ತಮಿಳು ನಾಡಿನಲ್ಲಿ ಹಿಂದೆ ಅನೇಕ ಪ್ರಸಿದ್ಧ ಶಿವಭಕ್ತರು ಇದ್ದರು.  ಅವರನ್ನು ನಾಯನ್ಮಾರರು ಎಂದು ಕರೆಯುತ್ತಾರೆ.  ಈ ನಾಯನ್ಮಾರರು ಸರಳ ಜೀವನದ ಸಾಧು ವ್ಯಕ್ತಿಗಳು. ಅವರು ತಮ್ಮ ಕಾಲದ ಜನರಿಗೆ ಒಳ್ಳೆಯ ನೀತಿ ನಡತೆಗಳನ್ನು ಕಲಿಸಿದರು. ಅವರಲ್ಲಿ ನಂದನಾರ‍್ ಮುಖ್ಯರಾದವರು.

ಹರಿಜನ ಕೇರಿಯಲ್ಲಿ ಹುಡುಗ :

ಭಕ್ತ ನಂದನಾರ್ ತಂಜಾವೂರು ಜಿಲ್ಲೆಗೆ ಸೇರಿದವರು. ಈ ಜಿಲ್ಲೆಯಲ್ಲಿ ಕಾವೇರಿ ನದಿ ಅನೇಕ ಕವಲುಗಳಾಗಿ ಹರಿಯುತ್ತದೆ.  ಅದರಿಂದ ನೆಲ ಫಲವತ್ತಾಗಿದೆ. ಹೇರಳವಾಗಿ ಭತ್ತ, ತೆಂಗು, ಬಾಳೆ ಬೆಳೆಯುತ್ತದೆ.  ಈ ಜಿಲ್ಲೆಗೆ “ದಕ್ಷಿಣದ ಕಣಜ” ಎಂದೇ ಹೆಸರು. ಕಾವೇರಿಯ ಒಂದು ಕವಲಾದ ಕೊಲ್ಲಿಡಂ ಹೊಳೆಯೆ ತೀರದಲ್ಲಿ ಆದನೂರು ಎಂಬ  ಪುಟ್ಟ ಹಳ್ಳಿಯುಂಟು. ಕ್ರಿಶ. ೭೯೦ರಿಂದ ೮೪೦ರ ವರೆಗೆ ಆಳಿದ ಪಲ್ಲವ ದೊರೆಯಾದ ಎರಡನೇ ನಂದಿವರ್ಮನ ಕಾಲದಲ್ಲಿ ನಂದನಾರ್ ಹುಟ್ಟಿದರು.  ಅವರ ತಂದೆ ತಾಯಿಗಳು ಕಡುಬಡವರು.

ನಂದನಾರರ ಮನೆ ಹರಿಜನ ಕೇರಿಯಲ್ಲಿತ್ತು. ಗುಡಿಸಲುಗಳೇ ಅಲ್ಲಿನ ಮನೆಗಳು. ಪಾಪ, ಆ ಹರಿಜನರು ಬಡವರು, ಅವರಿಗೆ ವಿದ್ಯೆ ಇಲ್ಲ. ಅವರ ಗುಡಿಸಲ ಮುಂದೆ ಸೋರೆ ಬಳ್ಳಿ, ಕೋಳೀ, ನಾಯಿ ಮತ್ತು ಕಸದ ರಾಶಿಗಳಿದ್ದವು.  ಮಕ್ಕಳು ಬೆತ್ತಲೆಯಾಗಿ ಓಡಾಡುತ್ತಿದ್ದರು.  ಅಲ್ಲಿನ ಜನರು ಸತ್ತ ದನಕರುಗಳ ಚರ್ಮ ಹದಮಾಡಿ ದೇವಸ್ಥಾನದ ವಾದ್ಯಗಳಿಗೆ ಕೊಡುತ್ತಿದ್ದರು.  ಊರಿನವರ ಗದ್ದೆ ತೋಟಗಳಲ್ಲಿ ದುಡಿಯಲು ಹೋಗುತ್ತಿದ್ದರು.  ಬಡತನ ಮತ್ತು ಅಜ್ಞಾನಗಳಲ್ಲಿ ಮುಳುಗಿದ್ದ ಅವರಲ್ಲಿ ಮದ್ಯಪಾನ, ಪರಸ್ಪರ ಅಸೂಯೆ, ಜಗಳ ಮುಂತಾದವು ತುಂಬಿದ್ದವು.  ಅವರು ಪವಾಡೈರಾಯ, ಪಿಡಾರಿ ಎಂಬ ದೇವತೆಗಳಿಗೆ ಪ್ರಾಣಿ ಬಲಿ ಕೊಟ್ಟು ಪೂಜೆ ಮಾಡುತ್ತಿದ್ದರು.

ಬಾಲಕ ನಂದನಾರ‍್ ಕಪ್ಪು ಬಣ್ಣದವನು. ಆದರೂ, ಎಲ್ಲರ ಮನ ಸೆಳೆಯುವಂತೆ ಲಕ್ಷಣವಾಗಿದ್ದ. ಸದಾ ನಗುಮುಖ, ಬಾಯಲ್ಲಿ ಒಳ್ಳೆಯ ಮಾತು. “ಇಂಥ ಮಗು ಪಡೆಯಲು ತಂದೆ ತಾಯಿಗಳು ಬಹಳ ಪುಣ್ಯ ಮಾಡಿರಬೇಕು” ಎಂದು ಜನರು ಮಾತನಾಡಿಕೊಂಡರು.

ಬಾಳೂ ಸಾರ್ಥಕವಾಗುವ ರೀತಿ :

ಆ ಕೇರಿಯಲ್ಲಿ ಅವನ ಸುತ್ತ ಮುತ್ತ ಇದ್ದವರಲ್ಲಿ ಹವರಿಗೆ ಅನೇಕ ಕೆಟ್ಟ ಅಭ್ಯಾಸಗಳಿದ್ದವು. ಆದರೆ ಕೆಟ್ಟ ಹವ್ಯಾಸಗಳಿಗೆ ನಂದನಾರ‍್ ಬಲಿ ಬೀಳಲಿಲ್ಲ. ಅವನು ಎಳೆ ವಯಸ್ಸಿನಲ್ಲಿಯೇ ಹೆಚ್ಚಿನ ತಿಳುವಳಿಕೆ  ಹೊಂದಿದ್ದ, ಪ್ರಾಮಾಣಿಕನಾಗಿದ್ದ. ಜೊತೆಗೆ ದೈವ ಭಕ್ತಿಯು ಸೇರಿತ್ತು. ಒಮ್ಮೆ ಆ ಊರಿನಲ್ಲಿ ಒಂದು “ಶೈವ ಪ್ರಸಂಗ” (ಶಿವಕಥೆ) ನಡೆಯಿತು.  ನಂದನಾರ‍್ಗೆ ಅದನ್ನು ಕೇಳಬೇಕೆಂದು ಆಸೆ. ಆದರೆ ಹತ್ತಿರ ಹೋಗುವಂತಿರಲಿಲ್ಲ. ಊರಿನವರಿಗೆ ಒಂದು ತಪ್ಪು ಭಾವನೆ- ಹರಿಜನರನ್ನು ದೂರ ಇಟ್ಟಿರಬೇಕು ಎಂದು ಅವನ ಪಂಗಡದ ಜನರನ್ನು ಊರಿನೊಳಗೆ ಸೇರಿಸುತ್ತಿರಲಿಲ್ಲ. ಆದರೂ ಬಾಲಕನಾದ ನಂದನಾರ‍್ ದೂರದಲ್ಲೆ ನಿಂತು ಶಿವಕಥೆಯನ್ನು ಮನಸ್ಸಿಟ್ಟು ಕೇಳಿದ. ಮನುಷ್ಯನ ಜೀವನ ಸಾರ್ಥಕವಾಗಲು ದೈವಭಕ್ತಿ ಮತ್ತು ಒಳ್ಳೆಯ ನಡೆ ನುಡಿಗಳೇ ಕಾರಣವೆಂದು ಅವನಿಗೆ ನಂಬಿಕೆ ಬಂತು.  ಆಗಿನಿಂದ ಅವನು ದಿನವೂ ಸ್ನಾನ ಮಾಡಲು ಆರಂಭಿಸಿದನು. ವಿಭೂತಿ ಮತ್ತು ರುದ್ರಾಕ್ಷಿ ಧರಿಸಲು ತೊಡಗಿದ. ಕೊಳಕರಾಗಿ ಓಡಾಡುತ್ತಿದ್ದ ತನ್ನ  ಜೊತೆಗಾರರಿಗೂ ಸ್ವಚ್ಛವಾಗಿರುವುದನ್ನು ಹೇಳೀಕೊಟ್ಟ. ಆ ಕೇರಿಯ ಬಾಲಕರೆಲ್ಲರ ಅಚ್ಚು ಮೆಚ್ಚಿನ ನಾಯಕ ಅವನಾದ. ಅವನಿಗೆ ಇಂಪಾಗಿ ಹಾಡಲು ಸಹ ಬರುತ್ತಿತ್ತು. ಗೆಳೆಯರನ್ನೆಲ್ಲ ಒಟ್ಟಾಗಿ ಸೇರಿಸಿ ದೇವರ ಭಜನೆ ಕಲಿಸುತ್ತಿದ್ದ.

ಬಾಲಕ ಸುಧಾರಕ:

ತನ್ನ ಕೇರಿಯ ಜನರ ರೀತಿ ನೀತಿಗಳನ್ನುಕಂಡು ನಂದನಾರ‍್ಗೆ ಬೇಸರವಾಯಿತು. ಅವನು ವಯಸ್ಸಿನಲ್ಲಿ ಚಿಕ್ಕವನಾದರೂ ಸ್ವತಂತ್ರವಾಗಿ ಯೋಚಿಸುವ ಶಕ್ತಿ ಬೆಳೆಸಿಕೊಂಡಿದ್ದ. ಮಧ್ಯ ಕುಡಿಯಬಾರದು, ಮಾಂಸ ತಿನ್ನಬಾರದು, ಮೈ ಮನಸ್ಸುಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು ಎಂದು ತನ್ನ ಕೇರಿಯವರಿಗೆ ಅವನು ಹೇಳತೊಡಗಿದ.  ಆದರೆ, ಈ ಚಿಕ್ಕ ಹುಡುಗ ನಮಗೇನೂ ಹೇಳುವುದು ಎಂದು ಅವನ ಮಾತಿಗೆ ಯಾರೂ ಕಿವಿಗೊಡಲಿಲ್ಲ. ಅದರ ಬದಲು, ಅವನನ್ನೇ ಮೊದಲು ತಮಾಷೆ ಮಾಢಿದರು. ಆಮೇಲೆ ವಿರೋಧಿಸತೊಡಗಿದರು. ನಂದನಾರ‍್ಗೆ ಬುದ್ಧಿ ಸರಿಯಾಗಿಲ್ಲ. ಉಳಿದ ಹುಡುಗರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾನೆ. ಅದರಿಂದ ನಮ್ಮ ದೇವರು ಕೋಪಿಸಿಕೊಳ್ಳುತ್ತಾನೆ ಎಂದು ದೂಷಿಸಿದರು.  ಆ ಕೇರಿಯಲ್ಲಿ ಏನೇ ತೊಡಕು, ಕೆಡಕು ಉಂಟಾದರೂ  ಅದಕ್ಕೆ ನಂದನಾರನೇ ಹೊಣೆ. ಏಕೆಂದರೆ ಅವನು ತಮ್ಮ ಕುಲದ ಕಟ್ಟಳೆ ಮೀರಿ ನಡೆಯುತ್ತಿದ್ದಾನೆ ಅಂದರು. ಅವನ ತಂದೆ ತಾಯಿಗಳೂ ಅವನನ್ನು ಬಯ್ಯತೊಡಗಿದರು.

ಶಿವನೇ ಮೂಢನಂಬಿಕೆ ತೊಲಗಿಸು.

ನಂದನಾರನ ಮನೆಯಲ್ಲಿ ಕುರಿ, ಕೋಳಿ, ಸಾಕಿದ್ದರು. ಕುರಿತು ಚೆನ್ನಾಗಿ ಮೈ ತುಂಬಿಕೊಂಡು ಬೆಳೆದಿತ್ತು. ಅವನಿಗೆ ಅದರ ಮೇಲೆ ಬಹಳ ಪ್ರೀತಿ. ಒಂದು ದಿನ ಅವನು ಮನೆಯಲ್ಲಿ ಇರಲಿಲ್.ಆಗ ಆ ಕುರಿಯನ್ನು “ಪೆರಿ ಅಂಡವನ್” ಗೆ ಬಲಿಕೊಟ್ಟುಬಿಟ್ಟರು.ನಂದನಾರ‍್ ಮನೆಗೆ ಬಂದ ಮೇಲೆ ಕುರಿಯನ್ನು ಕಾಣಲಿಲ್ಲ. ವಿಚಾರಿಸಿದಾಗ , ನಡೆದ ಸಂಗತಿ ತಿಳಿಯಿತು. ಅವನಿಗೆ ಬಹಳ ದುಃಖ ಬೇಸರವಾಯಿತು. ತಂದೆ ತಾಯಿಗಳ ಮುಖ ನೋಡದೆ, ಊಟ ಮಾಡದೆ ಹೊರಕ್ಕೆ ಹೊರಟ. ಹತ್ತಿರದಲ್ಲಿಯೇ ಇದ್ದ ಒಂದು ಮಾವಿನ ಮರದ ಕೆಳಗೆ ಕುಳಿತು ದೇವರ ಧಾನ್ಯ ಮಾಡತೊಡಗಿದ. “ಹೇ, ಶಿವನೆ, ನನ್ನ ತಂದೆ ತಾಯಿಗಳ ಮೂಢ ನಂಬಿಕೆ ತೊಲಗಿಸಿ, ಅವರಿಗೆ ಒಳ್ಳೆಯ ಬುದ್ಧಿ ಕೊಡು” ಎಂದು ಪ್ರಾರ್ಥಿಸುತ್ತಿದ್ದ.

ತಂದೆ ತಾಯಿಗೆ ಹುಡುಗ ಕಾಣಲಿಲ್ಲ. ಎಲ್ಲ ಕಡೆ ಹುಡುಕಿದರು. ಕಡೆಗೆ ದೇವರ ಧ್ಯಾನ ಮಾಡುತ್ತಿದ್ದ ನಂದನಾರ‍್ ನನ್ನು ಕಂಡರು. ಹುಡುಗನು ಉಪವಾಸ ಕುಳಿತದ್ದು  ಕಂಡು, ತಂದೆತಾಯಿ ಅವನು ಇದ್ದಲ್ಲಿಗೇ ಊಟ ತೆಗೆದುಕೊಂಡು ಬಂದರು. ಅನ್ನ- ನೀರು ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಆದರೆ ನಂದನಾರ‍್ ಕಣ್ಣು ತೆರೆಯಲಿಲ್ಲ. ಏನೂ ಮಾತನಾಡಲಿಲ್ಲ. ಮೌನವಾಗಿ ಧ್ಯಾನ ಮಾಡುತ್ತಲೇ ಇದ್ದ. ಆಗ ಕೇರಿಯ ಹಿರಿಯರೆಲ್ಲ ಬಂದರು. ತಮಗೆ ತೋಚಿದಂತೆ ಸಮಧಾನ ಹೇಳಲು ಪ್ರಯತ್ನಿಸಿದರು. ಆದರೆ ನಂದನಾರ‍್ ತನ್ನ ಸತ್ಯಾಗ್ರಹ ಬಿಡಲಿಲ್ಲ.” ಈ ಪೋರನಿಗೆ ಬುದ್ದಿ ಕೆಟ್ಟಿದೆ” ಎಂದು ಹೇಳಿಕೊಂಡು ಎಲ್ಲರೂ ಹೊರಟು ಹೋದರು.

ದೇವರ ಮುಂದೆ ಎಲ್ಲರೂ ಸಮಾನರು :

ಕೊನೆಗೆ ತಾಯಿ ಒಬ್ಬಳು ಮಾತ್ರ ಉಳಿದಳು. ಅವಳು ಕಣ್ಣೀರು ಸುರಿಸುತ್ತಾ, “ಮಗು, ನಾನೇನು ತಪ್ಪು ಮಾಡಿದೆ ? ನನ್ನ ಜೊತೆ ಏಕೆ ಮಾತನಾಡುವುದಿಲ್ಲ?” ಎಂದು ಅತ್ತಳು.

ಆಗ ನಂದನಾರ‍್ ಕಣ್ಣುಬಿಟ್ಟ. “ನಿನ್ನದು ಏನು ತಪ್ಪಿಲ್ಲ. ನೀವೆಲ್ಲರೂ ನಿಮ್ಮ ಮೂಢ ಆಚಾರದಂತೆಯೇ ನಡೆದುಕೊಂಡಿದ್ದೀರಿ. ನಾನು ಅದಕ್ಕೆ ಹೊಂದಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಇನ್ನು ಮುಂದೆ, ನಾನು ನಿನ್ನ ಮಗ ಅನ್ನುವುದನ್ನು ಪೂರ್ತಿ ಮರೆತು ಬಿಡು. ಆಗಲೇ ನನ್ನ ಮನಸ್ಸಿಗೆ ಸಮಾದಾನಾದೀತು” ಎಂದ.

“ಮಗು, ನಾನು ಹೆಣ್ಣು ಹೆಂಗಸು. ನೀನು ಹೇಳುವುದೆಲ್ಲ ನನಗೇನು ತಿಳಿದೀತು? ನಿನಗೆ ಒಳ್ಳೆಯದಾಗಲಿ ಅಂತಲೇ ನಾವು ಬಲಿ ಕೊಟ್ಟದ್ದು. ನೀನುಬೇರೆಯವರ ಹಾಗೆ ಶಿವಭಜನೆ ಮಾಡುವುದರಿಂದ, ನಿನಗೆ ಬುದ್ಧಿ ಕೆಟ್ಟಿದೆ. ಇದರಿಂದ ಮನೆಯವರಾದ ನಮಗೆಲ್ಲ ಕಣ್ಣು ಇಂಗಿ  ಹೋಗುತ್ತದೆ ಎಂದು ಜನ ಆಡಿಕೊಳ್ಳುತ್ತಾರೆ. ಈ ಕೇರಿಯಲ್ಲಿ ನಿನ್ನ ವಯಸ್ಸಿನ ಇತರ ಮಕ್ಕಳೂ ತಿಂದುಂಡು ಹಾಯಾಗಿಲ್ಲವೇ? ಆದರೆ ಅವರ ಭಾಗ್ಯ ನಮ್ಮ ಮನೆಗಿಲ್ಲ. ಆದರೂ, ನನ್ನ ಪಾಲಿಗೆ ಆದೇವರು ನಿನಗಿಂತ ಹೆಚ್ಚಿನವನಲ್ಲ. ನೀನು ಏನೇ ಹೇಳಿದರೂ ಕೇಳುತ್ತೇನೆ. ಮೊದಲು ಊಟ ಮಾಡು.”

“ನಿನಗೆ ಈಗ ಬುದ್ಧಿ ಬಂದಂತೆ ಕಾಣುತ್ತದೆ. ನೀನೂ ಅಪ್ಪನೂ ಇನ್ನು ಮುಂದೆ ಮಾಂಸಹಾರ ಬಿಡಬೇಕು. ಪ್ರಾಣಿಗಳನ್ನು ಕೊಲ್ಲಬಾರದು. ಶಿವನ ಧ್ಯಾನ  ಮಾಡಬೇಕು. ಶಿವನು ಮೇಲು  ಜಾತಿಯವರಿಗೆ ಮಾತ್ರ ಸೇರಿದವನಲ್ಲ. ಅವನು ಎಲ್ಲರಿಗೂ ಕರುಣೆ ತೋರಿಸುವಂಥವನು.ಅವನೆದುರು ಮೇಲು ಕೀಳುಗಳಿಲ್ಲ. ಎಲ್ಲರೂ ಸಮಾನರು.”

“ಸರಿ, ಇನ್ನು ಮನೆಗೆ ಹೋಗೋಣ. ನೀನು ಹೇಳಿದಂತೆಯೇ ಆಗಲಿ”  ಅಂದಳು ತಾಯಿ.

“ಅಮ್ಮಾ, ಯಾವ ದೇವರು ಪ್ರಾಣಿ ಬಲಿ ಕೊಡುವಂತೆ ಕೇಳುವುದಿಲ್ಲ. ಜನರು ತಮ್ಮ ದುಷ್ಟ ಚಪಲ ತೀರಿಸಿಕೊಳ್ಳಲು ಹಾಗೆ ಮಾಡುತ್ತಾರೆ. ನೀವು ಉಳಿದ ಬಳಗದವರಿಗೂ ಬುದ್ಧಿ ಹೇಳಿ ಈ ಕೆಟ್ಟ ಅಭ್ಯಾಸ ಬಿಡಿಸಬೇಕು. ಇದಕ್ಕೆ ಒಪ್ಪಿದರೆ ನಾನು ಬಂದು ಊಟ ಮಾಡುತ್ತೇನೆ. ಇಲ್ಲವಾದರೆ ಮನೆಯ ಕಡೆ ನೋಡುವುದಿಲ್ಲ”. ಎಂದ ನಂದನಾರ‍್.

ಅಮ್ಮ ಯಾವ ದೇವರೂ ಪ್ರಾಣಿ ಬಲಿಯನ್ನು ಕೇಳುವುದಿಲ್ಲ.

ತಾಯಿ ಒಪ್ಪಿಕೊಂಡಳು. ಆಗ ನಂದನಾರ‍್ ಮನೆಗೆ ಹೋದ. ಮನೆಯಲ್ಲಿ ಹುಡುಗನದು ಸದಾ ಶಿವನ ಧ್ಯಾನ. ತಂದೆ ತಾಯಿಯರಿಗೂ ಅವನ ರೀತಿ ಕಂಡು ಕುತೂಹಲ, ಬೆರಗು. ಕ್ರಮೇಣ ಅವನ ತಂದೆ ತಾಯಿ ಶಿವಭಕ್ತರಾದರು. ಮನೆಯಲ್ಲಿ ಒಳ್ಳೆಯ ಬದಲಾವಣೆ ಆದುದನ್ನು ಕಂಡು ನಂದನಾರನ ಉತ್ಸಾಹ ಹೆಚ್ಚಿತು. ಊರಿನವರಿಗೆಲ್ಲ ತನ್ನ ವಿಚಾರ ಹೇಳಲು ಇನ್ನಷ್ಟು ಧೈರ್ಯ ಬಂದಿತು.

ಯಜಮಾನನಿಗೆ ಆತಂಕ:

ನಂದನಾರ‍್ ಮತ್ತು ಅವನ ಗೆಳೆಯರು ಬೆಳೆದು ಯುವಕರಾದರು. ಅವನ ತಂಡ ದೊಡ್ಡದಾಯಿತು. ಎಲ್ಲರೂ ಬೆಳಗಾಗುವ ಮೊದಲೇ  ಎದ್ದು ಸ್ನಾನ ಮಾಡಿ ಒಟ್ಟುಗೂಡುವರು. ಆನಂದವಾಗಿ ಭಜನೆ ಮಾಡಿ, ಅನಂತರ ತಂತಮ್ಮ ಕೆಲಸಕ್ಕೆ ಹೊರಡುವರು. ನಂದನಾರ‍್ ಅವರಿವರ ಗದ್ದೆ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ. ಸಮಯ ಸಿಕ್ಕಿದಾಗ ದೇವಸ್ಥಾನದ ವಾದ್ಯಗಳಿಗೆ ಚರ್ಮ ಹಾಗೂ ಹುರಿ ತಯ್ಯಾರಿಸಿಕೊಡುತ್ತಿದ್ದ. ರಾತ್ರಿ ಪುನಃ ಅವನ ತಂಡದವರೆಲ್ಲ ಭಜನೆಗೆ ಸೇರುತ್ತಿದ್ದರು. ಇಡೀ ಕೇರಿಯಲ್ಲಿ ಬದಲಾವಣೆ ತರಲುನಂದನಾರ‍್ ಪ್ರಯತ್ನಿಸತೊಡಗಿದ.

ಇದರಿಂದ ಕೇರಿಯ ಯಜಮಾನನಿಗೆ ಆತಂಕವಾಯಿತು. ಅವನು ಹಿಂದಿನ ಕಾಲದವನು. ತಲೆಮಾರುಗಳಿಂದ ಅವನ ಮನೆಯವರೂ ಕೇರಿಯವರು ಪವಾಡಯ ರಾಯ, ಪಿಡಾರಿ ಇಂತಹ ದೇವತೆಗಳನ್ನೆ ಪೂಜಿಸುತ್ತಿದ್ದವರು. ಈಗ ಅವರನ್ನು ಪೂಜಿಸದೇ ಹೊದರೆ, ಅವರಿಗೆ ಬಲಿ ಕೊಡದೇ ಹೋದರೆ ಅವರು ತಮ್ಮ ಮೇಲೆ ಕೋಪಿಸಿಕೊಳ್ಳಬಹುದೆಂದು ಅವನು ಭಯಪಟ್ಟ. ಅವನು ನಂದನಾರ‍್ನನ್ನು ಕರೆಸಿ ಹೇಳಿದ: “ನಾವು ಹಿಂದಿನಿಂದ ನಡೆದು ಬಂದ ಹಾಗೆಯೇ ನಡೆಯುವವರು. ನಮಗೆ ನಿನ್ನ ಬೋಧನೆ ಬೇಕಿಲ್ಲ. ಪ್ರಾಣಿವಧೆ ನಮ್ಮ ಧರ್ಮ.  ಬಲಿಕೊಟ್ಟ ನಂತರ ಮಧ್ಯಮಾಸಗಲು ನಮಗೆ ಪ್ರಸಾದ. ನಿನ್ನ ಭಕ್ತಿಯ ಮಾತೆಲ್ಲ ಠಕ್ಕು. ನೀನು ನಮ್ಮ ಕಟ್ಟು ಕಟ್ಟಳೆಗಳನ್ನೆಲ್ಲ ಕೆಡಿಸುತ್ತಿದ್ದೀಯೆ. ನಿನ್ನ ಮಾತು ಕೇಳಿದರೆ ಮುಂದೆ ನಮಗೆ ಹೊಟ್ಟೆಗೆ ಹಿಟ್ಟು ಸಿಕ್ಕದಂತಾಗುತ್ತದೆ”.

“ದೇವರೇ ಸರ್ವಸ್ವ” :

ಅದಕ್ಕೆ ನಂದನಾರ‍್ ಹೀಗೆಂದ: “ದೇವರು ನಂಬಿದವರ ಕೈ ಬಿಡುವುದಿಲ್ಲ. ಭಕ್ತಿ ಹಾಗೂ ಒಳ್ಳೆಯ ನಡತೆಯಿಂದ ನಾವು ಯಾರಿಗು ಕಡಿಮೆಯಯಲ್ಲ ಎಂದು ತೋರಿಸೋಣ. ದೇವರ ಧ್ಯಾನ ಮಾಡದವನ ಜೀವನ ವ್ಯರ್ಥ. ನಮಗೆ ದೇವರೇ ತಂದೆ, ತಾಯಿ ಮತ್ತು ಸರ್ವಸ್ವ.”

ಆಗ ಯಜಮಾನ ಸಿಟ್ಟಾಗಿ ಹೇಳಿದ : “ನಿನ್ನ ಬೊಗಳೆ ನಿಲ್ಲಿಸುತ್ತೀಯೋ ಇಲ್ಲವೋ ? ನೀನು ಸುಮ್ಮನೆ  ಉಪಯೋಗವಿಲ್ಲದ ಮಾತನಾಡುತ್ತಿರುವೆ. ಮೇಲು ಕೀಳುಗಳನ್ನು ದೇವರೇ ಸೃಷ್ಟಿಸಿದ್ದಾನೆ. ನಮ್ಮ ಜಾತಿಯ ಪದ್ಧತಿಯಂತೆ ನಾವು ನಡೆದುಕೊಳ್ಳಬೇಕು. ನೀನು ನಮ್ಮ ಜಾತಿಯ ವಿರೋಧಿ. ನಮ್ಮ ಪದ್ಧತಿಯ ನಾಶಕ್ಕೆ ಹೊರಟಿರುವ ಪಾಪಿ  ನೀನು.”

ಉಳೀದ ಜಾತಿಗಳವರೂ ನಂದನಾರನನ್ನು ಹಳಿಯತೊಡಗಿದರು.” ಇವನಿಗೆ ಎಷ್ಟು ಜಂಭ! ಇವನು, ದಿನವೂ ಸ್ನಾನ-ಧ್ಯಾನ- ಭಜನೆ ಮಾಡುವುದೆಮದರೇನು? ಇವನಿಗೆ ದೇವರು ತಕ್ಕ ಶಿಕ್ಷೆ ಕೊಡುತ್ತಾನೆ.”

ಕಾರ್ಯಶೀಲ ನಂದನಾರ‍್:

ಇದೆಲ್ಲ ಕೇಳಿ ನಂದನಾರನಿಗೆ ಮರುಕವಾಯಿತು. ಆದರೆ ಅವನು ಹೆದರಲಿಲ್ಲ. ನಿರಾಸೆಗೊಳ್ಳಲಿಲ್ಲ. ತನ್ನ ಪ್ರಯತ್ನ ಕೈಬಿಡಲಿಲ್ಲ. ತನ್ನ ಕರ್ತವ್ಯವನ್ನು ಮಾಡುತ್ತಲೇ ಹೋದ. “ಬೇರೆಯವರನ್ನು ದೂಷಿಸಿದರೆ ಉಪಯೋಗವಿಲ್ಲ. ಮೊದಲು ನಮ್ಮ ಸ್ವಂತ ನಡೆ ನುಡಿ ತಿದ್ದಿಕೊಳ್ಳಬೇಕು. ಬದುಕು ಹಸನು ಮಾಡಿಕೊಳ್ಳಬೇಕು” ಎಂದು ಅವನು ಹೇಳುತ್ತಿದ್ದ. ಕೇರಿ ತುಂಬ ಕೊಳಕಾಗಿತ್ತಲ್ವೇ? ಮೊದಲು ನಂದನಾರ‍್ ಅದನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಗಮನಕೊಟ್ಟ. ಅವನೂ ಅವನ ತಂಡದವರೂ ಸೇರಿ ಕೇರಿಯಲ್ಲಿನ ಕಸ, ಹೊಲಸು ತೆಗೆದುಹಾಕಿದರು. ಹೊಲಸಾಗಿ ನಾರುತ್ತಿದ್ದ ನೀರಿನ ಹೊಂಡವನ್ನು ಶುಚಿಗೊಳಿಸಿದರು. ಅದರಿಂದ ಆ ಕೇರಿ ಪುಣ್ಯ ಕ್ಷೇತ್ರವೋ ಎಂಬಂತೆ ನಿರ್ಮಲವಾಯಿತು.

ಇಷ್ಟಾದರೂ ಹಿರಿಯರ ಕಾಟ ತಪ್ಪಲಿಲ್ಲ. ನಂದನಾರನನ್ನು ಶಿಕ್ಷಿಸಬೇಕೆಂದು ಊರಿನ ಬೇರೆ ಜಾತಿಯವರು ಕೇರಿಯ ಮುಖಂಡನಿಗೆ ಚುಚ್ಚಿಕೊಟ್ಟರು. ಅವನು ನಂದನಾರ‍್ ಮೇಲೆ ಸುಳ್ಳು ಆರೋಪಗಳನ್ನು ಹೊರೆಸಿದ. ಭಜನೆ ಮಂಡಲಿಯವರಿಗೆ “ದಂಡ” ಹಾಕಿದ. ಕೆಲವು ಪುಂಡರನ್ನು ಎತ್ತಿಗಟ್ಟಿ, ನಂದನಾರನ ತಂಡದವರನ್ನು ಕೇರಿಯಿಂದಲೇ ಹೊಡೆದೋಡಿಸಬೇಕೆಂದು ಪ್ರಯತ್ನಪಟ್ಟ. ಆದರೆ, ಅಷ್ಟು ಹೊತ್ತಿಗೆ ನಂದನಾರ‍್ ಪ್ರಭಾವ ಚೆನ್ನಾಗಿ ಬೆಳೆದಿತ್ತು. ಕೇರಿಯ ಸಭ್ಯ ಜನರೆಲ್ಲ ಅವನ ಬೆಂಬಲಕ್ಕೆ ಬಂದರು.  ಅಲ್ಲದೆ, ಬಲಶಾಲಿ ಯುವಕರೂ ಸುಮ್ಮನೆ ಕೂರಲಿಲ್ಲ. ಯಜಮಾನನ ಕಡೆಯ ಪುಂಡರಿಗೆ ಚೆನ್ನಾಗಿ ಬುದ್ಧಿ ಕಲಿಸಿದರು.

ನಂದನಾರನಿಗೆ ಬುದ್ಧಿ ಹೇಳೋಣ:

ಸುತ್ತಮುತ್ತಲ ಗ್ರಾಮಗಳಲ್ಲಿನ ಹರಿಜನರ ಕೇರಿಗಳ ಕಡೆಗೆ ನಂದನಾರನ ಗಮನ ಹರಿಯಿತು. ಆಗಾಗ ಹುಡುಗರ ಗುಂಪು ಕೂಡಿಸಿಕೊಂಡು ಅಂಥ ಜಾಗಗಳಿಗೆ ಹೋಗುತ್ತಿದ್ದ. ಅಲ್ಲಿನವರಿಗೆ ದೈವಭಕ್ತಿ ಮತ್ತು ಶುದ್ಧ ಆಚರಣೆಯ ವಿಷಯವನ್ನು ಒತ್ತಿ ಹೇಳಿ, ಭಜನೆ ಕಲಿಸಿಕೊಡುತ್ತಿದ್ದ. ಬರುಬರುತ್ತಾ ನೂರಾರು ಜನ, ಸಾವಿರಾರು ಜನ ಅವನ ಶಿಷ್ಯರಾದರು. ಇದನ್ನು ಕಂಡು ಬೇರೆ ಬೇರೆ ಕೇರಿಗಳ ಹರಿಜನ ಮುಖಂಡರ ಕಣ್ಣು ಕೆಂಪಾಯಿತು. ನಂದನಾರನ ವಿರೋಧಿಗಳು ಅವನ ಬಳಿ ಹೋಗಿ, “ನಾವೆಲ್ಲ ನಿಮ್ಮ ಕಟ್ಟುಪಾಡಿನಂತೆ ನಡೆಯುತ್ತಿದ್ದೇವೆ.   ನಿಮ್ಮ ಮಾತನ್ನು ಎಂದೂ ಮೀರಿಲ್ಲ. ನೀವು ನಮ್ಮೆದುರಿಗೆ ನಂದನಾರ‍್ ಮೆರೆಯುವುದನ್ನು ನೋಡಿಕೊಂಡು ಸುಮ್ಮನಿರುವುದು ಸರಿಯಲ್ಲ” ಎಂದು ಹೇಳಿಕೊಂಡರು. ಆದರೆ, ನಂದನಾರನ ವಿರುದ್ಧ ಗಟ್ಟಿಯಾಗಿ ಮಾತನಾಡಲು ಅವರಾರಿಗೂ ಧೈರ್ಯವಿರಲಿಲ್ಲ.ಯಾರೊಬ್ಬರಿಗೂ ಹೋಗಿ ಅವನ ಜೊತೆಗೆ ವಾದ ಮಾಡುವ ಎದೆಯಿಲ್ಲ. ಅವರೆಲ್ಲ ಸೇರಿ, ಅವನನ್ನು ಬಗ್ಗಿಸಲು ಉಪಾಯ ಹುಡುಕತೊಡಗಿದರು. ಎಂಥ ಸ್ಥಿತಿ ಬಂತು ! ನಾವು ಕುರಿ ಕೋಳಿ ಬಲಿ ಕೊಡಲು ಹೋದರೆ ನಂದನಾರ‍್ ಶಿಷ್ಯರು ಬಂದು ಅದನ್ನು ಕಿತ್ತುಕೊಂಡು ಹೋಗುತ್ತಾರೆ. ಹಿರಿಯರೆಲ್ಲ ಹೆದರಿಕೆಯಿಂದ ಕದ್ದು ಮಾಂಸ ತಿನ್ನಬೇಕಾಗಿ ಬಂದಿದೆ. ಎಲ್ಲರೂ ಒಟ್ಟಾಗಿ ಹೋಗಿ ಅವನಿಗೆ ಬುದ್ಧಿ ಹೇಳೋಣ” ಎಂದು ತೀರ್ಮಾನಿಸಿದರು.

ಅವರು ಬಂದಾಗ ನಂದನಾರ‍್ ತನ್ನ ಶಿಷ್ಯರೊಡನೆ ಭಜನೆ ಮಾಡುತ್ತ ಕುಳಿತ್ತಿದ್ದ. ಕೂಡಲೇ ಮೇಲೆದ್ದು, “ಬನ್ನಿ, ಬನ್ನಿ, ಈ ಚಿಕ್ಕವನ ಶಿವಭಜನೆ ಕೇಳಲು ನೀವು ಸಹ ಬಂದದ್ದು ಸಂತೋಷ” ಎಂದು ಸ್ವಾಗತಿಸಿದ. ಅವರಿಗೆಲ್ಲ ಕೈ ಮುಗಿದು ಕೂಡಿಸಿದ. ಅವನ ಜೊತೆಯವರು, ಸುತ್ತಮುತ್ತ ಇದ್ದವರು ಎಲ್ಲರಿಗೂ ಕುತೂಹಲ: ಯಜಮಾನನೂ ಇತರರೂ ಏಕೆ ಬಂದಿರಬಹುದು, ಮುಂದೆ ಏನು ನಡೆಯಬಹುದು ಎಂದು.

“ನಾವು ಭಜನೆಗೆ ಬರಲಿಲ್ಲ. ನಿನ್ನ ಜೊತೆಗೆ ಮಾತನಾಡಲು ಬಂದಿದ್ದೇವೆ” ಎಂದು ಅವರಲ್ಲಿ ಎಲ್ಲರಿಗಿಂತ ಹಿರಿಯ ಯಜಮಾನ ಹೇಳಿದ.

ಬುದ್ಧಿವಾದ ಕೇಳು :

ನಂದನಾರ‍್ : ಯಾವ ವಿಷಯ ? ದಯವಿಟ್ಟು ಸಂಕೋವಿಲ್ಲದೆ ಹೇಳಿ.

ಯಜಮಾನ : ನಂದ, ನಿನ್ನ ವಿನಯ, ನೀನು ತೋರಿಸುತ್ತಿರುವ ಗೌರವ ಕಂಡು ಬಹಳ ಸಂತೋಷವಾಗುತ್ತದೆ. ಆದರೆ, ಯಾರೋ ನಿನ್ನಂಥ ಒಳ್ಳೆಯ ಹುಡುಗನ ಬುದ್ಧಿ ಕೆಡಿಸಿದ್ದಾರೆ. ನೀನು ಉಳಿದವರನ್ನು ಕೆಡಿಸುತ್ತಾ ಇದ್ದೀಯೆ. ಇದು ಸರಿಯಲ್ಲ.

ನಂದನಾರ‍್ : ತಮ್ಮಂಥ ದೊಡ್ಡವರು ಬುದ್ಧಿವಾದ ಹೇಳಿದರೆ ತಪ್ಪಿಲ್ಲ. ನಾನು ಕೆಟ್ಟಿರುವುದು, ಇತರರನ್ನೂ ಕೆಡಿಸುತ್ತಿರುವುದು ಹೇಗೆ ತಿಳಿಸುವಿರಾ?

ಯಜಮಾನ :ನಂದಾ, ಕೋಪಿಸಿಕೊಳ್ಳಬೇಡ. ಈ ಪ್ರಪಂಚದಲ್ಲಿ ದೇವರು ಅನೇಕ ಜಾತಿಗಳನ್ನು ಸೃಷ್ಟಿಸಿದ್ದಾನೆ. ಅವಕ್ಕೆಲ್ಲ ತಮ್ಮ ತಮ್ಮ ರೀತಿ ನೀತಿಗಳಿವೆ. ಅವನ್ನು ಅವರು ಆಚರಿಸಬೇಕಲ್ಲವೇ ?

ನಂದನಾರ‍್: ಒಳ್ಳೆಯದನ್ನು ಆಚರಿಸಬೇಕಾದ್ದು ಅಗತ್ಯ. ಅದನ್ನು ಯಾರೂ ಬೇಡ ಅನ್ನುವುದಿಲ್ಲ.

ಯಜಮಾನ : ಜಾತಿ ಜಾತಿಗೂ  ಆಚಾರಗಳು ಬೇರೆ ಬೇರೆ ಅಲ್ಲವೇ?

ನಂದನಾರ‍್ : ಅದನ್ನು ನಾನು ಒಪ್ಪುವುದಿಲ್ಲ.

ಯಜಮಾನ : ನೀನು ಯಾವ ಲೊಕದಲ್ಲಿ ಇದ್ದೀಯೆ? ಅವರವರ ಜಾತಿಯ ರೀತಿ, ಆಚಾರ ಅವರವರಿಗೆ, ಕೆಲವರು ಮಂತ್ರ ಹೇಳಿಕೊಳ್ಳಬಹುದು. ಭಜನೆ ಮಾಡಬಹುದು. ನಮ್ಮ ನೀತಿ ನಿಯಮಗಳು ಅವರಂತಲ್ಲ. ನಾವು ನಮ್ಮದನ್ನು ಬಿಟ್ಟರೆ ನಮ್ಮ ದೇವರು ಶಿಕ್ಷಿಸುತ್ತಾನೆ.

ಎಲ್ಲರಿಗೂ ದೇವರು ಒಬ್ಬನೇ :

ನಂ : ಭಗವಂತನು ದಯಾಮಯ. ಅವನು ಸಜ್ಜನರನ್ನು ಎಂದಿಗೂ ಶಿಕ್ಷಿಸುವುದಿಲ್ಲ.ಭಯಪಡಿಸುವುದಿಲ್. ಭಯಪಡಿಸುವವರು ದೇವರಾಗಲಾರ.

ದೇವರ ಮಕ್ಕಳೆಲ್ಲರೂ ಸಮಾನರು

ಯ: ನಮ್ಮ ಜಾತಿಯ ನಿಯಮಗಳನ್ನು ನೀನು  ಪೂರ್ತಿ ಮರೆತಿದ್ದಿಯೆ

ನಂ : ಏಡಿ ಹಿಡಿಯುವುದು, ಅದನ್ನು ಸುಟ್ಟು ತಿನ್ನುವುದು: ದೇಹದಲ್ಲಿ ಕೊಳೆ,ಮನೆಯಲ್ಲಿ ಗಲೀಜು ತುಂಬಿಕೊಂಡಿರುವುದು: ಮಾಂಸ ಬೇಯಿಸಿ ತಿನ್ನವುದು,ಕುಡಿಯುವುದು ಇವನ್ನು ಕುರಿತು ನೀನು ಹೇಳುತ್ತಿದ್ದೀರಿ ಎಂದು ಕಾಣುತ್ತದೆ. ಇವೆಲ್ಲ ಹೇಗೋ ಬಂದ ಪದ್ಧತಿಗಳು. ಇವು ನಾವು ಬಿಡಲೇಬಾರದ ನಿಯಮಗಳೆಂದು ಹೇಳಬಹುದೇ? ಯಾಔ ಜಾತಿಯವರಾದರೂ ಒಳ್ಳೆಯದನ್ನು ಮಾಡಬೇಕು. ಕೆಟ್ಟದ್ದನ್ನು ಬಿಡಬೇಕು.

ಇನ್ನೊಂದು ದೊಡ್ಡ ನಿಯಮ ಮರೆತಿದ್ದೆ. ನಾವು ಯಾರನ್ನೂ ಮುಟ್ಟಬಾರದು ಎಂದು ಕೆಲವರು ಹೇಳುತ್ತಾರೆ ಅಲ್ಲವೇ?

ಯ. : ಏನು ಮಾಡುವುದು? ನಾವು ಮಾಡಿದ ಕರ್ಮ ಅಂಥಾದ್ದು. ನೀನು ನೆನ್ನೆ ಹುಟ್ಟಿದ ಮಗು. ಇನ್ನೂ ತಿಳುವಳಿಕೆ ಸಾಲದು. ಅಧಿಕ ಪ್ರಸಂಗ ಸರಿಯಲ್ಲ. ನಮಗೆ ನಮ್ಮ ದೇವರೇ ದೊಡ್ಡದು. ಅದಕ್ಕೆ ಅಪಚಾರ ಮಾಡಬೇಡ.

ನಂ. : ಮನುಷ್ಯರೆಲ್ಲ ಒಬ್ಬರೂ ಇನ್ನೊಬ್ಬರನ್ನು ಮುಟ್ಟಬಾರದು  ಎಂದರೆ ಏನರ್ಥ ? ಎಲ್ಲರಿಗೂ ದೇವರು ಒಬ್ಬನೇ. ಆದರೇ, ಜನರು ಅವನನ್ನು ನೂರಾರು ನಾಮ -ರೂಪಗಳಲ್ಲಿ ಪೂಜಿಸುತ್ತಾರೆ. ಕೆಲವರು ಇದರ ಅರ್ಥ ತಿಳಿದುಕೊಂಡು, ಇನ್ನು ಕೆಲವರು ತಿಳಿಯದೇ ಹಾಗೆ ಮಾಡುತ್ತಾರೆ. ದೇವರು ಎಲ್ಲರಿಗೂ ಕರುಣಿಸುತ್ತಾನೆ. ಈ ಸತ್ಯವನ್ನು ಅರಿತುಕೊಳ್ಳದೇ ಕಚ್ಚಾಡುವುದು ಸರಿಯಲ್ಲ. ಯಾವ ಹೆಸರಿನಲ್ಲಿ ಪೂಜಿಸಿದರೂ ಮೋಕ್ಷ ಪಡೆಯಬಹುದು. ಆ ಬಗ್ಗೆ ಸಂಶಯ ಬೇಡ.

ಯ : ಮೋಕ್ಷ ಅಂದರೇನು ?

ಎಲ್ಲರೂ ಸಮಾನರು :

ನಂ : ವ್ಯಕ್ತಿಯು ಪೂರ್ಣ ಜ್ಞಾನ ಪಡೆದು, ಹುಟ್ಟು ಸಾವುಗಳ ಚಕ್ರದಿಂದ ಪಾರಾಗಿ ದೇವರೊಡನೆ ಒಂದಾಗುವುದು. ಅದಕ್ಕಿಂತ ಮುಖ್ಯವಾಗಿ ನಾವು ತಿಳಿದುಕೊಳ್ಳಬೇಕಾದ ವಿಷಯ ಇನ್ನೊಂದು ಇದೆ. ದೇವರ ಮಕ್ಕಳೆಲ್ಲರೂ ಸಮಾನರು. ಎಲ್ಲ ಜಾತಿಗಳವರಿಗೂ ಅಂಗಾಂಗಗಳೆಲ್ಲ ಒಂದೇ ರೀತಿ ಇರುತ್ತವೆ. ಎಲ್ಲರಿಗೂ ಊಟ, ನಿದ್ರೆ, ಕಾಯಿಲೆ, ಕಷ್ಟ ಕಾರ್ಪಣ್ಯ ಎಲ್ಲ ಸಮಾನ. ತಮ್ಮ ಮಕ್ಕಳು ಸತ್ತಾಗ ಇಬ್ಬರೂ ಒಂದೇ ರೀತಿ  ಅಳುತ್ತಾರೆ. ಹಸಿವಾಗುವುದು ಸಹ ಒಂದೇ ರೀತಿ. ಮಾವಿನ ಹಣ್ಣು ಇಬ್ಬರಿಗೂ ಒಂದೇ ತರಹ ರುಚಿಸುತ್ತದೆ.

ಯ : ಆದರೂ, ಮನುಷ್ಯ- ಮನುಷ್ಯರಲ್ಲಿ ವ್ಯತ್ಯಾಸವೇ ಇಲ್ಲ ಅನ್ನುತ್ತೀಯಾ ?

ನಂ : ದೇವರು ಸಮಾನವಾಗಿ ಸೃಷ್ಟಿಸಿದರೂ, ಮನುಷ್ಯರು ಈ ಜಾತಿ ಭೇದಗಳನ್ನು ಹುಟ್ಟಿಸಿಕೊಂಡಿದ್ದಾರೆ. ನಾವು ಈಗ ಹೇಗಿದ್ದೇವೆ ನೋಡು. ಉಳಿದವರೆಲ್ಲ ನಮ್ಮನ್ನು ಪ್ರಾಣಿಗಿಂತ ಕಡೆಯಾಗಿ ಕಾಣುತ್ತಾರೆ. ನಾಯಿ, ಬೆಕ್ಕು ಸಾಕಿಕೊಂಡು ಅಪ್ಪಿಕೊಳ್ಳುತ್ತಾರೆ: ಆದರೆ, ನಮ್ಮನ್ನು ಮುಟ್ಟುವುದಂತಿರಲಿ, ಹತ್ತಿರ ಸಹ ಸೇರಿಸುದಿಲ್ಲ. ನಾವು ಗುಡಿಯ ಒಳಗೆ ಹೋಗಿ ದೇವರಿಗೆ ನಮಸ್ಕಾರ ಸಹ ಮಾಡುವಂತಿಲ್ಲ.  ಇದೆಂಥ ಅನ್ಯಾಯ ? ಇದು ನಿಮ್ಮ ಬೀಳಲಿಲ್ಲವೇ ?

ಅನ್ನಾಯ ಪರಿಹಾರ ಉಂಟೆ ?:

ಯ : ಅನ್ಯಾಯ ಅಂತ ಅನಿಸುತ್ತದೆ. ಆದರೆ ಪರಿಹಾರವೇನು ?ಇವೆಲ್ಲ ಇವತ್ತಿನದಲ್ಲವಲ್ಲ ? ನೂರಾರು ವರ್ಷಗಳಿಂದ ಹೀಗೆಯೇ ನಡೆಯುತ್ತ ಬಂದಿದೆ, ಪರಿಹರಿಸಲು ನಮ್ಮಿಂದ ಸಾಧ್ಯವೇ ?

ನಂ : ಬಹುಬೇಗ ಪರಿಹರಿಸಬಹುದು. ನಾವು ಅವರಿಗೆ ಯಾವುದರಲ್ಲೂ ಕೀಳಲ್ಲ ಅಂತ ತಿಳಿದುಕೊಳ್ಳಬೇಕು. ಅವರಾಗಲಿ, ನಾವಾಗಲಿ ಕೆಟ್ಟ ನಡವಳಿಕೆಗಳನ್ನು ಬಿಟ್ಟು, ಉತ್ತಮವಾದುದನ್ನು ಅನುಸರಿಸಬೇಕು. ಎಲ್ಲರೂ ನಮಗೆ ಮರ್ಯಾದೆ ಕೊಡಲೇಬೇಕು, ಹಾಗೇ  ನಡೆದುಕೊಳ್ಳೋಣ. ನೀವು ಇನ್ನು ಮುಂದಾದರು ಇದನ್ನು ತಿಳಿಸಿ ನಮ್ಮ ಜನರನ್ನು ತಿದ್ಧಬೇಕು.

ಯ : ನನ್ನ ಕೈಲಾದ  ಮಟ್ಟಿಗೆ ತಿಳಿಸುತ್ತೇನೆ. ನಾನು ಮತ್ತು ಇಲ್ಲಿ ಬಂದಿರುವ ಈ ಹಿರಿಯರೆಲ್ಲ ಈಗಿನಿಂದಲೇ ನಿನ್ನ ಶಿಷ್ಯರಾಗಿದ್ದೇವೆ.

ನಂ : ನಾವೆಲ್ಲರೂ ದೇವರಿಗೆ ಶಿಷ್ಯರಾಗೋಣ.

ನಂದನಾರ‍್ ಆ ಹಿರಿಯರ ಮನಸ್ಸನ್ನು ಗೆದ್ದ. ಅವರೆಲ್ಲ ಅವನಿಗೆ ನಮಸ್ಕಾರ ಮಾಡಿ ತಾವೂ ಭಜನೆಗೆ ಸೇರಿಕೊಂಡರು.

ಪೂಜಾರಿಯ  ಅಸಮಾದಾನ :

ನಂದನಾರನ ಪ್ರಭಾವದಿಂದ ಅವನ ಕೇರಿಯಲ್ಲಿ ಬಲಿ ಕೊಡುವುದು ನಿಂತು ಹೋಗುತ್ತಾ ಬಂತು. ಅದರಿಂದ “ಪಿಡಾರಿ” ದೇವರ ಪೂಜಾರಿ ತುಂಬಾ ಕೆರಳಿದ. ಅವನು ಪೂಜಿಸುತ್ತಿದ್ದ ದೇವರಿಗೆ ಬಲಿ ಕೊಟ್ಟರೆ ಅವನಿಗೂ ಸಂಪಾದನೆ ಇತ್ತು. ಅಲ್ಲವೇ ?  ಈಗ ಅದೆಲ್ಲ ನಿಂತು ಹೋಯಿತು. ಅವನೂ, ಅವನ ಹಿಂಬಲಕರೂ.ನಂದನಾರನ ವಿರುದ್ಧ ಸಂಚು ಹೂಡಿದರು. ನಂದನಾರನು ಹೇಳುವುದು ಸರಿಯೋ ತಪ್ಪೋ ಎಂಬುವುದನ್ನು ತಮ್ಮ ದೇವರ ಬಳಿ ಕೇಳಿ ತೀರ್ಮಾನಿಸಬೇಕು ಎಂದು ಪ್ರಚಾರ ಮಾಡಿದರು. ಆ ಪೂಜಾರಿಯ ಮೈ ಮೇಲೆ ಆಗಾಗ ದೇವರು ಬರುತ್ತಿತ್ತು ಎಂದು ಆ ಜನ ನಂಬಿದ್ದರು. ಆಗ ಜನರು ಕಾಣಿಕೆ ಕೊಟ್ಟು, ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಪೂಜಾರಿಯ ಬಾಯಲ್ಲಿ ದೇವರು ಪರಿಹಾರ ಸೂಚಿಸುತ್ತಿತ್ತು ಎಂದು ಜನರ ನಂಬಿಕೆ. ಪೂಜಾರಿ ಈ ಎಲ್ಲ ನಂಬಿಕೆಗಳನ್ನು ಉಪಯೋಗಿಸಿಕೊಳ್ಳಲು ತೀರ್ಮಾನಿಸಿದ. “ದೇವರು ಮೈ ಮೇಲೆ ಬಂದಾಗ ನಂದನಾರ‍್ ವಿಷಯ  ಪ್ರಶ್ನೆ ಕೇಳಿ. ನಾನು ಸರಿಯಾದ ಉತ್ತರ ಹೇಳುತ್ತೇನೆ. ಅದರಿಂದ ಅವನಿಗೆ ಬುದ್ಧಿ ಕಲಿಸಬಹುದು”, ಎಂದು ಪೂಜಾರಿ ತನ್ನ ಕಡೆಯವರಿಗೆ ಹೇಳಿಕೊಟ್ಟ.

ಒಂದು ಸಂಜೆ, ದೇವರು ಮೈ ಮೇಲೆ ಬರುವುದೆಂದು ಕೇರಿಗೆಲ್ಲ ಸಾರಲಾಯಿತು. ಪಿಡಾರಿಯ ದೇವಸ್ಥಾನದಲ್ಲಿ ಎಲ್ಲರೂ ಸೇರಿ ಕುತೂಹಲದಿಂದ ನೋಡುತ್ತಿದ್ದರು.  ಮೌನವಾಗಿ ಕುಳಿತ್ತಿದ್ದ ಪೂಜಾರಿ ತಟ್ಟನೆ ಮೇಲೆದ್ದು ಅಬ್ಬರಿಸುತ್ತಾ ಕುಣಿಯತೊಡಗಿದ. “ನನಗೆ ಕುರಿ ಕೋಳಿ ಇಲ್ಲದೆ ಭಯಂಕರ ಹಸಿವಾಗಿದೆ. ಉಗ್ರರೋಗ ಹಬ್ಬಿಸಿ ನಿಮ್ಮನ್ನೆಲ್ಲ ಬಲಿ ತೆಗೆದುಕೊಳ್ತೀನಿ ಈ ಕೇರಿ ನಾಶ ಮಾಡಿಬಿಡ್ತೀನಿ” ಎಂದು ಗರ್ಜಿಸಿದ. ನೋಡಿದವರು ಹೆದರಿಕೊಳ್ಳುವ ಹಾಗೆ ಅವನು ಕಣ್ಣೂ ಗುಡ್ಡೆಗಳನ್ನು ತಿರುಗಿಸುತ್ತಿದ್ದ.

ಪಾಪ,ಸುತ್ತಲಿದ್ದ ಅನೇಕ ಮಂದಿ ಹರಿಜನರು ಏನೂ ತಿಳೀಯದವರು ಅವರು ನಿಜವಾಗಿಯೂ ಪೂಜಾರಿಯ ಮೈ ಮೇಲೆ ದೇವರು ಬಂದಿದೆ ಎಂದು ನಂಬಿ ನಡುಗಿ ಹೋದರು.

ಆಗ ಪೂಜಾರಿಯ ಕಡೆಯವನೊಬ್ಬ ಕಪಟ ಭಕ್ತಿಯಿಂದ ಕೈಮುಗಿದು, “ನಮ್ಮದೇನೂ ತಪ್ಪಿಲ್ಲ, ಆ ನಂದನಾರ‍್ ನಮ್ಮನ್ನು ಅಡ್ಡಿಪಡಿಸುತ್ತಾನೆ” ಎಂದ.

“ನೀವು ನಾಳೆಯೇ ನನಗೆ ಬಲಿಕೊಡಬೇಕು  ಅವನೇನಾದರೂ ತಡೆದರೆ, ಅವನ ಕಣ್ಣುಗಳನ್ನು ಇಂಗಿಸಿಬಿಡುತ್ತೇನೆ. ಯಾರವನು ನಂದನಾರ‍್ ?” ಎಂದು ಪೂಜಾರಿ ಬೊಬ್ಬಿಟ್ಟ.

ನಾನೇ ನಂದನಾರ‍್ :

ನಂದನಾರ‍್ ಮತ್ತು ಅವನ ಶಿಷ್ಯರು ಗುಡಿಗೆ ಹತ್ತಿರದಲ್ಲೇ ನಿಂತಿದ್ದರು. ಪೂಜಾರಿಯ ಗರ್ಜನೆ ಕೇಳುತ್ತಲೇ, “ಇಗೋ ಇಲ್ಲಿದ್ದೇನೆ. ನಾನೇ ನಂದನಾರ‍್;  ಎಂದು ಹೇಳುತ್ತಾ ನಂದನಾರರು ಅಲ್ಲಿಗೆ ಬಂದು ನಿಂತರು. ಅವರ ಶಿಷ್ಯರ ಗುಂಪೂ ಧಾವಿಸಿ ಬಂತು.

“ಇಗೋ , ಎಲ್ಲರೂ ನನ್ನ ಕಡೆ ನೋಡಿ ಇವತ್ತು ನಿಮ್ಮ ಸಂಶಯಗಳೆಲ್ಲ ನಿವಾರಣೆಯಾಗುತ್ತವೆ “, ಎಂದು ನಂದನಾರರು ಜನರಿಗೆ ಹೇಳಿದರು. ಆ ಮೇಲೆ ಪೂಜಾರಿಯ ಕಡೆಗೆ ತಿರುಗಿ, “ದೇವರೇ, ನೀನು ಪೂಜಾರಿಯ ಮೈ ಮೇಲೆ ಬಂದಿರುವುದು ನಿಜ ತಾನೇ ?” ಎಂದರು.

ನಂದನಾರರ ಮುಖದ ತೇಜಸ್ಸು ಹಾಗೂ ಅವರ ಶಿಷ್ಯರ ಭಾರಿ ಗುಂಪು ನೋಡಿ ಪೂಜಾರಿ ಹೆದರಿಬಿಟ್ಟ, ಅವನು ತಗ್ಗಿದ ದನಿಯಲ್ಲಿ, “ನಿನಗೆ ಸಂಶಯವೇ ಬೇಡ” ಎಂದ.

ಹೆದರಿದ ಪೂಜಾರಿ :

ನಂ:      ನೀನು ನನ್ನ ಮೇಲೂ ಬಂದಿಉವುದು  ನಿಜ ತಾನೆ ?

ಪೂ :     ಹೌದು ಹೌದು. ಸುಮ್ಮನೆ ತೊಂದರೆ ಕೊಡಬೇಡ. ನಿನಗೆ ಬೇಕಾದ ಪ್ರಶ್ನೆ ಕೇಳು.

ನಂ :     ಪೂಜಾರಿ ಮಾಂಸ ತಿನ್ನುವುದು ಮಹಾಪಾಪ ಅಲ್ಲವೇ ?

ಪೂ :     ಹೌದು ಮಾಂಸ ತಿನ್ನಬಾರದು. ಈ ಪೂಜಾರಿ ತಪ್ಪು ಮಾಡುತ್ತಿದ್ದಾನೆ.

ನಂ :     ಹಾಗಾದರೆ ನೀನೇಕೆ  ಈ ಕೇರಿಯವರನ್ನು ಪೀಡಿಸುತ್ತಿಯೆ ? ಏಕೆ ಪ್ರಾಣಿ ಬಲಿ ಕೇಳುತ್ತೀಯೆ ?

ಪೂ :     ನಾನು ಎಂದೂ ಬಲಿ ಕೇಳಲೇ ಇಲ್ಲ. ನನ್ನ ಹೆಸರಿನಲ್ಲಿ ಅವರು ಕೊಂದು ತಿನ್ನುತ್ತಾರೆ.

ನಂ:      ಇನ್ನು ಮುಂದೆ ಅವರು ಬಲಿಕೊಟ್ಟರೆ ಸುಮ್ಮನಿರುವೆಯಾ ?

ಪೂ :     ಬಲಿ ಕೊಟ್ಟವರಿಗೆ ಕೇಡಾಗುತ್ತದೆ. ಯಾರೂ ನನಗೆ ಬಲಿ ಕೊಡಬೇಡಿ. ನೆನಪಿರಲಿ.

ನಂ:      ನಮ್ಮ ಜನರಿಗೆ ಇನ್ನೂ ಮುಂದಾದರು ಒಳ್ಳೆಯ ಬುದ್ಧಿ ಬರುತ್ತದೆಯಲ್ಲವೇ ?

ಪೂ :     ಬಂದೇ ಬರುತ್ತದೆ. ನಾನು ಇನ್ನು ಹೋಗುತ್ತೇನೆ. ನನಗೆ ಹಣ್ಣು ಕೊಡು.

ನಂದನಾರ‍್ ಒಂದು ಕರ್ಪೂರ ಹೊತ್ತಿಸಿ ಪೂಜಾರಿಯ ಕೈಲಿಟ್ಟರು. ಅವನು ಅದನ್ನು ಬಾಯಿಗೆ ಹಾಕಿಕೊಂಡು ಕೆಳಗೆ  ಕುಸಿದು ಮಲಗಿದ. ಎಲ್ಲರಿಗೂ ಅಚ್ಚರಿಯಾಯಿತು. ಆಗ ನಂದನಾರ‍್ ಅವರಿಗೆಂದರು: “ಬಂಧುಗಳೇ, ಇನ್ನು ನೀವು ಯಾರಲ್ಲೂ ಮುಂದೆ ಏನಾಗುತ್ತದೆ ಎಂದು ಕೇಳಬೇಡಿ. ಯಾರೋ ಹೇಳೂವುದನ್ನೆಲ್ಲ ನಂಬಿ ಏಕೆ ಮೋಸ ಹೋಗುತ್ತಿದ್ದೀರಿ ? ಇದರಿಂದ ಅವರಿಗೆ ಲಾಭ ಅಷ್ಟೆ. ಇವನ ಮೈಮೇಲೆ ದೇವರು ಬಂದರಿರಲಿಲ್ಲ. ನನ್ನನ್ನು ಕಂಡ ಕೂಡಲೇ ಈ ಬಡ  ಪೂಜಾರಿ ಹೆದರಿ ಹೋದ. ಆದ್ದರಿಂದ ತನಗೆ ಅನುಕೂಲವಾದ ಉತ್ತರಗಳನ್ನೇ ಹೇಳತೊಡಗಿದ:”.

ನಂದನಾರ‍್. ದೇವರಿಗೆ ಪ್ರೀಯವಾದ ಮಹಾಪುರುಷ ಎಂದು ಅವರೆಲ್ಲ ನಂಬಿದರು.  ಅವರಿಗೆ ನಮಸ್ಕರಿಸಿ , ವಿಭೂತಿ, ಪ್ರಸಾದ ತೆಗೆದುಕೊಂಡರು. ನಂದನಾರರ ಮಹಿಳೆ ಹೊಗಳುತ್ತಾ ಮನೆಗಳಿಗೆ ವಾಪಸಾದರು. ಅಂದಿನಿಂದ ನಂದನಾರ‍್ ಹೋದ ಹೋದಲ್ಲೆಲ್ಲ ಅವರಿಗೆ ಹೆಚ್ಚು ಗೌರವ, ಆದರ ದೊರೆಯತೊಡಗಿತು.

ನಂದನಾರರು ತಮ್ಮ ಜನರ ಮೌಢ್ಯವನ್ನು ಹರಿಸಿ, ಅವರ ಮೂಢನಂಬಿಕೆಗಳನ್ನು ತೊಡೆದು ಹಾಕುವ ಕೆಲಸವನ್ನು ಮುಂದುವರೆಸಿದರು. ಕೇರಿಯನ್ನುಸ್ವಚ್ಛವಾಗಿಟ್ಟು ಮಕ್ಕಳನ್ನು ಕೊಳೆಯಾಗಿರಲು ಬಿಡದೆ ನೋಡಿಕೊಳ್ಳುವುದನ್ನು ಕಲಿಸಿದರು.

ತಿರುಪಂಕೂರಿಗೆ :

ನಮ್ಮ ದೇಶದಲ್ಲಿ ಬಹು ಹಿಂದಿನ ಕಾಲದಿಂದಲೂ ತೀರ್ಥಯಾತರೆಯ ಪದ್ಧತಿಯಿದೆ. ಅಂದರೆ, ಪುಣ್ಯ ಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ, ದೇಶದ ಪರಿಚಯ ಪಡೆಯುವುದು.  ಅಂಥ ಯಾತ್ರೆಗಳಲ್ಲಿ ಮೇಲು ಕೀಳೆನ್ನದೇ ಎಲ್ಲರೂ ಭಕ್ತಿಯಿಂದ ಪಾಲುಗೊಳ್ಳುತ್ತಾರೆ.  ನಂದನಾರರ ಕಾಲದಲ್ಲಿ ಅಸ್ಪ್ರಶ್ಯತೆಯ ರೂಢಿ ಬಲವಾಗಿತ್ತು. ಹರಿಜನರನ್ನು ಯಾರೂ ದೇವಸ್ಥಾನದ ಒಳಗೆ ಬಿಡುತ್ತಿರಲಿಲ್ಲ.  ಆದ್ದರಿಂದ ಅವರು ತೀರ್ಥಯಾತರೆ  ಹೋಗುತ್ತಿರಲಿಲ್ಲ.  ಆದರೆ, ನಂದನಾರ‍್ ಪರಮ ಶಿವಭಕ್ತರು. ಆವರು ಆಗಾಗ ಆದನೂರಿನ ಸುತ್ತಮುತ್ತಲ ದೇವಾಲಯಗಳಿಗೆ ಹೋಗುವರು. ಅಲ್ಲಿ ಅವರು ಒಳಗೆ ಕಾಲಿಡುವಂತಿರಲಿಲ್ಲ. ಹೊರಗೆ ಪ್ರಾಕಾರದ ಸುತ್ತ ಪ್ರದಕ್ಷಿಣೆ ಮಾಡುವರು. ಕೆಲವು ಸಲ ದೇವರ ಕೀರ್ತನೆ ಹೇಳಿಕೊಂಡು ನೆಲದ ಮೇಲೆ ಮಲಗಿ ಉರುಳುತ್ತಾ ಪ್ರದಕ್ಷಿಣೆ ಹಾಕುವರು. ಇದಕ್ಕೆ”ಉರುಳುಸೇವೆ” ಎಂದೂ ಹೇಳುತ್ತಾರೆ. ಅವರ ಭಕ್ತಪರವಶತೆಯನ್ನು ಕಂಡು ಜನರು ಬೆರಗಾಗುತ್ತಿದ್ದರು.

ತಂಜಾವೂರು ಜಿಲ್ಲೆಯಲ್ಲಿ ತಿರುಪಂಕೂರು ಎಂಬುವುದು ಒಂದು ಪ್ರಸಿದ್ಧ ಪುಣ್ಯ ಕ್ಷೇತ್ರ. ಅಲ್ಲಿನ ಗುಡಿಯಲ್ಲಿ ದೇವರ ಮುಂದೆ ನಂದಿಯ ವಿಗ್ರಹ  ಇದೆ. ತಮಿಳುನಾಡಿನಲ್ಲಿ ಅದಕ್ಕಿಂತ ದೊಡ್ಡ ನಂದಿ ಎಲ್ಲೂ ಇಲ್ಲ ಎಂದು ಹೇಳುತ್ತಾರೆ. ಅಲ್ಲಿಗೆ ಯಾತ್ರೆ ಹೋಗಲು ನಂದನಾರ‍್ ನಿಶ್ಚಯಿಸಿದರು. ತಮ್ಮ ಜೊತೆಗೆ ಬರುವಂತೆ ಕೆಲವು ಶಿಷ್ಯರನ್ನೂ ಕರೆದರು. ಅವರೆಲ್ಲ ಭಯಪಟ್ಟರು. ಏಕೆಂದರೆ ಅವರ ಜಾತಿಯಲ್ಲಿ ತೀರ್ಥಯಾತ್ರೆಯು ರೂಢಿಯಿರಲಿಲ್ಲ. ತಾವು ಕೀಳೂ, ಹಾಗೆಲ್ಲ ಪುಣ್ಯ ಕ್ಷೇತ್ರಗಳಿಗೆ ಹೋದರೆ ತಮಗೆ ಕೆಡಕಾಗುತ್ತದೆ ಎಂದು ಅವರಿಗೆ ಭಯ. ನಂದನಾರ‍್ ಅವರಿಗೆಲ್ಲ ಚೆನ್ನಾಗಿ ತಿಳಿಯ ಹೇಳಿದರು.ದೇವರ ದರ್ಶನಕ್ಕೆ ಯಾರಾದರೂ ಹೋಗಬಹುದು. ತಪ್ಪಿಲ್ಲ ಎಂದು ತಿಳಿಸಿಕೊಟ್ಟರು.  ಕೊನೆಗೆ ಹನ್ನೊಂದು ಜನ ಅವರೊಡನೆ ಹೊರಡಲು ಒಪ್ಪಿದರು.  ಎಲ್ಲರೂ ಬುತ್ತಿ ಕಟ್ಟಿಕೊಂಡು ಕಾಲು ನಡಿಗೆಯಿಂದ ಪ್ರಯಾಣ ಮಾಡಿದರು.

ಸರಿದ ಬಸವ :

ತಿರುಪಂಕೂರ ತಲುಪಿದ್ದಾಯಿತು. ಅಲ್ಲಿ ದೇವಾಲಯದ ಗೋಡೆಯ ಹೊರಗೇ ಪ್ರದಕ್ಷಿಣೆ ಹಾಕಿದರು. ಒಳಗೆ ಹೋಗಲು ಅಡ್ಡಿಯಾಗಿತ್ತು. ಆದ್ದರಿಂದ ಹೆಬ್ಬಾಗಿಲ ಮುಂದೆ ನಿಂತು ಅಲ್ಲಿಂದಲೇ ದೇವರನ್ನು ಕಾಣಲು ಪ್ರಯತ್ನಿಸಿದರು. ಆದರೆ , ನಡುವೆ ಭಾರಿ ಬಸವ ಅವರ ಕಣ್ಣಿಗೆ ಅಡ್ಡವಾಗಿತ್ತು.

ನಂದನಾರ‍್ ನಿಂತ ಜಾಗ ಬಿಟ್ಟು ಕದಲಿಲ್ಲ. “ಇಲ್ಲಿಯೇ ಜೀವ ಬಿಟ್ಟರೂ ಸರಿಯೇ, ದೇವರ ದರ್ಶನವಾಗದೆ ಹೋಗುವುದಿಲ್ಲ” ಎಂದು ಮನಸ್ಸಿನಲ್ಲಿಯೇ ನಿಶ್ಚಯಿಸಿದರು. ಅವರ ಬಾಯಿಂದ ದೇವರ ಭಜನೆ ಕೇಳಿಬರುತ್ತಿತ್ತು. ಹಲವು ಗಂಟೆಗಳು ಕಳೆದವು. ಅವರು ಮೈ ಮರೆತು ಹಾಡುತ್ತಾ, ನಡು ನಡುವೆ, “ದೇವರೇ, ನನ್ನನ್ನೂ ಹೀಗೇಕೆ ಪರೀಕ್ಷಿಸುತ್ತಿದ್ದಿಯೆ? ನನ್ನ ಮೇಲೆ ದಯೆ ತೋರಬಾರದೇ?” ಎಂದು ಕೇಳುತ್ತಿದ್ದರು. ಕೊನೆಗೆ, ಇದಕ್ಕಿದ್ದಂತೆಯೇ ಆ ಬೃಹತ್ ನಂದಿ ವಿಗ್ರಹ ಪಕ್ಕಕ್ಕೆ ಸರಿಯಿತು. ಬಾಗಿಲಲ್ಲಿ ನಿಂತವರಿಗೆ ದೇವ ದರ್ಶನ ನೇರವಾಗಿ ಆಯಿತು ಎಂದು ಹೇಳುತ್ತಾರೆ. ನಂದನಾರ‍್ ಶಿಷ್ಯರ ಆನಂದಕ್ಕೆ , ಆಶ್ಚರ್ಯಕ್ಕೆ ಪಾರವೇ ಇಲ್ಲ.ತಾವೇ ಭಾಗ್ಯವಂತರು ಎಂದು ಹೇಳಿಕೊಂಡರು. ಎಲ್ಲರೂ ಭಕ್ತಿಯಿಂದ ನಮಸ್ಕರಿಸಿದರು. ಇಂದಿಗೂ ಅಲ್ಲಿಯ ನಂದಿಯು ಓರೆಯಾಗಿಯೇ ಇದೆ. ನಂದನಾರರಿಗೆ ದೇವರು ಕೃಪೆ ತೋರಿಸಿದುದೇ ಅದಕ್ಕೆ ಕಾರಣ ಎಂದು ಹೇಳುತ್ತಾರೆ.

ಈ ವಿಷಯ  ಊರಿನವರಿಗೆಲ್ಲ ತಿಳಿಯಿತು. ಅವರಲ್ಲಿ ಓಡೋಡಿ ಬಂದು ನೋಡಿದರು. ನಂದನಾರರ ಭಕ್ತಿಯ ಮಹಿಮೆಯನ್ನು ಕೊಂಡಾಡಿದರು. “ಜಾತಿಯಲ್ಲಿ ಹುರುಳಿಲ್ಲ. ದೈವಭಕ್ತಿಯೆ ಎಲ್ಲಕ್ಕಿಂತ ಮಿಗಿಲು. ಈ ನಂದನಾರ‍್ ಶಿವನ ಮಗನೇ ಸೈ” ಎಂದು ಹೇಳಿ ಅವರಿಗೆ ಕೈ ಮುಗಿದರು.

ಸುಂದರವಾದ ಕೊಳ :

ಆ ದೇವಾಲಯದ ಬಳಿ ಒಂದು ನೀರಿನ ಹೊಂಡವಿತ್ತು. ಅದರ ನೀರು ಬಹಳ ಸಿಹಿ. ಅದನ್ನು ಕಂಡು ನಂದನಾರರಿಗೆ ಒಂದು  ಹೊಸ ಆಲೋಚನೆ ಹೊಳೆಯಿತು. “ಇಲ್ಲಿಗೆ  ವರ್ಷ ವರ್ಷವೂ ಸಾವಿರಾರು ಜನ ಯಾತ್ರೆಗಾಗಿ ಬರುತ್ತಾರೆ. ಅವರಿಗೆ ಸರಿಯಾಗಿ ನೀರಿನ ಅನುಕೂಲವಿಲ್ಲ. ಆದ್ದರಿಂದ ಈ ಹೊಂಡವನ್ನು ಅಗೆದು ದೊಡ್ಡದು ಮಾಡಬೇಕು. ಒಳಗಿರುವ  ಕಸಕಡ್ಡಿ ತೆಗೆದುಹಾಕಿ ನೀರನ್ನು ಶುಚಿಗೊಳಿಸಿದರೆ  ಜನರಿಗೆ ಉಪಕಾರವಾಗುತ್ತದೆ. ದೇವರು ಮೆಚ್ಚುತ್ತಾನೆ. ಎಂದು ಯೋಚಿಸಿದರು.  ಅವರ ಶಿಷ್ಯರೂ ಸಂತೋಷದಿಂದ ಅವರ ಮಾತಿಗೆ ಒಪ್ಪಿದರು. ಊರಿನ ಹಾರೆ, ಗುದ್ದಲಿ ಸಿಕ್ಕಿತು. ಅಲ್ಲಿನ ಜನರೂ ಇವ ಸಹಾಯಕ್ಕೆ ಬಂದರು. ಹಗಲು ರಾತ್ರಿ ಕೆಲಸ ನಡೆದು ಒಂದು ಸುಂದರವಾದ ಕೊಳ ಸಿದ್ಧವಾಯಿತು. ನಂದನಾರರೂ ಅವರ ಶಿಷ್ಯರೂ ಅಲ್ಲಿತೃಪ್ತಿಯಿಂದ ಶಿವನ ಭಜನೆ ಮಾಡಿದರು. ಆ ಮೇಲೆ ಅದನೂರಿಗೆ ವಾಪಸು ಹೊರಟರು. ಅವರು ನಿರ್ಮಿಸಿದ ಕೊಳವನ್ನು ಇಂದಿಗೂ ತಿರುಪಂಕೂರಿನಲ್ಲಿ ಕಾಣಬಹುದು.

ಚಿದಂಬರಕ್ಕ ಹೋಗುವ ಹಂಬಲ :

ಚಿದಂಬರಂ ಬಹಳ ಪ್ರಸಿದ್ಧವಾದ ಪುಣ್ಯ ಕ್ಷೇತ್ರ. ಅದು ಸಹ ತಂಜಾವೂರು ಜಿಲ್ಲೆಯಲ್ಲಿಯೇ ಇದೆ. ಅಲ್ಲಿರುವ ಭಾರಿ ದೇವಾಲಯಕ್ಕೆ ಸ್ವರ್ಣ ಅಂಬಳಂ ಎಂದು ಹೆಸರು .ಏಕೆಂದರೆ, ಅಲ್ಲಿನ ಗರ್ಭಗುಡಿಯ ಛಾವಣಿಯಲ್ಲಿ ಚಿನ್ನದ ತಗಡು ಸಹ ಸೇರಿದೆ. ಅಲ್ಲಿಗೆ ಹೋಗಿ ದರ್ಶನ ಪಡೆದರೆ ಜೀವನ ಸಾರ್ಥಕವಾಗುವುದೆಂದು ನಂಬಿಕೆ. ಅಲ್ಲಿಗೆ ಹೋಗಬೇಕು ಎಂಬ ಆಸೆ ನಂದನಾರರ ಮನಸ್ಸಿನಲ್ಲಿ ಬಲವಾಗಿ ನಾಟಿತ್ತು. ತಿರುಪಂಕೂರಿನಿಂದ ಬಂದ ಮೇಲೆ ಹಗಲಿರುಳು ಅವರಿಗೆ ಇದೇ ಹಂಬಲ.

“ಚಿದಂಬರಂಗೆ ಹೋಗಿದ್ದೀರಾ? ಅಲ್ಲಿ ನಟರಾಜನ ನಾಟ್ಯ  ನೋಡಿದ್ದೀರಾ? ” ಎಂದು ಕಂಡ ಕಂಡವರನ್ನೆಲ್ಲ ಕೇಳುವರು. ಅಲ್ಲಿಗೆ ಹೋಗಿ ಬಂದವರ ಒಂದೊಂದು ಮಾತನ್ನೂ ಭಕ್ತಿಯಿಂದ, ಸಂತೋಷದಿಂದ ಕೇಳೂವರು, “ಚಿದಂಬಂಗೆ ಹೋಗದಿದ್ದರೆ ನನ್ನ ಬಾಳೂ ವ್ಯರ್ಥ ” ಎಂದು ಕೊರಗುವರು. ಶಿಷ್ಯರ ಹತ್ತಿರ ಸದಾ ನಟರಾಜನ ಮಹಿಮೆಯದೇ ಮಾತುಕತೆ. “ಅಲ್ಲಿಗೆ ಹೋಗೋಣ. ನೀವೂ ನನ್ನೊಡನೆ ಬನ್ನಿ” ಎಂದು ಕರೆಯುವರು. ಅವರಿಗೆ ಜನರೆಲ್ಲ “ಚಿದಂಬರಂ ” ಎಂದೇ ಹೆಸರಿಟ್ಟರು.

ಚಿದಂಬರಂ ಸ್ವಲ್ಪ ದೂರದ ಊರು. ಅಲ್ಲಿನ ಜನರಿಗೆ ನಂದನಾರರ ವಿಷಯ ಸರಿಯಾಗಿ ತಿಳಿಯದು. ಅವರ ಜಾತಿಯವರೆಲ್ಲ ಅವರಿಗೆ ನಿರಾಸೆಯ ಮಾತನ್ನೇ ಹೇಳಿದರು. “ಹಳವನು ಮರದ ತುದಿಯ ಜೇನಿಗೆ ಆಸೆಪಡಬಹುದೇ? ಎಷ್ಟೇ ಎಗರಾಡಿದರೂ, ಗುಬ್ಬಿ ಹದ್ದಿಗೆ ಸಮನಾದೀತೇ ?” ಎಂದರು.  ನಂದನಾರರಿಗೆ ಹೋಗಲು ಆಸೆಯಿದ್ದರೂ ಚಿಂತೆ ತಪ್ಪಲಿಲ್ಲ. “ಚಿದಂಬರಂದವರು ನನ್ನನ್ನು  ಹೀಯಾಳಿಸಬಹುದು” ಎಂಬ ಅಳುಕು. “ಬೆಳಿಗ್ಗೆ ಎದ್ದ ಕೂಡಲೇ ಹೊರಟು ಬಿಡುತ್ತೇನೆ” ಅಂದುಕೊಂಡು ದಿನವೂ ರಾತ್ರಿ ಮಲಗುವರು. ಆದರೆ ಬೆಳಿಗ್ಗೆ ಹಿಂದೆಗೆಯುವರು. ಎಲ್ಲರೂ ಅವರನ್ನು , “ಯಾವಾಗ ಹೋಗುತ್ತೀರಿ?” ಎಂದು ಕೇಳತೊಡಗಿದರು. ಅವರು, “ನಾಳೈ ಪೋವೆನ್” (ನಾಳೆ  ಹೋಗುತ್ತೇನೆ) ಅನ್ನುತ್ತಿದ್ದರು. ಹೀಗೆ ಎಷ್ಟೋ ದಿನಗಳು ಕಳೆದವು. “ತಿರುನಾಳೈಪೋವಾರ‍್” ಎಂದೇ ಅವರಿಗೆ ಹೆಸರಾಯಿತು.

ಚಿದಂಬರ ಸೇರಿದ್ದಾಯಿತು :

ಒಂದು ದಿನ ನಂದನಾರ‍್ಗೆ ಮನಸ್ಸು ತಡೆಯಲಾಗಲಿಲ್ಲ. ನಟರಾಜನ ಧ್ಯಾನ ಮಾಡುತ್ತಾ ಭಕ್ತಿಯಿಂದ ಕಣ್ಣೀರು ಹರಿಸುತ್ತ ಕುಳಿತುಬಿಟ್ಟರು.ಯಾರ ಜೊತೆಗೂ ಮಾತಿಲ್ಲ,ಕತೆಯಿಲ್ಲ: ಅನ್ನ ನೀರಿನ ಪರಿವೆಯಿಲ್ಲ. ಮರುದಿನ ನಸುಕಿನಲ್ಲಿಯೇ ಎದ್ದು ಯಾರಿಗೂ ಹೇಳದೇ ಚಿದಂಬರಂಗೆ ಹೊರಟುಬಿಟ್ಟರು. ಹಸಿವು, ದಣಿವುಗಳನ್ನು ಲೆಕ್ಕಿಸದೇ ನಡೆದರು. ಕಾಡು ಕತ್ತಲೆಗಳಿಗೆ ಕುಗ್ಗಲಿಲ್ಲ. ಬಿಸಿಲು ಬಿರುಗಾಳಿಗಳಿಗೆ ಬಗ್ಗಲಿಲ್ಲ. ದೇವರಿಗಾಗಿ ಹಂಬಲಿಸುತ್ತಾ ಒಂದೇ ಸಮನೆ ನಡೆದು ಆ ಊರು ಸಮೀಪಿಸಿದರು.

ದೂರದಿಂದಲೇ ದೇವಸ್ಥಾನದ ಭವ್ಯ ಗೋಪು ಹಾಗೂ ಕಳಶ ಕಾಣಿಸಿತು. ನಂದನಾರರ ಆನಂದ ಹೇಳತೀರದು. ಆದರೆ ಮರುಕ್ಷಣವೇ ಗುಡಿಯ ಎತ್ತರವಾದ ಗೋಡೆಗಳನ್ನು ಕಂಡು ಅವರ ಉತ್ಸಾಹ ಜರ‍್ರನೆ ಇಳಿದುಹೋಯಿತು. ದೂರದಿಂದಲೂ ದೇವರ ಮೂರ್ತಿಯನ್ನು ಕಾಣುವ ಅವಕಾಶವಿಲ್ಲ  ಎಂದು ಮನಸ್ಸು ಮುದುಡಿಹೋಯಿತು. ನೂರಾರು ಗಿಳಿಗಳು ಹಾರಿ ಹೊಗಿ ಗೋಪುರದಲ್ಲಿನ ಗೂಡುಗಳನ್ನು ಸೇರುತ್ತಿದ್ದವು. “ನನಗಿಂತಲೂ ಅವು ಎಷ್ಟೋ ಭಾಗ್ಯಶಾಲಿಗಳು” ಎಮದು ನಂದನಾರ‍್ ಹೇಳಿಕೊಂಡರು.”ನನಗೂ ರೆಕ್ಕೆಗಳು ಇದ್ದಿದ್ದರೆ “! ಅನ್ನಿಸಿತು. ಮುಂದೆ ಏನು ಮಾಡಲೂ ತೋಚಲಿಲ್ಲ. ಕೈಮುಗಿದುಕೊಂಡು ಗುಡಿಯ ಗೋಡೆಯ ಸುತ್ತ ಪ್ರದಕ್ಷಿಣೆ ಹಾಕತೊಡಗಿದರು. ಅಷ್ಟರಲ್ಲಿ ಕತ್ತಲಾಯಿತು. ಹೊಸ ಊರು, ಯಾರೂ ಪರಿಚಯವಿಲ್ಲ ಜೊತೆಗೆ ಅವರು ಹರಿಜನರು ಎಂದು ತಿಳಿದರೆ ಸಂಪ್ರದಾಯವಂತೂ ಕೋಪಮಾಡಿಕೊಳ್ಳುತ್ತಿದ್ದರು. ಅವರಿಗೆ ತಲೆಯಿಡಲು ಒಂದು ಸೂರಿಲ್ಲ. ದೇವರ ಸ್ಮರಣೆಯೆ ಅವರಿಗೆ ಆಹಾರ.ಭೂಮಿ ತಾಯಿಯ ಮಡಿಲೇ ಅವರಿಗೆ ಹಾಸಿಗೆ.

ಜ್ಯೋತಿ ಜ್ಯೋತಿಯನ್ನು ಸೇರಿತು :

ಹೀಗೆ ಮೂರು ಹಗಲು ರಾತ್ರಿಗಳು ಕಳೆದವು. ನಾಲ್ಕನೆ ರಾತ್ರಿ ನಂದನಾರ‍್ಗೆ ನಿದ್ದೆ ಬಂತು. ಕನಸಿನಲ್ಲಿ ದೇವರು ಕಾಣಿಸಿಕೊಂಡ, “ನೀನು ನಿಜಕ್ಕೂ ತಪಸ್ವಿಯೇ ಸೈ. ಜಾತಿಯ ವಿಷಯ ಹಚ್ಚಿಕೊಂಡು ಏಕೆ ಒದ್ದಾಡುತ್ತಿ ?ನನ್ನ ಭಕ್ತರೆಲ್ಲ ಒಂದೇ ಜಾತಿ. ಅದೇ ದೊಡ್ಡ ಜಾತಿ. ಉಳಿದೆಲ್ಲ ಹುರುಳಿಲ್ಲದ್ದು. ನಿನ್ನ ಭಕ್ತಿ ನನಗೆ ಅರ್ಥವಾಗಿದೆ. ಒಳ್ಳೆಯ ಗುಣ, ಭಕ್ತಿ ಇದ್ದವರನ್ನೇ ನಾನು ಮೆಚ್ಚುವುದು. ನಿನ್ನ ಹಿರಿಮೆ ಲೋಕಕ್ಕೆಲ್ಲ ಗೊತ್ತಾಗುವಂತೆ ಮಾಡುತ್ತೇನೆ” ಎಂದು ನಟರಾಜ ದೇವರು ನುಡಿದ ಎಂದು ಹೇಳುತ್ತಾರೆ.

ಅದೇ ರಾತ್ರಿ ಅತ್ತ ಪೂಜಾರಿಗಳಿಗೂ ಕನಸಾಗಿತ್ತು. “ನನ್ನ ನೆಚ್ಚಿನ ಭಕ್ತನಾದ ನಂದನಾರ‍್ ಬಂದಿದ್ದಾನೆ. ದೇವಾಲಯದ ಗೋಡೆಯಾಚೆ ದರ್ಶನಕ್ಕಾಗಿ ಕಾದು ದಣಿದಿದ್ದಾನೆ. ಅವನನ್ನು ಕೂಡಲೇ ಒಳಕ್ಕೆ ಕರೆತನ್‌ಇ ” ಎಂದು ದೇವರು ಅವರೆಲ್ಲರಿಗೂ ಅಜ್ಞಾಪಿಸಿದ ಎಂದು ಹೇಳುತ್ತಾರೆ.

ಓಡಿ ಹೋಗಿ ಗರ್ಭಗುಡಿ ಪ್ರವೇಶಿಸಿದರು.

ಬೆಳಿಗ್ಗೆ ನಂದನಾರ‍್ ಕಣ್ಣೂ ಬಿಡುವ ಹೊತ್ತಿಗೆ ಅವರ ಸುತ್ತ ಪೂಜಾರಿಗಳು, ಊರಿನ ಗಣ್ಯ ವ್ಯಕ್ತಿಗಳೂ ನಿಂತಿದ್ದರು. ನಂದನಾರರು ಅವರಿಗೆ ತನ್ನ ಕನಸಿನ ವಿಷಯವನ್ನು ಹೇಳಿದರು. ಪೂಜಾರಿಯೂ ಸಹ ತನ್ನ ಕನಸಿನ ವಿಷಯವನ್ನು ತಿಳಿಸಿದ. ಅವರು ನಂದನಾರರಿಗೆ ಸ್ನಾನ ಮಾಡಲು ಹೇಳಿದರು.ಅವರು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಉಟ್ಟರು. ಬಳಿಕ ಜನರು ಅವರನ್ನು ದೇವಾಲಯದ ಒಳಕ್ಕೆ ಕರೆದುಕೊಂಡು ಹೊರಟರು.ನಂದನಾರರ ಮನಸ್ಸೆಲ್ಲ ಶಿವಮಯವಾಗಿತ್ತು. ಸಂತೋಷ ಸಡಗರಗಳಿಂದ ಅವರು ದೇವರ ಸ್ಮರಣೆ ಮಾಡುತ್ತಿದ್ದರು.  ಪ್ರಾಕಾರದ ಒಳಗೆ ಕಾಲಿಡುತ್ತಿದ್ದಂತೆಯೇ, ಮಗುವು ತಾಯಿಯ ಬಳೀಗೆ ಓಡುವಂತೆ ಅವರು ಎಲ್ಲರಿಗೂ ಮುಂದಾಗಿ ಧಾವಿಸಿದರು. ರಭಸದಿಂದ ಅನೇಕ ಬಾಗಿಲುಗಳನ್ನು ದಾಟಿಕೊಂಡು ಹೋಗಿ ಗರ್ಭಗುಡಿ ಪ್ರವೇಶಿಸಿದರು. ಉಳಿದವರು ಅಲ್ಲಿ ಹೋಗಿ ನೋಡುವ ಹೊತ್ತಿಗೆ ಭಕ್ತ ನಂದನಾರ‍್ ದೇವರಲ್ಲಿ ಐಕ್ಯವಾಗಿ ಹೋಗಿದ್ದರು.

ದೊಡ್ಡ ಚೇತನ, ದೊಡ್ಡ ಬಾಳು

ಭಕ್ತಿಗಾಗಲಿ ಹಿರಿಮೆಗಾಗಲಿ ಜಾತಿ ಮತಗಳ ಮೇರೆಗಳೀಲ್ಲ, ಅಲ್ಲವೇ? ಶುದ್ಧ ಮನಸ್ಸು ಒಳ್ಳೆಯ ಜೀವ ನಡೆಸಬೇಕೆಂಬ ಹಂಬಲ ಇವು ಮುಖ್ಯ. ಇವು ಇರುವವರೇ ಇತರರಿಗಿಂತ ಉತ್ತಮರು. ನಂದನಾರ‍್ ಹೊರಗಿನ ಶುದಿಗೂ ಪ್ರಾಧ್ಯಾನ ಕೊಟ್ಟರು : ಹರಿಜನರ ಕೇಎರಿಯನ್ನೆಲ್ಲ ತನ್ನ ತಂಡದವರೊಂದಿಗೆ ಸ್ವಚ್ಛಮಾಡಿದರು. ತಿರುಪಂಕೂರು ದೇವಾಲಯದ ಮುಂದಿನ ಹೊಂಡದ ಕಸಕಡ್ಡಿಗಳನ್ನು ತೆಗೆದು ಅದರ ನೀರು ಕುಡಿಯಲು ಯೋಗ್ಯವಾಗುವಂತೆ ಮಾಡಿದರು. ಅವರು ಒಳಗಿನ ಶುಚಿಗೂ ಪ್ರಧ್ಯಾನ್ಯ ಕೊಟ್ಟರು. ಆಸೆ, ಕೋಪ, ದ್ವೇಷ, ಅಸೂಯೆ ಯಾವೂವು ಅವರ ಹತ್ತಿರ ಸುಳಿಯುವಂತಿರಲಿಲ್ಲ. ಹಿಂದಿನಿಂದ ನಡೆದು ಬಂದಿರುವುದೆಲ್ಲ ಒಳ್ಳೆಯದು ಎಂದು ಅವರು ಹಿಂದಿನ ಪದ್ಧತಿಗಳಿಗೆ ಜೋತು ಬೀಳಲಿಲ್ಲ. ಹಿಂದಿನದೆಲ್ಲ ಕೆಟ್ಟುದು ಎಂದು ಎಲ್ಲವನ್ನೂ ತಿರಸ್ಕರಿಸಲಿಲ್ಲ. ತಾವೇ ಯೋಚಿಸಿ ಯಾವುದು ಸರಿ ಎಂದು ಕಂಡಿತೋ ಅದನ್ನು ಉಳಿಸಿಕೊಂಡರು. ಯಾವುದು ತಪ್ಪು ಎನ್ನಿಸಿತೋ ಅದನ್ನು ನಿರ್ಭಯವಾಗಿ ತ್ಯಜಿಸಿದರು. ಅವರು ಬಹು ದೊಡ್ಡ ಚೇತನ, ಅವರ ಬಾಳು ಬಹು ದೊಡ್ಡ ಬಾಳು.