ಇಂದು ಘಾತಾದಿತು ಎಂದು ನುಡಿದನು ಕಾಟ
ಬಂತು ವಿಧಿ ಕಾಟವೆನ್ನುತಲಿ | ಕೇಳು
ಮುಂದಾಗಿ ಚೆಂಡಿನಾಟವ ಬೇಡೆಂದೆ | ಮನವ
ಕುಂದಿಸಿ ತಾಯಿಗೆ ಚೆಂಡ ನೀ ತಂದೆ | ರಾಮ
ಬಂದಿತು ನಮಗಿಂದು ವಿಪರೀತವು ರತ್ನಿಗೆ
ವಂದಿಸಿ ಬೇಗನೆ ಚೆಂಡು ತಾರೆಂದ  ೪೬

ನುಡಿಯ ಕೇಳುತ ರಾಮ ತಡಿಯದಲ್ಲಿಗೆ ಹೋಗಿ
ಕೊಡು ತಾಯಿ ಕದುಂಕವೆಂದು | ರತ್ನಿ
ಕಡು ಮೋಹದಿಂದ ಮೊಗ ನೋಡುತಲಿ | ಒಳ್ಳೆ
ಜಡಜ ಬಾಣವೆದಿಗ್ಹೊಡಿಯುತಲಿ | ಕಾಮ
ತಡೆಯಲಾರದೆ ಮೋಹಿಸುತ ಕೂಡ ಬಾ
ಪಿಡಿದು ಕರವ ಎಳಿದು ಕೈಗಳ ಚಾಚಿ                   ೪೭

ಎರಡು ಕಣ್ಗಳ ಮುಚ್ಚಿ ಹರಹರೆನ್ನುತ ರಾಮ
ಥರಥರನೆ ನಡುಗಿ ಬಿದ್ದನು | ತಾಯಿ
ತರುಳನ ಮೇಲೆ ಇದೇಕೆಂದನು | ಕಾಮ
ತರಂತುರಿ ಮಾಡುವ ರೀತೇನೆಂದನು | ಯಮನ
ಪುರದೊಳು ಕಾಯ ಕರಕರನೆ ಕೊರೆವರು ಕೇಳಮ್ಮ
ದುರುಳ ಬುದ್ಧಿಯೇಟು ತರವಲ್ಲೆಂದನು        ೪೮

ಪಿತ ಸುತ ಹಿತ ಬಂಧು ಯತಿ ಗುರುಗಳು ಬೇರೆ
ಅತಿವೀರ ರಣಕೆ ನೋಡುವನೆ | ಕೊಲೆಯು
ಹಿತವಲ್ಲ ಪಾಪವೆಂಬುವನೆ | ಬಂಟ
ಹತಿಸದೆ ಜೀವಂತ ಬಿಡುವನೆ | ನೋಡು
ರತಿಪತಿ ಸಮರಕೆ ಸತಿಯರಾರೇನು ಕೊಮರಾಂ
ರತಿಭೋಗ ಸಮರದ ಇರಿತವೆಂಬುವಳು     ೪೯

ಪರನಾರಿ ಸಂಗದಿ ಸುರರೊಡೆಯ ತಾ ಕೆಟ್ಟು
ತಿರುಗಿದನು ಹರಿ ದಶಭವದೊಳಗೆ | ಮತ್ತೆ
ದುರುಳ ರಾವಣ ಮರುಣಾದನಲ್ಲ | ಪಾಂಡ
ವರ ಸತಿಗೆ ಕೀಚಕ ಅಳಿದನಲ್ಲ | ಇಂಥ
ವರದೀ ಪಾಡು ಪರದಾರ ಸೋಬತಿಗೆ ಬುದ್ದೆಲ್ಲಿ
ನರಕ ತಪ್ಪದು ತಾಯಿ ಕರಮುಗಿವೆನೆಂದ     ೫೦

ಧಿಟ್ಕೊಮರಾಮ ನಿನ್ನ ಅಟ್ಕಂಡು ಮನಸೋತು
ತಿಟ್ಕುಪ್ಪಸ ನಾ ತೊಟ್ಕೊಂಡೆನು | ಮಾಟ
ಬಟ್ಕುಚಗಳ ಮೇಲೆ ವಸ್ತಿಟ್ಕೊಂಡೆನು | ಮುಡಿಯ
ಬಿಟ್ಕಟ್ಟಿ ಹೂವೇರಿಸಿಟ್ಕೊಂಡೆನು | ಒಳ್ಳೆ
ಘಾಟ್ಕಾಂಬು ನಾರಿಗೆ ಬೇಟ್ಕೂಟ ಕೂಡದಲೆ ಕಾಮನ
ಆಟ್ಕಂಜಿ ಪೋದರೆ ನೇಟ್ಕಾಣೆ ರಾಮ         ೫೧

ಇಳೆಯೊಳು ತಾಯೆಂದು ತಿಳಿತಿಳಿದು ಕೂಡಿದರೆ
ಬಳಲಿಸಿ ಯಮದೂತರೆಳೆಯುವರು | ಒಯ್ದು
ಖಳಖಳ ಕುದಿವೆಣ್ಯಾಗ ಚೆಲ್ಲುವರು | ಬಹಳ
ಹುಳುವಿನ ಕೊಂಡಕ ತುಳಿಯುವರು | ಒಳ್ಳೆ
ಮಳಿಗಳ ಬಲುಕಾಸಿ ಕಣ್ಗೆ ಚುಚ್ಚುವರು ಬಳಲಿಸಿ
ತುಳಿಯುವರು ನರಕಕ ತಿಳಿಯೆನ್ನ ತಾಯಿ    ೫೨

ಅಂಗಜನ ಮೊನೆಬಾಣ ನುಂಗಿ ನನ್ನ ಮನವ
ಅಂಗ ಸಂಗ ಸುಖವ ಬಿಡಲಾರೆ | ರಾಮ
ಭಂಗ ಮಾಡಲು ಬ್ಯಾಡ ನುಂಗಲಾರೆ | ಕಾಮ
ದಿಂಗ ಬಡಿಸಲು ಬ್ಯಾಡ ಚೆನ್ನಿಗನೆ | ಬಾರೊ
ಜಂಗಿ ಕಾಮೂಟಕ ಹಾರಿ ಚೆಂಗನೆ ಕೈಕೊಟ್ಟು
ಅಂಗವಾಲಿಂಗಿಸಿ ಹಿಂಗಿಸು ಕಾಮತಾಪ      ೫೩

ಹೆರವರ ಹೆಣ್ಣಿಗೆ ಹರಿದು ಆಲಂಗಿಸಲು
ನರಕ ಹುಳುವಾಗಿ ಹುಟ್ಟುವನು | ಮತ್ತೆ
ಕುರುಡಾಗಿ ಕೂಳಿಗೆ ತಿರುಗುವನು | ಸಿಗದೆ
ಎರಡು ಕೈಲೆ ಹೊಟ್ಟೆ ಬಡೆಯುವನು | ತಾಯಿ
ಕೊರಗಿ ಮರಗಿ ಹದ್ದ ಪಾಲಾಗುವನು ಜೀವಂತ
ಇರುತಿರಲು ಗಿನ್ನಿತನ್ನಿ ಹತ್ತಿ ಸೋರುವನು     ೫೪

ಕುಸುಮಶರಕೆ ಬಾಳ ಕಸವಿಸಿ ಬಿಡುತಿಹೆನು
ಹಸಿದವರಿಗನ್ನ ಉಣಬಡಿಸು | ಬಾಳ
ತೃಷೆಯುಳ್ಳವರಿಗೆ ನೀರ ನೀಡಿಸು | ರಾಮ
ವಶವಾದ ಅಂಗನೆಯ ಭೋಗಿಸು | ಎಂದು
ಶಶಿಮುಖ ರಾಮಗ ಬಿಗಿದಪ್ಪು ಸಮಯದಿ
ಕೊಸರಿ ಕೈಚೆಂಡ ಕಸಗೊಂಡ ನೋಡಿ        ೫೫

ಭರರರರ ಪ್ರಾಣ ಪಕ್ಷಿ ಹಾರಿತೊ ರಾಮ
ಭರರರರ ಓಡಿ ಹೋಗುತಲಿ | ಕಂಡು
ಸರರರರ ವಿರಹ ಹಾರುತಲಿ | ತಲೆಯ
ಗಿರಿರಿರಿರಿ ತಿರುಗಿ ಬೀಳುತಲಿ | ರತ್ನಿ
ಧರರರರ ಹಿಡಿದೆಳೆದು ರಾಮನ ಕರೆತರಿಸಿ
ಖರರರರ ಕೊರೆಸುವೆ ಜೀವಂತ ಸಿರವ       ೫೬

ಛಲದಿ ರಾಮನ ಕೊಲಿಸಿ ಎಳಿಸಿ ಗೋರಿಗೆ ಹಾಕಿ
ಗೆಲಿಸಿ ಕೊಂಬುವೆ ಬತವನು | ಕೋಪ
ಬಲಿದು ರತ್ನಿ ಯುಗತಿ ತಗೆಯುತಲಿ | ಮೈಯ
ಮಾಲೆ ಸಹಿತ ಉಗರಿಲೆ ಚೂರುತಲಿ | ತನ್ನ
ಬಲಗೈಯ ಬಳೆಗಳ ಒಡೆಯುತಲಿ ಸಿಡಿಮಿಡಿ
ತಲೆ ಕಟ್ಟಿ ನೆಲಕ್ಹಾಸಿ ಕೆದರಿ ಮಲಗುತಲಿ      ೫೭

ಚೆನ್ನಿಗ ಕೊಮರಾಮ ಕೆನ್ನಿಗೆ ಕಣ್ಣೀರು
ಬನ್ನ ಬಡೆವುತ ಬಂದ ಅಂಗಳಕ | ಸಾಕು
ನನ್ನೀ ತಾಯಿಯ ಮಾತ ಕೇಳದೆ  ತಂದೆ | ಚೆಂಡ
ಸೊನ್ನಿಲಾಡದೆ ಲೆಗ್ಗಿ ಏರಾಡಿದೆ | ಅಯ್ಯೋ
ಅಣ್ಣ ಕಾಟಣ್ಣಗ ಇದುರಾಡಿದ ಈ ಪಾಟ
ಬೆನ್ನ ಸೀಳ್ವುದು ಕಾಯೊ ಎನ್ನ ಜಟ್ಟಿಂಗ ದೊರೆಯೆ     ೫೮

ಕಂಪಿಲರಾಯನು ಬೇಟಿ ಸಂಪಿನಿಂದಲಿ ಆಡಿ
ಕಂಪ ಕತ್ತುರಿ ಹೊತ್ತಂದಿದ್ದ | ರತ್ನಿ
ಚಿಂಪು ಚಿಪ್ಪಡಿಯಾಗಿದ್ದು ಕಂಡ | ಕೋಪ
ಕೆಂಪೇರಿ ಕಿಡಿಕಿಡಿ ಕಾರಿ | ಮಡದಿ
ನೆಂಪ ಮಾಡಿ ಹೇಳ ಜುಲುಮೆ ಮಾಡಿದವನ
ಹೆಂಪೇರಿ ಕೊಯ್ದಂಗ ಈಗ ಕೊಯ್ಸುವೆ        ೫೯

ಏನು ಹೇಳಲಿ ನಾಥ ಮಾನಹಾನಿಯ ನಾನು
ತಾನು ಮೈಮೇಲಿ ಏರಿ ಬಂದ | ರಾಮ
ಗ್ಯಾನವೇಟಿಲ್ಲದ ಕಾಮಕಂದ | ಎಳೆದ
ಸ್ವಾನ ಒಲ್ಲೆ ನಾನೆನಲು ಮೈಚೂರಿದ | ನಾಥ
ತಾನೆ ಚೆಲುವನೆಂದ ಮೇಲೆ ಬಂದ ನೀರೆ ಬಾ
ನೀನೆ ಕಾಮಾಟ ಕೈ ಮೈಯೂಟಕೆಂದ         ೬೦

ಪೊಡವಿಪತಿಯೆ ಕೇಳು ಆಡುತಾಡುತ ಚೆಂಡು
ಸಿಡಿದು ಮನಿಯಾಗ ಬೀಳುತಲಿ | ಚೆಂಡು
ಕೊಡುಯೆಂದು ಬಂದೆನ್ನ ನೋಡುತಲಿ | ಎನ್ನ
ಕಡುಚೆಲ್ವ ರೂಪಕ ಭ್ರಮಿಸುತಲಿ | ಎನ್ನ
ಕೆಡಿಸಿದ ಪರಿಯನು ನಾನೇನು ಹೇಳಲಿ ರಾಮನ
ಹೊಡಿಸಿ ರುಂಡರಕ್ತ ಹಣಿಗಿಟ್ಟು ನುಡಿಯೊ    ೬೧

ಸತಿಮಾತ ಕೇಳುತಲಿ ಅತಿಕೋಪ ಭೂಪತಿ
ಮತಿವಂತ ಬೈಚಪ್ಪಗ್ಹೇಳಿದನು | ಮಂತ್ರಿ
ಸುತನ ಹೊಡೆದು ತಲೆ ತೋರೆಂದನು | ಕೇಳೀ
ಮತಿವಂತ ಮರುಗುತ ಕೊರಗಿದನು | ದೊರೆಯ
ಸತಿಯರ ಕೃತಕವ ಅರಿಯದಲೆ ಒಮ್ಮೆಲೆ
ಮತಿಗೆಟ್ಟು ಸುತನ ತೆಲಿ ಹೊಡಿಸಬಹುದೆ ೬೨

ತಿಳಿಯಹೆಲೆ ಮಂತ್ರೀಶ ಅಳಿಯನೆಂಬುತ ಪ್ರಾಣ
ತುಳಿಸದಿರೀ ಚಣಕ ಕೇಳ್ನಾನು | ಕೊನೆಗ
ಎಳೀಸಿ ನಿನ್ನಯ ತಲೆಯ ಹೊಡಿಸುವೆನು | ಹೊಡಿರಿ
ಅಳುಕದೆ ಮರು ಅಪ್ಪಣೆಯೆಂದನು | ಮಾತು
ಒಳಗ್ಹುದುಗಿ ಅಡಗುತ ಕೇಳಿ ಮೈನಡುಗುತ
ತಳಮಳಿಸಿ ನೋಮದು ನುಡಿಯದಾದನು    ೬೩

ಚಣದೊಳು ಬೈಚಪ್ಪ ಎಣಿಸದೆ ರಾಮನ
ತಣಿಸಲು ಕಂಪಿಲರಾಯನಿಗೆ | ಹಿಡಿಸಿ
ಜನ ಕೊಟ್ಟು ಕರೆಸಿದ ಛೀ ಹಾಕಿ | ರಾಮ
ನಿನಗೆ ತಿಳಿಲಿಲ್ಲವಪರಾಧ ಮಾಡುದಕೆ | ತಾಯಿ
ಮನ ನೋಯ್ಸಿ ವ್ಯಭಿಚರ ಕೇಳುದಕೆ ಪಾಪಕೆ
ಕೊನೆ ಬಂತು ಜನುಮ ಉಳಿಸುವರಾರು      ೬೪

ಪುರದೊಳು ರಾಮನ ಸಿರವ ಹೊಡಿಯುವರೆಂದು
ಹರಿದ ಸುದ್ದಿ ತಾಯಿ ಕೇಳಿದಳು | ಮರುಗಿ
ಮರಮರನೆ ಧರೆಯ ಮೇಲುರುಳಿದಳು | ಎದ್ದು
ತರುಳನ ಬಳಿಗೆ ಹೋಗುತಲಿ | ಎನ್ನ
ಕೊರಳ ಹರಿದು ಹೋಗೆನ್ನುತಲಿ ಮಗ ರಾಮ
ಮರೆದು ಜೀವಿಸಲ್ಹ್ಯಾಂಗ ಹೇಳೆಂದಳು        ೬೫

ಹರಿಯಾಲಿ ಹಡೆದ್ಹೊಟ್ಟಿ ಕರೆದು ಬೈಚಪ್ಪನಿಗೆ
ತರುಳನ ತುಳಿಸನ್ನು ದುರುಳೆ | ಆರೊ
ಹರನೆ ರಾಮಲಿಂಗನೆ ನೀ ಕಾಯೊ | ನಿನ್ನ
ಹೊರತು ನಮಗ್ಯಾರಿಲ್ಲ  ಶಿವಶಿವನೆ | ಎಂಥ
ಹರಲಿಯ ಮಾತಿದು ಲಾಲಿಸ ತಂಗಿ ರತ್ನಾಲಿ
ಸರಿಯಲ್ಲ ದುರುಮರಣ ರಾಮಗ ತಾಯಿ     ೬೬

ಮಡದಿ ರಾಮಲದೇವಿ ತಡೆಯದಲ್ಲಿಗೆ ಬಂದು
ಕಡು ಚೆಲ್ವ ಕಾಂತನ ನೋಡುತಲಿ | ದುಃಖ
ಅಡಗಿ ಎದೆಯೆದೆ ಹೊಡಕೊಳ್ಳುತಲಿ | ಎನ್ನ
ಗುಣ ರನ್ನನೆ | ಮೋಹನನೆ | ಸಂಪನ್ನನೆ
ಹೊಡೆದು ಮುಂದಕಡಿ ಇಡೆಂದಳು | ಜಲ್ಮ
ಸುಡುಸುಡು ಬಾಳೀಕೆಂದಳೂ | ಎಂದು
ಹೊಡಮರಳಿ ನೆಲಕ ಬೀಳುತಲಿ ಬಡಿಯಲು
ಒಡೆದು ಹಣಿನೆತ್ತರ ಸೋರುದೇನೆಂಬೆ        ೬೭

ಮನ್ಯ ಮನ್ಯರು ಬಂದು ಮನ್ನುಣಿಯಿಂದಲಿ
ಚೆನ್ನಿಗ ರಾಮನಪ್ಪುತಲಿ | ತುಂಬ
ಕಣ್ಣೀರು ಸುರಸಿ ಚೀರಿ ಅಳ್ವುತಲಿ | ರಾಮ
ನಿನ್ನ ಮರೆವುದ್ಹ್ಯಾಂಗನ್ನುತಲಿ | ಕೇಳು
ವೀರನೆ | ರಣಶೂರನೆ | ಬಹುಧೀರನೆ
ಇನ್ನು ಛಪ್ಪನ್ನ ದೇಶಕಿಲ್ಲೆಂಬುವರು | ಶಿವನೆ
ಚೆನ್ನಿಗ ರಾಮನ ಸಲಹೆಂಬುವರು | ನಾವು
ಮುನ್ನೂರು ಸಾವಿರ ಗಣಗಳೂಟಕ ತಪ್ಪದಲೆ
ಸಣ್ಣಕ್ಕಿ ಹೋಳಿಗೆ ಚಿನ್ನಿಸಕ್ಕರಿತುಪ್ಪ ಹಾಕುವೆವು        ೬೮

ಚೆಂದುಳ್ಳ ರಾಮನು ಇಂದು ನಮ್ಮಗಲುವನು
ನೊಂದು ಗೆಳೆಯರೆಲ್ಲ ದುಃಖೀಸಿ | ನೇತ್ರ
ದಿಂದಲಿ ಕಣ್ಣೀರು ಹರಿಯುತ | ಇದಿಯು
ಬಂದು ರಾಜ್ಯ ನುಂಗಿತೆನ್ನುತ | ಅಯ್ಯೋ
ವಿಧಿ ಬಂದಿತೆ | ಮುಂದೆ ನಿಂತಿತೆ | ಕೇಡ ತಂದಿತೆ
ಇಂದಿಗೆ ಋಣ ತೀರಿತೆನ್ನುತಲಿ | ಶಿವನೆ
ಮುಂದೇನು ಗತಿಯೆಂದು ಗೋಳಿಡುತಲಿ ಕೂಡಿ
ಮಂದಿ ಎದೆ ಬಡಕೊಂಡು ಜಟ್ಟಿಂಗ ರಾಮಲಿಂಗ
ವಂದಿಸಿ ಬೇಡುವೆವು ಸಲಹು ನೀನೀಗ        ೬೯

ನೆರೆದ ಜನರಿಗೆಲ್ಲ ಕರಮುಗಿದು ಕೊಮರಾಮ
ಶಿರವಾಗಿ ಕೈಮುಗಿದು ನುಡಿದು | ಬ್ರಹ್ಮ
ಬರೆದಂತಾಗಲಿ ಚಿಂತಿಸಿ ಫಲವೇನು | ಪಾಪ
ವಿರದೆ ಶಿರವು ಪೋಗುದೇನು | ಕೇಳಿ
ಹೀಗೆ ಆಡಿದ | ಧೈರ್ಯ ತಾಳಿದ | ಜನ ಕೇಳೀದ
ಬರುವೆನು ಕೃಪೆಯಿರಲಿ ನಮಿಸಿದ | ರಾಮ
ತೆರಳಿದ ಮತ್ತೊಂದು ಬಗೆಯದೆ | ಜನರು
ಮರುಗುತ ಹರಹರನೆ ಉಳಿಸೆಂದರು ಮರಳಿತು
ಸುರಿಸುತ ಕಣ್ಣೀರು ಬರುತಿಹರು ರಾಮ       ೭೦

ಪಿಡಿದೋದು ರಾಮನೆ ಅಡವಿಯಾರಣದಾಗ
ನುಡಿಸಿ ಮಂತ್ರೀಶ ಕೇಳಿದನು | ಇಂಥ
ಹುಡುಗ ಬುದ್ಧಿ ಮಾಡಿದ್ಯಾಕೆಂದನು | ಶಿರವ
ಹೊಡೆವೆನು ಖಡ್ಗ ತಾರೆಂದನು | ಅಯ್ಯಾ
ಮಾಡಿದಿ ಜ್ಯಾಷ್ಟಿ ನೀ | ಬಹುದುಷ್ಟ ನೀ | ಕೆಟ್ಟ ಭ್ರಷ್ಟ ನೀ|
ಹಡೆದವ್ನ ವಚನ ಮೀರಿದೆಂದನು | ಕೇಡು
ತಡೆಯದೀ ಚಣ ಬಂತೆಂದನು | ತಪ್ಪು
ತಡೆಯಲಾರೆನು ರಾಮ ನಾ ನಿನ್ನ ಶಿರವಿಲ್ಲೆ
ಕಡಿವೆನು ಖಡ್ಗೊಂಡು ಬೇಗೆಂದನು  ೭೧

ನುಡಿಯಲಾಗ ಎದಿಗೆ ಹೊಡೆದಂತೆ ಮೊನೆಬಾಣ
ಬಿಡು ಕೇಡ ನುಡಿಯನಾಡುದನು | ದುಃಖ
ಅಡರುತ ಪಾಪಿ ನಾನಲ್ಲೆಂದನು | ಮತ್ತೆ
ಕೆಡಕು ಗುಣಗಳಿದ್ದರೆ ಹೊಡಿಯೆಂದನು | ಇದಿಯು
ಮುಂದೆ ತಿಳದೀತು | ಮಾತು ಹೊಳದೀತು |  ಮನವಿಳಿದೀತು
ಬಿಡದೆ ಇದಿ ಕಾಡುತಿರ್ಪದೆಂದನು | ನಾನು
ನುಡಿದರೆ ಹುಸಿ ಮಾತಾಗುವದೆಂದನು ಮಾವ
ಹಿಡಿ ಖಡ್ಗ ಝಳಪಿಸಿ ಕರದೊಳೆಎಂದನು ತಡವೇಕೆ
ಹೊಡಿಯೆನ್ನ ಶಿರವನ್ನು ಕೊಡುತಿರ್ದನವನು   ೭೨

ಪುಲ್ಲೋಚನ ನಿನ್ನ ಎಲ್ ಹೋಲಿಕಿರಾಮ
ನಿಲ್ಲದಲೆ ಓಡಿ ತಾ ಬಂದನು | ಅಣ್ಣಾ
ಇಲ್ಲಿಗೇತಕೆ ಬಂದೆ ನೀನೆಂದನು | ಬಂಧ
ದಲ್ಲಿ ಇರುವ ಕಾರಣೇನೆಂದನು | ಅಯ್ಯೋ
ಇಂಥಾದಾತೇನು | ನಿನ್ನ ಚಿತ್ತೇನು | ಈ ಸುದ್ದೇನು
ಅಲ್ಲಿ ರಾಮನ ಪಾದಕ್ಕೆರಗಿದನು | ಮತ್ತೆ
ಸೊಲ್ಲು ಸೊಲ್ಲಿಗೆ ದುಃಖ ತೋಡಿದನು | ಜೀವ
ನಿಲ್ಲದು ಬೇಗನೆ ಪೇಳೆನಲು ಕೊಮರಾಮ
ಎಲ್ಲ ತನಗಾದುದ ನಿಲ್ಲದೆ ಹೇಳಿದನು         ೭೩

ಹಿರಿಯಣ್ಣ ನಿನಗಿಂಥ ಹರಲಿಯ ಪರಿಯೇನು
ಮರುಗಿ ಧರೆಯಮ್ಯಾಲೆ ಉರುಳಿದನು | ಎನ್ನ
ಶಿರವ ಕೊಡುವೆ ಕೊಲೆ ಎಂದನು | ಚಿಂತಿ
ಮರೆತು ಸುಖದಲ್ಲಿರು ಎಂದನು | ನಿನ್ನ
ಬಂಧಿ ಕಡಿಸುವೆ | ನಿನ್ನ ಬಿಡಿಸುವೆ | ಗುಪ್ತ ಇಡಿಸುವೆ
ಇರುವದು ಹೋಲಿಕೆ ನಿನ್ನಂತೆ ನನ್ನದು | ರತ್ನಿ
ಅರಿಯಳು ಬದಲು ಇದೆಂಬುದನು | ನಿನ್ನ
ಮರೆದು ಇರುವುದ್ಹ್ಯಾಂಗೆಂದು ಹೊಲ್ಕಿರಾಮ
ಶಿರ ಬೇಗ ಹೊಡೆಯನುತಿರ್ದನಗ್ರಜಗೆ        ೭೪

ನಿನ್ನಂಥ ತಮ್ಮನ ಇನ್ನೆಲ್ಲಿ ಕಾಣೆನಯ್ಯ
ಎನ್ನೂತ ದುಃಖದಿಂದಪ್ಪಿದನು | ತನ್ನ
ಕಣ್ಣೀರಿಂದಲಿ ಮೈದೊಳೆದನು | ಮತ್ತೆ
ಮನ್ನಿಸಿ ಹಿತಮಿತ ಹೇಳಿದನು | ಬೇಗ
ಕೇಳು ತಮ್ಮನೆ | ನೀನು ಸುಮ್ಮನೆ | ಪೋಗು ಘಮ್ಮನೆ
ತನ್ನ ಪುಣ್ಯ ಪಾಪ ತನಗೆಂದನು | ಇದಿಯು
ಬೆನ್ನ ಬಿಡದೆ ಉಣಿಸುವದೆಂದನು | ಕೇಳು
ಅಣ್ಣ ಇಂಥ ಅನ್ಯಾಯ ತರವಲ್ಲ ಎಂದೆನುತ
ನಿನ್ನ ಕೊಲ್ಲಿಸು ಕೆಲಸ ಹೀನೆಂದನು  ೭೫

ಕತೆಯ ಪೇಳುವೆನಣ್ಣ ಹಿತದಿಂದ ಲಾಲಿಸು
ಮತಿವಂತ ಪುತ್ಥಳಿ ಮೂವತ್ತೆರಡು | ಪರರ
ಹಿತಕಾಗಿ ವಿಕ್ರಮರಾಜನು | ಪ್ರಾನ
ಹತವಾದ ವಿಧಿ ಮಾಡುವದೇನು | ಶಿವನೆ
ಇಂಥ ನೀತಿಯು | ಕೇಳೂಪ್ರೀತಿಯು | ಮಾಡುಜಾತಿಯು
ಬತಗೆಟ್ಟು ಮಾಡಿದ ಕೆಲಸವು | ಒಳ್ಳೆ
ಹಿತವುಳ್ಳವರಿಗೆ ಮಾತಿನ ಮರ್ಮವು | ಕೇಳು
ಮತಿವಂತ ಮಂತ್ರಿಗೆ ಅರಿಕೆಯು ಅಣ್ಣಯ್ಯ
ಅತಿ ಬೇಗ ಹೇಳು ಹತಿಸಬೇಡೆಂದ  ೭೬

ತರವಲ್ಲ ತಮ್ಮನೆ ಮರೆಯಲಾರದು ವಿಧಿಯು
ಹರ ಹರಿ ನರರನುಭವಿಸಲಿಲ್ಲೆ | ಪಾಂಡ
ವರು ಮನಿಮನಿ ತಿರಿದುಣ್ಣಲಿಲ್ಲೆ | ವನಕ
ಚರಿಸಿ ರಾಮ ಶೋಕಿಸಲಿಲ್ಲೆ | ಕೇಳು
ರಾಮಸೀತೆಯು | ಧರ್ಮದ್ರೌಪತಿಯು | ವೀರರತಿಪತಿಯು
ಹರಿಚಂದ ಹೊಲೆಯಾಳಾಗಲಿಲ್ಲೆ | ನಳನು
ಧರೆಯೊಳು ದೇಶ ಬಿಡಲಿಲ್ಲೆ | ಇಂತೀ
ದೊರೆಗಳು ದುಃಖ ಪರಿಭವಿಸಿದಾಗ ಹೇಳಯ್ಯ
ಪರರ ಹಿತಕರು ಯಾರು ಬಿಡಿಸಿದರೆನಲು     ೭೭

ಕತೆ ಕೇಳು ಅಣ್ಣಯ್ಯ ಸತ್ಯೇಂದ್ರ ಚೋಳನ ಮಗ
ಮತಿವಂತ ರಾಜಶೇಖರನೆಂಬವನು | ಮೈತ್ರ
ಹಿತವಾದ ಮಂತ್ರಲಕ್ಷನೆಂಬವನು | ಇರುತ
ಅತಿ ಪೇರಿಯೊಳು ರಾಜಶೇಖರನು | ಮಗನ
ಹಯ ಒದ್ದೀತು | ಕೂಸು ಬಿದ್ದೀತು | ಜೀವ ಹೋದೀತು
ಸತ್ಯೇಂದ್ರ ರಾಜನಿಗೆ ತಾಯಿ ದೂರಿದಳು | ಸುತನ
ಅತಿ ಕೋಪದಿ ಮಂತ್ರಿ ಹೊಡಿಯೆಂದನು | ಶಿರವ
ಹತಿಸುವ ವ್ಯಾಳ್ಳೇಕ ಮಿತ್ರ ಮಂತ್ರ ಲಕ್ಷ ಬಂದು
ಗತಿಯಾದೆನೆಂದು ಕುತ್ತಿಗೆ ಕೊಟ್ಟನು          ೭೮

ಬಿಡು ತಮ್ಮ ಮಾತ್ಯಾಕ ಜಡಜಬಾಣನ ಸಾಂಬ
ಸುಡುವಾಗ ಹರಿಬಂದು ಬಿಡಿಸಿದನೆ | ಪೆರೆಯ
ಹಿಡಿವ ರಾಹುಬಂದು ಬಿಡಿಸಿತೇನು | ಕೃಷ್ಣ
ಮಡಿವಾಗ ಪಾಂಡವರು ಪಿಡಿದರೇನು | ಮತ್ತೆ
ಕೇಳು ಚಂದ್ರನು | ದೇವೇಂದ್ರನು | ಈ ಕುಬೇರಿಂದ್ರನು
ಒಡಗೂಡಿ ದೇವರ ಸಮೂಹವು | ಶಿವನು
ಸುಡುವಾಗ ದಕ್ಷಣ ಬಿಡಿಸಿದರೇನು | ಜೀವ
ಬಿಡುವ ಸಮಯದಿ ತಾಯ್ತಂದೆ ಬಳಗೆಲ್ಲ
ಒಡಹುಟ್ಟಿದವರು ಬಿಡಿಸುವರೇನು    ೭೯

ಬಿಡು ಮಾತು ಅಣ್ಣನೆ ಒಡಲುರಿ ತಾಳದು
ಕೊಡುವೆನು ಎನ್ನ ಪ್ರಾಣವನು | ತಮ್ಮ
ಬಿಡು ಧರ್ಮವೇ ನೀ ನಡೆಯೆಂದನು | ಅಣ್ಣ
ಕೊಡುವೆನು ಭಿಡೆಯಲ್ಲ ಪ್ರಾಣವನು | ಅಯ್ಯೋ
ಮನ ನೊಂದುತ | ದೇಹ ಕುಂದುತ | ಮುಖ ಕಂದುತ
ಬಿಡು ಹಟ ಬೇಡೆಂದು ಮಿಡುಕಿದನು | ತಮ್ಮ
ತಡೆಯದಪ್ಪಣಿ ಕೊಡಣ್ಣ ಎಂದನು | ಪಿಡಿದು
ಒಡಗೂಡಿ ಶೋಕದಿ ಬಿಗಿದಪ್ಪುತ ಮಂತ್ರೀಶ
ತಡವಾದೀತೆಂದು ರಾಮನ ಹಿಡಿದೆಳೆದನು    ೮೦

ಪಿಡಿಯಲಾಕ್ಷಣ ಮಂತ್ರಿ ಕಡುಕೋಪದಿ ಪೋಲ್ಕಿರಾಮ
ಬಿಡು ನನ್ನಣ್ಣನೆಂಬುವನು | ಮತ್ತೆ
ಬಿಡದಿರೆ ಜಡಿಯುವೆ ಕಡಿಯುವೆನು | ಶಿರವ
ಎಡೆಮಾಡಿ ಕೈಮುಗಿವೆ ಶಿವನಿಗೆ | ಅಯ್ಯೊ
ಇಂಥ ಕರ್ಮೇನು | ಮಾಡು ಧರ್ಮೇನು | ನಿನ್ನ ವರ್ಮೇನು
ಮುಡಿಯುವೆ  ಅಣ್ಣನ ಕಾಲಾಗ ನಾನು | ಎಂದು
ಕೊಡುದಿಲ್ಲ ಅಣ್ಣನ ಮಂತ್ರೀಶ ನಾನು | ಕೇಳು
ಕೊಡುವೆನು ಶಿರವನು ಕಡಿ ನೀನು ತಡಬೇಡ
ಹೊಡಿಯದಿದ್ದರೆ ರಾಮಲಿಂಗನಾಣೆಂದನು     ೮೧

ಆಲಿಸು ಪದ್ಮಿನಿ ಹೋಲಿಕಿ ರಾಮಯ್ಯ
ಮೇಲಾದ ನಿನ್ನ ಪುರುಷತ್ವ | ಹೋದ
ಕಾಲವು ಬಂದಲ್ಲಿ ಒದಗಿತವ್ವ | ಮತ್ತೆ
ಶೂಲಧರನೀಗ ಮುನಿದನವ್ವ | ನಾರಿ
ಕೇಳು ಆತನ ತೆಲಿಯ ಮಂತ್ರಿ ಹೊಡೆಯಲು
ಆಲಸವಿಲ್ಲದೆ ಮಡಿದನಾಗವ್ವ        ೮೨

ಕೇಳುಕೇಳುತ ಎದಿಯ ಕಾಳಜ ತಾ ಬಡಿದು
ಕಾಳಗವಿದು ಕಣ್ಣು ಕಾಣದಲಿ | ಒಳ್ಳೆ
ಗೋಳಿಟ್ಟು ಬೋರಾಡಿ ಚೀರುತಲಿ | ದುಃಖ
ತಾಳದೆ ಒಡಲುರಿ ಏಳುತಲಿ | ತಿರುಗಿ
ಬೀಳುತಲಿ ತಲೆಯೊಡೆದು ಚೀರುತಲಿ ಅಂಜುತಲಿ
ಕೇಳುತ ನಾರೇರು ಗದಗುಟ್ಟಿ ನಡಗುತಲಿ     ೮೩

ಪರಿಪರಿ ದುಃಖದಿ ಉರುಳಿ ಭೂಮಿಯ ಮ್ಯಾಗ
ಕರಕರ ಕಂದಿ ಕರಗುತಿರ್ದಳು | ಅಯ್ಯೊ
ಮರಮರನೆ ಮನದೊಳು ಮರಗುವಳು | ಒಮ್ಮೆ
ಚಿರಿಚಿರಿ ಚಿಟ್ಟಂತ ಚೀರುವಳು | ಇಂತು
ಒರಲಾತ ಬಳಲುತ ಉರುಳುವಳು ಪದ್ಮಿನಿ
ಹರಹರ ಸ್ಮರಿಸುತ ನಮಿಸುವಳು   ೮೪

ಒಡಲುರಿ ತಾಳದೆ ಹೊಡಮರಳಿ ಬೀಳುತ
ಸಿಡಿದು ಗುಡುಗುಡು ಉರುಳುತಲಿ | ಸಣ್ಣ
ಮಿಡಿಮೀನ ಪರಿಯಂತೆ ಮಿಡುಕುತಲಿ | ಹಣೆಯ
ಬಡಿದು ನೆಲಕ ಧೂಳಡರುತಲಿ | ಮಾರಿ
ಒಡೆದು ನೆತ್ತರ ಸೋರಿ ಹರಿಯುತಲಿ ಆ ನಾರಿ
ಸುಡು ಜಲ್ಮವೆನ್ನುತ ಬಡಕೊಂಡಳಯ್ಯೋ    ೮೫