ಧ್ವನಿ ಪ್ರಸರಣದ ಮೂಲ ತತ್ತ್ವಗಳು ಭೌತಶಾಸ್ತ್ರದ ಅಂಗವಾಗಿ ಬರುವದಾದರೂ ಧ್ವನಿ ವಿಜ್ಞಾನದ ಮೂರನೆಯ ಅಂಗವಾದ ಭೌತ ಧ್ವನಿ ವಿಜ್ಞಾನವನ್ನು (ಅಕೌಸ್ಟಿಕ್ ಫೊನೆಟಿಕ್ಸ್) ಅರಿಯುವಾಗ ಅವು ಅಗತ್ಯವಾಗು ತ್ತವೆ. ಅಂದರೆ, ಧ್ವನಿ ಪ್ರಸರಣದ ತತ್ತ್ವಗಳು ಧ್ವನಿ ವಿಜ್ಞಾನದ ಮೊದಲ ಎರಡು ಅಂಗಗಳಾದ ಉಚ್ಚಾರಣಾ ಧ್ವನಿವಿಜ್ಞಾನ (ಆರ‌್ಟಿಕ್ಯುಲೇಟರಿ ಫೊನೆಟಿಕ್ಸ್) ಹಾಗೂ ಶ್ರವಣ ಧ್ವನಿವಿಜ್ಞಾನ(ಆಡಿಟರಿ ಫೊನೆಟಿಕ್ಸ್)ಗಳಿಗೆ ಯಾವ ರೀತಿ ಯಲ್ಲೂ ಸಹಾಯ ಮಾಡಲಾರವು. ಆದರೆ, ಮಾತಾಡುವವನ ಬಾಯಿಂದ ಹೊರಟ ಧ್ವನಿ ಕೇಳುವವನ ಕಿವಿಯ ಮೇಲೆ ಬಿದ್ದು ಕೇಳುಗನಿಗೆ ಸಂದೇಶವನ್ನು ಮುಟ್ಟಿಸುವ ಕಾರ್ಯ ಮಾಡುವ ಈ ಧ್ವನಿ ಎಂಬ ಶಕ್ತಿಯ ಭೌತ ಸ್ವರೂಪ ವೇನು ಎಂಬುದನ್ನು ಭೌತ ಧ್ವನಿವಿಜ್ಞಾನವು ವಿವರಿಸುತ್ತದೆ. ಧ್ವನಿಯ ಭೌತ ಸ್ವರೂಪವನ್ನು ಅರಿಯುವುದರಿಂದ ಧ್ವನಿಯ ವೈಜ್ಞಾನಿಕ ವಿಶ್ಲೇಷಣೆಗೆ ಸಹಾಯ ವಾಗುತ್ತದೆ. ಶ್ರವಣ ಧ್ವನಿವಿಜ್ಞಾನದಿಂದ ಒಮ್ಮೊಮ್ಮೆ ನಿಖರವಾಗಿ ಅರಿಯ ಲಾಗದ ಧ್ವನಿಗಳನ್ನು ಭೌತ ಧ್ವನಿವಿಜ್ಞಾನದ ವಿಶ್ಲೇಷಣೆಯಿಂದ ಅರಿಯ ಬಹುದು. ವಿಮಾನಾಪಘಾತವಾದಾಗ ಕಪ್ಪುಪೆಟ್ಟಿಗೆ(ಬ್ಲಾಕ್‌ಬಾಕ್ಸ್) ಯಲ್ಲಿ ಸಂಗ್ರಹಿತವಾದ ಧ್ವನಿಗಳನ್ನು ವಿಶ್ಲೇಷಿಸಿ ಅಪಘಾತದ ಕಾರಣಗಳನ್ನು ಕಂಡು ಹಿಡಿಯುವಲ್ಲಿ ಸಹಾಯ ಮಾಡುವುದೂ ಕೂಡ ಈ ಭೌತ ಧ್ವನಿವಿಜ್ಞಾನವೇ.

ಧ್ವನಿಶಕ್ತಿ

ಕಂಪನಗೊಳ್ಳಬಲ್ಲ ಯಾವುದೇ ಪದಾರ್ಥದ ಮೇಲೆ ಆಘಾತವುಂಟಾದಾಗ ಆ ಪದಾರ್ಥ ಕಂಪನಗೊಳ್ಳುತ್ತದೆ. ಅಂದರೆ ಅದು ತನ್ನ ಮೂಲಸ್ಥಾನದಿಂದ ಹಿಂದಕ್ಕೂ ಮುಂದಕ್ಕೂ ಚಲಿಸುತ್ತದೆ. ಈ ಚಲನೆಯು ಆ ಪದಾರ್ಥಕ್ಕೆ ಹತ್ತಿಕೊಂಡಿರುವ ವಾಯು, ದ್ರವ ಮುಂತಾದ  ಧ್ವನಿವಾಹನ ಮಾಧ್ಯಮಗಳಲ್ಲಿ ತರಂಗಗಳನ್ನು ಎಬ್ಬಿಸುತ್ತದೆ. ಹೀಗೆ ಮಾಧ್ಯಮದ ಕಣಗಳು ಧ್ವನಿಯನ್ನು ಮುಂದಕ್ಕೆ ಮುಂದಕ್ಕೆ ಸಾಗಿಸುತ್ತವೆ. ಆದರೂ ಆ ಕಣಗಳು ಮಾತ್ರ ತಮ್ಮ ಮೂಲಸ್ಥಾನದಿಂದ ಚಲಿಸುವುದಿಲ್ಲ. ಹೀಗೆ ಅದು ಕೇಳುಗನ ಕಿವಿಯ ಪಟಲದ ಮೇಲೆಯೋ, ಧ್ವನಿ ಮುದ್ರಣ ಯಂತ್ರದ ಮೈಕಿನ ಮೇಲೆಯೋ ಬಿದ್ದು ಇನ್ನೊಂದು ತುದಿಗೆ ಧ್ವನಿಗ್ರಹಣವಾಗುತ್ತದೆ. ಈ ಧ್ವನಿಗ್ರಹಣ ಸಾಮಗ್ರಿಗಳು ಧ್ವನಿಶಕ್ತಿಯು ಚಲಿಸಬಲ್ಲ ದೂರಕ್ಕೂ ಮಿಕ್ಕಿದ ದೂರದಲ್ಲಿ ಇದ್ದರೆ ಆಗ ಧ್ವನಿಗ್ರಹಣವಾಗುವುದಿಲ್ಲ. ಕೇಳುಗರೇ ಇಲ್ಲದ ಧ್ವನಿ ಅರಣ್ಯರೋದನ ವಲ್ಲವೇ? ಧ್ವನಿಯು ಹತ್ತೂ ದಿಕ್ಕನಲ್ಲಿ ಚಲಿಸಬಲ್ಲದು. ಧ್ವನಿಯ ತರಂಗಗಳನ್ನು ನೀರಿನ ತರಂಗಕ್ಕೆ ಹೋಲಿಸುತ್ತಾರೆ. ಸ್ತಬ್ಧವಾದ  ಕೆರೆಯ ನೀರಿನಲ್ಲಿ ಒಂದು ಕಲ್ಲನ್ನು ಎಸೆದರೆ ತರಂಗಗಳು ದಡದವರೆಗೆ ಹೋಗುತ್ತಲೇ ಇರುತ್ತವೆ. ಎಸೆದುದು ಒಂದು ಕಲ್ಲಾದರೂ ಅನೇಕ ತರಂಗಗಳು ಕಲ್ಲು, ನೀರಿನ ತಳಕ್ಕೆ ಹೋದ ಮೇಲೂ ಕೂಡ, ಹುಟ್ಟುತ್ತಿರುವುದನ್ನು ಕಾಣಬಹುದು. ಅದೇ ರೀತಿ ಖಾಲಿ ಪಾತ್ರೆಯ ಅಂಚಿಗೆ ಒಂದೇಟು ಕೊಟ್ಟರೆ ಬಹಳ ಹೊತ್ತಿನ ವರೆಗೆ ಧ್ವನಿಯನ್ನು ಕೇಳುತ್ತಿರುತ್ತೇವೆ. ನೀರಿನ ಅಲೆಗಳಿಗೂ ಧ್ವನಿಯ ಅಲೆಗಳಿಗೂ  ತೋರಿಕೆಗೆ ಹೋಲಿಕೆ ಇದ್ದರೂ ಮೂಲಭೂತ ಸ್ವರೂಪದಲ್ಲಿ ಎರಡೂ ಭಿನ್ನ ಜಾತಿಯ ಅಲೆಗಳು. ಅವುಗಳ ಭಿನ್ನತೆಯನ್ನು ಹೀಗೆ ವಿವರಿಸ ಬಹುದು. ನೀರಿನ ಅಲೆಗಳ ಮೇಲೊಂದು ಬೆಂಡನ್ನು ಎಸೆದರೆ ಆ ಬೆಂಡು ಅಲೆಗಳು ಹೋಗುವ ದಿಕ್ಕಿನತ್ತ ಚಲಿಸದೆ ಇದ್ದಲ್ಲಿಯೇ ಮೇಲಕ್ಕೂ ಕೆಳಕ್ಕೂ ಚಲಿಸುತ್ತದೆ. ಅಂದರೆ, ಬೆಂಡಿನ ಚಲನೆ ತೆರೆಗಳ ಚಲನೆಯ ದಿಕ್ಕಿಗೆ ಲಂಬಾತ್ಮಕ ವಾಗಿರುತ್ತದೆ. ಅದೇ ರೀತಿ ಒಂದು ಕಾಲ್ಪನಿಕ ಬೆಂಡನ್ನು ಧ್ವನಿಯ ಅಲೆಗಳ ಮೇಲೆ ಹಾಕಿದೆವೆಂದುಕೊಳ್ಳಿ. ಆಗ ಆ ಬೆಂಡು ಮೆಲಕ್ಕೂ ಕೆಳಕ್ಕೂ ಚಲಿಸುವುದರ ಬದಲು ಹಿಂದಕ್ಕೂ ಮುಂದಕ್ಕೂ ಚಲಿಸುತ್ತದೆ. ಅಂದರೆ ಈ ಬೆಂಡಿನ ಚಲನೆ ತೆರೆಗಳ ಚಲನೆಯ ದಿಕ್ಕಿಗೆ ಸಮಾನಾಂತರವಾಗಿರುತ್ತದೆ. ಸಣ್ಣ ಕಲ್ಲನ್ನು ಹಾಕಿದಾಗ ಸಣ್ಣ ಸಣ್ಣ ತೆರೆಗಳೂ ದೊಡ್ಡ ಕಲ್ಲನ್ನು ಹಾಕಿದಾಗ ದೊಡ್ಡ ದೊಡ್ಡ ತೆರೆಗಳೂ ಏಳುವಂತೆ ಮೆತ್ತಗೆ ಆಘಾತವಾದಾಗ ಸಣ್ಣ ಶಬ್ದವು ದೊಡ್ಡ ಆಘಾತವಾದಾಗ ದೊಡ್ಡ ಶಬ್ದವೂ ಉಂಟಾಗುತ್ತವೆ. ದೊಡ್ಡ ತೆರೆಗಳು ಹೆಚ್ಚು ದೂರ ಕ್ರಮಿಸುವಂತೆ ದೊಡ್ಡ ಶಬ್ದವು ಹೆಚ್ಚು ದೂರ ಕ್ರಮಿಸುತ್ತದೆ.

ತರಂಗ ರೂಪ

ತರಂಗ ರೂಪವನ್ನು ವಿವರಿಸುವುದಕ್ಕೆ ಶ್ರುತಿ ಕವೆ(ಟ್ಯೂನಿಂಗ್ ಫೋರ್ಕ್) ಯನ್ನು ಉಪಯೋಗಿಸುತ್ತಾರೆ. ಕೆಳಗಿನ ಚಿತ್ರವನ್ನು ನೋಡಿರಿ.

ಮೇಲಿನ ಸಲಕರಣೆಯನ್ನು ಕುಟ್ಟಿದಾಗ ಅದು ಒಂದೇ  ರೀತಿಯ ಧ್ವನಿಯನ್ನು ಕೊಡುತ್ತದೆ.  ಅಂದರೆ ಅದರ ಬೆರಳುಗಳು ಹಿಂದೂ ಮುಂದೂ ನಿಶ್ಚಿತ ವೇಗದಲ್ಲಿ ಚಲಿಸುತ್ತವೆ. ಇದು ನೀಡುವ ಧ್ವನಿಯನ್ನು ಅ ಮತ್ತು ಬ ಅಕ್ಷ(ಆಕ್ಸಿಸ್)ಗಳ ಸಹಾಯದಿಂದ ಹೀಗೆ ನಿರೂಪಿಸಬಹುದು.

ಪ್ರಾರಂಭದ ಮೂಲಸ್ಥಾನದಿಂದ ಮುಂದೆ ಬಂದುದನ್ನು ಗೆರೆಯ ಮೇಲ್ಭಾಗದಲ್ಲೂ ಅದರಿಂದ ಹಿಂದೆ ಹೋದುದನ್ನು ಕೆಳಭಾಗದಲ್ಲೂ ತೋರಿಸುತ್ತಾರೆ. ಏಕೆಂದರೆ ಶೂನ್ಯಸ್ಥಾನದಿಂದ ಇವೆರಡೂ ಗತಿಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ಹೀಗೆ ಮೂಲಸ್ಥಾನದಿಂದ ಮುಂದೆ ಹೋಗಿ ಮೂಲಸ್ಥಾನಕ್ಕೆ ಬಂದು ಹಿಂದೆ ಹೋಗಿ ಪುನಃ ಮೂಲಸ್ಥಾನಕ್ಕೆ ಬಂದಾಗ ಒಂದು ಆವರ್ತ ಪೂರ್ತಿಯಾಯಿತೆಂದು ಅರ್ಥ. ಹೀಗೆ ಒಂದು ತರಂಗವು ಒಂದು ಸೆಕೆಂಡಿನಲ್ಲಿ ಎಷ್ಟು ಆವರ್ತಗಳನ್ನು ಪೂರೈಸುತ್ತದೆಯೋ ಅಷ್ಟು ಅದರ ಆವೃತ್ತಿ ಶಕ್ತಿ (ಫ್ರಿಕ್ವೆನ್ಸಿ) ಎಂದರ್ಥ. ಹೀಗೆ 240 ಆವೃತ್ತಿ ಶಕ್ತಿಯ ಶ್ರುತಿ ಕವೆಯು ಸೆಕೆಂಡಿಗೆ 240 ಆವರ್ತಗಳನ್ನು ಪೂರೈಸುತ್ತದೆ. ಇಂಥ ಸಲಕರಣೆಗಳು ಕೊಡುವ ಧ್ವನಿ ಶುದ್ಧ ಧ್ವನಿಯೆನಿಸುತ್ತದೆ. ಏಕೆಂದರೆ ಶುದ್ಧ ಧ್ವನಿಯು ಶುದ್ಧ ತರಂಗಗಳನ್ನು ನೀಡುತ್ತದೆ. ಅಂದರೆ ಅದರಲ್ಲಿ ಬೇರೆ ತರಂಗಗಳ ಮಿಶ್ರಣ ವಿರುವುದಿಲ್ಲ. ಈ ರೀತಿಯ ಶುದ್ಧ ತರಂಗಗಳಿಗೆ ಸೈನ್ ತರಂಗ ಎಂದೂ ಅನ್ನುತ್ತಾರೆ.

ಸಮ್ಮಿಶ್ರ ತರಂಗ ರೂಪ

ಭಿನ್ನ ಭಿನ್ನ ಆವೃತ್ತಿ ಶಕ್ತಿಯುಳ್ಳ ಶ್ರುತಿ ಕವೆಗಳನ್ನು ಏಕ ಕಾಲಕ್ಕೆ ನುಡಿಸಿದರೆ ಅವುಗಳು ಕೊಡುವ ಧ್ವನಿ ಸಮ್ಮಿಶ್ರವಾಗಿರುತ್ತದೆ. ಉದಾಹರಣೆಗೆ ಕೆಳಗಿನ ಚಿತ್ರವನ್ನು ನೋಡಿರಿ. 240ರ ಹಾಗೂ 480 ಆವೃತ್ತಿ ಶಕ್ತಿಯುಳ್ಳ ಎರಡು ಶ್ರುತಿ ಕವೆಗಳನ್ನು ಏಕಕಾಲದಲ್ಲಿ ನುಡಿಸಲಾಗಿದೆ.

ಮೇಲಿನ ಚಿತ್ರದಲ್ಲಿ 240 ಆವೃತ್ತಿ ಶಕ್ತಿಯ ತರಂಗದ ಎಷ್ಟು ಆವರ್ತಗಳಾಗುವವೋ ಅಷ್ಟೇ ಸಮಯದಲ್ಲಿ ಅದರ ಇಮ್ಮಡಿ ಸಂಖ್ಯೆಯ ಆವರ್ತಗಳು 480 ಆವೃತ್ತಿ ಶಕ್ತಿಯ ತರಂಗದವು ಆಗುತ್ತವೆ. ಮೇಲಿನ ಸನ್ನಿವೇಶವನ್ನು ಒಂದೇ ಸಂಕೀರ್ಣ ತರಂಗವಾಗಿ ಕೆಳಗಿನಂತೆ ನಿರೂಪಿಸಲಾಗುತ್ತದೆ.

ಇಂಥ ತರಂಗಗಳು ಸೆಕೆಂಡಿನಲ್ಲಿ ಎಷ್ಟು ಪೂರ್ಣವಾಗುತ್ತವೆಯೋ ಆ ಸಂಖ್ಯೆ ಆ ಧ್ವನಿಯ ಮೂಲ ಆವರ್ತ (ಫಂಡಮೆಂಟಲ್ ಫ್ರಿಕ್ವೆನ್ಸಿ) ಎನಿಸುತ್ತದೆ. ಅದನ್ನು ಮೂಲ (Fo) ಎಂದು ಸಂಕೇತಿಸಬಹುದು. ಈ ತತ್ತ್ವವನ್ನು ಹರ್ಟ್ಸ್ ಎಂಬ ಜರ್ಮನ್ ವಿಜ್ಞಾನಿಯು ಕಂಡು ಹಿಡಿದುದರಿಂದ ಅವನ ಹೆಸರಿನಿಂದಲೇ ಆವೃತ್ತಿ ಸಂಖ್ಯೆಯನ್ನು ಸೂಚಿಸುತ್ತಾರೆ. ಆತನ ಹೆಸರನ್ನು ಹ (Hz) ಎಂದು ಸಂಕ್ಷೇಪಿಸಿ ಬರೆಯುತ್ತಾರೆ. 20 ಹ, 40 ಹ ಹೀಗೆ.

ಒಂದು ಸಮ್ಮಿಶ್ರ ಧ್ವನಿಯಲ್ಲಿ 240ಹ, 120ಹ ಮತ್ತು 480ಹ ಹೀಗೆ ಧ್ವನಿಗಳಿದ್ದರೆ ಅವುಗಳ ಸಾಮಾನ್ಯ ಭಾಜಕವಾದ 120ಹ ಆ ಸಮ್ಮಿಶ್ರ ಧ್ವನಿಯ ಮೂಆ (ಮೂಲ ಆವರ್ತ) ಇರುತ್ತದೆ. ಸಮ್ಮಿಶ್ರ ಧ್ವನಿಯಲ್ಲಿ 120ಹ ದ ಧ್ವನಿಯು ಇರದಿದ್ದರೂ ಈ ತತ್ತ್ವ ತಪ್ಪದಂತೆ ನಡೆಯುತ್ತದೆ. ಸಾಮಾನ್ಯವಾಗಿ, ಮೂಆ ಹೆಚ್ಚಿದಂತೆ ಧ್ವನಿಯು ತಾರವಾಗಿಯೂ ಮೂಆ ಕಡಿಮೆಯಾದಂತೆ ಧ್ವನಿಯು ಮಂದ್ರವಾಗಿಯೂ ಕೇಳಿಸುತ್ತದೆ.

ಸಾಮಾನ್ಯವಾಗಿ 20ಹ ದಿಂದ 200ಹ ವರೆಗೆ ಆವೃತ್ತಿ ಸಂಖ್ಯೆಯನ್ನುಳ್ಳ ಧ್ವನಿಯನ್ನು ಕಿವಿಯಿಂದ ಕೇಳಬಹುದು. ಇದಕ್ಕೂ ಕಡಿಮೆಯ ಅಥವಾ ಅದಕ್ಕೂ ಹೆಚ್ಚಿನ ಆವೃತ್ತಿ ಸಂಖ್ಯೆಯ ಧ್ವನಿಯು ಕಿವಿಗೆ ಕೇಳಿಸುವುದಿಲ್ಲ.

ಆಂದೋಳ ಲೇಖನದಿಂದ (ಆಸಿಲೊಗ್ರಾಫ್) ತೆಗೆದ ಕೆಳಗಿನ ತರಂಗ ಚಿತ್ರವನ್ನು ನೋಡಿರಿ:

ಮೇಲಿನ ಆಂದೋಳ ಲೇಖವು  ಅ, ಷ್, ಟ್, ಉ ಧ್ವನಿಗಳ ತರಂಗರೂಪವನ್ನು ಚಿತ್ರಿಸುತ್ತದೆ. ಸ್ವರಗಳಾದ ಅ ಮತ್ತು ಉ ಗಳು ನಿಯಮಿತ ರೂಪದಲ್ಲಿ ತರಂಗಗಳನ್ನು ತೋರಿಸುತ್ತವೆ. ಆದರೆ ಷ್ ವು ಊಷ್ಮವಾದ್ದರಿಂದ ಅದರ ತರಂಗರೂಪವು ಸದ್ದಿನ ತರಂಗದಂತೆ ಇದೆ. ಅಂದರೆ ತರಂಗಗಳು ಅನಿಯಮಿತ ರೂಪದಲ್ಲಿ ಇವೆ. ಅ ವು ಉ ಕ್ಕಿಂತ ಹೆಚ್ಚು ತೀವ್ರತೆಯನ್ನು ಹೊಂದಿರುವುದನ್ನೂ ಕಾಣಬಹುದು. ಟ್ ವು ಅಘೋಷ ಸ್ಪರ್ಶಾಕ್ಷರವಾದ್ದರಿಂದ ಅದಕ್ಕೆ ಯಾವ ರೀತಿಯ ತರಂಗವಿರುವುದಿಲ್ಲ. ಸ್ಪರ್ಶಾಕ್ಷರದ ಸ್ಫೋಟ ಕಂಡು ಬರುತ್ತದೆ ಎಂಬುದನ್ನು ಲಕ್ಷಿಸಬೇಕು. ಇದೇ ರೀತಿ ಎಲ್ಲ ಧ್ವನಿಗಳನ್ನು ಅವುಗಳ ತರಂಗದಿಂದ ಗುರುತಿಸಬಹುದು.

ಧ್ವನಿಯ ತೀವ್ರತೆ

ಧ್ವನಿಯ ತೀವ್ರತೆಯು ಧ್ವನಿಯು ಎಷ್ಟು ದೂರದ ವರೆಗೆ ಚಲಿಸಬಲ್ಲದು ಎಂಬುದನ್ನು ನಿರ್ಧರಿಸುತ್ತದೆ. ಹೆಚ್ಚು ತೀವ್ರತೆಯುಳ್ಳ ಧ್ವನಿ ಹೆಚ್ಚು ದೂರಕ್ಕೆ ಕೇಳಿಸಬಲ್ಲದು. ಧ್ವನಿಯ ಆವೃತ್ತಿಯನ್ನು ಹೆಚ್ಚಿಸದೇ ತೀವ್ರತೆಯನ್ನು ಮಾತ್ರ ಹೆಚ್ಚಿಸಲು ಸಾಧ್ಯವಿದೆ. ಎಲ್ಲರಿಗೂ ಗೊತ್ತಿರುವ ಧ್ವನಿವರ್ಧಕ ಯಂತ್ರವು ಇದನ್ನೇ ಮಾಡುತ್ತದೆ. ಧ್ವನಿಯ ಆವೃತ್ತಿ ಹಾಗೂ ತೀವ್ರತೆಗಳು ಪರಸ್ಪರ  ನಿರವಲಂಬಿ ತತ್ತ್ವಗಳು. ಅದೇ ಪ್ರಕಾರ ಒಂದು ಧ್ವನಿಯ ತೀವ್ರತೆಯನ್ನು ಅಷ್ಟೇ ಇಟ್ಟು ಆವೃತ್ತಿ ಸಂಖ್ಯೆಯನ್ನು ಹೆಚ್ಚು ಕಡಿಮೆ ಮಾಡುವುದೂ ಸಾಧ್ಯ. ಆದರೆ ಸಾಮಾನ್ಯನ ಅರಿವಿನಲ್ಲಿ ತೀವ್ರತೆಯನ್ನು ಹೆಚ್ಚು ಮಾಡಬೇಕೆಂದರೆ ಆವೃತ್ತಿಯನ್ನೂ ಏರಿಸುವುದು ರೂಢವಾಗಿದೆ. ಆದುದರಿಂದ ಇವೆರಡೂ ಸ್ವತಂತ್ರ ಪ್ರಮಾಣಗಳು ಎಂಬುದು ಅರಿವಿಗೆ ಬರುವುದು ಕಷ್ಟಸಾಧ್ಯ.

ತೀವ್ರತೆಯನ್ನು ಡೆಸಿಬೆಲ್‌ಗಳಲ್ಲಿ (dB) ಅಳೆಯುವ ರೂಢಿ ಎಲ್ಲ ಕಡೆಗೆ ಸ್ವೀಕೃತವಾಗಿದೆ. ಇದನ್ನು ‘ಡೆ’ ಎಂದು ಸಂಕೇತಿಸಿ ಹೇಳಬಹುದು. ಡೆಸಿಬೆಲ್ ಗಳು ಸ್ವತಂತ್ರ ರೂಪದ ಮಾನಗಳಲ್ಲ. ಒಂದು ಸ್ಥಾಪಿತ ನೆಲೆಯನ್ನಾಧರಿಸಿ ಯಾವುದೇ ಧ್ವನಿ ಎಷ್ಟು ‘ಡೆ’ ಮೇಲೆ ಇದೆ ಅಥವಾ ಕೆಳಗೆ ಇದೆ ಎಂದು ನಿರ್ದೇಶಿಸಬಹುದು ಅಷ್ಟೇ. ನಾವು ಮಾತನಾಡುವಾಗ ಬಳಸುವ ಧ್ವನಿಗಳಿಗೆ ತಮ್ಮದೇ ಆದ ತೀವ್ರತೆ ಇರುತ್ತದೆ. ಕ್, ತ್, ಪ್, ಗಳಿಗೆ ಕಡಿಮೆ ತೀವ್ರತೆ ಇದೆ. ಆದುದರಿಂದ ಮಾತಾಡುವವ ಸ್ವಲ್ಪ ದೂರ ಇದ್ದಾಗ ‘ಕಾಲು’ ‘ತಾಲು’ಗಳಲ್ಲಿ ಉಚ್ಚಾರ ವ್ಯತ್ಯಾಸ ಸ್ಪಷ್ಟವಾಗಿ ಕೇಳಿಬರುವುದಿಲ್ಲ. ವಾಕ್ಯದ ಸಂದರ್ಭದಲ್ಲಿ ಯಾವ ಶಬ್ದ ಎಂದು ಗ್ರಹಿಸಬಹುದು ಅಷ್ಟೇ. ‘ಆ’ ಕ್ಕಿಂತ ‘ಅ’ ಕ್ಕೆ ಸ್ವಲ್ಪ ಕಡಿಮೆ. ಅದಕ್ಕಿಂತ ‘ಎ’, ಅದಕ್ಕಿಂತ ‘ಈ’, ಅದಕ್ಕಿಂತ ‘ಊ’ ಕಡಿಮೆ. ಹೀಗೆ ಸಾಮಾನ್ಯವಾಗಿ ಸ್ವರಗಳ ತೀವ್ರತೆಯ ಸ್ತರಗಳನ್ನು ಗುರುತಿಸ ಬಹುದು. ವ್ಯಂಜನಗಳಲ್ಲಿ ‘ವ್’ ಮತ್ತು ‘ಯ್’ಗಳು ಹೆಚ್ಚು ತೀವ್ರತೆಯನ್ನು ಹೊಂದಿದ್ದರೆ ಲ್, ಶ್, ಜ್, ಮ್, ಚ್, ನ್, ಜ್, ಸ್ ಗಳು ಇಳಿಕೆ ಕ್ರಮದಲ್ಲಿ ತೀವ್ರತೆಯನ್ನು ಹೊಂದಿರುತ್ತವೆ. ಈ ಎಲ್ಲ ಧ್ವನಿಗಳ ತೀವ್ರತೆ 28 ಡೆ ನಿಂದ 7 ಡೆ ವರೆಗೆ ಇಳಿಯುತ್ತ ಬರುತ್ತದೆ. 120 ಡೆ ಗಿಂತ ಹೆಚ್ಚಿನ ಶಬ್ದದಿಂದ ಕಿವಿನೋವು ಬರುತ್ತದೆ. ಆಟಂಬಾಂಬ್ ಎಂಬ ಪಟಾಕಿಯನ್ನು ಸಿಡಿಸಿದಾಗ ಈ ಅನುಭವ ಎಲ್ಲರಿಗೂ ಬರುತ್ತದೆ.

ರೋಹಿತ ವಿಶ್ಲೇಷಣೆ

ಸ್ಪೆಕ್ಟ್ರಮ್ ಎಂಬ ಪದಕ್ಕೆ ರೋಹಿತ ಎಂಬ ಪದ ಈಗಾಗಲೇ ಬಳಕೆ ಯಲ್ಲಿದೆ. ಸೂರ್ಯನ ಕಿರಣಕ್ಕೆ ಪಟ್ಟಕವನ್ನೊಡ್ಡಿದಾಗ ಕಿರಣದಲ್ಲಿ ಅಡಗಿದ ಏಳು ಬಣ್ಣಗಳು ಹೇಗೆ ಕಾಮನ ಬಿಲ್ಲಿನಂತೆ ಮೂಡುವುವೋ ಹಾಗೆಯೇ ರೋಹಿತ ವಿಶ್ಲೇಷಣೆ ಧ್ವನಿಯ ಶ್ವೇತವರ್ಣದ ಹಿಂದೆ ಅಡಗಿದ ಶಕ್ತಿಯನ್ನು ವಿಶ್ಲೇಷಿಸಿ ತೋರಿಸುತ್ತದೆ. ‘ಅ’ ಅಕ್ಷರದಲ್ಲಿ ತೀವ್ರತೆಯನ್ನೂ ‘ಬ’ ಅಕ್ಷರದಲ್ಲಿ ಧ್ವನಿಯ ಆವೃತ್ತಿಯನ್ನೂ ಹಾಕಿ ಬೇರೆ ಬೇರೆ ಆವೃತ್ತಿಯ ಹಂತದಲ್ಲಿ ತೀವ್ರತೆ ಎಷ್ಟೆಷ್ಟು ಇದೆ ಎಂದು ವಿಶ್ಲೇಷಿಸಿ ಅದನ್ನು ಸ್ತಂಭಾಲೇಖದಲ್ಲಿ ಬರೆದಾಗ ಧ್ವನಿಗಳು ತಮ್ಮ ಬೇರೊಂದು ಸ್ವರೂಪವನ್ನು ತೋರಿಸುತ್ತವೆ. ‘ಈ’  ಮತ್ತು ‘ಅ’ ಎಂಬ ಸ್ವರೋಚ್ಚಾರಗಳ ಕಾಲಾವಧಿಯಲ್ಲಿ ಯಾವುದೇ ಒಂದು ಕ್ಷಣದಲ್ಲಿ ನಿಂತು ತೆಗೆದ ಕೆಳಗಿನ ಚಿತ್ರಗಳನ್ನು ನೋಡಿರಿ:

 

ಮೇಲಿನ ಎರಡೂ ಸ್ತಂಭಾಲೇಖಗಳಲ್ಲಿ ‘ಈ’ ಸ್ವರವು ಸುಮಾರು 280ನೆಯ ಆವೃತ್ತಿಯ ಹತ್ತಿರ ಅತ್ಯಂತ ಹೆಚ್ಚು ತೀವ್ರತೆಯನ್ನು ತೋರಿಸುತ್ತದೆ. ಆಮೇಲೆ 2,200 ನೆಯ ಆವೃತ್ತಿಯ ಹತ್ತಿರ ಎರಡನೆಯ ಹೆಚ್ಚಿನ ತೀವ್ರತೆಯನ್ನು ತೋರಿಸುತ್ತದೆ. ಮೂರನೆಯ ಹೆಚ್ಚಿನ ತೀವ್ರತೆಯ ಎತ್ತರವನ್ನು 2,800 ನೆಯ ಆವೃತ್ತಿಯ ಹತ್ತಿರ ತೋರಿಸುತ್ತದೆ. ಈ ಎತ್ತರಗಳನ್ನು “ಶಕ್ತಿ ಶಿಖರ” ಅಥವಾ ‘ಶಿಖರ’ ಎಂದು ಕರೆಯಬಹುದು. ಈ ಶಿಖರಗಳು (ಫಾರ್‌ಮೆಂಟ್ಸ್) ಒಂದೊಂದು ಧ್ವನಿಗೂ ವಿಶಿಷ್ಟವಾಗಿ, ಆದರೆ ನಿಶ್ಚಿತವಾಗಿ ಇರುತ್ತವೆ. ಶಿಖರಗಳು ಬರುವ ಆವೃತ್ತಿ ಸಂಖ್ಯೆಯಿಂದ ಅವುಗಳನ್ನು ಶಿಖರ 1, ಶಿಖರ 2, ಶಿಖರ 3 ಹೀಗೆ ಗುರುತಿಸುತ್ತಾರೆ. ಮೇಲಿನ ಸ್ತಂಭಾಲೇಖಗಳಲ್ಲಿ ‘ಈ’ ಗೆ 240ಕ್ಕೆ ಶಿ1, 2200 ಕ್ಕೆ ಶಿ2 ಹಾಗೂ 2,800 ಕ್ಕೆ ಶಿ3 ಬಂದಿವೆಯೆಂದು ನೋಡಬಹುದು. ಆದರೆ ‘ಅ’ ಕ್ಕೆ 750ಕ್ಕೆ ಶಿ1, 1,500ಕ್ಕೆ ಶಿ2, 2,500ಕ್ಕೆ ಶಿ3 ಬಂದಿವೆಯೆಂದು ಗಮನಿಸಬಹುದು. ಜಗತ್ತಿನ ಯಾವುದೇ ಭಾಷೆ ಇರಬಹುದು. ಮುಖ್ಯವಾದ ಸ್ವರ ಮತ್ತು ವ್ಯಂಜನಗಳನ್ನು ಉಚ್ಚರಿಸುವಾಗಿನ ನಾಲಗೆ ಮತ್ತು ತುಟಿಗಳ ಸ್ಥಿತಿ ಹೆಚ್ಚು ಕಡಿಮೆ ಒಂದೇ ಆಗಿರುವುದರಿಂದ ಶಿಖರಗಳು ಮೂಡಿ ಬರುವ ಆವೃತ್ತಿ ಸಂಖ್ಯೆ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ತಲೆ ಬುರುಡೆಯ ಆಕೃತಿ, ಮುಖ ಕುಹರದ ಆಕಾರಗಳು ಜಗತ್ತಿನ ಜನಾಂಗಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸ ತೋರುವುದರಿಂದ ಶಿಖರಗಳು ಬರುವ ಆವೃತ್ತಿ ಸಂಖ್ಯೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡು ಬರಬಹುದು. ಆದರೂ ಶಿಖರಗಳ ಪರಸ್ಪರ ಸಾಮಾನ್ಯ ಸಂಬಂಧ ಒಂದೇ ರೀತಿಯಾಗಿ ಇರುತ್ತದೆ. ಮೇಲಿನ ಸ್ತಂಭಾಲೇಖಗಳು ಆಯಾ ಧ್ವನಿಯ ಕಾಲಾವಧಿಯ ಯಾವುದೇ ಒಂದು ಕ್ಷಣ ಬಿಂದುವಿನಲ್ಲಿ ನಿಂತು ನೋಡಿದ ಸ್ಥಿರ ಚಿತ್ರದಂತೆ ಇವೆ ಎಂಬುದನ್ನು ಪುನಃ ಹೇಳಬೇಕು. ಆದರೆ ಧ್ವನಿಗಳ ಶಿಖರಗಳ ಏಳು ಬೀಳುಗಳು ಕಾಲಕ್ರಮದಲ್ಲಿ ಹೇಗೆ ನಡೆಯುತ್ತವೆ ಎಂಬುದನ್ನು ಅಭ್ಯಸಿಸುವುದೂ ಕುತೂಹಲಕಾರಿ ವಿಷಯಗಳನ್ನು ನೀಡುತ್ತದೆ. ಇಂಥ ಚಿತ್ರಗಳಿಗೇ ರೋಹಿತ ಚಿತ್ರ(ಸ್ಪೆಕ್ಟ್ರೋಗ್ರಾಮ್)ಗಳೆನ್ನುತ್ತಾರೆ. ರೋಹಿತ ಚಿತ್ರಗಳಲ್ಲಿ ‘ಅ’ ಅಕ್ಷದಲ್ಲಿ ಆವೃತ್ತಿಯನ್ನೂ ‘ಬ’ ಅಕ್ಷದಲ್ಲಿ ಕಾಲವನ್ನೂ ಹಾಕಲಾಗಿದೆ. ಎಂಬುದನ್ನು ಗಮನಿಸಬೇಕು. ಮೇಲಿನ ಸ್ತಂಭಾಲೇಖಗಳಲ್ಲಿ ‘ಬ’ ಅಕ್ಷದಲ್ಲಿದ್ದ ಆವೃತ್ತಿಯನ್ನು ರೋಹಿತ ಚಿತ್ರಗಳಲ್ಲಿ ಆ ಅಕ್ಷಕ್ಕೆ ತಿರುಗಿಸಿ ಕಾಲಕ್ರಮದಲ್ಲಿ ಶಿಖರಗಳ ಏಳುಬೀಳುಗಳನ್ನು ಚಿತ್ರಿಸಲಾಗಿದೆ. ಕೆಳಗಿನ ಚಿತ್ರವನ್ನು ನೋಡಿರಿ:

ಅ ಅಕ್ಷದಲ್ಲಿ ಆವೃತ್ತಿ ಸಂಖ್ಯೆಯನ್ನೂ ಬ ಅಕ್ಷದಲ್ಲಿ ಕಾಲವನ್ನೂ (ಸೆಕೆಂಡಿನ ಸಾವಿರಾಂಶಗಳಲ್ಲಿ) ಗುರುತಿಸಲಾಗಿದೆ. ಶಿ1, ಶಿ2, ಶಿ3 ರ ಗತಿಗಳನ್ನು ಗಮನಿಸಬಹುದು.

ಇದರಿಂದ ಪ್ರತಿಯೊಂದು ಧ್ವನಿಯ ಉಚ್ಚಾರದ ಕಾಲಕ್ಕೆ ನಾಲಗೆಯ ಸ್ಥಿತಿ ಹೇಗಿರುತ್ತದೆಯೆಂದು ತಿಳಿದುಬರುತ್ತದೆ. ಕೆಲವೊಮ್ಮೆ ಶಿ6 ರ ವರೆಗೂ ಧ್ವನಿಯಲ್ಲಿ ಶಕ್ತಿಯಿರುವುದುಂಟು. ಆದರೆ ಶಿ3 ಕ್ಕಿಂತ ಮೇಲೆ ಬರುವ ಶಿಖರಗಳು ಉಚ್ಚಾರದ ಯಾವ ಅಂಶವನ್ನು ಎತ್ತಿ ತೋರಿಸುತ್ತವೆಯೆಂಬ ಬಗ್ಗೆ ನಿಶ್ಚಿತವಾದ ಅಭಿಪ್ರಾಯವಿಲ್ಲ. ಶಿ1 ಉಚ್ಚಾರಕಾಲದ ನಾಲಗೆಯ ಎತ್ತರವನ್ನೂ ಶಿ2 ಉಚ್ಚಾರಕಾಲದಲ್ಲಿ ನಾಲಗೆಯು ಮಾಡುವ ಹಿಂದು ಮುಂದಿನ ಚಲನೆಯನ್ನು ನಿರೂಪಿಸುವುದು ಖಚಿತವಾಗಿದೆ. ಶಿ3 ಕೆಲವರ ಪ್ರಕಾರ ತುಟಿಯ ಸಂವೃತ್ತಿಯನ್ನು ಸೂಚಿಸಿದರೆ ಇನ್ನು ಕೆಲವರ ಪ್ರಕಾರ ಮಾತಾಡುವವನ ಧ್ವನಿಯ ಸಹಿಯನ್ನು ಮಾಡುತ್ತದೆಯೆಂತೆ. ಧ್ವನಿ ಅಪರಾಧ ಮಾಡಿದ ಆರೋಪದಲ್ಲಿ ಸಿಕ್ಕಿಕೊಂಡವನ ಧ್ವನಿಯನ್ನು ಪತ್ತೆ ಹಚ್ಚುವಲ್ಲಿ ಶಿ3 ಸಹಾಯ ಮಾಡುತ್ತದೆಯಂತೆ. ಆದರೆ ನಾಲಗೆಯ ಎತ್ತರ ಹೆಚ್ಚಿದಂತೆ ಶಿ1 ಕಡಿಮೆಯಾಗುತ್ತದೆ. ಎತ್ತರ ಕಡಿಮೆಯಾದಂತೆ ಅದು ಹೆಚ್ಚಾಗುತ್ತದೆ. ನಾಲಗೆ ಮುಂದೆ ಬಂದಂತೆ ಶಿ2 ಹೆಚ್ಚಾಗುತ್ತದೆ. ಹಿಂದೆ ಹೋದಂತೆ ಅದು ಕಡಿಮೆಯಾಗುತ್ತದೆ ಎಂಬುದು ಎಲ್ಲ ಭಾಷೆಗಳಿಗೂ ಸತ್ಯವಾದ ಮಾತು. ಈ ಸಂಬಂಧಗಳನ್ನು ಕೆಳಗಿನಂತೆ ತೋರಿಬಹುದು:

ಮೇಲಿನ ಚಿತ್ರವು ಮುಖ್ಯ ಐದು ಸ್ವರಗಳ ಮೊದಲ ಮೂರು ಶಿಖರ ಲಕ್ಷಣಗಳನ್ನು ತೋರಿಸುವುದಲ್ಲದೇ ಉಚ್ಚಾರದಲ್ಲಿ ನಾಲಗೆಯ ಸ್ವರೂಪ ವನ್ನೂ ನಿಷ್ಕರ್ಷೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಉದಾಹರಣೆಗಾಗಿ ಕೊಟ್ಟ ಕೆಳಗಿನ ರೋಹಿತ ಚಿತ್ರವನ್ನು ನೋಡಿರಿ:

 

ಸ್ವರಗಳಂತೆ ಕೆಲವು ವ್ಯಂಜನಗಳೂ ತಮ್ಮದೇ ಆದ ರೋಹಿತ ಚಿತ್ರವನ್ನು ಕೊಡುತ್ತವೆ. ಉದಾಹರಣೆಗೆ ಕ್ ಷ್ ಗಳು ಉಚ್ಚ ಆವೃತ್ತಿಯಲ್ಲಿ ಸದ್ದನ್ನು (ನಾಯ್ಸ) ಮಾತ್ರ ತೋರುತ್ತದೆ. ಸದ್ದಿನ ಮುಖ್ಯ ಲಕ್ಷಣವೆಂದರೆ ನಿಶ್ಚಿತ ರೂಪದಲ್ಲಿ ತರಂಗ ರೂಪವಿಲ್ಲದಿರುವುದು. ಹಿಂದೆ ಉದಾಹರಿಸಿದ ತರಂಗ ಚಿತ್ರಣದಲ್ಲಿಯೂ ‘ಷ್’ ದ ಸದ್ದಿನ ರೂಪವನ್ನು ವಿವರಿಸಲಾಗಿದೆ. ಮೇಲಿನ ರೋಹಿತ ಚಿತ್ರದಲ್ಲಿಯೂ ಈ ಮಾತನ್ನು ಮನಗಾಣಬಹುದು. ಕ್ ತ್ ಪ್ ಗಳೇ ಮೊದಲಾದ ಕರ್ಕಶ ಸ್ಪರ್ಶಾಕ್ಷರಗಳಿಗೆ ಯಾವ ರೀತಿಯ ಚಿತ್ರ ಮೂಡು ವುದಿಲ್ಲ. ಅವುಗಳು ಹೊರಬರುವಾಗಿನ ಸ್ಫೋಟದ ಗೆರೆಯೊಂದು ಮಾತ್ರ ಕಾಣುತ್ತದೆ. ಮೃದು ವರ್ಣಗಳಿಗೆ ಮಾತ್ರ ಕಂಡು ಬೇರೇನೂ ಕಾಣಬರುವುದಿಲ್ಲ.

ಈ ಕೆಲವು ಲಕ್ಷಣಗಳಲ್ಲದೆ ಆಳವಾಗಿ ಅಭ್ಯಾಸ ಮಾಡಿದಾಗ ಇನ್ನೂ ಅನೇಕ ವಿಷಯಗಳು ತಿಳಿದು ಬರುತ್ತವೆ