ಧ್ರುವ ನಕ್ಷತ್ರವನ್ನು ತಿಳಿಯದವರಾರು? ರಾತ್ರಿ ಕಾಲದಲ್ಲಿ ಕಾಡುಮೇಡುಗಳಲ್ಲಿ, ಸಮುದ್ರ ಪ್ರಯಾಣ ಮಾಡುವವರಿಗೆ ಧ್ರುವತಾರೆ ಮಾರ್ಗದರ್ಶನ ಮಾಡುತ್ತದೆ. ಸೂರ್ಯನಂತೆ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುವ ಈ ನಕ್ಷತ್ರಕ್ಕೆ ಸಂಬಂಧಿಸಿದಂತೆ ಸ್ವಾರಸ್ಯಕರವಾದ ಪೌರಾಣಿಕ ಕಥೆಯೊಂದಿದೆ.

ಉತ್ತಾನಪಾದ ರಾಜ

ಹಿಂದಿನ ಕಾಲದಲ್ಲಿ ಒಬ್ಬ ರಾಜನಿಗೆ ಅನೇಕ ಮಂದಿ ಹೆಂಡತಿಯರಿರುತ್ತಿದ್ದರು. ಆಗಿನ ಕಾಲದಲ್ಲಿ ಇದು ರೂಢಿಯಾಗಿತ್ತು. ಆದರೂ ಎಷ್ಟೋ ಬಾರಿ ರಾಜನ ಹೆಂಡತಿಯರಲ್ಲಿ ಅನ್ಯೋನ್ಯ ಭಾವ ಇರುತ್ತಿರಲಿಲ್ಲ. ಯಾರಿಗೆ ಹೆಚ್ಚು ಮರ್ಯಾದೆ, ಹೆಚ್ಚು ವೈಭವ, ಯಾರ ಮಗ ರಾಜನಾಗಬೇಕು ಇಂತಹ ಯೋಚನೆಗಳಿಂದ ವಿರಸವೇ ಹೆಚ್ಚಾಗುತ್ತಿತ್ತು.

ಬಹುಕಾಲದ ಹಿಂದೆ ಒಬ್ಬ ಚಕ್ರವರ್ತಿ, ಉತ್ತಾನಪಾದ ಎಂದು ಅವನ ಹೆಸರು. ಆತನಿಗೆ ಇಬ್ಬರು ರಾಣಿಯರಿದ್ದರು. ಸುನೀತಿ ಮೊದಲನೆಯ ಹೆಂಡತಿ, ಪಟ್ಟದ ರಾಣಿ. ಕಿರಿಯವಳು ಸುರುಚಿ. ಸುನೀತಿ ಪ್ರಥಮ ಪತ್ನಿ ಮತ್ತು ಪಟ್ಟದ ರಾಣಿಯಾದರೂ ರಾಜನು ಸುರುಚಿಯನ್ನೇ ಹೆಚ್ಚು ಪ್ರೀತಿಸುತ್ತಿದ್ದನು. ಆಕೆಯ ಮಾತೆಂದರೆ ಅವನಿಗೆ ಆಜ್ಞೆಯಂತೆ. ಅವಳಿಗೆ ತಾಳ್ಮೆಯೇ ಇಲ್ಲ. ಬಹುಬೇಗ ಅವಳಿಗೆ ಕೋಪ ಬರುತ್ತಿತ್ತು. ಅವಳಿಗೆ ತನ್ನ ಸುಖ, ಬೈಭವ ಇವು ಮುಖ್ಯ. ಆದರೂ ರಾಜನಿಗೆ ಅವಳಲ್ಲಿಯೇ ಪ್ರೀತಿ. ಅವಳು ಏನೇ ಹೇಳಲಿ. ಅದು ಸರಿಯೆ, ತಪ್ಪೆ ಎಂದು ಯೋಚನೆ ಮಾಡುತ್ತಿರಲಿಲ್ಲ ರಾಜ. ಅವಳದು ತಪ್ಪು ಎಂದು ಸ್ಪಷ್ಟವಾಗಿ ಕಂಡಾಗಲೂ ಹಾಗೆಂದು ಹೇಳುವ ಧೈರ್ಯವೂ ಅವನಿಗಿರಲಿಲ್ಲ.

ಆದರೆ ಸುನೀತಿಯದು ಸೌಮ್ಯ ಸ್ವಭಾವ. ಯಾವುದು ಸರಿ, ಯಾವುದು ತಪ್ಪು ಎಂದು ಯೋಚಿಸಿ ಸರಿಯಾದ ರೀತಿಯಲ್ಲೆ ನಡೆಯುವಳು. ಅವಳದು ತಾಳ್ಮೆಯ ಸ್ವಭಾವ. ಸುರುಚಿಯ ದರ್ಪದ ಮುಂದೆ ಅವಳು ನಿಸ್ಸಹಾಯಕಳಾಗಿದ್ದಳು. ನ್ಯಾಯವಾಗಿ ಪಟ್ಟದ ರಾಣಿಯಾಗಿರಬೇಕಾದ ಸುನೀತಿಯ ಸ್ಥಾನ ಸುರುಚಿಗೆ ದೊರೆತಿತ್ತು. ರಾಜನು ಆಕೆಯ ಕೈಗೊಂಬೆಯಾಗಿದ್ದುದರಿಂದ, ರಾಜ್ಯದ ಹೆಚ್ಚು ಪಾಲು ಅಧಿಕಾರವು ಅವಳ ಹಿಡಿತದಲ್ಲೇ ಇದ್ದಿತು.

ಸುನೀತಿಗೆ ಒಬ್ಬ ಮಗ, ಅವನ ಹೆಸರು ಧ್ರುವ, ಸುರುಚಿಗೂ ಒಬ್ಬನೇ ಮಗ, ಅವನ ಹೆಸರು ಉತ್ತಮ.

ಧ್ರುವ ಅರಮನೆಯಲ್ಲಿ ಇರುವಂತಿಲ್ಲ

ತನಗೆ ವೈಭವ, ಅಧಿಕಾರ ದೊರೆತದ್ದರಿಂದ ಸುರುಚಿಗೆ ತೃಪ್ತಿಯಾಗಲಿಲ್ಲ. ಸುನೀತಿಗೂ ಧ್ರುವನಿಗೂ ಅರಮನೆಯಲ್ಲಿರಲು ಬಿಡಲಿಲ್ಲ. ತನ್ನ ಮಗ ಉತ್ತಮನೇ ಮುಂದೆ ರಾಜನಾಗಬೇಕು ಎಂದು ಅವಳ ಆಸೆ. ಅರಮನೆಯಲ್ಲೇ ಸುನೀತಿಯೂ ಧ್ರುವನೂ ವಾಸಿಸಿದರೆ, ಸುನೀತಿ ಪಟ್ಟದ ರಾಣಿ, ಧ್ರುವ ರಾಜನ ಮೊದಲನೆಯ ಮಗ ಎಂಬುದು ಜನರಿಗೆ ಸದಾ ನೆನಪಿರುತ್ತದೆ, ಮುಂದೆ ತನ್ನ ಮಗ ಉತ್ತಮನಿಗೆ ರಾಜ್ಯ ಸಿಕ್ಕದೆ ಹೋಗಬಹುದು ಎಂದು ಸುನೀತಿಯ ಹೆದರಿಕೆ. ಸುನೀತಿಯನ್ನೂ ಧ್ರುವನನ್ನೂ ಅರಮನೆಯಿಂದ ಹೊರಹಾಕಿದ್ದಳು. ಪಟ್ಟದ ರಾಣಿಯಾಗಿದ್ದರೂ ಪಟ್ಟಣದ ಹೊರವಲಯದಲ್ಲಿ ಸಾಮಾನ್ಯರಂತೆ ಸುನೀತಿಯು ಬಾಳುತ್ತಿದ್ದಳು. ಉತ್ತಾನಪಾದರಾಜ ಸುಮ್ಮನಿದ್ದ. ಅವನು ಸುನೀತಿಯ ಮನೆಯತ್ತ ಕಾಲಿಡುತ್ತಲೂ ಇರಲಿಲ್ಲ. ಸುರುಚಿಯನ್ನು ಕಂಡರೆ ಅವನಿಗೆ ಅಷ್ಟು ಹೆದರಿಕೆ ಮತ್ತು ಪ್ರೀತಿ.

ತಾಯಿಗೆ ಮಗ ಆಧಾರ, ಮಗನಿಗೆ ತಾಯಿ ಆಧಾರ

ಇಷ್ಟೆಲ್ಲಾ ಕಿರುಕುಳಗಳಾಗಿದ್ದರೂ ಸುನೀತಿಯು ತನ್ನ ಹೆಸರಿಗೊಪ್ಪುವಂತೆ ನೀತಿವಂತಳಾಗಿದ್ದಳು. ತನ್ನ ಪತಿಯನ್ನು ಕುರಿತು ಒಂದು ಆಕ್ಷೇಪಣೆಯ ಮಾತನ್ನೂ ಆಡಿದವಳಲ್ಲ, ಸುರುಚಿಯನ್ನು ದೂಷಿಸಿದವಳಲ್ಲ. ಅವರ ಅಭ್ಯುದಯವನ್ನೇ ಬಯಸುತ್ತಿದ್ದಳು. ತನ್ನ ಪಾಲಿಗೆ ಬಂದದ್ದೇ ಪಂಚಾಮೃತವೆಂದು ಎಲ್ಲವನ್ನೂ ಪರಮಾತ್ಮನಿಗೊಪ್ಪಿಸಿ, ಮೂಕಳಾಗಿದ್ದಳು. ಅವಳಿಗೆ ಈಗ ಉಳಿದಿದ್ದ ಸಂಪತ್ತೆಂದರೆ ಮಗ ಧ್ರುವನೇ. ಅವನನ್ನು ಹತ್ತಿರ ಕೂರಿಸಿಕೊಂಡು ಪ್ರತಿದಿನ ಪುರಾಣ, ಪುಣ್ಯಕಥೆ, ದಿವ್ಯ ಪುರುಷರ ಚರಿತ್ರೆಗಳನ್ನು  ಹೇಳಿಕೊಡುವಳು. ಹೀಗೆ ತನ್ನ ದುಃಖವನ್ನು ಮರೆಯುವಳು. ತನ್ನ ಬಾಳುಕುಡಿಯಾದ ಧ್ರುವನ ಅಭ್ಯುದಯವನ್ನೇ ಹಾರೈಸಿ, ದಿನಗಳನ್ನು ನೂಕುತ್ತಿದ್ದಳು.

ಧ್ರುವನಿಗೆ ತಾಯಿಯಲ್ಲಿ ಬಹಳ ಪ್ರೀತಿ, ದೇವರಲ್ಲಿ ಭಕ್ತಿ, ಹಿರಿಯರಲ್ಲಿ ಗೌರವ, ಚಿಕ್ಕವನಾದರೂ ಇತರರಿಗೆ ಸಂತೋಷವಾಗುವಂತೆ ನಡೆಯುವನು. ತಾಯಿಯ ಮಾರ್ಗದರ್ಶನದಲ್ಲಿ ಧ್ರುವನಿಗೆ ದೇವರಲ್ಲಿ ಅಪಾರ ಭಕ್ತಿ, ಶ್ರದ್ಧೆ ಮೊಳೆತು ಬೆಳೆಯುತ್ತಿತ್ತು. ಆಗಾಗ ಅವನಿಗೆ, ನಮ್ಮ ತಂದೆ ಮಹಾರಾಜ, ಆದರೆ ನನ್ನ ತಾಯಿ ಮತ್ತು ನಾನು ಅರಮನೆಯಲ್ಲಿ ಏಕೆ ವಾಸಮಾಡುತ್ತಿಲ್ಲ? ದೂರ ಏಕೆ ಇದ್ದೇವೆ? ನನ್ನ ತಂದೆ ನಮ್ಮ ಮನೆಗೆ ಏಕೆ ಬರುವುದಿಲ್ಲ? ಎನ್ನಿಸುತ್ತಿತ್ತು. ಇದನ್ನು ಕುರಿತು ಪದೇಪದೇ ತಾಯಿಯನ್ನು ಕೇಳುತ್ತಿದ್ದ. ಆಕೆ ಹೇಗೋ ಸಮಾಧಾನ ಹೇಳಿ ಸುಮ್ಮನಾಗುತ್ತಿದ್ದಳು.

ತನ್ನ ತಂದೆ ಮತ್ತು ತಾಯಿ ತನ್ನನ್ನು ಪ್ರೀತಿಯಿಂದ ಕಾಣಬೇಕು ಎಂದು ಪ್ರತಿ ಮಗುವಿಗೂ ಆಸೆ, ಅಲ್ಲವೆ? ಧ್ರುವನ ತಾಯಿ ಅವನನ್ನು ಮುದ್ದಿಸುತ್ತಿದ್ದಳು, ಅವನಿಗೆ ಕಥೆಗಳನ್ನು ಹೇಳುತ್ತಿದ್ದಳು. ಪ್ರೀತಿಯಿಂದ ಬಟ್ಟೆ ಹಾಕುತ್ತಿದ್ದಳು. ಆದರೆ ಧ್ರುವನಿಗೆ ತಂದೆಯ ಪ್ರೇಮ ಮಾತ್ರ ಸಿಕ್ಕಲಿಲ್ಲ. ಇದೊಂದು ಆತನ ಮನಸ್ಸನ್ನು ಚುಚ್ಚುತ್ತಿತ್ತು.

ಅಪ್ಪಾ, ನನ್ನನ್ನು ಎತ್ತಿಕೊ

ಒಂದು ದಿನ ಪುಟ್ಟ ಧ್ರುವನು ಆಡುತ್ತಾ ಅರಮನೆಯತ್ತ ನಡೆದಿದ್ದ. ಅವನಿಗಿನ್ನೂ ಐದು ವರ್ಷ. ರತ್ನಖಚಿತ ಸಿಂಹಾಸನದಲ್ಲಿ ಚಕ್ರವರ್ತಿಯು ಸುರುಚಿ ಮತ್ತು ಉತ್ತಮರೊಡನೆ ಕುಳಿತಿದ್ದನು. ದಿವ್ಯ ಸಭಾಂಗಣವು ಮುತ್ತು ರತ್ನಗಳಿಂದ ಶೋಭಾಯಮಾನವಾಗಿತ್ತು. ಅಲ್ಲಲ್ಲಿ ಶುಭ್ರವಾದ ಸುಪ್ಪತ್ತಿಗೆಗಳು, ನಡುನಡುವೆ ಬೆಳ್ಳಿಯ ಚಿತ್ರಕೆಲಸಗಳುಳ್ಳ ಬಂಗಾರದ ಪೀಠಗಳು, ಸ್ಫಟಿಕ ಗೋಡೆಗಳಲ್ಲಿ ಕೆತ್ತಿದ ವಿವಿಧ ಕಲಾಕೃತಿಗಳು ಕಣ್ಣಿಗೆ ಹಬ್ಬವಾಗಿದ್ದುವು.

ಧ್ರುವ ಸಭಾಂಗಣವನ್ನು ಪ್ರವೇಶಿಸಿದ. ತಂದೆಯ ತೊಡೆಯ ಮೇಲೆ ಉತ್ತಮನು ಕೂತಿರುವುದನ್ನು ನೋಡಿದ. ಅವನಿಗೂ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಬೇಕು ಎಂದು ಆಸೆಯಾಯಿತು.  ಸಿಂಹಾಸನದ ಕಡೆಗೆ ಹೆಜ್ಜೆ ಹಾಕಿದ.

ಧ್ರುವನು ತಂದೆಯತ್ತ ಬರುತ್ತಿರುವುದನ್ನು ಸುರುಚಿಯು ನೋಡುತ್ತಿದ್ದಳು. ಆಕೆಯ ಸಹಜ ದುಷ್ಟಬುದ್ಧಿ ಹೆಡೆಯೆತ್ತಿ  ನಿಂತಿತು.

ಧ್ರುವನು ಸಿಂಹಾಸನದ ಮೆಟ್ಟಿಲುಗಳನ್ನು ಹತ್ತಿದ. ತನ್ನ ತಂದೆಯ ಹತ್ತಿರ ನಿಂತು, “ಅಪ್ಪಾ, ನಾನೂ ತೊಡೆಯ ಮೇಲೆ ಕುಳಿತುಕೊಳ್ಳುತ್ತೇನೆ, ಎತ್ತಿಕೊ” ಎಂದ.

ರಾಜ್ಯ ಪೀಠವೇರುವ ಯೋಗ್ಯತೆ ಇದೆಯೇ?’

ಚಕ್ರವರ್ತಿ ತನ್ನ ಹತ್ತಿರ ನಿಂತ ಧ್ರುವನನ್ನು ಕಣ್ಣೆತ್ತಿಯೂ ನೋಡಲಿಲ್ಲ. ಪಾಪ, ಧ್ರುವನಿಗೆ ತಂದೆಯ ತೊಡೆಯ ಮೇಲೆ ತಾನೂ ಉತ್ತಮನಂತೆ ಕುಳಿತುಕೊಳ್ಳಬೇಕು ಎಂದು ಬಹಳ ಆಸೆಯಾಯಿತು. ತಂದೆಯ ತೊಡೆಯ ಮೇಲೆ ಕೈಯಿಟ್ಟ.

‘ಸಿಂಹಾಸನ ಏರುವ ಯೋಗ್ಯತೆ ನಿನಗಿದೆಯೇ?’

ಸುರುಚಿಯು ಕೆಂಡವಾದಳು. ಅವಳ ಕಣ್ಣುಗಳಲ್ಲಿ ಸಿಟ್ಟಿನ ಕಿಡಿ ಹಾರಿತು. ಅವಳು ಸಿಡಿಮಿಡಿಗೊಂಡು ಧ್ರುವನನ್ನು ದುರುದುರನೆ ನೋಡುತ್ತಿದ್ದುದನ್ನು ರಾಜನೂ ಕಂಡ. ಅವನಿಗೂ ಧ್ರುವನನ್ನು ಕಂಡು ಅಯ್ಯೋ ಪಾಪ ಎನ್ನಿಸಿತು. ಆದರೂ ಒಂದು ಕಡೆ ತನ್ನ ಪುಟ್ಟ ಮಗನ ಸಹಜವಾದ ಬಯಕೆ, ಇನ್ನೊಂದು ಕಡೆ ಕೆಣಕಿದ ಸಿಂಹಿಣಿಯಂತೆ ದುರುದುರನೆ ಧ್ರುವನತ್ತ ನೋಡುತ್ತಿರುವ ಪ್ರೀತಿಯ ರಾಣಿ – ಸುರುಚಿ. ರಾಜನಿಗೆ ತನ್ನ ರಾಣಿಯ ಕೋಪವನ್ನೆದುರಿಸುವ ಶಕ್ತಿಯಿರಲಿಲ್ಲ. ಸುಮ್ಮನೆ ಕುಳಿತ.

ಸುರುಚಿಗೆ ಕೋಪ ತಡೆಯಲಾಗಲಿಲ್ಲ. ಮಗುವನ್ನು ಗದರಿಸಿದಳು. “ಎಲೋ ಹುಡುಗನೆ, ರಾಜನ ತೊಡೆ ಏರುವ ಆಸೆ ಮಾಡಿರುವ ನಿನ್ನ ಅಹಂಕಾರವೆಷ್ಟು? ನನ್ನ ಹೊಟ್ಟೆಯಲ್ಲಿ ನೀನು ಹುಟ್ಟಲಿಲ್ಲ. ರಾಜಪೀಠವೇರುವ ಯೋಗ್ಯತೆ ನಿನಗಿದೆಯೇ? ನೀನು ಸಿಂಹಾಸನವನ್ನು ಏರಬೇಕಾದರೆ ದೇವರನ್ನು ಕುರಿತು ತಪಸ್ಸು ಮಾಡಿ, ನನ್ನ ಹೊಟ್ಟೆಯಲ್ಲಿ ಹುಟ್ಟಿಬರಬೇಕು. ಆಗ ಉತ್ತಮ ಕುಮಾರನ ಹಾಗೆ ನೀನೂ ಆಗುವೆ. ದೂರ ನಿಲ್ಲು. ಇಲ್ಲದಿದ್ದರೆ ನಿನ್ನನ್ನು ನೂಕಬೇಕಾಗುತ್ತದೆ, ಹೋಗತ್ತ!” ಎಂದು ಮೂದಲಿಸಿದಳು.

ಮನೆಗೆ

ಪಾಪ, ಚಿಕ್ಕ ಹುಡುಗನಿಗೆ ದಿಗ್ಭ್ರಮೆಯಾಯಿತು. ತಂದೆಯ ಕಡೆ ನೋಡಿದ. ತಂದೆಯು ಅವನ ಕಡೆ ಕಣ್ಣನ್ನೂ ಹೊರಳಿಸಲಿಲ್ಲ. ಅವನಿಗೆ ದುಃಖ ಒತ್ತರಿಸಿ ಬಂದಿತು. ಜೊತೆಗೇ ಏಟು ತಿಂದ ನಾಗರಹಾವಿನಂತೆ ಸಿಟ್ಟು ಬಂದಿತು. ಅವನಿಗೆ ತುಂಬ ಅಪಮಾನವಾಗಿತ್ತು. ತಂದೆಯೂ ತನ್ನನ್ನು ಮತನಾಡಿಸಲಿಲ್ಲ. ಅಪಮಾನವಾದಾಗಲೂ ಸುಮ್ಮನಿದ್ದ ಎಂದೂ ಕೋಪ ಬಂದಿತು. ಕಣ್ಣಿನಿಂದ ನೀರು ಹರಿಯಿತು. ತಂದೆಯನ್ನು ಬಿಟ್ಟು ಸಿಂಹಾಸನದ ಮೆಟ್ಟಿಲುಗಳನ್ನಿಳಿದ. ಅಲ್ಲಿದ್ದ ದಾಸಿಯೊಬ್ಬಳಿಗೆ ಅವನಿಗಾದ ಅಪಮಾನವನ್ನೂ ಬಿಕ್ಕಿಬಿಕ್ಕಿ ಅಳುತ್ತಿದ್ದ ಅವನ ಕಣ್ಣೀರನ್ನೂ ನೋಡಿ ಕರುಣೆ ಬಂದಿತು. ಅವನನ್ನು ಎತ್ತಿಕೊಳ್ಳಲು ಮುಂದೆ ಬಂದಳು. ಆದರೆ ಧ್ರುವನು ತಪ್ಪಿಸಿಕೊಂಡು ಓಡಿದ. ದಾಸಿಯೂ ಅವನ ಹಿಂದೆಯೇ ನಡೆದಳು.

ಎಂದು ಅಳದೆ, ನಗುನಗುತ್ತಾ ಇರುತ್ತಿದ್ದ ಧ್ರುವನು ಅಳುತ್ತಾ ಬರುತ್ತಿರುವುದನ್ನು ದೂರದಿಂದಲೇ ಕಂಡ ಸುನೀತಿಗೆ ಆಕಾಶವೇ ಕಳಚಿ ಬಿದ್ದಂತಾಯಿತು.  ಓಡಿಬಂದು ಮಗುವನ್ನು ತಬ್ಬಿ ಎತ್ತಿಕೊಂಡಳು. ಅವನ ಅಳುವನ್ನು ತಡೆಯಲು ಪ್ರಯತ್ನಿಸಿದಳು. ಮುದ್ದಾಡಿದಳು. ಆದರೆ ಅವನ ಅಳು ನಿಲ್ಲಲಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಹುಡುಗನಿಗೆ ಮಾತನಾಡುವುದಕ್ಕೇ ಆಗಲಿಲ್ಲ.

ಧ್ರುವನ ಜೊತೆಗೇ ದಾಸಿ ಬಂದಿದ್ದಳು, ಅಲ್ಲವೆ? ಸುನೀತಿ ಅವಳನ್ನು, ಏಕಮ್ಮಾ, ಮಗು ಅಳುತ್ತಿದ್ದಾನೆ? ನಿನಗೆ ಗೊತ್ತೆ? ಎಂದು ಕೇಳಿದಳು.

ದಾಸಿ ನಡೆದದ್ದನ್ನು ವಿವರಿಸಿದಳು.

ಎಲ್ಲ ದೇವರ ಇಚ್ಛೆ

ಸುರುಚಿ ಧ್ರುವನಿಗೆ ಮಾಡಿದ ಅಪಮಾನ, ಆಡಿದ ಮಾತುಗಳು, ಪುಟ್ಟ ಹುಡುಗನಿಗೆ ತಂದೆ ಹತ್ತಿರ ಹೋಗಲೂ ಅವಕಾಶ ಇಲ್ಲ ಎಂಬಂತೆ ದೂರ ಇಟ್ಟಿದ್ದು ಎಲ್ಲವನ್ನೂ ಕೇಳಿ ಸುನೀತಿಗೆ ಕರುಳು ಕತ್ತರಿಸಿದಂತಾಯಿತು. ದುಃಖ ಉಕ್ಕಿ ಬಂತು. ಸ್ವಲ್ಪ ಕಾಲ ಅವಳಿಗೆ ಮಾತನ್ನೇ ಆಡಲು ಸಾಧ್ಯವಾಗಲಿಲ್ಲ. ಸುಮ್ಮನೆ ಕುಳಿತಳು. ಧ್ರುವ ರಾಜ್ಯಕ್ಕೆ ಹಕ್ಕುದಾರ, ಅವನನ್ನು ಅಪಮಾನಗೊಳಿಸಿದ ಸುರುಚಿಯ ಸ್ವಾರ್ಥಕ್ಕೆ ಆಕೆ ಮರುಗಿದಳು. ಪಾಪ, ಧ್ರುವ ಏನೂ ತಿಳಿಯದ ಹಸುಳೆ, ಅವನ ಮೇಲೆ ಕೈಮಾಡಬೇಕೆ? ಪಟ್ಟದರಸಿಯಾಗಿ ಮೆರೆಯಬೇಕಿದ್ದ ನಾನು, ಸಾಮಾನ್ಯಳಂತೆ ಜೀವಿಸುತ್ತಿದ್ದರೂ, ನನ್ನ ಮಗುವಿನ ಮೇಲೆ ಸುರುಚಿ ಸೇಡುತೀರಿಸಬೇಕೆ? ಎನ್ನಿಸಿತು ಸುನೀತಿಗೆ.

ಕಣ್ಣೀರು ಸುರಿಸುತ್ತ ಸುನೀತಿಯು ತನ್ನ ಮಗುವನ್ನು ಸಂತೈಸಿದಳು. “ಮಗೂ, ರಾಜಕುಮರನಾದ ನಿನಗೆ ಅದರ ಆನಂದ ಪಡೆಯುವ ಭಾಗ್ಯವಿಲ್ಲ. ದೇವರಿಗೆ ನಮ್ಮ ಮೇಲೆ ಕರುಣೆ ಬಂದಾಗ ನಮ್ಮ ಪರಿಸ್ಥಿತಿ ಸುಧಾರಿಸುವುದು. ನನ್ನದು ದುರದೃಷ್ಟ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ನೀನು ದುಃಖಕ್ಕೆ ಗುರಿಯಾಗಬೇಕಾಯಿತು. ದೇವರಿಗೆ ಯಾವುದು ಒಪ್ಪಿಗೆಯೋ ಅದೇ ನಡೆಯುತ್ತದೆ. ನಮ್ಮ ಕಷ್ಟಗಳಿಂದ ಪಾರುಮಾಡಲು ಪರಮಾತ್ಮನಲ್ಲಿ ಮೊರೆ ಹೋಗಬೇಕು, ಅಷ್ಟೆ. ನಮಗೆ ಬೇರೆ ಯಾರು ಸಹಾಯ ಮಾಡುವರು? ಸಮಾಧಾನ ಮಾಡಿಕೊ. ಎಲ್ಲ ದೇವರ ಇಚ್ಛೆ” ಎಂದು ಸಮಾಧಾನ ಮಾಡಿದಳು.

ದೇವರನ್ನು ಕಾಣುವುದು ಹೇಗೆ?’

ತಾಯಿಯು ಪ್ರತಿ ದಿವಸ ಧ್ರುವನಿಗೆ ದೇವರ ವಿಷಯವಾಗಿ ಅನೇಕ ಕಥೆಗಳನ್ನು ಹೇಳುತ್ತಿದ್ದಳು. ಪರಮಾತ್ಮನು ಭಕ್ತರನ್ನು ಕಷ್ಟಕಾಲದಲ್ಲಿ ಉದ್ಧರಿಸಿದ ಕಥೆಗಳನ್ನು ಹುಡುಗನು ಕೇಳಿದ್ದ. ಕಷ್ಟಕಾಲದಲ್ಲಿ ಕಂಗಾಲಾದವರಿಗೆ ಈ ಕರುಣಾಮೂರ್ತಿ ಪರಮಾತ್ಮನೇ ಗತಿ ಎಂದು ಮತ್ತೆ ಈಗ ತಾಯಿ ಹೇಳಿದಳು. ಅವಳ ಮಾತನ್ನು ಕೇಳಿ ಅವನಲ್ಲಿ ಒಂದು ಹೊಸ ಚೇತನ ಮೂಡಿದಂತಾಯಿತು.

“ಅಮ್ಮಾ, ದೇವರನ್ನು ಕಾಣುವುದು ಹೇಗೆ? ಆತನನ್ನು ಮೊರೆಯಿಟ್ಟು ಕರೆದರೆ ಬರಲಾರನೇ?” ಎಂದ.

ಹೌದು ಮಗೂ, ಆ ಕರುಣಾಸಾಗರನನ್ನು ಶುದ್ಧ ಮನಸ್ಸಿನಿಂದ ನೆನೆದು, ನಮ್ಮ ಪ್ರಾರ್ಥನೆಯನ್ನು ಸಲ್ಲಿಸಿದರೆ ಖಂಡಿತ ಆತನು ನೆರವಾಗುವನು ಎಂದಳು ಸುನೀತಿ.

“ಆದರೆ, ಈಗ ಆತನನ್ನು ಕಾಣುವುದಾದರೂ ಎಲ್ಲಿ? ಅವನನ್ನು ಕಂಡು, ನಮ್ಮ ಕಷ್ಟಗಳನ್ನು ಹೇಳಿಕೊಂಡು, ಸಹಾಯ ಪಡೆಯಲು ಪ್ರಯತ್ನಿಸುವೆನು.”

ನಾನು ಕಾಡಿಗೆ ಹೋಗಿ ದೇವರನ್ನು ಕಾಣುತ್ತೇನೆ

ಸುನೀತಿಗೆ ತನ್ನ ಕಂದನ ಮಾತುಗಳನ್ನು ಕೇಳಿ ನಗುವೂ ಬಂದಿತು. ಕರುಣೆಯೂ ಉಕ್ಕಿತು. “ಮಗೂ, ದೇವರಿಲ್ಲದ ಸ್ಥಳ ಇಲ್ಲವೇ ಇಲ್ಲ. ಆತ ಸರ್ವಾಂತರರ್ಯಾಮಿ; ಎಲ್ಲೆಲ್ಲೂ ಆತ ವಿವಿಧ ರೂಪದಲ್ಲಿದ್ದಾನೆ. ಆಡುವವ, ಆಡಿಸುವವ, ನೋಡುವವ, ನೋಡಿಸುವವ, ಕೆಟ್ಟದ್ದು, ಒಳ್ಳೆಯದು, ಸುಖ, ದುಃಖ ಎಲ್ಲದರಲ್ಲಿಯೂ ಆತನೇ ತಾನೇತಾನಾಗಿರುವನು. ಆದರೆ, ದೇವರನ್ನು ಕಾಣುವುದು ಸುಲಭವಲ್ಲ. ಶುದ್ಧ ಮನಸ್ಸಿನ ಭಕ್ತಿಗೆ ಆತ ಒಲಿಯುತ್ತಾನೆ. ಆತನನ್ನು ಕಾಣಲು ನಿಶ್ಚಲ ಮನಸ್ಸು, ಸ್ವಚ್ಛ ಭಕ್ತಿ , ನಂಬಿಕೆ ಬೇಕಪ್ಪಾ” ಎಂದಳು.

“ಆದರೆ, ಅಮ್ಮಾ, ನೀನು ಅನೇಕ ಸಲ ಋಷಿಗಳು, ಸನ್ಯಾಸಿಗಳು ದೇವರನ್ನು ಕಾಡಿಗೆ ಹೋಗುವರೆಂದಿದ್ದೆ, ಅವನು ಅಲ್ಲೂ ಇರುವನೇನಮ್ಮಾ ?”

“ಹೌದು ಮಗೂ, ಆತನು ಎಲ್ಲೆಲ್ಲೂ ಇರುವನು. ಆದರೆ, ಕಾಡಿನಲ್ಲಿ ತಪಸ್ಸು ಮಾಡುವುದು ಸುಲಭವಲ್ಲ, ಧ್ರುವ, ಕಾಡಿನಲ್ಲಿ ಹುಲಿ, ಸಿಂಹಗಳಂತಹ ಮೃಗಗಳಿರುತ್ತವೆ. ಹಾವು, ಚೇಳುಗಳಂತಹ ವಿಷಜಂತುಗಳಿರುತ್ತವೆ. ಸಿಕ್ಕ ಗೆಡ್ಡೆ-ಗೆಣಸು, ಹಣ್ಣು ಇವೇ ಆಹಾರ, ಮಳೆ, ಗಾಳಿ, ಚಳಿ, ಬಿಸಿಲು ಎಲ್ಲವನ್ನೂ ತಡೆದುಕೊಳ್ಳಬೇಕು. ನಿನ್ನಂತಹ ಪುಟ್ಟ ಹುಡುಗನಿಗೆ ಇದೆಲ್ಲ ಸಾಧ್ಯವಿಲ್ಲ ಮಗೂ” ಎಂದಳು.

ಈ ಮಾತು ಕೇಳಿದ ಧ್ರುವನ ಮುದ್ದು ಮುಖದಲ್ಲಿ ಯಾವುದೋ ನಿರ್ಧಾರದ ಕಳೆಯಿತ್ತು.

“ಅಮ್ಮಾ, ನಾನು ಕಾಡಿಗೆ ಹೋಗಿ ದೇವರನ್ನು ಕಾಣುತ್ತೇನೆ. ಅವನನ್ನು ಭಕ್ತಿಯಿಂದ ಒಲಿಸಿ ವರ ಪಡೆಯುತ್ತೇನೆ.  ನನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡು” ಎಂದು ನಮಸ್ಕರಿಸಿದ.

ಅಷ್ಟು ಸುಲಭವಲ್ಲ

ಸುನೀತಿಗೆ ಈ ಮಾತುಗಳನ್ನು ಕೇಳಿ ದಿಕ್ಕು ಕಾಣದಾಯಿತು. ಧ್ರುವನ ಇಂತಹ ನಿರ್ಧಾರವನ್ನು ಕೈಗೊಳ್ಳುವನೆಂದು ಆಕೆ ತಿಳಿದಿರಲಿಲ್ಲ.  ಈ ಹಸುಳೆ ಕಾಡಿಗೆ ಹೋಗುವುದೆ? ತಪಸ್ಸು ಮಾಡುವುದೆ? ಆದರೆ ಅವನು ದೃಢನಿಶ್ಚಯ ಮಾಡಿದ್ದಾನೆ. ಆತನನ್ನು ಸಂತೈಸುವ ಧ್ವನಿಯಲ್ಲಿ “ದೇವರನ್ನು ಕಾಣುವುದು ಅಷ್ಟು ಸುಲಬವಲ್ಲಪ್ಪಾ. ಆತನನ್ನು ಒಲಿಸಲು ನಿನ್ನಲ್ಲಿ ಏಕಾಗ್ರತೆ ಬೇಕು. ದೃಢನಂಬಿಕೆಯ ಹೃದಯದಲ್ಲಿ ಭಕ್ತಿಯ ಅಮೃತವನ್ನು ತುಂಬಿಕೊಂಡಿರಬೇಕು. ಅದು ನಿನ್ನಂತಹ ಹಸುಳೆಗೆ ಸಾಧ್ಯವಾಗದ ವಿಷಯ. ಬಂದ ಕಷ್ಟಸುಖವನ್ನೆಲ್ಲಾ ಅನುಭವಿಸಬೇಕು. ಕಷ್ಟಸುಖಗಳೇನೇ ಬರಲಿ, ಎಲ್ಲವೂ ದೇವರ ವರಪ್ರಸಾದವೆಂದು ಆತನಿಗೆ ಎಲ್ಲವನ್ನೂ ಅರ್ಪಿಸುವ ಭಕ್ತಿಯೊಂದೇ ನಮಗಿರುವ ದಾರಿ” ಎಂದು ಹೇಳಿ ಅವನನ್ನು ಎತ್ತಿಕೊಂಡಳು.

ದೇವರನ್ನೇ ಕಂಡೇ ಕಾಣುತ್ತೇನೆ

ಆದರೆ, ಮುಗ್ಧ ಮನಸ್ಸಿನ ಧ್ರುವನ ಹೃದಯದಲ್ಲಿ ಒಂದು ತುಮುಲವೇ ಎದ್ದಿತು. ಎಷ್ಟು ಕಷ್ಟ ಬಂದರೂ ಸರಿಯೆ, ದೇವರನ್ನು ಕಾಣಲೇಬೇಕೆಂದು ನಿಶ್ಚಯಿಸಿದನು. ತನ್ನ ಮತ್ತು ತನ್ನ ತಾಯಿಯ ಕಷ್ಟಗಳನ್ನು ಆತನಲ್ಲಿ ಹೇಳಿಕೊಂಡು ಪಾರಾಗಲೇಬೇಕೆಂಬ ದೃಢಮನಸ್ಸು ಆತನನ್ನು ತಾಯಿಯ ಮಡಿಲಿನಿಂದ ಎಬ್ಬಿಸಿತು.

“ಅಮ್ಮಾ, ಇನ್ನು ನನಗೆ ಸಮಯ ಕಳೆಯಲು ಸಾಧ್ಯವಾಗದು. ಏನೇ ಆದರೂ, ಎಷ್ಟೇ ಕಷ್ಟಗಳೆರಗಿದರೂ ದೇವರನ್ನು ಕಂಡೇ ಕಾಣುತ್ತೇನೆ. ನಾನು ಆತನ ದರ್ಶನವನ್ನು ಪಡೆದು ಬರುವವರೆಗೆ ನೀನು ನಿಶ್ಚಿಂತಳಾಗಿರು. ಋಷಿಗಳಿಗೆ ದರ್ಶನವೀಯುವ ಆ ಪರಮಾತ್ಮನನ್ನು ನಾನು ಕಾಣಲಾರೆನೇ? ಆಶೀರ್ವದಿಸಿ ಕಳುಹಿಸು” ಎಂದು ಮತ್ತೆ ನಮಸ್ಕರಿಸಿದ.

ಸುನೀತಿ ಮಗನ ಮಾತನ್ನು  ಕೇಳಿದಳು. “ನನ್ನ ಹೊಟ್ಟೆಯಲ್ಲಿ ನೀನು ಹುಟ್ಟಲಿಲ್ಲ, ಸಿಂಹಾಸನವನ್ನೇರುವ ಯೋಗ್ಯತೆ ನಿನಗಿದೆಯೇ?” ಎಂದು ಸುರುಚಿ ಧ್ರುವನಿಗೆ ಹೇಳಿದ್ದ ಮಾತುಗಳು ನೆನಪಾದವು. ಸರಿ, ಧ್ರುವನಿಗೆ ಆದ ಅಪಮಾನ ಸರಿಹೋಗಬೇಕಾದರೆ ಅವನು ಹುಡುಕಿದ ದಾರಿಯೊಂದೇ ಉಳಿದಿರುವುದು ಎಂದು ಅವಳಿಗೂ ಎನ್ನಿಸಿತು. ಅವಳು ಹೇಳಿದಳು “ಮಗು, ನಿನ್ನ ಚಿಕ್ಕಮ್ಮ ಹೇಳಿದ ಮಾತು ನಿಜ . ನಿನ್ನ ತಂದೆಗೆ ನಾನು ಅವರ ಹೆಂಡತಿ ಎಂದು ಹೇಳಿಕೊಳ್ಳುವುದಕ್ಕೂ ಆಗದು. ನನ್ನ ಮಗನಾದ ನೀನು ರಾಜನಾಗುವುದು ಹೇಗೆ? ಸುರುಚಿಯ ಮೇಲೆ ಕೋಪ ಮಾಡಿಕೊಂಡು ಫಲವಿಲ್ಲ. ನೀನು ಪರಮಾತ್ಮನನ್ನು ಪೂಜಿಸುವುದೇ ಸರಿಯಾದ ದಾರಿ. ಒಂದೇ ಮನಸ್ಸಿನಿಂದ ದೇವರ ಧ್ಯಾನ ಮಾಡು. ನಿನಗೆ ಶುಭವಾಗಲಿ” ಎಂದಳು.

ಧ್ರುವ ತಾಯಿಗೆ ನಮಸ್ಕರಿಸಿದ. ಅವಳು ಅವನ ಮೈದಡವಿ ಮುದ್ದಾಡಿ ಹರಸಿದಳು. ಐದು ವರ್ಷದ ಹುಡುಗ ದೇವರನ್ನು ಕಾಣುತ್ತೇನೆ ಎಂದು ಕಾಡಿಗೆ ಹೊರಟ.

ಧ್ರುವನ ಮುಂದೆ ಒಂದೇ ಗುರಿ-ದೇವರನ್ನು ಕಾಣುವುದು . ಕಲ್ಲು-ಮುಳ್ಳು, ಹಳ್ಳ-ದಿಣ್ಣೆಯೆನ್ನದೆ, ಹಸಿವು, ನೀರಡಿಕೆ, ವಿಶ್ರಾಂತಿಯ ಪರಿವೆಯಿಲ್ಲದೆ ಮುಂದೆ ನಡೆದ. ಅವನ ಬಾಯಲ್ಲಿ ದೇವರ ನಾಮ. ಅವನ ಮನಸ್ಸಿನಲ್ಲಿ ಆ ಪರಮಾತ್ಮನ ನಾಮಾಮೃತವು ತಾನೇ ತಾನಾಗಿ ತುಂಬಿತ್ತು.

ಕಾಡಿನಲ್ಲಿ

ನಡೆದು ನಡೆದು ಧ್ರುವ ದಟ್ಟ ಅರಣ್ಯ ಪ್ರವೇಶಿಸಿದ . ದಾರಿಗಾಗಿ ತಡವರಿಸುತ್ತಾ ನಡೆದ.  ಕಲ್ಲು ಮುಳ್ಳುಗಳಿಂದ ಅವನ ಮೃದು ಪಾದಗಳಿಗೆ ಗಾಯಗಳಾದವು. ದಿನವಿಡೀ ಹುಡುಗ ನಡೆದ. ಆಯಾಸ, ಹಸಿವು, ನೀರಡಿಕೆ. ಧ್ರುವನು ಬಳಲಿ ಬೆಂಡಾಗಿದ್ದನು. ರಾತ್ರಿಯಾಗುತ್ತಿತ್ತು. ಕಾಡಿನಲ್ಲಿ ಘೀಳಿಡುವ ಆನೆಗಳ ಹಿಂಡು, ಗರ್ಜಿಸುವ ಸಿಂಹ, ಹುಲಿ, ಚಿರತೆಗಳ ಆರ್ಭಟಗಳು. ಆದರೆ ಧ್ರುವನಿಗೆ ಇದರ ಅರಿವೆ ಇಲ್ಲ. ಅವನ ಬಾಯಲ್ಲಿ ‘ಓಂ ನಮೋ ನಾರಾಯಣಾಯ’ ಎಂಬ ತಾರಕ ಮಂತ್ರ, ಅದೇ ಶ್ರೀರಕ್ಷೆ. ಕತ್ತಲಾಯಿತು. ಆ ಗೊಂಡಾರಣ್ಯದಲ್ಲಿ ದಾರಿ ಕಾಣದೆಹೋಯಿತು. ಮುಂದೇನೂ ಮಾಡಲಾರದೆ, ಶಕ್ತಿಗುಂದಿ ಒಂದು ದೊಡ್ಡ ಮರದಡಿಯಲ್ಲಿ ಧ್ರುವನು ಕುಸಿದುಬಿದ್ದನು. ಬಾಯಲ್ಲಿ ಮಾತ್ರ ಎಡಬಿಡದೆ ನಾರಾಯಣನ ಧ್ಯಾನ. ಅಲೆದು ದಣಿದ ದೇಹ ಗಾಡ ನಿದ್ರೆಯಲ್ಲಿ ಲೀನವಾಯಿತು.

ಧ್ರುವನ ಭಕ್ತಿಗೆ ಮೆಚ್ಚಿ ಶ್ರೀಮನ್ನಾನಾರಾಯಣನು ಪ್ರತ್ಯಕ್ಷನಾದನು.

ರಾತ್ರಿ ಕಳೆಯಿತು. ಅರುಣೋದಯವಾಯಿತು. ಪಕ್ಷಿಗಳು ಗೂಡುಗಳಿಂದ ಹೊರಬಂದು ಚಿಲಿಪಿಲಿಗುಟ್ಟಿದುವು. ತಮ್ಮ ಗೂಡುಗಳಿಂದ ಹೊರಬಂದ ಚಿಕ್ಕಪುಟ್ಟ ಪ್ರಾಣಿಗಳು ತರಗೆಲೆಗಳ ಮೇಲೆ ಮಲಗಿರುವ ಮಗುವನ್ನು ಕಂಡವು. ಜಿಂಕೆಗಳು ಹೆದರುತ್ತಾ ಒಂದೊಂದೇ ಹೆಜ್ಜೆಗಳನ್ನಿಟ್ಟು ಮುಂದುವರಿದು, ಧ್ರುವನನ್ನು ಮೂಸಿ ನೋಡಿದವು. ಒಂದನ್ನು ಕಂಡು ಮತ್ತೊಂದರಂತೆ ನೆರೆದ ಪ್ರಾಣಿ ಪಕ್ಷಿಗಳ ಸಮೂಹವು ಧ್ರುವನನ್ನು  ಸುತ್ತುವರಿದಿತ್ತು. ಈ ಗದ್ದಲದಿಂದ ಹುಡುಗನಿಗೆ ಎಚ್ಚರ ಆಯಿತು.  ಕಣ್ತೆರೆದು ನೋಡಿದ. ಬೆಳಗಾಗಿದ್ದನು ಕಂಡು ತಕ್ಷಣ ಎದ್ದು ನಿಂತ. ಪ್ರಾಣಿ ಪಕ್ಷಿಗಳು ಹೆದರಿ ದಿಕ್ಕಾಪಾಲಾಗಿ ಚದುರಿದವು.

ಧ್ರುವನ ಬಾಯಲ್ಲಿ “ಓಂ ನಮೋ ನಾರಾಯಣಾಯ” ಮಂತ್ರವೊಂದೇ ಹೊರಡುತ್ತಿತ್ತು. ಪರಮಾತ್ಮನನ್ನು ಕಾಣುವೆನೆಂಬ ದೃಢ ವಿಶ್ವಾಸ ಧ್ರುವನಿಗೆ.

ಪೂಜ್ಯರಾದ ತಾವು ದಾರಿ ತೋರಿಸಿ

ಕಾಣದ ದೇವರನ್ನು ಕಂಡೇ ಕಾಣುವೆನೆಂಬ ಹಂಬಲದಿಂದ ಅರಸಿಬಂದ ಧ್ರುವನು, ದಡಬಡಿಸಿ ಎದ್ದು ನಡೆಯತೊಡಗಿದ. ಮೊದಲೇ ಕಾಡುಮೇಡು ತುಳಿದು, ಕಲ್ಲುಮುಳ್ಳುಗಳಿಂದ ಗಾಯಗಳಾಗಿದ್ದ ಪುಟ್ಟ ಪಾದಗಳು. ನಡೆಯುವುದೇ ಕಷ್ಟವಾಗಿತ್ತು. ಸತತ ಪ್ರಯಾಣದಿಂದ ಧ್ರುವನು ಮತ್ತೊಂದು ಹೆಜ್ಜೆ ಯಿಡಲಾರದ ಸ್ಥಿತಿಗೆ ತಲುಪಿದ್ದನು.

ಆ ಹೊತ್ತಿಗೆ ಧ್ರುವನಿಗೆ ಅನಿರೀಕ್ಷಿತವಾಗಿ ನಾರದರ ದರ್ಶನವಾಯಿತು. ನಾರದರು ಶ್ರೀವಿಷ್ಣುವಿನ ಮಹಾಭಕ್ತರು. ಮೂರು ಲೋಕಗಳಲ್ಲಿ ಸಂಚಾರ ಮಾಡುವವರು. ಶ್ರೀಮನ್ನಾರಾಯಣನ ಸ್ಮರಣೆ ಮಾಡುತ್ತಾ, ಕೈಯಲ್ಲಿ ತಾಳ ತಂಬೂರಿ ಹಿಡಿದು ಬರುತ್ತಿದ್ದ ಮಹಾನುಭಾವರ ದರ್ಶನದಿಂದ ಧ್ರುವನಿಗೆ ತುಂಬ ಸಂತೋಷವಾಯಿತು. ಅವರ ಪಾದಗಳಿಗೆ ನಮಸ್ಕಾರ ಮಾಡಿದ.

ನಾರದರು ಧ್ರುವನ ಎಲ್ಲಾ ವಿಚಾರಗಳನ್ನು ತಮ್ಮ ಜ್ಞಾನದೃಷ್ಟಿಯಿಂದ ತಿಳಿದುಕೊಂಡಿದ್ದರು. ಹುಡುಗನನ್ನು ಮೇಲೆತ್ತಿದರು. ಧ್ರುವನು ಸ್ವಾಮಿ, “ನಾನು ದೇವರನ್ನು  ನೋಡಬೇಕು. ಅದಕ್ಕಾಗಿ ಬಂದಿದ್ದೇನೆ. ಪೂಜ್ಯರಾದ ತಾವು ದಾರಿ ತೋರಿಸಿ” ಎಂದು ಬೇಡಿದ.

ನಾರದರು ಅವನ ಬೆನ್ನು ಸವರುತ್ತ, “ಮಗೂ, ನೀನು ಬಹಳ ಪುಟ್ಟ ಹುಡುಗ, ದೇವರನ್ನು ಕಾಣಬೇಕೆಂಬ ಹುಚ್ಚಿನಲ್ಲಿ ಇಂತಹ ದಟ್ಟವಾದ ಅರಣ್ಯದಲ್ಲಿ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದೆಯಲ್ಲಾ! ಎಂತಹ ಸಾಹಸಕ್ಕೆ ಕೈಹಾಕಿದೆ?” ಎಂದು ಪ್ರೀತಿಯಿಂದ ಕೇಳಿದರು. ನಾರದರ ಹಸ್ತಸ್ಪರ್ಶದಿಂದ ಧ್ರುವನಲ್ಲಿ ನವಚೇತನ ಮೂಡಿಬಂದಂತಾಯಿತು.

ಈಗ ಹಿಂದಕ್ಕೆ ಹೋಗು…’

ಧ್ರುವನು ತನ್ನ ಚಿಕ್ಕ ತಾಯಿಯಿಂದಾದ ಅಪಮಾನ, ತನ್ನ ತಂದೆಯು ತೋರಿಸಿದ ಆಲಕ್ಷ್ಯ, ತನ್ನ ತಾಯಿಯ ಉಪದೇಶ ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದನು. ನಾರದರು ಧ್ರುವನನ್ನು ಆಲಿಂಗಿಸಿಕೊಂಡು, “ಮಗೂ, ನಿನ್ನನ್ನು ಪಡೆದ ತಂದೆತಾಯಿಗಳು ನಿಜವಾಗಿ ಧನ್ಯರು. ನೀನು ದೇವರನ್ನು ಕಾಣಲು ಇಟ್ಟ ದಿಟ್ಟ ಹೆಜ್ಜೆ ತುಂಬಾ ಮೆಚ್ಚುವಂತಹದ್ದು! ಆದರೆ ಮಗೂ, ದೇವರನ್ನು ಕಾಣುವುದು ಅಷ್ಟು ಸುಲಭವಲ್ಲಪ್ಪಾ! ಅವನನ್ನು ಕಾಣಲು ಋಷಿಗಳೆ ಅನೇಕ ಜನ್ಮಗಳ ತಪಸ್ಸನ್ನು ಮಾಡಿದರೂ ಸಾಧ್ಯವಾಗದೆ ನಿರಾಶರಾಗಿದ್ದಾರೆ . ನೀನು ಕಾಡಿನಲ್ಲಿ ಅನ್ನಾಹಾರವನ್ನು ತ್ಯಜಿಸಿ ಓಡಾಡಿದರೆ ಆತನನ್ನು ಕಾಣಲಾರೆ. ನೀನು ಇಂದು ಯಾವುದೋ ದುಃಖಾನುಭವದಿಂದ ಕಂಗೆಟ್ಟು ದೇವರನ್ನು ಕಾಣಲು ಆಸೆಪಡುತ್ತಿ. ಆದರೆ ಕಷ್ಟಸುಖಗಳನ್ನು ಸಮದೃಷ್ಟಿಯಿಂದ ನೋಡುವವನು ಮಾತ್ರ ದೇವರನ್ನು ಕಾಣಬಲ್ಲ . ಇಂದು ನೀನು ಮಲತಾಯಿಯ ಮಾತಿನಿಂದ ನೊಂದು, ಅದರ ಪರಿಹಾರಕ್ಕಾಗಿ ದೇವರನ್ನು ಹುಡುಕುತ್ತಿರುವೆ. ಆದರೆ ದೇವರನ್ನು ಕಾಣಬೇಕಾದರೆ ಆಸೆ, ಕೋಪ ಇವೆಲ್ಲವನ್ನು ಬಿಟ್ಟಿರಬೇಕು. ಇದು ಬೇಕು, ಅದು ಬೇಕು ಎಂಬ ಆಸೆ ಹೋಗಿರಬೇಕು. ನೋಡು, ನಿನ್ನ ಚಿಕ್ಕ ತಾಯಿ ನಿನಗೆ ಅಪಮಾನ ಮಾಡಿದಳು ಎಂದು ಬಂದೆ ಅಲ್ಲವೆ? ಅವಳ ಮಾತುಗಳಿಂದ ನಿನಗೆ ಕೋಪ ಬಂದಿತು.  ನೀನು ವಿವೇಕಿಯಾಗಿದ್ದರೆ ನಿನ್ನ ಚಿಕ್ಕ ತಾಯಿ ಏನೇ ಹೇಳಿದರೂ ಶಾಂತವಾಗಿರಬೇಕಾಗಿತ್ತು. ಮನಸ್ಸಿಗೆ ಶಾಂತಿ ಸಮಾಧಾನಗಳು ಇಲ್ಲದೆ ಹೋದರೆ ದೇವರನ್ನು ನೋಡಲು ಸಾಧ್ಯವೆ? ನೀನು ಪ್ರಾಪಂಚಿಕ ಆಗುಹೋಗುಗಳನ್ನರಿತು, ನಿನ್ನ ಮನಸ್ಸನ್ನು ಪರಿಪಕ್ಷ ಮಾಡಿಕೊಂಡರೆ ದೇವರನ್ನು ಕಾಣಬಲ್ಲೆ. ಈಗ ಹಿಂದಕ್ಕೆ ಹೋಗು. ಎಲ್ಲರ ಹಾಗೆ ಬದುಕು. ಕಷ್ಟ, ಸುಖ ಎಲ್ಲವನ್ನೂ ಅನುಭವಿಸಿ ಮುದುಕನಾದನಂತರ ಕಾಡಿಗೆ ಬಾ,  ತಪಸ್ಸು ಮಾಡು, ದೇವರನ್ನು ಕಾಣುವೆ”  ಎಂದರು.

ಮಂತ್ರೋಪದೇಶ

ಆದರೆ, ಧ್ರುವನು ಚಿಕ್ಕವನಾದರೂ ಈ ಮಾತು ಆತನಿಗೆ ರುಚಿಸಲಿಲ್ಲ. “ಮಹಾತ್ಮರೇ, ನಾನು ಕ್ಷತ್ರಿಯ ಕುಲದವನು.ನಿಮ್ಮ ಹಿತಬೋಧನೆಯಿಂದ ನನ್ನ ತೀರ್ಮಾನ ಬದಲಾಗುವುದಿಲ್ಲ. ದೇವರನ್ನು ನೋಡುತ್ತೇನೆ ಎಂದು ಬಂದೆ . ನನಗೆ ದಾರಿ ತೋರಿಸಿ, ಆಶೀವರ್ದಿಸಿರಿ, ನನ್ನ ತಾಯಿಯು, ಕಾಡಿನಲ್ಲಿ ತಪಸ್ಸನ್ನು ಮಾಡುವ ಋಷಿಗಳಿಗೆ ಆತನು ಕಾಣಿಸಿಕೊಳ್ಳುವನು ಎಂದಿರುವಳು. ದೇವರನ್ನು ಪ್ರೀತಿಸುವವನ ಬೆಂಗಾವಲಾಗಿ ಆತನಿರುತ್ತಾನೆ ಎಂದಿದ್ದಾಳೆ. ನನಗೀಗ ಸಿಂಹಾಸನ ಬೇಡ. ನಮ್ಮ ಹಿರಿಯರು ಯಾರೂ ಪಡೆಯದೆ ಇರುವ ಪದವಿ ಬೇಕು. ದೇವರನ್ನು ಕಂಡರೆ ಹಾಗೇ ಬೇಡುತ್ತೇನೆ. ದಾರಿ ತೋರಿಸಿರಿ” ಎಂದು ಪಾದಕ್ಕೆರಗಿದನು.

ನಾರದರಿಗೆ ಚಿಕ್ಕ ಹುಡುಗನ ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಕಂಡು ಸಂತೋಷವಾಯಿತು. ಅವರು, “ಮಗೂ, ನಿನ್ನ ತಾಯಿಯು ನಿನಗೆ ಹೇಳಿದ ಮಾತುಗಳು ನೆನಪಿದೆ ತಾನೆ? ಅವೇ ದೊಡ್ಡ ಉಪದೇಶ. ದೇವರನ್ನು ಒಂದೇ ಮನಸ್ಸಿನಿಂದ ಧ್ಯಾನ ಮಾಡು. ಯಮುನಾ ನದಿಯ ತೀರದಲ್ಲಿ ಮಧುವನ ಇದೆ. ನಿರ್ಮಲ ಮನಸ್ಸಿನಿಂದ ದೇವರ ಧ್ಯಾನಮಾಡು. ಮನಸ್ಸಿನಲ್ಲಿ ದೇವರ ಮೂರ್ತಿಯನ್ನು ನಿಲ್ಲಿಸಿಕೊ. ಮುದ್ದಾದ ಎಳೆಯ ಮಗುವಿನ ಮುಖದಂತೆ ಅವನ ಮುಖ, ತೇಜಸ್ಸಿನಿಂದ ಹೊಳೆಹೊಳೆಯುತ್ತಿರುತ್ತದೆ. ತುಟಿಯಲ್ಲಿ ಮುಗುಳ್ನಗೆ, ಬಹು ಸುಂದರವಾದ, ಬೆಳಕನ್ನು ಸುತ್ತ ಚೆಲ್ಲುವ ಮೂರ್ತಿ ಅವನದು. ಅಂತಹ ಮೂತಿಯನ್ನು ನಿಲ್ಲಿಸಿಕೊಂಡು, ಮನಸ್ಸಿಗೆಲ್ಲ ಆ ಮೂರ್ತಿಯನ್ನೆ ಕೇಂದ್ರ ಮಾಡಿಕೊಂಡು ಧ್ಯಾನಮಾಡು, ಮನಸ್ಸು ಬೇರೆಲ್ಲೂ ಹೋಗದಂತೆ ತಡೆ. ದೇವರು ನಿಜವಾದ ಭಕ್ತಿಗೆ ಒಲಿಯುತ್ತಾನೆ, ನಿನಗೆ ಶುಭವಾಗಲಿ ಎಂದು ಹೇಳಿದರು. ಅವನಿಗೆ ಶ್ರೀವಾಸುದೇವ ಮಂತ್ರವನ್ನು ಉಪದೇಶ ಮಾಡಿದರು. ಅವನಿಗೆ ಆಶೀರ್ವಾದ ಮಾಡಿದರು.

ಇಂತಹ ಪೂಜ್ಯರ ಉಪದೇಶ ಮತ್ತು ಆಶೀರ್ವಾದಗಳಿಂದ ಧ್ರುವನ ಹೃದಯ ಸಂತೋಷದಿಂದ ತುಂಬಿತು. ಆಯಾಸವೆಲ್ಲ ಮರೆತುಹೋಯಿತು. ದೇವರನ್ನು ಕಾಣುತ್ತೇನೆ ಎಂಬ ಹಿಗ್ಗಿನಿಂದ ಅವರ ಪಾದಗಳಿಗೆ ನಮಸ್ಕಾರ ಮಾಡಿ ಮಧುವನದತ್ತ ಹೆಜ್ಜೆ ಹಾಕಿದ.

ನಾನು ತಪ್ಪು ಮಾಡಿದೆ

ಧ್ರುವನನ್ನು ಕಳುಹಿಸಿಕೊಟ್ಟು ನಾರದರು ಉತ್ತಾನಪಾದನ ಅರಮನೆಗೆ ಬಂದರು. ಸುರುಚಿ ಧ್ರುವನನ್ನು ಹೀಯಾಳಿಸಿ ಮಾತನಾಡಿದಾಗ ಅವಳಿಗೆ ಹೆದರಿ ರಾಜನು ಸುಮ್ಮನಿದ್ದ. ಆದರೆ ಹುಡುಗನ ದುಃಖ, ಕಣ್ಣೀರು ಎಲ್ಲ ಅವನ ಕಣ್ಣಿಗೆ ಕಟ್ಟಿದಂತಾಯಿತು. ಏನೇ ಆದರೂ ಅವನನ್ನು ಮರೆಯಲು ಸಾಧ್ಯವಾಗಲಿಲ್ಲ. ‘ಧ್ರುವನನ್ನು ಕರೆದುಕೊಂಡು ಬನ್ನಿ’ ಎಂದು ಸುನೀತಿಯ ಮನೆಗೆ ದೂತರನ್ನು ಕಳುಹಿಸಿದ. ಅವರು ಬಂದು, ಹುಡುಗನು ‘ದೇವರನ್ನು ನೋಡುತ್ತೇನೆ’ ಎಂದು ಕಾಡಿಗೆ ಹೋಧ ಎಂದು ಹೇಳಿದರು. ರಾಜನಿಗೆ ದುಃಖ ಒತ್ತರಿಸಿ ಬಂದಿತು.

ನಾರದರು ಬಂದಾಗ ಉತ್ತಾನಪಾದನು ದುಃಖದಿಂದ ಮಿಂಚಿಹೋದ ಕಾರ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದನು. ಎಲ್ಲರೂ ಸುರುಚಿಯನ್ನು ಶಪಿಸುತ್ತಿದ್ದರು. ಅಹಂಕಾರದಿಂದ ಮೆರೆಯುತ್ತಿದ್ದ ಸುರುಚಿ ಜನರಿಗೆ ಮುಖ ತೋರಿಸಲಾಗದೆ ಮೂಲೆ ಹಿಡಿದಿದ್ದಳು. ಮಗನನ್ನು ಕಳೆದುಕೊಂಡಿದ್ದ ಸುನೀತಿಯು ಅನ್ನಾಹಾರಗಳನ್ನು ಮುಟ್ಟದೆ ಕೃಶಳಾಗಿದ್ದಳು . ನಾರದ ಮಹಾಮುನಿ ಉತ್ತಾನಪಾದನ ಆಸ್ಥಾನಕ್ಕೆ ಬಂದರು. ರಾಜನು ಅವರನ್ನು ಗೌರವದಿಂದ ಬರಮಾಡಿಕೊಂಡ. ಉನ್ನತ ಪೀಠದಲ್ಲಿ ಕುಳ್ಳಿರಿಸಿದ. ನಾರದ ಮಹಾಮುನಿಗಳು, ರಾಜೇಂದ್ರ! ಏನಿದು! ನಿನ್ನ ಮುಖವು ಯಾವುದೋ ಚಿಂತಗೊಳಗಾದಂತಿದೆ. ಕಾರಣವೇನು?” ಎಂದು ಕೇಳಿದರು.

ರಾಜನು, ಪೂಜ್ಯರೇ ದುರ್ದೈವಿಯಾದ ನಾನು ತಪ್ಪುಮಾಡಿದೆ. ಸುರುಚಿಯ ಮೇಲಿನ ಪ್ರೀತಿಯಿಂದ ನನ್ನ ಮುದ್ದು ಬಾಲಕನನ್ನು ಅವನ ತಾಯಿಯೊಡನೆ ಹೊರಗಟ್ಟಿದೆನು. ತಾಯಿಯೊಡನೆ ಸುಖವಾಗಿದ್ದ ಧ್ರುವಕುಮಾರನನ್ನು ಅವಮಾನಿಸಿ ಆತನನ್ನು ಕಾಡಿಗಟ್ಟಿದ ಪಾಪವನ್ನು ಇಂದು ನಾನು ಕಟ್ಟಿಕೊಂಡಿರುವೆನು. ಮಗು ಕಾಡಿನಲ್ಲಿ ಏನು ಕಷ್ಟಪಡುತ್ತಿದ್ದಾನೊ, ಯಾವ ಕಾಡಮೃಗಗಳಿಗೆ ತುತ್ತಾದನೋ!” ಎಂದು ದುಃಖಿಸಿದನು.

ಪರಿಣಾಮ ಒಳ್ಳೆಯದೇ ಆಗುತ್ತದೆ

ನಾರದನು, “ರಾಜೇಂದ್ರಾ! ನಿನ್ನ ಮಗ ಧ್ರುವನು ಅಸಾಧಾರಣ ಶಕ್ತಿಯುಳ್ಳವನು, ಭಗವಂತನೇ ಆತನ ಶ್ರೀರಕ್ಷೆಯಾಗಿದ್ದಾನೆ , ಚಿಂತಿಸಬೇಡ. ಧ್ರುವನು ತನ್ನ ಛಲದಿಂದ, ಯಾರಿಗೂ ದೊರಕದ ಪದವಿಯನ್ನು ಪಡೆದು ಹಿಂದಿರುಗುವನು, ಚಿಂತಿಸದಿರು,” ಎಂದು ಸಮಧಾನಗೊಳಿಸಿದನು. ಆದರೂ, ಉತ್ತಾನಪಾದನು ಪಶ್ಚಾತ್ತಾಪದಿಂದ “ಸ್ವಾಮೀ, ನಾನು ಅಂಧನಾಗಿ, ಪೂರ್ವಾಪರ ವಿವೇಚನೆಯಿಲ್ಲದೆ ಮಾಡಿದ ಶತಾಪರಾಧವನ್ನು ಕ್ಷಮಿಸಿ” ಎಂದು ನಮಸ್ಕಾರ ಮಾಡಿದ. ನರದನು ರಾಜನನ್ನು ಸಂತೈಸುತ್ತ “ರಾಜಾ! ನೀನು ಮಾಡಿದ್ದು ತಪ್ಪು. ಆದರೂ ಇದರ ಪರಿಣಾಮ ಒಳ್ಳೆಯದೇ ಆಗುತ್ತದೆ. ನೀನು, ನಿನ್ನ ಪಟ್ಟದ ರಾಣಿಯಾದ ಸುನೀತಿಯನ್ನು ಅರಮನೆಗೆ ತಂದು ಮರ್ಯಾದೆಯಿಂದ ನೋಡಿಕೋ” ಎಂದು ಬುದ್ಧಿ ಹೇಳಿದರು. ನಾರಾಯಣ ನಾಮಾಮೃತವನ್ನು ಹಾಡುತ್ತಾ ಹೊರಟುಹೋದರು.

ಧ್ರುವಾ! ಎದ್ದೇಳು!’

ಧ್ರುವನು ಕೂತಲ್ಲಿಂದ ಕದಲಲೇ ಇಲ್ಲ. ದಿವ್ಯರಾದ ವಾಸುದೇವ ಮಂತ್ರವನ್ನೇ ಉಚ್ಚರಿಸುತ್ತಾ, ತನ್ನ ಹೃದಯದಲ್ಲಿ ಆ ಪರಮಾತ್ಮನ ದಿವ್ಯಮಂಡಗಳ ಸ್ವರೂಪವನ್ನು ನೆಲೆಗೊಳಿಸಿದನು. ಅನ್ನಾಹಾರಗಳಿಲ್ಲದೆ ಮಳೆಬಿಸಿಲೆನ್ನದೆ, ಯಾವುದೇ ಬಾಹ್ಯ ಪ್ರಪಂಚದ ಪರಿವಯಿಲ್ಲದೆ, ಆ ದಿವ್ಯ ಮಂತ್ರವೊಂದನ್ನೇ ಜಪಿಸತೊಡಗಿದನು. ಒಂದು ದಿನ ಕಳೆಯಿತು , ಎರಡು ದಿನಗಳಾದುವು , ತಿಂಗಲೇ ಸಾಗಿ ಹೋಯಿತು . ಧ್ರುವನ ತಪಸ್ಸು ಕಠಿಣವಾಗತೊಡಗಿತು. ಹೃದಯದಲ್ಲಿ ನಿಲ್ಲಿಸಿಕೊಂಡ ಕರುಣಾಸಾಗರನ ಮೂರ್ತಿಯಲ್ಲಿ ತನ್ನನ್ನು ಅರ್ಪಿಸಿಕೊಂಡನು. ತಿಂಗಳುಗಳು ಉರುಳಿದವು. ಮೊದಮೊದಲು ಕೈಗೆ ಸಿಕ್ಕ ಹಣ್ಣುಗಳನ್ನು ತಿನ್ನುತ್ತಿದ್ದ. ಬರುಬರುತ್ತ ಆಹಾರದ ಯೋಚನೆಯೇ ಇಲ್ಲವಾಯಿತು. ದೇಹ ಮನಸ್ಸುಗಳೆಲ್ಲ ವಾಸುದೇವನ ಧ್ಯಾನದಲ್ಲಿ ಲೀನವಾದವು. ಧ್ರುವನ ಘೋರ ತಪಸ್ಸಿನಿಂದ ಅವನ ಸುತ್ತ ಒಂದು ದಿವ್ಯ ತೇಜಸ್ಸು ಪ್ರಕಾಶಿಸತೊಡಗಿತು. ಕಾಡಿನ ದುಷ್ಟ ಮೃಗಗಳು ಇದರಿಂದ ಗಾವುದ ಗಾವುದ ದೂರ ಬೆದರಿ ಓಡಿದವು. ಧ್ರುವನ ತಪೋಜ್ವಾಲೆ ಮೂರು ಲೋಕಗಳನ್ನೇ ಸುಡತೊಡಗಿತು.

ಧ್ರುವನ ಭಕ್ತಿಗೆ, ದೃಢ ಮನಸ್ಸಿಗೆ ಶ್ರೀಮನ್ನಾರಾಯಣನು ಮೆಚ್ಚಿದನು. ಶಂಖಚಕ್ರಗದಾಧಾರಿಯಾದ ಶ್ರೀಮನ್ನಾರಾಯಣನು ಪ್ರತ್ಯಕ್ಷನಾದನು. ಹಸುಳೆ ಧ್ರುವನ ತಲೆಯ ಮೇಲೆ ತನ್ನ ಅಮೃತಹಸ್ತವನ್ನಿಟ್ಟು, “ಧ್ರುವಾ! ಎದ್ದೇಳು, ನಿನ್ನನ್ನು ಮೆಚ್ಚಿರುವೆನು” ಎಂದನು. ಧ್ರುವನು ಕಣ್ಣು ಬಿಟ್ಟ. ತನ್ನ ಹೃದಯದಲ್ಲಿ ಪ್ರತಿಷ್ಠಿಸಿಕೊಂಡಿದ್ದ ಅದೇ ಮಂಗಳ ಸ್ವರೂಪಿ ತನ್ನ ಮುಂದೆ ಪ್ರತ್ಯಕ್ಷನಾಗಿರುವುದನ್ನು ಕಂಡನು. ಯಾರ ದರ್ಶನಕ್ಕಾಗಿ ಹಾತೊರೆದು, ತನ್ನ ನೆಚ್ಚಿನ ತಾಯಿ, ರಾಜ್ಯ ಅನ್ನಾಹಾರಗಳನ್ನು ಬಿಟ್ಟು ಪರಿತಪಿಸಿದನೋ ಆ ಕರುಣಾಸಾಗರನು ಹತ್ತಿರದಲ್ಲಿಯೇ ನಸುನಗುತ್ತಾ ನಿಂತಿದ್ದನು.

ಧ್ರುವನಿಗೆ ರೋಮಾಂಚನವಾಯಿತು. ಆಶ್ಚರ್ಯ ಸಂತೋಷಗಳಿಂದ ಬಾಯಿಂದ ಮಾತೇ ಹೊರಡದಂತಾಯಿತು. ಪರಮಾತ್ಮನ ಅಡಿದಾವರೆಗೆ ದಂಡಾಕಾರವಾಗ ನಮಸ್ಕರಿಸಿದ. ಎದ್ದು ಆ ದಿವ್ಯಮಂಗಳ ಮೂರ್ತಿಯನ್ನು ಕಣ್ಣಿನ ತುಂಬ ತುಂಬಿಕೊಳ್ಳುವಂತೆ ರೆಪ್ಪೆ ಹಾಕದೆ ನೋಡಿದ. ಧ್ರುವನಿಗೆ ಮಾತನಾಡಬೇಕು, ಪರಮಾತ್ಮನನ್ನು ಹೊಗಳಬೇಕು ಎಂಬ ತವಕ. ಆದರೆ ಬಾಯಿ ತೆರೆಯಲು ಸಾಧ್ಯವೇ ಆಗಲಿಲ್ಲ. ಶ್ರೀವಿಷ್ಣುವು ಪ್ರೀತಿಯಿಂದ ಅವನ ಕೆನ್ನೆಗಳನ್ನು ಸವರಿದನು. ಆ ಅಮೃತ ಸ್ಪರ್ಶದಿಂದ ಮಾತನಾಡಲು ಸಾಧ್ಯವಾಯಿತು.

ನಿನ್ನ ಭಕ್ತನಾಗಿದ್ದರೆ ಸಾಕು

ಧ್ರುವನು ಪರಮಾತ್ಮನನ್ನು ಸಂತೋಷದಿಂದ, ಕೃತಜ್ಞತೆಯಿಂದ ಹೊಗಳಿದನು. “ಪ್ರಭೂ, ನಿನ್ನ ಮಹಿಮೆ ಅಪಾರ. ಭಕ್ತಿಯಿಂದ ಬೇಡಿದುದನ್ನು ಕೊಡುವ ಕಲ್ಪವೃಕ್ಷ ನೀನು. ಸೃಷ್ಟಿಯಲ್ಲಿ ಎಲ್ಲೆಲ್ಲಿಯೂ ಇರುವೆ. ಎಂತಹ ಜ್ಞಾನಿಗೂ ನಿನ್ನನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ನನ್ನಂತಹ ಹುಡುಗನ ಪಾಡೇನು? ಆಗ ತಾನೆ ಹೆತ್ತ ಕರುವನ್ನು ಆಕಳು ಸಂರಕ್ಷಿಸುವಂತೆ ನನ್ನನ್ನು ನೀನೇ ಕಾಪಾಡಬೇಕು” ಎಂದು ಬೇಡಿದನು.

ಧ್ರುವನು ಕಾಡಿಗೆ ಬರುವಾಗ ಇದದ ಒಂದೇ ಇಚ್ಛೆಯೆಂದರೆ ಪರಮಾತ್ಮನನ್ನು ನೋಡುವುದು. ಆತನನ್ನು ಕಂಡ ಮೇಲೆ ಏನು ಕೇಳಬೇಕೆಂದೂ ತಿಳಿಯದಾದನು. ದೇವಾ! ನಿನ್ನ ದರ್ಶನ ಪಡೆಯಲೆಂದೇ ಈ ತಪಸ್ಸನ್ನಾಚರಿಸಿದೆನು. ನನಗೆ ನಿನ್ನ ದರ್ಶನವವಾದ ಮೇಲೆ ಮತ್ತೇನು ಕೇಳಲಿ? ನಾನು ಚಿಕ್ಕವನು , ನನಗೆ ನಿನ್ನನ್ನು ಹೇಗೆ ಪೂಜಿಸಿ, ಗೌರವಿಸಬೇಕೋ ತಿಳಿಯದು.  ನಾನು ನಿನ್ನಿಂದ ಏನನ್ನೂ ಬೇಡೆನು. ಬದಲು, ನಿನ್ನ ಭಕ್ತನಾಗಿರುವ ಆ ಉಚ್ಚಪದವಿಯೊಂದನ್ನು ಮಾತ್ರ ಕರುಣಿಸು” ಎಂದು ಹೇಳಿದ.

ಬಾಲಕನ ಮಾತುಗಳನ್ನು ಕೇಳಿ ಅವನನ್ನು ಆಲಂಗಿಸಿಕೊಂಡು “ಮಗೂ, ನಿನ್ನ ಆಸೆಗಳೆಲ್ಲಾ ನೆರವೇರುವುವು. ನಿನ್ನ ರಾಜ್ಯಕ್ಕೆ ಹಿಂದಕ್ಕೆ ಹೋಗಿ , ಪ್ರಾಪ್ತವಯಸ್ಸಿನಲ್ಲಿ ಪಟ್ಟವೇರಿ, ಧರ್ಮದಿಂದ ರಾಜ್ಯವಾಳು. ಪ್ರತಿಯೊಬ್ಬ ಪ್ರಜೆಯಲ್ಲೂ ನಿನ್ನ ಪ್ರತಿರೂಪವನ್ನು ಕಂಡು, ಅವರ ಆಸೆ ಅಭಿಲಾಷೆ, ಗೌರವ, ಪ್ರತಿಷ್ಠೆ, ಸುಖ, ದುಃಖಗಳಲ್ಲಿ ಭಾಗಿಯಾಗು. ಧರ್ಮದಿಂದ ರಾಜ್ಯವಾಳಿ, ಯಾರೂ ಇಂದಿನವರೆಗೆ ಗಳಿಸದ ಉಚ್ಚ ಪದವಿಯಾದ ನಕ್ಷತ್ರ ಲೋಕವನ್ನು ನೀನು ಸೇರು”  ಎಂದು ಆಶೀರ್ವದಿಸಿ, ಅಂತರ್ಧಾನನಾದನು.

ಪರಮಾತ್ಮನು ಹೊರಟುಹೋದ ಮೇಲೆ ಧ್ರುವನು ನೀರಿನಿಂದ ಹೊರಬಂದ ಮೀನಿನಂತೆ ಪರಿತಪಿಸಿದನು. ಪರಮಾತ್ಮನು ಪ್ರತ್ಯಕ್ಷನಾದಾಗ ನಾನು ಏನು ಅಪಚಾರ ಮಾಡಿದೆನೊ! ಆತನಲ್ಲಿ ಲೀನವಾಗುವ ಬಯಕೆಯನ್ನು ಬಿಟ್ಟು, ಮತ್ತೊಮ್ಮೆ ಈ ಪ್ರಾಪಂಚಿಕ ಆಗುಹೋಗುಗಳಿಗೆ ಬಲಿಯಾದೆನೆ? ಎಂದು ವಿಷಾದಪಟ್ಟನು. ನನ್ನನ್ನು ನಿನ್ನಲ್ಲಿ ಐಕ್ಯ ಮಾಡಿಕೊ ಎಂದು ಭಗವಂತನನ್ನು ಬೇಡಿಕೊಳ್ಳಬೇಕಾಗಿತ್ತು, ಹಾಗೆ ಮಾಡದೆ ಏನೋ ಬೇಡಿಕೊಂಡು ಬಂದೆನೇ! ಚಕ್ರವರ್ತಿಯ ಬಳಿ ಹೋಗಿ ಬೊಗಸೆ ಬತ್ತವನ್ನು ಬೇಡಿದ ಹಾಗೆ ಆಯಿತು ನನ್ನ ಸ್ಥಿತಿ ಎಂದು ಬೇಸರಪಟ್ಟುಕೊಂಡ. ಹಿಂದಕ್ಕೆ ಹೋಗಿ ರಾಜ್ಯವಾಳು ಎಂದು ಮಹಾವಿಷ್ಣುವೇ ಹೇಳಿದ್ದನಲ್ಲವೆ? ಈಗ ಮತ್ತೆ ಧ್ರುವನ ಮನಸ್ಸು ತಾಯಿಯ ಕಡೆಗೆ ತಿರುಗಿತು. ತನ್ನ ರಾಜ್ಯದತ್ತ ಹೆಜ್ಜೆಯಿಟ್ಟನು. ತನ್ನ ತಾಯಿಯು ತನ್ನ ಅಗಲುವಿಕೆಯಿಂದ ಅದೆಷ್ಟು ಪರಿತಪಿಸುವಳೋ ಎಂದು ಯೋಚನೆಯಾಯಿತು. ಆದರೂ ಭಗವಂತನನ್ನು ಕಂಡು ಧ್ರುವನಲ್ಲಿ ಹೊಸ ಶಕ್ತಿ, ಹೊಸ ಗೆಲವು ಮತ್ತು ಹೊಸ ತೇಜಸ್ಸು ಹೊರಹೊಮ್ಮುತ್ತಿತ್ತು.

ಮರಳಿ ಅರಮನೆಗೆ

ರಾಜ ಉತ್ತಾನಪಾದನಿಗೆ ಧ್ರುವನು ತನ್ನ ಪ್ರತಿಜ್ಞೆಯನ್ನೀಡೇರಿಸಿ, ರಾಜ್ಯಕ್ಕೆ ಮರಳುತ್ತಿರುವನೆಂದು ತಿಳಿಯಿತು. ಮನಸ್ಸಿನ ಆತಂಕ ಕಳೆಯಿತು, ತುಂಬ ಸಂತೋಷವಾಯಿತು. ರಾಜನು ತನ್ನ ಮಂತ್ರಿಗಳನ್ನೂ ರಾಜ್ಯದ ಹಿರಿಯರನ್ನೂ ಸಂಗಡ ಕರೆದುಕೊಂಡು ಮಂಗಳವಾದ್ಯಗಳೊಡನೆ ಧ್ರುವನನ್ನು ಬರಮಾಡಿಕೊಳ್ಳಲು ಹೊರಟನು. ಧ್ರುವನನ್ನು ನೋಡುತ್ತಲೆ ಉತ್ತಾನಪಾದನು ಅವನನ್ನು ಪ್ರೀತಿಯಿಂದ ಆಲಂಗಿಸಿಕೊಂಡನು. ಮಲತಾಯಿಯಾದ ಸುರುಚಿಯು ತನ್ನ ಪಾದಗಳಿಗೆ ಬಿದ್ದು ನಮಸ್ಕರಿಸಿದ ಧ್ರುವನನ್ನೆತ್ತಿ, ಆಲಿಂಗಿಸಿ, ಆನಂದಬಾಷ್ಪದೊನಡೆ ಆಶೀರ್ವದಿಸಿದಳು. ತಾಯಿ ಸುನೀತಿಯ ಸಂತೋಷಕ್ಕಂತೂ ಮಿತಿಯೇ ಇಲ್ಲ. ದುಃಖ ಸಂತೋಷ ಎರಡೂ ಬೆರೆತು ಅವಳಿಗೆ ಮಾತೇ ಹೊರಡದು. ಮಗನನ್ನು ಬಿಗಿದಪ್ಪಿದಳು. ಧ್ರುವನನ್ನು ಪಟ್ಟದಾನೆಯ ಮೇಲೆ ಕುಳ್ಳಿರಿಸಿ, ಉತ್ತಾನಪಾದನು ತನ್ನ ಪಟ್ಟಣದತ್ತ ಹೊರಟನು. ಪುರನಿವಾಸಿಗಳೆಲ್ಲಾ ಉತ್ಸಾಹದಿಂದ ಪಟ್ಟಣವನ್ನು ತಳಿರುತೋರಣಗಳಿಂದ ಅಲಂಕರಿಸಿದ್ದರು. ಅಲ್ಲಲ್ಲಿ ಪುಷ್ಪಮಾಲಿಕೆಗಳು, ಮುತ್ತಿನ ಕುಚ್ಚುಗಳು ತೂಗುತ್ತಿದ್ದವು. ಪ್ರತಿ ಮನೆಯಲ್ಲಿ ಬೆಳಗುತ್ತಿದ್ದ ಆರತಿ ದೀಪಗಳು. ಸ್ತ್ರೀಯರು ಫಲಪುಷ್ಪಗಳಿಂದ ತುಂಬಿದ ತಟ್ಟೆಗಳನ್ನು ಹಿಡಿದು ಸಾಲಾಗಿ ನಿಂತಿದ್ದರು. ಸಕಲ ಪುರಜನರಿಂದ ಸತ್ಕಾರ ಪಡೆದು, ಅವರ ಮಂಗಳಾಶೀರ್ವಾದಗಳೊಡನೆ ಧ್ರುವನು ಪಟ್ಟಣ ಸೇರಿದನು.

ಧ್ರುವ ಚಕ್ರವರ್ತಿ

ಉತ್ತಾನಪಾದನು ಧ್ರುವನಿಗೆ ಸಕಲ ವಿದ್ಯೆಯನ್ನು ಕಲಿಸಿದನು. ತನಗೆ ವಯಸ್ಸಾದಾಗ ರಾಜ್ಯಭಾರ ನಡೆಸಲು ಸರ್ವವಿದ್ಯಾಪಾರಂಗತನಾದ ಧ್ರುವನಿಗೆ ಪಟ್ಟಕಟ್ಟಲು ಏರ್ಪಾಡು ಮಾಡಿದನು. ಪ್ರಜಾಪತಿ ಶಿಂಶುಮಾರನೆಂಬ ರಾಜನ ಮಗಳಾದ ಭ್ರಮಿಯೆಂಬ ರಾಜಕುಮಾರಿಯನ್ನೂ ಮತ್ತು ವಾಯುವಿನ ಮಗಳಾದ ಇಳೆಯೆಂಬ ಮತ್ತೊಬ್ಬ ರಾಜಕುಮಾರಿಯನ್ನೂ ತಂದು ಧ್ರುವನಿಗೆ ವಿವಾಹ ಮಾಡಿದನು. ಮಗನಿಗೆ ಪಟ್ಟಾಭಿಷೇಕ ಮಾಡಿದನು. ತಾನು ತಪಸ್ಸಿಗಾಗಿ ಕಾಡಿಗೆ ಹೊರಟುಹೋದನು. ಧ್ರುವನು ಪ್ರಜೆಗಳನ್ನು ಪ್ರೀತಿಯಿಂದ ಕಾಣುತ್ತ ರಾಜ್ಯಭಾರ ಮಾಡಿದನು. ಧ್ರುವನನ್ನು ಸುರುಚಿಯ ಮಗ ಉತ್ತಮನು ಎಡಬಿಡದೆ ಪ್ರೀತಿಯಿಂದ ಅನುಸರಿಸಿದನು.

ಯಕ್ಷನಗರ ಸ್ಮಶಾನವಾಯಿತು

ಒಮ್ಮೆ ಉತ್ತಮನು ಬೇಟಗಾಗಿಹೊರಟ . ಅವನು ಅರಣ್ಯ ಸುತ್ತುತ್ತಿದ್ದಾಗ, ಬಲಾಢ್ಯನಾದ ಒಬ್ಬ ಯಕ್ಷನು ಅವನನ್ನು ಹಿಡಿದು ಕೊಂದನು. ತನ್ನ ಮಗನು ಬೇಟೆಯಿಂದ ಹಿಂದಿರುಗಲಿಲ್ಲ ಎಂದು ತಾಯಿ ಸುರುಚಿಗೆ ಯೋಚನೆಯಾಯಿತು. ಆತನನ್ನು ಹುಡುಕಲು ಕಾಡಿಗೆ ಹೋದಳು. ಯಕ್ಷನ ಯಕ್ಷಿಣೀ ಕಾಡ್ಗಿಚ್ಚಿಗೆ ಬಲಿಯಾದಳು. ತನ್ನ ನೆಚ್ಚಿನ ತಮ್ಮ ಮತ್ತು ಚಿಕ್ಕ ತಾಯಿಯರು ಯಕ್ಷನಿಂದ ಸತ್ತ ಸುದ್ದಿ ಧ್ರುವನಿಗೆ ತಿಳಿಯಿತು. ಅವನಿಗೆ ಬಹಳ ದುಃಖವಾಯಿತು, ಕೋಪ ಬಂದಿತು. ಯಕ್ಷರೊಡನೆ ಯುದ್ಧಸನ್ನದ್ಧನಾದನು.

ಧ್ರುವನು ಯಕ್ಷರ ನಿವಾಸಸ್ಥಾನವಾದ ಆಲಿಕಾಪುರಿ ಪಟ್ಟಣವನ್ನು ಮುತ್ತಿದ. ಯಕ್ಷರನ್ನು ಸದೆಬಡಿಯಲು ಪ್ರಾರಂಭಿಸಿದ. ಧ್ರುವನ ಬಾಣವರ್ಷದಿಂದ ಯಕ್ಷನು ತರಗೆಲೆಗಳಂತೆ ಉರುಳಿದರು. ಯಕ್ಷರು ಮಾಯಾವಿದ್ಯೆಯನ್ನು ಬಳಸಿದರು. ಕತ್ತಲು ಕವಿಯಿತು. ಪ್ರಚಂಡ ಬಿರುಗಾಳಿ ಎದ್ದಿತು. ಹಾವುಗಳು, ಸಿಂಹಗಳು ಅಟ್ಟಿಸಿಕೊಂಡು ಬಂದವು. ಧ್ರುವನಿಗೆ ಕೋಪ ಬಂದಿತು. ತನ್ನ ಬತ್ತಳಿಕೆಯಿಂದ ನಾರಾಯಣಾಸ್ತ್ರವನ್ನು ತೆಗೆದು ಪ್ರಯೋಗಿಸಿದ. ಯಕ್ಷರು, ಯಕ್ಷಪತ್ನಿಯರು, ಮಕ್ಕಳು ಹತರಾಗಿ ಅಲಕಾಪುರಿಯು ಸ್ಮಶಾನದಂತಾಯಿತು.

ಶ್ರೀಮನ್ನಾರಾಯಣನ ರೂಪ ಹೃದಯದಲ್ಲಿ ನಿಲ್ಲಲಿ

ಧ್ರುವನು ಮನುವಂಶಕ್ಕೆ ಸೇರಿದವನು. ಧ್ರುವನ ಅಜ್ಜನಾದ ಸ್ವಾಯಂಭುವ ಮನುವು ಯಕ್ಷರು ಅನಾವಶ್ಯಕವಾಗಿ ಹತರಾಗುತ್ತಿರುವುದನ್ನು ಕಂಡ. ಅವನಿಗೆ ಮನಸ್ಸು ಕರಗಿತು. ಅನೇಕ ಮಹರ್ಷಿಗಳೊಡಗೂಡಿ ಬಂದು, ಧ್ರುವನಿಗೆ ತತ್ವೋಪದೇಶ ಮಾಡಿದನು. ತನ್ನ ಅಜ್ಜನಿಗೆ ಪ್ರಣಾಮ ಮಾಡಿದ ಧ್ರುವನನ್ನು ಕುರಿತು,  ಸ್ವಾಯಂಭುವ ಮನುವು “ಧ್ರುವಾ, ಯಾರೋ ಮಾಡಿದ ಒಂದು ತಪ್ಪಿಗಾಗಿ ನೀನು ನಿರಪರಾಧಿಗಳನ್ನು ಸಂಹರಿಸುತ್ತಿದ್ದೀ. ಈ ಕೋಪವನ್ನು ಬಿಡು. ಕೋಪವೇ ಎಲ್ಲಾ ಕಷ್ಟಗಳಿಗೂ ಕಾರಣ. ಅಜ್ಞಾನದಿಂದ ಕೋಪ ಉಂಟಾಗುತ್ತದೆ. ನೀನು ಜ್ಞಾನಿಯಾಗಿಯೂ ಈ ಮಹಾಪಾಪಕ್ಕೆ ಹೇಗೆ ಕೈ ಹಾಕಿದೆ? ಭಗವಂತನಲ್ಲಿ ಭಕ್ತಿಯಿರುವವನು ಎಂದೂ ಕೋಪದಿಂದ ದುಡುಕುವುದಿಲ್ಲ. ಶ್ರೀಮನ್ನಾರಾಯಣನ ದರ್ಶನ ಪಡೆದು ಪವಿತ್ರನಾದ ನೀನು ಇಂತಹ ಕ್ರೂರ ಕೆಲಸಕ್ಕೆ ಕೈಹಾಕಬಾರದು. ಅಪರಾಧಗಳನ್ನು ಮಾಡಿದವರಲ್ಲಿ ತಾಳ್ಮೆ ವಹಿಸಬೇಕಾದುದು ನಿನ್ನ ಕರ್ತವ್ಯ. ಅಪರಾಧಿಗಳಲ್ಲಿ ತಾಳ್ಮೆ,, ದುಃಖಿತರಲ್ಲಿ ದಯೆ, ಸಮಸ್ತ ಜಂತುಗಳಲ್ಲಿ ಸ್ನೇಹಬುದ್ಧಿ ಇರಬೇಕು. ಎಲ್ಲ  ಜೀವಿಗಳಲ್ಲಿಯೂ ಪರಮಾತ್ಮನಿದ್ದಾನೆ ಎಂದು ನಿನಗೆ ತಿಳಿಯದೆ? ಇಂದು ನೀನು ಯಕ್ಷರನ್ನು ಸಂಹರಿಸಿ, ಕುಬೇರನ ಪರಿವಾರದವರು. ಆತನ ಬಳಿಗೆ ನೀನು ಹೋಗಿ ವಿನಯದಿಮದ ಆತನನ್ನು ಪ್ರಸನ್ನನಾಗಿ ಮಾಡಿಕೊ’’ ಎಂದು ಹೇಳಿದನು.

ಅಜ್ಜ ಸ್ವಾಯಂಭುವ ಮನುವಿನ ಹಿತೋಪದೇಶವನ್ನು ಕೇಳಿ ಧ್ರುವನ ಕೋಪ ಅಡಗಿತು. ಅವನು ಯುದ್ಧವನ್ನು ನಿಲ್ಲಿಸಿದನು. ಈ ವಾರ್ತೆಯನ್ನು ಕೇಳಿದ ಕುಬೇರನು ತುಂಬ ಸಂತೋಷಪಟ್ಟನು. ತಾನೇ ತನ್ನ ಪರಿವಾರ ಸಮೇತವಾಗಿ ಧ್ರುವನನ್ನು ಕಾಣಲು ಹೊರಟುಬಂದನು. ಕುಬೇರನನ್ನು ಕಂಡ ಧ್ರುವನು  ಆತನಿಗೆರ ನಮಸ್ಕಾರ ಮಾಡಿ ಆಶೀರ್ವಾದ ಬೇಡಿದನು. ಧ್ರುವನ ಸಜ್ಜನಿಕೆಯಿಂದ ಸುಪ್ರೀತನಾದ ಕುಬೇರನು, “ಧ್ರುವಕುಮಾರ, ನಿನ್ನ ಗುಣಕ್ಕಾಗಿ ನಾನು ಸಂತೋಷಪಟ್ಟೆನು. ಯಕ್ಷರನ್ನು ಕೊಂದುದಕ್ಕಾಗಿ ನಿನ್ನಲ್ಲಿ ನಾನು ಸ್ವಲ್ಪ ಮಾತ್ರವೂ ಕೋಪಗೊಂಡಿಲ್ಲ. ನಿನ್ನ ಅಜ್ಜ ಸ್ವಾಯಂಭುವ ಮನುವಿನ ಮಾತು ಮೀರದೆ, ಕೋಪವನ್ನು ನಿಗ್ರಹಿಸಿ ಯುದ್ಧ ನಿಲ್ಲಿಸಿದೆ, ಆದ್ದರಿಂದ ನನಗೆ ಸಂತೋಷವಾಗಿದೆ. ಸೃಷ್ಟಿಯಲ್ಲಿ ಹುಟ್ಟಿದ್ದೆಲ್ಲ ಒಂದಲ್ಲ ಒಂದು ದಿನ ಸಾಯಬೇಕು. ಆದುದರಿಂದ ನಿನ್ನ ತಮ್ಮನೂ ಚಿಕ್ಕಮ್ಮನೂ ಸತ್ತರೆಂದು ದುಃಖಪಡಬೇಡ, ಕೋಪಮಾಡಿಕೊಳ್ಳಬೇಡ. ರಾಜಕುಮಾರ, ನಿನಗೆ ಬೇಕಾದ ವರಗಳನ್ನು ಕೇಳು. ಸಂತೋಷದಿಂದ ಕೊಡುತ್ತೇನೆ” ಎಂದನು.

ಆದರೆ ಧ್ರುವನಿಗೆ ಈಗ ಏನೂ ಬೇಕಿರಲಿಲ್ಲ. ಬಾಲ್ಯದಲ್ಲಿಯೇ ಶ್ರೀಮನ್ನಾರಾಯಣನನ್ನು ಭಕ್ತಿಯಿಂದ ಅರ್ಚಿಸಿ, ಒಲಿಸಿಕೊಂಡವನಿಗೆ ಈ ವಯಸ್ಸಿನಲ್ಲಿ ಯಾವ ಆಸೆ? ಧ್ರುವನು ಕುಬೇರನ ಮಾತನ್ನು ಕೇಳಿ ನಮ್ರವಾಗಿ “ಪ್ರಭೂ! ನನಗೆ ಯಾವ ಸುಖವೂ ಈಗ ಬೇಡ. ಶ್ರೀಮನ್ನಾರಾಯಣನ ಮಂಗಳವಾದ ರೂಪವು ನನ್ನ ಹೃದಯದಲ್ಲಿ ಸ್ಥಿರವಾಗಿ ನಿಲ್ಲುವಂತೆ ವರ ಕರುಣಿಸು ಎಂದು ನಮಸ್ಕರಿಸಿದನು. ಅವನ ದೈವಭಕ್ತಿಯನ್ನು ಕಂಡು ಕುಬೇರನಿಗೆ ಸಂತೋಷವಾಯಿತು. ತಥಾಸ್ತು ಎಂದು ವರವಿತ್ತು ಅಂತರ್ಧಾನನಾದನು.

ಧ್ರುವ ನಕ್ಷತ್ರ

ಧ್ರುವನು ತನ್ನ ಪಟ್ಟಣಕ್ಕೆ ಬಂದು ದಾನಧರ್ಮ, ದೇವರ ಧ್ಯಾನಗಳನ್ನು ಮಾಡುತ್ತಾ, ರಾಜ್ಯಭಾರ ಮಾಡಿದನು. ಪ್ರಜೆಗಳ ಸುಖವೇ ತನ್ನ ಸುಖ ಎಂದು ಭಾವಿಸಿ ಧರ್ಮದಿಂದ ರಾಜ್ಯವನ್ನಾಳುತ್ತಿದ್ದನು. ಭಗವಂತನ ಮಂಗಳ ರೂಪವನ್ನು ಕಣ್ಣಿನಲ್ಲಿಯೂ ಹೃದಯದಲ್ಲಿಯೂ ನೆಲೆಗೊಳಿಸಿ, ತನ್ನ ಕೆಲಸಗಳೆಲ್ಲ ಭಗವಂತನಿಗೆ ನೈವೇದ್ಯ ಎಂಬ ಭಾವನೆಯಿಂದ ರಾಜ್ಯಭಾರ ನಡೆಸಿದನು.

ಧ್ರುವನಿಗೆ ಮುಪ್ಪು ಬಂದಿತು. ತನ್ನ ರಾಜ್ಯದ ಸಕಲ ವ್ಯವಹಾರಗಳನ್ನು ತನ್ನ ಮಗನಿಗೊಪ್ಪಿಸಿದನು. ಬದರಿಕಾಶ್ರಮಕ್ಕೆ ಹೋಗಿ ಭಗವಂತನ ಧ್ಯಾನದಲ್ಲಿ ಮೈಮರೆತನು. ಕಡೆಗೊಂದು ದಿನ ಈ ಲೋಕವನ್ನು ಬಿಟ್ಟನು.

ಶ್ರೀಮನ್ನಾರಾಯಣನು ಧ್ರುವನು ಬಾಲಕನಾಗಿದ್ದಾಗ ಕೊಟ್ಟ ವರದಂತೆ, ಧ್ರುವನು ನಕ್ಷತ್ರ ಮಂಡಲಕ್ಕೆಲ್ಲಾ ಮಕುಟಮಣಿ ಎನಿಸಿಕೊಂಡು ಧ್ರುವಲೋಕದ ಅಧಿಪತಿಯಾದನು. ಧ್ರುವ ನಕ್ಷತ್ರವನ್ನು ಕಂಡಾಗಲೆಲ್ಲ ಇಂದೂ ನಿರ್ಮಲ ಮನಸ್ಸಿನ ಭಕ್ತ ಧ್ರುವನನ್ನು ಭಾರತೀಯರು ಸ್ಮರಿಸುತ್ತಾರೆ. ಅವನ ಕೀರ್ತಿಗೆ ಕೊನೆ ಇಲ್ಲ.