೩೬. ಧ್ವನ್ಯಲಂಕಾರ

ಧ್ವನಿಯೆಂಬುದಳಂಕಾರಂ ಧ್ವನಿಯಿಸುಗುಂ ಶಬ್ದದಿಂದಮರ್ಥದೆ ದೂಷ್ಯಂ |

ನೆನೆವುದಿದನಿಂತು ಕಮಳದೊಳನಿಮಿಷ-ಯುಗಮೊಪ್ಪಿ ತೋರ್ಪುದಿಂತಿದು ಚೋದ್ಯಂ ||೨೦೯||

೨೦೯. ‘ಧ್ವನಿ’ಯೆಂಬುದೂ ಒಂದು ಅಲಂಕಾರ. ಅದು ಶಬ್ದದಿಂದ (ಅರ್ಥಾಂತರವನ್ನು) ಸೂಚಿಸುತ್ತದೆ; (ಆಪಾತವಾದ) ಆರ್ಥವು ದೋಷಯುಕ್ತವಾಗಿರುತ್ತದೆ. ಇದರ ಉದಾಹರಣೆ ಹೀಗೆ-‘ಕಮಲದಲ್ಲಿ ಮೀನುಗಳೆರಡು ಸೊಗಸಾಗಿ ಕಾಣುತ್ತಿವೆ; ಇದೇನು ಆಶ್ಚರ್ಯ !’ *ಈ ಗ್ರಂಥಕಾರನು ತನ್ನ ಅಲಂಕಾರಗಳ ನಿರೂಪಣೆಯನ್ನು ಮುಗಿಸುವಷ್ಟರಲ್ಲಿ ಕರ್ಣಾಕರ್ಣಿಕೆಯಾಗಿ ಹೊಸ ಕಾವ್ಯತತ್ತ್ವವೆಂದು ಹೇಳುತ್ತಿದ್ದ ಅಲಂಕಾರವೇ ಆದೀತು ಹೊರತು, ಅದಕ್ಕಿಂತ ಹೆಚ್ಚಿ ಕಾವ್ಯದ ‘ಆತ್ಮ’ವಾಗಲು ಅದಕ್ಕೆ ಅರ್ಹತೆಯಿಲ್ಲವೆಂದು ಈ ಗ್ರಂಥಕಾರನು ಇಲ್ಲಿ ಸೂಚಿಸುತ್ತಿದ್ದಾನೆ. ಮೊದಲು ಇಂತಿಷ್ಟು ಅಲಂಕಾರಗಳನ್ನು ಹೇಳುವೆನೆಂಬ ಪೀಠಿಕಾವಾಕ್ಯಗಳಲ್ಲಿ ‘ಧ್ವನಿ’ಯ ಹೆಸರುಬಾರದಿರುವುದೂ, ಇನ್ನೇನು ಅಲಂಕಾರನಿರೂಪಣೆ ಮುಗಿದಾಯಿತು ಎನ್ನುವಾಗ ಇಲ್ಲಿ ಮಾತ್ರ ಬಂದಿರುವುದೂ ಈ ಊಹೆಯನ್ನು ಸಮರ್ಥಿಸುತ್ತವೆ. ಲ್ಲಿ ಕೊಟ್ಟಿರುವ ಉದಾಹರಣೆಯಲ್ಲಿ ಮೇಲ್ನೋಟಕ್ಕೆ ‘ಮೀನು’ ಶಬ್ದದ ವಾಚ್ಯಾರ್ಥ ದೋಷಯುಕ್ತವೆಂಬಂತೆಯೇ ಇದೆ-ಮೂಖದಲ್ಲಿ ಮೀನುಗಳೆರಡು ಸೊಗಸಾಗಿ ಕಾಣುವುದು ಅಸಂಭವವಾದ್ದರಿಂದ. ಆದರೆ  ‘ಮೀನು’ ಎಂಬ ಶಬ್ದದಿಂದ ಅಭಿವ್ಯಂಗ್ಯ ಎಂದರೆ ಸೂಚ್ಯವಾದ ಅರ್ಥ ಮೀನಲ್ಲ. ಮೀನಿನಂತೆ ಮಿನುಗುವ ಕಣ್ಣುಗಳೆರಡು ಎಂಬುದು. ಸೂಚ್ಯಾರ್ಥವನ್ನು ಅರಿತಾಗ ಅರ್ಥದೋಷ ಪರಿಹಾರವಾಗುವುದು. ಧ್ವನ್ಯಾಲೋಕವನ್ನು ಬರೆದ ಕಾಶ್ಮೀರಕ ಆನಂದವರ್ಧನನ ಸಮಕಾಲೀನನಾದ ಕರ್ಣಾಟಕದ ಲಕ್ಷಣಕಾರನೊಬ್ಬನು ‘ಧ್ದನಿ’ಯನ್ನು ಹೆಸರಿಸಿರುವುದೇ ಒಂದು ಹೆವ್ಮ್ಮೆಯ ಸಂಗತಿ. ಯಾರು ಏನೆಂದುವಾದಿಸಿದರೂ ಧ್ವನ್ಯಾಲೋಕಕ್ಕೆ ಮುಂಚೆ ಕಾವ್ಯಲಕ್ಷಣ ಪ್ರಕ್ರಿಯೆಯಾದ ‘ಧ್ವನಿ’ ಸಮಾಮ್ನಾತಪೂರ್ವವಾಗಿದ್ದುದಕ್ಕೆ ಒಂದೇ ಆಧಾರವೂ ಸಿಕ್ಕಿಲ್ಲ; ವೈಯಾಕರಣರ ಸ್ಫೋಟವಾದದಲ್ಲಿ ವ್ಯಂಜಕವರ್ಣಗಳಿಗೆ ‘ಧ್ವನಿ’ಯೆಂಬ ಹೆಸರಷ್ಟೇ ಸಿಕ್ಕುತ್ತದೆ. ಇದನ್ನು ವಿಸ್ತರಿಸಿಯೇ ಧ್ವನಿಯೆಂಬ ಕಾವ್ಯಲಕ್ಷಣ ಪ್ರಸ್ತುತವಾಯಿತೆಂದು ಆನಂದವರ್ಧನನ ಸ್ಪಷ್ಟೋಕ್ತಿಯಿದೆ. ಪುಸ್ತಕರೂಪದಲ್ಲಿ ಪ್ರಕಟವಾಗದಿದ್ದರೂ ‘ಧ್ವನಿ’ಯೆಂಬ ಕಾವ್ಯತತ್ತ್ವದ ಪ್ರಚಾರ ಮುಖೋದ್ಗತವಾಗಿ ಸಹೃದಯರ ಮಂಡಲಿಗಳಲ್ಲಿ ನಡೆಯುತ್ತಿತ್ತೆಂಬ ಊಹೆ ಅಭಿನವಗುಪ್ತನದಾಗಿದೆ. ಇದಕ್ಕೆ ಪ್ರಬಲ ಸಮರ್ಥನೆಯನ್ನು ನೀಡುವಂತಿದೆ ಕವಿರಾಜಮಾರ್ಗದ ಪ್ರಸ್ತುತ ಉಲ್ಲೇಖ.*

ಮಹಾಕಾವ್ಯಲಕ್ಷಣ

ಮಾಲಿನೀವೃತ್ತಂ || ಅತಶಯಮಿತಿಹಾಸೋಪಾಶ್ರಯಂ ಮೇಣ್ ಕಥಾವಿ-

ಶ್ರುತ-ಚತುರ-ವಿಕಾಶೋತ್ಪಾದಿತಾರ್ಥೋತ್ಕರಂ ಮೇ- |

ಣತಿ-ಕು[1]ಶಲ-*ಸು*ಲೀಲಾಚಾರ-ಲೋಕೋಪಕಾರೋ-

ದಿತ-ಪರಮ-ಗುಣೈಕೋದಾರ-ಧಿರಾಧಿಕಾರಂ ||೨೧೦||

 

ಮಾಲಿನೀವೃತ್ತಂ || ಪರಮ-ಸುಖ-ಪದ-ಶ್ರೀ-ಧರ್ಮ-ಕಾಮಾರ್ಥ-ಮೋಕ್ಷ-

ಸ್ಥಿರ-ವಿಷಯ-ವಿಶೇಷಾಖ್ಯಾನ-ವಿಖ್ಯಾತ-ತತ್ತ್ವಂ |

ಪುರ-ಜನಪದ-ಶೈಲಾದಿತ್ಯ-ಚಂದ್ರೋದಯಾಸ್ತಾಂ-

ತರ-ಸಮೃಗ-ಗಣ-ವ್ಯಾವರ್ಣನಾ-ನಿರ್ಣಯಾರ್ಥಂ ||೨೧೧||

 

ಮಾಲಿನೀವೃತ್ತಂ || ಸಮುದಿತ-ಕುಸುಮಾಮೋದೋದಯೋದ್ಯಾನ-ಲೀಲಾ-

ಕ್ರಮ-ವಿಹಿತ-ಜಲ-ಕ್ರೀಡಾ-ವಿನೋದಾದಿನೀತಂ |

ಪ್ರಮದ-ಮದನ-ಮಾದ್ಯದ್ಯೌವನೋದ್ಯಾನ-ರಾಮಂ

ರಮಣ-ರಚಿತ[2]-ಗೋಷ್ಠೀ-ಬಂಧ-ಸಂಧಿ-ಪ್ರಬಂಧಂ ||೨೧೨||

೨೧೦. *ಮಹಾಕಾವ್ಯಲಕ್ಷಣ-* ಹೆಚ್ಚಾಗಿ ಇತಿಹಾಸವನ್ನು ಆಧರಿಸಿದ ಕಥಾವಸ್ತುವಿದ್ದು ಅದು, ವಿಶ್ರುತವೂ ಚತುರವೂ ಆದ ವಿಸ್ತ*ತಿಯಿಂದ ಕೂಡಿರುವುದಲ್ಲದೆ ಕವಿಕಲ್ಪನೆಯಿಂದಲೇ ಉತ್ಪಾದಿತ ಅಥವಾ ನಿರ್ಮಿತವಾದ ಕಥಾಂಶಗಳನ್ನೂ ಒಳಗೊಂಡಿರಬೇಕು. ಅದರ ‘ಅಧಿಕಾರ’ಗಳು ಎಂದರೆ ಸರ್ಗಗಳು ಕುಶಲ ಲೀಲಾ ವಿನೋದಗಳನ್ನೂ ಸದಾಚಾರಗಳನ್ನೂ ಲೋಕೋಪಕಾರಿಯಾಗುವಂತೆ ಗುಣಭೂಯಿಷ್ಠ ರೀತಿಯಿಂದ ಒಳಗೊಳ್ಳಬೇಕು. *ಹೋಲಿಸಿ-ದಂಡಿ, I-೧೪-೧೫.*

೨೧೧. ಪರಮ ಸುಖಸಂಪತ್ತನ್ನು ನೀಡುವ ಧರ್ಮ, ಅರ್ಥ, ಕಾಮ. ಮೋಕ್ಷ ಎಂಬ ನಾಲ್ಕೂ ಪುರುಷಾರ್ಥಗಳ ನೆಲೆ ಬೆಲೆಗಳನ್ನೂ ಪ್ರಸಿದ್ಧ ವಿಶೇಷಗಳನ್ನೂ ನಿರ್ಣಯಿಸಿ ತಿಳಿಸುವ ಆಖ್ಯಾನಗಳನ್ನುಳ್ಳುದಾಗಿರಬೇಕು. ಪುರ, ದೇಶ, ಪರ್ವತ, ಸೂರ್ಯ ಚಂದ್ರರ ಉದಯಾಸ್ತಗಳು, ನಾನಾ ಮೃಗಗಳು-ಇವುಗಳ ವರ್ಣನೆಗಳು ಅಲ್ಲಿ ನಿರ್ಣಯವಾಗಿ ಬರುತ್ತಿರಬೇಕು.

೨೧೨. (ಅದು) ಕುಸುಮಗಳ ಪರಿಮಳ ಹರಡಿರುವ ವನಗಳಲ್ಲಿ ವಿಹಾರ, ಜಲಕ್ರೀಡೆ; ಇವೇ ಮೊದಲಾದ ವಿನೋದಗಳಿಂದ ಮುಂದುವರೆಯುತ್ತಿರಬೇಕು. ಸೊಕ್ಕಿದ ಯೌವನ ಮದದವರ ಮನ್ಮಥಕ್ರೀಡಾವಿಲಾಸಗಳಿಂದ ರಮಣೀಯವಾಗಿರಬೇಕು. (ಅಲ್ಲಿ) ರಮಣರೊಡನೆ ಏರ್ಪಡಿಸಿದ ಸುರತಗೋಷ್ಠಿಗಳೂ ವರ್ಣಿತವಾಗಬೇಕು. ಕಥಾಬಂಧದಲ್ಲಿ (‘ಮುಖ’ ಪ್ರಮುಖ ಮುಂತಾದ ಭರತೋಕ್ತ ಪಂಚ) ‘ಸಂಧಿ’ಗಳೂ ಸೇರಿರಬೇಕು.

ಮಾಲಿನೀವೃತ್ತಂ || ವಿವಿಧ-ವಿಭವ-ಶೋಭಾರಂಭ-ಲಂಭ-ಪ್ರಲಂಭೋ-

ದ್ಭವ-ವಿಹಿತ-ವಿವಾಹೋತ್ಸಾಹ-ಸಾಕಲ್ಯ-ಕಲ್ಪ |

ಪ್ರವರ-ನೃಪ-ಕುಮಾರಾತ್ತೋದ[3]ಯಾದಿ-ಪ್ರಮೋದಾ-

ಸವ-ಸಮುದಿತ-ಸೇವಾರಾತಿ-ವೃತ್ತಾಂತ-ವೃತ್ತಂ ||೨೧೩||

 

ಮಾಲಿನೀವೃತ್ತಂ || ನಯ-ವಿನಿಮಯ-ನಾನಾ-ಮಂತ್ರ-ದೂತ-ಪ್ರಯಾಣಾ-

ಕ್ಷಯ-ಸಮಯ-ವಿಳಾಸೋಲ್ಲಾಸಿ-ಸಂ[4]ಗ್ರಾಮಿಕಾಂಗಂ |

ಭಯ-ವಿರಹಿತ-ವೀರ್ಯೌದಾರ್ಯ-ಗಂಭೀರ-ಕಾರ್ಯಾ-

ಶ್ರಯ-ವಿಶದ-ಗುಣ-ಶ್ರೀ-ನಾಯಕೋತ್ಕರ್ಷ-ವೇದ್ಯಂ ||೨೧೪||

 

ಮಾಲಿನೀವೃತ್ತಂ || ವಿಳಸಿತ-ಸದಳಂಕಾರಾದಿ-ಸಂಸಾಧಿತಾರ್ಥಂ

ಕುಳ-ವಿದಿತ-ಪದೋದ್ಯತ್-ಕೋಮಳಾಳಾಪ-ಶೀಲಂ |

ಸುಳಲಿತ-ಗುಣ-ನಾನಾ-ವೃತ್ತ-ಜಾತಿ-ಪ್ರವೃತ್ತಾ-

ಸ್ಖಳಿತ-ರಸ-ವಿಶೇಷೋಪಾಶ್ರಯ-ಶ್ರೀ-ನಿವೇಶಂ ||೨೧೫||

೨೧೩. ವಿವಿಧವಾದ ವಿಭವಾನ್ವಿತ ಶೋಭನಾರಂಭಗಳು, ಸಮಾಗಮ, ವಿರಹಗಳ ಮೂಲಕ ಕಡೆಗೆ ಜರುಗುವ ವಿವಾಹೋತ್ಸವ ಮುಂತಾದವನ್ನು ಸಮಗ್ರವಾಗಿ ವರ್ಣಿಸುತ್ತಿರಬೇಕು; ಶ್ರೇಷ್ಠರಾದ ರಾಜಪುತ್ರರ ಜನನ ಹಾಗು ವಿನೋದಗಳನ್ನೂ ಮಧುಪಾನಗೋಷ್ಠೀ, ಶತ್ರುವೃತ್ತಾಂತ ಮುಂತಾದ ಪ್ರಸಂಗಗಳನ್ನೂ ಒಳಗೊಳ್ಳಬೇಕು.

೨೧೪. ರಾಜನೀತಿಯ ವಿಚಾರಗಳನ್ನೊಳಗೊಂಡ ಮಂತ್ರಾಲೋಚನೆಗಳು, ದೂತವೃತ್ತಾಂತ, (ಸೇನಾ)ಪ್ರಯಾಣ, ಅಕ್ಷಯ ಸಮುಲ್ಲಾಸವನ್ನುಂಟುಮಾಡುವ ಯುದ್ಧ-ಇವುಗಳನ್ನು ಕಥಾಂಗಗಳಾಗಿ ಹೊಂದಿರಬೇಕು. ನಿರ್ಭಯನೂ ವೀರ್ಯ, ಔದರ್ಯಾದಿಸಂಪನ್ನನೂ ಆಗಿ,ಉದಾತ್ತ ಕಾರ್ಯಸಿದ್ಧಿಯಲ್ಲಿ ವ್ಯಕ್ತವಾಗುವಂತಹ ಗುಣಾತಿಶಯಶಾಲಿಯಾದ ನಾಯಕನ ಉತ್ಕರ್ಷವನ್ನು ತಿಳಿಸುವಂತಹದಾಗಿರಬೇಕು.

೨೧೫. ಅಲಂಕಾರಗಳ ವಿಲಾಸದಿಂದ ಅರ್ಥವು ಸಂಸಿದ್ಧವಾಗುತ್ತಿರಬೇಕು; ಶುದ್ಧವಾದ ಪದಬಂಧದಿಂದ ರಚನೆ ಸುಕುಮಾರವಾಗಿರಬೇಕು; ಸುಂದರವಾದ ಗುಣಗಳಿಗೂ, ನಾನಾ ಅಕ್ಷರವೃತ್ತ ಮಾತ್ರಾವೃತ್ತಾದಿ ಛಂದಃಪ್ರಕಾರಗಳಿಗೂ, ನಿರಂತರವಾಗಿ ರಸಾಭಿವ್ಯಕ್ತಿಗೂ ಆಶ್ರಯವಾಗಿರುವ ಚೆಲುವನ್ನು ಪಡೆದಿರಬೇಕು.

ಮಾಲಿನೀವೃತ್ತಂ || ನಯವಿದುದಿತ-ಯುಕ್ತಿ-ವ್ಯಕ್ತಿ-ಲೋಕ-ಪ್ರತೀತ್ಯಾ-

ಶ್ರಯ-ಸಕಳ-ಕಳಾ-ಲೀಲಾಕರಾಲ್ಪೋಪಜಲ್ಪಂ |

ನಿಯತ-ಸಮಯ-ಸಾರಾ-ಸಾಧನೀಯಾಧಿಕಾರಾ[5]

ನ್ವಯ-ಪರಮ-ತಪೋನುಷ್ಠಾನ[6]ನಿಷ್ಠಾರ್ಥಸಿದ್ಧಂ ||೨೧೬||

 

ಮಾಲಿನೀವೃತ್ತಂ || ವಿಗತ-ಮಳಮುಪಾತ್ತಾರಾತಿ-ಸಾರ್ಥಾರ್ಥ-ವೀರಂ

ಸ್ಥಗಿತಮಮಿತ-ನಾನಾ-ಶಬ್ದ-ವೀಚಿ-ಪ್ರಪಂಚಂ |

ನಿಗದಿತ-ಗುಣ-ರತ್ನೈಕಾಕರಂ ಸಾಗರಂಬೋಲ್

ಸೊಗಯಿಸಿ ಧರಣೀ-ಚ[7]ಕ್ರಾಂಬರಾಕ್ರಾತಮಕ್ಕುಂ ||೨೧೭||

 

ಗೀತಿಕೆ || ಇಂತು ಮಿಕ್ಕ ವರ್ಣನೆಗಳ್

ಸಚಿತತಮೊಂದಾಗಿ ಪೇಳ್ದ ಕಾವ್ಯಂ ಧರೆಯೊಳ್ |

ಸಂತತಿ ಕೆಡದೆ ನಿಲ್ಕುಮಾಕ

ಲ್ಪಾಂತಬರಮಮೋಘ-ವರ್ಷ-ಯಶಂಬೋಲ್ ||೨೧೮||

೨೧೬. ರಾಜನೀತಿವೇತ್ತರಾದವರ ಯುಕ್ತಿಗಳನ್ನು ಲೋಕಪ್ರಸಿದ್ಧವಾದ ಉಕ್ತಿಗಳನ್ನೂ, ಸಕಲ ಕಲಾಕಲಾಪಗಳ ಪರಿಯನ್ನೂ ಒಳಗೊಂಡ ಮಿತ ಶಬ್ದಗಳನ್ನು ಹೊಂದಿರಬೇಕು. ನಿಯತವಾದ ಶಾಸ್ತ್ರಗಳ ತತ್ತ್ವಸಾರಕ್ಕೆ ಅನುಗುಣವಾಗಿ ಅಧಿಕಾರಾರ್ಹರಿಗೆ ಸಾಧನೀಯವಾದ, ಪರಮ ತಪೋನಿಷ್ಠೆಯಿಂದ ಸಿದ್ಧಿಯಾಗುವ ಇಷ್ಟಾರ್ಥಗಳನ್ನೂ ಒಳಗೊಂಡಿರಬೇಕು.

೨೧೭. ದೋಷಗಳಿಂದ ವಿಮುಕ್ತವಾಗಿ, ಶತ್ರುಗಣದ ಸಂಪತ್ತನ್ನೆಲ್ಲ ವಶಪಡಿಸಿಕೊಳ್ಳುವಂತಹ ವೀರವೃತ್ತಾಂತದಿಂದ ಕೂಡಿ, ಅಪರಿಮಿತವಾದ ಪರಿಪರಿಯ ಶಬ್ದಗಳೆಂಬ ಅಲೆಗಳಿಂದ ತುಂಬಿ, ಉಕ್ತವಾದ ಗುಣಗಳೆಂಬ ರತ್ನಗಳಿಗೆ ಒಂದೇ ಆಕರವೆನಿಸಿ, (ಮಹಾಕಾವ್ಯವು) ಸಾಗರದ ಹಾಗೆ ಸೊಗಯಿಸುತ್ತ, ಭೂವ್ಯೋಮವ್ಯಾಪಿಯಾಗಿ ನಿಲ್ಲುವುದು.

೨೧೮. ಹೀಗೆ ಬೇರೆ ಬೇರೆ ವರ್ಣನಾಂಶಗಳೆಲ್ಲ ಒಂದುಗೂಡುವಂತೆ ಹೇಳಿದ ಕಾವ್ಯವು ನೃಪತುಂಗನ ಯಶಸ್ಸಿನಂತೆಯೇ ಕಲ್ಪಾಂತದವರೆಗೂ ನಿರಂತರವಾಗಿ ಚಿರಸ್ಥಾಯಿಯಾಗಿ ನಿಲ್ಲುವುದು.

ನೃಪತುಂಗ-ಸಭಾಸದ

ದ್ರುತವಿಳಂಬಿತವೃತ್ತಂ || ಸಕಳ-ಲೌಕಿಕ-ಸಾಮಯಿಕೋರು-ವೈ

ದಿಕ-ವಿಶೇಷ-ವಿವೇಕ-ಪರಾಯಣಂ |

ಪ್ರಕಟಿತೋಕ್ತಿ-ವಿ[8]ವಿಕ್ತಿ-ಕಳಾ-ಕಳಾ-

ಪಕನುಪಾಹಿತ-ಸಾ[9]ಹಿತ-ವಿದ್ಯೆಯೊಳ್ ||೨೧೯||

ದ್ರುತವಿಳಂಬಿತವೃತ್ತಂ || ಅತಿಶಯ-ಪ್ರತಿಭಾ-ವಿಭವಂ ಮಹಾ-

ಚತುರ-ವೃತ್ತಿ ನಿತಾಂತಮನಾಕುಳಂ |

ಪ್ರತಿ-ವಿತರ್ಕಿತ-ಲಕ್ಷಣ-ಲಕ್ಷ್ಯಮಾ-

ಶ್ರಿತ-ಮಹಾ-ನೃಪತುಂಗ-ಸಭಾಸದಂ ||೨೨೦||

 

ಮಣಿವಿಭೂಷನವೃತ್ತಂ || ಬಾವಿಸಲ್ ಬಗೆದವಂ ಮಿಗೆ ಜಾಣನಶೇಷ-ಭಾ-

ಷಾ-ವಿಶೇಷ-ವಿಷಯಾತಿಶಯಾಮಳ-ಕೌಶಳಂ |

ದೇವತಾ-ಗುರು-ಗುಣೋದಯ-ವೃದ್ಧ-ಜನೋಪಸಂ |

ಸೇವನಾ-ಪರನಪಾಕೃತ-ವೈಕೃತ-ಚಾಪಳಂ ||೨೨೧||

೨೧೯. *ಇದು ನೃಪತುಂಗನ ಸಭಾಸದವನ ವರ್ಣನೆ-* ಸಕಲ ಲೌಕಿಕ, ದಾರ್ಶನಿಕ ಹಾಗು ವೈದಿಕ ವಿಚಾರಗಳಲ್ಲೆಲ್ಲ ವಿಶೇಷವಾಗಿ ವಿವೇಕಪರನು; ಸಾಹಿತ್ಯ ವಿದ್ಯೆಯಲ್ಲಿ ಸಮಾಹಿತವಾದ ಉಕ್ತಿಪ್ರಕಾರಗಳ ಕಲಾಕಲಾಪವನ್ನೆಲ್ಲ ವ್ಯಕ್ತಮಾಡಬಲ್ಲವನು;

೨೨೦. ಅತಿಶಯವಾದ ಪ್ರತಿಭಾಸಂಪತ್ತುಳ್ಳವನು, ಯಾವಾಗಲೂ ನಿರಾತಂಕವಾಗಿ ಓಡುವ ಚತುರ ಮನೋವೃತ್ತಿಯವನು; ಲಕ್ಷಣ ಹಾಗು ಲಕ್ಷ್ಯಗಳನ್ನು ಯಥೋಚಿತವಾಗಿ ವಿವೇಚಿಸಬಲ್ಲವನು-ಆ ನೃಪತುಂಗನನ್ನು ಆಶ್ರಯಿಸಿರುವ ಸಭಾಸದನು !


[1] ಕುಶಲಸಲೀಲಾ ‘ಸೀ’, ಕುಶಲಬಲೀಲಾ ‘ಪಾ, ಮ’. ಇಲ್ಲಿಯದು ಪರಿಷ್ಕೃತಪಾಠ.

[2] ‘ರಣಿತ’ ‘ಮ, ತ; ಪಾ’ ನಲ್ಲಿ ಲುಪ್ತ; ಇಲ್ಲಿ ಪಾಠ ಪರಿಷ್ಕೃತ.

[3] ದಯಾವಿ ‘ಪಾ’, ‘ದಯಾವಿಃ ‘ಮ’, ದಯಾದಿ ‘ಸೀ’ ಸೂಚಿತ.

[4] ಸಂಗ್ರಾಮಿತಾಂಗಂ ‘ಮ’.

[5] ತಾರಾ ‘ಪಾ, ಮ’. ಇಲ್ಲಿ ಸ್ವೀಕೃತಪಾಠ ‘ಸೀ’ ಸೂಚಿತ.

[6] ನಿಷ್ಟಾರ್ಥ ‘ಪಾ’ ಮಿಷ್ಟಾರ್ಥ ‘ಮ’. ಮೇಲಿನದು ‘ಸೀ’ ಸೂಚಿತಪಾಠ.

[7] ಇದು ‘ಮ’ ಸೂಚಿತಪಾಠ, ಮೂಲದಲ್ಲಿ XXX ಚರಾಕ್ರಾಂತ ಎಂದು ಮೂರು ಅಕ್ಷರಗಳೂ ಲುಪ್ತ.

[8] ವಿವಿಕ್ತ-ಮುಳಿಯ ತಿಮ್ಮಪ್ಪಯ್ಯ ಸೂಚಿತಪಾಠ.

[9] ಛಂದಸ್ಸಿಗಾಗಿ ‘ಸಾಹಿತ್ಯ’ ಎಂಬುದು ‘ಸಾಹಿತ’ ಆಗಿದೆ.