ಏಳಲು ಚೇತರಿಸಿ ಮೇಲೆದ್ದು ನಿಲ್ಲಲು
ತಾಳದೆ ಭೂಮಿಗೆ ಬೀಳುವಳು | ಅಯ್ಯೊ
ಬಾಳಲೋಚನ ಮುನಿದನೆಂಬುವಳು | ಎನ್ನ
ಆಳುವ ದೊರೆಯು ಮಡಿದನೆಂಬುವಳು | ಏನು
ಹೇಳದೆ ಹೋದನು ಬಾಳಲಿನ್ನೇನು ರಾಮಲಿಂಗ
ಬೀಳುವೆ ಬೆಂಕ್ಯಾಗ ಬೂದ್ಯಾಗಲಯ್ಯೋ      ೮೬

ಮೈಯಾಗ ಅರುವಿಲ್ಲ ಕಾಯ ಕಾಂತನ ಬಯಸಿ
ಬಾಯೆಂಡು ಬಯಲಪ್ಪಿಗೊಂಬುವಳು | ಗೋಡೆ
ಹಾಯುತ ಧಡಧಡ ಬೀಳುವಳು | ಒಮ್ಮೆ
ಮಾಯಾಮೋಹವೆ ಬಾ ಕೈಚಾಚುವಳು| ಚೀರಿ
ಬಾಯೆದೆ ಬಡಕೊಂಡು ಘಾಯಾಗುತಲಿ ತುಟಿಜೇನ
ಮಾಯಾದಿ ಎನ್ನ ಜೀವದ ಬೆಳಕ    ೮೭

ಮುತ್ತಿನ ಮೂಗುತಿ ಎತ್ತ ಒಗಿಯಲೆವ್ವ
ಸತ್ತ ಗಂಡಗ ಮೂಲವ್ವ | ಹಣಿಗೆ
ಕತ್ತುರಿ ಕುಂಕುಮ ಎರವಾತ | ಎನ್ನ
ಮುತ್ತೋದಿತನವಿಂದಿಗ್ಹಾಳಾತ | ಮಾರಿ
ಎತ್ತಿ ತಿರುಗಿ ಗರತೆರೋಳಿರಲಾರೆ ಅನುತ
ಕುತ್ತಿಗಿ ಶಿರಬಿಗಿದು ದುಃಖಿಸಿ ಬಿಕ್ಕುವಳು       ೮೮

ಮಂಡಲದೊಳು ನಾನು ರಂಡಿಯಾದ ಮೇಲೆ
ದಂಡಿಮುತ್ತಿನ ಕೊಟ್ಟು ಕೊಂಡೇನೆಂಡ | ಹಣಿಯ
ಮಂಡದೊಳು ಕುಂಕುಮಿಟ್ಟೇನೆಂದ | ಕರೆದು
ಕೊಂಡು ಮುತ್ತೋದಿಗಳುಂಡೇನೆಂದ | ಎನ್ನ
ಗಂಡನ ಕೊಲ್ಲಿಸುತ ಕೆಂಡಗಣ್ಣಿನ ಶಿವ ತನ್ನ
ರುಂಡಮಾಲಿಗೆ ಶಿರವ ಕೊಂಡೆನೆನಲು        ೮೯

ಕಡುಚಲುವ ಕಾಂತನು ಅಡಗಿದ ಚಣದೊಳು
ನಡುನೀರಾಗ ಕೈ ಬಿಟ್ಟಂಗವ್ವ | ಘೋರ
ಅಡವಿಯ ಹೊಗಿಸಿ ಮರೆತಂಗಾತವ್ವ | ಈಗ
ಪೊಡವಿಯೊಳಿಂಥ ಕಡುಪಾಪಿಲ್ಲವ್ವ | ಎಂದು
ಅಡರಿ ನೆಲಕ ಬಿಡುದ ಅಳುತಿರಲು ತುಂಬಿದ
ಹಡಗ ನಡುಗಡಲಾಗೊಡೆದಂಗಾತವ್ವ        ೯೦

ವಡವಾಗ್ನಿ ಉರಿಯೆದ್ದು ಸುಡುವದು ಮೈಯೆಲ್ಲ
ಕೊಡ ನೀರು ಗುಟುಗುಟು ಕುಡಿಯಲೇನೆ | ಒಳ್ಳೆ
ಮಡುವಿರ್ದ ನೀರೊಳು ಧುಮುಕಲೇನೆ | ತಾಪ
ತಡೆಯದೆ ಅಲ್ಲಿಗೆ ಪೋಗಲೇನೆ | ದೀಪ
ಹಿಡಿದ ಹುಳದಡಿಗಳ ಪರಿಯಂತೆ ಪದ್ಮಿನಿ
ಅಡಿಗಳ ಹೊಸೆದಾಡಿ ಸಿಡಿದುರುಳುತಿರಲು   ೯೧

ಮರೆಯಲಾರನು ಎನ್ನ ಅರಸನಿಲ್ಲದೆ ಈಗ
ಗಿರಿಯ ಮೇಲೇರಿ ಕೆಳಗ್ಹಾರಲ್ಯಾ | ದೊಡ್ಡ
ಶರಧಿಯೊಳು ಬಿದ್ದು ಮುಳುಗ್ಹೋಗಲ್ಯಾ | ಘೋರ
ಧರಣಿಯ ಬಗದಾಳ ಸೇರಲ್ಯಾ | ತಾಪ
ತರಹರಿಸಿ ಚಿರಶಾಂತಿ ಕೊಡುವಂಥ ವಿಷವರೆದು
ಹರಹರನೆ ಕುಡಿವೆನೆಂದು ಹೊರಳುತಲಿಹಳು           ೯೨

ಹಿಂದಿನ ಜಲ್ಮದಿ ಮಂದಿಯ ಗಂಡರನ
ಕೊಂದ ಪಾಪ ಬಂದು ತಟ್ಟಿತೇನು | ಉಣ್ಣು
ಮುಂದಿನೆಡೆಯ ಕಸಿದಿಟ್ಟೆ ತಟ್ಟಿತೇನು | ಮನವ
ನೊಂದಿಸಿ ವಿಷ ಕೊಟ್ಟೆನೇನು | ಪಾಪ
ಬಂದಿಂದು ನರಕಕ ಎಳೆದವೇನು ಅದು
ಇಂದಿಗೆ ಬಿಡದೆನಗೆಂದು ಚಿಂತಿಪಳು          ೯೩

ತರುಳ ಹುಟ್ಟಿ ಮೂರುವರೆ ತಿಂಗಳಿಗೆ ನಿನ್ನ
ಮರಣವಾಗಲೆಂದು ಹಣೆಗೆ | ಪಾಪ
ಬರೆದಳು ಸೆಟವಿ ಅರಣ್ಯದೊಳು ನಿನಗೆ | ಆರು
ಅರಿಯದಲೆ ಮಂತ್ರಿಯ ಕರದೊಳಗೆ | ಖೊಟ್ಟಿ
ಬರೆಸಿದ ಬ್ರಹ್ಮನ ಕರವ ಖಂಡಿಸಿದೆ ನೀ ಬಂದು
ಸಿರವ ತಗಿದ್ಯಾಕೆ ಹರನೆಂಬುವಳು  ೯೪

ಪುಟ್ಟಿಸು ಬ್ರಹ್ಮನು ಕೊಟ್ಟಿವನಿವನೆಂದು
ಕೊಟ್ಟಿದ್ದ ಶಿವ ಪುಟ್ಟಿಸದಿರಲಿ | ಒಡಲ
ಹುಟ್ಟಿದವನೊಬ್ಬ ಹರಿದು ಹೋಗಲಿ | ಅವನ
ಹೊಟ್ಟಿಲಿರುವ ಮಗ ತಿರುದುಣ್ಣಲಿ | ತನ್ನ
ಪಟ್ಟದರಸಿ ಮಗ ಕೆಟ್ಟು ಹೋಗಲಿ ಎಂದಾಕಿ
ಕುಟ್ಟಿತೂರುತ ಮಣ್ಣ ಬಟ್ಟುಮುರಿಯುವಳು    ೯೫

ಸುಂದರ ಪುರುಷನ ಎಂದು ನೋಡುವೆ ಮುಖವ
ಹೊಂದಿ ಪೂರ್ಣಿಮಿ ಚಂದ್ರನೇನ | ಭೋಗ
ದಿಂದಲಿ ರಾಜಿಸು ದೇವೇಂದ್ರನೇನ | ದ್ರವ್ಯ
ದಿಂದಲಿರುವ ಕುಬೇಂದ್ರನೇನ | ಕೇಳು
ಮಂದಗಮನಿಗೀಗ ಬೇರೊಂದು ನೆನಪಾಗಿ
ನೊಂದು ಕಣ್ಣೀಗೆ ನೀರ ತಂದು ಅಳುವಳು    ೯೬

ಕೇಳದು ಕಣ್ಣೀರು ಏಳ್ವುದು ಸಂತಾಪ
ತಾಳದು ಮನವು ಶಿವಶಿವನೆ | ಎನ್ನ
ಆಲರಸರಿಲ್ಲದ ಬಾಳು ಯಾತರದಯ್ಯೊ | ಸಾರಿ
ಬೀಳುತೇಲುತ ಬಲು ಮಿಡಕುವಳು | ಅಯ್ಯೊ
ಹಾಳು ಮನೆಯ ನೋಡಿ ಗೋಳೆಂಬುವಳು ಜನದಾಗ
ಹೇಳಿ ಕೇಳಿ ಬಾಳ್ವುದು ತರವೇನಯ್ಯೋ      ೯೭

ನಿನ್ನಿನ ಇರುಳಿನೊಳು ಎನ್ನ ಕನಸಿನೊಳಗ
ರನ್ನ ತಾಳಿಯು ಮಾಯವಾಗಿತ್ತವ್ವ | ಕೇಳ
ಮುನ್ನ ಗಾಬರಿಯಾಗಿ ಹುಡುಕುತಲಿದೆ | ನೋಡೆ
ಮಣ್ಣಾಗ ಮಿಂಚೂತ ಕಣ್ಮರೆಯಾತ | ಮೋಡ
ಕಾಣ್ವೊಡೆ ಮಿಂಚಾಗಿ ಅರಸರ ಮೇಲೆ ಭೋರೆಂದು
ಮಣ್ಮಳಿ ಬಿದ್ದೆನಗ ಎಚ್ಚರಾತವ್ವ      ೯೮

ಹರಿಯಾಗ ಏಳುತಲಿ ಮಾರಿ ಮೈಯನು ತೊಳೆದೆ
ಅರಸರ ಚಿಂತ್ಯಾಗ ಇರುತಿರಲು | ಕೇಳ
ಇರುಳ ಕನಸು ಸತ್ಯ ತೋರಿತಲ್ಲ | ಎನ್ನ
ಹರಣನ ಮರಣ ಸುದ್ದಿ ಹರವಿತಲ್ಲ | ಅಯ್ಯಾ
ಹರ ಮುನಿದ ಮ್ಯಾಲಿನ್ನು ಉಳಿಸುವುರ‍್ಯಾರು ಗೋಳೆಂದು
ಕೊರಗಿ ಚದುರಿ ಬಲು ಬಿಕ್ಕಿ ಅಳುವಳು        ೯೯

ಹರುಷದಿಂದಲಿ ಕಾಂತ ಹೊರಗೆ ಹೋಗುವಾಗ
ಬೆರಳೆಡವಿ ನೆತ್ರ ಸುರದೀತವ್ವ | ನೋಡಿ
ತಲೆಹರಿಸಿ ಚಾಲೊರೆದೆ ಹೋಗಬ್ಯಾಡೆಂದು | ದೊಡ್ಡ
ತುರಗ ತಾ ಮುಂದಕ ಸಾಗಾತವ್ವ | ಮುಂದೆ
ಹೊರಡಲು ಬೆಕ್ಕು ಅಡ್ಡಗಟ್ಟಿತವ್ವ ಬೇಡಂದೆ
ತಿರುಗದೆ ಮುಂದೆ ಸಾಗಿದರವ್ವ      ೧೦೦

ಕನ್ನೆಮಣಿಯೆ ಕೇಳ ಎನ್ನ ಮೋಹಿಸುವಾಗ
ಚೆನ್ನಿಗ ಮುಖವನು ನೋಡಲಿಲ್ಲ | ಬೇಡ
ಮುನ್ನೆನ್ನಲು ನುಡಿಯ ಕೇಳಲಿಲ್ಲ | ಮನದ
ಎನ್ನ ಬೆಂಕಿ ಬಯಕೆಲ್ಲ ತೀರಲಿಲ್ಲ | ಗುಣವೆ
ರನ್ನ ಸಂಪನ್ನ ಮೋಹನ್ನ ಸೂಸನ್ನ ಜೀವನ್ನ
ರನ್ನ ಎದಿಮ್ಯಾಗಿನ ಹಾರೆಂಬುವಳು ೧೦೧

ಸರಳ್ಹರಿದ ಬೈತಲೆಗೆ ಹೊರ‍ಳು ರಾಗಟಿ ಚೌರಿ
ಅರಳ ಮಲ್ಲಿಗೆ ಹಾರ ಸುರುಳೊಲ್ಲದು | ಮುತ್ತಿ
ನ್ಹರಳಾಭರಣ ಕೊರಳೊಲ್ಲದು | ರತ್ನ
ಹರಳಿನುಂಗುರ ಬೆರಳೊಲ್ಲದು | ಎಂದು
ಉರುಳಿ ಹೊರಳಿ ನೆರಳುವಳು ತೆರಳುವಳು
ಎರಳಿ ಸುರಳಿ ಕೊರಗಿ ಮರುಗುವಳು         ೧೦೨

ಗುಣರೂಪ ಯೌವನ ವರಣಿಸಲಿಂತೆನ್ನ
ಚಣಕೊಮ್ಮೆ ಬಂದೆನ್ನ ನೋಡುವನು | ಒಂದು
ಚಣವಗಲೆನ್ನ  ಬಿಟ್ಟಿರಲಾರನು | ರತ್ನ
ಮಣಿಹಾರಗಳಿಟ್ಟು ನೋಡುವನು | ಅಯ್ಯಾ
ರುಣವು ತೀರಿತು ಎನ್ನ ಗುಣಮಣಿ ಅಗಲಿದ
ಹಣೆಬರಹ ನಂದೆಂಡು ಮಣಿದುರುಳುತಿರಲು  ೧೦೩

ಹೊಗರು ತಿದ್ದಿದ ಮೀಸಿ ನಿಗರಿ ಗಡ್ಡದ ಭಾವ
ನಗಿಮುಖವೊಮ್ಮೆರ ತೋರೆನ್ನುವಳು | ನಿನ್ನ
ಅಗಲಿ ಜೀವಿದ್ಹ್ಯಾಂಗೆನ್ನುವಳು | ನೆಲವ
ಬಗಿದು ಸುಗುಣನೆಂದು ಗಗನಕ್ಕೆ ಬಾಯೊಡ್ಡಿ
ನಗಿಗೇಡಾಗಿತೆಂದು ಹೌಹಾರುವಳು ೧೦೪

ಬಗಿಬಗಿಯಿಂದಲಿ ಸೊಗಸುವ ಸುಂದರ
ಬಿಗಿದಪ್ಪಿ ಬಾ ಬಾ ಬಾರೆನ್ನುವಳು | ಎನ್ನ
ಬಗರಿಕುಚ ಕೋ ಕೋ ಕೋಯೆನ್ನುವಳು | ನಿನ್ನ
ಹಗೆಯಾಳಾದೆನೆನೆ ಎನ್ನುವಳು | ಅಯ್ಯೊ
ಅಗಹರನೆ ಹೋ ಹೋ ಹೋಯೆಂದು ವಿಧಿ ಬಂದು
ನೆಗೆವಾಗ ಹಾ ಹಾ ಹಾಯೆನ್ನುತಿಹಳು         ೧೦೫

ಅರಳ ಮಲ್ಲಿಗೆ ಹಾಸಿ ಇರುಳ ದೀವಿಗೆ ತುಂಬಿ
ಸರಳ ಮಂಚದೊಳೆನ್ನ ಹೊರಳೀ ಮಲಗಿಸಿ | ಒಳ್ಳೆ
ಮರುಳ ಮಾಡುತ ಎನ್ನ ಕೈ ಹಿಡಿವಾ | ಎನ್ನ
ಹೊರಳ ಮುಡಿ ಬೈತಲಿ ಸರಳ ಮಾಡುವಾ | ಮತ್ತ
ಕೊರಳಮಾಲೆ ತೊಡಕ ವಿರಳ ಮಾಡುವಾ ಕೇಳವ್ವ
ಕರುಳು ಮಿಡುಕದೆ ಪತಿಯ ಕೊಂದರೆನ್ನುವಳು         ೧೦೬

ಗುಣಗಾನ ಕೇಳುತ ಮಣಿದು ಮೋಹಿಸಿ ಚಣಕ
ಚಣಕೊಮ್ಮೆ ಮುಖವ ನೋಡುವನು | ಎನ್ನ
ಗುಣಮಣಿ ಹಾರೆಂದು ನುಡಿಸುವನು | ಮನವು
ದಣಿವಂತೆನ್ನ ಚುಂಬನ ಕೊಡುವನು | ರನ್ನ
ಮಣಿಯೆಂದು ಬಂಗಾರ ಖಣಿಯೆಂದು ಕೂಸಿಗೆ
ಹಣಿಯಾಗ್ಹಣಿಯಿಟ್ಟು ಮಣಿದಾಡುತಿಹನು      ೧೦೭

ಕೂಸಿನ ಮ್ಯಾಲತಿ ಏಸೊಂದು ಮಮತೆಯು
ಗಾಸಿ ಮಾಡದೆ ಕೂಸ ನಗಿಸುವನು | ಮನೆಯ
ಹಾಸುಗಲ್ಲಿನ ಮ್ಯಾಲೆ ನಡೆಸುವನು | ಹೂವಿ
ನ್ಯಾಸಿಗಿ ಮ್ಯಾಲೆ ಮಲಗಿಸುವನು | ಎನ್ನ
ವಾಸಗಾರನು ಇಂಥ ಕೂಸ ಬಿಟ್ಟಗಲಿದ ಭೂಮ್ಯಾಗ
ಕಾಸಿಗೆ ಕಡಿಯಾಗೆನ್ನ ಜೀವಾತ ಸಖಿಯೆ      ೧೦೮

ತರುಳ ಹುಟ್ಟಲಾಗ ಹರುಷದಿಂದಲಿ ಕಾಂತ
ಕರೆಸಿ ಜಂಗಮರ ಕೇಳಿದನು | ಸ್ವಾಮಿ
ಸರಸ ಮೂರ್ತವು ಶುಭವ ಹೇಳಿದನು | ಮತ್ತ
ವರ ಚೌಸಟ್ಟಿ ವಿದ್ಯೆ ಕಲಿಯುವನು  | ಕೇಳಿ
ಹರುಷದಿಂದಲಿ ಕರಿಸಿ ಜಂಗಮರನ್ನು
ನೆರಸಿ ಜೋಳಿಗೆ ಹಿಡಿಹೊನ್ನ ತುಂಬಿದನು     ೧೦೯

ಖೊಟ್ಟಿ ವ್ಯಾಳ್ಳೆದಿ ಕೂಸು ಹುಟ್ಟಿತೇನಯ್ಯಾ
ಹೊಟ್ಟಿಗಯ್ಯನು ಬಚ್ಚಿಟ್ಟನೇನು | ಒಳ್ಳೆ
ಕೆಟ್ಟ ಮೂರ್ತವು ಬಂದು ತಟ್ಟಿತೇನು | ಕೂಸು
ಹುಟ್ಟಿದ ನೆವ ಕಾಂತ ಬಿಟ್ಟನೇನು | ಎಂದು
ಹೊಟ್ಟಿಕಿಚ್ಚಿಗೆ ಕೂಸ ಕಟ್ಟಿಯ ಕೆಳಗ ಇಕ್ಕರಿಸಿ
ಒಟ್ಟರಿಸಿ ತುಂಬಿ ದುಃಖೇನ್ಹೇಳಲಿ    ೧೧೦

ಚಿಟಚಿಟನೆ ಚೇರಿತು ಚಟಪಟ ಉಸಲ್ಹಿಡಿದು
ಲಟಪಟ ಒದ್ದಾಡಿ ಸೆಟೆಯುತಲಿ | ಈಕಿ
ಸೆಟಸೆಟದದ್ಹಿಂದಕೆ ಬೀಳುತಲಿ | ಅವರು
ಪುಟನೆದ್ದು ಕೂಸನ್ಹಿಡಿಯುತಲಿ | ನೀರ
ಪಟಪಟ ನೆತ್ತಿಗೆ ಬಡಿಯುತಲಿ  | ದುಃಖದಿ
ತಟತಟ ಕಣ್ಣಿರು ಗೊತ್ತಿಲ್ಲದುದರುತಲಿ         ೧೧೧

ನಾರೇರೆಲ್ಲರು ಕೂಡಿ ಘೋರ ವೇದನೆಯೆಂದು
ಬೋರಾಡಿ ದುಃಖವ ಮಾಡುವರು | ಒಳ್ಳೆ
ಸೂರೆದ್ದು ಕಣ್ಣೀರ ಸುರಿಸುವರು | ಕೂಸು
ಮಾರಿ ನೋಡಲು ಧೈರ್ಯತಾಳುವರು | ಮತ್ತೆ
ಸಾರಿ ಒಂದೆಡೆ ದುಃಖ ಸೂಸುವರು ಸೂರ್ಯನು
ಸೇರಿ ಪಡುವಲಕ ಮರೆಯಾದನೇನೆಂಬೆ      ೧೧೨

ತರವಲ್ಲ ಪದ್ಮಿನಿ ಮರುಗ ಬೇಡ ನೀನು
ಪುರದೊಳಗಾರಾರು ಇಲ್ಲವೇನ | ನಿನ್ನ
ತರುಳನ್ನ ಕೆಳಗ್ಹೀಂಗ ಒಗೆಯುವರೇನ  | ಕೂಸು
ಮರಣವಾದರೆ ಹೇಳ ನಿನಗೆ ಒಳಿತೇನ | ಇನ್ನು
ಮರೆ ನಿನ್ನ ಪುರುಷನ ದುಃಖವನು ಸಲಹು ನೀ
ತರುಳನು ಮನ ಚಿಂತೆ ಮರೆಸುವನವನು    ೧೧೩

ಪತಿಯಿಂದ ಸಿಂಗರ ಪತಿಯಿಂದ ಸೌಭಾಗ್ಯ
ಪತಿಯಿಂದ ಸಕಲ ಜೀನವು | ಮತ್ತೆ
ಪತಿಯಿಂದ ತನು ಸುಮತಿಯೆಲ್ಲವು | ಕೇಳೂ
ಪತಿಯಿಂದ ಲೋಕಕ್ಕೆ ಹಿತಮಿತವು | ಮತ್ತೆ
ಪತಿಯಗಲಿ ಸೀತೆಗೆ ದುಃಖ ಘನವಾಯಿತು ಅಯ್ಯಯ್ಯೊ
ಪತಿ ಮಡಿದ ಮ್ಯಾಗ ಗತಿಯುಂಟೆ ಶಿವನೆ     ೧೧೪

ಚೆನ್ನ ಪುರುಷನಿಲ್ಲ ಇನ್ಯಾಕ ಬೇಕವ್ವ
ರನ್ನ ತಾಳಿಯು ಎನಗೆ ಹರಿಯುತಲಿ | ಕೊರಳ
ಚೆನ್ನ ಮಲ್ಲಿಗಿ ಹಾರ ತೆಗೆಯುತಲಿ | ಮುಡಿಯ
ಮುನ್ನ ಬಿಚ್ಚುತ ಹೆರಳ ಹರಡುತಲಿ  | ಅಯ್ಯೊ
ಇನ್ನೆಂದು ಕಾಣುವೆ ಪುರುಷನ ಶಿವನೆ ಬೋರಾಡಿ
ಖಿನ್ನಾಗಿ ಬಿಕಿ ಬಿಕ್ಕಿ ಅಳುತಿಹಳಯ್ಯೋ        ೧೧೫

ಕಳಿಸಲ್ಯಾ ಮಾತಿಗೆ ತಿಳಿಸಲ್ಯಾ ರಾಜನಿಗೆ
ಹಳಿಸಲ್ಯಾ ಮಂತ್ರಿ ಘೋಳಿಸಲೇನು | ಅಂತು
ಅಳಿಸಲ್ಯಾ ದಂತ ಕೀಳಿಸಲೇನು | ಕೋಲ್ಗೆ
ಎಳಿಸಲ್ಯಾ ಕುತ್ತಿಗೆ ಕೊಯ್ಸಲೇನು | ಮೈಯ
ಥಳಿಸಿ ಚರ್ಮ ಸುಲಿಸಲೇನು ಮಣ್ಣೊಳು
ಎಳೆಸುತ ಮಾನ್ಗೇಡಿ ಹುಗಿಸಲೇನು  ೧೧೬

ಎಲ್ಲಿ ಇರುವನವ್ವ ನಿಲ್ಲಲಾರದು ಮನವು
ಖುಲ್ಲ ಮಂತ್ರಿಯನೀಗ ತೋರುವನನೆ | ಎನ್ನ
ವಲ್ಲಭನ ಕೊಂದೆಲ್ಲಿ ಉಳಿಯುವನೆ | ಎಂದು
ಹೊಲ್ಲ ನುಡಿಯುತ ಕೂಸ ಬಗಲಿಗೆನೆ | ಎತ್ತಿ
ಪುಲ್ಲಲೋಚನೆಯರು ಎಲ್ಲಾರು ನಡಿರೆಂದು
ಚೆಲ್ಲುತ ಕಣ್ಣೀರ ನಲ್ಲೇರು ನಡೆದಿಹರು         ೧೧೭

ಅರಿದು ನೋಡಿ ಮಂತ್ರಿ ಗಿರಿ ಗಹ್ವರದೊಳು
ವರ ಕೊಮರಾಮನಲ್ಲಿಡುವುತಲಿ | ಹತ್ತು
ವರುಷದ ಹಾರ ಮಾಡಿ ಇಡುವುತಲಿ | ಯಾರು
ಅರಿದಂತ ಗುಪ್ತ ಮಾಡಿಡುವುತಲಿ | ಹೊಡೆದ
ಶಿರವನೊಯ್ದು ಕರೆದು ರತ್ನಿಗೆ ಕೊಟ್ಟು ಬೈಚಪ್ಪ
ಒರಗಿ ಮನಿಯಾಗ ಇರಲತ್ತಲವರು  ೧೧೮

ನಾರೆರೇರು ಭರರರ ಮರಗಾಳಿ ಪದರ ಮೋಡ
ಹಾರುವ ತೆರೆಯ ತಿಕ್ಕಾಟೊ | ಒಳ್ಳೆ
ಬೋರಾಡಳುವ  ಗುಡುಗು ದನಿಯೊ | ಕಣ್ಣೀರು
ಸೋರಿ ಬೀಳುವ ಮಳೆಯ ತೂರ ಹನಿಯೊ | ಅಂತು
ತೋರುವದೀ ಪರಿ ಅರೆದೊಂದು ಜನರಿಗೆ
ದೂರಿಂದ ಮಂತ್ರಿಯ ಕಾಣುತೋಡಿದಳು     ೧೧೯

ದುಡುದುಡೋಡೋಡಿ ಮಂತ್ರಿಯಡಿಯಲ್ಲಿ ಪದ್ಮಿನಿ
ಫಡಫಡಾ ನೆಲಕ್ಹಣಿ ಬಡಸೂತಲಿ | ಕೂಸ
ಹಿಡಿದಿರೆಂದು ಮುಂದ್ಹೋಗುತಲಿ | ಎದ್ದು
ಧಡಧಡಾ ಹಿಂದಕ ಬೀಳುತಲಿ | ಮತ್ತ
ಗುಡುಗುಡುಳ್ಳುತ ಮಾತ ನುಡಿಯುತಲಿ ಮಂತ್ರಿಗೆ
ಥಡಥಡಾಡಿದಳೇನೆಂಬೆನಯ್ಯೋ             ೧೨೦

ಧರ್ಮವೇನಿದು ಮಂತ್ರಿ ನಿರ್ಮಲ ಅಳಿಯಾನ
ಪದ್ಮಿನಿ ಕಾಂತನ ಠಾರ್ಮಾಡಿದಿ | ಒಳ್ಳೆ
ಘೋರ್ಮಾಡಿ ಭೂಮಿಗೆ ಹಾರ್ಮಾಡಿದಿ | ದುಃಖ
ಪೂರ್ಮಾಡಿ ನೀ ಮನ ಘಾರ್ಮಾಡಿದಿ | ನಿಮ್ಮ
ಕರ್ಮವಿಲ್ಲದಲೆ ವಿಚಾರ ಮಾಡದಲೆ ಕೊಂದಂಥ
ಮರ್ಮವೇನೆಂಬುತ ಮಣ್ಣು ಸೂರ್ಮಾಡುತಿಹಳು       ೧೨೧

ಹೇಸ್ಮನಸಿನ ಮಂತ್ರಿ ಆಸ್ಮಾಡಿ ಅಳಿಯಾಗ
ಮೋಸ್ಮಾಡಿ ಅನ್ಯಾಯ ಖಾಸ್ಮಾಡಿದಿ| ನೀನು
ಕೂಸ್ಮಡದಿಗೆ ನಾ‌ಸ್ಮಾಡಿದಿ | ಮನಕ
ಸೂಸ್ಮಿಡುಕದೆ ಕೊಂದು ನಿನ್ ಬತವ | ಅಯ್ಯೊ
ಮೋಸ್ಮಾಡಿ ಎನ್ನೊಳು ದೋಸ್ಮಾಡಿದಿ ಶಿವಶಿವನೆ
ಘಾಸ್ಮಾಡಿ ಕೊಂದೆಲ್ಲೊ ನನ್ಮೋಜನ್ಕಣಿಯ    ೧೨೨

ಆರು ಇಲ್ಲದ ಅಡವಿ ನೀರು ಇಲ್ಲದ ತಾಣ
ಏರು ಕಿಚ್ಚಿನ ಕುಡಿಗೆ ದೇಹ ತುರುಕಿ | ಬೆಂಕಿ
ಕಾರಿತು ಕಿಡಿಯ ಕಿಚ್ಚು ನುಂಗಿತು | ಕಾಯ
ಹಾರಿ ಹೋಯಿತು ಜೀವ ಬೆಂದು | ಅಯ್ಯೊ
ಯಾರಿಗ್ಹೇಳಲಿ ಶಿವನೆ ನಾರಿಗಾಡ ತಾಪ ಗೋಳೆಂದು
ಚೀರಿ ಅತ್ತು ಹೊರಳಿ ಬೀಳುವಳು    ೧೨೩

ಧೀರ ದುಂದುಭಿ ವೀರ ಮೀರಿದ ವರಶೂರ
ನೂರು ಸಾವಿರದೊಳು ಗೆದೆವನು | ರಣಕ
ಸೂರಿ ಮಾಡುವ ಸಮರಂಗವನು | ಮಹಾ
ವೀರ ಪರಾಕ್ರಮ ಪಾರ್ಥನು | ಇಂಥ
ಧೀರನ ಯಾವ ಪರಿಯಲಿ ಕೊಂದಿ ಎನ್ನುತ
ಮೋರಿ ತೋರೆಂದು ನಾರಿ ಕೇಳಿದಳು        ೧೨೪

ಬಿಡು ತಂಗಿ ಶೋಕವ ಪೊಡವಿಯೊಳು ರಾಮನ
ಹೊಡೆವ ಸಮಯಕ ನಿನ್ನ ವಲ್ಲಭನು | ಬಂದು
ಹಿಡಿದನು ಎನ್ನ ಮುಂಗೈಗಳನು  | ಅಣ್ಣ
ನುಡಿಬ್ಯಾಡ ನೀನೆಂದು ಆಡಿದನು | ಎನ್ನ
ಹೊಡಿಯೆಂಬು ಮಾತಿಗೆ ಬಿಡದೆ ಹೇಳಿದೆನು ತಂಗೆವ್ವ
ಮೃಡನಾಣಿ ಹಾಕಲು ಹೊಡಿಸಿದೆನವ್ವಾ       ೧೨೫

ಒಡೆಯ ರಾಮನ ಕೂಡ ಬಿಡದೆ ತಲೆಯನು ಕೊಟ್ಟ
ಕಡುಧೀರ ನಿನ ಗಂಡ ಅವನ ಸಾಟಿ | ಭೂಮಿ
ಹುಡುಕಲು ವಿರಳ ಬಂಡನವನೊಬ್ಬ | ಸಾರಿ
ಬಡಿಸುವೆ ಸುತ್ತ ಹೊತ್ತು ಡಂಗುರವ | ತಂಗಿ
ಒಡಲ ದುಃಖವ ಉರಿಯು ಹಿಂಗಲಿ ಅನ್ನುದಕ
ಉಡಿಯ ಕೂಸನು ನಾರಿ ಅತ್ತು ಕೊಂಡಾಡಿ   ೧೨೬

ಲೇಸು ಮಾಡಿದಿ ಮಂತ್ರಿ ಈಶನು ಒಲಿಯುವನು
ಕೂಸು ಎನ್ನನು ಈಗ ಹತಿಸೆಂದಳು | ಇರುವ
ಆಸೆ ನಮಗಿನ್ನು ಸಾಕೆಂದಳು | ಎನ್ನ
ವಾಸಗಾರನು ಹೋದಿನ್ನೇಕೆಂದಳು | ಮನವು
ಹೇಸದೆ ಕೊಲಲುಂಟೆ ಘಾಸಿ ಮಾಡುತ ಈ ಜೀವ
ಏಸು ಜಲುಮದ ಪಾಪ ಒದಗಿ ಬಂತು ಶಿವನೆ          ೧೨೬

ಕಾದ ಹಂಚಿನ ಮಾಲ್ಯೆ ಹೋದ ದೋಸಿಯ ಪರಿಯು
ಆದೀತು ಎನ್ನ  ಆತ್ಮಕೆಂದನು | ನೀನು
ಸಾಧಿಸಿ ನುಡಿವುದು ಆಗಲೆಂದನು | ಭಿನ್ನ
ಭೇದ ಎನ್ನೊಳಗೇನೇನಿಲ್ಲವೆಂದನು | ನಿನ್ನ
ಸೋದರರನಂತೆ ನಾ ಬಿಡದೆ ನೋಡುವೆನು ಏ ತಂಗಿ
ಆದ ಮಾತಿಗೆ ಅತ್ತು ಖೇದ ಮಾಡುದು ಬೇಡ ೧೨೮

ಚೆಲುವ ಚೆನ್ನಿಗ ನಿನ್ನ ನಲ್ಲನಗಲಿಸಿದೆಯಾ
ಮೊಲೆಯುಣ್ಣು ಶಿಶುವ ಬಿಡಿಸಿದಂತೆ | ಈದು
ಮಲಗಿದ ಹುಲಿಯನು ಕೆಣಕಿದಂತೆ | ಮತ್ತ
ತಳಕು ಬಿದ್ದ ಸರ್ಪ ತಡವಿದಂತೆ | ರತಿಯ
ಕಲಹದೊಳಿದ್ದ ನಾರಿನೆಬ್ಬಿಸಿದಂತೆ ಪದ್ಮಿನಿ
ಫಲವೆನಗಾಯಿತು ಮಂತ್ರೀಶನೆಂದ ೧೨೯

ಪರಿಪರಿ ರೀತಿಯಲಿ ನಾರಿಗ್ಹೇಳುತ ಮಂತ್ರಿ
ಪರಮ ವಚನ ಕೊಟ್ಟು ಬೇಡಿದನು | ತಂಗಿ
ಹರುಷದಿಂದಲಿ ನಿನ್ನ ಕಾಣುವೆನು | ಕೇಳು
ಹರನಾಣೆ ಬೈಚಪ್ಪ ನುಡಿಯುತಲಿ | ಎನ್ನ
ಸರುಭಾಗ್ಯ ಸಂಪತ್ತು ನಿಮ್ಮದೆನ್ನುತಲಿ ಸಂತೈಸಿ
ಮರೆಸುತ ದುಃಖವ ಮನ್ನಿಸಿದ       ೧೩೦

ಧರೆಯೊಳು ಗೋಕಾವಿ ಪುರದೊಳಗಿರುವನು
ಗುರುವರ ಸಿದ್ಧ ಸೇವಕನು | ಅಂದು
ಬರುತಿರೆ ಮಾಲಿಂಗಪುರದೊಳವನು | ವಸ್ತಿ
ಇರುತಿರಲು ರಾಮನಾಟ ನೋಡಿದನು | ಇದರ
ಚರಿತವ ನೋಡಿ ಕವಿತೆ ಬರೆದನು ರಸಿಕರು
ಅರತುಳ್ಳ ಸುಜನರು ಕೇಳಿರಿ ಲಾಲಿಸಿದನು    ೧೩೧