ತಂಬಾಕು ಸೇವನೆ ಮತ್ತು ತಂಬಾಕಿನ ಧೂಮಪಾನ (tobacco smoking) ಜಗತ್ತಿನಾದ್ಯಂತ ಕಂಡುಬರುವ ಮಾನವ ಚಟುವಟಿಕೆಯಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಇದಕ್ಕೆ ಸಮಾಜದಲ್ಲಿ ಪ್ರಬಲವಾದ ವಿರೋಧಗಳು ಉಂಟಾಗಿದ್ದು ಅನೇಕ ಧೂಮಪಾನಿಗಳು ಈ ಚಟದಿಂದ ಮುಕ್ತರಾಗಲು ಪ್ರಯತ್ನಿಸುತ್ತಿದ್ದಾರೆ.

ಸಾವಿರಾರು ವರ್ಷಗಳಿಂದ ಮಧ್ಯ ಅಮೇರಿಕದಲ್ಲಿನ ನಿವಾಸಿಗಳಾಗಿದ್ದ ಮಾಯಾ ಜನರು (Maya) ತಂಬಾಕು ಧೂಮ ಸೇವನೆ ಮಾಡಿದ್ದರು.

ಕ್ರಿ. ಶ. ಹದಿನೈದನೆಯ ಶತಮಾನದಲ್ಲಿ ಯುರೋಪಿಯನ್ನರು ಜಲಪರ್ಯಟನೆ ಮಾಡಿ ಮಧ್ಯ ಅಮೇರಿಕೆಯನ್ನು ಶೋಧಿಸಿದಾಗ, ಅಲ್ಲಿನ ಜನರು ವೈಯಕ್ತಿಕವಾಗಿ ಮತ್ತು ಕೆಲವು ಸಲ ಧಾರ್ಮಿಕ ಸಂದರ್ಭಗಳಲ್ಲಿ ಸಾಮೂಹಿಕವಾಗಿ ಸೇದುಗೊಳಿವೆಗಳಲ್ಲಿ ತಂಬಾಕು ಎಲೆಗಳನ್ನು ಜ್ವಲಿಸಿ ಅದರ ಧೂಮಪಾನ ಮಾಡುವದನ್ನು ಕಂಡು ಕುತೂಹಲದಿಂದ ತಾವೂ ಅದನ್ನು ಅನುಸರಿಸಿದರು. ತಂಬಾಕು ಸಸ್ಯವನ್ನು ತಮ್ಮೊಂದಿಗೆ ಯುರೋಪು ಖಂಡಕ್ಕೆ ತಂದರು. ಆಮೇಲೆ ಯುರೋಪಿಯನ್ನರು ತಾವು ವಲಸೆ ಹೋದ ವಿವಿಧ ದೇಶಗಳಲ್ಲಿ ಈ ಸಸ್ಯವನ್ನು ಬೆಳೆಯಲು ಪ್ರಾರಂಭಿಸಿದರು. ಹೀಗೆ ತಂಬಾಕು ಸಸ್ಯ ಕೆಲವು ಶತಮಾನಗಳಲ್ಲಿ ಜಾಗತಿಕ ಸಸ್ಯವಾಯಿತಲ್ಲದೇ ಜಗತ್ತಿನಾದ್ಯಂತ ತಂಬಾಕು ಸೇವನೆ ಅದರ ಧೂಮಪಾನಗಳು ಪ್ರಾರಂಭವಾದವು. ಯುರೋಪಿನಲ್ಲಿ ಮೊದಮೊದಲು ತಂಬಾಕು ಧೂಮಪಾನವು ಪ್ರತಿಷ್ಠಿತ ವರ್ಗದ ಜನರ ಹವ್ಯಾಸವಾಗಿದ್ದಿತು. ಕ್ರಮೇಣ ಎಲ್ಲ ವರ್ಗದ ಜನರು ಅದಕ್ಕೆ ಬಲಿಯಾದರು.

ತಂಬಾಕು ಎಲೆಗಳನ್ನು ಪರಿಷ್ಕರಿಸಿ ತಂಬಾಕು ಎಲೆಗಳಲ್ಲಿ ಸುರುಳಿ ಸುತ್ತಿ ಅದರ ಒಂದು ತುದಿಯನ್ನು ಜ್ವಲಿಸಿ ಇನ್ನೊಂದು ತುದಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳುವ ಸಿಗಾರ್ (cigar) ಮೊದಲಿಗೆ ಬಳಕೆಯಲ್ಲಿ ಬಂದಿತು. ಅನೇಕರು ಇಂಥ ಸಿಗಾರ್‍ ಗಳನ್ನು ಸೇದಿ ಅಳಿದುಳಿದ ತುಣುಕುಗಳನ್ನು ಬೀದಿಯಲ್ಲಿ ಎಸೆದಾಗ ಸಮಾಜದಲ್ಲಿನ ಕೆಲವು ಬಡಬಗ್ಗರು ಆ ತುಣುಕುಗಳನ್ನು ಬೀದಿಯಲ್ಲಿ ಹೆಕ್ಕಿ ತೆಗೆದು ಅದರಲ್ಲಿರುವ ತಂಬಾಕು ಎಲೆಗಳನ್ನು ಸಂಗ್ರಹಿಸಿ, ನಂತರ ಅವುಗಳನ್ನು ಒಂದು ಹಾಳೆಯಲ್ಲಿ ಸುತ್ತಿ ಅದನ್ನು ಜ್ವಲಿಸಿ ಸೇದತೊಡಗಿದರಂತೆ! ಇದನ್ನೇ ಸಿಗಾರೆಟ್ (cigarette) ಎಂದು ಕರೆದರು ! ಈ ತರಹದ ಅನಿರೀಕ್ಷಿತ ಆವಿಷ್ಕಾರದ ಸ್ಫೂರ್ತಿಯಿಂದ ಕೆಲವರು ಸಿಗಾರೆಟ್ ತಯಾರಿಸುವ ಯಂತ್ರ ನಿರ್ಮಿಸಿದರು. ಹೀಗಾಗಿ ಶೀಘ್ರವೇ ಸಿಗಾರೆಟ್ ಜಾಗತಿಕ ಮಾರುಕಟ್ಟೆಗೆ ಬರತೊಡಗಿತು!

ಸಿಗಾರೆಟ್ ಅಲ್ಲದೇ ತಂಬಾಕು ವಿವಿಧ ರೂಪಗಳಲ್ಲಿ ಧೂಮವನ್ನು ಒದಗಿಸುತ್ತದೆ. ಸಿಗಾರ್, ಚಿಲುಮೆ ಅಥವಾ ತಂಬಾಕು ಸೇದುಗೊಳಿವೆ (tobacco pipe), ಭಾರತದಲ್ಲಿ ಬೀಡಿ (beedi) ಗುಡಗುಡಿ ಇಂಥ ಸಾಧನಗಳಾಗಿವೆ. ತಂಬಾಕು ಎಲೆಯಿಂದ ಸೃಷ್ಟಿಯಾದ ನಸ್ಯ (tobacco snuff), ಎಲೆಯಡಿಕೆಯೊಂದಿಗೆ ಬಳಸುವ  ತಂಬಾಕು ರಸಕವಳ (tobacco chewing) ಕೆಲವರ ಚಟವಾಗಿದೆ. ಬಾಯಿಯಲ್ಲಿ ತಂಬಾಕು ಜಗಿಯುವದು ಪೌರ್ವಾತ್ಯ ದೇಶಗಳಲ್ಲಿ ಹೆಚ್ಚು ಕಂಡುಬರುತ್ತದೆ.

ಇಪ್ಪತ್ತನೆಯ ಶತಮಾನದಲ್ಲಿ ಯುರೋಪಿನಲ್ಲಿ ಸಿಗರೇಟು ಸೇದುವವರ ಸಂಖ್ಯೆ ಹೆಚ್ಚಿತಲ್ಲದೇ ಮಹಾಯುದ್ಧಗಳ ಸಮಯದಲ್ಲಿ ಯುರೋಪಿನ ಸಾಮಾನ್ಯ ಸ್ತ್ರೀಯರೂ ಧೂಮಪಾನಕ್ಕೆ ತೊಡಗಿದರು. ಧೂಮಪಾನ ಸಾಮಾಜಿಕ ಪ್ರತಿಷ್ಠೆಯಾಗಿ ಕಂಡುಬಂದಿತು.

ತಂಬಾಕಿನಲ್ಲಿರುವ ವಿವಿಧ ರಾಸಾಯನಿಕಗಳನ್ನು ತಜ್ಞರು ಅಭ್ಯಸಿಸಿದ್ದು ಅದರಲ್ಲಿ ಸಾವಿರಾರು ಬಗೆಯ ರಾಸಾಯನಿಕಗಳನ್ನು ಕಂಡುಹಿಡಿದಿದ್ದಾರೆ. ವಿವಿಧ ಪ್ರಮಾಣಗಳಲ್ಲಿರುವ ಈ ರಾಸಾಯನಿಕಗಳಲ್ಲಿ ಅನೇಕ ಆರೋಗ್ಯಕ್ಕೆ ಅಪಾಯ ತರುವ ರಾಸಾಯನಿಕಗಳನ್ನು ಗುರುತಿಸಿದ್ದಾರೆ.

ತಂಬಾಕಿನಲ್ಲಿರುವ ರಾಸಾಯನಿಕಗಳನ್ನು ಹಾಗು ತಂಬಾಕು ಧೂಮಪಾನದ ಕಾಲದಲ್ಲಿ ಉತ್ಪಾದಿತವಾಗುವ ರಾಸಾಯನಿಕಗಳನ್ನು ನಮ್ಮ ಆರೋಗ್ಯದ ದೃಷ್ಟಿಯಿಂದ ನಾಲ್ಕು ಮುಖ್ಯ ಪ್ರಕಾರಗಳಲ್ಲಿ ವಿಂಗಡಿಸಬಹುದು. (೧) ನಿಕೊಟೀನ್ (nicotine) (೨) ಕ್ಯಾನ್ಸರೋತ್ಪಾದಕಗಳು (carcinogens) (೩) ಕೆರಳಿಕಗಳು (irritants) ಹಾಗು (೪) ಕಾರ್ಬನ್ ಮೊನಾಕ್ಸಾಯ್ಡ್ (carbon monoxide)

ನಿಕೊಟೀನ್

ಸಿಗರೇಟು ಸೇದುವಾಗ ಆ ವ್ಯಕ್ತಿ ಸಿಗರೇಟಿನಿಂದ ಕಣ ರೂಪದ ಹಾಗು ಅನಿಲ-ಬಾಷ್ಪಗಳ ಮಿಶ್ರಣವನ್ನು ತನ್ನ ಉಸಿರಿನಲ್ಲಿ ಎಳೆದು ಶ್ವಾಸಕೋಶಕ್ಕೆ (lungs) ತಲಪಿಸುತ್ತಾನೆ. ಕಣರೂಪದಲ್ಲಿರುವ ರಾಸಾಯನಿಕವು ಮುಖ್ಯವಾಗಿ ಟಾರ್ (tar) ಎಂದಿದ್ದು ಬಹುಪಾಲು ಅದು ಶ್ವಾಸಕೋಶಗಳಲ್ಲಿ ಸಂಗ್ರಹವಾಗುತ್ತದೆ. ಕೆಲವು ಪ್ರಮಾಣವು ಉಚ್ಛ್ವಾಸದಲ್ಲಿ ಹೊರಗೆ ಹೋಗುತ್ತದೆ. ಸಂಚಯಿತ ಟಾರ್ ನಲ್ಲಿರುವ ನಿಕೊಟೀನ್ ಶ್ವಾಸಕೋಶದಲ್ಲಿ ಹರಿದಾಡುವ ರಕ್ತ ಪ್ರವಾಹವನ್ನು ಸೇರಿ  ಕೆಲವೇ ಸೆಕೆಂದುಗಳಲ್ಲಿ ರಕ್ತಪ್ರವಾಹದಲ್ಲಿ ಚಲಿಸಿ ಧೂಮಪಾನಿಯ ಮಿದುಳು ತಲಪುತ್ತದೆ. ನಿಕೊಟೀನ್ ಮಿದುಳನ್ನು ಉತ್ತೇಜಿಸುತ್ತದೆ. ಅದು ನರ ಕೋಶಗಳಿಗೆ ಉತ್ತೇಜನಕಾರಿ (ಆದರೆ ಅತಿಯಾದ ಪ್ರಮಾಣದಲ್ಲಿ ಅದು ನರಕೋಶಗಳ ಕಾರ್ಯವನ್ನು ಕುಗ್ಗಿಸಬಹುದು) ನಿಕೊಟೀನ್ ನರಮಂಡಲದ ಮುಖಾಂತರ ವಿವಿಧ ಅಂಗಗಳ ಮೇಲೆ ತನ್ನ ಪರಿಣಾಮ ಮಾಡುವದು. ಮುಖ್ಯವಾಗಿ ಅದು ಹೃದಯದ ಬಡಿತದ ವೇಗವನ್ನು ಹೆಚ್ಚಿಸುವದು, ರಕ್ತದ ಒತ್ತಡ ಹೆಚ್ಚಿಸುವದು. ರಕ್ತನಾಳಗಳು ಸಂಕುಚಿತಗೊಳ್ಳುವವು. ಜಠರದ ಸ್ನಾಯುಗಳ ಚಟುವಟಿಕೆ ಕುಗ್ಗುವದು.

ಕ್ಯಾನ್ಸರೋತ್ಪಾದಕಗಳು  (carcinogens)

ಏಡಿಗಂತಿ ಅಥವಾ ಕ್ಯಾನ್ಸರ್ (cancer) ವಿವಿಧ ಅಂಗಗಳಲ್ಲಿ ಉತ್ಪತ್ತಿಯಾಗುತ್ತದೆ. ಅದಕ್ಕೆ ವಿವಿಧ ಕಾರಣಗಳಿವೆ. ಅನೇಕ ಸಲ ಕಾರಣಗಳೇ ವೈದ್ಯರಿಗೆ ತಿಳಿಯದಿರಬಹುದಾಗಿದೆ. ಆದರೆ ತಂಬಾಕಿನಲ್ಲಿರುವ ಹಲವಾರು ರಾಸಾಯನಿಕಗಳು ಧೂಮಪಾನಿಗಳಲ್ಲಿ ಕ್ಯಾನ್ಸರ್ ಉತ್ಪತ್ತಿ ಮಾಡುತ್ತವೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.

ಇವುಗಳಿಗೆ ಕ್ಯಾನ್ಸರೋತ್ಪಾದಕಗಳು ಎನ್ನುತ್ತಾರೆ. ಈ ಅಪಾಯಕಾರಿ ರಾಸಾಯನಿಕಗಳು ನಿರ್ದಿಷ್ಟ ಪ್ರಮಾಣದಲ್ಲಿ ವ್ಯಕ್ತಿಯ ದೇಹದಲ್ಲಿ ಸಂಚಯಿತವಾದಾಗ ಮತ್ತು ಅದಕ್ಕೆ ಆ ವ್ಯಕ್ತಿಯ ದೇಹದ ಪ್ರತಿಕ್ರಿಯೆಯಿಂದಾಗಿ ಕ್ಯಾನ್ಸರ್ ಉತ್ಪಾದನೆ ಪ್ರಾರಂಭವಾಗುತ್ತದೆ.

ಕೆರಳಿಕಗಳು  (irritants)

ಧೂಮದಲ್ಲಿರುವ ಕೆಲವು ರಾಸಾಯನಿಕಗಳು ಶ್ವಾಸಕೋಶದ, ಶ್ವಾಸನಾಳಗಳ, ಗಂಟಲಿನ ಒಳಾವರಣದ ಜೀವಕೋಶಗಳನ್ನು ಕೆರಳಿಸಿ ಅವುಗಳಲ್ಲಿ ಉರಿಯೂತವನ್ನುಂಟುಮಾಡುತ್ತವೆ. ಇದರಿಂದ ಕೆಮ್ಮು, ಕಫಗಳು, ಉಸಿರಾಟಕ್ಕೆ ತೊಂದರೆ, ಗಂಟಲು ಕೆರೆತಗಳು ಅವರಲ್ಲಿ ಕಂಡುಬರುತ್ತವೆ. ಈ ಅಂಗಗಳ ಒಳಾವರಣದ ಜೀವಕೋಶಗಳು ಕೆಲವು ವಿಶಿಷ್ಟ ರಚನೆಗಳನ್ನು ಪಡೆದಿದ್ದು (cilia) ಅವುಗಳನ್ನು ಕೂದಲಿಗೆ (ರೂಪದಲ್ಲಿ ಮಾತ್ರ, ಇವು ಬರಿಗಣ್ಣಿಗೆ ತೋರಲಾರವು) ಹೋಲಿಸಿದ್ದು ಇಂಥ ರಚನೆಗಳನ್ನು ಧೂಮಪಾನದಲ್ಲಿರುವ ಕೆರಳಿಕಗಳು ಕ್ರಮೇಣ ನಾಶಮಾಡುತ್ತವೆ. ಜೀವಕೋಶಗಳಿಗಾದ ಇಂಥ ಧಕ್ಕೆಯಿಂದ ಅವುಗಳ ಕಾರ್ಯದಲ್ಲಿ ವ್ಯತ್ಯಯವಾಗುವದು. ಇದರಿಂದ ಅವರು ಗಂಟಲು, ಶ್ವಾಸನಾಳ, ಶ್ವಾಸಕೋಶಗಳ ಸೋಂಕಿಗೆ ಹೆಚ್ಚು ಬಲಿಯಾಗುತ್ತಾರೆ. ಶ್ವಾಸಕೋಶಗಳಲ್ಲಿ ವಾಯುವೀಜನೆಗೆ ತೊಂದರೆಯಾಗಬಲ್ಲದು.

ಕಾರ್ಬನ್ ಮೊನಾಕ್ಸಾಯ್ಡ್  (carbon monoxide)

ಇದು ಒಂದು ಅನಿಲ. ವರ್ಣರಹಿತ, ವಾಸನೆ ರಹಿತ ಅನಿಲ. ತಂಬಾಕು ಜ್ವಲಿಸುವಾಗ ಅದರಲ್ಲಿರುವ ಕಾರ್ಬನ್ ಕಣಗಳ ಅಸಂಪೂರ್ಣ ದಹನದಿಂದಾಗಿ ಧೂಮದಲ್ಲಿ ಕಾರ್ಬನ್ ಮೊನಾಕ್ಸಾಯ್ಡ್ ಅನಿಲ ಉತ್ಪತ್ತಿಯಾಗುತ್ತದೆ. ಧೂಮಪಾನಿಯು ಎಳೆದುಕೊಂಡ ಧೂಮದಲ್ಲಿರುವ ಈ ಅಪಾಯಕಾರಿ ಅನಿಲ ಆತನ ಶ್ವಾಸಕೋಶ ಸೇರುತ್ತದೆ. ಈ ಅನಿಲವು ಶ್ವಾಸದಲ್ಲಿ ತೆಗೆದುಕೊಂಡ ಆಮ್ಲಜನಕ  ವಾಯುವಿನೊಂದಿಗೆ ಸ್ಪರ್ಧಿಸುತ್ತದೆ. ಹೀಗೆ ಅದು ರಕ್ತದಲ್ಲಿ ಸೇರುತ್ತದೆಯಲ್ಲದೇ ಆ ವ್ಯಕ್ತಿಗೆ ದೊರೆಯಬೇಕಾಗಿದ್ದ ಆಮ್ಲಜನಕ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಇದರಿಂದ ಅಂಥ ವ್ಯಕ್ತಿಯ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಅಂಗಾಂಶಗಳಲ್ಲಿರುವ ಜೀವಕೋಶಗಳಿಗೆ ಆಮ್ಲಜನಕದ ಕೊರತೆಯಾಗುತ್ತದೆ. ರಕ್ತದಲ್ಲಿರುವ ಹಲಗೆ ರಕ್ತಕಣಗಳು (thrombocytes/ platelets) ತಮ್ಮ ಕಾರ್ಯ ನಿರ್ವಹಣೆಯಲ್ಲಿ ತೊಂದರೆಗೊಳಗಾಗುತ್ತವೆ.

ದುಷ್ಪರಿಣಾಮಗಳು:

ಧೂಮಪಾನಿಗಳಲ್ಲಿ ಶ್ವಾಸಕೋಶದ (lung cancer) ಏಡಿಗಂತಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಹೃದಯದ ಕಿರೀಟನಾಳಗಳಲ್ಲಿ (coronary arteries) ಗಡುಸುಗಟ್ಟಿ ರಕ್ತಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಧೂಮಪಾನಿಗಳು ಹೃದಯವೇದನೆ (angina), ಹೃದಯಾಘಾತ (myocardial infarction) ಮತ್ತು ಆ ಮೂಲಕ ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಿವೆ. ಅರ್ಧಾಂಗವಾಯು (paralysis) ಆಗುವ ಸಾಧ್ಯತೆ ಹೆಚ್ಚು. ದೇಹದ ಎಲ್ಲ ಭಾಗಗಳ ರಕ್ತನಾಳಗಳೂ ಈ ಬಗೆಯ ತೊಂದರೆಗೊಳಗಾಗುವದರಿಂದ ಕೈಕಾಲುಗಳಲ್ಲಿ ನೋವು, ರಕ್ತಸಂಚಾರಕ್ಕೆ ಅಡೆತಡೆಯಾಗಿ ಸರಿಯಾಗಿ ನಡೆದಾಡಲು ತೊಂದರೆ ಅನುಭವಿಸುತ್ತಾರೆ.  ರಕ್ತಸಂಚಾರದ ಅತಿಯಾದ ಅಡೆತಡೆಯಿಂದ ಕಾಲುಗಳಲ್ಲಿ ಗ್ಯಾಂಗ್ರೀನ್ ಆಗಿ ಕೆಲವರು ಶಸ್ತ್ರಚಿಕಿತ್ಸೆಯಿಂದ ಕಾಲು ಕತ್ತರಿಸಿಕೊಳ್ಳುವ ಸಾಧ್ಯತೆಯೂ ಇದೆ.

ಧೂಮಪಾನಿಗಳಲ್ಲಿ ಜಠರದ ವೃಣ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುವದು, ಜಠರ ರಸದ ಸ್ರವಿಸುವಿಕೆ ಹೆಚ್ಚಿ ಹೊಟ್ಟೆನೋವಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ. ಜಠರದಲ್ಲಿ ಉಂಟಾದ ವೃಣಗಳು (ulcers) ಬೇಗನೇ ವಾಸಿಯಾಗಲಾರವು.

ವಯಸ್ಸು ವೃದ್ಧಿಸಿದಂತೆ ನಮ್ಮ ಮೂಳೆಗಳು ತಮ್ಮ ನೈಸರ್ಗಿಕ ಗಡುಸುತನವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿಗೆ ಇದ್ದು ಅಂಥ ಎಲುಬುಗಳು ಜೊಳ್ಳೆಲುಬುಗಳಾಗಿ (osteoporosis)  ಮಾರ್ಪಡುವ ಸಂಭವವಿದೆ. ಈ ಸ್ಥಿತಿಯಲ್ಲಿರುವ ಎಲುಬುಗಳು ಚಿಕ್ಕಪುಟ್ಟ ಆಘಾತಗಳಿಂದ ಮುರಿಯುವ ಸ್ಥಿತಿಯಲ್ಲಿರುತ್ತವೆ. ಧೂಮಪಾನಿಗಳು ಜೊಳ್ಳೆಲುಬುಗಳನ್ನು (osteoporosis) ಇತರರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪಡೆಯುವರು.

ಧೂಮಪಾನಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಲವು ಬಗೆಯ ಅಂಧತ್ವ ಬರುವದನ್ನು ವೈದ್ಯರು ಗುರುತಿಸಿದ್ದಾರೆ.

ಧೂಮಪಾನಿಗಳ ಸರಾಸರಿ ಆಯುಷ್ಯ ಧೂಮಪಾನ ಮಾಡದವರಿಗಿಂತ ಕಡಿಮೆ ಇರುವದನ್ನು ವೈದ್ಯಕೀಯ ಅಂಕಿಸಂಖ್ಯಾ ಶಾಸ್ತ್ರಗಳ ನಿರೀಕ್ಷಣೆಯಿಂದ ಕಾಣಲಾಗಿದೆ.

ಪರೋಕ್ಷ ಧೂಮಪಾನ

ಜ್ವಲಿಸುತ್ತಿರುವ ಸಿಗರೇಟಿನ ಧೂಮವು ಸುತ್ತಲಿನ ವಾತಾವರಣ ಸೇರಿ ಅದರ ಸನಿಹದಲ್ಲಿರುವವರು ಆ ಹವೆಯನ್ನು ಸೇವಿಸುವದರಿಂದ ಅವರೂ ಧೂಮಪಾನದ ದುಷ್ಪರಿಣಾಮಗಳಿಗೆ ಒಳಗಾಗುತ್ತಾರೆ ಎಂಬುದು ಅಧ್ಯನಗಳಿಂದ ತಿಳಿದುಬಂದಿದೆ. ಇದು ಪರೋಕ್ಷ ಧೂಮಪಾನವಾಗಿದೆ (passive smoking). ಸಾರ್ವಜನಿಕ ಸ್ಥಳಗಳಲ್ಲಿ (ಉದಾ: ಚಹದಂಗಡಿ, ಕಾರ್ಯಾಲಯಗಳು, ಬಸ್ಸು, ರೈಲು ಇತ್ಯಾದಿಗಳು) ಧೂಮಪಾನವನ್ನು ಈಗ ಜಗತ್ತಿನಾದ್ಯಂತ ನಿಷೇಧಿಸಲಾಗುತ್ತಿದ್ದು, ಪರೋಕ್ಷ ಧೂಮಪಾನದ ದುಷ್ಪರಿಣಾಮಗಳಿಗೆ ಜನರು ಬಲಿಯಾಗುವದು ಕಡಿಮೆಯಾಗುತ್ತಿರುವದು ಆಶಾದಾಯಕ ಸಂಗತಿಯಾಗಿದೆ. ಆದಾಗ್ಯೂ ಧೂಮಪಾನಿಗಳ ಕುಟುಂಬದ ಸದಸ್ಯರು ಪರೋಕ್ಷ ಧೂಮಪಾನದ ದುಷ್ಪರಿಣಾಮಕ್ಕೆ ಒಳಗಾಗುತ್ತಿರುವದು ಕಂಡು ಬಂದಿದೆ.

ಧೂಮಪಾನದ ಚಟ, ವ್ಯಸನ

ಧೂಮಪಾನಕ್ಕೆ ಪ್ರಾರಂಭಿಸುವವರು ಮೊದಲು ಅದರ ಬಗ್ಗೆ ಕುತೂಹಲದಿಂದಲೋ, ಮಿತ್ರರು ಇಲ್ಲವೇ ಸಹೋದ್ಯೋಗಿಗಳ ಒತ್ತಾಯಗಳಿಂದಲೋ ಮತ್ತೆ ಕೆಲವರು ಸಮಾಜದಲ್ಲಿ ಪ್ರತಿಷ್ಠಿತರಾದವರು ಸೇದುವದನ್ನು ವಿವಿಧ ಮಾಧ್ಯಮಗಳಲ್ಲಿ ಕಂಡಾಗ ಅವರಂತೆ ತಾವೂ ಸಿಗರೇಟು ಸೇದಲು ಬಯಸುವದು ಕಾರಣವಾಗಿರಬಹುದು. ಧೂಮಪಾನವು ಮಾನವನ ಅನೈಸರ್ಗಿಕ ಚಟುವಟಿಕೆ. ಇದೊಂದು ಕಲಿತುಕೊಂಡ ವರ್ತನೆಯಾಗಿದೆ. ಹೀಗೆ ಕಲಿತುಕೊಂಡ ವರ್ತನೆಯು ಚಟ (habit) ಆಗಿದೆ. ಆದರೆ ಸಿಗರೇಟಿನ ಧೂಮದಲ್ಲಿರುವ ನಿಕೊಟೀನ್ ಅನೇಕ ಮಾದಕ ಪದಾರ್ಥಗಳಂತೆ ಅದರ ಚಟದಿಂದ ತಪ್ಪಿಸಿಕೊಳ್ಳಲು ಸುಲಭವಾಗದಂತೆ ಮತ್ತು ಅದರ ಸೇವನೆಯಿಂದ ಅಪಾಯಗಳಿಗೆ ಒಳಗಾಗುವಂತೆ ಅತ್ಯಂತ ಗಾಢವಾದ ಚಟವಾಗಿ ವ್ಯಸನವಾಗುತ್ತದೆ (addiction) ಎಂದು ಜಾಗತಿಕ ಆರೋಗ್ಯ ಸಂಸ್ಥೆ (World Health Organisation) ಹೇಳಿದೆ. ನಿಕೊಟೀನ್ ಒಂದು ವ್ಯಸನವೆಂದು ತಜ್ಞರು ಹೇಳಿದ್ದಾರೆ. ನಿಕೊಟೀನ್ ಅವಲಂಬಿತ ವ್ಯಸನಿಗಳು ತಮ್ಮ ರಕ್ತದಲ್ಲಿ ನಿಕೊಟೀನ್‍ದ ಪ್ರಮಾಣ ನಿರ್ದಿಷ್ಟ ಮಿತಿಗಿಂತ ಕಡಿಮೆಯಾದೊಡನೆಯೇ ಧೂಮಪಾನ ಮಾಡಲು ಪರಿತಪಿಸುತ್ತಾರೆ. ಅಂಥ ಸಂದರ್ಭದಲ್ಲಿ ಧೂಮಪಾನ ಸಾಧ್ಯವಾಗದಿದ್ದಲ್ಲಿ ಅವರು (ಮುಂದೆ ಹೇಳಿದ) ಕೆಲವು ಲಕ್ಷಣಗಳನ್ನು ತೋರುತ್ತಾರೆ.

ರಾತ್ರಿ ಮಲಗಿ ನಿದ್ರಿಸಿದಾಗ ನಿಕೊಟೀನ್‍ದ ಪ್ರಮಾಣ ರಕ್ತದಲ್ಲಿ ಕಡಿಮೆಯಾಗುತ್ತದೆ.  ಬೆಳಗ್ಗೆ ಎದ್ದೊಡನೆ ಮೊದಲನೆಯ ಸಿಗರೇಟು ಯಾವಾಗ ಸೇದುವರು? ಅದು ಬಹಳ ತೃಪ್ತಿ ಕೊಡುವದೇ? ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವಾಗ ಅಲ್ಲಿಂದ ಬೇಗನೇ ಎದ್ದು ಹೊರಟು ಸಿಗರೇಟು ಸೇದಬೇಕೆಂಬ ಹಂಬಲವಾಗುವದೇ? ಧೂಮಪಾನ ನಿಷೇಧಿಸಿದ ಸಾರ್ವಜನಿಕ ಸ್ಥಳಗಳಲ್ಲಿ ( ಉದಾ: ದೇವಾಲಯ, ಆಸ್ಪತ್ರೆ, ಬಸ್ಸು ಪ್ರಯಾಣಕ್ಕೆ ಮೊದಲು) ಪ್ರವೇಶಿಸುವ ಮುನ್ನ ಅದರ ದ್ವಾರದಲ್ಲಿ ಕೆಲ ಸಮಯ ನಿಂತುಕೊಂಡು ಸಿಗರೇಟು ಸೇದಿ ಒಳಗೆ ಪ್ರವೇಶಿಸುವ ಯುಕ್ತಿ ಅನುಸರಿಸುವರೇ? ಇವು ಧೂಮಪಾನಿಯು ನಿಕೊಟೀನ್‍ದ ವ್ಯಸನಕ್ಕೆ (addiction) ಬಲಿಯಾಗಿರುವದನ್ನು ಸೂಚಿಸುತ್ತವೆ.

ಅನೇಕ ಧೂಮಪಾನಿಗಳು ತಾವು ವ್ಯಸನಿಗಳಲ್ಲವೆಂದು ಅಲ್ಲಗಳೆಯುತ್ತಾರಾದರೂ ನಿಜವಾಗಿ ಅವರು ಅದರ ವ್ಯಸನಿಗಳಾಗಿರುವದುಂಟು.  ಧೂಮಪಾನವನ್ನು ತ್ಯಜಿಸಿದಾಗ ಅವರು ನಿಕೊಟೀನ್‍ದ ಹಿಂದೆಗೆತದ ಲಕ್ಷಣಗಳು (withdrawal symptoms)– ಸಿಡುಕುತನ, ಧೂಮಪಾನ ಮಾಡಬೇಕೆಂಬ ತೀವ್ರ ಹಂಬಲ, ಕಾತರ, ಚಡಪಡಿಕೆ, ಮನೋಏಕಾಗ್ರತೆ ಇಲ್ಲದಿರುವದು, ತಮ್ಮ ದೈನಂದಿನ ಕಾರ್ಯಗಳಲ್ಲಿ ವ್ಯತ್ಯಯ, ಓಕರಿಕೆ , ವಾಂತಿಗಳನ್ನು ಅನುಭವಿಸಬಹುದಾಗಿದೆ.

ಧೂಮಪಾನ ತ್ಯಜಿಸುವಿಕೆ:

ಧೂಮಪಾನವು ಮೊದಲಿಗೆ ಕಲಿತುಕೊಂಡ ವರ್ತನೆಯಾಗಿ ತದನಂತರ ವ್ಯಸನವಾಗಿರುವದರಿಂದ ಅದರಿಂದ ಪಾರಾಗಲು ಧೂಮಪಾನಿಗಳು ಶ್ರಮಪಡುವದು ಅವಶ್ಯ. ಅವರು ಪ್ರಜ್ಞಾಪೂರ್ವಕವಾಗಿ, ದೃಢ ಮನಸ್ಸಿನಿಂದ ಧೂಮಪಾನ ತ್ಯಜಿಸುವ ನಿರ್ಧಾರ ಮಾಡಲೇಬೇಕು. ಯಾವುದಾದರೂ ನಿರ್ದಿಷ್ಟ ದಿನದಂದು ಸಂಪೂರ್ಣ ತ್ಯಜಿಸುವದನ್ನು ನಿರ್ಧರಿಸಿ ತಮ್ಮಲ್ಲಿರುವ ಬೀಡಿ, ಸಿಗರೇಟುಗಳನ್ನು ತೆಗೆದೊಗೆಯಬೇಕು. ಮಿತ್ರರು ಸಹೋದ್ಯೋಗಿಗಳಿಗೆ ಇಂಥ ನಿರ್ಧಾರ ಹೇಳಿ ಅವರು ಧೂಮಪಾನಕ್ಕೆ ಆಮಿಷದ ಸ್ಥಿತಿಯೊದಗದಂತೆ ಸಹಕರಿಸಲು ಕೇಳಿಕೊಳ್ಳಬೇಕು. ವೈಯಕ್ತಿಕ ಜೀವನದಲ್ಲಿ ಏನಾದರೂ ನಿರೀಕ್ಷಿತ ತಾಪತ್ರಯಗಳಿದ್ದರೆ ಆ ಸಂದರ್ಭವನ್ನು ಧೂಮಪಾನ ತ್ಯಜಿಸಲು ಪ್ರಾರಂಭಮಾಡುವದು ಯಶಸ್ವಿಯಾಗಲಿಕ್ಕಿಲ್ಲ. ಧೂಮಪಾನ ಮಾಡಲು ಹಂಬಲ ನೆನಪುಗಳಾದಾಗ ಬಾಯಲ್ಲಿ ಪೆಪ್ಪರಮಿಂಟು  ಇತ್ಯಾದಿಗಳನ್ನು ಚೀಪುವದು ಕೆಲವರಿಗೆ ಸಹಾಯಕವಾಗಬಹುದು. ಸದಾ ಕಾರ್ಯಪ್ರವೃತ್ತರಾಗಿರುವದು ಧೂಮಪಾನದ ಹಂಬಲವನ್ನು ಹತ್ತಿಕ್ಕಬಲ್ಲದು. ವ್ಯಾಯಾಮುಗಳು (physical exercises), ಓದುವದು, ಸಂಗೀತ ಕೇಳುವದು ಇತ್ಯಾದಿ ಚಟುವಟಿಕೆಗಳಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಬೇಕು. ಧೂಮಪಾನ ತ್ಯಜಿಸಿದೊಡನೆ ಕಂಡುಕೊಂಡ ಲಾಭಗಳನ್ನು ಆಗಾಗ ನೆನಪಿಸಿಕೊಳ್ಳಬೇಕು. (ಉದಾ: ಕಡಿಮೆ ಏದುಸಿರು, ಕಡಿಮೆ ಕೆಮ್ಮು, ದೈಹಿಕ ಶಕ್ತಿಯಲ್ಲಿ ವರ್ಧನೆ ಇತ್ಯಾದಿಗಳು.)

ಧೂಮಪಾನ ತ್ಯಜಿಸುವದು ಸುಲಭವಲ್ಲ. ವೈದ್ಯರು ಕೆಲವು ಸಹಾಯಕ ಚಿಕಿತ್ಸೆಗಳನ್ನು ಕೊಡುತ್ತಾರೆ. ಆದರೆ ಇವು ಯಶಸ್ವಿಯಾಗಬೇಕಿದ್ದರೆ ಧೂಮಪಾನಿಯು ಧೂಮಪಾನದ ತ್ಯಾಜ್ಯಕ್ಕೆ ಮೊದಲು ದೃಢ ನಿರ್ಧಾರ ಮಾಡದಿದ್ದಲ್ಲಿ ಸದ್ಯಕ್ಕೆ ಲಭ್ಯವಿರುವ ಸಹಾಯಕ ಚಿಕಿತ್ಸೆಗಳು ಮಾತ್ರವೇ ಧೂಮಪಾನದಿಂದ ಅಂಥವರನ್ನು ಮುಕ್ತಮಾಡಲಾರವು.

ನಿಕೊಟೀನ್ ಅಗಿಯಂಟು (nicotine gum) ಬಾಯಿಯಲ್ಲಿ ಜಗಿಯುವದರಿಂದ ಅದು ನಿಕೊಟೀನ್‍ವನ್ನು ರಕ್ತಕ್ಕೆ ಸೇರಿಸುತ್ತದೆ. ಇದರಿಂದ (ಸಿಗರೇಟು ಜ್ವಲಿಸಿ ಧೂಮ ಸೇವಿಸುವಾಗ) ತಂಬಾಕಿನ ಧೂಮದಲ್ಲಿರುವ ಕ್ಯಾನ್ಸರೋತ್ಪಾದಕಗಳು, ಕೆರಳಿಕಗಳು ಶ್ವಾಸಕೋಶ ಸೇರಲು ಸಾಧ್ಯವಾಗದು.

ನಿಕೊಟೀನ್‍ ತೇಪೆಗಳನ್ನು (nicotine patch) ಪ್ರತಿದಿನ ತ್ವಚೆಯ ಮೇಲೆ ಅಂಟಿಸಿಕೊಂಡು ಆ ತೇಪೆಯಲ್ಲಿರುವ ನಿಕೊಟೀನ್ ಅನವರತವೂ ತ್ವಚೆಯ ಮುಖಾಂತರ ರಕ್ತ ಸೇರುವಂತೆ ಮಾಡಬಹುದಾಗಿದೆ. ಇದರಿಂದ ಸಿಗರೇಟು ಸೇದುವ ಹಂಬಲ ಹತ್ತಿಕ್ಕಲ್ಪಡುತ್ತದೆ. ಇಂಥ ತೇಪೆಗಳಲ್ಲಿ ನಿಕೊಟೀನ್ ಅಳವಡಿಸಿದ್ದು ದಿನಂಪ್ರತಿ ಹೊಸದಾದ ತೇಪೆಯನ್ನು ಅಂಟಿಸಿಕೊಳ್ಳಬೇಕಾಗುವದು. ಇಂಥ ತೇಪೆಗಳಲ್ಲಿ ೧೬ ರಿಂದ ೨೪ ತಾಸುಗಳ  ವರೆಗೆ  ಬೇಕಿರುವಷ್ಟು ನಿಕೊಟೀನ್ ಇರುತ್ತದೆ.

ನಿಕೊಟೀನ್ ನಾಸಿಕ ಸೀರ್ಪನಿ (nicotine nasal spray): ಮೂಗಿನಲ್ಲಿ ನಿಕೊಟೀನ್‍ಯುಕ್ತ ದ್ರಾವಣದ ಸೂಕ್ಷ್ಮ ಗಾತ್ರದ ಹನಿಗಳನ್ನು ಪಿಚಕಾರಿಯಂತೆ ಬಳಸುವದು. ಇಲ್ಲಿಂದ ನಿಕೊಟೀನ್ ರಕ್ತ ಪ್ರವಾಹ ಸೇರುತ್ತದೆ.

ನಿಕೊಟೀನ್ ಸೇದುಗೊಳಿವೆ (nicotine inhalator); ಇದರಲ್ಲಿ ನಿಕೊಟೀನ್ ಮಾತ್ರವೇ ಇರುವಂಥ ಪದಾರ್ಥಗಳಿರುವ ಸೇದುಗೊಳಿವೆ ಬಳಸುವದರಿಂದ ಸಿಗರೇಟು ಸೇದುವ ಹಂಬಲ ಹತ್ತಿಕ್ಕಲ್ಪಡುತ್ತದೆ.

ಹೀಗೆ ನಿಕೊಟೀನ್ ಮಾತ್ರ ಪಡೆಯುವ ವಿಧಾನಗಳಲ್ಲಿ ಕ್ರಮೇಣ ಕಡಿಮೆ ಪ್ರಮಾಣದ ನಿಕೊಟೀನ್ ದೇಹಕ್ಕೆ ಸೇರುವಂತೆ ತೇಪೆಗಳನ್ನು, ಮಾತ್ರೆಗಳನ್ನು ಬದಲಿಸುತ್ತಾರೆ. ದೇಹವು ನಿಕೊಟೀನ್‍ದ ಮೇಲೆ ಅವಲಂಬಿತವಾಗಿರುವದನ್ನು ನಿಧಾನವಾಗಿ ಪರಿಹರಿಸುವದು ಸಾಧ್ಯ.

ಧೂಮಪಾನದ ಹಂಬಲ ಹತ್ತಿಕ್ಕುವ ಮಾತ್ರೆಗಳು:

ಈ ಮಾತ್ರೆಗಳು ಮಿದುಳಿನಲ್ಲಿರುವ ವಿಶಿಷ್ಟ ನರಕೋಶಗಳಮೇಲೆ ತಮ್ಮ ಪರಿಣಾಮ ಮಾಡುತ್ತವೆ. ಇದರಿಂದ ಧೂಮಪಾನಿಯು ತನ್ನ ವ್ಯಸನದಿಂದ ಮುಕ್ತನಾಗಲು ಸಹಾಯವಾಗುತ್ತದೆ. ಈ ತರಹದ ಮಾತ್ರೆಗಳು ಇತ್ತೀಚೆಗೆ ಆವಿಷ್ಕಾರಗೊಂಡಿವೆ. ಹಲವು ತಿಂಗಳುಗಳ ವರೆಗೆ ದಿನಂಪ್ರತಿ ಈ ಮಾತ್ರೆಗಳನ್ನು ಸೇವಿಸಬೇಕಾಗುವದಲ್ಲದೇ ಈ ಮಾತ್ರೆಗಳಿಂದ ಕೆಲವು ತೊಂದರೆಗಳನ್ನು (side effects) ಕೆಲವರು ಅನುಭವಿಸಬಹುದಾಗಿದೆ.

ವಶೀಕರಣ (hypnosis), ಅಕ್ಯೂಪಂಕ್ಚರ್ (acupuncture) ಕೆಲವರಿಗೆ ಸಹಾಯಮಾಡಬಹುದಾಗಿದೆ.

ಆದರೆ ಧೂಮಪಾನಿಯು ತನ್ನ ವ್ಯಸನವನ್ನು ತ್ಯಜಿಸಬೇಕೆಂಬ ದೃಢ ನಿರ್ಧಾರ ಮಾಡಿದಾಗಲೇ ಈ ಸಹಾಯಕ ಚಿಕಿತ್ಸೆಗಳನ್ನು ಬಳಸಬಹುದಾಗಿದೆ.

ಇಲ್ಲಿ ಹೇಳಿದ ಚಿಕಿತ್ಸೆಗಳು ಎಲ್ಲ ಧೂಮಪಾನಿಗಳಿಗೂ ಸಹಾಯಕವಾಗಲಾರವು. ದೃಢ ನಿರ್ಧಾರ ಮಾಡಿದ ಧೂಮಪಾನಿಗಳು ಈ ಯಾವ ಚಿಕಿತ್ಸೆಗಳ ಸಹಾಯವಿಲ್ಲದೇ ತಾವೇ ಧೂಮಪಾನದಿಂದ ತ್ಯಜಿಸಬಹುದಾಗಿದೆ. ಅವರು ವೈದ್ಯರನ್ನು ಕಾಣುವ ಅವಶ್ಯಕತೆಯೇ ಇಲ್ಲದಿರಬಹುದು.

ಧೂಮಪಾನವನ್ನು ಪ್ರಾರಂಭಿಸುವದನ್ನು ತಡೆಗಟ್ಟುವದೇ ಸಮಾಜದ ಹೊಣೆಯಾಗಿದೆ.