ಮನೆಯ ಬದಿಯಲಿ ಕರಿಯ ಹೆಬ್ಬಾವಿನಂದದೊಲು
ಮಲಗಿದ್ದ ಟಾರ್ ಬೀದಿಗೆಚ್ಚರವಾಯ್ತು ಮೊದಲು,
ಮೈಮೇಲೆ ಪೆಟ್ರೋಲು ಕಂಪಿನಾ ಹೊಗೆಯುಗುಳಿ
ಕಟುವಿಕಟ ರವಗೈದು ಓಡಿದಾ ಹಳೆಯ ಮೋ-
ಟಾರು ಕಾರಿಂದ ! ಗಸ್ತು ಹಾಕುತ ಬೀದಿಯಲಿ
ನಿಂತು ತೂಕಡಿಪ ಹೊಗೆಮಂಜುಗಳ ಭೂತ ಮೋ-
ಹರ ಬೆದರಿ ಮೋಟಾರು ಕಾರೆಸೆದ ಧೂಮಕ್ಕೆ
ಮೈಮುದುರಿ ಓಡಿತ್ತು ಸಂದಿಗೊಂದಿಗಳೆಡೆಗೆ !

ಹೋಟಲಿನ ಕಾಫಿಯ ಕಂಪು ಮನೆಯ ಕಿಟಕಿಯಲಿ
ಒಳನುಗ್ಗಿ, ರಗ್ಗಿನಲಿ ಹೆಗ್ಗನಸುಗಳನುಣುವ
ಸಗ್ಗಿಗರನೆಬ್ಬಿಸಿತು ರೇಡಿಯೋ ದನಿಯಲ್ಲಿ !
ಸೂರ್ಯೋದಯವ ಕಂಡು ಪುಲಕಿಸಿತು ನಿಂತಿರುವ
ಹಿರಿಯ ಗಿರಿ ! ಮಲಗಿಯೇ ಇತ್ತಿನ್ನು ಮನು ನಗರಿ
ಕನಸುಗಳ ಚಿಂದಿಯಲಿ ತನ್ನ ಕೊಳೆಮೈ ಮುದುರಿ.