ಮೈಸೂರಿನ ದಕ್ಷಿಣ ಭಾಗಕ್ಕೆ ಸುಮಾರು ೨೪ ಕಿ.ಮೀ. ದೂರದಲ್ಲಿರುವ ನಂಜನಗೂಡು ತಾಲೂಕು ಅನೇಕ ಐತಿಹಾಸಿಕ ಮತ್ತು ಧಾರ್ಮಿಕ ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದ್ದು, ಹಲವಾರು ಕೈಗಾರಿಕೆಗಳನ್ನು ಒಳಗೊಂಡಿದೆ. ಸಮುದ್ರ ಮಟ್ಟದಿಂದ ಸುಮಾರು ೮೦೦ ಮೀ. ಎತ್ತರದಲ್ಲಿದ್ದು ೯೯೧ ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ದಕ್ಷಿಣಕ್ಕೆ ಗುಂಡ್ಲುಪೇಟೆ ತಾಲೂಕು (ಚಾಮರಾಜನಗರ ಜಿಲ್ಲೆ), ಉತ್ತರಕ್ಕೆ ಮೈಸೂರು ತಾಲೂಕು, ಪೂರ್ವಕ್ಕೆ ಟಿ. ನರಸೀಪುರ ತಾಲೂಕು ಹಾಗೂ ಪಶ್ಚಿಮಕ್ಕೆ ಎಚ್‌.ಡಿ. ಕೋಟೆ ತಾಲೂಕುಗಳನ್ನು ಗಡಿಭಾಗವಾಗಿ ಹೊಂದಿದೆ. ಐತಿಹಾಸಿಕ ಮಹತ್ವವನ್ನು ಸಾರುವ ಈ ಪ್ರದೇಶವನ್ನು ಆಳಿದ ಗಂಗ, ಚೋಳ, ಹೊಯ್ಸಳ, ವಿಜಯನಗರ ಅರಸರ ಕೊಡುಗೆಗಳು ಮತ್ತು ಅವರ ಆಡಳಿತ ಕಾಲದ ಮೇಲೆ ಬೆಳಕು ಚೆಲ್ಲುವ ಸುಮಾರು ೪೦೨ ಶಾಸನಗಳು ದೊರೆತಿವೆ. ನಂಜನಗೂಡಿನ ಹಲವು ಸ್ಥಳಗಳಲ್ಲಿ ಬೃಹತ್‌ಶಿಲಾಯುಗದ ಕುರುಹುಗಳನ್ನು ವಿದ್ವಾಂಸರು ಗುರುತಿಸಿದ್ದಾರೆ.

 

ನಂಜನಗೂಡು

ದೂರ ಎಷ್ಟು?
ತಾಲ್ಲೂಕಿನಿಂದ: ೧ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೨೪ ಕಿ.ಮೀ.

ಶ್ರೀ ಶ್ರೀಕಂಠೇಶ್ವರ ದೇವಾಲಯ

ಕಪಿಲ, ಕೌಂಡಿನ್ಯ ನದಿಗಳ ಸಂಗಮ ಸ್ಥಳದ ದಂಡಾಕಾರಣ್ಯದಲ್ಲಿ ವಾಸಿಸುತ್ತಿದ್ದ ಒಬ್ಬ ರಾಕ್ಷಸನ ಸಂಹಾರದೊಂದಿಗೆ ಈ ಕ್ಷೇತ್ರಕ್ಕೆ ಶಿವನ ಆಗಮನವಾಗಿ ವಾಸಸ್ಥಾನವಾಗಿದ್ದರಿಂದ

ಹದಿನಾರು ಕಂಬಗಳ ಮಂಟಪ

ಗರಳಪುರಿ ಎಂದೂ, ತನ್ನ ತಾಯಿಯನ್ನು ಹತೈಗೈದ ಪಾಪ ಪರಿಹಾರಕ್ಕಾಗಿ ತಂದೆಯ ಮಾರ್ಗದರ್ಶನದಂತೆ ಈ ಸ್ಥಳಕ್ಕೆ ಪರಶುರಾಮರು ಭೇಟಿ ನೀಡಿ ತಪಸ್ಸು ಮಾಡಿದ್ದರಿಂದ ಪರಶುರಾಮ ಕ್ಷೇತ್ರವೆಂದೂ, ಅಹಲ್ಯಾ ದೇವಿಯ ಪತಿಯಾದ ಗೌತಮರು ದೇವಸ್ಥಾನ ಸ್ಥಾಪಿಸಿ ತಪಸ್ಸು ಆಚರಿಸಿದ್ದರಿಂದ ಈ ಸ್ಥಳಕ್ಕೆ ಗೌತಮಪುರಿ, ಎಂದೂ ಹೆಸರುಗಳಿವೆ. ನಂಜನ್ನು ಉಂಡವನ ವಾಸಸ್ಥಾನ-ಶಿವನ ವಾಸಸ್ಥಾನದಿಂದ ನಂಜನಗೂಡು ಎಂಬ ಹೆಸರು ಬಂದಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಶ್ರೀ ಶ್ರೀಕಂಠೇಶ್ವರ ಸನ್ನಿಧಿಯೊಂದಿಗೆ ನಂಜನಗೂಡಿನ ರಸಬಾಳೆ ಹಾಗೂ ಬಿ.ವಿ. ಪಂಡಿತರ ಸದ್ವಿದ್ಯಾ ಆಯುರ್ವೇದ ಶಾಲೆಗಳು ನಂಜನಗೂಡಿನ ಹೆಸರನ್ನು ದೇಶಾದ್ಯಂತ ಪಸರಸಿವೆ. ಶ್ರೀ ಶ್ರೀಕಂಠೇಶ್ವರ ದೇವಾಲಯದ ಹಕೀಮ ನಂಜುಂಡ ಪಚ್ಚೆ ಲಿಂಗವು ಟಿಪ್ಪುಸುಲ್ತಾನರ ಕೊಡುಗೆಯಾಗಿದೆ.

ಇಲ್ಲಿನ ಇತರ ಸ್ಥಳಗಳೆಂದರೆ- ಪರಶುರಾಮ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನ, ರಾಘವೇಂದ್ರಸ್ವಾಮಿ ಮಠ, ಕಪಿಲಾ ಮತ್ತು ಕೌಂಡಿನ್ಯ ನದಿಗಳು, ದಳವಾರಿ ರೈಲ್ವೆ ಸೇತುವೆ.

ಕೈಗಾರಿಕ ಕ್ಷೇತ್ರಗಳು: ಬನ್ನಾರಿ ಅಮ್ಮನ್‌ಸಕ್ಕರೆ ಕಾರ್ಖಾನೆ, ನೆಸ್ಲೆ ಕಾರ್ಖಾನೆ, ಟಿ ವಿ ಎಸ್‌ಫ್ಯಾಕ್ಟರಿ, ಸೌತ್‌ಇಂಡಿಯಾ ಪೇಪರ್‌ಮಿಲ್ಸ್‌, ರೀಡ್‌ಅಂಡ್‌ಟೈಲರ್‌, ಎಟಿ ಅಂಡ್‌ಎಸ್‌.

 

ಸುತ್ತೂರು

ದೂರ ಎಷ್ಟು?
ತಾಲ್ಲೂಕಿನಿಂದ: ೨೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೨೩ ಕಿ.ಮೀ.

ನಂಜನಗೂಡಿನಿಂದ ೨೩ ಕಿ.ಮೀ. ದೂರದಲ್ಲಿ ಮೈಸೂರಿನಿಂದ ದಕ್ಷಿಣಕ್ಕೆ ೨೮ ಕಿ.ಮೀ. ದೂರದಲ್ಲಿರುವ ಈ ಪುಟ್ಟ ಗ್ರಾಮವು ಕಪಿಲಾ ನದಿ ತೀರದಲ್ಲಿದೆ. ಶ್ರೀ ಜಗದ್ಗುರು ವೀರಸಿಂಹಾಸನ ಸುತ್ತೂರು ಮಹಾಸಂಸ್ಥಾನ ಮಠಕ್ಕೆ ಒಂದು ಸಾವಿರಕ್ಕೂ ಮಿಗಿಲಾದ ಸುದೀರ್ಘ ಇತಿಹಾಸವಿದೆ.

ಚೋಳರ ದೊರೆ ರಾಜರಾಜರ ಆಳ್ವಿಕೆಯಲ್ಲಿ ಅವರ ಪ್ರಾರ್ಥನೆಯ ಮೇರೆಗೆ ಸುತ್ತೂರಿನಲ್ಲಿ ಕಪಿಲಾ ನದಿಯ ದಂಡೆಯ ಮೇಲೆ ಮಠವನ್ನು ಸ್ಥಾಪಿಸಲು ಶ್ರೀ ಶಿವರಾತ್ರಿ ಶಿವಯೋಗಿ ಮಹಾಸ್ವಾಮಿಗಳು ಅನುಗ್ರಹಿಸಿದರು. ಶಿಲಾ ಶಾಸನ ೧೬೪ ರ ಪ್ರಕಾರ ಸುತ್ತೂರು ಕ್ರಿ.ಶ.೯೫೫ರಲ್ಲಿ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿದುಬರುತ್ತದೆ. ಶ್ರೀ ಸೋಮೇಶ್ವರ ದೇವಾಲಯ, ಶ್ರೀ ಸತ್ಯನಾರಾಯಣಸ್ವಾಮಿ ದೇವಾಲಯ, ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಧಾರ್ಮಿಕ ಹಿನ್ನೆಲೆಯದಾಗಿದ್ದರೆ, ಗ್ರಾಮೀಣ ಪರಂಪರೆಯ ಪ್ರದರ್ಶನ ರಂಗವು ಕಲೆ, ಸಂಗೀತ ವಾದ್ಯ ಮೊದಲಾದವುಗಳನ್ನು ಪ್ರತಿಬಿಂಬಿಸುತ್ತದೆ.

ಶೈಕ್ಷಣಿಕ ಸಂಸ್ಥೆಗಳು, ಉಚಿತ ಪ್ರಸಾದ ನಿಲಯಗಳು, ವೈದ್ಯಕೀಯ ಮತ್ತು ಆರೋಗ್ಯ ಕೇಂದ್ರಗಳು, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳು, ಕೃಷಿ ಸಂಶೋಧನಾ ಸೌಕರ್ಯಗಳು ಇತ್ಯಾದಿಗಳ ಮೂಲಕ ಸುತ್ತೂರು ಮಠದ ಚಟುವಟಿಕೆಗಳು ಭಾರತದ ಉದ್ದಗಲಕ್ಕೂ ಮತ್ತು ವಿದೇಶಗಳಲ್ಲಿ ಹಬ್ಬಿದೆ. ಇಲ್ಲಿ ಅನಾಥರು ಹಾಗೂ ಬಡವರ ಮಕ್ಕಳಿಗಾಗಿ ಉಚಿತ ವಿದ್ಯಾದಾನಕ್ಕಾಗಿ ಆಧುನಿಕ ಸೌಲಭ್ಯಗಳಿಂದ ಕೂಡಿದ ಉಚಿತ ವಸತಿಶಾಲೆ ಇದೆ. ಹೊರ ರಾಜ್ಯದ ವಿದ್ಯಾರ್ಥಿಗಳು ಈ ವಸತಿಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುತ್ತಾರೆ.

ಹೀಗೆ ಬಹು ಆಯಾಮಗಳಿಂದ ಕೂಡಿದ ಸಂಸ್ಥೆಯಾಗಿದೆಯಲ್ಲದೆ ಸಾಮಾಜಿಕ ಜೀವನದ ಮುನ್ನಡೆಗೆ ಬಹು ದೊಡ್ಡ ಪ್ರಮಾಣದಲ್ಲಿ ಕೊಡುಗೆಯನ್ನು ನೀಡಿದೆ. ಮಠದ ಜನಪರ ಕಲ್ಯಾಣ ಚಟುವಟಿಕೆಗಳು ವೀರಶೈವ ಸಮುದಾಯದ ಎಲ್ಲೆಕಟ್ಟುಗಳನ್ನು ಮೀರಿವೆಯಲ್ಲದೆ ಭಾರತೀಯ ಸಮಾಜದ ಎಲ್ಲ ಪಂಗಡಗಳನ್ನು ಒಳಗೊಂಡಂತೆ ವ್ಯಾಪಕವಾಗಿ ಸಂಪೂರ್ಣವಾಗಿ ಆವರಿಸಿವೆ.

 

ಹೆಡತಲೆ

ದೂರ ಎಷ್ಟು?
ತಾಲ್ಲೂಕಿನಿಂದ: ೧೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೩೮ ಕಿ.ಮೀ.

ನಂಜನಗೂಡಿನಿಂದ ೧೫ ಕಿ.ಮೀ. ದೂರದಲ್ಲಿರುವ ಈ ಊರಿಗೆ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವವಿದೆ. ಇದು ಅರ್ಜುನನ ಹೆಂಡತಿಯಾದ ಉಲೂಚಿಯ ತವರು ಎಂದು ಪ್ರತೀತಿಯಿದೆ. ಮಣಿನಾಗಪುರಿ, ರತ್ನಪುರಿ ಎಂಬ ಹೆಸರುಗಳೂ ಇವೆ. ಕ್ರಿ.ಶ. ೧೨೭೨ರ ಕಟ್ನವಾಡಿ ಶಾಸನದ ಪ್ರಕಾರ ಎಡತಲೆ ಎಂಬ ಹೆಸರು ಈ ಊರಿಗಿತ್ತು. ಇತಿಹಾಸದ ಪ್ರಕಾರ ಈ ಗ್ರಾಮಕ್ಕೆ ಗಂಗ, ಹೊಯ್ಸಳ, ವಿಜಯನಗರ, ಮೈಸೂರಿನ ಒಡೆಯರ ಕಾಲದ ಸಂಬಂಧವಿದೆ ಮತ್ತು ಪಾಳೇಗಾರರು ಆಳಿದ ಊರು ಇದಾಗಿದೆ.

ಪ್ರಮುಖ ಸ್ಥಳಗಳು – ಕ್ರಿ.ಶ. ೧೨೯೨ರ ಹದಿನಾರು ಮುಖದ ಚಾವಡ ಹಾಗೂ ಲಕ್ಷ್ಮೀಕಾಂತ ದೇವಾಲಯ, ಕ್ರಿ.ಶ. ೧೨೯೭ರ ಹೊಯ್ಸಳರ ಕಾಲದ ಗೊಮ್ಮದೇವರು, ಕ್ರಿ.ಶ. ೧೩೧೫ರ ಹೊಯ್ಸಳರ ಕಾಲದ ಚೆಲುವರಾಯನ ಗುಡಿ, ಆನೆಕಲ್ಲು ದೇವಾಲಯ, ಭೀಮನಕೆರೆ, ಭಂಗಿಮಾರಮ್ಮನ ಗುಡಿಗಳು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಾಗಿವೆ.

 

ತಗಡೂರು

ದೂರ ಎಷ್ಟು?
ತಾಲ್ಲೂಕಿನಿಂದ: ೨೩ ಕಿ.ಮೀ.
ಜಿಲ್ಲಾ ಕೇಂದ್ರದಿಂದ: — ಕಿ.ಮೀ.

ನಂಜನಗೂಡಿನಿಂದ ಪೂರ್ವ ದಿಕ್ಕಿಗೆ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಕಪ್ಪುಮಣ್ಣಿನಿಂದ ಕೂಡಿದ ಈ ಊರಿಗೆ ಯಂತ್ರಪುರಿ ಎಂಬ ಇನ್ನೊಂದು ಹೆಸರೂ ಇದೆ. ಅಂಕನಾಥೇಶ್ವರ, ಲಕ್ಷ್ಮೀರಮಣ ದೇವಸ್ಥಾನಗಳೂ ಇವೆ. ಈ ಗ್ರಾಮದಿಂದ ನಾಲ್ಕು ಕಿಮೀ. ದೂರದಲ್ಲಿ ಇರುವ ಕಾರ್ಯ ಗ್ರಾಮಕ್ಕೆ ಹೊಂದಿಕೊಂಡಂತೆ ಸಿದ್ದೇಶ್ವರ ಬೆಟ್ಟ ಇದೆ.

೦೫-೦೧-೧೯೩೪ರಲ್ಲಿ ಗಾಂಧೀಜಿಯವರು ಈ ಊರಿಗೆ ಭೇಟಿ ನೀಡಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅದರ ನೆನಪಿಗಾಗಿ ಸ್ಮಾರಕವೂ ಇದೆ ಹಾಗೂ ಖಾದಿಬಟ್ಟೆ ತಯಾರಿಕೆಯ ಕಾರ್ಖಾನೆಯೂ ಸಹ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ.

ಸ್ವಾತಂತ್ರ್ಯ ಹೋರಾಟಗಾರರಾದ ಹಾಗೂ ಪ್ರಥಮವಾಗಿ ಜಮಾನ್‌ಲಾಲ್‌ಪ್ರಶಸ್ತಿ ಪಡೆದ ಶ್ರೀ ತಗೂರು ರಾಮಚಂದ್ರರಾಯರು, ಶ್ರೀ ಟಿ ಎಸ್‌ಸುಬ್ಬಣ್ಣರವರು, ಇವರ ಜನ್ಮಸ್ಥಳ ಇದಾಗಿದೆ.

 

ಕಳಲೆ

ದೂರ ಎಷ್ಟು?
ತಾಲ್ಲೂಕಿನಿಂದ: ೦೮ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೩೧ ಕಿ.ಮೀ.

ನಂಜನಗೂಡಿನಿಂದ ಊಟಿಗೆ ಹೋಗುವ ಮಾರ್ಗದಲ್ಲಿರುವ ಇದರ ಇನ್ನೊಂದು ಹೆಸರು ವೇಣುಪುರ. ೧೮೩೧ ರವರೆಗೆ ಇಲ್ಲಿ ಆಡಳಿತ ನಡೆಸುತ್ತಿದ್ದ ಕಳಲೆಯ ದಳವಾಯಿಗಳು ವಿಜಯನಗರದ ಅರಸರು ಹಾಗೂ ಮೈಸೂರಿನ ಅರಸರ ಆಳ್ವಕೆಯಲ್ಲಿ ಮಹತ್ವದ ಸ್ಥಾನದಲ್ಲಿದ್ದರು ಎಂಬುದು ದಾಖಲೆಗಳಿಂದ ತಿಳಿದುಬರುತ್ತದೆ.

ಲಕ್ಷ್ಮೀಕಾಂತ ದೇವಾಲಯ, ಸೋಮೇಶ್ವರ ದೇವಾಲಯ, ಮಲ್ಲೇಶ್ವರ ದೇವಾಲಯಗಳು ಇಲ್ಲಿರುವ ಪ್ರಾಚೀನ ಕಾಲದ ದ್ರಾವಿಡ ಶೈಲಿಯ ದೇವಾಲಯಗಳು.

ವೀರರಾಜ, ದೇವರಾಜ, ಕರಚೂರಿನ ನಂಜರಾಜ, ಚೆಲುವಾಂಬೆ ಇಲ್ಲಿನ ಸಾಹಿತಿಗಳು.

 

ಬದನವಾಳು

ನಂಜನಗೂಡಿನಿಂದ ಪೂರ್ವಕ್ಕೆ ೯ ಕಿ.ಮೀ. ದೂರದಲ್ಲಿದೆ. ೧೯೩೪ರಲ್ಲಿ ಗಾಂಧೀಜಿಯವರು ಗ್ರಾಮಕ್ಕೆ ಭೇಟಿ ನೀಡಿ ಜನರನ್ನು ಸ್ವಾತಂತ್ರ‍್ಯ ಚಳುವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದಾರೆ. ಇದರ ನೆನಪಿಗೆ ಒಂದು ಸ್ಮಾರಕವಿದೆ.