ಭಾಷಾಧ್ವನಿಗಳನ್ನು ವಿಭಾಜಕಗಳು ಮತ್ತು ಅವಿಭಾಜಕಗಳೆಂದು ಎರಡು ರೀತಿಯಾಗಿ ವರ್ಗೀಕರಿಸಲಾಗಿದೆ. ವಿಭಾಜಕಗಳನ್ನು ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯ. ಇವುಗಳ ಜೊತೆಯಲ್ಲಿ ಭಾಷೆಯಲ್ಲಿ ಕಂಡುಬರುವ ಸ್ವತಂತ್ರವಾಗಿ ಪ್ರತ್ಯೇಕಿಸಲು ಬಾರದ ಹಾಗೂ ಉಚ್ಚರಿಸಲು ಬಾರದ ಘಟಕಗಳು ಇರುತ್ತವೆ. ಅವುಗಳಿಗೆ ಅವಿಭಾಜಕಗಳೆಂದು ಕರೆಯುವರು. ಇವುಗಳನ್ನು ವಿಭಾಜಕಗಳಂತೆ ಬೇರ್ಪಡಿಸಲು ಬರುವುದಿಲ್ಲ. ಆದ್ದರಿಂದ ಅವು ಅವಿಭಾಜಕಗಳಾಗಿವೆ. ಅವಿಭಾಜಕಗಳು ಪ್ರತ್ಯೇಕ ಶಬ್ದ ನಿರ್ಮಾಣಕ್ಕೆ ಹಾಗೂ ಅರ್ಥ ವ್ಯತ್ಯಾಸಕ್ಕೆ ಕಾರಣವಾಗುತ್ತವೆ. ಹಾಗಾಗಿ ಅವುಗಳನ್ನು ಧ್ವನಿಮಾಗಳೆಂದು ವಿವರಿಸಿಕೊಳ್ಳ ಬಹುದಾಗಿದೆ. ಭಾಷೆಯಲ್ಲಿ ಅವಿಭಾಜಕಗಳು ಕಡಿಮೆ ಸಂಖ್ಯೆಯಲ್ಲಿರುತ್ತವೆ. ಕೆಲವು ಪ್ರಮುಖ ಅವಿಭಾಜಕಗಳು ಇಂತಿವೆ.

ಅ. ದೀರ್ಘತೆ

ಆ. ಸ್ವರಾಘಾತ

ಇ. ತೀವ್ರತೆ

ಈ. ಸಂಧಿಸ್ಥಾನ

. ದೀರ್ಘತೆ : ಉಚ್ಚಾರಣೆಯ ಧ್ವನಿಗಳು ತಮ್ಮದೇ ಆದ ಕಾಲಮಿತಿಯನ್ನು ಪಡೆದಿರುತ್ತವೆ. ಒಂದು ಧ್ವನಿ ಉಚ್ಚಾರಕ್ಕೆ ತೆಗೆದುಕೊಳ್ಳುವ ವೇಳೆಯನ್ನು ಛಂದಸ್ಸಿನಲ್ಲಿ ಮಾತ್ರೆಯೆಂದು ಗುರುತಿಸುವರು. ಧ್ವನಿಗಳು ತೆಗೆದುಕೊಳ್ಳುವ ಕಾಲಾವಧಿಗೆ ಅನುಗುಣವಾಗಿ ಅವುಗಳನ್ನು ಹ್ರಸ್ವ ಮತ್ತು ದೀರ್ಘಗಳೆಂದು ಎರಡು ಬಗೆಯಾಗಿ ವರ್ಗೀಕರಿಸಲಾಗಿದೆ. ಉಚ್ಚಾರದಲ್ಲಿ ಕಡಿಮೆ ಸಮಯವನ್ನು ತೆಗೆದುಕೊಳ್ಳುವ (ಒಂದು ಮಾತ್ರಾಕಾಲ) ಧ್ವನಿಗಳನ್ನು ಹ್ರಸ್ವ ಧ್ವನಿಗಳೆಂದು ಕರೆದರೆ ಹೆಚ್ಚು ಸಮಯವನ್ನು (ಹ್ರಸ್ವಧ್ವನಿಗಳ ಉಚ್ಚಾರಕ್ಕೆ ಬೇಕಾದ ಎರಡರಷ್ಟು ಸಮಯ / ಎರಡು ಮಾತ್ರಾಕಾಲ) ತೆಗೆದುಕೊಳ್ಳುವ ಧ್ವನಿಗಳನ್ನು ದೀರ್ಘ ಧ್ವನಿಗಳೆಂದು ಕರೆಯುವರು. ದೀರ್ಘತೆಯು ಸ್ವರ ಹಾಗೂ ವ್ಯಂಜನ ಧ್ವನಿಗಳೆರಡಕ್ಕೂ ಅನ್ವಯವಾಗುವುದು.

ಹ್ರಸ್ವ ಧ್ವನಿಗಳಿಗೆ ಸಾಮಾನ್ಯವಾಗಿ ಯಾವ ಚಿಹ್ನೆಯನ್ನೂ ಬಳಸುವುದಿಲ್ಲ. ದೀರ್ಘ ಧ್ವನಿಗಳಿಗೆ ಹ್ರಸ್ವಧ್ವನಿಗಳ ಮುಂದೆ ಎರಡು ಚುಕ್ಕೆ ಇಡುವುದರ ಮೂಲಕ (:) ಅಥವಾ ಅದರ ಮೇಲೆ ಒಂದು ಗೆರೆ ಹಾಕುವುದರ ಮೂಲಕ (-) ದೀರ್ಘತ್ವವನ್ನು ಸೂಚಿಸುತ್ತಾರೆ. ದೀರ್ಘತೆ ಕನ್ನಡದಲ್ಲಿ ಅರ್ಥ ಭಿನ್ನತೆಗೆ ಕಾರಣವಾಗಿದೆ.

ಉದಾ.

bale ಬಳೆ
ba:le ಬಾಳೆ
hali ಹಳಿ
ha:li ಹಾಳಿ
bidu ಬಿಡು
bi:du ಬೀಡು
pada ಪದ
pa:da ಪಾದ

ದೀರ್ಘತೆ ಕನ್ನಡದಲ್ಲಿ ಧ್ವನಿಮಾ ಸ್ಥಾನವನ್ನು ಪಡೆದಿದೆ. ಕೊರಿಯನ್ ಭಾಷೆಯಲ್ಲಿ

it
[ದಿನ]
i:t [ಕೆಲಸ]
seda [ಎಣಿಸು] se:da [ಗಟ್ಟಿ]
pam [ರಾತ್ರಿ] pa:ma [ಬಿಸ್ಕತ್]
kul [ಮುತ್ತುಚಿಪ್ಪು] ku:l [ಸುರಾಗ]

ಕೊರಿಯನ್ ಭಾಷೆಯಲ್ಲಿಯೂ ದೀರ್ಘತೆ ಅರ್ಥ ವ್ಯತ್ಯಾಸಗೊಳಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವುದರಿಂದ ಅದನ್ನು ಧ್ವನಿಮಾ ಎಂದು ಗುರುತಿಸಬಹುದಾಗಿದೆ.

. ಸ್ವರಾಘಾತ : ಉಚ್ಚಾರದಲ್ಲಿ ಧ್ವನಿತರಂಗಗಳ ಒತ್ತಡ ಅಥವಾ ತೀವ್ರತೆಯನ್ನು ಸ್ವರಾಘಾತವೆಂದು ಕರೆಯುತ್ತಾರೆ. ಸ್ವರಗಳು ನಾದ ಶಿಖರತೆಯನ್ನು ಹೊಂದಿರುವುದರಿಂದ ಅವುಗಳ ಮೇಲೆ ಹೆಚ್ಚಿಗೆ ಒತ್ತು ಬೀಳುವುದು. ಒಂದು ಭಾಷೆಯ ಪದಗಳನ್ನು, ವ್ಯಾಖ್ಯೆಗಳನ್ನು ಉಚ್ಚರಿಸುವಾಗ ಅವುಗಳ ಪ್ರತಿಯೊಂದು ಅಕ್ಷರದ ಮೇಲೂ ಒತ್ತು ಇದ್ದೇ ಇರುತ್ತದೆ. ಕೆಲವು ಧ್ವನಿಗಳ ಮೇಲೆ ಉಚ್ಚಾರದ ಒತ್ತಡ ಹೆಚ್ಚಾಗಿದ್ದರೆ ಕೆಲವು ಧ್ವನಿಗಳ ಮೇಲೆ ಕಡಿಮೆ ಇರುತ್ತದೆ. ಇಂತಹ ಒತ್ತಡವನ್ನು ಬೇರೆಬೇರೆ ರೀತಿಯಲ್ಲಿ ವಿವರಿಸಿ ತೋರಿಸಬಹುದು. ಪದ ಅಥವಾ ವಾಕ್ಯದ ಮೇಲೆ ಬೀಳುವ ಒತ್ತನ್ನು ಮೂರು ರೀತಿಯಾಗಿ ಗುರುತಿಸಬಹುದು.

ಪ್ರಧಾನ ಆಘಾತ

ಗೌಣ ಆಘಾತ

ದುರ್ಬಲ ಆಘಾತ

ಧ್ವನಿತರಂಗಗಳ ಒತ್ತಡ ಹೆಚ್ಚಿದ್ದರೆ ಅದು ಪ್ರಧಾನ ಆಘಾತ, ಒತ್ತಡದ ತೀವ್ರತೆ ಸ್ವಲ್ಪ ಕಡಿಮೆಯಿದ್ದರೆ ಗೌಣ ಆಘಾತ, ಧ್ವನಿ ತರಂಗಗಳ ಒತ್ತಡ ತುಂಬ ಕಡಿಮೆಯಿದ್ದರೆ ಅದು ದುರ್ಬಲ ಆಘಾತ ಎನಿಸಿಕೊಳ್ಳುತ್ತದೆ.

ಉದಾ.

‘finish’

‘female’

‘under’

ಈ ಆಂಗ್ಲ ಉದಾಹರಣೆಗಳಲ್ಲಿ f, u ಧ್ವನಿಗಳ ಮೇಲಿರುವ ಆಘಾತ ಪ್ರಧಾನ ಆಘಾತವಾಗಿದೆ. ಅದನ್ನು ಆಘಾತಕ್ಕೊಳಗಾದ ಧ್ವನಿಯ ಮೇಲೆ ಎಡಗಡೆ (‘) ಈ ಚಿಹ್ನೆ ಹಾಕುವುದರ ಮೂಲಕ ಸೂಚಿಸುತ್ತಾರೆ.

be’hind

chi’nese

ma’chine

ಈ ಉದಾಹರಣೆಗಳಲ್ಲಿ h,n ಮತ್ತು c ಧ್ವನಿಗಳ ಮೇಲಿರುವ ಆಘಾತ ಗೌಣ ಆಘಾತವಾಗಿದೆ. ಮೇಲಿನ ಪ್ರಧಾನ ಮತ್ತು ಗೌಣ ಆಘಾತದ ಉದಾಹರಣೆಗಳಲ್ಲಿ ಚಿಹ್ನೆ ಹಾಕಿದ ಧ್ವನಿಗಳನ್ನು ಹೊರತುಪಡಿಸಿ ಉಳಿದೆಲ್ಲ ಧ್ವನಿಗಳ ಮೇಲೆ ಆಘಾತ ತುಂಬ ಕಡಿಮೆ ಇದೆ. ಅದು ದುರ್ಬಲ ಆಘಾತವಾಗಿದೆ. ಆಘಾತ ಪದಗಳ ಆದಿ, ಮಧ್ಯ ಮತ್ತು ಅಂತ್ಯಗಳಲ್ಲಿ ಕಾಣಿಸಿಕೊಳ್ಳಬಹುದು.

ಉಚ್ಚಾರದಲ್ಲಿ ಕಾಣಿಸಿಕೊಳ್ಳುವ ಆಘಾತ ಅರ್ಥ ವ್ಯತ್ಯಾಸಕ್ಕೆ ಕಾರಣವಾಗುತ್ತಿದ್ದರೆ ಅದು ಧ್ವನಿಮಾ ಎನಿಸಿಕೊಳ್ಳುತ್ತದೆ. ಉದಾ. ಆಂಗ್ಲ ಭಾಷೆಯ ……… ಪದವನ್ನು ಎರಡು ರೀತಿಯಲ್ಲಿ ಉಚ್ಚರಿಸಬಹುದು.

pre’sent ನಾಮಪದ prese’nt ಕ್ರಿಯಾಪದ
sur’vey -ನಾಮಪದ surve’y ಕ್ರಿಯಾಪದ
con’tract ನಾಮಪದ contra’ct ಕ್ರಿಯಾಪದ
pe’rmit ನಾಮಪದ permi’t ಕ್ರಿಯಾಪದ

ಈ ಉದಾಹರಣೆಗಳನ್ನು ಗಮನಿಸಿದರೆ ಆಘಾತವು ಪ್ರಥಮಾಕ್ಷರದ ಮೇಲೆ ಬಿದ್ದರೆ ಅದು ನಾಮಪದ. ಆಘಾತವು ಅಂತ್ಯಾಕ್ಷರದ ಮೇಲೆ ಬಿದ್ದರೆ ಅದು ಕ್ರಿಯಾಪದ. ಉಚ್ಚಾರಣೆಯಲ್ಲಿ ಧ್ವನಿಗಳ ಏರಿಳಿತ ಕ್ರಿಯೆಯಿಂದ ನಾಮಪದಗಳು ಕ್ರಿಯಾಪದಗಳಾಗಿ, ಕ್ರಿಯಾಪದಗಳು ನಾಮಪದಗಳಾಗಿ ಪರಿವರ್ತನೆ ಹೊಂದುತ್ತವೆ. ಇಂಡೋ ಯುರೋಪಿಯನ್ ಭಾಷೆಯಲ್ಲಿ ಇಂತಹ ಉದಾಹರಣೆಗಳು ಸಾಕಷ್ಟು ಸಂಖ್ಯೆಯಲ್ಲಿ ದೊರೆಯುತ್ತವೆ. ಕನ್ನಡದಲ್ಲಿ ತುಂಬ ವಿರಳ. ಆಘಾತ ಕ್ರಿಯ ಅರ್ಥ ವ್ಯತ್ಯಾಸಕ್ಕೆ ಕಾರಣವಾಗಿ ರುವುದರಿಂದ ಧ್ವನಿಮಾ ಎಂದು ಗುರುತಿಸಬಹುದಾಗಿದೆ.

. ತೀವ್ರತೆ : ಉಚ್ಚಾರದಲ್ಲಿ ಕಂಡುಬರುವ ಏರಿಳಿತವನ್ನು ತೀವ್ರತೆ ಎಂದು ಕರೆಯುವರು. ಸ್ವರತಂತುಗಳ ಕಂಪನದಿಂದ ತೀವ್ರತೆ ಉಂಟಾಗುವುದು. ಇದು ಸಾಮಾನ್ಯವಾಗಿ ಪದಗಳ ಮಟ್ಟದಲ್ಲಿ ವಾಕ್ಯಗಳ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತದೆ. ಉಚ್ಚಾರದಲ್ಲಿ ಧ್ವನಿ ಏರುಮುಖವಾಗಿರಬಹುದು (ಉದಾತ್ತ). ಇಳಿಮುಖವಾಗಿರ ಬಹುದು. (ಅನುದಾತ್ತ) ಅಥವಾ ಸಹಜ ರೀತಿಯಲ್ಲಿರಬಹುದು. ಧ್ವನಿಗಳ ಈ ಏರಿಳಿತ ಅರ್ಥಭೇದಕ ಶಕ್ತಿ ಹೊಂದಿದ್ದರೆ ಅದು ಧ್ವನಿಮಾ ಎನಿಸಿಕೊಳ್ಳುತ್ತದೆ. ಭಾರತೀಯ ಭಾಷೆಯಲ್ಲಿ ತೀವ್ರತೆಯನ್ನು ಪದಗಳ ಮಟ್ಟದಲ್ಲಿ ಗುರುತಿಸ ಬಹುದಾಗಿದೆ. ಉಚ್ಚಾರದಲ್ಲಿ ಧ್ವನಿ ಇಳಿಮುಖವಾಗಿದ್ದರೆ â ಅದನ್ನು ಇಳಿತೀವ್ರತೆ ಎಂದು ಕರೆಯುವರು. ಅದು ನಿರಾಶಾದಾಯತ ಅರ್ಥವನ್ನು ಸೂಚಿಸುತ್ತದೆ. ಧ್ವನಿ ಏರುಮುಖವಾಗಿದ್ದರೆ á ಅದನ್ನು ಏರು ತೀವ್ರತೆ ಎನ್ನುವರು. ಅದು ಪ್ರಶ್ನಾರ್ಥವನ್ನು ಸೂಚಿಸುತ್ತದೆ. ಧ್ವನ್ಯುಚ್ಚಾರಣೆ ಸಹಜ ರೀತಿಯಲ್ಲಿದ್ದರೆ à ಅದು ಸಹಜ ತೀವ್ರತೆ ಎನ್ನುವರು. ಅದು ಸಮ್ಮತಿಯನ್ನು ಸೂಚಿಸುತ್ತದೆ.

ಉದಾ – ಕನ್ನಡದಲ್ಲಿ ಬಾ ತಿನ್ನು, ಹಾಕು ಹೋಗು ಏಳು ಮುಂತಾದ ಕ್ರಿಯಾ ಪದಗಳನ್ನು ಬೇರೆ ಬೇರೆ ಸಂದರ್ಭದಲ್ಲಿ ಉಚ್ಚಾರ ಮಾಡಿದಾಗ ಬೇರೆ ಬೇರೆ ಅರ್ಥವನ್ನು ಸೂಚಿಸುತ್ತವೆ.

e,L,u (ಏಳು) ಪ್ರಶ್ನಾರ್ಥಕ

e,L,u (ಏಳು) ಉದ್ಗಾರ / ನಿರಾಶಾದಾಯಕ

e,L,u (ಏಳು) ಸಮ್ಮತಿ / ಹೇಳಿಕೆ

ಧ್ವನ್ಯುಚ್ಚಾರಣೆಯಲ್ಲಿ ಸಾಮಾನ್ಯವಾಗಿ ಈ ಮೂರು ರೀತಿಯ ತೀವ್ರತೆಗಳನ್ನು ಗುರುತಿಸಿದರೂ ಆಯಾ ಭಾಷೆಯ ರಚನೆಗೆ ಅನುಗುಣವಾಗಿ ಇನ್ನೂ ವಿಭಿನ್ನ ತರಹದ ತೀವ್ರತೆಗಳನ್ನು ಅನೇಕ ಭಾಷೆಯಲ್ಲಿ ಗುರುತಿಸಬಹುದಾಗಿದೆ. ಪೀಟರ್ ಲ್ಯಾಡ್ ಪೋಗೆಡ್ ಅವರು ಇಂಗ್ಲಿಷಿನ ‘Yes’ ಎಂಬ ಪದ ಧ್ವನಿಗಳ ಏರಿಳಿತದಿಂದ ಬೇರೆ ಬೇರೆ ಅರ್ಥದಲ್ಲಿ ಬಳಕೆಯಾಗುತ್ತದೆಂಬುದನ್ನು ತೋರಿಸುತ್ತಾರೆ.

ಬಿನಿ ಎಂಬ ಭಾಷೆಯಲ್ಲಿ ಕಾಲ ವ್ಯವಸ್ಥೆಯನ್ನು ಸೂಚಿಸುವಾಗ ಧ್ವನಿಗಳ ಉಚ್ಚಾರಣೆಯಲ್ಲಿ ಏರಿಳಿತವಾದರೆ ಅರ್ಥ ವ್ಯತ್ಯಾಸವಾಗುವುದುಂಟು.

ಮಂಡಾರಿನ್ ಚೈನೀಸ್ ಭಾಷೆಯಲ್ಲಿ ಧ್ವನಿ ಏರಿಳಿತ ಅರ್ಥ ವ್ಯತ್ಯಾಸವನ್ನುಂಟು ಮಾಡುತ್ತದೆ.

ಹೀಗೆ ಉಚ್ಚಾರಣೆಯಲ್ಲಿ ಧ್ವನಿ ಏರಿಳಿತ ಪ್ರತ್ಯೇಕ ಶಬ್ದ ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಧ್ವನಿಮಾ ಎಂದು ವಿವರಿಸ ಬಹುದಾಗಿದೆ.

. ಸಂಧಿಸ್ಥಾನ : ಕೆಲವು ಪದಗಳ ಸಂಧಿ ಸ್ಥಾನದಲ್ಲಿರುವ ಧ್ವನಿಗಳ ಉಚ್ಚಾರಣೆಯಲ್ಲಿ ಮೌನ ಏರ್ಪಟ್ಟಾಗ ಅರ್ಥ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಈ ಕ್ರಿಯೆಗೆ ಸಂಧಿಸ್ಥಾನ ಅಥವಾ ಸಂಗಮ ಎಂದು ಹೆಸರು.

ಉದಾ : ಕನ್ನಡದಲ್ಲಿ ಸಾವಿರದ, ಆಲೋಕ, ಹಾರಬೇಕು, ನಾಕಾಣೆ, ಶಾಂತರಸ ಈ ಪದಗಳನ್ನು ಗಮನಿಸಿದಾಗ ಇವುಗಳ ಉಚ್ಚಾರಣೆಯಲ್ಲಿ ಅಲ್ಲಿರುವ ಧ್ವನಿಗಳ ನಡುವೆ ಮೌನ ಏರ್ಪಟ್ಟು ಅರ್ಥ ವ್ಯತ್ಯಾಸವಾಗುತ್ತದೆ.

ಸಾವು+ಇರದ ಆ+ಲೋಕ
ಹಾರ+ಬೇಕು ನಾ+ಕಾಣೆ
ಶಾಂತ+ರಸ  

ಉಚ್ಚಾರಣೆಯಲ್ಲಿ ಸ್ವಲ್ಪ ವಿರಾಮವಿದ್ದರೆ ಅದು ಆಂತರಿಕ ಸಂಗಮ. ಮೇಲಿನ ಉದಾಹರಣೆಗಳನ್ನು ವಿರಾಮವಿಲ್ಲದೇ ಉಚ್ಚರಿಸಿದಾಗ ಬೇರೊಂದು ಅರ್ಥವನ್ನು ಕೊಡುತ್ತವೆ. ಸಾವಿರದ, ಹಾರಬೇಕು, ಆಲೋಕ, ನಾಕಾಣೆ, ಶಾಂತರಸ ಇದು ಬಾಹ್ಯ ವಿರಾಮ. ಇಂತಹ ಉದಾಹರಣೆಗಳು ಜಗತ್ತಿನ ಅನೇಕ ಭಾಷೆಗಳಲ್ಲಿ ಕಂಡುಬರುತ್ತವೆ.

ಹಿಂದಿ ಭಾಷೆಯಲ್ಲಿ ‘ಸೋಡಾಲಾ’ ಪದವನ್ನು ಗಮನಿಸಿದಾಗ

ಸೋ+ಡಾಲ್ = ಮಲಗಿದನು

ಸೋಡಾ+ಲಾ = ಸೋಡಾಕೊಡು

ವಿರಾಮ ಪದದ ಮಧ್ಯದಲ್ಲಿ ನಡೆಯುವುದರಿಂದ ಇದಕ್ಕೆ + ಚಿಹ್ನೆಯನ್ನು ಬಳಸುವ ವಾಡಿಕೆಯಿದೆ. ವಿರಾಮ ಕ್ರಿಯೆ ಅರ್ಥ ವ್ಯತ್ಯಾಸಕ್ಕೆ ಕಾರಣ ವಾಗಿರುವುದರಿಂದ ಧ್ವನಿಮಾ ಎನಿಸಿಕೊಳ್ಳುತ್ತದೆ.

ಹೀಗೆ ಭಾಷೆಯನ್ನು ಬಳಸುವಾಗ ಸ್ವರ ಮತ್ತು ವ್ಯಂಜನಗಳಂತೆ (ವಿಭಾಜಕಗಳು) ಅವಿಭಾಜಕ ಅಂಶಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಅವಿಭಾಜಕ ಅಂಶಗಳಿಂದ ವಾಕ್ಯಗಳನ್ನು ವಿಂಗಡಿಸಲು, ವಾಕ್ಯಾರ್ಥದ ಕೇಂದ್ರ ವನ್ನು ಸೂಚಿಸಲು ಹಾಗೂ ಮಾತನಾಡುವವರ ವರ್ತನೆಯನ್ನು ತಿಳಿಯಲು ಅನುಕೂಲವಾಗುತ್ತದೆ. ಅವಿಭಾಜಕ ಅಂಶಗಳು ಕಂಪನ, ಕಂಪನ ವಿಸ್ತಾರ, ಕಂಪನಾಂಕ, ಆವರ್ತ, ಶ್ರುತಿ ಇತ್ಯಾದಿ ಧ್ವನಿಗಳ ಭೌತಿಕ ಗುಣಗಳನ್ನು ಅವಲಂಬಿಸಿರುವುದರಿಂದ ಭೌತ ಧ್ವನಿಶಾಸ್ತ್ರದ ಹಿನ್ನಲೆಯಲ್ಲಿ ಹೊಸಗನ್ನಡ ಕಾವ್ಯಗಳ ಛಂದಸ್ಸನ್ನು ವಿಶ್ಲೇಷಿಸಿದಾಗ ಅಂಶಗಳನ್ನು ಗುರುತಿಸಬಹುದಾಗಿದೆ. ಅವಿಭಾಜಕ ಅಂಶಗಳನ್ನು ಹೊಸಗನ್ನಡ ಕಾವ್ಯಗಳಿಗೆ ಅನ್ವಯಿಸಿ ನೋಡಿದರೆ ಭಾಷೆ ಮತ್ತು ಛಂದಸ್ಸಿನ ದೃಷ್ಟಿಯಿಂದ ಖಂಡಿತವಾಗಿಯೂ ಸ್ವಾರಸ್ಯಕರವಾದ ಸಂಗತಿಗಳನ್ನು ಗುರುತಿಸಬಹುದಾಗಿದೆ.