ಧ್ಯಾನಚಂದ್ — ಭಾರತದ ಸುಪ್ರಸಿದ್ಧ ಹಾಕಿ ಆಟಗಾರರು, ಯುರೋಪ್, ಅಮೆರಿಕ ದೇಶಗಳವರು ಅವರ ಆಟವನ್ನು ಕಂಡು ಬೆರಗಾಗಿ ‘ಮಾಂತ್ರಿಕ’ ‘ಜಾದೂಗಾರ’ ಎಂದೆಲ್ಲ ಕರೆದರು. ಜಗತ್ತಿನ ಶ್ರೇಷ್ಠ ಕ್ರೀಡಾಪಟುಗಳ ಪಂಕ್ತಿಗೆ ಸೇರಿದವರು.

ಧ್ಯಾನ್‌ಚಂದ್

ಭಾರತದ ಜನಪ್ರಿಯ ಆಟ ಹಾಕಿ. ಒಂದು ಕಾಲಕ್ಕೆ ಭಾರತದ ರಾಷ್ಟ್ರೀಯ ಆಟ ಎಂದು ಕೂಡ ಹಾಕಿ ಸ್ಥಾನ ಗಳಿಸಿತ್ತು. ಸುಮಾರು ಮೂರು ದಶಕಗಳ ಕಾಲ ಭಾರತ ಹಾಕಿ ಆಟದಲ್ಲಿ ಇಡೀ ಜಗತ್ತಿಗೆ ‘ಅನಭಿಷಿಕ್ತ ಸಾರ್ವಭೌಮ’ ಎಂದು ಎನಿಸಿಕೊಂಡಿತ್ತು. ಹಾಕಿ ಎಂದಾಗ ಅಭಿಮಾನಿ ಗಳಿಗೆ ಧ್ಯಾನಚಂದ್ ಅವರ ಹೆಸರು ತಟಕ್ಕನೆ ನೆನಪಿಗೆ ಬರುತ್ತದೆ. ಆಟಗಾರರಿಗಂತೂ ಅವರ ಹೆಸರು ಮೈನವಿರೇಳಿಸುತ್ತದೆ.

ಭಾರತದ ಹೆಮ್ಮೆಯ ಪುತ್ರ ಧ್ಯಾನಚಂದ್ ಅವರಿಂದ ಭಾರತ ಹಾಕಿ ಕ್ರೀಡಾಜಗತ್ತಿನಲ್ಲಿ ಅಗ್ರಸ್ಥಾನದಲ್ಲಿತ್ತು. ಕ್ರೀಡಾವಿಶ್ವದ ಭೂಪಠದಲ್ಲಿ ಭಾರತದ ಹೆಸರು ಮೇಲೇರಲು ಹಾಕಿ ಕಾರಣ. ಹಾಕಿ ಆ ಮಟ್ಟಕ್ಕೆ ಏರಲು ಧ್ಯಾನಚಂದ್ ಅವರ ಆಟ ಕಾರಣ.

ಕ್ರಿಕೆಟ್ ಅಭಿಮಾನಿಗಳಿಗೆ ಗ್ರೇಸ್, ಹಾಬ್ಸ್, ಬ್ರಾಡ್‌ಮನ್, ಸೋಬರ್ಸ್, ಗವಾಸ್ಕರ್ ಮೆಚ್ಚಿನವರಾಗಿರ ಬಹುದು. ಫುಟ್‌ಬಾಲ್ ಪ್ರಿಯರಿಗೆ ಮ್ಯಾಥ್ಯೂಸ್ ಪುಸ್ಕಾಸ್ ನೆಚ್ಚಿನವರಾಗಿರಬಹುದು. ಆದರೆ ಹಾಕಿಗೆ ಒಬ್ಬರೇ ಒಬ್ಬರು. ಅವರೇ ಧ್ಯಾನಚಂದ್; ಭಾರತಕ್ಕಷ್ಟೇ ಅಲ್ಲ ; ಹಾಕಿ ಆಡುವ ಎಲ್ಲ ರಾಷ್ಟ್ರಗಳಲ್ಲೂ ಆಟಗಾರರ ಆರಾಧ್ಯಮೂರ್ತಿ ಧ್ಯಾನಚಂದ್.

ಯುರೊಪಿನ ಸಸಿ

ಹಾಕಿ ಭಾರತೀಯ ಆಟವೇನೂ ಅಲ್ಲ. ಬ್ರಿಟಿಷರು ಭಾರತದಲ್ಲಿ ಬಿತ್ತಿದ ಆಟ. ವೇಗ ಇದರ ಒಂದು ಮುಖ್ಯ ಲಕ್ಷಣ.

ಅತ್ಯಂತ ಹಳೆಯ ಆಟಗಳಲ್ಲಿ ಹಾಕಿ ಒಂದು ಎಂದು ಪರಿಗಣಿಸಲಾಗಿದೆ. ಅನೇಕ ಇತಿಹಾಸಕಾರರ ಪ್ರಕಾರ ಕ್ರಿಸ್ತಪೂರ್ವ ಸುಮಾರು ೨೦೦೦ ವರ್ಷಗಳಷ್ಟು ಹಿಂದೆಯೇ ಪೆರ್ಸಿಯಲ್ಲಿ ಜನರು ದುಂಡಾದ ಚೆಂಡು ಮತ್ತು ಒಂದು ತುದಿ ಕೊಕ್ಕೆಯಾಕಾರವಾಗಿರುವ ಕೋಲು (ಸ್ಟಿಕ್) ಗಳೊಂದಿಗೆ ಆಡುತ್ತಿದ್ದರು. ಪುರಾತನ ಗ್ರೀಕರೂ ಕೂಡ ಅದೇ ರೀತಿಯ ಆಟ ಆಡುತ್ತಿದ್ದರು.

ಕೆಲವು ಶತಮಾನಗಳ ನಂತರ ಫ್ರಾನ್ಸ್‌ನಲ್ಲಿ ಹಾಕಿ ಮಾದರಿಯ ಆಟ ಆಡುತ್ತಿದ್ದರು. ಅವರು ಆಗ ಆ ಆಟವನ್ನು ‘ಹಾಕ್ವೆಟ್’ ಎಂದು ಕರೆಯುತ್ತಿದ್ದರು. ಫ್ರೆಂಚ್ ಭಾಷೆಯಲ್ಲಿ ‘ಹಾಕ್ವೆಟ್’ ಎಂದರೆ ಕುರಿಕಾಯುವವನ ಕೋಲು ಎಂದರ್ಥ. ಮಧ್ಯಯುಗದಲ್ಲಿ ಫ್ರಾನ್ಸ್‌ನಲ್ಲಿ ಈ ಆಟ ಹೆಚ್ಚು ಮಹತ್ವ ಪಡೆಯಿತು. ಕಾಲ ಹೋದಂತೆ ‘ಹಾಕ್ವೆಟ್’ ಆಟ ಇಂಗ್ಲೆಂಡ್ ಪ್ರವೇಶಿಸಿತು. ಇಂಗ್ಲೀಷರು ಅದನ್ನು ‘ಹಾಕಿ’ ಎಂದು ಕರೆಯತೊಡಗಿದರು. ಅದೇ ಪದ ಇಂದು ಎಲ್ಲಾ ರಾಷ್ಟ್ರಗಳಲ್ಲಿಯೂ ಬಳಕೆಯಲ್ಲಿವೆ. ಇಂಗ್ಲಿಷರು ಮತ್ತು ಫ್ರೆಂಚರು ಆ ಕಾಲದಲ್ಲಿ ಆಡುತ್ತಿದ್ದ ಆಟ ತುಂಬ ಗಡುಸಾ ಗಿತ್ತು. ನಿಯಮಾವಳಿಗಳು ಕೂಡ ಸರಿಯಾಗಿರಲಿಲ್ಲ.

ಬಿಲ್ಲುಗಾರಿಕೆಯೇ ಪ್ರಧಾನವಾಗಿದ್ದ ಇಂಗ್ಲೆಂಡ್‌ನಲ್ಲಿ ಹಾಕಿ ಆ      ಟದ ವೈಖರಿಗೆ ಇಂಗ್ಲಿಷರು ಮನಸೋತರು. ೧೮೫೦ರ ಸುಮಾರಿಗೆ ಇಂಗ್ಲಿಷರು ಆಟದ ಗಡಸು ಕಡಿಮೆ ಮಾಡಲು ಕೆಲವು ನಿಯಮಾವಳಿಗಳನ್ನು ರಚಿಸಿದರು. ೧೮೮೩ರಲ್ಲಿ ಲಂಡನ್ನಿನಲ್ಲಿ ವಿಂಬಲ್ಡನ್ ಹಾಕಿ ಕ್ಲಬ್ ಉದಯವಾಗುವವರೆಗೂ ನಿಯಮಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಇದ್ದುವು.

ವಿಂಬಲ್ಡನ್ ಹಾಕಿ ಕ್ಲಬ್ ಸದಸ್ಯರು ಹೊಸ ನಿಯಮಗಳನ್ನು ರಚಿಸಿ ಆಟ ಅತ್ಯಂತ ವೇಗದಿಂದ ಸಾಗುವಂತೆ ಮತ್ತು ರೋಮಾಂಚಕರವಾಗಿರುವಂತೆ ಮಾಡಿದರು. ಆಧುನಿಕ ಹಾಕಿಯ ನಿಯಮಗಳಲ್ಲಿ ಅನೇಕ ಬದಲಾವಣೆಗಳಿವೆಯಾದರೂ ಮೂಲತಃ ವಿಂಬಲ್ಡನ್ ಕ್ಷಬ್ ರಚಿಸಿದ ನಿಯಮಗಳಿಗೆ ತಿದ್ದುಪಡಿಗಳನ್ನು ತರಲಾಗಿದೆಯಷ್ಟೆ.

ರಾಷ್ಟ್ರೀಯ ಆಟ

ಹಾಕಿ ಆಟಕ್ಕೆ ಸಂಬಂಧಿಸಿದ ಮೊದಲ ಕ್ಲಬ್ ಎನಿಸಿದ ವಿಂಬಲ್ಡನ್ ಕ್ಲಬ್ ಆಟವನ್ನು ಪ್ರಚಾರ ಮಾಡಲಾರಂಭಿ ಸಿತು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಆಟಕ್ಕೆ ಬೇಗ ಆಕರ್ಷಿತರಾದರು. ಹಲವಾರು ಕಡ್ಡಾಯ ನಿಯಮಗಳಿಂದ ಬಂಧಿತವಾದ ಹಾಕಿ ಆಟ ಕಣ್ಣಿಗೆ ಕಾಣುವಷ್ಟು ಅಪಾಯಕಾರಿಯಲ್ಲವೆಂದು ಮನವರಿಕೆ ಆದಾಗ ಇಂಗ್ಲೆಂಡಿನ ಮಹಿಳೆಯರೂ ಆಸಕ್ತಿ ತೋರಿಸ ಲಾರಂಭಿಸಿದರು. ೧೮೮೭ಕ್ಕೆ ಮೊದಲೇ ಇಂಗ್ಲೆಂಡಿನಲ್ಲಿ ಹಾಕಿ ಮಹಿಳೆಯರ ರಾಷ್ಟ್ರೀಯ ಆಟವಾಗಿ ಪರಿಗಣಿಸಲ್ಪಟ್ಟಿತು.

ಕ್ರೀಡಾಪ್ರಿಯರಾದ ಬ್ರಿಟಿಷರ ಒತ್ತಡದ ಪರಿಣಾಮವಾಗಿ ಭಾರತ ಹಾಕಿ ಎಂದರೆ ಏನೆಂದು ತಿಳಿಯುವ ಮೊದಲೇ, ಅಂದರೆ ೧೯೦೦ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹಾಕಿ ಆಟ ಪ್ರವೇಶಿಸಿತು. ಇಂಗ್ಲೆಂಡ್ ಒಲಿಂಪಿಕ್ ಹಾಕಿಯಲ್ಲಿ ಮೊದಲ ಪ್ರಶಸ್ತಿಗಳಿಸಿದ ರಾಷ್ಟ್ರವೆನಿಸಿತು. ಆದರೆ ಸಾಕಷ್ಟು ತಂಡಗಳು ಇರಲಿಲ್ಲ ವಾದುದರಿಂದ ಪ್ಯಾರಿಸ್ ಒಲಿಂಪಿಕ್ ಹಾಕಿ ಅಷ್ಟೇನೂ ಮಹತ್ವ ಪಡೆದಿರಲಿಲ್ಲ. ಪರಿಣಾಮವಾಗಿ ೧೯೦೪ ರಲ್ಲಿ ಸೇಂಟ್‌ಲೂಯಿ, ೧೯೦೬ರಲ್ಲಿ ಅಥೆನ್ಸ್, ೧೯೦೮ರಲ್ಲಿ ಲಂಡನ್, ೧೯೧೨ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಏಳನೇ ಆಧುನಿಕ ಒಲಿಂಪಿಕ್ಸ್‌ನಲ್ಲಿ ಹಾಕಿ ಮರುಪ್ರವೇಶ ಪಡೆಯಿತು. ಆಗಲೂ ಇಂಗ್ಲೆಡ್ ತಂಡವೇ ಅಂತಿಮವಾಗಿ ಜಯಗಳಿಸಿತು.

ಬ್ರಿಟಿಷರಿಂದ ಭಾರತಕ್ಕೆ

ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಬ್ರಿಟಿಷ್ ಅಧಿಕಾರಿಗಳು ಮತ್ತು ಸೈನಿಕರು ಭಾರತದಲ್ಲಿ ಹಾಕಿಯನ್ನು ಬಿತ್ತಿದರು. ಮೊದಮೊದಲು ಬ್ರಿಟಿಷರೇ ತಂಡಗಳನ್ನು ರಚಿಸಿಕೊಂಡು ಆಡುತ್ತಿದ್ದರು. ಸೇನಾಪಡೆಗಳಲ್ಲಿದ್ದ ಭಾರತೀಯರು ಆಟ ಕಲಿಯಲಾರಂಭಿಸಿದರು. ಬಹು ಬೇಗ ಕಲಿತರು. ಭಾರತೀಯ ಸೈನಿಕರೇ ತಂಡಗಳನ್ನು ರಚಿಸಿಕೊಂಡು ಬ್ರಿಟಿಷ್ ಸೈನಿಕರ ತಂಡಗಳನ್ನು ಸೋಲಿಸತೊಡಗಿದರು. ಅಧಿಕಾರದಾಹಿಗಳಾಗಿದ್ದರೂ ಇಂಗ್ಲಿಷರು ಕ್ರೀಡಾಚಟುವಟಿಕೆಗಳಿಗೆ ಮಲತಾಯಿ ಧೋರಣೆ ತೋರಲಿಲ್ಲ. ಭಾರತೀಯರಲ್ಲಿ ಹಾಕಿ ಆಟದ ಅಪೂರ್ವ ಪ್ರತಿಭೆಯನ್ನು ಮನಗಂಡ ಬ್ರಿಟಿಷರು ಶಾಲಾ ಕಾಲೇಜುಗಳಲ್ಲಿ ಆಟವನ್ನು ಪ್ರಚಾರಮಾಡಿದರು. ಆಟ ಕಲಿಯಲು ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹ ತೋರಿದರು. ಭಾರತೀಯರು ಹಾಕಿ ಆಟಕ್ಕೆ ಸಂಬಂಧಿಸಿ ದಂತೆ ತಮ್ಮದೇ ಆದ ಒಂದು ಸಂಘ ರಚಿಸಿ ಕೊಳ್ಳಲು ಆಂಗ್ಲರು ಪ್ರೋತ್ಸಾಹ ನೀಡಿದರು. ಪರಿಣಾಮವಾಗಿ ೧೯೨೫ರಲ್ಲಿ ಭಾರತ ಹಾಕಿ ಫೆಡರೇಷನ್ ಉದಯ ವಾಯಿತು.

ಅಷ್ಟು ಹೊತ್ತಿಗಾಗಲೇ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಒಳಪಟ್ಟಿದ್ದ ರಾಷ್ಟ್ರಗಳಲ್ಲಿ ಕೆಲವು ಹಾಕಿ ಆಡಲಾರಂಭಿಸಿದರು. ಭಾರತದ ಸೈನಿಕರ ಹಾಕಿ ತಂಡವೊಂದು ೧೯೨೬ರಲ್ಲಿ ಆಸ್ಟ್ರೇಲಿಯಾಮತ್ತು ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿತು. ಆ ಎರಡೂ ರಾಷ್ಟ್ರಗಳ ಅವಳಿ ಪ್ರವಾಸ ಕಾಲದಲ್ಲಿ ಭಾರತದ ತಂಡ ಆಡಿದ ಎಲ್ಲ ಪಂದ್ಯಗಳಲ್ಲೂ ಜಯ ಗಳಿಸಿತು. ಆ ಜಯ ಭಾರತದಲ್ಲಿ ಹಾಕಿ ಆಟ ಅತ್ಯಂತ ಬಿರುಸಾಗಿ ಹರಡಲು ಉತ್ತೇಜನ ನೀಡಿತು.

ಆರಂಭದಲ್ಲೇ ಸ್ವರ್ಣ

೧೯೨೮ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹಾಕಿಯನ್ನು ಮತ್ತೇ ಸೇರಿಸುವ ಪ್ರಯತ್ನದಲ್ಲಿ ಇಂಗ್ಲೀಷರು ಯಶಸ್ಸು ಗಳಿಸಿದರು. ಭಾರತ ಹಾಕಿ ಫೆಡರೇಷನ್ ತನ್ನ ಪ್ರವೇಶವನ್ನು ಆ ಕೂಟಕ್ಕೆ ಕಳುಹಿಸಿತ್ತು. ಆದರೆ ಕೇವಲ ಮೂರು ವರ್ಷಗಳ ಹಿಂದೆಯಷ್ಟೇ ಉದಯವಾಗಿದ್ದ ಭಾರತ ಹಾಕಿ ಫೆಡರೇಷನ್ ಇನ್ನೂ ಎಳೆಯ; ಅಂತರರಾಷ್ಟ್ರೀಯ ರಂಗದಲ್ಲಿ ಅದಕ್ಕೇನು ಮಾಡಲು ಸಾಧ್ಯವೆಂಬ ತಾತ್ಸಾರದಿಂದ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಭಾರತದ ಪ್ರವೇಶವನ್ನು ತಿರಸ್ಕರಿಸಿತು. ಈ ಸಂದರ್ಭದಲ್ಲಿ ಇಂಗ್ಲೀಷರ ಕ್ರೀಡಾಭಿಮಾನ ಸ್ಮರಣೀಯ. ಬ್ರಿಟಿಷರ ಒತ್ತಡಕ್ಕೆ ಮಣಿದ ಅಂತರರಾಷ್ಟ್ರೀಯ ಫೆಡರೇಷನ್ ಭಾರತ-ಬ್ರಿಟಿಷ್ ಲಾಂಛನದಡಿಯಲ್ಲಿ ಭಾರತ ಭಾಗವಹಿಸಲು ಒಪ್ಪಿಕೊಂಡಿತು. ಕೊನೇ ಗಳಿಗೆಯಲ್ಲಿ ಬ್ರಿಟನ್ ತನ್ನ ಪ್ರವೇಶವನ್ನು ವಾಪಸು ತೆಗೆದುಕೊಂಡಿತು. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅದೇ ಮೊದಲ ಬಾರಿಗೆ ಭಾಗವಹಿಸಿದ್ದ ಭಾರತ ಸ್ವರ್ಣಪದಕ ಗಳಿಸಿತು.

ಮಾಂತ್ರಿಕ

ಎರಡನೇ ಜಾಗತಿಕ ಮಹಾ ಸಮರಕ್ಕೆ ಮೊದಲು ; ಧ್ಯಾನಚಂದ್‌ಸ್ಟಿಕ್ ಹಿಡಿದು ಮೈದಾನದೊಳಕ್ಕೆ ಇಳಿದರೆಂದರೆ ಪ್ರೇಕ್ಷಕರ ಒಕ್ಕೊರಲಿನ ಹರ್ಷೊದ್ಗಾರ. ಆ ಕಾಲದಲ್ಲಿ ಅವರ ಆಟ ನೋಡಲಿಕ್ಕೆಂದೇ ಜನರು ಹೆಚ್ಚಾಗಿ ಸೇರುತ್ತಿದ್ದರು. ಅವರೊಡನೆ ಆಡುವುದಂತೂ ಇತರ ಆಟಗಾರರಿಗೆ ಒಂದು ರೀತಿಯ ಹೆಮ್ಮೆ. ಎದುರಾಳಿ ಆಟಗಾರರಿಗೆ ಅವರು ಸಿಂಹ್ವಸ್ವಪ್ನ. ಭಾರೀ ದೇಹದವರೇನಲ್ಲ. ಮಧ್ಯಮ ಕಾಯ. ಆದರೆ ಧೀರ ನಡಿಗೆ, ಗಂಭೀರ ಮುಖ, ಸೌಮ್ಯ ಸ್ವಭಾವ, ಮನಸ್ಸು ಬೆಣ್ಣೆಯಂತೆ ಮೃದು, ಅಗತ್ಯ ಬಿದ್ದಾಗ ವಜ್ರದಷ್ಟು ಕಠೋರ, ಮಿತಭಾಷಿ. ಆಟದ ಕಣಕ್ಕಿಳಿದಾಗ ಮಾತ್ರ ಇತರರಿಗೆ ದೈತ್ಯ ಸ್ವರೂಪ. ಅರೆಬಗ್ಗಿ ಚೆಂಡನ್ನು ಮುನ್ನಡೆಸಿಕೊಂಡು ಹೋದರೆಂದರೆ ಎದುರು ತಂಡದ ಆಟಗಾರರಿಗೆ ಮೈ ನಡುಕ. ಒರಟು ಆಟದಿಂದ ಮೈ ಕೈ ಗಾಯಗೊಳಿಸಿಯಾರು ಎಂದಲ್ಲ; ಎಲ್ಲಿ ನಮ್ಮನ್ನು ತಪ್ಪಿಸಿ ಚೆಂಡನ್ನು ಗುರಿ ಮುಟ್ಟಿಸಿ ಬಿಡುವರೋ ಎಂದು. ಅವರ ಆಟದ ಚಮತ್ಕಾರ ಅಷ್ಟು ಅದ್ಭುತವಾಗಿತ್ತು. ತಮ್ಮ ಕ್ರೀಡಾ ಚಾಕಚಕ್ಯತೆಯಿಂದ ಎದುರಾಳಿ ಆಟಗಾರರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದರು. ಎಂತಲೇ ಅವರು ‘ಹಾಕಿಯ ಮಾಂತ್ರಿಕ’ ಎಂದು ಹೆಸರಾಗಿದ್ದರು.

ಮೋಡಿಗಾರ

ಅವರ ಸ್ಟಿಕ್‌ಗೆ ಚೆಂಡು ಸಿಕ್ಕಿತೆಂದರೆ ಸರಿ ಅದು ಎಂದು ವ್ಯರ್ಥವಾಗುತ್ತಿರಲಿಲ್ಲ. ಅವರೇ ಎಲ್ಲ ಸಂದರ್ಭಗಳಲ್ಲೂ ಗೋಲು ಹೊಡೆಯುತ್ತಿದ್ದರೆಂದಲ್ಲ; ಗೋಲುಗಳಿಸಲು ಕಷ್ಟ ವೆಂದು ಕಂಡುಬಂದಾಗ ಚೆಂಡನ್ನು ಮಿಂಚಿನಂತೆ ತಮ್ಮ ಸಹ ಆಟಗಾರರಿಗೆ ಕಳುಹಿಸಿಕೊಡುತ್ತಿದ್ದರು. ಅವರು ಹಾಗೆ ಮೊದಲು ಎದುರಾಳಿ ತಂಡದ ಕನಿಷ್ಠ ಇಬ್ಬರು ಆಟಗಾರರ ಧಾಳಿಯನ್ನಾದರೂ ತಪ್ಪಿಸುತ್ತಿದ್ದರು. ಚೆಂಡು ಯಾವ ಕಡೆಗೆ ಯಾರಿಗೆ ಸೇರಿತು ಎಂದು ಆಟಗಾರರು ಕಣ್ಣುಬಿಟ್ಟು ನೋಡಬೇಕಾಗುತ್ತಿತ್ತು. ಎಂದೇ ಧ್ಯಾನಚಂದ್ ಅವರನ್ನು ಹಾಕಿಯ ‘ಮೋಡಿಗಾರ’ ಎಂದು ಆಗಿನ ಕ್ರೀಡಾಭಿಮಾನಿ ಗಳು, ವ್ಯಾಖ್ಯಾನಕಾರರು ಕರೆದಿದ್ದರು.

ಧ್ಯಾನಚಂದ್‌ಗೆ ಇನ್ನೊಂದು ಹೆಸರು ‘ಜಾದೂಗಾರ’ ಎನ್ನುವುದು. ಒಲಿಂಪಿಕ್ಸ್ ಹಾಕಿ ಟೂರ್ನಮೆಂಟಿನ ಪಂದ್ಯವೊಂದರಲ್ಲಿ ಅಮೆರಿಕದವರ ವಿರುದ್ಧ ಆಡುವಾಗ ಅವರಿಗೆ ಆ ಹೆಸರು ಬಂದಿತು. ಧ್ಯಾನಚಂದ್ ಅವರ ಸ್ಟಿಕ್‌ಗೆ ಚೆಂಡು ದೊರೆತ ಕೂಡಲೇ ಅವರು ಶರವೇಗದಲ್ಲಿ ಗೋಲು ಹೊಡೆಯಲು ನಿಗದಿಗೊಳಿಸಿದ ಅರ್ಧ ವರ್ತುಲಾಕಾರದ ಆವರಣದೊಳಗಿರುತ್ತಿದ್ದರು. ಕ್ಷಣ ಮಾತ್ರದಲ್ಲಿ ಚೆಂಡು ಗುರಿ ಮುಟ್ಟುತ್ತಿತ್ತು. ಅವರ ಸ್ಟಿಕ್‌ನ ನಿಯಂತ್ರಣದಿಂದ ಚೆಂಡನ್ನು ತಪ್ಪಿಸಲು ಎದುರಾಳಿ ಆಟಗಾರರು ಯಾವುದೇ ರೀತಿಯ ಪ್ರಯತ್ನ ನಡೆಸಿದ್ದರೂ ವಿಫಲರಾಗುತ್ತಿದ್ದರು. ಹೊರಗಡೆ ಯಿಂದ ನೋಡುವವರಿಗೆ ಚೆಂಡು ಗುರಿ ಮುಟ್ಟುತ್ತಿತ್ತು. ಅವರ ಸ್ಟಿಕ್‌ನ ನಿಯಂತ್ರಣದಿಂದ ಚೆಂಡನ್ನು ತಪ್ಪಿಸಲು ಎದುರಾಳಿ ಆಟಗಾರರು ಯಾವುದೇ ರೀತಿಯ ಪ್ರಯತ್ನ ನಡೆಸಿದ್ದರೂ ವಿಫಲರಾಗುತ್ತಿದ್ದರು. ಹೊರಗಡೆಯಿಂದ ನೋಡುವವರಿಗೆ ಚೆಂಡು ಅವರ ಸ್ಟಿಕ್‌ಗೆ ಅಂಟಿಕೊಂಡಂತೆ ಕಾಣುತ್ತಿತ್ತು. ಸ್ಟಿಕ್‌ಗೆ ಅವರು ಅಯಸ್ಕಾಂತದ ಯಾವುದೋ ಒಂದು ರೀತಿಯ ಸಾಧನ ಅಳವಡಿಸಿಕೊಂಡಿರಬೇಕೆಂದು ಅಮೆರಿಕದವರು ಸಂಶಯ ವ್ಯಕ್ತಪಡಿಸಿದರು. ಧ್ಯಾನಚಂದ್ ಕೂಡಲೇ ಸ್ಟಿಕ್‌ಅನ್ನು ಮುರಿದು ಪರೀಕ್ಷಿಸಲು ಕೊಟ್ಟರು. ಏನೂ ಇರಲಿಲ್ಲ. ಬೇರೆ ಸ್ಟಿಕ್ ತೆಗೆದುಕೊಂಡು ಆಡಿದರು. ಆಗಲೂ ಚೆಂಡು ಬಹುಪಾಲು ಅವರ ನಿಯಂತ್ರಣದಲ್ಲೇ ಇರುತ್ತಿತ್ತು. ಭಾರತೀಯರು ಉಪಯೋಗಿಸುವ ಸ್ಟಿಕ್‌ನಲ್ಲೇ ಏನೋ ತಂತ್ರ ಇದೆ ಎಂದು ಅಮೆರಿಕದವರು ಸಂಶಯಿಸಿದರು. ತಮ್ಮ ಸ್ಟಿಕ್‌ಅನ್ನು ಬಿಸಾಕಿ ಅಮೆರಿಕದವ ರಿಂದಲೇ ಒಂದು ಸ್ಟಿಕ್ ಪಡೆದು ಆಡಿದರು. ಗೋಲುಗಳ ಸುರಿಮಳೆಗೆರೆದರು. ಆಗ ಅವರಿಗೆ ‘ಜಾದೂಗಾರ’ ಎಂದು ಹೆಸರು ಬಂದಿತು.

ಆಟದ ರಹಸ್ಯ

‘ಮಾಂತ್ರಿಕ’ ‘ಮೋಡಿಗಾರ’ ‘ಜಾದೂಗಾರ’ ಎನಿಸಿ ಕೊಂಡ ಧ್ಯಾನಚಂದ್ ಅವರ ಆಟದ ರಹಸ್ಯವೇನು? ಏನೂಇಲ್ಲ; ಎಲ್ಲ ಆಟಗಾರರಂತೆ ಅವರೂ ಒಬ್ಬ ಆಟಗಾರ. ಆದರೆ ಅವರ ಆಟದ ವೈಖರಿ ಮಾತ್ರ ಇತರರಿಗಿಂತ ಬೇರೆಯಾಗಿತ್ತು. ಇತರ ಆಟಗಾರರು ಮೈದಾನಕ್ಕೆ ಇಳಿದ ಕೂಡಲೇ ತಾವು ಏನೋ ಒಂದನ್ನು ಸಾಧಿಸಲು ಹೊರಟಿದ್ದೇವೆ ಎಂದುಕೊಂಡು ಮನಸ್ಸನ್ನು ಬಿಗಿಮಾಡಿ ಕೊಳ್ಳುತ್ತಾರೆ. ಎದುರಾಳಿಗಳು ಮುನ್ನಡೆದು ಬಂದಾಗ ಅವರನ್ನು ತಪ್ಪಿಸುವುದೇ ಒಂದು ದೊಡ್ಡ ಪ್ರಯತ್ನ ಎಂದು ತಮಗೆ ಗೊತ್ತಿರುವ ಕ್ರೀಡಾ ಚಾಕಚಕ್ಯತೆಯನ್ನೆಲ್ಲ ಬಳಸಲು ಪ್ರಯತ್ನಿಸುತ್ತಾರೆ. ಆದರೆ ಧ್ಯಾನಚಂದ್ ಅವರು ಆಟವನ್ನು ಬಹು ಸುಲಭವಾಗಿ ತೆಗೆದುಕೊಳ್ಳುತ್ತಿದ್ದರು. ಚೆಂಡಿನ ಮೇಲೆ ಹತೋಟಿ ತಪ್ಪದಂತೆ ಹೆಚ್ಚು ಗಮನ ಕೊಡುತ್ತಿದ್ದರು. ಎದುರಾಳಿಗಳ ಧಾಳಿಗಳಿಗೆ ಅವರು ಯಾವುದೇ ರೀತಿಯಲ್ಲಿ ಅಂಜುತ್ತಿರಲಿಲ್ಲ. ಹೆಚ್ಚಾಗಿ ಬೆವರು ಸುರಿಸಿಕೊಂಡು ಆಡುತ್ತಿರಲಿಲ್ಲ. ಬದಲು ಮಿಂಚಿನಂತೆ ಚೆಂಡನ್ನು ತಮ್ಮ ಸಹ ಆಟಗಾರರಿಗೆ ಹಂಚಿ ಅವರಲ್ಲಿ ಸ್ಫೂರ್ತಿಯ ಚೇತನವನ್ನು ಚಿಮ್ಮಿಸುತ್ತಿದ್ದರು. ಹೆಚ್ಚು ಶ್ರಮವಿಲ್ಲದೆ ಆಡುತ್ತಿದ್ದರು. ನಿಧಾನವಾಗಿ ಉಸಿರುಬಿಡಲೂ ಅವಕಾಶಕೊಡದೆ ಇತರ ಆಟಗಾರರನ್ನು ಆಡಿಸುತ್ತಿದ್ದರು. ಕೊನೆಯಲ್ಲಿ ಫಲಿತಾಂಶ ಮಾತ್ರ ಅವರ ಪರವಾಗಿಯೇ ಇರುತ್ತಿತ್ತು.

ಇತರರಿಗೆ ಚೆಂಡು ಒದಗಿಸುವುದೇ ಅವರ ಆಟದ ವೈಶಿಷ್ಟವಲ್ಲ. ಗೋಲು ಹೊಡೆಯುವುದರಲ್ಲಿಯೂ ಇತರರೆಲ್ಲರಿಗಿಂತ ಯಶಸ್ವಿಯಾಗಿದ್ದರು. ಗೋಲು ವೃತ್ತದ ಯಾವ ದಿಕ್ಕಿನಿಂದ ಅಥವಾ ಯಾವ ಅಂಚಿನಿಂದಲಾದರು ಅವರು ಚೆಂಡನ್ನು ಗುರಿಮುಟ್ಟಿಸುತ್ತಿದ್ದರು. ಗೋಲು ಹೊಡೆಯುವ ಕಲೆ ಅವರಿಗೆ ಕರತಲಾಮಲಕವಾಗಿತ್ತು. ಒಂದು ಬಾರಿ ಒಂದು ಮೂಲೆಯಿಂದ ಅದೇ ಧಾಟಿಯಲ್ಲಿ ಗೋಲು ಹೊಡೆಯಲು ಹೇಳಿದರೂ ಅವರು ಹಾಗೆ ಮತ್ತೊಮ್ಮೆಯಲ್ಲ, ಹತ್ತು ಬಾರಿ ಬೇಕಾದರೂ ಯಶಸ್ವಿಯಾಗಿ ಮಾಡುತ್ತಿದ್ದರು.

ಮೈದಾನಕ್ಕೆ ಇಳಿದನಂತರ ಅವರು ಯಾವ ಕ್ಷಣದಲ್ಲಿ ಯಾವ ರೀತಿಯ ಆಟ ಆಡುವರೆಂಬುದು ಯಾರಿಗೂ ತಿಳಿಯತ್ತಿರಲಿಲ್ಲ. ಆಟದ ಬಗ್ಗೆ ಅಸಾಧಾರಣ ಪ್ರತಿಭೆ ಹೊಂದಿದ್ದ ಅವರು ಆಡುತ್ತಿದ್ದಂತೆಯೇ ತಟಕ್ಕನೆ ಆಟದ ತಂತ್ರಗಳನ್ನು ಬದಲಾಯಿಸಿ ಇಲ್ಲವೇ ಚುರುಕುಗೊಳಿಸಿ ಎದುರಾಳಿಗಳನ್ನು ವಿಸ್ಮಯ ಗೊಳಿಸುತ್ತಿದ್ದರು. ತಮ್ಮಿಂದ ಚೆಂಡನ್ನು ಕಿತ್ತುಕೊಳ್ಳಲು ಪ್ರಯತ್ನಿಸುವರನ್ನು ಕಕ್ಕಾಬಿಕ್ಕಿ ಯನ್ನಾಗಿಸುತ್ತಿದ್ದರು.

ಸಮತೋಲನದ  ಆಟ

ಅವರ ಸಹೋದರ ರೂಪ್‌ಸಿಂಗ್‌ಗೆ ಹೋಲಿಸಿದರೆ ಧ್ಯಾನ್‌ಚಂದ್ ಅವರ ಆಟ ಅಷ್ಟೊಂದು ವೇಗವಾಗೇನೂ ಇರಲಿಲ್ಲ. ಆಂದರೆ ನಿಧಾನವೂ ಅಲ್ಲ. ಚಲನೆಯಲ್ಲಿ ಯಾವಾಗಲೂ ಸಮತೋಲನವನ್ನು ಇಟ್ಟುಕೊಳ್ಳುತ್ತಿದ್ದರು. ಸಮತೋಲನವಿದ್ದರೆ ಚೆಂಡನ್ನು ತಮ್ಮ ತಂಡದ ಇತರ ಆಟಗಾರರಿಗೆ ಕಳುಹಿಸಿಕೊಡುವಾಗ ಗುರಿ ತಪ್ಪುವುದಿಲ್ಲ ಎಂಬುದು ಅವರ ನಂಬಿಕೆಯಾಗಿತ್ತು. ಅವರ ನಂಬಿಕೆ ನಿಜವೂ ಆಗಿತ್ತು. ಅವರೇ ಹಾಕುತ್ತಿದ್ದ ‘ಪಾಸ್’ಗಳು ಒಂದೂ ವ್ಯರ್ಥವಾಗುತ್ತಿರಲಿಲ್ಲ.

ಗೋಲುವೃತ್ತದೊಳಗೆ ಒಮ್ಮೆ ನುಗ್ಗಿದರೆ ಅವರ ಆಟದ ಗತಿಯೇ ಇದ್ದಕ್ಕಿಂದ್ದಂತೆ ಬದಲಾಗುತ್ತಿತ್ತು. ಮುಂಬರುವ ಎದುರಾಳಿ ರಕ್ಷಣೆ ಆಟಗಾರರನ್ನೂ ತಪ್ಪಿಸಲು ಮಿಂಚಿನಂತೆ ಚಲಿಸುತ್ತಿದ್ದರು. ಸ್ವಲ್ಪ ಅವಕಾಶ ಸಿಕ್ಕಿದರೆ ಸಾಕು, ಎದುರಾಳಿ ಎವೆಯಿಕ್ಕುವುದಕ್ಕೆ ಮೊದಲೇ ಚೆಂಡನ್ನು ಅವರು ಮುಂದಕ್ಕೆ ಕಳುಹಿಸುತ್ತಿದ್ದರು. ಗೋಲುಬಳಿ ಅವರು ಎಂದೂ ಚೆಂಡನ್ನು ನಿಧನವಾಗಿ ಹೊಡೆಯುತ್ತಿರಲಿಲ್ಲ. ಶಕ್ತಿ ಪ್ರಯೋಗಿಸಿ ಅವರು ಹೊಡೆಯುತ್ತಿದ್ದ ಚೆಂಡು ಮಿಂಚಿನಂತೆ ಸರಿದು ಸಿಡಿಲಿನಂತೆ ಗೋಲು ಪೆಟ್ಟಿಗೆಗೆ ಬಡಿಯುತ್ತಿತ್ತು. ಅಂಪೈರುಗಳು ಎಷ್ಟೋ ಬಾರಿ ಗೋಲು ಪೆಟ್ಟಿಗೆಗೆ ಚೆಂಡು ಬಡಿದ ಶಬ್ದ ಕೇಳಿಯೇ ಗೋಲು ಎಂದು ಶಿಳ್ಳೆ ಊದುತ್ತಿದ್ದರು.

ಅಂಪೈರುಗಳೇ ತಬ್ಬಿಬ್ಬಾದ ಪ್ರಸಂಗವೊಂದಿದು. ದಿವಂಗತ ಬೀರು ಘೋಷ್ ಮತ್ತು ಗಿಯಾನ್‌ಸಿಂಗ್ ಅಂತರರಾಷ್ಟ್ರಿಯ ಖ್ಯಾತ ಹಾಕಿ ಅಂಪೈರ್‌ಗಳಾಗಿದ್ದರು. ಅವರ ಕಣ್ಣನ್ನು ಚೆಂಡು ವಂಚಿಸುವುದು ಅಪರೂಪವಾಗಿತ್ತು. ನಿಷ್ಪಕ್ಷಪಾತ ಅಂಪೈರಿಂಗ್‌ಗೆ ಹೆಸರಾಗಿದ್ದ ಅವರ ನಿರ್ಧಾರಗಳಲ್ಲಿ ತಪ್ಪುಗಳೇ ಬರುತ್ತಿರಲಿಲ್ಲ.

ಪೇಚಿಗೆ ಬಿದ್ದ ಘಟನೆ

ಆಟದಲ್ಲಿ ಧ್ಯಾನಚಂದ್ ಸಾಮಾನ್ಯವಾಗಿ ತಪ್ಪು ಮಾಡುತ್ತಿರಲಿಲ್ಲ. ಘೋಷ್ ಮತ್ತು ಸಿಂಗ್ ಅವರ ಅಂಪೈರಿಂಗ್‌ನಲ್ಲೂ ಸಾಮಾನ್ಯವಾಗಿ ತಪ್ಪುಗಳು ಬರು ತ್ತಿರಲಿಲ್ಲ. ಆದರೂ ತಪ್ಪು ಮಾಡದ ಮನುಷ್ಯರು ಯಾರಿದ್ದಾರೆ? ಅವರೂ ಮನುಷ್ಯರೇ. ಒಂದು ಸಂದರ್ಭ ದಲ್ಲಿ ಮೂವರೂ ಒಂದು ತಪ್ಪು ಮಾಡಿದರು. ಮೂವರೂ ಪೇಚಿಗೆ ಸಿಲುಕಿಕೊಂಡರು.

೧೯೨೬ರಲ್ಲಿ ಈ ಘಟನೆ ನಡೆಯಿತು. ದೆಹಲಿಯ ಮೋರಿದ್ವಾರ ಮೈದಾನದಲ್ಲಿ ಸೈನಿಕರ ತಂಡ ಮತ್ತು ರೈಲ್ವೆ ತಂಡಗಳ ನಡುವೆ ಒಂದು ಹಾಕಿ ಪಂದ್ಯ ನಡೆಯಿತು. ಸೈನಿಕರ ತಂಡಕ್ಕೆ ಧ್ಯಾನಚಂದ್ ಕ್ಯಾಪ್ಟನ್ ಆಗಿದ್ದರು.  ಜಗತ್ತಿನ ಶ್ರೇಷ್ಟ ಸೆಂಟರ್ ಫಾರ್ವರ್ಡ್‌ಗಳಲ್ಲಿ ಧ್ಯಾನಚಂದ್ ಒಬ್ಬರಾಗಿದ್ದಂತೆ ರೈಲ್ವೆ ಟೀಮಿನ ಪೆನ್ನಿಗರ್ ಉತ್ತಮ ಮತ್ತು ವಿಶ್ವವಿಖ್ಯಾತ ಸೆಂಟರ್ ಹಾಫ್ ಆಟಗಾರರಾಗಿದ್ದರು.

ಪಂದ್ಯದ ಪೂರ್ವಾರ್ಧದಲ್ಲಿ ಚೆಂಡಿಗಾಗಿ ಧ್ಯಾನಚಂದ್ ಮತ್ತು ಪೆನ್ನಿಗರ್ ನಡುವೆ ತಿಕ್ಕಾಟ ನಡೆಯಿತು. ಬಳ್ಳಿಯಂತೆ ಬಳುಕುತ್ತ, ಪಾದರಸದಂತೆ ಚಲಿಸುತ್ತ ಚೆಂಡನ್ನು ಮುನ್ನಡೆಸಿಕೊಂಡು ಬರುತ್ತಿದ್ದ ಧ್ಯಾನಚಂದ್ ಅವರಿಗೆ ಎದುರಾಗಲು ಗೋಲುವೃತ್ತದ ತುದಿಯಲ್ಲಿ ಪೆನ್ನಿಗರ್ ಕಾದಿದ್ದರು. ಗೋಲುವೃತ್ತದ ಬಳಿ ಸಮೀಪಿಸಿದ ಧ್ಯಾನಚಂದ್ ವೃತ್ತದ ಗೆರೆಯ ಹೊರಗಡೆಯಿಂದ ಚೆಂಡನ್ನು ಗೋಲು ಕಡೆ ಏಕಾಏಕಿ ಹೊಡೆದು ಬಿಟ್ಟರು. ಅವರ ಹೊಡೆತದ ವೇಗಕ್ಕೆ ಚೆಂಡಿನ ಚಲನೆಯ ಗತಿಯನ್ನು ಗುರ್ತಿಸುವುದೇ ಕಷ್ಟ. ಆ ಸಂದರ್ಭದಲ್ಲಿ ಕೂಡ ಅವರು ಹೊಡೆದ ಚೆಂಡು ಇತರ ಯಾರ ಸ್ಟಿಕ್‌ಗೂ ತಗುಲದೆ ಗುರಿಮುಟ್ಟಿತು. ಆಂಪೈರ್ ಘೋಷ್ ಗೋಲ್ ಎಂದು ಶಿಳ್ಳೆ ಊದಿದರು. ಪೆನ್ನಿಗರ್ ನೋಡುತ್ತಲೇ ಇದ್ದರು. ಹೊರಗಡೆಯಿಂದ ಚೆಂಡನ್ನು ಹೊಡೆದದ್ದೆಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅವರು ವಿಶಾಲ ಹೃದಯದ ಕ್ರೀಡಾಪಟು. ಗೋಲಿನ ಬಗ್ಗೆ ಚಕಾರವೆತ್ತಲಿಲ್ಲ. ತಾವು ಹೊಡೆದದ್ದು ವೃತ್ತದ ಹೊರಗಡೆಯಿಂದ ಎಂಬುದು ಧ್ಯಾನಚಂದ್‌ಗೂ ಗೊತ್ತಿತ್ತು. ಆದರೆ ಅವರಿಗೆ ಅಂಪೈರ್ ಅವರನ್ನು ಅಗೌರವಗೊಳಿಸಲು ಇಷ್ಟವಿರಲಿಲ್ಲ. ಪೆನ್ನಿಗರ್ ಮತ್ತು ಧ್ಯಾನಚಂದ್ ಮುಗುಳ್ನಗೆಯಿಂದ ಪರಸ್ಪರ ನೋಡಿಕೊಂಡರು.  ಆಟ ಮಾಮೂಲಿನಂತೆ ಮುಂದುವರಿಯಿತು.

ಪಂದ್ಯಕ್ಕೆ ವಿರಾಮ ಬಂತು. ಆಟಗಾರರು ಪರಸ್ಪರ ಲಘು ಮಾತುಕತೆಗಳಲ್ಲಿ ತೊಡಗಿದ್ದರು. ಆ ಗೋಲು ಹೊರಗಡೆಯಿಂದ ಹೊಡೆದ ಚೆಂಡಿನಿಂದ ಬಂದುದೆಂದು ಪೆನ್ನಿಗರ್ ಹೇಳಿದರು. ಧ್ಯಾನಚಂದ್ ಅವರ ಹೇಳಿಕೆಯನ್ನು ಪುಷ್ಠೀಕರಿಸಿದರು. ಆಂಪೈರ್ ಬೀರೂ ಘೋಷ್ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಆದರೆ ಆಗ ಏನೂ ಮಾಡುವಂತಿರಲಿಲ್ಲ. ಕಾಲ ಮಿಂಚಿತ್ತು. ಆದ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ ಬೀರೂ ಘೋಷ್ ಜೊತೆಯಲ್ಲೇ ಆಶ್ಚರ್ಯವನ್ನು ವ್ಯಕ್ತಪಡಿಸಿದರು. ಗೊತ್ತಾದ ಗುರಿಯತ್ತ ನಿಕರವಾಗಿ ಹೊಡೆಯುವುದನ್ನು ಕರಗತ ಮಾಡಿ ಕೊಂಡಿರುವ ಧ್ಯಾನಚಂದ್ ಅವರಂಥ ಆಟಗಾರರು ಹೇಗೆ ವೃತ್ತದ ಹೊರಗಡೆಯಿಂದ ಹೊಡೆದರು ಎಂಬುದೇ ಅವರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಅಂದರೆ ಧ್ಯಾನಚಂದ್ ಅಪರೂಪಕ್ಕೆ ಕೂಡ ಆಟದಲ್ಲಿ ತಪ್ಪು ಮಾಡುವವರಲ್ಲ ಎಂಬುದು ಅಂಪೈರುಗಳ ಮತ್ತು ಎಲ್ಲರ ಖಚಿತ ಭಾವನೆಯಾಗಿತ್ತು.

ಕ್ರಿಕೆಟ್‌ನಲ್ಲಿ ಉತ್ತಮವಾಗಿ ಕ್ಯಾಚ್ ಹಿಡಿಯುವವರು ಬೌಲರ್‌ಗಳಿಗೆ ವಿಕೆಟ್ ತಂದುಕೊಡಬಲ್ಲರು. ಬೌಲಿಂಗ್ ಎಷ್ಟೇ ಪರಿಣಾಮಕಾರಿಯಾಗಿದ್ದರೂ ಫಿಲ್ಡ್ ಮಾಡುವವರು ಕ್ಯಾಚ್ ಹಿಡಿಯದೇ ಹೋದರೆ ಬೌಲರ್‌ಗಳ ಪ್ರಯತ್ನ ವಿಫಲವಾಗುತ್ತದೆ ಅದೇ ರೀತಿ ಹಾಕಿಯಲ್ಲಿ ಫಾರ್ವರ್ಡ್ ಗಳಿಗೆ ಚೆಂಡು ತಲುಪದೆ ಹೋದರೆ ಅವರು ಎಷ್ಟೇ ವೇಗದಿಂದ ಮುನ್ನುಗಿದ್ದರೂ ಪ್ರಯೋಜನವಾಗುವುದಿಲ್ಲ. ಆದರೆ ಧ್ಯಾನಚಂದ್ ಆಡುತ್ತಿದ್ದಾಗ ಅದರ ಮಾತೇ ಬೇರೆಯಾಗಿತ್ತು. ಕೇಳಿದ ಕಡೆಗೆ ಅವರು ಚೆಂಡನ್ನು ಕಳುಹಿಸಿಕೊಡುತ್ತಿದ್ದರು. ಮೂರು ನಾಲ್ಕು ಮಂದಿ ಅವರ ಮುನ್ನಡೆಗೆ ಏಕಕಾಲದಲ್ಲಿ ಅಡ್ಡಿಪಡಿಸಿದರೂ ಅವರು ಹಿಂಜರಿಯುತ್ತಿರಲಿಲ್ಲ. ಧೃತಿಗೆಡುತ್ತಿರಲಿಲ್ಲ. ಅದು ಹೇಗೋ ಎದುರಾಳಿಗಳ ಮಧ್ಯೆ ಚೆಂಡನ್ನು ಕಳುಹಿಸಲು ಸ್ಥಳ ಕಂಡುಕೊಳ್ಳುತ್ತಿದ್ದರು. ಬಲ ಮತ್ತು ಎಡಭಾಗಗಳ ಫಾರ್ವರ್ಡ್ ಗಳು ಎಷ್ಟೇ ವೇಗವಾಗಿ ಅಥವಾ ನಿಧಾನವಾಗಿ ಓಡುತ್ತಿರಲಿ, ಅವರ ಓಟದ ವೇಗದ ಗತಿಗೆ ತಕ್ಕಂತೆ ಚೆಂಡನ್ನು ಕಳುಹಿಸುತ್ತಿದ್ದರು. ಅದೇ ಸಂಧರ್ಭದಲ್ಲಿ ತಾವು ಕಳುಹಿಸುವ ಚೆಂಡು ಎದುರು ತಂಡದ ಆಟಗಾರರ ವಶವಾಗದಂತೆ ಎಚ್ಚರಿಕೆ ವಹಿಸುತ್ತಿದ್ದರು.

ಅನುಕರಣೀಯ

ಅವರ ಆಟದ ಇನ್ನೊಂದು ಅನುಕರಣೀಯ ಗುಣ ಎಂದರೆ ಅವರು ಎಂದೂ ಸ್ವಾರ್ಥಿಯಾಗಿರಲಿಲ್ಲ. ಚೆಂಡು ಸದಾ ತಮ್ಮ ನಿಯಂತ್ರಣದಲ್ಲೇ ಇರಬೇಕು, ತಾವೇ ಗೋಲು ಹೊಡೆಯಬೇಕು ಎಂಬ ಆಸೆ ಅವರಿಗೆ ಇರಲಿಲ್ಲ. ಇತರ ಪಾರ್ವರ್ಡ್‌ಗಳಿಗೇ ಗೋಲು ಗಳಿಸಲು ಹೆಚ್ಚು ಅವಕಾಶ ಕಲ್ಪಿಸಿಕೊಡುತ್ತಿದ್ದರು. ಕಳುಹಿಸಿಕೊಡುವ ಚೆಂಡನ್ನು ಸಹಪಾಠಿ ಆಟಗಾರರು ಸದುಪಯೋಗ ಪಡಿಸಿಕೊಳ್ಳದೆ ಹೋದರೆ ಧ್ಯಾನಚಂದ್ ರೇಗುತ್ತಿದ್ದರು. ಗುರಿಯಿಲ್ಲದ, ವಿವೇಚನೆಯಿಲ್ಲದ ಆಟ ಆಡಬಾರದೆಂಬುವುದೇ ಅವರ ಸಿಟ್ಟಿನ ಉದ್ದೇಶವಾಗಿತ್ತು. ಆ ಸಿಟ್ಟು ಮೈದಾನದೊಳಗೆ ಆಟದ ಅವಧಿಯಲ್ಲಿ ಮಾತ್ರ. ಆಟದ ವಿರಾಮದ ವೇಳೆಯಲ್ಲಿ ಅಥವಾ ಪಂದ್ಯ ಮುಗಿದನಂತರ ತಪ್ಪುಮಾಡಿದ ಆಟಗಾರರೊಂದಿಗೆ ತಪ್ಪಿನ ಬಗೆಗೆ ಚರ್ಚಿಸುತಿದ್ದರು. ಅಲ್ಲದೆ ತಪ್ಪನ್ನು ಯಾವ ರೀತಿ ತಿದ್ದಿಕೊಳ್ಳಬೇಕೆಂದು ಸಲಹೆ ನೀಡುತ್ತಿದ್ದರು. ಧ್ಯಾನಚಂದ್ ಅವರ ಹಾಕಿ ಜೀವನದಲ್ಲಿ ಅವರಿಗೆ ಯಾರೂ ಎದುರಾಗುತ್ತಿರಲಿಲ್ಲ. ಅವರ ಮಾತುಗಳನ್ನು ಎಲ್ಲರೂ ಗೌರವದಿಂದ ಕೇಳುತ್ತಿದ್ದರು. ಸಲಹೆಗಳನ್ನು ಸ್ವೀಕರಿಸುತ್ತಿದ್ದರು. ಧ್ಯಾನಚಂದ್ ಇರುವುದರಿಂದ ಜಯ ತಮಗೇ ಎಂಬ ಹೆಮ್ಮೆ ತಂಡದ ಸದಸ್ಯರಿಗೆ ಇದ್ದರೂ ಅವರ ಬಗ್ಗೆ ಒಂದು ರೀತಿಯ ಹೆದರಿಕೆಯೂ ಇತ್ತು. ಹಾಗಾಗಿ ತಂಡದ ಎಲ್ಲ ಸದಸ್ಯರೂ, ಅದರಲ್ಲೂ ಮುಖ್ಯ ವಾಗಿ ಫಾರ್ವರ್ಡ್‌ಗಳು ತುಂಬ ಜಾಗರೂಕತೆಯಿಂದ ಆಡುತ್ತಿದ್ದರು.

ಸಹನೆ ಸ್ನೇಹ

ಆಟದಲ್ಲಿ ಸಹನೆ ಅವರ ಒಂದು ವಿಶಿಷ್ಟ ಗುಣವಾಗಿತ್ತು. ಹಾಕಿಯಲ್ಲಿ ಅನಿರೀಕ್ಷಿತವಾಗಿ ಮತ್ತು ಉದ್ದೇಶ ಪೂರ್ವಕವಾಗಿ ಕೆಲವೊಮ್ಮೆ ಒರಟು ಆಟದ ಪ್ರಸಂಗಗಳು ಬಂದುಬಿಡುತ್ತವೆ. ಯಾವುದೇ ಸಂದರ್ಭದಲ್ಲೂ ಎದುರು ತಂಡದವರ ಒರಟು ಆಟಕ್ಕೆ ಧ್ಯಾನಚಂದ್ ಪ್ರತೀಕಾರ ಬಗೆಯಲು ಬಯಸುತ್ತಿರಲಿಲ್ಲ. ಅಷ್ಟೇ ಅಲ್ಲ, ತಮ್ಮ ತಂಡದ ಸದಸ್ಯರು ಕೂಡ ಹಾಗೆ ಮಾಡುವುದನ್ನು ಅವರು ಸಹಿಸುತ್ತಿರಲಿಲ್ಲ.

ಒರಟು ವರ್ತನೆಯಿಂದ ಆಟದ ರಂಗೇ ಕೆಟ್ಟು ಹೋಗುತ್ತದೆ. ನೋಡಲು ಕುಳಿತ ಪ್ರೇಕ್ಷಕರಿಗೆ ಬೇಸರವಾಗುತ್ತದೆ. ಆಟದ ಕಣದಲ್ಲಿ ಎರಡು ತಂಡಗಳು ಒಂದಕ್ಕೊಂದು ಸ್ಪರ್ಧಿ-ಪ್ರತಿಸ್ಪರ್ಧಿಗಳಾಗಿರಬಹುದು. ಪಂದ್ಯ ಮುಗಿದ ನಂತರ ನಾವೆಲ್ಲ ಸಹೋದರರು. ಹಾಕಿ ಆಟದ ಉದ್ದೇಶ ಗೋಲುಗಳಿಸಿ ಜಯ ಪಡೆಯುವುದು. ಫಾರ್ವರ್ಡ್‌ಗಳು ಗೋಲುಗಳಿಸುವುದರತ್ತ ಮತ್ತು ರಕ್ಷಣೆ ಆಟಗಾರರು ಗೋಲುಗಳು ಆಗದಂತೆ ಗಮನಿಸಬೇಕೇ ಹೊರತು ಒರಟು ಆಟದ ಕಡೆಗಲ್ಲ. ದ್ವೇಷ ಸಾಧನೆಗೆ ಆಟ ಒಂದು ಸಾಧನವಾಗಬಾರದು. ನಿಜವಾದ ಕ್ರೀಡಾಪಟುವಿನ ಹೃದಯದಲ್ಲಿ ದ್ವೇಷ, ಅಸೂಯೆ, ಅಸಹನೆ, ಕೋಪಗಳಿಗೆ ಸ್ಥಾನವೇ ಇರುವುದಿಲ್ಲ. ಒರಟು ಆಟದಿಂದ ಒಳ್ಳೆಯ ಪರಿಣಾಮಗಳಿಗಿಂತ ಕೆಟ್ಟ ಪರಿಣಾಮಗಳೇ ಜಾಸ್ತಿ. ಏಕೆಂದರೆ ಒರಟು ಆಟದ ಉದ್ದೇಶದಲ್ಲಿ ಆಟಗಾರರು ಸಹನೆ ಮತ್ತು ಸಮತೋಲನ ಕಳೆದುಕೊಳ್ಳುತ್ತಾರೆ. ಚೆಂಡಿನ ಮೇಲೆ ಹತೋಟಿ ಪಡೆಯಲು ಆಗುವುದಿಲ್ಲ. ಆಗ ಎದುರು ತಂಡದವರು ಅದರ ಲಾಭವನ್ನು ಪಡೆದುಕೊಂಡು ಗೋಲುಗಳಿಸುತ್ತಾರೆ. ಯಾವುದೇ ಒಂದು ಕ್ರೀಡೆ ಸ್ಫೂರ್ತಿಯ ಸ್ಪರ್ಧೆಗೆ, ಕ್ರೀಡಾಚಾಕಚಕ್ಯತೆಯ ಪ್ರದರ್ಶನ ಮತ್ತು ಮನರಂಜನೆಗೆ ಒಂದು ರೀತಿಯ ಮಾಧ್ಯವ ವಾಗಿರಬೇಕು. ತಂಡಗಳು ಆಡುವ ಆಟದಲ್ಲಿ ವೈಯುಕ್ತಿಕ ಭಾವನೆಗಳಿಗೆ ಅವಕಾಶಗಳೇ ಇರುವುದಿಲ್ಲ ಎಂದು ತಮ್ಮ ಕೊನೆಯುಸಿರುವವರೆಗೂ ಧ್ಯಾನಚಂದ್ ಸಂದರ್ಭ ದೊರೆತಾಗಲೆಲ್ಲ ಪ್ರತಿಪಾದಿಸುತ್ತಿದ್ದರು.

ಚೆಂಡನ್ನು ಥಟ್ಟನೆ ಹೊಡೆಯುವುದು, ಸರಕ್ಕನೆ ತಳ್ಳುವುದು ಮತ್ತು ಮೋಡಿಗಾರ ಚೆಂಡನ್ನು ಕುಣಿಸುವಂತೆ ಸ್ಟಿಕ್‌ನಲ್ಲಿ ಚೆಂಡನ್ನು ಉರುಳಿಸಿಕೊಂಡು ಹೋಗುವುದು ಧ್ಯಾನಚಂದ್ ರೂಢಿಸಿಕೊಂಡ ಕ್ರೀಡಾಕಲೆಯ ಮುಖ್ಯ ವೈಶಿಷ್ಠಗಳಾಗಿದ್ದವು. ಆಡುವಾಗ ಹೆಚ್ಚು ದಣಿವು ಮಾಡಿಕೊಳ್ಳುತ್ತಿರಲಿಲ್ಲ. ಕ್ರೀಡಾಕಣಕ್ಕೆ ಇಳಿಯುವಾಗ ಯಾವ ರೀತಿ ಹುರುಪಿನಿಂದ ಇರುತ್ತಿದ್ದರೋ ಅದೇ ರೀತಿ ಪಂದ್ಯ ಮುಗಿದನಂತರ ಮೈದಾನದಿಂದ ಹೊರ ಬರುವಾಗಲೂ ಇರುತ್ತಿದ್ದರು.

ಗುರಿಯಿಲ್ಲದೆ ವೇಗವಾಗಿ ಓಡುವ ಮತ್ತು ಗ್ಯಾಲರಿ ಗಳಲ್ಲಿ ಕೂತ ಪ್ರೇಕ್ಷಕರಿಗೆ ಮೆಚ್ಚಿಗೆ ಪಡೆಯಲೋಸುಗ ಆಡುವ ತೋರಿಕೆಯ ಅಟವನ್ನು ಅವರು ಖಂಡಿಸುತ್ತಿದ್ದರು. ಕಳುಹಿಸಿದ ಚೆಂಡನ್ನು ತಡೆದು ಮನ್ನಡೆಸಲು ಫಾರ್ವರ್ಡ್ ಗಳು ಕಕ್ಕಾಬಿಕ್ಕಿಯಾದಾಗ ‘ಯಾಕಷ್ಟು ಅವಸರ!’ ಎಂದು ಕೇಳುತ್ತಿದ್ದರು. ಚೆಂಡನ್ನು ಪಡೆಯಲು ವಿಫಲವಾದರೆ ‘ಏನು ಮಾಡುತ್ತಿದ್ದೀಯಾ?’ ಎಂದು ಘರ್ಜಿಸಿದರು. ದೊರೆತ ಚೆಂಡನ್ನು ಗೊತ್ತು ಗುರಿಯಿಲ್ಲದೆ ಹೊಡೆದಾಗ ‘ಏಕೆ ಹಾಗೆ ಮಾಡುತ್ತಿದ್ದೀಯಾ?’ ಎಂದು ರೇಗುತ್ತಿದ್ದರು.

ಮಿಂಚಿನ ನಡೆ

ಅವರ ಆಟದ ಇನ್ನೊಂದು ಮುಖ್ಯ ವೈಶಿಷ್ಟ ಎಂದರೆ, ಅನೇಕಬಾರಿ ‘ಬುಲ್ಲಿ’ಯಾದ ನಂತರ ಕೇವಲ ಮೂರು ಪಾಸ್‌ಗಳಲ್ಲಿ ಚೆಂಡು ಗೋಲಾಗುತ್ತಿತ್ತು. ‘ಬುಲ್ಲಿ’ಯಲ್ಲಿ ಅವರು ಎಷ್ಟೊಂದು ಪರಿಣಿತರಾಗಿದ್ದರೆಂದರೆ ಎಂದೂ ಎದುರಾಳಿಗೆ ಚೆಂಡು ಸಿಗುತ್ತಿರಲಿಲ್ಲ. ಆ ಕಾಲದಲ್ಲಿ ‘ಬುಲ್ಲಿ’ ಪಂದ್ಯದ ಒಂದು ಮುಖ್ಯ ಅಂಗವಾಗಿತ್ತು. ಈಗಿನ ಆಟದಲ್ಲಿ ಅದು ಪಂದ್ಯದ ಆರಂಭದ ಒಂದು ನಡೆ ಎಂದು ಮಾತ್ರ ಪರಿಗಣಿಸಲಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ‘ಬುಲ್ಲಿ’ಯ ನಂತರ ಮಿಂಚಿನಂತೆ ಚೆಂಡನ್ನು ಹಿಂದಕ್ಕೆ ಎಳೆದುಕೊಳ್ಳುವ ಧ್ಯಾನಚಂದ್ ಅದೇ ವೇಗದಲ್ಲಿ ಬಲ ಅಥವಾ ಎಡ ಬದಿಯ ಫಾರ್ವರ್ಡ್‌ಗೆ ಕಳುಹಿಸುತ್ತಿದ್ದರು. ನಂತರ ಕೂಡಲೇ ಮುನ್ನುಗ್ಗುವರು. ಗೋಲುವೃತ್ತಕ್ಕೆ ಸುಮಾರು ೨೫ ಗಜ ದೂರ ಇದೆ ಎಂದಾಗ ಚೆಂಡು ಅವರಿಗೆ ಬರುವುದು. ಮತ್ತೆ ಅವರು ಇನ್ನೊಬ್ಬ ಫಾರ್ವರ್ಡ್‌ಗೆ ಕಳುಹಿಸುವರು. ಅನಂತರ ಮನ್ನಡೆಯುವರು. ಗೋಲುವೃತ್ತದ ಬಳಿ ಸಮೀಪಿಸಿದಂತೆ ಚೆಂಡು ಪುನಃ ಧ್ಯಾನಚಂದ್‌ಗೆ ಬರುವುದು. ಅಗತ್ಯವಿದ್ದರೆ ರಕ್ಷಣೆ ಆಟಗಾರರನ್ನು ತಮ್ಮ ಅಸಾಧಾರಣ ಚಾಕಚಕ್ಯತೆಯಿಂದ ತಪ್ಪಿಸುವರು, ಕ್ಷಣ ಮಾತ್ರದಲ್ಲಿ ಚೆಂಡು ಗೋಲಿಯನ್ನೂ ವಂಚಿಸಿ ಗುರಿ ಮುಟ್ಟುತ್ತಿತ್ತು. ಇವೆಲ್ಲ ಹೆಚ್ಚೆಂದರೆ ಒಂದು ನಿಮಿಷದಲ್ಲಿ ನಡೆದು ಹೋಗುತ್ತಿದ್ದವು. ಗೋಲು ಇತರರಿಗೆ ಒಂದು ‘ಪವಾಡ’ ಎನಿಸುತ್ತಿತ್ತು.

ಹದಿನೇಳು ವರ್ಷಕ್ಕೆ ಸೈನಿಕ

ಅಲಹಾಬಾದ್‌ನಲ್ಲಿ ೧೯೦೫ರ ಆಗಸ್ಟ್ ೨೯ರಂದು ಧ್ಯಾನಚಂದ್ ಅವರು ಜನಿಸಿದರು. ಅವರದು ರಜಪೂತ ಕುಟುಂಬ. ಯುದ್ಧಕ್ಕೆ ಹೆಸರಾದವರು. ಧ್ಯಾನಚಂದ್ ಅವರ ಮನೆಯವರು ಶ್ರೀಮಂತರಾಗಿರಲಿಲ್ಲ. ಧ್ಯಾನಚಂದ್ ಹೆಚ್ಚು ಓದಲಿಲ್ಲ. ಚಿಕ್ಕವಯಸ್ಸಿನಲ್ಲಿಯೇ ವಿದ್ಯಾಭ್ಯಾಸ ನಿಲ್ಲಿಸಿದರು. ೧೯೨೨ರಲ್ಲಿ ದೆಹಲಿಯಲ್ಲಿದ್ದ ಬ್ರಾಹ್ಮಣರ ಸೈನಿಕ ರೆಜಿಮೆಂಟಿಗೆ ಸೇರಿದರು. ಆ ರೆಜಿಮೆಂಟ್ ರದ್ದಾಯಿತು. ಅನಂತರ ಪಂಜಾಬ್ ಅನಂತರ ಪಂಜಾಬ್ ರೆಜಿಮೆಂಟಿಗೆ ಸೇರಿದರು. ಆ ರೆಜೊಮೆಂಟ್ ಝಾನ್ಸಿಯಲ್ಲಿತ್ತು. ಝಾನ್ಸಿಗೆ ಧ್ಯಾನಚಂದ್ ಅವರ ಕುಟುಂಬವೂ ಒಂದು.

ಹಾಕಿಯಲ್ಲಿ ಆಸಕ್ತಿ

ಝಾನ್ಸಿಯಲ್ಲಿ ಸೈನಿಕರು ಅದರಲ್ಲೂ ಮುಖ್ಯವಾಗಿ ಬ್ರಿಟಿಷರು ಹಾಕಿ ಆಡುತ್ತಿದ್ದರು. ಆಗಿನ್ನೂ ಭಾರತದಲ್ಲಿ ಹಾಕಿ ಅಷ್ಟೊಂದು ಜನಪ್ರಿಯವಾಗಿರಲಿಲ್ಲ. ಆದರೂ ಧ್ಯಾನಚಂದ್ ಮತ್ತು ಅವರ ಸಹೋದರ ರೂಪ್‌ಸಿಂಗ್ ಅವರನ್ನು ಹಾಕಿ ಆಟ ಆಕರ್ಷಿಸಿತು. ಸಹೋದರರಿಬ್ಬರೂ ರಾತ್ರಿಯ ಸೆಕೆಯನ್ನು ಕಡಿಮೆ ಮಾಡಿಕೊಳ್ಳಲು ಝಾನ್ಸಿಯ ಕಾಡು ಮೈದಾನದಲ್ಲಿ ಆಟವನ್ನು ಅಭ್ಯಾಸಮಾಡುತ್ತಿದ್ದರು. ದಿನ ಹೋದಂತೆ ಅವರಿಬ್ಬರೂ ಆಟದ ಬಗ್ಗೆ ಒಂದು ರೀತಿಯ ಹುಚ್ಚು ಹಿಡಿಯಿತು. ಅವರ ಅಭ್ಯಾಸ ತೀವ್ರವಾಗತೊಡಗಿತು. ಧ್ಯಾನಚಂದ್‌ಗೆ ಸೈನಿಕರ ಟೀಮಿನಲ್ಲಿ ಆಡಲು ಅವಕಾಶ ಸಿಕ್ಕಿತು. ರೂಪ್‌ಸಿಂಗ್ ಝಾನ್ಸಿಯ ಹೀರೋಸ್ ಕ್ಲಬ್‌ನ ಆಟಗಾರರಾದರು. ಆಟದಲ್ಲಿ ಧ್ಯಾನಚಂದ್ ಅಸಾಧಾರಣ ಪ್ರತಿಭೆ ಹೊಂದಿರುವುದನ್ನು ಪಂಜಾಬ್ ರೆಜಿಮೆಂಟಿನ ಸುಬೇದಾರ್ ಮೇಜರ್ ಬೇಲ್ ತಿವಾರಿ ಗುರುತಿಸಿದರು. ಅವರ ಆಟವನ್ನು ಉತ್ತಮಪಡಿಸಲು ವಿಶೇಷ ಆಸಕ್ತಿವಹಿಸಿದರು. ಶ್ರದ್ಧೆಯಿಂದ ಅಭ್ಯಾಸಮಾಡತೊಡಗಿದ ಧ್ಯಾನಚಂದ್ ೧೯೨೬ರಲ್ಲಿ ನ್ಯೂಜಿಲೆಂಡಿಗೆ ಪ್ರವಾಸ ಕೈಗೊಂಡ ಭಾರತೀಯ ಸೈನಿಕ ಟೀಮಿಗೆ ಆಯ್ಕೆಯಾದರು. ಆ ಪ್ರಥಮ ಪ್ರವಾಸದಲ್ಲಿಯೇ ಧ್ಯಾನಚಂದ್ ಅವರ ಹೆಸರು ದೇಶ ವಿದೇಶಗಳ ಪತ್ರಿಕೆಗಳ ದಪ್ಪಕ್ಷರಗಳಲ್ಲಿ ಬಂದಿತು.

ಅದ್ಭುತ ಆಟ

ತಮ್ಮ ದೀರ್ಘಾವಧಿಯ ಹಾಕಿ ಜೀವನದಲ್ಲಿ ಜಗತ್ತಿನ ಪ್ರತಿಯೊಂದು ಖಂಡದಲ್ಲೂ ಧ್ಯಾನಚಂದ್ ಭಾರತ ತಂಡದ ಪ್ರತಿನಿಧಿಯಾಗಿ ಆಡಿದರು. ಪ್ರಪಂಚದ ಹಾಕಿಯಲ್ಲಿ ಭಾರತ ಅಗ್ರರಾಷ್ಟ್ರವಾಗಿ ಮೆರೆಯಲು ಧ್ಯಾನಚಂದ್ ಅವರ ಅಸಾಧಾರಣ ರೀತಿಯ ಕ್ರೀಡಾಕೌಶಲವೇ ಮುಖ್ಯ ಕಾರಣವಾಗಿತ್ತು.

೧೯೨೬ರ ಅಮಸ್ಟರ್ಡಮ್ ಒಲಿಂಪಿಕ್ಸ್, ೧೯೩೨ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು ೧೯೩೬ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಅವರು ಭಾರತ ಹಾಕಿ ತಂಡವನ್ನು ಪ್ರತಿನಿಧಿ ಸಿದ್ದರು. ಆ ಮೂರು ಒಲಿಂಪಿಕ್ಸ್ ಕೂಟಗಳಲ್ಲೂ ಭಾರತ ಹಾಕಿಯಲ್ಲಿ ಸ್ವರ್ಣಪದಕ ಪಡೆಯಿತು.

ಅಮ್‌ಸ್ಟರ್ಡಮ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪಂದ್ಯಕ್ಕೆ ಒಂದು ದಿನ ಮೊದಲು ಧ್ಯಾನಚಂದ್ ಜ್ವರ ಪೀಡಿತರಾದರು. ವೈದ್ಯರು ಮತ್ತು ಅಧಿಕಾರಿಗಳು ಪೈನಲ್‌ನಲ್ಲಿ ಆಡುವುದು ಬೇಡ ಎಂದು ಹೇಳಿದರು. ಧ್ಯಾನಚಂದ್ ಕೇಳಲಿಲ್ಲ. ಮೈದಾನಕ್ಕೆ ಇಳಿದರು. ಮಾಮೂಲಿನಂತೆ ಗೋಲುಗಳ ಸುರಿಮಳೆಗರೆದರು. ಪ್ರೇಕ್ಷಕರು ಮತ್ತು ಎದುರಾಳಿ ತಂಡದ ಆಟಗಾರರು ದಂಗಾದರು. ಹಾಲೆಂಡ್‌ನ ಖ್ಯಾತ ಪತ್ರಿಕೆಯೊಂದರ ಕ್ರೀಡಾವರದಿಗಾರರೊಬ್ಬರು ‘ಇದು ಹಾಕಿ ಆಟವಲ್ಲ; ಇದು ಜಾದೂಗಾರರ ಪ್ರವಾಸ: ಭಾರತೀಯ ಕ್ರೀಡಾಮಟ್ಟ ಅಮೋಘವಾದುದು’ ಎಂದು ಕರೆದರು.

ಪ್ರೇಕ್ಷಕರ ಮೆಚ್ಚಿಕೆ

ಲಾಸ್ ಏಂಜೆಲಿಸ್‌ನಲ್ಲಿ ೧೯೩೨ರಲ್ಲಿ ನಡೆದ ಒಲಿಂಪಿಕ್ಸ್‌ನ ಹಾಕಿ ಪೈನಲ್‌ನಲ್ಲಿ ಭಾರತ ಅಮೆರಿಕವನ್ನು  ೨೪-೧ ಗೋಲುಗಳಿಂದ ಸೋಲಿಸಿತ್ತು. ಆ ಸ್ಕೋರು ಮೊತ್ತ ಅಂತರರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಹಾಕಿಗೆ ಇಂದಿಗೆ ಒಂದು ರೆಕಾರ್ಡ್ ಆಗಿರುತ್ತದೆ. ಪೈನಲ್‌ನಲ್ಲಿ ಆಟವೆಲ್ಲ ಧ್ಯಾನಚಂದ್ ಮತ್ತು ಸಹೋದರ ರೂಪ್‌ಸಿಂಗ್ ಅವರದೇ ಆಗಿತ್ತು. ಧ್ಯಾನಚಂದ್ ಎಂಟು ಗೋಲು ಹೊಡೆದರೆ ರೂಪ್‌ಸಿಂಗ್ ಹತ್ತು ಗೋಲು ಹೊಡೆದರು. ಆ ಪಂದ್ಯ ಭಾರತಕ್ಕೆ ಮತ್ತು ಧ್ಯಾನಚಂದ್‌ಗೆ ಚಿರಸ್ಮರಣೀಯ. ಅದೇ ಪಂದ್ಯದಲ್ಲಿ ಧ್ಯಾನಚಂದ್ ಅವರನ್ನು ಅಮೆರಿಕದವರು ‘ಜಾದೂಗಾರ’ ‘ಮೋಡಿಗಾರ’ ‘ಮಾಂತ್ರಿಕ’ ಎಂದೆಲ್ಲ ಕರೆದರು. ಧ್ಯಾನಚಂದ್ ಅವರು ಆಡುವ ಸ್ಟಿಕ್ ಪರೀಕ್ಷೆಗೆ ಒಳಗಾದದ್ದು ಕೂಡ ಅದೇ ಪಂದ್ಯದಲ್ಲಿ.

ಅಮಸ್ಟರ್ಡಮ್ ಒಲಿಂಪಿಕ್ಸ್‌ನಲ್ಲಿ ಧ್ಯಾನಚಂದ್ ಭಾರತದ ತಂಡಕ್ಕೆ ಮಾತ್ರವಲ್ಲ, ಟೂರ್ನಿಯಲ್ಲಿ ಭಾಗವಹಿಸಿದ್ದ ಎಲ್ಲ ರಾಷ್ಟ್ರಗಳ ಟೀಮುಗಳ ಆಟಗಾರರಲ್ಲಿ ಅತಿ ಕಿರಿಯವರಾಗಿದ್ದರು. ಲಾಸ್ ಏಂಜಲೀಸ್ ಒಲಿಂಪಿಕ್ಸ್ ಹೊತ್ತಿಗೆ ಪ್ರಬುದ್ಧರಾಗಿದ್ದರು. ಆದರೂ ಜನರೊಡನೆ ಮುಕ್ತವಾಗಿ ಬೆರೆಯಲು ಅವರು ಹಿಂಜರಿಯುತ್ತಿದ್ದರು. ಅವರ ನಾಚಿಕೆ ಸ್ವಭಾವ ಇನ್ನೂ ಹೋಗಿರಲಿಲ್ಲ. ಭಾರತ ತಂಡ ಲಾಸ್ ಏಂಜಲೀಸ್‌ನಲ್ಲಿ ಜಯಭೇರಿ ಬಾರಿಸಿ ವಾಪಸಾಗುತ್ತಿದ್ದಾಗ ಯುರೋಪ್ ರಾಷ್ಟ್ರಗಳಲ್ಲಿ ಕೆಲವು ಪಂದ್ಯಗಳನ್ನು ಆಡಿದರು. ಒಲಿಂಪಿಕ್ಸ್ ಚಾಂಪಿಯನ್ನರಾದ ಭಾರತದವರ ಆಟ ನೋಡಲು ಪ್ರತಿ ಪಂದ್ಯಕ್ಕೂ ಅಪಾರಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಪ್ರಾಗ್‌ನಲ್ಲಿ ನಡೆದ ಒಂದು ಪಂದ್ಯದ ಸಂದರ್ಭದಲ್ಲಿ ಸಿಹಿ ಘಟನೆಯೊಂದು ಜರುಗಿತು. ಪ್ರೇಕ್ಷಕರ ಗ್ಯಾಲರಿಯಿಂದ ಸುಂದರ ತರುಣಿಯೊಬ್ಬಳು ಮೈದಾನದೊಳಗೆ ಇಳಿದು ತನ್ನ ಪ್ರೀತಿಯ ಮುತ್ತು ಕೊಡಲು ಧ್ಯಾನಚಂದ್‌ರತ್ತ ಧಾವಿಸಿದಳು. ಅವಳು ತನ್ನೆಡೆಗೇ ಬರುತ್ತಿದ್ದಾಳೆ ಎಂಬುದನ್ನು ಕಂಡುಕೊಂಡ ಧ್ಯಾನಚಂದ್ ಅಲ್ಲಿಂದ ಕಾಲುಕಿತ್ತರು. ಓಡುತ್ತಿದ್ದ ಅವರನ್ನು ಹಿಡಿದುಕೊಂಡು ಇತರ ಆಟಗಾರರು ಆ ತರುಣಿಯ ಪ್ರೀತಿಯ ಕಾಣಿಕೆಯನ್ನು ಸ್ವೀಕರಿಸುವಂತೆ ಧ್ಯಾನಚಂದ್ ಅವರನ್ನು ಒಪ್ಪಿಸಿದರಂತೆ.

ನಾಲ್ಕು ವರ್ಷಗಳ ನಂತರ ೧೯೩೬ರಲ್ಲಿ ಧ್ಯಾನಚಂದ್ ಬರ್ಲಿನ್ ಒಲಿಂಪಿಕ್ಸ್‌ಗೆ ಬಂದರು. ಅದೇ ತರುಣಿ ಮತ್ತೆ ತನ್ನ ‘ದೇವತೆ’ಯ ಆಟ ನೋಡಲು ಬಂದಿದ್ದಳು. ಜರ್ಮನಿಯಲ್ಲಿ ಅವರು ಎಷ್ಟು ಜನಪ್ರಿಯರಾಗಿದ್ದರೆಂದರೆ, ಅವರ ಪ್ರತಿಯೊಂದು ಮುನ್ನಡೆಯೂ ಪ್ರೇಕ್ಷಕರ ಕರತಾಡನ ಗಳಿಸುತ್ತಿತ್ತು. ತಮ್ಮ ರಾಷ್ಟ್ರದ ಆಟಗಾರರಷ್ಟೇ ಅಭಿಮಾನದಿಂದ ಭಾರತದ ಆಟಗಾರ ಧ್ಯಾನಚಂದ್‌ರನ್ನು ಕಾಣುತ್ತಿದ್ದರು.

ಹಿಟ್ಲರನಿಂದ ಗೌರವ

ಅದೇ ಒಲಿಂಪಿಕ್ಸ್‌ನಲ್ಲಿ ಫೈನಲ್‌ನಲ್ಲಿ ಭಾರತ ಜರ್ಮನಿಯ ಮೇಲೆ ೮-೧ ಗೋಲು ಜಯ ಗಳಿಸಿತು. ಧ್ಯಾನಚಂದ್ ಒಬ್ಬರೇ ಅದರಲ್ಲಿ ಆರು ಗೋಲುಗಳನ್ನು ಹೊಡೆದರು. ಇತರ ಯಾರಿಗೂ ಸರಿಸಾಟಿಯಿಲ್ಲದ ಧ್ಯಾನಚಂದ್ ಅವರ ಅಸಾಧಾರಣ ರೀತಿಯ ಆಟವನ್ನು ನೋಡಿದ ಅಡಾಲ್ಫ್ ಹಿಟ್ಲರ್ ಅವರೂ ಕೂಡ ಸಂತೋಷಗೊಂಡರು. ಪ್ರಪಂಚದ ಎಲ್ಲಾ ರಾಷ್ಟ್ರಗಳ ಜನರಲ್ಲಿ ಜರ್ಮನರೇ ಶ್ರೇಷ್ಠ ಎಂದು ಭಾವಿಸಿದ್ದ ಸರ್ವಾಧಿಕಾರಿ ಹಿಟ್ಲರ್ ; ಜರ್ಮನನಲ್ಲದ ವ್ಯಕ್ತಿ ಹಿಟ್ಲರನ ಮೆಚ್ಚಿಗೆ ಗಳಿಸುವುದು ದೊಡ್ಡ ವಿಷಯವಾಗಿತ್ತು. ಪದಕ ಸ್ವೀಕರಿಸಲು ವಿಜಯಕಟ್ಟೆ ಏರಿದ ಧ್ಯಾನಚಂದ್ ಅವರನ್ನು ಉದ್ದೇಶಿಸಿ ‘ನೀನು ಭಾರತದಲ್ಲಿ ಏನಾಗಿದ್ದೀಯೇ?’ ಎಂದು ಹಿಟ್ಲರ್ ಕೇಳಿದರು. ಅದಕ್ಕೆ ಧ್ಯಾನಚಂದ್ ‘ನಾನು ಒಬ್ಬ ಸಿಪಾಯಿ’ ಎಂದು ಹೇಳಿದರು. ‘ನೀನು ಜರ್ಮನಿ ಯವನಾಗಿದ್ದರೆ ನಿನ್ನನ್ನು ಮೇಜರ್ ಜನರಲ್ ಆಗಿ ಮಾಡುತ್ತಿದ್ದೆ’ ಎಂದು ಹಿಟ್ಲರ್ ನುಡಿದರು.

ಒಲಿಂಪಿಕ್ಸ್‌ನಲ್ಲಿ ಮೂರು ಸ್ವರ್ಣ ಗೆಲ್ಲಲು ಮತ್ತು ಬ್ರಿಟಿಷರೇ ಹೆಚ್ಚಾಗಿದ್ದ ಭಾರತದ ಸೈನಿಕರ ತಂಡ ಕೈಗೊಂಡ ವಿದೇಶ ಪ್ರವಾಸಗಳಲ್ಲೆಲ್ಲ ಜಯಗಳಿಸಿ ಹೆಸರುಗಳಿಸಲು ಧ್ಯಾನಚಂದ್ ಮುಖ್ಯ ಕಾರಣರಾಗಿದ್ದರು. ೧೯೨೮ರ ಅಮಸ್ಟರ್ಡಮ್ ಒಲಿಂಪಿಕ್ಸ್‌ನಲ್ಲಿ ಬ್ರಿಟನ್ ತನ್ನ ರಾಷ್ಟ್ರೀಯ ಟೀಮನ್ನು ಸ್ಪರ್ಧೆಯಿಂದ ವಾಪಸ್ಸು ಕರೆಸಿಕೊಂಡಿತು. ಅದೇ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ಸೇರಿದ ಭಾರತ ಬ್ರಿಟಿಷ್ ದ್ವಜದಡಿಯಲ್ಲಿ ಆಡಿತು. ಸ್ವರ್ಣಗೆದ್ದು ಆ ಧ್ವಜದ ಗೌರವವನ್ನು ಉಳಿಸಿ ಆ ವಿಜಯಕ್ಕೆ ಧ್ಯಾನಚಂದ್ ಅವರೇ ಕಾರಣರಾಗಿದ್ದರು. ೧೯೨೨ರಲ್ಲಿ ಸಿಪಾಯಿ ಆಗಿ ಸೈನ್ಯಕ್ಕೆ ಸೇರಿದ್ದ ಧ್ಯಾನಚಂದ್ ೧೯೩೬ರಲ್ಲೂ ಸಿಪಾಯಿ ಆಗಿಯೇ ಇದ್ದರು. ಬ್ರಿಟಿಷರು ಧ್ಯಾನಚಂದ್‌ಗೆ ಕೊಟ್ಟಿದ್ದ ಗೌರವ ಅದು. ಆದರೆ ಧ್ಯಾನಚಂದ್ ಹಿಟ್ಲರ್ ಹೇಳುವ ಮೊದಲೇ ಹಾಕಿ ಜಗತ್ತಿನಲ್ಲಿ ‘ಅನಭಿಷಿಕ್ತ ಮೇಜರ್ ಜನರಲ್’ಆಗಿದ್ದರು.

ಬರ್ಲಿನ್ ಒಲಿಂಪಿಕ್ಸ್‌ನ ಮಯದಲ್ಲಿ ಅಡಾಲ್ಫ್ ಹಿಟ್ಲರ್ ವಿಜಯಿಗಳಿಗೆ ಸರ್ಕಾರಿ ಗೌರವದ ಚಹಾ ಕೂಟ ಏರ್ಪಡಿಸಿ ದರು. ಆ ಸಮಾರಂಭದಲ್ಲಿ, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಾಲ್ಕು ಸ್ವರ್ಣಪದಕ ಗಳಿಸಿದ್ದ ಅಮೆರಿಕದ ಅಥ್ಲೆಟಿಕ್ ವೀರ ಜೆಸ್ಸೀ ಓವೆನ್ಸ್ ಮತ್ತು ಭಾರತ ಹಾಕಿ ಟೀಮಿನ ಕ್ಯಾಪ್ಟನ್ ಧ್ಯಾನಚಂದ್  ಇವರಿಬ್ಬರನ್ನು ಮಾತ್ರ ಹಿಟ್ಲರ್ ಪ್ರತಿಷ್ಠಿತರ ಪಂಕ್ತಿಯಲ್ಲಿ ಕೂರಿಸಿದ್ದಲ್ಲದೆ ವಿಶೇಷ ಗೌರವ ನೀಡಿ ಅಭಿನಂದಿಸಿದರು. ನಾಜಿ ಸರ್ಕಾರದಿಂದ ಇತರ ದೇಶಗಳ ವರಿಗೆ ಅಂಥ ಗೌರವ ದೊರೆಯುವುದು ಆಗ ಬಲು ಅಪರೂಪವಾಗಿತ್ತು.

ಎದುರಿಲ್ಲದ ಆಟ

ಬರ್ಲಿನ್ ಒಲಿಂಪಿಕ್ಸ್ ಹಾಕಿ ಫೈನಲ್‌ನಲ್ಲಿ ಇನ್ನೊಂದು ಸ್ಮರಣೀಯ ಘಟನೆ ನಡೆಯಿತು. ಜರ್ಮನಿಯರು ಭಾರತದ ವಿರುದ್ಧ ೧-೦ ಗೋಲಿನಿಂದ ಮುಂದಾಗಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಹರ್ಷೋದ್ಗಾರದ ಹೊನಲು ಹರಿದಿತ್ತು. ತಂಡದ ನಾಯಕರಾಗಿದ್ದ ಧ್ಯಾನಚಂದ್ ಸಹನೆ ಕಳೆದುಕೊಳ್ಳಲಿಲ್ಲ. ಅವರು ತಮ್ಮ ಪಾದರಕ್ಷೆ ಮತ್ತು ಕಾಲುಚೀಲವನ್ನು ಬಿಚ್ಚಿ ಬರಿಗಾಲಲ್ಲಿ ಆಡಲಾರಂಭಿಸಿದರು. ತಮ್ಮ ಜೊತೆಯ ಆಟಗಾರ ಫಾರ್ವರ್ಡ್‌ಗಳಿಗೇ ಚೇತರಿಕೆಯ ಆಟ ಆಡುವಂತೆ ಹುರಿದುಂಬಿಸಿದರು. ಮೂರು ನಿಮಿಷ ಕಳೆದಿರಲಿಲ್ಲ. ಧ್ಯಾನಚಂದ್ ಹೊಡೆದ ಚೆಂಡು ಗುರಿಮುಟ್ಟಿತು. ಸ್ಕೋರು ಸಮವಾಗಿತ್ತು. ಜರ್ಮನ್ ಅಭಿಮಾನಿಗಳ ಸದ್ದು ಅಡಗಿತ್ತು. ಆದಾದ ಏಳು ನಿಮಿಷಗಳ ಅವಧಿಯಲ್ಲಿ ಧ್ಯಾನಚಂದ್ ಮತ್ತೆ ಎರಡು ಗೋಲು ಹೊಡೆದರು. ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳ ಹರ್ಷೋದ್ಗಾರ ಭಾರತದ ಪರವಾಗಿ ಹರಿಯ ಲಾರಂಭಿಸಿತು. ಧ್ಯಾನಚಂದ್ ಅವರ ಸ್ಟಿಕ್‌ಗೆ ಚೆಂಡು ದೊರೆತಕೂಡಲೇ ಜನರು ‘ಗೋಲ್’ ಎಂದು ಕೂಗುತ್ತಿದ್ದರು. ಅವರ ಅನಿಸಿಕೆಯಂತೆಯೇ ಗೋಲ್‌ಗಳು ಬರಲಾರಂಭಿಸಿದವು. ಪಂದ್ಯದ ಉತ್ತರಾರ್ಧದಲ್ಲಿ ಜರ್ಮನಿ ಟೀಮಿನವರ ಮುಖಗಳಲ್ಲಿ ನಿರಾಸೆ ತುಂಬಿತ್ತು. ಆದ್ದರಿಂದ ಭಾರತ ತನ್ನ ಗೋಲು ಸುರಿಮಳೆಯನ್ನು ನಿಲ್ಲಿಸಿತು ಎಂದು ಕ್ರೀಡಾ ವರದಿಗಾರರೊಬ್ಬರು ಬರೆದಿದ್ದಾರೆ.

ಮೊದಲ ಪ್ರವಾಸ

ಹಾಕಿ ಜಗತ್ತಿನ ಭೂಪಠದಲ್ಲಿ ಭಾರತದ ಹೆಸರು ಮೊದಲು ಬಂದದ್ದು ೧೯೨೬ರಲ್ಲಿ. ಆ ವರ್ಷ ಭಾರತದ ಸೈನ್ಯ ತಂಡ (ಅದರಲ್ಲಿ ಬ್ರಿಟಿಷರೇ ಹೆಚ್ಚು) ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ತಂಡದಲ್ಲಿ ಧ್ಯಾನಚಂದ್ ಒಬ್ಬರಾಗಿದ್ದರು. ಆ ಟೀಮು ಆ ಎರಡು ದೇಶದಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಜಯಗಳಿಸಿತು. ಧ್ಯಾನಚಂದ್ ಒಬ್ಬರೇ ಒಟ್ಟು ೮೦ಕ್ಕೂ ಹೆಚ್ಚು ಗೋಲು ಹೊಡೆದರು. ೧೯೩೨ರ ಪ್ರಪಂಚ ಪ್ರವಾಸದಲ್ಲಿ ೧೩೩ ಮತ್ತು ೧೯೩೫ರ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ಪ್ರವಾಸಗಳಲ್ಲಿ ೨೦೧ ಗೋಲುಗಳನ್ನು ಹೊಡೆದರು.

೧೯೨೬ರ ಪ್ರವಾಸದ ವಿಜಯ ಭಾರತ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಕ್ಕೆ ಸುಲಭವಾಗಿ ಅವಕಾಶ ಒದಗಿಸಿಕೊಟ್ಟಿತು. ಧ್ಯಾನಚಂದ್ ಅವರ ಆಯ್ಕೆ ಬಗ್ಗೆಯಂತೂ ಎರಡು ಮಾತು ಇರಲಿಲ್ಲ. ಭಾರತ ಆಡಿದ ಮೊದಲ ದರ್ಜೆ ಪಂದ್ಯಗಳಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಗೋಲುಗಳನ್ನು ಹೊಡೆದ ಕೀರ್ತಿ ಧ್ಯಾನಚಂದ್ ಅವರದು. ಹಾಕಿಯ ಇತಿಹಾಸದಲ್ಲಿ ಈವರೆಗೆ ಯಾರೂ ಈ ಸಂಖ್ಯೆಯ ಹತ್ತಿರ ಬರಲೂ ಸಾಧ್ಯವಾಗಿಲ್ಲ. ಧ್ಯಾನಚಂದ್ ಅವರ ರೆಕಾರ್ಡ್ ಇಷ್ಟೇ ಅಲ್ಲ, ಇನ್ನೂ ಹೆಚ್ಚಾಗುತ್ತಿತ್ತು. ಆದರೆ ಅವರ ಆಟದ ಗತಿ ಪ್ರವರ್ಧ ಮಾನದಲ್ಲಿದ್ದಾಗ ಎರಡನೇ ಜಾಗತಿಕ ಸಮರ ಪ್ರಾರಂಭ ವಾಯಿತು.೧೯೪೦ ಮತ್ತು ೧೯೪೪ರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿಲ್ಲ. ೧೯೪೮ರಲ್ಲಿ ಅವರು ಪ್ರಥಮ ದರ್ಜೆ ಹಾಕಿಯಿಂದ ನಿವೃತ್ತರಾದರು.

ಪದ್ಮಭೂಷಣ

ಜರ್ಮನಿಯಲ್ಲಿ ಜಯಭೇರಿ ಬಾರಿಸಿ ಹಿಂತಿರುಗಿದ ನಂತರ ಧ್ಯಾನಚಂದರು ೧೯೩೮ರಲ್ಲಿ ವೈಸರಾಯ್ ಅವರ ಕಮಿಷನ್ಡ್ ಅಧಿಕಾರಿಯಾದರು. ೧೯೪೩ರಲ್ಲಿ ಕಿಂಗ್ಸ್ ಕಮಿಷನ್ಡ್ ಅಧಿಕಾರಿಯಾದರು.ಭಾರತ ಸ್ವತಂತ್ರವಾದ ನಂತರ ೧೯೫೬ರಲ್ಲಿ ಆಗ ರಾಷ್ಟ್ರಾಧ್ಯಕ್ಷರಾಗಿದ್ದ ಬಾಬು ರಾಜೆಂದ್ರಪ್ರಸಾದ್ ಅವರು ಧ್ಯಾನಚಂದರಿಗೆ ಪದ್ಮಭೂಷಣ ಪದವಿ ನೀಡಿ ಗೌರವಿಸಿದರು.

ಸೈನ್ಯದಲ್ಲಿ ಕೊನೆಗೂ ಮೇಜರ್ ಪದವಿಗೆ ಏರಿ ನಿವೃತ್ತಿಯಾದನಂತರ ಅವರು ಪಟಿಯಾಲದಲ್ಲಿರುವ ರಾಷ್ಟ್ರೀಯ ಕ್ರೀಡಾಸಂಸ್ಥೆಯಲ್ಲಿ ಮುಖ್ಯ ಕೋಚ್ ಆಗಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ೧೯೪೮ ಮತ್ತು ೧೯೫೨ರ ಒಲಿಂಪಿಕ್ಸ್‌ಗಳಲ್ಲಿ ಭಾರತದ ಹಾಕಿ ತಂಡ ಸ್ವರ್ಣ ಗೆಲ್ಲಲು ಧ್ಯಾನಚಂದ್ ಅವರು ಕಿಷನ್‌ಲಾಲ್ ಮತ್ತು ದಿಗ್ವಿಜಯಸಿಂಗ್ ಅವರೊಂದಿಗೆ ಆಟಗಾರರಿಗೆ ನೀಡಿದ ತರಬೇತಿಯೇ ಮುಖ್ಯಕಾರಣವೆಂಬುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ.

ಹಾಕಿ ಜಗತ್ತಿನಲ್ಲಿ ಭಾರತದ ಸ್ಥಾನವನ್ನು ಧ್ಯಾನಚಂದ್ ಶಿಖರಕ್ಕೇರಿಸಿದರು. ಹಲವು ದಶಕಗಳ ಕಾಲ ಅದೇ ಸ್ಥಾನದಲ್ಲಿ ಮೆರೆಸಿದ್ದರು. ಕಾಲಚಕ್ರ ಉರುಳುತ್ತಿರುತ್ತದೆ. ಅವರು ಜೀವಿಸಿದ್ದಾಗಲೇ ೧೯೬೦ರ ರೋಮ್ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ಮೊದಲ ಬಾರಿಗೆ ಸ್ವರ್ಣ ಪದಕವನ್ನು ಕಳೆದುಕೊಂಡಿತು. ೧೯೭೨ರ ನಂತರವಂತೂ ಭಾರತದ ಹಾಕಿಯ ಅದಃ ಪತನವಾಯಿತು.

ಧ್ಯಾನಚಂದ್ ೧೯೭೯ರ ಡಿಸೆಂಬರ್ ಮೂರರಂದು ಬೆಳಿಗ್ಗೆ ತಮ್ಮ ೭೪ನೇ ವಯಸ್ಸಿನಲ್ಲಿ ಸ್ವರ್ಗಸ್ಥರಾದರು.

ತಮ್ಮ ಹಾಕಿ ತಂತ್ರವನ್ನು ಮಗ ಅಶೋಕ್ ಕುಮಾರ್ ಅವರಿಗೆ ಕಲಿಸಿಕೊಡಲು ಧ್ಯಾನಚಂದ್ ಪ್ರಯತ್ನಿಸಿದರು. ಉತ್ತಮ ಆಟಗಾರರಲ್ಲೊಬ್ಬರಾದ ಅಶೋಕ್‌ಕುಮಾರ್ ತಮ್ಮ ತಂದೆಯ ಕ್ರೀಡಾಚಾಕಚಕ್ಯತೆಯನ್ನು ಕಲಿತರು. ಆದರೂ ಆ ಮಟ್ಟಕ್ಕೆ ಬರಲಿಲ್ಲ. ಆಶೋಕ್‌ಕುಮಾರ್‌ಗೆ ಆರು ಮಂದಿ ಸಹೋದರರು ಮತ್ತು ನಾಲ್ಕು ಮಂದಿ ಸಹೋದರಿಯರು ಇದ್ದಾರೆ.

ಧ್ಯಾನಚಂದ್ ಈಗ ನಮ್ಮ ಮುಂದೆ ಇಲ್ಲ. ಆದರೆ ಅವರ ಕ್ರೀಡಾ ಇತಿಹಾಸ ನಮ್ಮಿಂದ ದೂರವಾಗುವುದಿಲ್ಲ. ಆಟದಲ್ಲಿ ಅವರ ಸಾಧನೆಗಳು, ಅವರ ಆಟದ ವೈಖರಿ ನಮ್ಮ ಹಾಗೂ ಮುಂದಿನ ಪೀಳಿಗೆಯವರಿಗೆ ಒಂದು ಸ್ಫೂರ್ತಿಯಾಗಿರುತ್ತದೆ. ಈಗಿನ ಹಾಗೂ ಮುಂಬರುವ ಆಟಗಾರರಿಗೆ ಧ್ಯಾನಚಂದ್ ಅವರ ಹಾಗೆ ಆಡಲು ಸಾಧ್ಯವಾಗಲಿಕ್ಕಿಲ್ಲ. ಅಲ್ಲದೆ ಆಟದಲ್ಲಿ ಈಗ ಬದಲಾವಣೆ ಗಳಾಗಿವೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ನಮ್ಮ ಆಟಗಾರರು ಜಾರಿಹೋಗಿರುವ ಒಲಿಂಪಿಕ್ ಸ್ವರ್ಣವನ್ನು ಮರಳಿ ತಂದರೆ ಮತ್ತು ಮುಂಬರುವ ಪೀಳಿಗೆಯ ಆಟಗಾರರು ಅದನ್ನು ಉಳಿಸಿಕೊಂಡು ಮುನ್ನಡೆದರೆ  ಅದೇ ಆ ಮಹಾನ್ ‘ಮಾಂತ್ರಿಕ’ನಿಗೆ ಸ್ಮರಣೀಯ ಕಾಣಿಕೆಯಾದೀತು.