Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ನಂದಿತ ನಾಗನಗೌಡ‌

ಕರುನಾಡಿನ ಕೀರ್ತಿಯನ್ನು ವಿದೇಶದಲ್ಲಿ ಬೆಳಗಿದ ಹೆಮ್ಮೆಯ ಪರ್ವತಾರೋಹಿ ನಂದಿತ ನಾಗನಗೌಡರ್‌, ಆಸ್ಟ್ರೇಲಿಯಾದ ಅತಿ ಎತ್ತರದ ಪರ್ವತ ಏರಿದ ಏಕೈಕ ಕನ್ನಡತಿ.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿಯಾದ ನಂದಿತಾ ನಾಗನಗೌಡರ್ ಅವರದ್ದು ಬಾಲ್ಯದಿಂದಲೂ ಸಾಹಸ ಪ್ರವೃತ್ತಿ. ಓದಿದ್ದು ಎಂಬಿಎ. ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಪರ್ವತಾರೋಹಿ, ಅತಿ ಎತ್ತರದ ಹಿಮಾಲಯ ಪರ್ವತ ಏರುವ ಮೂಲಕ ಪರ್ವತಾರೋಹಣದ ಸಾಹಸ ಆರಂಭಿಸಿದ ನಂದಿತ ಆನಂತರ ಏರಿದ ಪರ್ವತಗಳು ಸಾಕಷ್ಟು. ಆಸ್ಟ್ರೇಲಿಯಾ ಖಂಡದ ಅತಿ ಎತ್ತರದ ಕಾರ್ಸ್‌ಟೆನ್ಸ್ ಪಿರಮಿಡ್ ಏರುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ೧೭,೦೦೦ ಅಡಿ ಎತ್ತರದ ಕಡಿದಾದ ಬಂಡೆಗಳಿಂದ ಕೂಡಿರುವ ಈ ಪರ್ವತವನ್ನು ಏರಿದ ಮೊದಲ ಮಹಿಳೆಯೆಂಬುದು ನಾಡೇ ಹೆಮ್ಮೆ ಪಡುವ ವಿಷಯ ಇದಲ್ಲದೆ, ಯುರೋಪ್‌ನ ಅತಿ ಎತ್ತರದ ೧೮,೬೦೦ ಅಡಿ ಎತ್ತರದ ಎಲಬಸ್ ಪರ್ವತವನ್ನೂ ಏರಿದ ಮೊದಲ ಭಾರತೀಯ ಮಹಿಳೆ. ಇದಲ್ಲದೆ, ಆಫ್ರಿಕಾದ ಅತಿ ಎತ್ತರದ ಕಿಲಿಮಾಂಜರೋ ಪರ್ವತವನ್ನೂ ಏರಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಕಡಿದಾದ, ಅತ್ಯಂತ ಅಪಾಯಕರವಾದ ಪರ್ವತಗಳನ್ನು ಏರುತ್ತಿರುವ ನಂದಿತ ನಾಗನಗೌಡ‌ ಅವರು ಭವಿಷ್ಯದಲ್ಲೂ ಇನ್ನೂ ಎತ್ತರೆತ್ತರದ ಪರ್ವತವನ್ನು ಏರುವ ಗುರಿ ಹೊಂದಿದ್ದಾರೆ. ಸ್ತ್ರೀ ಧೀಶಕ್ತಿಯ ದ್ಯೋತಕವಾಗಿರುವ ನಂದಿತ ಅವರ ಸಾಧನೆ-ಸಾಹಸ ಇಡೀ ನಾರಿ ಕುಲಕ್ಕೇ ಮಾದರಿಯಾಗಿರುವುದಂತೂ ಹೌದು.