ತಿರುವಯ್ಯಾರಿನಲ್ಲಿ ಶ್ರೀ ತ್ಯಾಗರಾಜರ ಸಮಾಧಿಯ ಕಟ್ಟಡ ನಿರ್ಮಾಣವಾಗಿ ಅದು ಸಂಗೀತಗಾರರೆಲ್ಲರ ಪಾಲಿಗೊಂದು ಪವಿತ್ರ ಯಾತ್ರಾಕ್ಷೇತ್ರವಾಗಿರುವುದು ಶ್ರೀಮತಿ ನಾಗರತ್ನಮ್ಮನವರ ಔದಾರ್ಯದ ತ್ಯಾಗದ ಪಾವಿತ್ಯ್ರದ ಸಂಕೇತ.

ನಾಗರತ್ನಮ್ಮನವರಿಗೆ ಸಂಗೀತ-ನೃತ್ಯ ವಂಶಾನುಗತವಾಗಿ ಸಹಜವಾಗಿ ಒಲಿದು ಬಂದಿದ್ದುವು. ಅಜ್ಜಿ ದೊಡ್ಡರಂಗಮ್ಮ ಈ ಕಲೆಗಳಲ್ಲಿ ನಿಷ್ಣಾತರು. ಸಾಕು ತಂದೆ ವೀಣಾ ವಿದ್ವಾನ್‌ ವಿ. ರಾಮರಾಯರು ಇವರಿಗೆ ಐದನೆಯ ವಯಸ್ಸಿನಿಂದಲೇ ಸಂಗೀತಾಭ್ಯಾಸ ಆರಂಭಿಸಿದರು. ಆಸ್ಥಾನ ವಿದ್ವಾನ್‌ ಮುತ್ತಯ್ಯ ಭಾಗವತರ ಶಿಕ್ಷಣದಿಂದ ಪಕ್ವಗೊಂಡ ಇವರು ಸಂಗೀತದೊಡನೆ ನಾಟ್ಯ ಕಲೆಯಲ್ಲಿ ಪಾರಂಗತರಾದರು. ಸೋದರತ್ತೆ ಪುಟ್ಟರಂಗಮ್ಮ ನಾಟ್ಯ ಸರಸ್ವತಿ ಜಟ್ಟಿತಾಯಮ್ಮನವರೇ ಇವರ ರೂವಾರಿಗಳಾಗಿದ್ದರು.

ಸಂಗೀತ ನೃತ್ಯ-ಕ್ಷೇತ್ರಗಳಲ್ಲಿ ನಾಲ್ಕು ದಶಕಗಳಿಗಿಂತಲೂ ಮಿಗಿಲಾಗಿ ತಮ್ಮ ಪ್ರತಿಭೆಯನ್ನು ಮೆರೆಸಿದ ನಾಗರತ್ನಮ್ಮ ಮೈಸೂರು ರಾಜರ ಆಸ್ಥಾನದ ಸನ್ಮಾನ ಪಡೆದು ಆಸ್ಥಾನ ವಿದುಷಿಯಾಗಿದ್ದರು. ಪ್ರತಿ ಶುಕ್ರವಾರ ಚಾಮುಂಡಿ ಬೆಟ್ಟದ ದೇವಿಯ ಸನ್ನಿಧಾನದಲ್ಲಿ ಸಂಗೀತ ಸೇವೆ ಸಲ್ಲಿಸುತ್ತಿದ್ದಂತೆಯೇ ನಂಜನಗೂಡಿನ ಶ್ರೀಕಂಠೇಶ್ವರ ಸನ್ನಿಧಿಯಲ್ಲೂ ನಿಂತು ಹೋಗಿದ್ದ ಮಹಿಳೆಯರ ಸಂಗೀತ ಸೇವಾವಕಾಶವನ್ನು ಪುನರುಜ್ಜೀವಿಸಿದರು.

‘ಗೋರಾ ಕುಂಬಾರ’ ಎಂಬ ತಮಿಳು ಚಿತ್ರದಲ್ಲಿ ನಟಿಸಿದ್ದ ಈಕೆ ಕನ್ನಡ ನಾಡಿನಲ್ಲಿ ಮಾತ್ರವಲ್ಲದೇ ಮದರಾಸು ಮುಂಬಯಿಗಳಲ್ಲೂ ತಮ್ಮ ಕಲಾಪ್ರೌಢಿಮೆಯನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದರು. ಇವರ ಕಂಠ ಮಾಧುರ್ಯವು ಕೆಲವೇ ಧ್ವನಿ ಮುದ್ರಣಗಳ ಮೂಲಕ ಉಳಿದು ಬಂದಿದೆ. ‘ವಿದ್ಯಾಸುಂದರಿ/’ ‘ಗಾನಕಲಾ ವಿಶಾರದ’ ಎಂದೆಲ್ಲ ಕೀರ್ತಿತರಾದ ನಾಗರತ್ನಮ್ಮನವರು ೧೯೬೭-೬೮ರ ರಾಜ್ಯ ಸಂಗೀತ-ನಾಟಕ ಅಕಾಡೆಮಿಯ ಸನ್ಮಾನವನ್ನು ಪಡೆದರು.