“ಅಮ್ಮಾ, ನಾನು ಮತ್ತು ಪುಟ್ಟಿ ಸ್ವಲ್ಪ ಸುತ್ತಾಡಿ ಬರುತ್ತೇವೆ” ಕಿಟ್ಟ ಕೂಗಿ ಹೇಳಿದ.

“ಆಗಲಿ ಮಗೂ, ಪುಟ್ಟಿ ಹಳ್ಳಿಯ ಹುಡುಗಿ. ಮೊದಲ ಬಾರಿಗೆ ನಗರಕ್ಕೆ ಬಂದಿದ್ದಾಳೆ. ರಸ್ತೆ ನಿಯಮಗಳು ಅವಳಿಗೆ ತಿಳಿದಿಲ್ಲ. ಜಾಗ್ರತೆ ಹೋಗಿ ಬನ್ನಿ” ಎನ್ನುತ್ತ ಕಿಟ್ಟನ ಅಮ್ಮ ಹೊಸ್ತಿಲಲ್ಲಿ ಬಂದು ನಿಂತರು.

“ಆಗಲಿ ಅಮ್ಮಾ… ನಾನು ಇದ್ದೇನಲ್ಲ? ಅವಳಿಗೆ ಎಲ್ಲವನ್ನೂ ತಿಳಿಸಿ ಹೇಳುತ್ತೇನೆ” ಕಿಟ್ಟ ಭರವಸೆ ನೀಡಿದ.

“ಬರುತ್ತೇವೆ ದೊಡ್ಡಮ್ಮಾ. ಟಾಟಾ…” ಪುಟ್ಟಿ ಕೈಯಾಡಿಸಿದಳು.

“ಒಳ್ಳೆಯದು. ಹೋಗಿ ಬನ್ನಿ” ಎಂದು ಕೈಯಾಡಿಸುತ್ತ, ಮಕ್ಕಳನ್ನು ಬೀಳ್ಕೊಟ್ಟರು, ಕಿಟ್ಟನ ಅಮ್ಮ.

ಪುಟ್ಟಿ, ದೂರದ ಹಳ್ಳಿಯಲ್ಲಿ ಹುಟ್ಟಿದವಳು; ಹಳ್ಳಿಯಲ್ಲೇ ಬೆಳೆದವಳು. ನಿನ್ನೆ ತಾನೇ ಅವಳು ನಗರಕ್ಕೆ ಬಂದಿದ್ದಳು. ಇಲ್ಲಿ ಅವಳ ದೊಡ್ಡಮ್ಮನ ಮನೆ ಇತ್ತು. ಕಿಟ್ಟ, ದೊಡ್ಡಮ್ಮನ ಮಗ. ಪುಟ್ಟಿಗೆ ನಗರವನ್ನು ತೋರಿಸುವುದಾಗಿ ಅವನು ಹೇಳಿದ್ದ. ಅದಕ್ಕೆಂದೆ ಅವರು ಈಗ ಹೊರಟಿದ್ದರು.

 ಕಿಟ್ಟ ಮತ್ತು ಪುಟ್ಟಿ ಮುಖ್ಯ ಬೀದಿಗೆ ಬಂದರು. ಬೀದಿ ಅಗಲವಾಗಿತ್ತು. ಅದರ ಎರಡೂ ಬದಿಗಳಲ್ಲಿ ಕಾಲು ಹಾದಿಗಳಿದ್ದವು. ಪುಟ್ಟಿ ಅವುಗಳನ್ನು ನೋಡಿದಳು. ಅವಳಿಗೆ ಆಶ್ಚರ್ಯವಾಯಿತು.

“ಕಿಟ್ಟಣ್ಣಾ, ಇದೇನು, ಇಲ್ಲಿ ಒಂದೇ ಕಡೆ ಮೂರು ಬೀದಿಗಳಿವೆ?” ಅವಳು ಕೇಳಿದಳು.

“ಪುಟ್ಟೀ, ಇವುಗಳಲ್ಲಿ ನಡುವಿನದು ಮುಖ್ಯ ಬೀದಿ, ಇದು ವಾಹನಗಳ ಓಡಾಟಕ್ಕೆ. ಕಡೆ ಕಡೆ ಇರುವವು ಕಾಲು ಹಾದಿಗಳು. ಇವು ಜನರ ಸಂಚಾರಕ್ಕೆ”. ಕಿಟ್ಟ ವಿವರಿಸಿದ.

“ನಮ್ಮೂರಲ್ಲಿ ರಸ್ತೆ ಮಾತ್ರ ಇದೆ. ಅದರ ಎರಡೂ ಬದಿಗಳಲ್ಲಿ ಕಾಲು ಹಾದಿಗಳಿಲ್ಲ. ಆಗ?”

ಕಾಲು ಹಾದಿ ಇಲ್ಲದ ಕಡೆ ಜನರು ರಸ್ತೆಯ ಬಲಬದಿಯಿಂದಲೇ ನಡೆಯಬೇಕು. ವಾಹನಗಳು ರಸ್ತೆಯ ಎಡಬದಿಯಿಂದಲೇ ಓಡಾಡಬೇಕು. ಇದು ರಸ್ತೆ ನಿಯಮ.”

“ಹಳ್ಳಿಯ ಜನಕ್ಕೆ ಇದು ತಿಳಿದಿಲ್ಲ. ಅವರು ರಸ್ತೆಯ ಎಡಬದಿಯಲ್ಲೂ ನಡೆಯುತ್ತಾರೆ.

ಕಿಟ್ಟ – ಆಗ ಹಿಂದಿನಿಂದ ಬರುವ ವಾಹನಗಳು ಅವರಿಗೆ ಡಿಕ್ಕಿ ಹೊಡೆವ ಸಾಧ್ಯತೆ ಹೆಚ್ಚು. ಏಕೆ ಗೊತ್ತೇ? ಆ ವಾಹನಗಳು ಸಹ ರಸ್ತೆಯ ಎಡ ಮಗ್ಗುಲಲ್ಲೇ ಓಡಾಡುತ್ತವೆ. ಅವು ಹಿಂದಿನಿಂದ ಬರುತ್ತವೆ. ನಡೆಯುವವರಿಗೆ ಅವು ಕಾಣಿಸುವುದಿಲ್ಲ.

ಪುಟ್ಟಿ – ಅಂತೂ ರಸ್ತೆಯ ಬಲಬದಿಯಲ್ಲೇ ನಡೆಯಬೇಕು. ಒಪ್ಪಿಕೊಳ್ಳೋಣ. ಆದರೆ ಒಂದು ಸಂದೇಹ.

ಕಿಟ್ಟ- ಏನದು? ಕೇಳಿ ಬಿಡು.

ಪುಟ್ಟಿ- ಎದುರಗಡೆಯಿಂದ ಬರುವ ವಾಹನಗಳು ನಮ್ಮ ಪಕ್ಕದಲ್ಲೇ ಓಡಾಡುತ್ತವೆ. ಅವು ಸಹ ನಮಗೆ ಡಿಕ್ಕಿ ಹೊಡೆಯ ಬಹುದಲ್ಲ?

ಕಿಟ್ಟ – ಎದುರಗಡೆಯಿಂದ ಬರುವ ಅವುಗಳನ್ನು ನಾವು ನೋಡುತ್ತಲೇ ಇರುತ್ತೇವಲ್ಲ? ಸ್ವಲ್ಪ ಎಚ್ಚರ ಇದ್ದರಾಯಿತು. ಅವಘಡಗಳಿಂದ ತಪ್ಪಿಸಿಕೊಳ್ಳಬಹುದು.

ಹೀಗೆ ಮಾತಾಡುತ್ತಲೆ ಅವರು ನಡೆದು ಬರುತ್ತಿದ್ದರು. ಒಂದೆಡೆ ಮುಖ್ಯ ಬೀದಿ ಮತ್ತು ಕಾಲು ಹಾದಿಗಳ ನಡುವೆ ಬೇಲಿ ಕಾಣಿಸಿತು. ಪುಟ್ಟಿ ಅದನ್ನು ಗಮನಿಸಿದಳು. ಅದು ಏನು? ಏಕೆ ಅಲ್ಲಿದೆ? ಅವಳಿಗೆ ಅರ್ಥವಾಗಲಿಲ್ಲ. “ಅಯ್ಯೋ, ಇದೇನು, ರಸ್ತೆ ಮತ್ತು ಕಾಲು ಹಾದಿಗಳ ಮಧ್ಯೆ ಬೇಲಿ ಇದೆಯಲ್ಲಾ! ಅವಳು ಪ್ರಶ್ನಿಸಿದಳು.

ಕಿಟ್ಟ- ಹೌದು ಪುಟ್ಟೀ. ಇದನ್ನು ಅಡ್ಡ ಕಂಬಿ (Railing) ಎನ್ನುತ್ತಾರೆ.

ಪುಟ್ಟಿ – ಇದು ಯಾಕೆ ಬೇಕು?

ಕಿಟ್ಟ – ಜನ ಮುಖ್ಯ ರಸ್ತೆಗೆ ಇಳಿಯದಂತೆ ತಡೆಯಲು ಇದು ಸಹಾಯ ಮಾಡುತ್ತದೆ.

ಪುಟ್ಟಿ – ಆದರೆ, ಅಲ್ಲಿ ನೋಡು. ಯಾರೋ ಒಬ್ಬ ಅಡ್ಡ ಕಂಬಿ ಹಾದು, ರಸ್ತೆಗೆ ಇಳಿಯುತ್ತಿದ್ದಾನೆ!

ಕಿಟ್ಟ – ಅದು ತಪ್ಪು. ಸಂಚಾರಿ ಪೋಲಿಸರು ನೋಡಿದರೆ ಅವನನ್ನು ಹಿಡಿದು ಬಿಡುತ್ತಾರೆ. ಅವನಿಗೆ ಶಿಕ್ಷೆಯೂ ಆಗಬಹುದು.

ಕಿಟ್ಟ ಮತ್ತು ಪುಟ್ಟಿ ಈಗ ನಗರದ ಮುಖ್ಯ ಭಾಗಕ್ಕೆ ಬಂದಿದ್ದರು. ಅಲ್ಲಿ ರಸ್ತೆ ಬಹಳ ಅಗಲವಾಗಿತ್ತು. ಅದರ ಎರಡೂ ಕಡೆಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳಿದ್ದವು. ಎಂಟು-ಹತ್ತು ಮಾಳಿಗೆಯ ಕಟ್ಟಡಗಳೂ ಅಲ್ಲಿದ್ದವು. ಕಣ್ನು ಹಾಯಿಸಿದಲ್ಲೆಲ್ಲ ಅಂಗಡಿಗಳು, ಹೋಟೆಲುಗಳು, ಕಚೇರಿಗಳು, ಶಾಲಾ ಕಾಲೇಜುಗಳು, ಕಾರ್ಖಾನೆ, ಆಸ್ಪತ್ರೆ ಇತ್ಯಾದಿಗಳು ಕಂಡು ಬರುತ್ತಿದ್ದವು. ರಸ್ತೆಯಲ್ಲಿ ಎಡೆಬಿಡದೆ ವಾಹನಗಳ ಓಡಾಟ! ಕಾಲು ಹಾದಿಗಳಲ್ಲಿ ಜನಗಳ ದಿಬ್ಬಣ! ಎಲ್ಲೆಲ್ಲೂ ಬಗೆ ಬಗೆಯ ನೋಟಗಳು! ಕಿವಿಗಡಚಿಕ್ಕುವ ಸದ್ದುಗಳು! ಪುಟ್ಟಿ ಬೆರಗಾಗಿ ಹೋದಳು.

 “ಅಬ್ಬಾ ಇಲ್ಲಿ ಎಂಥ ದೊಡ್ಡ ದೊಡ್ಡ ಕಟ್ಟಡಗಳು! ಅದೆಷ್ಟು ವಾಹನಗಳು! ಎಷ್ಟು ಬಗೆಯ ಜನಗಳು!” ಅವಳು ಉದ್ಗಾರ ತೆಗೆದಳು. ಮತ್ತೆ ಕಿಟ್ಟನ ಕಡೆಗೆ ತಿರುಗಿ, “ಕಿಟ್ಟಣ್ಣಾ, ಇಲ್ಲಿ ರಸ್ತೆ ದಾಟುವುದಾದರೂ ಹೇಗೆ?” ಅವಳು ಪ್ರಶ್ನಿಸಿದಳು.

ಕಿಟ್ಟ – ಹೌದು ಪುಟ್ಟೀ, ಇಲ್ಲಿ ಜನ ಸಂಚಾರ ಹೆಚ್ಚು. ವಾಹನಗಳ ಓಡಾಟವು ಅಧಿಕ. ಹಾಗಾಗಿ ರಸ್ತೆ ದಾಟುವುದು ಬಹಳ ಕಷ್ಟ.

ಪುಟ್ಟಿ – ಹಾಗಾದರೆ ರಸ್ತೆ ದಾಟುವವರು ಏನು ಮಾಡಬೇಕು? ಎಲ್ಲಿ ದಾಟಬೇಕು?

ಕಿಟ್ಟ – ಇಲ್ಲಿ ಅದಕ್ಕೆ ನಿಶ್ಚಿತವಾದ ಸ್ಥಳವಿದೆ, ಪುಟ್ಟೀ. ನಾವು ಸಹ ಅಲ್ಲಿಗೇ ಹೋಗಬೇಕು. ಸ್ವಲ್ಪ ತಾಳು. ನಿನಗೆ ಎಲ್ಲವನ್ನೂ ತೋರಿಸುತ್ತೇನೆ.

ಅವರು ಇನ್ನಷ್ಟು ಮುಂದೆ ನಡೆದರು. ಅಲ್ಲಿ ಒಂದು ಕಡೆ ರಸ್ತೆಯ ಮೇಲೆ ಕಪ್ಪು-ಬಿಳುಪು ಪಟ್ಟಿಗಳಿದ್ದವು. ಜನ ಎಚ್ಚರಿಕೆಯಿಂದ ರಸ್ತೆ ದಾಟುತ್ತಿದ್ದರು. ಅಲ್ಲೇ ಒಬ್ಬ ಯುವಕ ನಿಂತಿದ್ದ. ಗಟ್ಟಿಮುಟ್ಟಾಗಿದ್ದ ಅವನು ಊರುಗೋಲನ್ನು ಹಿಡಿದುಕೊಂಡಿದ್ದ. ಪುಟ್ಟಿಗೆ ಆಶ್ಚರ್ಯವಾಯಿತು. ಅವಳು ಕಿಟ್ಟನ ಕಡೆ ತಿರುಗಿದಳು. ಅವಳು ಪ್ರಶ್ನೆ ಕೇಳುವ ಮೊದಲೇ ಕಿಟ್ಟ ಆ ಯುವಕನ ಬಳಿ ಸಾರಿದ್ದ.

“ಏನಣ್ಣಾ? ರಸ್ತೆ ದಾಟಬೇಕಿತ್ತೇ?” ಅವನು ಯುವಕನನ್ನು ಪ್ರಶ್ನಿಸಿದ.

“ಹೌದಪ್ಪಾ. ರಸ್ತೆಯ ಆ ಬದಿಗೆ ಹೋಗಬೇಕಿತ್ತು. ಆದರೆ ಧೈರ್ಯ ಬರಲಿಲ್ಲ. ಹಾಗಾಗಿ ಇಲ್ಲೇ ನಿಂತು ಕೊಂಡಿದ್ದೇನೆ.’ ಯುವಕ ಹೇಳಿದ.

“ಅಷ್ಟೇ ತಾನೆ? ಬನ್ನಿ ಹೋಗೋಣ. ನಿಮ್ಮ ಜೊತೆ ನಾನು ಬರುತ್ತೇನೆ.” ಕಿಟ್ಟ ಭರವಸೆ ನೀಡಿದ. ಬಳಿಕ ಅವನು,

“ಪುಟ್ಟೀ, ಒಂದು ನಿಮಿಷ ನೀನು ಇಲ್ಲೇ ನಿಂತಿರು. ಇವರನ್ನು ರಸ್ತೆ ದಾಟಿಸಿ, ಈಗ ಬಂದು ಬಿಡುತ್ತೇನೆ.” ಎಂದು ಅವನು ಯುವಕನ  ಕಯಹಿಡಿದ. ಎಚ್ಚರಿಕೆಯಿಂದ ಅವರು ರಸ್ತೆ ದಾಟಿದರು.

“ರಸ್ತೆಯ ಈ ಬದಿಗೆ ಬಂದು ಬಿಟ್ಟೆವು, ಅಣ್ಣಾ-ನಾನಿನ್ನು ಬರಲೇ?” ಕಿಟ್ಟ ಯುವಕನನ್ನು ಕೇಳಿದ.

“ತುಂಬ ಉಪಕಾರ ಮಾಡಿದೆ ತಮ್ಮಾ. ನೀನಿನ್ನು ಹೋಗಬಹುದು” ಕೃತಜ್ಞತೆ ಸೂಚಿಸುತ್ತ ಹೇಳಿದ ಯುವಕ. ಕಿಟ್ಟ, ಪುಟ್ಟಿ ಇದ್ದಲ್ಲಿಗೆ ಹಿಂದಿರುಗಿದ.

‘ಕಿಟ್ಟಣ್ಣಾ, ಅವನು ಕುರುಡನೇ? ಮೊದಲು ನನಗದು ಗೊತ್ತೇ ಆಗಲಿಲ್ಲ.” ಪುಟ್ಟಿ ಹೇಳಿದಳು.

“ಹೌದು ಪುಟ್ಟೀ, ಅವನು ಕುರುಡ. ಆದುದರಿಂದಲೇ ಅವನು ಆ ಬಿಳಿಕೋಲು ಹಿಡಿದುಕೊಂಡಿದ್ದಾನೆ. ಅವನ ಹಾಗಿನ ಕುರುಡರಿಗೆ, ಮುದುಕರಿಗೆ, ಅಶಕ್ತರಿಗೆ ರಸ್ತೆ ದಾಟಲು ನಾವು ಸಹಾಯ ಮಾಡಬೇಕು. ಅದು ನಮ್ಮ ಕರ್ತವ್ಯ.” ಕಿಟ್ಟ ವಿವರಿಸಿದ. ಬಳಿಕ ರಸ್ತೆಯ ಮೇಲಿನ ಗುರುತುಗಳನ್ನು ತೋರಿಸುತ್ತ,

“ಇಲ್ಲಿ ನೋಡು ಪುಟ್ಟೀ, ಕಪ್ಪುಬಿಳುಪು ಪಟ್ಟಿಗಳು (ಜೀಬ್ರಾ ಕ್ರಾಸ್‌), ರಸ್ತೆ ದಾಟಲು ಇರುವ ಸ್ಥಳವನ್ನು ಸೂಚಿಸುತ್ತವೆ. ಎಲ್ಲರೂ ಇಲ್ಲೇ ರಸ್ತೆ ದಾಟಬೇಕು. ಚಲಿಸುವ ವಾಹನಗಳ ಬಗ್ಗೆ ಎಚ್ಚರವಹಿಸಬೇಕು. ಇಂಥ ಕೆಲವು ಕಡೆ, ಮತ್ತು ಮೂರು ನಾಲ್ಕು ರಸ್ತೆಗಳು ಸೇರುವಲ್ಲಿ ಸಂಚಾರೀ ಪೋಲಿಸರು ಇರುತ್ತಾರೆ. ಅವರು ವಾಹನಗಳನ್ನು ನಿಲ್ಲಿಸುತ್ತಾರೆ. ರಸ್ತೆ ದಾಟಲು ಜನರಿಗೆ ನೆರವಾಗುತ್ತಾರೆ.

ಕೆಲವೆಡೆ ಈ ಕೆಲಸಕ್ಕಾಗಿ ಕೆಂಪು-ಹಸಿರು ದೀಪಗಳ ವ್ಯವಸ್ಥೆ ಇರುತ್ತದೆ. ನಿನಗೆ ಇದನ್ನೆಲ್ಲ ವಿವರಸಬೇಕಲ್ಲ? ಅದಕ್ಕೆಂದೇ ನಿನ್ನನ್ನು ಇಲ್ಲಿ ನಿಲ್ಲಿಸಿ ಹೋಗಿದ್ದೆ. ಬಾ, ರಸ್ತೆ ದಾಟೋಣ, ಇನ್ನೂ ಸ್ವಲ್ಪ ಮುಂದೆ ಹೋಗೋಣ. ನಿನಗೆ ಇನ್ನೊಂದು ವಿಶೇಷ ತೋರಿಸುತ್ತೇನೆ.” ಪುಟ್ಟ ವಿವರಣೆ ನೀಡಿದ. ಅವರು ಎಚ್ಚರಿಕೆಯಿಂದ ರಸ್ತೆ ದಾಟಿದರುಇ. ಹರಟುತ್ತಲೇ ಅವರು ಇನ್ನಷ್ಟು ಮುಂದೆ ನಡೆದರು.

ಅಷ್ಟರಲ್ಲಿ ಮುದ್ದಾದ ನಾಯಿಯೊಂದು ಅವರ ಕಣ್ಣಿಗೆ ಬಿತ್ತು. ಉತ್ತಮ ತಳಿಯ ನಾಯಿ ಅದು. ಹುಡುಗನೊಬ್ಬ ಸರಪಳಿ ಹಾಕಿ ಅದನ್ನು ಹಿಡಿದುಕೊಂಡಿದ್ದ. ನಾಯಿ ಮುಂದೆ ಮುಂದೆ ಓಡುತ್ತಿತ್ತು. ಹುಡುಗ ಅದನ್ನು ಹಿಂಬಾಲಿಸುತ್ತಿದ್ದ. ಆಗ ಒಮ್ಮೆಲೇ ನಾಯಿ ವಿಚಿತ್ರ ರೀತಿಯಲ್ಲಿ ಕೂಗಿಕೊಂಡಿತು. ಹುಡುಗನಿಗೆ  ಅದರ ಅರ್ಥ ತಿಳಿದಿರಬೇಕು. ಅವನು ತತ್‌ಕ್ಷಣ ಸ್ವಲ್ಪ ಬದಿಗೆ ಸರಿದು ನಿಂತುಕೊಂಡ. ನಾಯಿ ಅಲ್ಲೇ ಮಲವಿಸರ್ಜನೆ ಮಾಡಿತು. ಕೆಲಸ ಮುಗಿದುದೇ ತಡ, ಹುಡುಗ ಬಂದ ಹಾದಿಯಲ್ಲೇ ಹಿಂದಿರುಗಿದ ನಾಯಿ ಅವನ ಜೊತೆಯಲ್ಲೇ ಇತ್ತು.

“ನೋಡು ಪುಟ್ಟೀ, ಕೆಲವರು ಜಾನುವಾರುಗಳನ್ನು ರಸ್ತೆಯಲ್ಲಿ ತಿರುಗಾಡಲು ಬಿಡುತ್ತಾರೆ. ಇದರಿಂದ ಅವಘಡಗಳು ಸಂಭವಿಸುತ್ತವೆ. ಕೆಲವರು ಮಲವಿಸರ್ಜನೆಗಾಗಿ ತಮ್ಮ ನಾಯಿಗಳನ್ನು ರಸ್ತೆಗೆ ತರುತ್ತಾರೆ. ಇನ್ನು ಕೆಲವರು ಮನೆಯ ಕಸವನ್ನು ತೊಟ್ಟಿಗೆ ಹಾಕುವುದಿಲ್ಲ. ಅದರ ಬದಲು ರಸ್ತೆ ಬದಿಯಲ್ಲಿ ಸುರಿಯುತ್ತಾರೆ. ಇದರಿಂದ ರಸ್ತೆ ಹೊಲಸಾಗುತ್ತದೆ. ಪರಿಸರ ಕೆಡುತ್ತದೆ. ದಾರಿ ಹೋಕರಿಗೂ ತೊಂದರೆ ಆಗುತ್ತದೆ. ಕೆಲವು ಕಿಡಿಗೇಡಿಗಳು ರಸ್ತಗೆ ದೀಪವನ್ನು ಒಡೆದು ಹಾಕುತ್ತಾರೆ.ಇದರಿಂದಾಗಿ ದಾರಿಹೋಕರು ಕತ್ತಲಲ್ಲಿ ಪರದಾಡಬೇಕಾಗುತ್ತದೆ. ಕೆಲವು ಅನಾಹುತಗಳೂ ನಡೆದು ಹೋಗುತ್ತವೆ. ಇವೆಲ್ಲ ನಮ್ಮ ತಪ್ಪು ಕೆಲಸದ ಪರಿಣಾಮಗಳು.” ಪುಟ್ಟ ಭಾಷಣವನ್ನೇ ಮಾಡಿದ್ದ ಕಿಟ್ಟ.

“ಹೌದು ಕಿಟ್ಟಣ್ಣಾ, ನಮ್ಮೂರ ಜನರೂ ಇಂಥ ಕೆಲಸ ಮಾಡುತ್ತಾರೆ. ನಮ್ಮ ಹಳ್ಳಿ ಶಾಲೆಯ ಹುಡುಗರಂತೂ ಮಾರ್ಗದ ಬದಿಯೇ ಮೂತ್ರ ಮಾಡುತ್ತಾರೆ. ಉಗುಳುತ್ತಾರೆ. ಚಾಕಲೇಟು ಕಾಗದ, ನೆಲ ಕಡಲೆ ಸಿಪ್ಪೆ, ಪ್ಲಾಸ್ಟಿಕ್‌ ಚೀಲಗಳನ್ನು ಸಹ ರಸ್ತೆಗೇ ಎಸೆಯುತ್ತಾರೆ” ಪುಟ್ಟಿ ದನಿಗೂಡಿಸಿದಳು.

“ಇಂಥ ಕೆಲಸ ಯಾರೂ ಮಾಡಬಾರದು ಪುಟ್ಟೀ. ಆದರೂ ನಿಮ್ಮದು ಹಳ್ಳಿಯ ಶಾಲೆ, ಮಕ್ಕಳು ಚಿಕ್ಕವರು, ಬುದ್ಧಿಯಿಲ್ಲದವರು. ಅಂಥವರಿಗೆ ಗುರು ಹಿರಿಯರು ಬುದ್ಧಿ ಹೇಳಬೇಕು.” ದಾರಿ ಸಾಗುತ್ತಿದ್ದ ಹಾಗೇ ಕಿಟ್ಟನ ಮಾತು ಸಾಗಿತ್ತು. ಅಷ್ಟರಲ್ಲಿ ಅವರು ಸುರಂಗ ಮಾರ್ಗದ ಎದುರಿಗೆ ಬಂದಿದ್ದರು. ಆಗ ಪುಟ್ಟಿ ಕೇಳಿದಳು,

“ಅಯ್ಯೋ, ಇದೇನು, ನಾವು ನೆಲ ಮಾಳಿಗೆಗೆ ಹೋಗುತ್ತಿದ್ದೇವೆಯೇ?”

“ಇದು ನೆಲ ಮಾಳಿಗೆ ಅಲ್ಲ ಪುಟ್ಟೀ, ನೆಲದಡಿಯ ಮಾರ್ಗ. ಎಂದರೆ ಸುರಂಗ ಮಾರ್ಗ (Sub way). ರಸ್ತೆಯ ಮೇಲೆ ವಾಹನಗಳ ಓಡಾಟ ಜಾಸ್ತಿ ಇರುವ ಕಡೆ ಸುರಂಗ ಮಾರ್ಗ ನಿರ್ಮಿಸುತ್ತಾರೆ. ಜನಕ್ಕೆ ಸುರಕ್ಷಿತವಾಗಿ ರಸ್ತೆ ದಾಟಲು ಇದು ಸಹಾಯಕ. ನೋಡುತ್ತಿರು, ಇನ್ನೊಂದು ಕ್ಷಣದಲ್ಲಿ ನಾವು ರಸ್ತೆಯ ಆ ಬದಿಗೆ ತಲುಪುರುತ್ತೇವೆ.

ಪುಟ್ಟಿ – ‘ರಾತ್ರಿ ಸಹ ಜನ ಇದರಲ್ಲೇ ಬರಬೇಕೆ?’

ಕಿಟ್ಟ – ‘ಹೌದು. ಆಗ ಇಲ್ಲಿ ದೀಪ ಉರಿಸುತ್ತಾರೆ. ಸಾಕಷ್ಟು ಬೆಳಕು ಇರುತ್ತದೆ’.

ಪುಟ್ಟಿ – ‘ನಾವು ಆ ಕಡೆಯಿಂದ ಮೆಟ್ಟಲು ಇಳಿದು ಬಂದೆವು. ಈ ಕಡೆಯಲ್ಲಿ ಮೆಟ್ಟಲು ಏರಬೇಕು ಅಲ್ಲವೆ?”

ಕಿಟ್ಟ – ‘ಹೌದು ಪುಟ್ಟೀ, ಎದುರುಗಡೆಯ ಮೆಟ್ಟಲುಗಳನ್ನು ಏರಿದರಾಯಿತು……ಹೂಂ, ಈಗ ನೋಡು. ನಾವು ಎಲ್ಲಿದ್ದೇವೆ, ಹೇಳು.

ಪುಟ್ಟಿ – ‘ರಸ್ತೆ ದಾಟಿ ಈ ಬದಿಗೆ ಬಂದೇ ಬಿಟ್ಟೆವು. ಅದಿರಲಿ, ನಾವೀಗ ಎಲ್ಲಿಗೆ ಹೋಗುತ್ತಿದ್ದೇವೆ?

ಕಿಟ್ಟ – ‘ನಗರದಲ್ಲಿ ಸುತ್ತಾಡುವವರಿಗೆ ರಸ್ತೆ ನಿಯಮಗಳು ತಿಳಿದಿರಬೇಕು. ಅದಕ್ಕಾಗಿಯೇ ನಿನ್ನನ್ನು ಇಂದು ಕರೆ ತಂದುದು. ಅಂತೂ ಇಷ್ಟು ದೂರ ಬಂದಿದ್ದೇವಲ್ಲ? ಇಲ್ಲೆ ಮುಂದುಗಡೆ ನಗರದ ಪುಸ್ತಕ ಭಂಡಾರವಿದೆ. ವಾಚನಾಲಯವೂ ಅಲ್ಲೇ ಇದೆ. ಅವುಗಳನ್ನು ಈಗ ನೋಡೋಣ, ವಾಚನಾಲಯದಲ್ಲಿ ಕೂಡೋಣ, ಸ್ವಲ್ಪ ಹೊತ್ತು ಪತ್ರಿಕೆ ಓದಿ ಮತ್ತೆ ಮನೆಗೆ ಹೋಗೋಣ.’

‘ಸರಿಯಪ್ಪ. ನೀನು ಹೇಳಿದ ಹಾಗೇ ಆಗಲಿ’

ಪುಟ್ಟಿ ಒಪ್ಪಿಗೆ ಸೂಚಿಸಿದಳು. ಅವರು ಅಡ್ಡ ರಸ್ತೆಗೆ ತಿರುಗಿದರು.

ಕಿಟ್ಟ ಮತ್ತು ಪುಟ್ಟಿ ಸುಮಾರು ಅರ್ಧ ಕಿಲೋಮೀಟರ್ ದೂರ ನಡೆದಿರಬೇಕು. ಅಷ್ಟರಲ್ಲಿ ಅವರಿಗೆ ಏಳೆಂಟು ಮಂದಿ ಮಕ್ಕಳು ಕಾಣಸಿಕ್ಕಿದರು. ರಸ್ತೆಯಲ್ಲಿ ಗುಂಪಾಗಿ ಅವರು ನಡೆದು ಬರುತ್ತಿದ್ದರು. ಗಟ್ಟಿಯಾಗಿ ಅವರು ಮಾತಾಡಿಕೊಳ್ಳುತ್ತಿದ್ದರು. ಕೆಲವರು ಪುಸ್ತಕ ಓದುತ್ತ ನಡೆಯುತ್ತಿದ್ದರು. ಓಡಾಡುತ್ತಿದ್ದ ವಾಹನಗಳ ಕಡೆಗೂ ಅವರ ಲಕ್ಷ್ಯವಿರಲಿಲ್ಲ. ಆ ಮಕ್ಕಳನ್ನು ತೋರಿಸುತ್ತ ಕಿಟ್ಟ ಹೇಳಿದ,

“ನೋಡು ಪುಟ್ಟೀ, ರಸ್ತೆಯಲ್ಲಿ ಗುಂಪಾಗಿ ನಡೆಯಬಾರದು, ಮಾತಾಡುತ್ತ ನಿಲ್ಲಬಾರದು. ಹಾಗೆಯೆ ಓದುವುದು, ಆಡುವುದು, ಎದುರು ರಸ್ತೆ ಕಾಣದಂತೆ ಛತ್ರಿ ಹಿಡಿದು ನಡೆಯುವುದುಇವೆಲ್ಲ ತುಂಬ ಅಪಾಯಕಾರಿ. ಕೆಲವರು ರಸ್ತೆಯ ಮೇಲೆ ಬಾಳೆಹಣ್ಣಿನ ಸಿಪ್ಪೆ ಇತ್ಯಾದಿಗಳನ್ನೂ ಎಸೆಯುತ್ತಾರೆ. ಅವುಗಳ ಮೇಲೆ ಕಾಲಿಟ್ಟವರು ಜಾರಿ ಬೀಳುತ್ತಾರೆ, ಸೊಂಟ ಮುರಿದುಕೊಳ್ಳುತ್ತಾರೆ. ಇಂಥ ಕೆಲಸ ನಾವೆಂದೂ ಮಾಡಬಾರದು.”

ಪುಟ್ಟಿ – ‘ಇದೆಲ್ಲ ಈ ಮಕ್ಕಳಿಗೆ ಗೊತ್ತಿಲ್ಲವೆ ಕಿಟ್ಟಣ್ಣಾ? ಇವರೆಲ್ಲ ನಗರದವರೇ ಅಲ್ಲವೆ?’

ಕಿಟ್ಟ – ‘ನಗರದವರೇ ಇರಲಿ, ಹಳ್ಳಿಯವರೇ ಇರಲಿ, ಕೆಲವರು ಗೊತ್ತಿದ್ದು ತಪ್ಪು ಮಾಡುತ್ತಾರೆ. ಕೆಲವರು ಗೊತ್ತಿಲ್ಲದೆ ತಪ್ಪು ಮಾಡುತ್ತಾರೆ.’

ಪುಟ್ಟಿ -‘ಈಗ ಶಾಲೆಗೆ ರಜೆ ಇದೆ ತಾನೇ? ಇವರು ಇಷ್ಟು ಮಂದಿ ಎಲ್ಲಿಗೆ ಹೋದವರು?’

ಕಿಟ್ಟ – ‘ಇವರೆಲ್ಲ ವಾಚನಾಲಯಕ್ಕೆ ಹೋಗಿರಬೇಕು. ಈಗ ಅಲ್ಲಿಂದ ಬರುತ್ತಿದ್ದಾರೆ.’

ಪುಟ್ಟಿ – ‘ವಾಚನಾಲಯ ಎಲ್ಲಿದೆ? ಇನ್ನೆಷ್ಟು ದೂರದಲ್ಲಿದೆ?’

ಕಿಟ್ಟ – ‘ಏನು ಪುಟ್ಟೀ, ನಡೆದು ನಡೆದು ಸೋತು ಹೋಯಿತೆ ನಿನಗೆ?’

ಪುಟ್ಟಿ – ‘ಇಲ್ಲ, ಇಲ್ಲ. ಹಾಗೇನೂ ಸೋತು ಹೋಗಲಿಲ್ಲ. ಸುಮ್ಮನೆ ಕೇಳಿದೆ ಅಷ್ಟೆ.’

 ಕಿಟ್ಟ – ‘ಇನ್ನು ಸ್ವಲ್ಪ ಮುಂದೆ ಹೋದರಾಯಿತು. ಅಲ್ಲಿ ನೋಡು, ಎಡಗಡೆ ದೊಡ್ಡ ಕಟ್ಟಡ ಕಾಣಿಸುತ್ತಿದೆಯಲ್ಲ? ಅದೇ ಗ್ರಂಥಾಲಯ ಕಟ್ಟಡ. ವಾಚನಾಲಯವೂ ಅದರಲ್ಲೇ ಇದೆ.

ಅವರು ಹಲವು ಹೆಜ್ಜೆ ಮುಂದೆ ನಡೆದರು. ಆಗಲೇ ನಗರದ ಗ್ರಂಥಾಲಯ ಮತ್ತು ವಾಚನಾಲಯಎಂಬ ಹಲಗೆ ಅವರಿಗೆ ಕಾಣಿಸಿತು. ದೊಡ್ಡ ಕಟ್ಟಡ ಅದು. ಅವರು ಒಳಗೆ ಹೋದರು. ಪುಸ್ತಕ ತುಂಬಿದ ಹಲವಾರು ಬೀರುಗಳು ಅಲ್ಲಿದ್ದವು. ಎದುರುಗಡೆ ಸಾಲಾಗಿ ಮೇಜು-ಕುರ್ಚಿಗಳನ್ನು ಇರಿಸಿದ್ದರು. ಮೇಜುಗಳ ಮೇಲೆ ಬಗೆ ಬಗೆಯ ಪತ್ರಿಕೆಗಳು ಹರಡಿದ್ದವು. ನೂರಾರು ಮಂದಿ ಹಿರಿಯರೂ ಮಕ್ಕಳೂ ಅಲ್ಲಿದ್ದರು. ಕೆಲವರು ಪತ್ರಿಕೆ ನೋಡುತ್ತಿದ್ದರು. ಇನ್ನು ಕೆಲವರು ಪುಸ್ತಕ ಓದುತ್ತಿದ್ದರು. ಅವರ ಜೊತೆ ಈ ಮಕ್ಕಳೂ ಸೇರಿಕೊಂಡರು. ಕಿಟ್ಟ, ಅಂದಿನ ದಿನಪತ್ರಿಕೆ ಓದಿದ. ಪುಟ್ಟಿ, ಚಂದಮಾಮ ಕೈಗೆತ್ತಿಕೊಂಡಳು. ತಾಸು ಹೊತ್ತು ಅವರು ಅಲ್ಲಿದ್ದರು.

“ಇನ್ನು ಹೊರಡೋಣ ಪುಟ್ಟೀ. ಊಟದ ಹೊತ್ತಿಗೆ ನಾವು ಮನೆ ಸೇರಬೇಕು. ಇಂದು ಸಂಜೆ ನಾವು ಪಾರ್ಕಿಗೆ ಹೋಗೋಣ’ ಕಿಟ್ಟ ಹೇಳಿದ. ಇಬ್ಬರೂ ಅಲ್ಲಿಂದ ಹೊರಟರು. ಅಡ್ಡ ರಸ್ತೆಯಲ್ಲಿ ನಡೆದು, ಅವರು ಮುಖ್ಯ ಬೀದಿಗೆ ಬಂದರು. ಆಗ ಕಿಟ್ಟ ಇನ್ನೊಂದು ಕಡೆಗೆ ತಿರುಗಿದ. ಅದು ತಾವು ಬಂದ ದಾರಿಯಲ್ಲ ಎನಿಸಿತು ಪುಟ್ಟಿಗೆ. ಅವಳು ಕೇಳಿದಳು.

“ಇದೇನು, ಹಿಂದೆ ಹೋಗುವ ಬದಲು ನಾವು ಮುಂದೆ ಹೋಗುತ್ತೀದ್ದೇವಲ್ಲ?”

ಕಿಟ್ಟ – “ಹೌದು ಪುಟ್ಟೀ. ಈಗ ಬೇರೆ ದಾರಿಯಿಂದ ಮನೆಗೆ ಹೋಗೋಣ. ನಿನಗೆ ನಡೆದು ನಡೆದು ಸೋತು ಹೋಗಿದೆಯಲ್ಲ? ಅದಕ್ಕಾಗಿ ಬಸ್‌ ಹಿಡಿದು ಮನೆ ಸೇರೋಣ.

ಪುಟ್ಟಿ – “ಹಾಗೇ ಆಗಲಿ. ಬಸ್‌ ನಿಲ್ದಾಣ ಎಲ್ಲಿದೆ ಹೇಳು”.

ಕಿಟ್ಟ – “ಸ್ವಲ್ಪ ದೂರದಲ್ಲಿದೆ. ಅಲ್ಲಿಗೆ ಹೋಗಲು ಇನ್ನೊಮ್ಮೆ ರಸ್ತೆ ದಾಟಬೇಕು”.

ಪುಟ್ಟಿ -“ಎಂದರೆ ಮತ್ತಗೆ ಸುರಂಗ ಮಾರ್ಗದಲ್ಲಿ ಹೋಗಬೇಕೆ?”

ಕಿಟ್ಟ – “ಇಲ್ಲ. ಈಗ ಮೇಲ್‌ ಸೇತುವೆಯಲ್ಲಿ ಹೋದರಾಯಿತು”.

ಪುಟ್ಟಿ – “ಮೇಲ್‌ ಸೇತುವೆ! ಎಂದರೆ?”

ಕಿಟ್ಟ – “ಅಲ್ಲಿ ನೋಡು. ಮುಂದುಗಡೆ ರಸ್ತೆಯ ಮೇಲೆ ಸೇತುವೆ ಕಾಣಿಸುವುದಿಲ್ಲವೆ?”

ಪುಟ್ಟಿ – “ಹಾಂ, ಹೌದು. ನಮ್ಮೂರಲ್ಲಿ ಹೊಳೆಯ ಮೇಲುಗಡೆ ಸೇತುವೆ ಇದೆ. ಅಲ್ಲಿ ರಸ್ತೆಯ ಮೇಲಿದೆ”.

ಕಿಟ್ಟ – “ಹೌದು ಪುಟ್ಟೀ. ನಗರದಲ್ಲಿ ವಾಹನಗಳ ಓಡಾಟ ಬಹಳ ಹೆಚ್ಚು ಇರುವಲ್ಲಿ ಮೇಲ್ಸೇತುವೆ ನಿರ್ಮಿಸುತ್ತಾರೆ; ಇಲ್ಲವೆ ಸುರಂಗ ಮಾರ್ಗ ರಚಿಸುತ್ತಾರೆ. ಬಾ, ಈಗ ನಾವು ಮೇಲ್‌ ಸೇತುವೆ ಮೂಲಕ ರಸ್ತೆ ದಾಟೋಣ”.

ಇಬ್ಬರೂ ಎದುರುಗಡೆ ಇದ್ದ ಮೆಟ್ಟಲುಗಳನ್ನು ಏರಿದರು; ಸೇತುವೆ ದಾಟಿದರು. ಮತ್ತೆ ಆ ಕಡೆಗೆ ಇಳಿದರು. ಅವರು ಈಗ ದೊಡ್ಡ ರಸ್ತೆಯ ಇನ್ನೊಂದು ಬದಿಗೆ ಬಂದಿದ್ದರು. ಅಲ್ಲಿಂದ ಅವರು ಬಸ್‌ ನಿಲ್ದಾಣಕ್ಕೆ ಹೋಗಬೇಕಿತ್ತು. ಸುಮರು ನೂರು ಮೀಟರ್ ಗಳಷ್ಟು ದೂರ ಅವರು ನಡೆದರು. ಅಲ್ಲಿ ಅವರು ಬಲಗಡೆಗೆ ತಿರುಗಿದರು. ಕಿಟ್ಟ ಹೇಳಿದ, “ನಮ್ಮ ಮನೆ ಕಡೆಗೆ ಹೋಗುವ ಬಸ್ಸುಗಳು ಇಲ್ಲಿ ನಿಲ್ಲುವುದಿಲ್ಲ. ಅದಕ್ಕಾಗಿ ನಾವು ಈ ಅಡ್ಡರಸ್ತೆಗೆ ತಿರುಗಬೇಕಾಯಿತು. ಈಗ ನಾವು ಹತ್ತು ಹೆಜ್ಜೆ ಮುಂದೆ ನಡೆದು, ಇನ್ನೊಮ್ಮೆ ರಸ್ತೆ ದಾಟಬೇಕು.”

ಅವರು ಮುಂದೆ ನಡೆದರು. ಅಲ್ಲಿ ಅವರು ರಸ್ತೆ ದಾಟಬೇಕಿತ್ತು. ಆದರೆ ಅಲ್ಲಿ ಸುರಂಗ ಮಾರ್ಗವಿರಲಿಲ್ಲ, ಮೇಲ್‌ ಸೇತುವೆಯೂ ಇರಲಿಲ್ಲ. ಹಾಗೆಂದು ಕಪ್ಪು-ಬಿಳಿ ಪಟ್ಟಿಗಳೂ ಅಲ್ಲಿ ಕಾಣಿಸಲಿಲ್ಲ. ಆದರೆ ವಾಹನಗಳು ಮಾತ್ರ ಅತ್ತಿತ್ತ ಓಡಾಡುತ್ತಲೇ ಇದ್ದವು. ಇಂಥ ಕಡೆ ರಸ್ತೆ ದಾಟುವ ಕ್ರಮ ಹೇಗೆ? ಅದನ್ನು ತಿಳಿಯುವ ಕುತೂಹಲ ಪುಟ್ಟಿಗೆ. ಆದರೆ ಅವಳು ಪ್ರಶ್ನೆ ಕೇಳಲಿಲ್ಲ. ಕಿಟ್ಟಣ್ಣ ತನ್ನನ್ನು ಹೇಗೆ ರಸ್ತೆ ದಾಟಿಸುತ್ತಾನೆ. ನೋಡೋಣ ಎಂದು ಕೊಂಡಳು ಅವಳು. ಅಲ್ಲಿ ಕಿಟ್ಟ ಏನು ಮಾಡಿದ?

ಅವನು ಪುಟ್ಟಿಯ ಕೈ ಹಿಡಿದುಕೊಂಡ. ರಸ್ತೆಯ ಅಂಚಿನಲ್ಲಿ ನಿಂತು, ಮೊದಲು ಬಲಕ್ಕೆ ನೋಡಿದ. ಮತ್ತೆ ಎಡಕ್ಕೆ ನೋಡಿದ. ಪುನಃ ಬಲ್ಕೆ ನೋಡಿದ. ಹತ್ತಿರದಲ್ಲಿ ವಾಹನಗಳು ಕಾಣಿಸಲಿಲ್ಲ. ಅವನು ಸರಸರನೆ ರಸ್ತೆ ದಾಟಿದ. ಪುಟ್ಟಿಯೂ ಜೊತೆಯಲ್ಲೆ ಇದ್ದಳು ತಾನೇ?

ಕಿಟ್ಟಣ್ನಾ, ಕಪ್ಪುಬಿಳುಪು ಪಟ್ಟಿ, ಸುರಂಗ ಮಾರ್ಗ, ಮೇಲ್ಸೇತುವೆ ಇವು ಇಲ್ಲದ ಕಡೆ ರಸ್ತೆ ದಾಟುವುದು ಹೇಗೆ? ನಾನು ಹೇಳಬೇಕೇ?” ನಗುತ್ತ ಕೇಳಿದಳು ಪುಟ್ಟಿ.

ಕಿಟ್ಟ – “ಹೂಂ, ಹೇಳು ನೋಡೋಣ.

ಪುಟ್ಟಿ – ರಸ್ತೆ ಬದಿಯಲ್ಲಿ ನಿಂತು, ಮೊದಲು ಬಲಕ್ಕೆ ನೋಡಬೇಕು. ಮತ್ತೆ ಎಡಕ್ಕೆ ನೋಡಬೇಕು. ಪುನಃ ಬಲ್ಕೆ ನೋಡಬೇಕು. ವಾಹನಗಳು ಹತ್ತಿರದಲ್ಲಿ ಇಲ್ಲ ಎನ್ನುವುದನ್ನು ಖಾತರಿ ಪಡಿಸಿಕೊಂಡು, ರಸ್ತೆ ದಾಟಬೇಕು. ಸರಿ ತಾನೆ?”

ಕಿಟ್ಟ – “ಓಹ್‌! ಜಾಣೆ ಪುಟ್ಟಿ ನೀನು. ವಿಷಯವನ್ನು ಚೆನ್ನಾಗಿ ತಿಳಿದು ಕೊಂಡಿದ್ದಿ”

ಪುಟ್ಟಿ – “ಆದರೆ ಒಂದು ಸಂದೇಹವಿದೆ, ಕಿಟ್ಟಣ್ಣಾ”

ಕಿಟ್ಟ – “ಏನದು ಸಂದೇಹ? ಕೇಳಿ ಬಿಡು”.

ಪುಟ್ಟಿ – “ರಸ್ತೆ ದಾಟುವವರು ಮೊದಲು ಬಲಕ್ಕೇ ಏಕೆ ನೋಡಬೇಕು?

ಕಿಟ್ಟ – “ರಸ್ತೆ ದಾಟುವವರ ಬಲಗಡೆಯಿಂಧ ಬರುವ ವಾಹನಗಳು ಅವರು ನಿಂತಿರುವ ಬದಿಯಲ್ಲೇ ಧಾವಿಸಿ ಬರುತ್ತವೆ. ಅವರ ತೀರ ಹತ್ತಿರದಿಂದಲೇ ಅವು ಚಲಿಸುತ್ತವೆ. ಹಾಗಾಗಿ ಮೊದಲು ಆ ಕಡೆ ಗಮನಿಸಬೇಕು”.

ಪುಟ್ಟಿ – ರಸ್ತೆ ದಾಟುವವರ ಎಡಗಡೆಯಿಂದ ಬರುವ ವಾಹನಗಳು ರಸ್ತೆಯ ಇನ್ನೊಂದು ಪಕ್ಕದಲ್ಲೆ ಓಡಾಡುತ್ತವೆ. ಸರಿ ತಾನೇ?”.

ಕಿಟ್ಟ – ‘ಹೌದು ಪುಟ್ಟೀ, ಸರಿಯಾಗಿ ಹೇಳಿದೆ’.

ಪುಟ್ಟಿ – ‘ನೀನು ರಸ್ತೆ ದಾಟುವ ಮೊದಲು ಎರಡನೆಯ ಬಾರಿ ಬಲಕ್ಕೆ ನೋಡಿದೆ. ಅದೇಕೆ, ಹೇಳು.

ಕಿಟ್ಟ – ‘ಅದಕ್ಕೆ ಕಾರಣವಿದೆ, ಪುಟ್ಟೀ. ಒಮ್ಮೆ ಬಲಕ್ಕೆ, ಒಮ್ಮೆ ಎಡಕ್ಕೆ ನೋಡಿ ನಾನು ಹೆಜ್ಜೆ ತೆಗೆಯುವಷ್ಟರಲ್ಲಿ ಬಲಗಡೆಯಿಂದ ಇನ್ನೊಂದು ವಾಹನ ಕಾಣಿಸಿಕೊಳ್ಳಬಹುದಲ್ಲ? ನಾನು ನಾಲ್ಕು ಹೆಜ್ಜೆ ತೆಗೆವಷ್ಟರಲ್ಲಿ ವಾಹನ ತೀರ ಸಮೀಪಕ್ಕೆ ಬಂದು ಬಿಡಬಹುದಲ್ಲ? ಅದು ಅಪಾಯ ತಾನೇ? ಅದಕ್ಕಾಗಿ ಮತ್ತೊಮ್ಮೆ ಬಲಬದಿಗೆ ನೋಡಿಕೊಳ್ಳಬೇಕು. ವಾಹನಗಳು ತೀರ ಹತ್ತಿರದಲ್ಲಿ ಇಲ್ಲ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು’.

ಪುಟ್ಟಿ – ‘ರಸ್ತೆ ದಾಟುವಾಗ ಇಷ್ಟು ವಿಷಯಗಳನ್ನು ನೆನಪಿಡಬೇಕು. ಅಲ್ಲವೆ?’

ಕಿಟ್ಟ – ‘ಇಷ್ಟೇ ಅಲ್ಲ ಪುಟ್ಟೀ. ವಿಷಯ ಇನ್ನೂ ಇದೆ’.

ಪುಟ್ಟಿ – ‘ಇನ್ನೂ ಇದೆ? ಏನದು?’

ಕಿಟ್ಟ – ಏನನ್ನೋ ಯೋಚಿಸಿಕೊಂಡು ರಸ್ತೆ ದಾಟಬಾರದು, ಓಡುತ್ತ ಹೋಗಬಾರದು, ಅರ್ಧರಸ್ತೆಗೆ ಬಂದು, ಥಟ್ಟನೆ ಹಿಂದಿರುಗಬಾರದು. ಹಾಗೆ ಮಾಡುವುದು ಅಪಾಯಕಾರಿ. ತಿರುವುಗಳಲ್ಲಿ ರಸ್ತೆ ದಾಟುವಾಗಲೂ ಇಂಥ ಎಚ್ಚರಿಕೆ ಅಗತ್ಯ

ಕಿಟ್ಟ ಹೇಳುತ್ತಲೇ ಇದ್ದ. ಪುಟ್ಟಿ ಕೇಳುತ್ತಲೇ ಇದ್ದಳು. ಸಂದೇಹ ಬಂದಾಗ ಅವಳು ಪ್ರಶ್ನೆಗಳನ್ನೂ ಹಾಕುತ್ತಿದ್ದಳು. ಈಗ ಅವರು ಮತ್ತೊಮ್ಮೆ ರಸ್ತೆ ದಾಟಿ ಬಂದಿದ್ದರು. ಎದುರುಗಡೆ ಬಸ್‌ ನಿಲ್ದಾಣ ಕಾಣಿಸುತ್ತಿತ್ತು. ಮೂರು ಬಸ್ಸುಗಳು ಅಲ್ಲಿ ಸಾಲಾಗಿ ನಿಂತಿದ್ದವು. ಕಿಟ್ಟನ ಮನೆ ಕಡೆಗೆ ಹೋಗುವ ಬಸ್ಸು ಮಧ್ಯದಲ್ಲಿತ್ತು.

ಅದನ್ನು ಕಾಣುತ್ತಲೆ, “ನೋಡು ಪುಟ್ಟೀ, ನಮ್ಮ ಬಸ್‌ ನಡುವಿನಲ್ಲಿದೆ. ಆದರೆ ವಾಹನಗಳ ಮಧ್ಯದಿಂದ ನಾವು ನುಸುಳಬಾರದು, ವಾಹನಗಳ ಹಿಂದುಗಡೆ ಮೈಮರೆತು ನಿಲ್ಲಬಾರದು. ಬಾ ನಮ್ಮ ಬಸ್ಸಿನ ಬಳಿಗೆ ಹೋಗೋಣ” ಕಿಟ್ಟ ಹೇಳಿದ. ಆಗಲೆ ಪುಟ್ಟಿ ಮಧ್ಯೆ ಬಾಯಿ ಹಾಕಿದಳು-

‘ಕಿಟ್ಟಣ್ಣಾ, ವಾಹನಗಳ ಮಧ್ಯದಿಂದ ನಾವು ನುಸುಳಬಾರದು . ಅದು ಅಪಾಯಕಾರಿ ಎಂದೆ ನೀನು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಚಲಿಸದೆ ನಿಂತಿರುವ ವಾಹನಗಳ ಹಿಂದೆ ನಾವೇಕೆ ನಿಲ್ಲಬಾರದು? ಅದರಿಂದ ನಮಗೇನು ತೊಂದರೆ?’ ಅವಳು ಕೇಳಿದಳು.

“ತೊಂದರೆ ಇದೆ ಪುಟ್ಟೀ. ನಿಲ್ಲಿಸಿದ ವಾಹನ ಚಲಿಸುವಾಗ, ಒಮ್ಮೆ ಸ್ವಲ್ಪ ಹಿಂದಕ್ಕೆ ಸರಿದು, ಮತ್ತೆ ಮುಂದೋಡುತ್ತದೆ. ನಿನಗಿದು ಗೊತ್ತಿದೆಯೆ?” ಕಿಟ್ಟ ಅವಳನ್ನೆ ಪ್ರಶ್ನಿಸಿದ.

“ಗೊತ್ತಿಲ್ಲ ಕಿಟ್ಟಣ್ಣಾ.” ಅವಳು ಒಪ್ಪಿಕೊಂಡಳು.

“ವಾಹನ ಹಿಂದೆ ಸರಿದಾಗ, ಅಲ್ಲಿ ಮೈಮರೆತು ನಿಂತವರು ಅಡಿಗೆ ಬಿದ್ದು ಬಿಟ್ಟಾರು. ಅನಾಹುತ ನಡೆದು ಹೋದೀತು. ವಾಹನ ದ ಎದುರು ನಿಂತರೂ ಇದೇ ಗತಿ. ಆದ ಕಾರಣವೇ ಹಾಗೆ ನಿಲ್ಲಬಾರದು ಎನ್ನುವುದು. ಈಗ ಅರ್ಥವಾಯಿತಷ್ಟೇ?” ಎನ್ನುತ್ತ ಕಿಟ್ಟ ಅವಳ ಮುಖ ನೋಡಿದ.

‘ಆಯಿತು’ ಎನ್ನುವಂತೆ ಅವಳು ತಲೆಯಾಡಿಸಿದಳು.

ಅವರು ಈಗ ತಮ್ಮ ಬಸ್ಸಿನ ಬಳಿಗೆ ಬಂದು ಬಿಟ್ಟಿದ್ದರು. ಅಲ್ಲಿ ಜನ ಬಸ್‌ ಹತ್ತಲು ಪೈಪೋಟಿ ನಡೆಸಿದ್ದರು. ಕಿಟ್ಟ ಪುಟ್ಟಿ ನುಗ್ಗಾಟಕ್ಕೆ ಹೋಗಲಿಲ್ಲ. “ಬಾ ಪುಟ್ಟೀ, ನಾವು ಸರತಿಯ ಸಾಲಲ್ಲಿ (ಕ್ಯೂನಲ್ಲಿ) ನಿಂತೇ ಬಸ್ಹತ್ತಬೇಕುಎಂದು ಹೇಳಿ, ಕಿಟ್ಟ ಕ್ಯೂ ಸೇರಿಕೊಂಡ. ಪುಟ್ಟಿಯೂ ಅವನನ್ನು ಅನುಸರಿಸಿದಳು. ಅಂತೂ ಅವರು ಬಸ್‌ ಹತ್ತಿದರು. ಬಸ್‌ ಆಗಲೆ ಭತಿಯಾಗಿತ್ತು. ಪುಟ್ಟಿಗೆ ಮಾತ್ರ ಅಲ್ಲಿ ಕೂತುಕೊಳ್ಳೊಲು ಜಾಗ ಸಿಕ್ಕಿತು. ಕಿಟ್ಟ ಅವಳ ಪಕ್ಕದಲ್ಲೇ ನಿಂತುಕೊಂಡನು. ಬಸ್‌ ಮುಂದೆ ಓಡಿತು. ಮುಂದಿನ ನಿಲ್ದಾಣದಲ್ಲಿ ಇನ್ನಷ್ಟು ಜನ ಬಸ್‌ ಹತ್ತಿದರು. ಅವರಲ್ಲಿ ಒಬ್ಬ ಮುದುಕನೂ ಇದ್ದನು. ಕಿಟ್ಟನ ಬಳಿಯಲ್ಲೇ ಅವನು ನಿಂತುಕೊಂಡನು. ಅವನಿಗೆ ನಿಲ್ಲಲು ಕಷ್ಟವಾಗುತ್ತಿತ್ತು. ಪುಟ್ಟಿ ಅವನನ್ನು ನೋಡಿದಳು. ಒಡನೆ “ಅಜ್ಜಾ ನೀವು ಇಲ್ಲಿ ಕೂತುಕೊಳ್ಳಿರಿ. ನಾನು ನಿಂತಿರುತ್ತೇನೆ.” ಎನ್ನುತ್ತ ಅವಳು ಎದ್ದು ನಿಂತಳು. ಅಜ್ಜ ಅಲ್ಲಿ ಕೂತುಕೊಂಡನು. ಅವನಿಗೆ ತುಂಬ ಸಂತೋಷವಾಗಿತ್ತು.

“ಉಪಕಾರವಾಯಿತು ಮಗೂ. ದೇವರು ನಿನ್ನನ್ನು ಕಾಪಾಡಲಿ” ಅವನ ಪುಟ್ಟಿಯನ್ನು ಹರಸಿದನು.

“ಒಳ್ಳೆಯ ಕೆಲಸ ಮಾಡಿದೆ. ಪುಟ್ಟೀ. ಬಸ್ಸಿನಲ್ಲಿ ನಾವು ಮಕ್ಕಳಿಗೆ, ಮುದುಕರಿಗೆ, ಅಶಕ್ತರಿಗೆ ಪುಟ್ಟ ಮಕ್ಕಳ ತಾಯಂದಿರಿಗೆ ಸ್ಥಳಾವಕಾಶ ಮಾಡಿಕೊಡಬೇಕು. ಅದು ನಮ್ಮ ಕರ್ತವ್ಯ. ನಾನು ಹೇಳುವ ಮೊದಲೇ ಅದನ್ನು ನೀನು ಮಾಡಿ ಬಿಟ್ಟೆ.” ಕಿಟ್ಟ ಮೆಚ್ಚುಗೆ ಸೂಚಿಸಿದ. ಅರ್ಧ ತಾಸಿನ ಪ್ರಯಾಣ ಸಾಗಿತು. ಅವರು ಇಳಿಯ ಬೇಕಾದ ನಿಲ್ದಾಣ ಬಂದಿತು.

“ಪುಟ್ಟೀ, ಇಲ್ಲಿ ನಾವು ಇಳಿಯಬೇಕು. ಆದರೆ ಗಡಿಬಿಡಿ ಬೇಡ. ಬಸ್‌ ನಿಲ್ಲಲಿ. ಚಲಿಸುತ್ತಿರುವಾಗ ಬಸ್ಹತ್ತುವುದು ಅಥವಾ ಇಳಿಯುವುದು ಅಪಾಯಕಾರಿ.” ಕಿಟ್ಟ ಎಚ್ಚರಿಕೆ ನೀಡಿದ. ಬಸ್‌ ನಿಂತಿತು. ಹೆಚ್ಚು ಗಡಿಬಿಡಿಯವರು ಇಳಿಯಲು ಅವಸರಿಸಿದರು. ಕಿಟ್ಟ ಮತ್ತು ಪುಟ್ಟಿ ಸರಿದು ನಿಂತು, ಅವರಿಗೆ ದಾರಿ ಬಿಟ್ಟರು. ಅವರು ಇಳಿದು ಹೋದ ಬಳಿಕ ಇವರು ಕೆಳಗಿಳಿದರು. ಬಸ್ಸ್ ನಿಂದ ಇಳಿದೊಡನೆ ಅವಸರದಲ್ಲಿ ರಸ್ತೆ ದಾಟಬಾರದು ಪುಟ್ಟೀ. ಎಚ್ಚರಿಕೆಯಿಂದ ಎಡಗಡೆ ಬಲಗಡೆ ನೋಡಿಕೊಂಡು, ರಸ್ತೆ ದಾಟಬೇಕು. ಕಿಟ್ಟ ಕಿವಿಮಾತು ಹೇಳಿದ.” ನಿಧಾನವಾಗಿ ಅವರು ಮನೆಯ ಕಡೆ ನಡೆಯತೊಡಗಿದರು.

“ಅಂತೂ ಅರ್ಧ ದಿನ ಕಳೆದು ಹೋಯಿತು. ಒಂದು ಹೊತ್ತು ನಗರ ಸುತ್ತಿದಂತಾಯಿತು. ಅಲ್ಲವೇ ಪುಟ್ಟಿ?” ಕಿಟ್ಟ ಪ್ರಶ್ನಿಸಿದ. “ಹೌದು ಕಿಟ್ಟಣ್ನಾ. ಈ ಹೊತ್ತು ನಾವು ನೋಡಿದ್ದು ಪುಸ್ತಕ ಭಂಡಾರ ಮತ್ತು ವಾಚನಾಲಯ ಮಾತ್ರ. ಆದರೆ ನನಗದು ಅಷ್ಟು ಮುಖ್ಯ ವಿಷಯ ಎನಿಸಲಿಲ್ಲ.” ಪುಟ್ಟಿ ಹೇಳಿದಳು.

“ಮತ್ತೆ?” ಆಶ್ಚರ್ಯದಿಂದ ಅವಳ ಮುಖ ನೋಡಿದ ಕಿಟ್ಟ.

ಪುಟ್ಟಿ ಹೇಳಿದಳು -” ಈ ಹೊತ್ತಿನ ಬಲು ದೊಡ್ಡ ಸಾಧನೆ ಯಾವುದು ಗೊತ್ತೇ? ಮುಖ್ಯವಾದ ರಸ್ತೆ ನಿಯಮಗಳ ಪರಿಚಯ ಮಾಡಿಕೊಂಡುದು. ಹಾಗೂ ರಸ್ತೆ ನೈರ್ಮಲ್ಯದ ಬಗ್ಗೆ, ಸುರಕ್ಷತೆಯ ಬಗ್ಗೆ ತಿಳಿದುಕೊಂಡುದು. ಇದು ಸ್ವತಹ ರಸ್ತೆಯಲ್ಲಿ ತಿರುಗಾಡಿ ಗಳಿಸಿದ ಅನುಭವ, ಕೆಲಸದ ಮೂಲಕ ಪಡೆದ ತಿಳಿವಳಿಕೆ. ಇನ್ನೆಂದೂ ಮರೆತು ಹೋಗದು”. ಅವಳ ಮಾತಿನಲ್ಲಿ ತೃಪ್ತಿಯಿತ್ತು. ಖುಷಿ ಇತ್ತು. “ಅದು ನಿಜ ಪುಟ್ಟೀ”. ಎನ್ನುತ್ತ ಕಿಟ್ಟನೂ ತಲೆದೂಗಿದ. ಆಗಲೇ ಅವರು ಮನೆ ಬಾಗಿಲಿಗೆ ಬಂದಿದ್ದರು.

“ಬನ್ನಿ ಮಕ್ಕಳೇ, ಬನ್ನಿ. ಆಗದಿಂದ ನಿಮಗಾಗಿ ಕಾಯುತ್ತಿದ್ದೇನೆ.” ಅವರನ್ನು ಬರಮಾಡಿಕೊಂಡರು, ಕಿಟ್ಟನ ಅಮ್ಮ.