ಮುದ್ದಣನೆಂದು ಪ್ರಸಿದ್ದನಾಗಿರುವ ನಂದಳಿಕೆ ಲಕ್ಷ್ಮಿನಾರಾಯಣಪ್ಪನು ಹತ್ತೊಂಬತ್ತನೆಯ ಶತಮಾನದ ಕೊನೆಯ ಮತ್ತು ಇಪ್ಪತ್ತನೆಯ ಶತಮಾನದ ಆರಂಭದ ಕಾಲದಲ್ಲಿ ಅಂದರೆ ೨೪,೧,೧೮೭೦ ರಿಂದ ೧೫,೨,೧೯೦೧ ರವರೆಗೆ ಜೀವಿಸಿದ್ದ ಕನ್ನಡದ ದೀಮಂತ ಕವಿ. ಇವನ ಊರು ದಕ್ಷಿಣ ಕನ್ನಡ ಜಿಲ್ಲೆಯ ನಂದಳಿಕೆ. ತಂದೆ ತಾಯಿಗಳು ಪಾಠಾಳಿ ತಿಮ್ಮಪ್ಪಯ್ಯ ಮತ್ತು ಮಹಾಲಕ್ಷ್ಮಿ. ಹೆಂಡತಿ ಕಮಲಾಬಾಯಿ. ಮಗ ರಾಧಾಕೃಷ್ಣ, ವೃತ್ತಿ ಉಡುಪಿ ಹೈಸ್ಕೂಲಿನಲ್ಲಿ ವ್ಯಾಯಾಮ ಶಿಕ್ಷಕ. ಕ್ಷಯರೋಗಕ್ಕೆ ತುತ್ತಾಗಿ ಸಾವಿಗೀಡಾದ ಮುದ್ದಣನು ಕೇವಲ ತನ್ನ ಮೂವತ್ತೊಂದು ವರ್ಷಗಳ ಅಲ್ಪಜೀವಿತದಲ್ಲಿಯೆ ಹಲವಾರು ಕೃತಿಗಳನ್ನು ರಚಿಸಿದ್ದಾನೆ. ಮಳಲಿ ಸುಬ್ಬರಾಯರೆಂಬ ಪಂಡಿತರ ಸಹಾಯದಿಂದ ಸಂಗೀತ-ಸಾಹಿತ್ಯಗಳಲ್ಲಿ ಆಳವಾದ ಪರಿಶ್ರಮವನ್ನು ಪಡೆದ ಮುದ್ದಣ ರತ್ನಾವತೀ ಕಲ್ಯಾಣ(ದೃಡವರ್ಮಕಾಳಗ), ಕುಮಾರವಿಜಯ(ಶೂರ ಪದ್ಮಾಸುರ ಕಾಳಗ) ಎಂಬ ಯಕ್ಷಗಾನ ಪ್ರಸಂಗಗಳನ್ನು, ಅದ್ಭುತರಾಮಾಯಣ ಶ್ರೀರಾಮಪಟ್ಟಾಬಿಷೇಕ, ರಾಮಾಶ್ವಮೇದಂ, ಎಂಬ ಕಾವ್ಯಗಳನ್ನು ರಚಿಸಿದ್ದಾನೆ. (ಶ್ರೀ ರಾಮಪಟ್ಟಬಿಷೇಕ ವಾರ್ಧಕ ಷಟ್ಪದಿಯಲ್ಲಿದೆ, ಉಳಿದವು ಗದ್ಯಕೃತಿಗಳು) ಜೊತೆಗೆ ಭಗವದ್ಗೀತೆ, ರಾಮಾಯಣಗಳ ಕನ್ನಡ ಅನುವಾದ, ಕಾಮಶಾಸ್ತ್ರವನ್ನು ಕುರಿತ ಗ್ರಂಥ ‘ಜೋಜೋ, ಎಂಬ ಸಂಶೋಧನಾತ್ಮಕ ಲೇಖನ ‘ಗೋಧಾವರಿ, ಎಂಬ ಕಾಲ್ಪನಿಕ ಕಾದಂಬರಿಯ ಪ್ರಥಮಾಧ್ಯಾಯ-ಇವಿಷ್ಟೂ ಮುದ್ದಣನ ಬರಹಗಳು. ಇವುಗಳಲ್ಲೆಲ್ಲ ಅವನ ಪ್ರತಿಭೆ ಹೆಚ್ಚಾಗಿ ಪ್ರಕಾಶಗೊಂಡಿರುವುದು ರಾಮಾಶ್ವಮೇಧ ಕೃತಿಯಲ್ಲಿ.

ಪದ್ಮಪುರಾಣದಲ್ಲಿಯ ಶೇಷ ರಾಮಾಯಣ ರಾಮಾಶ್ವಮೇಧದ ಕಥಾನಕಕ್ಕೆ ಮೂಲ ಆಕರ, ಆದರೆ ಇದಕ್ಕೆ ಮುದ್ದಣ ಒದಗಿಸಿದ ಚೌಕಟ್ಟು ವಿಶಿಷ್ಟರೀತಿಯದು. ದೇವತಾ ಪ್ರಾರ್ಥನೆ, ಗುರುಸ್ತುತಿಗಳಿಂದ ಆರಂಭವಾಗುವ ಬದಲು ರಾಮಾಶ್ವಮೇಧ ಪ್ರಾರಂಭವಾಗುವುದು ಹೀಗೆ “ಓವೋ ಕಾಲಪುರುಷಂಗೆ ಗುಣಂ ಅಣಂ ಇಲ್ಲಂಗಡ, ನಿಸ್ತೇಜಂಗಡ, ಜಡಂಗಡ, ಒಡಲೊಳ್ ಗುಡುಗುಟ್ಟುಗಂ ಗಡ!,, ಈ ರೀತಿ ಮಳೆಗಾಲದ ವರ್ಣನೆಯಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಮುದ್ದಣ ಮನೋರಮೆಯರು ಹೆಜ್ಜೆ ಇಡುತ್ತಾರೆ. ಶ್ರೀರಾಮಪಟಾಬಿಷೇಕ ಒಂದು ಪದ್ಯಕಾವ್ಯವಾಗಿದೆ. ಇದು ವಾರ್ಧಕ ಷಟ್ಪದಿಯಲ್ಲಿ ರಚನೆಯಾಗಿದೆ. ಇದರಲ್ಲಿ ೫ ಸಂದಿಗಳೂ, ೨೪೨ ಪದ್ಯಗಳೂ ಇವೆ. ಈ ಕಾವ್ಯದಲ್ಲಿ ಸೌಂದರ್ಯಕ್ಕಿಂತ ವರ್ಣನೆ ಹೆಚ್ಚಾಗಿದೆ.

ಅದ್ಬುತ ರಾಮಾಯಣವು ಸಂಸ್ಕೃತ ಕೃತಿಯ ಆಧಾರದಿಂದ ರಚಿತವಾಗಿದೆ. ಇದು ಒಂದು ಗದ್ಯ ಗ್ರಂಥ. ಇದರಲ್ಲಿ ಪ್ರಧಾನ ಕಥೆಗಳಿಗಿಂತ ಉಪಕಥೆಗಳು ಹೆಚ್ಚಾಗಿವೆ ಎಂದು ಹೇಳಬಹುದು.

ರತ್ನಾವತಿ ಕಲ್ಯಾಣ ಅಥವಾ ದೃಡವರ್ಮಕಾಳಗ, ಶ್ರೀಹರ್ಷನ ಪ್ರಿಯದರ್ಶಿಕಾ ಎಂಬ ನಾಟಕದ ಸ್ವಲ್ಪ ಭಾಗವನ್ನು ಆರಿಸಿಕೊಂಡ, ಹೊಸ ಅಂಶಗಳನ್ನು ಒಳಗೊಂಡು ರಚಿತವಾದ ಯಕ್ಷಗಾನ ಪ್ರಬಂಧವಾಗಿದೆ. ಇದು ಮುದ್ದಣನ ಮೊದಲ ಕೃತಿಯಾಗಿದೆ. ಕುಮಾರವಿಜಯ ಅಥವಾ ಶೂರಪದ್ಮಾಸುರ ಕಾಳಗ ಶಂಕರ ಸಂಹಿತೆಯ ಆಧಾರದಿಂದ ರಚಿತವಾಗಿದೆ. ಕುಮಾರವಿಜಯ ದಲ್ಲಿ ಪ್ರತಿಭೆಗಿಂತ ಪಾಂಡಿತ್ಯಕ್ಕೂ, ಚಿತ್ರ ಕವಿತೆಗೂ ಮೊದಲ ಸ್ಥಾನದೊರಕಿದೆ ಎಂದು ಹೇಳಬಹುದು.

ಮುದ್ದಣ ಮನೋರಮೆಯರ ಸರಸ ಸಂಭಾಷಣೆಯಲ್ಲಿ ಶೃಂಗಾರ, ಹಾಸ್ಯ, ಕರುಣ ರಸಗಳು ತುಂಬಿರುವುದಲ್ಲದೆ ಕವಿಯ ಜೀವನ ವೃತ್ತಾಂತದ ಕೆಲವು ಅಂಶಗಳು ಸಹ ಸೂಚಿತವಾಗಿವೆ. ಅಲ್ಲಲ್ಲಿ ಬರುವ ವಿಶಿಷ್ಟವಾದ ವರ್ಣನೆಗಳೂ, ಹಲವು ಬಗೆಯ ಅಲಂಕಾರಗಳೂ, ಕಾವ್ಯದ ಸೊಗಸನ್ನು ಹೆಚ್ಚಿಸುತ್ತವೆ. ಹಳಗನ್ನಡದ ಗದ್ಯ ಶೈಲಿ ಸರಳತೆಯೊಂದಿಗೆ ಸಶಕ್ತವಾಗಿಯೂ ಮೂಡಿಬಂದಿವೆ.

ಮುದ್ದಣನು ಪರೋಕ್ಷ ವಿನಯ ಸ್ವಭಾವದ ಕನ್ನಡದ ನವೋದಯದ ಹರಿಕಾರನಾಗಿದ್ದಾನೆ. ಅವನು ಕನ್ನಡದಲ್ಲಿ ಎಂದಿಗೂ ಮರೆಯಲಾಗದ ಆಸ್ತಿಯಾಗಿದ್ದಾನೆ.