ನಂಬ ಬೇಡವೋ ಮನುಜಾ ನಂಬಬೇಡವೋ || ಪ || ನಂಬಿ ಕೆಡುವರುಂಟೆ ಮಣ್ಣ || ಗೊಂಬೆಯಂಥ ತನುವನಿದನು || ಅ ಪ || ಮಾಯದಿಂದ ಜನಿಸಿ ಬೆಳೆದು ಕಾಯವೆನಿಸಿ ಸತ್ತು ಕಡೆಗೆ || ನಾಯಿ ನರಿಯು ತಿಂದು ಕೆಡುವ | ಹೇಯವಾದ ಒಡಲ ನಿದನು || ೧ || ನೂರು ಬಾಳ್ವೆನೆಂದು ತನ್ನ | ಸೇರಿನಲಿವರಾಶೆಯನ್ನು || ನೀರ ಕಲಿಸಿ ನಿಮಿಷದಲ್ಲಿ | ತೋರಿಯಳಿವ ದೇಹವಿದನು || ೨ || ಧರೆಯ ಭೋಗ ಕೆಳಸಿ ಪರವ | ಮರೆದು ತನ್ನ ಮೆಚ್ಚಿದವರೆ || ಎರಡು ವಿಧದಿ ಕೆಡಿಸಿ ಯಮನ ಪುರಕೆ ಕೆಡಹುವಂಗ ವಿದನು || ೩ || ಸತ್ತು ಹುಟ್ಟಿ ತಾನು ತನ್ನ | ನಿತ್ತವೆಂದು ಹೊಂದಿದವರ || ಕತ್ತೆಯಂತೆ ಇಹಕೆ ಪರಕೆ | ಸುತ್ತಿ ಸುಳಿವ ಗಾತ್ರವಿದನು || ೪ || ಒಡೆಯದಡಿಯ ದಮಲ ಸುಖವ | ಪಡೆಯೆ ಶ್ರೀ ಗುರು ಸಿದ್ಧನಿಂದ || ಕೊಡದ ತೆರದೊಳೊಡೆದು ಧರೆಯೊ | ಳಡಗಿ ಕೆಡುವ ಜಡತನುವನಿದನು || ೫ ||