ನಾವು ಉಚ್ಚರಿಸುವ ಭಾಷಾಧ್ವನಿಗಳಿಗೆ ಯಾವುದೇ ಅರ್ಥವಿರುವುದಿಲ್ಲ. ಟ್ ಎಂದರೇನು? ನ್ ಎಂದರೇನು? ಈ ಧ್ವನಿಗಳು ಯೋಗ್ಯ ರೀತಿಯಲ್ಲಿ ಜೋಡಣೆಗೊಂಡಾಗ ಅರ್ಥವುಳ್ಳ ಪದಗಳು ಉಂಟಾಗುತ್ತವೆ. ‘ಮ್’, ‘ರ್’, ‘ಅ’ ಎಂಬ ಧ್ವನಿಗಳಿಗೆ  ಸ್ವತಃ ಅರ್ಥವಿಲ್ಲ. ಆದರೆ ‘ಮ್’, ‘ಅ’, ‘ರ್’, ‘ಅ’ ಎಂಬ ಅನುಕ್ರಮದಲ್ಲಿ ಜೋಡಣೆಯಾದಾಗ ‘ಮರ’ ಎಂಬ ಪದ ಉಂಟಾಗುತ್ತದೆ. ಈ ಪದಕ್ಕೆ ಕನ್ನಡದಲ್ಲಿ ಅರ್ಥವಿದೆ. ಎಲ್ಲ ಬಗೆಯ ಧ್ವನಿ ಜೋಡಣೆಗಳಿಗೂ ಅರ್ಥವಿರುವುದಿಲ್ಲ. ಅರ್ಥವಿರದ ನೂರಾರು ಧ್ವನಿ ಜೋಡಣೆಗಳನ್ನು ‘ನಿರರ್ಥಕ’ವೆಂದೆನ್ನಬಹುದು. ಉದಾ: ‘ಜಿಮುಟ’ ಜ್, ಇ, ಮ್, ಉ, ಟ್, ಅ ಗಳ ಜೋಡಣೆ ಇದ್ದರೂ ಕನ್ನಡದಲ್ಲಿ ಈ ‘ಪದ’ ನಿರರ್ಥಕ. ಈ ಅಂಶ ಬಹುಮಟ್ಟಿಗೆ ಎಲ್ಲ ಮಾನವ ಭಾಷೆಗಳ ವಿಚಾರದಲ್ಲೂ ನಿಜ.

ಹೀಗಿದ್ದರೂ ಕೆಲವು ಧ್ವನಿಗಳಿಗೆ ಮತ್ತು ನಿರರ್ಥಕ ಧ್ವನಿಜೋಡಣೆಗಳಿಗೆ ನಿರ್ದಿಷ್ಟ ಅರ್ಥವನ್ನು ಭಾಷಿಕರು ಕಲ್ಪಿಸಿಕೊಳ್ಳುತ್ತಾರೆ. ಅಥವಾ ಅವುಗಳಿಗೆ ಅರ್ಥವಿದೆಯೆಂದು ವ್ಯವಹರಿಸುತ್ತಾರೆ. ಭಾಷೆಯಲ್ಲಿ ಕಂಡುಬರುವ ಈ ಬಗೆಯ ಪ್ರವೃತ್ತಿಗೆ ‘ಧ್ವನಿ ಸಂಕೇತತೆ’ಯೆಂದು ಹೇಳುತ್ತೇವೆ. ನಿಜ ಜೀವನದ ಹತ್ತಾರು ಪ್ರಾಕೃತಿಕ ಮತ್ತು ಮಾನವ ವ್ಯವಹಾರದ ಕ್ರಿಯಾ ಸ್ವಭಾವಗಳನ್ನು ಹೇಳಲು ಬಳಸುವ ‘ಅನುಕರಣವಾಚಿ’ಗಳನ್ನು ಗಮನಿಸಿ. ಧುಪ್ ಎಂಬ ಪದ ನೆಲದ ಮೇಲೆ ಬೀಳುವ ಕ್ರಿಯೆಯನ್ನು ಸಂಕೇತಿಸುತ್ತದೆಯೆಂಬಂತೆ ನಾವು ವ್ಯವಹರಿಸುತ್ತೇವೆ. ಟಪ್, ಸರ್, ರೊಂಯ್, ದಪ್, ಕಿಟ್ ಮುಂತಾದ ನೂರಾರು ಇಂಥ ರೂಪಗಳನ್ನು ಬಳಸುತ್ತೇವೆ. ಈ ನಿರರ್ಥಕ ಪದಗಳು ಕ್ರಿಯೆ ಯನ್ನು ಸಾಭಿನಯಗೊಳಿಸಬಲ್ಲವೆಂದು ತಿಳಿದಿದ್ದೇವೆ.

ಅನುಕರಣವಾಚಿಗಳು ಮತ್ತು ಭಾವಾಭಿವ್ಯಂಜಕ ಧ್ವನಿಗಳನ್ನು ಎಲ್ಲ ಬಗೆಯ ಭಾಷಾ ವ್ಯಾಪಾರಗಳಲ್ಲೂ ಸಮಪ್ರಮಾಣದಲ್ಲಿ ಬಳಸುವುದಿಲ್ಲ. ಮಕ್ಕಳ ಭಾಷೆಯಲ್ಲಿ, ನಗೆಹನಿಗಳಲ್ಲಿ ಬಳಕೆ ಹೆಚ್ಚು. ಕವಿತೆಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತವೆ. ಅನುಕರಣವಾಚಿಗಳು, ಹೆಸರೇ ಸೂಚಿಸುವಂತೆ ಕ್ರಿಯಾವರ್ತಗಳನ್ನು ಅನುಕರಿಸುವಂತೆ ಭಾಸವಾಗುತ್ತದೆ. ಆದರೆ ಧ್ವನಿ ಸಂಕೇತತೆ ಎಂಬುದು ಇದಕ್ಕಿಂತ ಕೊಂಚ ಭಿನ್ನ. ನಿರ್ದಿಷ್ಟ ಅರ್ಥಗಳನ್ನು ನೀಡುತ್ತದೆಂದು ನಾವು ಭಾವಿಸುವ ಧ್ವನಿಗೂ ಅದು ಸಂಕೇತಿಸುವ ‘ಅರ್ಥ’ಕ್ಕೂ ಯಾವ ನೇರ ಸಂಬಂಧವೂ ಇರುವುದಿಲ್ಲ.

ಕನ್ನಡದಲ್ಲಿ ವ್ಯಕ್ತಿನಾಮಗಳ ಕೊನೆಗೆ ಊ ಕಾರವನ್ನು ಸೇರಿಸುವ ಮೂಲಕ ಆಪ್ತತೆಯನ್ನು ತರಲು ಸಾಧ್ಯವೆಂಬ ತಿಳುವಳಿಕೆ ಇರುವಂತಿದೆ. ಉದಾ: ರಾಮೂ (ರಾಮ), ಧರ‍್ಮೂ (ಧರ್ಮ), ರಂಗೂ (ರಂಗ), ಚಂದ್ರೂ (ಚಂದ್ರ) ಇಂಗ್ಲೀಷಿನಲ್ಲಿ sl-ನಿಂದ ಮೊದಲಾಗುವ ಪದಗಳು ಒಂದು ಬಗೆಯ ‘ಮುಜುಗರ’ವನ್ನುಂಟು ಮಾಡುತ್ತವೆಂದು ತಿಳಿಯಲಾಗುತ್ತದೆಯಂತೆ (ಉದಾ: slime, slither, slug, sloppy ಇತ್ಯಾದಿ).

ಅನುಕರಣವಾಚಿಗಳು

ಎಲ್ಲ ಭಾಷೆಗಳಲ್ಲೂ ಅನುಕರಣವಾಚಿಗಳು ಇರುತ್ತವೆ. ಕೆಲವು ಭಾಷೆಗಳಲ್ಲಿ ಅವುಗಳ ಸಂಖ್ಯೆ ಹೆಚ್ಚು, ಆಡುಮಾತಿನಲ್ಲಿ ಅನುಕರಣವಾಚಿಗಳು ಬರಹದ ಭಾಷೆಗಿಂತ ಹೆಚ್ಚಾಗಿ ಬಳಕೆಯಾಗುತ್ತವೆಂದು ಸಾಮಾನ್ಯವಾಗಿ ಹೇಳಬಹುದು. ಈ ಅನುಕರಣವಾಚಿಗಳು ಕ್ರಿಯೆಯ ಸ್ವರೂಪವನ್ನು ಅನುಸರಿಸುತ್ತವೆ ಎಂದು ಈ ಹಿಂದೆ ಹೇಳಿದೆಯಷ್ಟೆ. ಇವುಗಳನ್ನು ಮುಖ್ಯವಾಗಿ ಎರಡು ವರ್ಗಗಳಲ್ಲಿ ಅಳವಡಿಸಲು ಸಾಧ್ಯ. ಒಂದು ವರ್ಗದಲ್ಲಿ ಬರುವ ಪದಗಳು ಕಿವಿಗೆ ಸಂಬಂಧಿಸಿದ ಅನುಭವವನ್ನು ಸಂಕೇತಿಸುತ್ತವೆ. ಇವನ್ನು ಶ್ರವ್ಯಾನುಕರಣವಾಚಿ ಗಳೆನ್ನಬಹುದು. ಇನ್ನೊಂದು ವರ್ಗದ ಪದಗಳು ಕಣ್ಣಿಗೆ ಸಂಬಂಧಿಸಿದ ಅನುಭವವನ್ನು ಸಂಕೇತಿಸುತ್ತವೆ. ಇವನ್ನು ದೃಶ್ಯಾನುಕರಣಗಳೆನ್ನಬಹುದು. ಕನ್ನಡದ ನಿದರ್ಶನಗಳನ್ನು ಗಮನಿಸುವುದಾದರೆ ಸರಸರ, ದರದರ, ಭರಭರ, ದಗದಗ, ಝಳಝಳ, ಟಪಟಪ ಮುಂತಾದವು ಮೊದಲ ವರ್ಗಕ್ಕೆ ಸೇರಿದರೆ ಮಿರಮಿರ, ಫಳಫಳ, ನಿಗಿನಿಗಿ, ಮಿಣಮಿಣ, ಮಿರಿಮಿರಿ ಮೊದಲಾದವು ಎರಡನೆಯ ವರ್ಗಕ್ಕೆ ಸೇರುತ್ತವೆ. ಈ ವಿಭಜನೆ ಬಹುಪಾಲು ಭಾಷೆಗಳಲ್ಲಿ ಕಂಡುಬರುತ್ತವೆ.

ಈ ಅನುಕರಣವಾಚಿಗಳನ್ನು ಗಮನಿಸಿದರೆ ಅವು ಒಂದು ನಿರ್ದಿಷ್ಟ ರಚನೆಯನ್ನು ಹೊಂದಿರುವುದು ಕಂಡುಬರುತ್ತದೆ. ಪದದ ಒಂದು ಭಾಗವೇ ಮತ್ತೆ ಆವರ್ತಗೊಂಡು ಇನ್ನೊಂದು ಭಾಗವಾಗಿರುತ್ತದೆ. ಬಿರಬಿರ, ಸರಸರ, ಧಪಧಪ ಇತ್ಯಾದಿ ರೂಪಗಳನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಜಗತ್ತಿನ ಬಹುಭಾಷೆಗಳಲ್ಲಿ, ಅದರಲ್ಲೂ ಆಗ್ನೇಯ ಏಷಿಯಾದ ಭಾಷೆಗಳಲ್ಲಿ ಇಂಥ ರಚನೆಗಳು ಸಾಮಾನ್ಯವೆಂದು ತಿಳಿದು ಬಂದಿದೆ. ಎಲ್ಲ ಅನುಕರಣ ವಾಚಿಗಳೂ ಇದೇ ಮಾದರಿಯನ್ನು ಅನುಸರಿಸುತ್ತವೆ ಎನ್ನುವಂತಿಲ್ಲ. ಜಗ್, ಪುಸುಕ್, ಪುಸ್, ದಿಗಿಲ್ ಎಂಬ ಮಾದರಿಯ ಪದಗಳೂ ಕನ್ನಡದಲ್ಲಿವೆ.

ಅನುಕರಣವಾಚಿಗಳು ಇಂಥದೇ ನಿರ್ದಿಷ್ಟ ಕ್ರಿಯೆಯನ್ನು ಮಾತ್ರ ಸಂಕೇತಿಸ ಬೇಕೆಂಬ ನಿಯಮ ಇದ್ದಂತಿಲ್ಲ. ಒಂದೇ ಅನುಕರಣವಾಚಿಯು ಒಂದಕ್ಕಿಂತ ಹೆಚ್ಚು ಕ್ರಿಯೆಗಳನ್ನು ಸಂಕೇತಿಸುವುದು ಸಾಧ್ಯ. ‘ಸರಸರ’ ಪದವನ್ನೂ ಬಳಸಿರುವ ಪ್ರಸಂಗಗಳನ್ನು ಗಮನಿಸಿ. ‘ಹಾವು ಸರಸರನೆ ಹರಿದು ಹೋಯಿತು’, ‘ಎಲ್ಲ ಕೆಲಸಗಳನ್ನು ಸರಸರನೆ ಮುಗಿಸಬೇಕು’, ‘ಹೇಳುವುದಿದ್ದರೆ ಸರಸರ ಹೇಳು’, ಹೀಗೆ ಹಲವು ಸಂದರ್ಭಗಳಲ್ಲಿ ‘ಸರಸರ’ ಪದವನ್ನು ಬಳಸುವುದು ಸಾಧ್ಯ. ಎಲ್ಲ ಕಡೆಗಳಲ್ಲೂ ಈ ಪದ ಕ್ರಿಯೆಯನ್ನು ಅನುಕರಿಸಿದೆ ಎಂದು ಹೇಳಲಾಗದು. ಒಟ್ಟಾರೆ ‘ಬೇಗ’ ಎನ್ನುವ ಸಾಮಾನ್ಯ ಅರ್ಥ ಮುಖ್ಯ ವಾಗಿರುವಂತಿದೆ.

ಕನ್ನಡದ ಕೆಲವು ಅನುಕರಣ ರೂಪಗಳು

ಕಣ್ಣಿನ ಅನುಭವ : ಮಿರಿಮಿರಿ, ಥಳಥಳ, ಲಕಲಕ, ರಣರಣ

ಕಿವಿಯ ಅನುಭವ : ಕೊತಕೊತ, ದಳದಳ, ಸರಸರ, ಪರಪರ, ತರತರ, ದರದರ, ನಳನಳ, ಬರಬರ, ಗಡಗಡ, ಕಟಕಟ, ಜಿಟಿಜಿಟಿ, ಚುಮುಚುಮು

ಅನುಕರಣವಾಚಿಗಳನ್ನು ಮಾತಿನಲ್ಲಿ ಬಳಸಿದಾಗ ಅವುಗಳು ಸ್ವತಂತ್ರ ರೂಪಗಳಂತೆ ಕೆಲವೊಮ್ಮೆ ಕಂಡು ಬಂದರೆ ಮತ್ತೆ ಕೆಲವೊಮ್ಮೆ ಬೇರೆ ರೂಪಗಳ ಸಾಹಚರ್ಯದಲ್ಲಿ ಕಾಣಸಿಗುತ್ತವೆ. ‘ನಿಗಿನಿಗಿ ಕೆಂಡ’, ‘ಜಿಟಿಜಿಟಿ ಮಳೆ’, ‘ಭರಭರ ನಡೆಯುವ ಯಂತ್ರ’ ಇತ್ಯಾದಿ. ಇದಲ್ಲದೆ ‘ಲೊಳ್ ಲೊಳ್ ಎಂದು ಬೊಗಳುವ ನಾಯಿ’, ‘ಪಟಪಟನೆ ಮಾತಾಡುವ ಹುಡುಗಿ’, ‘ಮಿರಮಿರನೆ ಮಿಂಚುವ ಸೀರೆ’ ಇತ್ಯಾದಿ ರಚನೆಗಳಲ್ಲಿ ಅನುಕರಣವಾಚಿಗಳ ಅನಂತರ ‘-ಎಂದು’,‘-ಅನೆ’, ಎಂಬೀ ರೂಪಗಳಿವೆ. ‘ಪುರ‌್ರಂತ’, ‘ಪುಸುಕ್ಕನೆ’, ‘ಪಿಟ್ಟಂತ’, ‘ಧಿಗ್ಗನೆ’ ಮುಂತಾದ ರಚನೆಗಳಲ್ಲೂ ‘-ಅನೆ’, ‘-ಅಂತ’ ಎಂಬ ರೂಪಗಳನ್ನು ಕಾಣುತ್ತೇವೆ. ಕ್ರಿಯಾ ವಿಶೇಷಣಗಳ ಹಾಗೆ ತೋರುವ ಈ ರೂಪಗಳು ಬಳಕೆಯಾಗುವ ಕ್ರಮವನ್ನು ವಿವರವಾಗಿ ಅಧ್ಯಯನ ಮಾಡಬೇಕಾಗಿದೆ.

ಧ್ವನಿಗಳು ಮತ್ತು ಅವುಗಳು ಪ್ರತಿನಿಧಿಸುವ ಅರ್ಥ ಇವೆರಡರ ನಡುವೆ ನೇರವಾದ ಸಂಬಂಧವಿದೆಯೆಂದು ತಿಳಿಯುವುದಾದರೆ ಆ ಸಂಬಂಧದ ವಿವಿಧ ಮಾದರಿಗಳನ್ನು ಅರಿಯಲು ಭಾಷಾಶಾಸ್ತ್ರಜ್ಞರು ಯತ್ನಿಸಿದ್ದಾರೆ. ಈ ಅಧ್ಯಯನಗಳು ಕೆಲವು ಕುತೂಹಲದ ಸಂಗತಿಗಳತ್ತ ನಮ್ಮ ಗಮನ ಸೆಳೆಯುವುದೇ ವಿನಾ ನಿರ್ದಿಷ್ಟ ಸಿದ್ಧಾಂತಗಳನ್ನು ರೂಪಿಸುವುದು ಕಷ್ಟ. ಈ ಮೊದಲೇ ನೀಡಿದ ನಿದರ್ಶನದಲ್ಲಿ ಸೂಚಿಸಲಾದಂತೆ, ‘ಊ’ ಧ್ವನಿಯು ಆಪ್ತತೆಯನ್ನು ಸಂಕೇತಿಸುತ್ತದೆ ಎಂದು ಕೆಲವು ಉದಾಹರಣೆಗಳನ್ನು ಗಮನಿಸಿ ಹೇಳಬಹುದಾದರೂ ‘-ಊ’ ಧ್ವನಿಯು ಯಾವಾಗಲೂ ಆಪ್ತತೆಯನ್ನು ಸಂಕೇತಿಸುವುದೆಂದು ವಾದಿಸಲು ಬರುವುದಿಲ್ಲ. ಕೆಲವು ಸಂದರ್ಭದಲ್ಲಿ ಇ ಧ್ವನಿಯು ವಸ್ತು, ಪ್ರಾಣಿಗಳ ಚಿಕ್ಕ ರೂಪಗಳನ್ನು ‘-ಅ’ ಧ್ವನಿ ಬೃಹತ್ ರೂಪಗಳನ್ನು ಸೂಚಿಸುವುದೆಂದು ಇಂಗ್ಲಿಶಿನ ನಿದರ್ಶನಗಳನ್ನು ಆಧರಿಸಿ ಹೇಳಲಾಗಿದೆ. large, vast, grand ಮುಂತಾದ ಪದಗಳ ಅ ಕಾರವನ್ನು ಗಮನಿಸಿ. ಏನೇ ಆಗಲಿ ಇದು ಸೀಮಿತ ವ್ಯಾಪ್ತಿಯ ಸಾಧ್ಯತೆ. ಇದಕ್ಕೆ ವಿರುದ್ಧವಾದ ಸಂದರ್ಭಗಳೂ ಸುಲಭವಾಗಿ ಕಾಣಸಿಗುತ್ತವೆ.

ಬೇರೆ ಬೇರೆ ಭಾಷೆಗಳ ಮಾಹಿತಿಗಳನ್ನು ಒಗ್ಗೂಡಿಸಿ ಧ್ವನಿಗಳು ನಿರ್ದಿಷ್ಟ ಅರ್ಥಗಳನ್ನು ಸೂಚಿಸುವ ಪ್ರವೃತ್ತಿಯಲ್ಲಿ ಏನಾದರೂ ಸಾರ್ವತ್ರಿಕ ನೆಲೆಗಳು ಇವೆಯೋ ಎಂಬುದನ್ನು ಅರಿಯಲು ಯತ್ನಿಸಲಾಗಿದೆ. ಅಂಥ ಒಂದು ಅಧ್ಯಯನದ ಪ್ರಕಾರ ‘ಇ’ ಕಾರವು ಸಮೀಪವನ್ನು ಅ/ಉ ಕಾರಗಳು ದೂರವನ್ನು ಸೂಚಿಸುವುದು ಹಲವಾರು ಭಾಷೆಗಳಲ್ಲಿ ಕಂಡುಬಂದಿದೆ. ಕನ್ನಡದ ಇಲ್ಲಿ, ಅಲ್ಲಿ; ಇದು, ಅದು; ಇವರು, ಅವರು ಎಂಬ ರೂಪಗಳನ್ನು ಗಮನಿಸಿ.

ಇದೇನೇ ಇದ್ದರೂ ಪದಗಳಲ್ಲಿನ ಧ್ವನಿಗಳಿಗೂ ಸೂಚಿತ ಅರ್ಥಕ್ಕೂ ನೇರ ಸಂಬಂಧವನ್ನು ಕಾಣಲು ನಡೆಸುವ ಯತ್ನಗಳು ಇನ್ನೂ ಯಶಸ್ಸು ಕಂಡಿಲ್ಲ. ಭಾಷೆಯ ಉಗಮವನ್ನು ವಿವರಿಸಲು ಈ ವಿಧಾನವನ್ನು ಅನುಸರಿಸ ಲಾಯಿತಾದರೂ ಜಗತ್ತಿನ ವಿವಿಧ ಭಾಷೆಗಳಿಗೆ ಸಂಬಂಧಿಸಿದಂತೆ ಈ ಸಿದ್ಧಾಂತವಿನ್ನೂ ಸಾಬೀತಾಗಬೇಕಾಗಿದೆ.