಾಗ ಬೇಕು ಎಂಬ ಹಂಬಲ ಹೆಚ್ಚಿತು. ಆದರೆ ಇದನ್ನು ಸಾಧಿಸು ವುದು ಹೇಗೆ?

ಡಾಕ್ಟರ್ ಧೀರೇಂದ್ರ

ಆರಿಸಿಕೊಂಡದ್ದು ಗ್ರಾಮಸೇವೆ. ಆದರೆ ಜನರೊಡನೆ ಬೆರೆಯುವುದು, ಅವರ ತೊಂದರೆಗಳನ್ನರಿತು ಅವರಿಗೆ ಸಹಾಯ ಮಾಡುವುದು ಇದೆಲ್ಲ ಸುಲಭದ ಕೆಲಸವಾಗಿರಲಿಲ್ಲ. ಅದಕ್ಕಾಗಿ ಯೋಚನೆಮಾಡಿ ಒಂದು ನಿರ್ಧಾರಕ್ಕೆ ಬಂದರು. ಗ್ರಾಮಗಳಲ್ಲಿ ಅಶುಚಿ ಹೆಚ್ಚು. ಎಲ್ಲೆಲ್ಲೂ ಕೊಳಕು- ದುರ್ಗಂಧ. ಇದರಿಂದಾಗಿ ರೋಗರುಜಿನಗಳೂ ಸರ್ವಸಾಮಾನ್ಯ. ಜನಸಾಮಾನ್ಯರ ವಿಶ್ವಾಸಗಳಿಸಬೇಕಾದರೆ ಅವರ ಕಾಯಿಲೆ ಗುಣಪಡಿಸುವ ವೈದ್ಯ ತಾನಾಗಬೇಕು. ಈ ಮಾಧ್ಯಮದಿಂದ ಅವರ ಮಿತ್ರನಾಗಲು ಸಾಧ್ಯ. ಆಮೇಲೆ ಉಳಿದ ಕೆಲಸ ಸುಲಭವಾದೀತು ಎಂದು ಮನಸ್ಸಿನಲ್ಲಿ ನಿರ್ಧರಿಸಿದರು.

ಆಶ್ರಮದಲ್ಲಿದ್ದು ಹೋಮಿಯೋಪಥಿಕೆ ಚಿಕಿತ್ಸಾ ಪದ್ಧತಿಯ ಅಭ್ಯಾಸ ಮಾಡಲು ಮೊದಲಿಟ್ಟರು. ಇದಕ್ಕೆ ಪ್ರೇರಣೆ ದೊರೆತದ್ದು ಮೊದಲು ಕಾಶಿ ರಾಮಕೃಷ್ಣಾಶ್ರಮದಿಂದ. ಕಾಶಿಯಲ್ಲಿದ್ದಾಗ ಧೀರೇಂದ್ರರು ಪ್ರತಿನಿತ್ಯ ಆಶ್ರಮಕ್ಕೆ ಹೋಗುತ್ತಿದ್ದರು. ರಾಮಕೃಷ್ಣರ ಬಗ್ಗೆ ಅಪಾರ ಶ್ರದ್ಧೆ. ಅವರ ಜೀವನವನ್ನು ಆಳವಾಗಿ ಅಭ್ಯಾಸ ಮಾಡಿದ್ದರು. ಆಗಾಗ್ಗೆ ಸ್ವಾಮಿಗಳನ್ನು ಭೇಟಿಮಾಡಿ ಗ್ರಾಮಗಳ ಬಗ್ಗೆ ತನಗರುವ ಆಸಕ್ತಿಯನ್ನು ತೋಡಿಕೊಳ್ಳುತ್ತಿದ್ದರು. ‘ಹಳ್ಳಿಗರ ಪ್ರೀತಿ – ವಿಶ್ವಾಸ ಗಳಿಸಬೇಕಾದರೆ ಮೊದಲು ಔಷಧಿ ಕೊಡುವ ಕಲೆ ಕಾರ‍್ಯಕರ್ತನಿಗೆ ಗೊತ್ತಿರಬೇಕು’ ಎನ್ನುತ್ತಿದ್ದರು ಸ್ವಾಮೀಜಿ.

ಧೀರೇಂದ್ರರು ಗಾಂಧೀ ಆಶ್ರಮವಾಸಿಯಾಗಿ ಮೂರು ವರ್ಷ ಕಳೆಯಿತು. ಈ ಅವಧಿಯಲ್ಲಿ ಫೈಜಾಬಾದ್ ಜಿಲ್ಲೆಯ ಅಕಬರಪುರ ಧೌರಹರಾ ಮುಂತಾದ ಗ್ರಾಮಗಳಲ್ಲಿ ಚರಖಾ ಮತ್ತು ಖಾದೀ ಕೇಂದ್ರಗಳನ್ನು ತೆರೆದು ಪ್ರಚಾರ ಕಾರ‍್ಯ ಮಾಡುತ್ತಿದ್ದರು.

ಕೆಲವು ದಿನಗಳನಂತರ ತಮ್ಮ ಮಿತ್ರ ರಾಜಾರಾಮ ಭಾಯಿಯ ಸಲಹೆಯಂತೆ ಅಕಬರಪುರ ಹಳ್ಳಿಗೆ ಹೋಗಿ ಧೀರೇಂದ್ರರು ನೆಲೆಸಿದರು. ಅಲ್ಲಿದ್ದುಕೊಂಡು ಸುತ್ತಲಿನ ಹಳ್ಳಿಗಳಿಗೆ ಭೇಟಿನೀಡಿ ರೋಗಿಗಳಿಗೆ ಔಷಧಿ ಕೊಡುವ ಕಾರ್ಯ ಆರಂಭಿಸಿದರು. ಕೆಲವೇ ದಿನಗಳಲ್ಲಿ ಧೀರೇಂದ್ರ ಡಾಕ್ಟರ್ ಧೀರೇಂದ್ರರಾಗಿ ಪ್ರಖ್ಯಾತರಾದರು. ನಗರ ಜೀವನದಿಂದ ಗ್ರಾಮ ಜೀವನಕ್ಕೆ ತನ್ನನ್ನು ಅರ್ಪಿಸಿಕೊಂಡರು.

೧೯೨೩ ನೇ ಸೆಪ್ಟಂಬರ್ ತಿಂಗಳಲ್ಲಿ ಧೀರೇಂದ್ರರ ಗ್ರಾಮಸೇವಾ ಕಾರ‍್ಯ ಆರಂಭವಾಯಿತು.

ಆಕಬರಪುರದಿಂದ ಹನ್ನೆರಡು ಮೈಲಿ ದೂರದ ಟಾಂಡಾ ಗ್ರಾಮದಲ್ಲಿ ಇನ್ನೊಂದು ಆಶ್ರಮ ಸ್ಥಾಪಿಸಲು ಧೀರೇಂದ್ರ ನಿರ್ಧರಿಸಿದರು. ೧೯೨೩ ನೇ ನವಂಬರ್ ತಿಂಗಳು ಮಳೆಗಾಲ. ಒಬ್ಬ ಹುಡುಗನ ಸಂಪರ್ಕ ಬೆಳೆಸಿ ಆ ಹಳ್ಳಿಯ ಒಂದು ಚಿಕ್ಕ ಕೋಣೆಯಲ್ಲಿ ಮೊದಲ ದಿನ ತಂಗಬೇಕಾಯಿತು. ಆಗಿನ ದಿನಗಳಲ್ಲಿ ಡಾಕ್ಟರ್ ಧೀರೇಂದ್ರ ದಿನವೂ ಎರಡು ಹೊತ್ತು ಸ್ನಾನ ಮಾಡುತ್ತಿದ್ದರು. ಸಾಯಂಕಾಲದ ಸ್ನಾನ ಮುಗಿಸಿ ಹುಡುಗನನ್ನು ಕರೆದು:

‘‘ಇಲ್ಲಿ ಏನೇನು ತಿಂಡಿ ಸಿಗುತ್ತದೆ? ಹೋಟೆಲ್ ಏನಾದರು ಇದೆಯೆ?’’ ಎಂದು ಕೇಳಿದರು.

‘‘ಏನೂ ಸಿಕ್ಕುವುದಿಲ್ಲ’’ ಎಂದ ಹುಡುಗ.

‘‘ನಿನ್ನ ಮನೆಯಿಂದಲೆ ಚಪಾತಿ ಮಾಡಿಸಿಕೊಂಡು ಬರುವೆಯ?’’ ಎಂದು ಕೇಳಿದರು ಧೀರೇಂದ್ರರು.

ಹುಡುಗನಿಗೆ ಅಳುಕು. ಅವನು ಮುಸ್ಲಿಂ ಹುಡುಗ. ಧೀರೇಂದ್ರರು ಹಿಂದುಗಳು. ಆದರೆ ಧೀರೇಂದ್ರರು ಹಿಂದೆಗೆಯಲಿಲ್ಲ. ಅವನು ಅವರನ್ನು ತಮ್ಮ ಮನೆಗೇ ಕರೆದ, ಹೋದರು. ಅವನ ತಾಯಿ ಅಡುಗೆ ಮಾಡುತ್ತಿದ್ದಳು.

ಬಿಸಿಬಿಸಿ ಚಪಾತಿಗಳನ್ನು ಮಾಡಿ ಅತಿ ಪ್ರೀತಿಯಿಂದ ಬಡಿಸಿದ ಆ ಹೆಂಗಸಿನ ಮಾತೃವಾತ್ಸಲ್ಯ ಧೀರೇಂದ್ರರನ್ನು ಗದ್ಗದಿತರನ್ನಾಗಿ ಮಾಡಿತು. ಭಾರತೀಯ ಸಂಸ್ಕೃತಿಯ ಅವಶೇಷವಿರುವುದು ಹಳ್ಳಿಯ ಸ್ತ್ರೀಯರಲ್ಲಿ, ಯಾವ ಮತ, ಯಾವ ಜಾತಿ ಆದರೇನು ಎಲ್ಲರೂ ಒಂದೇ ಎಂದುಕೊಂಡರು ಮನಸ್ಸಿನಲ್ಲಿ.

ನಿಮ್ಮ ತಟ್ಟೆಯಲ್ಲೆ ನನಗೂ ಊಟ ಹಾಕಿ

ಒಮ್ಮೆ ಖಾದಿ ಪ್ರಚಾರ ಮಾಡುತ್ತಾ ಧೀರೇಂದ್ರರು ಟಾಂಡಾ ದಿಂದ ೧೬ ಮೈಲಿ ದೂರವಿರುವ ಹಂಸವರ ಎಂಬ ಹಳ್ಳಿಗೆ ಹೋದರು. ಆಗಲೆ ಸಾಯಂಕಾಲವಾಗಿತ್ತು. ರಾತ್ರಿ ಅಲ್ಲೆ ತಂಗಿದ್ದರು.

ಹಳ್ಳಿಯಲ್ಲಿ ಬೇರೆ ಬೇರೆ ಜಾತಿಯವರಿದ್ದರು. ಧೀರೇಂದ್ರರು ಕೆಲವು ಮನೆಗಳಿಗೆ ಹೋಗಿ ರಾತ್ರಿ ಇರಲು ಸ್ಥಳ ಬೇಡಿದರು. ಯಾರೂ ಒಪ್ಪಲಿಲ್ಲ.

ಮಾರ್ಚ್ ತಿಂಗಳಾಗಿದ್ದರಿಂದ ಇನ್ನೂ ಮಳೆಗಾಲ ಆರಂಭವಾಗಿರಲಿಲ್ಲ. ಧೀರೇಂದ್ರರು ಊರ ಹೊರಗಿನ ಬಾವಿಯ ಹತ್ತಿರ ಹೋಗಿ, ಅಲ್ಲಿಯ ಹಾಸುಗಲ್ಲಿನ ಮೇಲೆ ಮಲಗಿಕೊಂಡರು. ೧೬ ಮೈಲಿ ನಡೆದುಬಂದಿದ್ದ ದಣಿವು, ಹಸಿವು ಬೇರೆ. ಪರಸ್ಥಳ. ಯಾರನ್ನು ಕೇಳುವುದು? ಇರಲು ಸ್ಥಳವನ್ನೇ ಕೊಡದ ಜನರಿಂದ ಆಹಾರ ಬೇಡುವುದು ಹೇಗೆ? ಧೀರೇಂದ್ರರು ಕಲ್ಲಿನ ಮೇಲೆ ಒರಗಿಕೊಂಡು ಆಕಾಶವನ್ನೆ ದಿಟ್ಟಿಸುತ್ತಿದ್ದರು.

ಅಷ್ಟರಲ್ಲಿ ಪಕ್ಕದ ಮಾವಿನ ತೋಟದಿಂದ ಒಬ್ಬ ಹೆಂಗಸು, ‘‘ಬಾವಿಯ ಹತ್ತಿರ ಯಾರು ಮಲಗಿರುವವರು?’’ ಎಂದು ಕೂಗಿದಳು.

ಗ್ರಾಮದ ಜನರಿಂದ ಬೇಸತ್ತಿದ್ದ ಧೀರೇಂದ್ರರು ‘‘ಯಾರಾದರೇನು? ನಿಮಗೇಕೆ ನನ್ನ ಗೊಡವೆ?’’ ಎಂದು ಬೇಸರದಿಂದಲೆ ನುಡಿದರು.

‘‘ನಿಮ್ಮ ಮನೆ ಎಲ್ಲಿದೆ? ಯಾರ ಮನೆಯವರು ನೀವು?’’ ಎಂದು ಮತ್ತೆ ಕೇಳಿದಳು ಆ ಹೆಂಗಸು.

ನಡೆದ ಘಟನೆಯನ್ನೆಲ್ಲಾ ಧೀರೇಂದ್ರರು ತಿಳಿಸಿದಾಗ: ನಮ್ಮ ‘‘ಮನೆಗೆ ನಡಿಯಿರಿ’’  ಎಂದು ಆಕೆ ಡಾಕ್ಟರನನ್ನು ತನ್ನ ಮನೆಗೆ ಕರೆದುಕೊಂಡು ಹೋದಳು.

ಆ ಮನೆಯೊ ಮನೆಯಂತಿರಲೇ ಇಲ್ಲ ಒಂದು ಚಿಕ್ಕ ಗುಡಿಸಲು. ಎತ್ತರವೊ ಮೂರೆಮೂರು ಮೊಳ. ಒಳಗಡೆ ಹುಲ್ಲಿನ ಛಾವಣಿಯ ಸಂದುಗಳಿಂದ ಚಂದಿರನ ಬೆಳಕು ಹರಡಿತ್ತು. ಒಂದೇ ಒಂದು ಮುರುಕು ಬಾಗಿಲು.ಗುಡಿಸಿ ಸಾರಿಸಿದ್ದ ಅಂಗಳದಲ್ಲಿ ಒಬ್ಬ ಮುದುಕ ಕುಳಿತು ಬೀಡಿ ಸೇದುತ್ತಿದ್ದ.

‘‘ನಿಮ್ಮ ಹತ್ತಿರ ತಟ್ಟೆ-ಗಿಟ್ಟೆ ಏನಾದರು ಇದೆಯೆ?’’ಎಂದು ಕೇಳಿದಳು ಆ ಹೆಂಗಸು.

‘‘ಈ ರೆsಳಿ ಒಂದನ್ನು ಬಿಟ್ಟರೆ ನನ್ನ ಹತ್ತಿರ ಏನೂ ಇಲ್ಲ’’ ಎಂದರು ಧೀರೇಂದ್ರರು.

ಆಗ ಆಕೆ ಕೂಡಲೆ ಮಣ್ಣಿನ ತಟ್ಟೆ ತರಲು ಕುಂಬಾರನ ಮನೆಗೆ ಹೊರಟಳು. ತಾನು ಮೇಲು ಜಾತಿಯವನು, ತನಗೆ ಮನೆಯವರು ಬಳಸುತ್ತಿದ್ದ ತಟ್ಟೆ ಇಡಲು ಆಕೆಗೆ ಹಿಂಜರಿಕೆ ಎಂದು ಧೀರೇಂದ್ರರಿಗೆ ಅರ್ಥವಾಯಿತು.

‘‘ನಿಮ್ಮ ತಟ್ಟೆಯಲ್ಲೇ ನನಗೆ ಊಟ ಬಡಿಸಿ, ಪರವಾಗಿಲ್ಲ. ನಾನೂ ಮನುಷ್ಯ. ನೀವೂ ಮನುಷ್ಯರು’’ ಎಂದರು.

ಈ ಮಾತು ಆಕೆಗೆ ಸಂತೋಷವನ್ನುಂಟು ಮಾಡಿತು. ದಾರಿದ್ರ್ಯದಲ್ಲೂ ಮಾನವತೆಯ ದರ್ಶನ ಮಾಡಿಸುವ ಸಂಸ್ಕೃತಿಗೆ ಜಾತಿಯ ಬೆಲೆ ಕಟ್ಟಲುಂಟೆ! ಇದು ಧೀರೇಂದ್ರರ ಮನಸ್ಸಿನಲ್ಲಿ ಮರೆಯಲಾಗದ ಸ್ಮೃತಿಯಾಗಿ ಉಳಿದುಹೋಯಿತು.

ಬಡತನವೇ ಎಲ್ಲ ಕೆಡುಕಿಗೂ ಮೂಲ

ಟಾಂಡಾ ಗ್ರಾಮದ ಸುತ್ತುಮುತ್ತ ಒಮ್ಮೆ ಕಾಲರ ಬೇನೆ ಹರಡಿತು. ಪ್ರತಿ ಗ್ರಾಮದಲ್ಲೂ ಜನ ಈ ಬೇನೆಗೆ ತುತ್ತಾಗಿದ್ದರು. ಗ್ರಾಮಗಳ ಸಂಪರ್ಕವೇ ಕಡಿದು ಹೋಗಿತ್ತು. ಊರಿಂದೂರಿಗೆ ಹೋಗುವ ಧೈರ್ಯ ಯಾರಿಗೂ ಇರಲಿಲ್ಲ. ಸುಡುವ ಬಿಸಿಲಿನಲ್ಲಿ ಧೀರೇಂದ್ರರು ಔಷಧದ ಪೆಟ್ಟಿಗೆಯೊಂದಿಗೆ ಊರೂರು ಸುತ್ತತೊಡಗಿದರು. ಡಾಕ್ಟರರನ್ನು ನೋಡಿ ಎಲ್ಲರಿಗೂ ಆಶ್ಚರ್ಯ. ಅವರು ಹಿಂತಿರುಗಿ ಹೋಗುವಂತೆ ಸಲಹೆ ಮಾಡಿದರು. ಆದರೆ ಅದಕ್ಕೆ ಡಾಕ್ಟರ್ ಎದೆಗುಂದಲಿಲ್ಲ.

ಜನರಲ್ಲಿ ಒಂದು ಬಗೆಯ ಮೂಢನಂಬಿಕೆಗಳು ಬೇರೂರಿದ್ದವು. ಕಾಲರ ಬೇನೆ ಮಾತೆ ಭವಾನಿಯ ಕೋಪವೆಂದೇ ಅವರ ಭಾವನೆ. ಆದ್ದರಿಂದ ಅವರು ಧೀರೇಂದ್ರರಿಗೆ ಹಿಂತಿರುಗಿ ಹೋಗುವಂತೆ ಹೇಳುತ್ತಿದ್ದರು. ಬಹುಪಾಲು ಜನ ಔಷಧವನ್ನು ಸ್ವೀಕರಿಸುತ್ತಿರಲಿಲ್ಲ. ಆದರೆ ಧೀರೇಂದ್ರರರು ಇದರಿಂದ ಎದೆಗುಂದಲಿಲ್ಲ. ಧೈರ್ಯವಾಗಿ ಮುಂದುವರೆದು ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದರು. ಜನರ ಇಂತಹ ನಂಬಿಕೆಗಳಿಗೆ ಅವರ ಬಡತನವೇ ಮುಖ್ಯ ಕಾರಣವೆಂದು ಧೀರೇಂದ್ರರಿಗೆ ಮನವರಿಕೆ ಆಯಿತು. ಈ ಓಡಾಟದ ನಡುವೆ ಧೀರೇಂದ್ರರೇ ಕಾಯಿಲೆ ಬಿದ್ದರು. ಆದರೆ ಧೈರ್ಯಗುಂದಲಿಲ್ಲ. ವೈದ್ಯರೊಬ್ಬರು ಅವರಿಗೆ ಚಿಕಿತ್ಸೆ ಮಾಡಿದರು. ಧೀರೇಂದ್ರರು ಉಳಿದರು.

ರಣೀವಾ ಆಶ್ರಮ ಸ್ಥಾಪನೆ

ಇದುವರೆಗೂ ಗ್ರಾಮಗಳು ಸುತ್ತಾಡಿ ಪ್ರಚಾರ ಕಾರ‍್ಯ ನಡೆಸುತ್ತಿದ್ದ  ಧೀರೇಂದ್ರರಿಗೆ ಒಂದು ಕಡೆಕುಳಿತು ಕೆಲಸ ಮಾಡಬೇಕೆಂದೆನಿಸಿತು. ಅದಕ್ಕಾಗಿ ಫೈಜಾಬಾದ್ ಜಿಲ್ಲೆಯ ರಣೀವಾ ಗ್ರಾಮವನ್ನು ಆರಿಸಿಕೊಂಡರು. ೧೯೩೪ರಲ್ಲಿ ಡಿಸೆಂಬರ್ ೩೧ ರಂದು ಈ ಗ್ರಾಮಕ್ಕೆ ಪದಾರ್ಪಣೆ ಮಾಡಿದರು.

ಆಯೋಧ್ಯೆಗೆ ಸಮೀಪವಿರುವ ರಣೀವಾ ೫೦ ಮನೆಗಳ ಹಳ್ಳಿ. ರಸ್ತೆಗಳಿಲ್ಲದಿದ್ದುದರಿಂದ ಹೊರಗಿನ ಸಂಪರ್ಕ ಕಡಿಮೆ. ಸರಕಾರಿ ಅಧಿಕಾರಿಗಳೂ ಹೆಚ್ಚಾಗಿ ಬರುತ್ತಿರಲಿಲ್ಲ. ಯಾವುದೇ ಆಂದೋಳನ ನಡೆಯುವುದೂ ಸಾಧ್ಯವಿರಲಿಲ್ಲ. ಇಂತಹ ಕುಗ್ರಾಮವನ್ನೇ ಧೀರೇಂದ್ರರು ಆರಿಸಿಕೊಂಡರು. ಸಮಗ್ರ ಗ್ರಾಮಸೇವೆಯ ಕಾರ‍್ಯ ಇಲ್ಲಿಂದಲೇ ಆರಂಭವಾಗಬೇಕೆಂದು ನಿರ್ಧರಿಸಿದರು.

ಮೊದಲು ಚರಖಾದಿಂದ ನೂಲು ತೆಗೆಯುವ ಕಾರ‍್ಯ ಆರಂಭವಾಯಿತು.

ಮೊದಮೊದಲು ಜನರಿಗೆ ಇದರಲ್ಲಿ ಆಸಕ್ತಿ ಇರಲಿಲ್ಲ. ಆದರೆ ಗ್ರಾಮದ ಪ್ರಮುಖ ಲಲಿತಾ ಪ್ರಸಾದ ಮಿಶ್ರ ನಿಯಮಿತವಾಗಿ ನೂಲು ತೆಗೆಯಲು ಆರಂಭಿಸಿದರು. ಇದರಿಂದ ಹಳ್ಳಿಯವರಲ್ಲಿ ಉತ್ಸಾಹ ಮೂಡಿತು. ಕ್ರಮೇಣ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹಳ್ಳಿಯಲ್ಲಿ ತಯಾರಾದ ನೂಲಿನಿಂದಲೇ ಸೀರೆ-ಪಂಚೆ ತಯಾರಾದುದು ಅಲ್ಲಿನ ಇತಿಹಾಸದಲ್ಲೆ ಒಂದು ವಿಕ್ರಮ ಸಾಧಿಸಿದಂತಾಯಿತು. ಆಗ ಅವರಿಗಾದ ಆನಂದ ಹೇಳತೀರದು. ಜನ ಕುಣಿದಾಡಿದರು. ಮನೆಯಿಂದ ಹೊರಗೆ ಬರದ ಹೆಂಗಸರು ತಾವಿದ್ದಲ್ಲಿಗೆ ಈ ಸೀರೆ-ಪಂಚೆ ತರಿಸಿ ಕೌತುಕದಿಂದ ನೋಡುತ್ತಿದ್ದರು. ಅವರಿಗೆ ಇದೆಲ್ಲ ತಮಾಷೆಯಾಗಿ ಕಾಣುತ್ತಿತ್ತು. ಜನ ಸಂತೆಯಂತೆ ನೆರೆಯುತ್ತಿದ್ದರು. ತಮ್ಮ ನೂಲಿನಿಂದ ತಯಾರಾದ ಬಟ್ಟೆಯಲ್ಲವೆ! ಎಷ್ಟು ನೋಡಿದರೂ ಅವರಿಗೆ ತೃಪ್ತಿಯಿಲ್ಲ. ಇದರಿಂದ ಪ್ರಚಾರ ಕಾರ್ಯ ತನಗೆ ತಾನೆ ಬೆಳೆಯಿತು. ಎಲ್ಲರೂ ನೂಲುವುದರಲ್ಲಿ ಮುಂದಾದರು.

ಊರಿನ ಮುಖಂಡ ಪಂಡಿತ ಲಲಿತಾ ಪ್ರಸಾದ ಹೇಳಿದ: ‘‘ಧೀರೇಂದ್ರಭಾಯಿ, ನೀವು ಬಂದಿದ್ದರಿಂದ ನಮ್ಮ ಜನರ ಬಟ್ಟೆಯ ಸಮಸ್ಯೆ ಬಗೆಹರಿಯಿತು. ಇಲ್ಲಿಯ ಮಕ್ಕಳು ತಮ್ಮ ಕೈಯಿಂದ ಮಾಡುವ ಯಾವುದೇ ಕೆಲಸ ಕೀಳೆಂದು ಬಗೆಯುವುದಿಲ್ಲ. ಎಂತಹ ಪರಿವರ್ತನೆ ಇದು! ಬೆಳಿಗ್ಗೆ ಎದ್ದೊಡನೆ ಹಲ್ಲುಜ್ಜಿ, ನನ್ನ ಮನೆಯ ಅಂಗಳವನ್ನು ನಾನು ಗುಡಿಸದೆ ಹೋದರೆ ನನಗೆ ಸಮಾಧಾನವೇ ಆಗದು. ನನ್ನಂತೆಯೇ ಹಳ್ಳಿಯ ಜನರೂ ತಮ್ಮ ತಮ್ಮ ಮನೆಗಳನ್ನು ಚೊಕ್ಕಟವಾಗಿಟ್ಟುಕೊಳ್ಳತೊಡಗಿದ್ದಾರೆ’’ ಎಂದು.

ಹೋಳಿ ಹಬ್ಬದ ಹೊಸ ಕಾರ್ಯಕ್ರಮ

ಕೇವಲ ಮೂರು ತಿಂಗಳ ಅವಧಿಯಲ್ಲಿ ಧೀರೇಂದ್ರ ಗ್ರಾಮದವರಾಗಿಬಿಟ್ಟರು. ಪ್ರತಿಯೊಂದು ಮನೆಯವರೂ ಅವರನ್ನು ತಮ್ಮವರೆಂದೆ ಪರಿಗಣಿಸುತ್ತಿದ್ದರು. ಅಷ್ಟೊಂದು ಸಲಿಗೆ-ವಿಶ್ವಾಸ ಗಳಿಸಿಕೊಂಡಿದ್ದರು ಅಷ್ಟರಲ್ಲಿ ಹೋಳಿ ಹಬ್ಬ ಬಂತು. ಇದು ದೊಡ್ಡ ಹಬ್ಬ. ಮನೆಯ ಒಳಗೆ ಹೊರಗೆ ಸ್ವಚ್ಛವಾಗಿ ಗುಡಿಸಿ ಸಾರಿಸುವುದು ಜನರಿಗೆ ಗೊತ್ತಿತ್ತು. ಆದರೆ ಇಡೀ ಗ್ರಾಮವನ್ನೆ ಸ್ವಚ್ಛಗೊಳಿಸುವುದು ಅವರಿಗೆ ಹೊಳೆದಿರಲಿಲ್ಲ ಊರಿನ ಗಲ್ಲಿಗಳು, ಕೇರಿಗಳು ಹೇಗಿದ್ದರೇನು? ಕೊಳಕು-ದುರ್ಗಂಧದತ್ತ ಅವರ ಗಮನವೇ ಇರಲಿಲ್ಲ. ಇದು ಸೂಕ್ತ ಸಮಯವೆಂದರಿತು ಧೀರೇಂದ್ರರು ಗ್ರಾಮದ ಜನರನ್ನೆಲ್ಲ ಒಟ್ಟಿಗೆ ಸೇರಿಸಿ, ಗ್ರಾಮ ಸ್ವಚ್ಛತೆಯ ಕೆಲಸಕ್ಕೆ ತೊಡಗಿದರು.

ಸ್ವಲ್ಪ ಹೊತ್ತಿನಲ್ಲಿ ಇಡೀ ಗ್ರಾಮವೆ ಚೊಕ್ಕಟವಾಗಿ ಹೋಯಿತು.

ದುಡಿದು ತಿನ್ನುವ ಅನ್ನವೆ ಶ್ರೇಷ್ಠ

ಧೀರೇಂದ್ರರು ವಾಸವಾಗಿದ್ದ ಮನೆಯವರ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು. ಹಿಂದಿನ ಕಾಲದಲ್ಲಿ ಇವರು ಚೆನ್ನಾಗಿ ಬದುಕಿ ಬಾಳಿದವರೆ ಆದರೆ ಸಾಲದಿಂದಾಗಿ ಇವರ ಆಸ್ತಿ ಪರರ ಪಾಲಾಯಿತು. ಎರಡು ಹೊತ್ತು ಊಟಕ್ಕೂ ಗತಿಯಿಲ್ಲದ ಪರದೇಶಿಗಳಾದರು. ಮನೆಯ ಭಾರವೆಲ್ಲ ಒಬ್ಬ ವಿಧವೆಯ ಮೇಲೆಯೆ. ಆಕೆಯ ಮಕ್ಕಳಿಗೂ ಕೆಲಸವಿರಲಿಲ್ಲ. ಸ್ವಂತ ಜಮೀನೂ ಇರಲಿಲ್ಲ. ಪರಿಶ್ರಮ ಮಾಡುವುದೆಂದರೆ ಗೌರವ ಮರ್ಯಾದೆಯ ಪ್ರಶ್ನೆ. ಜೊತೆಗೆ ಬ್ರಾಹ್ಮಣ ಹೆಂಗಸು ಬೇರೆ. ಧೀರೇಂದ್ರರು ಸಮಯ ನೋಡಿ ನೇಯಿಗೆಯ ಕೆಲಸಕ್ಕಾಗಿ ಈಕೆಯ ಮನ ಒಲಿಸಲು ಪ್ರಯತ್ನಿಸಿದರು. ಕೆಲಸದಲ್ಲಿ ‘ಇದು ಮೇಲು’, ‘ಇದು ಕೀಳು’ ಎಂದು ಬಗೆಯಬಾರದು, ಜೀವನ ನಿರ್ವಹಣೆಗಾಗಿ ಮಾಡುವ ಎಲ್ಲ ಕೆಲಸ ಒಂದೆ. ಇದರಲ್ಲಿ ಮರ್ಯಾದೆಯ ಪ್ರಶ್ನೆ ಬರದು. ನಾವೆ ಮಾಡುತ್ತಿಲ್ಲವೆ? ನಮ್ಮ ಮರ್ಯಾದೆ ಏನಾದರು ಹೋಗಿದೆಯೆ? ಬಡತನ ಬಹಳ ಕೆಟ್ಟದ್ದು. ಬಡವರನ್ನು ಯಾರೂ ಮಾತನಾಡಿಸರು. ಅಲ್ಲದೆ ಕೆಲಸವಿಲ್ಲದೆ ಬೇರೆಯವರ ಕೃಪಾಶ್ರಯದಲ್ಲಿದ್ದು ತಿನ್ನುವ ಅನ್ನಕ್ಕಿಂತಲೂ ದುಡಿದು ತಿನ್ನುವ ಅನ್ನವೆ ಶ್ರೇಷ್ಠ. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯೂ ಸುಧಾರಿಸಿ ನಿಮ್ಮ ಪ್ರತಿಷ್ಠೆಯೂ ಬೆಳೆಯುವುದು’’ ಎಂದು ತಿಳಿಯಹೇಳಿದರು. ಕೊನೆಗೆ ಆಕೆಯ  ಒಬ್ಬ ಮಗ ನೇಯಿಗೆ ಕೆಲಸ ಕಲಿಯಲು ಮುಂದಾದ. ಇದರಿಂದ ಇಡೀ ಗ್ರಾಮದಲ್ಲೆ ವಾದವಿವಾದ ಪ್ರಾರಂಭವಾಯಿತು. ಏನೇ ಆದರೂ ಜಗ್ಗಲಿಲ್ಲ. ವಿಧವೆ ತಾಯಿಯ ಬೆಂಬಲವೂ ದೊರೆಯಿತು. ಆದರೆ ಹಿರಿಯ ಮಗ ಒಪ್ಪಿರಲಿಲ್ಲ. ಒಂದು ದಿನ ತಾಯಿಗೆ ಕರೆದು ಹೇಳಿದ: ‘‘ನೀವು ನೇಯಿಗೆಯವರಾಗಿಬಿಟ್ಟಿರಿ. ಕೀಳು ಜಾತಿಗೆ ಸೇರಿ ಹೋದಿರಿ ಎಂದು ಜನ ಆಡಿಕೊಳ್ಳುತ್ತಿದ್ದಾರೆ.’’

ಅದಕ್ಕೆ ತಾಯಿ: ‘‘ಧೀರೇಂದ್ರಭಾಯಿಯಂತಹವರು ನೇಯ್ಗೆ ಕೆಲಸ ಮಾಡುತ್ತಿಲ್ಲವೆ? ಇದರಿಂದಾಗಿ ಅವರ ಮರ್ಯಾದೆ ಏನಾದರೂ ಹೋಗಿದೆಯೆ? ಇದೆಲ್ಲ ನಾವು ತಲೆಗೆ ಹಚ್ಚಿಕೊಳ್ಳಬೇಕಾಗಿಲ್ಲ, ಹೊಟ್ಟೆಗಿಲ್ಲದೆ ನಾವು ಸಾಯುತ್ತಿರುವಾಗ, ನಮ್ಮನ್ನು ಟೀಕಿಸುವವರು ನಮಗೆ ಅನ್ನ ಹಾಕುತ್ತಾರೆಯೆ?’’ ಎಂದು ಬೆಂದ ಹೃದಯದಿಂದ ಸವಾಲು ಹಾಕಿದಳು.

ಸ್ವಲ್ಪ ಕಾಲವಾದ ಮೇಲೆ ಹಿರಿಯ ಹುಡುಗನೂ ನೇಯಿಗೆ ಕೆಲಸಕ್ಕೆ ಸೇರಿಕೊಂಡ. ಬರುಬರುತ್ತಾ ಈ ಗ್ರಾಮದ ಹುಡುಗರೆಲ್ಲಾ ಇದೇ ಕೆಲಸ ಆರಂಭಿಸಿದರು.

ಕಾಡೇ ಆಶ್ರಮವಾಯಿತು

ಗೆಳೆಯ ಲಲಿತಾ ಪ್ರಸಾದರೊಡನೆ ಧೀರೇಂದ್ರರು ಒಂದು ದಿನ ಸಾಯಂಕಾಲ ಹೊರಗಡೆ ಹೊರಟರು. ಸ್ವಲ್ಪದೂರ ಹೋದಮೇಲೆ ಅರಣ್ಯ ಕಣ್ಣಿಗೆ ಕಾಣಿಸಿತು. ಅಲ್ಲೆ ಒಂದು ಬತ್ತಿದ ಕೆರೆ. ಅದರ ಸುತ್ತಮುತ್ತ ಹರಡಿದ ವನಶ್ರೀ. ಕಣ್ಣಿಗೆ ಇಂಪಾಗಿ ಕಾಣಿಸಿತು. ಇಲ್ಲೆ ಆಶ್ರಮ ಏಕೆಮಾಡಬಾರದು? ಊರಿಗೂ ಹತ್ತಿರದಲ್ಲಿದೆ. ಪ್ರಶಾಂತವಾದ ಸ್ಥಳ’ ಎಂದು ಮನಸ್ಸು ಲೆಕ್ಕಹಾಕಿತು.

ಪಕ್ಕದಲ್ಲಿದ್ದ ಪ್ರಸಾದರಿಗೆ ‘ಇದು ಯಾರ ಜಮೀನು?’ ಎಂದು ಕೇಳಿದರು ಧೀರೇಂದ್ರರು

‘‘ಏಕೆ, ನನ್ನದೆ’’ ಎಂದರು ಪ್ರಸಾದ.

ನಾನಿಲ್ಲಿ ಆಶ್ರಮ ಕಟ್ಟಬೇಕಾಗಿದೆ.’’

‘‘ಈ ಕಾಡಿನಲ್ಲಿ? ಕ್ರೂರ ಮೃಗಗಳ ಜೊತೆ?’’ ಎಂದು ಆಶ್ಚರ್ಯಪಟ್ಟು ಕೇಳಿದರು ಪ್ರಸಾದ.

ಪರವಾಗಿಲ್ಲ ಇದೇ ಕಾಡಿನಲ್ಲಿ ಆಶ್ರಮ ಕಟ್ಟಬೇಕೆಂದು ನನ್ನ ಆಸೆ’’ ಎಂದರು ಧೀರೇಂದ್ರರು.

‘‘ಸರಿ, ನೀವು ಆಶ್ರಮ ಕಟ್ಟುವುದೇ ಆದರೆ ಜಮೀನು ನೀಡಲು ನಾನು ಸಿದ್ಧ’’ ಎಂದರು ಪ್ರಸಾದ್.

ಮರುದಿನವೇ ಗುದ್ದಲಿ, ಸನಿಕೆ, ಪಿಕಾಸಿಗಳಿಗೆ ಕೆಲಸ ಆರಂಭವಾಯಿತು. ಊರಿನವರೆಲ್ಲ ಸಹಕರಿಸಿದರು. ಎರಡು ಮೂರು ತಿಂಗಳೊಳಗೆ ಆಶ್ರಮದ ಗೋಡೆಗಳು ಎದ್ದು ನಿಂತವು. ಬಿದಿರು-ಮರ-ಮುಟ್ಟು ಎಲ್ಲ ಜನರ ಒದಗಿಸಿಕೊಟ್ಟರು. ರಣೀವಾ ಆಶ್ರಮ ಸ್ಥಾಪನೆಯಾಯಿತು.

ಬೆಳೆದು ನಿಂತ ಆಶ್ರಮದ ಪ್ರಬಾವ ಸಮೀಪದ ಹಳ್ಳಿಗಳಲ್ಲೆಲ್ಲ ಹರಡಿತು. ಸ್ವಾವಲಂಬನೆಯ ದೃಷ್ಟಿಯಿಂದ ಧೀರೇಂದ್ರರು ಈ ಹಳ್ಳಿಗಳಲ್ಲಿ ತನ್ನ ಪ್ರಯೋಗ ಆರಂಭಿಸಿದರು. ನಶಿಸಿ ಹೋಗಿದ್ದ ಗೃಹ ಕೈಗಾರಿಕೆಗಳು ಮತ್ತೊಮ್ಮೆ ಚೇತರಿಸಿಕೊಂಡವು. ಗ್ರಾಮಕ್ಕೆ ಬೇಕಾಗುವಷ್ಟು ಬಟ್ಟೆ, ಎಣ್ಣೆ, ಅಲ್ಲೆ ತಯಾರಾಗತೊಡಗಿದವು. ಬಡಗಿ, ಚಮ್ಮಾರ, ಗಾಣಿಗ, ನೇಕಾರ ಮುಂತಾದ ಕಸುಬುದಾರರಿಗೆ ಅವರವರ ಗ್ರಾಮಗಳಲ್ಲೆ ಉದ್ಯೋಗ ದೊರೆಯಿತು. ಮುಂದೆ ಸಾಬೂನು ತಯಾರು ಮಾಡುವ ಪ್ರಯತ್ನ ನಡೆದು, ಅದು ಯಶಸ್ವಿಯಾಯಿತು. ಜನರಲ್ಲಿ ಸ್ವಚ್ಛತೆಯ ಭಾವನೆ ಮೂಡಿತು. ತಮ್ಮ ಬಟ್ಟೆಗಳನ್ನು ಶುಭ್ರವಾಗಿಟ್ಟುಕೊಳ್ಳಲು ಪ್ರಾರಂಭಿಸಿದರು.  ಈ ರೀತಿ ರಣೀವಾ ಆಶ್ರಮದ ಸುತ್ತು-ಮುತ್ತಲಿನ ಹಳ್ಳಿಗರಲ್ಲಿ ನವಚೇತನ ಕಾಣಿಸಿಕೊಂಡಿತು.

ಧೀರೇಂದ್ರರು ವೈದ್ಯಕೀಯ ಜ್ಞಾನವನ್ನು ಸಂಪಾದಿಸಿದ್ದುದರಿಂದ ಜನರಿಗೆ ಅವರಲ್ಲಿ ವಿಶ್ವಾಸ ಬಹುಬೇಗ ಬೆಳೆಯಿತು. ಜನ ಬೇರೆಬೇರೆ ಹಳ್ಳಿಗಳಿಂದ ಗಾಡಿಗಳನ್ನು ಕಟ್ಟಿಕೊಂಡು ಬರುತ್ತಿದ್ದರು. ಜನತೆಗೆ ತೊಂದರೆಯಾಗಬಾರದೆಂದು ಈಶ್ವರಪಟ್ಟೆ ಗ್ರಾಮದಲ್ಲಿ ಕೇಂದ್ರ ಚಿಕಿತ್ಸಾಲಯವೊಂದನ್ನು ತೆರೆಯಲಾಯಿತು. ಅಲ್ಲಿ ಟಿಂಕ್ಚರ್ ಅಯೋಡಿನ್, ಅಮೃತಧಾರಾ, ತ್ರಿಫಲಾದಂತಹ ಔಷಧಿಗಳು ಯಾವಾಗಲೂ ಸಿದ್ಧವಾಗಿರುತ್ತಿದ್ದವು. ಹಳ್ಳಿಗಳಲ್ಲಿ ಸಿಗುವಂತಹ ತುಳಸಿಗಿಡದ ಎಲೆ, ಜೇನುತುಪ್ಪ ಮುಂತಾದ ಔಷಧಿಗಳ ಮಹತ್ವವನ್ನು ಜನಗಳಿಗೆ ತಿಳಿಸಿ ಹೇಳಿ, ಅವುಗಳ ಉಪಯೋಗವನ್ನು ಮಾಡಿಕೊಳ್ಳುವಂತೆ ಸಲಹೆ ಕೊಡಲಾಗುತ್ತಿತ್ತು.

ರಣೀವಾ ಆಶ್ರಮಕ್ಕೆ ಸ್ವಲ್ಪದೂರದಲ್ಲಿ ಚಾಚೀಪುರವೆಂಬ ಗ್ರಾಮ. ಒಂದಾನೊಂದು ಕಾಲದಲ್ಲಿ ಶ್ರೀಮಂತಿಕೆಗೆ ಹೆಸರಾದ ಊರು ಅದು. ಸಮೃದ್ಧಶೀಲ ಹಳ್ಳಿ. ಆದರೆ ದುರಾಚಾರ, ದುರ್ನೀತಿಗಳಿಂದ ಅದರ ಪತನವಾಗಿತ್ತು. ಬಡತನವೂ ಹೇಳತೀರದು. ಆ ಗ್ರಾಮದ ಮಾಧವ ಸಿಂಗ್ ಠಾಕೂರರ ಮಗಳಿಗೆ ಬಹುಕಾಲದಿಂದ ಸನ್ನಿವಾತರೋಗ ಅಂಟಿಕೊಂಡಿತ್ತು. ಏನೇ ಮಾಡಿದರೂ ಕಾಯಿಲೆ ವಾಸಿಯಾಗಿರಲಿಲ್ಲ. ಮಗಳು ಬದುಕುವ ಆಸೆಯನ್ನೆ ಬಿಟ್ಟಿದ್ದರು ಠಾಕೂರರು.

ಒಮ್ಮೆ ಠಾಕೂರರಿಗೆ ಯಾರೊ ಹೇಳಿದರು: ರಣೀವಾ ಆಶ್ರಮದಲ್ಲಿ ಒಬ್ಬ ಡಾಕ್ಟರರಿದ್ದಾರೆ. ‘‘ಧೀರೇಂದ್ರ ಎಂದು ಅವರ ಹೆಸರು. ನೀವು ಹೋಗಿ ಅವರನ್ನು ನೋಡಿ’’ ಎಂದು.

ಕೂಡಲೆ ಠಾಕೂರರು ಆಶ್ರಮಕ್ಕೆ ಧಾವಿಸಿದರು. ಆಗ ಧೀರೇಂದ್ರರು ಆಶ್ರಮದಲ್ಲಿರಲಿಲ್ಲ. ಆದರೂ ಆಶ್ರಮದ ಕಾರ್ಯಕರ್ತರು ಅವರಿದಂ ರೋಗಿಯ ಪರಿಸ್ಥಿತಿಯನ್ನು ಕೇಳಿ ತಿಳಿದುಕೊಂಡರು. ದಿನ ಕಳೆದಷ್ಟೂ ರೋಗಿಗೆ ಆಪಾಯವೆಂಬುದನ್ನರಿತು ತಮ್ಮಲ್ಲೆ ಕೆಲವರು ಠಾಕೂರರ ಜೊತೆ ಹೋಗಲು ಸಿದ್ಧರಾದರು. ಜೊತೆಗೆ ಕೈಪಿಡಿ ಪುಸ್ತಕ, ಔಷಧಿ ತೆಗೆದುಕೊಂಡು ಹೊರಟರು.

ರೋಗಿಯ ಪರೀಕ್ಷೆ ಮಾಡಿ ಔಷಧಿ ಕೊಟ್ಟ ಕೆಲವು ದಿನಗಳಲ್ಲೆ ಸುಧಾರಣೆ ಕಂಡು ಬಂದಿತು. ಠಾಕೂರರ ಮಗಳು ರೋಗಮುಕ್ತಳಾದಳು. ಈ ಸುದ್ದಿ ಚಾಚೀಪುರ ಗ್ರಾಮದಲ್ಲೆಲ್ಲೆ ಹಬ್ಬಿತು. ಎಲ್ಲರ ಬಾಯಿಯಲ್ಲೂ ಆಶ್ರಮದ ಪ್ರಶಂಸೆಯೆ. ಇದರ ಪರಿಣಾಮವಾಗಿ ಚಾಚೀಪುರ ಗ್ರಾಮ ಆಶ್ರಮದ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಲು ಮುಂದಾಯಿತು. ಧೀರೇಂದ್ರರು ಈ ಗ್ರಾಮವನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡರು. ಒಮ್ಮೆ ಜಿಲ್ಲೆಯಲ್ಲೆಲ್ಲ ಕೆಟ್ಟ ಗ್ರಾಮವೆಂದು ಹೆಸರಾಗಿದ್ದ ಈ ಚಾಚೀಪುರ ಧೀರೇಂದ್ರರ ಪ್ರಯತ್ನದಿಂದ ಮತ್ತೊಮ್ಮೆ ಒಳ್ಳೆಯ ಹೆಸರನ್ನು ಸಂಪಾದಿಸಿತು.

ರಾಮಾಯಣ ಪಠಣದ ಚಮತ್ಕಾರ

ಧೀರೇಂದ್ರರು ರಣೀವಾ ಗ್ರಾಮಕ್ಕೆ ಬಂದು ಹಲವಾರು ತಿಂಗಳು ಸಂದಿದ್ದವು. ಜನರೊಡನೆ ಗಾಢ ಸಂಪರ್ಕವೂ ಬೆಳೆದಿತ್ತು. ಮನೆ ಮನೆಯಲ್ಲಿ ಚರಖಾ ಝೇಂಕರಿಸುತ್ತಿತ್ತು. ಗ್ರಾಮೋದ್ಯೋಗಗಳ ಪ್ರವೇಶದಿಂದಾಗಿ ಹಳ್ಳಿಗಳಲ್ಲಿ ಚಟುವಟಿಕೆ ಮೂಡಿತ್ತು. ಅಲ್ಲೆ ಸಿಗುವ ಕಚ್ಚಾಮಾಲು ಪಕ್ಕಾ ಮಾಲಾಗಿ ರೂಪುಗೊಳ್ಳುತ್ತಿತ್ತು. ಇದೆಲ್ಲಾ ಸರಿ. ಆದರೆ ಜನರಿಗೆ ಶಿಕ್ಷಣ ಬೇಡವೆ? ಇದನ್ನು ಹೊಂದಿಸುವುದು ಹೇಗೆ?

ರೈತ-ಕೂಲಿಕಾರರಿಗೆ ದಿನವಿಡೀ ಹೊಲದಲ್ಲಿ ಕೆಲಸ, ಅವರು ಶಾಲೆಗೆ ಹೋಗುವುದಾದರೂ ಹೇಗೆ? ರಾತ್ರಿ ಪಾಠಶಾಲೆಯಲ್ಲೂ ಅವರಿಗೆ ಅಭಿರುಚಿ ಇರಲಿಲ್ಲ. ಕೇವಲ ಅಕ್ಷರ ಜ್ಞಾನವೆಂದರೆ ಅವರಿಗೆ ಬೇಸರ. ಲಾಭವಿಲ್ಲದ ಒಂದು ದಂಧೆ ಎಂದೆ ಅವರ ಭಾವನೆ. ಧೀರೇಂದ್ರರು ಒಂದು ಉಪಾಯ ಹುಡುಕಿದರು. ಮಕನಪುರ ಗ್ರಾಮದಲ್ಲಿ ಒಂದು ಯೋಜನೆ ಹಾಕಿಕೊಂಡರು. ಪ್ರತಿನಿತ್ಯ ಸಾಯಂಕಾಲ ರಾಮಾಯಣ ಪಠಣ ನಡೆಯತಕ್ಕದ್ದೆಂದು ನಿರ್ಧರಿಸಿದರು. ಈ ಕಾರ‍್ಯಕ್ರಮದ ಯುವಕರು ಆಸಕ್ತಿ ತೋರಿಸಿದರು. ಇದರಿಂದಾಗಿ ದಿನನಿತ್ಯ ರಾಮಾಯಣ ಪಠಣ ಆರಂಭವಾಯಿತು. ದಿನಕಳೆದಂತೆ ಜನ ಹೆಚ್ಚು ಸಂಖ್ಯೆಯಲ್ಲಿ ಸೇರತೊಡಗಿದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ರಾಷ್ಟ್ರದ ರಾಜಕೀಯ ಪರಿಸ್ಥಿತಿ, ಸಾಮಾಜಿಕ ವಿಷಮತೆ, ಧಾರ್ಮಿಕ ವಿಷಯ ಮುಂತಾದ ವಿಚಾರಗಳನ್ನೆತ್ತಿಕೊಂಡು ತಿಳಿಯಾದ ಭಾಷೆಯಲ್ಲಿ ಧೀರೇಂದ್ರರು ಜನರಿಗೆ ವಿವರಿಸಿ ಹೇಳುತ್ತಿದ್ದರು.

ರಾಮಾಯಣ ಪಠಣದ ಜೊತೆಯಲ್ಲಿ ಒಂದು ಗಂಟೆ ಅಕ್ಷರ ಜ್ಞಾನವೂ ನಡೆಯುತ್ತಿತ್ತು. ಇದರಿಂದಾಗಿ ರಾತ್ರಿ ಪಾಠಶಾಲೆ ಆರಂಭವಾಯಿತು. ಈ ಬೇಡಿಕೆಯನ್ನಿಟ್ಟವರೂ ಜನರೆ. ಗ್ರಾಮ ಸುಧಾರಣೆಯಾಗಬೇಕಾದರೆ ಉದ್ಯೋಗ ಮತ್ತು ಶಿಕ್ಷಣ ಎರಡೂ ಬೇಕು. ರಾಮಾಯಣ ಪಠಣದಿಂದ ಶಿಕ್ಷಣದಲ್ಲಿ ಜನರಿಗೆ ಅಭಿರುಚಿ ಹುಟ್ಟಿತು.

ಉದ್ಯೋಗದ ಜೊತೆ ಶಿಕ್ಷಣವನ್ನೂ ಜೋಡಿಸಿದರು ಧೀರೇಂದ್ರರು. ಅದಕ್ಕಾಗಿ ‘ಗ್ರಾಮೋದ್ಯೋಗ ಮಹಾ ವಿದ್ಯಾಲಯ’ ವನ್ನೆ ಸ್ಥಾಪಿಸಿದರು. ಈ ವಿದ್ಯಾಲಯದ ಸ್ಥಾಪನೆಯಾದುದು ೧೯೩೮ ನೇ ನವೆಂಬರ್ ೧೮ರಂದು. ಅಂದಿನಿಂದ ರಣೀವಾ ಆಶ್ರಮದಲ್ಲಿ ಬಿಡುವಿಲ್ಲದ ಚಟುವಟಿಕೆ. ಆಶ್ರಮವಿದ್ದುದು ಕಾಡಿನಲ್ಲಿ, ಸಾಕಷ್ಟು ಸ್ಥಳವಿರಲಿಲ್ಲ. ವಿದ್ಯಾಥಿ೪-ಶಿಕ್ಷಕರ ಸಂಖ್ಯೆ ದಿನೇದಿನೇ ಬೆಳೆಯುತ್ತಾ ಹೋಯಿತು.

ಧೀರೇಂದ್ರ ಸೆರೆಮನೆಯಲ್ಲಿ

ರಣೀವಾ ಮತ್ತು ಅದರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಜಾಗೃತಿ ಮೂಡಿದ್ದು ಸರಕಾರಕ್ಕೆ ಸಹನೆಯಾಗಲಿಲ್ಲ. ಪೋಲೀಸರು ಆಗಾಗ್ಗೆ ಬಂದು ಹಳ್ಳಿಯ ಜನರನ್ನು ಹೆದರಿಸಲು ಪ್ರಾರಂಭಿಸಿದರು. ಆದರೆ ಧೀರೇಂದ್ರರ ಮುಂದೆ ಇವರ ಆಟ ನಡೆಯಲಿಲ್ಲ. ಲಖನೌದಲ್ಲಿ ನಡೆಯಬೇಕಾಗಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ, ಖಾದೀ ಗ್ರಾಮೋದ್ಯೋಗ ಪ್ರದರ್ಶನದ ಸಿದ್ಧತೆ ಮಾಡಲು ಧೀರೇಂದ್ರರು ಮೂರು ನಾಲ್ಕು ತಿಂಗಳ ಮಟ್ಟಿಗೆ ಹೋಗಬೇಕಾಯಿತು. ಸರಕಾರಿ ಅಧಿಕಾರಿಗಳಿಗೂ ಇದೇ ಬೇಕಾಗಿತ್ತು. ಧೀರೇಂದ್ರರು ಹೋದ ಸುದ್ದಿ ತಿಳಿದೊಡನೆಯೆ ಪೋಲೀಸರು ಆಶ್ರಮವನ್ನು ಮುತ್ತಿದರು. ಹಿರಿಯ ಕಾರ‍್ಯಕರ್ತರ ಮೇಲೆ ರಾಜದ್ರೋಹ ಆಪಾದನೆಯನ್ನು ಹೊರಿಸಿ ಅವರನ್ನು ಬಂಧಿಸಿದರು. ಮಕ್ಕಳನ್ನು ಹೊರಗೆಳೆದು ಅವರ ಮೇಲೆ ಲಾಠಿ ಪ್ರಹಾರ ಮಾಡಿದರು. ಆಶ್ರಮದ ಸಾಮಾನುಗಳನ್ನು ಹೊರಹಾಕಿ ಜಫ್ತಿ ಮಾಡಿದಿರು. ಆದರೆ ಆಶ್ರಮದ ಮಕ್ಕಳು ಜಗ್ಗಲಿಲ್ಲ, ಪೋಲೀಸಿನವರಿಗೆ ಎದುರಾಗಿ ನಿಂತರು. ಆದರೂ ಆಶ್ರಮವನ್ನುಳಿಸಿಕೊಳ್ಳಲು ಆಗಲಿಲ್ಲ. ಆಶ್ರಮದ ಅನೇಕ ಭಾಗಗಳನ್ನು ಪೋಲೀಸರು ಕೆಡವಿಹಾಕಿದರು. ಅನೇಕ ಸಾಮಾನುಗಳನ್ನು ಧ್ವಂಸಮಾಡಿದರು. ಇಷ್ಟು ಮಾಡಿದರೂ ಅವರಿಗೆ ತೃಪ್ತಿಯಾಯಿತೆ? ಇಲ್ಲ.

ಗ್ರಾಮಗಳಿಗೆ ನುಗ್ಗಿದರು. ಜನರನ್ನು ಕರೆಸಿ ಎಚ್ಚರಿಕೆ ಕೊಟ್ಟರು. ಆಶ್ರಮಕ್ಕೆ ಸಹಾಯ ಮಾಡುವವರನ್ನು ಬಲಿತೆಗೆದುಕೊಳ್ಳುವುದಾಗಿ ಗದರಿಸಿದಿರು. ರಣೀವಾ ಗ್ರಾಮದ ಪ್ರಮುಖ ಪಂಡಿತ ಲಲಿತಾ ಪ್ರಸಾದರನ್ನು ಕರೆಸಿ, ಆಶ್ರಮಕ್ಕಾಗಿ ಕೊಟ್ಟ ಜಮೀನನ್ನು ಹಿಂದಕ್ಕೆ ಪಡೆಯುವಂತೆ ಹೇಳಿದರು. ಶಿಕ್ಷೆ ಕೊಡುವುದಾಗಿ ಬೆದರಿಕೆ ಹಾಕಿದರು. ಏನು ಮಾಡಿದರೂ ಪ್ರಸಾದರು ಅಂಜಲಿಲ್ಲ. ಕೊನೆಯಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಪದವಿಯನ್ನೂ ಕಸಿದುಕೊಳ್ಳಲಾಯಿತು. ಅದಕ್ಕೂ ಜಗ್ಗಲಿಲ್ಲ. ಸರಕಾರ ಎರಡು ವರ್ಷ ಸತತ ಪ್ರಯತ್ನ ಮಾಡಿದರೂ ಪ್ರಸಾದರ ಬದಲಿಗೆ ಬೇರೆ ಇನ್ನೊಬ್ಬ ಪರಪಂಚನನ್ನು ಆರಿಸಲು ಸಾಧ್ಯವಾಗಲಿಲ್ಲ. ಧೀರೇಂದ್ರರು ಬರುವುದಕ್ಕೆ ಮುಂಚೆ ಇದೇ ಭಾಗದ ಜನ ಒಬ್ಬ ಸಿಪಾಯಿಯನ್ನು ನೋಡಿದರೆ ಸಾಕು, ಹೆದರಿ ಓಡಿಹೋಗುತ್ತಿದ್ದರು. ಆದರೆ ಒಂದೇ ಒಂದು ವರ್ಷದಲ್ಲಿ ರಣೀವಾ ಆಶ್ರಮ ಜನರನ್ನು ದಿಟ್ಟಯೋಧರನ್ನಾಗಿ ತಯಾರಿಸಿತು.

೧೯೪೧ರಲ್ಲಿ ಸರಕಾರ ಧೀರೇಂದ್ರನ್ನು ಬಂಧಿಸಿ ಅಗ್ರಾಸೆಂಟ್ರಲ್ ಜೈಲಿಗೆ ಅಟ್ಟಿತು. ಅಲ್ಲಿ ಸ್ವಲ್ಪ ಕಾಲವಿದ್ದು ಬಿಡುಗಡೆಯಾದರು. ೧೯೪೨ರ ಆಗಸ್ಟ್ ೯ನೇ ತಾರೀಖು ರಣೀವಾ ಆಶ್ರಮವನ್ನು ಸರಕಾರ ಮತ್ತೊಮ್ಮೆ ಆಕ್ರಮಿಸಿ, ೩೦ ಜನರನ್ನು ಬಂಧಿಸಿತು. ಆಶ್ರಮದ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಂಡಿತು. ಮತ್ತೆ ಧೀರೇಂದ್ರನನ್ನು ಬಂಧಿಸಿ, ನೈನಿ ಸೆಂಟ್ರಲ್ ಜೈಲಿಗೆ ಸಾಗಿಸಿದರು.

ಜೈಲಿನಲ್ಲಿ ಕಮ್ಯೂನಿಸ್ಟರೊಡನೆ ಧೀರೇಂದ್ರರು ಗೆಳತನ ಬೆಳೆಸಿದರು. ಅವರೆಲ್ಲರೂ ಇವರನ್ನು ‘ದಾದಾ’ ಎಂದು ಕರೆಯುತ್ತಿದ್ದರು. ಸೆರೆಮನೆಯಲ್ಲಿ ಕಮ್ಯೂನಿಸಂ ಎಂದರೇನು ಎಂದು ವಿವರಿಸುವ ಕೆಲವು ಪುಸ್ತಕಗಳನ್ನು ಓದಿದರು. ಅದರಲ್ಲಿ ಕಾರ್ಲ್‌ಮಾಕ್ಸ್‌ನ ‘ದಾಸ್ ಕ್ಯಾಪಿಟಲ್’ ಕೂಡ ಸೇರಿತ್ತು.

ಆಶ್ರಮಕ್ಕೆ ಎಂತಹ ಸ್ಥಿತಿ!

೧೯೪೫ ರಲ್ಲಿ  ಜೈಲಿನಿಂದ ಧೀರೇಂದ್ರರನ್ನು ಬಿಡುಗಡೆ ಮಾಡಲಾಯಿತು. ಆಗ ಗಾಂಧೀಜಿ ರಾಷ್ಟ್ರದ ಮುಂದೆ ಸಮಗ್ರ ಗ್ರಾಮಸೇವೆಯ ಕಾರ‍್ಯಕ್ರಮವನ್ನಿಟ್ಟರು. ಅದಕ್ಕಾಗಿ ಏಳುಲಕ್ಷ ಹಳ್ಳಿಗಳಿಂದ ಏಳುಲಕ್ಷ ಪರಿಶ್ರಮ ಮಾಡುವಂತಹ ಯುವಕರು ತಮಗೆ ಬೇಕೆಂದು ಕರೆಕೊಟ್ಟರು. ಧೀರೇಂದ್ರರಿಗೆ ಇದರಿಂದ ಒಂದು ಹೊಸ ದರ್ಶನ ಸಿಕ್ಕಂತಾಯಿತು.

ಸಮಗ್ರ ಗ್ರಾಮಸೇವೆಯ ಪ್ರಯೋಗಕ್ಕಾಗಿ ಒಂದು ಕಡೆ ಕುಳಿತು ಕೆಲಸ ಮಾಡಬೇಕಲ್ಲ? ಅದಕ್ಕಾಗಿ ಒಂದು ಸ್ಥಳ ಬೇಡವೆ? ಇದ್ದ ರಣೀವಾ ಆಶ್ರಮ ಸರಕಾರದ ವಶವಾಗಿತ್ತು. ಅದು ಹಿಂತಿರುಗಿ ಬರುವವರೆಗೆ ಅಲಹಾಬಾದ್ ಹತ್ತಿರವಿರುವ ಬಾರಾವ ಹಳ್ಳಿಯಲ್ಲಿ ಕುಳಿತು ಕೆಲಸ ಮಾಡಬಹೇಕೆಂದು ನಿರ್ಧಾರವಾಯಿತು. ಡಾಕ್ಟರ್ ಕೈಲಾಸ್ ನಂಥ ಕಟ್ಜೂ, ಲಾಲಬಹದ್ದೂರ ಶಾಸ್ತ್ರಿ, ಶ್ರೀಮತಿ ಪೂರ್ಣಿಮಾ ಬ್ಯಾನರ್ಜಿ ಮುಂತಾದವರು ಧೀರೇಂದ್ರರಿಗೆ ನೆರವಾಗಿ ನಿಂತರು. ‘‘ಮೊದಲು ಆಶ್ರಮ ಸ್ಥಾಪನೆಯಾಗಿ ಕೆಲಸ ಆರಂಭವಾಗಲಿ. ಆಮೇಲೆ ಬೇಕಾದರೆ ನಾವೆ ನಡೆಸಿಕೊಂಡು ಹೋಗುತ್ತೇವೆ’ ಎಂದರು. ಅಲ್ಲಿಯ ಜನರ ಸಹಾಯದಿಂದ ಕೆಲವೆ ದಿನಗಳಲ್ಲಿ ಆಶ್ರಮದ ಕಟ್ಟಡ ಎದ್ದು ನಿಂತಿತು. ಸ್ವಲ್ಪಕಾಲ ಆಶ್ರಮದ ಸಂಚಾಲನ ಕಾರ‍್ಯವನ್ನು ಧೀರೇಂದ್ರರೇ ಹೊತ್ತು ನಡೆಸಿದರು. ಅಷ್ಟರಲ್ಲಿ ರಣೀವಾ ಆಶ್ರಮವನ್ನು ಸರಕಾರ ಬಿಟ್ಟುಕೊಟ್ಟಿತು. ಹಿಂದಿನ ನಿರ್ಧಾರದಂತೆ ಬಾರಾವ ಆಶ್ರಮವನ್ನು ಅಲ್ಲಿಯ ಸ್ಥಾನಿಕ ಜನರಿಗೆ ವಹಿಸಿಕೊಟ್ಟು, ಧೀರೇಂದ್ರರು ತಮ್ಮ ಕಾರ‍್ಯಕ್ಷೇತ್ರವಾದ ರಣೀವಾ ಆಶ್ರಮಕ್ಕೆ ಬಂದರು.

ಅಲ್ಲಿಗೆ ಬಂದು ನೋಡಿದಾಗ ಆಶ್ರಮ ಧ್ವಂಸವಾಗಿತ್ತು. ಕೇವಲ ಅವಶೇಷಗಳು ಮಾತ್ರ ಉಳಿದಿದ್ದವು. ಧೀರೇಂದ್ರರ ಕಣ್ಣಲ್ಲಿ ನೀರೂರಿತು. ಬಿಕ್ಕಿಬಿಕ್ಕಿ ಅಳತೊಡಗಿದರು. ಹತ್ತಾರು ವರ್ಷಗಳ ಪ್ರಯತ್ನ ಮಣ್ಣು ಪಾಲಾಗಿತ್ತು. ಧೀರೇಂದ್ರರು ಮತ್ತೆ ಸಂಘಟನೆಯಲ್ಲಿ ತೊಡಗಿದರು. ಊರ ಜನರನ್ನು ಸೇರಿಸಿದರು. ಅವರಲ್ಲಿ ಚೈತನ್ಯ ಶಕ್ತಿ ತುಂಬಿದರು. ಜೈಲಿಗೆ ಹೋಗಿಬಂದಿದ್ದ ಅನೇಕ ಯುವಕರು ಈ ಬಾರಿ ಧೀರೇಂದ್ರರಿಗೆ ನೆರವಾದರು. ಹಳ್ಳಿಯವರ ನೇತೃತ್ವದಿಂದಲೆ ಇನ್ನು ಮುಂದೆ ಈ ಆಶ್ರಮ ನಡೆಯಬೇಕು. ಇಲ್ಲಿಯವರೆ ಆದ ಜವಾಬ್ದಾರಿ ಹೊರಬೇಕು. ನೇತೃತ್ವ ಸ್ವಾವಲಂಬನ, ವ್ಯವಸ್ಥಾ ಸ್ವಾವಲಂಬನ ಗ್ರಾಮದಲ್ಲಿ ಬೆಳೆದಾಗಲೆ ನಿಜವಾದ ಸ್ವರಾಜ್ಯ. ಹೀಗೆ ಧೀರೇಂದ್ರರು ಯೋಚಿಸಿದರು. ಪಂಡಿತ ಲಲಿತಾ ಪ್ರಸಾದರಿಗೂ ಈ ವಿಷಯ ತಿಳಿಸಿದರು. ಅವರಿಗೂ ಈ ಮಾತು ಒಪ್ಪಿಗೆಯಾಯಿತು. ರಣೀವಾ ಆಶ್ರಮದ ಪೂರ್ಣಜವಾಬ್ದಾರಿಯನ್ನು ಪ್ರಸಾದರಿಗೆ ವಹಿಸಿ ಉತ್ತರ ಪ್ರದೇಶದ ಸೇವಾಪುರಿ ಗ್ರಾಮಕ್ಕೆ ಧೀರೇಂದ್ರರು ಆಗಮಿಸಿದರು.

ಸೇವಾಪುರಿಯಲ್ಲಿ ಆಶ್ರಮಕ್ಕಾಗಿ ಐವತ್ತು ಎಕರೆ ಜಮೀನು ಕೊಡಲು ಅಲ್ಲಿಯ ಜನ ಮುಂದೆ ಬಂದರು. ಕಟ್ಟಡದ ಖರ್ಚಿಗಾಗಿ ಹಣ ಕೂಡಿಸಿ ಕೊಡುವ ಜವಾಬ್ದಾರಿ ಗಾಂಧೀಜಿ ಹೊತ್ತರು. ಆದರೆ, ‘‘ನೀವು ಈ ತೊಂದರೆ ತೆಗೆದುಕೊಳ್ಳುವುದು ಬೇಡ, ನಿಮಗೆ ಬೇಕಾದಷ್ಟು ಕೆಲಸವಿದೆ’’ ಎಂದು ಹೇಳಿ ಧೀರೇಂದ್ರರು ಸ್ಥಳದ ಜನರು ಸಹಾಯದಿಂದ ಆಶ್ರಮ ಕಟ್ಟಿದರು.

ಚರಖಾ ಸಂಘದ ಅಧ್ಯಕ್ಷ

ಸಾಮಾನ್ಯ ಕಾರ‍್ಯಕರ್ತರಾಗಿ ದುಡಿದ ಧೀರೇಂದ್ರರು ರಚನಾತ್ಮಕ ಕ್ಷೇತ್ರದಲ್ಲಿ ಒಂದು ಶಕ್ತಿಯಾಗಿ ನಿಂತುಕೊಂಡರು. ಗಾಂಧೀ ವಿಚಾರದ ಭಾಷ್ಯಕಾರರೆಂದು ಹೆಸರಾದ ಧೀರೇಂದ್ರ ಮಜುಂದಾರ್ ಸ್ವಾತಂತ್ರ್ಯಾ ನಂತರ, ಅಖಿಲ ಭಾರತ ಚರಖಾ ಸಂಘಕ್ಕೆ ಅಧ್ಯಕ್ಷರಾಗಿ ಆರಿಸಲ್ಪಟ್ಟರು. ಅದುವರೆಗೂ ಮಹಾತ್ಮಾ ಗಾಂಧಿಯವರೆ ಚರಖಾ ಸಂಘಕ್ಕೆ ಅಧ್ಯಕ್ಷರಾಗಿದ್ದರು. ಇಡೀ ದೇಶವನ್ನು ಸುತ್ತಿ ರಚನಾತ್ಮಕ ಕೆಲಸಗಾರರಿಗೆ ಹುರುಪು ತುಂಬಿದರು. ಮಾಲಿಕ ಮತ್ತು ಕೂಲಿಕಾರ (ಹುಜೂರ್ ಮತ್ತು ಮಜ್ದೂರ್), ಉತ್ಪಾದಕ ವರ್ಗ ಮತ್ತು ವ್ಯವಸ್ಥಾಪಕ ವರ್ಗ, ಇಂತಹ ವ್ಯತ್ಯಾಸಗಳು ಹೋಗದೆ ಶೋಷಣೆ ನಿಲ್ಲದು, ಶಾಂತಿ ದೊರೆಯದು. ಈ ವಿಚಾರವನ್ನು ಹೋದ ಹೋದಲ್ಲೆಲ್ಲ ಪ್ರತಿಪಾದಿಸುತ್ತಿದ್ದರು. ‘ಸ್ಪಿನಿಂಗ್ ಕ್ಲಬ್’ ಸ್ಥಾಪಿಸುವುದರ ಮೂಲಕ ವಸ್ತ್ರ ಸ್ವಾವಲಂಬನೆಯ ವಿಚಾರವನ್ನು ದೇಶದ ಮುಂದಿಟ್ಟರು. ಇಂತಹ ಸಹಸ್ರಾರು ಕತಾಯಿ ಮಂಡಲಗಳು (ಸ್ಪಿನಿಂಗ್ ಕ್ಲಬ್) ದೇಶಾದ್ಯಂತ ರಚನೆಯಾದವು.

ಸ್ವಾತಂತ್ರ್ಯ ಬಂದ ಮೇಲೂ ಧೀರೇಂದ್ರ ಮಜುಂದಾರರು ವಿಶ್ರಾಂತಿ ತೆಗೆದುಕೊಳ್ಳಲಿಲ್ಲ. ಯಾವುದೇ ಅಧಿಕಾರ ಪದವಿಗೆ ಆಸೆ ಪಡಲಿಲ್ಲ. ‘ಗ್ರಾಮ ಸ್ವರಾಜ್ಯವಿಲ್ಲದೆ ಸ್ವಾತಂತ್ರ್ಯಕ್ಕೆ ಬೆಲೆಯಿಲ್ಲ’ ಎನ್ನುತ್ತಿದ್ದರು ಅವರು. ಅದಕ್ಕಾಗಿ ಶ್ರಮಾಧಾರಿತ ಜೀವನ ನಡೆಸಬೇಕೆಂದು ನಿರ್ಧರಿಸಿ, ಬಿಹಾರನ್ನು ಕಾರ‍್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಪಟ್ಣಾ ಜಿಲ್ಲೆಯ ಜಮುಯಿ ಸ್ಟೇಷನ್ನಿನ ಹತ್ತಿರ ‘ಬಿಹಾರ ಖಾದಿ ಸಮಿತಿ’ ಯ ಒಂದು ಸಣ್ಣ ಕೇಂದ್ರ ನಡೆಯುತ್ತಿತ್ತು. ಅಲ್ಲಿಗೆ ಬಂದು ಸುತ್ತಲಿನ ಪ್ರದೇಶವನ್ನು ಅವಲೋಕಿಸಿದರು. ಅದೊಂದು ಕಾಡು. ಪರ್ವತ ಪ್ರದೇಶ ಕಲ್ಲು-ಮರಳಿನಿಂದ ತುಂಬಿದ ನಿಸ್ಸಾರ ಭೂಮಿ. ಎರಡು-ಮೂರು ಎಕರೆಗಳನ್ನು ಬಿಟ್ಟರೆ ಉಳಿದುದೆಲ್ಲಾ ಬರೀ ಬೆಂಗಾಡು. ಹುಲ್ಲು ಕೂಡ ಬೆಳೆಯದಂತಹ ಬಂಜರು ನೆಲ. ಇಂತಹ ಕಡೆ ಆಶ್ರಮ ಕಟ್ಟಬೇಕು, ಒಂದು ಶಿಕ್ಷಣ ಸಂಸ್ಥೆ ರೂಪುಗೊಳ್ಳಬೇಕು ಎಂಬ ಹಠ ಅಡೆ-ತಡೆಗಳನ್ನೆದುರಿಸಿ ನುಗ್ಗುವುದರಲ್ಲಿ ಧೀರೇಂದ್ರರಿಗೆ ಅಮಿತಾನಂದ.

ನೀರು ತಂದುಕೊಟ್ಟ ಭಗೀರಥ

ಆಶ್ರಮ ಕಟ್ಟುವ ಸ್ಥಳದಲ್ಲಿ ನೀರು ಬೇಡವೆ? ಶ್ರಮ ಸಾಧನೆಗೆ ಕೃಷಿಯೆ ಆಧಾರ. ಕೃಷಿಗೆ ನೀರು ಇದ್ದೇ ತೀರಬೇಕು. ಅದರದೇ ಅಭಾವ ಇಲ್ಲಿ. ಮುಂದೇನು? ಬಿಹಾರ ಸರಕಾರದ ಅಧಿಕಾರಿಗಳನ್ನು ಕರೆಸಿ ತಮ್ಮ ಯೋಜನೆಯನ್ನು ಅವರ ಮುಂದಿಟ್ಟರು. ಅಧಿಕಾರಿಗಳಿಗೆ ಕಸಿವಿಸಿಯಾಯಿತು. ಹಠಮಾರಿತನಕ್ಕೂ ಒಂದು ಮಿತಿಯುಂಟು. ಆಗಬಾರದ ಕೆಲಸ ಸಾಧಿಸಲಾದೀತೆ? ಎಂತಹ ಹುಚ್ಚು ಯೋಜನೆ ಇವರದು ಎಂದು ಮನಸ್ಸಿನಲ್ಲೆ ಗೊಣಗಿದರು.

‘‘ತಿಳಿದೂ-ತಿಳಿದೂ ನೀವಿಂತಹ ಸ್ಥಳ ಆರಿಸಿಕೊಂಡಿರುವಿರಲ್ಲಾ! ಈ ಕಲ್ಲಿನಲ್ಲಿ ಏನು ಬೆಳೆಯಲು ಸಾಧ್ಯ? ಪ್ರಕೃತಿಯೊಡನೆ ಹೋರಾಡುವ ಉದ್ದೇಶ ಇದೆಯೇನು ನಿಮಗೆ?’’ ಎಂದು ಕೇಳಿದರು.

ಧೀರೇಂದ್ರರು, ‘‘ನಾನು ಮಾಡುತ್ತಿರುವುದು ಹೋರಾಟ ನಿಜ, ಆದರೆ ನಿಮ್ಮಂತಹ ತಜ್ಞರು ಇದನ್ನು ವಿಫಲ ಹೋರಾಟವೆಂದು ಕರೆಯುವುದಾದರೆ ಆಧುನಿಕ ವಿಜ್ಞಾನದ ಗತಿ ಏನು? ಇಸ್ರೇಲಿನಂತಹ ಮರುಭೂಮಿಯೆ ಹಸಿರಿನಿಂದ ಕಂಗೊಳಿಸುವುದಾದರೆ, ಈ ಬೆಂಗಾಡು ಮರುಭೂಮಿ ನಿಮ್ಮ ಆಧುನಿಕ ವಿಜ್ಞಾನದಿಂದ ಏಕೆ ಹಚ್ಚಹಸಿರಾಗಿ ಕಂಗೊಳಿಸ ಬಾರದು? ಎಂದು ಕೇಳಿದರು.

ಇನ್ನೂ ಮಾತು ಬೆಳೆಸುವುದರಲ್ಲಿ ಅರ್ಥವಿಲ್ಲವೆಂದು ಅಧಿಕಾರಿಗಳು ಹೊರಟುಹೋದರು. ಧೀರೇಂದ್ರರು ಮಾತ್ರ ತಮ್ಮಸಂಕಲ್ಪ ಬಿಡಲಿಲ್ಲ. ಅದೇ ಭೂಮಿಯಲ್ಲಿ ನೀರು ಬರಿಸಬೇಕೆಂದು ಪಣ ತೊಟ್ಟರು. ಅಕ್ಕಪಕ್ಕದ ಊರಿನ ಜನರ ಸಹಕಾರದಿಂದ ನೀರಿನ ಸೆಲೆ ಬರುವ ಸ್ಥಳವನ್ನು ಗುರುತಿಸಿ ಅಲ್ಲೇ ಬಾವಿ ತೋಡಲು ಆರಂಭಿಸಿದರು. ಮೊದಮೊದಲು ಸಿಕ್ಕಿದ್ದು ಬರೀ ಮರಳು. ಅರಣ್ಯಪ್ರದೇಶವಾಗಿದ್ದರಿಂದ ಆಗಾಗ್ಗೆ ಚಿರತೆಗಳು ಬಂದು ಘರ್ಜಿಸಿ ಹಲ್ಲು ಕಿರಿಯುತ್ತಿದ್ದವು. ಅವುಗಳನ್ನು ನೋಡಿ ಧೀರೇಂದ್ರರಿಗೆ ನಗು ಬರುತ್ತಿತ್ತು. ‘ಇದೂ ಒಂದು ಮನೋರಂಜನೆ’ ಎಂದು ತಮ್ಮ ಕೆಲಸದಲ್ಲಿ ಮಗ್ನರಾಗುತ್ತಿದ್ದರು. ಎರಡು ಮೂರುವರ್ಷಗಳಿಂದ ಮಳೆ ಯಾಗದೆ ಅಕ್ಕ-ಪಕ್ಕದ ಜನರಿಗೆ ತುಂಬಾ ತೊಂದರೆಯಾಗಿತ್ತು. ಅವರು ಕೂಡ ಆಶಾದೃಷ್ಟಿಯಿಂದ ಇತ್ತಕಡೆಯೆ ನೋಡುತ್ತಿದ್ದರು. ಎಷ್ಟೋ ಗುದ್ದಲಿಗಳು ಮುರಿದುಹೋದವು. ಹಾರೆಗಳು ಡೊಂಕಾದವು. ಸನಿಕೆಗಳು ಜಜ್ಜಿ ಹೋದವು. ಆದರೂ ಕೆಲಸ ನಿಲ್ಲಲಿಲ್ಲ. ಇಲ್ಲಿ ವಾಸವಾಗಿದ್ದ ಕಾಡುಜನರು ‘‘ಈ ಅರಣ್ಯದಲ್ಲಿ ವಾಸವಾಗಿರುವ ಒಂದೂಕಾಲು ಲಕ್ಷ ದೇವತೆಗಳಿಗೆ ಪೂಜೆ ಮಾಡದೆ ಬಾವಿ ಅಗಿಯುವ ಕೆಲಸ ಆರಂಭಮಾಡಿದ್ದು ಮಹಾಪರಾಧ’’ ಎಂದು ಗೊಣಗುತ್ತಿದ್ದರು.

ಅವರು ಹೇಳಿದ್ದು ಸರಿಯೋ ಏನೊ ಎನ್ನುವಂತೆ ಒಂದು ದಿನ ರಾತ್ರಿ ಇದ್ದಕ್ಕಿದ್ದ ಹಾಗೆಯೆ ಬಾವಿಯ ಒಂದು ಭಾಗ ‘ಧಡುಂ’  ಎಂದು ಬಿದ್ದುಹೋಯಿತು. ಸದ್ಯ ಯಾರೂ ಸಾಯಲಿಲ್ಲ. ಮಾರನೆಯ ದಿನ ಮತ್ತೆ ಮಣ್ಣೆತ್ತುವ ಕೆಲಸ ಆರಂಭವಾಯಿತು. ಆಮೇಲೆ ಬರೀ ಕಲ್ಲು. ಬಿಡುವ ಮಾತೆಲ್ಲಿ? ಕಲ್ಲನ್ನೂ ಸೀಳಿ ಅಗೆದದ್ದಾಯಿತು. ಬಾವಿಯದಡ ಮೂರು ಬಾರಿ ಕುಸಿದುಬಿದ್ದರೂ ಧೀರೇಂದ್ರರು ಎದೆಗುಂದ ಲಿಲ್ಲ. ಕೊನೆಯಲ್ಲಿ ಇಡೀ ಬಾವಿಯೆ ಒಮ್ಮೆ ಕುಸಿದುಹೋಯಿತು. ಎಲ್ಲ  ಜನ ಹೇಳಿದರು. ‘‘ಇನ್ನು ಈ ಪ್ರಯತ್ನ ಸಾಕು’’ ಎಂದು. ಧೀರೇಂದ್ರರು ಕೇಳಬೇಕಲ್ಲ? ‘‘ಇಷ್ಟೆಲ್ಲಾ ಸಾಹಸಮಾಡಿ ಈಗ ಹಿಮ್ಮೆಟ್ಟುವುದೆ? ಸಾಧ್ಯವಿಲ್ಲ. ನನ್ನ ಜೀವಮಾನದಲ್ಲೆ ನಾನೀ ಪಾಠ ಕಲಿತಿಲ್ಲ’’ ಎಂದರು.

ಕೊನೆಗೂ ಬಾವಿ ಸಿದ್ಧವಾಯಿತು. ಸೆಲೆಯೊಡೆದು ನೀರು ಒಳಗಡೆಯಿಂದ ಉಕ್ಕಿಬರತೊಡಗಿತು. ಕೇಳಬೇಕೆ ಜನರ ಆನಂದ! ಕುಣಿದಾಡಿದರು. ಕೇಕೆ ಹಾಕಿದರು. ಕೆಲವರು ನೀರನ್ನು ಪಾತ್ರೆಗಳಲ್ಲಿ ತುಂಬಿ ತುಂಬಿ ತಲೆಯ ಮೇಲೆ ಸುರಿದುಕೊಂಡರು. ಅಲ್ಲಿಯೆ ಮುಂದೆ ‘ಖಾದಿಗ್ರಾಮ’ ದಂತಹ ಮಹಾನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು.

೧೯೫೪ರಲ್ಲಿ ‘ಸರ್ವಸೇವಾಸಂಘ’ ದ ಅಧ್ಯಕ್ಷ ಪದವಿಗೇರಿದ ಧೀರೇಂದ್ರರು, ಆದಿವಾಸಿಗಳ ಕ್ಷೇತ್ರವಾದ ಖಿರಿಯಾ ಎಂಬ ಹಳ್ಳಿಗೆ ಬಂದರು. ಅಲ್ಲಿಯ ಜನ ಎರಜು-ಮೂರು ವರ್ಷಗಳ ಬರಗಾಲದಿಂದ ಬದುಕುವ ಆಸೆಯನ್ನೆ ತೊರೆದಿದ್ದರು. ಅಲ್ಲಿ ಒಂದು ಕೆರೆ ಕಟ್ಟುವ ಯೋಚನೆ ಹೊಳೆಯಿತು. ಧೀರೇಂದ್ರರಿಗೆ ಬದಕೌಟ್ ಮತ್ತು ಖಿರಿಯಾಗಳ ಮಧ್ಯೆ ಹರಿಯುತ್ತಿದ್ದ ಒಂದು ತೊರೆಗೆ ಅಡ್ಡವಾಗಿ ಕಟ್ಟೆಯನ್ನು ಕಟ್ಟಿದರೆ ಇಲ್ಲಿಯ ಜನರ ನೀರಿನ ಸಮಸ್ಯೆ ಬಗೆಹರಿದು ಹೋಗುತ್ತದೆ. ಆದರೆ ಇದೇನು ಸಾಮಾನ್ಯ ಕೆಲಸವೆ? ಗ್ರಾಮಸ್ಥರೆಲ್ಲ ಹಿಂದೇಟು ಹಾಕಿದರು.

‘‘ಶ್ರೀರಾಮಚಂದ್ರ ವಾನರರ ಜೊತೆ ಸೇರಿ ಸಮುದ್ರಕ್ಕೆ ಸೇತುವೆ ಕಟ್ಟಿದ. ನೀವು ಗಾಂಧೀ ಜೊತೆ ಸೇರಿ ಇದೊಂದು ಸಣ್ಣ ಕೆರೆ ಕಟ್ಟಲಾರಿರಾ?’’ ಎಂದರು ಧೀರೇಂದ್ರರು.

ಕೊನೆಗೆ ಗ್ರಾಮಸ್ಥರೆಲ್ಲರೂ ಈ ಯೋಜನೆಯನ್ನೊಪ್ಪಿ ಕೊಂಡು ಕೆಲಸದಲ್ಲಿ ನಿರತರಾದರು.

‘‘ಇರುವೆ ಸಮುದ್ರವನ್ನು ದಾಟುವಂತಿದೆ ಇವರ ಕೆಲಸ’’ ಎಂದು ಕೆಲವರು ಗೇಲಿಮಾಡುತ್ತಿದ್ದರು.

ಆದರೂ ಕೆಲಸ ನಿಲ್ಲಲಿಲ್ಲ. ಆಶ್ರಮವಾಸಿಗಳು, ಗ್ರಾಮಸ್ಥರು, ಧೀರೇಂದ್ರರ ಜೊತೆಯಲ್ಲಿ ಕಾರ್ಯಮಗ್ನರಾದರು. ಸ್ವಲ್ಪ ಕಾಲದಲ್ಲೆ ಕಟ್ಟೆ ಮೇಲೆದ್ದು ನಿಂತಿತು. ನೋಡಲು ಬರುತ್ತಿದ್ದವರಿಗೆ ಇದೊಂದು ಆಶ್ಚರ್ಯ. ಸರಕಾರಿ ಅಧಿಕಾರಿಗಳಿಗೆ ಈ ವಿಷಯ ಗೊತ್ತಾಯಿತು. ಅವರೂ ಕೆರೆ ನೋಡಲು ಧಾವಿಸಿ ಬಂದರು.

‘‘ನಾವೂ ಸಹಾಯ ಮಾಡುತ್ತಿದ್ದೆವು. ನೀವು ನಮ್ಮ ನೆರವು ಕೇಳಬಾರದೆ?’’ ಎಂದರು ಅವರು.

ಅದಕ್ಕೆ, ‘‘ಇಂತಹ ಕೆಲಸಗಳಿಗೆ ನೀವು ಒಪ್ಪುವುದೇ ಇಲ್ಲ. ನಿಮ್ಮ ಒಪ್ಪಿಗೆ ಪಡೆಯುವುದಕ್ಕಾಗಿ ಸುತ್ತಾಡುವ ಶಕ್ತಿಯನ್ನೆ ಸಂಘಟನೆಯಲ್ಲಿ ತೊಡಗಿಸಿದರೆ ನಮ್ಮ ಅರ್ಧ ಕೆಲಸವೆ ಆಗಿ ಹೋಗುತ್ತದೆ’’ ಎಂದು ನಗುತ್ತಾ ಹೇಳಿದರು ಧೀರೇಂದ್ರ.

ಹೀಗೆ ಹಳ್ಳಿಯವರ ಶ್ರದ್ಧೆಯ ದುಡಿತದ ಮೂಲಕ ಗ್ರಾಮ ಸ್ವರಾಜ್ಯ ಸ್ಥಾಪನೆಗಾಗಿ ಅವಿಶ್ರಾಂತವಾಗಿ ಕೆಲಸಮಾಡಿದರು. ಭೂದಾನಯಜ್ಞ ಚಳವಳಿಯಲ್ಲಿ ಭಾಗವಹಿಸಿ, ಸರ್ವೋದಯ ವಿಚಾರ ಪ್ರಚಾರ ಮಾಡಿದರು. ರೈತರ ಪರವಾಗಿ ಜಮೀನುದಾರರ ವಿರುದ್ಧ ಹೋರಾಟ ಮಾಡಿದರು. ಗಾಂಧೀಮಹಂತನೆಂಬ ಹೆಸರಿನಿಂದ ಪ್ರಖ್ಯಾತರಾದರು. ಜನರ ಸ್ಥಿತಿಯನ್ನು ಸುಧಾರಿಸುವ ತಮ್ಮ ಪ್ರಯೋಗಗಳು ಮತ್ತು ಪ್ರಯತ್ನಗಳ ಅನುಭವವನ್ನು ಹಲವು ಪುಸ್ತಕಗಳಲ್ಲಿ ವಿವರಿಸಿದ್ದಾರೆ. ‘ಸಮಗ್ರ ನೈ ತಾಲೀಂ’ ‘ಅಹಿಂಸಾ ಕ್ರಾಂತಿ-ಪ್ರಯೋಗ್ ಔರ್ ಚಿಂತನ್’ ಮುಂತಾದ ಪುಸ್ತಕಗಳು ಮುಂದಿನ ಪೀಳಿಗೆಗಳವರಿಗೆ ಮಾರ್ಗದರ್ಶಕವಾಗಬಲ್ಲವು.

ಜೀವನದ ಅಂತ್ಯ

ಹುಟ್ಟಿದವರು ಸಾಯಲೇ ಬೇಕು. ಮರಣ ಯಾರಿಗೂ ಬಿಟ್ಟಿದ್ದಲ್ಲ. ಆದರೆ ಜೀವಿತದಲ್ಲಿ ಮಾಡಿದ ಸಾಧನೆಗಳಿಗೆ ಮಾತ್ರ ಸಾವಿಲ್ಲ. ದೇಹ ಹೋದರೂ ಅವರ ಸಾಧನೆ, ವಿಚಾರ, ಶಾಶ್ವತ. ಧೀರೇಂದ್ರ ಮಜುಂದಾರರದು ಶ್ರಮಾಧಾರಿತ ಜೀವನ. ದುಡಿದು-ದುಡಿದು ಹಣ್ಣಾದ ಶರೀರ ವಿಶ್ರಾಂತಿ ಬಯಸಿತು. ಈಚೆಗೆ ಅವರು ಕಾಶಿಯಲ್ಲಿರುವ ಸರ್ವ ಸೇವಾ ಸಂಘದ ಸಾಧನ ಕೇಂದ್ರದಲ್ಲಿ ತಂಗಿದ್ದರು. ಅಲ್ಲೆ ಅವರ ಆರೈಕೆಯೂ ನಡೆದಿತ್ತು. ಸೊಂಟ ನೋವಿನಿಂದ ಅವರು ನರಳುತ್ತಿದ್ದರು. ೧೯೭೮ನೇ ನವಂಬರ್ ೨೧ರಂದು ಅವರು ಈ ಲೋಕವನ್ನಗಲಿದರು. ರಚನಾತ್ಮಕ ಕಾರ‍್ಯಕ್ಷೇತ್ರದ ಒಂದು ಧೀಮಂತ ಜೀವ ನಮ್ಮಿಂದ ಕಣ್ಮರೆಯಾಯಿತು.