೨೨೧. ವಿಚಾರಮಾಡಿ ನೋಡಿದರೆ ಅವನು ತುಂಬಾ ಜಾಣನು; ಪ್ರತಿಯೊಂದು ಭಾಷಾವಿಶೇಷದ ವಿಷಯದಲ್ಲಿಯೂ ಅತಿಶಯವಾದ ಕೌಶಲವುಳ್ಳವನು; ದೇವತೆಗಳು, ಗುರುಗಳು, ಗುಣೋತ್ತಮರು, ಹಿರಿಯರು-ಇವರ ಸೇವಾತತ್ಪರನು; ವಿಕಾರಗಳನ್ನೂ ಚಾಪಲವನ್ನೂ ತೊರೆದವನು;

ಮಂಗಲವೃತ್ತಂ || ಪರಮ-ಕಾರುಣಿಕನಪ್ಪನಪಾಕೃತ-ದೋಷನಾ-

ದರಮನಾಗಿಸುವನಪ್ಪನಶೇಷ-ಜನಂಗಳೊಳ್ |

ಪರಗುಣಾಸಹನನಲ್ಲದನಾತ್ಮಗುಣೋದಯಾಂ-

ತರಸರೂಪನ*ಖಿಲಾಗಮ*ಪಾರ-ಪರಾಯಣಂ ||೨೨೨||

 

ಮಂಗಲವೃತ್ತಂ || ಬಗೆದು ಮೇಣ್ ಪರಮ-ಧರ್ಮಮನ*ೞ್ತೆ*ಯಿನನ್ವಯ-

ಪ್ರಗಣಿತಾಭ್ಯುದಯ-ಮೋಕ್ಷ-ಸುಖಾತ್ರಯ-ಹೇತುವಂ |

ನೆಗೞೆ ಮೇಣುದಿತ-ನಿರ್ಮಳ-ಕೀರ್ತಿ-ವಿತಾನಮಂ

ಜಗದಗಾಧ-ವಿವರೋದರ-ದೀಪ-ವಿಕಲ್ಪಮಂ ||೨೨೩||

 

ಮಣಿವಿಭೂಷಣವೃತ್ತಂ || ಕೂಡೆ ಪೇೞ್ದನುರು ಕಾವ್ಯಮನಿಂತಭಿಮಾನಿ ತಾಂ

*ನಾಡಿ*ಗೀಡಿತ-ಮಹಾ-ಪುರುಷ-ವ್ರತ-ನಿಶ್ಚಿತಂ |

ಕೂಡದಂತೆ ಪೆಱರಚ್ಚಿನೊಳೇತೆಱನಪ್ಪೊಡಂ

ನೋಡುದಂ*ತೆ ಪೆಱತಂ* ಕುಱತಾವನುಮೇನುಮಂ[1] ||೨೨೪||

೨೨೨. ಪರಮ ಕಾರುಣಿಕನು, ದೋಷವಿದೂರನು, ಸಕಲ ಜನಗಳಲ್ಲಿಯೂ ಆದರವನ್ನು ಗಳಿಸತಕ್ಕವನು; ಪರಗುಣದಲ್ಲಿ ಅಸಹನೆಯಿಲ್ಲದವನು, ಸ್ವಗುಣದ ಅಭ್ಯುದಯದ ಮೂತಿಸ್ವರೂಪನು; ನಿಖಿಲಾಗಮಗಳಲ್ಲಿ ಪಾರಂಗತನು;

೨೨೩. ಕುಲದ ಅಮಿತಾಭ್ಯುದಯಕ್ಕೂ ಮೋಕ್ಷಸುಖಕ್ಕೂ ಪರಮ ಧರ್ಮವೇ ಏಕೈಕ ಕಾರಣವೆಂಬುದನ್ನರಿತವನಾಗಿ, ಜಗತ್ತೆಂಬ ಅಗಾಧ ಗುಹಾಮಧ್ಯದಲ್ಲಿ ದೀಪಕ್ಕೆ ಸಮಾನವಾದ ಬೆಳಗುವ ತನ್ನ ಕೀರ್ತಿ ವಿಸ್ತಾರವನ್ನು ನಿರ್ಮಿಸಲೆಂದು,

೨೨೪. ಅಭಿಮಾನಿಯೂ ನಾಡಿಗೆಲ್ಲ ಪ್ರಖ್ಯಾತನಾದ ಮಹಾಪುರುಷವ್ರತ ನಷ್ಠನೂ ಆದ ಆತನು ಇತರರ ಅಚ್ಚಿನಲ್ಲಿ ಯಾವ ತೆರದಿಂದಲೂ ಕೂಡದ ಹಾಗೆ, ಯಾರೂ ಇನ್ನೊಂದೆಡೆ ಏನನ್ನೂ ನೋಡುವ ಅಗತ್ಯವುಳಿಯದಂತೆ, ಮಹಾಕಾವ್ಯ ಲಕ್ಷಣವನ್ನು ಹೀಗೆ ಹೇಳಿರುವನು.

ಮಣಿವಿಭೂಷನವೃತ್ತಂ || ಅಂತು ಪೇೞ್ದ[2]ತೆಱದಿಂ ವರ-ಗೀತ-ಗುಣೋದಯೈ-

ಕಾಂತ*ಕಾಂತ* ವಿಷಯಾಶಯರಾಗಿ ನಿರಾಕುಳಂ |

ಸಂತತಂ ನುಡಿಗಳೊಳ್ ಬಗೆ ಪೆರ್ಚಿರೆ ಪೇೞ್ದವರ್

ಸಂತಸಂಬಡಿಸುವರ್ ನೃಪತುಂಗ-ಸಭಾ*ಸದರ್*[3] ||೨೨೫||

ಗೀತಿಕೆ || ಪಾರ್ಥಿವ-ಲೋಕನಪ್ಪನೆಂದುಂ ಕವಿ ವರ್ಣಿಕುಂ

ಸಾರ್ಥಚಯಂ ನುತ-ಸರಸ್ವತೀ-

ತೀರ್ಥವತಾರ-ಮಾರ್ಗನೆಸೆವಂ *ಪರ-

ಮಾರ್ಥಂ-ಕವಿರಾಜಮಾರ್ಗವಿಧಾತ್ರಂ[4]

೨೨೫. ಇಂತು ಹೇಳಿದ ತೆರದಿಂದ ನೃಪತುಂಗನ ಸಭಾಸದರು ಹಾಡಿ ಹೊಗಳಲು ಯೋಗ್ಯವಾದ ಗುಣಾಧಿಕ ವಿಷಯಗಳ ವರ್ಣನೆಯಲ್ಲಿ ಆಸಕ್ತರಾಗಿ ತಡೆಬಡೆಯಿಲ್ಲದೆ ಯಾವಗಲೂ ಬಗೆದುಂಬಿದ ನುಡಿಗಳಲ್ಲಿ ಕಾವ್ಯರಚನೆಮಾಡಿ ಸಂತೋಷ ಪಡಿಸುವರು.

೨೨೬. (ಕವಿರಾಜಮಾರ್ಗದ ನಿರ್ಮಾತೃವು) ನಿಜವಾಗಿಯೂ ‘ಸರಸ್ವತೀ ತೀರ್ಥಾವತಾರ’ (ಕಾವ್ಯವೆಂಬ ನದಿಯಲ್ಲಿಳಿದು ಹಾಯಲು ಉಚಿತವಾದ ಸೋಪಾನಗಳನ್ನು ಕಟ್ಟಿಕೊಟ್ಟವನು) ಎಂದು ವಿರಾಜಿಸುತ್ತಿರುವನು. ಕವಿಗಣವು ಅವನನ್ನು ಪಾರ್ಥಿವಲೋಕದಲ್ಲಿರುವ ದೇವನೆಂದೇ ವರ್ಣಿಸುವುದು.

ಋಷಭವೃತ್ತಂ || * ಕುಲ-ಜಾತಿ-ದೇಶ-ವಿಶದಂ ವಿನಯೋಪಚಾರಂ |

ನಿಲಯೈಕ-ವೃತ್ತಿ*ವಿಹಿತೋರ್ಜಿತ-ಸತ್ತ್ವ-ಸಾರಂ* |

ವಿಲಸದ್-ಗುಣಾಗುಣ-ವಿವರ್ತಿ-ಗುರೂಪದೇಶಾ

ಮಲಿನಾವಬೋಧ-ವಿದಿತಾಖಿಳ-ಚೋದ್ಯ*[5]ವಿದ್ಯಂ* ||೨೨೭||

 

ಋಷಭವೃತ್ತಂ || ಮದ-ಮಾನ-ಮಾಯ-ಲೋಭ-ವಿಷಾದ-ಹರ್ಷಾ-

ಭ್ಯುದಿತಾಂತರಂಗ-ರಿಪುವರ್ಗ-ಜಯಾವತಾರಂ |

ವಿದಿತ[6]-*ಸ್ವಧೀ*-ವಿಭವ-ಭಾವಿತ-ವಿಶ್ವಲೋಕಂ

ಬುಧರ್ಗೋತು ಕಾವನನುನೀತ-ಗೃಹೀತವಾಕ್ಯಂ ||೨೨೮||

 

ಋಷಭವೃತ್ತಂ || ಪರಮಾನುಭಾವನಭಿಮಾನಿ ವಿನೋದಶೀಲಂ

ಪರನತ್ಯುದಾರ-ಚರಿತೋದಯನೇಕರೂ[7]*ಪಂ*

ಸರಸಾಶ್ರಯ-ಪ್ರವರ-ಮೂರ್ತಿ ಪರೋ[8]*ಪಕಾರಂ*

ನಿರತಂ ಗುಣೋದಯನಕಾರಣ-ಧುರ್ಯ-ಮಿತ್ರಂ ||೨೨೯||

೨೨೭. ಪರಿಶುದ್ಧವಾದ ಕುಲ, ಜಾತಿ ಹಾಗು ದೇಶಗಳುಳ್ಳವನು, ವಿನಯೋಪಚಾರನಿರತನು, ಗೃಹವಾಸದಲ್ಲಿಯೇ, ಸಂತುಷ್ಟನು (ಗೃಹಸ್ಥನು?), ವಿಹಿತವಾದ ಉದಾತ್ತ ಸತ್ತ್ವದಿಂದ ಸಮೇತನು, ‘ಇದು ಗುಣ, ಇದು ಅವಗುಣ’ ಎಂದು ಖಚಿತವಾಗಿ ಬೇರ್ಪಡಿಸಿ ತೋರಿಸುವ ಗುರೂಪದೇಶದ ಪ್ರಭಾವದಿಂದ ನಿರ್ಮಲ ಜ್ಞಾನವನ್ನು ಪಡೆದು ಅದರ ಮೂಲಕ ಸಕಲ ಆಶ್ಚರ್ಯಜನಕ ವಿದ್ಯೆಗಳನ್ನೂ ತಿಳಿದುಕೊಂಡವನು;

೨೨೮. ಮದ, ಮಾನ, ಮೋಸ, ಭಯ, ಲೋಭ, ವಿಷಾದ, ಹರ್ಷ ಎಂಬ ಅಂತರಂಗದ ಶತ್ರುಗಳನ್ನು ಜಯಿಸಿರುವ ಅವತಾರಪುರುಷನು; ಪ್ರಸಿದ್ಧವಾದ ತನ್ನ ಬುದ್ಧಿ ವಿಭವದಿಂದ ವಿಶ್ವಲೋಕವನ್ನೂ ಪ್ರಭಾವಿದವನು, ಕೊಟ್ಟ ಮಾತಿನಂತೆ ನಡೆಯುವವನು, ವಿದ್ವಾಂಸರನ್ನು ಪ್ರೀತಿಯಿಂದ ರಕ್ಷಿಸತಕ್ಕವನು.

೨೨೯. ಮಹಾನುಭಾವನು, ಅಭಿಮಾನವಂತನು, ವಿನೋದಶೀಲನು, ಶ್ರೇಷ್ಠನು; ಅತ್ಯುದಾರಚರಿತನು, ಏಕರೂಪನು, ಸರಸರಿಗೆ ಆಶ್ರಯದಾತನಾದ ಮೂರ್ತಿಸ್ವರೂಪನು, ಪರೋಪಕಾರನಿರತನು, ಗುಣೋದಯನು, (ಎಲ್ಲರಿಗೂ) ಅಕಾರಣಮಿತ್ರ ವರ್ಯನು.

* ಇದು ಮತ್ತು ಮುಂದಿನ ನಾಲ್ಕು ಪದ್ಯಗಳ ವೃತ್ತ ಹೆಚ್ಚು ಪ್ರಸಿದ್ಧವಲ್ಲ “ಋಷಭಾಖ್ಯಮೇತದುದಿತಂ ಸಜಸಾ ಸಯೌ ಚೇತ್” ಎಂದು ಇದರ ಹೆಸರು ಮತ್ತು ಲಕ್ಷಣಗಳೂ ಗಂಗಾದಾಸನ ಛಂದೋಮಂಜರಿಯಲ್ಲಿ ಉಕ್ತವಾಗಿವೆ. (ಶಬ್ದಕಲ್ಪದ್ರುಮ ಪು. ೪೭೪ ರಲ್ಲಿ ಉದ್ಧ*ತ.)

‘ಕೃತಿಬಿಂಬಿತಸತ್ವಸಾರಂ ಮುಳಿಯ ತಿಮ್ಮಪ್ಪಯ್ಯನವರ ಸೂಚಿತಪಾಠ; ‘ಸೀ’ ಸ್ವೀಕೃತ.

ಋಷಭವೃತ್ತಂ || ಅಸಹಾಯ-ಸಾಹಸ-ವಿನೋದಿ-ವಿವಿಕ್ತ-ಚಿತ್ರ-

ಪ್ರಸವ-ಪ್ರಕಾಶಿತ-ಮಹೋದಯ-ತತ್ತ್ವ-ಸತ್ತ್ವಂ |

ವ್ಯಸನ-ವ್ಯಪೇತ[9]ನುಪನೀತ-ಕಲಾ-ಕಲಾಪಂ

ಶಶಿ-ಖಂಡ-ನಿರ್ಮಲ-ಯಶೋ-ವಿವಿಧಾವತಂಸಂ ||೨೩೦||

 

ಪುಷ್ಪಿತಾಗ್ರಾವೃತ್ತಂ || ಪರಿವೃತ-ನೃಪತುಂಗ-ದೇವ-ಮಾರ್ಗಾಂ-

ತರಗತ-ಬೋಧ-ವಿಶೇಷ-ಯಾನ-ಪಾತ್ರಂ |

ಪರಮ-ಗುಣ-ಪರೀತ-ಕಾವ್ಯ-ರತ್ನಾ-

ಕರದುರು-ಪಾರಮನೆಯ್ದುಗುಂ ಮಹಾತ್ಮಂ

ಹೆಚ್ಚಿನ ಪ್ರಾಸ-ವಿಚಾರ

*ಕಂದಂ || ದ್ವಿಪ್ರಾಸಂ ಸುಭಗಂ ದ್ವಂದ್ವಪ್ರಾಸಂ ಕಾವ್ಯ-ರಚನೆಗುಚಿತಮೆನಿಪ್ಪಾ

ತ್ರಿಪ್ರಾಸಂ*ಸಲೆಯಂತಾದಿ-ಪ್ರಾಸಂ* ಬೇಱೆ ನಾಲ್ಕು ತೆಱ ನಾಗಿರ್ಕುಂ ||೨೩೨||

೨೩೦. ಅಸಹಾಯ ಸಾಹಸದಲ್ಲಿ ರಸಿಕನು, ನಾನಾ ಪರಿಯಿಂದಲೂ ವಿಚಿತ್ರ ರೂಪದಿಂದಲೂ ಪ್ರಕಟವಾಗಿರುವ ಮಹಾಭ್ಯುದಯಪೂರ್ಣ ಸತ್ವವುಳ್ಳವನು, ವ್ಯಸನವಿಲ್ಲದವನು, ಕಲಾಕಲಾಪವನ್ನು ವಶಪಡಿಸಿಕೊಂಡವನು, ಚಂದ್ರಕಲೆಯಂತೆ ನಿರ್ಮಲವಾದ ಯಶಸ್ಸೇ ಶಿರೋಭೂಷಣವಾಗಿರುವವನು! *ಇಷ್ಟೂ ಪದ್ಯಗಳು ನೃಪತುಂಗ ರಾಜನ ಪ್ರಶಸ್ತಿಪರವಾಗಿವೆಯೆ ಅಥವಾ ನೃಪತುಂಗ ಸಭಾಸದನಾದ ಶ್ರೀವಿಜಯನ ಪ್ರಶಸ್ತಿಪರವಾಗಿವೆಯೆ ಎಂಬುದು ತೆರೆದ ಪ್ರಶ್ನೆಯೇ; ಬಿಡಿಸಲಾರದ ಒಗಟೆಂದರೂ ಸರಿ, ವಾದವನ್ನು ಎರಡು ಕಡೆಗೂ ಬೆಳೆಸಿ ತಮ್ಮ ತಮ್ಮ ಪಕ್ಷಕ್ಕೆ ಅನುಗುಣವಾಗಿ ಎಳೆದುಕೊಳ್ಳಬಹುದೆಂಬುದನ್ನು ಈಗಾಗಲೇ ವಿದ್ವಾಂಸರು ಸಾಕಷ್ಟು ಪ್ರದರ್ಶಿಸಿದ್ದಾರೆ. ಈ ವಾದವನ್ನು ದೂರ ಬಿಟ್ಟು, ವಾಚಕರೇ ಒಂದೊಂದು ವಿಶೇಷಣವೂ ಯಾರಿಗೆ ಹೆಚ್ಚು ಒಪ್ಪುವುದೆಂದು ಶಾಂತಚಿತ್ತರಾಗಿ ವಿವೇಚಿಸುವುದು ಸೂಕ್ತ.*

೨೩೧. ನೃಪತುಂಗದೇವನ ಮಾರ್ಗದ ಅಂತರ್ವಿವೇಕವೆಂಬ ವಿಶೇಷ ನೌಕೆಯನನ್ನುಳ್ಳ ಮಹಾತ್ಮನು ಪರಮ ಗುಣಗಳಿಂದ ತುಂಬಿರುವ ಕಾವ್ಯವೆಂಬ ರತ್ನಾಕರ ಅಥವಾ ಸಮುದ್ರವನ್ನು ದಾಟಿ ದಡ ಸೇರುವನು. *ಗ್ರಂಥವು ಇಲ್ಲಿಗೇ ಸಮಾಪ್ತವಾದಂತೆ ಭಾಸವಾಗುತ್ತದೆ. ಮುಂದಿನವು ಅನಂತರ ಗ್ರಂಥದಲ್ಲಿ ಈ ಗ್ರಂಥಕಾರನಿಂದಲೋ ಇಲ್ಲವೆ ಬೇರೆ ಗ್ರಂಥಕಾರರಿಂದಲೋ ಪ್ರಕ್ಷಿಪ್ತವಾಗಿ ಸೇರಿಸಲ್ಪಟ್ಟಿರಬೇಕೆಂದು ತೋರಿಬರುತ್ತದೆ.*

೨೩೨. ‘ದ್ವಿಪ್ರಾಸ’, ಸುಂದರವಾದ ‘ದ್ವಂದ್ವಪ್ರಾಸ’, ಕಾವ್ಯರಚನೆಗೆ ಒಪ್ಪುವ ‘ತ್ರಿಪ್ರಾಸ’ ಮತ್ತು ‘ಅಂತಾದಿಪ್ರಾಸ’ ಎಂಬ ಬೇರೆ ನಾಲ್ಕು ಪ್ರಾಸಪ್ರಕಾರಗಳೂ ಇವೆ.

 

ದ್ವಿಪ್ರಾಸ [10]

ಅರಸರೊಳೆಲೆ ನೀಂ ಸರಸಮನರಸಿಯವೋಲಾಡುತಿರ್ಪೆ ನಿನಗಿದು ಗುಣಮೇ |

ಅರಸರಿ ಸರಸಮನಱವರೆ ಸರಸಮನಾಡರಸರಲ್ಲದವರೊಳ್‌ಮಗಳೇ ||೨೩೩||

 

ದ್ವಂದ್ವಪ್ರಾಸ [11]

ಒಂದೊಂದಱ ಸೌಂದರ್ಯಮನೊಂದೊಂದೀಕ್ಷಿಸಲೊಡರ್ಚಿನಾಸಿಕಮಡ್ಡಂ |

ಬಂದಂದಮನೀಕ್ಷಿಸಿ ಪೆಱಗಿಂ*ದಂ*ದೀಕ್ಷಿಸುವುವವಳ ನಿಡಿಯೆಸಳ್ಗಣ್ಗಳ್ ||೨೩೪||

೨೩೩. *ಉದಾಹರಣೆಗಳು- ಅರಸ….ಸರಸ | ಅರಸ….ಸರಸ-ಹೀಗೆ ಈ ಪದ್ಯದಲ್ಲಿ ‘ರಸ’ ಎಂಬೆರಡಕ್ಷರಗಳೂ ನಾಲ್ಕು ಸಲ ಆವೃತ್ತವಾಗಿರುವುದಷ್ಟೇ ಅಲ್ಲದೆ ಅರಸ-ಸರಸ ಎಂಬ ಅದೇ ಪದಗಳೇ ಎರಡುಸಲ ಆವೃತ್ತವಾಗಿರುವುದರಿಂದ ‘ದ್ವಿಪ್ರಾಸ’.* ಅನುವಾದ-ಮಗಳೆ, ನೀನು ರಾಣಿಯಂತೆ ಅರಸರೊಡನೆ (ರಾಜರೊಂದಿಗೆ ಮತ್ತು ಅರಸಿಕರೊಂದಿಗೆ) ಸರಸವಾಡುತ್ತಿರುವೆ. ನಿನಗೆ ಇದು ಸರಿಯೆ? ಅರಸರು (ರಾಜರು ಮತ್ತು ಅರಸಿಕರು) ಸರಸವನ್ನು ತಿಳಿಯುವರೇನು? ಅರಸರಲ್ಲದವರೊಡನೆ ಬೇಕಾದರೆ ಸರಸವಾಡು.

೨೩೪. *ದ್ವಂದ್ವಪ್ರಾಸ ಎಂದರೆ ಜೋಡಿ ಅಕ್ಷರಗಳ ಆವೃತ್ತಿ-ಇಲ್ಲಿ ಒಂದೊಂದ…. ಒಂದೊಂದೀ…. ಬಂದಂದ…. ಗಿಂದಂದೀ – ಎಂಬಲ್ಲಿ ಅನುಸ್ವಾರಸಮೇತವಾದ ‘ದ’ ಕಾರವು ಅನುಸ್ವಾರರಹಿತವಾದ ‘ದ’ ಕಾರದೊಡನೆಯೇ ಅವ್ಯವಹಿತವಾಗಿ ಬಂದಿರುವುದಲ್ಲದೆ ಒನ್ದು ಒಂಬಂತೆ ಬರೆದರೆ ಒಡೆದು ಕಾಣುವ ನ ಕಾರ-ದ ಕಾರ ಸಂಯುಕ್ತಾಕ್ಷರವು ಅಥವಾ ದ್ವಂದ್ವಾಕ್ಷರವು ಪ್ರಾಸಸ್ಥಾನದಲ್ಲಿ ಆವೃತ್ತವಾಗಿರುವುದರಿಂದ ಇದು ದ್ವಂದ್ವಪ್ರಾಸ.* ಅನುವಾದ-ಒಂದೊಂದು ಕಣ್ಣಿನ ಸೌಂದರ್ಯವನ್ನು ಒಂದೊಂದು ನೋಡಬಯಸಿ ಸಾಗುವಾಗ ನಡುವೆ ಮೂಗು ಅಡ್ಡಬಂದ ಪರಿಯನ್ನು ಕಂಡು, ಹಿಮ್ಮಗ್ಗಲಿನಿಂದ ಅವಳ ನಿಡಿದಾದ ಎಸಳಿನಂತಹ ಕಣ್ಣುಗಳು ನೋಡತೊಡಗಿರುವುವು. *ಇವು ಶಬ್ದಮಣಿದರ್ಪಣದಲ್ಲೂ ಉದಾಹೃತವಾಗಿದೆ, ಸೂತ್ರ ೧೧೪-ಪ್ರೊ. ಡಿ. ಎಲ್. ನರಸಿಂಹಾಚಾರ‍್ಯ ಅವರ ಆವೃತ್ತಿ. ಅಲ್ಲಿಯ ಪಾಠಾಂತರ-‘ನಾಸಿಕವಡ್ಡಂ’ ವ-ಮಕಾರಗಳ ಅಭೇದವಿಲ್ಲಿ ವಿವಕ್ಷಿತವೆನ್ನಬಹುದು. ಈ ಪದ್ಯದಲ್ಲಿಯ ಉತ್ಪ್ರೇಕ್ಷೆ ತುಂಬಾ ಹೃದ್ಯವಾಗಿದೆ.*

 

ತ್ರಿಪ್ರಾಸ [12]

ನುಡಿಸಿದನೆನ್ನಂ ನಲ್ಲಂ ಬಿಡಿಸಿದನೆನ್ನಮತರಂಗದನುತಾಪ ಮನೊ-

ಲುಡಿಸಿದನೊಳ್ಳುಳ್ಳುಡೆಯಂ ತುಡಿಸಿದನೆನಗಱಕೆಯಪ್ಪ ಮಣಿಭೂಷಣಮಂ ||೨೩೫||

ಅಂತಾದಿ-ಪ್ರಾಸ [13]

ಗೀತಿಕೆ || ತಾರಾಪತಿವತ್ ಕೀರ್ತಿ-ವಿಹಾರಾ

*ಹಾರ*ಪ್ರಭಯಾ ನಿಜತನು-ಪೂರಾ |

ದುರೀ-ಕೃತ-ಬಲ-ವಿಸ್ತಾರಾ ||೨೩೬||

ವಚನಂ || ಇವು ಕ್ರಮದಿಂ ದ್ವಿಪ್ರಾಸ-ದಂದ್ವ-ಪ್ರಾಸ-ತ್ರಿಪ್ರಾಸ-ಅಂತಾದಿ ಪ್ರಾಸಂಗಳ್.

ಈ ನಾಲ್ಕು ಬೇಱೆ ಅನ್ಯ-ಮಾರ್ಗ-ಲಕ್ಷಣಂ ||*

೨೩೫. *ತ್ರಿಪ್ರಾಸ+ಮೂರು ಅಕ್ಷರಗಳ ಏಕರೂಪದ ಆವೃತ್ತಿ – ಡಿಸಿದ…. ಡಿಸಿದ…. ಡಿಸಿದ…. ಡಿಸಿದ – ಎಂಬಂತೆ. *ಅನುವಾದ – ನಲ್ಲನು ನನ್ನನ್ನು ಮಾತನಾಡಿಸಿದನು. ನನ್ನ ಅಂತರಂಗದ ಅನುತಾಪವನ್ನು ಕಳೆದನು, ಒಳ್ಳೆಯ ಉಡುಗೆಯನ್ನು ಉಡಿಸಿದನು, ಅಮೂಲ್ಯವಾದ ರತ್ನಾಭರಣವನ್ನು ತೊಡಿಸಿದನು. *ಪ್ರಿಯನ ಒಲುಮೆಯ ಕಾಣಿಕೆಗಳಿಂದ ಸಂತುಷ್ಟಳಾದ ಕಾಮಿನಿಯ ವರ್ಣನೆಯಿದು.*

೨೩೬. *ಅಂತಾದಿಪ್ರಾಸ=ಆದಿ-ಅಂತ್ಯ ಎರಡು ಸ್ಥಾನಗಳಲ್ಲೂ ಒಂದೇ ಅಕ್ಷರದ ಆವೃತ್ತಿ. ದ್ವಿತೀಯಾಕ್ಷರ ಹಾಗು ಅಂತ್ಯಾಕ್ಷರಗಳೆರಡೂ ಇಲ್ಲಿ ರೇಫವೇ ಆಗಿದೆ*-ಚಂದ್ರನಂತೆ (ಬಿಳುಪಾದ) ಕೀರ್ತಿಯಿಂದ ನಲಿವವನೆ, ಹಾರದ ಪ್ರಭೆಯಿಂದ ತನುಕಾಂತಿಯ ಪ್ರವಾಹವುಳ್ಳವನೆ, ಪೂರ್ಣವಾಗಿ ಆಶ್ರಿತರಾದವರ ಹೃದಯ ಕ್ಲೇಶವನ್ನು ದೂರಮಾಡುವವನೆ, ಸೈನ್ಯಬಲದ ವಿಸ್ತಾರವನ್ನು ದೂರಮಾಡಿರುವವನೆ! *ಇವೆಲ್ಲ ಒಬ್ಬ ರಾಜನ ಸ್ತುತಿಯೆಂಬುದು ಸ್ಪಸ್ಟವಾಗಿದೆ-*

ಗದ್ಯ- ಈ ಅನುಕ್ರಮದಿಂದ ದ್ವಿಪ್ರಾಸ, ದ್ವಂದ್ವಪ್ರಾಸ, ತ್ರಿಪ್ರಾಸ, ಅಂತಾದಿಪ್ರಾಸಗಳೆಂಬ ನಾಲ್ಕು ಬೇರೆಯವರ ಮಾರ್ಗದಲ್ಲಿ ಉಕ್ತವಾಗಿರುವ ಪ್ರಾಸಪ್ರಕಾರಗಳು. *ಇದು ಗ್ರಂಥಾಂತರದಿಂದ ಎತ್ತಿ ಬರೆದ ವಿಚಾರವೆಂಬುದು ‘ಬೇರೆ’ ‘ಅನ್ಯಮಾರ್ಗ’ ಎಂಬ ಉಕ್ತಿಗಳಿಂದ ಸ್ಪಷ್ಟವಾಗಿ ಒಡೆದುಕಾಣುತ್ತದೆ.*

 

ಸಮಾಪ್ತಿವಾಕ್ಯ

ಮತ್ತೇಭವಿಕ್ರೀಡಿತಂ ||  ನಿರವದ್ಯಾನ್ವಯಮುದ್ಘಮುದ್ಧತ-ಮಹಾ-ಕ್ಷೀರಾಬ್ಧಿ ಡಿಂಡೀರ-ಪಾಂ-

ಡುರಮಾಕ್ರಾಂತ-ಸುಶೈಲ-ಸಾಗರ-ಧರಾಶಾ-ಚಕ್ರವಾಲಾಂ[14]ಬರಂ |

ಪರಮ-ಶ್ರೀವಿಜಯ-ಪ್ರಭೂತಿಜ-ಯಶಂ ಸ್ತ್ರೀ-ಬಾಲ-ವೃದ್ಧಾಹಿತಂ

ಪರಮಾನಂದಿತ-ಲೋಕಮೊಪ್ಪೆ ನೆಲೆಗೊಳ್ಗಾ ಚಂದ್ರ ತಾರಂಬರಂ ||೨೩೭||

ಗದ್ಯ || ಇದು ಪರಮ ಶ್ರೀ ನೃಪತುಂಗದೇವಾನುಮತಮಪ್ಪ

ಕವಿರಾಜಮಾರ್ಗದೊಳ್

ಅರ್ಥಾಲಂಕಾರಪ್ರಕರಣಂ

ತೃತೀಯಪರಿಚ್ಛೇದಂ ||

ಕವಿರಾಜಮಾರ್ಗಾಲಂಕಾರಂ ಸಮಾಪ್ತಂ

೨೩೭. ನಿಷ್ಕಳಂಕವಾದ ಸ್ವರೂಪವಿರುವ, ಶ್ರೇಷ್ಠವಾದ, ವಿಸ್ತಾರವಾದ ಮಹಾಕ್ಷೀರಸಾಗರದ ನೊರೆಯಂತೆ ಬಿಳುಪಾಗಿರುವ, ಪರ್ವತ, ಸಮುದ್ರ, ಭೂಮಿ, ದಿಕ್ಚಕ್ರ, ಅಂತರಿಕ್ಷಗಳನ್ನೆಲ್ಲ ವ್ಯಾಪಿಸಿರುವ, ಪರಮ ಶ್ರೀವಿಜಯ ಪ್ರಭೂತಿಯಿಂದುಂಟಾದ ಯಶಸ್ಸು ಸ್ತ್ರೀಬಾಲವೃದ್ಧರಲ್ಲೆಲ್ಲ ನಿಹಿತವಾಗಿ ಪರಮಾನಂದದಿಂದ ಲೋಕವು ಒಪ್ಪುತ್ತಿರಲು, ಚಂದ್ರ ನಕ್ಷತ್ರಗಳು ಇರುವವರೆಗೂ ಶಾಶ್ವತವಾಗಿ ನೆಲೆಗೊಳ್ಳಲಿ ! * ಇದು ಸಮಾಪ್ತಿವಾಕ್ಯ. ಶುಭದ ಹಾರೈಕೆಯಿದೆ. *


[1] ಛಂದೋಬಂಧ ಕೆಡದಂತೆ, ಅರ್ಥಕ್ಕೆ ಹೊಂದುವಂತೆ. ಅಪಪಾಠಭೂಯಿಷ್ಠವಾದ ಈ ಪದ್ಯವನ್ನು ಈ ಸಂಪಾದಕನು ತಿದ್ದಿ ಬರೆದಿದ್ದಾನೆ. ಇತರ ಸಂಪಾದಕರು ತಿಳಿದಂತೆ ಇದು ಗೀತಿಕೆಯಲ್ಲ. ಮಣಿವಿಭೂಷಣವೆಂಬ ಒಂದು ಅಕ್ಷರವೃತ್ತ; ೧೫ ಅಕ್ಷರಗಳ ಅತಿಶಕ್ವರೀ ಛಂದಸ್ಸಿನಲ್ಲಿದೆ. *ರ, ನ, ಭ, ಭ, ರಗಣಗಳು.* ಮುಂದಿನ ಪದ್ಯವೂ ಇದೇ ಛಂದಸ್ಸಿನಲ್ಲಿದೆ.

[2] ವಿೞ್ದ ‘ಪಾ, ಮ, ಸೀ’; ಇದರಲ್ಲಿ ಅರ್ತಪುಷ್ಟಿ ಕಡಿಮೆಯೆಂದು ಇಲ್ಲಿ ಪರಿಷ್ಕೃತ.

[3] ‘ಪಾ’ ಕಲ್ಪಿತಪಾಠ. ಮಾರ್ಗನೆಸಕಂ ‘ಪಾ, ಮ, ಸೀ’; ಇಲ್ಲಿ ಅರ್ಥಾನುಗುಣ್ಯಕ್ಕಾಗಿ ಪರಿಷ್ಕೃತ.

[4] ಕಂಸದಲ್ಲಿರುವುದು ಇಲ್ಲಿ ಸಂದರ್ಭೋಚಿತವಾಗಿ ಕಲ್ಪಿತವಾಗಿರುವ ಪಾಠ. ‘ಸಾರ್ಥಮಪ್ಪಂತು ಚಿಂತಿತಕಾರ್ಯತತ್ಪರಂ’ ಎಂದು ‘ಸೀ’ ಕಲ್ಪಿಸಿದ್ದಾರೆ. ‘ಪಾ, ಮ’ ಗಳಲ್ಲಿ ಲುಪ್ತ.

[5] ಇದು ಇಲ್ಲಿ ಕಲ್ಪಿತಪಾಠ; ವೃದಂ- ‘ಸೀ” ಕಲ್ಪತಪಾಠ; ‘ಪಾ, ಮ’ಗಳಲ್ಲಿ ವಿಂದೇಂ ಎಂಬ ಅಪಪಾಠವಿದೆ.

[6] ಇದು ‘ಸೀ’ ಕಲ್ಪಿತಪಾಠ; ‘ಪಾ, ಮ’ಗಳಲ್ಲಿ ಲುಪ್ತ.

[7] ‘ಮ’ ಕಲ್ಪಿತಪಾಠಗಳು; ‘ಪಾ’ ದಲ್ಲಿ ಲುಪ್ತಾಕ್ಷರಗಳಿವೆ.

[8] ‘ಮ’ ಕಲ್ಪಿತಪಾಠಗಳು; ‘ಪಾ’ ದಲ್ಲಿ ಲುಪ್ತಾಕ್ಷರಗಳಿವೆ.

[9] ಮಪನೀತ ‘ಪಾ, ಮ’; ಇಲ್ಲಿ ಕೊಟ್ಟಿರುವುದು ‘ಸೀ’ ಸೂಚಿತಪಾಠ.

[10] =ಸರೂಪವಾದ ಎರಡಕ್ಷರಗಳ ಪ್ರಾಸ. ‘ರಸ’ ಎಂದು ಉದಾಹರಣೆಯಲ್ಲಿರುವಂತೆ.

[11] ದ್ವಂದ್ವಾಕ್ಷರಗಳಲ್ಲಿ+ಅವೃತ್ತವಾದ ಒಂದೇ ಅಕ್ಷರದ ಭಿನ್ನರೂಪಗಳಲ್ಲಿ ಪ್ರಾಸ. ‘ದಂ-ದ’ ಎಂಬಂತೆ.

[12] =ಮೂರು ಅಕ್ಷರಗಳ ಏಕರೂಪ ಆವೃತ್ತಿ-‘ಡಿಸಿದ’ ಎಂಬಂತೆ.

[13] ಆದ್ಯಂತಗಳೆರಡರಲ್ಲೂ ಸಮಾನಾಕ್ಷರದ ಆವೃತ್ತಿ- ‘ರಾ’ ಎಂಬಂತೆ.

* ಮೇಲ್ನೋಟಕ್ಕೆ ಇದು ಪ್ರಕ್ಷಿಪ್ತದಂತೆ ಭಾಸವಾಗುತ್ತದೆ. ಲಿಪಿಕಾರರು ಬೇರೊಂದು ಗ್ರಂಥದಿಂದ ಇಷ್ಟನ್ನು ಸೇರಿಸಿ ಬರೆದರೆನ್ನುವುದಕ್ಕಿಂತ ಗ್ರಂಥಕಾರನೇ ಹೆಚ್ಚಿನ ಅಂಶವೆಂದು ಕಡೆಗೆ ಬರೆದಿರುವ ಸಾಧ್ಯತೆಯೂ ಉಂಟು. ಆದರೆ ಈ ಸಾಧ್ಯತೆಗೆ ಬಾಧಕವಾಗಿರುವ ಒಂದು ಪ್ರಬಲ ಅಂಶವೆಂದರೆ ‘ಒಂದೊಂದಱ…’ ಎಂಬ ದ್ವಂದ್ವಪ್ರಾಸದ ಲಕ್ಷ್ಯಪದ್ಯ ಅಲ್ಪ ಪಾಠಾಂತರಗಳೊಂದಿಗೆ ನೇಮಿಚಂದ್ರನ ‘ಲೀಲಾವತಿ’ಯಲ್ಲಿ (III -೪೨) ಕಂಡುಬರುವುದೇ ಆಗಿದೆ. ಇದೊಂದೇ ಪದ್ಯವನ್ನು ಕವಿರಾಜಮಾರ್ಗದಿಂದ ಮಹಾಕವಿಯಾದ ನೇಮಿಚಂದ್ರನು ಬಳಸಿಕೊಂಡನೆನ್ನುವುದಕ್ಕಿಂತ ನೇಮಿಚಂದ್ರನ ತರುವಾಯ ಬಂದ ಲಿಪಿಕಾರನು ಹಾಗೆ ಮಾಡಿರುವ ಸಂಭವವೇ ಹೆಚ್ಚೆನ್ನಿಸುತ್ತದೆ.

[14] ಳಂಬರಂ ಮ.