ನಾವು ಮಾತನ್ನು ಕೇಳಲು ನೆರವಾಗುವ ಕಿವಿಗಳಿವೆ. ಆದರೆ ಮಾತನ್ನು ವಿಶ್ಲೇಷಿಸಲು, ಅದರ ಧ್ವನಿರೂಪದ ರಚನೆಯನ್ನು ಸೂಕ್ಷ್ಮವಾಗಿ ತಿಳಿಯಲು ಕಿವಿಯ ರಚನೆ ತಿಳಿದರಷ್ಟೇ ಸಾಲದು. ಇದಕ್ಕಾಗಿ ಯಂತ್ರಗಳನ್ನು ರೂಪಿಸ ಲಾಗಿದೆ. ಈ ಯಂತ್ರಗಳು ಧ್ವನಿಯ ರಚನೆಯನ್ನು ಅರಿಯಲು ಹಲವು ನೆಲೆಗಳಲ್ಲಿ ನೆರವಾಗುತ್ತವೆ. ಧ್ವನಿಪ್ರಸರಣ, ಶ್ರವಣ, ಇವಲ್ಲದೆ ಧ್ವನಿಯ ಉತ್ಪಾದನೆಯ ಸ್ವರೂಪವನ್ನು ತಿಳಿಯಲು ನೆರವಾಗುವ ಯಂತ್ರಗಳಿವೆ. ಧ್ವನಿರಚನೆಯನ್ನು ಅಭ್ಯಸಿಸಲು ನೆರವಾಗುವ ಯಂತ್ರಗಳನ್ನುಳ್ಳ ಪ್ರಯೋಗ ಶಾಲೆಗಳಲ್ಲಿ ಧ್ವನಿಮುದ್ರಣಕ್ಕೆ, ಧ್ವನಿಯ ಭೌತಿಕ ಸ್ವರೂಪವನ್ನು ಅರಿಯುವು ದಕ್ಕೆ, ಧ್ವನ್ಯಂಗಗಳ  ರಚನೆಯನ್ನು ತಿಳಿಯುವುದಕ್ಕೆ, ಶ್ರವಣಾಂಗಗಳ ರಚನೆ ಮತ್ತು ಕಾರ್ಯ ವಿಧಾನವನ್ನು ಅಭ್ಯಾಸಮಾಡುವುದಕ್ಕೆ ನೆರವು ದೊರೆಯುತ್ತದೆ.

ಧ್ವನಿ ವಿಶ್ಲೇಷಣೆಗೆ ಅವಶ್ಯವಾಗಿರುವ ಮಾತಿನ ಮಾದರಿಗಳನ್ನು ಧ್ವನಿ ಮುದ್ರಿಸಿಕೊಳ್ಳುವುದು ಅವಶ್ಯ. ಮತ್ತೆ ಮತ್ತೆ ಈ ಧ್ವನಿಮುದ್ರಿತ ಮಾತನ್ನು ವಿಶ್ಲೇಷಣೆಗೆ ಬಳಸಬೇಕಾಗುತ್ತದೆ. ಆದ್ದರಿಂದ ಅಂಥ ಮುದ್ರಣಗಳು ಹೆಚ್ಚು ಕಾಲ ಹಾಳಾಗದಂತೆ ಉಳಿಯುವುದು ಅವಶ್ಯ. ದೀರ್ಘಾವಧಿಯ ಮಾತಿನ ಸಂಗ್ರಹವನ್ನು ಉಳಿಸಿಕೊಳ್ಳಬಲ್ಲ ಪಟ್ಟಿಕೆಗಳನ್ನು ಇದಕ್ಕೆ ಬಳಸುತ್ತಾರೆ. ಈ ಪಟ್ಟಿಕೆಗಳಿಂದ, ಸುರುಳಿಗಳಿಂದ ಮತ್ತೆ ಧ್ವನಿರೂಪವನ್ನು ಪುನರುತ್ಪಾದಿಸುವ ಅವಕಾಶಗಳಿರುತ್ತವೆ. ಬೇಕೆಂದರೆ ಧ್ವನಿಯನ್ನು ಕಣ್ಣಿಗೆ ಕಾಣುವ ಅಲೆಗಳ ರೂಪದಲ್ಲೂ ಮರಳಿ ಪಡೆಯಲು ಅನುಕೂಲವಿರುವ ಯಂತ್ರಗಳಿವೆ. ಹೀಗೆ ಯಂತ್ರದ ಪರದೆಯ ಮೆಲೆ ಕಾಣುವ ಧ್ವನಿತರಂಗಗಳನ್ನು ಛಾಯಾಗ್ರಹಣ ಮಾಡುವುದೂ ಸಾಧ್ಯ, ಈಗ ಗಣಕಗಳ ನೆರವಿನಿಂದ ಈ ಧ್ವನಿ ತರಂಗಗಳನ್ನು ಗಣಕದ ತೆರೆಯಮೇಲೆ ಮೂಡಿಸಿ ಬೇಕೆನಿಸಿದರೆ ಕಾಗದದ ಮೇಲೆ ಮುದ್ರಿಸಲು ಅವಕಾಶಗಳಿವೆ.

ವಿಶ್ಲೇಷಣೆಗೆ ಯೋಗ್ಯವಾಗುವ ಧ್ವನಿ ಮಾದರಿಗಳು ಹೆಚ್ಚು ದೃಢವಾಗಿರ ಬೇಕು. ಕೇಳಿಸಿಕೊಳ್ಳಲು ತ್ರಾಸದಾಯಕವಾಗುವ ಧ್ವನಿಯಿಂದ ಪ್ರಯೋಜನ ಕಡಿಮೆ. ಅಲ್ಲದೆ ಧ್ವನಿಮುದ್ರಣದ ವೇಳೆಯಲ್ಲಿ ಅನ್ಯ ಮೂಲಗಳಿಂದ ಬರುವ ಅನವಶ್ಯಕ ಧ್ವನಿಗಳನ್ನು ಮುದ್ರಿಸಿಕೊಂಡುಬಿಟ್ಟರೆ ಅನಂತರ ವಿಶ್ಲೇಷಣೆಯ ಸಂದರ್ಭದಲ್ಲಿ ಎಡರುಗಳನ್ನು ಎದುರಿಸಬೇಕಾಗುವುದು. ಆದ್ದರಿಂದ ಧ್ವನಿ ಮುದ್ರಣ ಮಾಡುವ ಕೊಠಡಿಯಲ್ಲಿ ಬೇರೆ ಧ್ವನಿಗಳು ಬರಬಾರದು; ಧ್ವನಿಗಳು ಪ್ರತಿಫಲನಗೊಳ್ಳದಂತಿರಬೇಕು. ಪ್ರತಿಧ್ವನಿ ಬರಬಾರದೆಂದಿದ್ದರೆ ಧ್ವನಿಯನ್ನು ಪ್ರತಿಫಲಿಸದೆ ಹೀರಿಕೊಳ್ಳುವ ಗೋಡೆಗಳು ಆ ಕೊಠಡಿಯಲ್ಲಿರ ಬೇಕು. ಆಗ ಮುದ್ರಿತ ಧ್ವನಿ ಶುದ್ಧವಾಗಿರುತ್ತದೆ. ಅದಕ್ಕಾಗಿಯೇ ಸಜ್ಜುಗೊಂಡ ಕೊಠಡಿಗಳೇ ಇರುತ್ತವೆ.

ಧ್ವನಿಮುದ್ರಿತ ರೂಪವನ್ನು ಕಣ್ಣಿಗೆ ಕಾಣುವ ತರಂಗ ಚಿತ್ರಗಳನ್ನಾಗಿ  ಮೂಡಿಸುವ ಯಂತ್ರ ಆಸಿಲೋಸ್ಕೋಪ್. ಇದು ಧ್ವನಿ ಅಲೆಗಳ ಕಂಪನವಿಸ್ತಾರ ಮತ್ತು ತರಂಗಾಂತರಗಳನ್ನು ಚಿತ್ರದಂತೆ ತೋರಿಸುವುದು. ನಿರಂತರವಾಗಿ ಸರಿಯುವ ಅಲೆಗಳಂತೆ ಭಾಸವಾಗುವ ಈ ಚಿತ್ರಗಳು ಯಂತ್ರ ಪರದೆಯ ಮೇಲೆ ಮೂಡುತ್ತವೆ. ಹೆಚ್ಚು ಕಾಲಾವಧಿಯ ಧ್ವನಿತರಂಗಗಳನ್ನು ಮೂಡಿಸಿ ತೋರಿಸುವ ಯಂತ್ರಗಳೂ ಇವೆ.

ಈ ಧ್ವನಿ ತರಂಗಗಳ ಚಿತ್ರಿಕೆಗಳನ್ನು ಮುದ್ರಿಸುವ ಹಲವು ಮಾದರಿಗಳು ಈಗ ಲಭ್ಯ. ನಿರ್ದಿಷ್ಟ ವೇಗದಲ್ಲಿ ಕಾಗದದ ಮೇಲೆ ಲೇಖನಿಗಳು ಧ್ವನಿಯ ಏರಿಳಿತಗಳನ್ನು ಮೂಡಿಸುತ್ತವೆ. ಇದು ಒಂದು ವಿಧಾನವಾದರೆ ಉಷ್ಣತೆಯ ಏರಿಳಿತಗಳನ್ನು ಬಳಸುವ ಮುದ್ರಣ ವಿಧಾನಗಳೂ ಇವೆ. ಗಣಕಗಳು ಈ ಧ್ವನಿತರಂಗಗಳನ್ನು ಕ್ಷಣಮಾತ್ರದಲ್ಲಿ ವಿಶ್ಲೇಷಿಸಿ ನಮಗೆ ಬೇಕಾದ ಮಾಹಿತಿ ಯನ್ನಾಗಿ ಪರಿವರ್ತಿಸಬಲ್ಲವು.

ಧ್ವನ್ಯಂಗಗಳ ರಚನೆ ಮತ್ತು ಕಾರ್ಯವಿಧಾನಗಳ ಅಧ್ಯಯನ ಇನ್ನೊಂದು ಮಹತ್ವದ ಕ್ಷೇತ್ರವಾಗಿದೆ. ಗಲ, ಕಿರುನಾಲಗೆ, ನಾಲಗೆ, ತುಟಿಗಳು ಮತ್ತಿತರ ಅಂಗಗಳು ಧ್ವನಿಯ ಉತ್ಪಾದನೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ, ಬಿಡಿ ಧ್ವನಿಗಳ ಉತ್ಪಾದನೆಯಲ್ಲಿ ಮತ್ತು ಒಂದೇ ಸಮನೆ ಮಾಡುವ ಉಚ್ಚಾರಣೆ ಗಳಲ್ಲಿ (ಅಂದರೆ ಧ್ವನಿಗಳು ಒಂದಾದಮೇಲೊಂದರಂತೆ ಸತತವಾಗಿ ಉಂಟಾಗು ವುದು) ಈ ಅಂಗಗಳ ಪಾತ್ರವೇನು? ಎಂಬ ಸಂಗತಿಗಳನ್ನು ತಿಳಿಯಲು ನೆರವಾಗುವ ಯಂತ್ರಗಳಿವೆ; ಅಧ್ಯಯನ ವಿಧಾನಗಳಿವೆ. ಗಾಳಿಯ ಪ್ರವಾಹದ ಒತ್ತಡ, ಗಾತ್ರ ಮತ್ತು ಪ್ರವಹಣ ವಿಧಾನಗಳನ್ನು ಗುರುತಿಸುವುದು; ಧ್ವನ್ಯಂಗ ಗಳ ಸ್ನಾಯುಗಳು ಮತ್ತು ನರಮಂಡಲದ ನರಗಳು ಧ್ವನಿಯ ಉತ್ಪಾದನೆಯ ಸಂದರ್ಭದಲ್ಲಿ ಕಾರ್ಯ ಪ್ರವೃತ್ತವಾಗುವುದನ್ನು ತಿಳಿಯುವುದು ಇವೆಲ್ಲವೂ ಈ ಅಧ್ಯಯನದಲ್ಲಿ ಸೇರುತ್ತದೆ.

ಧ್ವನ್ಯಂಗಗಳ ಮೂಲಕ ಹರಿಯುವ ಗಾಳಿಯ ಪ್ರವಾಹದಲ್ಲಿ ಕಂಪನಗಳನ್ನು ಉಂಟು ಮಾಡುವುದರಿಂದಲೇ ಧ್ವನಿಯು ಶ್ರಾವ್ಯ ರೂಪದಲ್ಲಿ ಉತ್ಪಾದನೆ ಯಾಗುವುದೆಂದು ತಿಳಿದಿದ್ದೇವೆ. ಉಚ್ಚಾರಣೆ ಮಾಡುವಾಗಲೇ ಯಥಾಪ್ರಕಾರ ಉಸಿರಾಟವೂ ನಡೆಯಬೇಕಷ್ಟೆ. ಮಾತಾಡುವಾಗ ಈ ಉಸಿರಾಟ ಸಹಜ ವಾಗಿರುವಂತೆ ಮಾಡುವ ಉಸಿರಾಟದ ತಂತ್ರವನ್ನು ಹಾಗೂ ಗಾಳಿಯ ಪ್ರವಾಹ ಧ್ವನ್ಯಂಗಗಳ ಮೂಲಕ ಹಾದುಹೋಗುವಾಗ ಏನೆಲ್ಲ ಪರಿವರ್ತನೆಗಳು ನಡೆಯುತ್ತವೆಂಬುದನ್ನು ಅಧ್ಯಯನ ಮಾಡುವ ಕ್ಷೇತ್ರವನ್ನು ‘ಏರೋಮೆಟ್ರಿ’ ಎನ್ನುತ್ತಾರೆ.

ಉಚ್ಚಾರಣೆ ಮಾಡುವಾಗ ಗಾಳಿಯ ಪ್ರವಾಹದ ಪ್ರಮಾಣವೆಷ್ಟಿರುತ್ತದೆ ಮತ್ತು ಅದರಲ್ಲಿ ಏರಿಳಿತಗಳೆಷ್ಟಿರುತ್ತವೆ ಎಂಬುದನ್ನು ತಿಳಿಯಲು ನೆರವಾಗುವ ಯಂತ್ರವೊಂದಿದೆ. ಮುಖದ ಮೇಲೆ ಮುಖವಾಡದಂತೆ ಆವರಿಸುವ ಈ ಯಂತ್ರದ ಒಂದು ಭಾಗವಿದೆ. ಉಚ್ಚಾರಣೆ ಮಾಡುವಾಗ ಹೊರಬರುವ ಗಾಳಿಯ ಪ್ರಮಾಣ ಮತ್ತು ಅದರಲ್ಲಾಗುವ ವ್ಯತ್ಯಾಸಗಳನ್ನು ಈ ಯಂತ್ರದಿಂದ ದಾಖಲಿಸಬಹುದು. ಹೀಗೆ ಲಭಿಸಿದ ಮಾಹಿತಿಯನ್ನೂ ಆಧರಿಸಿ ನಕ್ಷೆಗಳನ್ನು ರೂಪಿಸಲು ಸಾಧ್ಯ. ಒಂದು ಇಂಗ್ಲಿಷ್ ಪದವನ್ನು ಉಚ್ಚರಿಸಿದಾಗ ಹೊರಬಂದ ಗಾಳಿಯ ಪ್ರಮಾಣ, ಆ ಪದದ ಬೇರೆ ಬೇರೆ ಧ್ವನಿಗಳ ಸಂದರ್ಭದಲ್ಲಿ ವ್ಯತ್ಯಾಸ ವಾಗುವ ರೀತಿಯನ್ನು ಈ ಕೆಳಗಿನ ನಕ್ಷೆಗಳು ತೋರಿಸುತ್ತವೆ. ಲಂಬಾಕ್ಷದಲ್ಲಿ ಗಾಳಿಯ ಪ್ರಮಾಣವನ್ನು ನಿಮಿಷಕ್ಕೆ ಇಂತಿಷ್ಟು ಲೀಟರುಗಳು ಎಂದು ಸೂಚಿಸಿದೆ. ಸಮತಲಾಕ್ಷದಲ್ಲಿ ಧ್ವನಿಗಳಿವೆ. ಎರಡು ನಕ್ಷೆಗಳಿದ್ದು ಮೊದಲನೆ ಯದು ನಾಸಾಕುಹರದಿಂದ ಬಂದ ಗಾಳಿಯ ಪ್ರಮಾಣವನ್ನು ದಾಖಲಿಸುತ್ತದೆ. ಎರಡನೆಯದರಲ್ಲಿ ಆಸ್ಯಕುಹರದಿಂದ ಬಂದ ಗಾಳಿಯ ಪ್ರಮಾಣ ದಾಖಲಾಗಿದೆ.

‘s’ ಉಚ್ಚರಿಸುವಾಗ ನಾಸಾ ಕುಹರದಿಂದ ಗಾಳಿ ಹೊರಬರುತ್ತಿಲ್ಲ. ‘m’ ಅನುನಾಸಿಕ ಧ್ವನಿ. ಅದನ್ನು ಉಚ್ಚರಿಸುವಾಗ ನಾಸಾಕುಹರದಿಂದ ಗಾಳಿ ಹೊರಬರುತ್ತಿದೆ. ಆದರೆ ಆ ಧ್ವನಿಯ ಉಚ್ಚಾರಣೆ ಮುಗಿತಾಯದಲ್ಲಿ ಆಸ್ಯಕುಹರದಿಂದ ಬರುವ ಗಾಳಿ ನಿಂತಿದೆ. ಇದೊಂದು ಓಷ್ಠ್ಯ ಧ್ವನಿ. ತುಟಿ ಗಳೆರಡನ್ನು ಮುಚ್ಚುವ ಮೂಲಕ ಆ ಧ್ವನಿ ಉಂಟಾಗುತ್ತದೆಯಾಗಿ ಆಗ ಬಾಯಿ ಯಿಂದ ಗಾಳಿ ಇಲ್ಲ.

ಧ್ವನಿಗಳು ಉಚ್ಚಾರಣೆಯಾಗುವುದನ್ನು ನಾವು ಕೇಳುತ್ತೇವೆ. ಆದರೆ ನಮಗೆ ಕೇಳದಂತೆಯೂ ಧ್ವನಿಗಳು ಉಚ್ಚಾರಣೆಯಾಗಬಹುದು. ಅಂದರೆ ಧ್ವನ್ಯಂಗಗಳ ಚಲನವಲನ, ಸ್ನಾಯು ಮತ್ತು ನರಮಂಡಲಗಳು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಧ್ವನಿಗಳು ಉಚ್ಚಾರವಾದರೂ ಗಾಳಿಯ ಪ್ರವಾಹದ ನಿಯಂತ್ರಣವಿಲ್ಲದೆ ನಮಗೆ ಅಂದರೆ ಅನ್ಯರಿಗೆ ಧ್ವನಿ ಕೇಳಿಸದೇ ಹೋಗಬಹುದು. ಸ್ನಾಯುಗಳ ಚಲನ ವಲನದ ಸಂದರ್ಭದಲ್ಲಿ ಉಂಟಾಗುವ ವಿದ್ಯುತ್ ಕಂಪನಗಳನ್ನು ಸೂಕ್ತ ರೀತಿಯಲ್ಲಿ ಗ್ರಹಿಸುವುದು ಸಾಧ್ಯ. ಈ ವಿದ್ಯುತ್ ಕಂಪನಗಳನ್ನು ಧ್ವನಿ ತರಂಗಗಳನ್ನಾಗಿ ಪರಿವರ್ತಿಸಿ ವೃದ್ದಿಗೊಳಿಸಿದರೆ ನಮಗೆ ಧ್ವನಿ ಕೇಳಿಸುತ್ತದೆ. ಕೆಲವು ಬಗೆಯ ಉಚ್ಚಾರಣಾ ದೋಷಗಳಿರುವವರ ಮಾತುಗಳನ್ನು ಕೇಳಿಸಲು ಇಂಥ ಯಂತ್ರಗಳು ಬಳಕೆಯಾಗುತ್ತವೆ.

ಧ್ವನ್ಯಂಗಗಳು

ನಾಲಿಗೆಯ ಚಲನೆಯನ್ನು ನಾವು ಗಮನಿಸಬಹುದು. ಕನ್ನಡಿಯಲ್ಲಿ ನೋಡಲೂ ಸಾಧ್ಯ. ಆದರೆ ಒಂದೇ ಸಮನೆ ಮಾತಾಡುವಾಗ ನಾಲಗೆ ಹೇಗೆ ಚಲಿಸುವುದು ಹಾಗೂ ಆ ಚಲನೆಯ ನಿಯಂತ್ರಣ ವಿಧಾನಗಳು ಯಾವುವು ಎಂಬುದನ್ನು ಗುರುತಿಸುವುದು ಬಹಳ ಕಷ್ಟ.

ಕೆಲವು ಬಗೆಯ ಶಸ್ತ್ರಚಿಕಿತ್ಸೆಗಳಲ್ಲಿ ವ್ಯಕ್ತಿಯ ಮುಖದ ಒಂದು ಪಾರ್ಶ್ವವನ್ನು ಪೂರ್ಣವಾಗಿ ತೆಗೆದು ಹಾಕಬೇಕಾಗುತ್ತದೆ. ಇಂಥವರು ಮಾತನಾಡುವಾಗ ಅವರ ನಾಲಗೆಯ ಚಲನೆಯನ್ನು ನೇರವಾಗಿ ಛಾಯಾಗ್ರಹಣ ಮಾಡಲು ಹಲವು ಪ್ರಯತ್ನಗಳು ನಡೆದಿವೆ. ಇಂಥ ದಾಖಲೆಗಳ ಪ್ರಯೋಜನ ಕಡಿಮೆ. ಏಕೆಂದರೆ ಹೀಗೆ ಶಸ್ತ್ರಚಿಕಿತ್ಸೆಗೊಳಗಾದ ವ್ಯಕ್ತಿಯ ಮಾತುಗಳು ಉಚ್ಚಾರಣಾ ವಿಧಾನಗಳು ಸಹಜವಾಗಿರುವುದಿಲ್ಲ.

ಇನ್ನೊಂದು ವಿಧಾನದಲ್ಲಿ ಬಾಯೊಳಗೆ ಒಂದು ಅತಿ ಸಣ್ಣ ಕ್ಯಾಮೆರಾವನ್ನು ಇರಿಸಲಾಗುವುದು. ಬೆಳಕಿನ ಏರಿಳಿತಗಳಿಗಾಗಿ ಒಂದು ಬಲ್ಬನ್ನು ಅಳವಡಿಸಿ ರುತ್ತಾರೆ. ಗಾಳಿಯ ಪ್ರವಾಹವನ್ನು ಅಳೆಯುವ ಯಂತ್ರವೂ ಇರುತ್ತದೆ. ಈ ಯಂತ್ರ ಸಮುಚ್ಚಯ ಅತಿ ಕಿರಿದೇ ಆಗಿದ್ದರೂ ಸಹಜ ಚಲನವಲನಗಳಿಗೆ ಅಡಚಣೆಯನ್ನುಂಟುಮಾಡುವುದು. ಆದ್ದರಿಂದ ಈ ವಿಧಾನ ಕೂಡ ಉತ್ತಮ ವಾದುದಲ್ಲ.

ನಿರ್ದಿಷ್ಟ ಧ್ವನಿಗಳನ್ನು ಉಚ್ಚರಿಸುವಾಗ ನಾಲಿಗೆಯ ಸ್ಥಾನವನ್ನು ತೋರಿಸುವ ತ್ರಿಗಾತ್ರ ಅಚ್ಚುಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ಎಂಬ ವಸ್ತುವನ್ನು ಬಳಸಿ ಪಡೆಯಬಹುದು. ಇದೊಂದು ಗೋಜಲಿನ ವಿಧಾನ. ಕೇವಲ ಒಂದೊಂದು ಬಿಡಿ ಬಿಡಿ ಧ್ವನಿಗೂ ಬೇರೆ ಬೇರೆ ಅಚ್ಚುಗಳು ಸಿಗುತ್ತವೆ. ಧ್ವನಿಸರಣಿಗಳಿಗೆ ಅಚ್ಚು ಸಾಧ್ಯವಿಲ್ಲ. ಅಲ್ಲದೆ ಈ ಸಾಮಗ್ರಿಯು ಉಚ್ಚಾರಣೆಯ ಸಂದರ್ಭದಲ್ಲಿ ಬಾಯೊಳಗೆ ಇರುವುದರಿಂದ ಅದರ ಒತ್ತಡ ಮತ್ತು ಭಾರಗಳು ಧ್ವನಿಯ ಉಚ್ಚಾರಣೆಯನ್ನು ಪ್ರಭಾವಿಸುತ್ತವೆ. ಧ್ವನಿಯ ನಿಜವಾದ ಸ್ವರೂಪ ನಮಗೆ ಸಿಗುವುದಿಲ್ಲ.

ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಬದಲು ತಗಡಿನ ಅತಿ ತೆಳುವಾದ ಹಾಳೆ ಗಳನ್ನು ಬಾಯೊಳಗೆ ಇರಿಸಿ ನಾಲಿಗೆಯ ಚಲನೆಯನ್ನು ದಾಖಲಿಸುವ ಯತ್ನಗಳೂ ನಡೆದಿವೆ. ಈ ಹಾಳೆಯೊಡನೆ, ನಾಲಗೆ ಚಲಿಸಿದಾಗ ಸಂಪರ್ಕ ಪಡೆಯುವುದು. ಇದರಿಂದ ಆ ಹಾಳೆಯ ಮೇಲೆ ಅಚ್ಚು ಮೂಡುವುದು. ಹದಿನೆಂಟನೆಯ ಶತಮಾನದಲ್ಲಿ ಈ ವಿಧಾನವನ್ನು ಬಳಸಲಾಗುತ್ತಿತ್ತು. ಇದೂ ಕೂಡ ಸೀಮಿತ ಉಪಯೋಗದ ವಿಧಾನ. ಏಕೆಂದರೆ ಒಂದೊಂದು ಬಿಡಿ ಧ್ವನಿಯ ಆಕಾರಗಳು ಮಾತ್ರ ಲಭ್ಯ. ಮಾತಿನ ಸರಣಿಯಲ್ಲಿ ನಾಲಗೆಯ ಚಲನೆಯ ದಾಖಲೆಗೆ ಈ ವಿಧಾನ ನಿರುಪಯುಕ್ತ.

ಈಚಿನ ದಿನಗಳಲ್ಲಿ ಕ್ಷ-ಕಿರಣಗಳನ್ನು ಬಳಸಿ ನಾಲಗೆಯ ಚಲನವಲನಗಳ ಛಾಯಾಬಿಂಬಗಳನ್ನು ಪಡೆಯುವ ಯತ್ನಗಳು ನಡೆದಿವೆ. ಚಲಿಸುವ ಬಿಂಬ ಗಳನ್ನು ಛಾಯಾಗ್ರಾಹಕದಲ್ಲಿ ಹಿಡಿದಿರುವುದು ಸಾಧ್ಯ. ಆದ್ದರಿಂದ ಮಾತಿನ ಸರಣಿಯಲ್ಲಿ ನಾಲಗೆಯ ಚಲನೆಯನ್ನು ಕಾಣುವುದಕ್ಕೆ ಅವಕಾಶಗಳಾದವು. ಆದರೆ ನಾಲಿಗೆಗೆ ಮುಖದ ಬೇರೆ ಬೇರೆ ಭಾಗಗಳು ಹೆಚ್ಚಿನ ಪ್ರಮಾಣದ ವಿಕಿರಣಕ್ಕೆ ಒಳಗಾಗುವ ಅಪಾಯವಿದೆ. ತ್ರಿಗಾತ್ರ ಚಲನೆಯು ದ್ವಿಮಾನಕ್ಕೆ ಪರಿವರ್ತನೆಯಾಗುವುದರಿಂದ ನಾಲಗೆಯ ನಿಜಬಿಂಬ ದೊರಕುವುದಿಲ್ಲ. ನಾಲಿಗೆಯ ಅಂಚಿಗೆ ವಿಕಿರಣ ಪ್ರವಾಹ ನಿರೋಧಕ ಸಾಮಗ್ರಿಯನ್ನು ಲೇಪಿಸುವ ಮೂಲಕ ಈ ಸಮಸ್ಯೆಯನ್ನು ಕೊಂಚಮಟ್ಟಿಗೆ ನಿವಾರಿಸಬಹುದು. ಆದರೆ ಇಲ್ಲೂ ಸಮಸ್ಯೆಗಳಿವೆ. ನಾಲಿಗೆಯ ವಿವಿಧ ಭಾಗಗಳಲ್ಲಿ ಸೀಸದ ತುಣುಕುಗಳನ್ನು ಹುದುಗಿಸಿ ಅನಂತರ ವಿಕಿರಣ ಪ್ರವಾಹದ ಚಲನೆಯನ್ನು ಹಾಯಿಸಿದಾಗ ನಾಲಿಗೆಯ ಸ್ಥಾನವನ್ನು ಈ ಸೀಸದ ತುಣುಕುಗಳ ಬಿಂಬದಿಂದ ತಿಳಿಯಲು ಸಾಧ್ಯ. ಇಲ್ಲಿ ವಿಕಿರಣದ ಪ್ರಮಾಣವೂ ಕಡಿಮೆ. ಆದರೂ ಈ ವಿಧಾನವೂ ಸರ್ವೋತ್ತಮವಾದುದಲ್ಲ.

ತಾಲು ಮತ್ತು ನಾಲಗೆಯ ಸಂಪರ್ಕದ ಸ್ವರೂಪವೂ ವಿಭಿನ್ನ ಧ್ವನಿಗಳನ್ನು ನಿರ್ಧರಿಸುತ್ತದೆ. ಈ ಸಂಪರ್ಕ ಸ್ಥಾನ ಮತ್ತು ವಿಧಾನಗಳನ್ನು ತಿಳಿಯಲು ಪ್ರತ್ಯಕ್ಷ ಮತ್ತು ಪರೋಕ್ಷ ವಿಧಾನಗಳಿವೆ. ಪ್ರತ್ಯಕ್ಷ ವಿಧಾನದಲ್ಲಿ ವ್ಯಕ್ತಿಯ ತಾಲುವಿಗೆ ನಿರ್ದಿಷ್ಟ ಬಗೆಯ ಮಿಶ್ರಣವನ್ನು ಲೇಪಿಸುವರು. ನಾಲಗೆ ತಾಲುವನ್ನು ಮುಟ್ಟಿದಾಗ ಆ ಜಾಗದಲ್ಲಿ ಮಿಶ್ರಣ ತನ್ನ ಬಣ್ಣವನ್ನು ಕಳೆದು ಕೊಳ್ಳುತ್ತದೆ. ಆಗ ತಾಲುವಿನ ಚಿತ್ರವನ್ನು ತೆಗೆದರೆ ನಾಲಗೆ ಮತ್ತು ತಾಲುಗಳು ಆ ಧ್ವನಿಯ ಉಚ್ಚಾರಣೆಯಲ್ಲಿ ಯಾವ ಬಗೆಯಲ್ಲಿ ಸಂಪರ್ಕ ಪಡೆಯುತ್ತ ವೆಂಬುದು ತಿಳಿಯುತ್ತದೆ. ಪರೋಕ್ಷ ವಿಧಾನದಲ್ಲಿ ವ್ಯಕ್ತಿಯ ತಾಲುವಿಗೆ ಹೊಂದಿಕೊಳ್ಳುವ ಒಂದು ನಕಲಿ ತಾಲುವನ್ನು ಇರಿಸುತ್ತಾರೆ. ಈ ತಾಲುವಿಗೆ ಮೇಲೆ ಹೇಳಿದ ಲೇಪನವಿರುತ್ತದೆ. ಉಚ್ಚಾರಣೆಯ ಅನಂತರ ಈ ನಕಲಿ ತಾಲುವನ್ನು ಹೊರ ತೆಗೆದು ಬಣ್ಣ ಬದಲಾದ ಬಗೆಯನ್ನು ಗುರುತಿಸುತ್ತಾರೆ. ಈ ವಿಧಾನದಲ್ಲಿ ಬಿಡಿ ಬಿಡಿ ಧ್ವನಿಗಳನ್ನು ಉಚ್ಚರಿಸುವಾಗ ನಾಲಗೆ ಮತ್ತು ತಾಲುಗಳು ಸಂಪರ್ಕ ಪಡೆಯುವ ಬಗೆ ತಿಳಿಯುತ್ತದೆ. ಮಾತಿನ ಸರಣಿಯಲ್ಲಿ ಈ ಧ್ವನ್ಯಂಗಗಳ ಸಂಪರ್ಕ ಕುರಿತು ಮಾಹಿತಿ ದೊರಕುವುದಿಲ್ಲ.

ಇನ್ನೂ ಒಂದು ವಿಧಾನವಿದೆ. ಈ ವಿಧಾನದಲ್ಲಿ ನಕಲಿ ತಾಲುವಿನ ಉದ್ದಗಲಕ್ಕೂ ಹಲವಾರು ವಿದ್ಯುತ್ ಸಂವೇದಿ ಬಿಂದುಗಳಿರುತ್ತವೆ. ನಾಲಗೆ ಈ ತಾಲುವಿನ ಸಂಪರ್ಕಕ್ಕೆ ಬಂದಾಗ ಯಾವ ಭಾಗದಲ್ಲಿ ಸಂಪರ್ಕ ಉಂಟಾಗುವುದೋ ಆ ಭಾಗದ ಸಂವೇದಿ ಬಿಂದುಗಳು ಸಂದೇಶಗಳನ್ನು ರವಾನಿ ಸುತ್ತವೆ. ಈ ಸಂದೇಶವನ್ನು ದಾಖಲಿಸಿಕೊಳ್ಳುತ್ತಾರೆ. ಅಂದರೆ ಉಚ್ಚಾರಣೆ ನಡೆಯುವಾಗಲೇ ದಾಖಲಾತಿಯೂ ನಡೆದಿರುತ್ತದೆ. ಅಲ್ಲದೆ ಮಾತಿನ ಸರಣಿಯ ಎಲ್ಲ ಧ್ವನಿಗಳಿಗೆ ಸಂಬಂಧಿಸಿದ ನಾಲಗೆ ತಾಲುಗಳ ಮಾಹಿತಿ ದೊರಕುತ್ತದೆ ಈ ಮಾಹಿತಿಯೆಲ್ಲವನ್ನೂ ಗಣಕಯಂತ್ರದ ನೆರವಿನಿಂದ ಕೂಡಲೇ ವಿಶ್ಲೇಷಿ ಸುವುದೂ ಸಾಧ್ಯವಾಗುತ್ತದೆ.

ಈಚಿನ ದಿನಗಳಲ್ಲಿ ಹೆಚ್ಚು ಗಮನ ಸೆಳೆದಿರುವ ಇನ್ನೊಂದು ವಿಧಾನವಿದೆ. ಇದರಲ್ಲಿ ಶ್ರವಣಾತೀತ ಧ್ವನಿ ತರಂಗಗಳನ್ನು ಬಳಸುತ್ತಾರೆ. ಈ ತರಂಗಗಳನ್ನು ಧ್ವನ್ಯಂಗಗಳ ಮೂಲಕ ಹಾಯಿಸುವುದರಿಂದ ಧ್ವನ್ಯಂಗಗಳ ಚಲನೆಯೊಡನೆ ಈ ತರಂಗಗಳ ಪಥದಲ್ಲೂ ವ್ಯತ್ಯಾಸಗಳಾಗುತ್ತವೆ. ಈ ಪಥವ್ಯತ್ಯಯವನ್ನು ದಾಖಲೆ ಮಾಡುವುದು ಮತ್ತು ಅದರಿಂದ ಧ್ವನ್ಯಂಗಗಳ ಚಲನೆಯನ್ನು ಅರಿಯುವುದು ಈ ವಿಧಾನದ ಗುರಿ. ಇದು ಬೇರೆ ವಿಧಾನಗಳಿಗಿಂತ ಹೆಚ್ಚು ಖಚಿತ ದಾಖಲೆಗಳನ್ನು ನೀಡಬಲ್ಲ ವಿಧಾನ. ಅಲ್ಲದೆ ನಿರಪಾಯಕಾರಿ.

ಗಲಕುಹರದ ಕೆಳಗಿನ ತುದಿಯಲ್ಲಿರುವ ಧ್ವನಿ ತಂತುಗಳು ಉಚ್ಚಾರಣೆಯ ಸಂದರ್ಭದಲ್ಲಿ ಹೇಗೆ ಚಲಿಸುತ್ತವೆಯೆಂದು ತಿಳಿಯುವುದು ಇನ್ನೊಂದು ಸಮಸ್ಯೆ. ಗಲಕುಹರದೊಳಗೆ ಅತಿ ಸೂಕ್ಷ್ಮವಾದ ನಾರುದ್ಯುತಿ ಬಿಂಬಗ್ರಾಹಿ ಯೊಂದನ್ನು ಅಥವಾ ಕನ್ನಡಿಯೊಂದನ್ನು ಇರಿಸುವರು. ಅತಿ ವೇಗದಲ್ಲಿ ಚಲಿಸುವ ಪಟ್ಟಿಕೆಗಳ ಮೇಲೆ ಧ್ವನಿ ತಂತುಗಳ ಉಚ್ಚಾರಣೆಯ ಸಂದರ್ಭದಲ್ಲಿ ಪಡೆಯುವ ಪಲ್ಲಟಗಳ ಬಿಂಬಗಳನ್ನು ದಾಖಲಿಸುತ್ತಾರೆ. ಈ ಚಿತ್ರಪಟ್ಟಿಕೆಗಳನ್ನು ನಿಧಾನಗತಿಯಲ್ಲಿ ಚಲಿಸುವಂತೆ ಮಾಡಿ ಧ್ವನಿತಂತುಗಳ ಚಲನೆಯ ವಿರಳಬಿಂಬ ಗಳನ್ನು ನೋಡಲು ಸಾಧ್ಯವಾಗುತ್ತದೆ. ಇದಲ್ಲದೆ ಇನ್ನೂ ಒಂದು ವಿಧಾನವಿದೆ. ಇದರಲ್ಲಿ ಧ್ವನಿತಂತುಗಳ ಮಡಿಕೆಗಳ ಮೇಲೆ ಬೆಳಕಿನ ಕಿರಣಗಳು ಬೀಳುವಂತೆ ಮಾಡುತ್ತಾರೆ. ಈ ಬೆಳಕು ನಿರಂತರವಾದುದಲ್ಲ. ಬೆಳಕು ಕತ್ತಲೆಗಳು ಆವರ್ತಗೊಳ್ಳುವ ಬಗೆಯಲ್ಲಿ ಅಳವಡಿಸಲಾಗುತ್ತದೆ. ಇಂಥ ಬೆಳಕಿನ ಕಂಪನವಿಸ್ತಾರ ವನ್ನು ಬದಲಾಯಿಸುತ್ತಾರೆ. ಈ ಬದಲಾವಣೆ (ಅಂದರೆ ಬೆಳಕು ಮತ್ತು ಕತ್ತಲೆಗಳು ಆವರ್ತಗೊಳ್ಳುವ ವೇಗ)ಯನ್ನು ಮಾಡುತ್ತಾ ಅದರ ಕಂಪನ ವಿಸ್ತಾರವು ಧ್ವನಿತಂತುಗಳ ಕಂಪನದೊಡನೆ ಹೊಂದುವಂತೆ ಮಾಡುತ್ತಾರೆ. ಆಗ ಸಹಜ ವಾಗಿಯೇ ನಿರಂತರ ಬೆಳಗಿನಲ್ಲಿ ಧ್ವನಿತಂತುಗಳು ನಿಧಾನವಾಗಿ ಚಲಿಸಿದಂತೆ ಭಾಸವಾಗುತ್ತದೆ. ಇದನ್ನು ಬಿಂಬಗ್ರಹಣ ಮಾಡಿ ಅಧ್ಯಯನಗಳಿಗೆ ಬಳಸು ತ್ತಾರೆ. ಧ್ವನಿತಂತುಗಳ ಮೂಲಕ ಬೆಳಕು ನಿರಂತರವಾಗಿ ಹಾಯುವಂತೆ ಮಾಡುವುದು ಮತ್ತೊಂದು ವಿಧಾನ. ಈ ವಿಧಾನದಲ್ಲಿ, ಹೀಗೆ ಹಾಯುವ ಬೆಳಕಿನ ಪ್ರಮಾಣವು ಧ್ವನಿತಂತಿಗಳ ಚಲನೆಯೊಂದಿಗೆ ಬದಲಾಗುವುದೆಂಬ ಅಂಶವನ್ನು ಗಮನಿಸುತ್ತಾರೆ. ಈ ಬದಲಾವಣೆಯ ವಿಧಾನವನ್ನು ದಾಖಲೆ ಮಾಡಿ ಅಧ್ಯಯನಕ್ಕಾಗಿ ಬಳಸುತ್ತಾರೆ.

ಈ ಎಲ್ಲ ವಿಧಾನಗಳಲ್ಲೂ ದೇಹದೊಳಗೆ ಹೊರಗಿನ ವಸ್ತುವೊಂದನ್ನು ಇರಿಸುವುದು ಅನಿವಾರ್ಯ. ವ್ಯಕ್ತಿಗೆ ಸಹಜವಾಗಿಯೇ ಇದರಿಂದ ಮುಜುಗರಗಳು ಉಂಟಾಗುತ್ತವೆ. ಆದ್ದರಿಂದ ಧ್ವನಿಯ ಉಚ್ಚಾರಣೆ ಅಸಹಜವಾಗುತ್ತದೆ. ವಿಶ್ಲೇಷಣೆ ಅಪರಿಪೂರ್ಣವಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಬೇರೆ ವಿಧಾನಗಳನ್ನು ಹುಡುಕಿದ್ದಾರೆ. ಎಲೆಕ್ಟ್ರೋ ಲಾರೆಂಜೋಗ್ರಫಿ ಎಂಬುದು ಇಂಥ ವಿಧಾನ. ಇದರಲ್ಲಿ ವ್ಯಕ್ತಿಯ ಕುತ್ತಿಗೆಯಲ್ಲಿ ಕಾಣಸಿಗುವ ಥೈರಾಯ್ಡ ಗ್ರಂಥಿ ಭಾಗದ ಚರ್ಮಕ್ಕೆ ಎರಡು ವಿದ್ಯುತ್ ಧ್ರುವಗಳನ್ನು ಅಂಟಿಸುತ್ತಾರೆ. ಮಾತಾಡುವಾಗ ಧ್ವನಿತಂತುಗಳ ಚಲನೆಗೆ ಅನುಗುಣವಾಗಿ ಈ ವಿದ್ಯುತ್ ಧ್ರುವಗಳು ಸಂವೇದಿಸುತ್ತವೆ. ಈ ಸಂವೇದನೆಯನ್ನು ಯಂತ್ರವು ಗ್ರಹಿಸಿ ಸೂಕ್ತ ಅಲೆಗಳ ರೂಪದಲ್ಲಿ ನಮಗೆ ಕಾಣುವಂತೆ ಮಾಡುತ್ತದೆ. ಮುಂದಿನದು ವಿಶ್ಲೇಷಣೆ.